1969ರ ಬ್ಯಾಂಕ್ ರಾಷ್ಟ್ರೀಕರಣ

ಪ್ರೊ. ಪ್ರಭಾತ್ ಪಟ್ನಾಯಕ್

ರಾಷ್ಟ್ರೀಕರಣದ ಸಮಯದಲ್ಲಿ ಅನೇಕ ಪ್ರಗತಿಪರ ಕಾಂಗ್ರೆಸಿಗರು ಹೇಳಿದ್ದಂತೆ ಬ್ಯಾಂಕ್ ರಾಷ್ಟ್ರೀಕರಣವು ಒಂದು ಸಮಾಜವಾದಿ ಕ್ರಮವಾಗಿರಲಿಲ್ಲ, ಅಥವಾ, ತೀವ್ರ ಎಡಪಂಥೀಯ ಟೀಕಾಕಾರರು ಹೇಳಿದ್ದಂತೆ ಅದೊಂದು ಬಂಡವಾಳಗಾರರಿಗೂ ಅನುಕೂಲವಾಗದ ಕ್ಷುಲ್ಲಕ ಕ್ರಮವೂ ಆಗಿರಲಿಲ್ಲ. ಅದು ವಸಾಹತುಶಾಹಿಯಿಂದ ಬಿಡಿಸಿಕೊಂಡ ನಂತರ ಸಾಮ್ರಾಜ್ಯಶಾಹಿಯಿಂದ ಸಾಕಷ್ಟು ಸ್ವಾಯತ್ತತೆ ಉಳಿಸಿಕೊಳ್ಳುವ ನಿಯಂತ್ರಣಗಳ ನೀತಿಗಳ ಕಾರ್ಯತಂತ್ರದ ಒಂದು ಅವಶ್ಯಕತೆಯಾಗಿತ್ತು. ಅಂತರರಾಷ್ಟ್ರೀಯ ಹಣಕಾಸು ಬಂಡವಾಳವು ಜಾಗತಿಕವಾಗಿ ಮೇಲುಗೈ ಪಡೆಯುತ್ತಿದ್ದಂತೆಯೇ ಈ ಕಾರ್ಯತಂತ್ರ ದುರ್ಬಲಗೊಂಡು ಖಾಸಗೀಕರಣದ ಕೂಗು ಎದ್ದಿದೆ. ತಮ್ಮ ಹಿಂದಿನ ಸಾಮ್ರಾಜ್ಯಶಾಹಿ ಯಜಮಾನರ ಮುಂದೆ ದೈನ್ಯದಿಂದ ಕೈಯೊಡ್ಡಿ ನಿಲ್ಲುವ ವಸಾಹತುಶಾಹಿಯ ನಂತರದ “ವಿಫಲ” ಪ್ರಭುತ್ವಗಳ ಸಾಲಿನಲ್ಲಿ ಭಾರತವೂ ಸೇರಬಾರದು ಎಂದಾದರೆ, ಕೃಷಿ ಕಾನೂನುಗಳಿಗೆ ವಿರೋಧದೊಂದಿಗೆ, ಬ್ಯಾಂಕುಗಳ ಖಾಸಗೀಕರಣದ ವಿರೋಧದ ಹೋರಾಟ ಮಹತ್ವ ಪಡೆಯುತ್ತದೆ.

1969ರ ಜುಲೈ 19ರಂದು ದೇಶದ 14 ಪ್ರಮುಖ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಲಾಗಿತ್ತು. ಈ ರಾಷ್ಟ್ರೀಕೃತ ಬ್ಯಾಂಕುಗಳನ್ನು, 52 ವರ್ಷಗಳ ನಂತರ ಖಾಸಗೀಕರಿಸುವ ಬಗ್ಗೆ ಈಗ ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಗಳಲ್ಲಿ, ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿದ್ದೇಕೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜವೇ. ಈ ಪ್ರಶ್ನೆಗೆ ಒಂದು ಸಾಧಾರಣವಾದ ಉತ್ತರವನ್ನು ಹೇಳುವುದಾದರೆ, ಕೆಲವು ನಿರ್ದಿಷ್ಟ ಅನುಕೂಲಗಳು ಲಭಿಸುವ ಕಾರಣದಿಂದಾಗಿ ಬ್ಯಾಂಕ್ ರಾಷ್ಟ್ರೀಕರಣ ಮಾಡಲಾಗಿತ್ತು. ಅದು ಸರಿಯಾದ ಕ್ರಮವೂ ಹೌದು ಮತ್ತು ಸೂಕ್ತವಾದ ಕ್ರಮವೂ ಹೌದು. ಬ್ಯಾಂಕ್ ರಾಷ್ಟ್ರೀಕರಣ-ಖಾಸಗೀಕರಣಗಳ ಬಗ್ಗೆ ಚರ್ಚೆ ಮಾಡುವಾಗ, ರಾಷ್ಟ್ರೀಕರಣದ ಒಟ್ಟಾರೆ ಉದ್ದೇಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ, ರಾಷ್ಟ್ರೀಕರಣದ ಹಿಂದಿದ್ದ ಉದ್ದೇಶ ಮತ್ತು ದೃಷ್ಟಿಕೋನ ಇವುಗಳ ಪ್ರಸ್ತಾಪವಿಲ್ಲದೆ ಬ್ಯಾಂಕ್ ಖಾಸಗೀಕರಣವನ್ನು ಚರ್ಚಿಸುವುದು ಸಾಧ್ಯವಿಲ್ಲ.

ರಾಷ್ಟ್ರೀಕರಣದ ಸಮಯದಲ್ಲಿ ಅನೇಕ ಪ್ರಗತಿಪರ ಕಾಂಗ್ರೆಸಿಗರು ಹೇಳಿದ್ದಂತೆ ಬ್ಯಾಂಕ್ ರಾಷ್ಟ್ರೀಕರಣವು ಒಂದು ಸಮಾಜವಾದಿ ಕ್ರಮವಾಗಿರಲಿಲ್ಲ, ಅಥವಾ, ತೀವ್ರ ಎಡಪಂಥೀಯ ಟೀಕಾಕಾರರು ಹೇಳಿದ್ದಂತೆ ಅದೊಂದು ಬಂಡವಾಳಗಾರರಿಗೂ ಅನುಕೂಲವಾಗದ ಕ್ಷುಲ್ಲಕ ಕ್ರಮವೂ ಆಗಿರಲಿಲ್ಲ. ಲೆನಿನ್ ತನ್ನ ಸಾಮ್ರಾಜ್ಯಶಾಹಿ ಸಿದ್ಧಾಂತವನ್ನು ಅಭಿವೃದ್ಧಿಪಡಿಸುವಲ್ಲಿ ವ್ಯಾಪಕವಾಗಿ ಬಳಸಿಕೊಂಡ ‘ಡೆರ್ ಫಿನಾನ್ಜ್ ಕ್ಯಾಪಿಟಲ್’(ಹಣಕಾಸು ಬಂಡವಾಳವು) ಗ್ರಂಥದ ಲೇಖಕರೂ ಮತ್ತು ಪ್ರಸಿದ್ಧ ಮಾರ್ಕ್ಸ್‌ವಾದಿ ಅರ್ಥಶಾಸ್ತ್ರಜ್ಞರೂ ಆದ ರುಡಾಲ್ಫ್ ಹಿಲ್ಫರ್‌ ಡಿಂಗ್, ಅರ್ಧ ಡಜನ್ ಉನ್ನತ ಜರ್ಮನ್ ಬ್ಯಾಂಕ್‌ಗಳನ್ನು ರಾಷ್ಟ್ರೀಕರಿಸಿದರೆ, ಜರ್ಮನ್ ಬಂಡವಾಳಶಾಹಿಯ ಬೆನ್ನು ಮುರಿಯುತ್ತದೆ ಎಂದು ವಾದಿಸಿದ್ದರು. ಆದರೆ, ಅದು ನಿರಾಧಾರ  ಆಶಾವಾದ. ರಾಷ್ಟ್ರೀಕೃತ ಬ್ಯಾಂಕುಗಳನ್ನು ಬಂಡವಾಳಶಾಹಿಯ ಅಡಿಯಲ್ಲಿ ಬಳಸುವ ವಿಧಾನಕ್ಕಿಂತ ಭಿನ್ನವಾಗಿ ಬಳಸದ ಹೊರತು, ಅವುಗಳನ್ನು ರಾಷ್ಟ್ರೀಕರಣ ಮಾಡುವುದರಿಂದಲೇ ಬಂಡವಾಳಶಾಹಿಯ ಬೆನ್ನನ್ನು ಮುರಿಯಲಾಗದು. ಬಂಡವಾಳಶಾಹಿಯ ಬೆನ್ನು ಮುರಿಯಲೇಬೇಕು ಎಂದಾದರೆ, ಕೇವಲ ಆರು ಬ್ಯಾಂಕುಗಳನ್ನು ಸ್ವಾಧೀನಪಡಿಸಿಕೊಂಡರಷ್ಟೇ ಸಾಲದು; ರಾಷ್ಟ್ರೀಕರಣವು ಅದಕ್ಕಿಂತಲೂ ಹೆಚ್ಚು ವ್ಯಾಪಕವಾಗಿರಬೇಕಾಗುತ್ತದೆ.

ಆದರೆ, ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿದರೂ, ಮಾಡದಿದ್ದರೂ ಬಂಡವಾಳಗಾರರಿಗೇನೂ  ವ್ಯತ್ಯಾಸವಾಗುವುದಿಲ್ಲ ಎಂಬ ತೀರ್ಮಾನಕ್ಕೆ ಬರುವುದು ತಪ್ಪಾಗುತ್ತದೆ. ತಮ್ಮ ಒಡೆತನದ ಬ್ಯಾಂಕ್‌ಗಳು ಸಂಗ್ರಹಿಸುವ ಅಗಾಧ ಆರ್ಥಿಕ ಸಂಪನ್ಮೂಲಗಳನ್ನು(ಠೇವಣಿಗಳನ್ನು) ತಮ್ಮ ವ್ಯವಹಾರಗಳಿಗೆ ಬಳಸಿಕೊಳ್ಳುವ ಅವಕಾಶಗಳು ತಪ್ಪುವುದು ಖಂಡಿತಾ ಅವರಿಗೊಂದು ಹಿನ್ನಡೆ, ಅದನ್ನು ಅವರು  ಉಗ್ರವಾಗಿ ಪ್ರತಿರೋಧಿಸುತ್ತಾರೆ.

ವಸಾಹತುಶಾಹಿಯಿಂದ ಬಿಡಿಸಿಕೊಂಡ ನಂತರ ಮೂರನೇ ಜಗತ್ತಿನ ಹಲವು ದೇಶಗಳ ಮಾದರಿಯಲ್ಲಿ, ಭಾರತವೂ ಸಹ ತನ್ನ ನಿಯಂತ್ರಣ ನೀತಿಗಳ ಕಾರ್ಯತಂತ್ರದ ಒಂದು ಅವಶ್ಯಕತೆಯಾಗಿ ಬ್ಯಾಂಕ್ ರಾಷ್ಟ್ರೀಕರಣವನ್ನು ಕೈಗೊಂಡಿತ್ತು. ವಸಾಹತುಶಾಹಿ-ವಿರೋಧಿ ಹೋರಾಟದ ನಾಯಕತ್ವದಲ್ಲಿದ್ದ ಬೂರ್ಜ್ವಾ ವರ್ಗವನ್ನು ಅಲುಗಾಡಿಸಲಾಗದ ದೇಶಗಳಲ್ಲಿ ಆ ಹೋರಾಟದಿಂದಲೇ  ನಿಯಂತ್ರಣ ನೀತಿಗಳ ಕಾರ್ಯತಂತ್ರವು ಬೆಳೆದು ಬಂದಿತು. ಹಾಗಾಗಿ, ವಸಾಹತು ವ್ಯವಸ್ಥೆಯನ್ನು ಕಳಚಿಹಾಕಿದ ನಂತರದ ಅಭಿವೃದ್ಧಿ ಕಾರ್ಯತಂತ್ರವು ಸಮಾಜವಾದವನ್ನು ನಿರ್ಮಿಸುವ ಗುರಿ ಹೊಂದಿರಲಿಲ್ಲ; ಬದಲಿಗೆ, ಸಾಮ್ರಾಜ್ಯಶಾಹಿಯಿಂದ ಸ್ವಲ್ಪಮಟ್ಟಿನ ಅಂತರ ಕಾಯ್ದುಕೊಂಡು ಸ್ವಾಯತ್ತತೆಯಿರುವ ಮತ್ತು ಅದಕ್ಕಾಗಿಯೇ ದೇಶದೊಳಗೆ ಸಾಕಷ್ಟು ವ್ಯಾಪಕ  ನೆಲೆಯಿರುವ ಒಂದು ಬಂಡವಾಳಶಾಹಿಯನ್ನು ಕಟ್ಟುವ ಗುರಿ ಹೊಂದಿತ್ತು. ರೈತ ಕೃಷಿ ಮತ್ತು ಕಿರು ಉತ್ಪಾದನೆಯನ್ನು ಅತಿಕ್ರಮಿಸುವ ಮತ್ತು ನಾಶಪಡಿಸುವ ತನ್ನ ಎಂದಿನ ಚಾಳಿಗೆ ಬದಲಾಗಿ, ತನ್ನ ನಾಳೆಯ ಶ್ರೇಯೋಭಿವೃದ್ಧಿಯ ಸಲುವಾಗಿ ಬಂಡವಾಳಶಾಹಿಯು, ದೇಶದ ರೈತ ಕೃಷಿ ಮತ್ತು ಕಿರು-ಉತ್ಪಾದನೆಯನ್ನು ತಕ್ಕ ಮಟ್ಟಿಗೆ ರಕ್ಷಿಸಿತು ಮತ್ತು ಉತ್ತೇಜಿಸಿತು.

ಕೆಲ ಕಾಲ ಬ್ಯಾಂಕುಗಳ ಮೇಲೆ “ಸಾಮಾಜಿಕ ನಿಯಂತ್ರಣ” ನೀತಿಯನ್ನು ಪ್ರಯೋಗಿಸಿತು. ಈ ಪ್ರಯೋಗವು ಫಲ ನೀಡದ ಕಾರಣದಿಂದಾಗಿ ಮತ್ತು ನಿಯಂತ್ರಣದ ಏಕೈಕ ಪರಿಣಾಮಕಾರಿ ಸಾಧನವೆಂದರೆ ರಾಷ್ಟ್ರೀಕರಣವೇ ಎಂಬುದನ್ನು ಮನಗಂಡ ಸರ್ಕಾರವು ಬ್ಯಾಂಕ್ ರಾಷ್ಟ್ರೀಕರಣಕ್ಕೆ ಮುಂದಾಯಿತು.

ಇದೇ ವಿವರಣೆಯನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅಭಿವೃದ್ಧಿಯ ಈ ಕಾರ್ಯತಂತ್ರವು ಸಮಾಜವಾದವನ್ನು ನಿರ್ಮಿಸುವ ಗುರಿ ಹೊಂದಿರಲಿಲ್ಲವಾದರೂ, ಅದು ನಿರ್ಮಿಸಲು ಸಹಾಯ ಮಾಡುತ್ತಿದ್ದ ಬಂಡವಾಳಶಾಹಿಯು ರೂಢ ಬಂಡವಾಳಶಾಹಿಯೂ ಆಗಿರಲಿಲ್ಲ. ಈ ಕಾರ್ಯತಂತ್ರದ ಮುಖ್ಯ ಲಕ್ಷಣವೆಂದರೆ, ವಿದೇಶಿ ಮಹಾನಗರೀಯ ಬಂಡವಾಳದಿಂದ ಸ್ವಲ್ಪ ಮಟ್ಟಿನ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳುವುದು ಮತ್ತು ಹೊರಗಿನ ಬಂಡವಾಳಶಾಹಿ ವಲಯದ ಅತಿಕ್ರಮಣದ ವಿರುದ್ಧ ಕಿರು ಉತ್ಪಾದನೆಗೆ ಮತ್ತು ರೈತ ಕೃಷಿಗೆ ಒಂದು ಮಟ್ಟದ ರಕ್ಷಣೆ ಒದಗಿಸುವುದು. ಈ ಬಂಡವಾಳಶಾಹಿಯು ಬೆಳೆದು ಬರುತ್ತಿರುವಾಗ ಅದರೊಳಗೆ ರೈತ ಮತ್ತು ಭೂಮಾಲೀಕ ಬಂಡವಾಳಶಾಹಿಯ ಮಿಶ್ರಣದ ಬಂಡವಾಳಶಾಹಿ ಪ್ರವೃತ್ತಿಯೂ ಇತ್ತು. ಇದೆಲ್ಲವನ್ನೂ ಕಾರ್ಯರೂಪಕ್ಕೆ ತರುವಲ್ಲಿ, ಪ್ರಭುತ್ವವು ಒಬ್ಬ ಹೂಡಿಕೆದಾರನಾಗಿ, ನಿಬಂಧಕನಾಗಿ ಮತ್ತು ನಿಯಂತ್ರಕನಾಗಿ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡದ್ದು ಗಮನಾರ್ಹವಾಗಿತ್ತು. ರೂಢ ಬಂಡವಾಳಶಾಹಿಯೊಂದಿಗೆ ಹೊಂದಿದ್ದ ಭಿನ್ನತೆಯಿಂದಾಗಿ, ಅಭಿವೃದ್ಧಿಯ ಈ ಕಾರ್ಯತಂತ್ರವನ್ನು ಜವಾಹರಲಾಲ್ ನೆಹರು ಅವರ “ಸಮಾಜವಾದಿ ಮಾದರಿಯ ಸಮಾಜ ನಿರ್ಮಾಣ” ಎಂಬ ಪದಗುಚ್ಛದಿಂದ ಹಿಡಿದು ಮಿಖೆಲ್ ಕಲೆಕಿ ಅವರ “ಮಧ್ಯಂತರ ಆಳ್ವಿಕೆ” ಎಂಬ ಪದಗುಚ್ಛದ ವರೆಗೆ ಅನೇಕ ಹೆಸರುಗಳಿಂದ ಕರೆಯಲಾಗಿದೆ. ಎಡಪಂಥೀಯ ವಿಮರ್ಶೆಯ ಪ್ರಕಾರ, ಈ ಕಾರ್ಯತಂತ್ರವು ರೂಢ ಬಂಡವಾಳಶಾಹಿಗಿಂತ ಭಿನ್ನವಾಗಿಲ್ಲ ಎಂದಲ್ಲ, ಈ ವಿದ್ಯಮಾನವು ನಿರಂತರವಾಗಲು ಸಾಧ್ಯವಿಲ್ಲ, ಇಂದಲ್ಲ ನಾಳೆ ಅದು ರೂಢ ಬಂಡವಾಳಶಾಹಿಯಾಗಿ ರೂಪಾಂತರಗೊಳ್ಳುತ್ತದೆ (ಇದು ನಿಜಕ್ಕೂ ಸಂಭವಿಸುತ್ತಿದೆ).

ನಿರ್ಣಾಯಕವಾದ ಒಂದು ಅಂಶವೆಂದರೆ, ರೂಢ ಬಂಡವಾಳಶಾಹಿಯತ್ತ ಸಾಗುವ ಚಲನೆಯಲ್ಲಿ, ಅಭಿವೃದ್ಧಿ ಕಾರ್ಯತಂತ್ರದ ಭಾಗವಾಗಿ ವಿದೇಶಿ ಮಹಾನಗರೀಯ ಬಂಡವಾಳಕ್ಕೆ ಎದುರಾಗಿ ಹೊಂದಿರುವ ಅಷ್ಟೊ ಇಷ್ಟೊ ಸ್ವಾಯತ್ತತೆಯನ್ನೂ ತ್ಯಾಗ ಮಾಡಬೇಕಾಗುತ್ತದೆ.  ಅಂದರೆ, ಇದರರ್ಥ, ಸಾಮ್ರಾಜ್ಯಶಾಹಿಯೊಂದಿಗೆ ತಳುಕು ಹಾಕಿಕೊಂಡು ಅಸಮತ್ವಗಳನ್ನು ಬೆಳೆಸುವ  ಅಭಿವೃದ್ಧಿಯ ದಿಕ್ಪಥವನ್ನು ಅನುಸರಿಸಬೇಕಾಗುತ್ತದೆ, ಇದು ವಸಾಹತುಶಾಹಿ-ವಿರೋಧಿ ಹೋರಾಟದ ಹೆಬ್ಬಯಕೆಯಾಗಿದ್ದ ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯನ್ನು ಹಾಳುಗೆಡವುತ್ತದೆ.

ನಿಯಂತ್ರಣ ನೀತಿಗಳ ಕಾರ್ಯತಂತ್ರವನ್ನು ನಿರೂಪಿಸಿದ ನಂತರ, ಬ್ಯಾಂಕ್ ರಾಷ್ಟ್ರೀಕರಣವು ಸ್ವಲ್ಪ ತಡವಾಗಿ ಜಾರಿಗೆ ಬಂದರೂ ಸಹ, ಇದು ಆ ಕಾರ್ಯತಂತ್ರಕ್ಕೆ ನಿರ್ಣಾಯಕ ಅಂಶವಾಗಿತ್ತು. ಸಾಲ ನೀಡಿಕೆ ಎಂಬುದು ಬಂಡವಾಳದ ಮೇಲಿನ ನಿಯಂತ್ರಣವನ್ನು ತೋರಿಸುತ್ತದೆ. ಆದ್ದರಿಂದ ಬ್ಯಾಂಕ್ ಸಾಲಗಳು ಬೇರೆ ಬೇರೆ ಸಾಮಾಜಿಕ ಗುಂಪುಗಳಿಗೆ, ಪ್ರದೇಶಗಳಿಗೆ ಮತ್ತು ವಿವಿಧ ವಲಯಗಳಿಗೆ ಎಷ್ಟೆಷ್ಟು ಪ್ರಮಾಣದಲ್ಲಿ ವಿತರಣೆಯಾಗುತ್ತವೆ ಎಂಬುದು ದೇಶವು ಅನುಸರಿಸುತ್ತಿರುವ ಅಭಿವೃದ್ಧಿಯ ದಿಕ್ಪಥದ ಸ್ವರೂಪ ಎಂಥದ್ದು ಎಂಬುದನ್ನು ತಿಳಿಸುತ್ತವೆ. ರೂಢ ಬಂಡವಾಳಶಾಹಿ ಆಳ್ವಿಕೆಗಳಿಗಿಂತ ಭಿನ್ನವಾಗಿ, ನಿಯಂತ್ರಣ ನೀತಿಗಳ ಆಳ್ವಿಕೆಯಲ್ಲಿ, ಪ್ರಭುತ್ವಕ್ಕೆ ಬಂಡವಾಳಶಾಹಿಯನ್ನು ನಿಯಂತ್ರಿಸುವಲ್ಲಿ ಒಂದು ನಿರ್ಣಾಯಕ ಪಾತ್ರವಿರುವುದರಿಂದ, ಹಾಗೂ ಕಿರು ಉತ್ಪಾದನೆ ಮತ್ತು ರೈತ ಕೃಷಿಯನ್ನು ರಕ್ಷಿಸುವ ಸಲುವಾಗಿ, ವಿದೇಶಿ ಮಹಾನಗರೀಯ ಬಂಡವಾಳದ ಎದುರು ದೇಶದ ಬಂಡವಾಳಶಾಹಿಯು ತಕ್ಕ ಮಟ್ಟಿನ ಸ್ವಾಯತ್ತತೆ ಹೊಂದಿರುವುದರಿಂದ,  ಸಾಲ ವಿತರಣೆಯ ಮೇಲೆ ಹತೋಟಿಯು  ಒಂದು ಪ್ರಮುಖ ನೀತಿ ಸಾಧನವಾಗುತ್ತದೆ. ಈ ಸಾಧನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದಾದರೆ ಬ್ಯಾಂಕ್ ರಾಷ್ಟ್ರೀಕರಣವು ಅವಶ್ಯವಾಗುತ್ತದೆ. ವಾಸ್ತವವಾಗಿ, ಸಾಲ ವಿತರಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು ಕೆಲ ಕಾಲ ಬ್ಯಾಂಕುಗಳ ಮೇಲೆ “ಸಾಮಾಜಿಕ ನಿಯಂತ್ರಣ” ನೀತಿಯನ್ನು ಪ್ರಯೋಗಿಸಿತು. ಈ ಪ್ರಯೋಗವು ಫಲ ನೀಡದ ಕಾರಣದಿಂದಾಗಿ ಮತ್ತು ನಿಯಂತ್ರಣದ ಏಕೈಕ ಪರಿಣಾಮಕಾರಿ ಸಾಧನವೆಂದರೆ ರಾಷ್ಟ್ರೀಕರಣವೇ ಎಂಬುದನ್ನು ಮನಗಂಡ ಸರ್ಕಾರವು ಬ್ಯಾಂಕ್ ರಾಷ್ಟ್ರೀಕರಣಕ್ಕೆ ಮುಂದಾಯಿತು.

1969ರ ಬ್ಯಾಂಕ್ ರಾಷ್ಟ್ರೀಕರಣ ಮತ್ತು ತದನಂತರದ 1980ರ ಸಣ್ಣ ಖಾಸಗಿ ಬ್ಯಾಂಕುಗಳ ಎರಡನೇ ಸುತ್ತಿನ ರಾಷ್ಟ್ರೀಕರಣವು ದೇಶದ ಮೇಲೆ ಗಾಢವಾದ ಪರಿಣಾಮ ಬೀರಿದೆ. ರಾಷ್ಟ್ರೀಕರಣವು ಕೃಷಿ ಮತ್ತು ಕಿರು ಉತ್ಪಾದನೆಗೆ ಸಾಂಸ್ಥಿಕ ಸಾಲಗಳು ಲಭ್ಯವಾಗುವಂತೆ ಮಾಡಿತು, ಲೇವಾದೇವಿದಾರರು ರೈತರ ಮೇಲೆ ಹೊಂದಿದ್ದ ಹಿಡಿತವನ್ನು ಸಡಿಲಗೊಳಿಸಿತು, ದೇಶಾದ್ಯಂತ ಬ್ಯಾಂಕಿಂಗ್ ಜಾಲವನ್ನು ಹರಡಿತು, ಮತ್ತು, ಉತ್ಪಾದಕ ಬಂಡವಾಳ ಮತ್ತು ಸಟ್ಟಾಕೋರ ಬಂಡವಾಳಗಳ ನಡುವೆ ಒಂದು ಗೋಡೆಯನ್ನು ನಿರ್ಮಿಸುವ ಮೂಲಕ ರೂಢ ಬಂಡವಾಳಶಾಹಿಯ ಆಳ್ವಿಕೆಯಲ್ಲಿ ಸಟ್ಟಾ ವ್ಯಾಪಾರದ ಚಟುವಟಿಕೆಗಳಿಗೆ ಸಾಮಾನ್ಯವಾಗಿ ದೊರೆಯುತ್ತಿದ್ದ ಸಾಲಗಳು ದೊರೆಯದಂತೆ ನೋಡಿಕೊಳ್ಳಲು ಪ್ರಯತ್ನಿಸಿತು. ರೈತಾಪಿ ವರ್ಗದ ಬಲಾಢ್ಯರಿಗೆ ಬ್ಯಾಂಕ್ ಸಾಲಗಳ ಸಿಂಹಪಾಲು ಸಿಕ್ಕಿತು, ನಿಜ. ಆದರೆ, ಸಾಂಸ್ಥಿಕ ಸಾಲಗಳ ವಿತರಣೆಯು ಸಾಮಾಜಿಕವಾಗಿ ಹಿಂದೆಂದಿಗಿಂತಲೂ ಹೆಚ್ಚು ವ್ಯಾಪಕವಾಯಿತು. ವಾಸ್ತವವಾಗಿ, ಇಡೀ ಬಂಡವಾಳಶಾಹಿ ಜಗತ್ತಿನಲ್ಲೇ ಎಲ್ಲೂ ಇಲ್ಲದಷ್ಟು ಹೆಚ್ಚು ವ್ಯಾಪಕವಾಯಿತು. ಹಸಿರು ಕ್ರಾಂತಿಯ ಪರಿಸರ ಪರಿಣಾಮಗಳ ಬಗ್ಗೆ ಏನೇ ಭಿನ್ನಾಭಿಪ್ರಾಯಗಳಿರಲಿ, ವಿದೇಶಿ ಮಹಾನಗರೀಯ ಬಂಡವಾಳಶಾಹಿ ಶಕ್ತಿಗಳು ಪಾಲಿಸುವ “ಆಹಾರ ಸಾಮ್ರಾಜ್ಯಶಾಹಿ”ಯ ಹಿಡಿತದಿಂದ ಭಾರತವನ್ನು ಮುಕ್ತಗೊಳಿಸುವುದು, ಹಸಿರು ಕ್ರಾಂತಿ ಇಲ್ಲದೆ ಸಂಭವಿಸಲು ಸಾಧ್ಯವಿರಲಿಲ್ಲ ಮತ್ತು ರಾಷ್ಟ್ರೀಕರಣವಿಲ್ಲದೆ ಈ ಹಸಿರು ಕ್ರಾಂತಿಯು ಸಂಭವಿಸುವುದು ಸಾಧ್ಯವಿರಲಿಲ್ಲ.

ಅಂತರರಾಷ್ಟ್ರೀಯ ಹಣಕಾಸು ಬಂಡವಾಳವು ಜಾಗತಿಕವಾಗಿ ಮೇಲುಗೈ ಪಡೆಯುತ್ತಿದ್ದಂತೆಯೇ ನಿಯಂತ್ರಣಗಳ ನೀತಿ-ಕಾರ್ಯತಂತ್ರವನ್ನು ದುರ್ಬಲಗೊಳಿಸಲಾಯಿತು. ಜಾಗತಿಕ ಹಣಕಾಸು ಬಂಡವಾಳದೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದ ಭಾರತದ ಹಿರಿ ಬೂರ್ಜ್ವಾ ವರ್ಗವು ವಿದೇಶಿ ಮಹಾನಗರೀಯ ಬಂಡವಾಳಶಾಹಿಯಿಂದ ತುಸು ದೂರ ಉಳಿದು ಸ್ವಾಯತ್ತ ಪಥ ಅನುಸರಿಸುವ ತನ್ನ ಯೋಜನೆಯನ್ನು ಕೈಬಿಟ್ಟಿತು. ನವ-ಉದಾರ ನೀತಿಗಳ ಆಳ್ವಿಕೆಯನ್ನು ಅಂಗೀಕರಿಸುವುದರೊಂದಿಗೆ, ರಾಷ್ಟ್ರೀಕೃತ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವಂತೆ ಒಂದು ಒಕ್ಕೊರಲಿನ ಕೂಗು ಕೇಳಿಸಲಾರಂಭಿಸಿತು. ಈ ಕೂಗಿನ ನೇತೃತ್ವವನ್ನು ಸಾಮ್ರಾಜ್ಯಶಾಹಿ ಅಮೇರಿಕಾದ ಪ್ರತಿನಿಧಿಗಳಾದ ಲ್ಯಾರಿ ಸಮ್ಮರ್ಸ್ ಮತ್ತು ಟಿಮ್ ಗೀತ್ನರ್ ಮುಂತಾದವರು ವಹಿಸಿದರು. ಅವರ ಸ್ಥಳೀಯ ಬೆಂಬಲಿಗರು ರಾಷ್ಟ್ರೀಕೃತ ಬ್ಯಾಂಕ್‌ಗಳ ಲಾಭದಾಯಕತೆಯ ಪ್ರಶ್ನೆಗಳನ್ನು ಎತ್ತಲಾರಂಭಿಸಿದರು. ಇವು ಸಂಪೂರ್ಣವಾಗಿ ಸರಿಯಲ್ಲದ ಪ್ರಶ್ನೆಗಳು. ಏಕೆಂದರೆ, ಬ್ಯಾಂಕ್ ರಾಷ್ಟ್ರೀಕರಣದ ಉದ್ದೇಶವೇ ರಾಷ್ಟ್ರೀಕೃತ ಬ್ಯಾಂಕ್‌ ಗಳು ಖಾಸಗೀ ಬ್ಯಾಂಕ್‌ಗಳಿಗಿಂತ ಭಿನ್ನವಾಗಿ ಕಾರ್ಯಾಚರಣೆ ನಡೆಸಬೇಕು ಎಂಬುದಾಗಿತ್ತು.

ಕಿರು ಉತ್ಪಾದನೆಯ ಮೇಲೆ ಮತ್ತು ರೈತ ಕೃಷಿಯ ಮೇಲೆ ಅತಿಕ್ರಮಣ, ನಿಬಂಧನೆ ಮತ್ತು ನಿಯಂತ್ರಣ ಹೊಣೆಯಿಂದ ಪ್ರಭುತ್ವದ ನಿರ್ಗಮನದ ತತ್ವಕ್ಕೆ ಅಂಟಿಕೊಂಡಿರುವ ಆಳ್ವಿಕೆಯ ಅಡಿಯಲ್ಲಿ ಖಾಸಗೀಕರಣದ ಕೂಗು ಗಟ್ಟಿಗೊಂಡಿದೆ.

ನವ ಉದಾರವಾದದ ಸಾರ-ಸತ್ವವೆಂದರೆ ರೂಢ ಬಂಡವಾಳಶಾಹಿಯನ್ನು ಅದರಲ್ಲಿ ಅಂತರ್ಗತವಾಗಿರುವ ಸ್ವಯಂಸ್ಫೂರ್ತತೆಯ ಪ್ರವೃತ್ತಿಗಳೊಂದಿಗೆ ಉತ್ತೇಜಿಸುವುದು. ಈ ರೀತಿಯ ಬಂಡವಾಳಶಾಹಿಯನ್ನು ಉತ್ತೇಜಿಸಿದ ಪರಿಣಾಮಗಳು ನಮ್ಮ ಮುಂದಿವೆ: ಕಿರು ಉತ್ಪಾದನೆಯ ಮೇಲೆ ಮತ್ತು ರೈತ ಕೃಷಿಯ ಮೇಲೆ ಅತಿಕ್ರಮಣ, ನಿಬಂಧನೆ ಮತ್ತು ನಿಯಂತ್ರಣ ಹೊಣೆಯಿಂದ ಪ್ರಭುತ್ವದ ನಿರ್ಗಮನ ಮತ್ತು ಆದಾಯಗಳ ಮತ್ತು ಸಂಪತ್ತಿನ ಅಸಮಾನತೆಗಳ ಅಪಾರ ಹೆಚ್ಚಳ. ರೈತರ ಸಂಕಷ್ಟಗಳು ಆತ್ಮಹತ್ಯೆಗಳ ಮೂಲಕ ವ್ಯಕ್ತಗೊಂಡಿವೆ. ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಂತಹ ಅಗತ್ಯ ಸೇವೆಗಳನ್ನು ಒದಗಿಸುವ ಜವಾಬ್ದಾರಿಯಿಂದ ಪ್ರಭುತ್ವವು ಹಿಂದೆ ಸರಿಯುತ್ತಿದೆ. ದೇಶದ ಒಟ್ಟು ಅದಾಯದಲ್ಲಿ ಜನಸಂಖ್ಯೆಯ ಮೇಲ್ತುದಿಯ ಶೇ. ಒಂದರಷ್ಟು ಮಂದಿಯ ವರಮಾನದ ಪಾಲು 1982ರಲ್ಲಿ ಶೇಕಡ 6 ರಿಂದ 2013-14ರ ವೇಳೆಗೆ ಶೇಕಡ 22ಕ್ಕೆ(ಒಂದು ಶತಮಾನದಲ್ಲೇ ಅತಿ ಹೆಚ್ಚು) ಏರಿದೆ. ಇವೆಲ್ಲವೂ ಬಂಡವಾಳಶಾಹಿಯನ್ನು ಉತ್ತೇಜಿಸಿದ ಸೂಚಕಗಳಾಗಿವೆ. ಬ್ಯಾಂಕುಗಳ ಖಾಸಗೀಕರಣದ ಬೇಡಿಕೆಯು ಈ ಕಾರ್ಯಸೂಚಿಯ ಒಂದು ಭಾಗವಾಗಿದೆ.

ನವ ಉದಾರವಾದವು ಮುಂದುವರಿಯುತ್ತಿದ್ದಂತೆಯೇ, ಅದರ ಕಾರ್ಯಸೂಚಿಯು ಹೆಚ್ಚು ಹೆಚ್ಚು ಸ್ಪಷ್ಟವೂ ಮತ್ತು ಹೆಚ್ಚು ಹೆಚ್ಚು ಲಜ್ಜೆಗೆಟ್ಟದ್ದೂ ಆಗುತ್ತಿದೆ. ಕೊರೊನಾ ಸಾಂಕ್ರಾಮಿಕದ ಮರೆಯಲ್ಲಿ ನೆಡೆಸಿದ ಕಾರ್ಮಿಕ ಹಕ್ಕುಗಳ ಮೇಲಿನ ದಾಳಿಯು ಇದನ್ನು ಪ್ರತಿಬಿಂಬಿಸುತ್ತದೆ. ಅದೇ ರೀತಿಯಲ್ಲಿ, ಮೂರು ಕೃಷಿ ಕಾನೂನುಗಳು ರೈತ ಕೃಷಿಯನ್ನು ಬಂಡವಾಳಶಾಹಿ ಅತಿಕ್ರಮಣಕ್ಕೆ ತೆರೆದಿಡುವ ಮೂಲಕ ರೈತ ಕೃಷಿಯನ್ನು ನಾಶಪಡಿಸುತ್ತವೆ. ವಾಸ್ತವವಾಗಿ, ಸರಕು ಮತ್ತು ಸೇವಾ ತೆರಿಗೆಯಿಂದ ಹಿಡಿದು ನೋಟು ರದ್ದತಿಯವರೆಗೆ ಮತ್ತು ಕೃಷಿ ಕಾನೂನುಗಳ ಜಾರಿಯೂ ಸೇರಿದಂತೆ ಮೋದಿ ಸರ್ಕಾರವು ಕೈಗೊಂಡ ಪ್ರತಿಯೊಂದು ಪ್ರಮುಖ ಆರ್ಥಿಕ ಕ್ರಮದ ಮೂಲಕ ನೆಟ್ಟ ಬಾಣ ಮತ್ತು ಇಟ್ಟ ಗುರಿ, ಕಿರು ಉತ್ಪಾದನಾ ವಲಯದ ವಿರುದ್ಧವೇ. ನವಉದಾರವಾದಿ ಕಾರ್ಯಸೂಚಿಗೆ ಅನುಗುಣವಾಗಿರುವ ಇವೆಲ್ಲವೂ ಬಂಡವಾಳದ ಆದಿಮ ಸಂಚಯ ಪ್ರಕ್ರಿಯೆಯ ಮುಂದುವರಿಕೆಯೇ. ಬ್ಯಾಂಕ್‌ಗಳ ಖಾಸಗೀಕರಣದ ಮೂಲಕ, ಕೃಷಿ ವಲಯಕ್ಕೆ ಹೋಗುತ್ತಿದ್ದ ಅಷ್ಟೊ ಇಷ್ಟೊ ಸಾಂಸ್ಥಿಕ ಸಾಲಗಳನ್ನು ನಿರಾಕರಿಸಲಾಗುತ್ತದೆ (ನವ ಉದಾರ ಆಳ್ವಿಕೆಯಲ್ಲಿ ಈಗಾಗಲೇ ಕೆಲವು ವರ್ಷಗಳಿಂದಲೂ ಕೃಷಿ ಸಾಲಗಳು ನಿರಾಕರಿಸಲ್ಪಟ್ಟಿವೆ) ಮತ್ತು ರೈತ ಕೃಷಿಯನ್ನು ನಾಶಪಡಿಸುವ ಪ್ರಕ್ರಿಯೆಯು ವೇಗ ಪಡೆಯುವಂತೆ ನೋಡಿಕೊಳ್ಳಲಾಗುತ್ತದೆ.

ರೈತ ಕೃಷಿಯೂ ಸೇರಿದಂತೆ ಕಿರು ಉತ್ಪಾದನೆಯನ್ನು ನಾಶಪಡಿಸಿದ ಪರಿಣಾಮಗಳು ಕೇವಲ ಆರ್ಥಿಕ ವಲಯಕ್ಕೆ ಮಾತ್ರ ಸೀಮಿತಗೊಳ್ಳುವುದಿಲ್ಲ. ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದ ಭಾಗವಾಗಿ ರೂಪಗೊಂಡ ರಾಷ್ಟ್ರ ನಿರ್ಮಾಣದ ಯೋಜನೆಗೆ ನಿಯಂತ್ರಣಗಳ ಆಡಳಿತವು ಅವಶ್ಯವಾಗಿತ್ತು ಎಂಬುದನ್ನು ನಾವು ಮೊದಲೇ ಗಮನಿಸಿದ್ದೇವೆ. ನಮ್ಮಂಥಹ ದೇಶಗಳಲ್ಲಿ, ಬಂಡವಾಳದ ಆದಿಮ ಸಂಗ್ರಹಣೆಗಾಗಿ ಕಿರು ಉತ್ಪಾದಕರನ್ನು ನಿರುದ್ಯೋಗಿ ಕಾರ್ಮಿಕ ಪಡೆಗೆ ಸ್ಥಳಾಂತರಿಸಿದ ರೂಢ ಬಂಡವಾಳಶಾಹಿಯು ಅವರಿಗೆ ಕೆಲಸ ಒದಗಿಸುವಲ್ಲಿ ಯಾವತ್ತೂ ಯಶಸ್ವಿಯಾಗಲಿಲ್ಲ. ಯೂರೋಪಿನಲ್ಲೇ ಇದು ಸಂಭವಿಸಲಿಲ್ಲ. “ಹೊಸ ಜಗತ್ತಿಗೆ” ನಡೆದ ಸಾಮೂಹಿಕ ವಲಸೆಯು ಒಂದು ಸಾಮಾಜಿಕ ಬಿಕ್ಕಟ್ಟನ್ನು ಅಲ್ಲಿ ತಡೆಗಟ್ಟಿತು.  ತಮ್ಮ ಹಿಂದಿನ ಸಾಮ್ರಾಜ್ಯಶಾಹಿ ಯಜಮಾನರ ಮುಂದೆ ದೈನ್ಯದಿಂದ ಕೈಯೊಡ್ಡಿ ನಿಲ್ಲುವ ವಸಾಹತುಶಾಹಿಯ ನಂತರದ “ವಿಫಲ” ಪ್ರಭುತ್ವಗಳ ಸಾಲಿನಲ್ಲಿ ಭಾರತವೂ ಸೇರಬಾರದು ಎಂದಾದರೆ, ಬಂಡವಾಳದ ಈ ಆದಿಮ ಸಂಚಯದ ಪ್ರಕ್ರಿಯೆಯನ್ನು ವಿರೋಧಿಸಬೇಕಾಗತ್ತದೆ. ಈ ವಿರೋಧವು ಮೂರು ಕೃಷಿ ಕಾನೂನುಗಳಿಗೆ ವಿರೋಧವನ್ನು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣದ ವಿರೋಧವನ್ನೂ ಒಳಗೊಂಡಿರಬೇಕು. ಹಾಗಾಗಿ, ರಾಷ್ಟ್ರೀಕೃತ ಬ್ಯಾಂಕ್‌ಗಳ ಖಾಸಗೀಕರಣದ ವಿರುದ್ಧವಾಗಿ ನಡೆಸುವ ಹೋರಾಟವು ಮಹತ್ವ ಪಡೆಯುತ್ತದೆ.

ಅನು: ಕೆ.ಎಂ. ನಾಗರಾಜ್

Donate Janashakthi Media

Leave a Reply

Your email address will not be published. Required fields are marked *