ರೂಪಾಯಿ ಮೌಲ್ಯ ಇಳಿಕೆಯ ಹಿಂದಿದೆ ಆಳವಾದ ಕಾಯಿಲೆ ವಿದೇಶಿ ವಿನಿಮಯ ರಂಗದಲ್ಲಿ ಬರಲಿದೆ ಹೊಸ ಅಪಾಯ

ಪ್ರೊ. ಪ್ರಭಾತ್ ಪಟ್ನಾಯಕ್ 

ಅನು:ಕೆ.ಎಂ.ನಾಗರಾಜ್

 

ರೂಪಾಯಿಯ ಮೌಲ್ಯ ಡಾಲರಿಗೆದುರಾಗಿ ಇಳಿಯುತ್ತಲೇ ಇದೆ, ರಿಝರ್ವ್ ಬ್ಯಾಂಕ್‌ ಅದನ್ನುತಡೆಯಲು ತನ್ನಡಾಲರ್ ಸಂಗ್ರಹಕ್ಕೆ ಕೈಹಾಕಿದರೂ, ಅದೂ ಇನ್ನಷ್ಟು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗುತ್ತಿದೆ. ವಾಸ್ತವವಾಗಿ ಈ ಪರಿಸ್ಥಿತಿಯು ಒಂದು ಆಳವಾದ ಒಳಬೇನೆಯು ಅರ್ಥವ್ಯವಸ್ಥೆಯನ್ನು ಬಾಧಿಸುತ್ತಿದೆ ಎಂಬುದನ್ನು ಸೂಚಿಸುತ್ತದೆ.ಈ ನಡುವೆ ದೇಶದ ಅರ್ಥವ್ಯವಸ್ಥೆ ಸಿಕ್ಕಿಹಾಕಿಕೊಂಡಿರುವ ಎರಡು ಸುರುಳಿಗಳು ದೇಶದ ದುಡಿಯುವ ಜನರನ್ನು ಹಿಗ್ಗಾ ಮುಗ್ಗಾ ತುಳಿಯುತ್ತವೆ. ಜನರು ಅಪ್ಪಚ್ಚಿಯಾಗುತ್ತಾರೆ.

ಡಾಲರ್‌ಎದುರು ರೂಪಾಯಿ ಮೌಲ್ಯವು ತೀರಾ ಕೆಳ ಮಟ್ಟಕ್ಕೆ ಇಳಿದಿದೆ. ಕೆಲವು ವಾರಗಳ ಕಾಲ ೭೯ ಮತ್ತು ೮೦ ರೂಗಳ ನಡುವೆ ಹೊಯ್ದಾಡಿದ ನಂತರ ತುಸು ಸ್ಥಿರವಾಗಿ ಕಂಡ ರೂಪಾಯಿಯು ಸೆಪ್ಟೆಂಬರ್ ೨೩ ರಂದು ಡಾಲರ್‌ಗೆ ೮೧ ರೂಪಾಯಿಗಳ ಮಟ್ಟವನ್ನು ದಾಟಿದೆ. ರೂಪಾಯಿಯ ಮೌಲ್ಯವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ರಿಸರ್ವ್ ಬ್ಯಾಂಕ್‌ತನ್ನ ಮೀಸಲು ಸಂಗ್ರಹದ ಡಾಲರ್‌ಗಳನ್ನು ಮಾರಾಟ ಮಾಡಿದ್ದರ ಹೊರತಾಗಿಯೂ ಅದರ ಮೌಲ್ಯವು ಕುಸಿದಿದೆ. ಹಿಂದಿನ ವರ್ಷದ ಅಕ್ಟೋಬರ್‌ನಲ್ಲಿಒಂದು ಗರಿಷ್ಠ ಮಟ್ಟವನ್ನು  ತಲುಪಿದ್ದ ವಿದೇಶಿ ವಿನಿಮಯದ ಸಂಗ್ರಹವು, ಅಂದಿನಿಂದ ಈ ಸೆಪ್ಟೆಂಬರ್ ೨೩ರವರೆಗೆ ಸುಮಾರು ೯೦ ಬಿಲಿಯನ್ ಡಾಲರ್‌ಗಳಷ್ಟು ಕಡಿಮೆಯಾಗಿ, ಈಗ ೫೫೦ ಬಿಲಿಯನ್ ಮಟ್ಟದಲ್ಲಿದೆ. ವಿದೇಶಿ ವಿನಿಮಯದ ಮರು-ಮೌಲ್ಯಮಾಪನದ ಪರಿಣಾಮವಾಗಿ ಮೀಸಲು ಸಂಗ್ರಹವು ಒಂದಿಷ್ಟು ಕುಸಿತವನ್ನು ಅನುಭವಿಸಿದೆ. ಈ ಮೀಸಲು ಸಂಗ್ರಹವನ್ನು ಡಾಲರ್ ಸೇರಿದಂತೆ ಹಲವು ಕರೆನ್ಸಿಗಳಲ್ಲಿ ಇಟ್ಟುಕೊಳ್ಳಲಾಗುತ್ತದೆ. ಯುರೋ, ಪೌಂಡ್ ಮುಂತಾದ ಕೆಲವು ಕರೆನ್ಸಿಗಳ ಮೌಲ್ಯದ ಕುಸಿತವು ನಮ್ಮ ವಿದೇಶಿ ವಿನಿಮಯದ ಮೀಸಲು ಸಂಗ್ರಹದ ಮೌಲ್ಯದ ಕುಸಿತದ ಕಾರಣಗಳಲ್ಲಿ ಒಂದು ಅಂಶವಾಗಿದೆ. ರೂಪಾಯಿಯ ಮೌಲ್ಯವನ್ನು ಸ್ಥಿರವಾಗಿಡುವ ಉದ್ದೇಶದಿಂದಲೇ ಮಾಡಿದ ಡಾಲರ್‌ಗಳ ಮಾರಾಟವೂ ರೂಪಾಯಿಯ ಕುಸಿತಕ್ಕೆ ಹೆಚ್ಚಿನ ಕೊಡುಗೆ ನೀಡಿದೆ.

ರೂಪಾಯಿಯ ಕುಸಿತದಿಂದಾಗಿ ನಮ್ಮ ಆಮದುಗಳು ಅದರಲ್ಲೂ ವಿಶೇಷವಾಗಿ ತೈಲದಂತಹ ಸಾರ್ವತ್ರಿಕ ಮಧ್ಯವರ್ತಿ-ವಸ್ತುಗಳು ದುಬಾರಿಯಾಗುತ್ತವೆ. ರಷ್ಯಾದ ಮೇಲೆ ಪಾಶ್ಚ್ಯಾತ್ಯ ದೇಶಗಳು ನಿರ್ಬಂಧಗಳನ್ನು ಹೇರಿದ ಪರಿಣಾಮವಾಗಿ ವಿಶ್ವ ಮಾರುಕಟ್ಟೆಯಲ್ಲಿ ಡಾಲರ್ ಬೆಲೆ ಏರಿಕೆಯಾಗಿದೆ. ಆದ್ದರಿಂದ ರೂಪಾಯಿಯ ಕುಸಿತವು ತೈಲದ ಆಮದು ವೆಚ್ಚವನ್ನು ಹೆಚ್ಚಿಸುತ್ತದೆ. ಇದುದೇಶದಲ್ಲಿ ಹಣದುಬ್ಬರವನ್ನು ಉಲ್ಬಣಗೊಳಿಸುತ್ತದೆ. ಈ ಹಣದುಬ್ಬರವು ರೂಪಾಯಿಯ ಬಾಹ್ಯ ಮೌಲ್ಯದಲ್ಲಿ (ಅಂದರೆ, ಡಾಲರ್‌ಎದುರಾಗಿ) ಮತ್ತಷ್ಟು ಇಳಿಕೆಯಾಗಲು ಕಾರಣವಾಗುತ್ತದೆ. ಈ ರೀತಿಯಲ್ಲಿ, ಹಣದುಬ್ಬರ ಮತ್ತು ರೂಪಾಯಿ ಮೌಲ್ಯದ ಇಳಿಕೆಗಳು ಒಂದು ಸುರುಳಿಯ ಆಕಾರದಲ್ಲಿಒಂದನ್ನೊಂದು ಅನುಸರಿಸುತ್ತವೆ. ಈ ಸುರುಳಿಯನ್ನು ಬಂಡವಾಳಶಾಹಿ ಅರ್ಥವ್ಯವಸ್ಥೆಯು ಕಾರ್ಮಿಕರನ್ನು ಹಿಂಡುವ ಮೂಲಕ ಮುರಿಯುತ್ತದೆ. ಅಂದರೆ, ಕಾರ್ಮಿಕರ ಹಣ-ವೇತನವು ಬೆಲೆ ಏರಿಕೆಗೆ ಸಮನಾಗಿ ಏರದಂತೆ ನೋಡಿಕೊಳ್ಳುವ ಮೂಲಕ ಅಥವಾ ವ್ಯವಸ್ಥೆಯ ದೃಷ್ಟಿಕೋನದಲ್ಲಿ ಹೇಳುವುದಾದರೆ, ಕಾರ್ಮಿಕರ ವೇತನದಲ್ಲಿಒಂದು ಬಿಡಿಗಾಸೂ ಏರದಂತೆ ನೋಡಿಕೊಳ್ಳುವ ಮೂಲಕ ಈ ಸುರುಳಿಯನ್ನು ಮುರಿಯಲಾಗುತ್ತದೆ. ಈ ಎಲ್ಲಾ ಹಣದುಬ್ಬರ ವಿರೋಧಿ ಕ್ರಮಗಳು ಅಂತಿಮವಾಗಿ ಹಣ-ವೇತನಗಳು ಹೆಚ್ಚಾಗದಂತೆ ತಡೆಯುವ ಒಂದೇ ಒಂದು ಅಂಶಕ್ಕೆ ಇಳಿಯುತ್ತವೆ. ಹಾಗಾಗಿ, ರೂಪಾಯಿಯ ಮೌಲ್ಯದ ಇಳಿಕೆಯು ಕಾರ್ಮಿಕರ ಮೇಲೆ ಹೆಚ್ಚು ಹಾನಿಯನ್ನು ಉಂಟು ಮಾಡುತ್ತದೆ.

ಇನ್ನೂಒಂದು ಸಮಸ್ಯೆ ಇದೆ. ರೂಪಾಯಿಯ ಮೌಲ್ಯದ ಕುಸಿತದಿಂದಾಗಿ ಹಣದುಬ್ಬರ ಉಲ್ಬಣವಾಗದಿದ್ದರೂ ಸಹ, ಅಂದರೆ, ವಿನಿಮಯದರ ಇಳಿಕೆಯಿಂದಾಗಿ ಹೆಚ್ಚಳವಾದ ಆಮದುಗಳ ಬೆಲೆಗಳನ್ನು ಸ್ಥಿರವಾಗಿಡುವ ಸಲುವಾಗಿ ತತ್‌ಕ್ಷಣವೇ ಕಾರ್ಮಿಕರ ಹಣ-ವೇತನಗಳನ್ನು ಇಳಿಕೆ ಮಾಡುವ ಮೂಲಕ ಸರಿದೂಗಿಸಲಾಗಿದೆ ಎಂದು ವಾದದ ಸಲುವಾಗಿ ಊಹಿಸಿಕೊಂಡರೂ ಸಹ, ಆಗಲೂ ಸಹ, ರೂಪಾಯಿಯು ಇದೇ ರೀತಿಯಲ್ಲಿ ಮತ್ತಷ್ಟು ಇಳಿಯಬಹುದು ಎಂಬ ನಿರೀಕ್ಷೆಯನ್ನು ಸಟ್ಟಾಕೋರರ ಮನಸ್ಸಿನಲ್ಲಿ ಸೃಷ್ಟಿಸುತ್ತದೆ. ಆಗ, ಅವರು ರೂಪಾಯಿಯಿಂದ ಮತ್ತಷ್ಟು ಜಿಗಿಯುತ್ತಾರೆ (ಅಂದರೆ, ಡಾಲರ್‌ಗಳನ್ನು ಕೊಳ್ಳುತ್ತಾರೆ). ಆ ಮೂಲಕ ತಮ್ಮ ಈ ನಿರೀಕ್ಷೆಗಳು ಈಡೇರುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ. ರೂಪಾಯಿಯನ್ನು ರಕ್ಷಿಸಲು ಆರ್‌ಬಿಐ ಬಳಿ ಉಳಿದಿರುವ ಡಾಲರ್ ಸಂಗ್ರಹ ಕುಸಿಯುತ್ತಿದೆ ಎಂಬ ಅಂಶವು ಮತ್ತಷ್ಟು ಕುಸಿತದ ನಿರೀಕ್ಷೆಗಳನ್ನು ಬಲಪಡಿಸುತ್ತದೆ. ಈ ರೀತಿಯಲ್ಲಿ, ಹಣದುಬ್ಬರ-ರೂಪಾಯಿ ಮೌಲ್ಯದ ಇಳಿಕೆಯ ಒಂದೇ ಸುರುಳಿಯು ಸಕ್ರಿಯವಾಗಿರುವುದು ಮಾತ್ರವಲ್ಲದೆ, ಮತ್ತೊಂದು ಸ್ವತಂತ್ರ ಸುರುಳಿಯೂ ಕಾರ್ಯಪ್ರವೃತ್ತವಾಗಿರುತ್ತದೆ: ರೂಪಾಯಿಯ ಇಳಿಕೆಯು ಮತ್ತಷ್ಟು ಇಳಿಕೆಯಾಗುತ್ತದೆ ಎಂಬ ನಿರೀಕ್ಷೆಗಳಿಗೆ ಪ್ರೇರಣೆಯಾಗುತ್ತದೆ. ವಾಸ್ತವವಾಗಿ, ರೂಪಾಯಿ ಮತ್ತಷ್ಟು ಇಳಿಯುತ್ತದೆ. ಅರ್ಥವ್ಯವಸ್ಥೆಯು ಈ ಎರಡೂ ಸುರುಳಿಗಳಲ್ಲೂ ಸಿಕ್ಕಿಹಾಕಿಕೊಳ್ಳುತ್ತದೆ. ಈ ಸುರುಳಿಗಳು ದೇಶದ ದುಡಿಯುವ ಜನರನ್ನು ಹಿಗ್ಗಾ ಮುಗ್ಗಾ ತುಳಿಯುತ್ತವೆ. ಜನರು ಅಪ್ಪಚ್ಚಿಯಾಗುತ್ತಾರೆ.

ಎರಡು ಕಾರಣಗಳು

ರೂಪಾಯಿಯು ಕೆಲದಿನಗಳ ಮಟ್ಟಿಗೆ ಇಳಿಯುವ ಮತ್ತೆ ಕೆಲವು ದಿನಗಳನಂತರ ಏರುವ ಕಾರಣವು ಒಂದು ತತ್ಕಾಲಿಕ ಅಂಶದಿಂ ದಉಂಟಾಗಿದ್ದರೆ, ಪರಿಸ್ಥಿತಿ ಹೀಗಿರುತ್ತಿರಲಿಲ್ಲ. ಇಂದಿನ ದಿನಗಳಲ್ಲಿ ಕಂಡುಬರುತ್ತಿರುವ ಕುಸಿತದ ಸ್ವರೂಪವು ರಾಚನಿಕವಾದದ್ದು, ತತ್ಕಾಲಿಕ ಸ್ವರೂಪದ್ದಲ್ಲ. ಎರಡು ನಿರ್ದಿಷ್ಟ ಕಾರಣಗಳಿಂದ ರೂಪಾಯಿ ಕುಸಿಯುತ್ತಿದೆ. ಈ ಎರಡೂ ಕಾರಣಗಳು ಅಥವಾ ಸಮಸ್ಯೆಗಳು ತಾತ್ಕಾಲಿಕವಾದವುಗಳಲ್ಲ. ಅವುಗಳೆಂದರೆ, ಚಾಲ್ತಿ ಖಾತೆಕೊರತೆಯ ಹೆಚ್ಚಳ ಮತ್ತುಅರ್ಥವ್ಯವಸ್ಥೆಯಿಂದ ಹೊರ ಹರಿಯುತ್ತಿರುವ ಡಾಲರ್‌ ಅಥವಾ ಹಣಕಾಸು ಬಂಡವಾಳ.

ಚಾಲ್ತಿ ಖಾತೆಯಲ್ಲಿ ಕೊರತೆಯ ಹೆಚ್ಚಳದ ಕಾರಣವೆಂದರೆ, ವಿದೇಶ ವ್ಯಾಪಾರದಲ್ಲಿ ಉಂಟಾದ ಕೊರತೆಯ ಹೆಚ್ಚಳವೇ. ಭಾರತದ ಆಮದುಗಳು ಅದರ ರಫ್ತಿಗಿಂತ ವೇಗವಾಗಿ ಬೆಳೆಯುತ್ತಿವೆ. ಕೋವಿಡ್-೧೯ರ ಪರಿಣಾಮಗಳಿಂದ ಅರ್ಥವ್ಯವಸ್ಥೆಯು ವೇಗವಾಗಿ ಚೇತರಿಕೆ ಹೊಂದುತ್ತಿರುವುದರಿಂದಾಗಿ ಆಮದುಗಳು ಏರಿಕೆಯಾಗಿವೆ ಎಂದು ಸರ್ಕಾರ ವಾದಿಸುತ್ತದೆ. ಆದರೆ, ಇದು ಆಧಾರ ರಹಿತವಾಗಿದೆ. ೨೦೧೯-೨೦ರ ಮೊದಲ ತ್ರೈಮಾಸಿಕವನ್ನು ೨೦೨೨-೨೩ರ ಮೊದಲ ತ್ರೈಮಾಸಿಕದೊಂದಿಗೆ, ಅಂದರೆ, ಸಾಂಕ್ರಾಮಿಕ ಪೂರ್ವದ “ಸಾಮಾನ್ಯ” ತ್ರೈಮಾಸಿಕವನ್ನು ಸಾಂಕ್ರಾಮಿಕದ ನಂತರದ “ಸಾಮಾನ್ಯ” ತ್ರೈಮಾಸಿಕದೊಂದಿಗೆ ಹೋಲಿಕೆ ಮಾಡಿದರೆ, ವ್ಯಾಪಾರ ಕೊರತೆಯು ಜಿಡಿಪಿಯ ಶೇ. ೪ರಿಂದ ಶೇ. ೫.೩ಕ್ಕೆ ಏರಿಕೆಯಾಗಿದೆ. ಆದರೆ. ಈ ಎರಡು ತ್ರೈಮಾಸಿಕಗಳ ನಡುವಿನ ಅವಧಿಯಲ್ಲಿ ಜಿಡಿಪಿಯು ಕೇವಲ ಶೇ. ೨.೮ರಷ್ಟು ಮಾತ್ರ ಹೆಚ್ಚಿದೆ. ಈ ಹೋಲಿಕೆಯು ಸಾಧ್ಯವಾದಷ್ಟು ಮಟ್ಟಿಗೆ ವಾಸ್ತವಕ್ಕೆ ಹತ್ತಿರದಲ್ಲಿದೆ. ಮತ್ತು, ಇದೇ ಅವಧಿಗೆ ಸಂಬಂಧಿಸಿದ ಜಾಗತಿಕ ಅರ್ಥವ್ಯವಸ್ಥೆಯ ಬೆಳವಣಿಗೆಗಳು ಹೆಚ್ಚುತ್ತಿರುವ ವ್ಯಾಪಾರಕೊರತೆಯು ಅರ್ಥವ್ಯವಸ್ಥೆಯ ವೇಗದ ಚೇತರಿಕೆಯ ಫಲಿತಾಂಶವಲ್ಲಎಂಬುದನ್ನು ಸ್ಪಷ್ಟಪಡಿಸುತ್ತವೆ. ಆದ್ದರಿಂದ, ಹೆಚ್ಚುತ್ತಿರುವ ವ್ಯಾಪಾರಕೊರತೆಯು, ವಾಸ್ತವವಾಗಿ, ವಿದೇಶಗಳಿಗೆ ನಮ್ಮ ಬೇಡಿಕೆಯ “ಸೋರಿಕೆ”ಯ ಮೂಲಕ ಅರ್ಥವ್ಯವಸ್ಥೆಯ ವೇಗದ ಬೆಳವಣಿಗೆಯನ್ನು ತಡೆದ ಒಂದು ಸ್ವಾಯತ್ತ ಅಂಶವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಅದೇರೀತಿಯಲ್ಲಿ, ಉಕ್ರೇನ್‌ ಯುದ್ಧದ ನಂತರ ತೈಲದ ಮತ್ತುಇತರ ಸರಕುಗಳ ಜಾಗತಿಕ ಬೆಲೆಗಳು ಏರಿಕೆ ಯಾದುದೇ ವ್ಯಾಪಾರ ಕೊರತೆಯ ಹೆಚ್ಚಳಕ್ಕೆ ಕಾರಣವೆಂದು ಹೇಳಲಾಗದು. ಜುಲೈ ಮತ್ತುಆಗಸ್ಟ್  ತಿಂಗಳುಗಳಲ್ಲಿನ ವ್ಯಾಪಾರಕೊರತೆಯು ಏಪ್ರಿಲ್-ಜೂನ್ ತ್ರೈಮಾಸಿಕದ ತಿಂಗಳುಗಳ ಸರಾಸರಿಗಿಂತಲೂ ಹೆಚ್ಚಿಗೆ ಇದೆ. ಈ ಕೊರತೆಯು ಜುಲೈನಲ್ಲಿ ೨೮.೭ ಬಿಲಿಯನ್‌ ಡಾಲರ್ ಮತ್ತು ಆಗಸ್ಟ್ನಲ್ಲಿ ೨೮.೬೮ ಬಿಲಿಯನ್‌ ಡಾಲರ್‌ ಇತ್ತು. ಆದರೆ ಏಪ್ರಿಲ್-ಜೂನ್ ತ್ರೈಮಾಸಿಕದ ಸರಾಸರಿ ಮಾಸಿಕ ವ್ಯಾಪಾರ ಕೊರತೆಯು ೨೨.೬ ಬಿಲಿಯನ್‌ ಡಾಲರ್‌ಇತ್ತು. ತೈಲ ಬೆಲೆ ಏರಿಕೆಯ ಹೆಚ್ಚಿನ ಅಂಶವು ಏಪ್ರಿಲ್-ಜೂನ್ ತ್ರೈಮಾಸಿಕದ ವೇಳೆಗಾಗಲೇ ಸಂಭವಿಸಿದ್ದುದರಿಂದ, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿನ ಕೊರತೆಯ ಏರಿಕೆಯನ್ನು ತೈಲದ ಅಥವಾ ಇತರ ಸರಕುಗಳ ಬೆಲೆ-ಏರಿಕೆಯ ಮೂಲಕ ವಿವರಿಸಲಾಗದು. ಆದ್ದರಿಂದ, ಕೆಲವು ಬಿಡಿ-ಬಿಡಿ ಅಂಶಗಳಿಂದ ವಿವರಿಸಲಾಗದ, ಆದರೆ ಅರ್ಥವ್ಯವಸ್ಥೆಯಲ್ಲಿ ಬೇರೂರಿರುವ ಪ್ರಸ್ತುತ ದುಃಸ್ಥಿತಿಯ ಒಂದು ವಿದ್ಯಮಾನವನ್ನು ನಾವೀಗ ನೋಡುತ್ತಿದ್ದೇವೆ.

ಬಂಡವಾಳದ ಹೊರ-ಹರಿವು

ನಾವೀಗ ಎರಡನೆಯ ಅಂಶಕ್ಕೆ, ಅಂದರೆ ಬಂಡವಾಳದ (ಹಣಕಾಸಿನ) ನಿವ್ವಳ ಹೊರಹರಿವಿನ ಅಂಶಕ್ಕೆ ಬರೋಣ. ಅಮೆರಿಕದ ಫೆಡರಲ್‌ರಿಸರ್ವ್ ಬೋರ್ಡ್ ಅನೇಕ ವರ್ಷಗಳವರೆಗೆ ತನ್ನ ಬಡ್ಡಿ ದರಗಳನ್ನು ಶೂನ್ಯಕ್ಕೆ ಹತ್ತಿರದ ಮಟ್ಟದಲ್ಲಿ ಇರಿಸಿತ್ತು ಮತ್ತುಅಷ್ಟೇ ಸಾಲದುಎಂಬAತೆಅದರ ಮೇಲೆ “ಸುಲಭ ಹಣ ಲಭ್ಯತೆ”ಯ(“quantitative easing”) ನೀತಿಯನ್ನು, ಅಂದರೆ, ಸರ್ಕಾರದ  ಸಾಲ ಪತ್ರಗಳನ್ನು ಕೊಳ್ಳುವ ಮೂಲಕ ಮಾರುಕಟ್ಟೆಯಲ್ಲಿ ಹಣ ಸುಲಭವಾಗಿ ಲಭಿಸುವಂತೆ ಮಾಡುವ ಕ್ರಮವನ್ನು ಅನುಸರಿಸುತ್ತಿತ್ತು. “ವಸತಿ ಗುಳ್ಳೆ” ಒಡೆದ ನಂತರ ಸ್ಥಗಿತತೆಗೆ ಒಳಗಾಗಿದ್ದ ಅಮೆರಿಕಾದ ಅರ್ಥ ವ್ಯವಸ್ಥೆಯನ್ನು ಉತ್ತೇಜಿಸುವುದೇ ಈ ಕ್ರಮಗಳ ಉದ್ದೇಶವಾಗಿತ್ತು. ಆದರೆ, ಈ ಪ್ರಕ್ರಿಯೆಯಲ್ಲಿ ಸೃಷ್ಟಿಯಾದ ಅಪಾರ ಪ್ರಮಾಣದ ಸುಲಭ-ಲಭ್ಯತೆಯ ಹಣವು “ಉದಯೋನ್ಮುಖ ಮಾರುಕಟ್ಟೆಗಳು” ಎಂದು ಕರೆಯಲ್ಪಡುವ ಮೂರನೆಯ ಜಗತ್ತಿನ ಭಾರತದಂತಹ ಕೆಲವು ದೇಶಗಳಿಗೆ ಸ್ಥಳಾಂತರಗೊಂಡಿತು, ಹೆಚ್ಚಿನ ಬಡ್ಡಿದರದ ಆಕರ್ಷಣೆಯಿಂದಾಗಿ. ಹಾಗಾಗಿ, ಈ ದೇಶಗಳಿಗೆ ತಮ್ಮ ಚಾಲ್ತಿ ಖಾತೆಯ ಕೊರತೆಗಳಿಗೆ ಹಣ ಒದಗಿಸಿಕೊಳ್ಳುವುದು ಸುಲಭವಾಯಿತು. ಈ ದೇಶಗಳಿಗೆ ಒಳಹರಿದ ಬಂಡವಾಳದ ನಿವ್ವಳ ಮೊತ್ತವು ಎಷ್ಟು ದೊಡ್ಡದಿತ್ತೆಂದರೆ, ವಾಸ್ತವವಾಗಿ, ಬೃಹತ್ ಪ್ರಮಾಣದ ವಿದೇಶಿ ವಿನಿಮಯ ಮೀಸಲುಗಳು ಸಂಗ್ರಹಗೊಂಡವು. ಆದರೆ, ಅಮೆರಿಕಾ ಮತ್ತು ಉಳಿದ ಬಂಡವಾಳಶಾಹಿ ಜಗತ್ತನ್ನು ಸಧ್ಯದಲ್ಲಿ ಕಾಡುತ್ತಿರುವ ಹಣದುಬ್ಬರವು, ಉಕ್ರೇನ್‌ ಯುದ್ಧಕ್ಕೆ ಮುಂಚಿತವಾಗಿಯೇ ಉಂಟಾಗಿದ್ದ ಈ ಹಣದುಬ್ಬರವು, “ಸುಲಭ ಹಣ ಲಭ್ಯತೆ”ಯ ನೀತಿಯನ್ನು ಫೆಡರಲ್‌ ರಿಸರ್ವ್ ನಿಲ್ಲಿಸಿದ್ದರೂ ಸಹ, ಬಡ್ಡಿ ದರಗಳನ್ನು ಹೆಚ್ಚಿಸುವಂತೆ ಮಾಡುತ್ತಿದೆ. ಇದರ ಅರ್ಥವೆಂದರೆ, ಬಂಡವಾಳದ ನಿವ್ವಳ ಹರಿವಿನ ದಿಕ್ಕು ತಿರುಗುಮುರುಗಾಗಿದೆ. ಇದು ಫೆಡರಲ್‌ ರಿಸರ್ವ್ನಿಂದಾದ ಒಂದು ತಾತ್ಕಾಲಿಕ ಮಾರ್ಗಚ್ಯುತಿಯಲ್ಲ. ಬದಲಾಗಿ, ಶಾಶ್ವತವಾಗಿ ಉಳಿಸಿಕೊಳ್ಳಲಾಗದ ಮತ್ತು ಕೊನೆಗೊಳ್ಳಬೇಕಾದ ಶೂನ್ಯ ಬಡ್ಡಿದರದ ಅವಧಿಯನ್ನುಒಂದು ತಾತ್ಕಾಲಿಕ ಮಾರ್ಗಚ್ಯುತಿ ಎನ್ನಬಹುದು. ಫೆಡರಲ್‌ ರಿಸರ್ವ್ಗೆ ಪ್ರತಿಕ್ರಿಯೆಯಾಗಿ ಭಾರತದಂತಹ ದೇಶಗಳು ಬಡ್ಡಿ ದರಗಳನ್ನು ಹೆಚ್ಚಿಸುತ್ತಿದ್ದರೂ ಸಹ, ಹಣದ ಸುಲಭ ಲಭ್ಯತೆಯ ಹಿಂದಿನ ಅವಧಿಗೆ ಮರಳುವುದು ಮುಂಬರುವ ದಿನಗಳಲ್ಲಿ ಸಾಧ್ಯವಾಗುವುದಿಲ್ಲ.

ನಮ್ಮ ಚಾಲ್ತಿ ಖಾತೆಯ ಕೊರತೆಯು ವಿಸ್ತಾರಗೊಳ್ಳುತ್ತಿರುವಾಗ, ಈ ಕೊರತೆಯನ್ನು ಸರಿದೂಗಿಸಿಕೊಳ್ಳುವಷ್ಟು ಹಣ ಹೊಂದಿಸಿಕೊಳ್ಳುವುದು ಕಷ್ಟಕರವಾಗುತ್ತಿದೆ. ಏಕೆಂದರೆ, ಹಣಕಾಸು ಇನ್ನು ಮುಂದೆ ಸುಲಭವಾಗಿ ಲಭ್ಯವಿರುವುದಿಲ್ಲ (ಆರ್‌ಬಿಐ ಬಡ್ಡಿದರಗಳನ್ನು ಹೆಚ್ಚಿಸುವ ಮೂಲಕ ಬಂಡವಾಳದ ನಿವ್ವಳ ಹೊರಹರಿವು ಕೊನೆಗೊಂಡರೂ ಸಹ). ವಿನಿಮಯ ದರಗಳ ಇಳಿಕೆ, ಅದರ ಪರಿಣಾಮವಾಗಿ ಉಲ್ಬಣಗೊಳ್ಳುವ ಹಣದುಬ್ಬರ ಮತ್ತು ಹೆಚ್ಚಿನ ನಿರುದ್ಯೋಗ (ಬಹುಶಃ ಹೆಚ್ಚು ಹೆಚ್ಚು ಜನರ ನಡುವೆ ನಿರ್ದಿಷ್ಟ ಸಂಖ್ಯೆಯ ಉದ್ಯೋಗಗಳನ್ನು ಹಂಚಿಕೊಳ್ಳುವ ಮೂಲಕ ಈ ನಿರುದ್ಯೋಗವನ್ನು ಮರೆಮಾಚಲಾಗಿದೆ) ಮತ್ತುಅರ್ಥವ್ಯವಸ್ಥೆಯ ಸ್ಥಗಿತತೆ, ಇವು ಮುಂಬರುವ ದಿನಗಳಲ್ಲಿ ಸರ್ವೆಸಾಮಾನ್ಯವಾಗುತ್ತವೆ.

ಆಳವಾದ ಒಳಬೇನೆ

ಈ ಪರಿಸ್ಥಿತಿಯು ಒಂದು ಆಳವಾದ ಒಳಬೇನೆಯು ವ್ಯವಸ್ಥೆಯನ್ನು ಬಾಧಿಸುತ್ತಿದೆ ಎಂಬುದನ್ನು ಸೂಚಿಸುತ್ತದೆ. “ಮುಖ್ಯವಾಹಿನಿ” ಎಂದು ಕರೆಯಲಾದ ಸಾಂಪ್ರದಾಯಿಕ ಅರ್ಥಶಾಸ್ತ್ರೀಯ ಸಿದ್ದಾಂತದ ಸಮಸ್ಯೆ ಎಂದರೆ, ಕರೆನ್ಸಿ ಪರಿಚಲನಾ ಕ್ಷೇತ್ರದ ಮೇಲೆ ಏಕಮಾತ್ರವಾಗಿ ಗಮನವನ್ನು ಕೇಂದ್ರೀಕರಿಸಿ ವರ್ಗ ಸಂಬಂಧಗಳನ್ನು ಮರೆಮಾಚಿತಾನು ಹೇಳಿದ್ದೇ ಸರಿ ಎಂದು ವಾದಿಸುವ ಅದರ ಸ್ವಭಾವ ಮಾತ್ರವಲ್ಲ, ಕರೆನ್ಸಿ ಪರಿಚಲನಾ ಕ್ಷೇತ್ರದ ಬಗ್ಗೆ ಅದರ ವಿಶ್ಲೇಷಣೆಯೂ ದೋಷಪೂರ್ಣವೇ. ಬೆಲೆಗಳು ಮುಕ್ತವಾಗಿ ಚಲಿಸಲು ಬಿಟ್ಟರೆ, ಕರೆನ್ಸಿ ಪರಿಚಲನಾ ಕ್ಷೇತ್ರದಲ್ಲಿ ಮಾರುಕಟ್ಟೆ ಸಮತೋಲನ ಇರುತ್ತದೆ ಎಂದು ಭಾವಿಸಲಾಗಿದೆ. ಆದರೆ, ಬೇಡಿಕೆ ಮತ್ತು ಪೂರೈಕೆಯಲ್ಲಿನ ಬದಲಾವಣೆಗಳಿಗೆ ತಕ್ಕಂತೆ ಚಲಿಸಲು ಸ್ವತಂತ್ರವಾಗಿದ್ದರೆ ಮೂರನೆಯ ಜಗತ್ತಿನ ದೇಶಗಳ ಕರೆನ್ಸಿಗಳಿಗೆ ವಿನಿಮಯದರ ಸಮತೋಲನ ಇರುವುದಿಲ್ಲ. ಏಕೆಂದರೆ, ಇತರ ಎಲ್ಲ ಅಂಶಗಳು ಸಮಾನವಾಗಿದ್ದಾಗ, ಶ್ರೀಮಂತರು ಮೊದಲ ಜಗತ್ತಿನವರಾಗಿರಲಿ ಅಥವಾ ಮೂರನೇ ಜಗತ್ತಿನವರಾಗಿರಲಿ, ತಮ್ಮ ಸಂಪತ್ತನ್ನು ಡಾಲರ್‌ ಅಥವಾ ಡಾಲರ್-ಹೆಸರು ಹೊಂದಿದ ಸ್ವತ್ತುಗಳಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ (ಕೊನೆಯಪಕ್ಷ ಪಾಶ್ಚ್ಯಾತ್ಯ ದೇಶಗಳ ಪ್ರಾಬಲ್ಯ ಇರುವವರೆಗೂ). ಈ ಪ್ರವೃತ್ತಿಯನ್ನು ತಪ್ಪಿಸುವ ಸಲುವಾಗಿ ಮೂರನೇ ಜಗತ್ತಿನ ದೇಶಗಳಲ್ಲಿ ಬಡ್ಡಿ ದರಗಳನ್ನು ಕಾರ್ಯ ಸಾಧ್ಯವಲ್ಲದಷ್ಟು ಉನ್ನತ ಮಟ್ಟದಲ್ಲಿ ನಿಗದಿ ಪಡಿಸಬೇಕಾಗುತ್ತದೆ. ಆದಾಗ್ಯೂ, ಈ ಕ್ರಮವು ಬಂಡವಾಳದ ನಿವ್ವಳ ಹೊರಹರಿವನ್ನು ತಡೆಯುವಲ್ಲಿ ವಿಫಲವಾಗಬಹುದು ಮತ್ತು ಈ ಕಾರಣದಿಂದಾಗಿ ಬೆಳವಣಿಗೆಯೂ ಕುಂಠಿತಗೊಳ್ಳಬಹುದು.

ಈ ಕಾರಣದಿಂದಾಗಿಯೇ ಮೂರನೆಯ ಜಗತ್ತಿನ ದೇಶಗಳು ವಿದೇಶ ವ್ಯಾಪಾರವನ್ನು ಮತ್ತು ವಿದೇಶಿ ಬಂಡವಾಳ ಹೂಡಿಕೆಯನ್ನು ನಿಯಂತ್ರಿಸಬೇಕಾಗುತ್ತದೆ. ಮತ್ತು, ಈ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಬೇಕಾಗುತ್ತದೆ. ಏಕೆಂದರೆ, ನವ-ಉದಾರವಾದವು ತರ್ಕಸಂಗತವಲ್ಲಎಂಬುದು ಸ್ಪಷ್ಟವಾಗಿದೆ. ಈ ಮೂಲಭೂತ ಸಂಗತಿಯನ್ನುಇಲ್ಲಿಯವರೆಗೆ ವಿಶ್ವ ಅರ್ಥವ್ಯವಸ್ಥೆಯ ಕೆಲವು ವಿಶೇಷ ಸನ್ನಿವೇಶಗಳಿಂದಾಗಿ ಗಮನ ಹರಿಸಲಾಗಿರಲಿಲ್ಲ. ಈಗ ಅದು ಬಯಲಿಗೆ ಬರುತ್ತಿದೆ. ಗಮನ ಹರಿಸಲೇಬೇಕಾಗುತ್ತದೆ.

 

                           ವ್ಯಂಗ್ಯಚಿತ್ರ: ಪಿ.ಮಹಮ್ಮದ್, ಫೇಸ್ ಬುಕ್
Donate Janashakthi Media

Leave a Reply

Your email address will not be published. Required fields are marked *