ನಾಜಿ ಸೋಲಿನ ಬಗ್ಗೆ ಸತ್ಯವನ್ನು ಅಳಿಸಿ ಹಾಕುವ ಪಾಶ್ಚಿಮಾತ್ಯ ಪ್ರಯತ್ನ ತಾರಕಕ್ಕೆ ಏರಿದೆ

ನಾಜಿ ಜರ್ಮನಿಯ ಸೋಲಿನ 80ನೇ ವಾರ್ಷಿಕೋತ್ಸವದ ಮಾಸ್ಕೋ ಸಂಭ್ರಮಾಚರಣೆಯನ್ನು ಪಾಶ್ಚಾತ್ಯ ಶಕ್ತಿಗಳು ಬಹಿಷ್ಕರಿಸಿರುವುದನ್ನು ಪುಟಿನ್ ಅವರ ಉಕ್ರೇನ್ ಯುದ್ಧಕ್ಕೆ ವಿರೋಧದ ಪರಿಭಾಷೆಯಲ್ಲಿ ವ್ಯಕ್ತಪಡಿಸಲಾಗಿದೆ. ನಿಜ, ಪುಟಿನ್‌ಈ ವಾರ್ಷಿಕೋತ್ಸವದ ಸಂಭ್ರಮಾಚರಣೆಯನ್ನು ರೂಪಿಸಿದ್ದು, ಸೋವಿಯತ್ ಒಕ್ಕೂಟದ ಗತ ವೈಭವಗಳ ಒಂದು ಪಾಲನ್ನು ಬಾಚಿಕೊಳ್ಳುವ ಉದ್ದೇಶದಿಂದ ಎಂಬುದುಬೇರೆಮಾತು.ಆದರೂ ಪಾಶ್ಚಾತ್ಯ ಶಕ್ತಿಗಳ ಬಹಿಷ್ಕಾರದಲ್ಲಿ ಅಚ್ಚರಿಯೇನಿಲ್ಲ. ಏಕೆಂದರೆ, ನಾಜಿ ಜರ್ಮನಿಯನ್ನು ಅಂತಿಮವಾಗಿ ಸೋಲಿಸಿದ್ದು ಸೋವಿಯತ್ ಒಕ್ಕೂಟವೇ ಆಗಿದ್ದರೂ, ಅದನ್ನು ಅಂದಿನಿಂದಲೇ ಮರೆಮಾಚಲು ಪ್ರಯತ್ನಿಸಿದ್ದು ಅವರು ಆರಂಭಿಸಿದ ಶೀತಲ ಸಮರದ ಉದ್ದೇಶಕ್ಕೆ ಅನುಗುಣವಾಗಿಯೇ ಇತ್ತು. ಈಗ ಬಹುತೇಕ ಪಾಶ್ಚಿಮಾತ್ಯ ಸರ್ಕಾರಗಳು ಒಂದೋ ಸ್ವತಃ ಫ್ಯಾಸಿಸ್ಟ್ ಆಗಿವೆ ಅಥವಾ ಹೊಸದಾಗಿ ಹೊರಹೊಮ್ಮುತ್ತಿರುವ ಫ್ಯಾಸಿಸ್ಟ್ ಪಕ್ಷಗಳೊಂದಿಗೆ ವ್ಯವಹಾರ ಕುದುರಿಸುವ ಹವಣಿಕೆಯಲ್ಲಿವೆ. ಆದ್ದರಿಂದ ಸತ್ಯವನ್ನು ಅಳಿಸಿ ಹಾಕುವ ಪ್ರಯತ್ನ ಟ್ರಂಪ್‌ಶೈಲಿಯಲ್ಲಿ ತಾರಕಕ್ಕೆ ಏರಿದೆ.

-ಪ್ರೊ. ಪ್ರಭಾತ್ ಪಟ್ನಾಯಕ್

-ಅನು: ಕೆ.ಎಂ.ನಾಗರಾಜ್

ನಾಜಿ ಜರ್ಮನಿಯನ್ನು ಅಂತಿಮವಾಗಿ ಸೋಲಿಸಿದ್ದು ಸೋವಿಯತ್ ಒಕ್ಕೂಟವೇ. ಆ ಯುದ್ಧದಲ್ಲಿ ತಮ್ಮ ದೇಶದ ರಕ್ಷಣೆಗಾಗಿ ಸೋವಿಯತ್ ಜನತೆ ಮಾಡಿದ ತ್ಯಾಗ ಬಲಿದಾನಗಳನ್ನು ಸಮಗ್ರವಾಗಿ ಊಹಿಸಿಕೊಳ್ಳುವುದೂ ಕಷ್ಟವೇ. ಆದರೂ, ಈ ತ್ಯಾಗ ಬಲಿದಾನಗಳ ಸತ್ಯವನ್ನು ಅಳಿಸಿಹಾಕುವ ಪ್ರಯತ್ನವನ್ನು ಪಾಶ್ಚ್ಯಾತ್ಯ ಶಕ್ತಿಗಳು ಆರಂಭದಿಂದಲೂ ಮಾಡಿವೆ ಮತ್ತು ತಮ್ಮ ಸಾಹಸ-ಪರಾಕ್ರಮಗಳಿಂದ ನಾಜಿ ಜರ್ಮನಿಯನ್ನು ಸೋಲಿಸಿದ್ದು ತಾವೇ ಎಂದು ಅವುಹೇಳಿಕೊಳ್ಳುತ್ತವೆ ಮತ್ತು ಇಂಥಹ ಒಂದು ನಿರೂಪಣೆಯನ್ನು ಆರಂಭದಲ್ಲಿ ಸದ್ದಿಲ್ಲದೆ ಪ್ರಯತ್ನಿಸಲಾಗಿತ್ತು. ಈ ಯುದ್ಧವನ್ನು ಕಣ್ಣಾರೆ ಕಂಡ ಮತ್ತು ಅದು ಹೇಗೆ ಮುಂದುವರೆಯಿತು ಎಂಬುದನ್ನು ಅರಿತಿದ್ದ ಪಾಶ್ಚ್ಯಾತ್ಯ ಬುದ್ಧಿಜೀವಿಗಳ ಮಾತಿರಲಿ, ಜನ ಸಾಮಾನ್ಯರೂ ಸಹ ಇವನ್ನು ಕಿವಿಗೆ ಹಾಕಿಕೊಳ್ಳಲಿಲ್ಲ.

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸೆಮಿನಾರ್‌ಗಳಲ್ಲಿ ಸೋವಿಯತ್ ಒಕ್ಕೂಟವನ್ನು ಯಾರಾದರೂ ಅತಿಯಾಗಿ ಟೀಕಿಸಿದ ಸಂದರ್ಭಗಳಲ್ಲಿ, ಪ್ರಖ್ಯಾತ ಕೀನ್ಸ್ ವಾದಿ ಎಡಪಂಥೀಯ ಅರ್ಥಶಾಸ್ತ್ರಜ್ಞೆ ಪ್ರೊಫೆಸರ್ ಜೋನ್ ರಾಬಿನ್ಸನ್, “ಸೋವಿಯತ್ ಒಕ್ಕೂಟ ಇಲ್ಲದೆ ಹೋಗಿದ್ದರೆ ನಾವು ಇಂದು ಇಲ್ಲಿ ಹೀಗೆ ಕುಳಿತುಕೊಳ್ಳುತ್ತಿರಲಿಲ್ಲ ಎಂಬುದನ್ನು ಮರೆಯಬೇಡಿ” ಎಂದು ಹೇಳಿದ್ದ ಮಾತುಗಳನ್ನು ನಾನು ವೈಯಕ್ತಿಕವಾಗಿ ಜ್ಞಾಪಿಸಿಕೊಳ್ಳುತ್ತೇನೆ. ಅವರು ಪ್ರಖ್ಯಾತ ಬ್ರಿಟಿಷ್ ಜನರಲ್ (ಫ್ರೆಡ್ರಿಕ್ ಮಾರಿಸ್)ರ ಪುತ್ರಿ ಮತ್ತು ಯಾವ ರೀತಿಯಲ್ಲಿ ನೋಡಿದರೂ ಅವರೇನೂ ಕಮ್ಯುನಿಸಂ ಪರವಾಗಿ ಇದ್ದವರಲ್ಲ.

ಇದನ್ನೂ ಓದಿ: ಐಪಿಎಲ್ 2025: ಪ್ಲೇಆಫ್‌ಗಳಲ್ಲಿ ಟಾಪ್-2 ಸ್ಥಾನಕ್ಕಾಗಿ ಆರ್‌ಸಿಬಿಗೆ ಅರ್ಹತೆ ಸಿಗುತ್ತಾ?

ಆದರೆ, ಇದು ಸೋವಿಯತ್ ಒಕ್ಕೂಟದ ಬಗ್ಗೆ ಅವರ ಗ್ರಹಿಕೆಯಾಗಿತ್ತು. ಇದೇ ರೀತಿಯ ಗ್ರಹಿಕೆಯನ್ನು ಪಾಶ್ಚಾತ್ಯ ಅಕೆಡೆಮಿಕ್‌ಗಳು ಯುದ್ಧಾನಂತರ ಸುದೀರ್ಘವಾಗಿ ಹೊಂದಿದ್ದರು. ಆದಾಗ್ಯೂ, ಈ ಸತ್ಯವನ್ನು ಅಳಿಸಿಹಾಕುವ ಪ್ರಯತ್ನವು ಕಾಲಕ್ರಮದಲ್ಲಿ ಒಂದು ವೇಗವನ್ನು ಪಡೆಯಿತು. ಯುದ್ಧವನ್ನು ಕಣ್ಣಾರೆ ಕಂಡಿರದ ಅಥವಾ ಅದರ ಬಗ್ಗೆ ಹೆಚ್ಚು ತಿಳಿದಿಲ್ಲದ ಹೊಸ ಹೊಸ ತಲೆಮಾರುಗಳ ಮಧ್ಯೆ ನಾಜಿ ಸೋಲಿನ ಸತ್ಯವನ್ನು ಅಳಿಸಿಹಾಕುವ ಈ ಪ್ರಯತ್ನವು ಒಂದು ರೀತಿಯ ಬಲ ಪಡೆಯಿತು ಮತ್ತು ಯಶಸ್ವಿಯಾಯಿತು ಕೂಡಾ.

ಸತ್ಯವನ್ನು ಅಳಿಸಿಹಾಕುವ ಈ ಪ್ರಯತ್ನದಲ್ಲಿ ಹಾಲಿವುಡ್ ಸಿನೆಮಾಗಳೂ ಸಹ, ಬಹುಶಃ ತಮಗರಿವಿಲ್ಲದೇ, ಪಾತ್ರವಹಿಸಿವೆ. ದಿ ಲಾಂಗೆಸ್ಟ್ ಡೇ ಮತ್ತು ದಿ ಗನ್ಸ್ ಆಫ್ ನವರೋನ್ ಅಂತಹ ಚಲನಚಿತ್ರಗಳಿಂದ ಹಿಡಿದು ಸೇವಿಂಗ್ ಪ್ರೈವೇಟ್ ರಯಾನ್ನಂತಹ ಹಲವಾರು ಪ್ರಭಾವಶಾಲಿ ಮತ್ತು ಪರಿಣಾಮಕಾರಿ ಚಲನಚಿತ್ರಗಳನ್ನು ಹಾಲಿವುಡ್ ನಿರ್ಮಿಸಿತು. ಮೂಲತಃ ಪಾಶ್ಚ್ಯಾತ್ಯ ಶಕ್ತಿಗಳು ಮಾತ್ರ ನಾಜಿಗಳ ವಿರುದ್ಧ ಶೌರ್ಯದಿಂದ ಹೋರಾಡಿ ಅವರನ್ನು ಸೋಲಿಸಿದವು ಎಂಬುದನ್ನು ಈ ಚಲನಚಿತ್ರಗಳು ತೋರಿಸಿದವು. ಈ ಚಲನಚಿತ್ರಗಳನ್ನು ಪಾಶ್ಚಾತ್ಯ ಪ್ರೇಕ್ಷಕರಿಗಾಗಿಯೇ ನಿರ್ಮಿಸಲಾಗಿತ್ತು ಎಂಬುದನ್ನು ಅವುಗಳ ಮೂಲ ಕಥಾಹಂದರವೇ ವಿವರಿಸುತ್ತದೆ. ಹಾಗಾಗಿ, ಎರಡನೆಯ ಮಹಾಯುದ್ಧವು ಪ್ರಧಾನವಾಗಿ ಒಂದೆಡೆಯಲ್ಲಿ ಪಾಶ್ಚಾತ್ಯ ಶಕ್ತಿಗಳು ಮತ್ತು ಮತ್ತೊಂದೆಡೆಯಲ್ಲಿ ನಾಜಿಗಳು ಮತ್ತು ಅವರ ಮಿತ್ರ-ದೇಶಗಳ ನಡುವೆ ನಡೆಯಿತು ಮತ್ತು ನಾಜಿಗಳನ್ನು ಸೋಲಿಸುವಲ್ಲಿ ಪಾಶ್ಚಾತ್ಯ ಶಕ್ತಿಗಳು ನಿರ್ಣಾಯಕವಾಗಿ ಪಾತ್ರವಹಿಸಿದವು ಎಂಬ ನಿರೂಪಣೆಯ ಯಶಸ್ಸಿಗೆ ಅವು ಒಂದು ಬಹು ದೊಡ್ಡ ಕೊಡುಗೆಯನ್ನು ನೀಡಿವೆ ಎಂಬುದರಲ್ಲಿ ಅನುಮಾನವಿಲ್ಲ.

ಸಾರ್ವಜನಿಕ ವಿಸ್ಮೃತಿ

ಸೈನಿಕರು ಮತ್ತು ನಾಗರಿಕರೂ ಸೇರಿದಂತೆ ಈ ಯುದ್ಧದಲ್ಲಿ ಮಡಿದ ಸೋವಿಯತ್ ಒಕ್ಕೂಟದ 2.7ಕೋಟಿಜನರಿಗೆ ಹೋಲಿಸಿದರೆ, 5 ಲಕ್ಷಕ್ಕಿಂತಲೂ ಕಡಿಮೆ ಸಂಖ್ಯೆಯ ಜನರನ್ನು ಇಂಗ್ಲೆಂಡ್ ಕಳೆದುಕೊಂಡಿತು ಮತ್ತು ಅಮೆರಿಕವು ಕಳೆದುಕೊಂಡ ಜನರಸಂಖ್ಯೆ ಇನ್ನೂ ಕಡಿಮೆ ಎಂಬ ಅಂಶವು ಪಾಶ್ಚ್ಯಾತ್ಯ ದೇಶಗಳ ಸಾರ್ವಜನಿಕರ ನೆನಪಿನಿಂದ ಕ್ರಮೇಣ ಹಿನ್ನೆಲೆಗೆ ಸರಿಯಿತು. ಖಚಿತವಾಗಿ ಹೇಳುವುದಾದರೆ, ಸಾವಿನ ಸಂಖ್ಯೆಯನ್ನು ಹೋಲಿಸುವುದು ಒಂದು ಹೊಟ್ಟೆ ಉರಿಸಬಲ್ಲ ಸಂಗತಿ, ಏಕೆಂದರೆ ಮಡಿದವರ ಸಂಖ್ಯೆ ಎಷ್ಟೇ ಸಣ್ಣದಿರಲಿ, ಯುದ್ಧದಲ್ಲಿ ಮಡಿದ ಎಲ್ಲರನ್ನೂ ಗೌರವಿಸಲೇಬೇಕು. ಆದರೆ, ನಾವಿಲ್ಲಿ ಚರ್ಚಿಸುತ್ತಿರುವುದು, ಸೋವಿಯತ್ ಜನರು ಮಾಡಿದ ತ್ಯಾಗ-ಬಲಿದಾನಗಳ ಅಗಾಧತೆಯ ಬಗ್ಗೆ ಪಾಶ್ಚಾತ್ಯ ದೇಶಗಳ ಸಾರ್ವಜನಿಕ ವಿಸ್ಮೃತಿ ಹೆಚ್ಚುತ್ತಾ ಹೋಯಿತು ಎಂಬುದನ್ನು.

ಸತ್ಯವನ್ನು ಅಳಿಸಿಹಾಕುವ ಈ ಪ್ರಯತ್ನವು ಪಾಶ್ಚ್ಯಾತ್ಯ ದೇಶಗಳ ಶೀತಲ ಸಮರದ ಉದ್ದೇಶಕ್ಕೆ ಹೊಂದಿಕೆಯಾಯಿತು. ಫ್ಯಾಸಿಸಂಅನ್ನು ಸೋಲಿಸುವಲ್ಲಿ ಸೋವಿಯತ್ ಒಕ್ಕೂಟವು ವಹಿಸಿದ ಪಾತ್ರವನ್ನು ಅಳಿಸಿಹಾಕುವುದರ ಜೊತೆಗೆ, ಈ ಪಾಶ್ಚಾತ್ಯ ಶಕ್ತಿಗಳು ಮತ್ತೊಂದು ಭಯಾನಕ ಸುಳ್ಳನ್ನು – ಸೋವಿಯತ್ ಒಕ್ಕೂಟವು ಪಶ್ಚಿಮ ಯುರೋಪನ್ನು ಕಬಳಿಸುವ ಆಕ್ರಮಣಕಾರಿ ಹವಣಿಕೆಯನ್ನು ಹೊಂದಿರುವ ಒಂದು ವಿಸ್ತರಣಾವಾದಿ ಶಕ್ತಿಯಾಗಿದೆ ಎಂಬ ಸುಳ್ಳನ್ನು – ಹರಡುತ್ತಿದ್ದವು. ಆದರೆ, ಆಗಷ್ಟೇ ಕೊನೆಗೊಂಡ ಯುದ್ಧದಲ್ಲಿ 2.7ಕೋಟಿ ಜನರನ್ನು ಕಳೆದುಕೊಂಡು, ಅಪಾರ ಕಷ್ಟ-ನಷ್ಟ-ವಿನಾಶಗಳಿಗೆ ಒಳಗಾಗಿ ಏದುಸಿರು ಬಿಡುತ್ತಿರುವ ಸೋವಿಯತ್ ಒಕ್ಕೂಟವು ಯೂರೋಪಿನ ದೇಶಗಳನ್ನು ನುಂಗುವುದು ಸಂಭವವೇ ಎಂಬುದು ಅವರ ಮನಸ್ಸಿಗೆ ಹೊಳೆಯಲಿಲ್ಲ.

ಆದರೆ, ವಿನ್ಸ್ಟನ್ ಚರ್ಚಿಲ್ ಅವರಂತಹ ಕೆಲವು ಕಟ್ಟಾ-ಸಾಮ್ರಾಜ್ಯಶಾಹಿಗಳು, ಯುರೋಪಿಗೆ ಸೋವಿಯತ್ ಒಕ್ಕೂಟದಿಂದ ಅಪಾಯವಿದೆ ಎಂಬ ಕಥನವನ್ನು ಸೃಷ್ಟಿಸಿದವು ಮತ್ತು ಅದನ್ನು ಆಕ್ರಮಣಕಾರಿಯಾಗಿ ಪ್ರಚುರಪಡಿಸಿದವು. ಈ ಉದ್ದೇಶಪೂರ್ವಕ ಕಥನವನ್ನು ಯುದ್ಧಾನಂತರದ ದಿನಗಳಲ್ಲಿ ತಮ್ಮ ಆಧಿಪತ್ಯಕ್ಕೆ ಒಂದು ಗಂಭೀರ ಬೆದರಿಕೆ ಎದುರಾಗಿರುವ ಬಗ್ಗೆ ಹೆದರಿದ್ದ ಯುರೋಪಿನ ಆಳುವ ವರ್ಗಗಳನ್ನು ಬಲಪಡಿಸುವ ಸಲುವಾಗಿ ಸೃಷ್ಟಿಸಲಾಗಿತ್ತು. ಈ ಬೆದರಿಕೆಯು ಆಳುವ ವರ್ಗಗಳು ಕೆಲವು ರಿಯಾಯಿತಿಗಳಿಗೆ ಒಪ್ಪುವಂತೆ ಮಾಡಿತು. ಅವುಗಳಲ್ಲಿ ಒಂದು ರಿಯಾಯಿತಿಯು ದೇಶದೊಳಗೆ ಕಲ್ಯಾಣ ಪ್ರಭುತ್ವದ ರಚನೆಗೆ ಸಂಬಂಧಿಸಿತ್ತು. ಮತ್ತೊಂದು, ವಿದೇಶದಲ್ಲಿ ಅವರು ಹೊಂದಿದ್ದ ವಸಾಹತುಗಳಿಗೆ ಸ್ವಾತಂತ್ರ‍್ಯವನ್ನು ನೀಡುವುದಕ್ಕೆ ಸಂಬಂಧಿಸಿತ್ತು (ಶೀತಲ ಸಮರದ ಶಿಲ್ಪಿ ಚರ್ಚಿಲ್, ವಸಾಹತುಗಳ ಸ್ವಾತಂತ್ರ‍್ಯವನ್ನು ವಿರೋಧಿಸಿದ್ದರು).

ಒಂದು ವಾಸ್ತವ ಸಂಗತಿಯೆಂದರೆ, ಸೋವಿಯತ್ ಒಕ್ಕೂಟವು, ಫ್ಯಾಸಿಸಂ-ವಿರೋಧಿ ಹೋರಾಟ ಬಣಗಳು ಯಾಲ್ಟಾ ಮತ್ತು ಪಾಟ್ಸ್ಡಾಮ್ ಸಮ್ಮೇಳನಗಳಲ್ಲಿ ತಲುಪಿದ ತಿಳುವಳಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸಿತ್ತು. ಅದು ಗ್ರೀಕ್ ಕ್ರಾಂತಿಯ ಸಹಾಯಕ್ಕೆ ಹೋಗಲಿಲ್ಲ ಮತ್ತು ಗ್ರೀಕ್ ಕ್ರಾಂತಿಯ ಸೋಲಿಗೆ ಒಂದು ಕಾರಣವೂ ಆಯಿತು. ಆದರೆ, ಸಾಮ್ರಾಜ್ಯಶಾಹಿಯು ತನ್ನ ಅಸ್ತಿತ್ವಕ್ಕೆ ಎದುರಾಗಿದ್ದ ಪರಿಸ್ಥಿತಿಯಲ್ಲಿ ಬೆಂಬಲ ಪಡೆಯುವುದಕ್ಕಾಗಿ, ಸೋವಿಯತ್ ಬೆದರಿಕೆಯ ಕಥನವನ್ನು ಮುಂದುವರಿಸುವ ಬಗ್ಗೆ ಸ್ವಲ್ಪವೂ ಹಿಂದೆ ಮುಂದೆ ನೋಡಲಿಲ್ಲ.

ವಸಾಹತು ಭಾರತದ ಜನರಿಂದ, ವಿಶೇಷವಾಗಿ ಬಂಗಾಳದ ಜನರಿಂದ, ಬಲವಂತವಾಗಿ ಪಡೆದ ಬಲಿದಾನವು ಎರಡನೇ ಮಹಾಯುದ್ಧದ ಸಮಯದಲ್ಲಿ ಪಾಶ್ಚ್ಯಾತ್ಯ ದೇಶಗಳು ಮಾಡಬೇಕಾಗಿ ಬಂದ ತ್ಯಾಗ-ಬಲಿದಾನಗಳಿಗಿಂತ ಅನೇಕ ಪಟ್ಟು ಹೆಚ್ಚಿನದಾಗಿದೆ ಎಂಬುದನ್ನು ಹಲವು ಸಂದರ್ಭಗಳಲ್ಲಿ ಗುರುತಿಸಲಾಗಿಲ್ಲ. ಉದಾಹರಣೆಗೆ ಜಪಾನ್ ವಿರುದ್ಧ ಪೂರ್ವದ ರಣಾಂಗಣದಲ್ಲಿ ಬ್ರಿಟನ್ ನಡೆಸಿದ ಯುದ್ಧಕ್ಕೆ ವಸಾಹತು ಭಾರತದ ಸರ್ಕಾರವು ಬೃಹತ್ ಪ್ರಮಾಣದ ‘ವಿತ್ತೀಯ ಕೊರತೆ’ಯ ಮೂಲಕ ಗಣನೀಯ ಪ್ರಮಾಣದ ಹಣ ಒದಗಿಸಿತು. ಈ ವಿತ್ತೀಯ ಕೊರತೆಯ ಬಹು ಪಾಲು ಹಣವನ್ನು ವಸಾಹತುಶಾಹಿ ಸರ್ಕಾರದ ಯುದ್ಧ ವೆಚ್ಚಗಳಿಗಾಗಿ ಒದಗಿಸಲಾಗಿತ್ತು. ಏಕೆಂದರೆ, ಯುದ್ಧದಲ್ಲಿ ಭಾಗವಹಿಸುವ ಸಂಬಂಧವಾಗಿ ಭಾರತದ ಜನತೆಯೊಂದಿಗೆ ಯಾವ ಸಮಾಲೋಚನೆಯನ್ನೂ ಮಾಡದೆ ಭಾರತವನ್ನು ಯುದ್ಧಕ್ಕೆ ಎಳೆಯಲಾಯಿತು. ಅದೇನೇ ಇರಲಿ, ಹಣ ಮುದ್ರಿಸುವ ರೂಪದ ಈ ವಿತ್ತೀಯ ಕೊರತೆಯು, ಪೂರ್ವದ ರಣಾಂಗಣದಲ್ಲಿ ಮಿತ್ರದೇಶಗಳ ಯುದ್ಧ ವೆಚ್ಚಕ್ಕಾಗಿ ಬ್ರಿಟಿಷ್ ಸರ್ಕಾರವು ಭಾರತದಿಂದ ತೆಗೆದುಕೊಂಡ ಬಲವಂತದ ಸಾಲವಾಗಿತ್ತು.

ಬ್ರಿಟನ್ ಪಡೆದ ಈ ಸಾಲಗಳನ್ನು “ಸ್ಟರ್ಲಿಂಗ್ ಬ್ಯಾಲೆನ್ಸ್” ಎಂದು ಕರೆದು ಅವುಗಳನ್ನು ಬ್ರಿಟನ್ ವಿರುದ್ಧ ಭಾರತದ ದಾವೆಗಳಾಗಿ ದಾಖಲಿಸಲಾಗಿತ್ತು. ಮುದ್ರಿಸಿದ ಈ ಹಣವನ್ನು ಮೀಸಲು (ವಿದೇಶಿ ವಿನಿಮಯ) ಎಂದೇ ಪರಿಗಣಿಸಲಾಗಿತ್ತು. ಆದರೆ, ಯುದ್ಧ ಮುಗಿದ ಬಹಳ ಕಾಲದ ನಂತರವೂ ಈ ‘ಮೀಸಲು’ಗಳ ಒಂದಿಷ್ಟು ಭಾಗವನ್ನಾದರೂ ವಾಸ್ತವವಾಗಿ ಪಡೆಯಲಾಗಲಿಲ್ಲ. ಈ ರೀತಿಯ ವಿತ್ತೀಯ ಕೊರತೆಯು ಆಹಾರ ಧಾನ್ಯಗಳ ಬೆಲೆಗಳ ತೀವ್ರ ಏರಿಕೆಗೆ ಕಾರಣವಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಆಹಾರ ವಿತರಣೆಯ ಯಾವುದೇ ಪಡಿತರ ವ್ಯವಸ್ಥೆ ಇಲ್ಲದ ಕಾರಣದಿಂದ ಬಂಗಾಳದಲ್ಲಿ ಉಂಟಾದ ಕ್ಷಾಮದಿಂದ ಕನಿಷ್ಠ ಮೂವತ್ತು ಲಕ್ಷ ಜನರು ಸಾವನ್ನಪ್ಪಿದರು (ಹೋಲಿಕೆಯಲ್ಲಿ, ಮಹಾ ಯುದ್ಧದ ಇಡೀ ಅವಧಿಯಲ್ಲಿ 5ಲಕ್ಷ ಜನರು ಬ್ರಿಟನ್‌ನಲ್ಲಿ ಸಾವನ್ನಪ್ಪಿದ್ದರು).

ವಿಪರ್ಯಾಸವೆಂದರೆ ಬ್ರಿಟನ್ ಭಾರತಕ್ಕೆ ಪಾವತಿಸಬೇಕಾದ ಸಂಚಿತ “ಸ್ಟರ್ಲಿಂಗ್ ಬ್ಯಾಲೆನ್ಸ್” ಸಹ ಅದರ ಹೆಚ್ಚಿನ ಮೌಲ್ಯವನ್ನು ಕಳೆದುಕೊಂಡಿತು, ಭಾಗಶಃ ಯುದ್ಧದಿಂದ ಮತ್ತು ಯುದ್ಧಾನಂತರದ ತಕ್ಷಣದ ವರ್ಷಗಳಲ್ಲಿ ಉಂಟಾದ ಅತಿ-ಹಣದುಬ್ಬರದಿಂದಾಗಿ ಮತ್ತು ಭಾಗಶಃ 1949ರಲ್ಲಿ ಪೌಂಡ್ ಸ್ಟರ್ಲಿಂಗ್‌ನ ಅಪಮೌಲ್ಯದಿಂದಾಗಿ. ಬಂಗಾಳದಲ್ಲಿ ಮೂವತ್ತು ಲಕ್ಷ ಜನರು ಮಡಿದರು. ಯುದ್ಧದಲ್ಲಿ ಅವರು ಇಚ್ಛಾಪೂರ್ವಕವಾಗಿ ಭಾಗವಹಿಸದಿದ್ದರೂ, ಯುದ್ಧ ಸಾವುನೋವುಗಳು ಎಂಬ ಪದ ಹೊಂದಿದ ಯಾವ ಅರ್ಥದಲ್ಲಿಯೂ ಅವರ ಸಾವು ಯುದ್ಧ-ಸಂಬಂಧಿತ ಸಾವೇ ಆಗಿತ್ತು.

ಟ್ರಂಪ್ ಶೈಲಿಯ ಪರಾಕಾಷ್ಠೆ

ಫ್ಯಾಸಿಸಂ ಅನ್ನು ಸೋಲಿಸುವಲ್ಲಿ ಸೋವಿಯತ್ ಒಕ್ಕೂಟವು ವಹಿಸಿದ ಪಾತ್ರವನ್ನು ಅಳಿಸಿಹಾಕುವ ಪ್ರಯತ್ನವು, ಡೊನಾಲ್ಡ್ ಟ್ರಂಪ್ ಆಗಮನದೊಂದಿಗೆ ಅದರ ಪರಾಕಾಷ್ಠೆಯನ್ನು ತಲುಪಿದೆ. ನಾಜಿ ಜರ್ಮನಿಯ ವಿರುದ್ಧ ಹೋರಾಡುವಲ್ಲಿ ಸೋವಿಯತ್ ಒಕ್ಕೂಟವು ವಹಿಸಿದ ಪಾತ್ರವು ಪ್ರಧಾನವಾದದ್ದು ಎಂಬುದನ್ನು ಗುರುತಿಸುವ ವಿಷಯದಲ್ಲಿ ಟ್ರಂಪ್ ಮೌನವಾಗಿದ್ದಾರೆ ಮಾತ್ರವಲ್ಲ; ನಾಜಿ ಜರ್ಮನಿಯನ್ನು ಸೋಲಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದು ಅಮೆರಿಕವೇ ಎಂದು ಹೇಳಿಕೊಳ್ಳುವಷ್ಟು ನಿರ್ಲಜ್ಜರೂ ಆಗಿದ್ದಾರೆ. ಟ್ರಂಪ್ ಅವರ ಅತಿರೇಕದ ಹೇಳಿಕೆಗೆ ಅವರ ಅಜ್ಞಾನವೇ ಕಾರಣ ಎಂದು ಕೆಲವರು ಹೇಳುತ್ತಾರೆ.

ಆದರೆ, 1946ರಲ್ಲಿ ಜನಿಸಿದ ಅವರಿಗೆ, ಯುದ್ಧಾನಂತರದ ಪರಿಣಾಮಗಳ ನೇರ ಅನುಭವವನ್ನು ಹೊಂದುವಷ್ಟು ಮತ್ತು ಅದರ ಬೆಳವಣಿಗೆಯ ಹಾದಿಯ ಬಗ್ಗೆ ಸಾಕಷ್ಟು ಜ್ಞಾನವನ್ನು ಹೊಂದುವಷ್ಟು ವಯಸ್ಸಾಗಿದೆ. ಅವರ ಈ ನಿರ್ಲಜ್ಜ ಹೇಳಿಕೆಯನ್ನು ಅತ್ಯಂತ ನಾಚಿಕೆಗೇಡಿನ ಟ್ರಂಪ್ ಶೈಲಿಯಲ್ಲಿ ವ್ಯಕ್ತಪಡಿಸಲಾಗಿದೆ ಮತ್ತು ಅದು ಮಹಾ ಯುದ್ಧವು ಅಂತ್ಯಗೊಂಡ ಕಾಲದಿಂದಲೂ ಕುತಂತ್ರದ ಪ್ರಚಾರ ಮಾಡುತ್ತಿರುವ ಪಾಶ್ಚಾತ್ಯ ಸಾಮ್ರಾಜ್ಯಶಾಹಿ ಸುಳ್ಳಿನ ಅಂತಿಮ ಮಿತಿಯಾಗಿದೆ.

ನಾಜಿ ಜರ್ಮನಿಯ ಸೋಲಿನ 80ನೇ ವಾರ್ಷಿಕೋತ್ಸವದ ಮಾಸ್ಕೋ ಸಂಭ್ರಮಾಚರಣೆಯನ್ನು ಬಹಿಷ್ಕರಿಸುವ ಪಾಶ್ಚಾತ್ಯ ಶಕ್ತಿಗಳ ನಿರ್ಧಾರವನ್ನು ಪುಟಿನ್ ಅವರ ಉಕ್ರೇನ್ ಯುದ್ಧ ವಿರೋಧದ ಪರಿಭಾಷೆಯಲ್ಲಿ ವ್ಯಕ್ತಪಡಿಸಲಾಗಿದೆಯಾದರೂ, ಈ ಸಂಭ್ರಮಾಚರಣೆಯನ್ನು ಬಹಿಷ್ಕರಿಸುವ ಪಾಶ್ಚಾತ್ಯ ಶಕ್ತಿಗಳ ನಿರ್ಧಾರವು ಈಗ ಚಾಲ್ತಿ ಪಡೆದುಕೊಳ್ಳುತ್ತಿರುವ ಈ ಸುಳ್ಳಿನ ಮೇಲೆ ನಿಂತಿದೆ. ನಿಜ, ಪುಟಿನ್‌ಗೂ ಮತ್ತು ಸೋವಿಯತ್ ಒಕ್ಕೂಟಕ್ಕೂ ಸಂಬಂಧವಿಲ್ಲ. ಈ ವಾರ್ಷಿಕೋತ್ಸವದ ಸಂಭ್ರಮಾಚರಣೆಯನ್ನು, ಸೋವಿಯತ್ ಒಕ್ಕೂಟದ ಗತ ವೈಭವಗಳ ಒಂದು ಪಾಲನ್ನು ಬಾಚಿಕೊಳ್ಳುವ ಉದ್ದೇಶದಿಂದ ಪುಟಿನ್ ರೂಪಿಸಿದ್ದಾರೆ. ಆದರೆ, ಪಾಶ್ಚ್ಯಾತ್ಯ ಶಕ್ತಿಗಳು ತಮ್ಮ ಬಹಿಷ್ಕಾರವನ್ನು ಸೋವಿಯತ್ ಒಕ್ಕೂಟ ಮತ್ತು ಪುಟಿನ್ ನಡುವಿನ ವ್ಯತ್ಯಾಸವನ್ನು ತೋರಿಸುವ ಮೂಲಕ ಸಮರ್ಥಿಸಿಕೊಳ್ಳಲಿಲ್ಲ.

ಈ ಸನ್ನಿವೇಶದಲ್ಲಿ ಗಮನಾರ್ಹವಾದ ಅಂಶವೆಂದರೆ, ಚೀನಾ, ವಿಯೆಟ್ನಾಂ ಮತ್ತು ಕ್ಯೂಬಾ ಮಾತ್ರವಲ್ಲದೆ, ಬ್ರೆಜಿಲ್, ವೆನೆಜುವೆಲಾ ಮತ್ತು ಬುರ್ಕಿನಾ ಫಾಸೊ (ಅದು ಪ್ರಸ್ತುತ ಫ್ರಾಂಕೊ-ಅಮೇರಿಕನ್ ನವ-ವಸಾಹತುಶಾಹಿಯನ್ನು ಕಿತ್ತೊಗೆಯಲು ಪ್ರಯತ್ನಿಸುತ್ತಿದೆ) ಸೇರಿದಂತೆ ದಕ್ಷಿಣದ ಹೆಚ್ಚಿನ ಸಂಖ್ಯೆಯ ದೇಶಗಳು ಈ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದವು. ಭಾರತದ ಗೈರುಹಾಜರು ನಿರೀಕ್ಷಿತವೇ ಆಗಿತ್ತು. ಹೇಳಿ ಕೇಳಿ ಪ್ರಸ್ತುತ ಹಿಂದುತ್ವ ನಾಯಕರ ಪೂರ್ವಜರು ಎರಡನೇ ಮಹಾಯುದ್ಧದ ಸಮಯದಲ್ಲಿ ಮುಸೊಲಿನಿ ಮತ್ತು ಹಿಟ್ಲರ್‌ನ ಪರಮ ಅಭಿಮಾನಿಗಳಾಗಿದ್ದರು ಮತ್ತು ವಿಶ್ವದ ಬಹುಪಾಲು ಜನರ ವಿರುದ್ಧವಾಗಿದ್ದ ಶಕ್ತಿಗಳೊಂದಿಗೆ ಗುರುತಿಸಿಕೊಂಡಿದ್ದರು.

ಫ್ಯಾಸಿಸಂನ ಮರುಜನ್ಮದ ಹಿನ್ನೆಲೆಯಲ್ಲಿ

ಒಂದು ಹೆಚ್ಚುವರಿ ಅಂಶವು ಇಲ್ಲಿ ಕೆಲಸ ಮಾಡುತ್ತಿದೆ. ಎಂಟು ದಶಕಗಳ ಹಿಂದೆ ಫ್ಯಾಸಿಸಂ ವಿರುದ್ಧ ಸಾಧಿಸಿದ ವಿಜಯದ ಆಚರಣೆಯೂ ಸಹ, ವಿಶ್ವದ ಹಲವಾರು ದೇಶಗಳಲ್ಲಿ ಫ್ಯಾಸಿಸಂ ಮತ್ತೆ ಹುಟ್ಟಿಕೊಂಡಿರುವುದರಿಂದ, ಪಾಶ್ಚಾತ್ಯ ಶಕ್ತಿಗಳಿಗೆ ಒಂದು ಆದ್ಯತೆಯ ವಿಷಯವಾಗುವುದಿಲ್ಲ. ಪಶ್ಚಿಮದ ಬಹುತೇಕ ಸರ್ಕಾರಗಳು ಒಂದೋ ಸ್ವತಃ ಫ್ಯಾಸಿಸ್ಟ್ ಆಗಿವೆ ಅಥವಾ ಹೊಸದಾಗಿ ಹೊರಹೊಮ್ಮುತ್ತಿರುವ ಫ್ಯಾಸಿಸ್ಟ್ ಪಕ್ಷಗಳೊಂದಿಗೆ ವ್ಯವಹಾರ ಕುದುರಿಸುವ ಹವಣಿಕೆಯಲ್ಲಿವೆ. ಡೊನಾಲ್ಡ್ ಟ್ರಂಪ್ ಮೊದಲ ವರ್ಗಕ್ಕೆ ಸೇರಿದವರು.

ಅವರ ಸಹೋದ್ಯೋಗಿ ಮತ್ತು ಆಪ್ತಮಿತ್ರ ಇಲಾನ್ ಮಸ್ಕ್ ಜರ್ಮನಿಯ ಎಎಫ್‌ಡಿಯ (ಜರ್ಮನಿಯ ಪರ್ಯಾಯ ಎಂಬ ಪಕ್ಷದ) ಘೋಷಿತ ಬೆಂಬಲಿಗರಾಗಿದ್ದಾರೆ. ಸ್ಪಷ್ಟವಾಗಿ ಹೇಳುವುದಾದರೆ, ಎಎಫ್‌ಡಿಯು ನವ-ನಾಜಿ ಪಕ್ಷವೇ. ರಷ್ಯಾದೊಂದಿಗೆ ಯುದ್ಧದಲ್ಲಿ ತೊಡಗಿರುವ ಮತ್ತು ಸಾಮ್ರಾಜ್ಯಶಾಹಿ ಶಕ್ತಿಗಳ ಬೆಂಬಲವನ್ನು ಹೊಂದಿರುವ ಉಕ್ರೇನ್ ಆಡಳಿತವು, ಎರಡನೇ ಮಹಾಯುದ್ಧದ ಸಮಯದಲ್ಲಿ ನಾಜಿಗಳ ಕುಖ್ಯಾತ ಸಹಯೋಗಿ ಸ್ಟೆಪನ್ ಬಂಡೇರಾ ಅವರ ಅನುಯಾಯಿಗಳಿಂದ ತುಂಬಿಹೋಗಿದೆ.

ವ್ಲಾಡಿಮಿರ್ ಪುಟಿನ್, ಸೋವಿಯತ್ ಒಕ್ಕೂಟದ ಗತ ವೈಭವದ ಒಂದು ಭಾಗವನ್ನು ಬಾಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆಂದು ಒಪ್ಪಿಕೊಂಡರೂ, ವೈಭವ ಎಲ್ಲಿದೆ ಎಂಬುದನ್ನು ಅರಿತ ಪ್ರಶಂಸೆ ಅವರಿಗೆ ಸಲ್ಲುತ್ತದೆ. ಅದೇ ಮಾತನ್ನು ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿ ಶಕ್ತಿಗಳ ಬಗ್ಗೆ ಹೇಳಲಾಗದು.

ಇದನ್ನೂ ನೋಡಿ: ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ Janashakthi Media

Donate Janashakthi Media

Leave a Reply

Your email address will not be published. Required fields are marked *