ಪ್ರೊ.ಪ್ರಭಾತ್ ಪಟ್ನಾಯಕ್
ನೋಟು ರದ್ದತಿಯನ್ನು ಆದೇಶಿಸಿದ ಮೋದಿ ಸರ್ಕಾರವು ಜನರ ಕಷ್ಟಗಳ ಬಗ್ಗೆ ತೋರಿದಷ್ಟು ಅಸಡ್ಡೆಯನ್ನು ಯಾರಾದರೂ ಹೇಗೆ ತೋರಲು ಸಾಧ್ಯವೆ? ಇದಕ್ಕೆ ಉತ್ತರ “ಆಘಾತ ಮತ್ತು ಭಯ ಭಕ್ತಿ” ಉಂಟುಮಾಡುವ ಬಯಕೆ ಮತ್ತು ಸರಕಾರ ಇಷ್ಟೊಂದು ಯಾತನೆ ಉಂಟು ಮಾಡುತ್ತಿದ್ದರೆ, ಅದು ಯಾವುದೋ ಉನ್ನತ ಗುರಿಸಾಧನೆಗಾಗಿ ಎಂದು ಜನ ಎಷ್ಟು ಹೆಚ್ಚು ಬಳಲುತ್ತಾರೋ, ಅಷ್ಟು ಹೆಚ್ಚಿನ ಮಟ್ಟದಲ್ಲಿ ಭಾವಿಸುತ್ತಾರೆ ಎಂಬ ಅವರ ನಂಬಿಕೆಯಲ್ಲಿ ಇದೆ. ಸರ್ಕಾರದ ಅಜ್ಞಾನ, ದುರಹಂಕಾರ ಮತ್ತು “ಆಘಾತ ಮತ್ತು ಭಯ ಭಕ್ತಿ” ಉಂಟುಮಾಡುವ ಬಯಕೆ-ಇವೆಲ್ಲಾ ಒಟ್ಟಾದರೆ ಸಾಕಷ್ಟು ಮಾರಕವಾಗಬಲ್ಲದು ಎಂಬುದನ್ನು ಭಾರತದ ಜನರು ಬಲು ದೊಡ್ಡ ಬೆಲೆ ತೆತ್ತು ಕಲಿತಿದ್ದಾರೆ.
ನವೆಂಬರ್ 8, 2016ರಂದು ಮೋದಿ ಸರ್ಕಾರವು ಆದೇಶಿಸಿದ 500 ಮತ್ತು 1000 ರೂ.ಗಳ ಮುಖಬೆಲೆಯ ಕರೆನ್ಸಿ ನೋಟುಗಳ ರದ್ದತಿಯ ಕ್ರಮವು, ಸ್ವಾತಂತ್ರ‍್ಯಾನಂತರದ ಭಾರತದ ಇತಿಹಾಸದಲ್ಲೇ ತನ್ನ ಘೋಷಿತ ಉದ್ದೇಶಗಳನ್ನು ಸಾಧಿಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡ ಮತ್ತು ಜನರಿಗೆ ಅತ್ಯಂತ ವಿನಾಶಕಾರಿಯಾಗಿ ಪರಿಣಮಿಸಿದಂಥಹ ಆರ್ಥಿಕ ಕ್ರಮ ಮತ್ತೊಂದಿಲ್ಲ. ತನ್ನ ಉದ್ದೇಶಗಳನ್ನು ಸರ್ಕಾರವು ಸಾಧಿಸಲಿಲ್ಲ ಎಂಬುದೇನೂ ಅನಿರೀಕ್ಷಿತವಾಗಿರಲಿಲ್ಲ. ಮಾತ್ರವಲ್ಲ, ಅದು ಮೂರ್ಖತನದ ಪರಮಾವಧಿ ಎಂಬುದೂ ಸಹ ಪ್ರತಿಯೊಬ್ಬ ಅರ್ಥಶಾಸ್ತ್ರಜ್ಞನಿಗೂ ಗೊತ್ತಿತ್ತು. ಆದ್ದರಿಂದಲೇ ಎಲ್ಲರೂ ಅದನ್ನು ವಿರೋಧಿಸಿದರು. ಬೆರಳೆಣಿಕೆಯ ಕೆಲವು ಹೊಗಳುಭಟ್ಟರು ಮಾತ್ರ ಮೋದಿಯನ್ನು ಇನ್ನಿಲ್ಲದಂತೆ ಕೊಂಡಾಡಿದರು.
ಕಪ್ಪು ಹಣದ ನಿರ್ಮೂಲನೆ, ನಕಲಿ ನೋಟುಗಳ ಹುಟ್ಟಡಗಿಸುವುದು ಮತ್ತು ಭಯೋತ್ಪಾದಕರಿಗೆ ಒದಗುವ ಹಣದ ಮೂಲದ ನಾಶ ಎಂಬ ಮೂರು ಉದ್ದೇಶಗಳನ್ನು ಸರ್ಕಾರ ಹೊಂದಿತ್ತು. ನಕಲಿ ನೋಟುಗಳ ನಿರ್ಮೂಲನೆ ಮತ್ತು ಭಯೋತ್ಪಾದನೆಯ ಅಂತ್ಯ, ಇವು ಒಗ್ಗರಣೆಯ ಮಾತುಗಳು ಎಂಬುದೂ ಸಹ ಎಲ್ಲರಿಗೂ ತಿಳಿದಿತ್ತು. ಭಾರತದ ಅಂಕಿ-ಸಂಖ್ಯೆಗಳ ಸಂಸ್ಥೆಯು ಸ್ವಲ್ಪ ಸಮಯದ ಹಿಂದೆ ಕೈಗೊಂಡ ಒಂದು ಅಧ್ಯಯನದ ಪ್ರಕಾರ, ಚಲಾವಣೆಯಲ್ಲಿರುವ ಅಸಲಿ ಕರೆನ್ಸಿಯ (ನೋಟುಗಳ) ನಡುವೆ ನುಸುಳಿರುವ ನಕಲಿ ಕರೆನ್ಸಿಯ (ಖೋಟಾ ನೋಟುಗಳ) ಪ್ರಮಾಣವು ಒಟ್ಟು ಕರೆನ್ಸಿಯ ಪ್ರಮಾಣಕ್ಕೆ ಹೋಲಿಸಿದರೆ, ನಗಣ್ಯ ಎಂಬ ಒಂದು ಅಂದಾಜು ಸರ್ಕಾರದ ಬಳಿ ಇತ್ತು. ಆದ್ದರಿಂದ, ಅಲ್ಲೊಂದು ಇಲ್ಲೊಂದು ಎನ್ನುವಷ್ಟು ಕಡಿಮೆ ಪ್ರಮಾಣದ ನಕಲಿ ಕರೆನ್ಸಿಯನ್ನು ತೊಡೆದುಹಾಕುವ ಸಲುವಾಗಿ ದೇಶದ ಚಲಾವಣೆಯ 85% ಕರೆನ್ಸಿಯನ್ನು ಹಠಾತ್ತಾಗಿ ರದ್ದು ಮಾಡಿದ ಕ್ರಮದ ಪರವಾಗಿ ಮಾಡಿದ ವಾದವನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ.
ಅದೇ ರೀತಿಯಲ್ಲಿ, 500 ಮತ್ತು 1000 ರೂ.ಗಳ ನೋಟುಗಳನ್ನು ರದ್ದು ಮಾಡಿದರೆ ಭಯೋತ್ಪಾದನೆಯತ್ತ ಹಣದ ಹರಿವನ್ನು ನಿಲ್ಲಿಸಬಹುದು ಅಥವಾ ಭಯೋತ್ಪಾದನೆಯನ್ನು ತಾತ್ಕಾಲಿಕವಾಗಿಯಾದರೂ ನಿಲ್ಲಿಸಬಹುದು ಎಂಬುದನ್ನೂ ಸಹ ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಏಕೆಂದರೆ, ಭಯೋತ್ಪಾದನೆಗೆ ವಿವಿಧ ಮಾರ್ಗಗಳ ಮೂಲಕ ಹಣ ಹರಿಯುತ್ತದೆ. ಹಾಗಾಗಿ, ಕಪ್ಪು ಹಣವನ್ನು ತೊಡೆದುಹಾಕುವುದೇ ನೋಟು ರದ್ದತಿಯ ನಿಜವಾದ ಉದ್ದೇಶವಾಗಿತ್ತು. ಆದ್ದರಿಂದ, ನೋಟು ರದ್ದತಿಯ ಮೂಲಕ ಕಪ್ಪು ಹಣವನ್ನು ತೊಡೆದು ಹಾಕಬಯಸಿದ ಮೋದಿ ಸರ್ಕಾರವು ಅರ್ಥವ್ಯವಸ್ಥೆಯ ಕಪ್ಪು ಆಯಾಮದ ಬಗ್ಗೆ ಮಾತ್ರವಲ್ಲ, ಅರ್ಥವ್ಯವಸ್ಥೆಯ ಬಗ್ಗೆಯೇ ಹೊಂದಿರುವ ತಿಳುವಳಿಕೆಯ ಕೊರತೆಯನ್ನು ಬಯಲು ಮಾಡುತ್ತದೆ.
ಕಪ್ಪು ಹಣದ ಸಂಬಂಧವಾಗಿ ಮೋದಿ ಸರ್ಕಾರವು ಹೊಂದಿರುವ ತಿಳುವಳಿಕೆಯು ಬಾಲಿವುಡ್ ಚಲನಚಿತ್ರಗಳಿಂದ ಪಡೆದ ತಿಳುವಳಿಕೆಯೇ. ಅಂದರೆ, ಸಿನೆಮಾಗಳಲ್ಲಿ ತೋರಿಸುವ ರೀತಿಯಲ್ಲಿ ಕಪ್ಪು ಹಣವನ್ನು ಅಥವಾ ಅಕ್ರಮವಾಗಿ ಸಂಪಾದಿಸಿದ ಹಣವನ್ನು (ಅಂದರೆ, ಕರೆನ್ಸಿ ನೋಟುಗಳನ್ನು) ತಲೆದಿಂಬುಗಳ ಒಳಗೆ ಅಥವಾ ಹಾಸಿಗೆಗಳ ಕೆಳಗೆ ಇರಿಸಲಾದ ಸೂಟ್ ಕೇಸ್‌ಗಳಲ್ಲಿ ಅಡಗಿಸಿಟ್ಟಿರುತ್ತಾರೆ. ನಾಯಿ ಮಾರಿದ ಹಣ ಬೌಬೌ ಎನ್ನುವುದಿಲ್ಲ ಎಂಬಂತೆ, “ಕಪ್ಪು ಹಣ” ಎಂಬುದಕ್ಕೆ ಒಂದು ಪ್ರತ್ಯೇಕ ರೂಪವಿಲ್ಲ. ಕೆಲವು ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಅಥವಾ ಅಕ್ರಮವಾಗಿ ಸಂಪಾದಿಸಿದ ಹಣವನ್ನು ಅಥವಾ ಸಂಪಾದನೆಯ ಮೇಲೆ ಕೊಡಬೇಕಾದ ತೆರಿಗೆಯಿಂದ ತಪ್ಪಿಸಿಕೊಂಡ ವರಮಾನವನ್ನು “ಕಪ್ಪು ಹಣ” ಎನ್ನುತ್ತಾರೆ. ಯಾವುದೇ ಆರ್ಥಿಕ ಚಟುವಟಿಕೆಗೂ ಹಣದ ಅಗತ್ಯ ಇದ್ದೇ ಇರುತ್ತದೆ ಮತ್ತು ಅದಕ್ಕೆ ಬಳಕೆಯಾದದ್ದು ಕಪ್ಪು ಹಣವೂ ಆಗಿರಬಹುದು ಮತ್ತು ಅದು ತಲೆದಿಂಬುಗಳಲ್ಲಿ ಅಥವಾ ಸೂಟ್ ಕೇಸ್‌ಗಳಲ್ಲಿ ನಿಷ್ಕ್ರಿಯವಾಗಿ ಉಳಿಯುವುದಿಲ್ಲ.
ತಮ್ಮ ಬಳಿ ಇದ್ದ ರದ್ದಾದ ಕರೆನ್ಸಿ ನೋಟುಗಳನ್ನು ಹೊಸ ಕರೆನ್ಸಿಯೊಂದಿಗೆ ಬದಲಾಯಿಸಿಕೊಳ್ಳಲು ಬ್ಯಾಂಕುಗಳಿಗೆ ಬಾರದೆ ಇದ್ದ ಕೆಲವರಿಗೆ ಸೇರಿದ ಒಂದಿಷ್ಟು ಕಪ್ಪು ಹಣವನ್ನು ಪತ್ತೆಹಚ್ಚಬಹುದು ಎಂಬ ನಿರೀಕ್ಷೆಯಲ್ಲಿ ಮೋದಿ ಸರ್ಕಾರವು ಒಂದು ವೇಳೆ ಯಶಸ್ವಿಯಾಗಿದ್ದರೂ ಸಹ, ಅಕ್ರಮ ಚಟುವಟಿಕೆಗಳನ್ನು ತಪ್ಪಿಸಲಾಗುತ್ತಿರಲಿಲ್ಲ. ಏಕೆಂದರೆ, ಹಣದ ಬಳಕೆಯನ್ನು ಒಂದು ಘೋಷಿತ ಆರ್ಥಿಕ ಚಟುವಟಿಕೆಯಿಂದ ಇನ್ನೊಂದು ಅಘೋಷಿತ ಆರ್ಥಿಕ ಚಟುವಟಿಕೆಗೆ ವರ್ಗಾಯಿಸಲು ಸಾಧ್ಯವಿದೆ. ಅಂದರೆ, ಹಣವು “ಸಕ್ರಮ” ಆರ್ಥಿಕ ಚಟುವಟಿಕೆಯಿಂದ “ಅಕ್ರಮ” ಆರ್ಥಿಕ ಚಟುವಟಿಕೆಗೆ ಅಥವಾ ಘೋಷಿತವಲ್ಲದ ಆರ್ಥಿಕ ಚಟುವಟಿಕೆಗೆ ಬದಲಾಗುತ್ತಿತ್ತು. ಇದು ಹೆಚ್ಚೆಂದರೆ, ಹಣದ ಅಭಾವವನ್ನು ಉಂಟುಮಾಡುತ್ತಿತ್ತು ಮತ್ತು ಆದ್ದರಿಂದಾಗಿ ಸ್ವಲ್ಪ ಮಟ್ಟಿನ ಆರ್ಥಿಕ ಹಿಂಜರಿತವೂ ಆಗುತ್ತಿತ್ತು. “ಕಪ್ಪು” ಹಣವಂತೂ ನಿಜಕ್ಕೂ ನಿರ್ಮೂಲವಾಗುತ್ತಿರಲಿಲ್ಲ.
ತಮ್ಮ ಬಳಿ ಇರುವ ರದ್ದಾದ ಕರೆನ್ಸಿಯ ಹೆಚ್ಚಿನ ಪ್ರಮಾಣದೊಂದಿಗೆ ಬ್ಯಾಂಕಿಗೆ ಹೋದರೆ ಸಿಕ್ಕಿಹಾಕಿಕೊಳ್ಳುವ ಭಯದಿಂದ “ಕಪ್ಪು” ಹಣ ಇಟ್ಟುಕೊಂಡವರು ಅದನ್ನು “ಬಿಳಿ” ಹಣದೊಂದಿಗೆ ವಿನಿಮಯ ಮಾಡಿಕೊಳ್ಳುವುದು ಸಾಧ್ಯವಿಲ್ಲ, ಏಕೆಂದರೆ, ಹಾಗೆ ಮಾಡಲು ಅವರು ತುಂಬಾ ಹೆದರುತ್ತಾರೆ ಎಂಬುದು ಸರ್ಕಾರದ ನಿರೀಕ್ಷೆಯಾಗಿತ್ತು. ವಾಸ್ತವವಾಗಿ, ಹೊಸ ನೋಟುಗಳಾಗಿ ಬದಲಾಯಿಸಿಕೊಳ್ಳಲು ರದ್ದಾದ 99% ಕರೆನ್ಸಿ ನೋಟುಗಳು ಬ್ಯಾಂಕುಗಳಿಗೆ ಮರಳಿದವು. ನೋಟು ರದ್ದತಿಯ ಸಂಪೂರ್ಣ ವೈಫಲ್ಯವನ್ನು ಇಷ್ಟು ಸ್ಪುಟವಾಗಿ ತೋರಿಸುವುದು ಬೇರೆ ಯಾವ ಸಂಗತಿಯಿಂದಲೂ ಸಾಧ್ಯವಿಲ್ಲ.
ಕರೆನ್ಸಿಯನ್ನು ಚಲಾವಣೆಗೆ ನೀಡಿದಾಗ ಅದು ಭಾರತೀಯ ರಿಸರ್ವ್ ಬ್ಯಾಂಕ್‌ನ ಹೊಣೆಗಾರಿಕೆಯಾಗುತ್ತದೆ. ರದ್ದಾದ ಕರೆನ್ಸಿಯಲ್ಲಿ ಒಂದು ನಿರ್ದಿಷ್ಟ ಪ್ರಮಾಣದ ಕರೆನ್ಸಿಯು (100 ರೂ. ಎಂದುಕೊಳ್ಳೋಣ) ಬದಲಾವಣೆಗಾಗಿ ಒಂದು ವೇಳೆ ಬರದಿದ್ದರೆ, ಆರ್‌ಬಿಐನ ಬ್ಯಾಲೆನ್ಸ್ ಶೀಟ್‌ನಲ್ಲಿ 100 ರೂ.ಗಳ ಹೊಣೆಗಾರಿಕೆ ನಶಿಸುತ್ತದೆ/ಇಲ್ಲವಾಗುತ್ತದೆ. ಅಷ್ಟು ಮೊತ್ತದ ಹೊಸ ಹಣವನ್ನು ಮುದ್ರಿಸುವ ಮೂಲಕ ಹೊಸ ಹಣವನ್ನು ಜನರಿಗೆ ಸುಮ್ಮನೇ ವಿತರಿಸಬಹುದು ಎಂಬ ಲೆಕ್ಕಾಚಾರ ಮಂಡಿಸುವ ಮಟ್ಟಿಗೆ ಬಿಜೆಪಿ ವಕ್ತಾರರು ಹೋಗಿದ್ದರು. ಕೂಸು ಹುಟ್ಟುವ ಮುನ್ನವೇ ಕುಲಾವಿಯನ್ನೂ ಹೊಲಿಸಿಟ್ಟುಕೊಂಡಿದ್ದರು. ಆದರೆ, ರದ್ದಾದ 99% ಕರೆನ್ಸಿ ನೋಟುಗಳು ಹೊಸ ನೋಟುಗಳಾಗಿ ಬದಲಾಯಿಸಿಕೊಳ್ಳಲು ಬ್ಯಾಂಕಿಗೆ ಮರಳಿ ಬಂದಾಗ, ಈ ಲೆಕ್ಕಾಚಾರಗಳು ಎಷ್ಟು ಅಸಂಬದ್ಧವಾಗಿದ್ದವು ಎಂಬುದಷ್ಟೇ ಅಲ್ಲ, “ಕಪ್ಪು” ಹಣವನ್ನು ನಿಷ್ಕ್ರಿಯಗೊಳಿಸಿ ಅದನ್ನು ಅರ್ಥವ್ಯವಸ್ಥೆಯಿಂದಲೇ ಕಿತ್ತೆಸೆಯುವ ಲೆಕ್ಕಾಚಾರವೂ ಸಹ ಎಷ್ಟು ತಿಳಿಗೇಡಿತನದಿಂದ ಕೂಡಿತ್ತು ಎಂಬುದನ್ನು ಊಹಿಸಬಹುದಾಗಿದೆ. ಹಾಗಾಗಿ, ಈ ಇಡೀ ಪ್ರಕ್ರಿಯೆಯು ಹಳೆಯ ನೋಟುಗಳನ್ನು ಹೊಸ ನೋಟುಗಳಾಗಿ ಬದಲಾಯಿಸುವ ಒಂದು ಕೆಲಸವಾಗಿ ಪರಿಣಮಿಸಿತು. ಮತ್ತು, ಜನರಿಗೆ ಹೇಳತೀರದ ಅನಾನುಕೂಲತೆಗಳನ್ನು ತಂದೊಡ್ಡಿತು.
ಅನಾನುಕೂಲತೆಗಳ ಕತೆ ಅಷ್ಟಕ್ಕೇ ಮುಗಿಯಲಿಲ್ಲ. ಜನರು ತಮ್ಮದೇ ಹಣ ಪಡೆಯಲು ಬ್ಯಾಂಕುಗಳ ಹೊರಗೆ ಗಂಟೆಗಟ್ಟಲೆ ಸರದಿಯ ಸಾಲಿನಲ್ಲಿ ನಿಲ್ಲುವ ಯಾತನೆಯನ್ನು ಅನುಭವಿಸಿದರು. ನೋಟು ರದ್ದತಿಯು ಅನೇಕ ಜೀವಗಳನ್ನು ಬಲಿತೆಗೆದುಕೊಂಡಿತು. ಇಷ್ಟೂ ಸಾಲದೆಂಬಂತೆ, ಅದು ಅರ್ಥವ್ಯವಸ್ಥೆಯ ಮೇಲೆ ತೀವ್ರ ತರದ ದುಷ್ಪರಿಣಾಮಗಳನ್ನೂ ಬೀರಿತು. ರದ್ದು ಮಾಡಿದ 500 ಮತ್ತು 1000 ರೂ.ಗಳ ಮುಖಬೆಲೆಯ ಕರೆನ್ಸಿ ನೋಟುಗಳ ಮೌಲ್ಯವು ಚಲಾವಣೆಯಲ್ಲಿದ್ದ ಒಟ್ಟು ನಗದು ಹಣದ ಸುಮಾರು 85% ಇತ್ತು. ಅಷ್ಟೊಂದು ದೊಡ್ಡ ಪ್ರಮಾಣದ ನಗದು ಹಣದ ಚಲಾವಣೆಯನ್ನು ಇದ್ದಕ್ಕಿದ್ದಂತೆ ನಿಲ್ಲಿಸಿದಾಗ, ಅದು ಅರ್ಥವ್ಯವಸ್ಥೆಯನ್ನು ಅಲ್ಪಾವಧಿಯಲ್ಲಿ ಮತ್ತು ದೀರ್ಘಾವಧಿಯಲ್ಲಿ, ಎರಡೂ ಅವಧಿಯಲ್ಲೂ ದುರ್ಬಲಗೊಳಿಸುವ ಪರಿಣಾಮಗಳನ್ನು ಬೀರಿತು. ನೋಟು ರದ್ದತಿಯ ಮೂಲಕ ಕುಂಠಿತಗೊಂಡ ಚಲಾವಣೆಯನ್ನು ಎಂದಿನ ಸ್ಥಿತಿಗೆ ಮರಳಿಸಲು ಬ್ಯಾಂಕಿಂಗ್ ವ್ಯವಸ್ಥೆಗೆ ಸುಮಾರು ಒಂಭತ್ತು ತಿಂಗಳುಗಳ ಸಮಯ ಹಿಡಿಯಿತು. ಈ ಅವಧಿಯಲ್ಲಿ ಅರ್ಥವ್ಯವಸ್ಥೆಯು ಕರೆನ್ಸಿಯ ಕೊರತೆಯನ್ನು ಎದುರಿಸಿತು. ಪ್ರಧಾನವಾಗಿ ನಗದು ವಹಿವಾಟುಗಳನ್ನೇ ಅವಲಂಬಿಸಿದ ಕಿರು ಉತ್ಪಾದನಾ ವಲಯವು ಅದರ ತಕ್ಷಣದ ಬಲಿಪಶುವಾಗಿ ಹೀನಾಯ ಹೊಡೆತ ತಿಂದಿತು.
ನೋಟು ರದ್ದತಿಯ ಪರಿಣಾಮವಾಗಿ ರೈತರು ತಮ್ಮ ಹಿಂಗಾರು ಫಸಲನ್ನು ಮಾರುವಲ್ಲಿ ಅಪಾರ ಕಷ್ಟ-ನಷ್ಟಗಳನ್ನು ಅನುಭವಿಸಿದರು. ಮುಂದಿನ ಬೆಳೆ ತೆಗೆಯಲು ಬೇಕಾಗುವ ಬೀಜ ಮತ್ತು ರಸಗೊಬ್ಬರಗಳನ್ನು ಕೊಳ್ಳಲು ಅವರ ಬಳಿ ಹಣ/ನಗದು ಇಲ್ಲದ ಕಾರಣ, ಅವರು ಸಾಲ ಪಡೆದರು. ಅಂತೆಯೇ, ತಮ್ಮ ಉತ್ಪಾದನೆಯನ್ನು ಮಾರಲು ಸಾಧ್ಯವಾಗದ ಕೃಷಿಯೇತರ ವಲಯದ ಅನೇಕ ಕುಶಲಕರ್ಮಿಗಳು ಮತ್ತು ಕಿರು ಉತ್ಪಾದಕರು ತಮಗೆ ಬೇಕಾಗುವ ಲಾಗುವಾಡುಗಳನ್ನು ಕೊಳ್ಳಲು ಸಾಲ ಪಡೆಯಬೇಕಾಯ್ತು. ಮತ್ತು, ಅವರು ತಮ್ಮ ಕಸುಬಿಗೆ ಬೇಕಾಗುವ ಲಾಗುವಾಡುಗಳನ್ನು ಸಕಾಲದಲ್ಲಿ ಕೊಳ್ಳದೇ ತಮ್ಮ ಉತ್ಪಾದನೆಯನ್ನು ನಿಲ್ಲಿಸಿದರೆ, ಉದ್ಯೋಗವಿಲ್ಲದ ಅವರ ಕೆಲಸಗಾರರು ಮನೆಗೆ ಮರಳುತ್ತಿದ್ದರು ಮತ್ತು ನಿರುದ್ಯೋಗದ ಅವಧಿಯಲ್ಲಿ ತಮ್ಮ ಜೀವ ಉಳಿಸಿಕೊಳ್ಳಲು ಸಾಲ ತೆಗೆದುಕೊಳ್ಳಬೇಕಾಗಿತ್ತು. ಹಾಗಾಗಿ, ನೋಟು ರದ್ದತಿಯು ಕಿರು ಉತ್ಪಾದನಾ ವಲಯ ಅಥವಾ “ಅನೌಪಚಾರಿಕ ವಲಯ”ವನ್ನು ಸಾಲದ ಬಲೆಗೆ ಸಿಲುಕಿಸಿತು. ಈ ವಲಯವು, ದೇಶದ 94% ದುಡಿಮೆಗಾರರನ್ನು ಹೊಂದಿದೆ ಎಂಬುದನ್ನು ಮರೆಯುವಂತಿಲ್ಲ.
ಇಂಥಹ ಸಾಲಗಳು ಕಿರು ಉತ್ಪಾದನಾ ವಲಯದ ಮೇಲೆ ಶಾಶ್ವತ ಗಾಯ ಮಾಡಿದವು. ಉತ್ಪಾದನೆಯಲ್ಲಿ ಅಡಚಣೆ ಎದುರಾದ ಘಟಕಗಳಲ್ಲಿ, ಮಧ್ಯಂತರದ ಅವಧಿಯಲ್ಲಿ ಮಾಡಿದ ಸಾಲಗಳು ಶಾಶ್ವತ ಸಾಲಗಳಾಗಿ ಉಳಿದವು. ಉತ್ಪತ್ತಿಯನ್ನು ಸಂಗ್ರಹವಾಗಿ ಇಟ್ಟುಕೊಂಡ ಘಟಕಗಳಲ್ಲಿ ಉತ್ಪತ್ತಿಯು ಮಾರಾಟವಾಗದಿದ್ದರೂ ಸಹ, ಉತ್ಪಾದನೆಯು ಮುಂದುವರಿಯಿತಾದರೂ, ಲಾಗುವಾಡುಗಳನ್ನು ಕೊಳ್ಳಲು ಮಾಡಿದ ಸಾಲದ ಅಸಲು ತೀರಿಸಬಹುದಿತ್ತಾದರೂ ಅತಿ ಹೆಚ್ಚು ಬಡ್ಡಿ ದರದ ಸಾಲಮಾಡಿದ ಕಾರಣದಿಂದಾಗಿ ಬಡ್ಡಿ ಪಾವತಿಯೇ ಒಂದು ನೇಣು ಹಗ್ಗವಾಗಿ ಪರಿಣಮಿಸಿತು.
ಹಾಗಾಗಿ, ಕಿರು ಉತ್ಪಾದನಾ ವಲಯದ ಸಾಲವು ವಿಷ ಏರುವ ರೀತಿಯಲ್ಲಿ ಏರಿತು. ಎಲ್ಲವೂ ಚೆನ್ನಾಗಿದ್ದ ಕಾಲದಲ್ಲೇ ತಮ್ಮ ಕನಿಷ್ಠ ಅಗತ್ಯಗಳನ್ನಷ್ಟೇ ಪೂರೈಸಿಕೊಳ್ಳಲು ತಿಣುಕುತ್ತಿದ್ದ ಈ ವಲಯದಲ್ಲಿ ಸಾಲದ ಹೆಚ್ಚಳವು ಅನೇಕ ಘಟಕಗಳನ್ನು ಕಾರ್ಯಸಾಧುವಲ್ಲದ ಸ್ಥಿತಿಗೆ ತಳ್ಳಿತು. ಪರಿಣಾಮವಾಗಿ, ಉತ್ಪಾದನೆಯ ಅಲ್ಪಾವಧಿಯ ಅಡಚಣೆ ಮಾತ್ರವಲ್ಲ, ನೋಟು ರದ್ದತಿ-ಪ್ರೇರಿತ ನಗದು ಕೊರತೆಯನ್ನು ನಿಭಾಯಿಸುವ ಅಸಮರ್ಥತೆಯಿಂದಾಗಿ ಕಿರು ಉತ್ಪಾದನಾ ವಲಯವು ತನ್ನ ಕೆಲಸಗಾರರನ್ನು ದೀರ್ಘಕಾಲ ಉಳಿಸಿಕೊಳ್ಳಲಾಗದಷ್ಟು ದುರ್ಬಲವಾಗಿಯೂ ಇತ್ತು. ಈ ದೌರ್ಬಲ್ಯವು ಇಂದಿಗೂ ಮುಂದುವರೆದಿದೆ.
ನೋಟು ರದ್ದತಿಯು ಉಂಟು ಮಾಡಿದ ಈ ಹಾನಿಯು ಕಿರು ಉತ್ಪಾದನಾ ವಲಯಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಸಂಘಟಿತ ವಲಯವೂ ಸಹ ಬೇರೆ ಕೆಲವು ಕಾರಣಗಳಿಂದಾಗಿ ನೋಟು ರದ್ದತಿಯಿಂದ ಬಾಧಿತವಾಯಿತು. ಕಿರು ಉತ್ಪಾದನಾ ವಲಯವು ನೇರವಾಗಿ ಅಥವಾ ಈ ವಲಯದಲ್ಲಿ ತೊಡಗಿರುವವರ ಬಳಕೆ ಬೇಡಿಕೆಗಳ ಮೂಲಕ, ಸಂಘಟಿತ ವಲಯದಿಂದ ಹಲವಾರು ಸರಕುಗಳನ್ನು ಖರೀದಿಸುತ್ತದೆ. ಕಿರು ಉತ್ಪಾದನಾ ವಲಯವು ಆರ್ಥಿಕ ಹಿಂಜರಿತಕ್ಕೆ ಒಳಗಾದಾಗ ಅಥವಾ ಆದಾಯದ ನಷ್ಟಕ್ಕೆ ಒಳಗಾದಾಗ, ಸಂಘಟಿತ ವಲಯದ ಸರಕುಗಳಿಗೆ ಬೇಡಿಕೆ ಕುಸಿಯುತ್ತದೆ. ಇದು ಸಂಘಟಿತ ವಲಯವನ್ನು ಬಾಧಿಸುತ್ತದೆ. ಹೀಗೆ, ಇಡೀ ಅರ್ಥವ್ಯವಸ್ಥೆಯು ಒಂದಲ್ಲ ಒಂದು ರೀತಿಯಲ್ಲಿ ನೋಟು ರದ್ದತಿಯ ಪ್ರತಿಕೂಲ ಪರಿಣಾಮಕ್ಕೆ ಒಳಗಾಯಿತು.
ಏತನ್ಮಧ್ಯೆ, ಸುಳ್ಳು ಹೇಳುವುದರಲ್ಲಿ ಅಪ್ರತಿಮ ಪ್ರಾವೀಣ್ಯತೆ-ಸಾಧನೆಯನ್ನು ಹೊಂದಿರುವ ಬಿಜೆಪಿಯು, ಮತ್ತೊಂದು ಕಥೆಯನ್ನು ಹೆಣೆಯಲು ಆರಂಭಿಸಿತು. ನಗದು ಬಳಕೆಯ ಪರಿಣಾಮವಾಗಿ ಅರ್ಥವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಮತ್ತು ಕಪ್ಪು ಹಣ ಸೃಷ್ಟಿಯಾಗುತ್ತವೆ ಎಂಬುದಾಗಿ ಬಿಜೆಪಿಯು ವಾದಿಸಿತು. ವ್ಯವಹಾರಗಳನ್ನು ಇತ್ಯರ್ಥಪಡಿಸುವಲ್ಲಿ ನಗದು ಹಣಕ್ಕೆ ಬದಲಿಯಾಗಿ ಹಣವನ್ನು ನಗದು ರಹಿತ ವಿಧಾನಗಳ ಮೂಲಕ ನೀಡಿದರೆ, ಅಂತಹ ಎಲ್ಲಾ ವಹಿವಾಟುಗಳ ದಾಖಲೆಗಳು ಉಳಿಯುವುದರಿಂದ, ಭ್ರಷ್ಟಾಚಾರದ ಮತ್ತು ಕಪ್ಪು ಹಣದ ವ್ಯಾಪ್ತಿಯನ್ನು ತಗ್ಗಿಸಬಹುದು ಎಂದು ಬಿಜೆಪಿಯು ವಾದಿಸಿತು. ಎಲ್ಲ ಭ್ರಷ್ಟಾಚಾರದ ಮತ್ತು ಕಪ್ಪು ಹಣದ ವಹಿವಾಟುಗಳ ವ್ಯಾಪ್ತಿಯನ್ನು ತೊಡೆದುಹಾಕುವ ರೀತಿಯಲ್ಲಿ ಅರ್ಥವ್ಯವಸ್ಥೆಯನ್ನು ಆಧುನೀಕರಿಸಿದರು ಎಂಬ ಕೀರ್ತಿಯನ್ನು ಸಲ್ಲಿಸಿ ಮೋದಿ ಅವರನ್ನು “ದೂರದರ್ಶಿ” ಎಂದು ಬಿಂಬಿಸಿತು. ಬಿಜೆಪಿಯ ಈ ದಾವೆಯು, ಭ್ರಷ್ಟಾಚಾರ ಮತ್ತು ನಗದು ಬಳಕೆಯ ನಡುವೆ ಯಾವುದೇ ಸಂಬಂಧವಿಲ್ಲ ಎಂಬ ಸ್ಪಷ್ಟ ಸಂಗತಿಗಳ ಎದುರಿನಲ್ಲಿ ಬಿದ್ದುಹೋಗುತ್ತದೆ. ಉದಾಹರಣೆಯಾಗಿ ಹೇಳುವುದಾದರೆ, ನಗದು-ಜಿಡಿಪಿ ಅನುಪಾತದಲ್ಲಿ ಜರ್ಮನಿ ಮತ್ತು ಜಪಾನ್ ದೇಶಗಳು ಭಾರತಕ್ಕಿಂತ ಹೆಚ್ಚಿನ ನಗದು-ಜಿಡಿಪಿ ಅನುಪಾತವನ್ನು ಹೊಂದಿದ್ದರೂ ಸಹ, ಭ್ರಷ್ಟಾಚಾರದಿಂದ ಅವು ಕಡಿಮೆ ಬಾಧಿತವಾಗಿದ್ದವು. ಮತ್ತು, ಕುತೂಹಲದ ಸಂಗತಿಯೆಂದರೆ, ನೋಟು ರದ್ದತಿಯ ನಂತರ, ನಗದು-ಜಿಡಿಪಿ ಅನುಪಾತವು ತಾತ್ಕಾಲಿಕವಾಗಿ 12%ನಿಂದ ಕೆಳಗಿಳಿದು ಮತ್ತೆ ಮೇಲೇರಿ ಪ್ರಸ್ತುತ 14% ಮಟ್ಟದಲ್ಲಿದೆ. ಹೀಗಾಗಿ, ಈ ವಿಷಯದಲ್ಲಿ ಬಿಜೆಪಿಯ ಸ್ವಂತ ವಾದದ ಪ್ರಕಾರವಾಗಿ ನೋಡಿದರೂ ಸಹ, ನೋಟು ರದ್ದತಿಯು ಸಂಪೂರ್ಣವಾಗಿ ವಿಫಲವಾಗಿದೆ.
ನೋಟು ರದ್ದತಿಯನ್ನು ಆದೇಶಿಸಿದ ಮೋದಿ ಸರ್ಕಾರವು ಜನರ ಕಷ್ಟಗಳ ಬಗ್ಗೆ ತೋರಿದಷ್ಟು ಅಸಡ್ಡೆಯನ್ನು ಯಾರಾದರೂ ಹೇಗೆ ತೋರಲು ಸಾಧ್ಯವೆ? ಇದಕ್ಕೆ ಉತ್ತರ “ಆಘಾತ ಮತ್ತು ಭಯ ಭಕ್ತಿ” ಉಂಟುಮಾಡುವ ಬಯಕೆ ಮತ್ತು ಸರಕಾರ ಇಷ್ಟೊಂದು ಯಾತನೆ ಉಂಟು ಮಾಡುತ್ತಿದ್ದರೆ, ಅದು ಯಾವುದೋ ಉನ್ನತ ಗುರಿಸಾಧನೆಗಾಗಿ ಎಂದು ಜನ ಎಷ್ಟು ಹೆಚ್ಚು ಬಳಲುತ್ತಾರೋ, ಅಷ್ಟು ಹೆಚ್ಚಿನ ಮಟ್ಟದಲ್ಲಿ ಭಾವಿಸುತ್ತಾರೆ ಎಂಬ ಅವರ ನಂಬಿಕೆಯಲ್ಲಿ ಇದೆ. ಸರ್ಕಾರದ ಅಜ್ಞಾನ, ದುರಹಂಕಾರ ಮತ್ತು “ಆಘಾತ ಮತ್ತು ಭಯ ಭಕ್ತಿ” ಉಂಟುಮಾಡುವ ಬಯಕೆ-ಇವೆಲ್ಲಾ ಒಟ್ಟಾದರೆ ಸಾಕಷ್ಟು ಮಾರಕವಾಗಬಲ್ಲದು ಎಂಬುದನ್ನು ಭಾರತದ ಜನರು ಬಲು ದೊಡ್ಡ ಬೆಲೆ ತೆತ್ತು ಕಲಿತಿದ್ದಾರೆ.
ನೋಟುರದ್ಧತಿಯ ‘ಮಿಂಚಿನ ಪ್ರಹಾರ’ ಸಾಧಿಸಿದ್ದೇನು?
ಕಪ್ಪು ಹಣದ ನಿರ್ಮೂಲನೆ, ನಕಲಿ ನೋಟುಗಳ ಹುಟ್ಟಡಗಿಸುವುದು ಮತ್ತು ಭಯೋತ್ಪಾದಕರಿಗೆ ಒದಗುವ ಹಣದ ಮೂಲದ ನಾಶ ಎಂಬ ಮೂರು ಉದ್ದೇಶಗಳನ್ನು ಸರ್ಕಾರ ಹೊಂದಿತ್ತು. ನಂತರ ಅದು ಆದಾಯ ತೆರಿಗೆ ತೆರುವವರ ಪ್ರಮಾಣವನ್ನು ಹೆಚ್ಚಿಸುತ್ತದೆ, ಇದರಿಂದ 2 -3 ಲಕ್ಷ ಕೋಟಿ ರೂ.ಗಳು ಸರಕಾರದ ಖಜಾನೆಗೆ ಬರುತ್ತವೆ, ನಗದು ಚಲಾವಣೆಯನ್ನು ಕಡಿಮೆ ಮಾಡಿ ಡಿಜಿಟಲ್ ಅರ್ಥವ್ಯವಸ್ಥೆಯತ್ತ ಸಾಗುತ್ತದೆ, ನಮ್ಮ ಅರ್ಥವ್ಯವಸ್ಥೆಯನ್ನು ಆಧುನೀಕರಿಸುತ್ತದೆ ಎಂದೆಲ್ಲ ಹೇಳಲಾಯಿತು.ವಿಶ್ಲೇಷಕರ ಪ್ರಕಾರ 5 ವರ್ಷಗಳ ನಂತರ ಕಾಣುತ್ತಿರುವ ವಾಸ್ತವ ಹೀಗಿದೆ:
- ನೋಟುರದ್ಧತಿಯ ಮೊದಲು ವರ್ಷಕ್ಕೆ 11.9% ದರದಲ್ಲಿ ನಮ್ಮ ಅರ್ಥವ್ಯವಸ್ಥೆಯಲ್ಲಿ ನಗದಿನ ಪ್ರಮಾಣ ಹೆಚ್ಚುತ್ತಿತ್ತು. ಈಗಲೂ ಅದೇ ದರದಲ್ಲಿ ಹೆಚ್ಚುತ್ತಿದೆ.
- ನೋಟುರದ್ಧತಿಯ ವೇಳೆಯಲ್ಲಿ ಚಲಾವಣೆಯಲ್ಲಿದ್ದ ನಗದು ಹಣದ ಮೊತ್ತ 18.5ಲಕ್ಷ ಕೋಟಿ ರೂ. ಈಗ ಅದು 28.5ಲಕ್ಷ ಕೋಟಿ ರೂ.
- ಜಿಡಿಪಿ ಹೋಲಿಕೆಯಲ್ಲಿ ನಗದಿನ ಪ್ರಮಾಣ ನೋಟುರದ್ಧತಿಯ ಮೊದಲು 2015-16ರಲ್ಲಿ 11.6% ಇತ್ತು ಈಗ ಅದು 13.9% . ಅಂದರೆ ನೋಟುರದ್ದತಿಯ ದಿನಗಳ ದೀರ್ಘ ಕ್ಯೂಗಳ ಒಟ್ಟು ಪರಿಣಾಮ ಸೊನ್ನೆಗಿಂತಲೂ ಕಡಿಮೆ.
- ತೆರಿಗೆದಾರರ ಪ್ರಮಾಣ ಹೆಚ್ಚುವ ಬದಲು ಕಡಿಮೆಯಾಗಿದೆ, 11.9%ದಿಂದ 10.5%ಕ್ಕೆ ಇಳಿದಿದೆ.
- ಜಿಡಿಪಿ ಬೆಳವಣಿಗೆ ದರ 2010ರಲ್ಲಿ 8.5% ಇದ್ದು, 2016ರಲ್ಲಿ 8.25%ಕ್ಕೆ, 2019ರಲ್ಲಿ(ಕೋವಿಡ್ ತಟ್ಟುವ ಮೊದಲೇ) 4%ಕ್ಕೆ ಇಳಿಯಿತು. ಕೋವಿಡ್ ನಂತರವಂತೂ (-)8%ಕ್ಕೆ ಕುಸಿಯಿತು!
ನೋಟುರದ್ಧತಿಯ ಮುಖ್ಯ ಪರಿಣಾಮವೆಂದರೆ ಅರ್ಥವ್ಯವಸ್ಥೆಯಲ್ಲಿ ಅನೌಪಚಾರಿಕ ವಲಯ ಸುಮಾರಾಗಿ ಧ್ವಂಸ ಗೊಂಡಿತು; ಸಣ್ಣ ಮತ್ತು ವಲಯ ಕೂಡ ಭಾರೀ ಹೊಡೆತ ತಿಂದಿತು; ದೇಶದಲ್ಲಿ ಉದ್ಯೋಗಾವಕಾಶ ನಿರ್ಮಾಣ ಮಾಡುವ ಬಹುದೊಡ್ಡ ವಲಯಗಳಿವು ಎಂಬುದು ಗಮನಾರ್ಹ ಎನ್ನುತ್ತಾರೆ ಅರ್ಥಿಕ ತಜ್ಞರು.
ವ್ಯಂಗ್ಯವೆಂದರೆ ಅರ್ಥವ್ಯವಸ್ಥೆಯ ಔಪಚಾರೀಕರಣ ಮತ್ತು ಡಿಜಿಟಲೀಕರಣ ನೋಟುರದ್ಧತಿಯ ಬಹುದೊಡ್ಡ ಸಾಧನೆ ಎಂದು ಆಳುವ ಪಕ್ಷದ ಕಟ್ಟಾ ಬೆಂಬಲಿಗರು ಹೇಳುತ್ತಿದ್ದಾರೆ. ಆದರೆ ಅವರಿಗೂ ಇದಕ್ಕಾಗಿ ಸರ್ವೋಚ್ಚ ನಾಯಕರಿಗೆ ‘ಥ್ಯಾಂಕ್ಯು’ ಹೇಳುವ ಧೈರ್ಯವಿದ್ದಂತಿಲ್ಲ!
ಅನು: ಕೆ.ಎಂ. ನಾಗರಾಜ್