ಹೊಸ ಸರ್ಕಾರವು ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತತೆಯ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ

-ನಾ ದಿವಾಕರ

 

( ಕಾಂಗ್ರೆಸ್ ಸರ್ಕಾರದ ಆಯ್ಕೆಗಳೂ ಜನಸಾಮಾನ್ಯರ ಆದ್ಯತೆಗಳೂ-ಆಡಳಿತ ಜವಾಬ್ದಾರಿಯೂ ಸಾರ್ವಜನಿಕ ಹಿತಾಸಕ್ತಿಯೂ- ಲೇಖನಗಳ ಮುಂದುವರೆದ ಭಾಗ)

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೂಲತಃ ಪ್ರಜೆಗಳ ಯೋಗಕ್ಷೇಮ ಹಾಗೂ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿರುವಷ್ಟೇ, ಅಥವಾ ಇನ್ನೂ ಹೆಚ್ಚಿನದಾಗಿ, ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳ ಮೇಲಿರುತ್ತದೆ. ಸಾಮಾನ್ಯ ಪ್ರಜೆಗಳಿಗೆ ತಮ್ಮ ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಲು ಅಥವಾ ತಮ್ಮ ವ್ಯಕ್ತಿಗತ ಅಭಿಪ್ರಾಯಗಳನ್ನು ದಾಖಲಿಸಲು ಮೊದಲು ಲಭ್ಯವಾಗುವುದೇ ಈ ಸಂಸ್ಥೆಗಳು. ಸಾಂವಿಧಾನಿಕ ಸಂಸ್ಥೆಗಳನ್ನು ಎರಡು ನೆಲೆಗಳಲ್ಲಿ ನಿಷ್ಕರ್ಷೆ ಮಾಡಬಹುದು. ಮೊದಲನೆಯದು ಸರ್ಕಾರಗಳು ಆಡಳಿತ ವ್ಯವಸ್ಥೆಯ ನಿರ್ವಹಣೆಯಲ್ಲಿ ಅವಲಂಬಿಸುವ ಶಾಸನಬದ್ಧ ಸಂಸ್ಥೆಗಳು. ಸಿಬಿಐ, ಸಿಒಡಿ, ಜಾರಿ ನಿರ್ದೇಶನಾಲಯ, ಲೋಕಾಯುಕ್ತ ಮತ್ತಿತರ ಆಡಳಿತ ನಿಯಂತ್ರಣದ ಸಂಸ್ಥೆಗಳು ನೇರವಾಗಿ ಸರ್ಕಾರದ ಹಿಡಿತದಲ್ಲೇ ಇರುತ್ತವೆ. ಈ ಸಂಸ್ಥೆಗಳಲ್ಲಿ ಆಡಳಿತಾರೂಢ ರಾಜಕೀಯ ಪಕ್ಷಗಳ ಹಸ್ತಕ್ಷೇಪವೂ ಸಹ ಧಾರಾಳವಾಗಿ ಇರುತ್ತದೆ. ಆದರೆ ಈ ಸಂಸ್ಥೆಗಳು ತಮ್ಮ ಕಾರ್ಯನಿರ್ವಹಣೆಯಲ್ಲಿ ಜನಸಾಮಾನ್ಯರ ಹಿತಾಸಕ್ತಿಯನ್ನೇ ಪ್ರಧಾನವಾಗಿರಿಸಿಕೊಂಡು, ಆಡಳಿತ ಲೋಪಗಳನ್ನು ಸರಿಪಡಿಸುವುದು ಪ್ರಜೆಗಳ ಅಪೇಕ್ಷೆ ಮತ್ತು ನಿರೀಕ್ಷೆಯೂ ಆಗಿರುತ್ತದೆ.

ಎರಡನೆಯದಾಗಿ ಸಾಮಾಜಿಕ ಸಾಮರಸ್ಯ ಹಾಗೂ ಸಮಸ್ತ ಜನತೆಯ ನಿತ್ಯ ಬದುಕು ಮುಕ್ತ ವಾತಾವರಣದಲ್ಲಿ ಸಾಗಿಸಲು ಅನುಕೂಲವಾಗುವಂತಹ ಸಾಂಸ್ಕೃತಿಕ ಸಂಸ್ಥೆಗಳು ಸರ್ಕಾರಗಳ ಪೋಷಣೆಯಲ್ಲೇ ಸ್ಥಾಪಿಸಲ್ಪಡುತ್ತವೆ. ಮೂಲತಃ ಇಂತಹ ಸಂಸ್ಥೆಗಳು ವಿಶಾಲ ಸಮಾಜದ ವಿಭಿನ್ನ ಆಲೋಚನೆಗಳನ್ನು, ವೃತ್ತಿ-ಪ್ರವೃತ್ತಿಗಳನ್ನು ಹಾಗೂ ಸೈದ್ಧಾಂತಿಕ ನಿಲುಮೆಗಳನ್ನು ಪೋಷಿಸಿ, ಪ್ರೋತ್ಸಾಹಿಸಿ ಮುನ್ನಡೆಸುವ ಉದ್ದೇಶದಿಂದ ಸ್ಥಾಪನೆಯಾಗಿರುತ್ತವೆ. ಸಂಸ್ಕೃತಿ ಎಂಬ ವಿದ್ಯಮಾನವನ್ನು ಜಾತಿ-ಮತಧರ್ಮಗಳ ಸೀಮಿತ ಚೌಕಟ್ಟಿನೊಳಗೆ ಬಂಧಿಸದೆ, ವಿಶಾಲ ಸಮಾಜದಲ್ಲಿನ ತಳಮಟ್ಟದ ಜನಸಮುದಾಯಗಳನ್ನೂ ತಲುಪುವ ಒಂದು ಸಾಮಾಜಿಕ ವಿದ್ಯಮಾನ ಎಂದು ಭಾವಿಸಿದಲ್ಲಿ, ಸಾಂಸ್ಕೃತಿಕ ಸಂಘಟನೆಗಳ ಆಳ ಮತ್ತು ವ್ಯಾಪ್ತಿಯನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳಬಹುದು. ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತ್ಯ-ಜಾನಪದ-ನಾಟಕ-ನೃತ್ಯ-ಸಂಗೀತ ಅಕಾಡೆಮಿಗಳು, ಪುಸ್ತಕ ಪ್ರಾಧಿಕಾರ, ಭಾಷಾ ಪ್ರಾಧಿಕಾರ ಮತ್ತು ರಂಗಭೂಮಿಯನ್ನು ಪೋಷಿಸಲೆಂದೇ ರೂಪಿಸಲಾದ ರಂಗಾಯಣ-ರಂಗಸಮಾಜ ಇವೇ ಮುಂತಾದ ಸಾಂಸ್ಕೃತಿಕ ಸಂಸ್ಥೆಗಳು ತಮ್ಮ ಚಾರಿತ್ರಿಕ ಜವಾಬ್ದಾರಿಯನ್ನರಿತು ಒಂದು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸಲು ಆಯಾ ಪ್ರಕಾರಗಳ ಕಲಾಭಿವ್ಯಕ್ತಿಗಳನ್ನು ಬಳಸಿಕೊಳ್ಳುತ್ತವೆ.

ಸಾಹಿತ್ಯ ಸಂಸ್ಕೃತಿ ಮತ್ತು ಸಮಾಜ

ಸಾಹಿತ್ಯ ಕಲೆ ಮತ್ತು ಸಂಸ್ಕೃತಿ ಈ ಮೂರೂ ನೆಲೆಗಳು ಮೂಲತಃ ಸಾಮಾಜಿಕ ಸಾಮರಸ್ಯ, ಸೌಹಾರ್ದತೆ, ಸೋದರತ್ವ ಹಾಗೂ ಸಂವೇದನಾಶೀಲ  ಮನುಜ ಸಂಬಂಧಗಳನ್ನು ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಈ ದೃಷ್ಟಿಯಿಂದಲೇ ಈ ವಲಯಗಳನ್ನು ಪ್ರತಿನಿಧಿಸುವಂತಹ ಸಾಂಸ್ಥಿಕ ಚೌಕಟ್ಟು ಸಹ ಜಾತಿ-ಮತಧರ್ಮ-ಭಾಷೆಯ ಸೀಮಿತ ಆವರಣವನ್ನು ದಾಟಿ ಸಮಗ್ರತೆಯನ್ನು ಹೊಂದಿರುವುದು ಅತ್ಯವಶ್ಯ. ವಿಶೇಷವಾಗಿ ಸಾಹಿತ್ಯ ಪರಿಷತ್ತು ಮತ್ತು ರಂಗಾಯಣದಂತಹ ರಂಗಭೂಮಿ ಪೋಷಕ ಸಂಸ್ಥೆಗಳು ತಮ್ಮ ಸ್ವಾಯತ್ತತೆಯನ್ನು ಕಳೆದುಕೊಂಡು ಅಧಿಕಾರ ರಾಜಕಾರಣದ ಅಧೀನತೆಗೆ ಒಳಗಾದರೆ, ಸಾಮಾಜಿಕ ಸಾಮರಸ್ಯ ಹದಗೆಡುತ್ತದೆ. ಈ ಎಚ್ಚರಿಕೆ ಇರಬೇಕಾದ್ದು ಇಂತಹ ಸಂಸ್ಥೆಗಳನ್ನು ನಿರ್ವಹಿಸುವ ಪದಾಧಿಕಾರಿಗಳಿಗೆ ಮತ್ತು ಅದರೊಳಗಿನ ಸಕ್ರಿಯ ಭಾಗಿದಾರರಿಗೆ. ದುರದೃಷ್ಟವಶಾತ್‌ ಕರ್ನಾಟಕದಲ್ಲಿ ಈ ಎರಡೂ ಕ್ಷೇತ್ರಗಳು ರಾಜಕೀಯ ಹಸ್ತಕ್ಷೇಪದಿಂದ ಕಲುಷಿತವಾಗಿದ್ದು, ಹಿಂದಿನ ಸರ್ಕಾರದ ಅವಧಿಯಲ್ಲಿ ಅಳಿದುಳಿದ ಸ್ವಾಯತ್ತತೆಯನ್ನೂ ಕಳೆದುಕೊಂಡಿವೆ. ಕನ್ನಡ ಸಾಹಿತ್ಯ ಪರಿಷತ್ತು ಬಹುಮಟ್ಟಿಗೆ ತನ್ನ ಸ್ವಾಯತ್ತತೆಯನ್ನು ಕಳೆದುಕೊಂಡಿರುವುದನ್ನು ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಸ್ಪಷ್ಟವಾಗಿ ಗುರುತಿಸಬಹುದಿತ್ತು.

ಒಂದು ಸ್ವಾಯತ್ತ ಸಾಂಸ್ಕೃತಿಕ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ತು ತನ್ನ ರಾಜಕೀಯ ಪೊರೆಯನ್ನು, ಜಾತಿಪೀಡಿತ ಹೊರಮೈಯ್ಯನ್ನು ಸಂಪೂರ್ಣವಾಗಿ ಕಳಚಿಕೊಳ್ಳಬೇಕಿದೆ. ಸರ್ಕಾರದ ಅನುದಾನ ಮತ್ತು ಹಣಕಾಸು ಪ್ರೋತ್ಸಾಹ ಪಡೆದ ಮಾತ್ರಕ್ಕೆ, ಸಮಸ್ತ ಕನ್ನಡಿಗರನ್ನೂ ಪ್ರತಿನಿಧಿಸುವ ಈ ಸಾಹಿತ್ಯಕ ಸಂಸ್ಥೆ, ಸರ್ಕಾರದ ಅಧೀನತೆಗೆ ಒಳಪಡಬೇಕಿಲ್ಲ. ಆಡಳಿತಾರೂಢ ಪಕ್ಷದ ಸೈದ್ಧಾಂತಿಕ ನಿಲುವುಗಳು ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಪ್ರಭಾವಿಸುವುದು ಇಡೀ ಸಾರಸ್ವತ ಲೋಕಕ್ಕೆ ಅಪಚಾರ ಮಾಡಿದಂತಾಗುತ್ತದೆ. ಅಧಿಕಾರ ರಾಜಕಾರಣದಲ್ಲಿ ಸಹಜ ಎನಿಸುವಂತಾಗಿರುವ ಜಾತಿ ಅಸ್ಮಿತೆಗಳು ಮತ್ತು ಬಂಡವಾಳದ ಪ್ರಭಾವ ಸಾಹಿತ್ಯ ಪರಿಷತ್ತಿನ ಕಾರ್ಯವ್ಯಾಪ್ತಿಯಿಂದ ನಿಷಿದ್ಧವಾಗಿದ್ದಷ್ಟೂ ಈ ಸಂಸ್ಥೆಯ ಅಂತಃಸತ್ವ ಜೀವಂತವಾಗಿರುತ್ತದೆ. ದುರಂತ ಎಂದರೆ ಕಳೆದ ಎರಡು ಮೂರು ದಶಕಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಅಂತಃಸತ್ವವನ್ನು ಕಳೆದುಕೊಂಡು ಜಡಗಟ್ಟಿದೆ. ಬಿಜೆಪಿ ಆಳ್ವಿಕೆಯಲ್ಲಿ ಹಿಂದುತ್ವ ರಾಜಕಾರಣದ ಮತ್ತೊಂದು ಅಂಗವಾಗಿ ಕಾರ್ಯನಿರ್ವಹಿಸಿದೆ. ಸಹಜವಾಗಿಯೇ ಸಾಹಿತ್ಯ ಪರಿಷತ್ತು ತನ್ನ ಸಾಹಿತ್ಯಕ ಮೌಲ್ಯಗಳನ್ನು ಕಳೆದುಕೊಂಡು, ವಂದಿಮಾಗಧ ಸಾಂಸೃತಿಕ ಸಂಸ್ಥೆಯಾಗಿ ನಿಂತಿದೆ.

ಈ ಸಾಂಸ್ಕೃತಿಕ ಮಾಲಿನ್ಯವನ್ನು ತೊಡೆದು ಹಾಕುವ ಜವಾಬ್ದಾರಿ ಸಿದ್ಧರಾಮಯ್ಯ ಸರ್ಕಾರದ ಮೇಲಿದೆ. ಮುಖ್ಯವಾಗಿ ತಾಲ್ಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೆ ನಡೆಯುವ ಸಾಹಿತ್ಯ ಪರಿಷತ್ತಿನ ಕಾಲಕಾಲದ ಚುನಾವಣೆಗಳನ್ನು ಅಧಿಕಾರ ರಾಜಕಾರಣದ ಪ್ರಭಾವದಿಂದ ಮುಕ್ತಗೊಳಿಸಬೇಕಿದೆ. ಆಡಳಿತಾರೂಢ ಸರ್ಕಾರದ ನಿಕಟವರ್ತಿಗಳೇ ಪರಿಷತ್ತಿನ ವಿವಿಧ ಸ್ತರಗಳಲ್ಲಿ ಪದಾಧಿಕಾರಿಗಳಾಗುವ ಒಂದು ವಿಕೃತ ಪರಂಪರೆಗೆ ಹೊಸ ಸರ್ಕಾರ ಅಂತ್ಯ ಹಾಡಬೇಕಿದೆ. ಸಾಹಿತ್ಯ ಪರಿಷತ್ತು ಮೂಲತಃ ಕನ್ನಡ ಸಾಹಿತ್ಯವನ್ನು ಪೋಷಿಸಿ ಬೆಳೆಸುವ ಹಾಗೂ ಭವಿಷ್ಯದ ತಲೆಮಾರಿಗೆ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ದಾಟಿಸುತ್ತಲೇ, ಸಮಕಾಲೀನ-ಆಧುನಿಕ ಸಾಹಿತ್ಯ ಕೃಷಿಯನ್ನು ವಿಸ್ತರಿಸುವ ಜವಾಬ್ದಾರಿಯನ್ನು ಹೊತ್ತಿರುತ್ತದೆ. ಹಾಗೆಯೇ ಸಮಸ್ತ ಕನ್ನಡಿಗರನ್ನು ಪ್ರತಿನಿಧಿಸುವ ಈ ಸಂಸ್ಥೆ ಕರ್ನಾಟಕದ ಜನತೆ (ಕನ್ನಡಿಗರು ಎನಿಸಿಕೊಳ್ಳುವ ಪ್ರತಿಯೊಬ್ಬ ಪ್ರಜೆಯನ್ನೂ ಒಳಗೊಂಡಂತೆ) ಎದುರಿಸುವ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವಂತಿರಬೇಕು. ಗಡಿ ವಿವಾದ, ಆಂತರಿಕ ಕ್ಷೋಭೆ, ಶಿಕ್ಷಣ ವಲಯದ ದುರವಸ್ಥೆ, ಕನ್ನಡ ಶಾಲೆಗಳ ಅವಸಾನ, ಸಮಕಾಲೀನ ಸಾಹಿತ್ಯದ ಬೆಳವಣಿಗೆ, ಕ್ಷೀಣವಾಗುತ್ತಿರುವ ಅನೇಕ ಸ್ಥಳೀಯ ಭಾಷೆಗಳ ಸಮಸ್ಯೆಗಳು, ಈ ಭಾಷಿಕರು ಎದುರಿಸುವ ಸಂಕೀರ್ಣ ಸಾಮಾಜಿಕ-ಸಾಂಸ್ಕೃತಿಕ ಸವಾಲುಗಳು, ಕನ್ನಡ ಭಾಷೆಯ  ಸಾರ್ವಜನಿಕ ಬಳಕೆಯ ಸಮಸ್ಯೆಗಳು ಹಾಗೂ ಮತೀಯವಾದ-ಕೋಮುವಾದ-ಮತಾಂಧತೆಯಿಂದ ವಿಘಟಿತವಾಗುತ್ತಿರುವ ತಳಮಟ್ಟದ ಸಾಮಾಜಿಕ ನೆಲೆಗಳು ಇವೆಲ್ಲವೂ ಸಾಹಿತ್ಯ ಪರಿಷತ್ತಿನ ಕಾರ್ಯಸೂಚಿಯ ಒಂದು ಭಾಗವಾದಾಗ ಮಾತ್ರ ಕನ್ನಡ ಸಾಹಿತ್ಯ ಪರಿಷತ್ತು ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ.

ಈ ಸವಾಲುಗಳನ್ನು ಸಾಹಿತ್ಯಕ ನೆಲೆಯಲ್ಲಿ ಹೇಗೆ ಎದುರಿಸಬಹುದು ಎಂಬ ಜಿಜ್ಞಾಸೆ ಸಾಹಿತ್ಯ ಪರಿಷತ್ತಿನ ಪರಿಚಾರಕರನ್ನು ಕಾಡದೆ ಹೋದರೆ, ಅದು ಕೇವಲ ಸನ್ಮಾನ-ಸಮ್ಮಾನ-ದತ್ತಿ ಪ್ರಶಸ್ತಿಗಳ ಸಾಂಸ್ಥಿಕ ಮಾರುಕಟ್ಟೆಯಾಗಿಬಿಡುತ್ತದೆ. ಒಂದು ಜವಾಬ್ದಾರಿಯುತ ಸರ್ಕಾರ ಮತ್ತು ನಾಗರಿಕ ಸಮಾಜ ಇದನ್ನು ಗಮನಿಸದೆ ಹೋಗುವುದು ಬೌದ್ಧಿಕ ದಾರಿದ್ರ್ಯದ ಸಂಕೇತವಾಗಿ ಮಾತ್ರ ಕಾಣಲು ಸಾಧ್ಯ. ಶಾಸ್ತ್ರೀಯ ಕನ್ನಡದಿಂದ ಆಧುನಿಕ ಕನ್ನಡದವರೆಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಸೃಷ್ಟಿಯಾಗಿರುವ ಸಂವೇದನಾಶೀಲ, ಮಾನವೀಯ ಸಾಹಿತ್ಯಕ ನೆಲೆಗಳನ್ನು ಇಂದಿನ ಯುವ ಪೀಳಿಗೆಗೆ, ಭವಿಷ್ಯದ ತಲೆಮಾರಿಗೆ ಪರಿಚಯಿಸಬೇಕಾದ ನೈತಿಕ ಹೊಣೆ ಸಾಹಿತ್ಯ ಪರಿಷತ್ತಿನ ಮೇಲಿರುತ್ತದೆ. ಈ ನಿಟ್ಟಿನಲ್ಲಿ  ಕನ್ನಡ ಸಾಹಿತ್ಯ ತನ್ನ ಮೇರು ಕೃತಿಗಳಿಂದ ಸಂಪದ್ಭರಿತವಾಗಿದೆ. ಸಮೃದ್ಧ ಸಾಹಿತ್ಯದ ಕೃಷಿಯ ಮೂಲಕ ಸಾವಿರಾರು ಸಾಹಿತಿಗಳು ಕನ್ನಡ ನಾಡಿನ ಸಮನ್ವಯ ಸಂಸ್ಕೃತಿ ಹಾಗೂ ಸಾಮರಸ್ಯದ ನೆಲೆಗಳನ್ನು ಪ್ರತಿಧ್ವನಿಸುತ್ತಲೇ ಬಂದಿದ್ದಾರೆ. ಇವುಗಳನ್ನು ಕಟ್ಟಕಡೆಯ ಕನ್ನಡಿಗನಿಗೂ ತಲುಪಿಸುವುದು ಸಾಹಿತ್ಯ ಪರಿಷತ್ತಿನ ಜವಾಬ್ದಾರಿ ಮತ್ತು ಕರ್ತವ್ಯ ಆಗಬೇಕಿದೆ. ಹೊಸ ಸರ್ಕಾರ ಈಗಲಾದರೂ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಇಟ್ಟರೆ ಬೌದ್ಧಿಕ ಮಾಲಿನ್ಯ ನಿಯಂತ್ರಣದೊಂದಿಗೆ ನಿವಾರಣೆಯೂ ಸಾಧ್ಯವಾಗಬಹುದು. ಆಗಲೇ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಆಗಲು ಸಾಧ್ಯ.

ರಂಗಭೂಮಿಯ ನಾಟಕರಂಗ

ಈ ಸಾಹಿತ್ಯಕ ಸವಾಲುಗಳ ಮತ್ತೊಂದು ಆಯಾಮವನ್ನು ನಾವು ರಂಗಭೂಮಿಯ ಕ್ಷೇತ್ರದಲ್ಲಿ ಕಾಣುತ್ತಿದ್ದೇವೆ. ರಂಗಭೂಮಿಯ ಮೂಲ ಪರಿಕಲ್ಪನೆಯೇ ಮನುಜ ಸಂವೇದನೆಯ ಚೌಕಟ್ಟಿನಲ್ಲಿ ಉಗಮಿಸಿದೆ. ಮಾನವ ಸಮಾಜದಲ್ಲಿ  ಕಾಣಬಹುದಾದ ಎಲ್ಲ ರೀತಿಯ ಅಮಾನುಷ ಧೋರಣೆಗಳನ್ನು, ಸಮಾಜವಿರೋಧಿ ಚಿಂತನೆಗಳನ್ನು ಹಾಗೂ ಸಾಂಸ್ಕೃತಿಕ ವಿಕೃತಿಗಳನ್ನು ಮೀರಿ, ಸಮಾಜದ ನಿತ್ಯ ಜೀವನದ ಆಗುಹೋಗುಗಳನ್ನು ಒರೆಹಚ್ಚಿ ನೋಡುವ ಒಂದು ಭೂಮಿಕೆಯಾಗಿ ರಂಗಭೂಮಿಯನ್ನು ನಾವು ನೋಡಬೇಕಿದೆ. ಸಮಕಾಲೀನ ಸಮಾಜ ಇತಿಹಾಸದಿಂದ ಕಲಿಯಬೇಕಾದ ಪಾಠಗಳನ್ನು ವರ್ತಮಾನದ ನೆಲೆಯಲ್ಲಿ ಹೇಗೆ ಅರ್ಥಮಾಡಿಕೊಳ್ಳುವುದು ಎಂಬ ಪ್ರಶ್ನೆಗೆ ರಂಗಭೂಮಿಯ ಪ್ರಯೋಗಗಳು ಸ್ಪಷ್ಟ ಉತ್ತರ ನೀಡುತ್ತವೆ. ಹಾಗಾಗಿಯೇ ರಂಗಭೂಮಿಯ ಮಹಾನ್‌ ನಿರ್ದೇಶಕರು, ಕಲಾವಿದರು ಇತಿಹಾಸದ ಪ್ರಸಂಗಗಳನ್ನು ಸಮಕಾಲೀನ ನೆಲೆಯಲ್ಲಿಟ್ಟು ವಿಡಂಬನೆಯ ಮೂಲಕ, ವಾಸ್ತವ ಚಿತ್ರಣದ ಮೂಲಕ, ವಿಭಿನ್ನ ದೃಷ್ಟಿಕೋನದಲ್ಲಿಟ್ಟು ವರ್ತಮಾನದ ಸಮಾಜಕ್ಕೆ ಪೂರಕವಾದ ಸಂದೇಶವನ್ನು ರವಾನಿಸುವ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಎಲ್ಲಿಯೂ ಸಹ ಚಾರಿತ್ರಿಕ ವ್ಯಕ್ತಿ ಅಥವಾ ಘಟನೆಗಳನ್ನು ವರ್ತಮಾನದ ಸಾಂದರ್ಭಿಕ ಮಸೂರ ತೊಟ್ಟು ನೋಡುವ ಪ್ರಯತ್ನಗಳು ನಡೆದಿಲ್ಲ. ಈ ದೃಷ್ಟಿಯಿಂದ ನೋಡಿದಾಗ ಕನ್ನಡದ ರಂಗಭೂಮಿಯ ಇತಿಹಾಸ ತನ್ನದೇ ಆದ ಪ್ರತಿಷ್ಠಿತ ಹೆಮ್ಮೆಯ ಸ್ಥಾನ ಪಡೆದಿದೆ.

ಆದರೆ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಮೈಸೂರಿನ ರಂಗಾಯಣದಲ್ಲಿ ನಡೆದಂತಹ ಬೆಳವಣಿಗೆಗಳು ಈ ಸಾಂಸ್ಕೃತಿಕ ಅಭಿವ್ಯಕ್ತಿಗೆ ತದ್ವಿರುದ್ಧ ದಿಕ್ಕಿನಲ್ಲಿ ಸಾಗಿವೆ. ನಿರ್ದಿಷ್ಟ ಸೈದ್ಧಾಂತಿಕ ಪ್ರಭಾವಳಿಯಿಂದ ಮುಕ್ತವಾಗಿ ಸಮಾಜಮುಖಿ ಧೋರಣೆಯಲ್ಲೇ ನಡೆದುಬಂದಿದ್ದ ರಂಗಾಯಣದಂತಹ ಸಂಸ್ಥೆಯನ್ನು ಎಡ-ಬಲ-ಮಧ್ಯ ಪಂಥಗಳ ಸೀಮಿತ ಚೌಕಟ್ಟುಗಳಲ್ಲಿಟ್ಟು ವ್ಯಾಖ್ಯಾನಿಸುವ ಒಂದು ವಿಕೃತ ಪ್ರಯತ್ನಗಳು ನಡೆದಿರುವುದನ್ನು ಗಮನಿಸಿದ್ದೇವೆ.  ತನ್ಮೂಲಕ ಚರಿತ್ರೆಯ ಹೆಜ್ಜೆಗಳನ್ನು, ಚಾರಿತ್ರಿಕ ವ್ಯಕ್ತಿ ಮತ್ತು ಘಟನೆಗಳನ್ನು ವರ್ತಮಾನದ ಬೌದ್ಧಿಕ ಚಿಂತನೆಗಳ ದೃಷ್ಟಿಯಿಂದ ವ್ಯಾಖ್ಯಾನಿಸುವ ಪ್ರಯತ್ನಗಳೂ ನಡೆದಿವೆ. ಸಹಜವಾಗಿಯೇ ಅಧಿಕಾರ ರಾಜಕಾರಣದಲ್ಲಿ ಬಳಕೆಯಾಗುವ ಪರಿಭಾಷೆ ಮತ್ತು ಅಭಿವ್ಯಕ್ತಿಯ ವಿವಿಧ ಆಯಾಮಗಳು ರಂಗಭೂಮಿಗೂ ವ್ಯಾಪಿಸಿದೆ. ತತ್ಪರಿಣಾಮವಾಗಿ ಬಾಹ್ಯ ಸಮಾಜದಲ್ಲಿ ರಾಜಕೀಯ ಪ್ರೇರಿತವಾಗಿ ರೂಪುಗೊಂಡ ಸಾಂಸ್ಕೃತಿಕ ಅಭಿವ್ಯಕ್ತಿಯ ನೆಲೆಗಳು ರಂಗ ಪ್ರವೇಶ ಮಾಡಿ ತಮ್ಮ ಸಕಲ ವಿಕೃತಿಗಳನ್ನೂ ರಂಗಭೂಮಿಯಲ್ಲಿ ಪ್ರಸ್ತುತ ಪಡಿಸಿರುವುದನ್ನು ಕಂಡಿದ್ದೇವೆ. ಉರಿಗೌಡ-ನಂಜೇಗೌಡ ಎಂಬ ಕಪೋಲ ಕಲ್ಪಿತ ಪಾತ್ರಗಳು ಚಾರಿತ್ರಿಕ ಅಸ್ಮಿತೆಗಳನ್ನು ಗಳಿಸಿದ್ದನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ.

ಕಾಂಗ್ರೆಸ್‌ ಸರ್ಕಾರ ಈ ಸಾಂಸ್ಕೃತಿಕ ವ್ಯತ್ಯಯಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ರಂಗಾಯಣದಂತಹ ಪ್ರತಿಷ್ಠಿತ ಸಂಸ್ಥೆಗಳ ಸ್ವಾಯತ್ತತೆಗೆ ಹೆಚ್ಚು ಪ್ರಾಶಸ್ತ್ಯ ನೀಡಬೇಕಿದೆ. ರಂಗಾಯಣಗಳನ್ನು ನಿರ್ವಹಿಸುವ ರಂಗ ಸಮಾಜದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅಳವಡಿಸುವ ಮೂಲಕ ಈ ಸಾಂಸ್ಕೃತಿಕ ಸಂಸ್ಥೆಯನ್ನು ಮತ್ತಷ್ಟು ಸ್ವಾಯತ್ತಗೊಳಿಸಬೇಕಿದೆ. ರಂಗ ಸಮಾಜ ಎಂಬ ಸಂಸ್ಥೆಯಲ್ಲಿ ರಾಜಕೀಯ ಹಸ್ತಕ್ಷೇಪ ಮಾಡದೆ, ಯಾವುದೇ ಪಂಥೀಯ ಭಾವನೆಗಳಿಗೆ ಆಸ್ಪದ ನೀಡದೆ, ರಂಗಭೂಮಿಯ ಉದಾತ್ತ ಮೌಲ್ಯಗಳನ್ನು ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಹಾಗಾಗಿ ಈ ಸಂಸ್ಥೆಗಳ ಮುಖ್ಯಸ್ಥರನ್ನು, ಪದಾಧಿಕಾರಿಗಳನ್ನು ನೇಮಕ ಮಾಡುವ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿಯೂ, ನಿಷ್ಪಕ್ಷಪಾತವಾಗಿಯೂ ಸಮಾಜಮುಖಿ-ಜನಮುಖಿಯಾಗಿಯೂ ಇರಬೇಕಾಗುತ್ತದೆ. ಸಮಾಜದಲ್ಲಿ ಅಂಚಿಗೆ ತಳ್ಳಲ್ಪಟ್ಟ, ಅವಕಾಶವಂಚಿತ, ಶೋಷಿತ ಸಮುದಾಯಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಗಮನದಲ್ಲಿಟ್ಟುಕೊಂಡು, ಪ್ರಾತಿನಿಧಿಕವಾಗಿ ಈ ಸಂಸ್ಥೆಗಳ ಪುನರುಜ್ಜೀವನಕ್ಕಾಗಿ ಸರ್ಕಾರ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ಬಾಹ್ಯ ಸಮಾಜದ ರಾಜಕೀಯ-ಸಾಂಸ್ಕೃತಿಕ ವಿಕೃತಿಗಳಿಂದ ರಂಗಭೂಮಿಯನ್ನು ರಕ್ಷಿಸಬೇಕಾದರೆ, ಸಾಂಸ್ಥಿಕ ಸ್ವಾಯತ್ತತೆ ಬಹಳ ಮುಖ್ಯವಾಗುತ್ತದೆ. ಸ್ವಾಯತ್ತತೆಯನ್ನು ಕಾಪಾಡುವ ಹೊಣೆ ಸರ್ಕಾರದ ಮೇಲಿದೆ.

ಶಾಸ್ತ್ರೀಯ ಮತ್ತು ಸಮಕಾಲೀನ ಕನ್ನಡ

ಹೊಸ ಕಾಂಗ್ರೆಸ್‌ ಸರ್ಕಾರದ ಮತ್ತೊಂದು ಸವಾಲು ಮೈಸೂರಿನಲ್ಲಿರುವ ಕನ್ನಡ ಶಾಸ್ತ್ರೀಯ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆಗಾಗಿ ಹೋರಾಡುವುದು. ಈ ಸಂಸ್ಥೆ ಸದ್ಯಕ್ಕೆ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸ್ವಾಯತ್ತತೆ ಇಲ್ಲದಿರುವ ಕಾರಣ ಕಳೆದ ಹದಿನೈದು ವರ್ಷಗಳಲ್ಲಿ ಯಾವುದೇ ಮಹತ್ತರ ಸಾಧನೆ ಇಲ್ಲದೆ ಮುಂದುವರೆದಿದೆ. ತಮಿಳು ಶಾಸ್ತ್ರೀಯ ಕೇಂದ್ರವು ಹಲವು ವರ್ಷಗಳ ಹಿಂದೆಯೇ ಸ್ವಾಯತ್ತತೆಯನ್ನು ಪಡೆದು ತನ್ನದೇ ಆದ ಭವ್ಯ ಕಟ್ಟಡವನ್ನೂ ನಿರ್ಮಿಸಿದೆ. ಆದರೆ ಕರ್ನಾಟಕದ ಸಾಹಿತ್ಯ ವಲಯದ ನಿಷ್ಕ್ರಿಯ ಮೌನ, ರಾಜಕೀಯ ನಾಯಕರ ಅನಾಸಕ್ತಿ ಹಾಗೂ ಸಾಹಿತ್ಯ ಪರಿಷತ್ತಿನಂತಹ ಕನ್ನಡ ಸಂಸ್ಥೆಗಳ ನಿರ್ಲಕ್ಷ್ಯದಿಂದ ಈ ಪ್ರತಿಷ್ಠಿತ ಸಂಸ್ಥೆಗೆ ಸ್ವಾಯತ್ತತೆ ಪಡೆಯುವ ಕೂಗು ಬಲಪಡೆದಿಲ್ಲ. ಮೈಸೂರಿನ ಕೆಲವೇ ಸಾಹಿತಿ ಕಲಾವಿದರು, ಕನ್ನಡ ಪರ ಹೋರಾಟಗಾರರು ಸ್ವಾಯತ್ತತೆಗಾಗಿ ದನಿ ಎತ್ತಿದ್ದಾರೆ. ಈ ಸಂಸ್ಥೆ ಮೈಸೂರಿನಲ್ಲೇ ಉಳಿಯುವುದಕ್ಕೆ ಹಾಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ತಳೆದ ದೃಢ ನಿಶ್ಚಯ ಮತ್ತು ಸ್ಥಳೀಯ ಹೋರಾಟಗಾರರ ಒತ್ತಾಸೆಯೇ ಕಾರಣವಾಗಿದೆ. ಈಗಲಾದರೂ ಈ ಸಂಸ್ಥೆಗೆ ಸ್ವಾಯತ್ತತೆ ಪಡೆಯುವ ನಿಟ್ಟಿನಲ್ಲಿ ಸರ್ಕಾರ ಆಸಕ್ತಿ ವಹಿಸಬೇಕಿದೆ.

ಈ ಸಾಂಸ್ಥಿಕ ನೆಲೆಗಳಷ್ಟೇ ಅಲ್ಲದೆ ಕರ್ನಾಟಕದ ಸಮನ್ವಯ ಸಂಸ್ಕೃತಿಯ ಮೂಲ ನೆಲೆಗಳನ್ನು ಕಾಪಾಡುವ ನಿಟ್ಟಿನಲ್ಲಿ ಕನ್ನಡ ಭಾಷೆಯನ್ನು ಪ್ರತಿನಿಧಿಸುವ ಎಲ್ಲ ಭಾಷಾ ಪ್ರಾಧಿಕಾರಗಳನ್ನು, ಅಕಾಡೆಮಿಗಳನ್ನು ಪ್ರಜಾಸತ್ತಾತ್ಮಕವಾದ ವಾತಾವರಣದಲ್ಲಿ ಪುನರುಜ್ಜೀವನಗೊಳಿಸಲು ಸರ್ಕಾರ ಮುಂದಾಗಬೇಕಿದೆ. ಸಾಹಿತ್ಯ, ಕಲೆ ಮತ್ತು ರಂಗಭೂಮಿಯಲ್ಲೂ ಇರಬಹುದಾದ ಸ್ವಾರ್ಥಪರ ವ್ಯಕ್ತಿಗಳನ್ನು ದೂರ ಇಟ್ಟು, ಕನ್ನಡ ಸಂಸ್ಕೃತಿ ಮತ್ತು ಸಾಮಾಜಿಕ ಸಾಮರಸ್ಯ-ಸಮನ್ವಯನ್ನು ಪೋಷಿಸುವ ಉದಾತ್ತ ಚಿಂತನೆ ಹೊಂದಿರುವ ವ್ಯಕ್ತಿಗಳನ್ನು ಈ ಅಧಿಕಾರ ಪೀಠಗಳಲ್ಲಿ ಕೂರಿಸುವುದು ಸರ್ಕಾರದ ನೈತಿಕ ಕರ್ತವ್ಯವಾಗಿರುತ್ತದೆ. ಈ ಸಂಸ್ಥೆಗಳನ್ನು ಸ್ವಾಯತ್ತಗೊಳಿಸುವುದರೊಂದಿಗೇ ರಾಜಕೀಯ ಪ್ರಭಾವದಿಂದ ಮುಕ್ತಗೊಳಿಸುವುದು ಮತ್ತು ಅಧಿಕಾರ ರಾಜಕಾರಣದ ಹಸ್ತಕ್ಷೇಪದಿಂದ ಹೊರಗುಳಿಸುವುದು ಸರ್ಕಾರದ ಆದ್ಯತೆಯಾಗಬೇಕಿದೆ. ರಾಜ್ಯವನ್ನು “ ಸರ್ವ ಜನಾಂಗದ ಶಾಂತಿಯ ತೋಟ”ಮಾಡುತ್ತೇವೆ ಎಂಬ ಆಶಯದೊಂದಿಗೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ ಈ  ಕಾವ್ಯಾತ್ಮಕ ಅಭಿವ್ಯಕ್ತಿಯ ಹಿಂದಿರುವ ಸಂವೇದನಾಶೀಲ ಔನ್ನತ್ಯ ಮತ್ತು ಉದಾತ್ತ ಆಶಯಗಳನ್ನು ಸಾಕಾರಗೊಳಿಸಬೇಕಾದರೆ ಕರ್ನಾಟಕದ ಎಲ್ಲ ಸಾಂಸ್ಕೃತಿಕ ಸಂಸ್ಥೆಗಳನ್ನು ಸ್ವಾಯತ್ತಗೊಳಿಸಲು ಮುಂದಾಗಬೇಕು.

ಪ್ರಜಾಪ್ರಭುತ್ವ ವ್ಯವಸ್ಥೆಯ ಆಳ್ವಿಕೆ ಎಂದರೆ ಕೇವಲ ಜನತೆಯ ಜೀವನ-ಜೀವನೋಪಾಯ ಮತ್ತು ಜೀವನಮಟ್ಟವನ್ನು ಗಮನಿಸಿ ಪೋಷಿಸುವುದಷ್ಟೇ ಅಲ್ಲ, ಇದನ್ನೂ ದಾಟಿ ಸಮಾಜದಲ್ಲಿ ಆರೋಗ್ಯಕರ ವಾತಾವರಣವನ್ನು ಉಂಟುಮಾಡುವ ಸಾಂಸ್ಕೃತಿಕ ವಿದ್ಯಮಾನಗಳನ್ನು ಸರಿಪಡಿಸುವುದೂ ಅಷ್ಟೇ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಿದ್ಧರಾಮಯ್ಯ ನೇತೃತ್ವದ ಹೊಸ ಸರ್ಕಾರ ಕಾರ್ಯೋನ್ಮುಖವಾಗುವುದೇ ? ಕಾದು ನೋಡಬೇಕಿದೆ.

(ಆಡಳಿತ ವ್ಯವಸ್ಥೆಯ ದುರಸ್ತಿ ಭ್ರಷ್ಟಾಚಾರ ನಿಗ್ರಹ ಶೈಕ್ಷಣಿಕ ಶಿಸ್ತು- ಮುಂದಿನ ಭಾಗದಲ್ಲಿ)

Donate Janashakthi Media

Leave a Reply

Your email address will not be published. Required fields are marked *