ತೆಂಗು ಬೆಳೆಗಾರರ ನೆರವಿಗೆ ನಿಂತ ರಾಜ್ಯ ಸರ್ಕಾರ:ಕ್ವಿಂಟಲ್ ಉಂಡೆ ಕೊಬ್ಬರಿಗೆ 1,250 ರೂ ಬೆಂಬಲ ಬೆಲೆ ಘೋಷಣೆ

ಬೆಂಗಳೂರು: ಸಂಕಷ್ಟದಲ್ಲಿರುವ ತೆಂಗು ಬೆಳೆಗಾರರ ನೆರವಿಗಾಗಿ ರಾಜ್ಯ ಸರ್ಕಾರ ಧಾವಿಸಿದ್ದು, ಪ್ರತಿ ಕ್ವಿಂಟಲ್ ಉಂಡೆ ಕೊಬ್ಬರಿಗೆ 1,250 ರೂಪಾಯಿ ಬೆಂಬಲ ಬೆಲೆ ನೀಡುವುದಾಗಿ ಘೋಷಣೆ ಮಾಡಿದೆ.

ಸದನ ಸಮಾವೇಶಗೊಂಡಾಗ ಕೊಬ್ಬರಿ ಬೆಲೆ ಕುಸಿತ ಚರ್ಚೆಗೆ ಸಂಬಂಧಿಸಿದಂತೆ ಉತ್ತರ ನೀಡಿದ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು, ಇಂದಿನಿಂದ ಕೊಬ್ಬರಿ ಖರೀದಿಗೆ 1,250 ರೂ.ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದರು. ಇದೇ ವೇಳೆ ಈ ಹಿಂದೆ ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಮಾರಾಟ ಮಾಡಿದವರಿಗೆ ಇದು ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ತೆಂಗು ಮತ್ತು ಕೊಬ್ಬರಿಗೆ ಸೂಕ್ತ ಬೆಂಬಲ ಬೆಲೆ ನಿಗದಿ ಮಾಡಿ – ತೆಂಗು ಬೆಳೆಗಾರರ ಆಗ್ರಹ

ವಿವಿಧ ಮಾರುಕಟ್ಟೆಗಳಲ್ಲಿ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 7,700 ರಿಂದ 8,020 ರೂ.ವರೆಗೆ ಮಾರಾಟವಾಗುತ್ತಿದೆ. ರಾಜ್ಯಸರ್ಕಾರವು ಕೊಬ್ಬರಿ ಖರೀದಿ ಪ್ರಮಾಣ ಹೆಚ್ಚಳ ಹಾಗೂ ಖರೀದಿ ಹಾಗೂ ವಿಸ್ತರಣೆಗೆ ಕೇಂದ್ರ ಸರ್ಕಾರವನ್ನು ಕೋರಿದೆ ಎಂದು ಹೇಳಿದರು. ಕೇಂದ್ರ ಸರ್ಕಾರ ಖರೀದಿ ಪ್ರಮಾಣ ಹೆಚ್ಚಳ ಹಾಗೂ ವಿಸ್ತರಣೆಗೆ ಅನುಮತಿ ನೀಡಿದ ಬಳಿಕ ನೋಂದಾಯಿಸುವವರಿಗೂ ಪ್ರೋತ್ಸಾಹ ಧನ ದೊರೆಯಲಿದೆ ಎಂದರು.

ರಾಜ್ಯಸರ್ಕಾರದಿಂದ ಇದುವರೆಗೆ 1,000 ರೂ. ಮಾತ್ರ ಪ್ರೋತ್ಸಾಹ ಧನ ನೀಡಲಾಗಿತ್ತು. ಇದೇ ಮೊದಲ ಬಾರಿಗೆ 1,250 ರೂ. ಪ್ರೋತ್ಸಾಹ ಧನ ಕೊಡಲಾಗುತ್ತಿದೆ ಎಂದರು. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರವು ಬೆಂಬಲ ಬೆಲೆ ಯೋಜನೆಯಡಿ ಪ್ರತೀ ಕ್ವಿಂಟಾಲ್ ಕೊಬ್ಬರಿಗೆ 16,500 ರೂ.ವರೆಗೆ ಹೆಚ್ಚಿಸಬೇಕು. ಉತ್ಪಾದನೆಯ ಶೇ.25 ರಿಂದ ಶೇ.50ರಷ್ಟು ಖರೀದಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಹೇಳಿದರು.

ಕೇಂದ್ರಸರ್ಕಾರವು ಪ್ರತೀ ಕ್ವಿಂಟಾಲ್ ಉಂಡೆ ಕೊಬ್ಬರಿಗೆ 11,750 ರೂ. ಬೆಂಬಲ ಬೆಲೆ ನಿಗದಿ ಪಡಿಸಿದೆ. ಇದರ ಜೊತೆಗೆ ರಾಜ್ಯಸರ್ಕಾರ 1,250 ರೂ. ಪ್ರೋತ್ಸಾಹ ಧನ ನೀಡಲಿದೆ ಎಂದರು. ನಿನ್ನೆಯವರೆಗೆ ಕೇಂದ್ರ ಸರ್ಕಾರದ ಏಜೆನ್ಸಿ ನ್ಯಾಪೆಡ್ ಮೂಲಕ ರಾಜ್ಯ ಏಜೆನ್ಸಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಮೂಲಕ 45,038 ಮೆಟ್ರಿಕ್ ಟನ್ ಉಂಡೆ ಕೊಬ್ಬರಿ ಖರೀದಿಸಲಾಗಿದೆ. 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 6.43 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 26.06 ಲಕ್ಷ ಮೆಟ್ರಿಕ್ ಟನ್ ತೆಂಗು ಹಾಗೂ ಕೊಬ್ಬರಿ ಉತ್ಪಾದನೆಯಾಗಿದೆ. ಎಂಎಸ್‌ಪಿ ಅಡಿ ಕೊಬ್ಬರಿ ಖರೀದಿಗೆ 37,632 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ನಿನ್ನೆಯವರೆಗೆ 31,641 ರೈತರು ಪ್ರಯೋಜನ ಪಡೆದಿದ್ದಾರೆ. ಜುಲೈ 26ರವರೆಗೂ ಖರೀದಿ ಪ್ರಕ್ರಿಯೆ ಚಾಲನೆಯಲ್ಲಿರುತ್ತದೆ ಎಂದರು.

Donate Janashakthi Media

Leave a Reply

Your email address will not be published. Required fields are marked *