ನಾ ದಿವಾಕರ
ಉತ್ತರಖಾಂಡ ಸರ್ಕಾರ ಈ ಕಾರ್ಮಿಕರಿಗೆ ತಲಾ 50 ಸಾವಿರ ರೂಗಳ ಪ್ರೋತ್ಸಾಹ ಧನ ನೀಡಿರುವುದರ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಲೇ ನಮಗೆ ಇದರ ಅವಶ್ಯಕತೆ ಇಲ್ಲ ಎಂದೇ ಹೇಳುತ್ತಾರೆ ಮೊಹಮ್ಮದ್ ಇರ್ಷಾದ್. 2001ರಿಂದಲೂ ಇದೇ ವೃತ್ತಿಯಲ್ಲಿ ತೊಡಗಿರುವ ಉತ್ತರಪ್ರದೇಶದ ಮೀರತ್‌ನ ಇರ್ಷಾದ್ ಈಗ ದೆಹಲಿಯ ಖಾಸಗಿ ಕಂಪನಿಗಳಲ್ಲಿ ಸುರಂಗ ಕೊರೆಯುವ ಕೆಲಸವನ್ನೇ ಮುಂದುವರೆಸಿದ್ದಾರೆ. ನಿಸರ್ಗದೊಡನೆ
ಉತ್ತರಕಾಶಿಯ ಸೂಕ್ಷ್ಮ ಪ್ರಕೃತಿಯೊಡನೆ ಚೆಲ್ಲಾಟವಾಡುವವರಿಗೆ ಸುರಂಗದ ಪ್ರಸಂಗ ಪಾಠಕಲಿಸಬೇಕಿದೆ
“ ನಮ್ಮ ಹಿರಿಯರಿಗಾಗಿ ಒಂದು ಪಕ್ಕಾ ಮನೆ ಕೊಟ್ಟುಬಿಡಿ, ಗ್ರಾಮದ ರಸ್ತೆಗಳನ್ನು ಸರಿಪಡಿಸಿ, ಎಲ್ಲ ಜಾತಿ ಧರ್ಮಗಳ ಎಲ್ಲೆ ದಾಟಿದ ಪ್ರೀತಿ ಮತ್ತು ಮಾನವ ಘನತೆಯನ್ನು ಕಾಪಾಡಿ, ನಮ್ಮ ಭವಿಷ್ಯಕ್ಕಾಗಿ ಜೀವ ವಿಮೆ ನೀಡಿ ಎಲ್ಲ ಕಾರ್ಮಿಕರಿಗೂ ನ್ಯಾಯಯುತವಾದ ಘನತೆಯ ಕೂಲಿ ನೀಡಿ, ಮತ್ತೊಮ್ಮೆ ಇಂತಹ ಅವಘಡ ಸಂಭವಿಸದಂತೆ ಎಚ್ಚರವಹಿಸಿ, ದೇಶದಲ್ಲಿ ಪ್ರೀತಿ ಉಳಿಯಬೇಕು ಪ್ರತಿಯೊಬ್ಬ ವ್ಯಕ್ತಿಯನ್ನೂ ಮನುಷ್ಯನಂತೆ ಕಾಣಬೇಕು ” ಈ ದಾರ್ಶನಿಕ ನುಡಿಗಳು ವಿದ್ವತ್ ಪೂರ್ಣ ಸಂತ ವಾಣಿಯಂತೂ ಅಲ್ಲ. ಹಿಮಾಲಯ ಪರ್ವತ ಶ್ರೇಣಿಯ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ-ಬಡಕೋಟ್ ಮಾರ್ಗದ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಿಸಿದ Rat Hole miners ತಂಡದ, 45 ವರ್ಷದ ಮೊಹಮ್ಮದ್ ಇರ್ಷಾದ್ ಹಾಗೂ ಅವರ ಇಡೀ ತಂಡದ ಮನದಾಳದ ಮಾತುಗಳಿವು. ದ್ವೇಷಾಸೂಯೆಗಳ ಗೋಡೆಗಳನ್ನು ಕಟ್ಟುತ್ತಾ ಸಮಾಜವನ್ನು ವಿಭಜಿಸುತ್ತಲೇ, ನಾಗರಿಕತೆಯ ಮುಸುಕು ಹೊದ್ದಿರುವ ವರ್ತಮಾನದ ಸಮಾಜಕ್ಕೆ ಇದು ಕಪಾಳಮೋಕ್ಷದಂತೆ ಕಾಣುವುದಿಲ್ಲವೇ ? ನಿಸರ್ಗದೊಡನೆ
ಇರಲಿ, ಅಸ್ಮಿತೆಗಳ ಹಂಗಿಲ್ಲದೆ ಬೆವರುಸುರಿಸುವ ಶ್ರಮಜೀವಿಯೊಬ್ಬನ ಮನಸ್ಸು ಸದಾ ಹೀಗೆಯೇ ಯೋಚಿಸುತ್ತದೆ. 17 ದಿನಗಳ ಕಾಲ ಸುರಂಗದೊಳಗೆ ಸಿಲುಕಿ ತಮ್ಮ ಜೀವರಕ್ಷಣೆಗಾಗಿ ಕ್ಷಣಕ್ಷಣವೂ ಪ್ರಾರ್ಥಿಸುತ್ತಿದ್ದ 41 ಕಾರ್ಮಿಕರನ್ನು ಕುಸಿದ ಸುರಂಗದಿಂದ ಸುರಕ್ಷಿತವಾಗಿ ಹೊರತೆಗೆಯಲು ನೆರವಾದ ಈ ಶ್ರಮಜೀವಿಗಳು ಕಾನೂನಾತ್ಮಕವಾಗಿ ನಿಷೇಧಿತ ವೃತ್ತಿಯಲ್ಲಿ ಪಳಗಿರುವವರು. ಯಂತ್ರದ ನೆರವಿಲ್ಲದೆಯೆ ಸುರಂಗ ಕೊರೆಯುವ ಪಾರಂಪರಿಕ ಕೌಶಲ ಹೊಂದಿರುವ 12 ಜನರ Rat hole miners ತಂಡದ ಸಾಧನೆ ಈಗ ದೇಶಾದ್ಯಂತ ಚರ್ಚೆಗೊಳಗಾಗಿದೆ. ಕಾರ್ಮಿಕರ ರಕ್ಷಣೆಯ ಶ್ರೇಯವನ್ನು ತಮ್ಮದಾಗಿಸಿಕೊಳ್ಳುವ ರಾಜಕೀಯ ಪ್ರಯತ್ನಗಳು ಏನೇ ಇದ್ದರೂ ಅಂತಿಮವಾಗಿ ಇಡೀ ರಕ್ಷಣಾ ಕಾರ್ಯಾಚರಣೆಯಲ್ಲಿ ಮಾನವ ಶ್ರಮ ಗೆದ್ದಿರುವುದು, ಶ್ರಮಜೀವಿಗಳನ್ನು ಜಾತಿ ಧರ್ಮಗಳ ಅಸ್ಮಿತೆಗಳಲ್ಲಿ ಬಂಧಿಸುವ ಸಾಂಸ್ಕೃತಿಕ ರಾಯಭಾರಿಗಳಿಗೆ ಪಾಠ ಕಲಿಸಿರಲೇಬೇಕು.
ಶ್ರಮಿಕರ ಬದುಕು – ಶ್ರಮಸಂಸ್ಕೃತಿ
ಇಂದಿಗೂ 500-800 ರೂಗಳ ಅತಿ ಕಡಿಮೆ ದಿನಗೂಲಿ ಪಡೆದು ತಮ್ಮ ಜೀವನ ಸವೆಸುವ ಈ ಕಾರ್ಮಿಕರ ನೈಪುಣ್ಯತೆ ಇಂದು ಇಡೀ ದೇಶದ ಪ್ರಶಂಸೆಗೊಳಗಾಗಿದೆ. ಏಳನೆ ತರಗತಿ ಓದಿರುವ ಮೊಹಮ್ಮದ್ ರಷೀದ್ ಇಡೀ ಕಾರ್ಯಾಚರಣೆಯನ್ನು ಮನಸ್ಪರ್ಶಿಯಾಗಿ ಬಣ್ಣಿಸುತ್ತಾರೆ. 26 ಗಂಟೆಗಳ ಕಾರ್ಯಾಚರಣೆಯಲ್ಲಿ ಈ 12 ಕಾರ್ಮಿಕರು ಕಡೆಯ 18 ಮೀಟರ್ ವ್ಯಾಪ್ತಿಯಲ್ಲಿದ್ದ ಕಲ್ಲುಮಣ್ಣುಗಳ ಅವಶೇಷಗಳನ್ನು ತೆಗೆದುಹಾಕಲು ಬಳಸಿದ್ದು ಕೆಲವೇ ಸಲಕರಣೆಗಳನ್ನು. ಉಳಿ, ಸಲಿಕೆ ಮತ್ತು ಗ್ಯಾಸ್ ಕಟರ್‌ಗಳನ್ನು ಬಳಸುವ ಮೂಲಕ 800ಮಿಲಿಮೀಟರ್ ವ್ಯಾಪ್ತಿಯ ಪೈಪ್‌ನ ಒಳಗೇ ಕಾರ್ಯನಿರ್ವಹಿಸಿದ ಈ ತಂಡ ಸುರಂಗ ಕೊರೆತಕ್ಕೆ ಅಡ್ಡಿಯಾಗಿದ್ದ ಕಬ್ಬಿಣದ ಗರ್ಡರ್‌ಗಳು ಮತ್ತು ಗಟ್ಟಿಯಾದ ಬಂಡೆಗಳನ್ನು ಭೇದಿಸಿ, ಅಲ್ಲಿ ಸಂಗ್ರಹವಾಗುವ ಮಣ್ಣು ಕಲ್ಲುಗಗಳನ್ನು ಸುರಂಗದಿಂದ ಹೊರಹಾಕಲು ಟ್ರಾಲಿಗಳನ್ನು ಬಳಸಿ ತಮ್ಮ ಅಂತಿಮ ಗುರಿ ತಲುಪಿದ್ದಾರೆ. ಕಿರಿದಾದ ಪೈಪ್‌ನಲ್ಲಿ ಕೆಲಸ ಮಾಡುವಾಗ ಧೂಳಿನಿಂದ ಉಸಿರುಗಟ್ಟುವುದರಿಂದ ತಪ್ಪಿಸಿಕೊಳ್ಳಲು ತಮ್ಮ ಮೂಗಿಗೆ ದಪ್ಪನೆಯ ಬಟ್ಟೆಯನ್ನು ಸುತ್ತಿಕೊಳ್ಳುತ್ತಾರೆ. ಆಮದು ಮಾಡಿಕೊಂಡ ಅತ್ಯಾಧುನಿಕ ಯಂತ್ರಗಳಿಂದ ಸಾಧಿಸಲಾಗದ ಒಂದು ಕೆಲಸವನ್ನು ಈ 24 ಕೈಗಳು ಮಾಡಿರುವುದು, ಆಧುನಿಕ ಜಗತ್ತಿಗೆ ಶ್ರಮಜೀವಿಗಳ ಚಾರಿತ್ರಿಕ ಹೆಜ್ಜೆಗಳನ್ನು ನೆನಪಿಸಲೇಬೇಕಲ್ಲವೇ ?
ಉತ್ತರಖಾಂಡ ಸರ್ಕಾರ ಈ ಕಾರ್ಮಿಕರಿಗೆ ತಲಾ 50 ಸಾವಿರ ರೂಗಳ ಪ್ರೋತ್ಸಾಹ ಧನ ನೀಡಿರುವುದರ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಲೇ ನಮಗೆ ಇದರ ಅವಶ್ಯಕತೆ ಇಲ್ಲ ಎಂದೇ ಹೇಳುತ್ತಾರೆ ಮೊಹಮ್ಮದ್ ಇರ್ಷಾದ್. 2001ರಿಂದಲೂ ಇದೇ ವೃತ್ತಿಯಲ್ಲಿ ತೊಡಗಿರುವ ಉತ್ತರಪ್ರದೇಶದ ಮೀರತ್‌ನ ಇರ್ಷಾದ್ ಈಗ ದೆಹಲಿಯ ಖಾಸಗಿ ಕಂಪನಿಗಳಲ್ಲಿ ಸುರಂಗ ಕೊರೆಯುವ ಕೆಲಸವನ್ನೇ ಮುಂದುವರೆಸಿದ್ದಾರೆ. ತಾವು ಸವೆಸಿದ ಅಪಾಯಕಾರಿ ಬದುಕು ಮಕ್ಕಳಿಗೂ ವಿಸ್ತರಿಸಕೂಡದು ಎಂದು ಹೇಳುವ ಈ ಕಾರ್ಮಿಕರು ಮಕ್ಕಳಿಗೆ ಉತ್ತಮ ಶಿಕ್ಷಣ, ನೌಕರಿಯ ಅಪೇಕ್ಷೆಯಲ್ಲಿರುವುದು ಸಹಜ. ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಅನುಸರಿಸಲಾಗುತ್ತಿದ್ದ Rat hole mining ವೃತ್ತಿಯನ್ನು ಅವೈಜ್ಞಾನಿಕ ಹಾಗೂ ಅಪಾಯಕಾರಿ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಲಿ ಇದನ್ನು ನಿಷೇಧಿಸಿದೆ. ಆದರೂ ಮೇಘಾಲಯ ಮುಂತಾದೆಡೆ ಇರುವ ಕಲ್ಲಿದ್ದಲು ಗಣಿ ಪ್ರದೇಶಗಳಲ್ಲಿ ತಮ್ಮ ಜೀವನೋಪಾಯಕ್ಕಾಗಿ ಇದೇ ವೃತ್ತಿಯನ್ನೇ ಅವಲಂಬಿಸಿರುವ ದಲಿತ, ಮುಸ್ಲಿಂ ಕುಟುಂಬಗಳು, ಕನಿಷ್ಠ ದಿನಗೂಲಿಗಾಗಿ ಈ ಕೆಲಸದಲ್ಲಿ ತೊಡಗಿವೆ.
ಇದನ್ನೂ ಓದಿ: ಉತ್ತರಾಖಂಡದ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ| ಕಾರ್ಯಚರಣೆ ಯಶಸ್ವಿ
ಅವಶೇಷಗಳ ಕೊನೆಯ ಪದರವನ್ನು ಹೊರತೆಗೆದ ಕೂಡಲೇ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಮೊದಲು ನೋಡಿದ 33 ವರ್ಷದ ಮುನ್ನಾ ಖುರೇಷಿ, ಆ ಕಾರ್ಮಿಕರು ಭಾವುಕರಾಗಿ ಕಣ್ಣೀರಿಡುತ್ತಿದ್ದುದನ್ನು ನೆನೆಯುತ್ತಾರೆ. “ ಆ ಕಾರ್ಮಿಕರನ್ನು ರಕ್ಷಿಸಿದ ನಂತರವೇ ನೀನು ಮನೆಗೆ ವಾಪಸ್ ಬರಬೇಕು ” ಎಂದು ತನ್ನ 10 ವರ್ಷದ ಮಗ ಫೈಜ್ ಹೇಳುತಿದ್ದ ಎಂದು ಭಾವುಕರಾಗಿ ಹೇಳುತ್ತಾರೆ. ಕಾರ್ಯಾಚರಣೆಯಲ್ಲಿ ಸುಸ್ತು ಎನಿಸಿದಾಗ ಈ ಮಗುವಿನ ಮಾತುಗಳೇ ಸ್ಪೂರ್ತಿ ನೀಡುತ್ತಿತ್ತು ಎಂದು ಹೇಳುವ ಖುರೇಷಿ ತನ್ನ ಸ್ವಂತ ಊರಿನಲ್ಲಿ ಗೋಧಿ ಬೆಳೆಯುವ ಮೂಲಕ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.
ಮುಂದೆ ಇಂತಹ ಯಾವುದೇ ಅವಘಡಗಳು ಸಂಭವಿಸಿದರೂ ನನ್ನ ಸೋದರರನ್ನು ರಕ್ಷಿಸಲು ನಾನು ಕೂಡಲೇ ಧಾವಿಸುತ್ತೇನೆ ಎಂದು ಹೇಳುವ 12 ಜನರ ತಂಡದ ಸದಸ್ಯ ಫಿರೋಜ್ ಖುರೇಷಿ 500 ರಿಂದ 800 ರೂಗಳ ದಿನಗೂಲಿಗಾಗಿ ದುಡಿಮೆ ಮಾಡಿ ತಮ್ಮ ಕುಟುಂಬ ನಿರ್ವಹಣೆ ಮಾಡುತ್ತಾರೆ. ಇಂತಹ ಜೀವರಕ್ಷಣೆಯ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು ಹೆಮ್ಮೆಯ ವಿಚಾರ ಎಂದು ಹೇಳುವ ಖುರೇಷಿ, ಸರ್ಕಾರಕ್ಕೆ ವಿನಮ್ರವಾಗಿ ಮಾಡುವ ಒಂದೇ ಮನವಿ ಎಂದರೆ ಸಿಲ್ಕ್ಯಾರಾದಂತಹ ದುರಂತ ಮತ್ತೊಮ್ಮೆ ಸಂಭವಿಸದಂತೆ ಎಚ್ಚರವಹಿಸಬೇಕು ಎನ್ನುವುದು. ಇಡೀ ತಂಡಕ್ಕೆ ಉತ್ತೇಜನ ನೀಡಿ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗುವಂತೆ ಮಾಡಿದ ತಂಡದ ಮುಖ್ಯಸ್ಥ ವಕೀಲ್ ಹಸ್ಸನ್ “ ನನ್ನ ಸೋದರರನ್ನು ರಕ್ಷಿಸಿದ ಗಳಿಗೆಯ ಸಂಭ್ರಮವನ್ನು ಹಬ್ಬಗಳಲ್ಲೂ ಅನುಭವಿಸಿಲ್ಲ ” ಎಂದು ಹೆಮ್ಮೆಯಿಂದ ಹೇಳುತ್ತಾರೆ.
ದುಡಿಮೆಗಳ ನಡುವೆ ಸದ್ಭಾವನೆ
ತಂಡದ ಅತ್ಯಂತ ಕಿರಿಯರಾದ 24 ವರ್ಷದ ಜತಿನ್ ಕಶ್ಯಪ್ ಹಾಗೂ 21 ವರ್ಷದ ಆತನ ಸೋದರ ಸೌರಭ್ ತಮ್ಮ 13ನೆಯ ವಯಸ್ಸಿನಿಂದಲೇ ಈ ವೃತ್ತಿಯಲ್ಲಿ ತೊಡಗಿದ್ದಾರೆ. ಬುಲಂದಶಹರ್‌ನಲ್ಲಿದ್ದ ತಮ್ಮ ತಾಯಿಯೊಡನೆ ದೀಪಾವಳಿ ಹಬ್ಬ ಆಚರಿಸಲು ಹೊರಟಿದ್ದ ಸೋದರರು ಅದನ್ನು ಮರೆತು ಕಾರ್ಯಾಚರಣೆಗಾಗಿ ಸಿಲ್ಕ್ಯಾಲ್‌ಗೆ ಬಂದಿದ್ದಾರೆ. ತಮಗೆ ಪಿಎಂ ಆವಾಸ್ ಯೋಜನೆಯಡಿ ಪಕ್ಕಾ ಮನೆಯೊಂದು ದೊರೆಯುವುದೇ ಎಂಬ ಕಿರಿಯ ಸೌರಭ್‌ನ ಮುಗ್ಧ ಪ್ರಶ್ನೆಯ ಹಿಂದೆ ಆ ಅನಿಶ್ಚಿತ ಬದುಕಿನ ಒಂದು ಛಾಯೆಯಾದರೂ ವಿಶಾಲ ಸಮಾಜಕ್ಕೆ ಕಾಣಬೇಕಿದೆ. ತನ್ನ ಸೋದರ ಈ ರೀತಿ ಸವಲತ್ತು ಕೇಳಿದ್ದಕ್ಕೆ ಜತಿನ್ ಕಶ್ಯಪ್ ನೀಡಿದ್ದು ಕಪಾಳಮೋಕ್ಷದ ಶಿಕ್ಷೆ. ಸಾಮಾನ್ಯವಾಗಿ ತಳಮಟ್ಟದ ಶ್ರಮಜೀವಿಗಳಲ್ಲಿರುವ ಸ್ವಾಭಿಮಾನ ಮತ್ತು ಸ್ವಾವಲಂಬನೆಗೆ ಈ ಪ್ರಸಂಗ ಸಾಕ್ಷಿಯಾಗುತ್ತದೆ.
ಕಾರ್ಯಾಚರಣೆಯ ಜಾಗದಿಂದ ತನ್ನ ಗ್ರಾಮಕ್ಕೆ ಹಿಂದಿರುಗುವಾಗ ಈ ಸ್ಮರಣೀಯ ಗಳಿಗೆಯ ನೆನಪಿಗಾಗಿ 25 ವರ್ಷದ ದಲಿತ ಕಾರ್ಮಿಕ ಅಂಕುರ್, ಸುರಂಗದಿಂದ ಹೊರಬಂದ ಕಾರ್ಮಿಕರು ತನ್ನನ್ನು ತಬ್ಬಿಕೊಂಡು, ಅಭಿನಂದಿಸಿ ನೀಡಿದ ಚಾಕೊಲೆಟ್ ಮತ್ತು ದ್ರಾಕ್ಷಿ ಗೋಡಂಬಿ, ಬಾದಾಮಿಯನ್ನು ಕೊಂಡೊಯ್ಯಲು ಬಯಸುತ್ತಾನೆ. “ ಭಾರತದಲ್ಲಿ ಪ್ರತಿಯೊಬ್ಬ ಕಾರ್ಮಿಕನಿಗೂ ನ್ಯಾಯಯುತವಾದ, ಘನತೆಯ ಕೂಲಿ ಮತ್ತು ಜೀವ ವಿಮೆ ” ದೊರೆಯಬೇಕು ಎನ್ನುವುದು ಈ ಯುವ ಕಾರ್ಮಿಕನ ಆಶಯ. ಇದು ನಮ್ಮ ಸುಶಿಕ್ಷಿತ ಸಮಾಜದ ಪಕ್ಕೆಗಳನ್ನು ತಿವಿಯುವ ಮಾತಲ್ಲವೇ ? ಮತ್ತೋರ್ವ ಕಾರ್ಮಿಕ 29 ವರ್ಷದ ಮೋನು ಕುಮಾರ್ ತನ್ನ ಗ್ರಾಮಕ್ಕೆ ಉತ್ತಮ ಸಂಪರ್ಕ ರಸ್ತೆಯನ್ನು ನಿರ್ಮಿಸಲು ಉತ್ತರಪ್ರದೇಶ ಮುಖ್ಯಮಂತ್ರಿಗೆ ಮನವಿ ಮಾಡುತ್ತಾನೆ. ಹಿತವಲಯದ ವೈಟ್ ಕಾಲರ್ ಕಾರ್ಮಿರಿಗೆ ಈ ಮಾತುಗಳು ಹೇಗೆ ಕಾಣುತ್ತವೆ ?
ಬುಲಂದ್‌ಶಹರ್‌ನ ದಲಿತ ಕಾರ್ಮಿಕ 40 ವರ್ಷದ ದೇವೇಂದ್ರ ತನ್ನ ಪತ್ನಿ ಈ ಕಾರ್ಯಾಚರಣೆಗೆ ಹೋಗಲು ಅಡ್ಡಪಡಿಸಿದರೂ, ಸಾಮಾಜಿಕ ತಾಣಗಲ್ಲಿ ವೈರಲ್ ಆಗಿದ್ದ ಒಂದು ದೃಶ್ಯ ತನ್ನನ್ನು ತಲ್ಲಣಗೊಳಿಸಿತ್ತು ಎಂದು ಹೇಳುತ್ತಾನೆ. ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರು ಕಿರಿದಾದ ಪೈಪ್‌ಗಳಿಂದ ಹೊರಜಗತ್ತಿನೊಡನೆ ಮಾತನಾಡುತ್ತಿದ್ದ ದೃಶ್ಯಗಳು ತನ್ನನ್ನು ಸಿಲ್ಕ್ಯಾರಾಗೆ ಎಳೆದುತಂದಿದೆ , ಅವರು ನನ್ನನ್ನೇ ಕರೆಯುತ್ತಿದ್ದಾರೆ ಎಂದು ಭಾಸವಾಯಿತು ಎಂದು ಹೇಳುವ ದೇವೇಂದ್ರ ಉತ್ತರಕಾಶಿಯಲ್ಲಿರುವ ತನ್ನ ಮಕ್ಕಳಿಗೆ ಉಣ್ಣೆಯ ಬಟ್ಟೆಗಳನ್ನು ಕೊಂಡೊಯ್ಯುವುದಾಗಿ ಹೇಳುತ್ತಾನೆ. “ ಈ ಯಶಸ್ವಿ ಕಾರ್ಯಾಚರಣೆಗೆ ತಾನು ಯಾರಿಂದಲೂ ಏನನ್ನೂ ಅಪೇಕ್ಷಿಸುವುದಿಲ್ಲ, ಇದು ನನ್ನ ಶ್ರಮಿಕ ಸೋದರರಿಗಾಗಿ ಮಾಡಿದ ಕಾರ್ಯಾಚರಣೆ ” ಎಂದು ಹೇಳುವ 32 ವರ್ಷದ ನಸೀರ್ ಅಹಮದ್ ಈ ರಕ್ಷಣಾ ತಂಡದ ಒಟ್ಟಾರೆ ಮನಸ್ಥಿತಿ, ಧೋರಣೆ ಮತ್ತು ಶ್ರಮಸಂಸ್ಕೃತಿಯ ಸೂಚಕವಾಗಿ ಕಾಣುತ್ತದೆ. “ ಜನರು ನನ್ನನ್ನು ಒಬ್ಬ ಮನುಷ್ಯನನ್ನಾಗಿ ಕಂಡರೆ ಅಷ್ಟೇ ಸಾಕು ” ಎಂಬ ಈತನ ಮಾತುಗಳು ದ್ವೇಷಾಸೂಯೆಗಳ ಮತೀಯ ರಾಜಕಾರಣ ಸೃಷ್ಟಿಸಿರುವ ಸಮಾಜಕ್ಕೆ ಪಾಠ ಹೇಳಿದಂತೆ ಕಾಣುವುದಿಲ್ಲವೇ ?
ಅಭಿವೃದ್ಧಿ ಪಥದ ದುರಂತಗಳ ನಡುವೆ
ಸಿಲ್ಕ್ಯಾರಾ ಸುರಂಗ ಕಾರ್ಯಾಚರಣೆ ಬಂಡವಾಳಶಾಹಿ ಆರ್ಥಿಕತೆಯ ಹಾದಿಯಲ್ಲಿ ನಿಸರ್ಗವನ್ನು ಭೇದಿಸಿ ಅಭಿವೃದ್ಧಿಯ ಹಾದಿಗಳನ್ನು ಕಂಡುಕೊಳ್ಳುವ ಮಾರುಕಟ್ಟೆ ಆಯ್ಕೆ ಮತ್ತು ಆದ್ಯತೆಯ ಬಗ್ಗೆ ಒಂದು ಸಣ್ಣ ಎಚ್ಚರಿಕೆಯನ್ನು ನೀಡಿದೆ. ಚಾರ್ ಧಾಮ್ ಹೆದ್ದಾರಿ ಯೋಜನೆಯಡಿಯಲ್ಲಿ ಕೈಗೊಳ್ಳಲಾಗಿದ್ದ ಈ ಕಾಮಗಾರಿಯ ಗುತ್ತಿಗೆ ಪಡೆದಿರುವ ನವಯುಗ ಇಂಜಿನಿಯರಿಂಗ್ ಕಂಪನಿಯ ವಿರುದ್ಧ ಕ್ರಮ ಜರುಗಿಸಬೇಕಿದೆ. ಇದೇ ಕಂಪನಿ ನಿರ್ವಹಿಸುತ್ತಿದ್ದ, ನಾಗಪುರ-ಮುಂಬೈ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣದಲ್ಲಿ ಕ್ರೇನ್ ಒಂದು ಕುಸಿದು 20 ಕಾರ್ಮಿಕರ ಬಲಿ ತೆಗೆದುಕೊಂಡಿದ್ದ ಪ್ರಕರಣವನ್ನೂ ತನಿಖೆಗೊಳಪಡಿಸಬೇಕಿದೆ.
ಉತ್ತರಖಾಂಡದ ಚಾರ್ ಧಾಮ್ ಧಾರ್ಮಿಕ ಕ್ಷೇತ್ರಗಳನ್ನು ಸಂಪರ್ಕಿಸುವ ಸಲುವಾಗಿ 800 ಕಿಮೀ ಉದ್ದದ ಹೆದ್ದಾರಿಯನ್ನು ನಿರ್ಮಿಸುವ ಬೃಹತ್ ಕಾಮಗಾರಿ ಚಾಲ್ತಿಯಲ್ಲಿದ್ದು ಈ ಸುರಂಗವೂ ಇದರ ಒಂದು ಭಾಗವಾಗಿತ್ತು ಸಡಿಲ ಮಣ್ಣು ಇರುವ ಹಿಮಾಲಯ ಶ್ರೇಣಿಯ ಈ ಭೂಪ್ರದೇಶವನ್ನು ತಜ್ಞರು ತರುಣ ಪರ್ವತಶ್ರೇಣಿ ಎಂದೇ ಪರಿಗಣಿಸುತ್ತಾರೆ. ಕಳೆದ ಹಲವು ವರ್ಷಗಳಲ್ಲಿ ಇದೇ ಮಾರ್ಗದಲ್ಲಿ ಭೂಕುಸಿತಗಳೂ ಸಂಭವಿಸಿವೆ. ಆದರೂ ಈ ಮಾರ್ಗದಲ್ಲಿ ಜನವಸತಿ ಹೆಚ್ಚಾಗುತ್ತಿರುವುದೇ ಅಲ್ಲದೆ ಜಲವಿದ್ಯುತ್ ಯೋಜನೆಗಳಿಗೆ, ರೈಲು ಮಾರ್ಗಗಳಿಗೆ ಅವಕಾಶ ಮಾಡಲು ಇಳೆಯ ಒಡಲನ್ನು ಬಗೆಯಲಾಗುತ್ತಿದೆ. ಈ ನಡುವೆಯೇ ತಮ್ಮ ಜೀವದ ಹಂಗು ತೊರೆದು ಸುರಂಗ ನಿರ್ಮಾಣದಲ್ಲಿ ತೊಡಗುವ ಕಾರ್ಮಿಕರನ್ನು ರಕ್ಷಿಸಲಾಗಿದೆ. ಬಂಡವಾಳಶಾಹಿ ಆರ್ಥಿಕತೆಯ ಅಭಿವೃದ್ಧಿಯ ಹಾದಿ, ಆಯ್ಕೆ ಮತ್ತು ಆದ್ಯತೆಗಳನ್ನು ನಿಸರ್ಗದ ಮಡಿಲಲ್ಲಿ ನಿಂತು ಯೋಚಿಸಬೇಕಾಗಿದೆ. ಬಂಡವಾಳಶಾಹಿ ಕಾರ್ಪೋರೇಟ್ ಮಾರುಕಟ್ಟೆ ಪೋಷಿತ ಆಳುವ ವರ್ಗಗಳಿಗೆ ಇದು ಅರ್ಥವಾಗುತ್ತದೆಯೇ ?
ಈಗ 41 ಕಾರ್ಮಿಕರ ರಕ್ಷಣೆಯಾಗಿದೆ. ಮುಂದೆ ರಕ್ಷಣೆಯಾಗಬೇಕಿರುವುದು ಹಿಮಾಲಯ ಪರ್ವತಶ್ರೇಣಿ.
ವಿಡಿಯೋ ನೋಡಿ: ಕಂಪನಿಗಳಿಂದ ಕಾರ್ಮಿಕರ ಶ್ರಮದ ಲೂಟಿ – ಮೀನಾಕ್ಷಿ ಸುಂದರಂ