ಸಾಮ್ರಾಜ್ಯಶಾಹಿಯ ಮೇಲೆ ರೈತಾಪಿಯ ವಿಜಯ

ಪ್ರೊ. ಪ್ರಭಾತ್ ಪಟ್ನಾಯಕ್

ರೈತರು ಪ್ರದರ್ಶಿಸಿದ ಅಪ್ರತಿಮ ದೃಢನಿಶ್ಚಯದ ಎದುರಿನಲ್ಲಿ ಮೋದಿ ಸರ್ಕಾರವು ತಲೆಬಾಗಿತು ಎಂದು ಒಂದು ಮಟ್ಟದಲ್ಲಿ ಹೇಳಲಾಗುತ್ತಿದ್ದರೆ, ಮತ್ತೊಂದು ಮಟ್ಟದಲ್ಲಿ, ಇದನ್ನು ನವ-ಉದಾರವಾದ ನೀತಿಗಳಿಗೆ ಎದುರಾದ ಒಂದು ಹಿನ್ನಡೆ ಎಂದು ನೋಡಲಾಗಿದೆ. ಈ ಎರಡೂ ಮಟ್ಟಗಳ ಗ್ರಹಿಕೆಗಳಾಚೆಗೆ, ಮೂರನೆಯ ಮಟ್ಟದ ಒಂದು ಗ್ರಹಿಕೆಯೂ ಇದೆ. ಅದೆಂದರೆ, ಇದು ಅತ್ಯಂತ ಮೂಲಭೂತ ಅರ್ಥದಲ್ಲಿ ಸಾಮ್ರಾಜ್ಯಶಾಹಿಯನ್ನು ಹಿಮ್ಮೆಟ್ಟಿಸಿದೆ ಎಂಬುದು. ಒಂದು ಇಡೀ ವರ್ಷ ದೆಹಲಿಯ ಗಡಿ ಭಾಗಗಳಲ್ಲಿ ಬಿಡಾರ ಹೂಡಿದ ರೈತರು, ಇಂಥಹ ಒಂದು ಅದ್ಭುತ ಸಾಧನೆಯನ್ನು ಹೇಗೆ ಸಾಧಿಸಿದರು ಎಂಬುದನ್ನು ಸಂಶೋಧಕರು ಭವಿಷ್ಯದಲ್ಲಿ ಬಯಲು ಮಾಡುವುದರಲ್ಲಿ ಸಂದೇಹವಿಲ್ಲ. ಇದು, ಸಂಭ್ರಮಿಸಬೇಕಾದ ಸಾಧನೆಯೇ, ಆಚರಿಸಬೇಕಾದ ಸಾಧನೆಯೇ.

ಮೇಲ್ನೋಟದಲ್ಲಿ ಕೆಲವು ಸಮರಗಳು ಸಾಧಾರಣವೆಂಬಂತೆ ಕಂಡರೂ ಸಹ, ಅವು ಅಪಾರ ಮಹತ್ವವನ್ನು ಹೊಂದಿರುತ್ತವೆ. ಆ ಮಹತ್ವವನ್ನು ಆ ಸಮರಗಳನ್ನು ಆರಂಭಿಸಿದ ಸಮಯದಲ್ಲಿ ಅದರಲ್ಲಿ ಭಾಗವಹಿಸಿದ್ದ ಯೋಧರೂ ಸಹ ಊಹಿಸಿರಲಾರರು. ಅಂಥಹವುಗಳಲ್ಲಿ ಒಂದು, ಪ್ಲಾಸಿ ಕದನ. ಅದು ಒಂದು ಕದನ ಆಗಿರಲಿಲ್ಲ. ಏಕೆಂದರೆ, ಒಂದು ಕಡೆಯ ಸೇನಾಪತಿ, ಇನ್ನೊಂದು ಕಡೆಯ ಸೇನಾಪತಿಗೆ ಲಂಚ ಕೊಟ್ಟು ಆತ ತಮ್ಮ ವಿರುದ್ಧ ತನ್ನ ಸೈನ್ಯವನ್ನು ಮುನ್ನಡೆಸದಿರುವ ವ್ಯವಸ್ಥೆ ಮಾಡಿಕೊಂಡ. ಆದರೂ ಆ ದಿನ ಪ್ಲಾಸಿಯ ಅರಣ್ಯದಲ್ಲಿ ಏನು ನಡೆಯಿತೋ ಅದು ವಿಶ್ವ ಇತಿಹಾಸದಲ್ಲಿ ಒಂದು ಹೊಸ ಯುಗಕ್ಕೆ ನಾಂದಿ ಹಾಡಿತು.

ರೈತರ ಆಂದೋಲನ ಮತ್ತು ಮೋದಿ ಸರ್ಕಾರದ ನಡುವಿನ ಸಮರವೂ ಸಹ ಒಂದು ಹೊಸ ಯುಗಕ್ಕೆ ನಾಂದಿ ಹಾಡುವ ಪರಂಪರೆಗೆ ಸೇರುತ್ತದೆ. ಹೆಚ್ಚು ಎದ್ದು ಕಾಣುವ ಮಟ್ಟದಲ್ಲಿ, ಚಳುವಳಿ-ನಿರತ ರೈತರು ಪ್ರದರ್ಶಿಸಿದ ಅಪ್ರತಿಮ ದೃಢನಿಶ್ಚಯದ ಎದುರಿನಲ್ಲಿ ಮೋದಿ ಸರ್ಕಾರವು ತಲೆಬಾಗಿತು ಎಂದು ಕಂಡುಬರುತ್ತದೆ. ಮತ್ತೊಂದು ಮಟ್ಟದಲ್ಲಿ, ಇದನ್ನು ನವ-ಉದಾರವಾದ ನೀತಿಗಳಿಗೆ ಎದುರಾದ ಒಂದು ಹಿನ್ನಡೆ ಎಂದು ನೋಡಲಾಗಿದೆ. ಹಿನ್ನಡೆ ಏಕೆಂದರೆ, ನವ-ಉದಾರವಾದಿ ಕಾರ್ಯಸೂಚಿಯ ನಿರ್ಣಾಯಕ ಭಾಗವಾಗಿ ರೈತ ಕೃಷಿಯನ್ನು ಕಾರ್ಪೊರೇಟ್‌ಗಳಿಗೆ ಅಧೀನಗೊಳಿಸುವ ಮೂಲಕ ಕೃಷಿ ವಲಯದ ಮೇಲೆ ಕಾರ್ಪೊರೇಟ್‌ಗಳು ಪ್ರಾಬಲ್ಯ ಹೊಂದುವುದನ್ನು ಉತ್ತೇಜಿಸವುದೇ ಕೃಷಿ ಕಾನೂನುಗಳ ಉದ್ದೇಶವಾಗಿತ್ತು. ಈ ಕಾನೂನುಗಳನ್ನು ರದ್ದುಗೊಳಿಸಿದ್ದರಿಂದಾಗಿ ಈ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.

ಈ ಎರಡೂ ಮಟ್ಟಗಳ ಗ್ರಹಿಕೆಗಳು ಸಂಪೂರ್ಣವಾಗಿ ಸರಿಯಾಗಿವೆ. ಆದರೆ ಇವುಗಳಾಚೆಗೆ, ಮೂರನೆಯ ಮಟ್ಟದ ಒಂದು ಗ್ರಹಿಕೆಯೂ ಇದೆ. ರೈತರ ವಿಜಯವು ಹೆಚ್ಚಿನ ಮಹತ್ವ ಹೊಂದಿದ್ದರೂ ಅದರ ಬಗ್ಗೆ ಗಮನ ಹರಿದಿಲ್ಲ. ಇದು ಅತ್ಯಂತ ಮೂಲಭೂತ ಅರ್ಥದಲ್ಲಿ ಸಾಮ್ರಾಜ್ಯಶಾಹಿಯನ್ನು ಹಿಮ್ಮೆಟ್ಟಿಸಿದೆ ಎಂಬುದಕ್ಕೆ ಸಂಬಂಧಿಸಿದೆ. ಈ ಕಾರಣದಿಂದಾಗಿಯೇ, ಪಾಶ್ಚ್ಯಾತ್ಯ ಮಾಧ್ಯಮಗಳು ರೈತರಿಗೆ ತಲೆಬಾಗಿದ ಮೋದಿ ಸರ್ಕಾರವನ್ನು ಕಟುವಾಗಿ ಟೀಕಿಸಿವೆ. ಈ ಬಗ್ಗೆ ಆಶ್ಚರ್ಯಪಡಬೇಕಾದ್ದಿಲ್ಲ.

ಯಾವ ರೀತಿಯಲ್ಲಿ ಸಾಮ್ರಾಜ್ಯಶಾಹಿಯು ಜಗತ್ತಿನ ಪಳೆಯುಳಿಕೆ ಇಂಧನಗಳ ಎಲ್ಲಾ ಮೂಲಗಳನ್ನೂ ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಬಯಸುತ್ತದೆಯೋ, ಜಗತ್ತಿನ ಆಹಾರ ಮತ್ತು ಕಚ್ಚಾ ವಸ್ತುಗಳ ಎಲ್ಲಾ ಮೂಲಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತದೆಯೋ, ಅದೇ ರೀತಿಯಲ್ಲಿ, ಜಗತ್ತಿನ ಭೂ-ಬಳಕೆಯ ಮಾದರಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಬಯಸುತ್ತದೆ. ಅದರಲ್ಲೂ ವಿಶೇಷವಾಗಿ, ಮೂರನೇ ಜಗತ್ತಿನ ಉಷ್ಣವಲಯದಲ್ಲಿ ಮತ್ತು ಅದರ ಸಮೀಪದ ಪ್ರದೇಶಗಳ ಭೂ-ಬಳಕೆಯ ಮಾದರಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಬಯಸುತ್ತದೆ, ಏಕೆಂದರೆ, ಈ ಪ್ರದೇಶಗಳಲ್ಲಿ ತೆಗೆಯುವ ಬೆಳೆಗಳನ್ನು ಮೆಟ್ರೋಪಾಲಿಟನ್(ಮಹಾನಗರೀಯ) ಬಂಡವಾಳಶಾಹಿಯು ನೆಲೆಗೊಂಡಿರುವ ಸಮಶೀತೋಷ್ಣ ಪ್ರದೇಶಗಳಲ್ಲಿ ಬೆಳೆಯಲು ಸಾಧ್ಯವಿಲ್ಲ.

ಮಹಾನಗರೀಯರಿಗೆ ತಮ್ಮ ಸ್ವಂತ ಲಾಭಕ್ಕಾಗಿ ವಿಶ್ವಾದ್ಯಂತ ಭೂ-ಬಳಕೆಯನ್ನು ನಿಯಂತ್ರಿಸುವುದಕ್ಕಾಗಿ ಒಂದು ಉತ್ತಮ ಸಾಧನವನ್ನು ವಸಾಹತುಶಾಹಿಯು ನೀಡಿತ್ತು. ಈ ಸಾಧನವನ್ನು ಭಾರತದಂತಹ ದೇಶದಲ್ಲಿ ಲಜ್ಜೆಗೆಟ್ಟ ರೀತಿಯಲ್ಲಿ ಬಳಸಲಾಯಿತು. ವಸಾಹತುಶಾಹಿ ಸರ್ಕಾರದ ಆದಾಯವನ್ನು (ಅಂದರೆ, ಭೂ ಕಂದಾಯವನ್ನು) ರೈತರು ಒಂದು ನಿಗದಿತ ಸಮಯದೊಳಗೆ ತುಂಬಬೇಕಿತ್ತು. ತಪ್ಪಿದರೆ, ಅವರ ಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ಳುತ್ತಿತ್ತು. ಹಾಗಾಗಿ, ಸಕಾಲದಲ್ಲಿ ಕಂದಾಯ ಕಟ್ಟುವ ಸಲುವಾಗಿ ರೈತರು ವ್ಯಾಪಾರಿಗಳಿಂದ ಮುಂಗಡ ಹಣ ಪಡೆಯುತ್ತಿದ್ದರು. ಈ ಸಾಲವನ್ನು ತೀರಿಸುವ ಸಲುವಾಗಿ ವ್ಯಾಪಾರಿಗಳು ಬಯಸಿದ ಬೆಳೆಗಳನ್ನು ಬೆಳೆದು, ಮೊದಲೇ ಮಾಡಿಕೊಂಡ ಕರಾರು-ಬೆಲೆಯ ಪ್ರಕಾರ ಅವುಗಳನ್ನು ಮಾರುತ್ತಿದ್ದರು. ಈ ವ್ಯಾಪಾರಿಗಳು, ಮಹಾನಗರಗಳಲ್ಲಿ ಯಾವ ಯಾವ ಬೆಳೆಗಳಿಗೆ ಹೆಚ್ಚು ಬೇಡಿಕೆ ಬರುತ್ತಿತ್ತೋ ಅಂಥಹ ಬೆಳೆಗಳನ್ನೇ ಬೆಳೆಯುವಂತೆ ನಿರ್ದೇಶಿಸುತ್ತಿದ್ದರು. ಅಥವಾ, ಈಸ್ಟ್ ಇಂಡಿಯಾ ಕಂಪನಿಯ ಆಫೀಮು ಏಜೆಂಟರುಗಳ ರೀತಿಯಲ್ಲಿ ರೈತರನ್ನು, ಅವರು ಯಾವ ಬೆಳೆ ತೆಗೆಯಲು ಮುಂಗಡ ಪಡೆದಿದ್ದರೋ ಅದೇ ಬೆಳೆಯನ್ನೇ ಬೆಳೆಯುವಂತೆ ನಿರ್ಬಂಧಿಸುತ್ತಿದ್ದರು.

ಈ ರೀತಿಯಲ್ಲಿ, ಇಂಡಿಗೊ(ನೀಲಿ), ಅಫೀಮು ಮತ್ತು ಹತ್ತಿಯಂತಹ ಬೆಳೆಗಳನ್ನು ಅವುಗಳನ್ನು ಹಿಂದೆಂದೂ ಬೆಳೆಯದ ಪ್ರದೇಶಗಳಲ್ಲಿ ಬೆಳೆಯುವಂತೆ ಹಾಗೂ ಆಹಾರ ಧಾನ್ಯಗಳ ಉತ್ಪಾದನೆಯನ್ನು ಬದಲಾಯಿಸುವಂತೆ ಒತ್ತಡ ಹಾಕುವ ಮೂಲಕ ಭೂ-ಬಳಕೆಯನ್ನು ಮೆಟ್ರೊಪೊಲಿಟನ್ ಶಕ್ತಿಗಳು ನಿಯಂತ್ರಿಸುತ್ತಿದ್ದವು ಮತ್ತು ರೈತರ ಈ ಉತ್ಪನ್ನಗಳು ಅವುಗಳಿಗೆ ಪುಕ್ಕಟೆಯೇ ಲಭ್ಯವಾಗುತ್ತಿದ್ದವು. ಹೇಗೆಂದರೆ, ರೈತರು ಕಂದಾಯವಾಗಿ ಅರ್ಪಿಸಿದ ಹಣದಿಂದಲೇ ವಸಾಹತುಶಾಹಿಯು ಈ ಉತ್ಪನ್ನಗಳನ್ನು ಕೊಳ್ಳುತ್ತಿತ್ತು. ಅಷ್ಟೇ ಅಲ್ಲ. ವಸಾಹತುಶಾಹಿ ದೇಶಗಳು ತಮ್ಮ ತಮ್ಮ ವಸಾಹತುಗಳಿಂದ ಹೊತ್ತೊಯ್ಯುತ್ತಿದ್ದ ಸರಕುಗಳನ್ನು ತಮ್ಮ ತಮ್ಮ ಅಗತ್ಯಗಳನ್ನು ಪೂರೈಸಿಕೊಂಡ ನಂತರ ಬೇರೆ ಬೇರೆ ದೇಶಗಳಿಗೆ ಮಾರುತ್ತಿದ್ದವು ಮಾತ್ರವಲ್ಲ, ತ್ರಿಕೋನ ವ್ಯಾಪಾರದ ಮೂಲಕ ತಮ್ಮ ವ್ಯಾಪಾರದ ಕೊರತೆಗಳನ್ನೂ ಇತ್ಯರ್ಥಪಡಿಸಿಕೊಳ್ಳುತ್ತಿದ್ದವು. ಒಂದು ಉದಾಹರಣೆಯಾಗಿ ಹೇಳುವುದಾದರೆ, ಚೀನಾದಿಂದ ಚಹಾ, ಪಿಂಗಾಣಿ ಮತ್ತಿತರ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಬ್ರಿಟನ್ ಆಮದು ಮಾಡಿಕೊಂಡದ್ದರಿಂದಾಗಿ, ಅದು ಚೀನಾದೊಂದಿಗೆ ವ್ಯಾಪಾರದ ಕೊರತೆ (ಪಾವತಿ ಶೇಷ) ಸಮಸ್ಯೆಯನ್ನು ಎದುರಿಸುತ್ತಿತ್ತು. ಈ ಸಮಸ್ಯೆಯನ್ನು ಆ ದೇಶದೊಂದಿಗೆ ಬಗೆಹರಿಸಿಕೊಳ್ಳಲು, ಬ್ರಿಟನ್, ಭಾರತದ ರೈತರನ್ನು ಬಲವಂತಪಡಿಸಿ ಬೆಳೆಸಿದ ಅಫೀಮನ್ನು ಚೀನಾಕ್ಕೆ ರಫ್ತು ಮಾಡಿ, ಬಲವಂತ-ಪುಸಲಾವಣೆಗಳ ಮೂಲಕ ಅವರು ಆ ಅಫೀಮನ್ನು ಸೇವಿಸುವಂತೆ ಮಾಡಿ, ಆ ಮೂಲಕ ಗಳಿಸಿದ ಹಣವನ್ನು ತನ್ನ ವ್ಯಾಪಾರದ ಕೊರತೆ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಲು ಬಳಸಿಕೊಳ್ಳುತ್ತಿತ್ತು. ರೈತರ ನಿರ್ದಯ ಶೋಷಣೆಯ ಬಗ್ಗೆ ಹತ್ತೊಂಬತ್ತನೇ ಶತಮಾನದ ಅನೇಕ ಬಂಗಾಳಿ ಕಾದಂಬರಿಗಳು ಮತ್ತು ನಾಟಕಗಳು ಮನೋಜ್ಞವಾಗಿ ಚಿತ್ರಿಸಿವೆ. ದಿನಬಂಧು ಮಿತ್ರ ಅವರ ‘ನೀಲ್ ದರ್ಪಣ್’ ಎಂಬ ಬಂಗಾಳಿ ನಾಟಕದಲ್ಲಿ ಇಂಡಿಗೊ ಬೆಳೆಗಾರರ ದುಃಸ್ಥಿತಿಯು ಎಷ್ಟು ವಾಸ್ತವಿಕವಾಗಿ ಸೆರೆಹಿಡಿಯಲ್ಪಟ್ಟಿತ್ತು ಎಂದರೆ, ನಾಟಕ ಪ್ರದರ್ಶನಗೊಳ್ಳುತ್ತಿರುವಾಗ ಪ್ರೇಕ್ಷಕರಲ್ಲಿ ಒಬ್ಬರಾಗಿದ್ದ ಮಹಾನ್ ಸಮಾಜ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರ್ ಅವರಂಥಹ ವ್ಯಕ್ತಿಯೂ ಸಹ, ಪ್ಲಾಂಟರ್- ವ್ಯಾಪಾರಿಯ ಪಾತ್ರವನ್ನು ನಿರ್ವಹಿಸುತ್ತಿದ್ದ ನಟನ ಮೇಲೆ ಕೋಪದಿಂದ ತನ್ನ ಚಪ್ಪಲಿಗಳನ್ನು ಎಸೆದಿದ್ದರು!

ರೈತರಿಂದ ಸಮಯಕ್ಕೆ ಸರಿಯಾಗಿ ಮತ್ತು ಕಟ್ಟುನಿಟ್ಟಾಗಿ ಕಂದಾಯ ವಸೂಲು ಮಾಡುವ, ವ್ಯಾಪಾರಿಗಳಿಗೆ ಮುಂಗಡ ನೀಡಿ ಇಂಥದ್ದೇ ಬೆಳೆ ಬೆಳೆಯಬೇಕೆಂದು ಪ್ರಭಾವ ಬೀರುವ ಮತ್ತು ರೈತರು ಸಂದಾಯಮಾಡಿದ ಕಂದಾಯದ ಹಣವನ್ನೇ ಅವರ ಬೆಳೆಗಳನ್ನು ಖರೀದಿಸಲು ಉಪಯೋಗಿಸಿಕೊಳ್ಳುತ್ತಿದ್ದ ಕಾರ್ಯವಿಧಾನವು ಇನ್ನು ಮುಂದೆ ಮೆಟ್ರೊಪಾಲಿಟನ್‌ಗೆ ಲಭ್ಯವಿಲ್ಲ ಮತ್ತು ಸಾಧ್ಯವೂ ಇಲ್ಲ. ಏಕೆಂದರೆ, ಸ್ವಾತಂತ್ರ‍್ಯಾನಂತರದ ನಿಯಂತ್ರಣ ನೀತಿಗಳ (ಡಿರಿಜಿಸ್ಟ್) ಆಡಳಿತವು ಆಹಾರ ಧಾನ್ಯಗಳಿಗೆ ಬೆಲೆ-ಬೆಂಬಲ ಒದಗಿಸುವ ಮೂಲಕ ರೈತ ಕೃಷಿಗೆ ನೀಡಿದ ರಕ್ಷಣೆಯು, ರೈತರು ತಾವು ಇಂಥದ್ದೇ ಬೆಳೆಗಳನ್ನು ಬೆಳೆಯಬೇಕೆಂದು ಮೆಟ್ರೊಪಾಲಿಟನ್‌ಗಳು ಮಾಡುತ್ತಿದ್ದ ಹುಕುಂಗಳನ್ನು ನಿರ್ಲಕ್ಷಿಸುವಂತೆ ಮಾಡಿದೆ.

ಮೆಟ್ರೊಪಾಲಿಟನ್‌ಗೆ ಪ್ರಸ್ತುತದಲ್ಲಿ ಆಹಾರ ಧಾನ್ಯಗಳ ಅಗತ್ಯವಿಲ್ಲ. ಆದರೆ, ರೈತರು ಆಹಾರ ಧಾನ್ಯಗಳ ಉತ್ಪಾದನೆಯಿಂದ ದೂರ ಸರಿದು ಅವರಿಗೆ ಬೇಕಾದ ಬೆಳೆಗಳನ್ನೇ ಉತ್ಪಾದಿಸುವುದು ಈಗ ಸಾಧ್ಯವಿಲ್ಲ, ಏಕೆಂದರೆ, ಸರ್ಕಾರವು ಆಹಾರ ಧಾನ್ಯಗಳನ್ನು ಮೊದಲೇ ಘೋಷಿಸಿದ ಖಚಿತ ಬೆಲೆಗಳಲ್ಲಿ ಸಂಗ್ರಹಿಸುತ್ತದೆ. ವಿತ್ತೀಯ ಮಿತವ್ಯಯದ ಮೂಲಕ ದುಡಿಯುವ ಜನರ ಆದಾಯವನ್ನು ಕುಗ್ಗಿಸಿ ಆ ಮೂಲಕ ಆಹಾರ ಧಾನ್ಯಗಳ ದೇಶೀಯ ಬೇಡಿಕೆಯನ್ನು ತಗ್ಗಿಸುವ ನವ-ಉದಾರವಾದಿ ಕಾರ್ಯಸೂಚಿಯು ಈ ಪರಿಸ್ಥಿತಿಯಲ್ಲಿ ಸಾಮ್ರಾಜ್ಯಶಾಹಿಗೆ ಉಪಯೋಗಕ್ಕೆ ಬರುತ್ತಿಲ್ಲ. ಏಕೆಂದರೆ, ಈ ಕ್ರಮವು ಅತ್ತ, ಆಹಾರ ಧಾನ್ಯಗಳ ಉತ್ಪಾದನೆಯನ್ನು ಕಡಿಮೆ ಮಾಡದೆ, ಇತ್ತ, ಭೂ ಬಳಕೆಯ ಮಾದರಿಯನ್ನೂ ಬದಲಾಯಿಸದೆ, ಸರ್ಕಾರದ ಧಾನ್ಯ ಸಂಗ್ರಹ-ದಾಸ್ತಾನುಗಳಿಗೆ ಕಾರಣವಾಗುತ್ತದೆ. ಹಾಗಾಗಿ, ಸಾಮ್ರಾಜ್ಯಶಾಹಿಗೆ ಈಗ ಬೇಕಾಗಿರುವುದು, ಬೆಲೆ-ಬೆಂಬಲದ ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವುದು. ಅದರ ಜೊತೆಗೆ, ರೈತರ ಬೆಳೆ ಬೆಳೆಯುವ ನಿರ್ಧಾರಗಳ ಮೇಲೆ ಪ್ರಭಾವ ಬೀರುವಂಥಹ ಒಂದು ಪರ್ಯಾಯ ವ್ಯವಸ್ಥೆಯನ್ನು ಆರಂಭಿಸುವುದು.

ಈ ಪರ್ಯಾಯ ವ್ಯವಸ್ಥೆಯ ಭಾಗವಾಗಿ, (ಅಂದರೆ, ಸಾಮ್ರಾಜ್ಯಶಾಹಿಯ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದ ಭಾಗವಾಗಿ), ಮೋದಿ ಸರ್ಕಾರವು ಮೂರು ಕೃಷಿ ಕಾನೂನುಗಳನ್ನು ಜಾರಿಗೆ ತಂದಿತು. ಹೇಳುವುದು ಒಂದು ಮಾಡುವುದು ಮತ್ತೊಂದು ಎನ್ನುವಂತೆ “ಅತಿರೇಕದ-ರಾಷ್ಟ್ರವಾದ”ದ ಮಾತುಗಾರಿಕೆಯ ಮೂಲಕ ಜನರನ್ನು ದಾರಿ ತಪ್ಪಿಸಲು ಪ್ರಯತ್ನಿಸಿತು. ಸರ್ಕಾರವು ಕೃಷಿಯ ಕಾರ್ಪೋರೇಟೀಕರಣಕ್ಕೆ ನಾಂದಿ ಹಾಡಬಯಸಿತ್ತು. ತನ್ಮೂಲಕ ಭೂ-ಬಳಕೆಯ ಮೇಲೆ ಮೆಟ್ರೊಪಾಲಿಟನ್ ನಿಯಂತ್ರಣವನ್ನು ಸ್ಥಾಪಿಸುವುದಾಗಿತ್ತು: ಮಾರುಕಟ್ಟೆಯ ಸನ್ನೆ-ಸಂಕೇತಗಳನ್ನು ಪಡೆದ ಕಾರ್ಪೊರೇಟ್‌ಗಳು ರೈತರಿಗೆ ಇಂಥಹ ಬೆಳೆಗಳನ್ನೇ ಬೆಳೆಯುವಂತೆ ಸೂಚಿಸುತ್ತಿದ್ದವು. ಅಂದರೆ, ಮೂರನೇ ಜಗತ್ತಿನ ಭೂ-ಬಳಕೆಯನ್ನು  ಮೆಟ್ರೊಪಾಲಿಟನ್ ಬೇಡಿಕೆಗಳಿಗೆ ಹೊಂದಿಕೊಳ್ಳುವಂತೆ ಮಾಡುವುದಾಗಿತ್ತು. ಸಾಮ್ರಾಜ್ಯಶಾಹಿಯು ಈ ಗುರಿಯನ್ನು ಸಾಧಿಸುವ ಸಲುವಾಗಿ, ಸರ್ಕಾರವು ಬೆಲೆ-ಬೆಂಬಲ ಪದ್ಧತಿಯನ್ನು ಬೆಂಬಲಿಸದಿರುವುದು ರೈತರಿಗೆ ಎಷ್ಟು ಒಳ್ಳೆಯದಾಗಬಲ್ಲದು ಎನ್ನುವ ಧಾಟಿಯಲ್ಲಿ ಅಕೆಡೆಮಿಕ್(ಅಧ್ಯಯನ ರಂಗದ) ಮತ್ತು ಮಾಧ್ಯಮಗಳ ತನ್ನ ಅನುಯಾಯಿಗಳು ಟಾಮ್-ಟಾಮ್ ಹೊಡೆಯುವಂತೆ ಮಾಡಿದ ಕ್ರಮವೂ ಸೇರಿದಂತೆ ಲಭ್ಯವಿದ್ದ ಎಲ್ಲಾ ಮಾರ್ಗಗಳನ್ನೂ ಬಳಸಿತು. ಆದರೂ, ವಿಫಲವಾಯಿತು.

ಈ ಮೂರು ಕಾನೂನುಗಳ ವಿರುದ್ಧ ರೈತರು ಒಡ್ಡಿದ ಪ್ರಬಲ ಪ್ರತಿರೋಧವು ಅಂತಿಮವಾಗಿ ಮೋದಿ ಸರ್ಕಾರವನ್ನು ಶರಣಾಗುವಂತೆ ಮಾಡಿತು. ಆದರೆ ಬರಿಯ ಕಾನೂನುಗಳನ್ನಷ್ಟೇ ಹಿಂತೆಗೆದುಕೊಂಡಾಗ ತಾನೇ ತಾನಾಗಿ ಯಥಾಸ್ಥಿತಿ ಮರಳುವುದಿಲ್ಲ. ಈ ಕಾರಣದಿಂದಾಗಿಯೇ ರೈತರು, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಪದ್ಧತಿಯನ್ನು ಶಾಸನಬದ್ಧಗೊಳಿಸುವಂತೆ ಪಟ್ಟು ಹಿಡಿದಿರುವುದು. ಮೂರು ಕಾನೂನುಗಳನ್ನು ರದ್ದುಗೊಳಿಸಿದ ನಂತರ, ಧಾನ್ಯಗಳ ಮಾರಾಟವು, ಒಂದು ವೇಳೆ, ನಿರ್ದಿಷ್ಟಪಡಿಸಿದ ಮೊದಲಿನ ಸ್ಥಳಗಳಲ್ಲೇ ಜರುಗಿದರೂ ಸಹ, ಅಂದರೆ, ಮಂಡಿಗಳಲ್ಲಿ ಧಾನ್ಯಗಳ ಮಾರಾಟದ ಇಡೀ ಪ್ರಕ್ರಿಯೆಯನ್ನು ಸರ್ಕಾರದ ಪ್ರತಿನಿಧಿಗಳು ಮೇಲ್ವಿಚಾರಣೆ ಮಾಡಿದರೂ ಸಹ, ಎಂಎಸ್‌ಪಿ ಪದ್ಧತಿ ಮುಂದುವರಿಯದ ಹೊರತು, ರೈತರಿಗೆ ತಮ್ಮ ಖರ್ಚು-ವೆಚ್ಚಗಳ ಜೊತೆಗೆ ಒಂದಿಷ್ಟು ನಿರ್ದಿಷ್ಟ ಲಾಭ ನೀಡುವಂಥಹ ಒಂದು ಕನಿಷ್ಠ ಬೆಲೆಯನ್ನು ಖಚಿತಪಡಿಸಿಕೊಳ್ಳುವ ವಿಧಾನವೇ ಇಲ್ಲ.

ಈ ಅಂಶವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಮಂಡಿಗಳ ಹೊರಗಿನ ಸ್ಥಳಗಳಲ್ಲಿ ಧಾನ್ಯ ಮಾರುಕಟ್ಟೆಯ ಅವಕಾಶವನ್ನು ಕಲ್ಪಿಸಿಕೊಟ್ಟಾಗ (ಈ ವ್ಯವಸ್ಥೆಯಲ್ಲಿ ಸರ್ಕಾರದ ಮೇಲ್ವಿಚಾರಣೆ ಇರುವುದಿಲ್ಲ), ಒಂದು ವೇಳೆ ಎಂಎಸ್‌ಪಿಯ ಘೋಷಣೆಯನ್ನು ಔಪಚಾರಿಕವಾಗಿ ಮುಂದುವರಿಸಿದರೂ ಸಹ, ಎಂಎಸ್‌ಪಿಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದಾಗುತ್ತದೆ. ಇದನ್ನು ತಿರುಗು ಮುರುಗು ಮಾಡಿದರೂ ಸಹ ಸರಿಯಾಗುವುದಿಲ್ಲ: ಸರ್ಕಾರದ ಮೇಲ್ವಿಚಾರಣೆಯನ್ನು ಕಡ್ಡಾಯಗೊಳಿಸಿದಾಕ್ಷಣ, ಎಂಎಸ್‌ಪಿ ಪದ್ಧತಿ ಮರಳುವುದಿಲ್ಲ. ಒಂದು ಹೊಸ ಎಂಎಸ್‌ಪಿ ಆಳ್ವಿಕೆಯನ್ನು ಕಾನೂನುಬದ್ಧವಾಗಿಯೇ ಸ್ಥಾಪಿಸಬೇಕಾಗುತ್ತದೆ. ಎಂಎಸ್‌ಪಿಯನ್ನು ಕಾನೂನುಬದ್ಧಗೊಳಿಸಿದಾಗ, ಮತ್ತೊಂದು ಸರ್ಕಾರವು ಬಯಸಿದರೂ ಕೂಡ ಅದನ್ನು ಗಾಳಿಗೆ ತೂರಲು ಬರುವುದಿಲ್ಲ. ಆದ್ದರಿಂದಲೇ, ಎಂಎಸ್‌ಪಿಯನ್ನು ಕಾನೂನುಬದ್ಧಗೊಳಿಸುವಂತೆ ರೈತರು ಒತ್ತಾಯಿಸುತ್ತಿರುವುದು.

ಬಿಜೆಪಿ ಸರ್ಕಾರದ ವಿತಂಡವಾದ ಮತ್ತು ಅನ್ಯಾಯವನ್ನೇ ನ್ಯಾಯವೆಂದು ಸಾಧಿಸುವ ಕುಯುಕ್ತಿಗಳನ್ನು ಗಮನಿಸಿದರೆ, ಎಂಎಸ್‌ಪಿಯನ್ನು ಕಾನೂನುಬದ್ಧಗೊಳಿಸುವ ಕೆಲಸವನ್ನು ಆದಷ್ಟು ಬೇಗ ಮಾಡಿಸಿಕೊಳ್ಳಬೇಕಾಗುತ್ತದೆ. ಏಕೆಂದರೆ, ಮೂರು ಕೃಷಿ ಕಾನೂನುಗಳನ್ನು ಔಪಚಾರಿಕವಾಗಿ ರದ್ದುಗೊಳಿಸಿದರೂ ಸಹ, ಅದು ಇತರ ವಿಧಾನಗಳ ಮೂಲಕ ಅದೇ ಗುರಿ ಸಾಧಿಸುವ ಪ್ರಯತ್ನವನ್ನು ಮುಂದುವರಿಸಬಹುದು.

ಎಲ್ಲಿಯವರೆಗೆ ಅಂತಹ ದುಸ್ಸಾಹಸಗಳನ್ನು ದೂರವಿಡುವುದು ಸಾಧ್ಯವೋ ಅಲ್ಲಿಯವರೆಗೆ ರೈತರು ಈ ನಿರ್ಣಾಯಕ ಯುದ್ಧವನ್ನು – ದೇಶದ ಉಷ್ಣವಲಯದ ಮತ್ತು ಉಪೋಷ್ಣವಲಯದ ಗಣನೀಯ ಭೂಪ್ರದೇಶವನ್ನು ಸಾಮ್ರಾಜ್ಯಶಾಹಿಯ ನಿಯಂತ್ರಣದಿಂದ ದೂರವಿಡುವ ಯುದ್ಧವನ್ನು – ಗೆದ್ದಿದ್ದಾರೆ ಎಂದೇ ತಿಳಿಯಬಹುದು. ಈ ವಿಜಯದ ಎರಡು ಲಕ್ಷಣಗಳತ್ತ ವಿಶೇಷವಾಗಿ ಗಮನ ಹರಿಸಬೇಕಾಗಿದೆ.

ಮೊದಲನೆಯದು, ನವ-ಉದಾರವಾದವು ಜನರ ಸಾಮೂಹಿಕ ಪ್ರತಿಭಟನೆಗಳ ವ್ಯಾಪ್ತಿಯನ್ನು ಬಹಳವಾಗಿ ನಿರ್ಬಂಧಿಸುವ ಅಂಶಕ್ಕೆ ಸಂಬಂಧಿಸಿದೆ. ನವ-ಉದಾರವಾದವು ಜಾತಿ, ಉಪ-ಜಾತಿ, ಭಾಷೆ ಮತ್ತು ಪ್ರದೇಶಗಳ ಆಧಾರದ ಮೇಲೆ ಜನರನ್ನು ಸಣ್ಣ ಸಣ್ಣ ಘಟಕಗಳಾಗಿ ವಿಂಗಡಿಸುತ್ತದೆ. ಸಮೂಹ ಮಾಧ್ಯಮಗಳು ಮತ್ತು ಅಕೆಡಿಮಿಕ್ ವಲಯದ ಮೇಲೆ ಅದು ಹೊಂದಿರುವ ಹಿಡಿತ-ಪ್ರಭಾವಗಳ ಮೂಲಕ ಜನರು ಒಗ್ಗೂಡುವುದನ್ನು ತಪ್ಪಿಸುವಂತೆ ನೋಡಿಕೊಳ್ಳುತ್ತದೆ. ಸಾಮೂಹಿಕ ಪ್ರತಿಭಟನೆಗಳಿಗೆ ಬೆಂಬಲ ವೃದ್ಧಿಸದಂತೆ ನೋಡಿಕೊಳ್ಳುತ್ತದೆ. ನವ-ಉದಾರವಾದದ ಈ ಕಾಲಾವಧಿಯಲ್ಲಿ, ಜನಸಾಮಾನ್ಯರು ನವ-ಉದಾರವಾದಿ ನೀತಿಗಳನ್ನು ವಿರೋಧಿಸಿರುವುದು, ಸಾಮಾನ್ಯವಾಗಿ, ನೇರ ಕ್ರಮಗಳ ಮೂಲಕ ಅಲ್ಲ. ಅಂದರೆ, ದೀರ್ಘಕಾಲದ ಮುಷ್ಕರಗಳು ಅಥವಾ ಘೆರಾವೋಗಳ ಮೂಲಕ ಅಲ್ಲ. ಬಹುತೇಕ ಚಳುವಳಿಗಳು ಪರೋಕ್ಷ ರಾಜಕೀಯ ವಿಧಾನಗಳನ್ನು ಅನುಸರಿಸಿವೆ. ಲ್ಯಾಟಿನ್ ಅಮೆರಿಕಾದ ಹಲವು ದೇಶಗಳಲ್ಲಿ, ಪರ್ಯಾಯ ರಾಜಕೀಯ ಚಳುವಳಿಗಳನ್ನು ಕಟ್ಟುವ ಮೂಲಕ ನವ-ಉದಾರವಾದಿ ನೀತಿಗಳನ್ನು ವಿರೋಧಿಸಲಾಗಿದೆ ಮತ್ತು ರಾಜಕೀಯ ಅಧಿಕಾರವನ್ನು ಪಡೆಯಲಾಗಿದೆ ಎಂಬುದು ಗಮನಾರ್ಹವಾಗಿದೆ. ನವ-ಉದಾರವಾದವನ್ನು ವಿರೋಧಿಸುವ ಸರ್ಕಾರಗಳು ಅಧಿಕಾರಕ್ಕೆ ಬಂದಾಗಲೆಲ್ಲಾ, ಅವು ವಿದೇಶಿ ವಿನಿಮಯದ ಬಿಕ್ಕಟ್ಟಿನಿಂದ ಹಿಡಿದು ಸಾಮ್ರಾಜ್ಯಶಾಹಿಯು ಹೇರಿದ ನಿರ್ಬಂಧಗಳ ವರೆಗೆ ಅನೇಕ ಅಡೆತಡೆಗಳನ್ನು ಎದುರಿಸಿವೆ. ಇಂಥಹ ಅಡೆತಡೆಗಳಿಂದಾಗಿ ಅನೇಕ ಸರ್ಕಾರಗಳು ಬಿದ್ದು ಹೋಗಿವೆ.

ಇಂಥಹ ಸನ್ನಿವೇಶದಲ್ಲಿ ಭಾರತದ ರೈತ ಚಳುವಳಿಯು ಒಂದು ನೂತನ ಮಾರ್ಗವನ್ನು ಅನುಸರಿಸಿದೆ: ಮುಂಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರಚಾರ ಮಾಡುವ ರಾಜಕೀಯ ಬೆದರಿಕೆಯನ್ನು ಅದು ಬಳಸಿತ್ತಾದರೂ, ಅದು ನೇರ ಕಾರ್ಯಾಚರಣೆಯ ಕ್ರಮವನ್ನು ಅನುಸರಿಸಿತು. ನವ-ಉದಾರವಾದದ ಕಾಲಮಾನದಲ್ಲಿ ಇದೊಂದು ಬಲು ಅಪರೂಪದ ಪ್ರಸಂಗವೇ.

ಎರಡನೆಯದು, ರೈತರ ನೇರ ಕಾರ್ಯಾಚರಣೆಯು ಜರುಗಿದ ಅವಧಿ. ಒಂದು ಇಡೀ ವರ್ಷ ದೆಹಲಿಯ ಗಡಿ ಭಾಗಗಳಲ್ಲಿ ರೈತರು ಬಿಡಾರ ಹೂಡಿದ್ದರು. ಇಂಥಹ ಒಂದು ಅದ್ಭುತ ಸಾಧನೆಯನ್ನು ಹೇಗೆ ರೈತರು ಸಾಧಿಸಿದರು ಎಂಬುದನ್ನು ಸಂಶೋಧಕರು ಭವಿಷ್ಯದಲ್ಲಿ ಬಯಲು ಮಾಡುವುದರಲ್ಲಿ ಸಂದೇಹವಿಲ್ಲ. ಇದು, ಸಂಭ್ರಮಿಸಬೇಕಾದ ಸಾಧನೆಯೇ, ಆಚರಿಸಬೇಕಾದ ಸಾಧನೆಯೇ.

ಅನು: ಕೆ.ಎಂ.ನಾಗರಾಜ್

Donate Janashakthi Media

Leave a Reply

Your email address will not be published. Required fields are marked *