ಹೊಣೆಗೇಡಿ ಸರಕಾರದ ವರ್ಗ-ಪಕ್ಷಪಾತದ ಲಜ್ಜೆಗೆಟ್ಟ ಪ್ರದರ್ಶನ
ಪ್ರೊ. ಪ್ರಭಾತ್ ಪಟ್ನಾಯಕ್
ಬಡವಾ ನೀ ಮಡಗಿದಂಗಿರು ಎನ್ನುವ ಪಾಳೆಯಗಾರೀ ಜಾತಿ-ಪದ್ಧತಿಯ ಸಮಾಜದ ನೀತಿಗೆ ಬದಲಾಗಿ ಪಿಂಚಣಿಯು ಎಲ್ಲಾ ನಾಗರಿಕರಿಗೂ ಒಂದು ಹಕ್ಕಿನ ವಿಷಯವಾಗಬೇಕಾದ ಪ್ರಜಾಪ್ರಭುತ್ವ ಸಮಾಜದಲ್ಲಿ 200 ರೂ.ಗಳ ನಿಕೃಷ್ಟ ಪಿಂಚಣಿಯ ಹೆಚ್ಚಳವನ್ನು ತಳ್ಳಿಹಾಕುವುದು ವರ್ಗ-ಪಕ್ಷಪಾತದ ಲಜ್ಜೆಗೆಟ್ಟ ಪ್ರದರ್ಶನವೇ ಸರಿ. ಇದು ಸರ್ಕಾರದ ನಿರ್ದಯತೆಯ ಮತ್ತು ಜವಾಬ್ದಾರಿಯಿಂದ ನುಣಿಚಿಕೊಳ್ಳುವ ಅಕ್ಷಮ್ಯ ಕೃತ್ಯವಾಗುತ್ತದೆ-ವಿಶೇಷವಾಗಿ ಇದೇ ಸರಕಾರ “ನಗದೀಕರಣ” ಎಂಬ ಹೆಸರಿನಲ್ಲಿ, ಜನರ ತೆರಿಗೆಗಳಿಂದ ನಿರ್ಮಿಸಿದ ರಾಷ್ಟ್ರದ ಸ್ವತ್ತುಗಳನ್ನು ತನ್ನ ಪ್ರೀತಿ-ಪಾತ್ರ ಶ್ರೀಮಂತರಿಗೆ ಹಸ್ತಾಂತರಿಸುವ, ಅವನ್ನು ವಹಿಸಿಕೊಳ್ಳಲಿಕ್ಕಾಗಿ ಅವರಿಗೆ ತೆರಿಗೆ-ವಿರಾಮಗಳನ್ನು ನೀಡಲು ಕೂಡ ಮುಂದಾಗುತ್ತಿರುವಾಗ!
ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮದಡಿ ವೃದ್ಧರಿಗೆ ನೀಡುವ ಮಾಸಿಕ ಪಿಂಚಣಿಯ ಹೆಚ್ಚಳವನ್ನು ಮೋದಿ ಸರ್ಕಾರದ ಗ್ರಾಮೀಣಾಭಿವೃದ್ಧಿ ಕಿರಿಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರು ಸಂಸತ್ತಿನಲ್ಲಿ ತಳ್ಳಿಹಾಕಿದ್ದಾರೆ (ದಿ ಟೆಲಿಗ್ರಾಫ್, ಆಗಸ್ಟ್ 22). ಈ ಕಾರ್ಯಕ್ರಮದ ಅಡಿಯಲ್ಲಿ 60 ರಿಂದ 79 ವರ್ಷ ವಯಸ್ಸಿನ ಪ್ರತಿಯೊಬ್ಬ ಫಲಾನುಭವಿಗೂ ಪ್ರಸ್ತುತ ನೀಡಲಾಗುತ್ತಿರುವ ಮೊತ್ತವು ತಿಂಗಳಿಗೆ 200 ರೂ. ಇದೆ ಮತ್ತು 80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ತಿಂಗಳಿಗೆ 500 ರೂ. ಇದೆ.
ವಯಸ್ಸಾದ ನಾಗರಿಕರಿಗೆ ಕೇಂದ್ರ ಸರ್ಕಾರವು ಇಷ್ಟು ಅಲ್ಪ ಮೊತ್ತವನ್ನು ನೀಡುತ್ತಿರುವುದು ನಾಚಿಕೆಗೇಡಿನ ಮತ್ತು ಅವಮಾನಕರ ವಿಷಯವೇ. ಮೇಲಾಗಿ, ಹಲವು ವರ್ಷಗಳಿಂದಲೂ ಈ ಮೊತ್ತವನ್ನು ಹೆಚ್ಚಿಸಿಯೂ ಇಲ್ಲ ಮತ್ತು ಅದನ್ನು ಹಣದುಬ್ಬರ-ಸೂಚ್ಯಂಕದೊಂದಿಗೆ ಹೊಂದಿಸಿಯೂ ಇಲ್ಲ. ಕೇಂದ್ರವು ನೀಡುವ ಈ ಅಲ್ಪ ಮೊತ್ತದ ಜೊತೆಗೆ ರಾಜ್ಯ ಸರ್ಕಾರಗಳೂ ಸಹ ಸ್ವಲ್ಪ ಹಣ ಸೇರಿಸುವುದರಿಂದಾಗಿ, ಕೆಲವು ರಾಜ್ಯಗಳಲ್ಲಿ, ಒಟ್ಟು ಮೊತ್ತವು ಹೆಚ್ಚೆಂದರೆ ತಿಂಗಳಿಗೆ 500 ರೂ.ಗಳ ಮಟ್ಟವನ್ನು ತಲುಪುತ್ತದೆ. ಇದು, ಯಾವುದೇ ಸಾಂಸ್ಥಿಕ ಪಿಂಚಣಿ ಯೋಜನೆಗೂ ಒಳಪಡದ ಭಾರತದ ಒಬ್ಬ ವೃದ್ಧನು ಪಿಂಚಣಿಯ ರೂಪದಲ್ಲಿ ಪಡೆಯುವ ಗರಿಷ್ಠ ಪ್ರಮಾಣದ ಪಿಂಚಣಿಯ ಮೊತ್ತ. ಅದಕ್ಕಿಂತಲೂ ಮುಖ್ಯವಾಗಿ, ಈ ಮೊತ್ತದ ಪಿಂಚಣಿಯನ್ನು ಪಡೆಯಬೇಕಾದ ಅನೇಕ ವ್ಯಕ್ತಿಗಳಿಗೆ ಅದು ಸಿಗುವುದೇ ಇಲ್ಲ! 2016-17ರಲ್ಲಿ, ರಾಷ್ಟ್ರೀಯ ಸಾಮಾಜಿಕ ಸಹಾಯ ಯೋಜನೆ(ಎನ್‌ಎಸ್‌ಎಪಿ) ಅಡಿಯಲ್ಲಿ ಕೇಂದ್ರ ಸರ್ಕಾರವು ಸುಮಾರು 5,900 ಕೋಟಿ ರೂ.ಗಳನ್ನು ಪಿಂಚಣಿಯಾಗಿ ನೀಡಿದೆ. ಅಂದರೆ, ತಿಂಗಳಿಗೆ 200 ರೂ.ಗಳ ಲೆಕ್ಕದಲ್ಲಿ, ಕೇವಲ 2.46 ಕೋಟಿ ಫಲಾನುಭವಿಗಳಿಗಷ್ಟೇ ಈ ಪಿಂಚಣಿ ಸಿಗುತ್ತದೆ.
ಅಂದರೆ, ಪಿಂಚಣಿಯನ್ನು ಎಷ್ಟು ಮಂದಿ ಪಡೆಯಬೇಕಾಗಿತ್ತೊ ಅದರ ಕೊಂಚ ಭಾಗ ಮಾತ್ರ ಪಡೆಯುತ್ತಿದ್ದಾರೆ ಎಂದಾಗುತ್ತದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು 12 ಕೋಟಿ ಜನರು 60 ಕ್ಕಿಂತ ಹೆಚ್ಚು ವಯಸ್ಸಿನವರು ಎಂದು ಅಂದಾಜಿಸಲಾಗಿದ್ದು, ವೃದ್ಧರ ಸಂಖ್ಯೆಯು ಜನಸಂಖ್ಯೆಯ ಶೇ.10 ರಷ್ಟಾಗುತ್ತದೆ. ಹಾಗಾಗಿ, ಯಾವುದೇ ಸಾಂಸ್ಥಿಕ ಪಿಂಚಣಿ ಯೋಜನೆಗೆ ಒಳಪಡದವರ ಅನುಪಾತವು ಅನೌಪಚಾರಿಕ ವಲಯದಲ್ಲಿ ತೊಡಗಿರುವವರ ಪ್ರಮಾಣಕ್ಕೆ (ಅಂದರೆ, ಸುಮಾರು ಶೇಕಡಾ 85) ಸರಿಸುಮಾರು ಸಮಾನವಾಗಿದೆ. ಅಂದರೆ, ಸರ್ಕಾರದಿಂದ ಪಿಂಚಣಿ ಪಡೆಯಬೇಕಾದವರ ಸಂಖ್ಯೆಯು ಸುಮಾರು 10 ಕೋಟಿಗೆ ಬರುತ್ತದೆ. ದೇಶದ ಒಟ್ಟು ಕೆಲಸಗಾರರ ಸಂಖ್ಯೆಯಲ್ಲಿ ಅರ್ಧದಷ್ಟು ಭಾಗವನ್ನು ಹೊಂದಿರುವ ಕೃಷಿ ಒಂದರಲ್ಲೇ 5 ರಿಂದ 6 ಕೋಟಿ ಮಂದಿ ಪಿಂಚಣಿದಾರರು ಇರಬಹುದು. ಚಿಲ್ಲರೆ ವ್ಯಾಪಾರ, ಅಸಂಘಟಿತ ಉತ್ಪಾದನೆ ಮತ್ತು ಸಣ್ಣ ಪುಟ್ಟ ಸೇವೆಗಳಂತಹ ವಲಯಗಳಲ್ಲಿ ತೊಡಗಿರುವವರನ್ನು ಲೆಕ್ಕಕ್ಕೆ ತೆಗೆದುಕೊಂಡಾಗ, ವಾಸ್ತವವಾಗಿ, ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವವರ ಸಂಖ್ಯೆಯು ಎಷ್ಟು ಮಂದಿ ಪಿಂಚಣಿ ಪಡೆಯಬೇಕಿತ್ತೊ ಅದರ ಕಾಲು ಭಾಗದಷ್ಟು ಮಾತ್ರ ಎಂಬುದು ಸ್ಪಷ್ಟವಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸರ್ಕಾರದ ಪಿಂಚಣಿ ಯೋಜನೆಯು ಹಾಸ್ಯಾಸ್ಪದವಾಗಿದೆ: ತಿಂಗಳಿಗೆ 200 ರೂ.ಗಳ ಕ್ಷುಲ್ಲಕ ಮೊತ್ತವನ್ನು ಪಾವತಿಸುತ್ತದೆ ಮತ್ತು ಅದೂ ಸಹ ಅದನ್ನು ಪಡೆಯಬೇಕಾದವರ ಸಂಖ್ಯೆಯ ಕಾಲು ಭಾಗದಷ್ಟು ಜನರಿಗೆ ಮಾತ್ರ.
ಪಿಂಚಣಿದಾರರ ಈ ಹೀನಾಯ ಪರಿಸ್ಥಿತಿಯನ್ನು ಖಂಡಿಸುವ ನಾಗರಿಕ ಸಮಾಜ ಸಂಘಟನೆಗಳು, ಪಿಂಚಣಿಯ ಮೊತ್ತವು ಕನಿಷ್ಠ ವೇತನದ ಅರ್ಧದಷ್ಟಾದರೂ ಇರಬೇಕು ಎಂದು ಒತ್ತಾಯಿಸುತ್ತಲೇ ಬಂದಿವೆ. ಶಾಸನಬದ್ಧ ಕನಿಷ್ಠ ದಿನಗೂಲಿಯು ರಾಜ್ಯಗಳಾದ್ಯಂತ ಬೇರೆ ಬೇರೆ ಇದೆ, ನಿಜ. ಆದರೂ, ಸರಾಸರಿ ದಿನಗೂಲಿಯನ್ನು 300 ರೂ.ಗಳೆಂದು ತೆಗೆದುಕೊಂಡರೂ ಸಹ, ಪಿಂಚಣಿಯ ಮೊತ್ತವು ತಿಂಗಳಿಗೆ 4,500 ರೂ. ಆಗಬೇಕು. ಆದಾಗ್ಯೂ, ತಿಂಗಳಿಗೆ 3000 ರೂ.ಗಳನ್ನಾದರೂ ನಿಗದಿಪಡಿಸಬೇಕೆಂಬುದು ಈ ಸಂಸ್ಥೆಗಳ ಬೇಡಿಕೆ.
ಪಿಂಚಣಿಯು ಎಲ್ಲರಿಗೂ ದೊರಕಬೇಕು ಎಂಬ ವಾದವು, ನಿವೃತ್ತಿಯ ನಂತರ ವೃದ್ಧರು ತಮ್ಮ ಸಂತತಿಯ ಆರೈಕೆಯಿಂದ ಬದುಕಬೇಕೆಂದು ಯಾವುದೇ ಪ್ರಜಾಪ್ರಭುತ್ವವಾದೀ ಸಮಾಜವು ನಿರೀಕ್ಷಿಸಬಾರದು ಎಂಬ ತತ್ವದಿಂದ ಉದ್ಭವಿಸುತ್ತದೆ. ಪಿಂಚಣಿಯು ಎಲ್ಲಾ ನಾಗರಿಕರಿಗೂ ಒಂದು ಹಕ್ಕಿನ ವಿಷಯವಾಗಬೇಕು. ಪಿಂಚಣಿ ಒದಗಿಸುವ ಉದ್ದೇಶಕ್ಕಾಗಿ ಅಗತ್ಯವಿರುವ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳುವುದು ಹೇಗೆಂಬ ಪ್ರಶ್ನೆಯು ತಾತ್ವಿಕವಾಗಿ ಅಸಂಬದ್ಧ. ಸಂಪನ್ಮೂಲಗಳನ್ನು ಹೇಗಾದರೂ ಸರಿ, ಒದಗಿಸಿಕೊಳ್ಳಬೇಕು. 10 ಕೋಟಿ ಜನರಿಗೆ ತಿಂಗಳಿಗೆ ತಲಾ 3000 ರೂ.ಗಳ ಪಿಂಚಣಿ ನೀಡಬೇಕು ಎಂದಾದರೆ, ವರ್ಷಕ್ಕೆ 3.6 ಲಕ್ಷ ಕೋಟಿ ರೂ.ಗಳನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಇದು ಭಾರತದ ಜಿಡಿಪಿಯ ಶೇ. 1.8 ರಷ್ಟಾಗುತ್ತದೆ. ಇದನ್ನು ಹೊಂದಿಸಿಕೊಳ್ಳುವುದು ಸರಕಾರಕ್ಕೆ ಸಮಸ್ಯೆಯೇ ಆಗಬಾರದು… ಮೇಲ್ತುದಿಯ ಶೇ. ಒಂದರಷ್ಟು ಮಂದಿಯು ಹೊಂದಿರುವ ಸಂಪತ್ತಿನ ಮೇಲೆ ಕೇವಲ ಶೇಕಡ 0.63 ರಷ್ಟು ಸಂಪತ್ತು ತೆರಿಗೆಯನ್ನು ವಿಧಿಸಿದರೆ, ಅಗತ್ಯವಾದಷ್ಟು ಸಂಪನ್ಮೂಲಗಳನ್ನು ಸಂಗ್ರಹಿಸಬಹುದು.
ಪಿಂಚಣಿಯು ಎಲ್ಲರಿಗೂ ದೊರಕಬೇಕು ಎಂಬ ವಾದವು, ನಿವೃತ್ತಿಯ ನಂತರ ವೃದ್ಧರು ತಮ್ಮ ಸಂತತಿಯ ಆರೈಕೆಯಿಂದ ಬದುಕಬೇಕೆಂದು ಯಾವುದೇ ಪ್ರಜಾಪ್ರಭುತ್ವವಾದೀ ಸಮಾಜವು ನಿರೀಕ್ಷಿಸಬಾರದು ಎಂಬ ತತ್ವದಿಂದ ಉದ್ಭವಿಸುತ್ತದೆ. ಪಿಂಚಣಿಯು ಎಲ್ಲಾ ನಾಗರಿಕರಿಗೂ ಒಂದು ಹಕ್ಕಿನ ವಿಷಯವಾಗಬೇಕು. ಯಾವುದೇ ಸಾಂಸ್ಥಿಕ ಯೋಜನೆಗಳ ಪಿಂಚಣಿ ದೊರೆಯದ ಹೆಚ್ಚಿನ ಸಂಖ್ಯೆಯ ವ್ಯಕ್ತಿಗಳಿಗೆ ಅಥವಾ ಕಡಿಮೆ ಆದಾಯವನ್ನು ಗಳಿಸುವ ವ್ಯಕ್ತಿಗಳು ತಮ್ಮ ದುಡಿಯುವ ವರ್ಷಗಳಲ್ಲಿ ತಾವು ಗಳಿಸಿದ ಅತಿ ಕಡಿಮೆ ಆದಾಯದಲ್ಲೇ ತಮ್ಮ ವೃದ್ಧಾಪ್ಯಕ್ಕಾಗಿ ಉಳಿತಾಯ ಮಾಡಬೇಕೆಂದು ನಿರೀಕ್ಷಿಸಲಾಗದು. ಆದ್ದರಿಂದ, ಸರ್ಕಾರವೇ ಅವರಿಗೆ ಅಗತ್ಯ ಪಿಂಚಣಿಯನ್ನು ಒದಗಿಸಬೇಕು.
ಒಬ್ಬ ವ್ಯಕ್ತಿಗೆ ಸಿಗುವ ಸಾಪೇಕ್ಷ ಆದಾಯವು ಸಾಮಾಜಿಕವಾಗಿ ನಿರ್ಧರಿಸಲ್ಪಡುವ ಮತ್ತು ದೇಶದ ಆದಾಯ ಹಂಚಿಕೆಯ ಮಾದರಿಯಲ್ಲಿ ಹುದುಗಿರುವ ಕಾರಣದಿಂದಾಗಿ, ಪಿಂಚಣಿ ಒದಗಿಸುವ ವಿಷಯದಲ್ಲಿ ಸರ್ಕಾರದ ಜವಾಬ್ದಾರಿ ಉದ್ಭವಿಸುತ್ತದೆ. ಆದ್ದರಿಂದ, ಎಲ್ಲರಿಗೂ ಯೋಗ್ಯ ಜೀವನಕ್ಕಾಗಿ ಸಾಕಾಗುವಷ್ಟು ಪಿಂಚಣಿ ಒದಗಿಸುವುದನ್ನು ಖಚಿತಪಡಿಸಿಕೊಳ್ಳುವುದು ಸಮಾಜದ ಜವಾಬ್ದಾರಿಯಾಗುತ್ತದೆ. ಈ ಜವಾಬ್ದಾರಿಯು ಸಮಾಜದ ಇಚ್ಛಾಶಕ್ತಿಯ ಪ್ರತಿಪಾದಕನಾದ ಸರ್ಕಾರದ ಮೇಲೆ ವರ್ಗಾಯಿಸಲ್ಪಡುತ್ತದೆ.
ಸರ್ಕಾರವು ಪ್ರಸ್ತುತ ನೀಡುತ್ತಿರುವ ದರಿದ್ರ ಮೊತ್ತದ ಪಿಂಚಣಿಯ ಹೆಚ್ಚಳವನ್ನು ತಳ್ಳಿಹಾಕುವ ಕ್ರಮವು ಸರ್ಕಾರದ ನಿರ್ದಯತೆಗೂ ಮತ್ತು ಜವಾಬ್ದಾರಿಯಿಂದ ನುಣಿಚಿಕೊಳ್ಳುವ ಅಕ್ಷಮ್ಯ ಕೃತ್ಯಕ್ಕೂ ಸಮನಾಗುತ್ತದೆ. ಇದು, ಉತ್ತಮ ಜೀವನ ಮಟ್ಟವನ್ನು ನಿರಾಕರಿಸುವ ಮೂಲಕ ಬಡವಾ ನೀ ಮಡಗಿದಂಗಿರು ಎನ್ನುವ ಜಾತಿ-ಪದ್ಧತಿಯನ್ನು ಪೋಷಿಸುವ ಪಾಳೆಯಗಾರೀ ಸಮಾಜದ ನೀತಿಗೆ ಅನುಗುಣವಾಗಿದೆಯೇ ಹೊರತು, ಪ್ರತೀ ನಾಗರಿಕರೂ ಪಿಂಚಣಿಯ ಹಕ್ಕನ್ನು ಹೊಂದಿರುತ್ತಾರೆ ಎಂಬ ಆಧುನಿಕ ಪ್ರಜಾಪ್ರಭುತ್ವ ಸಮಾಜದ ಲಕ್ಷಣಕ್ಕೆ ಅನುಗುಣವಾಗಿಲ್ಲ.
ಪಿಂಚಣಿ ಒದಗಿಸುವ ಉದ್ದೇಶಕ್ಕಾಗಿ ಅಗತ್ಯವಿರುವ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳುವುದು ಹೇಗೆಂಬ ಪ್ರಶ್ನೆಯು ತಾತ್ವಿಕವಾಗಿ ಅಸಂಬದ್ಧ. ಸಂಪನ್ಮೂಲಗಳನ್ನು ಹೇಗಾದರೂ ಸರಿ, ಒದಗಿಸಿಕೊಳ್ಳಬೇಕು. 10 ಕೋಟಿ ಜನರಿಗೆ ತಿಂಗಳಿಗೆ ತಲಾ 3000 ರೂ.ಗಳ ಪಿಂಚಣಿ ನೀಡಬೇಕು ಎಂದಾದರೆ, ವರ್ಷಕ್ಕೆ 3.6 ಲಕ್ಷ ಕೋಟಿ ರೂ.ಗಳನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಇದು ಭಾರತದ ಜಿಡಿಪಿಯ ಶೇ. 1.8 ರಷ್ಟಾಗುತ್ತದೆ. ಜಿಡಿಪಿಯ ಶೇ. 1.8 ರಷ್ಟನ್ನು ಸರ್ಕಾರವು ಪಿಂಚಣಿಗಾಗಿ ಖರ್ಚು ಮಾಡಿದರೆ, ಪಿಂಚಣಿದಾರರು ಅಷ್ಟೂ ಮೊತ್ತವನ್ನು ವಿವಿಧ ಸರಕು-ಸರಂಜಾಮುಗಳು ಮತ್ತು ಸೇವೆಗಳನ್ನು ಪಡೆಯುಲು ಖರ್ಚು ಮಾಡುತ್ತಾರೆ. ಈ ಹಣವು, ಸರಕುಗಳು ಮತ್ತು ಸೇವೆಗಳ ಉತ್ಪಾದಕರಿಗೆ ಆದಾಯವಾಗಿ ಸೇರುತ್ತದೆ. ಇದರಲ್ಲಿ ಅವರು ಒಂದಿಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಹೀಗೆ, ಅನೇಕ ಸುತ್ತಿನ ಸತತ ಖರ್ಚುಗಳ ಮೂಲಕ ಹೆಚ್ಚುವರಿ ಆದಾಯ ಉಂಟಾಗುತ್ತದೆ. ಹಾಗಾಗಿ, ಸರ್ಕಾರವು ಜಿಡಿಪಿಯ ಶೇ. 1.8 ರಷ್ಟು ಹಣವನ್ನು ಖರ್ಚು ಮಾಡುವುದರಿಂದ ಒಂದು ಬಿಗಿ ಅಂದಾಜಿನ ಪ್ರಕಾರವೂ ಜಿಡಿಪಿಯು ಶೇ. 3.6ರಷ್ಟು ಹೆಚ್ಚುತ್ತದೆ. ಅದರ ಮೇಲೆ ಸರ್ಕಾರಕ್ಕೆ ಬರುವ ತೆರಿಗೆ ಆದಾಯವು, ಕೇಂದ್ರ ಮತ್ತು ರಾಜ್ಯಗಳು ಒಟ್ಟು ಶೇ. 15 ತೆರಿಗೆ ಹಾಕುತ್ತವೆ ಎಂದು ಊಹಿಸಿಕೊಂಡರೂ, ಜಿಡಿಪಿಯ ಶೇಕಡಾ 0.54 ರಷ್ಟಾಗುತ್ತದೆ. ಆದ್ದರಿಂದ, ಜಿಡಿಪಿಯ ಶೇ. 1.8 ರಷ್ಟು ಹಣವನ್ನು ಖರ್ಚು ಮಾಡಲು, ಸರ್ಕಾರವು ಜಿಡಿಪಿಯ ಶೇ. 1.26 ರಷ್ಟು (1.8 – 0.54 = 1.26) ಹೊಸ ಸಂಪನ್ಮೂಲಗಳನ್ನು ಎತ್ತಬೇಕಾಗುತ್ತದೆ.
ಒಂದು ಪಿಂಚಣಿ ಯೋಜನೆಯನ್ನು ಆರಂಭಿಸುವ ಬಗ್ಗೆ ಗಂಭೀರವಾಗಿರುವ ಸರ್ಕಾರಕ್ಕೆ ಹಣ ಹೊಂದಿಸಿಕೊಳ್ಳುವುದೇ ಒಂದು ಸಮಸ್ಯೆಯಾಗಬಾರದು. ದೇಶದಲ್ಲಿರುವ ಖಾಸಗಿ ಸಂಪತ್ತಿನ ಮೌಲ್ಯವನ್ನು, ಬಿಗಿ ಅಂದಾಜಿನ ಲೆಕ್ಕ ಮಾಡಿದರೂ ಸಹ, ಜಿಡಿಪಿಯ ನಾಲ್ಕರಷ್ಟು ಇದೆ ಎಂದು ಪರಿಗಣಿಸಬಹುದು ಮತ್ತು ಈ ಅಂದಾಜು ದೇಶದಲ್ಲಿ ಗಮನಿಸಲಾದ ಬಂಡವಾಳ-ಉತ್ಪತ್ತಿಯ ಅನುಪಾತಕ್ಕೂ ಅನುಗುಣವಾಗಿದೆ. ಮತ್ತು, ಜನಸಂಖ್ಯೆಯ ಮೇಲ್ತುದಿಯ ಶೇ. ಒಂದರಷ್ಟು ಮಂದಿಯು ದೇಶದ ಒಟ್ಟು ಖಾಸಗಿ ಸಂಪತ್ತಿನ ಅರ್ಧದಷ್ಟು ಭಾಗವನ್ನು ಹೊಂದಿದ್ದಾರೆ ಎಂದು ಭಾವಿಸಿದರೆ, ಅವರು ಹೊಂದಿರುವ ಸಂಪತ್ತು ಜಿಡಿಪಿಯ ಎರಡರಷ್ಟಾಗುತ್ತದೆ. ಮೇಲ್ತುದಿಯ ಶೇ. ಒಂದರಷ್ಟು ಮಂದಿಯು ಹೊಂದಿರುವ ಸಂಪತ್ತಿನ ಮೇಲೆ ಕೇವಲ ಶೇಕಡ 0.63ರಷ್ಟು ಸಂಪತ್ತು ತೆರಿಗೆಯನ್ನು ವಿಧಿಸಿದರೆ, ಸಾಂಸ್ಥಿಕ ಪಿಂಚಣಿಯ ರಕ್ಷಣೆ ಹೊಂದಿರುವವರನ್ನು ಮಾತ್ರ ಬಿಟ್ಟು ಬಹುತೇಕ ಒಂದು ಸಾರ್ವತ್ರಿಕ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಅಗತ್ಯವಾದಷ್ಟು ಸಂಪನ್ಮೂಲಗಳನ್ನು ಸಂಗ್ರಹಿಸಬಹುದು.
ಕಲ್ಯಾಣ ಕ್ರಮಗಳನ್ನು ಆರಂಭಿಸುವ ಸಲುವಾಗಿ ಅಮೆರಿಕಾದಲ್ಲಿ ಸಂಪತ್ತಿನ ಮೇಲೆ ತೆರಿಗೆ ಹೇರುವ ಪ್ರಸ್ತಾಪವನ್ನು ಇತ್ತೀಚೆಗೆ ಮಾಡಲಾಗಿದೆ ಎಂಬುದನ್ನು ಗಮನಿಸಬಹುದು. ಇತ್ತೀಚೆಗೆ ಮುಕ್ತಾಯಗೊಂಡ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಬರ್ನಿ ಸ್ಯಾಂಡರ್ಸ್ ಮತ್ತು ಎಲಿಜಬೆತ್ ವಾರೆನ್, ಇಬ್ಬರೂ, ತಮ್ಮ ಚುನಾವಣಾ ಪ್ರಚಾರದಲ್ಲಿ ಸಂಪತ್ತಿನ ತೆರಿಗೆಯ ದರ ಹೆಚ್ಚಳವನ್ನು ಸೂಚಿಸಿದ್ದರು. ಅಂತಿಮವಾಗಿ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಜೋ ಬಿಡೆನ್, ಸರ್ಕಾರದ ಗಣನೀಯ ವೆಚ್ಚದ ಕಾರ್ಯಕ್ರಮಗಳ ಮೂಲಕ ಅರ್ಥವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ಹೆಚ್ಚಿನ ಸಂಪತ್ತು ಮತ್ತು ಕಾರ್ಪೊರೇಟ್ ತೆರಿಗೆಗಳನ್ನು ವಿಧಿಸಲು ಯೋಜಿಸುತ್ತಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಭಾರತದಲ್ಲಿ ನವ-ಉದಾರವಾದಿ ಆರ್ಥಿಕ ಆಳ್ವಿಕೆಯ ಅವಧಿಯಲ್ಲಿ ಸಂಪತ್ತಿನ ಅಸಮಾನತೆಗಳು ಅಸಾಧಾರಣ ಮಟ್ಟದಲ್ಲಿ ಹೆಚ್ಚಿದ್ದರೂ ಸಹ, ಸಂಪತ್ತಿನ ತೆರಿಗೆಯನ್ನು ಕೈಬಿಡಲಾಗಿದೆ. ಇದೇ ವಿದ್ಯಮಾನವು ಪ್ರಪಂಚದಾದ್ಯಂತವೂ ಸಂಭವಿಸಿದೆ ಮತ್ತು ಇದು ಪ್ರಜಾಪ್ರಭುತ್ವದ ಕಾರ್ಯ ನಿರ್ವಹಣೆಗೆ ಎದುರಾಗಿರುವ ಬೆದರಿಕೆಯಾಗಿದೆ ಎಂಬುದು ಬೂರ್ಜ್ವಾ ಮತ್ತು ಸಾಮಾಜಿಕ ಪ್ರಜಾಪ್ರಭುತ್ವವಾದಿ ಅರ್ಥಶಾಸ್ತ್ರಜ್ಞರಲ್ಲಿ ಕೂಡ ಆತಂಕದ ಒಂದು ಮೂಲವಾಗಿದೆ.
ಸಂಪತ್ತಿನ ತೆರಿಗೆಯ ಮೂಲಕ ಪಿಂಚಣಿ ಯೋಜನೆಗೆ ಹಣಕಾಸು ಒದಗಿಸುವ ಯೋಜನೆಯು ಏಕ ಕಾಲದಲ್ಲಿ ಮೂರು ಉದ್ದೇಶಗಳನ್ನು ಈಡೇರಿಸುತ್ತದೆ: ಅದು ಒಂದು ಸಾರ್ವತ್ರಿಕ ಪಿಂಚಣಿ ಪಡೆಯುವ ಹಿರಿಯ ನಾಗರಿಕರ ಹಕ್ಕನ್ನು ಎತ್ತಿಹಿಡಿಯುತ್ತದೆ; ಅದು ಪ್ರಸ್ತುತ ಸ್ಥಗಿತತೆ ಮತ್ತು ಬಿಕ್ಕಟ್ಟಿನಲ್ಲಿ ಮುಳುಗಿರುವ ಅರ್ಥವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ; ಮತ್ತು ಅದು ಸಂಪತ್ತಿನ ಅಸಮಾನತೆಯನ್ನು ಹೆಚ್ಚಿಸದೆ ಈ ಕಾರ್ಯಗಳನ್ನು ಸಾಧಿಸುತ್ತದೆ. (ಸಂಪತ್ತಿನ ಮೇಲೆ ತೆರಿಗೆ ವಿಧಿಸುವ ಮತ್ತು ಅದರಿಂದ ಬರುವ ಆದಾಯವನ್ನು ಖರ್ಚು ಮಾಡುವ ಕ್ರಮವು ವಾಸ್ತವವಾಗಿ ಸಂಪತ್ತಿನ ಅಸಮಾನತೆಯನ್ನೇನೂ ಕಡಿಮೆ ಮಾಡುವುದಿಲ್ಲ; ಸಂಪತ್ತಿನ ಅಸಮಾನತೆಯು ಇನ್ನಷ್ಟು ಹದಗೆಡುವುದನ್ನು ಮಾತ್ರ ತಡೆಯುತ್ತದೆ).
ಮೋದಿ ಸರ್ಕಾರವು ಇದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ. ಅದು ನೀಡುವ ನಿಕೃಷ್ಟ ಪಿಂಚಣಿಯನ್ನು ಹೆಚ್ಚಿಸುವುದಿಲ್ಲ ಎಂದು ಹೇಳಿದೆ ಮಾತ್ರವಲ್ಲ, ಶ್ರೀಮಂತರ ಮೇಲೆ ಸಂಪತ್ತಿನ ತೆರಿಗೆಯನ್ನು ವಿಧಿಸುವುದಕ್ಕೆ ಬದಲಾಗಿ, ಅದು ನಿಜಕ್ಕೂ ಶ್ರೀಮಂತರನ್ನು ಇನ್ನಷ್ಟು ಮುದ್ದು ಮಾಡುತ್ತಿದೆ. “ನಗದೀಕರಣ” ಎಂಬ ತಪ್ಪು ದಾರಿಗೆಳೆಯುವ ಹೆಸರಿನಲ್ಲಿ, ಹಿಡಿಗೂಳಿನ ಅಥವಾ ದುಗ್ಗಾಣಿಯ ಆಸೆಗಾಗಿ ಜನರ ತೆರಿಗೆಗಳಿಂದ ನಿರ್ಮಿಸಿದ ರಾಷ್ಟ್ರದ ಸ್ವತ್ತುಗಳನ್ನು ತನ್ನ ಪ್ರೀತಿ-ಪಾತ್ರ ಶ್ರೀಮಂತರಿಗೆ ಹಸ್ತಾಂತರಿಸುತ್ತಿದೆ. ಉದಾಹರಣೆಗೆ, ರೈಲ್ವೆ ಪ್ಲಾಟ್‌ಫಾರ್ಮ್‌ಗಳು, ರಸ್ತೆ ಬದಿಯ ಸ್ಥಳಗಳಿಂದ ಹಿಡಿದು ರಸ್ತೆಗಳು ಮತ್ತು ವಿಮಾನ ನಿಲ್ದಾಣಗಳವರೆಗಿನ ರಾಷ್ಟ್ರದ ಅನೇಕಾನೇಕ ಸ್ವತ್ತುಗಳನ್ನು “ನಗದೀಕರಣ”ದ ಹೆಸರಿನಲ್ಲಿ ಸ್ವಾಧೀನಪಡಿಸಿಕೊಳ್ಳುವ ಬಂಡವಾಳಶಾಹಿಗಳಿಗೆ ಈ ಸ್ವತ್ತುಗಳ ಬಳಕೆದಾರರನ್ನು ಶೋಷಿಸಲು, ಈ ಸ್ವತ್ತುಗಳನ್ನು ನಿರ್ವಹಿಸುವ ಕಾರ್ಮಿಕರನ್ನು ಶೋಷಿಸಲು ಮತ್ತು ಈ ಸ್ವತ್ತುಗಳನ್ನು ಬಡವರು ಬಳಸದಂತೆ ದುಬಾರಿ ದರಗಳನ್ನು ನಿಗದಿಪಡಿಸಲು ಪರವಾನಗಿ ನೀಡಲಾಗುತ್ತದೆ.
ಬಂಡವಾಳಗಾರರು ಈ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವಂತೆ “ಪ್ರೇರೇಪಿಸಲು” ಅವರಿಗೆ ತೆರಿಗೆ-ವಿರಾಮಗಳನ್ನು ನೀಡಲು ಸರ್ಕಾರವು ಯೋಜಿಸುತ್ತಿದೆ. ತೆರಿಗೆ ವಿರಾಮಗಳೊಂದಿಗೆ ರಾಷ್ಟ್ರದ ಆಸ್ತಿಗಳಿಗೆ ಸಂಬಂಧಿಸಿದ ಪ್ರಯೋಜನಗಳನ್ನೂ ಬಂಡವಾಳಶಾಹಿಗಳಿಗೆ ನೀಡಲು ಮುಂದಾಗುವ ಮೋದಿ ಸರ್ಕಾರವು 200 ರೂ.ಗಳ ನಿಕೃಷ್ಟ ಪಿಂಚಣಿಯ ಹೆಚ್ಚಳವನ್ನು ತಳ್ಳಿಹಾಕುತ್ತದೆ. ಇದು ವರ್ಗ-ಪಕ್ಷಪಾತದ ಲಜ್ಜೆಗೆಟ್ಟ ಪ್ರದರ್ಶನವೇ ಸರಿ.
ಅನು: ಕೆ.ಎಂ. ನಾಗರಾಜ್