ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಕೋಮುವಾದೀಕರಣದ ವಿರುದ್ಧ ಹೋರಾಟದ ಕಹಳೆ

ಕಲಬುರಗಿಯ ಕೇಂದ್ರಿಯ ವಿವಿ ಈಗ ವಿವಾದಗಳನ್ನು ತಾನೇ ಹುಟ್ಟುಹಾಕುತ್ತ ಇನ್ನಷ್ಟು ಸುದ್ದಿಯಲ್ಲಿದೆ. ಇದು ದಿನಗಳೆದಂತೆ ತನ್ನ ಅಸಲಿ ಚಹರೆಯನ್ನು ಅನಾವರಣಗೊಳಿಸುತ್ತಿದೆ. ವಿವಿಯಲ್ಲಿ ವಿದ್ಯಾರ್ಜನೆಯ ಬದಲಿಗೆ ಕೋಮುವ್ಯಾದಿಯಾರ್ಜನೆ ಮಾಡಲಾಗುತ್ತಿದೆ. ಈ ಕೋಮುವಾದದ ಫಲಿತವೆಂದರೆ ಮಹಿಳೆಯರನ್ನು, ದಲಿತರನ್ನು ಮತ್ತು ಅಲ್ಪಸಂಖ್ಯಾತರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವುದು. ಮತ್ತು ವಿಶ್ವವಿದ್ಯಾಲಯವನ್ನೇ ಶ್ರೇಣೀಕರಣ ನಿಲುವುಗಳಿಗೆ ಸಜ್ಜುಗೊಳಿಸುವುದು. ದಲಿತ ಮತ್ತು ಮಹಿಳೆಯರಿಗೆ ಅಪಮಾನಗೊಳಿಸುವ, ತಾರತಮ್ಯದಿಂದ ಮನೋಬಲ ಕುಗ್ಗಿಸುವ ಹುನ್ನಾರ ಹೆಣೆಯಲಾಗಿದೆ. ಲೈಂಗಿಕ ದೌರ್ಜನ್ಯಗಳು ಘಟಿಸಿದರೂ ನಜರ್ ಅಂದಾಜಿಸುವ ನಿರ್ಲಕ್ಷಿಸುವ ಪ್ರವೃತ್ತಿಯನ್ನು ಸಾರ್ವತ್ರಿಕರಣಗೊಳಿಸಲಾಗುತ್ತಿದೆ. ಜಯಶ್ರೀ ನಾಯಕ ಎಂಬ 20 ವರ್ಷ ವಯಸ್ಸಿನ ಓಡಿಸ್ಸಾ ಮೂಲದ ದಲಿತ ವಿದ್ಯಾರ್ಥಿನಿಯು ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರ ಹಿಂದೆ ಈ ಕಾರಣ ಇರಬಹುದೆ? ವಿದ್ಯಾರ್ಥಿನಿಯ ಸಾಂಸ್ಥಿಕ ಹತ್ಯೆಯ ತನಿಖೆ ನಡೆಯಬೇಕಿದೆ.

-ಕೆ. ನೀಲಾ

ಕಲಬುರಗಿಯ ಕೇಂದ್ರಿಯ ವಿಶ್ವವಿದ್ಯಾಲಯ ಕರ್ನಾಟಕ (ಸಿಯುಕೆ)ದ ಹಾಸ್ಟೆಲ್ ನಲ್ಲಿ ಜಯಶ್ರೀ ನಾಯಕ ಎಂಬ ದಲಿತ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಯ ಪ್ರಕರಣದ ಬೆನ್ನಲ್ಲೇ ಮೂರು ಎಲೆಕ್ಟ್ರಾನಿಕ್ ಮಾದ್ಯಮಗಳು ಕೇಂದ್ರೀಯ ವಿವಿಯಲ್ಲಿ ಕೆಲವು ಮುಸ್ಲಿಮರು ಸೇರಿ ಹೊಸ ಮಜರ್ ಕಟ್ಟುತ್ತಿದ್ದಾರೆ ಎಂದು ಹುಯಿಲೆಬ್ಬಿಸಿದರು. ಅಥವ ಸ್ವತಃ ವಿವಿಯೇ ಇಂತಹ ಸುಳ್ಳು ಸುದ್ದಿಯನ್ನು ಹುಯಿಲೆಬ್ಬಿಸುವ ಹುನ್ನಾರ ಹೆಣೆಯಿತು. ಕಲಬುರಗಿ

ಹೀಗೆ ಎರಡು ಪ್ರಕರಣಗಳು ಒಂದು ಚುಂಗು ಹಿಡಿದು ಮತ್ತೊಂದು ಬೆಳೆದು ಬಂದವು. ಇದೇ ಕೇಂದ್ರೀಯ ವಿವಿಯು ಜನತೆಯಲ್ಲಿ ಗೊಂದಲ ಸೃಷ್ಟಿಸಲು ಹೆಣೆದ ಎರಡು ಚಹರೆಗಳ ಬಲೆಗಳು. ಆದರೆ ಈ ಚಹರೆಯ ಆಳವನ್ನು ಅರಿಯದೆ ಕೆಲವರು ಕೂಡಲೇ ಏನನ್ನಾದರೂ ಇದಕ್ಕೆ ಮದ್ದು ಅರೆಯಬೇಕೆಂದು ಹೇಳುತ್ತಲೇ ಇದ್ದಾರೆ. ಪ್ರಕರಣಗಳ ಹಿನ್ನೆಲೆ ಮತ್ತು ಸೃಷ್ಟಿಯ ಹಿಂದಿನ ಸೈದ್ಧಾಂತಿಕ ಅಜೆಂಡಾ ಅರಿಯದೆ ಚಿಕಿತ್ಸೆ ಆಗದು. ಕಲಬುರಗಿ

ಕೇಸರಿ ಬಣ್ಣಕ್ಕೆ ಹೊರಳತೊಡಗಿದ ಕೇವಿವಿ

ಕೇಂದ್ರೀಯ ವಿವಿಯು ಕಲಬುರಗಿಯಲ್ಲಿ ಬರಬೇಕೆಂದು ಪ್ರಗತಿಪರರು, ಎಡಚಿಂತಕರು ಹೋರಾಟ ನಡೆಸಿದ್ದರು. ಆಳಂದ ತಾಲ್ಲೂಕಿನ ಕಡಗಂಚಿ ಎಂಬ ಗ್ರಾಮ ವ್ಯಾಪ್ತಿಯ 600 ಎಕರೆ ಪ್ರದೇಶದಲ್ಲಿ ಕೇಂದ್ರೀಯ ವಿವಿ ಆರಂಭವಾಯಿತು. ಸುರುವಿನಲ್ಲಿ ಅನೇಕ ಮೂಲ ಸಂಪನ್ಮೂಲಗಳು, ಸೌಕರ್ಯಗಳು ಇತ್ಯಾದಿ ಕೊರತೆಯಿಂದ ನರಳುತ್ತಿತ್ತು. ವಿಶೇಷವಾಗಿ ಕುಡಿಯುವ ನೀರಿನ ಸಮಸ್ಯೆ ಅಗಾಧವಾಗಿತ್ತು. ಕ್ರಮೇಣ ಶೈಕ್ಷಣಿಕ ಜ್ಞಾನ ಶಾಖೆಗಳು ಕಾರ್ಯಾರಂಭಗೊಂಡವು.

ಇದನ್ನೂ ಓದಿ: ನ್ಯಾಯ ಕೇಳಿದರೆ ಧರ್ಮದ ವಿರುದ್ಧ ಷಡ್ಯಂತ್ರ ಹೇಗಾಗುತ್ತೆ!?

ಪರಮೇಶ್ವರಯ್ಯ ಎಂಬ ಭಾಷಾತಜ್ಞರೊಬ್ಬರು ಕೇವಿವಿಗೆ ಉಪಕುಲಪತಿಗಳಾಗಿ ಬಂದರು. ಅವರು ನಿರ್ಗಮಿಸುವ ಹೊತ್ತಿನಲ್ಲಿ ಕೆಲವು ಹುದ್ದೆಗಳನ್ನು ಭರ್ತಿಮಾಡಲಾಯಿತು. ಅವುಗಳಲ್ಲಿ ಮತೀಯ ಚಿಂತನೆಗಳುಳ್ಳ ಕರಾವಳಿ ಪ್ರದೇಶದ ವ್ಯಕ್ತಿ ಹರಿಣಾಕ್ಷ ಶಿರ್ಲಾಲ ಎಂಬುವರು ಸೇರಿಕೊಂಡರು. ನಂತರದಲ್ಲಿ ಶಿರ್ಲಾಲ ಬಹಿರಂಗವಾಗಿ ತಮ್ಮ ಲೇಖನಗಳ ಮೂಲಕ ಮತೀಯ ವಿಚಾರಗಳನ್ನು ಬರೆಯತೊಡಗಿದರು. ಅಲ್ಲಿವರೆಗೂ ಸುಪ್ತವಾಗಿದ್ದ ಬಲಪಂಥೀಯ ಚಿಂತಕರಿಗೆ ರೆಕ್ಕೆ ಪುಕ್ಕ ಬಂದವು. ಕ್ರಮೇಣ ಕೇವಿವಿಯು ಕೇಸರಿ ಬಣ್ಣಕ್ಕೆ ಹೊರಳತೊಡಗಿತು. ಕಲಬುರಗಿ

ಹೋಮ ಹವನದ ಮೂಲಕ ವಿವಿ ಪ್ರವೇಶ

ಈ ಹೊರಳುವಿಕೆಗೆ ಸಾಂಘಿಕ ಸ್ವರೂಪ ಕೊಡುವಂತಹ ಅಜೆಂಡಾ ಇಟ್ಟುಕೊಂಡು ಬಂದು ಕಾರ್ಯಪ್ರವೃತ್ತ ಆಗಿದ್ದು ಸತ್ಯನಾರಾಯಣ ಬಟ್ಟು ಎಂಬ ಉಪಕುಲಪತಿ. ಕೇಂದ್ರ ಸರಕಾರವು ದೇಶದ ಎಲ್ಲಾ ಉಪಕುಲಪತಿಗಳನ್ನು ಕರೆದು, ಕೇಸರಿ ಬಾವುಟ ಹಾರಿಸಿ ಸಮಾವೇಶ ನಡೆಸಿ, ಕೇಂದ್ರಿಯ ವಿವಿಗಳಲ್ಲಿ ಸಂಘಪರಿವಾರದ ಚಟುವಟಿಕೆ ವಿಸ್ತರಿಸುವ, ಬಲಪಡಿಸುವ ಕಾರ್ಯಯೋಜನೆಯನ್ನು ಮಾಡಲಾಗಿತ್ತು. ಕಲಬುರಗಿ

ಅದನ್ನು ಜಾರಿಗೊಳಿಸಲು ಸತ್ಯನಾರಾಯಣ ಬಟ್ಟು ಆರ್ ಎಸ್ ಎಸ್ ನ ಕಾರ್ಯಕರ್ತನಾಗಿ ಬಂದು ಇಡೀ ಕೇವಿವಿಯನ್ನು ಇಂದು ಆರ್ ಎಸ್ ಎಸ್ ಶಾಖೆಯಾಗಿ ಮಾರ್ಪಡಿಸಲಾಗಿದೆ. ವಿವಿಯ ಪ್ರವೇಶವೇ ಹೋಮ ಹವನದ ಮೂಲಕ ಕದ್ದು ಮುಚ್ಚಿ ನಡೆಸಲಾಯಿತು. ನಂತರ ಅಂತರಿಕ ಶಿಬಿರಗಳು, ಗುಪ್ತ ಸಭೆಗಳು ನಡೆಯತೊಡಗಿದವು. ಶಾಖಾ ಕವಾಯತಿನಲ್ಲಿ ಉಪನ್ಯಾಸಕರು ಇದ್ದಿರುವುದು ಬಹಿರಂಗಗೊಳ್ಳತೊಡಗಿತು. ಇದನ್ನು ಬಯಲುಗೊಳಿಸಬಾರದೆಂದು ಪ್ರಗತಿಪರ ವೈಜ್ಞಾನಿಕ ಚಿಂತನೆಯ ವಿದ್ಯಾರ್ಥಿಗಳನ್ನು ಗುರಿ ಮಾಡಲಾಯಿತು. ಕಲಬುರಗಿ

ರಾಮನವಮಿ ಆಚರಣೆ

ಕೇಂದ್ರೀಯ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಅನೇಕ ವರ್ಷಗಳಿಂದ ನಮ್ಮ ಜನಪದರ ನಂಬಿಕೆಗಳ ಪ್ರತೀಕವಾಗಿ ಕೆಲವು ಶ್ರದ್ದಾ ಕೇಂದ್ರಗಳಿವೆ. ಒಂದು ಲಕ್ಷ್ಮಿ ಗುಡಿ, ಇನ್ನೊಂದು ಬೀರಲಿಂಗೇಶ್ವರ ಗುಡಿ, ಎರಡು ಮಜರ್‌ಗಳು, ಕಡಗಂಚಿ ಗ್ರಾಮದ ಜನತೆಯು ಆಗಾಗ ಇಲ್ಲಿಗೆ ಹೋಗಿ ಬರುತ್ತಿದ್ದರು. ಕಲಬುರಗಿ

ಕೇವಿವಿಯು ಕಂಪೌಂಡ್ ಕಟ್ಟಿದ ಮೇಲೆ ಅಲ್ಲಿಗೆ ಯಾರನ್ನೂ ಬಾರದಂತೆ ನೋಡಿಕೊಳ್ಳಲಾಯಿತು. ಸತ್ಯನಾರಾಯಣ ಬಟ್ಟು ಎಂಬ ಉಪಕುಲಪತಿ ಬಂದ ಮೇಲೆ ಲಕ್ಷ್ಮಿ ಗುಡಿಯನ್ನು ಅಭಿವೃದ್ಧಿಗೊಳಿಸಿ ಉತ್ತರ ಭಾರತದಿಂದ ಬಂದ ವಿದ್ಯಾರ್ಥಿಗಳ ಮೂಲಕ ಅಲ್ಲಿ ಪೂಜೆ ಆರಂಭಿಸಲಾಯಿತು. ಕಲಬುರಗಿ

ದಲಿತ ಮತ್ತು ಮುಸ್ಲಿಂ ವಿದ್ಯಾರ್ಥಿಗಳಿಗೆ ಗುಡಿಯ ಸುತ್ತ ಮುತ್ತ ಕಸಗುಡಿಸುವಂತೆ ಒತ್ತಾಯಿಸಿದ್ದನ್ನು ವಿದ್ಯಾರ್ಥಿಗಳು ಪ್ರತಿಭಟಿಸಿದರು. ರಾಮನವಮಿಯ ಆಚರಣೆಯು ಅದ್ಧೂರಿಯಿಂದ ನಡೆಯತೊಡಗಿತು. ಆಂತರಿಕವಾದ ಧಾರ್ಮಿಕ ಸಭೆ ನಡೆಸಿ ಎಲ್ಲ ಉಪನ್ಯಾಸಕರು ತಮ್ಮ ತಮ್ಮ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸುವಾಗ, ಅವುಗಳಿಗೆ ರಾಮಾಯಣ ಮತ್ತು ಮಹಾಭಾರತದ ಅಂಶಗಳನ್ನು ಜೋಡಿಸಿ ಹೇಳಬೇಕೆಂದು ತಾಕೀತು ಮಾಡಲಾಯಿತು. “ಈಗಿನ ವಿದ್ಯಾರ್ಥಿಗಳು ವಿಜ್ಞಾನ ತಂತ್ರಜ್ಞಾನ ಬಲ್ಲವರು. ಎಲ್ಲವನ್ನೂ ಹೇಗೆ ಜೋಡಿಸಲು ಸಾಧ್ಯ?” ಎಂದು ಪ್ರಶ್ನಿಸಿದ ಒಬ್ಬನೇ ಒಬ್ಬ ಉಪನ್ಯಾಸಕನ ಬಾಯಿ ಮುಚ್ಚಿಸಲಾಯಿತು.

ವಿದ್ಯಾರ್ಥಿನಿಯ ಆತ್ಮಹತ್ಯೆಯು ಅನೇಕ ಅನುಮಾನಗಳನ್ನು ಹುಟ್ಟುಹಾಕಿದೆ

ಈಗಾಗಲೇ ನಾಡಿನ ಜನತೆಗೆ ತಿಳಿದು ಬಂದ ಅತ್ಯಂತ ದುಖದಾಯಕ ಸಂಗತಿಯೆಂದರೆ, ವಿದ್ಯಾರ್ಜನೆಗಾಗಿ ಬಂದಿರುವ 20 ವರ್ಷ ವಯಸ್ಸಿನ ಓಡಿಸ್ಸಾ ಮೂಲದ ವಿದ್ಯಾರ್ಥಿನಿಯು ನೇಣಿಗೆ ಶರಣಾಗಿದ್ದು. ಒಂದು ತಿಂಗಳಲ್ಲಿ ಆತ್ಮಹತ್ಯೆ ಪ್ರಯತ್ನಗಳಲ್ಲಿ ಇದು ಎರಡನೆಯದ್ದು. ಒಬ್ಬ ವಿದ್ಯಾರ್ಥಿನಿಯು ಉಳಿದುಕೊಂಡಿದ್ದಾಳೆ. ಹಿಂದಿನ ದಿನ ತನ್ನ ನೋವನ್ನು ಸ್ಟುಡೆಂಟ್ ವೆಲ್ ಫೇರ್ ಅಧಿಕಾರಿಗಳ ಗಮನಕ್ಕೆ ತಂದು ಕಣ್ಣೀರುಗರೆದು ಹೋದ ವಿದ್ಯಾರ್ಥಿನಿಯು ಮರುದಿನದಲ್ಲಿ ತನ್ನ ಜನ್ಮ ದಿನದಂದೇ ನೇಣಿಗೆ ಏರಿದ್ದಾಳೆ. ಕಲಬುರಗಿ

ಅತ್ಯಂತ ಘಾಸಿಗೊಳಿಸಿರುವ ಪ್ರಕರಣವಿದು. ಕಾರಣವೇನಿರಬಹುದು? ಅವಳು ಸಂಬಂಧಪಟ್ಟ ಅಧಿಕಾರಿಗೆ ಏನು ಹೇಳಿರುವಳು? ಅವಳನ್ನು ಅಪ್ತ ಸಮಾಲೋಚನೆಯ ಮೂಲಕ ಸಂಕಟವನ್ನು ಶಮನಗೊಳಿಸಲು ಪ್ರಯತ್ನಿಸಬಹುದಿತ್ತು. ದುಃಖಿತಳಾದ ಅವಳನ್ನು ಒಂಟಿಯಾಗಿ ಬಿಡದಂತೆ ನೋಡಿಕೊಳ್ಳಬಹುದಿತ್ತು. ಅವಳನ್ನು ಉಳಿಸಿಕೊಳ್ಳಲು ಗಂಭೀರ ಕ್ರಮಗಳು ಏಕೆ ನಡೆಯಲಿಲ್ಲ? ಅವಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತೇ? ಅಥವ ಇನ್ನೇನಾದರೂ ಇದ್ದಿರಲೇಬಹುದಲ್ಲ? ಒಂದು ಜೀವವು ಸುಮ್ಮನೇ ತನ್ನನ್ನು ತಾನೇ ಅಂತ್ಯಗೊಳಿಸಿಕೊಳ್ಳುವುದಿಲ್ಲ. ಈ ಆತ್ಮಹತ್ಯೆಯು ಅನೇಕ ಅನುಮಾನಗಳನ್ನು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ದಲಿತ ವಿದ್ಯಾರ್ಥಿನಿಯು ನೇಣು ಹಾಕಿಕೊಂಡ ಕೋಣೆಯ ಬಾಗಿಲನ್ನು ಪೊಲೀಸ್ ಸಮ್ಮುಖದಲ್ಲಿ ತೆಗೆಸಬೇಕಿತ್ತು. ಒಂದು ವೇಳೆ ಬಾಗಿಲು ತೆಗೆದರೂ ಒಳಗೆಲ್ಲ ಓಡಾಡಿ ಸಾಕ್ಷಿ ನಾಶಗೊಳಿಸಬಾರದು. ಆದರೆ ಇಲ್ಲಿ ಅದೆಲ್ಲವೂ ನಡೆದಿದೆ. ಯಾಕೆ ನೇಣಿಗೆ ಶರಣಾದಳು ಎಂಬ ಒಂದು ಸಣ್ಣ ತನಿಖೆಯನ್ನೂ ನಡೆಸಲಿಲ್ಲ ಎಂಬುದು ಅತ್ಯಂತ ಆತಂಕದ ಸಂಗತಿಯಾಗಿದೆ. ಕಲಬುರಗಿ

ಸಾಂವಿಧಾನಿಕ ನಿಲುವುಗಳ ಶೈಕ್ಷಣಿಕ ವ್ಯವಸ್ಥೆಗೆ ಎಳ್ಳುನೀರು

ಉನ್ನತ ಶಿಕ್ಷಣ ಪಡೆಯಲು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ದೂರದ ನಾಡಿನಿಂದ ಇಲ್ಲಿಗೆ ವಿದ್ಯಾರ್ಜನೆಗಾಗಿ ವಿದ್ಯಾರ್ಥಿಗಳು ಬರುತ್ತಾರೆ. ಅವರಿಗೆ ವೈಜ್ಞಾನಿಕ, ವೈಚಾರಿಕ ಶಿಕ್ಷಣ ಕೊಟ್ಟು, ದೇಶದ ಭವಿಷ್ಯದ ಉತ್ತಮ ನಾಗರೀಕರನ್ನಾಗಿ ರೂಪಿಸುವ ಹೊಣೆಯನ್ನು ವಿಶ್ವವಿದ್ಯಾಲಯ ಹೊಂದಿರಬೇಕು. ಆದರೆ ಕಡಗಂಚಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯವು ಈಚೆಗಿನ ವರ್ಷಗಳಲ್ಲಿ ಸಾಂವಿಧಾನಿಕ ನಿಲುವುಗಳ ಶೈಕ್ಷಣಿಕ ವ್ಯವಸ್ಥೆಗೆ ಎಳ್ಳುನೀರು ಬಿಡಲಾಗಿದೆ.

ಬದಲಿಗೆ ವಿದ್ಯಾರ್ಥಿಗಳನ್ನು ಕೋಮುವಾದಿ ಚಟುವಟಿಕೆಗಳಲ್ಲಿ ತೊಡಗಿಸಲಾಗುತ್ತಿದೆ. ಎಲ್ಲಿ ಕೋಮುವಾದಿ ಸಿದ್ಧಾಂತಗಳು ಮನೆ ಮಾಡುತ್ತವೆಯೊ, ಅಲ್ಲಿ ಮಹಿಳೆ, ದಲಿತ ಮತ್ತು ಅಲ್ಪಸಂಖ್ಯಾತರನ್ನು ಅತ್ಯಂತ ಕೀಳಾಗಿ ಕಾಣುವ ಮತ್ತು ಅವರ ವಿರುದ್ಧದ ಮನೋಭಾವ ಮೂಡುವ ಎಲ್ಲ ಸಾಧ್ಯತೆಗಳು ತೆರೆದುಕೊಳ್ಳುತ್ತವೆ. ಕೇವಿವಿಯಲ್ಲಿ ಆಗುತ್ತಿರುವುದು ಇದೇ. ಕೇವಿವಿಯಲ್ಲಿ ಹೋಮ ಹವನಗಳು, ಸನಾತನಿ ಮತೀಯ ಚಟುವಟಿಕೆಗಳು ಯಾವ ಎಗ್ಗಿಲ್ಲದೆ ನಡೆಯುತ್ತವೆ. ಕಲಬುರಗಿ

ಕ್ಯಾಂಟಿನ್ ನಡೆಸುವಾತನಿಂದ ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ

ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯಗಳನ್ನು ಮುಚ್ಚಿ ಹಾಕಲಾಗುತ್ತಿದೆ. ಬಿಜೆಪಿ ಪಕ್ಷವೊಂದರ ಸಂಬಂಧಿತ ವ್ಯಕ್ತಿಗೆ ಕ್ಯಾಂಟಿನ್ ನಡೆಸಲು ಪರವಾನಗಿ ಕೊಡಲಾಗಿತ್ತು. ರಾಜಕೀಯ ಪಕ್ಷ ಬಿಜೆಪಿಯ ಸಿಂಬಲ್ ಇರುವ ಕಾರು ವಿವಿಯ ಪ್ರಾಂಗಣದಲ್ಲಿಯೇ ಇರಲು ಅವಕಾಶ ಕಲ್ಪಿಸಲಾಗಿತ್ತು. ಕ್ಯಾಂಟಿನ್ ನಡೆಸುವಾತನು ವಿದ್ಯಾರ್ಥಿನಿಯೊಬ್ಬಳಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ದನ್ನು ಅವಳು ದೂರು ಸಲ್ಲಿಸಿದರೂ, ರಾಜಿ ಮಾಡಿಸಿ ಕೇಸು ಮುಚ್ಚಿ ಹಾಕಿದ್ದು ನಡೆದಿದೆ. ಹೊರಗೆಲ್ಲೂ ಹೇಳದಂತೆ ತಾಕೀತು ಮಾಡಲಾಗಿದೆ. ಕಲಬುರಗಿ

ಹೀಗೆ ರಾಜಿ ಮಾಡಿಸಿ ಬಾಯಿ ಮುಚ್ಚಿಸುವುದು ಉಪಕುಲಪತಿ ಸತ್ಯಾನಾರಾಯಣ ಬಟ್ಟು ಮತ್ತು ರಿಜಿಸ್ಟಾರ್ ಸಮ್ಮುಖದಲ್ಲಿ ನಡೆದಿದೆ. ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳದಂತಹ ಭಯಾನಕ ವಾತಾವರಣ ಇರುವಾಗ ತಪ್ಪಿತಸ್ಥರಿಗೆ ಶಿಕ್ಷಿಸುವ ಕರ್ತವ್ಯ ವಿವಿಯದ್ದಾಗಿತ್ತು. ಆದರೆ ಸಂಬಂಧಪಟ್ಟ ವಿಸಿ ಮತ್ತು ಅಧಿಕಾರಿಗಳು ಹಾಗೆ ಮಾಡಲಿಲ್ಲ, ಏಕೆ ಶಿಕ್ಷಿಸಲಿಲ್ಲ ಎಂದು ಕೇಳಿದರೆ ಕ್ಯಾಂಟಿನ್ ಪರವಾನಗಿ ರದ್ದುಗೊಳಿಸಲಾಗಿದೆ, ಅದೇ ಶಿಕ್ಷೆ ಎಂದು ರಿಜಿಸ್ಟ್ರಾರ್ ಹೇಳುತ್ತಾರೆ. ಕಲಬುರಗಿ

ಇದರಿಂದ ಕಂಡುಬರುವುದು ಏನೆಂದರೆ, ವಿದ್ಯಾರ್ಥಿಗಳಿಗೆ ವಿವಿಯಲ್ಲಿ ಯಾವುದೇ ರಕ್ಷಣೆ ಇಲ್ಲ ಎಂಬುದು. ಹೀಗಾಗಿಯೇ ದಲಿತ ವಿದ್ಯಾರ್ಥಿನಿಯು ತನ್ನ ನೋವನ್ನು ಹೇಳಿಕೊಂಡ ನಂತರವೂ ಅವಳಲ್ಲಿ ಬದುಕುವ ಮತ್ತು ಸಮಸ್ಯೆ ಎದುರಿಸುವ ಮನೋಬಲ ಮೂಡಿಸಲು ಆಗಲಿಲ್ಲ. ಎಲ್ಲ ಆಸರೆಗಳು ಕಳೆದು ಹೋದ ಮೇಲೆ ಜೀವವು ಸಾಯುವ ಆಲೋಚನೆಗೆ ಇಳಿಯುವುದು ಸಹಜವಾಗಿದೆ. ಕಲಬುರಗಿ

ಮನುಸ್ಮೃತಿಯನ್ನು ಜಾರಿಗೊಳಿಸಲು ಆದ್ಯತೆ

ಕೋಮುವಾದದ ಚಟುವಟಿಕೆಗಳೇ ಆದ್ಯತೆಯಾಗುವುದೆಂದರೆ, ಮನುಸ್ಮೃತಿಯನ್ನು ಜಾರಿಗೊಳಿಸುವ ಆದ್ಯತೆ ಎಂದರ್ಥ. ಮನುಸ್ಮೃತಿ ಎಂದರೆ ದಲಿತರನ್ನು, ಮಹಿಳೆಯರನ್ನು, ಶ್ರಮಿಕರನ್ನು ಅದು ಅಪಮಾನಗೊಳಿಸುತ್ತದೆ, ತುದ್ದೀಕರಿಸುತ್ತದೆ. ಅವರ ಅಸ್ತಿತ್ವ, ಅಸ್ಮಿತೆಗೆ ಧಕ್ಕೆ ತರುತ್ತದೆ. ಅಲ್ಪಸಂಖ್ಯಾತರನ್ನು ಕಲ್ಪಿತ ಶತ್ರುವಾಗಿಸಿ ಭಯೋತ್ಪಾದನೆಯ ಮೂಲಕ ಅವರ ಮನೋಬಲ ಕುಗ್ಗಿಸಲಾಗುತ್ತದೆ. ದುರಂತವೆಂದರೆ ಕೇವಿವಿಯು ಇಂತಹ ಎಲ್ಲ ಹೀನಾತಿ ಹೀನ ಚಟುವಟಿಕೆಗೆ ಕುಮ್ಮಕ್ಕು ಕೊಡುತ್ತಿದೆ. ಸುಳ್ಳುಗಳನ್ನು ಮಾದ್ಯಮಗಳ ಮೂಲಕ ಬಿತ್ತರಿಸಿ ಕೋಮು ಪ್ರಚೋದನೆ ಮಾಡುತ್ತಿದೆ. ದಲಿತ ವಿದ್ಯಾರ್ಥಿನಿಯ ಆತ್ಮಹತ್ಯೆಯ ಪ್ರಕರಣವನ್ನು ಮುಚ್ಚಿಹಾಕಲು ಅನೇಕ ವರ್ಷಗಳಿಂದ ಇರುವ ಮಜರ್ ಕುರಿತು ಸುಳ್ಳುಗಳನ್ನು ಮಾಧ್ಯಮಗಳ ಮೂಲಕ ಬಿತ್ತರಿಸಿ ಜನರ ಚಿತ್ತವನ್ನು ಬೇರೆಡೆ ತಿರುಗಿಸಲು ಷಡ್ಯಂತ್ರ ಹೆಣೆಯಲಾಗಿದೆ. ಚಟುವಟಿಕೆಗಳಿಂದ ದಲಿತ ವಿದ್ಯಾರ್ಥಿನಿಯ ಸಾಂಸ್ಥಿಕ ಸಾವನ್ನು (ಹತ್ಯೆಯನ್ನು) ಮುಚ್ಚಿ ಹಾಕುವ ಹುನ್ನಾರ ನಡೆಸಲಾಗುತ್ತಿದೆ.

ಮಾದ್ಯಮಗಳ ಮೂಲಕ ಮಜರ್ ಗಳ ಬಗ್ಗೆ ಸುಳ್ಳುಗಳ ಬಿತ್ತರ

ಈಗಾಗಲೇ ವಿವರಿಸಿದಂತೆ ಕೇಂದ್ರಿಯ ವಿನಿಯ ವ್ಯಾಪ್ತಿಯಲ್ಲಿ ಲಕ್ಷ್ಮಿ ಗುಡಿ, ಜೀರಲಿಂಗೇಶ್ವರ ಗುಡಿ ಮತ್ತು ಎರಡು ಮಜರ್ ಗಳು ಇದ್ದು, ಅವುಗಳಲ್ಲಿ ಲಕ್ಷ್ಮಿ ಗುಡಿಯನ್ನು ಆರ್ ಎಸ್ ಎಸ್. ಅಭಿವೃದ್ಧಿಪಡಿಸಿದೆ. ಈಗ ದಲಿತ ವಿದ್ಯಾರ್ಥಿನಿಯ ಆತ್ಮಹತ್ಯೆಯಿಂದ ಉಂಟಾಗುತ್ತಿರುವ ಕಾವನ್ನು ತಗ್ಗಿಸಲು ಉಳಿದ ಮಜರ್ ಗಳ ಬಗ್ಗೆ ಸುಳ್ಳುಗಳನ್ನು 2025ರ ಆಗಸ್ಟ್ 3ರಂದು ಮೂರು ಎಲೆಕ್ಟ್ರಾನಿಕ್ ಮಾದ್ಯಮಗಳ ಮೂಲಕ ಬಿತ್ತರಿಸಲಾಗಿದೆ. ಮೊದಲು ಒಂದೇ ಮಜರ್ ಇತ್ತು. ಈಗ ಎರಡು ಮಜರ್ ಗಳನ್ನು ಹೊಸದಾಗಿ ನಿರ್ಮಿಸಲಾಗುತ್ತಿದೆ. ಕರೆಂಟ್ ಕನೆಕ್ಷನ್ ಸಹ ಹೊಂದಲಾಗಿದೆ.

ಒಬ್ಬ ಮುಸ್ಲಿಂ ಪ್ರೊಫೆಸರ್ ಕುಮ್ಮಕ್ಕಿನಿಂದ ಈ ಸಮುದಾಯದ ವಿದ್ಯಾರ್ಥಿಗಳು ಮಜರ್ ಗಳನ್ನು ನಿರ್ಮಿಸಿ ಮತಾಂಧತೆ ಹೆಚ್ಛಿಸುತ್ತಿದ್ದಾರೆ ಎಂದು ದಿನವಿಡೀ ಬಿತ್ತರಿಸಲಾಯಿತು. ವಾಸ್ತವದಲ್ಲಿ ಇದು ಪೂರ್ಣ ಸುಳ್ಳು ಎಂಬುದನ್ನು ಕಡಗಂಚಿ ಗ್ರಾಮದ ಜನರು ವಿವರಿಸಿದರು. ಕೆಲವು ಮಾಧ್ಯಮದವರು ಸತ್ಯನಾರಾಯಣ ಬಟ್ಟು ಉಪಕುಲಪತಿಯನ್ನೇ ಪ್ರಶ್ನಿಸಲಾಗಿ ‘ಹಾಗೇನೂ ನಡೆದಿಲ್ಲ, ಎಲ್ಲವನ್ನೂ ಪರಿಶೀಲಿಸುತ್ತೇವೆ’ ಎಂದು ಸಮಜಾಯಿಸಿ ಕೊಟ್ಟಿದ್ದನ್ನು ಮಾಧ್ಯಮವು ಬಿತ್ತಿರಿಸಿತು.

ಹೊರಗಿನಿಂದ ಯಾರನ್ನೂ ಒಳಬಿಡಲಾರದ ಮೇಲೆ ಮಜರ್ ನಿರ್ಮಿಸಲು ಉಸುಕು, ಸಿಮೆಂಟು, ಇಟ್ಟಂಗಿ, ಕಲ್ಲುಗಳು ಹೇಗೆ ಒಳಹೋದವು? ಅಥವ ಶ್ರೀರಾಮಸೇನೆಯು ಸಿಂದಗಿಯಲ್ಲಿ ತಾವೇ ಪಾಕ್ ಧ್ವಜ ಹಾರಿಸಿ ಮುಸ್ಲಿಂರ ತಲೆಗೆ ಕಟ್ಟಿದಂತೆ, ಇಲ್ಲಿಯೂ ನೀವೇ ನಿರ್ಮಿಸಿ ಮುಸ್ಲಿಂರ ತಲೆಗೆ ಕಟ್ಟಿ, ಕೋಮು ದಂಗೆ ಹಬ್ಬಿಸಲು ಹುನ್ನಾರ ನಡೆಸುತ್ತಿರುವಿರೇನು? ಎಂದು ಕೇವಿವಿಯ ಮುಂದೆ ನಡೆದ ಹೋರಾಟದಲ್ಲಿ ಹೋರಾಟಗಾರರು ನೇರವಾಗಿ ಪ್ರಶ್ನಿಸಿದರು. ಈ ಸುಳ್ಳು ಸುದ್ದಿಯು ಕೋಮು ಪ್ರಚೋದನಾತ್ಮಕವಾಗಿದ್ದು, ಜನತೆಗೆ ತಪ್ಪು ಸಂದೇಶ ಕೊಟ್ಟು ವಿಷ ತುಂಬಿಸಲಾಗಿದೆ ಇದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದ್ದಕ್ಕೆ ಸತ್ಯನಾರಾಯಣ ಬಟ್ಟು ಬಳಿ ಉತ್ತರವಿರಲಿಲ್ಲ. ಎಲ್ಲದಕ್ಕೂ ಒಂದೇ ಉತ್ತರವೆಂದರೆ ‘ಪರಿಶೀಲಿಸುತ್ತೇವೆ..’ ಹೀಗೆ ಅತ್ಯಂತ ನಿರ್ಲಜ್ಜತೆಯಿಂದ ಕೇವಿವಿಯಲ್ಲಿ ಕೋಮುವಿಷ ಬೀಜ ಬಿತ್ತಿ ಬೆಳೆಯಲಾಗುತ್ತಿದೆ. ಕಲಬುರಗಿ

ಅಲ್ಪಸಂಖ್ಯಾತ ಉಪನ್ಯಾಸಕರನ್ನು ಬಲಿ ಮಾಡುವ ಷಡ್ಯಂತ್ರ

ಕೇವಿವಿಯು ಏಕಕಾಲಕ್ಕೆ ಅನೇಕ ಅಪಾಯಗಳನ್ನು ನಮ್ಮ ನಾಡಿಗೆ ತಂದೊಡ್ಡುತ್ತಿದೆ. ಕೋಮುಭಾವನೆ ಪ್ರಚೋದಿಸಲು ಹಿಜಾಬ್ ಧರಿಸಲು ಒತ್ತಾಯಿಸಿದ್ದರು ಎಂದು ಸುಳ್ಳು ದೂರನ್ನು ಮೇಲ್ ಮೂಲಕ, ಹೈದರಾಬಾದ್ ಮೂಲದ ಸಂಘವೊಂದು ಕಳಿಸಿದ್ದನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ಕೈಗೊಳ್ಳುವುದಾಗಿ ಕೇವಿವಿ ಹೇಳುತ್ತದೆ. ಕೇವಿವಿಯ ಅಲ್ಪಸಂಖ್ಯಾತ ಸಮುದಾಯದ ಇತಿಹಾಸ ವಿಭಾಗದ ಪ್ರೊಫೆಸರ್ ತಮ್ಮ ವಿದ್ಯಾರ್ಥಿಗಳನ್ನು ಅಧ್ಯಯನ ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ಎಲ್ಲ ಐತಿಹಾಸಿಕ ತಾಣಗಳಂತೆ ದರ್ಗಾವೊಂದಕ್ಕೂ ಹೋಗಿದ್ದಾರೆ. ಅಲ್ಲಿ ಪುರುಷರು ಮಹಿಳೆಯರು ಎಲ್ಲರೂ ಒಳಗೆ ಬರುವಾಗ ತಲೆಗೆ ವಸ್ತ್ರ ಹಾಕಿಕೊಳ್ಳಿ ಎಂದು ಹೇಳಿದ್ದನ್ನು ಪ್ರೊಫೆಸರು ಅದನ್ನು ತರ್ಜುಮೆ ಮಾಡಿ ವಿದ್ಯಾರ್ಥಿಗಳಿಗೆ ಹೇಳಿದ್ದಾರೆ.

ಅಷ್ಟೆ ನಡೆದಿದ್ದು. ಮತ್ತೇನಿಲ್ಲ. ಆದರೆ ಅನೇಕ ತಿಂಗಳುಗಳ ನಂತರ ಹೈದಾರಾಬಾದ್ ನ ಸಂಸ್ಥೆಯೊಂದು ಮೇಲ್ ಮೂಲಕ ಈ ಪ್ರೊಫೆಸರ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸುವಂತೆ ಒತ್ತಾಯ ಮಾಡಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂಬ ದೂರು ಬರುತ್ತದೆ. ಹಾಗೆ ನಡೆದಿದೆ ಎಂದು ಯಾವ ವಿದಾರ್ಥಿನಿಯೂ ದೂರು ಕೊಡವಿದ್ದರೂ, ರಿಜಿಸ್ಟಾರ್ ತನಿಖೆ ನಡೆಸುವುದಾಗಿ ಮಾದ್ಯಮಕ್ಕೆ ಹೇಳುತ್ತಾರೆ.

ಆದರೆ ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯ ಮೇಲಿನ ಲೈಂಗಿಕ ಕಿರುಕುಳದ ದೂರು ಬಂದರೆ ಅದನ್ನು ಮುಚ್ಚಿ ಹಾಕಲಾಗುತ್ತದೆ. ನಮ್ಮ ನಾಡಿನ ದರ್ಗಾ, ಗುರುದ್ವಾರ ಮುಂತಾದ ಶ್ರದ್ಧಾ ಕೇಂದ್ರಗಳಲ್ಲಿ ದರ್ಶನಕ್ಕೆ ಹೋದ ಎಲ್ಲರೂ ತಲೆಗೆ ವಸ್ತ್ರ ಹಾಕಿಕೊಳ್ಳುವರು. ಆದರೆ ಹಿಜಾಬ್ ಎಂಬ ಶಬ್ದ ಬಳಸಿ ಅಲ್ಪಸಂಖ್ಯಾತ ಉಪನ್ಯಾಸಕರನ್ನು ಬಲಿ ಮಾಡುವ ಷಡ್ಯಂತ್ರವನ್ನು ಕೇವಿವಿಯು ಹೆಣೆಯುತ್ತದೆ. ತನ್ಮೂಲಕ ನಮ್ಮ ನಾಡಿನ ಭಾವೈಕ್ಯತೆಗೆ ಧಕ್ಕೆ ತರುತ್ತದೆ. ವಿದ್ಯಾರ್ಥಿಗಳಲ್ಲಿ ಕೋಮು ವಿಭಜನೆ ತರುತ್ತದೆ. ಸಮಾಜದಲ್ಲಿ ಭಯ, ಆತಂಕವನ್ನು ಹುಟ್ಟು ಹಾಕುತ್ತದೆ. ಇಂತಹ ಸಂವಿಧಾನ ವಿರೋಧಿ ಕೃತ್ಯಕ್ಕಾಗಿ ಕೇವಿವಿಯ ವಿಸಿಯವರಿಗೆ ಅಧಿಕಾರ ಕೊಟ್ಟವರು ಯಾರು?

ನಾಡಿನ ಬಹುಸಾಂಸ್ಕೃತಿಕ ಪರಂಪರೆಯನ್ನು ನಾಶಗೊಳಿಸುವ ಪ್ರಯತ್ನ

ಕೇವಿವಿಯು ಇಲ್ಲಿ ಬರುವ ಮೂಲಕ ಶೈಕ್ಷಣಿಕ ಅಭಿವೃದ್ಧಿ, ತನ್ಮೂಲಕ ನಾಡಿನ ಅಭಿವೃದ್ಧಿಯಾಗಲಿ ಎಂದು ನಮ್ಮ ನಿರೀಕ್ಷೆ ಇತ್ತು. ಆದರೆ ವಿಸಿಯವರಾದ ಸತ್ಯನಾರಾಯಣ ಬಟ್ಟು ಅವರು ಕೆಲವು ಸಿಬ್ಬಂದಿಗಳನ್ನು ಕಟ್ಟಿಕೊಂಡು ಕೇವಿವಿಯಲ್ಲಿ ಕೋಮುವಾದಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಮತ್ತು ನಮ್ಮ ನಾಡಿನ ಬಹುಸಾಂಸ್ಕೃತಿಕ ಪರಂಪರೆಯನ್ನು ನಾಶಗೊಳಿಸಿ ಜನರಲ್ಲಿ ಕೋಮುವಿಷವನ್ನು ಹಬ್ಬಿಸುತ್ತಿದ್ದಾರೆ. ಇವರು ಈ ಕುಕೃತ್ಯಕ್ಕಾಗಿ ವಿಸಿಯಾಗಿ ಯಾಕೆ ಇರಬೇಕು? ದಲಿತ ವಿದ್ಯಾರ್ಥಿನಿಯು ಸತ್ತರೆ ಸಂತಾಪವಿಲ್ಲದ ವಿಸಿ ಯಾಕೆ ಬೇಕು? ಲೈಂಗಿಕ ಕಿರುಕುಳದ ದೂರು ಬಂದರೂ ಕ್ರಮವಹಿಸದ ವಿಸಿ ಯಾಕೆ ಬೇಕು? ಈ ವಿಸಿಯವರು ಪ್ರತಿಪಾದಿಸುತ್ತಿರುವುದು ಮನುಸ್ಮೃತಿಯನ್ನು, ಚಾತುರ್ವರ್ಣ ಪದ್ಧತಿಯನ್ನು. ಆದ್ದರಿಂದಲೇ ಮಹಿಳೆಯರನ್ನು, ದಲಿತರನ್ನು, ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗಿದೆ. ಇದರಿಂದ ಆತ್ಮಹತ್ಯೆ, ಕಿರುಕುಳಗಳನ್ನು ವಿದ್ಯಾರ್ಥಿಗಳು ಎದುರಿಸುವಂತಾಗಿದೆ.

ವಿದ್ಯಾರ್ಥಿನಿಯ ಸಾಂಸ್ಥಿಕ ಹತ್ಯೆಯ ತನಿಖೆ ನಡೆಯಬೇಕು

ದಲಿತ ವಿದ್ಯಾರ್ಥಿನಿಯ ಸಾಂಸ್ಥಿಕ ಹತ್ಯೆಯ ತನಿಖೆ ನಡೆಯಬೇಕು. ಪೋಲಿಸರು ಬರುವ ಮುನ್ನವೇ ಬಾಗಿಲು ಒಡೆದು ಒಳಗೆಲ್ಲ ಓಡಾಡಿದ್ದು ಯಾಕೆ ಎಂಬುದನ್ನು ಜನತೆಗೆ ವಿವರಿಸಬೇಕು. ತನಿಖೆಯ ವ್ಯಾಪ್ತಿಗೆ ಕುಲಪತಿಗಳನ್ನೂ, ಸ್ಟುಡೆಂಟ್ ವೆಲ್ ಫೇರ್ ಅಧಿಕಾರಿ ಬಸವರಾಜ ಕುಬಕಡ್ಡಿಯವರನ್ನೂ ತರಬೇಕು. ಏಕೆಂದರೆ ಮೃತಳು ಕುಬಕಡ್ಡಿಯವರ ಮುಂದೆ ತನ್ನ ಗೋಳನ್ನು ತೋಡಿಕೊಂಡಿದ್ದಾಳೆ ಎಂಬ ವರದಿ ಇದೆ. ಹಾಗಾದರೆ ವಿದ್ಯಾರ್ಥಿಗಳಿಗೆ ಮನೋಬಲ ಮೂಡಿಸುವ ಸಾಮಾನ್ಯ ಸಾಮರ್ಥ್ಯವೂ ಕೇವಿವಿಗಿಲ್ಲ ಎಂದರ್ಥವಲ್ಲವೆ? ಮುಂದಕ್ಕೆ ಇಂತಹ ಪ್ರಕರಣಗಳು ಘಟಿಸದಂತೆ ಕೇವಿವಿಯು ಏನು ಕ್ರಮವಹಿಸುತ್ತದೆ ಎಂಬುದನ್ನು ಜನತೆಗೆ ವಿವರಿಸಬೇಕು. ಲೈಂಗಿಕ ದೌರ್ಜನ್ಯ ತಡೆ ಸಮಿತಿಯನ್ನು ರಚಿಸಿ ಕ್ರಿಯಾಶೀಲಗೊಳಿಸಬೇಕು. ಇಷ್ಟೆಲ್ಲ ಸಮಸ್ಯೆಗಳಿಗೆ ಮೂಲ ಕಾರಣವಾಗಿರುವ ಕೇವಿವಿಯ ಉಪಕುಲಪತಿಗಳಾದ ಸತ್ಯನಾರಾಯಣ ಬಟ್ಟು ಅವರ ಸ್ಥಾನವನ್ನು ಕೂಡಲೇ ತೆರವುಗೊಳಿಸಬೇಕು ಮುಂತಾದ ಹಕ್ಕೊತ್ತಾಯಗಳನ್ನು ಇಟ್ಟುಕೊಂಡು ಎಸ್ ಎಫ್ ಐ. ಡಿವೈಎಫ್ ಐ, ಜನವಾದಿ ಮಹಿಳಾ ಸಂಘಟನೆ ಮತ್ತು ದಲಿತ ಹಕ್ಕುಗಳ ಸಮಿತಿಗಳು 2025ರ ಆಗಸ್ಟ್ 5ರಂದು ಕೇವಿವಿಯ ಮುಂದೆ ತೀವ್ರತರ ಪ್ರತಿಭಟನೆ ನಡೆಸಿವೆ.

ಕೋಮುವಾದವು ಜಾತಿ, ಲಿಂಗ ತಾರತಮ್ಯವನ್ನು ಉಲ್ಬಣಗೊಳಿಸುವುದೆ? ಹೌದು. ಉಲ್ಬಣಗೊಳಿಸುವುದು ಮಾತ್ರವಲ್ಲ ಸಮಾಜವನ್ನು ಎಲ್ಲ ರೀತಿಯ ತಾರತಮ್ಯದಿಂದ ಛಿದ್ರಗೊಳಿಸಿ. ಕಲ್ಪಿತ ಶತೃವೊಂದನ್ನು ಸೃಷ್ಟಿಸಿ ಅದು ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುತ್ತದೆ. ಕೋಮುವಿಭಜನೆಗೆ ತೊಡಗುತ್ತದೆ. ತಾರತಮ್ಯವೆಂಬುದು ಮಹಿಳೆಯರು ಮತ್ತು ದಲಿತರ ಮೇಲಿನ ಎಲ್ಲ ರೀತಿಯ ದೌರ್ಜನ್ಯದ ಕ್ರೌರ್ಯತೆಯಲ್ಲಿ ಅನಾವರಣಗೊಳ್ಳುತ್ತದೆ. ಲೈಂಗಿಕ ಕಿರುಕುಳ, ಅತ್ಯಾಚಾರಗಳು ಸಾಮಾನ್ಯವಾಗಿ ಘಟಿಸಲ್ಪಡುತ್ತವೆ. ಕ್ರಮೇಣ ಇಡೀ ಸಮಾಜವನ್ನೇ ಮನುವಾದಿ ನೆಲೆಯತ್ತ ಜಾರಿಸಲ್ಪಡುತ್ತದೆ. ಕೋಮುವಾದೀಕರಣದ ದುಷ್ಪರಿಣಾಮಕ್ಕೆ ಬಲಿಯಾಗುವುದು ಮಹಿಳೆಯರು, ಮಕ್ಕಳು, ದಲಿತರು, ಅಲ್ಪಸಂಖ್ಯಾತರು ಮತ್ತು ಸಮಸ್ತ ಶ್ರಮಿಕರು. ಇದನ್ನು ತಡೆಗಟ್ಟಲು ಕೋಮುವಾದದ ಅಪಾಯವನ್ನು ಮನಗಾಣಿಸುತ್ತ ಸಂಘಟಿತ ಹೋರಾಟಗಳು ತೀವ್ರಗೊಳ್ಳಬೇಕಾಗುತ್ತದೆ. ವೈಜ್ಞಾನಿಕ ವೈಚಾರಿಕ ಚಿಂತನೆಗಳು ಆಯಾಸವಿಲ್ಲದೆ ಜನಮಾನಸಕ್ಕೆ ತಲುಪಿಸಲು ಶ್ರಮಿಸಬೇಕಾಗುತ್ತದೆ.

ಹಿಂದಿನಿಂದಲೂ ಹೋರಾಟಗಳು ಮೊದಲುಗೊಂಡಿವೆ:-

ಕೇವಿವಿಯೊಳಗಿನ ಈ ಕೋಮುವಾದಿ ಚಟುವಟಿಕೆಗಳು ಹೊರಜಗತ್ತಿಗೆ ಆಘಾತಕಾರಿಯಾದದ್ದಾಗಿತ್ತು. ರೋಹಿಣಾಕ್ಷ ಶಿರ್ಲಾಲ ಎಂಬ ಉಪನ್ಯಾಸಕ ಸ್ಥಾನ್ ಸ್ವಾಮಿ ಕುರಿತು ಬರೆದ ಮತೀಯ ಲೇಖನವನ್ನು ಪ್ರಶ್ನಿಸಿ ಕಲಬುರಗಿಯ ಬುದ್ದಿಜೀವಿಗಳು ಹೋರಾಟಗಾರರು ಕೇಂದ್ರಿಯ ವಿವಿಗೆ ಹೋಗಿ ಎಚ್ಚರಿಕೆ ಕೊಟ್ಟು ಬಂದರು. ವಿವಿಯ ಒಳಗೂ ವಿದ್ಯಾರ್ಥಿಗಳು ಹೋರಾಟ ಸುರು ಮಾಡಿದರು. ಸ್ವತಃ ಉಪಕುಲಪತಿಗಳೇ ಮನುಸ್ಮೃತಿಯ ಚಟುವಟಿಕೆ ನಡೆಸುವಾಗ ವಿದ್ಯಾರ್ಥಿಗಳು ಬಾಬಾಸಾಹೇಬ ಅಂಬೇಡ್ಕರ್ ಮೂರ್ತಿಯನ್ನು ಸ್ಥಾಪಿಸುವ ಮೂಲಕ ಬಂಡಾಯ ಸಾರಿದರು. ಇದರಿಂದ ಕೆರಳಿದ ಆಡಳಿತ ಮಂಡಳಿಯು ಮುಂಚೂಣಿಯಲ್ಲಿರುವ ವಿದ್ಯಾರ್ಥಿಗಳಿಗೆ ಕಿರುಕುಳ ಕೊಡತೊಡಗಿದರು. ಕಳೆದ ವರ್ಷ ಕಲಬುರಗಿ ನಗರದಲ್ಲಿ ಕೇಂದ್ರೀಯ ವಿಶ್ವ ವಿದ್ಯಾಲಯ ಶುದ್ದೀಕರಣ ಹೋರಾಟ ಆರಂಭಿಸಲಾಯಿತು. ಕೋಮುವಾದ ಅಳಿಸಿ ಕೇಂದ್ರೀಯ ವಿಶ್ವ ವಿದ್ಯಾಲಯ ಉಳಿಸಿ ಸಮಿತಿ ರಚಿಸಲಾಯಿತು. ಎಲ್ಲ ಜೀವಪರ ಶಕ್ತಿಗಳನ್ನು ಒಗ್ಗೂಡಿಸಿ ಚಲೋ ಕೇವಿವಿ ನಡೆಸಲಾಯಿತು.

ಸಾವಿರಾರು ಜನರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಸತ್ಯನಾರಾಯಣ ಬಟ್ಟು ಹಠಾವೋ ಘೋಷಣೆಯಲ್ಲೊಂದಾಗಿತ್ತು. ಹೈದರಾಬಾದ ತರುತ್ತಿರುವುದನ್ನು ಖಂಡಿಸಲಾಯಿತು ಮತ್ತು ಎಚ್ಚರಿಕೆ ಕೊಡಲಾಯಿತು. ನಿಲ್ಲದ ಕೇವಿವಿಯ ಕೇಸರಿಕರಣ ತಡೆಯಲು ಹೋರಾಟವು ಜನಾಂದೋಲನವು ಇದಕ್ಕೆ ತಕ್ಕ ಉತ್ತರವಾಗುವುದು. ಕರ್ನಾಟಕದ ಭಾವೈಕ್ಯ ಪರಂಪರೆಗೆ ಧಕ್ಕೆ ಆಯಾಮದಲ್ಲಿ ಹುರಿಗೊಳಿಸಬೇಕಿದೆ.

ಇದನ್ನೂ ನೋಡಿ: ಸಿಯುಕೆ| ಶೈಕ್ಷಣಿಕ ಹತ್ಯೆ – ಪೊಲೀಸ್‌ ಬರುವ ಮುನ್ನವೇ ಕಾರ್ಪೆಂಟರ್‌ ಮೂಲಕ ಬಾಗಿಲು ಮುರಿದಿದ್ದು ಯಾಕೆ ? #CUK

Donate Janashakthi Media

Leave a Reply

Your email address will not be published. Required fields are marked *