ಪ್ರೊ.ಪ್ರಭಾತ್ ಪಟ್ನಾಯಕ್
ಪ್ರಜ್ಞಾಪೂರ್ವಕವಾಗಿ ಉದ್ಯೋಗ ಖಾತ್ರಿ ಯೋಜನೆಗೆ ಕಡಿಮೆ ಹಂಚಿಕೆಮಾಡುವ ಕ್ರಮವನ್ನು ಮೋದಿ ಸರ್ಕಾರವು ಅದರ ಪರಾಕಾಷ್ಠೆಗೆ ಕೊಂಡೊಯ್ದಿದೆ. ಈ ಯೋಜನೆಗೆ ಮೋದಿ ಆರಂಭದಿಂದಲೇ ವಿರೋಧವಾಗಿದ್ದರು. ಯೋಜನೆಯನ್ನು ಕಟುವಾಗಿ ಟೀಕಿಸಿದ್ದರು ಮತ್ತು ಅದನ್ನು ಹಿಂದಿನ ಸರ್ಕಾರಗಳ ಅಗಾಧ ವೈಫಲ್ಯಗಳ ಸ್ಮಾರಕವೆಂದು ಜರೆದಿದ್ದರು. ಆದರೂ, ಈ ಯೋಜನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಧೈರ್ಯವೂ ಅವರಿಗಿರಲಿಲ್ಲ. ಆದ್ದರಿಂದ, ಕಡಿಮೆ ಹಂಚಿಕೆ ಮಾಡುವ ಮೂಲಕ ಈ ಯೋಜನೆಯ ಕತ್ತು ಹಿಸುಕುವ ಕೆಲಸವನ್ನು ಮಾಡಿದರು. ಉದ್ಯೋಗ ಖಾತ್ರಿ ಯೋಜನೆಯ ಮೇಲೆ ಮಾಡುವ ಸರ್ಕಾರದ ಒಂದೊಂದು ರೂಪಾಯಿಯ ವೆಚ್ಚವೂ ಇತರ ಯಾವುದೇ ವೆಚ್ಚಕ್ಕಿಂತಲೂ ಉತ್ತಮ. ಆದರೇನು ಮಾಡೋಣ! ಇದನ್ನು ಮನಗಾಣಲಾಗದಷ್ಟು ಕುರುಡಾಗಿದೆ ಸರ್ಕಾರ.
ಯುಪಿಎ-1 ಸರ್ಕಾರವನ್ನು ಹೊರಗಿನಿಂದ ಬೆಂಬಲಿಸುತ್ತಿದ್ದ ಎಡಪಕ್ಷಗಳ ಒತ್ತಾಯದ ಮೇರೆಗೆ, ನವ-ಉದಾರವಾದಿ ಲಾಬಿಯ ವಿರೋಧವನ್ನು ಲೆಕ್ಕಿಸದೆ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ) ಜಾರಿಗೊಳಿಸಲಾಯಿತು. ಈ ಯೋಜನೆಯು ಆರಂಭದಿಂದಲೂ ನಿರ್ಬಂಧಗಳಿಂದ ಕೂಡಿತ್ತು: ಒಂದು ವರ್ಷದಲ್ಲಿ ಗರಿಷ್ಠ 100 ದಿನಗಳವರೆಗೆ ಉದ್ಯೋಗ ಒದಗಿಸುವ ಭರವಸೆ ಮತ್ತು ಅದೂ ಕೂಡ ಕುಟುಂಬದ ಒಬ್ಬ ಸದಸ್ಯಗೆ ಮಾತ್ರ. ಇಂತಹ ನಿರ್ಬಂಧಗಳಿದ್ದರೂ ಸಹ, ಅದು ಆರ್ಥಿಕ ಹಕ್ಕನ್ನು ಮಾನ್ಯ ಮಾಡಿತ್ತು: ಒಬ್ಬ ನಿರುದ್ಯೋಗಿ ವ್ಯಕ್ತಿಯು ತನಗೆ ಉದ್ಯೋಗಬೇಕೆಂದು ಬೇಡಿಕೆ ಮಂಡಿಸಿದ ಹದಿನೈದು ದಿನಗಳೊಳಗೆ ಸರ್ಕಾರವು ಆ ವ್ಯಕ್ತಿಗೆ ಉದ್ಯೋಗ ಒದಗಿಸಬೇಕು. ತಪ್ಪಿದರೆ, ಆ ವ್ಯಕ್ತಿಗೆ ಕನಿಷ್ಠ ಕೂಲಿಯ ಅರ್ಧದಷ್ಟು ಹಣವನ್ನು ಪರಿಹಾರವಾಗಿ ಕೊಡಬೇಕಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಇದೊಂದು ಬೇಡಿಕೆ-ಚಾಲಿತ ಯೋಜನೆಯಾಗಿತ್ತು. ಅಂದರೆ, ಉದ್ಯೋಗ ಬಯಸಿದವರಿಗೆ, ಕೆಲವು ಮಿತಿಗಳಿಗೆ ಒಳಪಟ್ಟು ಅದನ್ನು ಒದಗಿಸಬೇಕಾಗಿತ್ತು.
ಯುಪಿಎ-2 ಸರ್ಕಾರದ ಅವಧಿಯಲ್ಲಿಯೇ ಈ ಯೋಜನೆಯ ಅಧೋಗತಿ ಪ್ರಾರಂಭವಾಗಿತ್ತು. ಈ ಯೋಜನೆಗೆ ಒದಗಿಸುವ ಬಜೆಟ್ ಹಂಚಿಕೆಯನ್ನು ಅನೇಕ ವರ್ಷಗಳ ಕಾಲ ಸುಮಾರು 60,000 ಕೋಟಿ ರೂ.ಗಳ ಮಟ್ಟ ದಾಟದಂತೆ ನೋಡಿಕೊಳ್ಳಲಾಗಿತ್ತು. ಅಂದರೆ, ಬಜೆಟ್ ಹಂಚಿಕೆ ಮಾಡುವಾಗ ಬೆಲೆ ಏರಿಕೆಯ ಪರಿಣಾಮ, ಕೆಲಸ ಕೇಳುವವರ ಸಂಖ್ಯೆ ಹೆಚ್ಚಿದರೆ ಅದಕ್ಕೆ ತಕ್ಕಂತೆ ಹೆಚ್ಚು ಹಣ ಒದಗಿಸುವ ಅವಶ್ಯಕತೆ ಮತ್ತು ತೀವ್ರಗೊಳ್ಳುತ್ತಿರುವ ಕೃಷಿ ಬಿಕ್ಕಟ್ಟಿನಂಥಹ ಅಂಶಗಳನ್ನು ಪರಿಗಣಿಸಿರಲಿಲ್ಲ. ಅಂದರೆ, ಈ ಯೋಜನೆಯ ಉಸಿರುಗಟ್ಟಿಸುವ ಉದ್ದೇಶದಿಂದ ಸರ್ಕಾರವು ಕೈ ಬಿಗಿ ಹಿಡಿಯುತ್ತಿತ್ತು. ಈ ಜಿಪುಣತನದ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪಿಸಿದಾಗ, ಇದೊಂದು ಬೇಡಿಕೆ-ಚಾಲಿತ ಯೋಜನೆಯಾಗಿರುವುದರಿಂದ, ಬಜೆಟ್ ಹಂಚಿಕೆಯ ಬಗ್ಗೆ ಅನುಮಾನಪಡುವ ಅವಶ್ಯಕತೆ ಇಲ್ಲ; ಉದ್ಯೋಗದ ಬೇಡಿಕೆಗೆ ಅನುಗುಣವಾಗಿ ಬಜೆಟ್ ಹಂಚಿಕೆಯನ್ನು ಪರಿಷ್ಕರಿಸಲಾಗುವುದು ಮತ್ತು ಹೆಚ್ಚು ಹೆಚ್ಚು ಜನರು ಉದ್ಯೋಗ ಕೇಳುವುದು ಕಂಡುಬಂದರೆ ಬಜೆಟ್ ಹಂಚಿಕೆಯನ್ನು ಹೆಚ್ಚಿಸಲಾಗುವುದು ಎಂಬುದಾಗಿ ಸರ್ಕಾರವು ಸಮಜಾಯಿಷಿ ಕೊಡುತ್ತಿತ್ತು.
ಅಡ್ಡ ಗೋಡೆಯ ಮೇಲಿಟ್ಟ ದೀಪದ ರೀತಿಯ ಉತ್ತರದ ಸಮಸ್ಯೆಯೆಂದರೆ, ಉದ್ಯೋಗದ ಬೇಡಿಕೆ ಹೆಚ್ಚಿದ್ದರಿಂದಾಗಿ ಒಂದು ವೇಳೆ ಬಜೆಟ್ ಹಂಚಿಕೆಯನ್ನು ಹೆಚ್ಚಿಸಿದರೂ ಸಹ, ಕೂಲಿಯ ಹಣ ಕೆಲಸ ಮಾಡಿದವರನ್ನು ತಲುಪಲು ಬಹಳ ಸಮಯ ಹಿಡಿಯುತ್ತದೆ. ಅಂದರೆ, ಬಹಳ ದಿನಗಳವರೆಗೆ ಕೂಲಿ ಹಣ ಬಾಕಿ ಉಳಿಯುತ್ತದೆ ಮತ್ತು ಈ ನಡುವೆ, ಕೆಲಸ ಮಾಡಿದವರು ತೊಂದರೆಗೆ ಒಳಗಾಗುತ್ತಾರೆ. ಹೀಗಾಗಿ, ಜನರು ಈ ಯೋಜನೆಯಡಿಯಲ್ಲಿ ಉದ್ಯೋಗ ಕೇಳುವುದನ್ನು ನಿಲ್ಲಿಸುತ್ತಾರೆ. ಆದ್ದರಿಂದ, ಬಜೆಟ್ ವರ್ಷದ ಆರಂಭದಲ್ಲಿ ಮಾಡುವ ಮೊದಲ ಹಂಚಿಕೆಗೂ ಉದ್ಯೋಗ ಲಭ್ಯತೆಗೂ ಸಂಬಂಧವಿಲ್ಲ; ಹಂಚಿಕೆಯನ್ನು ನಂತರದಲ್ಲೂ ಹೆಚ್ಚಿಸಬಹುದು ಎಂದು ಹೇಳಿದರೂ ಸಹ, ಉದ್ಯೋಗ ಖಾತ್ರಿ ಯೋಜನೆಗೆ ಬಜೆಟ್ ವರ್ಷದ ಆರಂಭದಲ್ಲಿ ಕಡಿಮೆ ಹಣ ಹಂಚಿದಾಗ ಉದ್ಯೋಗ ಬೇಡಿಕೆಯ ಮೇಲೆ ಅದರ ಪರಿಣಾಮ ಬಿದ್ದೇ ಬೀಳುತ್ತದೆ. ಕೂಲಿ ಪಾವತಿಸದಿರುವ ಮೂಲಕ ಉದ್ಯೋಗ ಬೇಡಿಕೆಯನ್ನು ಉಸಿರುಗಟ್ಟಿಸಲಾಗಿರುತ್ತದೆ. ಪರಿಣಾಮವಾಗಿ, ನಂತರದ ದಿನಗಳಲ್ಲಿ ಉದ್ಯೋಗ ಬೇಡಿಕೆ ಇಳಿಯುತ್ತದೆ. ಈ ಇಳಿಕೆಯ ಸಂಗತಿಯನ್ನು ಪೂರ್ವಾನ್ವಯವಾಗಿ ಬಳಸಿಕೊಂಡು ಯೋಜನೆಗೆ ಕಡಿಮೆ ಆರಂಭಿಕ ಬಜೆಟ್ ಹಂಚಿಕೆಯನ್ನು ಸಮರ್ಥಿಸಿಕೊಳ್ಳಲಾಗುತ್ತದೆ ಮತ್ತು ತದನಂತರದ ವರ್ಷವೂ ಹಂಚಿಕೆಯನ್ನು ಕಡಿಮೆ ಮಟ್ಟದಲ್ಲೇ ಇಡಲು ಈ ವಿತಂಡ ವಾದವನ್ನೇ ಬಳಸಿಕೊಳ್ಳಲಾಗುತ್ತದೆ.
ಈ ವಿಷಮ ಪರಿಸ್ಥಿತಿಯು, ಬೇರೊಂದು ಸನ್ನಿವೇಶದಲ್ಲಿ ಯಾವುದನ್ನು “ನಿರುತ್ಸಾಹಿತ ಕಾರ್ಮಿಕ ಪರಿಣಾಮ” ಎಂದು ಕರೆಯುತ್ತಾರೋ ಅದೇ ಆಗುತ್ತದೆಯಲ್ಲದೆ ಬೇರೇನೂ ಅಲ್ಲ. ಒಂದು ತೀವ್ರ ನಿರುದ್ಯೋಗ ಪರಿಸ್ಥಿತಿಯ ಅವಧಿಯಲ್ಲಿ, ಮುಂದುವರಿದ ಬಂಡವಾಳಶಾಹಿ ದೇಶಗಳಲ್ಲಿರುವಂತೆ, ಅನೇಕ ನಿರುದ್ಯೋಗಿಗಳು, ಕೆಲಸ ಸಿಗುವ ಭರವಸೆಯಿಲ್ಲ ಎಂದು ಭಾವಿಸಿ ಕೆಲಸ ಹುಡುಕದೆ, ಕಾರ್ಮಿಕ-ಪಡೆಯಿಂದ ಹೊರಗುಳಿಯುತ್ತಾರೆ. ಅದೇ ರೀತಿಯಲ್ಲಿ, ಗ್ರಾಮೀಣ ಭಾರತದಲ್ಲಿ ಕೂಲಿ ಪಾವತಿಯ ವಿಳಂಬವು ಅನೇಕ ನಿರುದ್ಯೋಗಿ ಕೆಲಸಗಾರರನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಹುಡುಕದಂತೆ ನಿರುತ್ಸಾಹಗೊಳಿಸುತ್ತದೆ. ಹೀಗಾಗಿ, ಉದ್ಯೋಗ ಖಾತ್ರಿ ಯೋಜನೆಗಾಗಿ ಒದಗಿಸುವ ಕಡಿಮೆ ಆರಂಭಿಕ ಬಜೆಟ್ ಹಂಚಿಕೆಯು “ನಿರುತ್ಸಾಹಿತ ಕಾರ್ಮಿಕ-ಪರಿಣಾಮ”ವನ್ನು ಬೀರುತ್ತದೆ.
ಪ್ರಜ್ಞಾಪೂರ್ವಕವಾಗಿ ಉದ್ಯೋಗ ಖಾತ್ರಿ ಯೋಜನೆಗೆ ಕಡಿಮೆ ಹಂಚಿಕೆ ಮಾಡುವ ಕ್ರಮವನ್ನು ಮೋದಿ ಸರ್ಕಾರವು ಅದರ ಪರಾಕಾಷ್ಠೆಗೆ ಕೊಂಡೊಯ್ದಿದೆ. ಈ ಯೋಜನೆಗೆ ಮೋದಿ ಆರಂಭದಿಂದಲೇ ವಿರೋಧವಾಗಿದ್ದರು. ಯೋಜನೆಯನ್ನು ಕಟುವಾಗಿ ಟೀಕಿಸಿದ್ದರು ಮತ್ತು ಅದನ್ನು ಹಿಂದಿನ ಸರ್ಕಾರಗಳ ಅಗಾಧ ವೈಫಲ್ಯಗಳ ಸ್ಮಾರಕವೆಂದು ಜರೆದಿದ್ದರು. ಆದರೂ, ಈ ಯೋಜನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಧೈರ್ಯವೂ ಅವರಿಗಿರಲಿಲ್ಲ. ಆದ್ದರಿಂದ, ಕಡಿಮೆ ಹಂಚಿಕೆ ಮಾಡುವ ಮೂಲಕ ಈ ಯೋಜನೆಯ ಕತ್ತು ಹಿಸುಕುವ ಕೆಲಸವನ್ನು ಮಾಡಿದರು. 2019-20ರಲ್ಲಿ ಈ ಯೋಜನೆಯ ನಿವ್ವಳ ವೆಚ್ಚವು 71,687 ಕೋಟಿ ರೂ. ಆಗಿತ್ತು. ಆದಾಗ್ಯೂ, 2020-21ರ ಬಜೆಟ್ನಲ್ಲಿ ಈ ಬಾಬ್ತು ಹಂಚಿಕೆಯನ್ನು 61,500 ಕೋಟಿ ರೂ.ಗಳಿಗೆ ಇಳಿಸಲಾಯಿತು. ಆದರೆ, ಕೊರೊನಾ ಲಾಕ್ಡೌನ್ನಿಂದಾಗಿ ಇದ್ದಕ್ಕಿದ್ದಂತೆ ಕೆಲಸ ಕಳೆದುಕೊಂಡ, ಆದಾಯ ಕಳೆದುಕೊಂಡ ಲಕ್ಷ ಲಕ್ಷ ವಲಸೆ ಕಾರ್ಮಿಕರು ನಗರಗಳಿಂದ ತಮ್ಮ ತಮ್ಮ ಹಳ್ಳಿಗಳಿಗೆ ವಾಪಸಾದರು. ಅವರು ತಮ್ಮ ಹಳ್ಳಿಗೆ ಹಿಂದಿರುಗಿದಾಗ ಅವರನ್ನು ಜೀವಂತ ಉಳಿಸಿದ ಏಕೈಕ ಅಂಶವೆಂದರೆ ಉದ್ಯೋಗ ಖಾತ್ರಿ ಯೋಜನೆಯೇ. ಲಕ್ಷಗಟ್ಟಲೆ ವಲಸೆ ಕೆಲಸಗಾರರು ಹಳ್ಳಿಗಳಿಗೆ ಮರಳಿದ ಕಾರಣದಿಂದಾಗಿ ಯೋಜನೆಯಡಿ ಕೆಲಸದ ಬೇಡಿಕೆಯ ಹಠಾತ್ ಹೆಚ್ಚಳವಾಗಿದ್ದು, ಬಜೆಟ್ ಹಂಚಿಕೆಯನ್ನು 1, 11,500 ಕೋಟಿ ರೂ.ಗಳಿಗೆ ಹೆಚ್ಚಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.
ಆದರೆ, ಮುಂದಿನ ವರ್ಷ, ಅಂದರೆ 2021-22ರಲ್ಲಿ, ಬಜೆಟ್ ಹಂಚಿಕೆಯನ್ನು ಮತ್ತೆ 73,000 ಕೋಟಿ ರೂ.ಗಳಿಗೆ ಇಳಿಸಲಾಯಿತು. ಇದು ಹಿಂದಿನ ವರ್ಷಕ್ಕಿಂತ 38,500 ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ. ಒಂದು ವೇಳೆ ಅರ್ಥವ್ಯವಸ್ಥೆಯು ಚೇತರಿಸಿಕೊಂಡಿದ್ದಿದ್ದರೆ ಮತ್ತು ಲಾಕ್ಡೌನ್ ಮೊದಲಿನಷ್ಟೇ ಪ್ರಮಾಣದಲ್ಲಿ ಉದ್ಯೋಗಗಳು ಲಭ್ಯವಿದ್ದಿದ್ದರೆ, ಈ ಕಡಿತವನ್ನು ಸ್ವಲ್ಪವಾದರೂ ಸಮರ್ಥಿಸಿಕೊಳ್ಳಬಹುದಿತ್ತು. ಆದರೆ, ಉತ್ಪತ್ತಿಯು(ಜಿಡಿಪಿ) ಮೊದಲಿನ ಮಟ್ಟಕ್ಕೆ ಚೇತರಿಸಿಕೊಂಡಿಲ್ಲ ಎಂಬುದು ಎಲ್ಲರಿಗೂ ತಿಳಿದದ್ದೇ. ಉದ್ಯೋಗಾವಕಾಶಗಳೂ ಸಹ ಇನ್ನೂ ಲಾಕ್ಡೌನ್-ಪೂರ್ವ ಮಟ್ಟಕ್ಕಿಂತಲೂ ಕೆಳಗಿವೆ. ಏಕೆಂದರೆ, ಹೆಚ್ಚು ಕೆಲಸಗಳನ್ನು ಒದಗಿಸುವ ಕಿರು ಉತ್ಪಾದನಾ ವಲಯವು ಸೊರಗುತ್ತಲೇ ಇದೆ. ಆದ್ದರಿಂದ, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸದ ಬೇಡಿಕೆಯು ಹೆಚ್ಚೆಂದರೆ ಕಳೆದ ವರ್ಷಕ್ಕಿಂತ ಸ್ವಲ್ಪ ಕಡಿಮೆಯಾಗಬಹುದು. ಈ ಹಿನ್ನೆಲೆಯಲ್ಲಿ, ಹಿಂದಿನ ವರ್ಷಕ್ಕೆ ಹೋಲಿಸಿದರೆ, ಉದ್ಯೋಗ ಖಾತ್ರಿ ಯೋಜನೆಗಾಗಿ ಬಜೆಟ್ ಹಂಚಿಕೆಯನ್ನು 38,500 ಕೋಟಿ ರೂ.ಗಳಷ್ಟು ಕಡಿತಗೊಳಿಸುವುದು ಮತ್ತು ಈ ಹಂಚಿಕೆಯನ್ನು 2019-20 ರ ನೈಜ ವೆಚ್ಚದ ಮಟ್ಟದಲ್ಲಿ ನಿಗದಿಪಡಿಸುವುದು ಯೋಜನೆಯ ಕತ್ತು ಹಿಸುಕುವ ಕೆಲಸವಾಗುತ್ತದೆ.
10,000 ಕೋಟಿ ರೂ.ಗಳಷ್ಟು ಹಣವನ್ನು ಈ ಯೋಜನೆಗೆ ಹೆಚ್ಚುವರಿಯಾಗಿ ಒದಗಿಸುವುದಾಗಿ ನವೆಂಬರ್ 25ರಂದು ಸರ್ಕಾರವು ಘೋಷಿಸಿದೆ, ನಿಜ. ಆದರೆ, ಇದು ರಾವಣನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ ಎನ್ನುವಂತೆ ಈ ಯೋಜನೆಗೆ ಏನೇನೂ ಸಾಲದು. ಕೂಲಿಯ ಬಾಕಿ ಈಗಾಗಲೇ ಬೆಟ್ಟದಷ್ಟು ಏರಿದೆ. ಇಡೀ ವರ್ಷದ ಬಜೆಟ್ ಹಂಚಿಕೆಯ ಹಣ ಏಳು ತಿಂಗಳುಗಳು ಮುಗಿಯುವ ಮೊದಲೇ ಸಂಪೂರ್ಣವಾಗಿ ಬಳಕೆಯಾಗಿದೆ. ಈ ಆಮೆಯ ವೇಗದ ಪ್ರಸ್ತುತ ಅನುಷ್ಠಾನದಲ್ಲಿಯೂ ಸಹ, ಅಂದರೆ, “ನಿರುತ್ಸಾಹಿತ ಕಾರ್ಮಿಕ-ಪರಿಣಾಮ”ವನ್ನು ಗಣನೆಗೆ ತೆಗೆದುಕೊಳ್ಳದೆ ಕಡಿಮೆ ಆರಂಭಿಕ ಬಜೆಟ್ ಹಂಚಿಕೆಯಿಂದಾಗಿ ಉದ್ಭವಿಸಿದ ಪರಿಸ್ಥಿತಿ ಮತ್ತು ಅನುಷ್ಠಾನದ ವೇಗವನ್ನು ಹೆಚ್ಚಿಸಬೇಕಾದ ಪ್ರಮೇಯವಿರುವುದರಿಂದ, ಈ ಯೋಜನೆಗೆ ಕನಿಷ್ಠ 30,000 ಕೋಟಿ ರೂ.ಗಳಷ್ಟು ಅಧಿಕ ಮೊತ್ತದ ಅಗತ್ಯವಿದೆ. ಆದರೆ, ಸರ್ಕಾರವು ಕೇವಲ 10,000 ಕೋಟಿ ರೂ.ಗಳನ್ನು ಮಾತ್ರ ಒದಗಿಸಿದೆ. ವಾಸ್ತವವಾಗಿ, ನವೆಂಬರ್ 25 ರಂದು ಈ ಯೋಜನೆಯ ಹಣಕಾಸು ಲೆಕ್ಕಪತ್ರಗಳು 9,888 ಕೋಟಿ ರೂ.ಗಳ ನಕಾರಾತ್ಮಕ ಶಿಲ್ಕು ತೋರಿಸುತ್ತವೆ (ದಿ ಹಿಂದೂ, ನವೆಂಬರ್ 26). ಹಾಗಾಗಿ, ಈ ಹೆಚ್ಚುವರಿ ಹಂಚಿಕೆಯು ಒಂದು ವೇಳೆ ಈ ಕೊರತೆಯ ಶಿಲ್ಕನ್ನು ಸರಿದೂಗಿಸುತ್ತದೆ ಎಂದುಕೊಂಡರೂ ಸಹ, ಪ್ರಸಕ್ತ ಹಣಕಾಸು ವರ್ಷದಲ್ಲಿ ಉಳಿದಿರುವ ಇನ್ನೂ ನಾಲ್ಕು ತಿಂಗಳು ಕಾಲ ಮಾಡುವುದೇನು?
ಸರ್ಕಾರದ ಈ ಜುಗ್ಗತನವನ್ನು ವಿವರಿಸಲಾಗದು ಮತ್ತು ಅದು ಒಂದು ಅವಿವೇಕದ ಕ್ರಮವೂ ಹೌದು. ವಿವರಿಸಲಾಗದು ಏಕೆಂದರೆ, ಸರ್ಕಾರವು ಈ ಯೋಜನೆಗಾಗಿ ಒಂದು ವೇಳೆ 100 ರೂ.ಗಳನ್ನು ಖರ್ಚು ಮಾಡಿದರೆ, ಆಗ, ಕೂಲಿಯ ಮತ್ತು ಸಾಮಗ್ರಿಗಳ ವೆಚ್ಚವನ್ನು ಶಾಸನಬದ್ಧ 60:40 ಅನುಪಾತದಲ್ಲಿ ವಿಭಜಿಸಲಾಗಿದೆ ಮತ್ತು ಕೆಲಸಗಾರರು ತಮ್ಮ ಕೂಲಿಯ ಶೇಕಡಾ 40 ರಷ್ಟನ್ನು ಆಹಾರ ಧಾನ್ಯಗಳಿಗೆ ಖರ್ಚು ಮಾಡುತ್ತಾರೆ ಎಂದು ಊಹಿಸಿಕೊಂಡರೆ, 24 ರೂ.ಗಳನ್ನು ಆಹಾರ ಧಾನ್ಯಗಳಿಗೆ ಖರ್ಚು ಮಾಡಲಾಗುತ್ತದೆ. ಆಹಾರ ಧಾನ್ಯಗಳ ದಾಸ್ತಾನು ಸರ್ಕಾರದೊಂದಿಗೆ ಈಗಾಗಲೇ ಲಭ್ಯವಿರುವುದರಿಂದ, ಯೋಜನೆಗೆ ಖರ್ಚು ಮಾಡಿದ 100 ರೂ.ಗಳಲ್ಲಿ ಸರ್ಕಾರಕ್ಕೆ ತಕ್ಷಣವೇ 24 ರೂ.ಗಳು (ಕಾಲು ಭಾಗ) ಹಿಂತಿರುಗುತ್ತವೆ. ಈ ಹೆಚ್ಚುವರಿ ವೆಚ್ಚಕ್ಕಾಗಿ ಇಡೀ ಹಣವನ್ನು ಒಂದು ವೇಳೆ ವಿತ್ತೀಯ ಕೊರತೆಯ ಮೂಲಕ ಒದಗಿಸಿಕೊಂಡಿದ್ದರೂ ಸಹ, ಅದರಲ್ಲಿ ಈ ರೀತಿಯ ಮೊದಲ ಸುತ್ತಿನ ಕಾಲು ಭಾಗ ವೆಚ್ಚಗಳ ನಂತರ ಉಳಿಯುವ ವಾಸ್ತವ ವಿತ್ತೀಯ ಕೊರತೆಯು ಮುಕ್ಕಾಲು ಭಾಗ ಮಾತ್ರ.
ಭಾರತ ಆಹಾರ ನಿಗಮದ(ಎಫ್ಸಿಐ) ವ್ಯವಹಾರ-ವಹಿವಾಟುಗಳು ಈಗ ಸರ್ಕಾರದ ಬಜೆಟ್ನಲ್ಲಿ ಪ್ರಸ್ತಾಪವಾಗುವುದಿಲ್ಲ, ನಿಜ. (ಈ ಮೊದಲು ಪ್ರಸ್ತಾಪವಾಗುತ್ತಿದ್ದವು). ಆದರೆ, ಸರ್ಕಾರ ಮಾಡಿದ ಖರ್ಚಿನ ಕಾಲು ಭಾಗವು ತಕ್ಷಣವೇ ಆಹಾರ ನಿಗಮಕ್ಕೆ ಆದಾಯವಾಗಿ ಬರುತ್ತದೆ ಎಂಬ ಮೂಲಭೂತ ಅಂಶವನ್ನು ಮರೆಯುವಂತಿಲ್ಲ. ಅಂತೆಯೇ, ಈ ಆರಂಭಿಕ ವೆಚ್ಚವು ವಿವಿಧ ಸುತ್ತಿನ ವೆಚ್ಚಗಳನ್ನು ಸೃಷ್ಟಿಸುತ್ತದೆ. ಉದ್ಯೋಗ ಯೋಜನೆಯ ಕೆಲಸ ಕಾರ್ಯಗಳಲ್ಲಿ ಬಳಸುವ ಸಾಮಗ್ರಿಗಳ ತಯಾರಕರು ತಮಗೆ ಸಿಗುವ ಆದಾಯದ ಒಂದು ಭಾಗವನ್ನು ಖರ್ಚು ಮಾಡುತ್ತಾರೆ. ಈ ತಯಾರಕರುಗಳು ಕೊಳ್ಳುವ ವಸ್ತುಗಳ ಉತ್ಪಾದಕರು ತಮ್ಮ ಆದಾಯದ ಒಂದು ಭಾಗವನ್ನು ಖರ್ಚು ಮಾಡುತ್ತಾರೆ. ಹೀಗೆ, ಒಂದೊಂದು ಸ್ತರದಲ್ಲೂ ಆಗುವ ಖರ್ಚುಗಳು ಆಹಾರ ಧಾನ್ಯಗಳಿಗೆ ಹಂತ ಹಂತವಾಗಿ ಬೇಡಿಕೆಯನ್ನು ಸೃಷ್ಟಿಸುತ್ತಾ ಹೋಗುತ್ತವೆ ಮತ್ತು ಆಹಾರ ನಿಗಮದ ದಾಸ್ತಾನುಗಳನ್ನು ಇಳಿಸುತ್ತವೆ. ದಾಸ್ತಾನುಗಳ ಇಳಿಕೆಯ ಪರಿಣಾಮವಾಗಿ, ಧಾನ್ಯ ಸಂಗ್ರಹಣಾ ವೆಚ್ಚಗಳು ಮತ್ತು ಅವುಗಳನ್ನು ಕೊಳ್ಳಲು ಮಾಡುವ ಸಾಲದ ಮೇಲಿನ ಬಡ್ಡಿಯ ವೆಚ್ಚಗಳು ತಗ್ಗುತ್ತವೆ.
ಹೀಗಾಗಿ, ಸರ್ಕಾರವು ಒಂದು ವೇಳೆ ವಿತ್ತೀಯ ಕೊರತೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಹಣ ಹೊಂದಿಸಿಕೊAಡು ಅದನ್ನು ಯೋಜನೆಗಾಗಿ ಖರ್ಚು ಮಾಡಿದರೂ ಸಹ, ಪರಿಣಾಮಗಳು ಪ್ರತಿಕೂಲವಾಗುವುದಿಲ್ಲ. ಖರ್ಚು ಮಾಡಿದ ಹಣದಲ್ಲಿ ಹೆಚ್ಚಿನ ಬಾಗವು ಎಫ್ಸಿಐ ಮೂಲಕ ಸರ್ಕಾರಕ್ಕೇ ಹಿಂತಿರುಗುತ್ತದೆ. ಮತ್ತು, ಸರ್ಕಾರದ ಬಜೆಟ್ ಮತ್ತು ಅದರೊಂದಿಗೆ ಎಫ್ಸಿಐನ ಖರ್ಚು-ವೆಚ್ಚಗಳನ್ನು ಒಟ್ಟುಗೂಡಿಸಿ ನೋಡಿದಾಗ, ವಾಸ್ತವಿಕ ವಿತ್ತೀಯ ಕೊರತೆಯು, ತೋರಿಕೆಯ ವಿತ್ತೀಯ ಕೊರತೆಗಿಂತ (ಸರ್ಕಾರದ ಬಜೆಟ್ ಒಂದನ್ನೇ ಪರಿಗಣಿಸಿದಾಗ) ತುಂಬಾ ಕಡಿಮೆ ಇರುತ್ತದೆ. ವಾಸ್ತವವಾಗಿ, ಯೋಜನೆಯ ಮೇಲೆ ಸರ್ಕಾರವು ಮಾಡುವ ವೆಚ್ಚವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಆದಾಯ ಗಳಿಸುವ ಎಲ್ಲರೂ ತಮ್ಮ ತಮ್ಮ ಆದಾಯವನ್ನು ಸಂಪೂರ್ಣವಾಗಿ ಬಳಕೆ ಮಾಡುತ್ತಾರೆ ಎಂದು ನಾವು ಭಾವಿಸಿದರೆ, ಆಗ, ಸರ್ಕಾರವು ಮಾಡಿದ ಪೂರ್ಣ ವೆಚ್ಚವು ಎಫ್ಸಿಐಗೆ ಮರಳುತ್ತದೆ. ಅಂದರೆ, ನಿಜವಾದ ವಿತ್ತೀಯ ಕೊರತೆಯು ಶೂನ್ಯವಾಗಿರುತ್ತದೆ. ಜಾಗತೀಕರಣಗೊಂಡ ಹಣಕಾಸು ಬಂಡವಾಳ ಮತ್ತು ಅದರ ಹಿತ-ರಕ್ಷಣೆ ಮಾಡುವ ಐಎಂಎಫ್, ಬಜೆಟ್ನಲ್ಲಿರುವುದು ಮಾತ್ರ ವಿತ್ತೀಯ ಕೊರತೆ ಎಂದು ಪರಿಗಣಿಸುವಂತೆ ಒತ್ತಾಯಿಸಬಹುದು. ಕೇವಲ ಸೈದ್ಧಾಂತಿಕ ಕಾರಣಗಳಿಗಾಗಿ ಅವರು ಹಾಗೆ ಮಾಡುತ್ತಾರೆ. ಆದರೆ, ಎಫ್ಸಿಐ ಸ್ವತಃ ಸರ್ಕಾರದ ಭಾಗವಾಗಿರುವುದರಿಂದ, ಅವರು ಊದುವ ಶಂಖಕ್ಕೆ ನಾವು ಮರುಳಾಗಬಾರದು.
ಸರ್ಕಾರದ ಜುಗ್ಗುತನವು ಒಂದು ಅವಿವೇಕದ ಸಂಗತಿಯಾಗಿದೆ. ಏಕೆಂದರೆ, ಸರ್ಕಾರವು ಈ ಯೋಜನೆಯ ಮೇಲೆ ಮಾಡಿದ ಖರ್ಚಿನಲ್ಲಿ ಶಾಸನಬದ್ಧವಾಗಿ ಶೇಖಡಾ 60ರಷ್ಟು ಹಣವನ್ನು ಯೋಜನೆಗೆ ಬೇಕಾಗುವ ಸಾಮಗ್ರಿಗಳನ್ನು ಕೊಳ್ಳಲು ಬಳಸಬೇಕಾಗುತ್ತದೆ. ಈ ಸಾಮಗ್ರಿಗಳ ತಯಾರಕರು ತಮಗೆ ಸಿಗುವ ಆದಾಯದ ಒಂದು ಭಾಗವನ್ನು ಆಹಾರೇತರ ವಸ್ತುಗಳನ್ನು ಕೊಳ್ಳಲು ಬಳಸುತ್ತಾರೆ. ಆ ಬಳಕೆಯ ವಸ್ತುಗಳ ಉತ್ಪಾದಕರು ತಮ್ಮ ಆದಾಯದ ಒಂದು ಭಾಗವನ್ನು ಆಹಾರೇತರ ವಸ್ತುಗಳನ್ನು ಕೊಳ್ಳಲು ಬಳಸುತ್ತಾರೆ. ಕೆಲಸಗಾರರೂ ಸಹ ತಮ್ಮ ಆದಾಯದ ಸ್ವಲ್ಪ ಭಾಗವನ್ನು ಆಹಾರೇತರ ವಸ್ತುಗಳನ್ನು ಕೊಳ್ಳಲು ಬಳಸುತ್ತಾರೆ. ಹೀಗೆ, ಒಟ್ಟಾರೆಯಾಗಿ ಆಹಾರೇತರ ವಸ್ತುಗಳ ಮೇಲಿನ ಬೇಡಿಕೆಯು ಹೆಚ್ಚುತ್ತಾ ಹೋಗುತ್ತದೆ. ಅಲ್ಲದೆ, ಈ ವಸ್ತುಗಳು ಸಾಮಾನ್ಯವಾಗಿ ಸಣ್ಣ ಪ್ರಮಾಣದ ಕೈಗಾರಿಕೆಗಳಲ್ಲಿ ಮತ್ತು ಅನೌಪಚಾರಿಕ ವಲಯದಲ್ಲಿ ತಯಾರಾಗುತ್ತವೆ. ಈ ವಸ್ತುಗಳನ್ನು ತಯಾರಿಸುವ ಉದ್ಯೋಗ-ತೀವ್ರ (ಹೆಚ್ಚು ಕೆಲಸಗಳನ್ನು ಒದಗಿಸುವ)ವಲಯವು ಹೆಚ್ಚಿನ ಸಂಖ್ಯೆಯ ಕೆಲಸಗಾರರಿಗೆ ಉದ್ಯೋಗ ದೊರಕಿಸುತ್ತದೆ.
ಈ ಎಲ್ಲ ಅಂಶಗಳು ಏನನ್ನು ಸೂಚಿಸುತ್ತವೆ ಎಂದರೆ, ಸರ್ಕಾರವು ತನ್ನ ವೆಚ್ಚಗಳಿಗೆ ಹಣವನ್ನು ಯಾವ ರೀತಿಯಲ್ಲಿ ಒದಗಿಸಿಕೊಂಡಿದೆ ಎಂಬುದ ಮುಖ್ಯವಲ್ಲ. ಮುಖ್ಯವೆಂದರೆ, ಸರ್ಕಾರವು ಉದ್ಯೋಗ ಖಾತ್ರಿ ಯೋಜನೆಯ ಮೇಲೆ ಮಾಡುವ ಒಂದೊAದು ರೂಪಾಯಿಯ ವೆಚ್ಚವೂ ಇತರ ಯಾವುದೇ ವೆಚ್ಚಕ್ಕಿಂತಲೂ ಉತ್ತಮ. ಆದರೇನು ಮಾಡೋಣ! ಇದನ್ನು ಮನಗಾಣಲಾಗದಷ್ಟು ಕುರುಡಾಗಿದೆ ಸರ್ಕಾರ.
ಅನು: ಕೆ.ಎಂ. ನಾಗರಾಜ್