ಪ್ರೊ.ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ರಿಷಿ ಸುನಕ್ ಅವರನ್ನು ಏಷ್ಯಾ ಮೂಲದ ಮೊದಲ ಬ್ರಿಟಿಷ್ ಪ್ರಧಾನ ಮಂತ್ರಿ, ಮೊದಲ ಹಿಂದೂ ಪ್ರಧಾನಿ, ಎಂದೆಲ್ಲ ಭಾರತದಲ್ಲಿ ಬಹಳಷ್ಟು ಗುಲ್ಲೆದ್ದುದರ ಹೊರತಾಗಿಯೂ, ಅವರ ಅಸ್ಮಿತೆಯ ಬಗ್ಗೆ ಹರಡಿದ ಸಂಗತಿಗಳು ಕ್ಷುಲ್ಲಕವೂ ಹೌದು; ಅಪ್ರಸ್ತುತವೂ ಹೌದು. ಮುಖ್ಯವಾದ ವಿಷಯವೆಂದರೆ, ಸುನಕ್ ಬ್ರಿಟಿಷ್ ಹಣಕಾಸು ಸಾಮ್ರಾಜ್ಯದ ಭದ್ರಕೋಟೆ ಲಂಡನ್ ನಗರದ ಆಯ್ಕೆ. ಈ ಲಂಡನ್ ನಗರ-ನಿರ್ದೇಶಿತ ಅದೃಶ್ಯ ರಾಜಕೀಯ ಪ್ರಕ್ರಿಯೆಯು ಲಿಜ್ ಟ್ರಸ್ ಅವರಿಗೆ ಬದಲಿಯಾಗಿ ರಿಷಿ ಸುನಕ್‌ರನ್ನು ಆಯ್ಕೆ ಮಾಡಿದ ಮುಖ್ಯ ಕಾರಣವೆಂದರೆ, ಅವರ ಅಜೆಂಡಾ. ಸುನಕ್ ಕಾರ್ಯಕ್ರಮವು ಹೆಚ್ಚಿನ ನಿರುದ್ಯೋಗದೊಂದಿಗೆ ಹಣಕಾಸು ಕುಳಗಳಿಗೆ ಲಾಭ ಮಾಡಿಕೊಡುವ ಸಾಧ್ಯತೆಯಿದೆ. ಇವೆರಡೂ ಕ್ರಮಗಳು ಲಂಡನ್ ನಗರದ ಬಯಕೆಗಳಿಗೆ ಅನುಗುಣವಾಗಿವೆ. ಇತ್ತ ಅವರು ಲಂಡನ್ ನಗರಕ್ಕೆ ಆಕರ್ಷಕವಾಗುವ ಅಂಶವೇ ದುಡಿಯುವ ವರ್ಗದ ಪಾಲಿಗೆ ದುಃಸ್ವಪ್ನವೂ ಆಗುತ್ತದೆ.
ಬ್ರಿಟನ್ನಿನ ರಾಜಧಾನಿ ಲಂಡನ್ ನಗರದ ಮಧ್ಯಭಾಗದಲ್ಲಿರುವ ಲಿವರ್‌ಪೂಲ್ ಸ್ಟ್ರೀಟ್ ರೈಲು ನಿಲ್ದಾಣದಿಂದ ಹಿಡಿದು ಒಂದು ಚದರ ಕಿಲೋಮೀಟರ್ ಸುತ್ತಳತೆಯ ಪ್ರದೇಶದಲ್ಲಿ ನೆಲೆಸಿರುವ ಬ್ರಿಟಿಷ್ ಹಣಕಾಸು ಸಾಮ್ರಾಜ್ಯದ ಭದ್ರಕೋಟೆ ಲಂಡನ್ ನಗರದ ವಿಜಯವು ಸಂಪನ್ನಗೊಂಡಿದೆ. ತನ್ನೊಂದಿಗೆ ವಿಶ್ವಾಸ ಕೆಡಿಸಿಕೊಂಡ ಬ್ರಿಟಿಷ್ ಪ್ರಧಾನ ಮಂತ್ರಿಯನ್ನು ಕೇವಲ 44 ದಿನಗಳಲ್ಲಿ ಹೇಳ ಹೆಸರಿಲ್ಲದಂತೆ ಮಾಡಿದ್ದು ಮಾತ್ರವಲ್ಲ, ಮರುಗಳಿಗೆಯಲ್ಲೇ ತನ್ನ ಆಯ್ಕೆಯ ಒಬ್ಬ ವ್ಯಕ್ತಿಯನ್ನು ಬ್ರಿಟನ್ನಿನ ನೂತನ ಪ್ರಧಾನ ಮಂತ್ರಿಯಾಗಿ ಪ್ರತಿಷ್ಠಾಪಿಸಿತು, ಲಂಡನ್. ರಿಷಿ ಸುನಕ್ ಅವರನ್ನು ಏಷ್ಯಾ ಮೂಲದ ಮೊದಲ ಬ್ರಿಟಿಷ್ ಪ್ರಧಾನ ಮಂತ್ರಿ, ಮೊದಲ ಹಿಂದೂ ಪ್ರಧಾನಿ, ಹೀಗೆ ಅನೇಕ ರೀತಿಯಲ್ಲಿ ಗುರುತಿಸಲಾಗುತ್ತಿದೆ. ಅವರ ನೇಮಕದ ಬಗ್ಗೆ ಭಾರತದಲ್ಲಿ ಬಹಳಷ್ಟು ಗುಲ್ಲೆದ್ದುದರ ಹೊರತಾಗಿಯೂ, ಅವರ ಅಸ್ಮಿತೆಯ ಬಗ್ಗೆ ಹರಡಿದ ಸಂಗತಿಗಳು ಕ್ಷುಲ್ಲಕವೂ ಹೌದು; ಅಪ್ರಸ್ತುತವೂ ಹೌದು. ಮುಖ್ಯವಾದ ವಿಷಯವೆಂದರೆ, ರಿಷಿ ಸುನಕ್ ಲಂಡನ್ ನಗರದ ಆಯ್ಕೆ ಎಂಬುದು. ಗೋಲ್ಡ್ಮನ್ ಸ್ಯಾಕ್ಸ್ ಸಂಸ್ಥೆಯ ಮಾಜಿ ಉದ್ಯೋಗಿಯಾಗಿದ್ದ, ಹೆಜ್ ಫಂಡ್ ಒಂದರ ಮಾಜಿ ಮ್ಯಾನೇಜರ್ ಆಗಿದ್ದ ರಿಷಿ ಸುನಕ್ ಹಣಕಾಸು ಜಗತ್ತಿನ ಹಿನ್ನೆಲೆಯಿಂದ ಬಂದವರೇ. ನಿಸ್ಸಂಶಯವಾಗಿಯೂ ಸುನಕ್ ಅವರನ್ನು “ನಮ್ಮಲ್ಲೇ ಒಬ್ಬರು” ಎಂದು ಲಂಡನ್ ನಗರ ಭಾವಿಸುತ್ತದೆ.
ತನ್ನ ನಿಗೂಢ ಕಾರ್ಯ ವಿಧಾನಗಳ ಮೂಲಕ ಬ್ರಿಟಿಷ್ ರಾಜಕಾರಣವನ್ನು ನಿಯಂತ್ರಿಸುವ ಪರಿಣಾಮವುಳ್ಳ ಒಂದು ಪರಿಪೂರ್ಣ ಸಾಧನವನ್ನು ಕನ್ಸರ್ವೇಟಿವ್ ಪಕ್ಷವು ಲಂಡನ್ ನಗರದ ಕೈಯಲ್ಲಿಟ್ಟಿದೆ. ಈ ಲಂಡನ್ ನಗರದ ಅಣತಿಯ ಮೇರೆಗೆ ಮಾರ್ಗರೆಟ್ ಥ್ಯಾಚರ್ ಅವರನ್ನು ತಮ್ಮ ಇಚ್ಛೆಗೆ ವಿರುದ್ಧವಾಗಿ ರಾಜೀನಾಮೆ ನೀಡುವಂತೆ ಮಾಡಿದಾಗ, ಅವರು ಬಹಳವಾಗಿ ಗೋಳಾಡಿದ್ದರು: “ಸಾರ್ವತ್ರಿಕ ಚುನಾವಣೆಯಲ್ಲಿ ನಾನು ಯಾವತ್ತೂ ಸೋತಿಲ್ಲ; ಹೌಸ್ ಆಫ್ ಕಾಮನ್ಸ್ನಲ್ಲಿ ವಿಶ್ವಾಸಮತವನ್ನು ನಾನು ಯಾವತ್ತೂ ಕಳೆದುಕೊಂಡಿರಲಿಲ್ಲ; ಕನ್ಸರ್ವೇಟಿವ್ ಪಕ್ಷದೊಳಗಿನ ಬಹುಮತದ ಬೆಂಬಲವನ್ನು ನಾನು ಯಾವತ್ತೂ ಕಳೆದುಕೊಂಡಿರಲಿಲ್ಲ; ಆದರೂ ನಾನು ಅಧಿಕಾರದಿಂದ ಹೊರಗಿದ್ದೇನೆ”. ಲಿಜ್ ಟ್ರಸ್ ಕೂಡ ಅಧಿಕಾರ ಕಳೆದುಕೊಂಡ ತಮ್ಮ ನೋವನ್ನು ಇದೇ ರೀತಿಯಲ್ಲಿ ಹೊರಹಾಕಬಹುದು. ಅವರು ಒಮ್ಮೆ ಗಟ್ಟಿಯಾಗಿ “ನಾನು ಒಬ್ಬಳು ಹೋರಾಟಗಾರ್ತಿ, ರಣಹೇಡಿಯಲ್ಲ” ಎಂದು ನಿಜಕ್ಕೂ ಹೇಳಿದ್ದರು. ಮರುದಿನವೇ ನಿಗೂಢವಾಗಿ ಅಧಿಕಾರದಿಂದ ಹೊರಹಾಕಲ್ಪಟ್ಟರು. ಕನ್ಸರ್ವೇಟಿವ್ ಪಕ್ಷದೊಳಗೆ, ಮುಖ್ಯವಾದ ಹುದ್ದೆಗೆ ನಾಯಕನನ್ನು ಚುನಾಯಿಸುವ ಮತ್ತು ಮುಂದುವರಿಸುವ ಬಗ್ಗೆ ನಿರ್ಣಾಯಕ ಅಭಿಪ್ರಾಯವನ್ನು ವ್ಯಕ್ತಪಡಿಸುವ ಒಂದು ಮಸುಕಾದ ಮತ್ತು ಗುಪ್ತವಾಗಿ ಕೆಲಸ ಮಾಡುವ ʼ1922ರ ಸಮಿತಿʼ ಎಂದು ಕರೆಯಲ್ಪಡುವ ಒಂದು ಅಂಗವಿದೆ. ಲಂಡನ್ ನಗರವು ಮಂತ್ರಿಗಳ ಮೂಲಕ ಕಾರ್ಯನಿರ್ವಹಿಸುತ್ತದೆ ಮಾತ್ರವಲ್ಲ, ನಗರದೊಂದಿಗೆ ಸಂಪರ್ಕ ಹೊಂದಿರುವವರು ಅಥವಾ ತಮ್ಮ ನಿವೃತ್ತಿಯ ಬಳಿಕ ನಗರದ ಉದ್ಯೋಗಗಳಿಗೆ ಮಣೆ ಹಾಕುವ ಮಂತ್ರಿ-ಸಿಬ್ಬಂದಿಗಳ ಮೂಲಕ ಮಾತ್ರವಲ್ಲ, 1922ರ ಸಮಿತಿಯ ಮೂಲಕ ತಮ್ಮ ಇರುವಿಕೆಯನ್ನು ಗಣನೆಗೆ ತೆಗೆದುಕೊಳ್ಳುವಂತೆ ಮಾಡುವ ಹಿಮ್ಮೇಳದವರ ಮೂಲಕವೂ ಕಾರ್ಯನಿರ್ವಹಿಸುತ್ತದೆ. ನಗರಕ್ಕೆ ಸೇರಿದ ಹಣಕಾಸು ಕುಳಗಳು ಮಾಧ್ಯಮಗಳ ಮೇಲೆ ನಿಯಂತ್ರಣ ಹೊಂದಿರುವುದರಿಂದ ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ಅವರನ್ನು ಅವಲಂಬಿಸಬಹುದಾದ ಕಾರಣದಿಂದಾಗಿ, ವಾಸ್ತವವಾಗಿ, ಒಂದು ನಗರ-ನಿರ್ದೇಶಿತ ಅದೃಶ್ಯ ರಾಜಕೀಯ ಪ್ರಕ್ರಿಯೆಯು ಕಾರ್ಯಪ್ರವೃತ್ತವಾಗಿರುತ್ತದೆ. ಈ ಪ್ರಕ್ರಿಯೆಯು, ಪ್ರತ್ಯಕ್ಷ ಔಪಚಾರಿಕ ಸರ್ವಜನ ರಾಜಕೀಯ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ ಮತ್ತು ಅದಕ್ಕೆ ಸರಿ ಸಮಾನವಾಗಿಯೂ ಇದೆ.
ಲಂಡನ್ ಏನು ಬಯಸುತ್ತದೆ?
ಈ ನಗರ-ನಿರ್ದೇಶಿತ ಅದೃಶ್ಯ ರಾಜಕೀಯ ಪ್ರಕ್ರಿಯೆಯು ಲಿಜ್ ಟ್ರಸ್ ಅವರಿಗೆ ಬದಲಿಯಾಗಿ ರಿಷಿ ಸುನಕ್ ಅವರನ್ನು ಆಯ್ಕೆ ಮಾಡಿದ ಕಾರಣವೆಂದರೆ, ಸುನಕ್ ಅವರ ಹಣಕಾಸು ಜಗತ್ತಿನ ಹಿನ್ನೆಲೆ ಮತ್ತು ಅವರು ಭಾರೀ ಶ್ರೀಮಂತರಾಗಿರುವುದು ಮಾತ್ರ ಕಾರಣವಲ್ಲ. ಎಲ್ಲಕ್ಕಿಂತ ಹೆಚ್ಚು ಮುಖ್ಯವಾದ ಕಾರಣವೆಂದರೆ, ಸುನಕ್ ಅವರ ಕಾರ್ಯಸೂಚಿಯೇ. ಲಿಜ್ ಟ್ರಸ್ ಅವರು ಬಂಡವಾಳಗಾರರಿಗೆ ನೀಡಿದ ತೆರಿಗೆ-ಕಡಿತಗಳಿಗೆ ವಿತ್ತೀಯ ಕೊರತೆಯ ಮೂಲಕ ಹಣಕಾಸು ಒದಗಿಸಿಕೊಳ್ಳುವ ಉದ್ದೇಶ ಹೊಂದಿದ್ದರೆ, ಬಂಡವಾಳಗಾರರಿಗೆ ಸುನಕ್ ನೀಡಲಿರುವ ತೆರಿಗೆ-ಕಡಿತಗಳಿಗೆ ಬೇಕಾಗುವ ಹಣವನ್ನು ಬೇರೆ ಬೇರೆ ಸರ್ಕಾರಿ ವೆಚ್ಚಗಳ ಕಡಿತದ ಮೂಲಕ ಅಥವಾ, ಕಾರ್ಮಿಕರ ಮೇಲೆ ತೆರಿಗೆ ಹೇರುವ ಮೂಲಕ (ಈ ಆಯ್ಕೆಯು ಪ್ರಸ್ತುತದಲ್ಲಿ ಕಾರ್ಯಸಾಧ್ಯವಲ್ಲ) ಹೊಂದಿಸಿಕೊಂಡು ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿಡುತ್ತಾರೆ. ಈಗ ಉದ್ಭವವಾಗುವ ಪ್ರಶ್ನೆ ಎಂದರೆ, ವಿತ್ತೀಯ ಕೊರತೆಯಿಲ್ಲದ ತೆರಿಗೆ-ಕಡಿತದ ಬದಲಾಗಿ ವಿತ್ತೀಯ ಕೊರತೆಯೊಂದಿಗಿನ ತೆರಿಗೆ-ಕಡಿತದ ಆದ್ಯತೆಯನ್ನು ಲಂಡನ್ ಏಕೆ ಬಯಸುತ್ತದೆ?
ಈ ಪ್ರಶ್ನೆಗೆ ತತ್‌ಕ್ಷಣದ ಮತ್ತು ಯಾವುದೇ ರೀತಿಯಲ್ಲಿ ಅಮಾನ್ಯವಲ್ಲದ ಉತ್ತರವೆಂದರೆ ಹಣಕಾಸು ಬಂಡವಾಳವು ವಿತ್ತೀಯ ಕೊರತೆಗಳಿಗೆ ಯಾವತ್ತೂ ವಿರುದ್ಧವೇ. ಆದ್ದರಿಂದಲೇ, ಹಣಕಾಸು ಬಂಡವಾಳದ ಜಾಗತೀಕರಣದ ಯುಗದಲ್ಲಿ, ವಿಶಿಷ್ಟ ಸ್ಥಾನಮಾನವನ್ನು ಹೊಂದಿರುವ ಯುಎಸ್ ಅನ್ನು ಹೊರತುಪಡಿಸಿದರೆ, ವಿಶ್ವದ ಬಹುತೇಕ ದೇಶಗಳು ವಿತ್ತೀಯ ಕೊರತೆಯನ್ನು ಜಿಡಿಪಿಯ ಒಂದು ನಿರ್ದಿಷ್ಟ ಅನುಪಾತಕ್ಕೆ ಮಿತಿಗೊಳಿಸುವ ಶಾಸನಗಳನ್ನು ಹೊಂದಿವೆ. ಬ್ರಿಟನ್ ಎದುರಿಸುತ್ತಿರುವ ಹಣದುಬ್ಬರದ ಪ್ರಸ್ತುತ ಪರಿಸ್ಥಿತಿಯಲ್ಲಿ ವಿತ್ತೀಯ ಕೊರತೆಯ ಮೇಲಿನ ವಿರೋಧವು ಹೆಚ್ಚು ಬಲಪಡೆಯುತ್ತದೆ. ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಹಣದುಬ್ಬರದ ದಿನಗಳಲ್ಲಿ ವಿತ್ತೀಯ ಕೊರತೆಯನ್ನು ಹೆಚ್ಚಿಸುವುದರಿಂದ ಒಟ್ಟಾರೆ ಬೇಡಿಕೆ ಹೆಚ್ಚುತ್ತದೆ ಮತ್ತು ಉದ್ಯೋಗಗಳೂ ಹೆಚ್ಚುತ್ತವೆ. ಬಂಡವಾಳಶಾಹಿಯ ಈ ಪರಿಸ್ಥಿತಿಗಳಲ್ಲಿ ಬಲಗೊಳ್ಳುವ ಕಾರ್ಮಿಕರ ಪ್ರತಿರೋಧವು ಹಣದುಬ್ಬರವನ್ನು ಉಲ್ಬಣಗೊಳಿಸುತ್ತದೆ. ಹಣದುಬ್ಬರದ ಸಮಯದಲ್ಲಿ ಹಣಕಾಸು ಸ್ವತ್ತುಗಳ ನಿಜ ಮೌಲ್ಯವು ಕುಸಿಯುವ ಕಾರಣದಿಂದಾಗಿ ಚಿಂತೆಗೊಳಗಾದ ಹಣಕಾಸು ಬಂಡವಾಳವು ವಿತ್ತೀಯ ಕೊರತೆಯನ್ನು ಬಲವಾಗಿ ವಿರೋಧಿಸುತ್ತದೆ. ಆದರೆ, ಹೆಚ್ಚುತ್ತಿರುವ ವಿತ್ತೀಯ ಕೊರತೆಯು ತೆರಿಗೆ-ನಂತರದ ಲಾಭಗಳನ್ನು ವರ್ಧಿಸುವ ಒಂದು ಪ್ರಮುಖ ಸಾಧನವಾಗಿದೆ ಎಂಬ ಅಂಶದ ಬಗ್ಗೆ ಹೇಳುವುದೇನು? ಹಣದುಬ್ಬರವನ್ನು ವಿರೋಧಿಸುವವರು ಈ ಅಂಶವನ್ನೂ ಪ್ರತಿರೋಧಿಸಬೇಕಲ್ಲವೇ?
ವಿದೇಶ ವ್ಯಾಪಾರ-ವಹಿವಾಟುಗಳು ಮತ್ತು ಕಾರ್ಮಿಕರ ಉಳಿತಾಯದ ಅಂಶಗಳನ್ನು ಒಂದು ವೇಳೆ ಗಣನೆಗೆ ತೆಗೆದುಕೊಳ್ಳದಿದ್ದರೂ (ಸರಳತೆಗಾಗಿ), ಒಂದು ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ತೆರಿಗೆಯ ನಂತರದ ಲಾಭಗಳು, ಬಂಡವಾಳಶಾಹಿಗಳ ಬಳಕೆ+ಅವರ ಹೂಡಿಕೆ+ವಿತ್ತೀಯ ಕೊರತೆ, ಇವುಗಳ ಮೊತ್ತಕ್ಕೆ ಸಮನಾಗಿರುತ್ತವೆ ಎಂಬುದನ್ನು ನಾವು ಈಗಾಗಲೇ ನೋಡಿದ್ದೇವೆ (ಜನಶಕ್ತಿ, ಸಂಚಿಕೆ 46, ನವೆಂಬರ್ 7-13). ಹೂಡಿಕೆ ಮತ್ತು ಬಂಡವಾಳಗಾರರ ಬಳಕೆಯು ಇಂದಿನ ಲಾಭಗಳಿಗೆ ತಕ್ಷಣವೇ ಸ್ಪಂದಿಸುವುದಿಲ್ಲವಾದ್ದರಿಂದ, ಈ ರಿಯಾಯಿತಿಗಳಿಗಾಗಿ ಬೇಕಾಗುವ ಹಣವನ್ನು ಬೃಹತ್ ವಿತ್ತೀಯ ಕೊರತೆಯ ಮೂಲಕ ಒದಗಿಸಿಕೊಳ್ಳದ ಹೊರತು, ಬಂಡವಾಳಗಾರರಿಗೆ ನೀಡುವ ತೆರಿಗೆ ರಿಯಾಯಿತಿಗಳ ಮೊತ್ತವು ಎಷ್ಟೇ ದೊಡ್ಡದಿರಲಿ, ತೆರಿಗೆ-ನಂತರದ ಲಾಭಗಳು ಈ ಅವಧಿಯಲ್ಲಿ ಹೆಚ್ಚಾಗುವುದಿಲ್ಲ. ಇದನ್ನೇ ಬೇರೆ ರೀತಿಯಲ್ಲಿ ಹೇಳುವುದಾದರೆ, ಬಂಡವಾಳಶಾಹಿಗಳಿಗೆ ನೀಡುವ ತೆರಿಗೆ ರಿಯಾಯಿತಿಗಳು ಎಷ್ಟೇ ದೊಡ್ಡದಿರಲಿ, ಈ ತೆರಿಗೆ ರಿಯಾಯಿತಿಗಳಿಗೆ ಬೇಕಾಗುವ ಹಣವನ್ನು ಸಾರ್ವಜನಿಕ ವೆಚ್ಚಗಳ ಕಡಿತದ ಮೂಲಕ ಹೊಂದಿಸಿಕೊಂಡರೆ, ತೆರಿಗೆ-ನಂತರದ ಲಾಭದಲ್ಲಿ ಹೆಚ್ಚಳ ಇರುವುದಿಲ್ಲ.
ಈ ಪ್ರತಿಪಾದನೆಯು ಒಟ್ಟಾರೆ ಲಾಭಗಳಿಗೆ ಅನ್ವಯವಾಗುತ್ತದೆ. ಈ ತೆರಿಗೆ ರಿಯಾಯ್ತಿಗಳನ್ನು ಯಾರಿಗೆ ನೀಡಲಾಗುತ್ತಿದೆ ಮತ್ತು ಸಾರ್ವಜನಿಕ ವೆಚ್ಚ ಕಡಿತದಿಂದಾಗಿ ಯಾರ ತೆರಿಗೆ-ಪೂರ್ವ ಲಾಭಗಳು ಕುಗ್ಗುತ್ತಿವೆ ಎಂಬುದರ ಆಧಾರದ ಮೇಲೆ ಬಂಡವಾಳಗಾರರ ನಡುವೆ ಹಂಚಿಕೆಯಾಗುವ ತೆರಿಗೆ-ನಂತರ ಲಾಭಗಳು ಬದಲಾಗಬಹುದು. ತೆರಿಗೆ ರಿಯಾಯಿತಿಗಳನ್ನು ಸಾಮಾನ್ಯವಾಗಿ ದೊಡ್ಡ ಬಂಡವಾಳಗಾರರಿಗೆ ನೀಡುವುದರಿಂದ (ಉನ್ನತ ದರದ ತೆರಿಗೆ ಕೊಡುವವರಿಗೆ ತೆರಿಗೆಯ ದರವನ್ನು ಇಳಿಕೆ ಮಾಡಲಾಗುತ್ತದೆ), ಸಾರ್ವಜನಿಕ ವೆಚ್ಚಗಳ ಕಡಿತವು ಚಟುವಟಿಕೆಗಳ ಮಟ್ಟವನ್ನು ತಗ್ಗಿಸುವುದರಿಂದ ಎಲ್ಲರ ಲಾಭಗಳೂ ತಗ್ಗುತ್ತವೆ. ಈ ಎರಡೂ ಕ್ರಮಗಳು ಒಟ್ಟಾಗಿ ವಿತ್ತೀಯ ಕೊರತೆಯನ್ನು ಬದಲಾಯಿಸದಿದ್ದರೆ, ಒಂದು ನಿರ್ದಿಷ್ಟ ಮೊತ್ತದ ಒಟ್ಟು ಲಾಭವು ಸಣ್ಣ ಪುಟ್ಟ ಬಂಡವಾಳಗಾರರಿಂದ ದೊಡ್ಡ ಬಂಡವಾಳಗಾರರಿಗೆ ವರ್ಗಾವಣೆಯಾಗುವಲ್ಲಿ ಪರಿಣಮಿಸುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸಾರ್ವಜನಿಕ ವೆಚ್ಚಗಳ ಕಡಿತದ ಮೂಲಕವಾಗಿಯಾಗಲಿ ಅಥವಾ ವಿತ್ತೀಯ ಕೊರತೆಯ ಮೂಲಕವಾಗಿಯಾಗಲಿ ಒದಗಿಸಿಕೊಂಡ ಹಣದಿಂದ ಕೊಡುವ ತೆರಿಗೆ ರಿಯಾಯಿತಿಗಳು, ಅನಿವಾರ್ಯವಾಗಿ ದೊಡ್ಡ ಬಂಡವಾಳಗಾರರ ಲಾಭದ ಪ್ರಮಾಣವನ್ನು ಏರಿಸುತ್ತವೆ (ದೊಡ್ಡವರ ಏರಿಕೆಯು ಸಹಜವಾಗಿ ದೊಡ್ಡದಾಗೇ ಇರುತ್ತದೆ).
ಏಕೆ ಬಯಸುತ್ತದೆ?
ವಿತ್ತೀಯ ಕೊರತೆಯ ಮೂಲಕ ಹಣ ಒದಗಿಸಿಕೊಳ್ಳುವುದರ ಬದಲಾಗಿ, ಬೇರೆ ಬೇರೆ ಸಾರ್ವಜನಿಕ ವೆಚ್ಚಗಳನ್ನು ಕಡಿತಗೊಳಿಸುವ ಮೂಲಕ ಒದಗಿಸಿಕೊಂಡ ಹಣದಿಂದ ಬಂಡವಾಳಗಾರರಿಗೆ ತೆರಿಗೆ ರಿಯಾಯಿತಿ ಕೊಡುವ ಕ್ರಮವನ್ನೇ ಹಣಕಾಸು ಬಂಡವಾಳವು ಏಕೆ ಬಯಸುತ್ತದೆ ಎಂಬುದಕ್ಕೆ ಕನಿಷ್ಠ ಮೂರು ವಿಭಿನ್ನ ಕಾರಣಗಳಿವೆ. ಮೊದಲನೆಯದಾಗಿ, ಸಾರ್ವಜನಿಕ ವೆಚ್ಚಗಳ ಕಡಿತದ ಮೂಲಕ ಹಣ ಒದಗಿಸಿಕೊಂಡ ಪ್ರಕರಣದಲ್ಲಿ ನಿರುದ್ಯೋಗವು ಅನಿವಾರ್ಯವಾಗಿ ಹೆಚ್ಚುತ್ತದೆ. ವಿತ್ತೀಯ ಕೊರತೆಯ ಮೂಲಕ ಹಣ ಒದಗಿಸಿಕೊಂಡ ಪ್ರಕರಣದಲ್ಲಿ ನಿರುದ್ಯೋಗ ಇಳಿಕೆಯಾಗುತ್ತದೆ. ಹೀಗಾಗುತ್ತದೆ, ಏಕೆಂದರೆ, ಸಾರ್ವಜನಿಕ ವೆಚ್ಚಗಳಲ್ಲಿ 100ರೂ.ಗಳ ಕಡಿತವು ತಕ್ಷಣವೇ ರೂ.100ರಷ್ಟು ಒಟ್ಟಾರೆ ಬೇಡಿಕೆಯನ್ನು ಇಳಿಕೆ ಮಾಡುತ್ತದೆ. ಆದರೆ, ಬಂಡವಾಳಗಾರರಿಗೆ ನೀಡುವ ತೆರಿಗೆ-ಕಡಿತಗಳು ಒಟ್ಟಾರೆ ಬೇಡಿಕೆಯನ್ನು ಸ್ವಲ್ಪ ಹೆಚ್ಚಿಸಬಹುದು. ಏಕೆಂದರೆ, ತೆರಿಗೆ-ಕಡಿತಗಳ ಮೂಲಕ ಬಂದ ಹಣವನ್ನು ಬಂಡವಾಳಗಾರರು ಉಳಿತಾಯ ಮಾಡುತ್ತಾರೆ. ಆದ್ದರಿಂದ, ಒಟ್ಟು ಬೇಡಿಕೆಯಲ್ಲಿ ನಿವ್ವಳ ಇಳಿಕೆ ಕಂಡುಬರುತ್ತದೆ ಮತ್ತು ಅದರಿಂದಾಗಿ ಉತ್ಪಾದನೆ ಮತ್ತು ಉದ್ಯೋಗಗಳೂ ಇಳಿಯುತ್ತವೆ. ಮತ್ತು, ಒಂದು ಬಂಡವಾಳಶಾಹಿ ಅರ್ಥವ್ಯವಸ್ಥೆಯು ಅವಶ್ಯವಾಗಿ ಹೆಚ್ಚು ಹೆಚ್ಚು ನಿರುದ್ಯೋಗವನ್ನು ಸೃಷ್ಟಿಸುವ ಮೂಲಕ ಮಾತ್ರವೇ ಹಣದುಬ್ಬರವನ್ನು ನಿಭಾಯಿಸುವುದರಿಂದ, ಹಣಕಾಸು ಬಂಡವಾಳವು, ವಿಶೇಷವಾಗಿ, ಹಣದುಬ್ಬರದ ಸಮಯದಲ್ಲಿ ಸಾರ್ವಜನಿಕ ವೆಚ್ಚಗಳನ್ನು ಕಡಿತಗೊಳಿಸಿ ಒದಗಿಸಿಕೊಂಡ ಹಣದಿಂದ ಬಂಡವಾಳಗಾರರಿಗೆ ತೆರಿಗೆ ರಿಯಾಯಿತಿ ಕೊಡಲು ಆದ್ಯತೆ ನೀಡುತ್ತದೆ.
ಎರಡನೆಯದಾಗಿ, ಬಂಡವಾಳಗಾರರಿಗೆ ಕೊಡುವ ತೆರಿಗೆ ರಿಯಾಯ್ತಿಗಳಿಗೆ ಬೇಕಾಗುವ ಹಣವನ್ನು ಸಾರ್ವಜನಿಕ ವೆಚ್ಚಗಳ ಕಡಿತದ ಮೂಲಕ ಒದಗಿಸಿಕೊಂಡಿದ್ದರೂ ಸಹ, ಮತ್ತು ಅವರ ಒಟ್ಟು ತೆರಿಗೆ-ನಂತರದ ಲಾಭಗಳನ್ನು ಬದಲಾಯಿಸದೆ ಬಿಟ್ಟರೂ ಸಹ, ದೊಡ್ಡ ದೊಡ್ಡ ಬಂಡವಾಳಗಾರರ ಅಥವಾ ಹಣಕಾಸು ಕುಳಗಳ ತೆರಿಗೆ-ನಂತರದ ಲಾಭಗಳು ಹೆಚ್ಚುತ್ತವೆ ಎಂಬುದನ್ನು ನಾವು ಕಂಡಿದ್ದೇವೆ. ಮೂರನೆಯದಾಗಿ, ಈ ಎರಡೂ ಪರಿಗಣನೆಗಳು, ಅಂದರೆ ಬೃಹತ್ ನಿರುದ್ಯೋಗ ಮತ್ತು ಹಣಕಾಸು ಕುಳಗಳ ತೆರಿಗೆಯ ನಂತರದ ಬೃಹತ್ ಲಾಭಗಳು, ವಿಶ್ವದ ಇತರ ಭಾಗಗಳಿಂದ ಹಣಕಾಸು ಬಂಡವಾಳವನ್ನು ಆಕರ್ಷಿಸುವ ಪರಿಣಾಮ ಹೊಂದಿವೆ ಮತ್ತು ಅದರಿಂದಾಗಿ ದೇಶದೊಳಗೆ ಸಂಭವಿಸುವ ಒಟ್ಟು ಹಣಕಾಸು ವ್ಯವಹಾರಗಳು ಹೆಚ್ಚುತ್ತವೆ.
ದುಡಿಮೆಗಾರರಿಗೆ ದುಃಸ್ವಪ್ನ
ರಿಷಿ ಸುನಕ್ ತಮ್ಮ ಒಟ್ಟು ನೀತಿಯ ಪ್ಯಾಕೇಜ್‌ಅನ್ನು ಇನ್ನೂ ಬಹಿರಂಗಪಡಿಸಿಲ್ಲ. ವಿತ್ತೀಯ ನೀತಿನಿಷ್ಠೆಗೆ ಅವರು ಖಂಡಿತವಾಗಿಯೂ ಬದ್ಧರೇ. ಆದರೆ, ಎಷ್ಟು ತೆರಿಗೆ ರಿಯಾಯಿತಿಗಳನ್ನು ನೀಡಲಿದ್ದಾರೆ ಎಂಬುದು ಇನ್ನೂ ಸ್ಪಷ್ಟವಿಲ್ಲ. ಬಂಡವಾಳಗಾರರಿಗೆ ಕೆಲವು ರಿಯಾಯಿತಿಗಳನ್ನು ನೀಡಲು ಅವರು ಬದ್ಧರಾಗಿರುತ್ತಾರೆ ಎಂಬುದಂತೂ ಶತಃಸಿದ್ಧ. ಏಕೆಂದರೆ, ಬಂಡವಾಳಶಾಹಿಯ ಬೆಳವಣಿಗೆಯು ಅಂತಹ ರಿಯಾಯಿತಿಗಳ ಮೇಲೆ ಅವಲಂಬಿತವಾಗಿದೆ ಎಂಬುದನ್ನು ವ್ಯವಸ್ಥೆಯ ಪುರಾಣ ಸಾಹಿತ್ಯವೇ ಹೇಳುತ್ತದೆ. ಆದ್ದರಿಂದ, ಸುನಕ್ ಕಾರ್ಯಕ್ರಮವು ಹೆಚ್ಚಿನ ನಿರುದ್ಯೋಗದೊಂದಿಗೆ ಹಣಕಾಸು ಕುಳಗಳಿಗೆ ಲಾಭ ಮಾಡಿಕೊಡುವ ಸಾಧ್ಯತೆಯಿದೆ. ಇವೆರಡೂ ಕ್ರಮಗಳು (ನಿರುದ್ಯೋಗ ಮತ್ತು ಹಣಕಾಸು ಕುಳಗಳ ಲಾಭ) ಲಂಡನ್ ನಗರದ ಬಯಕೆಗಳಿಗೆ ಅನುಗುಣವಾಗಿವೆ. ಬ್ರಿಟಿಷ್ ಕಾರ್ಮಿಕ ವರ್ಗದ ಪಾಲಿಗೆ ಸುನಕ್, ಲಿಜ್ ಟ್ರಸ್‌ಗಿಂತಲೂ ಹೆಚ್ಚು ಅಪಾಯಕಾರಿಯೇ. ಅವರು ಲಂಡನ್ ನಗರಕ್ಕೆ ಆಕರ್ಷಕವಾಗುವ ಅಂಶವೇ ದುಡಿಯುವ ವರ್ಗದ ಪಾಲಿಗೆ ದುಃಸ್ವಪ್ನವೂ ಆಗುತ್ತದೆ.
ಸುನಕ್ ಅವರ ಕಾರ್ಯಸೂಚಿಯು ಹಣದುಬ್ಬರ-ವಿರೋಧಿಯಾಗಿರುವುದರಿಂದ ಮತ್ತು ಹಣದುಬ್ಬರವು ದುಡಿಯುವ ವರ್ಗವನ್ನು ನೋಯಿಸುವುದರಿಂದ, ಅವರ ಕಾರ್ಯಸೂಚಿಯನ್ನು ಕಾರ್ಮಿಕ ವರ್ಗ ವಿರೋಧಿ ಕಾರ್ಯಸೂಚಿ ಎಂದು ಕರೆಯಲಾಗದು. ಈ ರೀತಿಯ ಭಾವನೆಯು, ದುಡಿಯುವ ಜನರನ್ನು ತೊಂದರೆಗಳಿಗೆ ಸಿಲುಕಿಸಿ ಹಣದುಬ್ಬರವನ್ನು ನಿಯಂತ್ರಿಸುವುದೇ ಅವರ ಕಾರ್ಯಸೂಚಿಯ ತಿರುಳು ಎಂಬ ಅಂಶವನ್ನು ನಿರ್ಲಕ್ಷಿಸುತ್ತದೆ. ಬೆಲೆ ಹಣದುಬ್ಬರವನ್ನು ವೇತನಗಳ ಇಳಿಕೆಯ ಮೂಲಕ ನಿಯಂತ್ರಿಸಬಹುದು. ಹಣದುಬ್ಬರವನ್ನು ನಿಯಂತ್ರಿಸುವ ಈ ಎರಡು ಮಾರ್ಗಗಳಲ್ಲಿ ಯಾವುದನ್ನು ಅನುಸರಿಸಿದರೂ ತೊಂದರೆಗಳನ್ನು ಅನುಭವಿಸುವವರು ಕಾರ್ಮಿಕರೇ. ಆದರೆ, ಈ ವಿಧಾನದ ಮೂಲಕ ಹಣದುಬ್ಬರವನ್ನು ನಿಯಂತ್ರಿಸುವ ಕ್ರಮವು ಹಣಕಾಸು ಬಂಡವಾಳದ ದೃಷ್ಟಿಯಲ್ಲಿ ಹಣಕಾಸು ಸ್ವತ್ತುಗಳ ನಿಜ ಮೌಲ್ಯದ ಇಳಿಕೆಯನ್ನು ತಡೆಯುವ ಅನುಕೂಲವನ್ನು ಹೊಂದಿದೆ.
ಸಾರ್ವಜನಿಕ ವೆಚ್ಚಗಳ ಕಡಿತವು ನಿರುದ್ಯೋಗವನ್ನು ಸೃಷ್ಟಿಸುತ್ತದೆ ಎಂಬುದನ್ನು ಒತ್ತಿಹೇಳಲಾಗಿದೆ. ಬ್ರಿಟನ್ನಿನಲ್ಲಿ ಸಾರ್ವಜನಿಕ ವೆಚ್ಚಗಳ ಕಡಿತವು ನಿರುದ್ಯೋಗವನ್ನು ಸೃಷ್ಟಿಸುವುದು ಮಾತ್ರವಲ್ಲ, ಸಾರ್ವಜನಿಕ ಸೇವೆಗಳ ಸ್ಥಿತಿಗತಿಗಳ ಮೇಲೆ ಅಪಾರ ದುಷ್ಪರಿಣಾಮವನ್ನು ಬೀರುತ್ತದೆ ಮತ್ತು ಯುದ್ಧಾನಂತರದ ವರ್ಷಗಳಲ್ಲಿ ಪ್ರಭುತ್ವವು ಜಾರಿಗೊಳಿಸಿದ ಕಲ್ಯಾಣ ಕ್ರಮಗಳ ಪ್ರಯೋಜನಗಳನ್ನು ಗಣನೀಯವಾಗಿ ಇಳಿಕೆ ಮಾಡುತ್ತದೆ. ಬ್ರಿಟನ್ನಿನಲ್ಲಿ ಸಾರ್ವಜನಿಕ ಶಿಕ್ಷಣ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಗಳು ಅಸಮರ್ಪಕ ಧನಸಹಾಯದ ಪರಿಣಾಮವಾಗಿ ಈಗಾಗಲೇ ತತ್ತರಿಸುತ್ತಿವೆ. ಇನ್ನೂ ಹೆಚ್ಚಿನ ಕಡಿತಗಳು ಈ ಸೇವೆಗಳನ್ನು ಅಂತ್ಯಾವಸ್ಥೆಗೆ ತಳ್ಳುತ್ತವೆ. ಸುನಕ್ ಸರ್ಕಾರದ ಅಂತಹ ಕಾರ್ಯಸೂಚಿಯನ್ನು ಜಾರಿಗೊಳಿಸಲು ಬ್ರಿಟಿಷ್ ಕಾರ್ಮಿಕ ವರ್ಗವು ಅನುಮತಿಸುತ್ತದೆಯೇ?