ಶ್ರಮಿಕ ವರ್ಗದ ಆದ್ಯತೆ ಆಯ್ಕೆ ಹಾಗೂ ಅನಿವಾರ್ಯತೆಗಳು

ನಾ ದಿವಾಕರ

ವರ್ಗ ಪ್ರಜ್ಞೆಯಿಲ್ಲದ ಸಾಮಾಜಿಕ ನ್ಯಾಯದ ಹೋರಾಟಗಳು ಮರುವಿಮರ್ಶೆಗೊಳಗಾಗಬೇಕಿದೆ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಸರ್ಕಾರವನ್ನು ಚುನಾಯಿಸುವ ಸಂದರ್ಭ ಎದುರಾದಾಗ ಎರಡು ಮಜಲುಗಳು ಕಂಡುಬರುತ್ತವೆ. ಮೊದಲನೆಯದು ಬಂಡವಾಳಶಾಹಿ ಆರ್ಥಿಕತೆಯನ್ನೇ ಪೋಷಿಸುವ ಆಳುವ ವರ್ಗಗಳು ಪಕ್ಷಾತೀತವಾಗಿ ಅನುಮೋದಿಸುವ ಅಭಿವೃದ್ಧಿಯ ಮಾರುಕಟ್ಟೆ ನೀತಿ ಮತ್ತು ಬಂಡವಾಳಿಗರ ಹಿತಾಸಕ್ತಿಯನ್ನು ಕಾಪಾಡಲು ಅಗತ್ಯವಾದ ಆಡಳಿತ-ಆರ್ಥಿಕ ನೀತಿಗಳು. ಎರಡನೆಯದು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಹಾಗೂ ಸಾಮಾಜಿಕ-ಸಾಂಸ್ಕೃತಿಕ ಸಾಮರಸ್ಯಕ್ಕೆ ಬೆವರಿನ ದುಡಿಮೆಯ ಮೂಲಕ ಕೊಡುಗೆ ನೀಡುವ ಶ್ರಮಿಕ ವರ್ಗಗಳ ಜೀವನ ಹಾಗೂ ಜೀವನೋಪಾಯವನ್ನು ಉತ್ತಮಗೊಳಿಸುವ ನೀತಿಗಳು. ಬಂಡವಾಳಶಾಹಿ ಆರ್ಥಿಕತೆಯಲ್ಲಿ ಈ ಎರಡನೆಯ ವರ್ಗವನ್ನು ಸಂತೃಪ್ತಿಗೊಳಿಸುವಂತಹ ಕೆಲವು ಯೋಜನೆಗಳನ್ನು, ಸೌಲಭ್ಯಗಳನ್ನು ಒದಗಿಸುವುದರ ಮೂಲಕ, ಬಂಡವಾಳಶಾಹಿ ಆರ್ಥಿಕತೆಯು ಸೃಷ್ಟಿಸುವಂತಹ ಅಸಮಾನತೆ, ಶೋಷಣೆ ಮತ್ತು ದಬ್ಬಾಳಿಕೆಗಳ ವಿರುದ್ಧ ಯಾವುದೇ ಪ್ರತಿರೋಧಗಳು ಬಹಿರಂಗವಾಗಿ ಸ್ಫೋಟಿಸದಂತೆ ಎಚ್ಚರವಹಿಸಲಾಗುತ್ತದೆ. ಚುನಾವಣೆಯ ಸಂದರ್ಭದಲ್ಲಿ ಕೇಳಿಬರುವ ಉಚಿತಗಳ ಮಹಾಪೂರವನ್ನು ಈ ದೃಷ್ಟಿಯಿಂದಲೇ ನೋಡಬೇಕಾಗುತ್ತದೆ.

ಬಂಡವಾಳಶಾಹಿಯು ಸದಾ ಪ್ರೋತ್ಸಾಹಿಸುವ ಕಲ್ಯಾಣ ಪ್ರಭುತ್ವದ ಪರಿಕಲ್ಪನೆಯೂ ಸಹ ಸಾಮಾಜಿಕವಾಗಿ ಹಿಂದುಳಿಯುವ, ಆರ್ಥಿಕವಾಗಿ ದುರ್ಬಲರಾಗಿರುವ ಹಾಗೂ ಮಾರುಕಟ್ಟೆ ಸೃಷ್ಟಿಸುವ ಅವಕಾಶಗಳಿಂದ ವಂಚಿತರಾಗುವ ತಳಮಟ್ಟದ ಜನಸಮುದಾಯಗಳನ್ನು ಸಂತೃಪ್ತಿಗೊಳಿಸುವ ಕಾರ್ಯಸೂಚಿಯ ಅಡಿಯಲ್ಲೇ ರೂಪುಗೊಳ್ಳುತ್ತದೆ. ಶೋಷಣೆಗೊಳಗಾದ ಅವಕಾಶವಂಚಿತ ಜನತೆಯಲ್ಲಿ ಮಡುಗಟ್ಟಿರಬಹುದಾದ ಆಕ್ರೋಶ ಮತ್ತು ಹತಾಶೆಯು ಅಧಿಕಾರ ರಾಜಕಾರಣಕ್ಕೆ ಮತ್ತು ಮಾರುಕಟ್ಟೆ ಪ್ರಗತಿಗೆ ಅಡ್ಡಿಯಾಗದಂತೆ ಎಚ್ಚರವಹಿಸಿಯೇ ಸರ್ಕಾರದ ಯೋಜನೆಗಳೂ, ನೀತಿಗಳೂ ಸಿದ್ಧವಾಗುತ್ತವೆ. ಕರ್ನಾಟಕದ ಪ್ರಸಕ್ತ ಚುನಾವಣೆಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಮತ್ತೊಂದೆಡೆ ಮಾರುಕಟ್ಟೆ ಬಂಡವಾಳಶಾಹಿಯ ಶೋಷಕ ವ್ಯವಸ್ಥೆಯನ್ನು ಪ್ರೋತ್ಸಾಹಿಸಿ ಕಾಪಾಡಲು ನೆರವಾಗುವ ಸಮಾಜದ ಹಿತವಲಯದ ಮೇಲ್ವರ್ಗ ಹಾಗೂ ಶ್ರೀಮಂತ ವರ್ಗಗಳು ಕಡುಬಡವರಿಗೆ ನೀಡುವ ಉಚಿತಗಳನ್ನೂ ಲೇವಡಿ ಮಾಡುವ ಅಥವಾ ಅಪಹಾಸ್ಯ ಮಾಡುವ ಮೂಲಕ ಸಾರ್ವಜನಿಕ ವಲಯದಲ್ಲಿ “ಅಭಿವೃದ್ಧಿ“ಯ ಸುತ್ತ ತಮ್ಮದೇ ಆದ ಅಭಿಪ್ರಾಯಗಳನ್ನು ಉತ್ಪಾದಿಸುತ್ತವೆ. ಹಾಗಾಗಿಯೇ ರೇವಡಿ ಸಂಸ್ಕೃತಿ ಎಂದು ಕರೆಯಲಾಗುವ ಉಚಿತಗಳನ್ನು ಕೊನೆಗಾಣಿಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಕರೆ ಈ ವರ್ಗಗಳಿಗೆ ಆಕರ್ಷಕವಾಗಿ ಕಾಣುತ್ತದೆ.

( ʼರೇವಡಿʼ ಹಿಂದಿ ಪದ. ಇದರ ಅರ್ಥ ʼಕುರುಕಲು ಸಿಹಿತಿಂಡಿʼ ಎಂದು. ಹಸಿದ ಹೊಟ್ಟೆಗಳು ಕುರುಕಲು ಸಿಹಿತಿಂಡಿಗಾಗಿ ಕೈಚಾಚುವುದಿಲ್ಲ ಅನ್ನಕ್ಕಾಗಿ ಕೈಚಾಚುತ್ತವೆ. ಹೊಟ್ಟೆ ತುಂಬಿದ ಮಂದಿ ಕುರುಕಲು ಸಿಹಿತಿಂಡಿಗಾಗಿ ಹಾತೊರೆಯುತ್ತಾರೆ. ಆದರೂ ಹಸಿದ ಕಡುಬಡವರಿಗೆ ನೀಡುವ ಉಚಿತ ಸೌಲಭ್ಯಗಳನ್ನು ಈ ಪದದ ಮೂಲಕ ಬಣ್ಣಿಸುವುದು ಬಡತನ ಮತ್ತು ಹಸಿವೆಯನ್ನು ಅಪಹಾಸ್ಯ ಮಾಡಿದಂತಾಗುವುದಿಲ್ಲವೇ ? )

ಶ್ರಮಿಕ ಜಗತ್ತಿನ ಆ ಬದಿ :
ಚುನಾಯಿತ ಸರ್ಕಾರಗಳ ನೂರಾರು ʼ ಸಮಾಜಮುಖಿ ʼ ಯೋಜನೆಗಳ ಹೊರತಾಗಿಯೂ ಬಡತನದ ರೇಖೆಯಿಂದ ಹೊರಗೇ ಉಳಿಯುವ ಹಾಗೂ ಸಾಂವಿಧಾನಿಕ ಸವಲತ್ತು-ಸೌಲಭ್ಯಗಳಿಂದ ಶಾಶ್ವತವಾಗಿ ವಂಚಿತರಾಗಿಯೇ ಉಳಿಯುವ ಕೋಟ್ಯಂತರ ಜನರು ಇಂದಿಗೂ ನಮ್ಮ ನಡುವೆ ಇರುವುದನ್ನು ಕೋವಿದ್‌ 19 ಸಂದರ್ಭದಲ್ಲಿ ಪ್ರತ್ಯಕ್ಷವಾಗಿ ಕಂಡಿದ್ದೇವೆ. ಕೇಂದ್ರ ಸರ್ಕಾರ 80 ಕೋಟಿ ಜನರಿಗೆ ಒಂದು ವರ್ಷದ ಕಾಲ ಉಚಿತ ಪಡಿತರ ವಿತರಣೆ ಮಾಡಲು ನಿರ್ಧರಿಸಿರುವುದು ಈ ದುರ್ಭರ ಪರಿಸ್ಥಿತಿಯ ದ್ಯೋತಕವಾಗಿ ಕಾಣುತ್ತದೆ. ಜಾತಿ, ಮತಧರ್ಮ, ಭಾಷೆ ಮತ್ತು ಪ್ರಾದೇಶಿಕ ಅಸ್ಮಿತೆಗಳಿಂದಾಚೆ ಈ ಸಮುದಾಯಗಳತ್ತ ನೋಡಿದಾಗ ನಮಗೆ ಈ ದೇಶದ ಶ್ರಮಿಕ ವರ್ಗದ ಪರಿಚಯವೂ ಆಗಲು ಸಾಧ್ಯ. 75 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರವೂ ಸಂವಿಧಾನದತ್ತ ಮೀಸಲಾತಿಯನ್ನೂ ಒಳಗೊಂಡಂತೆ ಅನೇಕ ಸವಲತ್ತುಗಳಿಂದ ವಂಚಿತರಾಗಿರುವ ಅಸಂಖ್ಯಾತ ಬುಡಕಟ್ಟು ಸಮುದಾಯಗಳು ನಮ್ಮ ನಡುವೆ ಇರುವುದನ್ನು ಗಮನದಲ್ಲಿಟ್ಟು ನೋಡಿದಾಗ ನಮಗೆ ಶ್ರಮಿಕ ವರ್ಗದ ವಿಶಾಲ ವ್ಯಾಪ್ತಿ, ಹರವು ಮತ್ತು ಈ ವರ್ಗಗಳ ಜೀವನ-ಜೀವನೋಪಾಯ ಮಾರ್ಗಗಳ ಆಳ ಅಗಲ ಅರ್ಥವಾಗಲು ಸಾಧ್ಯ.

“ ಜಗತ್ತಿನ ದುಡಿಯುವ ವರ್ಗಗಳೇ ಒಂದಾಗಿ ನೀವು ನಿಮ್ಮ ದಾಸ್ಯದ ಸಂಕೋಲೆಗಳ ಹೊರತು ಮತ್ತೇನನ್ನೂ ಕಳೆದುಕೊಳ್ಳಲಾರಿರಿ” ಎಂಬ ಘೋಷಣೆ ಮೇ 1ರ ಶ್ರಮಿಕ ದಿನಾಚರಣೆಯ ಸಂದರ್ಭದಲ್ಲಿ ಸಹಜವಾಗಿ ಮೊಳಗುತ್ತದೆ. ಕರ್ನಾಟಕದ ಮಟ್ಟಿಗೆ ಈ ಶ್ರಮಿಕ ವರ್ಗವೇ ಮೇ 10ರ ಚುನಾವಣೆಗಳಲ್ಲಿ ಮತ್ತೊಂದು ಸರ್ಕಾರವನ್ನು ಆಯ್ಕೆ ಮಾಡಲು ಮತಗಟ್ಟೆಗಳಿಗೆ ಹೋಗಲಿದ್ದಾರೆ. ಅಧಿಕಾರಾರೂಢ ಬಿಜೆಪಿ ಸರ್ಕಾರದ ಸಂವಿಧಾನ ವಿರೋಧಿ ಧೋರಣೆ, ಕೋಮುವಾದಿ ದೃಷ್ಟಿಕೋನ ಮತ್ತು ಅಪ್ರಜಾತ್ತಾತ್ಮಕ ನೀತಿಗಳಿಂದ ಬೇಸತ್ತಿರುವ ಕರ್ನಾಟಕದ ಜನತೆ ಒಂದು ಪರ್ಯಾಯ ಸರ್ಕಾರವನ್ನು ಅಪೇಕ್ಷಿಸುವ ಹೊತ್ತಿನಲ್ಲೇ, ಶ್ರಮಿಕ ವರ್ಗಗಳು ಈ ಪರ್ಯಾಯದ ಶೋಧದಲ್ಲಿ ತೊಡಗುತ್ತಾ, ಚಾಲ್ತಿಯಲ್ಲಿರುವ ಬಂಡವಾಳಶಾಹಿ ಆರ್ಥಿಕತೆಯನ್ನೇ ಪೋಷಿಸುವ ಮತ್ತೊಂದು ಪಕ್ಷವನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆಯನ್ನೂ ಎದುರಿಸುತ್ತಿವೆ. ಶ್ರಮಿಕರ ದೃಷ್ಟಿಯಲ್ಲಿ ಸ್ಥಾಪಿತ ವ್ಯವಸ್ಥೆಯೇ ಶೋಷಕವಾಗಿರುವುದರಿಂದ, ಸರ್ಕಾರಗಳನ್ನು ಆಯ್ಕೆಮಾಡುವ ಪ್ರತಿಯೊಂದು ಸಂದರ್ಭದಲ್ಲೂ Lesser Evil (ಕಡಿಮೆ ಹಾನಿಕರ) ಆಯ್ಕೆಯ ಮಾಡುವುದೂ ಅನಿವಾರ್ಯವಾಗುತ್ತದೆ. ಈ ಆಯ್ಕೆಯಿಂದಾಚೆಗೆ ಯೋಚಿಸುವುದಾದರೆ ಶ್ರಮಿಕ ವರ್ಗಗಳು ತಮ್ಮೊಳಗಿನ ರಾಜಕೀಯ ಪ್ರಜ್ಞೆಯನ್ನು ಚುರುಕುಗೊಳಿಸುವ ಮೂಲಕ ಒಂದು ಪರ್ಯಾಯ ವ್ಯವಸ್ಥೆಯತ್ತ ಮುನ್ನಡೆಯಬೇಕಾಗುತ್ತದೆ.

ಈ ಧ್ಯೇಯೋದ್ದೇಶದಿಂದಲೇ ಎಡಪಂಥೀಯ ಕಾರ್ಮಿಕ ಸಂಘಟನೆಗಳು, ಮಾರ್ಕ್ಸ್‌ವಾದಿ-ಎಡಪಂಥೀಯ ರಾಜಕೀಯ ಪಕ್ಷಗಳು ಹಾಗೂ ಸಾಂಸ್ಕೃತಿಕ ವೇದಿಕೆಗಳು ಶ್ರಮಿಕ ವರ್ಗಗಳ ನಡುವೆ ಸಮ ಸಮಾಜದ ಕಲ್ಪನೆಯನ್ನು ಬಿತ್ತುವ ಪ್ರಯತ್ನದಲ್ಲಿರುತ್ತವೆ. ಶ್ರಮಜೀವಿ ಎಂಬ ವಿಶಾಲಾರ್ಥದ ಪದಕ್ಕೂ ಕಾರ್ಮಿಕ ಎಂಬ ಸೀಮಿತಾರ್ಥದ ಪದಕ್ಕೂ ಇರುವ ಸೂಕ್ಷ್ಮ ವ್ಯತ್ಯಾಸವನ್ನು ಅರಿತು ದುಡಿಯುವ ವರ್ಗಗಳ ಐಕ್ಯತೆ ಮತ್ತು ಐಕಮತ್ಯದೆಡೆಗೆ ನಡೆಯುವ ಒಂದು ಚಾರಿತ್ರಿಕ ಸನ್ನಿವೇಶವನ್ನು ನಾವಿಂದು ಎದುರಿಸುತ್ತಿದ್ದೇವೆ. ಸಂಘಟಿತ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಹಾಗೂ ಈಗ ಸಂಘಟಿತರಾಗುತ್ತಿರುವ ಅನೌಪಚಾರಿಕ ವಲಯದ ಅಪಾರ ಶ್ರಮಜೀವಿ ವೃಂದಗಳಿಂದಾಚೆಗೂ ನಮಗೆ ಕಾಣಬೇಕಿರುವುದು ಸಂಘಟನೆಯ ಪರಿವೆಯೇ ಇಲ್ಲದ ಆದಿವಾಸಿ-ಬುಡಕಟ್ಟು ಸಮುದಾಯಗಳು. 75 ವರ್ಷಗಳ ಆಳ್ವಿಕೆಯಲ್ಲಿ ಸರ್ಕಾರಗಳು ಜಾರಿಗೊಳಿಸಿರುವ, ಮೀಸಲಾತಿಯನ್ನೂ ಒಳಗೊಂಡಂತೆ ಯಾವುದೇ ಯೋಜನೆಗಳ, ಫಲಾನುಭವಿಗಳ ಪಟ್ಟಿಯಲ್ಲಿ ಕಾಣದೆ ಇರುವ ಕೋಟ್ಯಂತರ ಜನರನ್ನು ಇಂದಿಗೂ ಗುರುತಿಸಬಹುದಾಗಿದೆ.

ಈ ಬೃಹತ್‌ ಜನಸಮುದಾಯಗಳು, ಕೋಟ್ಯಂತರ ವಲಸೆ ಕಾರ್ಮಿಕರು, ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರು ಮತ್ತು ಭೂರಹಿತ ಕೃಷಿಕರು ಹಾಗೂ ಅರಣ್ಯೋತ್ಪನ್ನಗಳನ್ನೇ ಅವಲಂಬಿಸಿ ಬದುಕುತ್ತಿರುವ ಆದಿವಾಸಿಗಳು, ಬಂಡವಾಳಶಾಹಿ ಅಭಿವೃದ್ಧಿ ಪಥದಲ್ಲಿ ತಮ್ಮಮೂಲ ನೆಲೆಯಿಂದ ಉಚ್ಚಾಟಿಸಲ್ಪಟ್ಟು ನಗರಗಳತ್ತ ದೂಡಲ್ಪಟ್ಟಿರುವ ಬುಡಕಟ್ಟು ಸಮುದಾಯಗಳು, ಈ ಎಲ್ಲ ವರ್ಗಗಳನ್ನೂ ಒಳಗೊಳ್ಳುವಂತಹ ಒಂದು ಸಾಂಘಿಕ ಭೂಮಿಕೆಯನ್ನು ಸಿದ್ಧಪಡಿಸುವುದು ಎಡಪಕ್ಷಗಳ ಅಥವಾ ಎಡಪಂಥೀಯ ಸಂಘಟಿತ ಕಾರ್ಮಿಕರ ಆದ್ಯತೆಯಾಗಬೇಕಲ್ಲವೇ ? ಭಾರತದಲ್ಲಿ ವಲಸೆ ಕಾರ್ಮಿಕರ ಸಂಖ್ಯೆ , ಅವರ ಸಮಸ್ಯೆಗಳು, ನಿತ್ಯ ಬದುಕಿನ ಸವಾಲುಗಳು ಮತ್ತು ವಲಸೆಯಿಂದ ಎದುರಿಸುವ ಬವಣೆಗಳು ಇವೆಲ್ಲವೂ ನಮಗೆ ಅರಿವಾಗಲು ಒಂದು ಸಾಂಕ್ರಾಮಿಕ ರೋಗ – ಕೋವಿದ್‌ 19 – ವಕ್ಕರಿಸಬೇಕಾಯಿತು. ಇದು ದುರಂತ ವಾಸ್ತವವೇ ಆದರೂ, ಅವೈಜ್ಞಾನಿಕ ಲಾಕ್‌ಡೌನ್‌ ಹೊರಹಾಕಿದ ಈ ಹೊಸ ಜಗತ್ತಿಗೆ ಕೂಡಲೇ ಮಾನವೀಯತೆಯಿಂದ ಸ್ಪಂದಿಸಿದ್ದು ಸಮ ಸಮಾಜವನ್ನು ಬಯಸುವ ಎಡ-ಪ್ರಜಾಸತ್ತಾತ್ಮಕ ಸಂಘಟನೆಗಳೇ ಎನ್ನುವುದು ಚಾರಿತ್ರಿಕ ಸತ್ಯ.

ಸಾಂಘಿಕ ಶಕ್ತಿಯ ಇತಿಮಿತಿಗಳು : 
ಆದರೆ ಇಂದು ನಾವು ಶ್ರಮಿಕ ಜಗತ್ತಿನ ಬಗ್ಗೆ ಪ್ರಸ್ತಾಪಿಸುವಾಗ ಅನೇಕ ಗುಂಪುಗಳು ನಮ್ಮ ವ್ಯಾಖ್ಯಾನ ಅಥವಾ ಸಮೀಕ್ಷೆಯಿಂದ ಹೊರಗೇ ಉಳಿಯುತ್ತವೆ. ರಾಜಕೀಯವಾಗಿ ಕರ್ನಾಟಕದಲ್ಲಿ ಸುದ್ದಿಯಲ್ಲಿರುವ ಒಳಮೀಸಲಾತಿಯ ಸುತ್ತಲಿನ ಸಂಕಥನಗಳಲ್ಲೂ ಸಹ ಶಾಶ್ವತವಾಗಿ ಮೀಸಲಾತಿ ಸೌಲಭ್ಯದಿಂದ ವಂಚಿತರಾಗುತ್ತಿರುವ ಅನೇಕ ಆದಿವಾಸಿ ಸಮುದಾಯಗಳ ಕುರುಹು ಕಾಣುವುದಿಲ್ಲ. ಹಾಗೆಯೇ ಸಂಘಟಿತ ವಲಯದಿಂದ ಆಚೆ ಇರುವ ಅಸಂಖ್ಯಾತ ಶ್ರಮಿಕರು ಶೈಕ್ಷಣಿಕ ವಲಯದಲ್ಲಿ, ಶಾಲೆ-ಕಾಲೇಜು-ವಿಶ್ವವಿದ್ಯಾಲಯಗಳಲ್ಲಿ, ಆರೋಗ್ಯ ಮತ್ತು ಸೇವಾ ವಲಯಗಳಲ್ಲಿ ಹಾಗೂ ಅಗೋಚರ ಶ್ರಮದ ನೆಲೆಗಳಲ್ಲಿ ಕಂಡುಬರುತ್ತಾರೆ. ಹಾಗಾಗಿಯೇ ಶೋಷಿತ-ಅವಕಾಶವಂಚಿತ ಸಮೂಹಗಳ ಶೋಧ ಕಾರ್ಯದಲ್ಲಿ ಗ್ರಾಮೀಣ ಪ್ರದೇಶದ ಕೃಷಿ ಕೂಲಿಗಳೂ, ಮಾರುಕಟ್ಟೆ ಅರ್ಥದ ಅನುತ್ಪಾದಕೀಯ ವಲಯದಲ್ಲಿ ದುಡಿಯುವ ಅಸಂಖ್ಯಾತ ಶ್ರಮಿಕರೂ ಗೋಚರಿಸದೆ ಹೋಗುತ್ತಾರೆ. ಅಧಿಕೃತವಾಗಿ ಅಥವಾ ವಿಧ್ಯುಕ್ತವಾಗಿ ಘೋಷಿಸಿಕೊಂಡ ಸಂಘಟನೆಗಳಿಂದಾಚೆಗೂ ಪ್ರತಿಯೊಂದು ದುಡಿಮೆಯ ವಲಯದಲ್ಲೂ ಕಂಡುಬರುವ ಅಸಂಖ್ಯಾತ ಕಾರ್ಮಿಕ ಸಂಘಟನೆಗಳು ಈ ಅಗೋಚರ ಶ್ರಮಿಕರಂತೆಯೇ ಸಂಘಟನಾತ್ಮಕ ಶಕ್ತಿ ಇಲ್ಲದೆ ಅವಕಾಶವಂಚಿತರಾಗುತ್ತಾರೆ. ಅತಿಥಿ ಶಿಕ್ಷಕರು-ಉಪನ್ಯಾಸಕರು, ಉದ್ಯೋಗ ಖಾತರಿ ಯೋಜನೆಯ ಫಲಾನುಭವಿಗಳು, ಮೂಲ ಸೌಕರ್ಯ ಕ್ಷೇತ್ರದಲ್ಲಿ ಬೆವರು ಸುರಿಸುವ ಲಕ್ಷಾಂತರ ಶ್ರಮಿಕರು ಈ ಗುಂಪಿಗೆ ಸೇರಿದವರಾಗಿರುತ್ತಾರೆ.

ಕಳೆದ 75 ವರ್ಷಗಳ ಸ್ವತಂತ್ರ ಭಾರತದಲ್ಲಿ ಭಾರತದ ಕಾರ್ಮಿಕ ಸಂಘಟನೆಗಳು ಎಷ್ಟೇ ಪ್ರಬಲವಾಗಿ ಬೆಳೆದಿದ್ದರೂ ಈ ಸಾಂಘಿಕ ಪ್ರಪಂಚದ ವ್ಯಾಪ್ತಿಯೊಳಗೆ ಮೇಲೆ ಉಲ್ಲೇಖಿಸಿದಂತಹ ಶ್ರಮಿಕ ವರ್ಗಗಳನ್ನು ಒಳಗೊಳ್ಳುವುದು ಸಾಧ್ಯವಾಗಿಲ್ಲ. ಮತ್ತೊಂದೆಡೆ ಸಾಮಾಜಿಕ ಮೇಲ್‌ ಚಲನೆ ಮತ್ತು ಆರ್ಥಿಕ ಮುಂಚಲನೆಯ ಮೂಲಕ ಸಾಂವಿಧಾನಿಕ ಸವಲತ್ತು, ಸೌಲಭ್ಯಗಳನ್ನು ಪಡೆಯಲು ತಮ್ಮ ಸಂಘಟನಾತ್ಮಕ ಶಕ್ತಿಯನ್ನು ಬಳಸಿಕೊಂಡಿರುವ ಒಂದು ಬೃಹತ್‌ ಜನಸಮೂಹ ಇಂದು ಮಧ್ಯಮ ವರ್ಗಗಳಾಗಿ ರೂಪುಗೊಂಡು, ಬಂಡವಾಳಿಗರ ಪೋಷಕ ಶಕ್ತಿಗಳಾಗಿ ಬೆಳೆದುನಿಂತಿವೆ. ಈ ಬೃಹತ್‌ ಕಾರ್ಮಿಕ ಪಡೆ ಕೆಂಬಾವುಟ ಹಿಡಿದು ಸೌಲಭ್ಯಗಳನ್ನು ಪಡೆಯುತ್ತಲೇ ತಮ್ಮ ಪೂರ್ವೇತಿಹಾಸದ ಹೆಜ್ಜೆಗಳನ್ನೂ ಮರೆತು ಬಡತನ, ಹಸಿವೆ ಮತ್ತು ಶೋಷಣೆಯ ಜಗತ್ತಿಗೆ ವಿಮುಖರಾಗುತ್ತಾರೆ. ಇನ್ನೂ ದುರಂತ ಎಂದರೆ ತಾವೇ ಪೋಷಿಸಿ ಬೆಳೆಸಿದ ಸಾರ್ವಜನಿಕ ಸಂಪತ್ತನ್ನು ಸೂರೆಗೊಳ್ಳುತ್ತಿರುವ ಮಾರುಕಟ್ಟೆ ಬಂಡವಾಳಿಗರಿಗೆ ಒತ್ತಾಸೆಯಾಗಿ ನಿಲ್ಲುತ್ತಾರೆ. ನವ ಉದಾರವಾದ ಮತ್ತು ಮಾರುಕಟ್ಟೆ ಆರ್ಥಿಕ ನೀತಿಗಳು ಭಾರತದಲ್ಲಿ ಅಡೆತಡೆಯಿಲ್ಲದೆ ಸರಾಗವಾಗಿ ಬೇರೂರುತ್ತಿರುವುದರಲ್ಲಿ ಈ ವರ್ಗದ ಕೊಡುಗೆಯೂ ಇದೆ ಎಂದರೆ ಅತಿಶಯೋಕ್ತಿಯೇನಲ್ಲ.

ಶ್ರಮಿಕ ವರ್ಗವನ್ನು ಪ್ರತಿನಿಧಿಸುವ ಎಡ ಪಂಥೀಯ, ಪ್ರಜಾಸತ್ತಾತ್ಮಕ ಸಂಘಟನೆಗಳು ಮತ್ತು ಪಕ್ಷಗಳು ತಮ್ಮ ಚಾರಿತ್ರಿಕ ವೈಫಲ್ಯವನ್ನು ಇಲ್ಲಿ ಗುರುತಿಸಿಕೊಳ್ಳಬೇಕಿದೆ. ಈ ವೈಫಲ್ಯದ ಪರಿಣಾಮವಾಗಿಯೇ ಅಂಚಿಗೆ ದೂಡಲ್ಪಟ್ಟ, ಅರಣ್ಯಗಳಿಂದ ಮೂಲೋತ್ಪಾಟನೆಗೊಳಗಾದ, ಬಲಾತ್ಕಾರದ ನಗರೀಕರಣಕ್ಕೊಳಡುತ್ತಿರುವ ಅಸಂಖ್ಯಾತ ಆದಿವಾಸಿ ಸಮುದಾಯಗಳ ಆಕ್ರಂದನ ಸಾಂಘಿಕವಾಗಿ ಅಭಿವ್ಯಕ್ತಗೊಳ್ಳುವುದು ಸಾಧ್ಯವಾಗುತ್ತಿಲ್ಲ. ಶ್ರಮಿಕರನ್ನು ಪ್ರತಿನಿಧಿಸುವ ಎಡಪಕ್ಷಗಳೂ ಸಹ ಈ ಬಗ್ಗೆ ಗಂಭೀರ ಅಧ್ಯಯನ, ಸಂಶೋಧನೆ ಅಥವಾ ಆಲೋಚನೆಯನ್ನೂ ಮಾಡದಿರುವುದನ್ನು ಗಂಭೀರವಾಗಿ ಗಮನಿಸಬೇಕಿದೆ. ಬಂಡವಾಳಶಾಹಿ ಮಾರುಕಟ್ಟೆಯ ಆಳ್ವಿಕೆಗಾಗಿ ನಡೆಯುವ ಪ್ರಜಾಸತ್ತಾತ್ಮಕ ಚುನಾವಣೆಗಳಲ್ಲಿ ಈ ಸಮುದಾಯಗಳು Lesser Evils ಗಳನ್ನು ಆಯ್ಕೆ ಮಾಡುವುದು ಅನಿವಾರ್ಯವಾಗುತ್ತದೆ. ಏಕೆಂದರೆ ಈ ಶ್ರಮಿಕರಿಗೆ ಒಂದು ಪರ್ಯಾಯ ರಾಜಕೀಯ ವೇದಿಕೆ ಇರುವುದಿಲ್ಲ. ಇತ್ತೀಚೆಗೆ ಹೆಚ್ಚು ಸಂಘಟಿತರಾಗುತ್ತಿರುವ ಅಂಗನವಾಡಿ-ಆಶಾ ಕಾರ್ಯಕರ್ತೆಯರು, ಆರೋಗ್ಯ ಕ್ಷೇತ್ರದ ಕಾರ್ಮಿಕರು, ಕಟ್ಟಡ ಕಾರ್ಮಿಕರು ಹಾಗೂ ಇತರ ಅಸಂಘಟಿತ ಶ್ರಮಿಕರೂ ಸಹ ತಮ್ಮ ಹಕ್ಕೊತ್ತಾಯಗಳಿಗೆ ಬಳಸುವ ಸಾಂಘಿಕ ಚಿಹ್ನೆಗಳನ್ನು, ಲಾಂಛನಗಳನ್ನು ಮರೆತು, ಯಾವುದೋ ಒಂದು ಬಂಡವಳಿಗ ಪಕ್ಷಕ್ಕೆ ಬೆಂಬಲ ಸೂಚಿಸಬೇಕಾಗಿದೆ.

ರಾಜಕೀಯ ಪ್ರಜ್ಞೆಯ ಕೊರತೆ : 
ಎಡ-ಪ್ರಜಾಸತ್ತಾತ್ಮಕ ಶಕ್ತಿಗಳು, ಕಾರ್ಮಿಕ ಸಂಘಟನೆಗಳು, ರೈತ ಸಂಘಗಳು, ಕೃಷಿ ಕಾರ್ಮಿಕ ಸಂಘಗಳು ದಲಿತ ಸಂಘಟನೆಗಳು ಮತ್ತು ಆದಿವಾಸಿ ಸಂಘಟನೆಗಳು ತಮ್ಮ ಹೋರಾಟದ ಹಾದಿಯಲ್ಲಿ ರಾಜಕೀಯ ಪ್ರಜ್ಞೆಯನ್ನು ಬೆಳೆಸದೆ ಇರುವುದರಿಂದ ಈ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತದೆ. ರಾಜಕೀಯ ಪ್ರಜ್ಞೆಗಿಂತಲೂ ಹೆಚ್ಚಾಗಿ ದುಡಿಯುವ ಜನತೆಯ ನಡುವೆ ವರ್ಗಪ್ರಜ್ಞೆಯನ್ನು ಬೆಳೆಸುವತ್ತ ಗಂಭೀರ ಆಲೋಚನೆ ಮಾಡಬೇಕಿದೆ. ಭಾರತೀಯ ಸಮಾಜದಲ್ಲಿ ಪ್ರತಿಯೊಂದು ಜಾತಿಯೂ ಒಂದು ವರ್ಗ ಎಂದು ಹೇಳುವ ಮೂಲಕ ಡಾ. ಬಿ.ಆರ್.‌ ಅಂಬೇಡ್ಕರ್‌ ಸಹ ಈ ವರ್ಗಪ್ರಜ್ಞೆಯ ಅವಶ್ಯಕತೆಯನ್ನು ಒತ್ತಿ ಹೇಳುತ್ತಾರೆ. ವರ್ಗಪ್ರಜ್ಞೆಯ ಪರಿಕಲ್ಪನೆ ಮೂಲತಃ ಕಮ್ಯುನಿಸ್ಟ್‌ ಸಿದ್ಧಾಂತದ ಮೂಲದಿಂದಲೇ ಉದ್ಭವಿಸಿದ್ದರೂ, ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ವರ್ಗಪ್ರಜ್ಞೆಯನ್ನು ಜಾತಿ ಶ್ರೇಣಿಯ ಒಳಗೇ ಮರುನಿರ್ವಚನೆಗೊಳಪಡಿಸುವ ಪ್ರಯತ್ನಗಳು ನಡೆಯಬೇಕಿದೆ. ಸಾಮಾಜಿಕ ನ್ಯಾಯ ಮತ್ತು ಸಾಂವಿಧಾನಿಕ ಹಕ್ಕೊತ್ತಾಯದ ಸಂಘಟನಾತ್ಮಕ ಚಳುವಳಿಗಳಲ್ಲಿ ಈ ವರ್ಗಪ್ರಜ್ಞೆಯ ಕೊರತೆ ಇರುವುದರಿಂದಲೇ ಇಂದು ಒಳಮೀಸಲಾತಿ ಒಂದು ದೊಡ್ಡ ಸವಾಲಿನಂತೆ ಎದುರಾಗಿದೆ.

ಇದನ್ನೂ ಓದಿಪ್ರಜಾತಂತ್ರದ ರಕ್ಷಣೆಯೂ ಶ್ರಮಿಕ ಜಗತ್ತಿನ ಜವಾಬ್ದಾರಿಯೂ

ಬಹುಶಃ ಸಾಂಘಿಕ ನೆಲೆಯಲ್ಲಿ ಎಡ-ಪ್ರಜಾಸತ್ತಾತ್ಮಕ-ಜನಪರ-ಸಮಾನತೆಯ ಹೋರಾಟಗಳು ಈ ನಿಟ್ಟಿನಲ್ಲಿ ಯೋಚಿಸಿದ್ದರೆ ಬಹುಶಃ ಕರ್ನಾಟಕದಲ್ಲಿ ಮಾರುಕಟ್ಟೆ ಬಂಡವಾಳದ ಶೋಷಣೆಯನ್ನು ಸಮರ್ಪಕವಾಗಿ ಎದುರಿಸಬಲ್ಲ ಶ್ರಮಿಕರ ರಾಜಕೀಯ ವೇದಿಕೆಯೊಂದು ಸೃಷ್ಟಿಯಾಗುತ್ತಿತ್ತು. ಮೇ 10ರಂದು ನಡೆಯಲಿರುವ ರಾಜ್ಯ ಚುನಾವಣೆಗಳಲ್ಲಿ ಇಂತಹ ಒಂದು ವೇದಿಕೆ ಇಲ್ಲದಿರುವುರಿಂದಲೇ ಸೀಮಿತ ಆಯ್ಕೆಗಳ ನಡುವೆಯೇ ಮತಗಟ್ಟೆಯೆಡೆಗೆ ನಡೆಯುತ್ತಿರುವ ಶ್ರಮಿಕ ವರ್ಗಗಳು ಕಡಿಮೆ ಹಾನಿಕರ ಎನಿಸುವ ಬಂಡವಾಳಿಗ ಪಕ್ಷವನ್ನು ಬೆಂಬಲಿಸಬೇಕಿದೆ. ಆಡಳಿತಾರೂಢ ಬಿಜೆಪಿಯನ್ನು ಸೋಲಿಸುವ ಕೈಂಕರ್ಯ ತೊಟ್ಟ ಪ್ರತಿಯೊಬ್ಬ ಪ್ರಜ್ಞಾವಂತ ವ್ಯಕ್ತಿಯೂ, ಅನಿವಾರ್ಯವಾಗಿ ಪರ್ಯಾಯ ಸರ್ಕಾರಕ್ಕಾಗಿ ಮತ ಚಲಾಯಿಸುವ ಮುನ್ನ, ಗಂಭೀರವಾಗಿ ಯೋಚಿಸಬೇಕಾದ ವಿಚಾರ ಇದು. ವಿಶಾಲ ಶ್ರಮಿಕ ವರ್ಗದೊಡನೆ ಗುರುತಿಸಿಕೊಳ್ಳುವವರ ಆಯ್ಕೆ ಮತ್ತು ಆದ್ಯತೆ ಏನಾಗಿರಬೇಕು ?

( ಮುಂದುವರೆಯುತ್ತದೆ )

Donate Janashakthi Media

Leave a Reply

Your email address will not be published. Required fields are marked *