ಗೃಹಜ್ಯೋತಿಯ ಬೆಳಕೂ ಹಿಂಬದಿಯ ಕತ್ತಲ ಪ್ರಪಂಚವೂ

ನಾ ದಿವಾಕರ

2022 ರ ಆರ್ಥಿಕ ವರ್ಷದಲ್ಲಿ ಕರ್ನಾಟಕದಾದ್ಯಂತ ಸ್ಥಾಪಿತ ವಿದ್ಯುತ್ ಸಾಮರ್ಥ್ಯವು ಸುಮಾರು 31 ಗಿಗಾವ್ಯಾಟ್ ಆಗಿತ್ತು. ಕರ್ನಾಟಕದಲ್ಲಿ ಶೇ.51ರಷ್ಟು ವಿದ್ಯುತ್ ನವೀಕರಿಸಬಹುದಾದ ಇಂಧನ ಮೂಲಗಳಿಂದ, ಶೇ.34ರಷ್ಟು ಉಷ್ಣ ಶಕ್ತಿಯಿಂದ, ಶೇ.12ರಷ್ಟು ಜಲವಿದ್ಯುತ್ ಮೂಲಗಳಿಂದ ಮತ್ತು ಶೇ.3ರಷ್ಟು ಪರಮಾಣು ಶಕ್ತಿಯಿಂದ ಬರುತ್ತದೆ. ಬೇಸಿಗೆಯಲ್ಲಿ ಗರಿಷ್ಠ ಬೇಡಿಕೆ 14,818 ಮೆಗಾವ್ಯಾಟ್ (ಮಾರ್ಚ್ 18, 2022) ಮತ್ತು ಗರಿಷ್ಠ 285 ಮಿಲಿಯನ್ ಯೂನಿಟ್ (ಮಾರ್ಚ್ 17, 2022) ಅನ್ನು ಸಹ ಉಷ್ಣ ವಿದ್ಯುತ್ ಮೇಲೆ ಕನಿಷ್ಠ ಅವಲಂಬನೆಯೊಂದಿಗೆ ನಿರ್ವಹಿಸಲಾಗುತ್ತದೆ. ರಾಜ್ಯ ಸರ್ಕಾರದ ಲೆಕ್ಕಾಚಾರದ ಪ್ರಕಾರ, ಕರ್ನಾಟಕದಲ್ಲಿ 2.14 ಕೋಟಿ ವಿದ್ಯುತ್ ಗ್ರಾಹಕರಿದ್ದು, ಪ್ರತಿ ಮನೆಗೆ ಸರಾಸರಿ 53-54 ಯೂನಿಟ್ ವಿದ್ಯುತ್ ಬಳಕೆಯಾಗುತ್ತಿದೆ. ದೇಶದಲ್ಲಿ ಸರಾಸರಿ ವಿದ್ಯುತ್‌ ಗೃಹಬಳಕೆಯಲ್ಲಿ ಕರ್ನಾಟಕದ ಇತರ ಎಲ್ಲ ರಾಜ್ಯಗಳಿಗಿಂತಲೂ ಕನಿಷ್ಠ ಮಟ್ಟದಲ್ಲಿದೆ. ಅಂದರೆ ಕಡಿಮೆ ವಿದ್ಯುತ್‌ ಬಳಸುವವರ ಸಂಖ್ಯೆ ಹೆಚ್ಚಾಗಿದೆ ಎಂದೇ ಅರ್ಥ.

ಯೋಜನೆಗಳನ್ನು ಜಾರಿಮಾಡುವ ಮುನ್ನ ವೈಜ್ಞಾನಿಕ ಪರಾಮರ್ಶೆ ಮಾಡುವುದು ಅಗತ್ಯ

2023ರ ಚುನಾವಣೆಗಳಲ್ಲಿ ಕರ್ನಾಟಕದ ಮತದಾರರು ನೀಡಿರುವ ಅಭೂತಪೂರ್ವ ತೀರ್ಪು ಒಂದೆಡೆ ರಾಜಕೀಯ ಪಕ್ಷಗಳ ದೌರ್ಬಲ್ಯ, ವೈಫಲ್ಯ ಹಾಗೂ ಸೈದ್ಧಾಂತಿಕ ಕೊರತೆಯನ್ನು ಹೊರಗೆಡಹಿದ್ದರೆ ಮತ್ತೊಂದೆಡೆ ಆಡಳಿತದ ಚುಕ್ಕಾಣಿ ಹಿಡಿಯುವ ಪಕ್ಷದಲ್ಲಿ ಇರಬೇಕಾದ ಬದ್ಧತೆ, ಕ್ಷಮತೆ ಮತ್ತು ಬಾಧ್ಯತೆಗಳ ಇತಿಮಿತಿಗಳನ್ನೂ ಒಮ್ಮೆಲೆ ಹೊರಹಾಕಿಬಿಟ್ಟಿದೆ. ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ತನ್ನ ಘೋಷಿತ ಉಚಿತ ಕೊಡುಗೆಗಳನ್ನು ಶತಾಯಗತಾಯ ಜಾರಿಗೊಳಿಸಲು ಪ್ರಯತ್ನಿಸಿರುವಂತೆಯೇ, ಕೆಳಸ್ತರದ ಜನಸಾಮಾನ್ಯರಿಗೆ ಉಪಯುಕ್ತವಾಗುವ ಈ ‘ಉಚಿತ ಕೊಡುಗೆ’ ಗಳಿಗೆ ಅಡ್ಡಗಾಲು ಹಾಕುವ ಪ್ರವೃತ್ತಿಯೂ ಸಹ ಢಾಳಾಗಿ ಕಾಣುತ್ತಿದೆ. ರಾಜ್ಯದ ವಿರೋಧ ಪಕ್ಷಗಳು ಸರ್ಕಾರದ ಯೋಜನೆಗಳು ವಿಫಲವಾಗುವುದನ್ನೇ ಕಾಯುತ್ತಿರುವಂತೆ ತೋರುತ್ತದೆ. ತನ್ಮೂಲಕ ತಮ್ಮ ರಾಜಕಾರಣ ಕೇವಲ ಅಧಿಕಾರ ಕೇಂದ್ರಿತವೇ ಹೊರತು, ಜನಪರ ಕಾಳಜಿಯ ಸಾಮಾಜಿಕ ಜವಾಬ್ದಾರಿ ಅಲ್ಲ ಎಂಬುದನ್ನು ಸ್ಪಷ್ಟವಾಗಿ ನಿರೂಪಿಸಿವೆ. ಮತ್ತೊಂದೆಡೆ ಇದೇ ವಿರೋಧಿ ಬಣದ ಹಿಂಬಾಲಕ ಸಮಾಜವೂ ಸಹ ಸರ್ಕಾರದ ಜನೋಪಯೋಗಿ ಪ್ರಯತ್ನಗಳನ್ನು ಅಪಹಾಸ್ಯ ಮಾಡುವ ಮೂಲಕ ತನ್ನೊಳಗಿನ ಬೌದ್ಧಿಕ ಮಾಲಿನ್ಯವನ್ನು ಹೊರಹಾಕುತ್ತಿದೆ.

ಪ್ರತಿಯೊಂದು ಮನೆಗೂ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುವ ಕರ್ನಾಟಕ ಸರ್ಕಾರದ ಯೋಜನೆ ಈ ಅಪಹಾಸ್ಯ/ಲೇವಡಿಗಳ ನಡುವೆಯೇ ಜನಸಾಮಾನ್ಯರಿಂದ ಅನುಮೋದನೆಯನ್ನೂ ಪಡೆಯುತ್ತಿದೆ. ವಾಣಿಜ್ಯ ಬಳಕೆ ಹೊರತುಪಡಿಸಿ ಪ್ರತಿ ಮನೆಗೆ 200 ಯೂನಿಟ್​ಗಳವರೆಗೆ ಉಚಿತ ವಿದ್ಯುತ್​ ನೀಡುವುದು ಗೃಹಜ್ಯೋತಿ ಯೋಜನೆಯ ಉದ್ದೇಶವಾಗಿದೆ. ಆದರೆ, ರಾಜ್ಯದ ಬಹುತೇಕ ಮನೆಗಳಲ್ಲಿ 200 ಯೂನಿಟ್​ ವಿದ್ಯುತ್​ ಬಳಸದೆ ಇರುವುದರಿಂದ ಪ್ರತಿ ತಿಂಗಳು ಪ್ರತಿ ಕುಟುಂಬಗಳು ಬಳಸುವ ಸರಾಸರಿ ವಿದ್ಯುತ್​ ಯೂನಿಟ್​ ಮೇಲೆ ಹೆಚ್ಚುವರಿಯಾಗಿ ಶೇ. 10 ರಷ್ಟು ವಿದ್ಯುತ್ ಬಳಕೆ ಮಾತ್ರ ಅವಕಾಶ​ ನೀಡಲಾಗುತ್ತದೆ. ಅದಕ್ಕಿಂತ ಮಿತಿ ಮೀರಿದರೆ ಹೆಚ್ಚುವರಿ ವಿದ್ಯುತ್​ ಬಳಕೆಯ ಬಿಲ್​ ಕಟ್ಟಬೇಕು. ಅಲ್ಲದೆ, 200 ಯೂನಿಟ್​ಗಿಂತ ಹೆಚ್ಚು ಬಳಸಿದರೆ ಪೂರ್ತಿ ಬಿಲ್​ ಮೊತ್ತ ಪಾವತಿಸಬೇಕಾಗುತ್ತದೆ ಎಂದು ಇಂಧನ ಇಲಾಖೆ ಹೇಳಿದೆ. ರಾಜ್ಯದಲ್ಲಿ 2.16 ಕೋಟಿ ಜನರು ಗೃಹಜ್ಯೋತಿ ಯೋಜನೆ ಫಲಾನುಭವಿಗಳಿದ್ದು, ಅದರಲ್ಲಿ 2.14 ಕೋಟಿ ಜನರು ಅರ್ಹರಿದ್ದಾರೆ.

ಗೃಹಲಕ್ಷ್ಮಿಯ ಫಲಾನುಭವಿಗಳು

ಈ ಯೋಜನೆಯ ಫಲಾನುಭವಿಗಳನ್ನು ಮೂರು ವರ್ಗಗಳಾಗಿ ವಿಂಗಡಿಸಬಹುದು.  ಮೊದಲನೆಯದಾಗಿ  ಈ ಯೋಜನೆಯಿಂದ ರಾಜ್ಯದ ಬೊಕ್ಕಸ ಬರಿದಾಗುತ್ತದೆ ಕಾಂಗ್ರೆಸ್‌ ತನ್ನ ರಾಜಕೀಯ ಲಾಭಕ್ಕಾಗಿ ಉಚಿತ ವಿದ್ಯುತ್‌ ನೀಡುತ್ತಿದೆ, ಇದರಿಂದ ಕರ್ನಾಟಕದಲ್ಲಿ ವಿದ್ಯುತ್‌ ಉತ್ಪಾದನೆ ಮತ್ತು ಪ್ರಸರಣವನ್ನು ನಿರ್ವಹಿಸುವ ಕರ್ನಾಟಕ ವಿದ್ಯುತ್‌ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)  ಮತ್ತು ಕರ್ನಾಟಕ ವಿದ್ಯುಚ್ಚಕ್ತಿ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಈ ಎರಡೂ ಸಂಸ್ಥೆಗಳು  ಅಪಾರ ನಷ್ಟ ಅನುಭವಿಸುತ್ತದೆ ಎಂದು ಹುಯಿಲೆಬ್ಬಿಸುವ ಹಿತವಲಯದ ಮಧ್ಯಮ ವರ್ಗಗಳು ತಮ್ಮ ವಿದ್ಯುತ್‌ ಖಾತೆಗಳನ್ನು ಆಧಾರ್‌ಗೆ ಲಿಂಕ್‌ ಮಾಡುವ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ. ಅತಿ ಹೆಚ್ಚು ವಿದ್ಯುತ್‌ ದುರ್ಬಳಕೆ ಮಾಡುವ ಈ ವರ್ಗಗಳು ಈಗ ದಿನನಿತ್ಯ ಬಳಕೆಯಾದ ಯೂನಿಟ್‌ಗಳನ್ನು ಲೆಕ್ಕಹಾಕಲಾರಂಭಿಸಿವೆ. ಆನ್‌ಲೈನ್‌ ಅರ್ಜಿ ಸಲ್ಲಿಕೆಯ ಸುಗಮ ಅನುಕೂಲತೆಗಳನ್ನು ಹೊಂದಿರುವ ಈ ವರ್ಗಕ್ಕೆ ಫಲಾನುಭವಿಗಳಾಗುವ ಉತ್ಸುಕತೆ ಸಹಜವಾಗಿಯೇ ಹೆಚ್ಚಾಗಿರುತ್ತದೆ. ಎರಡನೆಯದಾಗಿ 200 ಯೂನಿಟ್‌ ಮೇಲೆ ಬಳಕೆ ಮಾಡುವ ಐಷಾರಾಮಿ ಮಧ್ಯಮ ವರ್ಗಗಳಲ್ಲಿ ಸಹಜವಾಗಿಯೇ ಬಡಜನತೆಯ ಬಗ್ಗೆ ಇರುವ ತಾತ್ಸಾರದ ಮನೋಭಾವಕ್ಕೆ ಗೃಹಲಕ್ಷ್ಮಿ ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ. ಈ ವರ್ಗದ ಜನತೆ ವ್ಯರ್ಥವಾಗಿ ಬಳಸುವ ವಿದ್ಯುತ್‌ ಉಳಿತಾಯ ಮಾಡಿದರೆ ಬಹುಶಃ ರಾಜ್ಯದ ಸಮಸ್ತ ಜನತೆಗೂ ಉಚಿತ ವಿದ್ಯುತ್‌ ನೀಡಬಹುದು.‌

ಇನ್ನು ಮೂರನೆಯ ವರ್ಗವಾಗಿ ಈ ಯೋಜನೆಗೆ ಸಂಪೂರ್ಣ ಅರ್ಹರಾದ ನೈಜ ಫಲಾನುಭವಿಗಳತ್ತ  ನಾವು ಗಮನಹರಿಸಬೇಕಿದೆ. ತಿಂಗಳಿಗೆ ನೂರು ಯೂನಿಟ್‌ಗಿಂತಲೂ ಕಡಿಮೆ ವಿದ್ಯುತ್‌ ಬಳಕೆ ಮಾಡುವ ಗೃಹಬಳಕೆ ವಿದ್ಯುತ್‌ ಗ್ರಾಹಕರು ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಇಹೆಚ್‌, ಹವಾನಿಯಂತ್ರಣ, ಗೀಜರ್‌ ಮತ್ತಿತರ ವಿದ್ಯುತ್‌ ಉಪಕರಣಗಳನ್ನು ಬಳಸದೆ ಇರುವ ದುಡಿಯುವ ವರ್ಗಗಳ ಲಕ್ಷಾಂತರ ಕುಟುಂಬಗಳಿಗೆ ಈ ಯೋಜನೆ ಒಂದು ವರದಾನವಾಗಿ ಕಾಣುತ್ತದೆ. ಹಾಗೆಯೇ ಮನೆಗೆ ಒಂದೇ ದೀಪ ಇರುವಂತಹ ಗುಡಿಸಲುಗಳೂ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ, ಬುಡಕಟ್ಟು ಸಮುದಾಯಗಳಲ್ಲಿ ಹೇರಳವಾಗಿವೆ. 2017ರ ಅಧಿಕೃತ ಮಾಹಿತಿಯ ಅನುಸಾರ ರಾಜ್ಯದ 29 ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕವೇ ಇರಲಿಲ್ಲ. (ಇವತ್ತಿನ ಪರಿಸ್ಥಿತಿ ಭಿನ್ನವಾಗಿದೆಯೇ ಪರಿಶೀಲಿಸಬೇಕಿದೆ). ಈ ಶ್ರಮಿಕ ಜನತೆಗೆ ಗೃಹಲಕ್ಷ್ಮಿ ಯೋಜನೆ ಹೆಚ್ಚು ಉಪಯುಕ್ತವಾಗುತ್ತದೆ. ಆದರೆ ಆಧಾರ್‌ ಮತ್ತು ವಿದ್ಯುತ್‌ ಖಾತೆಯನ್ನು ಲಿಂಕ್‌ ಮಾಡುವ ಪ್ರಕ್ರಿಯೆಯಲ್ಲಿ ಹೆಚ್ಚು ಪರದಾಡುವ ಜನತೆಯೂ ಇವರೇ ಆಗಿರುತ್ತಾರೆ. ಸೇವಾಕೇಂದ್ರಗಳ ಮುಂದೆ ಸಾಲುಗಟ್ಟಿ ನಿಂತವರನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.

ಉಚಿತ ಸೌಲಭ್ಯಗಳ ಸವಾಲುಗಳು

ಅರ್ಹ-ನೈಜ ಫಲಾನುಭವಿಗಳಾಗಬೇಕಾದ ಲಕ್ಷಾಂತರ ಜನತೆಗೆ ಉಚಿತ ವಿದ್ಯುತ್‌ ಸೌಲಭ್ಯವು ಸಮರ್ಪಕವಾಗಿ ತಲುಪುವಂತೆ ಜಾಗ್ರತೆ ವಹಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಕಾಂಗ್ರೆಸ್‌ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಗ್ಯಾರಂಟಿಗಳನ್ನು ತಕ್ಷಣದಿಂದಲೇ ಜಾರಿಗೊಳಿಸಬೇಕು ಎಂಬ ಆತುರದ ನಿರ್ಧಾರಕ್ಕೆ ಬರಬಾರದಿತ್ತು. ಈಗಾಗಲೇ ಅಕ್ಕಿ ಸರಬರಾಜು ನಿಲ್ಲಿಸುವ ಮೂಲಕ ಕೇಂದ್ರ ಸರ್ಕಾರ ಅಡ್ಡಗಾಲು ಹಾಕಿದೆ. ನಾಳೆ ವಿದ್ಯುತ್‌ ಪ್ರಸರಣ ಮತ್ತು ಉತ್ಪಾದನೆಯಲ್ಲೂ ಎಂತಹ ಸಮಸ್ಯೆಗಳು ಉದ್ಭವಿಸುತ್ತದೆ ಎಂದು ಹೇಳಲಾಗುವುದಿಲ್ಲ. ಯೋಜನೆಯನ್ನು ಜಾರಿಗೊಳಿಸುವ ಮುನ್ನ ಸಿದ್ಧರಾಮಯ್ಯ ಸರ್ಕಾರ ಒಂದು ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿ, ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ವಿದ್ಯುತ್‌ ಪ್ರಮಾಣ, ಬಳಕೆಯ ಪ್ರಮಾಣ ಮತ್ತು ಪ್ರಸರಣದ ಸಮಸ್ಯೆಗಳ ಬಗ್ಗೆ ಕೂಲಂಕುಷವಾಗಿ ಅಧ್ಯಯನ ಮಾಡಬೇಕಿತ್ತು. ಹಾಗೆಯೇ ಈ ಯೋಜನೆಯಿಂದ ಕೆಇಆರ್‌ಸಿ ಸಂಸ್ಥೆಗೆ ಉಂಟಾಗುವ ಆರ್ಥಿಕ ಹೊರೆ ಮತ್ತು ತಾಂತ್ರಿಕ-ಆಡಳಿತಾತ್ಮಕ ಸಮಸ್ಯೆಗಳ ಬಗ್ಗೆಯೂ ಗಂಭೀರ ಆಲೋಚನೆ ಮಾಡಬೇಕಿತ್ತು. ಆನಂತರವೇ ಯೋಜನೆಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸಬಹುದಿತ್ತು. ಹಾಗೆ ಮಾಡಿದ್ದಲ್ಲಿ ವಾಮಮಾರ್ಗಗಳ ಮೂಲಕ ಫಲಾನುಭವಿಗಳಾಗುವ ಹಿತವಲಯದವರನ್ನು ಈ ಯೋಜನೆಯ ಚೌಕಟ್ಟಿನಿಂದ ಹೊರಗಿಡಬಹುದಿತ್ತು.

ಇದನ್ನೂ ಓದಿ:ಗೃಹ ಲಕ್ಷ್ಮೀ ಯೋಜನೆಗೆ ಪ್ರತ್ಯೇಕ ಆ್ಯಪ್‌

2022 ರ ಆರ್ಥಿಕ ವರ್ಷದಲ್ಲಿ ಕರ್ನಾಟಕದಾದ್ಯಂತ ಸ್ಥಾಪಿತ ವಿದ್ಯುತ್ ಸಾಮರ್ಥ್ಯವು ಸುಮಾರು 31 ಗಿಗಾವ್ಯಾಟ್ ಆಗಿತ್ತು. ಕರ್ನಾಟಕದಲ್ಲಿ ಶೇ.51ರಷ್ಟು ವಿದ್ಯುತ್ ನವೀಕರಿಸಬಹುದಾದ ಇಂಧನ ಮೂಲಗಳಿಂದ, ಶೇ.34ರಷ್ಟು ಉಷ್ಣ ಶಕ್ತಿಯಿಂದ, ಶೇ.12ರಷ್ಟು ಜಲವಿದ್ಯುತ್ ಮೂಲಗಳಿಂದ ಮತ್ತು ಶೇ.3ರಷ್ಟು ಪರಮಾಣು ಶಕ್ತಿಯಿಂದ ಬರುತ್ತದೆ. ಬೇಸಿಗೆಯಲ್ಲಿ ಗರಿಷ್ಠ ಬೇಡಿಕೆ 14,818 ಮೆಗಾವ್ಯಾಟ್ (ಮಾರ್ಚ್ 18, 2022) ಮತ್ತು ಗರಿಷ್ಠ 285 ಮಿಲಿಯನ್ ಯೂನಿಟ್ (ಮಾರ್ಚ್ 17, 2022) ಅನ್ನು ಸಹ ಉಷ್ಣ ವಿದ್ಯುತ್ ಮೇಲೆ ಕನಿಷ್ಠ ಅವಲಂಬನೆಯೊಂದಿಗೆ ನಿರ್ವಹಿಸಲಾಗುತ್ತದೆ. ರಾಜ್ಯ ಸರ್ಕಾರದ ಲೆಕ್ಕಾಚಾರದ ಪ್ರಕಾರ, ಕರ್ನಾಟಕದಲ್ಲಿ 2.14 ಕೋಟಿ ವಿದ್ಯುತ್ ಗ್ರಾಹಕರಿದ್ದು, ಪ್ರತಿ ಮನೆಗೆ ಸರಾಸರಿ 53-54 ಯೂನಿಟ್ ವಿದ್ಯುತ್ ಬಳಕೆಯಾಗುತ್ತಿದೆ. ದೇಶದಲ್ಲಿ ಸರಾಸರಿ ವಿದ್ಯುತ್‌ ಗೃಹಬಳಕೆಯಲ್ಲಿ ಕರ್ನಾಟಕದ ಇತರ ಎಲ್ಲ ರಾಜ್ಯಗಳಿಗಿಂತಲೂ ಕನಿಷ್ಠ ಮಟ್ಟದಲ್ಲಿದೆ. ಅಂದರೆ ಕಡಿಮೆ ವಿದ್ಯುತ್‌ ಬಳಸುವವರ ಸಂಖ್ಯೆ ಹೆಚ್ಚಾಗಿದೆ ಎಂದೇ ಅರ್ಥ.

ಕೆಇಆರ್‌ಸಿ ಇತ್ತೀಚೆಗೆ ವಿದ್ಯುತ್‌ ದರಗಳನ್ನು ಹೆಚ್ಚಳ ಮಾಡಿದ್ದು ಪ್ರತಿ ಯೂನಿಟ್‌ಗೆ 1.49 ರೂಗಳನ್ನು ವಿಧಿಸಲಾಗುತ್ತದೆ.  ಗೃಹಬಳಕೆ ವಿದ್ಯುತ್‌ ಶುಲ್ಕವನ್ನು ಈ ವರ್ಷ ಏಪ್ರಿಲ್‌ನಿಂದಲೇ ಹೆಚ್ಚಿಸಲಾಗಿದ್ದು ಈ ಮುನ್ನ  50 ಯೂನಿಟ್‌ವರೆಗೆ 4.15 ರೂ, 50 ರಿಂದ 100  ಯೂನಿಟ್‌ವರೆಗೆ 4.75 ರೂ ಮತ್ತು100 ಯೂನಿಟ್‌ ಮೇಲ್ಪಟ್ಟು 7.00 ರೂಗಳನ್ನು ವಿಧಿಸಲಾಗುತ್ತಿತ್ತು. ಈಗ ಪರಿಷ್ಕೃತ ದರಗಳ ಅನುಸಾರ ಎರಡು ಹಂತಗಳ ಶುಲ್ಕ ವಿಧಿಸಲಾಗಿದ್ದು 100 ಯೂನಿಟ್‌ವರೆಗೆ 4.75 ರೂ,  100 ಯೂನಿಟ್‌ಗೂ ಹೆಚ್ಚಿನ ಬಳಕೆಗೆ ಪ್ರತಿ ಯೂನಿಟ್‌ಗೆ 7.15 ರೂ ಶುಲ್ಕ ನಿಗದಿಪಡಿಸಲಾಗಿದೆ. ಗೃಹಬಳಕೆ ವಿದ್ಯುತ್‌ ಸಂಪರ್ಕಕ್ಕೆ ಪ್ರತಿ ಕಿಲೋವ್ಯಾಟ್‌ಗೆ ಇದ್ದ ನಿಗದಿತ ಶುಲ್ಕವನ್ನು ಹೆಚ್ಚಿಸಲಾಗಿದ್ದು 50 ಕಿ.ವ್ಯಾ ವರೆಗೆ 110 ರೂ, 50 ಕಿ. ವ್ಯಾ ಮೇಲ್ಪಟ್ಟು 210 ರೂ ನಿಗದಿಪಡಿಸಲಾಗಿದೆ. ವಾಣಿಜ್ಯ ಬಳಕೆಯ ವಿದ್ಯುತ್‌ ಸಂಪರ್ಕಗಳಿಗೆ  101 ರಿಂದ 200 ಯೂನಿಟ್ ಬಳಸುವವರು ಪ್ರತಿ ಯೂನಿಟ್ ಗೆ ₹ 175 ಮತ್ತು ವಿದ್ಯುತ್ ಶುಲ್ಕ ₹ 7.15 ಪಾವತಿಸುತ್ತಾರೆ. ಈ ವರ್ಷ ಸ್ಲ್ಯಾಬ್ ಗಳ ಪರಿಷ್ಕರಣೆಯ ನಂತರ, 0 – 100 ಯೂನಿಟ್ ಬಳಸುವವರು ಪ್ರತಿ ಯೂನಿಟ್ ಗೆ ₹ 110 ಮತ್ತು ವಿದ್ಯುತ್ ಶುಲ್ಕವನ್ನು ₹ 4.75 ಪಾವತಿಸಬೇಕಾಗುತ್ತದೆ.

ಸರ್ಕಾರದ ಹೊರೆಗೆ ಸಂಸ್ಥೆಯ ಹೆಗಲು

ಈ ಹೊಸ ಶುಲ್ಕಗಳ ನಂತರವೂ ಗೃಹಲಕ್ಷ್ಮಿ ಯೋಜನೆಯ ಅನುಷ್ಟಾನಕ್ಕೆ ವಾರ್ಷಿಕ 13 ಸಾವಿರ ಕೋಟಿ ರೂಗಳಷ್ಟು ಹೊರೆಯಾಗುತ್ತದೆ ಎಂದು‌ ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತ (ಕೆಪಿಸಿಎಲ್) ಅಧಿಕಾರಿಗಳು ಹೇಳಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ವಿದ್ಯುತ್ ಪರಿಸ್ಥಿತಿಯನ್ನು ನಿಭಾಯಿಸಲು 5 ಲಕ್ಷ ಟನ್ ಕಲ್ಲಿದ್ದಲು ಖರೀದಿಗೆ ಜಾಗತಿಕ ಟೆಂಡರ್‌ಗಳನ್ನು ಆಹ್ವಾನಿಸುತ್ತಿದ್ದರೂ, ಸಂಸ್ಥೆಯು ವಿದ್ಯುತ್ ಸರಬರಾಜು ಕಂಪನಿಗಳು (ಎಸ್ಕಾಂಗಳು) 15,000 ಕೋಟಿ ರೂ. ಮತ್ತು ಕರ್ನಾಟಕ ಪವರ್ ಟ್ರಾನ್ಸ್‌ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಕಳೆದ ಹಲವಾರು ವರ್ಷಗಳಿಂದ ಖರೀದಿಸಿದ ವಿದ್ಯುತ್‌ಗೆ ಬದ್ಧವಾಗಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಎಲ್ಲಾ ಪೂರೈಕೆ ಕಂಪನಿಗಳು ಮತ್ತು ಕೆಪಿಟಿಸಿಎಲ್‌ನಿಂದ 15,464.77 ಕೋಟಿ ರೂಪಾಯಿಗಳ ಪಾವತಿ ಬಾಕಿ ಇದೆ, ಇದು ದೀರ್ಘಾವಧಿಯಲ್ಲಿ ಕೆಪಿಸಿಎಲ್ ಮತ್ತು ರಾಜ್ಯ-ಚಾಲಿತ ಉಷ್ಣ ವಿದ್ಯುತ್ ಸ್ಥಾವರಗಳ ಕಾರ್ಯಾಚರಣೆಯ ದಕ್ಷತೆಯ ಮೇಲೆ ಪರಿಣಾಮ ಬೀರಬಹುದು ಎಂದು ತಜ್ಞರು ಹೇಳುತ್ತಾರೆ. ಅತಿ ಹೆಚ್ಚು ಸುಸ್ತಿದಾರರೆಂದರೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ), ಇದು 6,610.95 ಕೋಟಿ ರೂ.ಗಳ ಬಾಕಿಯನ್ನು ಹೊಂದಿದೆ, ಇದರಲ್ಲಿ ರೂ. 1,607.89 ಕೋಟಿ ಬಡ್ಡಿಯಿಂದ ಕೂಡಿದೆ. ಅಂಕಿಅಂಶಗಳು ಅಕ್ಟೋಬರ್ 20, 2018 ರವರೆಗೆ ನವೀಕೃತವಾಗಿವೆ. ‌

ಕಲಬುರ್ಗಿಯ ಜೆಸ್ಕಾಂ 2334.64 ಕೋಟಿ ರೂ, ಮೈಸೂರಿನ ಸೆಸ್ಕಾಂ 2,174.17 ಕೋಟಿ ರೂ, ಹುಬ್ಬಳ್ಳಿಯ ಹೆಸ್ಕಾಂ 191435 ಕೋಟಿ ರೂ, ಮಂಗಳೂರಿನ ಮೆಸ್ಕಾಂ 1,729.60 ರೂ ಮತ್ತು ಕೆಪಿಟಿಸಿಎಲ್‌ 701.06 ಕೋಟಿ ರೂಗಳ ಬಾಕಿ ಉಳಿಸಿಕೊಂಡಿವೆ. ಎಸ್ಕಾಂಗಳು ಉಚಿತ ಪಂಪ್‌ಸೆಟ್‌ ಇತ್ಯಾದಿ ಸೌಲಭ್ಯಗಳಿಗೆ ವ್ಯಯ ಮಾಡುವ ವಿದ್ಯುತ್ತಿನ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕಾದರೂ, ಸರ್ಕಾರಗಳು ಈ ನಿಟ್ಟಿನಲ್ಲಿ ವಿಫಲವಾಗಿರುವುದು ಈ ಬಾಕಿ ಮೊತ್ತಕ್ಕೆ ಕಾರಣವಾಗಿದೆ. ಆದಾಗ್ಯೂ ಎಸ್ಕಾಂಗಳು ಮತ್ತು ಕೆಪಿಟಿಸಿಎಲ್‌ನಿಂದ ಪಾವತಿಸದ ಮೊತ್ತವು ಕೆಪಿಸಿಎಲ್‌ನ ಕಾರ್ಯಾಚರಣೆಯ ದಕ್ಷತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.  ಇದು ಸರ್ಕಾರದ ಆಂತರಿಕ ವಿಚಾರವಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದೂ ಹೇಳಲಾಗಿದೆ . ಕೆಪಿಸಿಎಲ್ ಹೇಗೆ ಕಾರ್ಯನಿರ್ವಹಿಸುತ್ತದೆ ಅಥವಾ ಕಲ್ಲಿದ್ದಲು ಖರೀದಿಸುತ್ತದೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, “ಕೆಪಿಸಿಎಲ್ ರಾಜ್ಯ ಮತ್ತು ಇತರ ಸಂಸ್ಥೆಗಳಿಂದ ಸಾಲ ಪಡೆಯುತ್ತದೆ ಮತ್ತು ಅದನ್ನು ಸುಗಮವಾಗಿ ನಡೆಸುವುದನ್ನು ರಾಜ್ಯವು ಖಚಿತಪಡಿಸುತ್ತದೆ” ಎಂದು ಹೇಳಿದ್ದಾರೆ.

ಆದರೆ ಕರ್ನಾಟಕ ಸರ್ಕಾರವೇ ಐದು ವಿದ್ಯುತ್‌ ಸರಬರಾಜು ಕಂಪನಿಗಳಿಗೆ (ಎಸ್ಕಾಂಗಳು) 20 ಸಾವಿರ ಕೋಟಿ ರೂಗಳಷ್ಟು ಬಾಕಿ ಪಾವತಿ ಉಳಿಸಿಕೊಂಡಿರುವುದನ್ನು ಭಾವಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಅಧಿಕಾರಾವಧಿಯಲ್ಲೇ ದೃಢೀಕರಿಸಿದ್ದಾರೆ. ವಿವಿಧ ಪಟ್ಟಣ-ನಗರಸಭೆಗಳ ವತಿಯಿಂದ ಎಸ್ಕಾಂಗಳಿಗೆ 5,975 ಕೋಟಿ ರೂ ಬಾಕಿ ಪಾವತಿಯಾಗಬೇಕಿದೆ. 30.6  ಲಕ್ಷ ನೀರಾವರಿ ಪಂಪ್‌ಸೆಟ್‌ಗಳಿಗೆ ಸರಬರಾಜು ಮಾಡಲಾಗುವ ವಿದ್ಯುತ್‌ ಶುಲ್ಕದ ರೂಪದಲ್ಲಿ 12,912 ಕೋಟಿ ರೂಗಳನ್ನು ರಾಜ್ಯದ ಹಣಕಾಸು ಇಲಾಖೆ ಎಸ್ಕಾಂಗಳಿಗೆ ಪಾವತಿ ಮಾಡಬೇಕಿದೆ. ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲಾಡಳಿತಗಳು 3,750 ಕೋಟಿ ರೂಗಳನ್ನೂ, ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ಒಳಚರಂಡಿ ಮಂಡಲಿಯ ಕಡೆಯಿಮದ 3,310 ಕೋಟಿ ರೂ, ವಿವಿಧ ಗ್ರಾಮಪಂಚಾಯತ್‌ಗಳಿಂದ 2,444 ಕೋಟಿ ರೂಗಳಷ್ಟು ವಿದ್ಯುತ್‌ ಬಿಲ್‌ ಪಾವತಿಯಾಗಬೇಕಿದೆ. ವಿದ್ಯುತ್‌ ಉತ್ಪಾದನೆ, ಪ್ರಸರಣ ಮತ್ತು ಸರಬರಾಜು ವ್ಯವಸ್ಥೆಯನ್ನು ನಿರ್ವಹಿಸುವ ಕೆಇಆರ್‌ಸಿ ಸಂಸ್ಥೆಯನ್ನು ಸ್ವಾಯತ್ತತೆಯೊಂದಿಗೆ ಸಮರ್ಥವಾಗಿ  ನಿರ್ವಹಿಸಿದರೆ, ಉಚಿತ ವಿದ್ಯುತ್‌ ಪೂರೈಕೆಯಿಂದ ಸೃಷ್ಟಿಯಾಗುವ ಹಣಕಾಸು ಹೊರೆಯಿಂದ ಸುಲಭವಾಗಿ ಪಾರಾಗಬಹುದು.

ಬಳಕೆಯ ವಾಮಮಾರ್ಗಗಳು

ಸಿದ್ಧರಾಮಯ್ಯ ಸರ್ಕಾರವು ಸಾಮಾನ್ಯ ಜನತೆಗೆ ಉಪಯುಕ್ತವಾಗುವ ಒಂದು ಮಹತ್ತರ ಯೋಜನೆಯನ್ನು ಗೃಹಲಕ್ಷಿಯ ಹೆಸರಿನಲ್ಲಿ ಜಾರಿಗೆ ತಂದಿದೆ. ಆದರೆ ಈ ಯೋಜನೆಯ ಅನುಷ್ಟಾನದ ಪ್ರಕ್ರಿಯೆಯಲ್ಲಿ ಕೆಲವು ಮುಂಜಾಗ್ರತೆ ಕ್ರಮಗಳನ್ನೂ ಕೈಗೊಳ್ಳಬೇಕಿದೆ. ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್‌ ದರಗಳಲ್ಲಿರುವ ವ್ಯತ್ಯಾಸವನ್ನು ಗಮನಿಸುತ್ತಲೇ, ರಾಜ್ಯಾದ್ಯಂತ ವ್ಯಾಪಾರದಲ್ಲಿ ತೊಡಗಿರುವ ಅಂಗಡಿ ಮುಗ್ಗಟ್ಟುಗಳು, ಗೃಹ ಕೈಗಾರಿಕೆಗಳು, ವಾಣಿಜ್ಯ ಮಳಿಗೆಗಳು, ಖಾಸಗಿ ವೈದ್ಯರ ಕ್ಲಿನಿಕ್‌ಗಳು ಮತ್ತು ಇತರ ಸಣ್ಣ ಪುಟ್ಟ ದುಖಾನುಗಳ ವಿದ್ಯುತ್‌ ಮೀಟರ್‌ಗಳನ್ನು ಲೆಕ್ಕಪರಿಶೋಧನೆಗೆ

ಒಳಪಡಿಸಬೇಕಿದೆ. ಮೈಸೂರು, ಬೆಂಗಳೂರು, ದಾವಣಗೆರೆ ಮೊದಲಾದ ದೊಡ್ಡ ನಗರಗಳಲ್ಲಷ್ಟೇ ಅಲ್ಲದೆ, ಸಣ್ಣ ಪಟ್ಟಣಗಳಲ್ಲೂ ಸಹ ಕಳೆದ ಎರಡು-ಮೂರು ದಶಕಗಳಲ್ಲಿ ವ್ಯಾಪಾರ-ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗಿವೆ. ನವ ಉದಾರವಾದ-ಬಂಡವಾಳಶಾಹಿ ಮಾರುಕಟ್ಟೆ ಆರ್ಥಿಕ ನೀತಿಗಳ ಪರಿಣಾಮ ಸರ್ಕಾರಿ ಉದ್ಯೋಗಾವಕಾಶಗಳು ಕುಸಿಯುತ್ತಿರುವುದರಿಂದ ಹೆಚ್ಚು ಹೆಚ್ಚು ಮಂದಿ ವ್ಯಾಪಾರದ ಮೊರೆ ಹೋಗುತ್ತಿರುವುದನ್ನು ಈ ದಶಕಗಳ ಬೆಳವಣಿಗೆಯಲ್ಲಿ ಗಮನಿಸಬಹುದು.

ಈ ಅವಧಿಯಲ್ಲೇ ಎಲ್ಲ ಊರು-ಪಟ್ಟಣ-ನಗರ-ಮಹಾನಗರಗಳಲ್ಲೂ ಮುಖ್ಯರಸ್ತೆಗಳೆಲ್ಲವೂ ವಾಣಿಜ್ಯ ಬೀದಿಗಳಾಗಿ ಪರಿವರ್ತನೆಯಾಗಿರುವುದನ್ನು ಗಮನಿಸಬಹುದು. ವಸತಿ ಸೌಕರ್ಯಕ್ಕಾಗಿ ನಿರ್ಮಿಸಿರುವ ಮನೆಗಳ ಮುಂಭಾಗವನ್ನು ಅಂಗಡಿ-ಮುಗ್ಗಟ್ಟುಗಳಾಗಿ ಪರಿವರ್ತಿಸುವ ಒಂದು ವಿಧಾನವನ್ನು ಹೆಚ್ಚಾಗಿ ಮಧ್ಯಮ ವರ್ಗಗಳು, ಬಂಡವಾಳಶಾಹಿ ಆರ್ಥಿಕತೆಯ ಫಲಾನುಭವಿಗಳು, ಸರ್ಕಾರಿ ಉದ್ಯೋಗಿಗಳು ಅಳವಡಿಸಿಕೊಂಡಿದ್ದಾರೆ. ಇದರ ಪರಿಣಾಮ ನಗರ ಪ್ರಾಧಿಕಾರ ಅಥವಾ ನಗರಸಭೆ-ಪುರಸಭೆಗಳಿಂದ ವಾಸಿಸಲೆಂದೇ ಪರವಾನಗಿ ಪಡೆದು ನಿರ್ಮಿಸಲಾಗುವ ಮನೆಗಳ ಮುಂಭಾಗಗಳನ್ನು ಅಂಗಡಿಗಳಾಗಿ ಪರಿವರ್ತಿಸಲಾಗಿದೆ. ಪರವಾನಗಿ ಪಡೆಯಲು ಒದಗಿಸುವ ನೀಲನಕ್ಷೆಯಲ್ಲಿ ಕಾರ್‌ಷೆಡ್‌ ಎಂದು ನಮೂದಿಸಲಾಗಿರುವ ಕೋಣೆಗಳನ್ನು ಅಂಗಡಿ ಅಥವಾ ವೈದ್ಯರ ಕ್ಲಿನಿಕ್‌ಗಳಾಗಿ ಮಾಡಲಾಗಿದೆ. ಹಲವಾರು ನಗರಗಳಲ್ಲಿ 30 X 40 ಅಥವಾ ಇನ್ನೂ ಹೆಚ್ಚಿನ ವಿಸ್ತೀರ್ಣದ ಮನೆಗಳ ಕಾಂಪೌಂಡ್‌ಗಳಲ್ಲೂ ಸಹ ಅಂಗಡಿಗಳನ್ನು ಕಟ್ಟಿ ವ್ಯಾಪಾರಿ ಮಳಿಗೆಗಳನ್ನು ನಡೆಸಲಾಗುತ್ತಿದೆ. ಈ ಬಹುಪಾಲು ಅಂಗಡಿ ಅಥವಾ ಕ್ಲಿನಿಕ್‌ಗಳಲ್ಲಿ ಗೃಹಬಳಕೆಯ ವಿದ್ಯುತ್‌ ಮೀಟರ್‌ಗಳೇ ಬಳಕೆಯಾಗುತ್ತಿರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಇದು ಪರಿಶೀಲನೆಗೊಳಪಡಬೇಕಿದೆ. ಯಾವುದೇ ವ್ಯಾಪಾರ ನಡೆಸುವ ಜಾಗಕ್ಕೆ ಕಟ್ಟಡ ತೆರಿಗೆ ಮತ್ತು ವಿದ್ಯುತ್‌ ಶುಲ್ಕವನ್ನು ವಾಣಿಜ್ಯ ದರಗಳಲ್ಲೇ ಪಾವತಿಸಬೇಕು ಎಂಬ ನಿಯಮವನ್ನು ಗಮನಿಸಿದಾಗ, ಈ ಕಟ್ಟಡಗಳೆಲ್ಲವೂ ವಾಮಮಾರ್ಗದಲ್ಲಿ ಗೃಹಬಳಕೆಯ ವಿದ್ಯುತ್‌ ಶುಲ್ಕ ಪಾವತಿಸಿ ವಾಣಿಜ್ಯ ಚಟುವಟಿಕೆಗಳಿಗೆ ಬಳಸುತ್ತಿರುವುದು ಕಂಡುಬರುತ್ತದೆ.

ಈ ದುರ್ಬಳಕೆ ಅಥವಾ ಸೋರಿಕೆಯನ್ನು ತಡೆಗಟ್ಟಬೇಕಾದರೆ ರಾಜ್ಯ ಸರ್ಕಾರ ಹಾಗೂ ಕೆಇಆರ್‌ಸಿ ಜಂಟಿಯಾಗಿ ರಾಜ್ಯಾದ್ಯಂತ ವಿದ್ಯುತ್‌ ಲೆಕ್ಕಪರಿಶೋಧನೆಯ (Electricity Auditing) ಕ್ರಮವನ್ನು ಕೈಗೊಳ್ಳುವ ತುರ್ತು ಎಂದಿಗಿಂತಲೂ ಇಂದು ತುರ್ತು ಎನಿಸುತ್ತದೆ. ಗೃಹಬಳಕೆಯ ಮೀಟರ್‌ನೊಂದಿಗೆ ವಾಣಿಜ್ಯ ಚಟುವಟಿಕೆ ನಡೆಸುವ ಮನೆಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವುದೇ ಅಲ್ಲದೆ, ಇಲ್ಲಿ ವ್ಯಾಪಾರ ವಹಿವಾಟು ನಡೆಸುವ ವ್ಯಾಪಾರಿಗಳಿಂದ ಸೂಕ್ತ ಶುಲ್ಕ ವಸೂಲಿ ಮಾಡುವ ಮೂಲಕ ರಾಜ್ಯದ ಬೊಕ್ಕಸಕ್ಕೆ ಉಂಟಾಗುವ ಹೊರೆಯನ್ನು ತಗ್ಗಿಸಲು ಯತ್ನಿಸಬಹುದು. ಐಸ್‌ಕ್ರೀಂ ತಯಾರಿಕೆ, ಪಾನಿಪೂರಿಯಂತಹ ವ್ಯಾಪಾರಿ ಸರಕುಗಳು, ಯಂತ್ರಾಧಾರಿತ ಹಪ್ಪಳ-ಸಂಡಿಗೆ ಇತ್ಯಾದಿ ತಯಾರಿಕೆಯನ್ನು ಮನೆಯ ಒಳಗೇ ಮಾಡಬಹುದಾದ್ದರಿಂದ, ಇಂತಹ ಮನೆಗಳು ಗೃಹಬಳಕೆಯ ದರದಲ್ಲೇ ವಿದ್ಯುತ್‌ ಶುಲ್ಕ ಪಾವತಿ ಮಾಡುತ್ತಿರುತ್ತವೆ. ಇಂಥವುಗಳನ್ನು ಸರ್ಕಾರ ಶೋಧಿಸಿ ಕ್ರಮ ಜರುಗಿಸಬೇಕಿದೆ.  ಕೈಯ್ಯಿಂದಲೇ ತಯಾರಿಸುವ ಗೃಹಕೈಗಾರಿಕೆಗಳಿಗೆ ವಿನಾಯಿತಿ ನೀಡಬಹುದು.

ಕೆಳಮಧ್ಯಮ ವರ್ಗಗಳಿಗೆ, ದುಡಿಯುವ ವರ್ಗಗಳಿಗೆ, ಬಡಜನತೆಗೆ ನೀಡಲಾಗುವ ಕೆಲವೇ ಸೌಲಭ್ಯಗಳ ಬಗ್ಗೆ ಅಥವಾ ಉಚಿತವಾಗಿ ನೀಡಲಾಗುವ ಕೊಡುಗೆಗಳ ಬಗ್ಗೆ ಅಪಹಾಸ್ಯ ಮಾಡುತ್ತಾ ಜಗತ್ತೇ ಮುಳುಗಿಹೋಗುತ್ತದೆ ಎಂದು ಹುಯಿಲೆಬ್ಬಿಸುವ ಮಧ್ಯಮ ವರ್ಗದ ಬೌದ್ಧಿಕ ವಲಯ ಇಂತಹ ವ್ಯತ್ಯಯಗಳ ಬಗ್ಗೆ ತಿಳಿದೂ ತಿಳಿಯದಂತೆ ಮೌನ ವಹಿಸಿರುತ್ತದೆ.  ಇಂದಿಗೂ ಒಂದೇ ಒಂದು ಹಳೆಯ ಕಾಲದ ವಿದ್ಯುತ್‌ ಬಲ್ಬುಗಳನ್ನು ಬಳಸುವ ಕುಟುಂಬಗಳು ಆದಿವಾಸಿಗಳ ನಡುವೆ, ಕುಗ್ರಾಮಗಳಲ್ಲಿ ಹೇರಳವಾಗಿವೆ. ಇದೇ ವೇಳೆ ಇಬ್ಬರೇ ಇರುವ ವಿಲ್ಲಾಗಳಲ್ಲಿ ಹತ್ತಾರು ಬಲ್ಬುಗಳನ್ನು ಝಗಮಗಿಸುವ ಕುಟುಂಬಗಳು ನಗರಗಳಲ್ಲಿ ರಾರಾಜಿಸುತ್ತಿವೆ. ಇವೆರಡರ ನಡುವೆ ಇರುವ ಒಂದು ಜಗತ್ತನ್ನು ಕತ್ತಲು ಆವರಿಸಿದೆ. ಈ ಕತ್ತಲಲ್ಲಿ ವಾಸಿಸುವ ಒಂದು ವರ್ಗಕ್ಕೆ ಉಚಿತ ವಿದ್ಯುತ್‌ ಅಪಹಾಸ್ಯ ಮಾಡಬಹುದಾದ ಒಂದು ಉಡುಗೊರೆಯಾಗಿ ಕಾಣುತ್ತದೆ. ಗೃಹಲಕ್ಷ್ಮಿಯಾದರೂ ಈ ಜನತೆಯ ಮಿದುಳಿನಲ್ಲಿ ಬೆಳಕು ಹೊತ್ತಿಸಲು ಸಾಧ್ಯವೇ ಕಾದುನೋಡೋಣ.

Donate Janashakthi Media

Leave a Reply

Your email address will not be published. Required fields are marked *