ದೇವೇಗೌಡರ ಬಾಯಿಂದ ಬಂದ ಮೀಸಲಾತಿಯ ಆ ಮಾತಿಗೆ ಒಂದು ಸುದೀರ್ಘ ಚರಿತ್ರೆಯಿದೆ

-ಮಾಚಯ್ಯ ಎಂ ಹಿಪ್ಪರಗಿ

ಮೀಸಲಾತಿಯನ್ನು ಆರ್ಥಿಕ ಆಯಾಮದಿಂದ ಪರಿಷ್ಕರಿಸಬೇಕಿದೆ ಎಂದು ಮಾಜಿ ಪ್ರಧಾನಿ ದೇವೇಗೌಡರು ರಾಜ್ಯಸಭೆಯಲ್ಲಿ ಆಡಿದ ಮಾತಿಗೆ ಸಾಕಷ್ಟು ಜನ ಆಘಾತಕ್ಕೆ ಒಳಗಾಗಿದ್ದಾರೆ. ಬಹುಶಃ ದೇವೇಗೌಡರನ್ನು ಗ್ರಹಿಸುವಲ್ಲಿ ಎಡವಿದವರೋ, ಭ್ರಮೆಗೆ ತುತ್ತಾದವರೋ ಹೀಗೆ ಆಘಾತಗೊಳ್ಳಬಹುದು. ಆದರೆ ದೇವೇಗೌಡರ ನಿಜ ರೂಪ ಎಂತದ್ದು, ರಾಜಕಾರಣಿಯಾಗಿ ಉನ್ನತಿಗೇರಲು ಅವರು ತುಳಿದ ಹಾದಿ ಎಂತದ್ದು ಎಂಬುದನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡವರಿಗೆ ಅವರ ಈ ಮಾತಿನಲ್ಲಿ ಆಘಾತ ಪಡುವಂತದ್ದು ಏನೂ ಇಲ್ಲ. ಹೇಗೆ ಅನ್ನೋದನ್ನು ವಿವರವಾಗಿ ನೋಡೋಣ ಬನ್ನಿ. ಮೀಸಲಾತಿ

ದೇವೇಗೌಡರಿಗೆ ವಯಸ್ಸಾಗಿದೆ, ಆ ಕಾರಣಕ್ಕೆ ನಾವು ಅವರಿಗೆ ಗೌರವ ಕೊಡಬೇಕು ಎಂದು ಯಾರಾದರು ಹೇಳಿದರೆ; ಖಂಡಿತ, ನಾನದಕ್ಕೆ ಸಮ್ಮತಿಸುತ್ತೇನೆ. ಆದರೆ ದೇವೇಗೌಡ ಒಬ್ಬ ಹಿರಿಯ ರಾಜಕಾರಣಿ, ಆ ಕಾರಣಕ್ಕೆ ನಾವು ಗೌರವ ಕೊಡಬೇಕು ಎಂದು ಹೇಳಿದರೆ, ನಾನು ಸುತಾರಾಂ ಒಪ್ಪುವುದಿಲ್ಲ. ಯಾಕೆಂದರೆ ಕೆಲವೊಮ್ಮೆ ಟೀಕಿಸಬೇಕಾದದ್ದನ್ನು ಟೀಕಿಸಬೇಕಾದಷ್ಟು ತೀವ್ರವಾಗಿ ಟೀಕಿಸದೆ ಹೋದರೆ, ಅದನ್ನು ನಾವು ಸಮರ್ಥಿಸಿದಂತೆಯೇ ಲೆಕ್ಕ. ದೇವೇಗೌಡರ ರಾಜಕಾರಣದ ಹಾದಿ ಅತ್ಯಂತ ದುಷ್ಟತನದಿಂದ, ಪ್ರತೀಕಾರದ ಜಿದ್ದಿನಿಂದ ಕೂಡಿರುವಂತದ್ದು. ದೇವೇಗೌಡರು ಯಾರನ್ನಾದರು ಬೆಂಬಲಿಸಿ, ಬೆಳೆಸುತ್ತಿದ್ದಾರೆಂದರೆ ಅದು ಮತ್ತ್ಯಾರನ್ನೋ ಹಣಿಯುವ ಅಸ್ತ್ರವಾಗಿ ಅಂತ ಅರ್ಥ ಮಾಡಿಕೊಳ್ಳಬೇಕಾಗುತ್ತೆ. ಅಧಿಕಾರಕ್ಕಾಗಿ ರಾಮಕೃಷ್ಣ ಹೆಗಡೆಗೆ ಇನ್ನಿಲ್ಲದಂತೆ ಕಾಟ ಕೊಟ್ಟರು. ಮೀಸಲಾತಿ

ನಿರಂತರವಾಗಿ ಬಂಡಾಯವನ್ನು ಹೊಸೆಯುತ್ತಲೇ ಬಂದರು. ಹೆಗಡೆಯನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲು ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಜಿತ್ ಸಿಂಗ್ ಜೊತೆ ದೇವೇಗೌಡ ನಡೆಸಿದ್ದ ಫೋನ್ ಸಂಭಾಷಣೆಯ ಟೇಪ್ ಹೊರಬಂದದ್ದನ್ನು ಮರೆಯಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಗಾದಿಗೆ ತಾನು ಹೆಗಡೆಯಷ್ಟೆ ಸರಿಸಮಾನ ನಾಯಕ ಎಂದುಕೊಂಡಿದ್ದ ದೇವೇಗೌಡರಿಗೆ ಯಾವಾಗ ಹೆಗಡೆ ತಮ್ಮ ಸಂಪುಟದಲ್ಲಿ ದಲಿತ ಸಮುದಾಯದ ಬಿ ರಾಚಯ್ಯ (ಗೃಹಮಂತ್ರಿ) ಮತ್ತು ಅಲ್ಪಸಂಖ್ಯಾತ ಸಮುದಾಯದ ನಜೀರ್ ಸಾಬ್ (ಪಂಚಾಯತ್ ರಾಜ್) ಮೊದಲಾದವರಿಗೆ ಪ್ರಾಶಸ್ತ್ಯ ಕೊಟ್ಟರೋ ಅದನ್ನು ಸಹಿಸಿಕೊಳ್ಳಲಾಗಲಿಲ್ಲ.

ಇದನ್ನೂ ಓದಿ: ಮನೆಗೆ ನುಗ್ಗಿ 9 ತಿಂಗಳ ಗರ್ಭಿಣಿ ಮಹಿಳೆಯ ಹತ್ಯೆ ಮಾಡಿದ ದುಷ್ಕರ್ಮಿಗಳು

ಆಗಿನಿಂದ ದೇವೇಗೌಡರು ಹೆಗಡೆ ವಿರುದ್ಧ ಕತ್ತಿಮಸೆಯುತ್ತಲೇ ಬಂದರು. ನೀರಾವರಿಗೆ ಕಡಿಮೆ ಅನುದಾನ ಕೊಟ್ಟಿದ್ದಾರೆ ಎಂಬ ನೆಪ ಮಾಡಿಕೊಂಡು ತಮ್ಮ ಮಂತ್ರಿಗಿರಿಗೆ ದೇವೇಗೌಡ ರಾಜೀನಾಮೆ ಕೊಟ್ಟದ್ದು ಕೂಡಾ ನೀರಾವರಿ ರೈತರ ಮೇಲಿನ ಕಾಳಜಿಯಿಂದಲ್ಲ, ಹೆಗಡೆ ಮೇಲೆ ರಾಜಕೀಯ ಒತ್ತಡ ಹೇರಲಿಕ್ಕಾಗಿ! ಅದರ ಹಿಂದೊಂದು ದೇವೇಗೌಡರ ಕರಾಳ ತಂತ್ರಗಾರಿಕೆಯಿತ್ತು. ಆ ಕಾಲದ ರಾಜಕಾರಣ ಗೊತ್ತಿಲ್ಲದವರಿಗಾಗಿ ಸಂಕ್ಷಿಪ್ತವಾಗಿ ಹೇಳಿಬಿಡ್ತೀನಿ. ದೇವೇಗೌಡರು ಹೀಗೆ ರಾಜೀನಾಮೆ ಕೊಟ್ಟದ್ದು 1988ರ ಮಾರ್ಚ್ 28ರಂದು. ಆದರೆ ಬಜೆಟ್ ಮಂಡನೆಯಾದದ್ದು ಮಾರ್ಚ್ 21ರಂದು. ಅನುದಾನವೆ ಗೌಡರ ರಾಜೀನಾಮೆಗೆ ಕಾರಣವಾಗಿದ್ದರೆ ಅವರು ಬಜೆಟ್ ಮಂಡನೆಯಾದ ಒಂದು ವಾರದ ನಂತರ ರಾಜೀನಾಮೆ ನೀಡುತ್ತಿರಲಿಲ್ಲ. ಯಾಕೆಂದರೆ, ಸಂಪುಟದಲ್ಲೇ ಇರುವ ಒಬ್ಬ ಮಂತ್ರಿಗೆ, ತಮ್ಮ ಸರ್ಕಾರದ ಬಜೆಟ್‌ನಲ್ಲಿ ತನ್ನ ನೀರಾವರಿ ಖಾತೆಗೆ ಕಡಿಮೆ ಅನುದಾನ ಸಿಕ್ಕಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಒಂದು ವಾರ ಬೇಕೆ?

ಹಾಗಾದರೆ ದೇವೇಗೌಡರು ತಮ್ಮ ಮಂತ್ರಿಗಿರಿಗೆ ರಾಜೀನಾಮೆ ನೀಡಿದ್ದು ಯಾಕೆ? ಈ ರಾಜೀನಾಮೆ ಹೈಡ್ರಾಮಾ ನಡೆಯುವುದಕ್ಕು ಮುನ್ನ, ಬಿಜೆಪಿಯ ವಿಧಾನ ಪರಿಷತ್ ಸದಸ್ಯರಾಗಿದ್ದ ಬಿ ಬಿ ಶಿವಪ್ಪನವರು ಹೆಗಡೆ ಸಂಪುಟದ ಮೂವರು ಸಚಿವರ ವಿರುದ್ಧ ಭ್ರಷ್ಟಾಚಾರದ ಒಂದು ಚಾರ್ಜ್‌ಶೀಟ್ ಸಲ್ಲಿಸಿದ್ದರು. ಮೂವರು ಸಚಿವರಲ್ಲಿ ದೇವೇಗೌಡರೂ ಒಬ್ಬರು. ಅವರ ಮೇಲೂ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಹೆಗಡೆ ಸರ್ಕಾರ ಆರೋಪದ ತನಿಖೆಯನ್ನು ಸಿಒಡಿ ಲೋಕಾಯುಕ್ತ ವಹಿಸಿತ್ತು. ತನ್ನನ್ನ ರಾಜಕೀಯವಾಗಿ ಮುಗಿಸುವ ಸಲುವಾಗಿ ಹೆಗಡೆಯವರ ಆಪ್ತ ವಿದ್ಯಾಮಂತ್ರಿ ಜೀವರಾಜ್ ಆಳ್ವಾ ಹೀಗೆ ಸಿಒಡಿ ತನಿಖೆಯಾಗುವಂತೆ ಮಾಡಿದ್ದಾರೆ ಎಂಬುದು ದೇವೇಗೌಡರ ಬಲವಾದ ಗುಮಾನಿಯಾಗಿತ್ತು. ಹೇಗಾದರು ಮಾಡಿ ಹೆಗಡೆ ಮೇಲೆ ಒತ್ತಡ ತಂದು, ಈ ತನಿಖೆಯನ್ನು ವಾಪಾಸ್ ಪಡೆಯುವಂತೆ ಮಾಡುವುದು ದೇವೇಗೌಡರ ಹವಣಿಕೆ. ಅದಕ್ಕಾಗಿ ಅವರು ನೀರಾವರಿ ಅನುದಾನವನ್ನು ನೆಪ ಮಾಡಿಕೊಂಡು ರಾಜೀನಾಮೆಯ ಹೈಡ್ರಾಮ ಸೃಷ್ಟಿಸಿದ್ದರು.

ಅದಕ್ಕೆ ಮಾರ್ಚ್ 28ನೇ ತಾರೀಕನ್ನೆ ಯಾಕೆ ಆಯ್ಕೆ ಮಾಡಿಕೊಂಡರು? ದೇವೇಗೌಡರ ಚಾಲಾಕಿ ದುಷ್ಟತನ ಅಡಗಿರುವುದೇ ಅಲ್ಲಿ. ಅವತ್ತು ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಸದಸ್ಯರನ್ನು ಆಯ್ಕೆ ಮಾಡುವ ಚುನಾವಣೆ ನಡೆಯುತ್ತಿತ್ತು. ಜನತಾ ಪಕ್ಷದಿಂದ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು. ಅವರಲ್ಲಿ ರಾಮ್‌ಜೇಠ್ ಮಲಾನಿ ಕೂಡಾ ಒಬ್ಬರು. ಪಕ್ಷದೊಂದಿಗೆ ಗುರುತಿಸಿಕೊಳ್ಳದ ಮಲಾನಿಯವರನ್ನು ಅಭ್ಯರ್ಥಿಯಾಗಿಸಿದ್ದರ ಬಗ್ಗೆ ಹಲವು ಶಾಸಕರಲ್ಲಿ ಸಣ್ಣ ಅಸಮಾಧಾನವಿತ್ತು. ಅದನ್ನೇ ದೇವೇಗೌಡರು ತಮ್ಮ ಬಂಡಾಯಕ್ಕೆ ಬುನಾದಿಯಾಗಿ ಮಾಡಿಕೊಂಡರು. ಹಾಗೆ ನೋಡಿದರೆ, ಪಕ್ಷದಿಂದ ಯಾರ‍್ಯಾರನ್ನು ಕಣಕ್ಕಿಳಿಸಬೇಕು ಎಂದು ನಿರ್ಧರಿಸಲು ಕರೆದಿದ್ದ ಚುನಾವಣಾ ಸಮಿತಿಯ ಸಭೆಯಲ್ಲಿ ದೇವೇಗೌಡರು ಭಾಗಿಯಾಗಿದ್ದರು. ಮೀಸಲಾತಿ

ಆಯ್ಕೆಯಾದ ಮೂವರ ಅಭ್ಯರ್ಥಿಗಳಿಗೆ ತಮ್ಮ ಬೆಂಬಲವಿರುವುದಾಗಿಯೂ ಘೋಷಿಸಿದ್ದರು. ಆದರೆ ಯಾವಾಗ, ಮಲಾನಿ ವಿರುದ್ಧ ಶಾಸಕರ ಅಸಮಾಧಾನ ಜೋರಾಯ್ತೋ ಆಗ, ಹೆಗಡೆ ಮೇಲೆ ತನ್ನ ಒತ್ತಡ ಹೇರಿ, ತನಿಖೆಯನ್ನು ವಾಪಾಸು ಪಡೆಯುವಂತೆ ಮಾಡಲು ತಂತ್ರ ರೂಪಿಸಿದರು. ಚುನಾವಣೆಯ ದಿನ, ಅಂದರೆ ಮಾರ್ಚ್ 28ರಂದು ಬೆಳಿಗ್ಗೆ ತೋಟಗಾರಿಕೆ ಮಂತ್ರಿ ವೈ ಕೆ ರಾಮಯ್ಯನವರ ಮನೆಯಲ್ಲಿ ಸುಮಾರು 40 ಬಂಡಾಯ ಶಾಸಕರನ್ನು ಕಲೆಹಾಕಿಕೊಂಡ ದೇವೇಗೌಡರು, ಮತಹಾಕಲು ವಿಧಾನಸೌಧದತ್ತ ಹೋಗಲೇ ಇಲ್ಲ. ಬೆಳಿಗ್ಗೆ 9 ಗಂಟೆಯ ಸುಮಾರಿಗೆ ತಮ್ಮ ಆಪ್ತ ಸಹಾಯಕ ನಾಗರಾಜ್ ಎಂಬಾತನಿಗೆ ರಾಮಯ್ಯನ ಮನೆಯಿಂದಲೇ ಫೋನ್ ಮಾಡಿದ ದೇವೇಗೌಡರು, ಮೊದಲೇ ತಯಾರಿಸಿದ್ದ ರಾಜೀನಾಮೆ ಪತ್ರವನ್ನು ಹೆಗಡೆಯವರಿಗೆ ತಲುಪಿಸುವಂತೆ ತಿಳಿಸಿದ್ದರು.

ಒಂದುಕಡೆ ಮತದಾನಕ್ಕೆ ತಮ್ಮದೇ ಪಕ್ಷದ ಶಾಸಕರು ಗೈರಾಗಿದ್ದಾರೆ. ಮತ್ತೊಂದೆಡೆ, ನೀರಾವರಿ ಸಚಿವ ದೇವೇಗೌಡ ತಮ್ಮ ಮಂತ್ರಿಗಿರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ಅಧಿಕೃತ ಅಭ್ಯರ್ಥಿಗಳು ಗೆಲ್ಲದೆ ಹೋದರೆ ಮುಖ್ಯಮಂತ್ರಿಯಾಗಿ ಮುಖಭಂಗ ಅನುಭವಿಸಬೇಕಾಗುತ್ತದೆ. ಇಂತಹ ಒತ್ತಡವನ್ನು ಸೃಷ್ಟಿಸಲಿಕ್ಕಾಗಿಯೇ ದೇವೇಗೌಡರು ತಮ್ಮ ರಾಜೀನಾಮೆ ಚುನಾವಣೆ ನಡೆಯುವ ಆ ದಿನವನ್ನು ಗೊತ್ತು ಮಾಡಿಕೊಂಡಿದ್ದರು. ಎದುರಾಳಿಯನ್ನು ಅಸಹಾಯಕತೆಗೆ ಸಿಲುಕಿಸಿ ತನ್ನ ಕಾರ್ಯ ಸಾಧಿಸಿಕೊಳ್ಳುವ ಇಂತಹ ಯತ್ನವನ್ನು ರಾಜಕೀಯ ಚಾಣಾಕ್ಷತೆ ಎನ್ನುವಿರೋ, ದುಷ್ಟತನ ಎನ್ನುವಿರೋ ನಿಮಗೆ ಬಿಟ್ಟದ್ದು. ಮುಂಬೈನಿಂದ ಪಕ್ಷದ ವರಿಷ್ಠ ಮಧು ದಂಡಾವತೆ ಬಂದು ಮನವೊಲಿಸಿದರೂ ದೇವೇಗೌಡ ನೇತೃತ್ವದ ಬಂಡಾಯಗಾರರು ಜಗ್ಗಲಿಲ್ಲ.

ಆದರೆ ಹೆಗಡೆ ಕೂಡಾ ಇದಕ್ಕೆಲ್ಲ ಸೊಪ್ಪು ಹಾಕಲಿಲ್ಲ. ಸರ್ಕಾರವನ್ನೇ ವಿಸರ್ಜಿಸಿ ಮಧ್ಯಂತರ ಚುನಾವಣೆಗೆ ಹೋಗಲು ತಯಾರು ಎಂಬ ಸಂದೇಶ ರವಾನಿಸಿದರು. ಕೊನೆಗೆ ಸ್ವತಃ ದೇವೇಗೌಡರೆ ಹೆಗಡೆ ಮನೆಗೆ ದೌಡಾಯಿಸಿ, ಬಂಡಾಯಗಾರರಿಗೂ ತನಗೂ ಸಂಬಂಧವಿಲ್ಲ; ಅವರ ಬಂಡಾಯವನ್ನು ಶಮನ ಮಾಡಲು ತಾನು ಇಷ್ಟು ಹೊತ್ತು ಅಲ್ಲಿ ಯತ್ನಿಸುತ್ತಿದ್ದೆ; ಆದರೆ, ನನ್ನ ಮಾತನ್ನು ಅವರ‍್ಯಾರೂ ಕೇಳುತ್ತಿಲ್ಲ, ನೀವೇ ಒಮ್ಮೆ ಬಂದು ಅವರ ಬಳಿ ಮಾತಾಡಿ, ಅವರ ಬೇಡಿಕೆಗಳಿಗೆ ಒಪ್ಪಿಕೊಂಡುಬಿಡಿ ಎಂದು ಪುಸಲಾಯಿಸಲು ನೋಡಿದರು.

ಹಾಗೆ ಬಂದರೆ, ಬಂಡಾಯದ ಬಣಕ್ಕೆ ಅಧಿಕೃತತೆ ಸಿಕ್ಕಂತಾಗುತ್ತೆ, ನಾನು ಬರಲ್ಲ; ಬೇಕಾದರೆ ಸರ್ಕಾರವನ್ನು ವಿಸರ್ಜಿಸುವೆ ಎಂದು ಹೆಗಡೆಯವರು ಖಡಕ್ ಉತ್ತರ ಕೊಟ್ಟಾಗ, ವಾಪಾಸ್ ಹೋದ ದೇವೇಗೌಡರು ಬಂಡಾಯದ ಶಾಸಕರನ್ನು ಕರೆತಂದು ಮತಹಾಕಿಸಿದರು. ಪಕ್ಷದ ಮೂವರೂ ಅಧಿಕೃತ ಅಭ್ಯರ್ಥಿಗಳು ಗೆದ್ದರು. ಮುಂದೆ ಈ ವಿಚಾರ ಹೈಕಮಾಂಡ್ ತಲುಪಿದಾಗ, ರಾಜಿ ಸೂತ್ರವಾಗಿ ಮೂರು ಅಂಶಗಳನ್ನು ಪ್ರಸ್ತಾಪಿಸಲಾಯಿತು. ದೇವೇಗೌಡರು ಚುನಾವಣೆಯ ದಿನ ಅಷ್ಟೆಲ್ಲ ಡ್ರಾಮಾ ಯಾಕೆ ಮಾಡಿಸಿದ್ದರು ಅನ್ನೋದನ್ನು ಆ ಮೂರು ಅಂಶಗಳು ಸ್ಪಷ್ಟಪಡಿಸಿದ್ದವು. ಮೊದಲನೆಯದು, ದೇವೇಗೌಡರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳಬೇಕು; ಎರಡನೆಯದು, ಅವರ ವಿರುದ್ಧ ನಡೆಯುತ್ತಿದ್ದ ಸಿಒಡಿ ತನಿಖೆಯನ್ನು ಕೈಬಿಡಬೇಕು; ಮೂರನೆಯದು, ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು.

ಇದು, ದೇವೇಗೌಡರ ರಾಜೀನಾಮೆ ಪ್ರಸಂಗದ ಅಸಲಿ ಕಥೆ. (https://www.indiatoday.in/magazine/indiascope/story/19880430-karnataka-chief-minister-ramakrishna-hegde-barely-survives-a-powerful-rebel-attack-797186-1988-04-29) ಯಾರಾದರು, ದೇವೇಗೌಡರು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಅಂತ ಸಮರ್ಥಿಸಿಕೊಳ್ಳಲು ಮುಂದೆ ಬಂದರೆ ಆ ಒಳ್ಳೆಯ ಕೆಲಸಗಳ ಹಿಂದೆ ಇಂತಹ ಸ್ವಾರ್ಥದ ಲೆಕ್ಕಾಚಾರಗಳು ಅಡಗಿರುತ್ತವೆ ಇಲ್ಲವೇ, ಅದರ ಪಾಡಿಗೆ ಅದು ಜರುಗಿಹೋದ ಅಡ್ಮಿನಿಸ್ಟ್ರೇಟಿವ್ ವಿದ್ಯಮಾನವಾಗಿರುತ್ತದೆ. ಎರಡನೆಯದಕ್ಕೆ ಉದಾಹರಣೆಯಾಗಿ, ನಾವು ಮುಸ್ಲಿಂ ಮೀಸಲಾತಿ ವಿಚಾರವನ್ನು ಪರಿಗಣಿಸಬಹುದು. ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದೇ ನಾವು ಎಂದು ದೇವೇಗೌಡರು, ಅವರ ಸಮರ್ಥಕರು ಹೇಳಿಕೊಳ್ಳುತ್ತಾರೆ. ವಾಸ್ತವದಲ್ಲಿ ಅದಕ್ಕೆ ಅಡಿಪಾಯ ಹಾಕಿದ್ದು ಕಾಂಗ್ರೆಸ್ ಸರ್ಕಾರದ ವೀರಪ್ಪ ಮೊಯ್ಲಿಯವರು.

ಕಾಂಗ್ರೆಸ್ ಸರ್ಕಾರ ಮೀಸಲಾತಿ ನೀಡುವಾಗ, 50% ಕ್ಯಾಪ್ ಮೀರಬಾರದು ಎನ್ನುವ ಸುಪ್ರೀಂ ನಿರ್ದೇಶನವನ್ನು ಕಡೆಗಣಿಸಿತ್ತು. ಹಾಗಾಗಿ ಅದು, ನ್ಯಾಯಾಲಯದಲ್ಲಿ ಪಶ್ನಿಸಲ್ಪಟ್ಟು, ನ್ಯಾಯಾಲಯದ ನಿರ್ದೇಶನದಂತೆ ಹೊಸದಾಗಿ ಮೀಸಲಾತಿಯ ಸ್ಟ್ರಕ್ಚರ್ ಮಾಡಬೇಕಾಯ್ತು. ಇದೆಲ್ಲ ನಡೆಯುವ ವೇಳೆಗೆ 1994ರಲ್ಲಿ ವಿಧಾನಸಭಾ ಚುನಾವಣೆ ನಡೆದು, ಕಾಂಗ್ರೆಸ್ ಸರ್ಕಾರ ಪತನಗೊಂಡು ಜನತಾ ದಳ ಅಧಿಕಾರಕ್ಕೇರಿತು. ದೇವೇಗೌಡರು ಸಿಎಂ ಆದರು. ಆ ಅವಧಿಯಲ್ಲಿ as a due process ಮೀಸಲಾತಿ ಪ್ರಕ್ರಿಯೆಗಳು ನ್ಯಾಯಾಲಯದ ನಿರ್ದೇಶನಕ್ಕೆ ಒಳಪಟ್ಟು ಅಂತಿಮಗೊಂಡು ಜಾರಿಯಾಯಿತಷ್ಟೆ. ಅದನ್ನೆ ದೇವೇಗೌಡರು ತಮ್ಮ ಸಾಧನೆಯೆಂದು ಕ್ಲೇಮ್ ಮಾಡಿಕೊಳ್ಳುತ್ತಾರೆ.

ಇದನ್ನು ನೀವು ರಾಜಕಾರಣದ ಚದುರಂಗದಾಟ ಎಂದು ಕರೆದು ತೇಲಿಸಲು ನೋಡಬಹುದು. ಆದರೆ ಹೆಗಡೆ ಮೇಲಿನ ಗೌಡರ ವೈಷಮ್ಯ ಕೇವಲ ಅಧಿಕಾರಕ್ಕಾಗಿ ಸೀಮಿತವಾದದ್ದಲ್ಲ. ಅಧಿಕಾರದಿಂದ ಕೆಳಗಿಳಿದ ಮೇಲೂ ಕೊಡಬಾರದ ಕಾಟ ಕೊಡುತ್ತಲೇ ಬಂದರು. 1994ರಲ್ಲಿ ವಿಧಾನಸೌಧದ ಮೆಟ್ಟಿಲಿನ ಮೇಲೆ ಹೆಗಡೆಗೆ ಚಪ್ಪಲಿಯಿಂದ ಹೊಡೆಸಿದ್ದಾಗಲಿ, 1999ರಲ್ಲಿ ಹೆಗಡೆ ಕೇಂದ್ರ ವಾಣಿಜ್ಯ ಮಂತ್ರಿಯಾಗಿದ್ದಾಗ ರೇಷ್ಮೆ ದರ ನೆಪದಲ್ಲಿ ಬೆಂಗಳೂರಿನ ಅವರ ಮನೆಯ ಮೇಲೆ ವೈ ಕೆ ರಾಮಯ್ಯ, ಆತ್ಮಾನಂದ ಮೊದಲಾದವರ ನೇತೃತ್ವದಲ್ಲಿ ಕಲ್ಲು ತೂರಾಡಿ ದಾಂಧಲೆ ನಡೆಸಿದ್ದಾಗಲಿ( https://m.rediff.com/news/1999/jan/11heg.htm ), ಹೆಗಡೆಯವರು ರಾಜ್ಯ ರಾಜಕಾರಣಕ್ಕೆ ಮರಳುವ ಸೂಚನೆ ನೀಡಿದಾಗ ಅವರ ವಿರುದ್ಧ ಬೆಂಗಳೂರಿನಲ್ಲಿ ಬೃಹತ್ ರ‍್ಯಾಲಿ ನಡೆಸಿ ಬೆದರಿಕೆ ಹಾಕಿದ್ದಾಗಲಿ, ಅದಕ್ಕು ಮುನ್ನ ಒಬ್ಬ ಹಿರಿಯ ನಾಯಕನಾದ ಹೆಗಡೆಯವರನ್ನು ಹೀನಾಯವಾಗಿ ಪಕ್ಷದಿಂದ ಉಚ್ಛಾಟಿಸಿದ್ದಾಗಲಿ ಇವೆಲ್ಲವೂ ದೇವೇಗೌಡರು ಎಂಥಾ ಜಿದ್ದಿನ, ಪ್ರತೀಕಾರದ ದುಷ್ಟ ರಾಜಕಾರಣಿ ಅನ್ನೋದನ್ನು ಮನದಟ್ಟು ಮಾಡುತ್ತವೆ.

ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿ, ಕೆರಳಿಸುವ ದೇವೇಗೌಡರ ಯತ್ನಗಳು ಕೇವಲ ಹೆಗಡೆಯವರಿಗೆ ಸೀಮಿತವಲ್ಲ. ಈಗಾಗಲೇ ಉಲ್ಲೇಖಿಸಿದಂತೆ 1999ರ ಫೆಬ್ರವರಿಯಲ್ಲಿ ಹೆಗಡೆಯವರ ವಿರುದ್ಧ ದೇವೇಗೌಡರು ಆಯೋಜಿಸಿದ್ದ ರ‍್ಯಾಲಿಯಲ್ಲಿ ಅವರದೇ ಸರ್ಕಾರದ ಸಾರಿಗೆ ಮಂತ್ರಿಯಾಗಿದ್ದ ಪಿಜಿಆರ್ ಸಿಂಧ್ಯಾ ಅವರು ರ‍್ಯಾಲಿಯ ಸಮಾವೇಶಕ್ಕೆ ಬಂದಾಗ ಅವರಿಗೆ ಜನ ಕಲ್ಲು, ಚಪ್ಪಲಿಗಳಲ್ಲಿ ಒಡೆದು ಹಲ್ಲೆ ಮಾಡುವಂತೆ ಯೋಜಿಸಲಾಗಿತ್ತು. ಸಿಂಧ್ಯಾ, ಗೌಡರಿಗೆ ವಿರುದ್ಧವಾಗಿ ಹೆಗಡೆಯವರ ಪರ ಸಿಂಪಥಿ ಹೊಂದಿದ್ದಾರೆ ಎಂಬುದೇ ಆ ಹಲ್ಲೆಗೆ ಕಾರಣ. ಕೇವಲ ಸಿಂಧ್ಯಾ ಮಾತ್ರವಲ್ಲ, ನಿಕಟಪೂರ್ವ ಜನತಾದಳ ಅಧ್ಯಕ್ಷರಾಗಿದ್ದ, ಕಾರ್ಮಿಕ ಸಚಿವರೂ ಆಗಿದ್ದ ಬಿ ಎಲ್ ಶಂಕರ್ ಮೇಲೂ ಅವತ್ತು ಇಂತಹ ಹಲ್ಲೆ ನಡೆದಿತ್ತು. ಅವರಿಬ್ಬರು ವೇದಿಕೆ ಏರದಂತೆ ನೋಡಿಕೊಳ್ಳಲಾಯ್ತು. ಇದೆಲ್ಲದರ ಹಿಂದೆ ದೇವೇಗೌಡರ ಪ್ರಭಾವ ಕೆಲಸ ಮಾಡಿತ್ತೆನ್ನುವುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. (https://m.rediff.com/news/1999/feb/19deve.htm)

ಮುಂದೆ 2004ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ದೇವೇಗೌಡರು ಮುಂದಿಟ್ಟ ಹಲವು ಷರತ್ತುಗಳ ಪೈಕಿ ಎರಡು ಕಂಡೀಷನ್‌ಗಳು ಅವರ ದುಷ್ಟತನಕ್ಕೆ ಸಾಕ್ಷಿ ಎನ್ನಬಹುದು. ಮೊದಲನೆಯದು, ಒಕ್ಕಲಿಗರ ನಾಯಕರಾಗಿ ಎಮರ್ಜ್ ಆಗುತ್ತಿದ್ದ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರನ್ನು ರಾಜ್ಯ ರಾಜಕಾರಣದಿಂದ ದೂರ ಇರಿಸಬೇಕು. ಎರಡನೆಯದು, ಸಿಎಂ ಸ್ಥಾನವನ್ನು ಕಾಂಗ್ರೆಸ್ಸೇ ಉಳಿಸಿಕೊಳ್ಳಬೇಕು! ಮೊದಲನೆಯದರಲ್ಲಿ ರಾಜಕೀಯ ತಂತ್ರಗಾರಿಕೆ ಸುಲಭವಾಗಿ ಅರ್ಥವಾಗುತ್ತೆ. ತನಗೆ, ತನ್ನ ಮಕ್ಕಳಿಗೆ ಪರ್ಯಾಯವಾಗಿ ಮತ್ತೋರ್ವ ಒಕ್ಕಲಿಗ ನಾಯಕ ಬೆಳೆಯುವುದು ಅವರಿಗೆ ಇಷ್ಟವಿರಲಿಲ್ಲ. ಕೃಷ್ಣ ಅವರ ಮೇಲಿನ ಭಯಕ್ಕಿಂತ, ಕೃಷ್ಣ ಅವರ ನೆರಳಿನಲ್ಲೇ ಬೆಳೆಯುತ್ತಿದ್ದ ಡಿ ಕೆ ಶಿವಕುಮಾರ್ ತಂದೊಡ್ಡುವ ಸ್ಪರ್ಧೆ ಗೌಡರನ್ನು ಕಂಗೆಡಿಸುವಂತೆ ಮಾಡಿತ್ತು. ಇನ್ನು ಎರಡನೇ ಷರತ್ತಿದೆಯಲ್ಲಾ, ಅದೇ ಅಚ್ಚರಿ ಹುಟ್ಟಿಸುವಂತದ್ದು. ಸ್ವತಃ ಸೋನಿಯಾ ಗಾಂಧಿಯವರೇ ಸಿಎಂ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಸಿದ್ದರಿದ್ದರೂ ಗೌಡರು ಅದಕ್ಕೆ ಒಪ್ಪಲಿಲ್ಲವೇಕೆ? ಹಾಗೇನಾದರು ಸಿಎಂ ಸ್ಥಾನವನ್ನು ಜೆಡಿಎಸ್ ಉಳಿಸಿಕೊಂಡಿದ್ದರೆ, ಪಕ್ಷದಲ್ಲಿ ಸಿಎಂ ಆಗುವ ಸರದಿಯಲ್ಲಿ ಹಲವು ನಾಯಕರಿದ್ದರು. ಸಿದ್ದರಾಮಯ್ಯ ಮುಂಚೂಣಿಯಲ್ಲಿದ್ದರು ಅನ್ನಬಹುದು.

ಮುಂದೆ ತನ್ನ ಮಕ್ಕಳ ಭವಿಷ್ಯಕ್ಕೆ ಇದು ಅಡ್ಡಿಯಾಗಬಹುದೆಂದು ಗೌಡರು ಪಕ್ಷಕ್ಕೆ ಸಿಗಬೇಕಿದ್ದ ಸಿಎಂ ಸ್ಥಾನವನ್ನೇ ತ್ಯಾಗ ಮಾಡಿದರು. ಹಾಗೆ ತ್ಯಾಗ ಮಾಡುವಾಗಲೂ, ಅವರು ಕಾಂಗ್ರೆಸ್ ಮುಂದೆ ಇಟ್ಟ ಷರತ್ತು, ತಾವು ಹೇಳಿದ ಕಾಂಗ್ರೆಸ್ ನಾಯಕನನ್ನು ಸಿಎಂ ಮಾಡಬೇಕೆಂಬುದಾಗಿತ್ತು. ಅವರು ಸೂಚಿಸಿದ್ದು ಯಾರನ್ನು? ತನ್ನ ಹಿಂದೆ ದೊಡ್ಡ ಜಾತಿ ಬೆಂಬಲವೂ ಇಲ್ಲದ, ವೈಯಕ್ತಿಕವಾಗಿ ಗಟ್ಟಿಗರೂ ಅಲ್ಲದ ಧರಮ್‌ಸಿಂಗ್ ಅವರನ್ನು! ಆ ಮೂಲಕ, ಒಂದುಕಡೆ ಸಿದ್ದರಾಮಯ್ಯ ಸಿಎಂ ಆಗುವುದನ್ನೂ, ಮತ್ತೊಂದೆಡೆ ಖರ್ಗೆಯವರು ಮುಖ್ಯಮಂತ್ರಿಯಾಗುವುದನ್ನೂ ದೇವೇಗೌಡರು ತಪ್ಪಿಸಿದರು. ಮುಂದೆ ಅವರ ಮಗ ಕುಮಾರಸ್ವಾಮಿ, ಬಿಜೆಪಿ ಜೊತೆ ಸೇರಿ ಧರಮ್‌ಸಿಂಗ್ ಅವರ ಸರ್ಕಾರ ಬೀಳಿಸಿದಾಗ, ಯಾವುದೇ ಸಮುದಾಯದ ಜಾತಿವಿರೋಧ ಭುಗಿಲೇಳಲಿಲ್ಲ. ಧರಮ್‌ಸಿಂಗ್ ಜಾಗದಲ್ಲಿ ಖರ್ಗೆಯವರಿದ್ದು, ಅವರಿಗೆ ಇಂತಹ ಅನ್ಯಾಯವಾಗಿದ್ದರೆ ದಲಿತ ವಿರೋಧಿ ಪಟ್ಟ ಕಟ್ಟಿಕೊಳ್ಳಬೇಕು ಎಂಬ ಲೆಕ್ಕಾಚಾರದಿಂದಲೇ ಅವರು ಆ ಆಯ್ಕೆ ಮಾಡಿಕೊಂಡಿದ್ದರು. ಮುಂದೆ ಅದೇ ಪ್ರಕಾರ ನಡೆಯಿತು.

ಕಾಂಗ್ರೆಸ್, ಜೆಡಿಎಸ್‌ಗಿಂತ ಹೆಚ್ಚು ಸ್ಥಾನದಲ್ಲಿ ಗೆದ್ದಿತ್ತು, ಹಾಗಾಗಿ ಆ ಪಕ್ಷಕ್ಕೆ ಸಿಎಂ ಸ್ಥಾನ ಬಿಟ್ಟುಕೊಡಲಾಯ್ತು ಎಂದು ಗೌಡರೋ, ಅವರ ಕುಟುಂಬವೋ, ಅಥವಾ ಸಮರ್ಥಕರೋ ಸಬೂಬು ನೀಡಬಹುದು. ಆದರೆ ಅದು ತೀರಾ ಎಳಸು ಸಬೂಬು. ಯಾಕೆಂದರೆ, ಆ ಚುನಾವಣೆಯಲ್ಲಿ ಕಾಂಗ್ರೆಸ್ 65 ಸ್ಥಾನ ಗಳಿಸಿದ್ದರೆ, ಜೆಡಿಎಸ್ 58 ಸ್ಥಾನ ಗಳಿಸಿತ್ತು. ಕೇವಲ ಏಳು ಸ್ಥಾನಗಳ ಕೊರತೆಯಷ್ಟೆ. ಗೌಡರು ಪಟ್ಟು ಹಿಡಿದಿದ್ದರೆ ನಿರಾಕರಿಸಲು ಕಾಂಗ್ರೆಸ್‌ಗೆ ಆಯ್ಕೆಗಳಿರಲಿಲ್ಲ. ಒಂದೊಮ್ಮೆ ಅದೇ ನಿಜವಾಗಿದ್ದರೆ 2018ರ ಚುನಾವಣೆಯಲ್ಲಿ ಕಾಂಗ್ರೆಸ್ 80 ಸ್ಥಾನ ಗಳಿಸಿದಾಗ, ಕೇವಲ 37 ಸೀಟು ಪಡೆದಿದ್ದ ಕುಮಾರಸ್ವಾಮಿಯವರು ಸಿಎಂ ಆಗಲು ಒಪ್ಪಿದ್ದು ಯಾಕೆ? 2004ರ ಥಿಯರಿಯನ್ನೆ ಅನ್ವಯಿಸಿ, ಕಾಂಗ್ರೆಸ್‌ಗೆ ಸಿಎಂ ಹುದ್ದೆ ಬಿಟ್ಟುಕೊಡಬೇಕಿತ್ತಲ್ಲವೇ?

ಗೌಡರದು ಎಂಥಾ ದುಷ್ಟ ಮತ್ತು ದುರಾಲೋಚನೆಯ ರಾಜಕಾರಣ ಅನ್ನೋದನ್ನು ಸಾಬೀತು ಮಾಡಲು ಇಂತಹ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ಕುಮಾರಸ್ವಾಮಿ ಬಿಜೆಪಿ ಜೊತೆ ಕೈಜೋಡಿಸಿದಾಗ ಕಣ್ಣೀರುಗರೆದದ್ದಾಗಲಿ, ಯಡಿಯೂರಪ್ಪನಿಗೆ ಅಧಿಕಾರ ಹಸ್ತಾಂತರ ಮಾಡದೆ ಮಾತು ತಪ್ಪಿದ್ದಾಗಲಿ, ತಮ್ಮದೇ ಒಕ್ಕಲಿಗ ಸಮುದಾಯದ ನಾಯಕರನ್ನು ನಿರಂತರವಾಗಿ ತುಳಿಯುತ್ತಾ ಬಂದಿದ್ದಾಗಲಿ ಎಲ್ಲವೂ ಗೌಡರ ದುಷ್ಟ ರಾಜಕಾರಣದ ಚಹರೆಗಳು.

ಅಂತಹ ದುಷ್ಟ, ಸೋಗಿನ ರಾಜಕಾರಣಿ ಈಗ ಮೀಸಲಾತಿಯ ವಿರುದ್ಧ ಮಾತನಾಡಿರುವ ಬಗ್ಗೆ ನಾವು ಹೆಚ್ಚೇನು ಆಘಾತಗೊಳ್ಳಬೇಕಿಲ್ಲ. ಯಾಕೆಂದರೆ, ದೇವೇಗೌಡ ಎಂಬ ರಾಜಕಾರಣಿ ಪೂರ್ಣ ಪ್ರಮಾಣದಲ್ಲಿ ರೂಪುಗೊಂಡದ್ದೇ ಮೀಸಲಾತಿ ವಿರೋಧಿ ಹೋರಾಟದಲ್ಲಿ. 1984ರಲ್ಲಿ ಒಕ್ಕಲಿಗರನ್ನು ಒಬಿಸಿ ಪಟ್ಟಿಯಿಂದ ಕೈಬಿಟ್ಟ ಟಿ ವೆಂಕಟಸ್ವಾಮಿ ವರದಿ ವಿರುದ್ಧ ದೇವೇಗೌಡರು ಸಂಘಟಿಸಿದ ಹೋರಾಟವೇ ಅವರನ್ನು ಪೂರ್ಣ ಪ್ರಮಾಣದ ಒಕ್ಕಲಿಗ ನಾಯಕನಾಗಿ ಎಮರ್ಜ್ ಆಗಲು ಕಾರಣ. ಅವತ್ತು ಬರೋಬ್ಬರಿ 43 ದಿನಗಳ ಕಾಲ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಬಂದ್ ಮಾಡಲಾಗಿತ್ತು. ಈ ಒತ್ತಡಕ್ಕೆ ಮಣಿದ ಸರ್ಕಾರ ವರದಿಯನ್ನು ಹಿಂಪಡೆಯಿತು. ಇದರಿಂದಾಗಿ ಅರ್ಹ ಧ್ವನಿಹೀನ ಜಾತಿಗಳು ತಮ್ಮ ಪಾಲನ್ನು ಕಳೆದುಕೊಳ್ಳಬೇಕಾಯ್ತು. ಪರಿಣಾಮವಾಗಿ ರಾಜ್ಯ ರಾಜಕಾರಣದಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಪ್ರಭಾವ ಮತ್ತು ಅವಕಾಶಗಳ ದಕ್ಕಿಸಿಕೊಳ್ಳುವಿಕೆ ಹೆಚ್ಚಾಗುತ್ತಲೇ ಬಂತು.

ದೇವೇಗೌಡರು ರಾಜಕೀಯವಾಗಿ ಉದಯಿಸುವ ಕಾಲಘಟ್ಟದಲ್ಲಿ ಸ್ವಾತಂತ್ರ್ಯ ಚಳವಳಿಯ ಮತ್ತು ಸಂವಿಧಾನ ಜಾಗೃತಿಯ ಪರಿಣಾಮವಾಗಿ ಪ್ರಗತಿಪರ ಮತ್ತು ಜಾತ್ಯತೀಯ ರಾಜಕಾರಣ ಹೆಚ್ಚು ಸ್ವೀಕಾರಾರ್ಹ ಎನಿಸಿಕೊಂಡಿದ್ದರಿಂದ ದೇವೇಗೌಡರು ತಮ್ಮನ್ನು ಜಾತ್ಯತೀತ ಎಂದು ಬಿಂಬಿಸಿಕೊಂಡರೇ ವಿನಾ, ಜಾತ್ಯತೀತ ತತ್ವದ ಮೇಲಿನ ಕಾಳಜಿಯಿಂದಲ್ಲ. ಒಂದೊಮ್ಮೆ ಇವತ್ತಿನ ವಾತಾವರಣದಲ್ಲೇನಾದರೂ ದೇವೇಗೌಡರು ರೂಪುಗೊಳ್ಳುವಂತಹ ಅವಕಾಶವಿದ್ದಿದ್ದರೆ ಅವರು ತಮ್ಮ ಮಗನಿಗಿಂತಲೂ ತೀವ್ರ ಹಿಂದೂತ್ವವಾದಿಯಾಗಿ, ಜಾತೀವಾದಿಯಾಗಿ ಅಪ್ಪಳಿಸುತ್ತಿದ್ದರು. ದೇವೇಗೌಡರು ತಮ್ಮ ಇಳಿವಯಸ್ಸಿನಲ್ಲಿ ಕುಟುಂಬದವರ ಒತ್ತಡಕ್ಕೆ ಮಣಿದು ಜಾತ್ಯತೀತ ತತ್ವಕ್ಕೆ ಎಳ್ಳುನೀರು ಬಿಟ್ಟು ಕೋಮುವಾದಿಗಳ ಜೊತೆ ಕೈಜೋಡಿಸಿದ್ದಾರೆ ಎಂದು ಸುಖಾಸುಮ್ಮನೆ ಮರುಗುತ್ತಿರುವ ವಿಮರ್ಶಕರು ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ.

ದುಷ್ಟನೊಬ್ಬ ಜೀವನಾನುಭವದಿಂದ ತನ್ನ ವಯಸ್ಸು ಮಾಗಿದಂತೆಲ್ಲ ಸಂತನಾಗುವ ಸಾಕಷ್ಟು ಸಾಧ್ಯತೆಗಳಿವೆ. ಆದರೆ ಸಂತನೊಬ್ಬ, ತನ್ನ ಜೀವನಾನುಭವದಿಂದ ಇಳಿವಯಸ್ಸಿನ ದುಷ್ಟನಾಗಲು ಸಾಧ್ಯವಿಲ್ಲ. ಹಾಗೇನಾದರೂ ಆಗಿದ್ದರೆ, ಸಂತನ ಅವನ ರೂಪ ಕೇವಲ ಮುಖವಾಡ ಅಥವಾ ಕಪಟವೇಷ ಎಂದು ನಾವು ಅರ್ಥ ಮಾಡಿಕೊಳ್ಳಬೇಕಷ್ಟೆ.

ಹಾಗಾದರೆ, ಮೀಸಲಾತಿಯನ್ನು ಆರ್ಥಿಕ ಹಿನ್ನೆಲೆಯಲ್ಲಿ ಪರಿಷ್ಕರಿಸಬೇಕು ಎಂದು ದೇವೇಗೌಡರು ಹೇಳುತ್ತಿರುವುದಕ್ಕೆ ನಿರ್ದಿಷ್ಟ ಕಾರಣವೇನು? ಬೇರೇನೂ ಇಲ್ಲ… ಹೆಗಡೆಗೆ ಬೆದರಿಕೆ ಹಾಕಿದಂತೆ, ಸಿಂಧ್ಯಾಗೆ-ಶಂಕರ್‌ಗೆ-ಸಿದ್ದರಾಮಯ್ಯ ಮೊದಲಾದವರಿಗೆ ಬೆದರಿಕೆ ಹಾಕಿದಂತೆ, ಈಗ ನೇರವಾಗಿ ಅಹಿಂದ ಮತದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ. ಚನ್ನಪಟ್ಟಣದ ಚುನಾವಣೆಯಲ್ಲಿ ಗಣನೀಯ ಪ್ರಮಾಣದಲ್ಲಿ ಒಕ್ಕಲಿಗ ಮತಗಳ ಕ್ರೋಢೀಕರಣವಾದಾಗ್ಯೂ, ಅವರ ಮೊಮ್ಮಗನ ಸೋಲಿನಲ್ಲಿ ಪ್ರಧಾನ ಪಾತ್ರವಹಿಸಿದ್ದು ಕಾಂಗ್ರೆಸ್‌ನತ್ತ ವಾಲಿದ ಅಹಿಂದ ಮತಗಳ ಕ್ರೋಢೀಕರಣ. ಯಾವ ಮೀಸಲಾತಿಯ ಸೊಕ್ಕಿನಿಂದ ಅಹಿಂದ ವರ್ಗಗಳು ಇಂತಹ ಸವಾಲು ಎಸೆಯುತ್ತಿದ್ದಾರೋ, ಆ ಮೀಸಲಾತಿಯನ್ನೇ ಬುಡಮೇಲು ಮಾಡಲು ಬಿಜೆಪಿಗೆ ನಾನು ಅಡಿಪಾಯ ಹಾಕಿಕೊಡಬಲ್ಲೆ ಎಂಬ ಧಮಕಿಯನ್ನು ರವಾನಿಸುತ್ತಿದ್ದಾರೆ. ಇಲ್ಲವಾದಲ್ಲಿ ಸುಖಾಸುಮ್ಮನೆ ಅವರ ಬಾಯಿಂದ ಈ ಮಾತುಗಳು ಬರಲು ಸಾಧ್ಯವಿಲ್ಲ.

ಯಾಕೆಂದರೆ ಮಾಜಿ ಪ್ರಧಾನಿಯಾದ ಅವರಿಗೆ ಮೀಸಲಾತಿಯ ಪರಿಕಲ್ಪನೆ ನೆಲೆನಿಂತಿರುವುದು ಸಾಮಾಜಿಕ ಆಯಾಮದ ಮೇಲೆಯೆ ಹೊರತು, ಆರ್ಥಿಕ ಆಯಾಮದ ಮೇಲೆ ಅಲ್ಲ ಅನ್ನೋದು ತಿಳಿಯದ ಸಂಗತಿಯಲ್ಲ. ಅಷ್ಟೆಲ್ಲ ಹಣ ಸಂಪಾದಿಸಿದ್ದರೂ ಇಳಯರಾಜರಂತಹ ಹಿರಿಯ ಸಂಗೀತ ನಿರ್ದೇಶಕರನ್ನು ಗರ್ಭಗುಡಿ ಪ್ರವೇಶಿಸದಂತೆ ತಡೆದ ತಾಜಾ ವಿದ್ಯಮಾನವಿದೆಯಲ್ಲ, ಅಂತದ್ದನ್ನು ತೊಡೆದು ಹಾಕುವುದು ಮೀಸಲಾತಿಯ ಮೂಲೋದ್ದೇಶ. ಇದು ದೇವೇಗೌಡರಿಗೂ ಗೊತ್ತು. ಆದರೆ ಮನುಷ್ಯನಲ್ಲಿ ದುಷ್ಟತನ ವಿಜೃಂಭಿಸುವಾಗ ‘ಗೊತ್ತು’ಗಳೆಲ್ಲ ಮೂಲೆ ಸೇರುತ್ತವೆ; ಸೇಡು, ಪ್ರತೀಕಾರವಷ್ಟೆ ಮುನ್ನೆಲೆಗೆ ಬಂದು ನಿಲ್ಲುತ್ತದೆ.

ಇದನ್ನೂ ನೋಡಿ: ಸಂಸತ್ತಿನ ಅಧಿವೇಶನವನ್ನು ಬೀದಿ ಜಗಳದ ಮಟ್ಟಕ್ಕಿಳಿಸಿದ ಬಿಜೆಪಿಯ ಅನೈತಿಕ ರಾಜಕಾರಣದ ಅನಾವರಣ…. Janashakthi Media

Donate Janashakthi Media

Leave a Reply

Your email address will not be published. Required fields are marked *