-ಡಾ: ಎನ್.ಬಿ.ಶ್ರೀಧರ
ಇತ್ತೀಚಿನ ಸುದ್ದಿಯೊಂದರಲ್ಲಿ ಹೆಣ್ಣು ಸಿಗದಿರುವುದಕ್ಕೆ ನೊಂದು ಯುವಕ ಆತ್ಮಹತ್ಯೆ, ಚುನಾವಣಾ ಸಮಯದಲ್ಲಿ ಮದುವೆ ಮಾಡಿಸಲು ರಾಜಕಾರಣಿಗಳಿಗೆ ಯುವಕರ ದುಂಬಾಲು, ಮಲೆನಾಡಿನ ಜನಕ್ಕೆ ಕನ್ಯಾಪಿತೃಗಳು ಹೆಣ್ಣು ಕೊಡರು ಇತ್ಯಾದಿ ಸುದ್ಧಿಗಳನ್ನು ಕೇಳುತ್ತಲೇ ಇರುತ್ತೇವೆ. ಇದು ನಿಜ ಸಹ. ಒಂದು ಕಾಲದಲ್ಲಿ ವರದಕ್ಷಿಣೆ ಕೊಟ್ಟು ಹಣ್ಣನ ಕಡಯವರೆ ದುಂಬಾಲು ಬಿದ್ದು ಮದುವೆ ಮಾಡಿಸಬೇಕಿತ್ತು. ಆದರೆ ಈಗ ಉತ್ತಮ ಉದ್ಯೋಗ, ರೂಪ, ಗುಣ, ಆಸ್ತಿ ಇಲ್ಲದದ್ದರೆ ಮದುವೆಯೇ ಆಗದು ಎಂಬ ಸ್ಥಿತಿ ಇದೆ. ಅದರಲ್ಲಿಯೂ ಕೃಷಿಕರ ಕುಟುಂಬದ ಯುವಕರಿಗೆ ಮದುವೆಯಾಗಲು ಹುಡುಗಿಯರೇ ಸಿಗುತ್ತಿಲ್ಲವೆಂದು ಇದಕ್ಕೊಂದು “ಭಾಗ್ಯ” ಕರುಣಿಸಬೇಕೆಂದು ಮುಖ್ಯಮಂತ್ರಿಗಳಿಗೆ ಹಾವೇರಿಯ ರೈತ ಯುವಕನೊಬ್ಬ ಮನವಿ ಮಾಡಿದ್ದಾನೆ. ಮದುವೆಯಾಗದ ಯುವಕರು ತಹಶೀಲ್ದಾರರಿಗೆ, ತಾಲೂಕು ಪಂಚಾಯತ್ ಮುಖ್ಯಾಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಹೆಣ್ಣು ಹುಡುಕಿ ಕೊಡಿ ಎಂದು ಅರ್ಜಿ ಕೊಡುತ್ತಿರುವ ವಿಷಯವನ್ನೂ ಸಹ ಮಾಧ್ಯಮಗಳು ಭಿತ್ತರಿಸಿವೆ, ಭಿತ್ತರಿಸುತ್ತಲೇ ಇವೆ. ಸಂತಾನೋತ್ಪತ್ತಿ
ಕನ್ಯಾ ವರಯತೇ ರೂಪಂ, ಮಾತಾ ವಿತ್ತಂ ಪಿತಾ ಶ್ರುತಂ | ಬಾಂಧವಾಃ ಕುಲಮಿಚ್ಛಂತಿ, ಮೃಷ್ಟಾನ್ನಮ್ ಇತರೇ ಜನಾಃ | ಎಂದು ಸಂಸ್ಕೃತ ಶ್ಲೋಕದಲ್ಲಿ ಹೇಳಲಾಗಿದೆ. ಕನ್ಯೆಯು ವರನ ರೂಪವನ್ನು ನೋಡುತ್ತಾಳೆ, ಕನ್ಯೆಯ ತಾಯಿ ಆತನ ಸಂಪತ್ತನ್ನು ಗಮನಿಸುತ್ತಾಳೆ, ತಂದೆ ವರನ ಗುಣ, ವಿದ್ಯೆ ಇತ್ಯಾದಿ ಗಮನಿಸಿದರೆ ಸಂಬಂಧಿಗಳು ವರನ ಕುಲ ಜಾತಿಗಳನ್ನು ನೋಡುತ್ತಾರೆ ಮತ್ತು ನೆಂಟರೆಲ್ಲಾ ಭೋಜನದ ವಿಧಗಳನ್ನು ಸವಿದು ಹೊರಡುತ್ತಾರೆ ಎಂಬುದು ಇದರ ತಾತ್ಪರ್ಯ. ಈ ಕಾಲದ ಜಗತ್ತಿನಲ್ಲಿ ಕನ್ಯೆಯು ವರನ ರೂಪ, ಸಂಪತ್ತು, ಕುಲ, ಗೋತ್ರ, ಆತನಿಗೆ ತಂದೆ ಮತ್ತು ತಾಯಿ ಇರದಿರುವುದು, ಬೆಂಗಳೂರಿನಲ್ಲಿಯೇ ನೌಕರಿ ಇರುವುದು ಇತ್ಯಾದಿ ಅನೇಕ ವಿಷಯಗಳನ್ನು ನೋಡಿ ಬಾಳಸಂಗಾತಿಯಾಗಿ ಆಯ್ಕೆ ಮಾದಿಕೊಳ್ಳುತ್ತಾಳೆ. ಸಂತಾನೋತ್ಪತ್ತಿ
ಇದು ಪ್ರಕೃತಿ ಬದಲಾಗುತ್ತಿರುವ ಪ್ರಕೃತಿಯ ನಿಯಮ. ಇದನ್ನು ತಪ್ಪೆನ್ನಲು ಸಾಧ್ಯವೇ? ನಮ್ಮ ಯುವಮಿತ್ರರೂ ಸಹ ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಈಗಿನ ಕಾಲದ ಹೆಣ್ಣುಗಳ ಒಲುಮೆ ಗಳಿಸಲು ಅವಶ್ಯವಾದ ಹಣ, ಆಸ್ತಿ , ವಿದ್ಯೆ, ಬೆಚ್ಚನೆಯ ಪ್ರೀತಿ (?), ಅವರಿಗೆ ಬೇಕಾದ ವಾತಾವರಣ, ಈ ಕಾಲಕ್ಕೆ ಅವಶ್ಯವಿರುವ ಐಷಾರಾಮ ಇವನ್ನು ಒದಗಿಸಲು ಶಕ್ತನಿಲ್ಲದಿದ್ದರೆ ಆತನಿಗೆ ಹೆಣ್ಣನ್ನು ಹೊಂದುವ ಅರ್ಹತೆ ಇರುವುದಿಲ್ಲ ಎಂಬುದು ಬದಲಾದ ಈ ಕಾಲದ ಅಲಿಖಿತ ನಿಯಮ.
ಇದನ್ನೂ ಓದಿ: ಆಗಸ್ಟ್ 21ರಂದು ಕಾಡಿನಿಂದ ದಸರಾಗೆ ಗಜಪಡೆಯ ಬೀಳ್ಕೊಡುಗೆ
ಮನುಷ್ಯನೂ ಅತ್ಯಂತ ಮುಂದುವರೆದ ಪ್ರಾಣಿ. ಪ್ರಾಣಿ ಪ್ರಪಂಚವನ್ನು ಗಮನಿಸಿದಾಗ ಅಲ್ಲಿ ಹೆಣ್ಣು ಒಲಿಯುವುದು ಬಲಶಾಲಿಗೆ. “ಬಲಶಾಲಿಯು ಬದುಕಬೇಕು, ಆತನ ಸಂತತಿ ಮುಂದುವರೆಯಬೇಕು” ಇದು ಪ್ರಾಣಿ ಜಗತ್ತಿನ ಅಲಿಖಿತ ನಿಯಮ. ಅಲ್ಲಿ ಶಾರೀರಿಕವಾಗಿ ಬಲಹೀನರಿಗೆ ಯಾವುದೇ ರೀತಿಯ ಬೆಲೆ ಇಲ್ಲ. ಸಂತಾನೋತ್ಪತ್ತಿ ಪ್ರಾಣಿಗಳಲ್ಲಿ ಒಂದು ಲಕ್ಷುರಿ. ಅಂದರೆ ಅವುಗಳ ಮೊದಲ ಆದ್ಯತೆ ಹೊಟ್ಟೆ ತುಂಬಿಸುವ ಕಾಯಕಕ್ಕೆ. ಬಹುತೇಕ ಕಾಡು ಪ್ರಾಣಿಗಳು ಆಹಾರಕ್ಕೆ ತೀರಾ ಹೊಡೆದಾಡುವುದಿಲ್ಲ. ಬದಲಾಗಿ ಸಂತಾನೋತ್ಪತ್ತಿಗಾಗಿ ಅದರಲ್ಲಿಯೂ ಸಹ ಹೆಣ್ಣಿಗಾಗಿ ಕಾದಾಡಿ ಸಾಯಲೂ ಹಿಂಜರಿಯುವುದಿಲ್ಲ. ಬಹುತೇಕ ಎಲ್ಲಾ ಪ್ರಾಣಿಗಳು ಸಂಗಾತಿಯನ್ನು ಕೂಡಲು ಘನಘೋರ ಯುದ್ಧವನ್ನು ನಡೆಸುತ್ತವೆ. ಸಂತಾನೋತ್ಪತ್ತಿ
ಅನೆಕ ಗಂಡುಗಳು ಇದರಲ್ಲಿ ಪ್ರಾಣವನ್ನು ತೆರುವುದು ಸಾಮಾನ್ಯ. ಗೆದ್ದ ಬಲಶಾಲಿ ಗಂಡಿಗೆ ಮಾತ್ರ ಹೆಣ್ಣನ್ನು ಕೂಡುವ ಅವಕಾಶ. ಸೋತವುಗಳಿಗೆ ಅವುಗಳ ಸಂತತಿಯನ್ನು ಮುಂದುವರೆಸುವ ಯಾವುದೇ ಹಕ್ಕಿಲ್ಲ. ಸಂತಾನೋತ್ಪತ್ತಿ ಪ್ರಕ್ರಿಯೆಯೂ ಸಹ ಬಲಶಾಲಿಯಾದ ಯುವ ಪೀಳಿಗೆಯನ್ನು ತಯಾರಿಸಲೆಂದೇ ಆಗುತ್ತದೆ. ಇದರಲ್ಲಿ ಹುಟ್ಟಿದ ಮರಿ ಶಕ್ತಿಶಾಲಿಯೂ ಹಾಗೂ ತನ್ನನ್ನು ತಾನು ರಕ್ಷಸಿಕೊಳ್ಳಲು ಶಕ್ತನಾಗಿರಬೇಕಂಬ ಪ್ರಕೃತಿ ನಿಯಮದ ಪಾಲನೆಯೂ ಸಹ ಇದೆ. ಈ ರೀತಿಯ ಕೆಲವು ಸತ್ಯಗಳನ್ನು ಅರಿತರೆ “ಹೀಗೂ ಇದೆಯೇ!? ಎಂದು ಆಶ್ಚರ್ಯ ಪಟ್ಟು ಕೊಳ್ಳುವಿರಿ. ಕಾಡಿನಲ್ಲಿ ನೈಸರ್ಗಿಕವಾಗಿ ಬದುಕುವ ಪ್ರಾಣಿಗಳಲ್ಲಿ ಗರ್ಭಧಾರಣೆಯ ಸಮಸ್ಯೆಯೇ ಕಾಡುವುದಿಲ್ಲ. ಅಲ್ಲಿ ಮರಿ ಹಾಕಲು ಗಂಡು ಮತ್ತು ಹೆಣ್ಣು ದೈಹಿಕವಾಗಿ ಸದೃಢರಾಗಿರುವುದರಿಂದ ಆ ಸಮಸ್ಯೆಯೇ ಉದ್ಭವಿಸದು.
ಮನುಷ್ಯರಲ್ಲಿಯೂ ಸಹ ದೈಹಿಕವಾಗಿ ಬಲಶಾಲಿಗೆ ಹೆಣ್ಣು ಒಲಿಯುವುದು ಎಂಬುದಕ್ಕೆ ಅನೇಕ ಪೌರಾಣಿಕ ಉದಾಹರಣೆಗಳಿವೆ. ಒಂದು ಕಾಲದಲ್ಲಿ ಹೆಣ್ಣು ತನ್ನ ಮೂಲಕ ಸಂತತಿಯನ್ನು ಮುಂದುವರೆಸಲು ಅನುರೂಪನಾದ ಗಂಡನ್ನು “ಸ್ವಯಂವರ” ಪದ್ದತಿಯ ಮೂಲಕ ಆಯ್ಕೆ ಮಾಡಿಕೊಳ್ಳುತ್ತಿದ್ದಳು ಎಂಬ ಬಗ್ಗೆ ಬಹುತೇಕರಿಗೆ ತಿಳಿದಿರಬಹುದು. ಅಲ್ಲಿ ಹೆಣ್ಣು ತನಗೆ ತಕ್ಕನಾದ ಬಲಶಾಲಿಯಾದ ಗಂಡನ್ನು ಅವನ ಯುದ್ಧ ಸಾಮರ್ಥ್ಯದ ಮೇಲೆ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿತ್ತು. ಅತ್ಯಂತ ಸುಂದರಿಯಾದ ಕೈಕೇಯಿ ದಶರಥನನ್ನು ವರಿಸಿದ್ದು ಆತ ದಶದಿಕ್ಕುಗಳಿಗೂ ಏಕಕಾಲದಲ್ಲಿ ಬಾಣ ಬಿಟ್ಟು ಶತ್ರುಗಳಿಗೆ ಯಮನಾಗಿದ್ದ ಎಂಬ ಕಾರಣಕ್ಕೆ. ಆತನ ಪುತ್ರ ಶ್ರೀರಾಮ ಸಹ ಉತ್ತಮ ಕ್ಷತ್ರಿಯನಾಗಿದ್ದು ಕೋಸಲರಾಜ್ಯದ ಯುವರಾಜನಾಗಿ ಅಯೋಧ್ಯೆಯ ಅರಸನಾದರೂ ಸಹ ಸ್ವಯಂವರದಲ್ಲಿ ತನ್ನ ಶೌರ್ಯವನ್ನು ಶಿವಧನಸ್ಸು ಮುರಿದು ದೇಹಬಲ ತೋರಿಸಿಯೇ ಸೀತೆಯನ್ನು ಆತ ಮದುವೆಯಾಗಿರುವುದು. ಸಂತಾನೋತ್ಪತ್ತಿ
ಮಹಾಭಾರತದಲ್ಲಿ ಕುರುಕುಲದ ಪಿತಾಮಹ ಭೀಷ್ಮನು ಯುವಕ ದೇವವೃತನಾಗಿದ್ದಾಗ ತಂದೆಯ ಎರಡನೆಯ ಹೆಂಡತಿ ಸತ್ಯವತಿಗೆ ಜನಿಸಿದ ಮಕ್ಕಳಿಗೆ ಹೆಣ್ಣು ಹುಡುಕಲು ಕಾಶಿರಾಜನು ನಡೆಸಿದ ಸ್ವಯಂವರದಲ್ಲಿ ಭಾಗವಹಿಸಿ ಅಲ್ಲಿರುವ ಯುವರಾಜರುಗಳನ್ನೆಲ್ಲಾ ಸೋಲಿಸಿದಾಗ ಅಂಬೆ, ಅಂಬಿಕೆ ಮತ್ತು ಅಂಬಾಲಿಕೆಯರು ಆತನೇ ಅವರನ್ನು ಮದುವೆಯಾಗುವನೆಂದು ತಿಳಿದು ಆತನ ಶೌರ್ಯಕ್ಕೆ ಮೆಚ್ಚಿ ಆತನ ರಥವನ್ನೇರುತ್ತಾರೆ. ಮುಂದೆ ನಡೆದಿದ್ದೇ ಬೇರೆ. ದ್ರೌಪದಿಯ ಸ್ವಯಂವರವೂ ಸಹ ಹಾಗೇ ತಾನೇ ನಡೆದಿದ್ದು. ಅರ್ಜುನ ಮತ್ಸ್ಯಯಂತ್ರ ಬೇಧಿಸಿದ ನಂತರ ಮಾತ್ರ ದ್ರೌಪದಿ ಆತನಿಗೆ ಒಲಿದಿದ್ದು. ನಂತರ ನಡೆದ ಹಂಚಿಕೊಳ್ಳುವ ಕಥೆ ಬೇರೆ. ಇವೂ ಸಹ ಪ್ರಾಣಿಗಳ ನಿಯಮಕ್ಕೆ ಹತ್ತಿರವಾದವುಗಳು ಎನ್ನಬಹುದು. ಅಂದರೆ ಈಗಿನಂತೆ “ಐಶ್ವರ್ಯ” ಹೊಂದಿದ್ದರೆ ಹೆಣ್ಣು ಒಳಿಯುವುದು ಆಗಿನ ಕಾಲದಲ್ಲಿ ಇಲ್ಲವಾಗಿತ್ತು ಎಂಬುದಕ್ಕೆ ಉದಾಹರಣೆ. ಸಂತಾನೋತ್ಪತ್ತಿ
ಮನುಷ್ಯನೂ ಸೇರಿದಂತೆ ಗರ್ಭಧಾರಣೆಯ ಪ್ರಕ್ರಿಯೆಯಾದ ನಂತರ ಗರ್ಭಧರಿಸಿದ ಸಂಗಾತಿಯನ್ನು ನೋಡಿಕೊಳ್ಳುವ ಮತ್ತು ಆರೈಕೆ ಮಾಡುವ ಅಕ್ಕರೆ, ಪ್ರೀತಿ ಗಂಡುಜೀವಿಗಳಿಗಿಲ್ಲ ಮತ್ತು ಗರ್ಭಧರಿಸಿದ ಹೆಣ್ಣು ಅವನ್ನು ಬಯಸುವುದೂ ಇಲ್ಲ. ಬಹುತೇಕ ಅಮ್ಮಂದಿರು ಅವುಗಳ ಮರಿಗಳನ್ನು ಹೆರುವ ಮತ್ತು ರಕ್ಷಿಸುವ ಸಾಮರ್ಥ್ಯ ಹೊಂದಿದ್ದು ಗಂಡು ಜೀವಿಯನ್ನು ಅವಲಂಭಿಸಿಲ್ಲ. ಆದರೆ ಕೆಲವೊಂದು ಜಾತಿಗೆ ಸೇರಿದ ತಂದೆ ಹಕ್ಕಿಗಳು ಮಾತ್ರ “ಒಳ್ಳೆ ಅಪ್ಪ” ನ ಲಕ್ಷಣ ಹೊಂದಿದ್ದು ಗೂಡುಕಟ್ಟುವುದರಿಂದ ಹಿಡಿದು ಮೊಟ್ಟೆಗೆ ಕಾವು ಕೊಡುವುದು, ಮರಿಗೆ ಆಹಾರ ನೀಡುವುದು, ವೈರಿಯ ದಾಳಿಯ ಸಮಯದಲ್ಲಿ ಹೆಣ್ಣು ಹಕ್ಕಿಗೆ ಸಾತ್ ಕೊಡುತ್ತವೆ.
ಗಂಡು ಸಿಂಹಗಳು ಎಷ್ಟೇ ಶಕ್ತಿಶಾಲಿಯಾಗಿದ್ದರೂ ಸಹ ಅವು ಒಳ್ಳೆಯ ಅಪ್ಪಂದಿರಲ್ಲ. ಸಿಂಹಿಣಿಯ ಮರಿಗಳಿಗೆ ರಕ್ಷಣೆ ನೀಡುವುದಿರಲಿ, ಅವುಗಳಿಗೆ ಆಹಾರವನ್ನು ಬೇಟೆಯಾಡದಷ್ಟು ಸೋಮಾರಿಗಳು. ಹೆಣ್ಣು ಸಿಂಹಿಣಿ ಮಾತ್ರ ಮರಿಗಳಿಗೆ ಮತ್ತು ಗಂಡು ಸಿಂಹ (ಗಂಡ?) ಕ್ಕೂ ಸೇರಿದಂತೆ ಅವಶ್ಯ ಆಹಾರದ ಬೇಟೆಯಾಡುತ್ತದೆ. ಮರಿಗಳಿಗೆ ಆಹಾರ ನೀಡುವಾಗ ಅದನ್ನು ಗಂಡು ಸಿಂಹ ಕಸಿಯದಂತೆ ನೋಡುವುದೇ ಸಿಂಹಿಣಿಯ ಕೆಲಸ. ಆದರೆ ಇನ್ನೊಂದು ಗಂಡು ಸಿಂಹ ಬಂದು ಡ್ಯಾಡಿ ಸಿಂಹವನ್ನು ಕಾದಾಡಿ ಸೋಲಿಸಿದರೆ ಅದು ಮೊದಲು ಮೊದಲು ಮಾಡುವುದು ಎಲ್ಲಾ ಮರಿಗಳ ಕೊಲೆ. ಏಕೆಂದರೆ ಈ ಮರಿಗಳು ಇರುವವರೆಗೂ ಸಹ ಹೆಣ್ಣು ಸಿಂಹ ಬೆದೆಗೆ ಬರುವುದಿಲ್ಲ. ಸಂತಾನೋತ್ಪತ್ತಿ
ಗ್ರಿಝ್ಝಿ ಗಂಡು ಕರಡಿಗಳು ಹೆಣ್ಣನ್ನು ಒಲಿಸಿಕೊಳ್ಳಲು ಸಾವಿರಾರು ಕಿಲೋಮೀಟರಿನಷ್ಟು ಪ್ರದೇಶವನ್ನು ಗುರುತಿಸಿಕೊಂಡು ತಮ್ಮ ಸಂಸ್ಥಾನವನ್ನು ಗುರುತಿಸಿಕೊಳ್ಳುತ್ತವೆ. ರಾಜ್ಯ ಸ್ಥಾಪನೆಗೆ ಬರುವ ಇತರ ಗಂಡು ಕರಡಿಗಳೊಂದಿಗೆ ಕಾದಾಡಿ, ಜಾಸ್ತಿ ವ್ಯಾಪ್ತಿಯ ಪ್ರದೇಶವನ್ನು ಆಕ್ರಮಿಸಿಕೊಂಡ “ಶ್ರೀಮಂತ” ಗಂಡು ಕರಡಿಯನ್ನು ಹೆಣ್ಣು ಕರಡಿಗಳು ಅರಸಿಕೊಂಡು ಸಂತಾನೋತ್ಪತ್ತಿ ಮಾಡುವ ಭಾಗ್ಯ ಕರುಣಿಸುತ್ತವೆ. ಹೆಣ್ಣು ಕರಡಿ ಮರಿ ಹಾಕಿದ ನಂತರ ಗಂಡು ಕರಡಿಗೆ ಆಹಾರ ದೊರಕದಿದ್ದರೆ ಅದು ತುಂಬಾ ಇಷ್ಟು ಪಡುವುದು ಎಳೆ ಮರಿ ಕರಡಿಗಳನ್ನು !. ಕಾರಣ ಡ್ಯಾಡಿ ಕರಡಿಯಿಂದ ಮರಿಗಳನ್ನು ರಕ್ಷಿಸಿಕೊಳ್ಳುವುದೇ ಮಮ್ಮಿ ಕರಡಿಗೆ ದೊಡ್ಡ ಸಾಹಸ. ಡ್ಯಾಡಿ ಕರಡಿ ಮಹಾ ಸಮಯಸಾಧಕವಾಗಿದ್ದು ಅವಕಾಶವಾದಿ ಬೇಟೆಗಾರವಾಗಿದ್ದು ಅವುಗಳಿಗೆ ಹಣ್ಣು, ಮೀನು, ಗೆದ್ದಲು ಸಿಗದೇ ಇದ್ದಲ್ಲಿ ಅವುಗಳಿಂದಲೇ ಹುಟ್ಟಿದ ಮರಿಗಳನ್ನು ತಿಂದು ತೇಗುತ್ತವೆ !.
ಸಂತಾನೋತ್ಪತ್ತಿ
ಮಾರ್ಮೋಸೇಟ್ ಜಾತಿಗೆ ಸೇರಿದ ಪ್ರಾಣಿಗಳಲ್ಲಿ ಗಂಡು ಒಳ್ಳೆಯ ತಂದೆಯಾಗದಿದ್ದರೆ ಅದಕ್ಕೆ ಸಂತಾನಭಾಗ್ಯವೇ ಇಲ್ಲ. ಹೆಣ್ಣು ಮಾರ್ಮೊಸೆಟ್ಟುಗಳು ಬೆದೆಗೆ ಬಂದಾಗ ಜಾಸ್ತಿ ಮರಿಪ್ರೀತಿಯನ್ನು ಹೊಂದಿದ ಮತ್ತು ಅನುಭವಿ ಡ್ಯಾಡಿಗಳನ್ನು ಮುಂದಿನ ಪೀಳಿಗೆ ಜನಕನಾಗಿ ಆಯ್ಕೆ ಮಾಡಿಕೊಳ್ಳುತ್ತವೆ. ಮಿಲನ ಕ್ರಿಯೆಯ ನಂತರ ಅವಳಿ ಮರಿಗಳಿಗೆ ತಾಯಿ ಮಾರ್ಮೋಸೆಟ್ ಜನ್ಮ ನೀಡುತ್ತದೆ. ಮರಿಗಳು ತಾಯಿಯ ತೂಕದ ಶೇ ೨೫ ರಷ್ಟು ಇರುವುದರಿಂದ ಹೆರಿಗೆಯಾದ ಕೂಡಲೇ ತಾಯಿ ಮಾರ್ಮೊಸೆಟ್ಟಿಗೆ ತುಂಬಾ ವಿಶ್ರಾಂತಿ ಅವಶ್ಯ. ಕಾರಣ ಅದರ ಆಹಾರ ಮತ್ತು ಮರಿಗಳ ಆಹಾರವನ್ನು ತಂದೆ ಮಾರ್ಮೋಸೆಟ್ ಪೂರೈಸಬೇಕು. ಕಾರಣ ಡ್ಯಾಡಿ ಮಾರ್ಮೊಸೆಟ್ ಮರಿಗಳನ್ನು ಚೆನ್ನಾಗಿ ನೆಕ್ಕಿ, ಅವುಗಳಿಗೆ ಮೊಲೆಯೂಡಿಸಲು ಮಮ್ಮಿ ಮಾರ್ಮೊಸೆಟ್ಟಿನ ಮನವೊಲಿಸುತ್ತದೆ. ಹೀಗೆಲ್ಲಾ ಮಾಡಿ ಬೇಗ ಮರಿ ದೊಡ್ಡದಾದ ಕೂಡಲೇ ಪುನರ್ಮಿಲನಕ್ಕೆ ಹೆಣ್ಣು ಮಾರ್ಮೋಸೆಟ್ ಸಿದ್ಧವಾಗುತ್ತದೆ. ಇದೇ ಕಾರಣದಿಂದ ಡ್ಯಾದಿ ಮಾರ್ಮೋಸೆಟ್ ಮರಿಗಳು ಬೇಗ ಆರೈಕೆಗೊಂಡು ದೊಡ್ಡದಾಗಿ ಅಮ್ಮನನ್ನು ಬಿಟ್ಟು ತೊಲಗಲಿ ಅಂದುಕೊಳ್ಳುವುದು! ಸಂತಾನೋತ್ಪತ್ತಿ
ಜಿಂಕೆಗಳು ಮಾಂಸಾಹಾರಿ ಪ್ರಾಣಿಗಳಾದ ಹುಲಿ, ಸಿಂಹ, ತೋಳ ಇತ್ಯಾದಿ ಹಿಂಸ್ರ ಪ್ರಾಣಿಗಳಿಮ್ದ ಬದುಕುಳಿಯುವುದೇ ಅವುಗಳ ಸಂತತಿಯ ಉಳಿವಿಗೆ ಅವಶ್ಯವಾದ ಅರ್ಹತೆ. ಅವುಗಳ ಮೇಲೆ ದಾಳಿ ಆದಾಗ ಯಾವ ಜಿಂಕೆ ತಪ್ಪಿಸಿಕೊಂಡು ಹೋಗುತ್ತದೆಯೋ ಅದು ಆ ದಿನ ಅಥವಾ ಬಹಳ ದಿನ ಬದುಕಿ ಉಳಿಯುತ್ತದೆ. ಜಿಂಕೆಗಳಲ್ಲಿ ಹಿಂಸ್ರ ಪ್ರಾಣಿಗಳಿಂದ ಬದುಕಿ ಉಳಿಯುವುದೇ ಅರ್ಹತೆ. ಜಿಂಕೆಗಳಲ್ಲಿ ಸಂತಾನೋತ್ಪತ್ತಿ ಸಮಯದಲ್ಲಿ ಗಂಡು ಜಿಂಕೆಗಳೆಲ್ಲಾ ವೃತ್ತಾಕಾರದಲ್ಲಿ ನಿಂತು ಕೊಳ್ಳುತ್ತವೆ. ನಂತರ ಸಂತಾನೋತ್ಪತ್ತಿ ಕ್ರಿಯೆಗೆ ಸಿದ್ದವಾದ ಹೆಣ್ಣುಗಳೆಲ್ಲಾ ಅಲ್ಲಿಗೆ ಬರುತ್ತವೆ. ನಂತರ ಅಲ್ಲಿರುವ ಎಲ್ಲಾ ಗಂಡುಗಳು ಮೂತ್ರ ವಿಸರ್ಜನೆಯ ಮೂಲಕ ತಮ್ಮ ಶಕ್ತಿ ಪ್ರದರ್ಶನ ನಡೆಸುತ್ತವೆ. ಬಹಳ ದೂರ ಯಾವ ಗಂಡು ಜಿಂಕೆಯು ಮೂತ್ರ ಎರಚುತ್ತದೆಯೋ ಅದು ಮುಂದಿನ ಪ್ರಕ್ರಿಯೆಗೆ ಅರ್ಹ. ಎಲ್ಲರೂ ಸಮಬಲರಾದ ಪಕ್ಷದಲ್ಲಿ ಅವುಗಳಲ್ಲೇ ಕಾದಾಟವಾಗುತ್ತದೆ. ಬಲಶಾಲಿ ಗಂಡು ಸಂತಾನೋತ್ಪತ್ತಿ ಪ್ರಕ್ರಿಯೆ ನಡೆಸುತ್ತದೆ. ಈ ಪ್ರಕ್ರಿಯೆ ನಡೆದಲ್ಲಿ ಮಾತ್ರ ಹೆಣ್ಣು ಜಿಂಕೆ ಗಂಡನ್ನು ಒಪ್ಪುತ್ತದೆ. ಇಲ್ಲದಿದ್ದ ಪಕ್ಷದಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆಯೇ ನಡೆಯುವುದಿಲ್ಲ. ಹುಟ್ಟುವ ಮರಿಗಳು ದೈಹಿಕವಾಗಿ ಬಲಶಾಲಿಯಾಗಿರಬೇಕೆನ್ನುವ ಪೃಕೃತಿಯ ನಿಯಮವನ್ನು ಅವು ಚಾಚು ತಪ್ಪದೇ ಪಾಲಿಸುತ್ತವೆ. ಸಂತಾನೋತ್ಪತ್ತಿ
ಗಂಡು ಒಂಟೆಗಳು ಸಂಗಾತಿ ಬೇಕೆನ್ನಿಸಿದಾಗ ಅತ್ಯಂತ ವಿಚಿತ್ರವಾಗಿ ವರ್ತಿಸುತ್ತವೆ. ಗಂಡು ಒಂಟೆಗಳಲ್ಲಿ ಪ್ರತಿವರ್ಷದ ಜನವರಿ ತಿಂಗಳ ಕೊನೆಯಲ್ಲಿ ಟೆಸ್ಟೋಸ್ಟಿರಾನ್ ಹಾರ್ಮೋನಿನ ಪ್ರಭಾವ ಜಾಸ್ತಿಯಾಗುತ್ತಿದ್ದಂತೆ ಅದು “ರಟ್ ಅಥವಾ ಗೊಬಿ” ಎಂಬ ವರ್ತನೆ ತೋರುತ್ತದೆ. ಗಂಡು ಒಂಟೆಯ ಮೇಲ್ದುಟಿಯ ದಲ್ಲಾ ಅಥವಾ ಗುಲ್ಲಾ ಎಂಬ ಹೊಸ ಆಕೃತಿ ಕಾಣಿಸಲು ಪ್ರಾರಂಭಿಸುತ್ತದೆ. ಒಂಟೆಯ ಕುತ್ತಿಗೆಯಲ್ಲಿ ಮತ್ತು ಎರಡು ಕಿವಿಯ ಬುಡಗಳ ಮಧ್ಯದಲ್ಲಿ ಇರುವ ಪೋಲ್ ಗ್ರಂಥಿಯೊಂದರಿಂದ ದ್ರವ್ಯವೊಂದರ ವಿಸರ್ಜನೆಯಾಗುತ್ತದೆ. ಇದರ ಮೂತ್ರದಲ್ಲಿ ಫೆರೊಮೋನುಗಳು ಇರುತ್ತವೆ. ರಟ್ ಅಥವಾ ಗೊಬಿಯಲ್ಲಿರುವ ಗಂಡು ಒಂಟೆಗಳು ಬೆದೆಯಲ್ಲಿರುವ ಹೆಣ್ಣನ್ನು ಕೂಡುವ ಮೊದಲು ಘನಘೋರ ಕಾಳಗ ಮಾಡಿ ಯಾವುದು ಗೆಲ್ಲುತ್ತದೆಯೋ ಅವುಗಳಿಗೆ ಸಂತಾನ ಮುಂದುವರೆಸುವ ಗ್ಯಾರಂಟಿ ದೊರೆಯುತ್ತದೆ. ಕೈಲಾಗದೆ ಸೋತ ಒಂಟೆಗಳು ಮಿಲನ ಪ್ರಕ್ರಿಯೆಯನ್ನು ನೋಡುತ್ತಾ ಸುಮ್ಮನಿರಬೇಕು !..
ಕೆಂಪು ತೋಳಗಳ ಪರಿವೆಯೇ ಬೇರೆ. ಇಲ್ಲಿ ಗಂಡು ಮತ್ತು ಹೆಣ್ಣು ಗೆಳತನ ಹೊಂದಿ ಮಿಲನ ಕ್ರಿಯೆ ನಡೆದು ಹೆಣ್ಣು ಮರಿ ಹಾಕಿದ ನಂತರ ಗಂಡು ತೋಳ ಪ್ರತಿ ೬ ಗಂಟೆಗೊಮ್ಮೆ ಹೊರಗೆ ಹೋಗಿ ತಾಯಿ ಮರಿಗಳಿಗೆ ಸಾಕಾಗುವಷ್ತು ಆಹಾರವನ್ನು ತರಲೇಬೇಕು. ಹೆಣ್ಣು ಮರಿಗಳು ಸ್ವತಂತ್ರವಾಗುವ ವರೆಗೂ ಸಹ ಹೊರಗೆ ಹೊರಡುವುದಿಲ್ಲ. ಮರಿಗಳಿಗೆ ಬೇಟೆಯಾಡುವುದನ್ನು, ಇತರರ ಬೇಟೆಯನ್ನು ಕದ್ದು ತಿನ್ನುವುದನ್ನು, ತನ್ನನ್ನು ತಾನು ರಕ್ಷಿಸಿಕೊಳ್ಳುವುದನ್ನು, ಸಂಗಾತಿಯನ್ನು ಒಲಿಸಿಕೊಳ್ಳುವುದನ್ನು ಗಂಡು ತೋಳವೇ ನುರಿತ ಶಿಕ್ಷಕನಂತೆ ಸಮಯ ಹೊಂದಿಸಿಕೊಂಡು ಹೆಣ್ಣಿನ ಮುಂದೆಯೇ ಮಾಡಬೇಕು. ಇದನ್ನು ಈಗಿನ ಝೊಮ್ಯಾಟೋ ತರ ನೀಡುವ “ಗೃಹ ಸೇವೆ ಅಥವಾ ರೂಂ ಸೇವೆ” ಎನ್ನಬಹುದು. ಈ ಸೇವೆ ತೃಪ್ತಿಕರವಾಗಿದ್ದರೆ ಮಾತ್ರ ಮುಂದೆ ಅದರ ಸಂತಾನ ಮುಂದುವರೆಸಲು ಹೆಣ್ಣು ತೋಳಗಳು ಮುಂದೆ ಬರುವುದು ಎಂಬುದು ಗಂಡಿಗೆ ಗೊತ್ತಿರುವುದರಿಂದ ಈ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತದೆ.
ಸರೀಸ್ರಪಗಾಳಾದ ಹಾವುಗಳು ಸಹ ಒಂಟಿ ಜೀವಿಗಳು. ಅವು ಸಂಗಾತಿಯನ್ನರುಸುವುದು ಸಂತಾನ ಕ್ರಿಯೆಗೆ ಸಿದ್ಧವಾದಾಗ ಮಾತ್ರ. ಆ ಸಮಯದಲ್ಲಿ ಮಾತ್ರ ಅವು ಜೊತೆಗಾರ ಅಥವಾ ಜೊತೆಗಾರ್ತಿಯ ಜೊತೆಗಿರುತ್ತದೆ. ಗಂಡು ಹಾವು ಮಿಲನಕ್ರಿಯೆಯ ನಂತರ ಹೆಣ್ಣು ಹಾವನ್ನು ಗುರುತಿಸುವುದೂ ಇಲ್ಲ. ಗರ್ಭಧರಿಸಿದ ಹೆಣ್ಣು ಹಾವು ಮೊಟ್ಟೆಳನ್ನಿಟ್ಟು ಮರಿ ಮಾಡುತ್ತದೆ. ಹಾವುಗಳೆಂದೂ ಜೊತೆಗಿರುವ ಸಾಮಾಜಿಕ ಜೀವಿಗಳಲ್ಲ. ಬದಲಾಗಿ ಒಂದು ಹಾವು ಇನ್ನೊಂದು ಹಾವನ್ನು ಬಹಳ ಇಷ್ಟಪಟ್ಟು ಆಹಾರವಾಗಿ ಕಬಳಿಸುತ್ತದೆ.
ಮನುಷ್ಯರಿಗೆ ಹತ್ತಿರದ ವಿವಿಧ ಮಂಗಗಳಲ್ಲಿ ಗಂಡುಗಳು ತಮ್ಮ ಮರಿಯನ್ನು ಸಂಗಾತಿಯ ಜೊತೆಯಲ್ಲಿ ಹೊತ್ತೊಯ್ಯುವ, ಅವುಗಳಿಗೆ ಆಹಾರ ನೀಡುವ ಮತ್ತು ಶತ್ರುಗಳಿಂದ ಅವುಗಳನ್ನು ಕಾಪಾಡುವ ಗುಣ ಹೊಂದಿವೆ. ಬಬೂನುಗಳು ತಾಯಿಮಂಗಕ್ಕೆ ಮರಿಯನ್ನು ಹೊತ್ತೊಯ್ಯಲು ಸಹಕರಿಸುವುದು ಮುಂದೆ ಅದನ್ನು ಕೂಡಲು ಒಲಿಸಿಕೊಳ್ಳುವುದಕ್ಕೆ. ಕೆಲವೊಂದು ಮಂಗಗಳಲ್ಲಿ ಏಕಪತ್ನಿ ಪದ್ಧತಿ ಇದ್ದರೂ ಅದು ಧೀರ್ಘಕಾಲ ಬಾಳಲ್ಲ. ಇನ್ನೊಬ್ಬ ಉತ್ತಮ ಸಂಗಾತಿ ದೊರೆತಕೂಡಲೇ ಈ ಸಂಬಂಧ ಬಿಟ್ಟು ಹೋಗುತ್ತದೆ.
ಗಂಡು ಆಸ್ಟ್ರಿಚ್ ಕಡುಕಪ್ಪು ಬಣ್ಣ ದೊಡ್ಡ ಕಣ್ಣು ಹೊಂದಿದ್ದು ಹೆಣ್ಣನ್ನು ಆಕರ್ಷಿಸಿ ಮಿಲನ ಹೊಂದುತ್ತದೆ. ಹೆಣ್ಣು ಮೊಟ್ಟೆಯನ್ನಿಟ್ಟಾಗ ಅದು ಹಗಲಿನಲ್ಲಿ ಮೊಟ್ಟೆಗಳಿಗೆ ಕಾವನ್ನು ಕೊಟ್ಟರೆ, ಗಂಡಿನದು ರಾತ್ರಿ ಪಾಳಿ. ಗಂಡು ಕಪ್ಪಗಿರುವುದರಿಂದ ರಾತ್ರಿಯಲ್ಲಿ ಕಾವಿಡುವುದು ಬೇಟೆಯ ಕಣ್ಣಿಗೆ ಬೀಳುವ ಸಾಧ್ಯತೆ ಕಡಿಮೆ ಇರುವುದರಿಂದ ಹೆಣ್ಣು ಈ ಕಾಯಕಕ್ಕೆ ಗಂಡನ್ನು ನಿಯೋಜಿಸುತ್ತದೆ ಎನ್ನಲಾಗಿದೆ. ಮರಿಯಾದ ಕೂಡಲೆ ಡ್ಯಾಡಿ ಆಸ್ಟ್ರಿಚ್ ಮರಿಗಳಿಗೆ ತಿಪ್ಪೆ ಕೆದಕುವುದು, ಹುಳ ಹಿಡಿಯುವುದು ಮತ್ತು ವೈರಿಗಳಿಂದ ತಪ್ಪಿಸಿಕೊಳ್ಳುವುದು ಕಲಿಸಿಕೊಡುತ್ತದೆ. ಹೆಣ್ಣು ಅಸ್ಟ್ರಿಚ್ ಹಾಯಾಗಿ ತನ್ನ ಪಾಡಿಗೆ ತಾನಿದ್ದು ಇನ್ನೊಂದು ಸಲ ಮೊಟ್ಟೆ ಇಡಲು ಮತ್ತೊಂದು ಗಂಡನ್ನು ಹುಡುಕುತ್ತಿರುತ್ತದೆ.
ಗಂಡು ಕಿವಿ ಮತ್ತು ಎಮು ಪಕ್ಷಿಗಳು ಸಹ ಉತ್ತಮ ತೆಂದೆಯರು. ಅವು ಸಹ ಹೆಣ್ಣು ಇಟ್ಟ ಮೊಟ್ಟೆಯನ್ನು ಕಾದು, ಕಾವು ನೀಡಿ ಮರಿ ಮಾಡಿ ಮರಿ ಸ್ವತಂತ್ರವಾಗುವವರೆಗೆ ಜತನದಿಂದ ನೋಡಿಕೊಳ್ಳುತ್ತವೆ.
ಉಷ್ಟ್ರ ಪಕ್ಷಿಗಳಲ್ಲಿ ಗಂಡು ತನ್ನ ಮರಿಗಳ ಬಗ್ಗೆ ಅತ್ಯಂತ ಮಮತಾಮಯಿ !. ಇದು ೧೦-೧೨ ಹೆಣ್ಣು ಉಷ್ಟ್ರಪಕ್ಷಿಗಳ ೫೦-೬೦ ಮೊಟ್ಟೆಗಳ ಗುಡ್ಡೆ ಹಾಕಿಕೊಂಡು ಹಗಲಿರುಳು ಸ್ವಯಂ ಕಾವುಕೊಡುತ್ತದೆ. ಎಷ್ಟರ ಮಟ್ಟಿಗೆ ಇದು ಮರಿಗಳ ಬಗ್ಗೆ ಹುಚ್ಚನೆಂದರೆ ಇತರ ವೈರಿ ಅಥವ ತಾಯಿ ಉಷ್ಟ್ರಪಕ್ಶಿಗಳು ಹತ್ತಿರ ಬಂದರೆ ಅವುಗಳನ್ನು ಕಚ್ಚಿ ಸಾಯಿಸಲು ಹೇಸುವುದಿಲ್ಲ.
ಇದಕ್ಕೆ ತದ್ವಿರುದ್ಧವಾಗಿ ಗಂಡು ಹಮ್ಮಿಂಗ್ ಹಕ್ಕಿಗಳು ಕೇವಲ ಗರ್ಭಧಾರಣೆ ಮಾಡಿ ಗೂಡು ಕಟ್ಟುವಲ್ಲಿ, ಮರಿಗೆ ಕಾವು ನೀಡುವಲ್ಲಿ, ಆಹಾರ ನೀಡುವಲ್ಲಿ, ರಕ್ಷಣೆಯಲ್ಲಿ ಯಾವುದೇ ಜವಾಬ್ಧಾರಿ ವಹಿಸದೇ ಮತ್ತೊಂದು ಹೆಣ್ಣು ಹಕ್ಕಿಯನ್ನು ಅರಸಿ ಒಡಿ ಹೋಗುತ್ತವೆ.
ಇದಕ್ಕೆ ಕೀಟ ಪ್ರಪಂಚ ಹೊರತಾಗಿಲ್ಲ. ಪ್ರತಿಯೊಂದು ಕೀಟಕ್ಕೂ ಸಹ ತನ್ನ ಸಂತತಿಯನ್ನು ಮುಂದುವರೆಸಬೇಕೆಂಬ ಹಂಬಲ ಅದರ ಹುಟ್ಟಿನಿಂದಲೇ ಬಂದಿರುತ್ತದೆ. ಸಂಗಾತಿಯನ್ನು ಒಲಿಸಿಕೊಳ್ಳಲು ಅನೇಕ ಕೀಟಗಳು ವಿವಿಧ ರೀತಿಯಲ್ಲಿ ನೃತ್ಯ ಮಾಡುತ್ತವೆ. ನೃತ್ಯ ಮಾಡುವ ಗಂಡುಗಳಲ್ಲಿ ಚೆನ್ನಾಗಿ ನೃತ್ಯ ಮಾಡಿದೆ ಎನ್ನಲಾದ ಕೀಟವನ್ನು ಮಿಲನ ಕ್ರಿಯೆಗೆ ಹೆಣ್ಣು ಕೀಟ ಆಯ್ಕೆ ಮಾಡಿಕೊಳ್ಳುತ್ತದೆ. ಜೇಡಗಳಲ್ಲಿ ಮಿಲನ ಕ್ರಿಯೆನಡೆದ ನಂತರ ಹಸಿದ ಹೆಣ್ಣು ಜೇಡ ಗಂಡುಜೇಡಗಳನ್ನು ತಿಂದು ಬಿಸಾಕುತ್ತದೆ. ಕಾರಣ ಗಂಡು ಜೇಡ ಮಿಲನ ಕ್ರಿಯೆನಡೆದ ಕ್ರಿಯೆ ನಡೆದ ಕೂಡಲೇ ಕಾಲ್ಕಿತ್ತು ಓಡಿ ಜೀವ ಉಳಿಸಿಕೊಳ್ಳುತ್ತದೆ.
ಜೇನು ನೊಣಗಳಲ್ಲಿ ಶೇ ೧೦ ರಷ್ಟಿರುವ ಗಂಡುಗಳಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ. ಮರಿ ಹಾಕಿಸುವ ಪ್ರಕ್ರಿಯೆ ಮುಗಿದ ನಂತರ ಬಹುತೇಕ ಗಂಡುಗಳು ಸತ್ತು ಹೋಗುತ್ತವೆ ಮತ್ತು ಇರುವ ಗಂಡುಗಳು ವೇಸ್ಟು ಬಾಡಿಗಳು ಮತ್ತು ದುಡಿಯಲಾರದ ಪರಾವಲಂಬಿ ಸೋಮಾರಿಗಳು. ಅವುಗಳನ್ನು ನಿರ್ದಯೆಯಿಂದ ಉಪವಾಸ ಹಾಕಿ ಹತ್ಯೆ ಮಾಡಿ ಗೂಡಿನಿಂದ ಹೊರದಬ್ಬಲಾಗುತ್ತದೆ.
ಬಹುತೇಕ ಪಕ್ಷಿಗಳು ಏಕ ಪತ್ನಿ ಅಥವಾ ಪತಿ ವೃತಸ್ಥರು. ಇವು ಜೀವಮಾನದ ತುಂಬಾ ದಂಪತಿಗಳಾಗಿಯೇ ಬದುಕುತ್ತವೆ. ಇದರಲ್ಲಿಯೂ ಮಕರೀನಿ ಪೆಂಗ್ವಿನ್ನುಗಳು ಗಂಡು ಹೆಣ್ಣು ಸೇರಿ ಖುಷಿಯಿಂದ ನೃತ್ಯ ಮಾಡುತ್ತವೆ. ಕೆಲವೊಂದು ಜಾತಿಯ ಕೊಕ್ಕರೆಗಳು ತನ್ನ ಬಾಲ ಸಂಗಾತಿಯನ್ನು ಗುರುತಿಸುವುದು ಒಂದು ರೀತಿಯ ವಿಶಿಷ್ಟ ಧ್ವನಿ ಹೊರಡಿಸುವುದರ ಮೂಲಕ. ಗೂಬೆಗಳು ಹೆಣ್ಣಿಗೆ ಸಾಯಿಸಿದ ಇಲಿ ಅಥವಾ ಹುಳ ನೀಡುವುದರ ಮೂಲಕ ಒಲಿಸಿಕೊಳ್ಳುತ್ತವೆ. ಆಸ್ಟ್ರೇಲಿಯಾದಲ್ಲಿರುವ ಕೆಲವೊಂದು ಹಲ್ಲಿಗಳು ಸುಮಾರು ೨೦ ವರ್ಷ ಜೊತೆಗೆ ಬಾಳುತ್ತವಂತೆ. ಇದಲ್ಲದೇ ರಣಹದ್ದುಗಳು, ಹಂಸಗಳು, ಗಿನಿಹಂದಿಗಳು,ಗಿಬ್ಬೊನುಗಳು, ಕೆಲ ತೋಳಗಳು ಬಹಳ ದಿನ ಗಂಡ ಹೆಂಡರಂತೆ ಸಹ ಬಾಳ್ವೆ ನಡೆಸುತ್ತವೆಯಂತೆ.
ವಿಚಿತ್ರವೆಂಬಂತೆ ಸಮುದ್ರದಲ್ಲಿರುವ ಗಂಡು ಸಮುದ್ರ ಕುದುರೆ ಮೀನುಗಳು ಕಾಂಗರುಗಳಂತೆ ಅವುಗಳ ಹೊಟ್ಟೆಯಲ್ಲಿರುವ ಸಂಚಿಯಲ್ಲಿ ಮರಿಗಳನ್ನು ಹೊತ್ತೊಯ್ಯುತ್ತವೆ ಮತ್ತು ಸಂಗಾತಿಯ ಜೊತೆ ಹರಟುವ ರೀತಿಯಲ್ಲಿ ವರ್ತಿಸುತ್ತವೆ. ಮತ್ತೊಂದು ಹೆಣ್ಣು ಮೀನು ಬಂದರೆ ಮೂಲ ಹೆಣ್ಣು ಮೀನು ಅಸೂಯೆ ಪಡುತ್ತದೆ.
ಹೆಣ್ಣು ಗಂಡುಗಳು ಪ್ರಕೃತಿಯಲ್ಲಿರುವುದೇ ಸಂತಾನ ಮುಂದುವರೆಸಲಿಕ್ಕೆ. ಆದರೆ ಇದಕ್ಕೆ ಒಂದು ಅರ್ಹತೆ ಇರಬೇಕಲ್ಲ? ಪ್ರಾಣಿಗಳಲ್ಲಿ ಅವುಗಳ ವಿಧಕ್ಕೆ ತಕ್ಕಂತೆ ಸಂಗಾತಿಯ ಆಯ್ಕೆ ದೈಹಿಕ ಬಲ, ಸಂಗಾತಿಯನ್ನು ಒಲಿಸುವ ಕಲೆ, ಮರಿಗಳನ್ನು ಸಾಕಲು ಇರುವ ಶಕ್ತಿ ಇತ್ಯಾದಿಗಳಾದರೆ ಮನುಷ್ಯನಲ್ಲಿ ಅದು ಕಾಲಕ್ಕೆ ತಕ್ಕ ಹಾಗೆ ಬದಲಾಗುತ್ತದೆ. ಬದಲಾವಣೆ ಜಗದ ನಿಯಮ. ಬದಲಾವಣೆಗೆ ಒಗ್ಗದೇ ತನಗೆ ತಕ್ಕ ಹಾಗೆ ಜಗತ್ತು ಇರಬೇಕೆನ್ನುವವರು ಜಗತ್ತಿನಲ್ಲಿ ಜಾಸ್ತಿ ದಿನ ಇರುವುದಿಲ್ಲ. ಅದು ಹೆಣ್ಣು ಗಂಡುಗಳ ವಿಷಯದಲ್ಲಿಯೂ ಸಹ ಅನ್ವಯ. ಗಂಡು ಹೆಣ್ಣನ್ನು ಒಲಿಸಲು ಅಗತ್ಯವಾದ “ಈ ಕಾಲದ ಅರ್ಹತೆ”ಯನ್ನು ಪ್ರಕೃತಿನಿಯಮದ ಪ್ರಕಾರ ಹೊಂದಬೇಕೇ ವಿನ: ಆತ್ಮಹತ್ಯೆ ಮಾಡಿಕೊಳ್ಳುವುದು, ಯಾರ್ಯಾರಿಗೋ ಅರ್ಜಿ ನೀಡುವುದು, ಸದಾ ಕೊರಗುವುದು, ಸಮಾಜವನ್ನು ನಿಂದಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ತಿಳಿದು ಕಾರ್ಯಪ್ರವೃತ್ತರಾಗುವುದು ಕಾರ್ಯಸಾಧು.
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ
ಇದನ್ನೂ ನೋಡಿ: ನಾನು ಯಾವ ಬೆದರಿಕೆಗೂ ಬಗ್ಗೋನಲ್ಲ: ಸಿಎಂ ಸಿದ್ದರಾಮಯ್ಯ CM Siddaramaiah |Janashakthi