– ಎಚ್.ಆರ್.ನವೀನ್ ಕುಮಾರ್, ಹಾಸನ
ಸಾಮಾನ್ಯವಾಗಿ ಕಮ್ಯುನಿಸ್ಟ್ ಪಕ್ಷಗಳಿಗೆ ಮತ್ತು BJP ಗೆ ಎಲ್ಲರೂ ಒಂದು ಮಾತು ಹೇಳುತ್ತಾರೆ. ಇವೆರಡು ಕಾರ್ಯಕರ್ತರ ಮೇಲೆ ನಿಂತಿರುವ ಪಕ್ಷಗಳು ಮತ್ತು ಶಿಸ್ತಿಗೆ ಹೆಸರಾದ ಪಕ್ಷಗಳು, ಸೈದ್ದಾಂತಿಕ ತಳಹದಿಯ ಮೇಲೆ ನಡೆಯುತ್ತಿರುವ ಪಕ್ಷಗಳು ಎಂದು.
ಆದರೆ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ BJP ಸೈದ್ಧಾಂತಿಕವಾಗಿ (ಹಿಂದುತ್ವದ RSS ಸಿದ್ದಾಂತ) ಎಷ್ಟು ದಿವಾಳಿಯಾಗಿದೆ ಎಂಬುದು ಸಾಬೀತಾಗುತ್ತಿದೆ.
ಇದಕ್ಕೆ ಬೇರೆ ಯಾವ ಸಂಶೋಧನೆಗಳ ಅಗತ್ಯವಿಲ್ಲ. ಪ್ರಸಕ್ತ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ BJP ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ ಕೂಡಲೇ ಅದರ ನಿಜವಾದ ಸ್ವರೂಪ ಬಹಿರಂಗವಾಗಿದೆ. ತನಗೆ ಟಕೇಟ್ ಸಿಗಲಿಲ್ಲ ಎನ್ನುವ ಒಂದೇ ಕಾರಣಕ್ಕಾಗಿ ಪಕ್ಷ ಬಿಟ್ಟು ಮತ್ತೊಂದು ಪಕ್ಷ ಸೇರುತ್ತಿದ್ದಾರೆ. ಮಾತ್ರವಲ್ಲ ಉಪ ಮುಖ್ಯಮಂತ್ರಿಗಳಾಗಿದ್ದ ಲಕ್ಷ್ಮಣ ಸವದಿಯಂತಹವರು BJP ಯ ಆಂತರಿಕ ಸತ್ಯಗಳನ್ನ ನಗ್ನಗೊಳಿಸಿದ್ದಾರೆ. “ಅಲ್ಲಿರುವುದೆಲ್ಲ ಹುಸಿ ದೇಶಪ್ರೇಮ, ಹೊರಗೆ ದೇಶಪ್ರೇಮದ ಕುರಿತು ಮಾತಾಡ್ತಾರೆ ಒಳಗೆ ಬೇರೆನೆ ಇದೆ”
ಇವೆಲ್ಲಾ ಘಟನೆಗಳನ್ನು ನೋಡಿದರೆ, ಬಿಜೆಪಿ ಎಷ್ಟು ದಿವಾಳಿಯಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ. ಜನರ ಆಕ್ರೋಶ ಮಡುಗಟ್ಟಿದ್ದು ಈ ಚುನಾವಣೆಯಲ್ಲಿ ಅದರ ಫಲಿತಾಂಶ ಹೊರಬೀಳಲಿದೆ.
ಆದರೆ ಇದೇ ಸಂದರ್ಭದಲ್ಲಿ ಕಮ್ಯೂನಿಸ್ಟರ ಬಗ್ಗೆಯೂ ಸ್ವಲ್ಪ ಹೆಳಬೇಕು. ದೇಶದಲ್ಲಿ ಜನರ ಪ್ರಶ್ನೆಗಳ ಆಧಾರದಲ್ಲಿ ಬೀದಿ ಚಳುವಳಿಗಳನ್ನು ನಡೆಸುವಲ್ಲಿ, ಜನರಿಗೆ ನ್ಯಾಯ ದೊರಕಿಸುವಲ್ಲಿ ಕಮ್ಯೂನಿಸ್ಟರೇ ಇಂದಿಗೂ ಚಾಂಪಿಯನ್ಸ್. ಇದರ ಜೊತೆಗೆ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸಿಕ್ಕ ಅವಕಾಶಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡು ಜನಪರವಾದ ನೀತಿಗಳನ್ನು ಜಾರಿಗೆ ತರುವ ಮೂಲಕ ಕೆಲಸಗಳನ್ನು ಮಾಡಿದ್ದಾರೆ. ಪ್ರಸ್ತುತ ದೇಶದಲ್ಲಿ ಕಮ್ಯೂನಿಸ್ಟರ ರಾಜಕೀಯ ಶಕ್ತಿ (ಚುನಾಯಿತ ಸ್ಥಾನಗಳಲ್ಲಿ) ಗಣನೀಯವಾಗಿ ಕಡಿಮೆಯಾಗಿದೆ. ಪ್ರಸ್ತುತ ಕೇರಳ ರಾಜ್ಯದಲ್ಲಿ CPIM ನೇತೃತ್ವದ LDF ಸರ್ಕಾರ ಪಿಣರಾಯಿ ವಿಜಯನ್ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಿದೆ. ಕೇರಳದ ರಾಜಕೀಯ ಇತಿಹಾಸದಲ್ಲಿ LDF ಮೊಟ್ಟಮೊದಲ ಬಾರಿಗೆ ಎರಡನೇ ಬಾರಿಗೆ ಪುನರ್ ಆಯ್ಕೆಗೊಂಡಿದೆ.
ಇಲ್ಲಿ ನಾನು ಹೇಳಬೇಕೆಂದು ಹೊರಟಿರುವ ವಿಷಯವೇನೆಂದರೆ ಕೇರಳದಲ್ಲಿ ಕಳೆದ ಚುನಾವಣೆಯ ಸಂದರ್ಭದಲ್ಲಿ CPIM ಪ್ರಮುಖರಿಗೆ ಟಿಕೆಟ್ ನೀಡಲಿಲ್ಲ. ಉದಾಹರಣೆಗೆ ಯಶಸ್ವೀ ಹಣಕಾಸು ಸಚಿವರಾಗಿದ್ದ ಅರ್ಥಶಾಸ್ತ್ರಜ್ಞರಾದ ಥಾಮಸ್ ಐಸಾಕ್, ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಕೆಲಸ ಮಾಡಿದ ಆರೋಗ್ಯ ಸಚಿವರಾದ ಶೈಲಜಾ ಟೀಚರ್. ಇವರ್ಯಾರೂ ಪಕ್ಷ ಟಿಕೆಟ್ ಕೊಡಲಿಲ್ಲ ಎಂದು ಪಕ್ಷ ಬಿಟ್ಟು ಹೋದವರಲ್ಲ. ಸ್ವತಃ 35 ವರ್ಷಗಳ ಕಾಲ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿದ್ದ ಜ್ಯೋತಿಬಸುರವರನ್ನು ಪ್ರಧಾನಿಯಾಗಬೇಕು ಎಂದು ಒತ್ತಡಗಳಿದ್ದಾಗ ಪಕ್ಷ ಈ ಸಂದರ್ಭದಲ್ಲಿ ಆ ಸ್ಥಾನವನ್ನು ಸ್ವೀಕರಿಸಬಾದರು ಎಂದು ತೀರ್ಮಾನಿಸಿದ್ದರ ವಿರುದ್ಧ ಒಂದೇ ಒಂದು ಮಾತನ್ನೂ ಆಡಲಿಲ್ಲ. ಇದು ಪಕ್ಷದ ಶಿಸ್ತು, ಇದು ಸೈದ್ಧಾಂತಿಕ ಬದ್ಧತೆ, ಇದು ಕಾರ್ಯಕರ್ತರ ಪಕ್ಷ.
ಕೇವಲ ಅಧಿಕಾರದ ಆಸೆಗಾಗಿ ಯಾವ ತತ್ವ ಸಿದ್ದಾಂತಗಳನ್ನೂ ಪಾಲಿಸದ, ಯಾವ ಸೈದ್ಧಾಂತಿಕ ಬದ್ಧತೆಯೂ ಇಲ್ಲದ ಪಕ್ಷ BJP ಕಮ್ಯುನಿಸ್ಟರು ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಅಧಿಕಾರವನ್ನು ಮಾಡುವವರಲ್ಲ, ಸಿಕ್ಕ ಅಧಿಕಾರವನ್ನು ಜನತೆಗಾಗಿ ಬಳಸಿ, ಜನತೆಗಾಗಿಯೇ ಜೀವಿಸುವವರು. ಕಳೆದ 50 ವರ್ಷದ ಭಾರತದ ರಾಜಕೀಯ ಇತಿಹಾಸದಲ್ಲಿ BJP ಯಿಂದ ಆಯ್ಕೆಯಾದ ಶಾಸಕರು, ಸಂಸದರು ಎಷ್ಟು ಜನ ಆಯ್ಕೆಗೆ ಮುನ್ನ ಕೋಟ್ಯಾಧೀಷರುಗಳು, ಆಯ್ಕೆಯಾದ 5 ವರ್ಷಗಳ ನಂತರ ಎಷ್ಟು ಜನ ಕೋಟ್ಯಾಧೀಷರುಗಳು, ಯಾರ ಆಸ್ತಿ ಎಷ್ಟು ಪಟ್ಟು ಹೆಚ್ಚಾಗಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ. ಈಗ ಆ ಪಕ್ಷದಲ್ಲಿರುವ ಜನಪ್ರತಿನಿಧಿಗಳ ಆಸ್ತಿಗಳನ್ನು ಗಮನಿಸಿ. ಇದಕ್ಕೆ ಮುಖ್ಯ ಕಾರಣ ಅತಿಯಾದ ಭ್ರಷ್ಟಾಚಾರ, ಸ್ವಜಪಕ್ಷಪಾತ, ಅಧಿಕಾರದ ದುರುಪಯೋಗ, ಜನತೆಗೆ ಮಾಡಿದ ಮೋಸ.
ಇದನ್ನೂ ಓದಿ : ಸಮಾಜವಾದ ಮಾತ್ರವೇ ಮೋದಿಯನ್ನು ಸೋಲಿಸಬಲ್ಲದು
ಅದೇ ರೀತಿ ಕಮ್ಯುನಿಸ್ಟ್ ಪಕ್ಷದಿಂದ ಆಯ್ಕೆಯಾದ ಜನಪ್ರತಿನಿಧಿಗಳ ಆಸ್ತಿ, ಆಧಾಯದ ಮೂಲ, ಗೆಲ್ಲುವ ಮುನ್ನ ಅವರ ಆಸ್ತಿ, ಗೆದ್ದು 5 ವರ್ಷ ಪೂರ್ಣಗೊಳಿಸಿದ ನಂತರದಲ್ಲಿ ಅವರ ಆಸ್ತಿ ಎಷ್ಟು ಎಂದು ತಿಳಿದುಕೊಂಡರೆ ಸ್ಪಷ್ಟವಾಗಿ ಅರ್ಥವಾಗುತ್ತದೆ ಸಿಕ್ಕ ಅಧಿಕಾರದ ಅವಕಾಶವನ್ನು ಯಾರು ಜನರ ಪರ ಬಳಕೆ ಮಾಡಿದ್ದಾರೆ, ಯಾರು ತಮ್ಮ ಲಾಭಕ್ಕಾಗಿ ಬಳಕೆ ಮಾಡಿದ್ದಾರೆ ಎಂದು.
ತ್ರಿಪುರ ಎಡರಂಗ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಮಾಣಿಕ್ ಸರ್ಕಾರ್ ರವರಿಗೆ ಒಂದು ಸ್ವಂತ ಕಾರು, ಮನೆ ಇರಲಿಲ್ಲ ಎಂದು ಕೇಳಿದರೆ ನಿಮಗೆ ನಂಬಿಕೆಬರುವುದಿಲ್ಲ. ಇದು ರಾಜಕೀಯ ಪ್ರಾಮಾಣಿಕತೆ, ಇದು ನಿಜವಾದ ದೇಶಭಕ್ತಿ.