ದಾರಿಗಾಣದಾಗಿರುವ ನವ-ಉದಾರವಾದದ ಆಳ್ವಿಕೆಯಲ್ಲಿ ಜಾಗತಿಕವಾಗಿ ಹೆಚ್ಚುತ್ತಿದೆ ದುಡಿಯುವ ವರ್ಗದ ಪ್ರತಿರೋಧ

ಪ್ರೊ.ಪ್ರಭಾತ್ ಪಟ್ನಾಯಕ್  
ಅನು: ಕೆ.ಎಂ.ನಾಗರಾಜ್

ನವ-ಉದಾರವಾದೀ ವ್ಯವಸ್ಥೆ ತಾನು ಸೃಷ್ಟಿಸಿರುವ ಪರಿಸ್ಥಿತಿಗಳನ್ನು ಬಳಸಿಕೊಂಡು ಉತ್ಪಾದನೆಯನ್ನು ಸ್ಥಳಾಂತರಿಸುವ ಬೆದರಿಕೆಯೊಡ್ಡಿಯೋ, ಕಿರು ಉತ್ಪಾದನೆಯನ್ನು ಕಾರ್ಪೊರೇಟ್ ದಾಳಿಗೆ ಒಳಪಡಿಸಿಯೋ ಅಥವ ಖಾಸಗೀಕರಣದ ಮೂಲಕವೋ ಒಟ್ಟಾರೆಯಾಗಿ ಬಂಡವಾಳದ ವಿರುದ್ಧದ ಹೋರಾಟದಲ್ಲಿ ದುಡಿಯುವ ವರ್ಗವನ್ನು ದುರ್ಬಲಗೊಳಿಸುತ್ತದೆ. ಇಂತಹ ಸನ್ನಿವೇಶದಲ್ಲಿಯೂ, ಕಾರ್ಮಿಕರ ರಣೋತ್ಸಾಹ ಹೆಚ್ಚುತ್ತಿರುವ ವಿದ್ಯಮಾನವನ್ನು ಈಗ ಕಾಣುತ್ತಿದ್ದೇವೆ. ಬ್ರಿಟನ್ನಿನಲ್ಲಿ ಇತ್ತೀಚೆಗಿನ ದಶಕಗಳಲ್ಲೇ ಅತಿ ದೊಡ್ಡದಾದ ರೈಲ್ವೆ ಮುಷ್ಕರ ಇದಕ್ಕೆ ಒಂದು ಉದಾಹರಣೆಯಷ್ಟೇ. ಇತರ ಯುರೋಪಿಯನ್ ದೇಶಗಳಲ್ಲೂ ಇದೇ ಪರಿಸ್ಥಿತಿ ಇದೆ. ಇಲ್ಲಿಯವರೆಗೂ ಕಾರ್ಮಿಕರ ತುಲನಾತ್ಮಕ ಜಡತೆಯು ನವ-ಉದಾರವಾದಿ ಯುಗದ ಎದ್ದು ಕಾಣುವ ಲಕ್ಷಣವಾಗಿತ್ತು. ಅದೀಗ ಕೊನೆಗೊಳ್ಳುತ್ತಿದೆ. ಹಣದುಬ್ಬರದ ಮಾರ್ಗವಾಗಿ ನವ-ಉದಾರವಾದವು ತಮ್ಮ ಜೀವನ ಮಟ್ಟದ ಮೇಲೆ ಎಸಗುತ್ತಿರುವ ನೇರ ಹಲ್ಲೆಯನ್ನು ಎಲ್ಲೆಡೆಯಲ್ಲೂ ಕಾರ್ಮಿಕರು ತೀವ್ರವಾಗಿ ಪ್ರತಿಭಟಿಸುತ್ತಿದ್ದಾರೆ. ಈ ಹಲ್ಲೆಯು, ದಾರಿ ಕಾಣದಂತಾಗಿರುವ ನವ-ಉದಾರವಾದದ ಪರಿಸ್ಥಿತಿಯ ಸಂಕೇತವಾಗಿದೆ.

ನವ-ಉದಾರವಾದಿ ಆಳ್ವಿಕೆಯು ಎಲ್ಲೆಡೆಯೂ ವರ್ಗ ಬಲಾಬಲದಲ್ಲಿ ಬದಲಾವಣೆಯನ್ನು ಸಹಜವಾಗಿಯೇ ದುಡಿಯುವ ವರ್ಗದ ವಿರುದ್ಧವಾಗಿಯೇ ತರುತ್ತದೆ. ಹಲವಾರು ಕಾರಣಗಳಿಗಾಗಿ ಈ ಬದಲಾವಣೆ ಸಂಭವಿಸುತ್ತದೆ. ಮೊದಲನೆಯದು, ಬಂಡವಾಳವು ಜಾಗತಿಕವಾಗಿ ಚಲಿಸುವ ಅವಕಾಶ ಹೊಂದಿದೆ. ಆ ಅವಕಾಶವು ಶ್ರಮ ಶಕ್ತಿಗೆ (ಕಾರ್ಮಿಕರಿಗೆ) ಲಭ್ಯವಿಲ್ಲ. ಆದುದರಿಂದ, ಜಾಗತಿಕವಾಗಿ ಚಲಿಸುವ ಬಂಡವಾಳವು ಒಂದು ದೇಶದ ದುಡಿಯುವ ವರ್ಗವನ್ನು ಮತ್ತೊಂದರ ವಿರುದ್ಧ ಎತ್ತಿಕಟ್ಟುತ್ತದೆ. ಒಂದು ದೇಶದ ಕಾರ್ಮಿಕರು ಮುಷ್ಕರ ನಡೆಸಿದಾಗ, ಬಂಡವಾಳವು ತನ್ನ ಉತ್ಪಾದನೆಯನ್ನು ಮತ್ತೊಂದು ದೇಶಕ್ಕೆ ಸ್ಥಳಾಂತರಿಸುವ ಆಯ್ಕೆಯನ್ನು ಹೊಂದಿದೆ. ಬಂಡವಾಳವು ಒಡ್ಡುವ ಈ ರೀತಿಯ ಸ್ಥಳಾಂತರದ ಬೆದರಿಕೆಯೇ ಪ್ರತಿಯೊಂದು ದೇಶದ ಕಾರ್ಮಿಕರ ಹೋರಾಟದ ಹುಮ್ಮಸ್ಸನ್ನು ಮೊಟಕುಗೊಳಿಸುತ್ತದೆ.

ಮುಷ್ಕರಗಳು ಒಂದು ದೇಶದಲ್ಲಿ ಮಾತ್ರವಲ್ಲದೆ, ಹಲವು ಹತ್ತು ದೇಶಗಳಲ್ಲಿ ಏಕಕಾಲದಲ್ಲಿ ಘಟಿಸುವ ರೀತಿಯಲ್ಲಿ ಕಾರ್ಮಿಕರನ್ನು ಒಂದು ವೇಳೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಘಟಿಸಿದ್ದರೆ, ಆಗ ಬಂಡವಾಳವು ತನ್ನ ಉತ್ಪಾದನೆಯನ್ನು ಮತ್ತೊಂದು ದೇಶಕ್ಕೆ ಸ್ಥಳಾಂತರಿಸುವ ಬೆದರಿಕೆ ಹಾಕುತ್ತಿರಲಿಲ್ಲ. ಕಾರ್ಮಿಕ ವರ್ಗಕ್ಕೆ ತನ್ನ ವರ್ಗಕಾರ್ಯಾಚರಣೆಗಳನ್ನು ಅಂತಾರಾಷ್ಟ್ರೀಯವಾಗಿ ಸಂಯೋಜಿಸುವುದು ಇನ್ನೂ ಸಾಧ್ಯವಾಗಿಲ್ಲ. ಹಾಗಾಗಿ, ಸ್ಥಳಾಂತರದ ಬೆದರಿಕೆಗಳು ಇನ್ನೂ ಪರಿಣಾಮಕಾರಿಯಾಗಿಯೇ ಉಳಿದಿವೆ. ಕಾರ್ಮಿಕರು ಒಂದು ವೇಳೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಘಟಿತರಾಗಿದ್ದರೂ, ಉತ್ಪಾದನೆಯನ್ನು ಸಂಪೂರ್ಣವಾಗಿ ಹೊಸದೊಂದು ಸ್ಥಳಕ್ಕೆ ಸ್ಥಳಾಂತರಿಸುವ ಬೆದರಿಕೆಯನ್ನು ಬಂಡವಾಳವು ನಿಲ್ಲಿಸದು. ಆದರೂ ಹಾಗೆ ಮಾಡುವುದು ಅದಕ್ಕೆ ಹೆಚ್ಚು ಕಷ್ಟಕರವಾಗುತ್ತಿತ್ತು. ಪ್ರಸ್ತುತ ಉತ್ಪಾದನಾ ನೆಲೆಗಳಲ್ಲಿಯೂ ಕಾರ್ಮಿಕರು ಅಂತಾರಾಷ್ಟ್ರೀಯವಾಗಿ ಸಂಘಟಿತರಾಗಿಲ್ಲ ಎಂಬುದು ಕೂಡ ಬಂಡವಾಳದ ಪರವಾಗಿ ಕೆಲಸ ಮಾಡುತ್ತದೆ ಮತ್ತು ಎಲ್ಲೆಡೆಯೂ ಕಾರ್ಮಿಕರ ಹೋರಾಟದ ಹುಮ್ಮಸ್ಸಿನ ಮಟ್ಟವನ್ನು ತಗ್ಗಿಸುತ್ತದೆ.

ಬಂಡವಾಳದ ಕೇಂದ್ರೀಕರಣವು ಕಾರ್ಮಿಕರ ಹೋರಾಟದ ಹುಮ್ಮಸ್ಸನ್ನು ತಗ್ಗಿಸುವ ಒಂದು ಸಾಧನ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯಾಂಶವೇ. ಚೆದರಿದ ಚಟುವಟಿಕೆಗಳಲ್ಲಿ ಅಥವಾ ಚೆದರಿದ ಭೌಗೋಳಿಕ ನೆಲೆಗಳಲ್ಲಿ ಬಂಡವಾಳವು ಹೂಡಿಕೆಯಾಗಿರುವುದರಿಂದ, ಯಾವುದೇ ನಿರ್ದಿಷ್ಟ ಸ್ಥಳದಲ್ಲಿ ಅಥವ ಕ್ಷೇತ್ರದಲ್ಲಿ ನಡೆಯಬಹುದಾದ ಕಾರ್ಮಿಕರ ಸಮರಧೀರ ಕಾರ್ಯಾಚರಣೆಯು ಬಂಡವಾಳದ ಸ್ಥಳಾಂತರದ ಬೆದರಿಕೆಯನ್ನು ಎದುರಿಸ ಬೇಕಾಗುತ್ತದೆ. ಈ ಪ್ರಕಾರವಾಗಿ ಕೇಂದ್ರೀಕೃತಗೊಂಡ ಬಂಡವಾಳವು ಕಾರ್ಮಿಕರ ಸಮರಧೀರ ಕಾರ್ಯಾಚರಣೆಗಳನ್ನು ನಿರ್ಬಂಧಿಸುತ್ತದೆ.

ಅದೇ ನಿಟ್ಟಿನಲ್ಲಿ ಕೆಲಸ ಮಾಡುವ ಎರಡನೆಯ ಅಂಶವೆಂದರೆ: ಉತ್ಪಾದನಾ ಚಟುವಟಿಕೆಗಳು ಬಂಡವಾಳಶಾಹಿ ದೇಶಗಳ ಮಹಾನಗರಗಳಿಂದ ಅಂಚಿನ ದೇಶಗಳಿಗೆ ಸ್ಥಳಾಂತರಗೊಂಡರೂ ಮತ್ತು ಆ ಮೂಲಕವಾಗಿ ಆ ಮಹಾನಗರಗಳ ಕಾರ್ಮಿಕರ ಚೌಕಾಶಿಯ ಶಕ್ತಿಯನ್ನು ಮತ್ತು ಅವರ ಮುಷ್ಕರದ ಶಕ್ತಿಯನ್ನು ದುರ್ಬಲಗೊಳಿಸಿದರೂ ಸಹ, ಅಂಚಿನ ದೇಶಗಳಲ್ಲಿರುವ ಕಾರ್ಮಿಕರ ಮೀಸಲು ಪಡೆಯೂ ಖಾಲಿಯಾಗುವುದಿಲ್ಲ ಮತ್ತು ಕಾರ್ಮಿಕರ ಹೋರಾಟದ ಕೆಚ್ಚೂ ಹೆಚ್ಚುವುದಿಲ್ಲ.

ಮೆಟ್ರೊಪೊಲಿಟನ್ ಅಥವ ಬಂಡವಾಳದ ಮಹಾನಗರಗಳ ಕಾರ್ಮಿಕರನ್ನು ಅಂಚಿನಲ್ಲಿರುವ ದೇಶಗಳ ಕಾರ್ಮಿಕ-ಮೀಸಲು ಪಡೆಯೊಂದಿಗೆ ತಳಕು ಹಾಕುವ ಮೂಲಕ ಅವರನ್ನು ನವ-ಉದಾರವಾದವು ನಿಯಂತ್ರಿಸುತ್ತದೆ ಎಂಬ ಅಂಶವನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. ಮೆಟ್ರೋಪಾಲಿಟನ್ ಕಾರ್ಮಿಕರ ಮತ್ತು ಅಂಚಿನಲ್ಲಿರುವ ದೇಶಗಳ ಕಾರ್ಮಿಕರ ಪರಿಸ್ಥಿತಿಗಳಲ್ಲಿ ಅಂತರ ಹೆಚ್ಚುತ್ತಿದ್ದುದು ಜಾಗತಿಕ ಅರ್ಥವ್ಯವಸ್ಥೆಯನ್ನು ಬಂಡವಾಳ ಮತ್ತು ಕಾರ್ಮಿಕರು ಚಲಿಸಲು ಅವಕಾಶವಿಲ್ಲದ ಎರಡು ಭಾಗಗಳಾಗಿ ವಿಂಗಡಿಸಿದ ಹಿಂದಿನ ಅವಧಿಯ ಲಕ್ಷಣವಾಗಿತ್ತು. ಆದರೆ, ಈಗ ಇಂತಹ ಸನ್ನಿವೇಶ ಮುಂದುವರೆಯಲು ಸಾಧ್ಯವಿಲ್ಲ. ಆದರೆ, ನವ-ಉದಾರವಾದವು ಅತ್ತ ಈ ರೀತಿಯ ಸ್ಥಳಾಂತರದ ನೆರವಿನಿಂದ ಕಾರ್ಮಿಕ ಮೀಸಲುಗಳನ್ನು ಬಳಸಿಕೊಂಡು ಅಂಚಿನ ದೇಶಗಳ ಅರ್ಥವ್ಯವಸ್ಥೆಯ ಕ್ಷಿಪ್ರ ಬೆಳವಣಿಗೆಯನ್ನು ಸಾಕಾರಗೊಳಿಸುವ ಭರವಸೆಯನ್ನು ಅವರಿಗೆ ನೀಡಿತ್ತು. ಅಂದರೆ, ವಸಾಹತುಶಾಹಿ ಮತ್ತು ಅರೆ-ವಸಾಹತುಶಾಹಿ ಬಿಟ್ಟುಹೋಗಿರುವ ಈ ಮೀಸಲುಗಳು (ನಿಜ, ನವ-ಉದಾರವಾದಿ ಸಿದ್ಧಾಂತವು ಈ ಸಂಗತಿಯನ್ನು ಗುರುತಿಸುವುದಿಲ್ಲ) ಅಂತಿಮವಾಗಿ ಕ್ಷೀಣಿಸುತ್ತವೆ ಎಂಬ ಭರವಸೆಯನ್ನು ನವ-ಉದಾರವಾದವು ಹೊಂದಿತ್ತು.

ಆದರೆ, ಅಂಚಿನಲ್ಲಿರುವ ದೇಶಗಳ ಪರಿಸ್ಥಿತಿಗಳನ್ನು ಸುಧಾರಿಸುವುದಾಗಿ ಕೊಟ್ಟ ಮಾತನ್ನು ನವ-ಉದಾರವಾದವು ಉಳಿಸಿಕೊಳ್ಳಲಿಲ್ಲ. ವಾಸ್ತವವಾಗಿ, ಅಂಚಿನ ದೇಶಗಳ ಕಾರ್ಮಿಕ ಮೀಸಲುಗಳ ಪ್ರಮಾಣವನ್ನು ಇಳಿಕೆ ಮಾಡುವ ಬದಲು, ನವ-ಉದಾರವಾದಿ ಆಳ್ವಿಕೆಯು ಅದನ್ನು ಹೆಚ್ಚಿಸಿದೆ. ಅಂದರೆ ಅಲ್ಲಿ ನಿರುದ್ಯೋಗದ ಹೆಚ್ಚಳದಲ್ಲಿ ನವ-ಉದಾರವಾದವೂ  ಭಾಗಿಯಾಗಿದೆ. ನಿಜ, ಇದು ಉದ್ಯೋಗದಲ್ಲಿರುವ ಕಾರ್ಮಿಕರ ಸಂಖ್ಯೆಯ ಇಳಿಕೆಯ ಮೂಲಕ ಪ್ರಕಟಗೊಂಡಿರಲಿಕ್ಕಿಲ್ಲ, ಬದಲಿಗೆ ಪ್ರತಿಯೊಬ್ಬ ಕಾರ್ಮಿಕನು ಕೆಲಸ ಮಾಡುವ ದಿನಗಳ ಸಂಖ್ಯೆಯ ಇಳಿಕೆಯ ರೂಪದಲ್ಲಿ ನಿರುದ್ಯೋಗವು ಪ್ರಕಟಗೊಳ್ಳಬಹುದು.

ನಿರುದ್ಯೋಗದ ಈ ರೀತಿಯ ಹೆಚ್ಚಳವು ನವ-ಉದಾರವಾದದ ಎರಡು ಗುಣಲಕ್ಷಣಗಳಿಂದ ಸಂಭವಿಸುತ್ತದೆ. ಒಂದು, ಕಿರು ಉತ್ಪಾದನೆಯ ಮತ್ತು ರೈತಾಪಿ-ಕೃಷಿಯ ವಲಯಗಳನ್ನು ಕಾರ್ಪೊರೇಟ್ ಬಂಡವಾಳ ಮತ್ತು ಕೃಷಿ-ಉದ್ದಿಮೆಗಳ ಅತಿಕ್ರಮಣಕ್ಕೆ ಮುಕ್ತಗೊಳಿಸುವ ಉದ್ದೇಶದಿಂದ ಈ ವಲಯಗಳಿಗೆ ಸರ್ಕಾರವು ಒದಗಿಸುತ್ತಿದ್ದ ಬೆಂಬಲವನ್ನು ಹಿಂತೆಗೆದುಕೊಳ್ಳುವ ಕ್ರಮ. ಎರಡನೆಯ ಗುಣಲಕ್ಷಣವೆಂದರೆ, ಗಡಿಯಾಚೆಯಿಂದ ಸರಕುಗಳು ಮತ್ತು ಸೇವೆಗಳು ಮುಕ್ತವಾಗಿ ಹರಿಯಲು ಅನುವಾಗುವಂತೆ ಅರ್ಥವ್ಯವಸ್ಥೆಯನ್ನು ತೆರೆದಿಡುವ ಕ್ರಮ. ಆಮದು ಮಾಡಿಕೊಂಡ ಸರಕುಗಳು ಮತ್ತು ಸೇವೆಗಳು ಸ್ಥಳೀಯ ಉತ್ಪನ್ನಗಳಿಗೆ ಹೊಡೆತ ಕೊಡುವುದರಿಂದ, ಪ್ರತಿಯೊಬ್ಬ ಉತ್ಪಾದಕನೂ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಉಳಿಸಿಕೊಳ್ಳಲು ಗುಣಮಟ್ಟದ ವಸ್ತುಗಳನ್ನು ತಯಾರಿಸುವ ಸಲುವಾಗಿ ಉನ್ನತ ಮಟ್ಟದ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಒತ್ತಾಯಕ್ಕೆ ಒಳಗಾಗುತ್ತಾನೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಶ್ರಮ ಶಕ್ತಿಯ ಮೇಲಿನ ಉಳಿತಾಯವೇ ತಂತ್ರಜ್ಞಾನದ ಒಂದು ಮಾದರಿಯಾಗಿ ಉಳಿದಿರುವುದರಿಂದಾಗಿ, ತಾಂತ್ರಿಕ ಅನ್ವೇಷಣೆಗಳ ಫಲವಾಗಿ ಹೆಚ್ಚುವ ಕಾರ್ಮಿಕರ ಉತ್ಪಾದಕತೆಯು ಉದ್ಯೋಗಗಳ ಕುಸಿತದಲ್ಲಿ ಪರಿಣಮಿಸುತ್ತದೆ. ಈ ರೀತಿಯಲ್ಲಿ, ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ, ಒಂದು ಕಡೆಯಲ್ಲಿ ಉದ್ಯೋಗಗಳು ಕುಗ್ಗುತ್ತವೆ ಮತ್ತು ಅದೇ ಸಮಯದಲ್ಲಿ, ತಮ್ಮ ಕಸುಬಿನಿಂದ ಹೊರಹಾಕಲ್ಪಟ್ಟ ರೈತರು ಮತ್ತು ಕುಶಲಕರ್ಮಿಗಳು ಉದ್ಯೋಗಾಕಾಂಕ್ಷಿಗಳ ಸಂಖ್ಯೆಯನ್ನು ಹೆಚ್ಚಿಸುತ್ತಾರೆ. ಹಾಗಾಗಿ, ಕಾರ್ಮಿಕ ಮೀಸಲು ಪಡೆಯ ಗಾತ್ರವು ತುಲನಾತ್ಮಕವಾಗಿ ಹೆಚ್ಚುತ್ತದೆ. ಈ ವಿದ್ಯಮಾನವು ಎಲ್ಲಾ ದೇಶಗಳಲ್ಲೂ ದುಡಿಯುವ ವರ್ಗದ ಪರಿಸ್ಥಿತಿಯನ್ನು ದುರ್ಬಲಗೊಳಿಸುತ್ತದೆ.

ಎಲ್ಲೆಡೆಯೂ ಕಾರ್ಮಿಕರ ಪರಿಸ್ಥಿತಿಯನ್ನು ದುರ್ಬಲಗೊಳಿಸುವ ಮೂರನೇ ಅಂಶವೆಂದರೆ, ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣ. ಸಾರ್ವಜನಿಕ ವಲಯದ ಉದ್ದಿಮೆಗಳ ಕಾರ್ಮಿಕರು ಖಾಸಗಿ ವಲಯದ ಉದ್ದಿಮೆಗಳ ಕಾರ್ಮಿಕರಿಗಿಂತ ಉತ್ತಮವಾಗಿ ಸಂಘಟಿತರಾಗಿರುತ್ತಾರೆ ಎಂಬುದು ಈ ಎರಡೂ ವಲಯಗಳಲ್ಲಿ ಅಸ್ತಿತ್ವದಲ್ಲಿರುವ ಯೂನಿಯನ್‌ ಗಳ ವ್ಯಾಪ್ತಿಯ ಮೂಲಕ ಸ್ಪಷ್ಟವಾಗುತ್ತದೆ. ಉದಾಹರಣೆಗೆ, ಅಮೆರಿಕಾದ ಸಾರ್ವಜನಿಕ ವಲಯದ ಮೂರನೇ ಒಂದು ಭಾಗದಷ್ಟು ಸಂಖ್ಯೆಯ ಉದ್ಯೋಗಿಗಳು (ಶಿಕ್ಷಣ ಕ್ಷೇತ್ರವೂ ಸೇರಿದಂತೆ) ಯೂನಿಯನ್ ಕಟ್ಟಿಕೊಂಡಿದ್ದಾರೆ ಮತ್ತು ಖಾಸಗಿ ವಲಯದಲ್ಲಿ ಕೇವಲ ಶೇ. ಏಳರಷ್ಟು ಉದ್ಯೋಗಿಗಳು ಮಾತ್ರ ಯೂನಿಯನ್ ಕಟ್ಟಿಕೊಂಡಿದ್ದಾರೆ. ಹಾಗಾಗಿ, ಖಾಸಗೀಕರಣವು ದುಡಿಯುವ ವರ್ಗದ ಕಾರ್ಮಿಕರ ಹೊರಾಟದ ಕೆಚ್ಚನ್ನು ತಗ್ಗಿಸುವ ಪರಿಣಾಮ ಹೊಂದಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ಪರಿಸ್ಥಿತಿಯು ಒಟ್ಟಾರೆಯಾಗಿ ಕಾರ್ಮಿಕರ ಹುಮ್ಮಸ್ಸನ್ನು ತಗ್ಗಿಸುವಲ್ಲಿ ಪರಿಣಮಿಸುತ್ತದೆ.

ಈ ಕಾರಣದಿಂದಾಗಿಯೇ ಇನ್ನೂ ಗಣನೀಯ ಪ್ರಮಾಣದ ಸಾರ್ವಜನಿಕ ವಲಯವನ್ನು ಹೊಂದಿರುವ ಫ್ರಾನ್ಸ್ ದೇಶವು ಕಾರ್ಮಿಕರ ದಿಟ್ಟ ಹೋರಾಟಗಳಿಗೆ ಸಾಕ್ಷಿಯಾಗುತ್ತಲೇ ಇದೆ. ವಿಖ್ಯಾತ ಹೋರಾಟಗಳ ಇತಿಹಾಸದೊಂದಿಗೆ ಗಣನೀಯ ಪ್ರಮಾಣದ ಸಾರ್ವಜನಿಕ ವಲಯವನ್ನು ಹೊಂದಿದ ಭಾರತದಲ್ಲಿ ಮೆಲ್ಲಮೆಲ್ಲಗೆ ಸಾಗುತ್ತಿರುವ ಬೃಹತ್ ಖಾಸಗೀಕರಣದಿಂದಾಗಿ ಕಾರ್ಮಿಕರ ಹೋರಾಟಗಳು ಹೆಚ್ಚು ಕಷ್ಟಕರವಾಗಿವೆ. ಹಾಗಾಗಿ, ಟ್ರೇಡ್ ಯೂನಿಯನ್‌ಗಳನ್ನು ಸಂಘಟಿಸುವ ಕಾರ್ಯವು ಸಣ್ಣ-ಕೈಗಾರಿಕಾ ವಲಯದತ್ತ ತಿರುಗಿದೆ.

ಈ ಸನ್ನಿವೇಶದಲ್ಲಿ ಗಮನ ಸೆಳೆಯುವ ಅಂಶವು ಯಾವುದೆಂದರೆ, ಬಂಡವಾಳದ ವಿರುದ್ಧದ ಹೋರಾಟದಲ್ಲಿ ದುಡಿಯುವ ವರ್ಗವನ್ನು ನವ-ಉದಾರವಾದವು ದುರ್ಬಲಗೊಳಿಸುತ್ತದೆ ಎಂಬುದಲ್ಲ, ಅದರ ಹೊರತಾಗಿಯೂ ಕಾರ್ಮಿಕರ ಉತ್ಸಾಹ, ಧೈರ್ಯ, ಸಾಹಸಗಳು ಹೆಚ್ಚುತ್ತಿರುವ ವಿದ್ಯಮಾನಕ್ಕೆ ನವ-ಉದಾರವಾದವು ಸಾಕ್ಷಿಯಾಗಿದೆ ಎಂಬುದು. ಬ್ರಿಟನ್‌ ನಲ್ಲಿ ಹಿಂದಿನ ಬೇಸಿಗೆಯಲ್ಲಿ ಕಂಡ ಇತ್ತೀಚಿನ ದಶಕಗಳಲ್ಲೇ ಅತಿದೊಡ್ಡ ಮುಷ್ಕರವೂ ಸೇರಿದಂತೆ ಹಲವಾರು ಮುಷ್ಕರಗಳನ್ನು ರೈಲ್ವೆ ಕಾರ್ಮಿಕರು ಈ ವರ್ಷದಲ್ಲಿ ನಡೆಸಿದ್ದಾರೆ. ಪ್ರಸ್ತುತದಲ್ಲಿ, ರೈಲ್ವೆ ಕಾರ್ಮಿಕರು ತಮ್ಮ ಉದ್ಯೋಗದಾತರು ನೀಡಿದ ವೇತನ ಪ್ರಸ್ತಾಪವನ್ನು ಕ್ಷುಲ್ಲಕವೆಂದು ತಿರಸ್ಕರಿಸಿದ್ದಾರೆ ಮತ್ತು ಡಿಸೆಂಬರ್ ಮತ್ತು ಜನವರಿಯಲ್ಲಿ ಮುಂದಿನ ಮುಷ್ಕರ ಹೂಡುವ ಬೆದರಿಕೆ ಹಾಕಿದ್ದಾರೆ. ರೈಲ್ವೆ ಕಾರ್ಮಿಕರು ಏಕಾಂಗಿಯಲ್ಲ. ಅಂಚೆ ನೌಕರರು, ದಾದಿಯರು, ಆಂಬ್ಯುಲೆನ್ಸ್ ಕಾರ್ಮಿಕರು ಮತ್ತು ಇತರರು ಮುಷ್ಕರದಲ್ಲಿ ತೊಡಗಿದ್ದಾರೆ ಅಥವಾ ಮುಷ್ಕರ ಹೂಡಲಿದ್ದಾರೆ. ಈ ಸಂಬಂಧವಾಗಿ, ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಅಧ್ಯಕ್ಷರು “ಅಗತ್ಯ ಸೇವೆಗಳನ್ನು” ಒದಗಿಸಲು ಸೇನೆಯನ್ನು ನಿಯೋಜಿಸುವ ಮಾತನಾಡಿದ್ದಾರೆ. ಜರ್ಮನಿಯಲ್ಲಿ, ಬಂದರು ಕಾರ್ಮಿಕರು, ಸಾರ್ವಜನಿಕ ಸಾರಿಗೆ ಕಾರ್ಮಿಕರು, ವಾಯುಯಾನ ಭದ್ರತಾ ಕಾರ್ಮಿಕರು, ಕಟ್ಟಡ ಕಾರ್ಮಿಕರು ಮತ್ತು ರೈಲ್ವೆ ಕಾರ್ಮಿಕರು ಎಲ್ಲರೂ ಮುಷ್ಕರಗಳಲ್ಲಿ ತೊಡಗಿದ್ದಾರೆ ಅಥವಾ ಶೀಘ್ರದಲ್ಲೇ ಮುಷ್ಕರದಲ್ಲಿ ತೊಡಗಲಿದ್ದಾರೆ. ಇತರ ಯುರೋಪಿಯನ್ ದೇಶಗಳಲ್ಲೂ ಇದೇ ಪರಿಸ್ಥಿತಿ ಇದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಇಲ್ಲಿಯವರೆಗೂ ಕಾರ್ಮಿಕರ ತುಲನಾತ್ಮಕ ಜಡತೆಯು ನವ-ಉದಾರವಾದಿ ಯುಗದ ಎದ್ದು ಕಾಣುವ ಲಕ್ಷಣವಾಗಿತ್ತು. ಅದು ಕೊನೆಗೊಳ್ಳುತ್ತಿದೆ.

ಕಾರ್ಮಿಕರ ರಣೋತ್ಸಾಹ ಹೆಚ್ಚುತ್ತಿರುವ ಬಗ್ಗೆ ಪಶ್ಚಿಮ ದೇಶಗಳ ಪತ್ರಿಕೆಗಳಲ್ಲಿ ಕಂಡುಬರುವ ಮಾದರಿ ವಿವರಣೆ ಏನೆಂದರೆ, ಹಣದುಬ್ಬರವೇ ಈ ಎಲ್ಲದಕ್ಕೂ ಕಾರಣ ಎಂಬುದು. ಉಕ್ರೇನ್ ಯುದ್ಧ ಅಥವಾ ಪೂರೈಕೆ ಸರಪಳಿಗಳಲ್ಲಿ ಕೋವಿಡ್-ಪ್ರೇರಿತ ಅಡಚಣೆಗಳಂತಹ ಅಂಶಗಳಿಂದ ಹಣದುಬ್ಬರ ಉಂಟಾಗಿದೆ ಎಂದು ನಂಬಲಾಗಿದೆ. ಈ ಅಂಶಗಳು ನವ-ಉದಾರವಾದಿ ಬಂಡವಾಳಶಾಹಿಯ ಕಾರ್ಯಾಚರಣೆಗೆ ಸಂಪೂರ್ಣವಾಗಿ ಹೊರಗಿನವು ಎಂದು ಭಾವಿಸಲಾಗಿದೆ.

ಈ ವಿವರಣೆಯು ಎರಡು ಸ್ಪಷ್ಟ ಕಾರಣಗಳಿಂದಾಗಿ ಅಸಮರ್ಪಕವಾಗಿದೆ: ಮೊದಲನೆಯದು, ಕೋವಿಡ್ ಪ್ರಸಂಗವಾಗಲಿ ಅಥವಾ ಉಕ್ರೇನ್ ಯುದ್ಧವಾಗಲಿ ನವ-ಉದಾರವಾದಿ ಬಂಡವಾಳಶಾಹಿಯ ಕಾರ್ಯಾಚರಣೆಗೆ ಹೊರಗಿನದಲ್ಲ ಎಂಬುದು ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಸ್ಪಷ್ಟವಾಗಿದೆ. ಉಕ್ರೇನ್ ಯುದ್ಧದ ಉಗಮವು ಪಾಶ್ಚಾತ್ಯ ಸಾಮ್ರಾಜ್ಯಶಾಹಿಯ ಪ್ರಾಬಲ್ಯವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಅಡಕವಾಗಿದೆ. ಅದನ್ನು ನವ-ಉದಾರವಾದಿ ಬಂಡವಾಳಶಾಹಿಯೂ ಸಮರ್ಥಿಸುತ್ತದೆ. ಆದರೆ, ಕೋವಿಡ್ ಪ್ರಸಂಗವೂ ಸಹ ನವ-ಉದಾರವಾದಿ ಬಂಡವಾಳಶಾಹಿಗೆ ಹೊರಗಿನದಲ್ಲ: ಲಸಿಕೆ ತಂತ್ರಜ್ಞಾನದ ಮೇಲೆ ಹೊಂದಿದ ಏಕಸ್ವಾಮ್ಯ ನಿಯಂತ್ರಣ ಮತ್ತು ಲಸಿಕೆ ತಂತ್ರಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಲು ನಿರಾಕರಿಸಿರುವುದು ಸಾಂಕ್ರಾಮಿಕದ ವ್ಯಾಪಕತೆಗೆ ಮತ್ತು ತೀವ್ರತೆಗೆ ಕಾರಣವಾಗಿದೆ. ಅದೂ ಅಲ್ಲದೆ, ಲ್ಯಾನ್ಸೆಟ್ ಎಂಬ ಪತ್ರಿಕೆಯು ನೇಮಿಸಿದ ಸಮಿತಿಯ ವರದಿಯ ಪ್ರಕಾರ, ಕೋವಿಡ್ ಮೂಲವು ಸಾಮ್ರಾಜ್ಯಶಾಹಿಯ ಪರವಾಗಿ ಮಿಲಿಟರಿ-ಸಂಬಂಧಿತ ಸಂಶೋಧನಾ ನಿರತ ಪ್ರಯೋಗಾಲಯದಲ್ಲಿ ನೆಲೆಸಿದೆ ಮತ್ತು ವೈರಸ್ ಅಲ್ಲಿಂದ ಆಕಸ್ಮಿಕವಾಗಿ ಹರಡಿದೆ.

ಪ್ರಸ್ತುತ ಹಣದುಬ್ಬರವು ನವ-ಉದಾರವಾದಿ ಬಂಡವಾಳಶಾಹಿಗೆ ಹೊರಗಿನದಲ್ಲ ಎಂಬುದಕ್ಕೆ ಇರುವ ಎರಡನೆಯ ಕಾರಣವು ಹೀಗಿದೆ: ಬಂಡವಾಳಶಾಹಿ ಬಿಕ್ಕಟ್ಟುಗಳು ಹೊಂದಿರುವ ವಿಶಿಷ್ಟ ಗುಣಲಕ್ಷಣವೆಂದರೆ, ಅವುಗಳನ್ನು ಆಗಾಗ ಪರಿಹರಿಸುವ ಪ್ರಯತ್ನಗಳೇ ವಿಭಿನ್ನ ರೂಪದ ಬಿಕ್ಕಟ್ಟುಗಳಿಗೆ ಕಾರಣವಾಗುತ್ತವೆ. ನವ-ಉದಾರವಾದಿ ಬಂಡವಾಳಶಾಹಿಯು ಒಟ್ಟಾರೆಯಾಗಿ ಜಾಗತಿಕ ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಮತ್ತು ಯಾವುದೇ ಒಂದು ನಿರ್ದಿಷ್ಟ ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಮಿಗುತಾಯದ ಪಾಲು ಹೆಚ್ಚುವಂತೆ ನೋಡಿಕೊಂಡಿತು. ಆದರೆ ಮಿಗುತಾಯದ ಈ ಹೆಚ್ಚಳದಿಂದಾಗಿಯೇ ಸೃಷ್ಟಿಯಾದ ಒಂದು ಅತಿ-ಉತ್ಪಾದನಾ ಪ್ರವೃತ್ತಿಯು ಬಿಕ್ಕಟ್ಟನ್ನು ಉಂಟುಮಾಡಿತು. ಬಂಡವಾಳಶಾಹಿ ದೇಶಗಳಲ್ಲಿ ಪ್ರಮುಖವಾಗಿರುವ ಅಮೆರಿಕಾ, ತನ್ನ ಬಡ್ಡಿ ದರಗಳನ್ನು ಶೂನ್ಯಕ್ಕೆ ಹತ್ತಿರದಲ್ಲಿರುವ ಮಟ್ಟದಲ್ಲಿ ಇರಿಸುವ ಮೂಲಕ ಮತ್ತು “ಸುಲಭ ಹಣ ಲಭ್ಯತೆ”ಯ (quantitative easing) ಕ್ರಮವನ್ನು ಪಾಲಿಸುವ ಮೂಲಕ, ಬಿಕ್ಕಟ್ಟನ್ನು ನಿವಾರಿಸಲು ಅನೇಕ ವರ್ಷಗಳ ಕಾಲ ಪ್ರಯತ್ನಿಸಿತು.

ಬಂಡವಾಳಗಾರರು ಯಾವುದೇ ಕ್ರಮವನ್ನು ಕೈಗೊಳ್ಳುವ ಮೊದಲು ಅದಕ್ಕೆ ಸಂಬಂಧಿಸಿದ ಅಪಾಯಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸುತ್ತಾರೆ. ಅತಿ ಕಡಿಮೆ ಬಡ್ಡಿ ದರಗಳಲ್ಲಿ ಅಗಾಧ ಪ್ರಮಾಣದ ಹಣ ಲಭ್ಯವಾಗುವ ಪರಿಸ್ಥಿತಿಯು ಕಾರ್ಪೊರೇಟ್‌ಗಳಿಗೆ ತಮ್ಮ ಲಾಭದ ಅಂತರವನ್ನು ಹೆಚ್ಚಿಸುವ ಸಂಬಂಧವಾಗಿ ಎದುರಾಗುವ ಅಪಾಯಗಳನ್ನು ಬಹುಮಟ್ಟಿಗೆ ತಗ್ಗಿಸುತ್ತದೆ. ಈ ಕಾರಣದಿಂದಾಗಿಯೇ ಹಲವಾರು ಅಮೆರಿಕನ್ ಕಾರ್ಪೊರೇಷನ್‌ಗಳು ತಮಗೆ ಒದಗಿದ ಮೊದಲ ಅವಕಾಶದಲ್ಲೇ ತಮ್ಮ ಲಾಭದ ಅಂತರವನ್ನು ಹೆಚ್ಚಿಸಿಕೊಂಡವು, ಅದು ಹಣದುಬ್ಬರವನ್ನು ತ್ವರಿತಗೊಳಿಸಿತು. ಹಣದುಬ್ಬರವನ್ನು ಉಲ್ಬಣಗೊಳಿಸುವಲ್ಲಿ ಇತರ ಅಂಶಗಳು ನಿಸ್ಸಂದೇಹವಾಗಿಯೂ ಕೆಲಸ ಮಾಡಿವೆ. ಆದರೆ, ಪ್ರಸ್ತುತ ಹಣದುಬ್ಬರದ ಈ ಮೂಲ ಕಾರಣವನ್ನು ಮರೆಯುವಂತಿಲ್ಲ.

ಹಣದುಬ್ಬರದ ಮಾರ್ಗವಾಗಿ ನವ-ಉದಾರವಾದವು ತಮ್ಮ ಜೀವನ ಮಟ್ಟದ ಮೇಲೆ ಎಸಗುತ್ತಿರುವ ನೇರ ಹಲ್ಲೆಯನ್ನು ಎಲ್ಲೆಡೆಯಲ್ಲೂ ಕಾರ್ಮಿಕರು ತೀವ್ರವಾಗಿ ಪ್ರತಿಭಟಿಸುತ್ತಿದ್ದಾರೆ. ಈ ಹಲ್ಲೆಯು, ದಾರಿ ಕಾಣದಂತಾಗಿರುವ ನವ-ಉದಾರವಾದದ ಪರಿಸ್ಥಿತಿಯ ಸಂಕೇತವಾಗಿದೆ.

Donate Janashakthi Media

Leave a Reply

Your email address will not be published. Required fields are marked *