ಮೋದಿ ಕೋಟೆಯಲ್ಲಿ ಬಿರುಕು

ಪ್ರೊ. ಪ್ರಭಾತ್ ಪಟ್ನಾಯಕ್

ಸಾಮಾನ್ಯವಾಗಿ, ಒಂದು ಗಂಭೀರ ಬಿಕ್ಕಟ್ಟಿನ ಅವಧಿಯಲ್ಲಿ ತನ್ನ ಪಾರಮ್ಯವನ್ನು ಕಾಪಾಡಿಕೊಳ್ಳುವ ಮಾರ್ಗವಾಗಿ ಬೂರ್ಜ್ವಾ ವರ್ಗವು ಫ್ಯಾಸಿಸ್ಟ್ ತೆರನ ಶಕ್ತಿಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆ. ಭಾರತದ ಹಿರಿಯ ಬೂರ್ಜ್ವಾವರ್ಗವು ನಿಖರವಾಗಿ ಇದೇ ಮಾರ್ಗವನ್ನು ಅನುಸರಿಸಿತು ಮತ್ತು ಕಾರ್ಪೊರೇಟ್-ಹಿಂದುತ್ವ ಮೈತ್ರಿಯನ್ನು ಅಸ್ತಿತ್ವಕ್ಕೆ ತರುವಲ್ಲಿ ಮೋದಿಯವರನ್ನು ಮಧ್ಯವರ್ತಿಯಾಗಿ ಬಳಸಿಕೊಂಡಿತು. ಮೋದಿ ಸರ್ಕಾರದ ಆರೋಹಣಕ್ಕೆ ಆಧಾರವಾಗಿದ್ದ ಈ ಇಡೀ ಏರ್ಪಾಟು ಈಗ ಸಡಿಲಗೊಳ್ಳುತ್ತಿದೆ. ಹಾಗೆಂದ ಕೂಡಲೇ ಅದರ ಅರ್ಥ ಮೋದಿ ಸರ್ಕಾರವು ಅಧಿಕಾರ ಕಳೆದುಕೊಳ್ಳಲಿದೆ ಎಂದಲ್ಲ. ಮೋದಿ ಸರ್ಕಾರವು ಅಧಿಕಾರದಲ್ಲಿ ಉಳಿಯಲು ನಿರಂಕುಶ, ಅಸಂವೈಧಾನಿಕ, ವಿಭಜಕ ಮತ್ತು ದ್ವೇಷ-ಪ್ರಚೋದಕ ಕ್ರಮಗಳನ್ನು ಅವಲಂಬಿಸಬೇಕಾಗುತ್ತದೆ ಎಂಬುದೇ ಇದರ ಅರ್ಥ.

ಮೋದಿ ಅವರು ಅಧಿಕ್ಕಾರಕ್ಕೇರಿದ ವಿದ್ಯಮಾನವು ಏಕೈಕವಾಗಿ ಹಿಂದುತ್ವದ ಬಲದಿಂದಾಗಿಯೇ ಎಂಬುದು ಉದಾರವಾದಿ ವ್ಯಾಖ್ಯಾನಕಾರರ ಅಂಬೋಣ. ಒಪ್ಪೋಣ. ಆದರೆ, ಇದ್ದಕ್ಕಿದ್ದಂತೆ ಹಿಂದುತ್ವವು ಅಷ್ಟೊಂದು ಬಲ ಪಡೆದದ್ದು ಹೇಗೆ ಎಂಬುದನ್ನು ಅವರು ವಿವರಿಸುವುದಿಲ್ಲ. ಹಿಂದುತ್ವದ ಈ ಪ್ರಾಬಲ್ಯಕ್ಕೆ ಬಾಬ್ರಿ ಮಸೀದಿಯನ್ನು ಕೆಡವಿದ ಸಾಹಸದೊಂದಿಗೆ ಸಂಬಂಧ ಕಲ್ಪಿಸುವುದಾಗಿದ್ದರೆ, ಅಧಿಕಾರ ಪಡೆಯಲು ಅದು ಕೆಡವಿದ ಘಟನೆಯ ನಂತರ ಇಪ್ಪತ್ತೆರಡು ವರ್ಷಗಳ ಕಾಲ ಕಾದಿತ್ತು ಏಕೆ ಎಂಬುದನ್ನು ಅವರು ವಿವರಿಸಬೇಕಾಗುತ್ತದೆ. ಹಾಗೆಯೇ, ಇದ್ದಕ್ಕಿದ್ದಂತೆ ಅತ್ಯಂತ ಶ್ರೀಮಂತ ರಾಜಕೀಯ ಪಕ್ಷವಾಗಿ ಬಿಜೆಪಿಯು ಹೊರಹೊಮ್ಮಿದ ವಿದ್ಯಮಾನವನ್ನು ಮತ್ತು ಭಾರತದ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬಿಜೆಪಿಯು ಅಗಾಧ ಬೆಂಬಲ ಪಡೆದದ್ದು ಮತ್ತು ಅದರ ಮೇಲೆ ಹಿಡಿತ ಸಾಧಿಸಿದ್ದು ಹೇಗೆ ಎಂಬುದನ್ನೂ ಅವರು ವಿವರಿಸಬೇಕಾಗುತ್ತದೆ.

ಆದರೆ, ವರ್ಗದ ಅಂಶವನ್ನು ಪರಿಶೀಲನೆಗೆ ತಂದಾಗ ಮಾತ್ರ ಅವುಗಳ ಬಗ್ಗೆ ತಕ್ಕ ಮಟ್ಟಿನ ವಿವರಣೆಯನ್ನು ಕೊಡಬಹುದು. ಅಂದರೆ, ಪರಿಸ್ಥಿತಿಯನ್ನು ವರ್ಗ ದೃಷ್ಟಿಯಲ್ಲಿ ವಿಶ್ಲೇಷಣೆ ಮಾಡಿದಾಗ ಮಾತ್ರ, ಈ ವಿದ್ಯಮಾನಗಳನ್ನು ಅರ್ಥೈಸುವುದು ಸಾಧ್ಯವಾಗುತ್ತದೆ ಮತ್ತು ಸುಲಭವೂ ಆಗುತ್ತದೆ. ಭಾರತದ ರಾಜಕೀಯ ರಂಗದಲ್ಲಿ ಧುತ್ತೆಂದು ಹಿಂದುತ್ವ ಶಕ್ತಿಗಳು ಪ್ರಬಲವಾಗಿ ಹೊರಹೊಮ್ಮುವಲ್ಲಿ ದೊಡ್ಡ ದೊಡ್ಡ ಬಂಡವಾಳಗಾರರ ಒಂದು ಗುಂಪು ನಿರ್ಣಾಯಕ ಪಾತ್ರ ವಹಿಸಿತು. ಈ ವಿದ್ಯಮಾನವು 1990ರ ದಶಕದ ಆರಂಭದಲ್ಲಿ ನಡೆಯಲಿಲ್ಲ. ಬದಲಿಗೆ, ನವ-ಉದಾರವಾದಿ ಬಂಡವಾಳಶಾಹಿಯ ಆರ್ಥಿಕ ಬಿಕ್ಕಟ್ಟನ್ನು ಯಾವುದೇ ಪ್ರತಿರೋಧಕ ಕ್ರಮಗಳ ಮೂಲಕ ನಿಯಂತ್ರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಈ ಶತಮಾನದ ಮೊದಲ ದಶಕದ ನಂತರ, ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದಲ್ಲಿ ಘಟಿಸಿದ ಈ ಒಂದು ವಿದ್ಯಮಾನವು ಕಾರ್ಪೊರೇಟ್-ಹಿಂದುತ್ವ ಮೈತ್ರಿ ಅಸ್ತಿತ್ವಕ್ಕೆ ಬರುವಲ್ಲಿ ಪರಿಣಮಿಸಿ, ದೇಶದಲ್ಲಿ ಒಂದು ದೊಡ್ಡ ಬದಲಾವಣೆಗೆ ಕಾರಣವಾಗಿದೆ.

ವ್ಯಂಗ್ಯಚಿತ್ರ: ಮಂಜುಲ್, ಫಸ್ಟ್ ಪೋಸ್ಟ್

ಈ ಪ್ರಕ್ರಿಯೆಯಲ್ಲಿ, ವಾಸ್ತವವಾಗಿ, ಮೋದಿ ಅವರು ವಹಿಸಿದ ಪಾತ್ರವು ಕೇಂದ್ರ ಸ್ಥಾನವನ್ನು ಪಡೆಯುತ್ತದೆ. ಒಂದು ಕಡೆ ಕಾರ್ಪೊರೇಟ್ ಬಂಡವಾಳ ಮತ್ತು ಮತ್ತೊಂದೆಡೆ ಆರ್‌ಎಸ್‌ಎಸ್ ನಡುವೆ ಮಧ್ಯಸ್ಥಿಕೆ ವಹಿಸಿದ ಮೋದಿಯವರು ಕಾರ್ಪೊರೇಟ್-ಹಿಂದುತ್ವ ಮೈತ್ರಿಯನ್ನು ಬೆಸೆದ ಪ್ರಭಾವಶಾಲಿ ವ್ಯಕ್ತಿಯಾಗಿ ಹೊರಹೊಮ್ಮುತ್ತಾರೆ. ಸಾಮಾನ್ಯವಾಗಿ, ಒಂದು ಗಂಭೀರ ಬಿಕ್ಕಟ್ಟಿನ ಅವಧಿಯಲ್ಲಿ ತನ್ನ ಪಾರಮ್ಯವನ್ನು ಕಾಪಾಡಿಕೊಳ್ಳುವ ಮಾರ್ಗವಾಗಿ ಬೂರ್ಜ್ವಾ ವರ್ಗವು ಫ್ಯಾಸಿಸ್ಟ್ ತೆರನ ಶಕ್ತಿಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆ. ಭಾರತದ ಹಿರಿಯ ಬೂರ್ಜ್ವಾವರ್ಗವು ನಿಖರವಾಗಿ ಇದೇ ಮಾರ್ಗವನ್ನು ಅನುಸರಿಸಿತು ಮತ್ತು ಕಾರ್ಪೊರೇಟ್-ಹಿಂದುತ್ವ ಮೈತ್ರಿಯನ್ನು ಅಸ್ತಿತ್ವಕ್ಕೆ ತರುವಲ್ಲಿ ಮೋದಿಯವರನ್ನು ಮಧ್ಯವರ್ತಿಯಾಗಿ ಬಳಸಿಕೊಂಡಿತು.

1990ರ ದಶಕದ ಆರಂಭ ಮತ್ತು 2014ರ ದಶಕದ ಆರಂಭದಲ್ಲಿ ಹಿರಿ ಬೂರ್ಜ್ವಾವರ್ಗದ ದೃಷ್ಟಿಕೋನದಲ್ಲಿ ಕಂಡುಬಂದ ಬದಲಾವಣೆಯನ್ನು ಎರಡು ಪ್ರಮುಖ ಘಟನೆಗಳು ನಿರೂಪಿಸುತ್ತವೆ: 1990ರ ದಶಕದ ಆರಂಭದಲ್ಲಿ, ಟಾಟಾ ಸಮೂಹದ ಅತ್ಯುನ್ನತ ಮಟ್ಟದ ಅಧಿಕಾರಿಯೊಬ್ಬರು ಜಾತ್ಯತೀತತೆಯ ಸಮರ್ಥನೆಗಾಗಿ ಮುಂಬೈನಲ್ಲಿ ನಡೆದ ಒಂದು ಪ್ರದರ್ಶನ-ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಆದರೆ, ಈ ಶತಮಾನದ ಆದಿ ಭಾಗದಲ್ಲಿ ನಡೆದ ಗುಜರಾತ್ ಹೂಡಿಕೆದಾರರ ಶೃಂಗಸಭೆಯಲ್ಲಿ ಟಾಟಾ ಸಾಮ್ರಾಜ್ಯದ ಮುಖ್ಯಸ್ಥರು ಮೋದಿ ಅವರನ್ನು, ಗೋಧ್ರಾ ನಂತರದ ಮುಸ್ಲಿಂ ವಿರೋಧಿ ಹತ್ಯಾಕಾಂಡಕ್ಕೆ ಅವಕಾಶ ನೀಡಿದ ಆರೋಪವನ್ನು ಮೋದಿ ಹೊತ್ತಿದ್ದರೂ ಸಹ, ಪ್ರಧಾನಿಯಾಗಿ ಅನುಮೋದಿಸಿದ್ದರು. ನಂತರ ನಡೆದ ಒಂದು ಕುತೂಹಲಕಾರಿ ಸಂಗತಿಯೆಂದರೆ, ಟಾಟಾ ಸಾಮ್ರಾಜ್ಯದ ಅದೇ ಮುಖ್ಯಸ್ಥರು ನಾಗ್ಪುರಕ್ಕೆ ತೆರಳಿ ಆರ್‌ಎಸ್‌ಎಸ್‌ನ ಸರಸಂಘಚಾಲಕ ಮೋಹನ್ ಭಾಗವತ್ ಅವರೊಂದಿಗೆ ಹಲವಾರು ವಿಷಯಗಳ ಬಗ್ಗೆ ಸಮಾಲೋಚನೆ ನೆಡೆಸಿದ್ದರು.

ತಮ್ಮ ಬಂಟ ಬಂಡವಾಳಗಾರರಿಗೆ ಮಾತ್ರ ಉಪಕರಿಸಿದ ಕೀರ್ತಿಗೆ ಮೋದಿ ಹೆಸರಾಗಿದ್ದಾರೆ. ಇದು ನಿಜವೇ. ಆಪ್ತರಿಗೆ ಕೊಡುಗೆಗಳ ಮಳೆಗರೆಯುವ ಮಾತು ಮೋದಿ ಒಬ್ಬರಿಗೆ ಮಾತ್ರವೇ ಅನ್ವಯವಾಗುವುದಿಲ್ಲ. ಇಂತಹ ಸನ್ನಿವೇಶಗಳಲ್ಲಿ ಇದು ಸಾಮಾನ್ಯವೇ. ಹಿರಿ ಬೂರ್ಜ್ವಾಗಳು ಮತ್ತು ಫ್ಯಾಸಿಸ್ಟ್ ಮನೋಭಾವದ ಶಕ್ತಿಗಳ ನಡುವಿನ ಮೈತ್ರಿಯ ಒಂದು ವಿಶಿಷ್ಟ ಲಕ್ಷಣವೆಂದರೆ, ಹಿರಿ ಬೂರ್ಜ್ವಾ ವರ್ಗದ ಕೆಲವು ಹೊಸಬರು ಮುನ್ನೆಲೆಗೆ ಬರುವುದು. 1930ರ ದಶಕದಲ್ಲಿ ಜರ್ಮನಿ ಮತ್ತು ಜಪಾನ್ ಎರಡೂ ದೇಶಗಳಲ್ಲೂ ನಿಖರವಾಗಿ ಇದೇ ವಿದ್ಯಮಾನ ಸಂಭವಿಸಿತ್ತು. ಆದರೆ, ಈ ಹೊಸಬರು ಮುನ್ನೆಲೆಗೆ ಬಂದಾಕ್ಷಣ ಬೂರ್ಜ್ವಾವರ್ಗದ ಹಳೆಯ ತಲೆಗಳು ಮೂಲೆಗುಂಪಾಗುತ್ತವೆ ಎಂದಲ್ಲ. ಹಿರಿ ಬೂರ್ಜ್ವಾವರ್ಗದ ಸಕ್ರಿಯ ಬೆಂಬಲದೊಂದಿಗೆ ಫ್ಯಾಸಿಸ್ಟ್ ತೆರನ ಶಕ್ತಿಗಳು ರಚಿಸಿದ ಸರ್ಕಾರವು, ಈ ಕೆಲ ಹೊಸಬರಿಗೆ ವಿಶೇಷ ಅನುಕೂಲ-ಸಹಾಯಗಳ ಮಳೆಗರೆದರೂ ಸಹ, ಒಟ್ಟಾರೆಯಾಗಿ, ಇಡೀ ಬೂರ್ಜ್ವಾ ವರ್ಗದ ಪರವಾಗಿಯೇ ಕೆಲಸ ಮಾಡುತ್ತದೆ. ಈ ಅಂಶವನ್ನು ನಿರೂಪಿಸುವ ಉದಾಹರಣೆಗಳೆಂದರೆ, ಕಾರ್ಮಿಕರನ್ನು ದಮನಿಸುವ ಹೊಸ ಕಾರ್ಮಿಕ ಕಾನೂನುಗಳು ಮತ್ತು ಕೃಷಿಯನ್ನು ಕಾರ್ಪೊರೇಟ್ ಬಂಡವಾಳದ ಅತಿಕ್ರಮಣಕ್ಕೆ ತೆರೆದಿಟ್ಟಿರುವ ಹೊಸ ಕೃಷಿ ಕಾನೂನುಗಳು.

ಮೋದಿ ಸರ್ಕಾರದ ಆರೋಹಣಕ್ಕೆ ಆಧಾರವಾಗಿದ್ದ ಈ ಇಡೀ ಏರ್ಪಾಟು ಈಗ ಸಡಿಲಗೊಳ್ಳುತ್ತಿದೆ. ಹಾಗೆಂದ ಕೂಡಲೇ ಅದರ ಅರ್ಥ ಮೋದಿ ಸರ್ಕಾರವು ಅಧಿಕಾರ ಕಳೆದುಕೊಳ್ಳಲಿದೆ ಎಂದಲ್ಲ. ಅದು ಏನನ್ನು ಅರ್ಥೈಸುತ್ತದೆ ಎಂದರೆ, ಮೋದಿ ಸರ್ಕಾರವು ಅಧಿಕಾರದಲ್ಲಿ ಉಳಿಯಲು ನಿರಂಕುಶ, ಅಸಂವೈಧಾನಿಕ, ವಿಭಜಕ ಮತ್ತು ದ್ವೇಷ-ಪ್ರಚೋದಕ ಕ್ರಮಗಳನ್ನು ಅವಲಂಬಿಸಬೇಕಾಗುತ್ತದೆ. ಏಕೆಂದರೆ, ಮೋದಿ ಸರ್ಕಾರದ ಆರೋಹಣಕ್ಕೆ ಆಧಾರವಾಗಿದ್ದ ಮತ್ತು ಅದಕ್ಕೆ ಒಂದು ಮಟ್ಟಿನ ಸ್ಥಿರತೆಯನ್ನು ಒದಗಿಸಿದ ಈ ಮೂಲ ಏರ್ಪಾಟೇ ಕಳಚಿ ಬೀಳಲು ಆರಂಭಿಸಿದೆ.

ಮೋದಿ ಏರ್ಪಾಟು ಸಡಿಲಗೊಳ್ಳುತ್ತಿದೆ ಎಂದು ಹೇಳುವಲ್ಲಿ ಎರಡು ಸ್ಪಷ್ಟ ಕಾರಣಗಳಿವೆ. ಮೂರು ಕುಖ್ಯಾತ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಬೃಹತ್ ಚಳುವಳಿಯೇ ಮೊದಲನೆಯದು. ನಾವು ಈಗಾಗಲೇ ಗಮನಿಸಿರುವಂತೆ, ಈ ಕಾನೂನುಗಳು ಕಾರ್ಪೊರೇಟ್-ಹಿಂದುತ್ವ ಮೈತ್ರಿಯ ಕಾರ್ಯಸೂಚಿಗೆ ಅನುಗುಣವಾಗಿವೆ. ಹಾಗಾಗಿ, ಈ ಕಾನೂನುಗಳನ್ನು ರೂಪಿಸಿ ಅವುಗಳನ್ನು ಜಾರಿಗೊಳಿಸಿದ್ದು ಆಶ್ಚರ್ಯವೇನಲ್ಲ. ಅದರೆ, ಸರ್ಕಾರಕ್ಕೆ ಸಖೇದಾಶ್ಚರ್ಯ ಉಂಟು ಮಾಡಿದ್ದು ಏನೆಂದರೆ, ಈ ಕಾನೂನುಗಳಿಗೆ ರೈತರು ಒಡ್ಡಿದ ಪ್ರತಿರೋಧದ ಅಗಾಧತೆ. ಈ ಚಳುವಳಿಯನ್ನು ಮುರಿಯಲು ತನ್ನ ಬತ್ತಳಿಕೆಯಲ್ಲಿರುವ ಎಲ್ಲ ಅಸ್ತ್ರಗಳನ್ನು ಬಿಜೆಪಿಯು ನಿರ್ಲಜ್ಜವಾಗಿ ಪ್ರಯೋಗಿಸಿತು. ಆದರೂ ದಯನೀಯವಾಗಿ ವಿಫಲವಾಯಿತು. ಇದು, ಕಾರ್ಪೊರೇಟ್-ಹಿಂದುತ್ವ ಮೈತ್ರಿಗೆ ತಾಗಿದ ಒಂದು ಭಾರಿ ಆಘಾತವೇ.

ಎರಡನೆಯ ಕಾರಣವೆಂದರೆ, ನಿರ್ದಿಷ್ಟ ಕಾರ್ಪೊರೇಟ್ ಸಂಸ್ಥೆಗಳ ಬಗ್ಗೆ ಹಿಂದುತ್ವದ ಕೆಲವು ಪ್ರಭಾವಿ ವ್ಯಕ್ತಿಗಳು ಪ್ರದರ್ಶಿಸಿದ ಬಹಿರಂಗ ಹಗೆತನವು ಈ ಮೈತ್ರಿಯನ್ನು ಬಾಳಗೊಡುವುದಿಲ್ಲ ಎಂಬುದನ್ನು ಸೂಚಿಸುತ್ತದೆ. ಮೊದಲು, ಮೋದಿ ಸರ್ಕಾರದ ಹಿರಿಯ ಸಚಿವ ಮತ್ತು ಕೆಲ ಕಾಲ ಹಣಕಾಸು ಸಚಿವರೂ ಆಗಿ ಕಾರ್ಯನಿರ್ವಹಿಸಿದ ಪಿಯೂಷ್ ಗೋಯೆಲ್ ಅವರು ಟಾಟಾ ಸಂಸ್ಥೆಗಳ ಮೇಲೆ ಬಹಿರಂಗವಾಗಿ ಹರಿಹಾಯ್ದರು. ತದನಂತರ, ಇನ್ಫೊಸಿಸ್‌ನ ತಾಂತ್ರಿಕ ನಿರ್ವಹಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆದಾಯ ತೆರಿಗೆ ಪೋರ್ಟಲ್‌ನಲ್ಲಿ ಕಾಣಿಸಿಕೊಂಡ ಕೆಲವು ಲೋಪ ದೋಷಗಳ ಸಂಬಂಧವಾಗಿ ಆರ್‌ಎಸ್‌ಎಸ್‌ನ ಮುಖವಾಣಿ ‘ಪಾಂಚಜನ್ಯ’ ಪತ್ರಿಕೆಯು ಇನ್ಫೊಸಿಸ್ ಸಂಸ್ಥೆಯನ್ನು ವಾಚಾಮಗೋಚರವಾಗಿ ನಿಂದಿಸಿತು. ಸೆಪ್ಟೆಂಬರ್ 15 ರೊಳಗೆ ಈ ಲೋಪ ದೋಷಗಳನ್ನು ಸರಿಪಡಿಸುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಮೊದಲೇ ಇನ್ಫೋಸಿಸ್ ಸಂಸ್ಥೆಗೆ ಆದೇಶಿದ್ದರು, ಆದರೆ, ಆ ಗಡುವು ತೀರುವ ಮುನ್ನವೇ ‘ಪಾಂಚಜನ್ಯ’ ಪತ್ರಿಕೆಯು ಇನ್ಫೊಸಿಸ್‌ ಅನ್ನು “ರಾಷ್ಟ್ರ ವಿರೋಧಿ” ಎಂದು ಕರೆದು, ಅದನ್ನು ಎಡಪಂಥೀಯರು ಮತ್ತು ಟುಕ್ಡೆ ಟುಕ್ಡೆ ಗ್ಯಾಂಗ್‌ನೊಂದಿಗೆ ಇರಿಸಿತು, ಯಾವ ಮುಚ್ಚು ಮರೆಯೂ ಇಲ್ಲದೆ! ಆರ್‌ಎಸ್‌ಎಸ್‌ನ ಕಾರ್ಯಕರ್ತರಲ್ಲಿ ಕೆಲವರ ಶಬ್ದ ಭಂಡಾರವು ಸೀಮಿತವಾದದ್ದು ಎಂದೇ ಒಪ್ಪಿಕೊಳ್ಳೋಣ. ಆದರೂ, ಅಂತರರಾಷ್ಟ್ರೀಯ ಖ್ಯಾತಿ ಪಡೆದ ಇನ್ಫೊಸಿಸ್‌ನಂಥಹ ಒಂದು ಕಂಪನಿಯ ವಿರುದ್ಧ ಬಳಸಿದ ಭಾಷೆಯು ಬಹಳ ಗಡುಸಾಗಿದೆ. ಆರ್‌ಎಸ್‌ಎಸ್‌ನ ಒಬ್ಬ ವಕ್ತಾರರು, ತಮ್ಮ ಸಂಘಟನೆಯನ್ನು ‘ಪಾಂಚಜನ್ಯ’ ಪತ್ರಿಕೆಯ ದಾಳಿಯಿಂದ ದೂರವಿಟ್ಟುಕೊಳ್ಳಲು ಪ್ರಯತ್ನಿಸಿದರು, ಆದರೆ ಆ ಪ್ರಯತ್ನದಲ್ಲಿ ಯಾವುದೇ ಪ್ರಾಮಾಣಿಕತೆ ಇರಲಿಲ್ಲ. ಅಷ್ಟೇ ಅಲ್ಲ, ಮತ್ತೂ ಕೆಲವು ಆರ್‌ಎಸ್‌ಎಸ್ ನಾಯಕಮಣಿಗಳು ಈ ದಾಳಿಗೆ ಗಾಳಿ ಹಾಕಿದವು.

ಕಾರ್ಪೊರೇಟ್- ಹಿಂದುತ್ವ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಳ್ಳಲಾರಂಭಿಸಿದೆ. ಮುಂಬರುವ ತಿಂಗಳುಗಳಲ್ಲಿ ಈ ಬಿರುಕು ಅಗಲವಾಗಲಿದೆ. ಅದಕ್ಕೆ ಕಾರಣವೆಂದರೆ, ಹಿಂದುತ್ವ ಶಕ್ತಿಗಳು ಅರ್ಥಶಾಸ್ತ್ರದಲ್ಲಿ ಮುಗ್ಧರೇ. ಅವರು ತಮ್ಮ ಕಾರ್ಪೊರೇಟ್ ಸ್ನೇಹಿತರು ಮತ್ತು ಬ್ರೆಟನ್ ವುಡ್ಸ್ (ವಿಶ್ವ ಬ್ಯಾಂಕ್, ಐಎಂಎಫ್ ಇತ್ಯಾದಿ) ಸಂಸ್ಥೆಗಳು ಹೇಳಿದ್ದನ್ನು ಸಲೀಸಾಗಿ ನಂಬಿದ್ದರು. ಈ ಸಂಸ್ಥೆಗಳು ಹೇಳುತ್ತಿದ್ದುದು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂಬುದನ್ನು ಅವರು ಈಗ ಅರಿಯುತ್ತಿದ್ದಾರೆ. ತಮ್ಮ ಈ ಪರಿಸ್ಥಿತಿಗೆ ತಾವು ಸ್ವೀಕರಿಸಿದ ಸಿದ್ಧಾಂತದ ವಿಚಾರಹೀನತೆ ಕಾರಣವೆಂದು ಅರ್ಥಮಾಡಿಕೊಳ್ಳುವುದರ ಬದಲಿಗೆ ಕೆಲವು ಕಾರ್ಪೊರೇಟ್ ಸಂಸ್ಥೆಗಳ ದುರುದ್ದೇಶವೇ ಕಾರಣವೆಂದು ಭಾವಿಸುತ್ತಾರೆ.

ಉದಾಹರಣೆಗೆ, ಕಾರ್ಪೊರೇಟ್ ಬಂಡವಾಳಕ್ಕೆ ಹೆಚ್ಚು ರಿಯಾಯಿತಿಗಳನ್ನು ನೀಡಿದಾಗ, ಸರ್ಕಾರವು ಸಂಪ್ರದಾಯಶರಣ ವಿತ್ತೀಯ ನೀತಿಯನ್ನು ಅನುಸರಿಸುತ್ತಿದ್ದರೂ ಸಹ, ಅರ್ಥವ್ಯವಸ್ಥೆಯು ಪುನರುಜ್ಜೀವನಗೊಳ್ಳುತ್ತದೆ ಎಂದು ಅವರಿಗೆ ಹೇಳಲಾಗಿದೆ. ತೆರಿಗೆ ಕೊಡುಗೆಗಳು ಮತ್ತು ಕಾರ್ಮಿಕ-ವಿರೋಧಿ ಮತ್ತು ರೈತ-ವಿರೋಧಿ ಕಾನೂನುಗಳ ಮೂಲಕ ಬಂಡವಾಳಗಾರರ “ಸಹಜ ಹುಮ್ಮಸ್ಸನ್ನು” ಉದ್ದೀಪಿಸಿದರೆ, ಹೂಡಿಕೆಗಳು ಹೂವಿನಂತೆ ಅರಳುತ್ತವೆ ಎಂದು ಅವರಿಗೆ ಹೇಳಲಾಗಿದೆ. ಅವರಿಗೆ ಹೇಳದಿರುವುದು ಏನೆಂದರೆ, ಬಂಡವಾಳಕ್ಕೆ ಎಷ್ಟೇ ರಿಯಾಯಿತಿಗಳನ್ನು ನೀಡಿದರೂ ಸಹ, ಒಟ್ಟು ಬೇಡಿಕೆಯು ವಿಸ್ತಾರಗೊಳ್ಳದಿದ್ದರೆ ಬಂಡವಾಳಗಾರರು ಹೊಸದಾಗಿ ಹೂಡಿಕೆ ಮಾಡುವುದಿಲ್ಲ, ಮತ್ತು, ಹೊಸ ಹೂಡಿಕೆಗಳು ಇಲ್ಲದಿದ್ದರೆ ಅರ್ಥವ್ಯವಸ್ಥೆಯು ಪುನರುಜ್ಜೀವಗೊಳ್ಳುವುದಿಲ್ಲ ಎಂಬುದನ್ನು ಮತ್ತು ವಿತ್ತೀಯ ಕೊರತೆಯ ಮೂಲಕವೊ ಅಥವಾ ಬಂಡವಾಳಗಾರರ ಮೇಲೆ ತೆರಿಗೆ ಹಾಕುವ ಮೂಲಕವೊ ಒದಗಿಸಿಕೊಂಡ ಆದಾಯವನ್ನು ಬಳಸಿಕೊಂಡು ಸರ್ಕಾರದ ಖರ್ಚು-ವೆಚ್ಚಗಳನ್ನು ಹೆಚ್ಚಿಸಿಕೊಳ್ಳದಿದ್ದರೆ, ಒಟ್ಟಾರೆ ಬೇಡಿಕೆಯು ವಿಸ್ತಾರಗೊಳ್ಳುವುದಿಲ್ಲ ಎಂಬುದನ್ನು.

ಮೋದಿ ಸರ್ಕಾರದ ಶತ ಪ್ರಯತ್ನಗಳ ಹೊರತಾಗಿಯೂ, ಆರ್ಥಿಕ ವಿಷಯಗಳ ಬಗ್ಗೆ ಅದಕ್ಕಿರುವ ಜ್ಞಾನದ ಕೊರತೆಯಿಂದಾಗಿ, ಅರ್ಥವ್ಯವಸ್ಥೆಯು ಸತತವಾಗಿ ನಿತ್ರಾಣಗೊಳ್ಳುತ್ತಿದೆ. ಆದರೆ, ಹಿಂದುತ್ವ ಶಕ್ತಿಗಳ ಪ್ರಕಾರ, ಬೆಳವಣಿಗೆಯ ಸಾಮರ್ಥ್ಯ-ಸಾಧ್ಯತೆಯುಳ್ಳ ಅರ್ಥವ್ಯವಸ್ಥೆಯು ಸೊರಗಲು ಭಾರತದ ಕಾರ್ಪೊರೇಟ್ ವಲಯದ (ಅವರ ನೆಚ್ಚಿನ ಬೆರಳೆಣಿಕೆಯವುಗಳನ್ನು ಹೊರತುಪಡಿಸಿ) ದುಷ್ಟ ಪ್ರವೃತ್ತಿಯೇ ಕಾರಣ. ಅವು ಬೇರೆಡೆ ಹೂಡಿಕೆ ಮಾಡುತ್ತವೆ (ಅಲ್ಲಿ ಒಟ್ಟು ಬೇಡಿಕೆ ಬೆಳೆಯುತ್ತಿರಬಹುದು). ಆದರೆ, ಭಾರತದಲ್ಲಿ ಅಲ್ಲ. ಹಾಗಾಗಿ, ಇದು ರಾಷ್ಟ್ರ ವಿರೋಧಿ ಕೃತ್ಯವೇ! ಬಂಡವಾಳದ ಸಹಜ ನಡವಳಿಕೆಯನ್ನು, ಅದರ ಸಹಜ ಕಾರ್ಯವಿಧಾನವನ್ನು ಒಂದು ವಿಕೃತಿ ಎಂದೇ ಬಗೆಯಲಾಗಿದೆ!

ಹಿಂದುತ್ವ ಮತ್ತು ಕಾರ್ಪೊರೇಟ್ ಬಂಡವಾಳದ ನಡುವಿನ ಬಿರುಕು ಅಗಲವಾಗಲಿದೆ. ಹೆದರಿಕೆ-ಬೆದರಿಕೆಗಳ ಮೂಲಕ ಬಂಡವಾಳವು ಹೂಡಿಕೆ ಮಾಡುವುದಿಲ್ಲ. ತದ್ವಿರುದ್ಧವಾಗಿ, ಅದು ಇನ್ನೂ ಹೆಚ್ಚಿನ ಹುರುಪಿನಿಂದ ವಿಶ್ವದ ಬೇರೆಡೆ ಲಾಭದಾಯಕ ಹೂಡಿಕೆಯ ಸಾಧ್ಯತೆಗಳಿವೆಯೇ ಎಂಬುದನ್ನು ಅನ್ವೇಷಿಸಲು ಪ್ರಯತ್ನಿಸುತ್ತದೆ. ಈ ನಿಟ್ಟಿನಲ್ಲಿ ಬಂಡವಾಳವು ತನ್ನ ಪ್ರಯತ್ನಗಳನ್ನು ಹೆಚ್ಚಿಸಿದಷ್ಟೂ, ಆರ್‌ಎಸ್‌ಎಸ್ ಮತ್ತು ಬಿಜೆಪಿ, ಕಾರ್ಪೊರೇಟ್ ಬಂಡವಾಳವನ್ನು ರಾಷ್ಟ್ರ ವಿರೋಧಿ ಎಂದು ಕರೆದು ಅದರ ಮೇಲೆ ದಾಳಿ ಮಾಡಲಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಟುಕ್ಡೆ ಟುಕ್ಡೆ ಗ್ಯಾಂಗ್ ಹೊಸ ಹೊಸ ಅನುಯಾಯಿಗಳನ್ನು ಪಡೆಯುತ್ತಿದೆ!

ಈ ಇಡೀ ವಿದ್ಯಮಾನದಲ್ಲಿ ಒಂದು ಗಮನಾರ್ಹವಾದ ಸಂಗತಿ ಎಂದರೆ, ಮೋದಿ ಅವರು ಪರೋಕ್ಷವಾಗಿಯೂ ಸಹ, ಪಿಯೂಷ್ ಗೋಯೆಲ್ ವಿರುದ್ಧವಾಗಲಿ ಅಥವಾ ‘ಪಾಂಚಜನ್ಯ’ದಲ್ಲಿ ಬರೆದ ಅಂಕಣಕಾರನ ವಿರುದ್ಧವಾಗಲಿ ಚಕಾರ ಎತ್ತಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಜರ್ಮನಿಯಲ್ಲಿ ದೊಡ್ಡ ದೊಡ್ಡ ಉದ್ಯಮಗಳೊಂದಿಗೆ ಮೈತ್ರಿಯನ್ನು ಸಂಯೋಜಿಸಿಕೊಳ್ಳುವ ಸಲುವಾಗಿ ಫ್ಯಾಸಿಸ್ಟ್ ಶಕ್ತಿಗಳು ತಮ್ಮ ಸ್ವಂತ ಬೆಂಬಲಿಗರ ರಕ್ತವನ್ನೇ ಹರಿಸಿದರು. ಅದು “ಉದ್ದನೆಯ ಚಾಕುಗಳ ರಾತ್ರಿ” ಎಂದು ಕುಖ್ಯಾತವಾಗಿದೆ.

ಈ ವಿದ್ಯಮಾನವನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಫ್ಯಾಸಿಸ್ಟ್ ಮನೋಭಾವದ ಶಕ್ತಿಗಳು ಮತ್ತು ಕಾರ್ಪೊರೇಟ್ ಬಂಡವಾಳದ ನಡುವಿನ ಮೈತ್ರಿಯು ಯಶಸ್ವಿಯಾಗಲು ಎರಡು ಷರತ್ತುಗಳನ್ನು ಪಾಲಿಸುವುದು ಅಗತ್ಯವಾಗುತ್ತದೆ. ಮೊದಲನೆಯದು, ಅಂತಹ ಮೈತ್ರಿಯ ಮೂಲಕ ಅಸ್ತಿತ್ವಕ್ಕೆ ಬರುವ ಆಡಳಿತವು, ಮೊದಲಿಗೆ ಅಂತಹ ಮೈತ್ರಿಯು ಅಸ್ತಿತ್ವಕ್ಕೆ ಬರಲು ಕಾರಣವಾದ ಬಿಕ್ಕಟ್ಟನ್ನು ಪರಿಹರಿಸುವಷ್ಟು ಸಮರ್ಥವಾಗಿರಬೇಕು. ಎರಡನೆಯದು, ಫ್ಯಾಸಿಸ್ಟ್ ಮನೋಭಾವದ ಶಕ್ತಿಗಳು ಮತ್ತು ಕಾರ್ಪೊರೇಟ್ ಬಂಡವಾಳದ ವಿಭಾಗಗಳ ನಡುವೆ ಬಾಯಿ-ತೀಟೆಯ ಬಂಡವಾಳಶಾಹಿ-ವಿರೋಧದಂತಹ ಅಂಶಗಳ ಆಧಾರದ ಮೇಲೂ ಸಹ ಯಾವುದೇ ಸಂಘರ್ಷ ಇರಬಾರದು. ಭಾರತದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಯಾವತ್ತೂ ದೊಡ್ಡ ಉದ್ಯಮ-ವಿರೋಧಿಯಾಗಿರಲಿಲ್ಲ. ಆದ್ದರಿಂದ, ಬಂಡವಾಳಶಾಹಿಯ ಬಗ್ಗೆ ಸೈದ್ಧಾಂತಿಕ ವಿರೋಧದ ಪ್ರಶ್ನೆಯೇ ಏಳುವುದಿಲ್ಲ. ಬಂಡವಾಳವು ಜಾಗತೀಕರಣಗೊಂಡಿರುವಾಗ ಮತ್ತು ಪ್ರಭುತ್ವವು ರಾಷ್ಟ್ರ-ಪ್ರಭುತ್ವವಾಗಿಯೇ ಉಳಿದಿರುವಾಗ, ಅವುಗಳ ನಡುವೆ ಇರುವ ವೈರುಧ್ಯದಿಂದಾಗಿ ಪ್ರಭುತ್ವದ ಖರ್ಚು-ವೆಚ್ಚಗಳನ್ನು ಹೆಚ್ಚಿಸಿಕೊಂಡು ಅರ್ಥವ್ಯವಸ್ಥೆಯನ್ನು ಬಿಕ್ಕಟ್ಟಿನಿಂದ ಹೊರ ತರುವುದು ಕಷ್ಟಕರವಾಗುವುದರಿಂದ, ಮೊದಲನೆಯ ಷರತ್ತನ್ನು ಪಾಲಿಸಲಾಗುವುದಿಲ್ಲ. ಅಂದರೆ, ಪ್ರಭುತ್ವವು ಬಿಕ್ಕಟ್ಟನ್ನು ಪರಿಹರಿಸುವಷ್ಟು ಸಮರ್ಥವಾಗಿಲ್ಲ.

ಹಾಗಾದರೆ, ಪ್ರಭುತ್ವದ ಖರ್ಚು-ವೆಚ್ಚಗಳಿಗಾಗಿ “ನಗದೀಕರಣ” ಯೋಜನೆಯ ಮೂಲಕ ಹಣ ಒದಗಿಸಿಕೊಳ್ಳುವ ಕಾರ್ಯಕ್ರಮದ ಕತೆ ಏನು? ಕಾರ್ಪೊರೇಟ್-ಹಿಂದುತ್ವ ಮೈತ್ರಿಯೊಳಗಿನ ಬಿರುಕನ್ನು ಸರಿಪಡಿಸಬಹುದಾದ ಅರ್ಥವ್ಯವಸ್ಥೆಯ ಪುನರುಜ್ಜೀವನಕ್ಕೆ ಅದು ಕಾರಣವಾಗುವ ಸಂಭಾವ್ಯತೆ ಇಲ್ಲವೇ? ನಗದೀಕರಣ ಯೋಜನೆಯು ಒಂದು ಅಸಹ್ಯಕರ ಕ್ರಮ ಮಾತ್ರವಲ್ಲ, ನಾಲ್ಕು ವರ್ಷಗಳ ಅವಧಿಯಲ್ಲಿ 6 ಲಕ್ಷ ಕೋಟಿ ರೂ. ಗಳನ್ನು ಖರ್ಚು ಮಾಡುವುದು ಸಾಧ್ಯವಾದರೂ ಸಹ, ಆ ಮೊತ್ತವು ಪ್ರತಿ ವರ್ಷಕ್ಕೆ ಜಿಡಿಪಿಯ 1% ಗಿಂತಲೂ ಕಡಿಮೆ ಇರುತ್ತದೆ. ರಾವಣನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಸಾಲದು ಎನ್ನುವಂತೆ, ಅರ್ಥವ್ಯವಸ್ಥೆಯಲ್ಲಿ ಯಾವುದೇ ವ್ಯತ್ಯಾಸವನ್ನು ಮಾಡಲಾರದಷ್ಟು ಅತ್ಯಲ್ಪವಾಗಿದೆ ಈ ಹಣದ ಮೊತ್ತ.

ಅನು: ಕೆ.ಎಂ. ನಾಗರಾಜ್

Donate Janashakthi Media

Leave a Reply

Your email address will not be published. Required fields are marked *