ಭಾರತ ಕೃಷಿ ಪ್ರಧಾನವಾದ ರಾಷ್ಟ್ರ. ಇಲ್ಲಿ ಶೇ. 50 ರಷ್ಟು ಜನರು ಕೃಷಿಯನ್ನೇ ಅವಲಂಬಿಸಿ ಬದುಕುತ್ತಿದ್ದಾರೆ. ಮಾತ್ರವಲ್ಲ, ದೇಶದ ಜಿಡಿಪಿಗೆ ಕೃಷಿ ಕ್ಷೇತ್ರವು ಸರಿಸುಮಾರು ಶೇ. 15 ರಷ್ಟು ಕೊಡುಗೆ ನೀಡುತ್ತಿದೆ. ಅತ್ಯಂತ ದೊಡ್ಡ ಸಂಖ್ಯೆಯ ಉದ್ಯೋಗಾವಕಾಶಗಳನ್ನು ನೀಡುತ್ತಿರುವ ಕ್ಷೇತ್ರ ಕೃಷಿ. ಇದೆಲ್ಲದಕ್ಕೂ ಮುಖ್ಯವಾಗಿ ದೇಶದ ಆಹಾರ ಭದ್ರತೆಯನ್ನು ಕಾಪಾಡುವಲ್ಲಿ ಕೃಷಿ ಪ್ರಮುಖ ಪಾತ್ರ ವಹಿಸಿದೆ. ಇಂತಹ ಕೃಷಿ ಕ್ಷೇತ್ರ ಭಾರತದಲ್ಲಿ ಅತ್ಯಂತ ಬಿಕ್ಕಟ್ಟಿಗೆ ಒಳಗಾಗಿದೆ. ಇದರ ಪರಿಣಾಮವಾಗಿ ಇಡೀ ರೈತ ಸಮುದಾಯವು ಸಂಕಷ್ಟವನ್ನು ಎದುರಿಸುತ್ತಿದೆ. ರೈತ ಸಮುದಾಯದಲ್ಲಿನ ರೈತ ಮಹಿಳೆಯರು ಇನ್ನೂ ಹೆಚ್ಚಿನ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಇಂದಿನ ಕೃಷಿ ಕ್ಷೇತ್ರದ ಈ ಪರಿಸ್ಥಿತಿಯನ್ನು ಮಹಿಳಾ ದೃಷ್ಟಿಕೋನದಲ್ಲಿ ನೋಡುತ್ತಾ ಅರ್ಥ ಮಾಡಿಕೊಳ್ಳುವ ಪ್ರಯತ್ನ ಇಲ್ಲಿದೆ. ಕೃಷಿಯನ್ನು
– ಎಚ್.ಆರ್. ನವೀನ್ ಕುಮಾರ್
ಕೃಷಿಯ ಉತ್ಪಾದನಾ ಸಾಧನಗಳಾದ ಭೂಮಿ, ಯಂತ್ರೋಪಕರಣಗಳು, ರಾಸುಗಳು ಇಂದಿಗೂ ಪುರುಷನ ಹಿಡಿತದಲ್ಲಿಯೇ ಇವೆ. ಆದರೆ ಇತಿಹಾಸದ ಒಂದು ಸತ್ಯ ಸಂಗತಿ ಏನೆಂದರೆ, ಇಂದು ಕೃಷಿ ಕ್ಷೇತ್ರದಲ್ಲಿ ಯಾವ ಮಹಿಳೆಯರು ಅತ್ಯಂತ ಕಡೆಗಣಿಸಲ್ಪಟ್ಟಿದ್ದಾರೋ, ಅದೇ ಮಹಿಳೆಯರೇ ಆರಂಭದ ಕಾಲಘಟ್ಟದಲ್ಲಿ ಕೃಷಿಯನ್ನು ಆವಿಷ್ಕಾರ ಮಾಡಿದ್ದು ಎಂಬ ಸತ್ಯವನ್ನು ಯಾರಿಂದಲೂ ಮುಚ್ಚಿಡಲು ಸಾಧ್ಯವಿಲ್ಲ. ಮಾನವ ಸಮಾಜದ ಬೆಳವಣಿಗೆಯ ವಿವಿಧ ಹಂತಗಳನ್ನು ವೈಜ್ಞಾನಿಕವಾಗಿ ಅದ್ಯಯನ ಮಾಡಿರುವ ಕಾರ್ಲ್ಸ್ ಮಾಕ್ಸ್ ಮತ್ತು ಫೆಡ್ರಿಕ್ ಏಂಗೆಲ್ಸ್ ರವರು, ಮಾನವನ ವಿಕಾಸದ ಹಂತದಲ್ಲಿ ಆದಿಮಾನವನಿಂದ ಆರಂಭಿಸಿ, ಬಂಡವಾಳಶಾಹಿ ಸಮಾಜದವರೆಗೆ ಮಾನವ ಸಮಾಜ ಹೇಗೆ ಬೆಳೆದು ಬಂದಿದೆ ಎಂಬುದನ್ನೂ, ಈ ಸಮಾಜ ಮುಂದೆ ಸಮಾಜವಾದಿ ಸಮಾಜದ ಕಡೆಗೆ ಹೇಗೆ ಬದಲಾಗುತ್ತದೆ ಎಂಬುದನ್ನು ಆಧಾರ ಸಮೇತವಾಗಿ ಮಂಡಿಸಿದ್ದಾರೆ. ಅವರ ಈ ವಿಚಾರವನ್ನೇ ಇಂದು “ಚಾರಿತ್ರಿಕ ಭೌತವಾದ” ಎಂಬ ಹೆಸರಿನಲ್ಲಿ ಕರೆಯುತ್ತೇವೆ.
ತಾರತಮ್ಯದ ನೆಲೆಬೀಡು
ಕೃಷಿ ಕ್ಷೇತ್ರದಲ್ಲಿ ಅತಿಹೆಚ್ಚು ಕೆಲಸ ಮಾಡುವವಳು ಮಹಿಳೆ. ರೈತ ಮಹಿಳೆ ಒಂದೆಡೆ ಕುಟುಂಬವೆಂಬ ಬಿಟ್ಟಿ ಚಾಕರಿ ಮಾಡುವುದರ ಜೊತೆಗೆ, ಕೃಷಿ ಚಟುವಟಿಕೆಗಳಲ್ಲಿ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾಳೆ. ಹೊಲವನ್ನು ಹಸನು ಮಾಡುವುದು, ಬಿತ್ತುವುದು, ಕಳೆತೆಗೆಯುವುದು, ಕೊಯ್ಲು, ಸಂಸ್ಕರಣೆಯಂತಹ ಎಲ್ಲ ಕೆಲಸಗಳಲ್ಲೂ ಮಹಿಳೆಯರ ಪಾತ್ರ ದೊಡ್ಡದಿದೆ. ಆದರೂ ಈ ಸಮಾಜದಲ್ಲಿ ಮಹಿಳೆಗೆ ಮಾತ್ರ ಎರಡನೇ ದರ್ಜೆಯ ಸ್ಥಾನ. ಬೇರೆ ಕ್ಷೇತ್ರದಲ್ಲಿರುವಂತೆ ಇಲ್ಲಿಯೂ ಪುರುಷನಿಗೆ ಸಿಗುವಷ್ಟು ಕೂಲಿ ಮಹಿಳೆಗೆ ಸಿಗುವುದಿಲ್ಲ. ಕೃಷಿಯನ್ನು
ಇದನ್ನೂ ಓದಿ: ವಲಸೆ ಕಾರ್ಮಿಕನ ಮೇಲೆ ಗುಂಪು ಹಲ್ಲೆ: ತನಿಖೆಗೆ ಸಿಪಿಐಎಂ ಆಗ್ರಹ
ಉದಾಹಣೆಗೆ ಕೃಷಿ ಕೆಲಸಗಳಲ್ಲಿ ತೊಡಗುವ ಕೂಲಿಕಾರ ಪುರುಷನಿಗೆ ಒಂದು ದಿನಕ್ಕೆ 500 ರೂಪಾಯಿ ಕೂಲಿ ನೀಡಿದರೆ, ಪುರುಷರಷ್ಟೇ ಸಮಯ ಮತ್ತು ಪುರುಷರಷ್ಟೇ ಪ್ರಮಾಣದಲ್ಲಿ ಕೆಲಸ ಮಾಡಿದರೂ ಮಹಿಳಾ ಕೂಲಿಕಾರರಿಗೆ ದಿನಕ್ಕೆ 350 ರೂಪಾಯಿ ಕೂಲಿ. ಮಹಿಳೆ ಮತ್ತು ಪುರುಷನ ನಡುವಿನ ಈ ತಾರತಮ್ಯ ಕೇವಲ ಕೂಲಿಯ ವಿಚಾರದಲ್ಲಿ ಮಾತ್ರವಲ್ಲದೆ, ಎಲ್ಲಾ ಕ್ಷೇತ್ರಗಳಲ್ಲಿ ಮತ್ತು ಎಲ್ಲಾ ವಿಭಾಗಗಳಲ್ಲಿಯೂ ಇವೆ. ನಾವು ಇಂದು ಬದುಕುತ್ತಿರುವ ಪಾಳೇಗಾರಿ, ಬಂಡವಾಳಶಾಹಿ ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳಾಗಲಿ, ಸಮಾನ ಸ್ಥಾನಮಾನಗಳಾಗಲಿ ಇಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಆಕೆಯನ್ನು ಪುರುಷನಿಗಿಂತ ಕೀಳಾಗಿ ನಡೆಸಿಕೊಳ್ಳುವ ವ್ಯವಸ್ಥಿತ ಪಿತೂರಿಗಳನ್ನು ಹಿಂದಿನಿಂದಲೂ ಉಳಿಸಿಕೊಂಡು, ಬೆಳಸಿಕೊಂಡು ಬರಲಾಗಿದೆ. ಕೃಷಿಯನ್ನು
ಆದಿಮ ಸಮತಾವಾದಿ ಸಮಾಜ
ಮನುಷ್ಯ ವಿಕಾಸಗೊಳ್ಳುತ್ತ, ಪ್ರಾಣಿಗಳ ರೂಪದಿಂದ ರೂಪಾಂತರಗೊಂಡು ಮನುಷ್ಯನ ಹಂತಕ್ಕೆ ಬೆಳವಣಿಗೆಯಾದ ಕಾಲಘಟ್ಟವನ್ನು (ಮಂಗನಿಂದ ಮಾನವ) “ಆದಿಮ ಸಮತಾವಾದಿ ಸಮಾಜ” ಎಂದು ಕರೆಯಲಾಗುತ್ತದೆ. ಈ ಆದಿಮ ಸಮತಾವಾದಿ ಸಮಾಜದಲ್ಲಿ ಮನುಷ್ಯ ಆಗತಾನೆ ನಾಲ್ಕು ಕಾಲುಗಳ ಬದಲಿಗೆ ಎರಡು ಕಾಲುಗಳಲ್ಲಿ ನಡೆಯುವುದನ್ನು, ಬೆನ್ನುಮೂಳೆಯನ್ನು ನೆಟ್ಟಗೆ ಮಾಡಿ ನಿಲ್ಲುವುದನ್ನು, ತನ್ನ ಕೈಗಳನ್ನು ಕಾಲುಗಳಿಗಿಂತ ವಿಭಿನ್ನವಾಗಿ ಬಳಕೆ ಮಾಡುವುದನ್ನು ಆರಂಭಿಸಿದ. ಆ ಸಂದರ್ಭದಲ್ಲಿ ಕ್ರಮೇಣ ಮನುಷ್ಯನ ಮೆದುಳು ಬೆಳವಣಿಗೆಯಾಗಲು ಆರಂಭಿಸಿತು. ಕೃಷಿಯನ್ನು
ಅಲೆಮಾರಿಗಳಾಗಿ ವಾಸಿಸುತ್ತಿದ್ದ ಆದಿ ಮಾನವ, ಆಹಾರಕ್ಕಾಗಿ ಕಾಡುಗಳಲ್ಲಿ ಸಿಕ್ಕ ಹಣ್ಣು ಹಂಪಲುಗಳನ್ನು ತಿನ್ನುತ್ತಾ, ಪ್ರಾಣಿಗಳನ್ನು ಭೇಟೆಯಾಡುತ್ತಾ, ಸಿಕ್ಕಿದ್ದನ್ನೆಲ್ಲಾ ಸಮಾನವಾಗಿ ಎಲ್ಲರೂ ಹಂಚಿ ತಿನ್ನುವ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದ. ಅವರು ಒಟ್ಟಿಗೆ ಬದುಕುತ್ತಿದ್ದರು, ಈ ಹಂತದಲ್ಲಿ ಖಾಸಗಿ ಆಸ್ತಿಯ ಪರಿಕಲ್ಪನೆಯಾಗಲಿ, ಜಾತಿ ಧರ್ಮಗಳ ಪರಿಕಲ್ಪನೆಯಾಗಲಿ, ಕುಟುಂಬದ ಪರಿಕಲ್ಪನೆಯಾಗಲಿ ಇರಲ್ಲಿಲ್ಲ. ಎಲ್ಲವೂ ಅತ್ಯಂತ ಸ್ವಚ್ಚಂದವಾಗಿ ಮತ್ತು ಮುಕ್ತವಾಗಿ ನಡೆಯುತ್ತಿದ್ದವು. ಕೃಷಿಯನ್ನು
ಅಲೆಮಾರಿಗಳಾಗಿದ್ದವರು ಒಂದು ಕಡೆ ನೆಲೆಯೂರಲು ಆರಂಭಿಸಿದರು
ಇಂತಹ ಸಂದರ್ಭದಲ್ಲಿ ಪ್ರಾಕೃತಿಕವಾಗಿ ಪುರುಷನಿಗಿಂತ ತನ್ನ ದೈಹಿಕ ಸಂರಚನೆಯಲ್ಲಿ ವಿಭಿನ್ನವಾಗಿದ್ದ ಮಹಿಳೆಯರಿಗೆ ಮಕ್ಕಳನ್ನು ಹೆರುವ ಒಂದು ವಿಶೇಷತೆ ಇತ್ತು. ಆಹಾರವನ್ನು ಅರಸುತ್ತಾ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುವ ಸಂದರ್ಭದಲ್ಲಿ ಗರ್ಭಿಣಿ ಸ್ತ್ರೀಯರನ್ನು, ಮಕ್ಕಳಿಗೆ ಜನ್ಮನೀಡಿದ ಬಾಣಂತಿಯರನ್ನು ಮತ್ತು ಆ ಎಳೆಯ ಕಂದಮ್ಮಗಳನ್ನು ಜೊತೆಯಲ್ಲಿ ಕರೆದುಕೊಂಡು ಭೇಟೆಗೆ ಹೋಗುವುದು ಕಷ್ಟಸಾಧ್ಯ. ಇಂತಹ ಸಂದರ್ಭದಲ್ಲಿ ಕಾಡು ಪ್ರಾಣಿಗಳ ದಾಳಿಗಳನ್ನು ಎದುರಿಸುವುದು ಕಷ್ಟ ಎಂದು ಕ್ರಮೇಣ ಅರಿತುಕೊಂಡು ಆದಿ ಮಾನವ, ಮಕ್ಕಳ ಪೋಷಣೆಗೆಂದು ಒಂದೆಡೆ ಮಹಿಳೆಯರನ್ನು ನೆಲೆ ನಿಲ್ಲಿಸಲು ಆರಂಭಿಸಿದ. ಕೃಷಿಯನ್ನು
ಕಾಡುಗಳಲ್ಲಿ ಗುಹೆಗಳಲ್ಲಿ, ಮರದ ಪೊಟರೆಗಳಲ್ಲಿ ಮಹಿಳೆಯರನ್ನು, ಎಳೆಯ ಮಕ್ಕಳನ್ನು ಒಂದೆಡೆ ಇರಿಸಿ, ಉಳಿದವರೆಲ್ಲಾ ಆಹಾರ ಅರಸುತ್ತಾ ಭೇಟೆ ಮಾಡುತ್ತಾ ಹೋಗುತ್ತಿದ್ದರು. ಮತ್ತೆ ಮಹಿಳೆಯರಿರುವ ಸ್ಥಳಗಳಿಗೆ ಹಿಂತಿರುಗಿ ಬರುತ್ತಿದ್ದರು. ಅಲೆಮಾರಿಗಳಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುತ್ತಾಡುತ್ತಿದ್ದ ಮನುಷ್ಯ ಈ ಹಿನ್ನೆಲೆಯಲ್ಲಿ ಒಂದು ಕಡೆ ನೆಲೆಯೂರಲು ಆರಂಭಿಸಿದ. ಕೃಷಿಯನ್ನು
ಕೃಷಿಯನ್ನು ಕಂಡುಕೊಂಡ ಕಾಲಘಟ್ಟ
ಈ ಪ್ರಕ್ರಿಯೆಯಲ್ಲಿ ಕಾಡುಗಳಲ್ಲಿ ಹುಡುಕಿಕೊಂಡು ತರುತ್ತಿದ್ದ ಹಣ್ಣುಗಳಲ್ಲಿ ಸಿಗುವ ಬೀಜದಂತಹ ಗಟ್ಟಿ ಪದಾರ್ಥಗಳನ್ನು ತಿನ್ನದೆ ಬಿಸಾಡುತ್ತಿದ್ದರು. ಆ ಬೀಜಗಳು ಕ್ರಮೇಣ ಮಣ್ಣಿನಲ್ಲಿ ಬೆರೆತು, ಮೊಳಕೆಯೊಡೆದು ಗಿಡವಾಗಿ, ಆ ಗಿಡ ಎಂದೋ ಒಂದು ದಿನ ತಿಂದಿದ್ದ ಹಣ್ಣಿನ ರೀತಿಯ ತದ್ರೂಪಿ ಹಣ್ಣನ್ನು ನೀಡಿತು. ಒಂದು ಕಡೆ ನೆಲೆ ನಿಂತಿದ್ದ ಮಹಿಳೆ ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿ, ಬೀಜಗಳನ್ನು ಭೂಮಿಗೆ ಬಿತ್ತಿದರೆ ಅದರಿಂದ ಹಣ್ಣುಗಳನ್ನು ಬೆಳೆಯಬಹುದು ಎಂಬುದನ್ನು ಕಂಡುಕೊಂಡಳು.
ಇದೇ ಇಡೀ ಮಾನವ ಕುಲದ ಬೆಳವಣಿಗೆಯ ವೇಗವನ್ನು ಹೆಚ್ಚಿಸಿದ, ಮನುಷ್ಯನನ್ನು ಒಂದು ಕಡೆ ಶಾಶ್ವತವಾಗಿ ನೆಲೆ ನಿಲ್ಲುವಂತೆ ಮಾಡಿದ ಮತ್ತು ಕೃಷಿಯನ್ನು ಕಂಡುಕೊಂಡ ಕಾಲಘಟ್ಟ. ಮೂಲದಲ್ಲಿ ಕೃಷಿಯನ್ನು ಮಹಿಳೆಯೇ ಕಂಡುಹಿಡಿದಿದ್ದರೂ, ಆ ಕಾಲದಲ್ಲಿ ಮಹಿಳಾ ಪ್ರಧಾನವಾದ ಬುಡಕಟ್ಟುಗಳಿದ್ದರೂ, ನಂತರದ ಕಾಲಘಟ್ಟದಲ್ಲಿ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಯಿಂದ ಹಿಂದೆ ಸರಿಸಿದ್ದರ ಹುನ್ನಾರಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳಲು ಪ್ರಯತ್ನಿಸಿಸೋಣ.
ಎರಡನೇ ಹಂತ, ಗುಲಾಮಗಿರಿ ಸಮಾಜ
ಕಾಡುಗಳಲ್ಲಿ ಭೇಟೆಗೆಂದು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗುವ ಸಂದರ್ಭದಲ್ಲಿ, ಅಲ್ಲಿದ್ದವರು ಮತ್ತು ಮತ್ತೊಂದು ಪ್ರದೇಶದಿಂದ ಬಂದವರ ನಡುವೆ ಸಂಘರ್ಷಗಳು ಏರ್ಪಡುತ್ತಿದ್ದವು. ಇದರಲ್ಲಿ ಸಂಖ್ಯೆ ಹೆಚ್ಚಿದ್ದವರು ಮತ್ತು ದೈಹಿಕವಾಗಿ ಬಲಶಾಲಿಗಳಾಗಿದ್ದವರು ಜಯಿಸುತ್ತಿದ್ದರು. ಹಲವರು ಈ ಸಂಘರ್ಷದಲ್ಲಿ ಸಾಯುತ್ತಿದ್ದರು.
ಸೋತು ಬದುಕುಳಿದವರನ್ನು ಸೆರೆಹಿಡಿದು ಕರೆದುಕೊಂಡು ಬಂದು, ತಮ್ಮ ಗುಲಾಮರನ್ನಾಗಿ ಮಾಡಿಕೊಳ್ಳಲಾರಂಭಿಸಿದರು. ಇವರಿಂದ ಬಿಟ್ಟಿಯಾಗಿ ದುಡಿಸಿಕೊಳ್ಳುವುದು ಮಾತ್ರವಲ್ಲ, ಇವರಿಗೆ ಯಾವುದೇ ರೀತಿಯ ಸ್ವಾತಂತ್ರ‍್ಯ ಮತ್ತು ಹಕ್ಕುಗಳು ಇರಲಿಲ್ಲ. ಇವರು ತಮ್ಮ ಒಡೆಯರ ಗುಲಾಮರಾಗಿದ್ದರು. ಇದನ್ನೇ ಮಾನವ ಸಮಾಜದ ಬೆಳವಣಿಗೆಯ ಎರಡನೇ ಹಂತ ಗುಲಾಮಗಿರಿ ಸಮಾಜ ಎಂದು ಗುರುತಿಸಲಾಗುತ್ತದೆ.
ಮಹಿಳೆ ಮತ್ತು ತಾರತಮ್ಯ ವ್ಯವಸ್ಥೆ
ಗುಲಾಮಗಿರಿ ವ್ಯವಸ್ಥೆಯಲ್ಲಿ ಗುಲಾಮರನ್ನು ಹಗ್ಗ, ಸರಪಳಿಗಳಿಂದ ಬಂಧಿಸಿ ದುಡಿಸಿಕೊಳ್ಳಲಾಗುತ್ತಿತ್ತು, ಮಾತ್ರವಲ್ಲ ಅವರನ್ನು ಪ್ರಾಣಿಗಳ ರೀತಿಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇಂತಹ ಸ್ಥಿತಿಯಲ್ಲಿರುವ ಗುಲಾಮರನ್ನು ಕೇವಲ ದೈಹಿಕ ಬಂಧನದಲ್ಲೇ ಹೆಚ್ಚು ಕಾಲ ಬಂಧಿಸಿಡುವುದು ಕಷ್ಟವೆಂದು ಅರಿವಿಗೆ ಬಂದಮೇಲೆ, ಅವರನ್ನು ಮಾನಸಿಕವಾಗಿ ಧರ್ಮ, ದೇವರು ಇನ್ನಿತರೆ ಕಟ್ಟಳೆಗಳಿಂದ ಶಾಶ್ವತಮಾಗಿ ಬಂಧಿಸುವ ವ್ಯವಸ್ಥಿತ ಕೆಲಸವನ್ನು ಅಂದಿನ ಆಳುವ ವರ್ಗ ಮಾಡಿತು. ಈ ಸಂದರ್ಭದಲ್ಲೇ ಮಹಿಳೆಯರನ್ನು ಕೇವಲ ಸಂತಾನೋತ್ಪತ್ತಿಗೆ ಮತ್ತು ಮನೆ ಕೆಲಸಗಳಿಗೆ ಮಾತ್ರ ಸೀಮಿತಗೊಳಿಸಲಾಯಿತು.
ಇದು ಕ್ರಮೇಣ ಮುಂದುವರೆದು ಕೃಷಿಯನ್ನು ಕಂಡುಹಿಡಿದ ಮಹಿಳೆಗೆ ಇಂದು ಕೃಷಿಯ ಉತ್ಪಾದನಾ ಸಾಧನಗಳ ಮೇಲೆ ಯಾವ ಹಿಡಿತವೂ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರನ್ನು ಅಸಮಾನತೆಯಿಂದ ಕಾಣುವ ಮತ್ತು ಆಕೆಯ ಸ್ವಾತಂತ್ರ‍್ಯವನ್ನು ಸಂಪೂರ್ಣ ಕಡಿತಗೊಳಿಸುವ ವ್ಯವಸ್ಥೆಯು ಗುಲಾಮಿ ಸಮಾಜದ ಮುಂದಿನ ಹಂತವಾದ ಪಾಳೇಗಾರಿ ಅಥವಾ ಭೂಮಾಲಕ ಸಮಾಜದಲ್ಲಿ ವ್ಯಾಪಕವಾಗಿ ಮುಂದುವರೆಯಿತು.
ಮುಂದುವರೆದ ಮಹಿಳಾ ತಾರತಮ್ಯ
ಮಹಿಳೆಗೆ ಭೂಮಿಯ ಮೇಲಿನ ಹಕ್ಕನ್ನು ನಿರಾಕರಿಸಿ ಆಕೆಯನ್ನು ಆಸ್ತಿ ವಂಚಿತಳನ್ನಾಗಿ ಮಾಡುವ ಮೂಲಕ, ಮಹಿಳೆ ಅಸಹಾಯಕಳಂತೆ ಮತ್ತು ಮಹಿಳೆ ಶಾಶ್ವತವಾಗಿ ಪುರುಷನಿಗೆ ಅವಲಂಭಿತಳಾಗುವಂತಹ ಒಂದು ವ್ಯವಸ್ಥೆಯನ್ನು ನಿರ್ಮಾಣಮಾಡಲಾಯಿತು. (ಮನುಸ್ಮೃತಿಯ ಪ್ರಕಾರ ಮಹಿಳೆಗೆ ಯಾವುದೇ ಸ್ವತಂತ್ರ ಅಸ್ತಿತ್ವ ಇಲ್ಲ.
ಆಕೆ ಹುಟ್ಟಿನಿಂದ ತಂದೆಯ ಆಶ್ರಯದಲ್ಲಿಯೂ, ಮದುವೆಯಾದಾಗ ಗಂಡನ ಆಶ್ರಯದಲ್ಲಿಯೂ, ವೃದ್ದಾಪ್ಯದಲ್ಲಿ ಗಂಡು ಮಕ್ಕಳ ಆಶ್ರಯದಲ್ಲಿಯೂ ಬದುಕಬೇಕು.) ಇದರಿಂದಾಗಿ ಆಸ್ತಿ ಪುರುಷನ ಕೈಯಲ್ಲಿದ್ದರೆ, ಅದು ಮುಂದುವರೆದು ಗಂಡು ಮಕ್ಕಳಿಗೆ ಅದರ ಹಕ್ಕು ಮತ್ತು ವರ್ಗಾವಣೆಯಾಗುತ್ತಿತ್ತು. ಗುಲಾಮಗಿರಿ ಸಮಾಜದಿಂದ, ಆ ನಂತರದ ಸಮಾಜದಲ್ಲಿ ಮಹಿಳೆಯರಿಗೆ ಭೂಮಿಯ ಮೇಲಿನ ಹಕ್ಕನ್ನು ಸಂಪೂರ್ಣವಾಗಿ ಕಸಿದುಕೊಳ್ಳಲಾಯಿತು.
ಇಂದಿನ ಪುರುಷ ಪ್ರಧಾನ ಸಮಾಜದಲ್ಲಿ
ನಾವು ಇಂದು ಜೀವಿಸುತ್ತಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಸಂವಿಧಾನದಲ್ಲಿ ಮಹಿಳೆಗೆ ಸಮಾನ ಹಕ್ಕು ಮತ್ತು ಅವಕಾಶಗಳನ್ನು ಕಲ್ಪಿಸಿದ್ದರೂ, ವಾಸ್ತವಿಕವಾಗಿ ಜಾರಿಯಲ್ಲಿರುವ ಈ ಪಾಳೇಗಾರಿ ಬಂಡವಾಳಶಾಹಿ ಮೌಲ್ಯಗಳ ಸಮ್ಮಿಶ್ರಣದ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಗೆ ಯಾವ ಆಸ್ತಿಯ ಹಕ್ಕು ಇಲ್ಲ. ಬದಲಾಗಿ ಆಕೆ ಮಾಡುವ ಬಹುತೇಕ ಕೆಲಸಗಳು ಯಾವ ಪರಿಗಣನೆಗೂ ಸಿಗುವುದಿಲ್ಲ.
ಉದಾಹರಣೆಗೆ ಮಕ್ಕಳನ್ನು ಹೆರುವುದು, ಲಾಲನೆ, ಪೋಷಣೆ, ಕುಟುಂಬ ನಿರ್ವಹಣೆಯಂತಹ ಅತ್ಯಂತ ಮಹತ್ವದ ಕಾರ್ಯದಲ್ಲಿ ಮಹಿಳೆ ತೊಡಗಿದ್ದರೂ, ಈ ಕೆಲಸಗಳು ಸಮಾಜದಲ್ಲಿ ಗುರುತಿಸುವ ಅಥವಾ ಅದಕ್ಕಾಗಿ ಆಕೆಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನ ಕೊಡುವ ಅಥವಾ ಆಕೆಯ ಕೆಲಸಕ್ಕೆ ಸರಿಯಾಗಿ ಸಂಭಾವನೆ ಕೊಡುವ ಯಾವ ಪದ್ದತಿಯೂ ಇಲ್ಲ. ಆಕೆ ಮಾಡುವ ಈ ಎಲ್ಲಾ ಕೆಲಸಗಳೂ ಬಿಟ್ಟಿ ಚಾಕರಿಯೇ ಆಗಿದೆ.
ರೈತ ಮಹಿಳೆಯರ ಇಂದಿನ ಸ್ಥಿತಿ
ಒಂದೆಡೆ ಆಸ್ತಿಯ ಮೇಲಿನ ಯಾವ ಒಡೆತನವೂ ಇಲ್ಲದೆ, ಅದೇ ಆಸ್ತಿಯಲ್ಲಿ ಕೃಷಿ ಚಟುವಟಿಕೆ ಮಾಡಲು ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ರೈತ ಮಹಿಳೆ, ಉಳಿದ ವಿಭಾಗದ ಮಹಿಳೆಯರಿಗಿಂತ ಹೆಚ್ಚಿನ ಸಂಕಷ್ಟವನ್ನು ಅನುಭವಿಸುವಂತಾಗಿದೆ. ಕುಟುಂಬ ನಿರ್ವಹಣೆಯನ್ನೂ ಮಾಡುತ್ತಾ, ಕೃಷಿ ಕಾರ್ಯವನ್ನೂ ನಿಭಾಯಿಸುವ ಎರಡು ಹೊಣೆಗಾರಿಕೆಯನ್ನು ರೈತ ಮಹಿಳೆ ಹೊತ್ತಿದ್ದಾಳೆ. ಕೃಷಿ ಕೇತ್ರದಲ್ಲಿ ಯಾವುದೇ ಬದಲಾವಣೆಗಳಾದರೂ, ಅದು ಮೊದಲು ರೈತ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಕೃಷಿ ಕ್ಷೇತ್ರದ ಮೇಲೆ ಕೇಂದ್ರ ಸರ್ಕಾರದ ನಿರಂತರ ಅನುಧಾನ ಕಡಿತ, ಅದರಿಂದಾಗಿ ಸಬ್ಸಿಡಿ ಕಡಿತವಾಗಿ ಕೃಷಿ ಉತ್ಪಾದನಾ ವೆಚ್ಚ ಹೆಚ್ಚಳವಾಗುತ್ತಿದೆ.
ಈ ವೆಚ್ಚಕ್ಕೆ ತಕ್ಕಂತೆ ಬೆಳೆ ನ್ಯಾಯಯುತ ಬೆಲೆಗೆ ಮಾರಾಟವಾಗದಿರುವಾಗ, ಮಾಡಿದ ಸಾಲವನ್ನು ತೀರಿಸಲಾಗದೆ ರೈತ ಸಂಕಷ್ಟಕ್ಕೆ ಒಳಗಾಗುತ್ತಿದ್ದಾನೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸುಲಭವಾಗಿ ಕೃಷಿ ಸಾಲಗಳು ಸಿಗದಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿನ ಮಹಿಳೆಯರು ಮಹಿಳಾ ಸ್ವಸಹಾಯ ಗುಂಪುಗಳ ಮೂಲಕ ಸಿಗುವ ಸಾಲ ತೆಗೆದುಕೊಂಡು, ಆ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾದ ಪ್ರಕರಣಗಳೂ ಇತ್ತೀಚೆಗೆ ವರದಿಯಾಗಿವೆ. ಇಂತಹ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಪ್ರತಿದಿನ ಮಹಿಳೆಯರಿಗೆ ಸಾಲ ವಸೂಲಾತಿಯ ಹೆಸರಿನಲ್ಲಿ ಮಾನಸಿಕ ಹಿಂಸೆ ಮತ್ತು ಕಿರುಕುಳ ನೀಡುತ್ತಿವೆ.
ಈ ಸಮಾಜ ಎಷ್ಟು ಸಂವೇದನಾ ರಹಿತವಾಗಿದೆಯೆಂದರೆ, ರೈತ ಮಹಿಳೆಯರ ಆತ್ಮಹತ್ಯೆಗಳನ್ನು ರೈತರ ಆತ್ಮಹತ್ಯೆ ಎಂದು ಪರಿಗಣಿಸದ ಸ್ಥಿತಿಗೆ ತಲುಪಿದೆ. ಗ್ರಾಮೀಣ ಪ್ರದೇಶದಲ್ಲಿರುವ ಒಂಟಿ ಮಹಿಳೆಯರು, ಪರಿತ್ಯಕ್ತ ಮಹಿಳೆಯರು, ದಲಿತ ಮಹಿಳೆಯರು ಇನ್ನಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ.
ಒಟ್ಟಾರೆಯಾಗಿ ಕೃಷಿಯ ಹುಟ್ಟಿಗೆ ಮೂಲ ಕಾರಣವಾದ ಮಹಿಳೆಯರನ್ನು ಇಂದು ಕೃಷಿಯ ಒಡೆತನದಿಂದ ದೂರವಿಡಲಾಗಿದೆ. ಮತ್ತೆ ಕೃಷಿಯ ಮೇಲಿನ ಒಡೆತನ ಪುರುಷನಷ್ಟೇ ಸಮಾನವಾಗಿ ಮಹಿಳೆಗೂ ಸಿಕ್ಕಾಗ ಭಾರತದ ಕೃಷಿಯೂ ಬದಲಾಗುತ್ತದೆ. ಮತ್ತು ಮಹಿಳೆಯರ ಸ್ಥಿತಿಗತಿಗಳೂ ಸುಧಾರಿಸುತ್ತವೆ. ಈ ಹಿನ್ನೆಲೆಯಲ್ಲಿ ಭಾರತದ ಇಂದಿನ ಕೃಷಿ ಬಿಕ್ಕಟ್ಟನ್ನು ಮಹಿಳಾ ಕಣ್ಣುಗಳ ಮೂಲಕ ನೋಡುವ ಪ್ರಯತ್ನ ಇದಾಗಿದೆ.
ಕೊನೆಗೊಂದು ಮಾತು: ಡಾ.ಬಿ.ಆರ್. ಅಂಬೇಡ್ಕರ್ ರವರು ಹೇಳಿದ್ದು ಹೀಗೆ “ಯಾವುದೇ ಒಂದು ಸಮಾಜದ ಪ್ರಗತಿಯನ್ನು ಆ ಸಮಾಜದ ಮಹಿಳೆಯರು ಎಷ್ಟು ಸ್ವತಂತ್ರರಾಗಿದ್ದಾರೆಂದು ನೋಡಿ ಅಳೆಯಬಹುದು”. ಈ ಹಿನ್ನೆಲೆಯಲ್ಲಿ ಇಂದಿನ ಭಾರತದ ಸಮಾಜವನ್ನು ವಿಶ್ಲೇಷಿಸಿದರೆ ನಮಗೆ ವಾಸ್ತವದ ಅರಿವಾಗುತ್ತದೆ.
ಇದನ್ನೂ ಓದಿ: ಸಿಲಿಂಡರ್ ಗೆ ಮಾಲಾರ್ಪಣೆ ಮಾಡಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಆಕ್ರೋಶ Janashakthi Media