ರಾಷ್ಟ್ರಪತಿಗಳ ಉಲ್ಲೇಖ ಎಂಬೊಂದು ಅಸಂಬದ್ಧ ನಾಟಕರಂಗ

ನಾವು ಈ ಅಸಂಬದ್ಧ ನಾಟಕರಂಗದಲ್ಲಿ ಸಿಕ್ಕ್ಕಿಹಾಕಿಕೊಂಡಿದ್ದೇವೆ- ಸುಪ್ರಿಂಕೋರ್ಟ್ ರಾಷ್ಟ್ರಪತಿಗಳ ಪ್ರಶ್ನೆಗಳಿಗೆ ಸ್ಪಂದಿಸಬಹುದು ಅಥವಾ ಸ್ಪಂದಿಸದೇ ಇರಬಹುದು – ಮತ್ತು ಒಂದು ವೇಳೆ ಸ್ಪಂದಿಸಿದರೂ, ಅದಕ್ಕೆ ಬದ್ಧವಾಗಿರಬೇಕಿಲ್ಲ. ನಮ್ಮ ಸಂವಿಧಾನವು ಇಂದು ತನ್ನ ನೆಲೆಗಟ್ಟಾಗಿರುವ ಆದರ್ಶಗಳ ಮೇಲಿನ ಅತಿಕ್ರಮಣಗಳ ವಿರುದ್ಧ ಭದ್ರಕೋಟೆಯಾಗಿ ನಿಂತಿದೆ ಎಂಬದು ಮತ್ತೊಮ್ಮೆ ಸ್ವಯಂವೇದ್ಯಗೊಂಡಿದೆ. ಈ ಉಲ್ಲೇಖದ ನಿಜವಾದ ಉದ್ದೇಶ “ಎಎಸ್‌ಎಪಿ” ಅಂದರೆ “ಸಾಧ್ಯವಾದಷ್ಟು ಬೇಗ” ಎಂಬುದನ್ನು ಕುರಿತಂತೆ ಸಾಂವಿಧಾನಿಕ ವ್ಯಾಖ್ಯಾನವನ್ನು ಪಡೆಯುವುದು ಅಲ್ಲ, ಬದಲಾಗಿ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಶಾಸಕಾಂಗಗಳ ಸಾರ್ವಭೌಮ ಅಧಿಕಾರವನ್ನು ದುರ್ಬಲಗೊಳಿಸುವುದು. 

-ಕೃಪೆ: ಪೀಪಲ್ಸ್ ಡೆಮಾಕ್ರಸಿ ವಾರಪತ್ರಿಕೆ

ದಿಲ್ಲಿಯಲ್ಲೀಗ ಒಂದು ಅಗ್ಗದ ರಾಜಕೀಯ ನಾಟಕ ಅನಾವರಣಗೊಳ್ಳುತ್ತಿದೆ. ಸುಪ್ರಿಂ ಕೋರ್ಟಿನ ಇತ್ತೀಚಿನ ನಿರ್ಧಾರವನ್ನು ಈಗ ಅದಕ್ಕೆ ಸ್ಪಷ್ಟೀಕರಣ ಕೇಳಿ ಉಲ್ಲೇಖಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಆದೇಶದ ಮೇರೆಗೆ ಕಳಿಸಿರುವ ಈ ಉಲ್ಲೇಖ ಒಂದು ಅಸಂಬದ್ಧ ನಾಟಕರಂಗವಲ್ಲದೆ ಇನ್ನೇನೂ ಅಲ್ಲ. ರಾಜ್ಯ ಶಾಸಕಾಂಗವು ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡುವ ಅಥವಾ ಹಿಂದಿರುಗಿಸುವ ಸಮಯಪಟ್ಟಿಯ ಕುರಿತು ಸುಪ್ರಿಂ ಕೋರ್ಟ್ ನೀಡಿರುವ ಆದೇಶಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣವನ್ನು ಕೋರಲಾಗಿದೆ. ನ್ಯಾಯಾಲಯದ ಮೂಲ ಆದೇಶವು ಬೇಕಾಬಿಟ್ಟಿಯಾಗಿರಲಿಲ್ಲ; ಅದು ಹಲವಾರು ತೀರ್ಪುಗಳಿಂದ ರೂಪುಗೊಂಡ ದೀರ್ಘ-ಕಾಲದಿಂದ ಸ್ಥಾಪಿತವಾದ ನ್ಯಾಯತತ್ವಗಳ ಸಾಲಿನಲ್ಲಿ ನೆಲೆಗೊಂಡಿರುವಂತದ್ದು.

ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರ ನಡವಳಿಕೆಯ ಕುರಿತ ಆದೇಶಕ್ಕೆ ಸಂಬಂಧಿಸಿದಂತೆ ಹದಿನಾಲ್ಕು ಪ್ರಶ್ನೆಗಳನ್ನು ಎತ್ತುವ ಮೂಲಕ ಸಂವಿಧಾನದ 143(1)ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಗಳು ಸುಪ್ರೀಂ ಕೋರ್ಟಿಗೆ ಉಲ್ಲೇಖ ಕಳಿಸಿದ್ದಾರೆ. ತಮಿಳುನಾಡು ವಿಧಾನಸಭೆ ಅಂಗೀಕರಿಸಿದ ಹದಿನಾಲ್ಕು ಮಸೂದೆಗಳಿಗೆ ಒಪ್ಪಿಗೆ ನೀಡುವಲ್ಲಿ ರಾಜ್ಯದ ರಾಜ್ಯಪಾಲರ ಅತಿಯಾದ ವಿಳಂಬವನ್ನು ಉಲ್ಲೇಖಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಸಂವಿಧಾನ ರಚನೆಕಾರರು ಒಂದು ಮಸೂದೆಯನ್ನು ರಾಜ್ಯಪಾಲರ ಒಪ್ಪಿಗೆಗೆ ಅಥವಾ ಅದನ್ನು ಹಿಂದೆ ಕಳಿಸಲು ನಿರೀಕ್ಷಿತ ಸಮಯಾವಧಿಯನ್ನು ವರ್ಣಿಸಲು “ಸಾಧ್ಯವಾದಷ್ಟು ಬೇಗ” ಎಂಬ ಪದಗುಚ್ಛವನ್ನು ಬಳಸಿರುವುದು ಉದ್ದೇಶಪೂರ್ವಕವಾದ ವಿನಯದಿಂದಲೇ ಹೊರತು, ಅನಿರ್ದಿಷ್ಟ ಎಂಬರ್ಥದಲ್ಲಿ ಅಲ್ಲ.

ಇದನ್ನೂ ಓದಿ: ಅತಿದೊಡ್ಡ ಸಂಚಾರ ಉಲ್ಲಂಘನೆ ಮಾಡುವವರು ದ್ವಿ ಚಕ್ರ ವಾಹನ ಸವಾರರಲ್ಲ ; ಸರ್ಕಾರಗಳು ಮತ್ತು ಭ್ರಷ್ಟ ರಸ್ತೆ ನಿರ್ಮಾಣದ ಕಂಪನಿಗಳು

ಕೆಲವು ಇತರ ಸಂವಿಧಾನಗಳಿಗಿಂತ ಭಿನ್ನವಾಗಿ, ನಮ್ಮ ಸಂವಿಧಾನವು ಕಾನೂನನ್ನು ಪ್ರಶ್ನಿಸಲು ರಾಷ್ಟ್ರಾಧ್ಯಕ್ಷರ ಉಲ್ಲೇಖ ಅಗತ್ಯ ಎಂದು ವಿಧಿಸುವುದಿಲ್ಲ. ಯಾವುದೇ ನಾಗರಿಕರು ನ್ಯಾಯಾಲಯಗಳನ್ನು – ಕೆಳ ನ್ಯಾಯಾಂಗದಿಂದ ಸುಪ್ರೀಂ ಕೋರ್ಟ್‍ ವರೆಗೆ- ಸಂಪರ್ಕಿಸಬಹುದು ನ್ಯಾಯಾಲಯದ ಅಭಿಪ್ರಾಯವನ್ನು ಪಡೆಯುವ ನಿಬಂಧನೆಯನ್ನು ಸ್ಪಷ್ಟವಾಗಿ ನಿರೂಪಿಸಲಾಗಿದೆ, ಮತ್ತು ಅಂತಹ ಅಭಿಪ್ರಾಯವನ್ನು ಈ ನಿಬಂಧನೆಯ ಅಡಿಯಲ್ಲಿ ಕೋರಿದಾಗಲೂ ಸಹ, ಅದಕ್ಕೆ ಬಾಧ್ಯವಾಗಿ ಇರಬೇಕಿಲ್ಲ.

ಹೀಗಿರುವಾಗ, ಈ ರಾಜಕೀಯ ಪ್ರದರ್ಶನದಲ್ಲಿ ತೊಡಗಿಸಿಕೊಳ್ಳುವ ಕೇಂದ್ರದ ನಿರ್ಧಾರಕ್ಕೆ ಕಾರಣಗಳು ಬೇರೆಯೇ ಇವೆ. ಪ್ರಸ್ತುತ ಮೋದಿ ಸರ್ಕಾರದ ಸಂದರ್ಭದಲ್ಲಿ, ನ್ಯಾಯಾಲಯದ ನಿರ್ಧಾರ ಅದಕ್ಕೆ ಭಾರೀ ಇರುಸುಮುರಿಸು ಉಂಟುಮಾಡಿದೆ ಎಂದು ಭಾವಿಸದಿದ್ದರೂ, ಅದನ್ನು ಒಪ್ಪಿಕೊಳ್ಳುವಲ್ಲಿ ಹಿಂಜರಿಕೆಯಂತೂ ಇದೆ ಎಂದು ಊಹಿಸಿಕೊಳ್ಳಬಹುದು. ಇದು, ಒಂದು ಬಿಜೆಪಿಯೇತರ ನೇತೃತ್ವದ ರಾಜ್ಯ ವಿಧಾನಸಭೆ ತನ್ನ ಶಾಸಕಾಂಗ ಅಧಿಕಾರವನ್ನು ಮುಕ್ತವಾಗಿ ಚಲಾಯಿಸುವುದಕ್ಕೆ ಅದರ ರಾಜಕೀಯ ವಿರೋಧದಿಂದ ಹೊಮ್ಮಿ ಬಂದಿದೆ ಎನ್ನಬಹುದೇನೋ.

ತಮಿಳುನಾಡು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ನಂತರ, ಯಾವುದೇ ಗದ್ದಲ ಏಳಲಿಲ್ಲ, ರಾಜ್ಯಪಾಲರ ಮೌನ ಎದ್ದು ಕಾಣುವಂತಿತ್ತು. ಆದರೂ, ಸದಾ ಕುದಿಯುತ್ತಿರುವ ಉಪರಾಷ್ಟ್ರಪತಿ ಜಗದೀಪ್ ಧಂಕರ್ ಒಂದು ರಾಜಕೀಯ ಹಗ್ಗ ಜಗ್ಗಾಟವನ್ನು ಪ್ರಚೋದಿಸಿದರು. ಈ ತೀರ್ಪನ್ನು ಉಲ್ಲೇಖಿಸುತ್ತ ಸುಪ್ರೀಂ ಕೋರ್ಟ್ “ಸೂಪರ್ ಪಾರ್ಲಿಮೆಂಟ್” ಆಗಿ ಬದಲಾಗಿದೆ ಎಂಬ ಒಂದು ಬೀಸು ಹೇಳಿಕೆ ನೀಡಿದರು. ಈ ನಡುವೆ, ರಾಜ್ಯಪಾಲ ರವಿ ಏನೂ ಸಂಭವಿಸಿಯೇ ಇಲ್ಲವೆಂಬಂತೆ ವರ್ತಿಸುತ್ತಿದರು. ಹಲವಾರು ರಾಜ್ಯ ವಿಶ್ವವಿದ್ಯಾಲಯಗಳ ಕುಲಪತಿಯ ಪಾತ್ರದಿಂದ ಅವರನ್ನು ತೆಗೆದುಹಾಕಿದ ನಂತರವೂ, ಅವರು ಒಂದು ಸುಂದರವಾದ ಗಿರಿಧಾಮದಲ್ಲಿ ಅವುಗಳ ಕುಲಪತಿಗಳ ಸಭೆಯನ್ನು ಕರೆದರು.

ತೀರ್ಪಿನ ಬಗ್ಗೆ ಅತೃಪ್ತಿಯಿದ್ದಲ್ಲಿ ಹಿಡಿಯುವ ಸಾಮಾನ್ಯ ಕಾನೂನು ಮಾರ್ಗವೆಂದರೆ ಒಂದು ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸುವುದು – ಏಕೆಂದರೆ ಸುಪ್ರೀಂ ಕೋರ್ಟ್ ನಿರ್ಧಾರವನ್ನು ಮೀರಿ ಯಾವುದೇ ಮೇಲ್ಮನವಿಗಳಿಲ್ಲ. ಅಪರೂಪದ ಸಂದರ್ಭಗಳಲ್ಲಿ, ಕ್ಯುರೇಟಿವ್ ಅರ್ಜಿಯನ್ನು ಸಹ ಸಲ್ಲಿಸಬಹುದು. ಇನ್ನೊಂದು ಆಯ್ಕೆಯೆಂದರೆ, ತೀರ್ಪಿನ ಪರಿಣಾಮವನ್ನು ರದ್ದುಗೊಳಿಸಲು ಸಂಸತ್ತಿನಲ್ಲಿ ಶಾಸನವನ್ನು ತರುವುದು – ಚುನಾವಣಾ ಆಯುಕ್ತರ ನೇಮಕಕ್ಕೆ ಶೋಧನಾ ಸಮಿತಿಯ ಸಂಯೋಜನೆಗೆ ಸಂಬಂಧಪಟ್ಟಂತೆ ಈ ಸರ್ಕಾರ ಮಾಡಿದಂತೆ. ಆದರೆ ಈ ಯಾವುದೇ ಮಾರ್ಗಗಳನ್ನು ಅನುಸರಿಸಲಿಲ್ಲ. ಸರ್ಕಾರವು ಇಂತಹ ವಿಷಯಗಳಲ್ಲಿ ಸಾಂವಿಧಾನಿಕ ಅಧಿಕಾರ ಹೊಂದಿರುವ ಅಟಾರ್ನಿ ಜನರಲ್‌ರೊಂದಿಗೆ ಸಮಾಲೋಚನೆ ಕೂಡ ನಡೆಸಲಿಲ್ಲ.

ಇಲ್ಲಿ ಯಾವುದೇ ಗೊಂದಲ ಬೇಡ. 74 ನೇ ವಿಧಿಗೆ 42 ನೇ ತಿದ್ದುಪಡಿಯ ನಂತರ, ರಾಷ್ಟ್ರಪತಿಗಳು ಸಾಂವಿಧಾನಿಕವಾಗಿ ಮಂತ್ರಿ ಮಂಡಲದ ಸಲಹೆಯಂತೆ ಕಾರ್ಯನಿರ್ವಹಿಸಲು ಬದ್ಧರಾಗಿದ್ದಾರೆ. ಈ ಪ್ರಸ್ತುತ ರಾಷ್ಟ್ರಪತಿ ಉಲ್ಲೇಖವು ರಾಜಕೀಯ ಸಂದೇಶಕ್ಕಿಂತ ಹೆಚ್ಚೇನೂ ಅಲ್ಲ – “ಸಾಧ್ಯವಾದಷ್ಟು ಬೇಗ” ಎಂದರೆ ಒಂದು ನಿರೂಪಿತ ಸಮಯಮಿತಿ ಎಂಬ ಸುಪ್ರೀಂ ಕೋರ್ಟಿನ ವ್ಯಾಖ್ಯಾನವನ್ನು ಸರ್ಕಾರವು ಒಪ್ಪಿಕೊಳ್ಳುವುದಿಲ್ಲ ಎಂಬ ಸಾಂಕೇತಿಕ ಪ್ರತಿಪಾದನೆಯಾಗಿದೆ. ಈ ನಿಲುವು ಸ್ಥಾಪಿತ ನ್ಯಾಯತತ್ವಕ್ಕೆ ತದ್ವಿರುದ್ಧವಾಗಿದೆ; ವಿಶೇಷವಾಗಿ, ಒಂದು ಮೈಲಿಗಲ್ಲಿತೀರ್ಪೆನಿಸಿರುವ1974ರ ಶಂಶೇರ್‌ಸಸಿಂಗ್ ಪ್ರಕರಣದ ತೀರ್ಪಿನಲ್ಲಿ ಹೇಳಿದಂತೆ ರಾಜ್ಯಪಾಲರುಗಳು ಚುನಾಯಿತ ರಾಜ್ಯ ಸಚಿವ ಸಂಪುಟದ ಸಲಹೆಯ ಮೇರೆಗೆ ಕಾರ್ಯನಿರ್ವಹಿಸಬೇಕು, ಅವರು ಯು.ಕೆ.ಯ ಚಕ್ರಾಧಿಪತಿಗಳು ಅಥವಾ ಅಮೆರಿಕದ ಅಧ್ಯಕ್ಷರುಗಳಂತೆ ಸ್ವತಂತ್ರ ಕಾರ್ಯಭಾರಿ ಅಲ್ಲ.

ಹೀಗಾಗಿ, ನಾವು ಈ ಅಸಂಬದ್ಧ ನಾಟಕರಂಗದಲ್ಲಿ ಸಿಕ್ಕ್ಕಿಹಾಕಿಕೊಂಡಿದ್ದೇವೆ-ಸುಪ್ರಿಂಕೋರ್ಟ್ ರಾಷ್ಟ್ರಪತಿಗಳ ಪ್ರಶ್ನೆಗಳಿಗೆ ಸ್ಪಂದಿಸಬಹುದು ಅಥವಾ ಸ್ಪಂದಿಸದೇ ಇರಬಹುದು – ಮತ್ತು ಒಂದು ವೇಳೆ ಸ್ಪಂದಿಸಿದರೂ, ಅದಕ್ಕೆ ಬದ್ಧವಾಗಿರಬೇಕಿಲ್ಲ.

ಇದನ್ನೂ ನೋಡಿ: ಆರೋಗ್ಯ ಹಕ್ಕು – ಸರಣಿ ಕಾರ್ಯಕ್ರಮ| ಅಲ್ಮಾ-ಅಟಾ ಘೋಷಣೆ ಏನು? ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಲವರ್ಧನೆ ಸಂಚಿಕೆ 03

ಮೋದಿ ಸರ್ಕಾರದ ಈ ಭವ್ಯ ಪ್ರದರ್ಶನ, ಮಂದವಾದ ವಿಪರೀತ ನಡವಳಿಕೆಯಂತೆ ತೋರುತ್ತದೆಯಾದರೂ, ವಿಶೇಷವಾಗಿ ಅದು ಪ್ರಸ್ತುತ ಎದುರಿಸುತ್ತಿರುವ ಸವಾಲುಗಳ ಬೆಳಕಿನಲ್ಲಿ ಬಹಳಷ್ಟು ಆಳವಾದದ್ದನ್ನು ತಿಳಿಯಪಡಿಸುತ್ತದೆ. ಆದರೆ ಇದು ಕೇವಲ ರಾಜಕೀಯ ನಾಟಕಪ್ರದರ್ಶನ ಎಂದಷ್ಟೇ ಭಾವಿಸುವುದು ಮೊದ್ದುತನವಾಗುತ್ತದೆ. ಇದು ಸೈದ್ಧಾಂತಿಕವಾಗಿ ಹಿಂದುತ್ವ-ಚಾಲಿತ, ಭಾರತೀಯ ಸಂವಿಧಾನದ ಅಡಿಗಲ್ಲಾಗಿರುವ ಚೇತನವನ್ನು ಮತ್ತು ಏರ್ಪಾಡುಗಳನ್ನು ತಿರಸ್ಕರಿಸುವ ಒಂದು ಕಣ್ಣೋಟದಿಂದ ಚಾಲಿತವಾದ ಸರಕಾರ. ಆರ್‌ಎಸ್‌ಎಸ್, ಅದರ ಪ್ರಧಾನ ಸಿದ್ಧಾಂತಿ ಎಂ.ಎಸ್. ಗೋಲ್ವಾಲ್ಕರ್, ಒಕ್ಕೂಟ ತತ್ವವನ್ನು ಅದರ ನಿಜವಾದ ಅರ್ಥದಲ್ಲಿ ಎಂದಿಗೂ ಒಪ್ಪಿಕೊಂಡಿಲ್ಲ. ಅವರು ಸದಾ ಸಣ್ಣ ರಾಜ್ಯಗಳು ಮತ್ತು ಕೇಂದ್ರೀಕೃತ ಏಕಘಟಕ ಸರ್ಕಾರವನ್ನು ಪ್ರತಿಪಾದಿಸುತ್ತಿದ್ದರು.

ನಮ್ಮ ಸಂವಿಧಾನವು ಇಂದು ತನ್ನ ನೆಲೆಗಟ್ಟಾಗಿರುವ ಆದರ್ಶಗಳ ಮೇಲಿನ ಅತಿಕ್ರಮಣಗಳ ವಿರುದ್ಧ ಭದ್ರಕೋಟೆಯಾಗಿ ನಿಂತಿದೆ ಎಂಬದನ್ನು, ಸಾರರೂಪದಲ್ಲಿ ಒಂದು ಅಸಂಬದ್ಧ ನಾಟಕವೇ ಆಗಿರುವ ಈ ಘಟನೆಯ ಮೂಲಕ ಮತ್ತೊಮ್ಮೆ ಸ್ವಯಂವೇದ್ಯಗೊಳಿಸಿದೆ. ನಿಜವಾದ ಉದ್ದೇಶ “ಎಎಸ್‌ಎಪಿ” ಅಂದರೆ “ಸಾಧ್ಯವಾದಷ್ಟು ಬೇಗ” ಎಂಬುದನ್ನು ಕುರಿತಂತೆ ಸಾಂವಿಧಾನಿಕ ವ್ಯಾಖ್ಯಾನವನ್ನು ಪಡೆಯುವುದು ಅಲ್ಲ, ಬದಲಾಗಿ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಶಾಸಕಾಂಗಗಳ ಸಾರ್ವಭೌಮ ಅಧಿಕಾರವನ್ನು ದುರ್ಬಲಗೊಳಿಸುವುದು.

 

‘ರಾಜ್ಯಪಾಲರುಗಳಿಗೆ ಒಂದು ಗಡುವು

ಬೇಕೆಂದು ನೀವೇಕೆ ಭಾವಿಸುತ್ತೀರಿ?ʼ

 

ವ್ಯಂಗ್ಯಚಿತ್ರ: ಸತೀಶಕುಮಾರ್,

ಸೌತ್‍ ಫಸ್ಟ್

Donate Janashakthi Media

Leave a Reply

Your email address will not be published. Required fields are marked *