ರಫೇಲ್‌ ಹಗರಣ : ಕೇಂದ್ರ ಸರಕಾರದ ಮೇಲೆ ತೂಗುಕತ್ತಿ

ರಫೇಲ್​ ಯುದ್ಧ ವಿಮಾನ ಒಪ್ಪಂದದ ಸಂದರ್ಭದಲ್ಲಿ ಅವ್ಯವಹಾರಗಳು ನಡೆದಿವೆ ಎನ್ನುವ ಪ್ರಶ್ನೆ ಮತ್ತೆ ಎದ್ದಿದೆ. ಫ್ರೆಂಚ್​  ಪಬ್ಲಿಕೇಷನ್​​ ಒಂದು, ಡೆಸ್ಸಾಲ್ಟ್​ ( Dassault) ಸಂಸ್ಥೆ ವಿರುದ್ಧ ಗಂಭೀರವಾದ ವರದಿಯೊಂದನ್ನ ಮಾಡಿದೆ. ಈ ವರದಿ ಆಧಾರದ ಮೇಲೆ ಮೋದಿ ಸರ್ಕಾರಕ್ಕೆ ವಿಪಕ್ಷಗಳು ಪ್ರಶ್ನೆಗಳನ್ನ ಎಸೆಯುತ್ತಿವೆ. ಆ ವರದಿ ಯಾವುದು? ಆ ವರದಿಯಲ್ಲಿ ಏನಿದೆ? ಎಂಬ ಪ್ರಶ್ನೆಗಳು ಈಗ ಎದ್ದಿವೆ.

ಭಾರತ – ಫ್ರಾನ್ಸ್ ನಡುವಿನ ರಫೇಲ್ ಯುದ್ಧ ವಿಮಾನ ಒಪ್ಪಂದದ ಕುರಿತು ಮತ್ತೆ ವಿವಾದ ಭುಗಿಲೆದ್ದಿದ್ದು, ರಫೇಲ್ ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಡಸಾಲ್ಟ್ ಭಾರತೀಯ ಮಧ್ಯವರ್ತಿಗೆ ಒಂದು ಮಿಲಿಯನ್ ಯುರೋ ಲಂಚ ನೀಡಿದೆ ಎಂಬ ಆರೋಪ ಕೇಳಿ ಬಂದಿದೆ. ಫ್ರೆಂಚ್ ಫೈಟರ್ ಜೆಟ್ ರಫೇಲ್ ತಯಾರಿಕಾ ಸಂಸ್ಥೆ ಡಸಾಲ್ಟ್, 36 ರಫೇಲ್‌ ಯುದ್ಧ ವಿಮಾನ ಖರೀದಿಗೆ ಭಾರತವನ್ನು ಒಪ್ಪಿಸಲು ಭಾರತದ ಮಧ್ಯವರ್ತಿಯೊಬ್ಬರಿಗೆ ಒಂದು ಮಿಲಿಯನ್ ಯೂರೋ ಪಾವತಿಸಿದೆ ಎಂದು ಫ್ರಾನ್ಸ್‌ನ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ತನಿಖೆಯನ್ನು ಉಲ್ಲೇಖಿಸಿ ಪ್ಯಾರಿಸ್‍ ನಲ್ಲಿರುವ ತನಿಖಾ ಸುದ್ದಿ ಸಂಸ್ಥೆಯಾದ ‘ಮಿಡಿಯಾಪಾರ್ಟ್‘ ಆರೋಪಿಸಿದೆ. ಅಲ್ಲದೇ ಈ ಭಾರತೀಯ ಮಧ್ಯವರ್ತಿ ಬೇರೊಂದು ರಕ್ಷಣಾ ಒಪ್ಪಂದ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿದ್ದಾನೆ ಎಂದು ಮಿಡಿಯಾಪಾರ್ಟ್ ಹೇಳಿದೆ. ಇನ್ನೇನು ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿದ ಎಲ್ಲಾ ವಿವಾದಗಳು ತಣ್ಣಗಾದವು ಎಂದುಕೊಳ್ಳುತ್ತಿರುವಾಗಲೇ, ಹೊಸದೊಂದು ವಿವಾದ ಹುಟ್ಟಿಕೊಂಡಿರುವುದು ಕೇಂದ್ರ ಸರಕಾರಕ್ಕೆ ಸಂಕಷ್ಟ ಎದುರಾದಂತಾಗಿದೆ.

ಹಾಗಾದರೆ ರಫೇಲ್ ಒಪ್ಪಂದದ ಕುರಿತು ಮಿಡಿಯಾಪಾರ್ಟ್ ಪ್ರಕಟಣೆಯಲ್ಲೇನಿದೆ ?  ಫ್ರಾನ್ಸ್ ಭ್ರಷ್ಟಾಚಾರ  ವಿರೋಧಿ ಸಂಸ್ಥೆ ತನಿಖೆಯ ಉಲ್ಲೇಖಗಳೇನು?  ಈ ವಿವಾದದ ಕುರಿತು ಡಸಾಲ್ಟ್ ಸ್ಪಷ್ಟನೆ ಏನು? ಎನ್ನುವುದನ್ನು ಒಂದೊಂದಾಗಿ ನೋಡ್ತಾ ಹೋಗೋಣ.

ರಫೇಲ್ ಯುದ್ಧವಿಮಾನಗಳ ತಯಾರಕರಾದ ಡಸ್ಸಾ (Dassault) ಕಂಪನಿಯು 2016ರಲ್ಲಿ ವಿಮಾನ ಖರೀದಿ ಒಪ್ಪಂದದ ನಂತರ ಭಾರತೀಯ ಮಧ್ಯವರ್ತಿಗಳಿಗೆ 10 ಲಕ್ಷ ಯೂರೋ ಪಾವತಿಗೆ ಒಪ್ಪಿಕೊಂಡಿತ್ತು ಎಂಬ ಸಂಗತಿಯನ್ನು ಫ್ರೆಂಚ್​ ಮಾಧ್ಯಮ ಸಂಸ್ಥೆ ಮೀಡಿಯಾಪಾರ್ಟ್​ ಬಹಿರಂಗಪಡಿಸಿದೆ.

2017ರ ಡಸ್ಸಾ ಸಮೂಹದ ಲೆಕ್ಕಪತ್ರಗಳನ್ನು ಪರಿಶೀಲಿಸಿದಾಗ ಐದು ಲಕ್ಷ ಯೂರೋ ಮೊತ್ತದಷ್ಟು ಹಣವನ್ನು ‘ಗ್ರಾಹಕರಿಗೆ ಗಿಫ್ಟ್​’ ಲೆಕ್ಕಶೀರ್ಷಿಕೆಯಡಿ ವ್ಯಯಿಸಿರುವುದು ಪತ್ತೆಯಾಗಿದೆ. ಫ್ರಾನ್ಸ್​ ದೇಶದ ಭ್ರಷ್ಟಾಚಾರ ನಿಗ್ರಹ ದಳವಾದ, ಎಎಫ್​ಎ, ಡಸ್ಸಾ ಸಂಸ್ಥೆಯ ಲೆಕ್ಕಪತ್ರ ತಪಾಸಣೆ ನಡೆಸಿದ ವೇಳೆ ಈ ಅಂಶವು ಪತ್ತೆಯಾಗಿದೆ.

AFA  ಫ್ರೆಂಚ್‍ ಸರಕಾರಕ್ಕೆ ಉತ್ತರದಾಯಿಯಾಗಿರುವ ಸಂಸ್ಥೆ. ಇದನ್ನು ದೊಡ್ಡ ಕಂಪನಿಗಳು ಫ್ರೆಂಚ್‍ ಕಾಯ್ದೆಯಲ್ಲಿ ನಿರೂಪಿಸಲಾಗಿರುವ ಭ್ರಷ್ಟಾಚಾರ-ವಿರೋದಿ ವಿಧಾನಗಳ ಅನುಷ್ಠಾನವನ್ನು ಅನುಸರಿಸುತ್ತಿವೆಯೇ? ಎಂದು ಪರೀಕ್ಷಿಸಲು 2017ರಲ್ಲಿ ರಚಿಸಲಾಯಿತು. ಇದು ಡಸಾಲ್ಟ್ ಕಂಪನಿಯ 2017ರ ಲೆಕ್ಕ ಪರಿಶೋಧನೆ ನಡೆಸುತ್ತಿದ್ದಾಗ ಐದು ಯುರೋ ಹಣದ ಮಾಹಿತಿ ಬಗ್ಗೆ ತನಿಖೆ ಮಾಡಿದಾಗ, ‘ಗ್ರಾಹಕರಿಗೆ ಉಡುಗೊರೆಗಳು’ ಎಂಬ ಉಲ್ಲೇಖ AFA ಗಮನ ಸೆಳೆದಿತ್ತು.

ಏಕಂದರೆ ‘ಉಡುಗೊರೆ’ಯ ಬಾಬ್ತಿನಲ್ಲಿ ಇದು ಭಾರೀ ದೊಡ್ಡ ಮೊತ್ತ. ಈ ಬಗ್ಗೆ ಕೇಳಿದಾಗ ಡಸಾಲ್ಟ್  ಕಂಪನಿ ಮಾರ್ಚ್‍ 30, 2017 ದಿನಾಂಕ ದ ಒಂದು ‘ಪ್ರೊಫೋರ್ಮ ಇನ್‍ವಾಯ್ಸ್’ ತೋರಿಸಿತು. ಇದು ಭಾರತೀಯ ಕಂಪನಿ  ಡಿಫ್‍ ಸಿಸ್ ಸೊಲ್ಯುಶನ್ಸ್ ನೀಡಿದ್ದ ಇನ್‍ ವಾಯ್ಸ್. ಇದು ರಫೆಲ್‍ ಸಿ ಯ ಸಣ್ಣ ಕಾರು ಗಾತ್ರದ 50 ಮಾದರಿಗಳನ್ನು ತಯಾರಿಸಿ ಕೊಡುವುದಕ್ಕಾಗಿ ಕೊಟ್ಟ ಆರ್ಡರ್ ನ 50% ಹಣ ಎಂದು ಡಸಾಲ್ಟ್‍ ಕಂಪನಿ  ಹೇಳಿತು.

ಅಂದರೆ ಇದು 10 ಲಕ್ಷ  ಯುರೋ ಮೊತ್ತದ ಆರ್ಡರ್. ಆಗ AFA ಇನ್ಸ್ ಪೆಕ್ಟರುಗಳು ತನ್ನದೇ ವಿಮಾನದ ಮಾದರಿಗಳನ್ನು ತಲಾ 2 ಲಕ್ಷ  ಯುರೋದಷ್ಟು ವೆಚ್ಚದಲ್ಲಿ  ತಯಾರಿಸಲು ಒಂದು ಭಾರತೀಯ ಕಂಪನಿಗೆ ಹೇಳಿದ್ದೇಕೆ ಮತ್ತು ಇದನ್ನು ‘ಗ್ರಾಹಕರಿಗೆ ಉಡುಗೊರೆ’ ಎಂದು ಉಲ್ಲೇಖಿಸಿದ್ದೇಕೆ ಎಂದು ಪ್ರಶ್ನಿಸಿತು ಎನ್ನಲಾಗಿದೆ.

ರಫೇಲ್ ಜೆಟ್‌ಗಳ 50 ಮಾದರಿಗಳ ತಯಾರಿಕೆಗಾಗಿ ಈ ಹಣವನ್ನು ಬಳಸಲಾಗಿದೆ, ಇಂತಹ ಮಾದರಿಗಳು ಇವೆ, ಅವನ್ನು ಈ ಭಾರತೀಯ ಕಂಪನಿ  ತನಗೆ ಪೂರೈಸಿದೆ ಎಂಬ ಬಗ್ಗೆ ಒಂದೇ ಒಂದು ದಸ್ತಾವೇಜನ್ನೂ  ಡಸಾಲ್ಟ್  AFA ಗೆ ಒದಗಿಸಿಲ್ಲ ಎಂದು ಮಿಡಿಯಾಪಾರ್ಟ್ ಹೇಳಿದೆ. ಭಾರತದಲ್ಲಿ ಡಸಾಲ್ಟ್ ಕಂಪನಿಯ  ಒಂದು ಸಬ್ ‍ಕಾಟ್ರಾಕ್ಟ್  ಕಂಪನಿಯಾಗಿರಬಹುದಾದ  ಡಿಫ್‍ ಸಿಸ್ ಸೊಲ್ಯುಶನ್ಸ್ ಗುಪ್ತಾ ಕುಟುಂಬದ ಒಡೆತನದ ಕಂಪನಿ. ಈ ಕುಟುಂಬದ ಮೂರು ತಲೆಮಾರುಗಳ ಸದಸ್ಯರು ವೈಮಾನಿಕ ಮತ್ತು ರಕ್ಷಣಾ ಉದ್ದಿಮೆಯಲ್ಲಿ ಮಧ್ಯವರ್ತಿಗಳಾಗಿದ್ದು, ಜನವರಿ 2019ರಲ್ಲಿ ಭಾರತದ ಮಾಧ್ಯಮದ ‘ಕೋಬ್ರಾಪೋಸ್ಟ್ ಮತ್ತು ಇಕನಾಮಿಕ್‍ ಟೈಮ್ಸ್ ಈ ಕುಟಂಬದ ಒಬ್ಬ ಸದಸ್ಯ ಸುಶೆನ್ ಗುಪ್ತ ಡಸಾಲ್ಟ್ ನ ಒಬ್ಬ ಏಜೆಂಟನಾಗಿ ರಫೆಲ್‍ ಕಾಂಟ್ರಾಕ್ಟ್ ಗೆ ಕೆಲಸ ಮಾಡಿದ್ದರು, ಭಾರತದ ರಕ್ಷಣಾ ಸಚಿವಾಲಯದಿಂದ ಗುಪ್ತ ದಸ್ತಾವೇಜುಗಳನ್ನು ಪಡೆದಿದ್ದರು ಎಂದು ಪ್ರಕಟಿಸಿದ್ದವು ಎಂಬುದನ್ನೂ  ಮಿಡಿಯಪೋಸ್ಟ್ ಉಲ್ಲೇಖಿಸಿದೆ.

ಇನ್ನು ಮಿಡಿಯಾಪಾರ್ಟ್ ವರದಿಯಲ್ಲಿರುವಂತೆ ರಫೇಲ್ ಡೀಲ್ ನಲ್ಲಿರುವ ಮಧ್ಯವರ್ತಿಯ ಹೆಸರು ಸುಶೇನ್ ಗುಪ್ತಾ ಎಂದು ಶಂಕಿಸಲಾಗಿದೆ. ಈ ಹಿಂದೆ ಇದೇ ಸುಶೇನ್ ಗುಪ್ತಾ, ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಚಾಪರ್ ಖರೀದಿ ಪ್ರಕರಣದಲ್ಲೂ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆ ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಸುಶೇನ್ ಗುಪ್ತಾಒಡೆತನದ ಭಾರತೀಯ ಕಂಪನಿ ಡೆಫ್ಸಿಸ್ ಸೊಲ್ಯೂಷನ್ಸ್‌, ಗ್ರಾಹಕರಿಗೆ ಉಡುಗೊರೆ ನೀಡಲು ಒಂದು ಮಿಲಿಯನ್ ಯುರೋ ಪಡೆದ ಕುರಿತು ದಾಖಲೆಗಳು (ಇನ್ ವಾಯ್ಸ್) ಎಎಫ್ಎಗೆ ಲಭ್ಯವಾಗಿದೆ ಎನ್ನಲಾಗಿದೆ. ಅಷ್ಟೆ ಅಲ್ಲದೆ ಕಪ್ಪು ಹಣವನ್ನು ಬಿಳಿ ಮಾಡಿರುವ ಆರೋಪ ಇತನ ಮೇಲಿದ್ದು ಈಗ ಜಾಮೀನಿನ ಮೇಲೆ ಬಿಡುಗಡೆ ಪಡೆದಿದ್ದಾರೆ ಎಂದೂ ಮಿಡಿಯಪೋಸ್ಟ್ ವರದಿಯನ್ನು ಮಾಡಿದೆ.

ಪ್ರತಿ ವಿಮಾನದ ದರ 20 ಸಾವಿರ ಯೂರೊ ಆಗಿದೆ. ಡಸಾಲ್ಟ್ ಸಂಸ್ಥೆಯು, 59 ರಫೇಲ್‌ ಯುದ್ಧ ವಿಮಾನಗಳ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿದ್ದ ಭಾರತೀಯ ಸಂಸ್ಥೆಗೆ  ಕೊಡುಗೆ ನೀಡಿದ್ದಾಗಿ ಭ್ರಷ್ಟಾಚಾರ ವಿರೋಧಿ ಸಂಸ್ಥೆಗೆ ತಿಳಿಸಿದೆ. ಸ್ವತಃ ಜೆಟ್ ತಯಾರಿಕಾ ಸಂಸ್ಥೆಯಾಗಿ  ಭಾರತೀಯ ಸಂಸ್ಥೆ ಜೊತೆಗೆ ಏಕೆ ಕೈಜೋಡಿಸಬೇಕು ಎಂದು ಫ್ರಾನ್ಸ್‌ನ ಅಧಿಕಾರಿಗಳು ಪ್ರಶ್ನಿಸಿದಾಗ ಡಸಾಲ್ಟ್‌ ಸಂಸ್ಥೆಯಿಂದ ಸಮಾಧಾನಕರವಾದ ಉತ್ತರ ಬಂದಿಲ್ಲ ಎಂದು ಎಎಫ್‍ಎ ಹೇಳಿದೆ.

ರಫೇಲ್ ಒಪ್ಪಂದದ ಕುರಿತು ಆರಂಭದಿಂದಲೂ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಲೇ ಬಂದಿರುವ ಕಾಂಗ್ರೆಸ್, ಇದೀಗ ಮಿಡಿಯಾಪಾರ್ಟ್ ವರದಿ ಆಧರಿಸಿ ತನಿಖೆಗೆ ಆಗ್ರಹಿಸಿದೆ. ಸಿಪಿಐಎಂ ಕೂಡ ಪ್ರತಿಕ್ರೀಯೆ ನೀಡಿದ್ದು, ರಫೆಲ್ ವ್ಯವಹಾರದ ಬಗ್ಗೆ ಒಂದು ತನಿಖೆಗೆ ಆದೇಶ ನೀಡಲು ಮೋದಿ ಸರ್ಕಾರ ನಿರಾಕರಿಸುತ್ತಿರುವುದು ಈ ವಿಷಯದಲ್ಲಿ ಅದು ಏನನ್ನೋ   ಮರೆಮಾಚುತ್ತಿದೆ ಎಂಬ ಸಂದೇಹ ಮೂಡಿಸುತ್ತದೆ.  ಸಿಎಜಿ ವರದಿ ಕಾನೂನುಬಾಹಿರ ಪಾವತಿಗಳ ಪ್ರಶ್ನೆಯನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ ಎಂಬುದು ಸ್ವಯಂವೇದ್ಯ ಎಂದಿರುವ ಸಿಪಿಐ(ಎಂ) ಹಿಂದಿನ ಆರ್ಡರನ್ನು ರದ್ದು ಮಾಡುವ ಮತ್ತು 36 ವಿಮಾನಗಳಿಗೆ ಹೆಚ್ಚಿನ ವೆಚ್ಚದಲ್ಲಿ  ಹೊಸ ಆರ್ಡರ್ ಕೊಟ್ಟಿರುವ ಈ ಇಡೀ ವ್ಯವಹಾರದ  ಬಗ್ಗೆ ಒಂದು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.

ರಫೇಲ್‌ ಹಗರಣ ಹೇಗೆ ನಡೆದಿದೆ ಎನ್ನುವುದು ಈಗ ಬಯಲಾಗುತ್ತಿದೆ. ಪ್ರಧಾನಿ ಕಚೇರಿಯೇ ಇದರಲ್ಲಿ ನೇರವಾಗಿ ಭಾಗಿಯಾಗಿದೆಯಾ? ರಾಷ್ಟ್ರೀಯ ಭದ್ರತಾ ಸಲಹೆಗಾರರು ಪ್ಯಾರಿಸ್‌ನಲ್ಲಿ ಕಾನೂನುಬಾಹಿರವಾಗಿ ಸಂಧಾನ ಮಾಡಿದ್ದಾರೆಯೆ ಎನ್ನುವ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿದ್ದು, ರಫೇಲ್ ಹಗರಣ ಕೇಂದ್ರ ಸರಕಾರದ ಮೇಲೆ ತೂಗುಕತ್ತಿಯಾಗುವ ಸಾಧ್ಯತೆ ಹೆಚ್ಚಾಗುತ್ತಿದೆ.

Donate Janashakthi Media

Leave a Reply

Your email address will not be published. Required fields are marked *