ಬೆಂಗಳೂರು : ಜನಗಳ ಕಲ್ಯಾಣದ ಕ್ರಮಗಳನ್ನು ‘ಫ್ರೀಬಿ’ಗಳು ಅಂದರೆ ‘ಪುಕ್ಕಟೆ ಕೊಡುಗೆ”ಗಳು ಎನ್ನುವ ಟೀಕೆ ಈ ಕ್ರಮಗಳ ವಿರುದ್ಧ ನಡೆಯುತ್ತಿರುವ ಆಕ್ರಮಣದ ಮೇಲೆ ಬೆಳಕು ಚೆಲ್ಲುತ್ತದೆ. ಜನರ ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ಆರೋಗ್ಯಪಾಲನೆ, ವಸತಿ, ಆಹಾರ ಮುಂತಾದವುಗಳು ಲಭ್ಯವಾಗಬೇಕು ಎಂಬ ಆಕಾಂಕ್ಷೆಗಳನ್ನು ‘ಫ್ರೀಬೀ’, ರೆವ್ಡಿ ಎಂದೆಲ್ಲ ಕರೆಯುವುದರ ಹಿಂದೆ ಇರುವ ನಿಜ ಉದ್ದೇಶವೇನು, ಎಂಬ ಪ್ರಶ್ನೆಯನ್ನು ಡಿಸೆಂಬರ್ 4ರಂದು ಬೆಂಗಳೂರಿನಲ್ಲಿ ನಡೆದ ಸಾರ್ವಜನಿಕ ಚರ್ಚೆಯೊಂದರಲ್ಲಿ ಕೇರಳದ ಮಾಜಿ ಹಣಕಾಸು ಸಚಿವ ಡಾ. ಥಾಮಸ್ ಐಸಾಕ್ ಎತ್ತಿದರು. ಆಳುವವರ ಈ ಕಥನ ಜನರ ಹೋರಾಟವನ್ನು ಅವಮಾನಕರಿಸುವ ರೀತಿಯಲ್ಲಿ ‘ಭಿಕ್ಷೆ’ ಎಂದು ಸಮೀಕರಿಸುತ್ತದೆ ಎಂದು ಅವರು ಕಟುವಾಗಿ ಟೀಕಿಸಿದರು.
ಕಲ್ಯಾಣ ಪ್ರಭುತ್ವದ ಪರಿಕಲ್ಪನೆಯ ಮೇಲಿನ ಈ ದಾಳಿಯನ್ನು ಒಟ್ಟಾರೆಯಾಗಿ ಅಗತ್ಯ ಸೇವೆಗಳ ಖಾಸಗೀಕರಣದತ್ತ ನೀಡಿರುವ ಒತ್ತಿನ ಮತ್ತು ಸರ್ಕಾರವು ಜನರತ್ತ ತನ್ನ ಸಾಂವಿಧಾನಿಕ ಬಾಧ್ಯತೆಗಳಿಂದ ಕೈತೊಳೆದು ಕೊಳ್ಳುವುದರ ಭಾಗವಾಗಿ ನೋಡಬಹುದಾಗಿದೆ. ಈ ಕಥನ ಜನರ ಆಕಾಂಕ್ಷೆಗಳು ಮತ್ತು ಅಗತ್ಯಗಳನ್ನು ಸರಿಯಾಗಿ ಅಭಿವ್ಯಕ್ತಗೊಳಿಸುವ ರಾಜಕೀಯ ಪಕ್ಷಗಳ ಸಾಮರ್ಥ್ಯದ ಮೇಲೆ ದುಷ್ಪ್ರಭಾವ ಬೀರುತ್ತದೆ, ಮತ್ತು ‘ಹಣಕಾಸಿನ ನೇಮನಿಷ್ಠೆ’ಗೆ ಅಡ್ಡಿ ಎಂಬ ಹುಸಿ ಭೀತಿಯ ಮೂಲಕ ರಾಜಕೀಯ ಚರ್ಚೆಯ ಮಟ್ಟವನ್ನು ಮತ್ತು ವ್ಯಾಪ್ತಿಯನ್ನು ಸೀಮಿತಗೊಳಿಸುತ್ತದೆ ಎಂದು ಮುಂದುವರೆದು ಡಾ. ಐಸಾಕ್ ಹೇಳಿದರು.
ಕಳೆದ ಐದು ವರ್ಷಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ಹೆಚ್ಚಾಗಿ ದೊಡ್ಡ ಕಾರ್ಪೊರೇಟ್ ಗಳಿಗೆ ನೀಡಿದ 10 ಲಕ್ಷ ಕೋಟಿ ರೂ.ಗೂ ಹೆಚ್ಚು ಮೊತ್ತದ ಸಾಲಗಳನ್ನು ಮನ್ನಾ ಮಾಡಲಾಗಿದೆ, ಇಂತಹ ದೊಡ್ಡ ಪ್ರಮಾಣದ ತೆರಿಗೆ ರಿಯಾಯಿತಿಗಳಿಂದ ಸಾರ್ವಜನಿಕ ಬೊಕ್ಕಸಕ್ಕೆ ತೊಂದರೆಯುಂಟು ಮಾಡಲಾಗಿದೆ. ಆದಾಗ್ಯೂ, ಈ ರಿಯಾಯಿತಿಗಳನ್ನು ಎಂದಿಗೂ ‘ಪುಕ್ಕಟೆ ಕೊಡುಗೆ’ ಎಂದು ಕರೆಯಲಾಗುವುದಿಲ್ಲ. ಈ ಪದವನ್ನು, ತಮಗೆ ನೀಡಬೇಕಾದ ಹಕ್ಕುಗಳನ್ನು ಕೇಳುವ ದೇಶದ ದುಡಿಯುವ ಜನಸಮುದಾಯದ ಮೇಲೆ ಮಾತ್ರವೇ ಅವರನ್ನು ಅಣಕಿಸುವ ರೀತಿಯಲ್ಲಿ ಪ್ರಯೋಗಿಸಲಾಗುತ್ತಿದೆ.
ಇದಲ್ಲದೆ, ದೇಶದ ಒಕ್ಕೂಟ ರಚನೆಯ ಮೇಲೆ ಈ ದಾಳಿ ನಕಾರಾತ್ಮಕ ಪರಿಣಾಮವನ್ನೂ ಬೀರುತ್ತದೆ ಎಂಬ ಸಂಗತಿಯೂ ಈ ಚರ್ಚೆಯಲ್ಲಿ ಹೊಮ್ಮಿ ಬಂತು. ಜನರ ಆರೋಗ್ಯ ಮತ್ತು ಆಹಾರ ಭದ್ರತೆಯಂತಹ ಕ್ಷೇತ್ರಗಳಲ್ಲಿ ರಾಜ್ಯ ಸರ್ಕಾರಗಳ ಹೊರೆಗಳನ್ನು ಹೆಚ್ಚುವಂತೆ ಈ ಕಥನ ಮಾಡಿದೆ. ಹೀಗೆ ರಾಜ್ಯಗಳ ಕಾರ್ಯನಿರ್ವಹಣೆಯನ್ನು ಕೇಂದ್ರ ಸರಕಾರ ನಿರಂತರವಾಗಿ ದುರ್ಬಲಗೊಳಿಸುವುದು ಮತ್ತು ರಾಜ್ಯ ಸರಕಾರಗಳ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ನಿರ್ಬಂಧಿಸುವುದು ಒಕ್ಕೂಟ ತತ್ವದ ಭಾವನೆಗೆ ಹಾನಿಕಾರಕವಾಗಿದೆ ಎಂದು ಡಾ ಐಸಾಕ್ ಹೇಳಿದರು.
‘ಬೆಂಗಳೂರು ಕಲೆಕ್ಟಿವ್’ ಏರ್ಪಡಿಸಿದ್ದ “ಪುಕ್ಕಟೆ ಕೊಡುಗೆ’ಗಳೆಂಬ ಮೋಸಗೊಳಿಸುವ ಚರ್ಚೆ-ಪ್ರಜಾಪ್ರಭುತ್ವ ಮತ್ತು ಕಲ್ಯಾಣದ ಮೇಲೊಂದು ಸಂಯೋಜಿತ ದಾಳಿ’ ಎಂಬ ಈ ಸಾರ್ವಜನಿಕ ಚರ್ಚೆಯನ್ನು ಉದ್ದೇಶಿಸಿ ಡಾ.ಥಾಮಸ್ ಐಸಾಕ್ ಮಾತನಾಡಿದ ನಂತರ ಪ್ರಶ್ನೋತ್ತರ ಅವಧಿಯಲ್ಲಿ ಸಭಿಕರು ಕೇರಳದ ಅಭಿವೃದ್ಧಿ ಮತ್ತು ಆರ್ಥಿಕ ಮಾದರಿ, ಸಾರ್ವಜನಿಕ ಮತ್ತು ಖಾಸಗಿ ಆಟಗಾರರನ್ನು ಸಮತೋಲನಗೊಳಿಸುವ ಆಡಳಿತ ರಚನೆ ಮತ್ತು ಕೇರಳದ ಮಹಿಳೆಯರ ಸ್ಥಾನಮಾನದಂತಹ ವಿವಿಧ ವಿಷಯಗಳ ಕುರಿತು ಪ್ರಶ್ನೆಗಳನ್ನು ಎತ್ತಿದರು. ರಾಜ್ಯಗಳ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಅಂತರರಾಜ್ಯ ಏಕತೆಯ ಅಗತ್ಯವೂ ಚರ್ಚೆಗೆ ಬಂತು.