ಹೂಳಲು ಜಾಗವಿಲ್ಲ, ಇರುವ ಸೂರು ಕಳೆದುಕೊಳ್ಳುವ ಸ್ಥಿತಿ : ಗಿಡ್ಡಯ್ಯ ಕುಟುಂಬನದು

ಅರಕಲಗೂಡು: ಮೃತ ಶವವನ್ನು ಹೂಳಲು ಜಾಗವಿಲ್ಲದೆ ಮನೆಯಂಗಳದಲ್ಲೆ ಅಂತ್ಯಸಂಸ್ಕಾರ ಮಾಡುವ ಪ್ರಯತ್ನ ನಡೆಸಿದ್ದ ಅರಕಲಗೂಡು ತಾಲೂಕಿನ ಶಂಭುನಾಥಪುರದ ಗಿಡ್ಡಯ್ಯ ಅವರ ಕುಟುಂಬ ವಾಸವಿರುವ ಸ್ಥಳವನ್ನೂ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ.

ಹೌದು, ಅನಾರೋಗ್ಯದಿಂದ ಶನಿವಾರ ನಿಧನ ಹೊಂದಿದ ಶಂಭುನಾಥಪುರದ ಗಿಡ್ಡಯ್ಯ ಅವರನ್ನು ಹೂಳಲು ಜಾಗವಿಲ್ಲದೆ ಮನೆಯಂಗಳದಲ್ಲೇ ಅಂತ್ಯಸಂಸ್ಕಾರಕ್ಕೆ ಕುಟುಂಬದ ಸದಸ್ಯರು ನಿರ್ಧರಿಸಿದ್ದ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸಿಪಿಎಂ ಜಿಲ್ಲಾ ಸಂಘಟನಾ ಸಮಿತಿ ಸದಸ್ಯ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಎಚ್.ಆರ್.ನವೀನ್ ಕುಮಾರ್ ನೇತೃತ್ವದ ಮೂವರು ಸದಸ್ಯರ ನಿಯೋಗ ಭಾನುವಾರ ಗಿಡ್ಡಯ್ಯ ಅವರ ಮನೆಗೆ ಭೇಟಿ ನೀಡಿತ್ತು. ಈ ವೇಳೆ ಸತ್ತ ಮೇಲೆ ಹೂಳಲು ಜಾಗವಿಲ್ಲದಿರುವುದರ ಜೊತೆಗೆ ವಾಸ ಮಾಡಲು ಸೂರು ಇರುವ ಜಾಗವನ್ನೂ ಕಳೆದುಕೊಳ್ಳುವ ಸ್ಥಿತಿಯಲ್ಲಿರುವುದು ಬೆಳಕಿಗೆ ಬಂದಿದೆ.

ಗಿಡ್ಡಯ್ಯ ಅವರ ಕುಟುಂಬಕ್ಕೆ ತಮ್ಮದು ಇದು ಎನ್ನಲು ಒಂದಿಂಚೂ ಜಾಗವಿಲ್ಲ. ಸ್ಮಶಾನದಲ್ಲಿ ಹೂಳಲು ಸ್ಮಶಾನ ಇರುವುದು ಐದಾರು ಕಿಲೋ ಮೀಟರ್ ದೂರದಲ್ಲಿ. ಅಲ್ಲಿವರೆಗೆ ಹೊತ್ತುಕೊಂಡು ಹೋಗಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮನೆಯಂಗಳದಲ್ಲೇ ಅಂತ್ಯಸಂಸ್ಕಾರಕ್ಕೆ ನಿರ್ಧರಿಸಲಾಯಿತು ಎಂದು ಕುಟುಂಬದ ನಿಂಗರಾಜು ಹೇಳಿದರು.

ಕುಟುಂಬದಲ್ಲಿ ಐವರು ಸದಸ್ಯರು ವಾಸ ಮಾಡುತ್ತಿದ್ದು, ಅವರಲ್ಲಿ ಗಿಡ್ಡಯ್ಯ ನಿಧನರಾಗಿದ್ದು, ಇಬ್ಬರು ಗಂಡು ಮಕ್ಕಳು ಸೇರಿ ನಾಲ್ವರು ಶಿಥಿಲಗೊಂಡಿರುವ ಸಣ್ಣ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದಾರೆ. ಈ ಜಾಗ ತಮ್ಮದೆಂದು ಗ್ರಾಮದ ನಲ್ಲೂರ ಎಂಬುವವರು ದಾವೆ ಹೂಡಿರುವುದರಿಂದ ಮನೆಯ ಜಾಗವೂ ಅವರ ಕೈಬಿಡುವ ಹಂತದಲ್ಲಿದೆ.

ಇದನ್ನೂ ಓದಿ:ಶವ ಹೂಳಲು ಜಾಗವಿಲ್ಲದೆ ಮನೆಯ ಮುಂದೆಯೇ ಶವಸಂಸ್ಕಾರಕ್ಕೆ ಯತ್ನ

ಸೂರು ಕೊಟ್ಟರು ದಾಖಲೆ ಕೊಡಲಿಲ್ಲ:

ಇಂದಿರಾಗಾಂಧಿ ಪ್ರಧಾನಿ ಆಗಿದ್ದ ವೇಲೆ 20 ಅಂಶಗಳ ಜಾರಿ ಸಂದರ್ಭದಲ್ಲಿ ಶಂಭುನಾಥಪುರದ ದಲಿತರಿಗೆ ಅರಕಲಗೂಡು-ಹಾಸನ ಹೆದ್ದಾರಿಯಲ್ಲಿ 35/6ರಲ್ಲಿ 13 ಗುಂಟೆ, 35/7ರಲ್ಲಿ 12 ಗುಂಟೆ ಮತ್ತು ಮತ್ತು 35/8ರಲ್ಲಿ 7 ಗುಂಟೆ ಜಾಗವನ್ನು ಸಕಲೇಶಪುರ ಉಪವಿಭಾಗಾಧಿಕಾರಿ ಭೂಸ್ವಾಧೀನಪಡಿಸಿಕೊಂಡು ಹಂಚಿದ್ದಾರೆ. ಬಳಿಕ ಹೊನ್ನವಳ್ಳಿ ಮಂಡಲಪಂಚಾಯಿತಿಯವರು ಗಿಡ್ಡಯ್ಯ ಅವರ ತಂದೆಗೆ ಒಂದು ಮನೆಯನ್ನು ನೀಡಿದ್ದಾರೆ. ನಂತರದ 20 ವರ್ಷಗಳ ನಂತರ ಮನೆ ದುರಸ್ತಿಗೆ ಹೆಂಚು ಮತ್ತು ಮರದ ಸಾಮಗ್ರಿಗಳನ್ನು ನೀಡಿದ್ದಾರೆ. ಮಂಡಲ ಪಂಚಾಯಿತಿ ಹೋಗಿ ಗ್ರಾಮಪಂಚಾಯಿತಿ ಬಂದ ನಂತರ ಗ್ರಾಮ ವಡ್ಡರಹಳ್ಳಿ ಗ್ರಾಮಪಂಚಾಯಿತಿಗೆ ಸೇರ್ಪಡೆಯಾಗಿದ್ದು, ಈ ಎಲ್ಲಾ ದಾಖಲೆಗಳನ್ನು ವರ್ಗಾಯಿಸಲಾಗಿದೆ. ವಡ್ಡರಹಳ್ಳಿ ಪಂಚಾಯಿತಿಯಿಂದ ಗಿಡ್ಡಯ್ಯ ಅವರ ಸೊಸೆ ಕವಿತಾ ಅವರಿಗೆ ಮನೆಯನ್ನು ಮಂಜೂರು ಮಾಡಿದ್ದು ಇದೇ ಜಾಗಕ್ಕೆ ಚಕ್ಕುಬಂದಿ ಹಾಕಿ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಗ್ರಾಮಪಂಚಾಯಿತಿಯವರೇ ನಿಂತು ನೊಂದಾಯಿಸಿದ್ದಾರೆ. ಆದರೂ ಈ ಜಾಗ ಇವರದ್ದಲ್ಲ .

ನಿವೇಶನ ಉದ್ದೇಶಕ್ಕೆ ಭೂ ಸ್ವಾಧೀನಪಡಿಸಿಕೊಂಡ ಬಳಿಕವೂ ದಾಖಲೆಗಳು ಬೇರೆಯವರ ಹೆಸರಿನಲ್ಲಿ ಉಳಿದುಕೊಂಡಿದ್ದು ಹೇಗೆ ಎಂಬ ಪ್ರಶ್ನೆ ಹಾಗೆ ಉಳಿದುಕೊಂಡಿದೆ. ದಾಖಲೆ ಆಧಾರದಲ್ಲಿ ಅರಕಲಗೂಡು ಹಿರಿಯ ಸಿವಿಲ್ ನ್ಯಾಯಾಲಯ ನಲ್ಲೂರ ಬಿನ್ ನಲ್ಲೂರ ಅವರು ಈ ಜಾಗದ ಮಾಲಕತ್ವ ಹೊಂದಿದ್ದಾರೆ ಎಂದು ತೀರ್ಪು ನೀಡಿದೆ. ಈ ವೇಳೆ 2007ರಲ್ಲಿ ಪಹಣಿ ಮತ್ತು ಮ್ಯುಟೇಷನ್ ರಚನೆಯಾಗಿದೆ. ಅದಕ್ಕೂ ಮೊದಲು ಜಾಗದ ಮಾಲಕತ್ವ ಯಾರದು ಎಂಬ ಆಂಶವನ್ನು ನ್ಯಾಯಾಲಯ ವಿಚಾರಿಸಿಲ್ಲ. ಜೊತೆಗೆ ಭೂಸ್ವಾಧೀನವಾಗಿದ್ದ ಜಮೀನಿನ ಮೇಲೆ ಹಿಂದಿನ ಮಾಲೀಕರಿಗೆ ಅಧಿಕಾರವಿಲ್ಲ ಎಂಬ ಕಿರಿಯ ಸಿವಿಲ್ ನ್ಯಾಯಾಲಯದ ಆದೇಶವನ್ನು ಪರಿಗಣಿಸಿಲ್ಲ. ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ಹಿರಿಯ ಸಿವಿಲ್ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಈಗ ನಾವು ವಾಸ ಮಾಡುತ್ತಿರುವ ಜಾಗವನ್ನು ಕಳೆದುಕೊಳ್ಳವ ಸ್ಥಿತಿಗೆ ಬಂದಿರುವುದಾಗಿ ಕುಟುಂಬದ ಸದಸ್ಯರು ಅಲವತ್ತುಕೊಂಡರು. ಈ ಸಂಬಂಧ ಕಾನೂನು ನೆರವು ನೀಡುವ ಭರವಸೆಯನ್ನು ನವೀನ್ ಕುಮಾರ್ ನೀಡಿದರು.

ಗಿಡ್ಡಯ್ಯ ಅವರ ಮಗ ದೇವರಾಜು ಕುಟುಂಬ ಕೂಲಿ ಕೆಲಸ ಮಾಡಿಕೊಂಡಿದ್ದು, ಕುಟುಂಬ ನಿರ್ವಹಣೆ ಜೊತೆಗೆ ಜಾಗದ ವಿಚಾರಣೆಗೆಂದು ವಿವಿಧ ಸಂಘಗಳಲ್ಲಿ ಸಾಲ ಪಡೆದು ಬಡ್ಡಿ ವ್ಯೂಹದಲ್ಲಿ ಸಿಲುಕಿಕೊಂಡಿರುವುದರಿಂದ ಮಕ್ಕಳನ್ನು ಶಾಲೆ ಬಿಡಿಸಿ ಕೆಲಸಕ್ಕೆ ಕಳುಹಿಸುತ್ತಿರುವುದೂ ಈ ವೇಳೆ ಕಂಡುಬಂತು. ಇದನ್ನು ಆಕ್ಷೇಪಿಸಿದ ನವೀನ್, ಮಕ್ಕಳನ್ನು ಯಾವುದೇ ಕಾರಣಕ್ಕೂ ಶಾಲೆ ಬಿಡಿಸಿ ಕೂಲಿ ಕೆಲಸಕ್ಕೆ ಕಳುಹಿಸುವುದು ಅಪರಾಧ. ಇದರಿಂದ ಮಕ್ಕಳ ಭವಿಷ್ಯ ನಾಶವಾಗುತ್ತದೆ. ಮಕ್ಕಳನ್ನು ಹಾಸ್ಟೆಲ್ ನಲ್ಲಿಟ್ಟು ಓದಿಸುವಂತೆ ಸಲಹೆ ನೀಡಿದರು. ನಿಯೋಗದಲ್ಲಿ ದಲಿತ ಹಕ್ಕುಗಳ ಸಮಿತಿಯ ಅಶೋಕ್ ಅತ್ನಿ, ಬಾನುಗೊಂದಿ ಲಿಂಗರಾಜು ಉಪಸ್ಥಿತರಿದ್ದರು.

 

 

Donate Janashakthi Media

Leave a Reply

Your email address will not be published. Required fields are marked *