ಬೆಂಗಳೂರು : ಕಳೆದರೆಡು ದಿನಗಳ ಹಿಂದೆ ಹಾವೇರಿ ಜಿಲ್ಲೆ ಬ್ಯಾಡಗಿ ಏಪಿಎಂಸಿ ಮಾರುಕಟ್ಟೆಯಲ್ಲಿ ನಡೆದ ದುರ್ಘಟನೆಗೆ ಒಕ್ಕೂಟ ( ಕೇಂದ್ರ ) ಸರಕಾರದ ಕಾರ್ಪೋರೇಟ್ ಕಂಪನಿಗಳ ಪರವಾದ ನೀತಿಗಳೇ ಕಾರಣವಾಗಿದೆಯೆಂದು ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ )ಬಲವಾಗಿ ಖಂಡಿಸುತ್ತದೆ. ಸದರಿ ಒಟ್ಟು ಪ್ರಕರಣವನ್ನು ಸಮಗ್ರ ತನಿಖೆಗೆ ಅಗತ್ಯ ಕ್ರಮವಹಿಸಬೇಕೆಂದು ಸಿಪಿಐಎಂ ರಾಜ್ಯ ಸರಕಾರವನ್ನು ಆಗ್ರಹಿಸಿದೆ.
ಸಿಪಿಐಎಂ ಕಾರ್ಯದರ್ಶಿ ಯು.ಬಸವರಾಜ ಈ ಕುರಿತು ಹೇಳಿಕೆ ನೀಡಿದ್ದು, ಏಪಿಎಂಸಿ ಬ್ಯಾಡಗಿಯಲ್ಲಿ ಉದ್ರಿಕ್ತರ ಗುಂಪು ಆಸ್ತಿ ಪಾಸ್ತಿಗಳಿಗೆ ಉಂಟು ಮಾಡಿದ ಹಾನಿಯನ್ನು ಸಿಪಿಐಎಂ ಒಪ್ಪುವುದಿಲ್ಲ.ಆದರೆ ರೈತರ ಆಕ್ರೋಶಕ್ಕೆ ಕಾರಣವಾದ ಅಂಶಗಳನ್ನು ಸರಕಾರ ಕೂಲಂಕುಶವಾಗಿ ಗಮನಿಸಬೇಕು ಎಂದಿದ್ದಾರೆ.
ರೈತರ ಉದ್ರಿಕ್ತತೆಯ ಹಿಂದೆ ಬೆಲೆ ಕುಸಿತ ಕಾರ್ಯ ನಿರ್ವಹಿಸಿರುವ ಸಾದ್ಯತೆಗಳಿವೆ ಎಂಬುದನ್ನು ಸರಕಾರ ಗಮನಿಸಲು ಒತ್ತಾಯಿಸುತ್ತದೆ. ಕಳೆದ 2023 ರಲ್ಲಿ ಗುಂಟೂರು ಮೆಣಸಿನಕಾಯಿ ದರ ಕ್ವಿಂಟಾಲ್ ಒಂದಕ್ಕೆ 25,000 ರೂಗಳಿದ್ದದ್ದು ಈಗದು15,000 ರೂಗಳಿಗೆ ಕುಸಿದಿದೆ. ಅದೇ ರೀತಿ, ಬ್ಯಾಡಿಗಿ ಕಡ್ಡಿಗಾಯಿ ಕಳೆದ ವರ್ಷ 40,000 ರೂಗಳಿಂದ 45,000 ರೂಗಳಿದ್ದದ್ದು ಈ ವರ್ಷ ಅದು 8,000 ರಿಂದ 10,000 ರೂಗಳಿಗೆ ಕುಸಿದಿದೆ. ಹಾಗೆ ಬ್ಯಾಡಗಿ ಡಬ್ಬಾ ಕಾಯಿ ಕಳೆದ ವರ್ಷ 60,000 ರಿಂದ 70,000 ರೂಗಳಷ್ಠಿದ್ದದ್ದು ಈ ವರ್ಷ ಅದು 6000 ರಿಂದ 8,000 ರೂಗಳಿಗೆ ಕುಸಿದಿದೆ ಎಂದು ಹೇಳಿದರು.
ಇದನ್ನು ಓದಿ : ಗೃಹಮಂಡಳಿ ವತಿಯಿಂದ 500 ಎಕರೆಯಲ್ಲಿ ನೂತನ ಬಡಾವಣೆ (ಮಿನಿ ಟೌನ್ ಶಿಪ್)
ಈ ಬೆಲೆ ಕುಸಿತವು ರೈತರನ್ನು ತೀವ್ರ ಚಿಂತಾ ಕ್ರಾಂತ ರನ್ನಾಗಿಸಿದೆ. ಮಾಹಿತಿಯಂತೆ ಪ್ರತಿ ಎಕರೆಗೆ ರೈತರು 1.5 ಲಕ್ಷ ರೂಗಳಿಂದ 2 ಲಕ್ಷ ರೂಗಳವರೆಗೆ ಹೂಡಿಕೆ ಮಾಡುತ್ತಿದ್ದಾರೆ. ಈ ವರ್ಷ ಇಳುವರಿಯು ನೀರಾವರಿ ಪ್ರದೇಶದಲ್ಲಿ ತಲಾ ಎಕರೆಗೆ ಸರಾಸರಿ 6 ರಿಂದ 10 ಕ್ಚಿಂಟಾಲ್ ಬಂದಿದೆ ಎನ್ನಲಾಗಿದೆ. ಹೀಗಾದಲ್ಲಿ ತಲಾ ಎಕರೆಗೆ ಹೂಡಿಕೆಯ ಬಡ್ಡಿಯು ಬಾರದೆಂಬ ಆತಂಕವು ರೈತರನ್ನು ಉದ್ರಿಕ್ತರನ್ನಾಗಿಸಿದೆ ಎಂದು ಆರೋಪಿಸಿದ್ದಾರೆ.
ಕೃಷ್ಣಾ ಹಾಗೂ ತುಂಗ ಭದ್ರ ಅಚ್ಚುಕಟ್ಟು ಪ್ರದೇಶದ ಲಕ್ಷಾಂತರ ಎಕರೆಗಳಲ್ಲಿನ ಈ ಬೆಳೆಯು ಅಂದಾಜಿನಂತೆ ರೈತರಿಗೆ 15 ಸಾವಿರ ಕೋಟಿ ರೂಗಳಿಗೂ ಅಧಿಕ ಮೊತ್ತದ ನಷ್ಟವನ್ನುಂಟು ಮಾಡಿದೆ. ಈ ಸಂದರ್ಭವನ್ನು ಕೆಲವು ಕಿಡಿಗೇಡಿಗಳು ಲೂಟಿಗೆ ಬಳಸಿಕೊಂಡಿರುವ ಸಂಭವಗಳಿವೆ. ಕಿಡಿಗೇಡಿಗಳ ದುಷ್ಕೃತ್ಯ ತೀವ್ರ ಖಂಡನೀಯವಾಗಿದೆ. ಇವರ ಮೇಲೆ ಕಠಿಣ ಕಾನೂನಿನ ಕ್ರಮವಹಿಸಲು ಸಿಪಿಐಎಂ ಒತ್ತಾಯಿಸುತ್ತದೆ. ಡಾ. ಎಂ.ಎಸ್. ಸ್ವಾಮಿನಾಥನ್ ಕೃಷಿ ಆಯೋಗದ ಸಲಹೆಯಂತೆ ಕನಿಷ್ಠ ಬೆಂಬಲ ಬೆಲೆ ಘೋಷಣೆಯು ಇಲ್ಲವಾಗಿದೆ.
ರೈತರ ಈ ಸಂಕಷ್ಠಕ್ಕೆ ಬೆಲೆಗಳನ್ನು ತಮ್ಮ ಲಾಭಕ್ಕೆ ತಕ್ಕಂತೆ ಏರಿಳಿತ ಮಾಡಿ ಲೂಟಿ ಮಾಡುವ ಕಾರ್ಪೋರೇಟ್ ವ್ಯಾಪಾರಿಗಳ ದುಷ್ಠತನವೇ ಕಾರಣವಾಗಿದೆ. ಈ ಕಾರ್ಪೋರೇಟ್ ಸಂಸ್ಥೆಗಳು ಬೆಲೆಗಳನ್ನು ಏರಿಳಿತ ಮಾಡಿ ಲೂಟಿ ಮಾಡಲು ಅವಕಾಶ ನೀಡಿರುವ ಕೇಂದ್ರ ಸರಕಾರವೆ ಈ ದುರಂತಕ್ಕೆ ನೇರ ಹೊಣೆಗಾರನಾಗಿದೆ. ಒಣ ಮೆಣಸಿನಕಾಯಿ ಬೆಳೆಗಾರರನ್ನು ಗುರುತಿಸಿ ಈ ಬೆಲೆ ಕುಸಿತಕ್ಕೆ ತಲಾ ಎಕರೆಗೆ ಕನಿಷ್ಢ 50,000 ರೂಗಳ ಪರಿಹಾರವನ್ನು ಒಕ್ಕೂಟ ಸರಕಾರ ಘೋಷಿಸಬೇಕು. ಕನಿಷ್ಠ ಬೆಂಬಲಬೆಲೆಯನ್ನು ಘೋಷಿಸಿ ಖರೀದಿಸಲು ಅಗತ್ಯ ಕ್ರಮವಹಿಸುವಂತೆ ಸಿಪಿಐಎಂ ಒತ್ತಾಯಿಸುತ್ತದೆ ಎಂದು ಯು.ಬಸವರಾಜ ತಿಳಿಸಿದ್ದಾರೆ.
ಇದನ್ನು ನೋಡಿ : ಕನ್ನಡದ ಅಸ್ಮಿತೆಯ ಕವಿ ಮಹಾಕವಿ ಪಂಪ -ಡಾ.ಪುರುಷೋತ್ತಮ ಬಿಳಿಮಲೆ Janashakthi Media