ನಾ ದಿವಾಕರ
ಪ್ರಾಥಮಿಕ ಶಿಕ್ಷಣ ತಳಮಟ್ಟದ ಸಮಾಜಕ್ಕೆ ಕೈಗೆಟುಕುವಂತಿದ್ದಾಗ ಮಾತ್ರ ಸಮಾನತೆ ಸಾಧ್ಯ
ಭಾರತದ ಸಂವಿಧಾನ ಆಶಿಸುವ ಸಾಮಾಜಿಕ ನ್ಯಾಯ ಮತ್ತು ಸೋದರತ್ವವನ್ನು ಸಾಧಿಸುವ ಹಾದಿಯಲ್ಲಿ ಮೂಲ ತಳಪಾಯ ಇರುವುದು ಶಿಕ್ಷಣ ವ್ಯವಸ್ಥೆಯಲ್ಲಿ. ಆದರೆ ನವ ಉದಾರವಾದ ಮತ್ತು ಜಾಗತೀಕರಣ ಯುಗದಲ್ಲಿ ಅತ್ಯಂತ ಹೆಚ್ಚು ದಾಳಿಗೊಳಗಾಗುತ್ತಿರುವುದೂ ಇದೇ ಶಿಕ್ಷಣ ವ್ಯವಸ್ಥೆ. ಡಿಜಿಟಲ್ ಯುಗದಲ್ಲಿ ಸಮಾಜದ ಎಲ್ಲ ಸ್ತರಗಳನ್ನೂ ವ್ಯಾಪಿಸಿರುವ ಮಾರುಕಟ್ಟೆ ಬಂಡವಾಳ ಹಾಗೂ ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಗಳಿಗೆ ತಮ್ಮ ಸಾಮ್ರಾಜ್ಯ ವಿಸ್ತರಣೆಗೆ ಸುಭದ್ರ ಅಡಿಪಾಯ ಒದಗಿಸುತ್ತಿರುವುದೂ ಇದೇ ಶಿಕ್ಷಣ ವ್ಯವಸ್ಥೆ. ನವ ಭಾರತದ ಆಳ್ವಿಕೆಯ ಜವಾಬ್ದಾರಿ ಹೊತ್ತಿರುವ ಯಾವುದೇ ಪಕ್ಷಗಳೂ ಸಹ ನವ ಉದಾರವಾದದಿಂದ ಉಂಟಾಗುತ್ತಿರುವ ಅಪಾಯಗಳನ್ನು ತಳಮಟ್ಟದ ಸಾಮಾಜಿಕ ನೆಲೆಯಲ್ಲಿ ನಿಂತು ಪರಾಮರ್ಶಿಸುತ್ತಿಲ್ಲ. ಸಾಮಾಜಿಕ ನ್ಯಾಯ, ಸಮ ಸಮಾಜ ಹಾಗೂ ಬಹುತ್ವದ ನೆಲೆಗಳು ಗಟ್ಟಿಯಾಗಬೇಕಾದರೆ, ಭವಿಷ್ಯದ ಪೀಳಿಗೆಯನ್ನು ರೂಪಿಸುವ ಶಿಕ್ಷಣ ವಲಯ ಪ್ರಾಥಮಿಕ ಸ್ತರದಿಂದಲೇ ಈ ಆಶಯಗಳನ್ನು ಮೈಗೂಡಿಸಿಕೊಳ್ಳಬೇಕಾಗುತ್ತದೆ.
ಸಮಾಜದ ಕೆಳಸ್ತರದಲ್ಲಿರುವ ಬಹುಸಂಖ್ಯಾತ ಜನತೆಗೆ ಸುಸ್ಥಿರ ಬದುಕನ್ನು ರೂಪಿಸುವ ಹಾದಿಯಲ್ಲಿ, ಪ್ರಾಥಮಿಕ ಶಿಕ್ಷಣ ಹಾಗೂ ಆರೋಗ್ಯ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ಅರಿಯಲು ರಾಕೆಟ್ ವಿಜ್ಞಾನದ ಜ್ಞಾನವೇನೂ ಇರಬೇಕಿಲ್ಲ. 75 ವರ್ಷಗಳ ಆಳ್ವಿಕೆಯಲ್ಲಿ ಭಾರತ ಸಾಗಿಬಂದಿರುವ ಹಾದಿಯನ್ನು, ಸಾಗಬೇಕಾಗಿರುವ ದುರ್ಗಮ ಮಾರ್ಗಗಳನ್ನು ಗಮನಿಸಿದರೆ ಇದು ಅರ್ಥವಾಗುತ್ತದೆ. ಆದರೆ ಟ್ರಿಲಿಯನ್ ಡಾಲರ್‌ಗಳ ಕನಸಿನ ಲೋಕದಲ್ಲಿ ವಿಹರಿಸುತ್ತಿರುವ ಭಾರತದ ಆಳುವ ವರ್ಗಗಳಿಗೆ ಈ ಹಾದಿಯಲ್ಲಿನ ಸುಡು ವಾಸ್ತವಗಳು ಸದಾ ನಿಕೃಷ್ಟವಾಗಿಯೇ ಕಾಣುತ್ತವೆ. ಕಾರ್ಪೋರೇಟ್ ಬಂಡವಾಳ ಪ್ರೇರಿತ ಆರ್ಥಿಕತೆಯೇ ಭಾರತದ ಸಾಮಾಜಿಕ-ಆರ್ಥಿಕ ಪ್ರಗತಿಗೆ ಪೂರಕ ಎಂಬ ಹುಸಿ ಪ್ರತಿಪಾದನೆಯೊಂದಿಗೆ ಮುನ್ನುಗ್ಗುತ್ತಿರುವ ಮಾರುಕಟ್ಟೆಯ ಗೂಳಿ ತನ್ನ ಹಾದಿಯಲ್ಲಿ ಎದುರಾಗುವ ಎಲ್ಲ ಸಾಮಾಜಿಕ ವಲಯಗಳನ್ನೂ ಕಬಳಿಸುತ್ತಾ ಕೊನೆಗೆ ಪ್ರಾಥಮಿಕ ಶಿಕ್ಷಣದ ಅಂಗಳದಲ್ಲೂ ತನ್ನ ಸಾಮ್ರಾಜ್ಯದ ಅಡಿಗಲ್ಲನ್ನು ಇಡುತ್ತಿದೆ.
ಖಾಸಗಿ ತೆಕ್ಕೆಯಲ್ಲಿ ಶಿಕ್ಷಣ
ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಉನ್ನತ ಶಿಕ್ಷಣದಲ್ಲಿ ಈಗಾಗಲೇ ತನ್ನ ಮಾರುಕಟ್ಟೆ ಜಗುಲಿಯನ್ನು ಸ್ಥಾಪಿಸಿರುವ ಖಾಸಗಿ ವಲಯ ಈಗ ಪ್ರಾಥಮಿಕ ಶಿಕ್ಷಣದ ನೆಲೆಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು, ತಳಮಟ್ಟದ ಬಹುಸಂಖ್ಯಾತರನ್ನು ಶಿಕ್ಷಣ ವಂಚಿತರನ್ನಾಗಿ ಮಾಡುತ್ತಿದೆ. ಅಕ್ಷರ ಕಲಿಕೆಯ ಮೊದಲ ಹೆಜ್ಜೆಯೆಂದೇ ಪರಿಗಣಿಸಲಾಗುವ ಪ್ರಾಥಮಿಕ ಶಿಕ್ಷಣದ ಮೂಲ ಧ್ಯೇಯ ಮಕ್ಕಳ ಬೌದ್ಧಿಕ ವಿಕಸನ ಮತ್ತು ಸಾಂಸ್ಕೃತಿಕ ಬೆಳವಣಿಗೆ ಆಗಿರಬೇಕು. ಜೀವನ ಮೌಲ್ಯಗಳನ್ನು ಬೋಧಿಸುವುದರೊಂದಿಗೇ ಭವಿಷ್ಯದ ಸಮಾಜಕ್ಕೆ ಪೂರಕವಾದಂತಹ ಅರಿವಿನ ವಾತಾವರಣವನ್ನು ಸೃಷ್ಟಿಸುವುದು ಶಿಕ್ಷಣದ ಮೂಲ ಉದ್ದೇಶ. ಹಾಗಾಗಿಯೇ ಸಮಸ್ತರನ್ನೂ ಸಮಾನವಾಗಿ ಕಾಣುವಂತಹ ಪರಿಸರವನ್ನು ಪ್ರಾಥಮಿಕ ಹಂತದಿಂದಲೇ ಸೃಷ್ಟಿಸುವುದು ಶಿಕ್ಷಣ ವ್ಯವಸ್ಥೆಯ ಆದ್ಯತೆಯಾಗಿರಬೇಕು. ಸಾಮಾಜಿಕ ಅಂತಸ್ತು ಅಥವಾ ಜಾತಿ ಶ್ರೇಣಿಯ ತಾರತಮ್ಯಗಳಿಂದಾಚೆಗೆ ಮಕ್ಕಳಲ್ಲಿ ಭ್ರಾತೃತ್ವದ ಭಾವವನ್ನು ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಜನೆಯ ಮಾರ್ಗಗಳೂ ರೂಪುಗೊಳ್ಳಬೇಕು. ಸರ್ವರನ್ನೂ ಸಮಾನವಾಗಿ ಕಾಣುವ ಮನೋಭಾವವನ್ನು ಮಕ್ಕಳಲ್ಲಿ ಬೆಳೆಸಲು ಸರ್ಕಾರಿ ಶಾಲೆಗಳೇ ಪ್ರಶಸ್ತ ಭೂಮಿಕೆಯಾಗುತ್ತವೆ.
ಆದರೆ ಇತ್ತೀಚೆಗೆ ದೊರೆತಿರುವ ದತ್ತಾಂಶಗಳ ಅನುಸಾರ ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳು ಕ್ರಮೇಣ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿರುವುದು ಆತಂಕಕಾರಿಯಾಗಿದೆ. ಕರ್ನಾಟಕ ಎಂಬ ಹೆಸರು ಪಡೆದು ಐವತ್ತು ವರ್ಷಗಳಾದರೂ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಜಾರಿಗೊಳಿಸಲು ವಿಫಲವಾಗಿರುವ ಸರ್ಕಾರಗಳು ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸುವ ಪ್ರಯತ್ನಗಳನ್ನೂ ಮಾಡದಿರುವುದು, ಗ್ರಾಮೀಣ ಮಕ್ಕಳನ್ನೂ ಖಾಸಗಿ ಶಿಕ್ಷಣದ ಕಡೆಗೆ ಹೋಗುವಂತೆ ಮಾಡುತ್ತಿದೆ. ರಾಜ್ಯದ ಸರ್ಕಾರಿ ಶಾಲೆಗಳ ದಾಖಲಾತಿ ಸಂಖ್ಯೆ 2019-20 ರಲ್ಲಿ 42,89,442 ಇದ್ದುದು 2023-24ರ ವೇಳೆಗೆ 42,90,948 ರಷ್ಟಾಗಿದೆ. ಅಂದರೆ ಕೇವಲ ಒಂದೂವರೆ ಸಾವಿರ ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ. ಇದೇ ಅವಧಿಯಲ್ಲಿ ಖಾಸಗಿ ಶಾಲೆಗಳ ದಾಖಲಾತಿ 45,14,893 ರಿಂದ 46,43,225ಕ್ಕೆ ಹೆಚ್ಚಾಗಿದೆ. 2022-23ಕ್ಕೆ ಹೋಲಿಸಿದರೆ ದಾಖಲಾತಿ ಸಂಖ್ಯೆ 2.5 ಲಕ್ಷದಷ್ಟು ಕುಸಿತ ಕಂಡಿದೆ. ಇದೇ ಅವಧಿಯಲ್ಲಿ ಖಾಸಗಿ ಶಾಲೆಗಳ ದಾಖಲಾತಿ ಸಂಖ್ಯೆ 1.30 ಲಕ್ಷ ಹೆಚ್ಚಾಗಿದೆ. ಕೊರೋನಾ ಆಘಾತದಲ್ಲಿ ಹೆಚ್ಚಾದ ಸರ್ಕಾರಿ ಶಾಲೆಗಳ ದಾಖಲಾತಿ ತದನಂತರ ಮತ್ತೊಮ್ಮೆ ಇಳಿಮುಖವಾಗುತ್ತಿದೆ.( ಪ್ರಜಾವಾಣಿ 24-12-2023)
ಅಂದರೆ ತಳಮಟ್ಟದ ಸಮಾಜದಲ್ಲೂ ಸಹ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಲು ಮುಂದಾಗುತ್ತಿದ್ದಾರೆ. ಬಹುತೇಕ ಖಾಸಗಿ ಶಾಲೆಗಳು ಆಂಗ್ಲಮಾಧ್ಯಮದಲ್ಲಿರುತ್ತವೆ. ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದರೆ ಉದ್ಯೋಗಾವಕಾಶಗಳು ಉತ್ತಮವಾಗಿರುತ್ತವೆ ಎಂಬ ಮಧ್ಯಮ ವರ್ಗಗಳ ಭ್ರಮೆಯೂ ಇಲ್ಲಿ ಎದ್ದು ಕಾಣುತ್ತದೆ. ಒಂದು ರೀತಿಯಲ್ಲಿ ಇದು ವಾಸ್ತವವೂ ಹೌದು. ಡಿಜಿಟಲ್ ಮಾರುಕಟ್ಟೆ ಸೃಷ್ಟಿಸುತ್ತಿರುವ ಕೌಶಲಾಧಾರಿತ ಉದ್ಯೋಗಗಳು ಬಹುಮಟ್ಟಿಗೆ ಆಂಗ್ಲ ಭಾಷಾ ಜ್ಞಾನವನ್ನು ಅಪೇಕ್ಷಿಸುತ್ತವೆ. ಆದರೆ ಆಂಗ್ಲಭಾಷೆಯ ಅರಿವು ಮೂಡಿಸಿಕೊಳ್ಳಲು ಶಿಕ್ಷಣ ಮಾಧ್ಯಮವೇ ಪ್ರಧಾನವಾಗಬೇಕಿಲ್ಲ. ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಪಠ್ಯವನ್ನು ಬೋಧಿಸುವ ಮೂಲಕ ಸರ್ಕಾರಿ ಶಾಲೆಗಳೂ ಸಹ ಒಂದು ಸಂವಹನ ಸಾಧನವಾಗಿ ಆಂಗ್ಲ ಭಾಷೆಯನ್ನು ಬೆಳೆಸಬಹುದು.
ನಿರ್ವಹಣೆಯ ಕೊರತೆಗಳು
ಆದರೆ ಸರ್ಕಾರಗಳು ಈ ನಿಟ್ಟಿನಲ್ಲಿ ಒಂದು ವೈಜ್ಞಾನಿಕ ಶಿಕ್ಷಣ ನೀತಿಯನ್ನೇ ರೂಪಿಸದಿರುವುದು ಸಮಸ್ಯೆಯ ಉಲ್ಬಣಕ್ಕೆ ಕಾರಣವಾಗಿದೆ. ಇತ್ತೀಚಿನ ಮಾಹಿತಿಯ ಅನುಸಾರ ರಾಜ್ಯದಲ್ಲಿ 287 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ ಕಂಡುಬಂದಿದೆ. ರಾಜ್ಯಾದ್ಯಂತ ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ಖಾಸಗಿ ಶಾಲೆಗಳು ನಾಯಿಕೊಡೆಗಳಂತೆ ತಲೆಎತ್ತುತ್ತಿದ್ದು, ಗ್ರಾಮೀಣ ಪ್ರದೇಶಗಳಿಗೆ ವಾಹನ ಸೌಲಭ್ಯ ಒದಗಿಸುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳು ಹಳ್ಳಿಯ ಮಕ್ಕಳನ್ನು, ಪೋಷಕರನ್ನು ಆಕರ್ಷಿಸುತ್ತಿವೆ. ಆದರೆ ತಮ್ಮ ಗ್ರಾಮದಲ್ಲೇ ಇರುವ ಅಥವಾ ಸಮೀಪ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯವನ್ನೂ ಒಳಗೊಂಡಂತೆ ಮೂಲ ಸೌಕರ್ಯಗಳೇ ಇಲ್ಲದಿರುವ ನಿದರ್ಶನಗಳೂ ಹೇರಳವಾಗಿವೆ. ಕೊಠಡಿಗಳ ಕೊರತೆ, ಶಿಕ್ಷಕರ ಕೊರತೆ ಹಾಗೂ ಸಮರ್ಪಕ ಸಂಪನ್ಮೂಲಗಳ ಕೊರತೆಯಿಂದ ಸರ್ಕಾರಿ ಶಾಲೆಗಳು ಕ್ರಮೇಣ ಮಕ್ಕಳನ್ನು ಕಳೆದುಕೊಳ್ಳುತ್ತಿರುವುದು ಕಣ್ಣೆದುರಿನ ವಾಸ್ತವ.
ಪ್ರಾಥಮಿಕ ಶಾಲಾ ಶಿಕ್ಷಣ ಮಕ್ಕಳ ವಾಸಸ್ಥಳದ ಸಮೀಪದಲ್ಲಿರಬೇಕು ಎನ್ನುವುದು ಶಿಕ್ಷಣ ತಜ್ಞರ ಹಾಗೂ ಸಮಾಜಶಾಸ್ತ್ರಜ್ಞರ ಅಭಿಪ್ರಾಯ. ಈ ದೃಷ್ಟಿಯಿಂದಲೇ ರಾಜ್ಯದ ಹಳ್ಳಿಗಳಲ್ಲಿ ಸಮೀಪದಲ್ಲಿರುವ ಹಳ್ಳಿಗಳ ಮಕ್ಕಳಿಗೆ ನೆರವಾಗುವಂತಹ ಶಾಲೆಗಳನ್ನು ತೆರೆದು, ನಿರ್ವಹಿಸುವುದು ರಾಜ್ಯ ಸರ್ಕಾರದ ಆದ್ಯತೆಯಾಗಬೇಕು. ಆದರೆ ಮಕ್ಕಳನ್ನು ಶಾಲೆಗೆ ಕರೆತರುವಂತಹ ಒಂದು ಕಾರ್ಯಯೋಜನೆಯನ್ನೇ ರೂಪಿಸದ ಸರ್ಕಾರ, ಖಾಸಗಿ ಸಂಸ್ಥೆಗಳಿಗೆ ಇತಿಮಿತಿಯಿಲ್ಲದೆ ಪರವಾನಗಿ ನೀಡುವ ಮೂಲಕ ಹಳ್ಳಿಯ ಮಕ್ಕಳನ್ನು ಅಸಹಾಯಕರನ್ನಾಗಿ ಮಾಡುತ್ತಿದೆ. ರಾಜ್ಯಾದ್ಯಂತ ಇರುವ 48 ಸಾವಿರ ಸರ್ಕಾರಿ ಶಾಲೆಗಳ ಪೈಕಿ ಬಹುಪಾಲು ಶಾಲೆಗಳಲ್ಲಿ ಸೌಕರ್ಯಗಳ ಕೊರತೆಯೇ ಮಕ್ಕಳನ್ನು ಕಾಡುತ್ತದೆ. ಶಿಕ್ಷಕರ ಹಾಜರಾತಿ ಶಿಸ್ತು, ಕಲಿಕಾ ಮಾದರಿಗಳ ಉನ್ನತೀಕರಣ, ಆಧುನಿಕ ಪರಿಕರಗಳ ಲಭ್ಯತೆ, ದೂರದ ಹಳ್ಳಿಗಳಿಗೆ ವಾಹನ ಸೌಲಭ್ಯ ಇವೇ ಮುಂತಾದ ಉಪಕ್ರಮಗಳ ಮೂಲಕ ಹೆಚ್ಚು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಆಕರ್ಷಿಸಲು ಸಾಧ್ಯವಿದೆ.
ಖಾಸಗಿ ಶಿಕ್ಷಣ ವಲಯದಲ್ಲಿ ಕೆಲವೇ ಸಂಸ್ಥೆಗಳು ಮಕ್ಕಳಿಗೆ ಆರ್ಥಿಕವಾಗಿ ಕೈಗೆಟುಕುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಯಾವುದೋ ಒಂದು ಧಾರ್ಮಿಕ ಅಥವಾ ಆಧ್ಯಾತ್ಮಿಕ ಕೇಂದ್ರದ ಸುಪರ್ದಿಯಲ್ಲಿ ನಡೆಯುವ ಖಾಸಗಿ ಶಾಲೆಗಳು ಮಕ್ಕಳಿಂದ ಪಡೆಯುವ ಹೆಚ್ಚಿನ ಶುಲ್ಕ ಅಥವಾ ಡೊನೇಷನ್ ಮುಂತಾದ ವೆಚ್ಚಗಳು ನಗರ ಪ್ರದೇಶದ ಮಧ್ಯಮ ವರ್ಗಗಳನ್ನೂ ಗಾಢವಾಗಿ ಕಾಡುವ ಸಮಸ್ಯೆಗಳಾಗಿವೆ. 14 ವರ್ಷದವರೆಗೂ ಎಲ್ಲ ಮಕ್ಕಳಿಗೂ ಕಡ್ಡಾಯ ಉಚಿತ ಶಿಕ್ಷಣ ನೀಡುವ ಸಾಂವಿಧಾನಿಕ ಆಶಯ ಹಾಗೂ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮರೆತಿರುವ ಸರ್ಕಾರಗಳು, ಈ ಖಾಸಗಿ ಸಂಸ್ಥೆಗಳಿಗೆ ನೆರವಾಗಲು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಕೆಲವು ನಿಯಮಗಳನ್ನೂ ಸಮರ್ಪಕವಾಗಿ ಬಳಸಿಕೊಳ್ಳುತ್ತಿರುವುದು ದುರಂತ. ಸರ್ಕಾರಿ ಶಾಲೆಗಳ ಅವಗಣನೆಗೆ ಆರ್ಥಿಕವಾಗಿ ಮುಂದುವರೆಯುತ್ತಿರುವ ಮಧ್ಯಮ ವರ್ಗಗಳ ಆದ್ಯತೆಗಳು ಒಂದು ಕಾರಣವಾದರೆ ಮತ್ತೊಂದೆಡೆ ಸೌಲಭ್ಯಗಳ ಕೊರತೆಯೂ ಕಾರಣವಾಗಿರುವುದು ಸ್ಪಷ್ಟ.
ಇದನ್ನೂ ಓದಿ : 5 ವರ್ಷದಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ 13 ಸಾವಿರ OBC ಮತ್ತು ದಲಿತ ವಿದ್ಯಾರ್ಥಿಗಳು ಡ್ರಾಪ್‌ಔಟ್!
ಗ್ರಾಮೀಣ ಮಕ್ಕಳ ಬವಣೆ
ಇಲ್ಲಿ ಸಂಕಷ್ಟಕ್ಕೆ ಸಿಲುಕಿರುವುದು ಮಧ್ಯಮ ವರ್ಗಗಳಲ್ಲ. ರಾಜ್ಯದ ಮೂಲೆಮೂಲೆಗಳಲ್ಲಿರುವ ಗ್ರಾಮಗಳು, ಕುಗ್ರಾಮಗಳು, ಅರಣ್ಯ ಪ್ರದೇಶದ ನಡುವೆ ಇರುವ ಪ್ರದೇಶಗಳು ಸಮೀಪದಲ್ಲಿ ಸುವ್ಯವಸ್ಥಿತ ಸರ್ಕಾರಿ ಶಾಲೆಗಳಿಲ್ಲದೆ ಸಮಸ್ಯೆ ಎದುರಿಸುತ್ತಿವೆ. ನಗರ ಪ್ರದೇಶಗಳ ಸುತ್ತಲಿನ ಗ್ರಾಮಗಳಲ್ಲೂ ಸಹ ಪೋಷಕರು ಒಂದೆಡೆ ಆಂಗ್ಲ ಮಾಧ್ಯಮದ ವ್ಯಾಮೋಹ ಮತ್ತೊಂದೆಡೆ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆಯ ಕಾರಣ ಸಮೀಪದ ಪಟ್ಟಣಗಳಲ್ಲಿರುವ ಖಾಸಗಿ ಶಾಲೆಗಳಿಗೇ ಮೊರೆ ಹೋಗುತ್ತಾರೆ. ಸರ್ಕಾರಿ ಶಾಲೆಯ ಮಕ್ಕಳು ಇಂದಿಗೂ ಕಿಲೋಮೀಟರ್‌ಗಟ್ಟಲೆ ನಡೆದು ಹೋಗುವ ದೃಶ್ಯವನ್ನು ಸಾಮಾನ್ಯವಾಗಿ ಎಲ್ಲ ಜಿಲ್ಲೆಗಳಲ್ಲೂ ಕಾಣಬಹುದು. ಶೂನ್ಯ ದಾಖಲಾತಿಯಿಂದ ಮುಚ್ಚುವ ಸ್ಥಿತಿಗೆ ಬಂದಿರುವ ನೂರಾರು ಶಾಲೆಗಳನ್ನು ಸಮೀಪದ ಶಾಲೆಯೊಂದಿಗೆ ವಿಲೀನಗೊಳಿಸುವ ಅವೈಜ್ಞಾನಿಕ ನೀತಿಗೂ ಸರ್ಕಾರ ಮುಂದಾಗಿದೆ.
ಆದರೆ ಈ ವಿಲೀನ ಪ್ರಕ್ರಿಯೆಯ ಪರಿಣಾಮ ಶಾಲಾ ವಂಚಿತ ಗ್ರಾಮಗಳ ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ. ತಾವು ವಾಸಿಸುವ ಸ್ಥಳದಿಂದ ಮಕ್ಕಳು ಮತ್ತೊಂದು ಹಳ್ಳಿಗೆ ಅಥವಾ ಪಟ್ಟಣಕ್ಕೆ ನಡೆದೇ ಹೋಗಬೇಕಾಗುತ್ತದೆ. ಸರ್ಕಾರಿ ಶಾಲಾ ಮಕ್ಕಳಿಗೆ ವಾಹನ ಸೌಕರ್ಯ ಒದಗಿಸುವ ಬಗ್ಗೆ ಈವರೆಗೂ ಯಾವುದೇ ಸರ್ಕಾರಗಳೂ ಚಿಂತನೆ ನಡೆಸಿಯೇ ಇಲ್ಲ ಎನ್ನುವುದು ವಾಸ್ತವ. ಸರ್ಕಾರಿ ಶಾಲಾ ಶಿಕ್ಷಣದ ಹೆಚ್ಚಿನ ಅಗತ್ಯತೆ ಇರುವುದು ನಗರ-ಪಟ್ಟಣಗಳಲ್ಲಿರುವ ಕೆಳಮಧ್ಯಮ ವರ್ಗಗಳಿಗೆ, ವಲಸೆ ಕಾರ್ಮಿಕರಿಗೆ, ಗ್ರಾಮೀಣ ವಾಸಿಗಳಿಗೆ ಹಾಗೂ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ. ಬಹುತೇಕವಾಗಿ ದುಡಿಯುವ ವರ್ಗವನ್ನು ಪ್ರತಿನಿಧಿಸುವ ಈ ಜನಸಮುದಾಯಗಳಿಗೆ ಉಚಿತ ಸಾರ್ವತ್ರಿಕ ಶಿಕ್ಷಣವನ್ನು ಒದಗಿಸುವ ಸಾಂವಿಧಾನಿಕ ಜವಾಬ್ದಾರಿಯೂ ಸರ್ಕಾರಗಳ ಮೇಲಿದೆ.
ಮಾರುಕಟ್ಟೆ ತಂತ್ರಗಾರಿಕೆ
ಈ ವರ್ಗಗಳಲ್ಲೂ ಕಾಣಬಹುದಾದ ಆಂಗ್ಲ ಮಾಧ್ಯಮದ ವ್ಯಾಮೋಹವನ್ನು ಬದಿಗಿಟ್ಟು ನೋಡಿದಾಗಲೂ ಬಹುಪಾಲು ಪೋಷಕರು ಉತ್ತಮ ಬೋಧನೆ, ಆಧುನಿಕ ಕಲಿಕಾ ಮಾದರಿಗಳು ಹಾಗೂ ಇತರ ಮೂಲ ಸೌಕರ್ಯಗಳನ್ನು ಅಪೇಕ್ಷಿಸುತ್ತಲೇ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ಮೂಲಕ ತಮ್ಮ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂಬ ಭ್ರಮೆಯೂ ದಟ್ಟವಾಗಿದೆ. ಈ ಭ್ರಮಾಧೀನತೆಯೇ ಕ್ರಮೇಣವಾಗಿ ಕಾಲೇಜು ಶಿಕ್ಷಣದವರೆಗೂ ವಿಸ್ತರಿಸಿ ಖಾಸಗಿ ಟ್ಯೂಷನ್, ಕೋಚಿಂಗ್ ಸೆಂಟರ್ ಮುಂತಾದ ಶೋಷಣೆಯ ಉದ್ಯಮಗಳಿಗೂ ಬಂಡವಾಳವಾಗುತ್ತದೆ. ಆದರೆ ನವ ಉದಾರವಾದದ ಆರ್ಥಿಕ ನೀತಿಗಳು ಈ ಭ್ರಮಾಧೀನ ಜನಸಂಖ್ಯೆಯತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ಮಾರುಕಟ್ಟೆಗೆ ಬೇಕಾದ ಉದ್ಯೋಗ-ಕೌಶಲಗಳನ್ನು ಶಿಕ್ಷಣ ವಲಯದಿಂದ ಆಯ್ಕೆ ಮಾಡುವಾಗ ಆಧುನಿಕ ಮಾರುಕಟ್ಟೆಯ ಉದ್ಯಮಪತಿಗಳು ಈ ಖಾಸಗಿ ಸಂಸ್ಥೆಗಳತ್ತಲೇ ಹೊರಳುತ್ತವೆ. ಹಾಗಾಗಿಯೇ ಕ್ಯಾಂಪಸ್ ಸೆಲೆಕ್ಷನ್ ಎಂಬ ಮಾರುಕಟ್ಟೆ ತಂತ್ರಗಾರಿಕೆ ಖಾಸಗಿ ಶೈಕ್ಷಣಿಕ ಸಂಸ್ಥೆಗಳ ಸಂಪತ್ತಿನ ವೃದ್ಧಿಗೆ ಪೂರಕವಾಗಿ ಪರಿಣಮಿಸಿದೆ.
ಇರುವ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಸರ್ಕಾರಗಳು ಸಮರ್ಪಕವಾಗಿ ಅನುದಾನಗಳನ್ನೂ ಪೂರೈಸದಿರುವುದು ಆಡಳಿತ ವ್ಯವಸ್ಥೆಯ ಬೇಜವಾಬ್ದಾರಿತನವನ್ನು ತೋರಿಸುತ್ತದೆ. ಇಡೀ ಶಿಕ್ಷಣ ವ್ಯವಸ್ಥೆಯ ರಾಷ್ಟ್ರೀಕರಣ ಮಾಡುವ ಆಲೋಚನೆಯ ಸಣ್ಣ ಎಳೆಯನ್ನೂ ಕಾಣಲಾಗದ ನವ ಉದಾರವಾದದ ಬಂಡವಾಳಶಾಹಿ ಆಳ್ವಿಕೆಯಲ್ಲಿ, ಈ ಆರ್ಥಿಕತೆಯಿಂದಲೇ ದಿನೇದಿನೇ ಬಡತನದ ಬೇಗೆಗೆ ದೂಡಲ್ಪಡುತ್ತಿರುವ ಅಸಂಖ್ಯಾತ ಜನತೆಗೆ ಅತ್ಯವಶ್ಯವಾದ ಉಚಿತ ಶಿಕ್ಷಣವನ್ನು ಒದಗಿಸುವ ಸರ್ಕಾರಿ ಶಾಲೆಗಳ ಸುಧಾರಣೆಗಾದರೂ ಸರ್ಕಾರಗಳು ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ಕನ್ನಡ ಮಾಧ್ಯಮವನ್ನು ಜಾರಿಗೊಳಿಸುವಲ್ಲಿ ಆಡಳಿತ ವ್ಯವಸ್ಥೆಯಲ್ಲಿ ಕಾಣಬಹುದಾದ ನಿರಾಸಕ್ತಿಯನ್ನೇ ಸರ್ಕಾರಿ ಶಾಲೆಗಳ ಪುನರುಜ್ಜೀವನದ ವಿಷಯದಲ್ಲೂ ಕಾಣಬಹುದು. ಈ ನಿರಾಸಕ್ತಿಯೇ ನಿಷ್ಕ್ರಿಯತೆಗೆ ಕಾರಣವಾಗಿ ಅಂತಿಮವಾಗಿ ಸರ್ಕಾರಿ ಶಾಲೆಗಳು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗುತ್ತವೆ.
ಸಾಮಾಜಿಕ ನ್ಯಾಯ ಹಾಗೂ ಸಾಂವಿಧಾನಿಕ ಆಶಯಗಳನ್ನು ಹೆಚ್ಚು ಗೌರವಿಸುವ ಹಾಲಿ ಕಾಂಗ್ರೆಸ್ ಸರ್ಕಾರವಾದರೂ ಈ ನಿಟ್ಟಿನಲ್ಲಿ ದಿಟ್ಟ ಕ್ರಮಗಳನ್ನು ಕೈಗೊಳ್ಳುವ ಮೂಲಕ ರಾಜ್ಯದ ಸರ್ಕಾರಿ ಶಾಲೆಗಳಿಗೆ ಕಾಯಕಲ್ಪ ಒದಗಿಸಬೇಕಿದೆ. ತನ್ಮೂಲಕ ಸರ್ಕಾರಿ ಶಾಲೆಗಳ ದಾಖಲಾತಿ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವೈಜ್ಞಾನಿಕ ರೂಪುರೇಷೆಗಳನ್ನು ಸಿದ್ಧಪಡಿಸಬೇಕಿದೆ. ಸರ್ಕಾರಿ ಶಾಲೆಗಳ ಬೋಧಕರಲ್ಲಿ ಶೈಕ್ಷಣಿಕ ಶಿಸ್ತು ಹಾಗೂ ಅದರೊಟ್ಟಿಗೇ ಸಂವೇದನಾಶೀಲತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸೂಕ್ತ ತರಬೇತಿ ಶಿಬಿರಗಳನ್ನು ಆಯೋಜಿಸುವುದು ಸರ್ಕಾರದ ಪ್ರಥಮ ಆದ್ಯತೆಯಾಗಬೇಕಿದೆ. ಇದಕ್ಕೂ ಮುನ್ನ ಬೋಧಕ ಸಿಬ್ಬಂದಿನ ವೇತನ ಮತ್ತಿತರ ಸೌಲಭ್ಯಗಳನ್ನು ಸಮರ್ಪಕವಾಗಿ ಉತ್ತಮಪಡಿಸುವ ಪ್ರಯತ್ನಗಳೂ ನಡೆಯಬೇಕಿದೆ. ಇದು ಒಂದು ಸಂವಿಧಾನಬದ್ಧ ಸರ್ಕಾರದ ನೈತಿಕ ಜವಾಬ್ದಾರಿ ಎನ್ನುವುದನ್ನು ಸರ್ಕಾರ ಮನಗಾಣಬೇಕಿದೆ.
ಈ ವಿಡಿಯೋ ನೋಡಿ : ಖಾಸಗಿ ಶಾಲೆಗಳು ಪಡೆಯುತ್ತಿರುವುದು ಶುಲ್ಕವೋ! ವಸೂಲಿಯೋ!!? Janashakthi Media