ಧರ್ಮಸ್ಥಳ ಪ್ರಕರಣ: ಅಸಹಜ ಸಾವುಗಳ ಸಮಗ್ರ ತನಿಖೆ ಆಗಬೇಕು – ಕೆ. ನೀಲಾ‌ ಆಗ್ರಹ

ಕಲಬುರಗಿ: ‘ಪದ್ಮಲತಾ, ವೇದವಲ್ಲಿ, ಸೌಜನ್ಯರ ಸಾವಿಗೆ ಕಾರಣರಾದವರನ್ನು ಕಂಡುಹಿಡಿಯಲು ಆಗಲಿಲ್ಲ. ಈ ಸಾವುಗಳ ಹಿಂದೆ ಪಟ್ಟಭದ್ರರ ಕೈವಾಡವಿದೆ. ಧರ್ಮಸ್ಥಳದಲ್ಲಿ ಆದ ನೂರಾರು ಅಸಹಜ ಸಾವುಗಳ ಸಮಗ್ರ ತನಿಖೆ ಆಗಬೇಕು’ ಎಂದು ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ‌ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡ ವಿಚಾರ ಸಂಕಿರಣದಲ್ಲಿ ಮಾತನಾಡಿ ಆಗ್ರಹಿಸಿದರು.

ಸೆಪ್ಟೆಂಬರ್‌ 26ರಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ‘ಧರ್ಮಸ್ಥಳದಲ್ಲಿ ನಡೆದಿದ್ದೇನು? ‘ನ್ಯಾಯಕ್ಕಾಗಿ ನಾವು’ ಸೇರೋಣ ಬನ್ನಿʼ ಘೋಷಣೆಯಡಿ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಂಡ ವಿಚಾರ ಸಂಕಿರಣದಲ್ಲಿ ಮಾತನಾಡಿ, ‘ನೇತ್ರಾವತಿ ನದಿಯಲ್ಲಿ ಅಮಾಯಕ ಜನರ ನೆತ್ತರು ಸೇರಿದೆ. ಸಾವುಗಳ ತನಿಖೆ ಆಗಿ ಇವುಗಳ ಹಿಂದಿರುವವರನ್ನು ಶಿಕ್ಷೆಗೆ ಒಳಪಡಿಸಬೇಕು’ ಎಂದರು.

ಪತ್ರಕರ್ತ ನವೀನ ಸೂರಿಂಜೆ ಮಾತನಾಡಿ, ‘ಅಲ್ಲಿನ ಪಂಚಾಯಿತಿಯವರು ಬೆಳಿಗ್ಗೆ ಸಿಕ್ಕ ಅನಾಮಿಕ ಶವಗಳನ್ನು ಅರ್ಧ ಅಥವಾ ಒಂದೇ ದಿನದಲ್ಲಿ ಸುಟ್ಟುಹಾಕಿದ್ದಾರೆ ಏಕೆ? ಅನಾಮಿಕವಾಗಿ ಸಿಕ್ಕ ಶವಗಳನ್ನು ಕಾನೂನು ಪ್ರಕಾರ ಹದಿನೈದು ದಿನಗಳ ಕಾಲ ಕಾಯ್ದಿಡಬೇಕು. ಆದರೆ ಏಕೆ ಅದೇ ದಿನ ಶವಸಂಸ್ಕಾರ ಮಾಡಿರುವರು? ಅದರ ಹಿಂದೆ ಏನು ಹುನ್ನಾರಗಳಿವೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಡಿಜಿಟಲ್‌ ಯುಗದಲ್ಲಿ ಭಗತ್‌ ಸಿಂಗ್‌- ನಾಸ್ತಿಕತೆ

‘ಕಾರ್ಯಕ್ರಮದಲ್ಲಿ ಧರ್ಮಸ್ಥಳ ಹೆಸರು ಬರಬಾರದೆಂದು ಪೊಲೀಸರು ನೋಟಿಸ್ ಕೊಟ್ಟಿದ್ದಾರೆ. ಆದರೆ ಇದೂ ಸಹ ಕೋರ್ಟ್‌ ನೀಡಿದ ತೀರ್ಪಿನ ನಿಂದನೆ ಆಗುತ್ತದೆ. ನಾವು ಇಲ್ಲಿ ಮಾತಾಡುವ ಎಲ್ಲ ವಿಷಯಗಳ ಬಗ್ಗೆ ನ್ಯಾಯಾಲಯದಲ್ಲಿ ಮಾತನಾಡಿ ಅನುಮತಿ ಪಡೆದಿದ್ದೇವೆ’ ಎಂದರು.

ಇದೇ ವೇಳೆ ಪೊಲೀಸರು ಕೊಟ್ಟ ನೋಟಿಸ್‌ಅನ್ನು ಕಾರ್ಯಕ್ರಮವು ಒಕ್ಕೊರಲಿನಿಂದ ಖಂಡಿಸಿ ವಾಪಸ್‌ಗೆ ಆಗ್ರಹಿಸಲಾಯಿತು. ಸುಮಾರು ಎರಡು ತಾಸುಗಳ ಕಾಲ ಚರ್ಚೆ, ಸಂವಾದ ನಡೆಯಿತು. ಪ್ರೊ.ಆರ್.ಕೆ.ಹುಡಗಿ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯ ಮೇಲೆ ಕಾವ್ಯಾ ಅಚ್ಯುತ್, ಅರ್ಜುನ ಭದ್ರೆ, ಪದ್ಮಿನಿ ಕಿರಣಗಿ, ಪದ್ಮಾ ಎನ್. ಪಾಟೀಲ, ಶ್ರೀಮಂತ ಬಿರಾದಾರ, ಚಂದಮ್ಮ ಗೋಳಾ ಉಪಸ್ಥಿತರಿದ್ದರು. ಮೇಘಾ ಮತ್ತು ಲವಿತ್ರ ಕ್ರಾಂತಿ ಗೀತೆ ಹಾಡಿದರು.

ಇದನ್ನೂ ನೋಡಿ: ಬುರುಡೆ ಹಾಡು| ರಾಶಿಯಿಂದ ಬುರುಡೆಯೊಂದ ತಂದನಾತ| ಹೂತಿರುವೆ ನೂರಾರು ಎಂದನಾತಾ |Janashakthi Media #viralsong

Donate Janashakthi Media

Leave a Reply

Your email address will not be published. Required fields are marked *