‘ದಿ ಕಾಶ್ಮೀರಿ ಫೈಲ್ಸ್’, ‘ಕಾಂತಾರ’, ಕನ್ನಡ ಸಿನಿಮಾಗಳು, ಬರಹಗಾರರ ನಿಷ್ಕ್ರಿಯತೆ ಇತ್ಯಾದಿ

ವಸಂತ ಬನ್ನಾಡಿ

ನನ್ನನ್ನು ಈಚಿಗೆ ತೀವ್ರವಾಗಿ ಸೆಳೆದ ಎರಡು ಘಟನೆಗಳು:

೧) ‘ಈ ದೇಶದಲ್ಲಿ ಮುಸ್ಲಿಂ ಆಗಿ ಬದುಕುವುದು ಎಷ್ಟು ಕಷ್ಟ’ ಎಂಬುದನ್ನು ವಿಷಾದ ಮತ್ತು ಆತ೯ತೆ ತುಂಬಿ ಹೇಳಿದ ಮಣಿಪಾಲದ ಎಂಐಟಿಯಲ್ಲಿ ಕಲಿಯುತ್ತಿರುವ ಹುಡುಗನ ಬಗ್ಗೆ ನನಗೆ ಹೆಮ್ಮೆ ಎನಿಸಿತು. ಅಧ್ಯಾಪಕನೊಬ್ಬ ಆತನನ್ನು ತರಗತಿಯಲ್ಲಿ ಎಲ್ಲರ ಮುಂದೆ ಕಸಬ್ ಎಂದು ಕರೆದಿದ್ದ. ವಿದ್ಯಾರ್ಥಿ ಪ್ರತಿರೋಧ ಒಡ್ಡಿದ ಕೂಡಲೇ ‘ಕ್ಷಮಿಸು,ನೀನು ನನ್ನ ಮಗನಂತೆ’ ಎಂದು ನುಣಿಚಿಕೊಳ್ಳಲು ಪ್ರಯತ್ನಿಸಿದ್ದ.’ನಿಮ್ಮ ಮಗನನ್ನು ನೀವು ಭಯೋತ್ಪಾದಕನ ಹೆಸರಿನಲ್ಲಿ ಕರೆಯುತ್ತೀರ?’ ಎಂದು ಕೇಳಿದ ಮುಸ್ಲಿಂ ವಿದ್ಯಾರ್ಥಿಯ ಪ್ರಶ್ನೆಗೆ ಆತನಲ್ಲಿ ಉತ್ತರವಿರಲಿಲ್ಲ.

ಇಂದು ದೇಶದಾದ್ಯಂತ ಈ ರೀತಿ ವ್ಯಂಗ್ಯವಾಡುವ, ಕ್ರೌರ್ಯದಿಂದ ವರ್ತಿಸುವ ಅಧ್ಯಾಪಕರ ಸಂಖ್ಯೆ ಹೆಚ್ಚುತ್ತಿದೆ. ಆ ವಿಡಿಯೋದಲ್ಲಿ ದಾಖಲಾಗಿರುವಂತೆ, ಎದುರು ಬೆಂಚಿನಲ್ಲಿ ಕುಳಿತು ಮುಸಿಮುಸಿ ನಗುತ್ತಿದ್ದಾರಲ್ಲ, ಅಂತಹ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ಕ್ಷುದ್ರ ವಾತಾವರಣ ನಡುವೆ ಪ್ರತಿರೋಧ ತೋರುವುದು ಸುಲಭದ ಮಾತಲ್ಲ.

೨) ಕಾಶ್ಮೀರದ ನಿಜ ಸ್ಥಿತಿಯನ್ನು ತೋರಿಸದೆ ಮುಸ್ಲಿಂ ದ್ವೇಷವನ್ನು ಹಬ್ಬಿಸುವುದನ್ನೇ ಗುರಿಯಾಗಿಸಿಕೊಂಡು ತೆಗೆದಿದ್ದ ‘ದಿ ಕಾಶ್ಮೀರ್ ಫೈಲ್ಸ್’ ಎಂಬ ಕೆಟ್ಟ ಚಿತ್ರದ ಬಗ್ಗೆ ಇಸ್ರೇಲಿ ನಿರ್ದೇಶಕ ನದಾವ್ ಲಾಪಿಡ್ ಆಡಿದ ಮಾತುಗಳೂ ಗಮನಾರ್ಹವಾದುವು. ‘ಇದೊಂದು ಪ್ರಪಗಾಂಡವೇ ಮುಖ್ಯವಾದ ಅಶ್ಲೀಲ ಸಿನಿಮಾ’ ಎಂದು ಅವರು ಈ ಸಿನಿಮಾದ ಬಗ್ಗೆ ಹೇಳಿದ್ದಾರೆ. ಯಾರಾದರೊಬ್ಬರು ಅದನ್ನು ಹೀಗೆ ನೇರವಾಗಿ ಹೇಳಲೇ ಬೇಕಿತ್ತು.ಇದೀಗ ಲಾಪಿಡ್ ಹೇಳಿರುವುದು ಅನೇಕರನ್ನು ಬೆಚ್ಚಿಬೀಳಿಸಿದೆ. ಇದು ಮಾತಿನ ಶಕ್ತಿ.ಹೇಳಬೇಕಾದನ್ನು ನಿಷ್ಠುರವಾಗಿ ಹೇಳುವ ರೀತಿ.ಆಳುವ ಪ್ರಭುತ್ವ ತನ್ನ ಹಿಂದಿದೆ ಎಂದು ಬೀಗುವುದರಿಂದ ಒಂದು ಕಳಪೆ ಸಿನಿಮಾವನ್ನು ಖಂಡಿತ ರಕ್ಷಿಸಲಾಗುವುದಿಲ್ಲ.ಸೂಟು ಬೂಟು ತೊಟ್ಟ ಮಧ್ಯಮ ಮತ್ತು ಮೇಲ್ವರ್ಗದ ಮಂದಿ ಸಿನಿಮಾ ಟಾಕೀಸ್ ನಿಂದ ಅಳುತ್ತಾ ಹೊರಬಂದು ‘ಎಂತಹ ಅದ್ಭುತ ಸಿನಿಮಾ’ ಎಂದು ಹೇಳಿದ ಕೂಡಲೇ ಅದೊಂದು ಅದ್ಭುತ ಸಿನಿಮಾ ಆಗುವುದಿಲ್ಲ.ಅಂತಹ ಸಂದರ್ಭದಲ್ಲಿ ಒಂದಿಡೀ ಜನಸಮೂಹಕ್ಕೆ ಕವಿದ ಮಂಕು ಮತ್ತು ಮರುಳು ನನ್ನನ್ನು ಬೆಚ್ಚಿಬೀಳಿಸಿತ್ತು. ‘ದಿ ಕಾಶ್ಮೀರಿ ಫೈಲ್ಸ್ ‘ತನ್ನನ್ನು ಡಿಸ್ಟರ್ಬ್ ಮಾಡಿದೆ.ಪ್ರತಿಷ್ಠಿತ ಚಲನಚಿತ್ರೋತ್ಸವದಲ್ಲಿ ಸ್ಪರ್ಧಿಸಲು  ಅರ್ಹವಲ್ಲದ ಚಿತ್ರ ಇದು’ ಎಂದು ಲಾಪಿಡ್ ಸರಿಯಾಗಿಯೇ ಹೇಳಿದ್ದಾರೆ. ಸರಿಯಾದ ಸಮಯಕ್ಕೆ ಬಂದ ಸರಿಯಾದ ಪ್ರತಿಕ್ರಿಯೆ ಇದು.

‘ಕಾಂತಾರಾ’ ಎಂಬ ಪ್ರಪಗಾಂಡ ಸಿನಿಮಾ:

‘ದಿ ಕಾಶ್ಮೀರಿ ಫೈಲ್ಸ್’ ಪ್ರಕ್ರಿಯೆ ‘ಕಾಂತಾರ’ ಸಿನಿಮಾದಲ್ಲಿ ಮತ್ತೆ ಮರುಕಳಿಸಿತು. ರಿಶಭ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಕೂಡ ಒಂದು ಪ್ರಪಗಾಂಡ ಸಿನಿಮಾವೇ. ಭಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು ತೆಗೆದ ಅನೇಕ ಚಿತ್ರಗಳು ಈ ಹಿಂದೆಯೂ ಕನ್ನಡದಲ್ಲಿ ಬಂದು ಹೋಗಿವೆ. ಆದರೆ ‘ಭಕ್ತಿ ತೋರದಿದ್ದವರು ರಕ್ತಕಾರಿ ಸಾಯುತ್ತಾರೆ’ ಎಂಬ ಕಟ್ಟುಕಲ್ಪನೆಯನ್ನು ಈ ಮಟ್ಟಿಗೆ ಉಪಯೋಗಿಸಿಕೊಂಡ ಸಿನಿಮಾ ಪ್ರಾಯಶ: ಎಂದೂ ಬಂದಿರಲಿಕ್ಕಿಲ್ಲ.ಇದರ ಪರಿಣಾಮ ಏನಾಯಿತು?ಅದೊಂದು ಆತ್ಯಂತಿಕ ಸತ್ಯವೆಂಬಂತೆ ತೋರಿಸಿದ್ದರಿಂದ ಕಾದು ಕೂತಿದ್ದ ಮರುಳು ಜನ ಅದನ್ನೇ ಟ್ರೋಲ್ ಭಾಷೆಯಲ್ಲಿ ಪ್ರತಿಪಾದಿಸುವುದೂ ಬೆದರಿಸುವುದೂ ಎಗ್ಗಿಲ್ಲದೆ ನಡೆಯಿತು.ಇದೊಂದು ಅತ್ಯಂತ ದುರದೃಷ್ಟಕರ ವಿದ್ಯಮಾನ. ರಿಶಭ್ ಇದ್ಯಾವುದನ್ನೂ ಗಮನಿಸದವರಂತೆ ಇದ್ದುಬಿಟ್ಟರು. ಜೊತೆಗೆ, ಮೋದಿ ಬಗ್ಗೆ ಅವರು ತೋರಿಸಿದ ಉತ್ಸಾಹ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು. ಸ್ಪಷ್ಟವಾದ ಸಂದೇಶವನ್ನು ರವಾನಿಸಿತು.’ಮೋದಿ ಪರ’ ಮಾಧ್ಯಮಗಳು ಅವರ ಸುತ್ತ ಮುಗಿಬೀಳುವಂತೆ ಮಾಡಿತು. ಸ್ವಾರಸ್ಯವಿಲ್ಲದ,ಹೇಳಿದ್ದನ್ನೇ ಹೇಳುವ ಮಾತುಕತೆಗಳಲ್ಲಿ ರಿಶಭ್ ತನ್ನನ್ನು ತಾನು ತೊಡಗಿಸಿಕೊಂಡರು.ಈ ಬಗೆಯ ಅತಿ ಮಾತುಕತೆ ಮತ್ತು ಅತಿ ಎಕ್ಸ್ಪೋಶರ್ ನಿರ್ದೇಶಕನೊಬ್ಬನಿಗೆ ಮುಳುವಾಗುವ ಸಾಧ್ಯತೆಯೇ ಹೆಚ್ಚು ಎಂಬುದನ್ನು ಗಮನಿಸದವರಂತೆ ವರ್ತಿಸಿದರು. ನಮ್ಮ ಧರ್ಮ, ನಮ್ಮ ಸಂಸ್ಕೃತಿ ಇತ್ಯಾದಿ ವಿಷಯಗಳ ಸುತ್ತ ಸರಳ ರೇಖೆಯಲ್ಲಿ ಸುತ್ತುವ ಯಾವುದೇ ಮಾತುಕತೆ ಕೇವಲ ‘ವೈಯಕ್ತಿಕ ಸ್ವಾತಂತ್ರ್ಯ’ದ ಪ್ರಶ್ನೆಯಾಗಿ ಉಳಿಯಲಾರದು. ಬೇನಲ್ ಅನಿಸಿಕೊಳ್ಳುವುದು.

ಪರಿಣಾಮ ಸ್ಪಷ್ಟವಿದೆ. ‘ದಿ ಕಾಶ್ಮೀರಿ ಫೈಲ್ಸ್’ ಬಗ್ಗೆ ಜನ ತಪ್ಪು ಕಾರಣಕ್ಕಾಗಿ ಉತ್ತೇಜಿತರಾದಂತೆ ‘ಕಾಂತಾರ’ ಚಿತ್ರದ ದೈವಾವೇಶದ ಬಗ್ಗೆಯೂ ಉತ್ತೇಜಿತರಾಗಿ ವರ್ತಿಸಿದರು. ಗುಳಿಗ ದೈವ ‘ಸೇಡು ತೀರಿಸಿಕೊಳ್ಳುವ’ ಕೊನೆಯ ದೃಶ್ಯವನ್ನು ಭಕ್ತಿಪರವಶರಾಗಿ ಕೈ ಮುಗಿದು ನೋಡಿದರು. ಜನರನ್ನು ಮುಖ್ಯವಾಗಿ ಸಿನಿಮಾದ ಕಡೆಗೆ ಸೆಳೆದದ್ದು ಈ ದೃಶ್ಯವೇ ಎಂಬುದು ಒಂದು ವಿಪರ್ಯಾಸವೇ ಸರಿ.

ಹೋಲಿಕೆ ಇಲ್ಲಿಗೇ ನಿಲ್ಲುವುದಿಲ್ಲ.’ದಿ ಕಾಶ್ಮೀರಿ ಫೈಲ್ಸ್’ ನಿರ್ದೇಶಕ ಇಂದಿನ ಪ್ರಭುತ್ವದ ಜೊತೆ ಗುರುತಿಸಿಕೊಂಡು ಯಶಸ್ಸನ್ನು ಕಂಡುದನ್ನು ಗಮನಿಸಿಯೋ ಏನೋ,’ಕಾಂತಾರ’ದ ರಿಶಭ್ ಕೂಡ ಅದೇ ದಾರಿ ಹಿಡಿದರು. ರಿಶಭ್ ಹಾರ್ಡ್ ಕೋರ್ ಹಿಂದುತ್ವವಾದಿ ಅಲ್ಲದಿರಬಹುದು. ಆದರೆ ತಾನು ಹಿಂದುತ್ವದ ಪರ ಎಂಬುದನ್ನು ಹೋದಲ್ಲೆಲ್ಲ ತೋರಿಸಿಕೊಳ್ಳುವ ಪ್ರಯತ್ನವನ್ನು ಅತಿ ಉತ್ಸಾಹದಿಂದ ಮಾಡಿದರು. ಉದ್ದೇಶಪೂರ್ವಕವಾಗಿಯೇ ಎಂಬುದು ಢಾಳಾಗಿ ತೋರುವಂತೆ ಚಿತ್ರವೊಂದು ದೈವ ಬಲದಿಂದ ಯಶಸ್ಸು ಕಂಡಿದೆ ಎಂದು ಖಾಸಗಿಯಾಗಿ ನಂಬುವುದು ಬೇರೆ; ಅದನ್ನೇ ಸಾರ್ವಜನಿಕವಾಗಿ ಹೇಳಿಕೊಳ್ಳುವುದು ಮತ್ತು ಜನ ಅದನ್ನು ನಂಬುವಂತೆ ಮಾಡುವುದು ಬೇರೆ. ‘ಕಾಂತಾರ’ ನಿಧಾನವಾಗಿ ಒಂದು ಪ್ರಪಗಾಂಡ ಸಿನಿಮಾವಾಗಿ ರೂಪಾಂತರಗೊಂಡದ್ದು ಹೀಗೆ. ‘ದಿ ಕಾಶ್ಮೀರ್ ಫೈಲ್ಸ್’ ಮತ್ತು ‘ಕಾಂತಾರ’ ಚಿತ್ರಗಳನ್ನು ಕೋಟ್ಯಾಂತರ ಜನ ನೋಡಿ ಹಾಡಿಹೊಗಳಿದರೇನಂತೆ; ಜನರ ಮೆದುಳು ಪೆಡಸಾಗಿರುವುದನ್ನಷ್ಟೇ ಇದು ತೋರಿಸುತ್ತದೆ. ಸುಳ್ಳು ಮತ್ತು ಹಿಂಸೆಯನ್ನು ಬಿತ್ತುವ ನಾಯಕನೊಬ್ಬನ ಮುಂದೆಯೂ ಲಕ್ಷಾಂತರ ಜನ ನೆರೆದ ಅನೇಕ ಉದಾಹರಣೆಗಳಿವೆ.

ಮೆದುಳು ಪೆಡಸಾಗುತ್ತಾ ಸಾಗಿರುವ ಕಲಾವಿದರು:

ಎಂತಹ ಕಾಲ ಇದು! ಪೆಡಸಾಗುತ್ತಾ ಹೋಗಿರುವುದು ಜನರ ಮೆದುಳುಗಳು ಮಾತ್ರವಲ್ಲ. ಕಲಾವಿದರು ಮತ್ತು ನಿರ್ದೇಶಕರ ಮೆದುಳುಗಳೂ ಕೂಡಾ. ಅನಂತ್ ನಾಗ್, ಮಿಥುನ್ ಚಕ್ರವರ್ತಿ, ಅನುಪಮ ಖೇರ್ ಮುಂತಾದವರು ಇಂದು ತಳೆದಿರುವ ಬಿಜೆಪಿ ಪರ ನಿಲುವುಗಳನ್ನು ನೋಡಿ. ಇವರು ಕೂಡ ಹಿಂದುತ್ವವಾದಿಗಳು ಇರಲಾರರು. ಏಕೆ, ಒಂದು ಕಾಲಕ್ಕೆ ಸಮಾಜವಾದಿ ಆಶಯವನ್ನು ಕೂಡ ಹೊಂದಿದ್ದವರು. ಅನಂತ್ ನಾಗ್, ಶ್ಯಾಮ್ ಬೆನಗಲ್ ಜೊತೆ ‘ಅಂಕುರ್’ನಲ್ಲಿ ಕೆಲಸ ಮಾಡಿದ್ದರು. ಮಿಥುನ್ ಚಕ್ರವರ್ತಿ, ಮೃಣಾಲ್ ಸೇನ್ ಜೊತೆ ‘ಮೃಗಯಾ’ದಲ್ಲಿ ಕೆಲಸ ಮಾಡಿದ್ದರು. ಅನುಪಮ್ ಖೇರ್ ಗೆ ಎನ್.ಎಸ್.ಡಿ. ಯಲ್ಲಿ ಕಲಿತ ಹಿನ್ನೆಲೆ ಇದೆ. ‘ಸಾರಾಂಶ್’ನಂತಹ ಚಿತ್ರದಲ್ಲಿ ನಟಿಸಿದ್ದರು. ಇದೀಗ ಇವರೆಲ್ಲ ಇದ್ದಕ್ಕಿದ್ದಂತೆ ಹಿಂದುತ್ವದ ಪರ ದೃಢವಾಗಿ ನಿಲ್ಲಲು ಏಕೆ ಹರಸಾಹಸ ಪಡುತ್ತಿದ್ದಾರೆ? ಇದರ ಹಿಂದೆ ಅವಕಾಶವಾದಕ್ಕೆ ಹೊರತಾದ ಬೇರೆ ಯಾವ ಕಾರಣವೂ ತೋರುತ್ತಿಲ್ಲ. ಅಂಥದ್ದರಲ್ಲಿ ಯಾವ ಗಟ್ಟಿ ಹಿನ್ನೆಲೆಯೂ ಇಲ್ಲದ ‘ದಿ ಕಾಶ್ಮೀರ ಫೈಲ್ಸ್’ ಮತ್ತು ‘ಕಾಂತಾರ’ದ ನಿರ್ದೇಶಕರು,ಇನ್ನೂ ಹತ್ತು ಹೆಜ್ಜೆ ಮುಂದೆ ಹೋಗಿ ಹಿಂದುತ್ವವಾದ ಎಂಬ ಜನಮರಳು ಕಲ್ಪನೆಯನ್ನು ಧುತ್ತನೆ ಆವಾಹಿಸಿಕೊಂಡಂತಿದೆ. ಪ್ರಭುತ್ವದೊಂದಿಗೆ ಗುರುತಿಸಿಕೊಳ್ಳುವುದರಲ್ಲಿ ಇರುವ ವ್ಯವಹಾರಿಕ ಲಾಭ ಕೂಡ ಇವರನ್ನು ಸೆಳೆದಂತಿದೆ.ಜಾತ್ರೆಯಲ್ಲಿ ಒಂದಾಗುವುದೇ ಯಶಸ್ಸಿನ ಮಾನದಂಡ ಎಂದೂ ಇವರು ಅಂದುಕೊಂಡಂತಿದೆ.

ಇದನ್ನೆಲ್ಲ ನೋಡಿದರೆ, ಕಲಾವಿದರಾಗಿ ತಾವು ತಮ್ಮ ಕನಿಷ್ಠ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂಬ ಪರಿವೆಯೂ ಇವರಿಗೆಲ್ಲ ಇದ್ದಂತಿಲ್ಲ. ಯಾವ ಕಲೆಯೂ ಹಿಂಸೆಗೆ ಕುಮ್ಮುಕ್ಕು ಕೊಡಬಾರದು.ಅದರಲ್ಲೂ ಹಿಂಸೆಯನ್ನು ಗುರಿಯಾಗಿಟ್ಟುಕೊಂಡು ಸುಳ್ಳುಗಳನ್ನು ಹರಡುತ್ತಿರುವವರ ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ. ಹಾಗೆಯೇ, ದಿಟ್ಟತನದಿಂದ ಪ್ರತಿಕ್ರಿಯಿಸುವವರ ಸಂಖ್ಯೆಯೂ ಕಡಿಮೆಯಾಗುತ್ತಲೇ ಹೋಗುತ್ತಿರುವ ಈ ದಿನಮಾನಗಳಲ್ಲಿ.

ಚೋಮನ ದುಡಿ, ನಿರ್ಮಾಲ್ಯಂ ಮತ್ತು ಕರ್ಣನ್

ಒಳ್ಳೆಯ ಕಲೆ ಸಮಾಜದಲ್ಲಿ ಹುದುಗಿರುವ ಆಂತರಿಕ ಸಂಘರ್ಷವನ್ನು ತೆರೆದು ತೋರಿಸುವ ಕಡೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತದೆ. ‘ಚೋಮನ ದುಡಿ’ ಸಿನಿಮಾದಲ್ಲಿ ಚೋಮ,ಪಂಜುರ್ಲಿ ಎದುರು ಬಂದು ತನ್ನನ್ನು ತಡೆದಂತೆ ಭ್ರಮಿಸಿ, ಕ್ರಿಶ್ಚಿಯಾನಿಟಿಗೆ ಮತಾಂತರಗೊಳ್ಳದೆ ಗುಡಿಸಲಿಗೆ ವಾಪಸಾಗುವ ಒಂದು ದೃಶ್ಯ ಇದೆ. ಶಿವರಾಮ ಕಾರಂತರಿಗೆ ಮತಾಂತರದ ಬಗ್ಗೆ ಇದ್ದ ಸಿಟ್ಟೇ ಚೋಮನ ದುಡಿ ಬರೆಯಲು ಕಾರಣವಾಗಿತ್ತು ಎಂಬ ಮಾತೂ ಇದೆ.ಆದರೆ ಕಾರಂತರ ಮಾತನ್ನು ಬದಿಗಿರಿಸಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಚೋಮನ ಮಗ ಗುರುವ ತನ್ನ ಜೀವಿತ ಅವಧಿಯಲ್ಲಿಯೇ ಸ್ವಂತ ಭೂಮಿ ಪಡೆಯುತ್ತಾನೆ. ಉಳುಮೆಯನ್ನೂ ಮಾಡುತ್ತಾನೆ. ಪಾತ್ರಗಳು ಬರಹಗಾರನನ್ನೇ ಮೀರಿ ಬೆಳೆಯುವುದಕ್ಕೆ ಒಳ್ಳೆಯ ಉದಾಹರಣೆ ಇದು.ಕಾರಂತರು ವಾಸ್ತವಕ್ಕೆ ಬದ್ಧರಾಗಿ ಬರೆದ ಲೇಖಕರಾಗಿದ್ದರು ಮತ್ತು ಭ್ರಮೆಗಳನ್ನು ಬಿತ್ತುವುದರಲ್ಲಿ ನಂಬಿಕೆ ಇಟ್ಟುಕೊಂಡವರಾಗಿರಲಿಲ್ಲ. ಕೇರಳದ ಎಂ.ಟಿ.ವಾಸುದೇವ ನಾಯರ್ ಅಂತಹ ಇನ್ನೊಬ್ಬ ಬರಹಗಾರ.ಅವರು ನಿರ್ದೇಶಿಸಿದ ‘ನಿರ್ಮಾಲ್ಯಂ’ ಎಂಬ ಮಳೆಯಾಳಿ ಸಿನಿಮಾದಲ್ಲಿ ಬಡತನದ ಕುಣಿಕೆಯಿಂದ ತಪ್ಪಿಸಿಕೊಳ್ಳಲಾಗದ ದೇವಸ್ಥಾನದ ಪಾತ್ರಿ,ಕೊನೆಯ ದೃಶ್ಯದಲ್ಲಿ ದೇವರನ್ನೇ ಎದುರು ಹಾಕಿಕೊಳ್ಳುತ್ತಾನೆ.ದೇವರ ಕಡ್ತಲೆಯಿಂದ ತನ್ನ ಹಣೆಯನ್ನೇ ಸೀಳಿಕೊಳ್ಳುತ್ತಾನೆ.ಅತ್ಯಂತ ದಾರುಣ ದೃಶ್ಯ ಅದು.

ಈ ಸಿನಿಮಾಗಳನ್ನು ನಾನು ಮೇಲಿನ ಸಿನಿಮಾಗಳ ಜೊತೆ ಹೋಲಿಸಲು ನಮೂದಿಸುತ್ತಿಲ್ಲ.ಅಂತಹ ಹೋಲಿಕೆಯೇ ಹಾಸ್ಯಾಸ್ಪದವಾದೀತು. ಒಂದು ಸಿನಿಮಾ ಪ್ರಪಗಾಂಡ ಆಗದೆ,ಸದ್ಯದ ಸಾಮಾಜಿಕ ಪರಿಸ್ಥಿತಿಯ ದಾರುಣತೆಯನ್ನು ಪಾತ್ರಗಳ ಆಸೆ, ಹತಾಶೆ, ವಿಷಾದಗಳ ಮೂಲಕ ಹೇಗೆ ಬಿಚ್ಚಿಡುತ್ತದೆ ಎಂಬುದನ್ನು ಕಾಣಿಸಲು ಉದಾಹರಣೆಯಾಗಿ ತೆಗೆದುಕೊಂಡಿದ್ದೇನೆ. ‘ಚೋಮನ ದುಡಿ’ ಮತ್ತು ‘ನಿರ್ಮಾಲ್ಯಂ’ ಸಿನಿಮಾಗಳು ಎಪ್ಪತ್ತರ ದಶಕದಲ್ಲಿ, ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಬಂದಿದ್ದವು. ಅಂತಹ ತೀವ್ರತೆ ತೋರುವ ಸಿನಿಮಾಗಳು ಇದೀಗ ತಮಿಳಿನಲ್ಲಿ ಬರುತ್ತಿವೆ. ಪಾ.ರಂಜಿತ್ ಅಂಥವರು ಪ್ರಭುತ್ವವನ್ನು ನೇರಾನೇರ ಎದುರು ಹಾಕಿಕೊಳ್ಳುವ ಸಿನಿಮಾಗಳನ್ನು ತಯಾರಿಸುತ್ತಿದ್ದಾರೆ. ‘ಕರ್ಣನ್’ ಅತ್ಯುತ್ತಮ ಉದಾಹರಣೆ. ವಸ್ತು ಮತ್ತು ಅದನ್ನು ನಿರ್ವಹಿಸಿರುವ ರೀತಿಯಿಂದ, ‘ಚೋಮನ ದುಡಿ’ ಮತ್ತು ‘ನಿರ್ಮಾಲ್ಯಂ’ ಗಳಿಗಿಂತ ಮುಖ್ಯವಾದ ಸಿನಿಮಾ ಇದು.

ಮಂಕು ಕವಿದಂತಿರುವ ಕನ್ನಡ  ಚಿತ್ರರಂಗದ ಸ್ಥಿತಿ:

ಕನ್ನಡದ ಸ್ಥಿತಿ ತೀರಾ ಬೇರೆಯೇ ಆಗಿದೆ. ಕಲಾತ್ಮಕ ಸಿನಿಮಾ ಎಂಬ ಹೆಸರಿನಲ್ಲಿ ಸಿನಿಮಾ ತಯಾರಿಸುತ್ತಿದ್ದ ನಾಲ್ಕಾರು ನಿರ್ದೇಶಕರು ಇಂದು ತೀರಾ ಬಸವಳಿದಂತಿದ್ದಾರೆ. ಈಚೆಗೆ ಹೀಗೇ ‘ಮಾಯಾಮೃಗ’ ಎಂಬ ಧಾರಾವಾಹಿಯಲ್ಲಿ  ಕೆಲಸ ಮಾಡಿದವರ ಪಟ್ಟಿ ನೋಡುತ್ತಿದ್ದೆ. ಟಿ.ಎನ್.ಸೀತಾರಾಮ್, ಅಶ್ವಥ್, ಶೇಷಾದ್ರಿ, ಮುಂತಾದವರು. ಈ ಎಲ್ಲರೂ ಈಗ ಸಾಫ್ಟ್ ಹಿಂದುತ್ವವಾದವನ್ನು ಪೋಷಿಸುವ ಗುಂಪಿಗೆ ಸೇರಿ ಹೋಗಿದ್ದಾರೆ! ಗಿರೀಶ್ ಕಾಸರವಳ್ಳಿ ಮಾತುಗಳು ಅರ್ಥವಂತಿಕೆಯನ್ನು ಎಂದೋ ಕಳೆದುಕೊಂಡಿವೆ. ತನ್ನ ಚಿತ್ರಗಳನ್ನು ನಾಲ್ಕು ಜನರಿಗೆ ತೋರಿಸಲೂ ಆಗದೆ, ಸಬೂಬು ಹೇಳುತ್ತಾ ಕುಳಿತುಕೊಂಡಿದ್ದಾರೆ. ಈಗಲೂ ಸತ್ಯಜಿತ್ ರಾಯ್ ಸಿನಿಮಾಗಳ ಪ್ರತಿ ಫ್ರೇಮಿನಲ್ಲಿಯೂ ರಾಜಕೀಯ ನಿಲುವು ಅಡಗಿದೆ ಎಂದು ವ್ಯರ್ಥ ಹೆಕ್ಕಿ ತೆಗೆಯುವುದರಲ್ಲಿ ನಿರತರಾಗಿದ್ದಾರೆ.

ತಮ್ಮ ಚಿತ್ರಗಳಲ್ಲಿ ಕೋಮುವಾದವನ್ನು ಸ್ಪಷ್ಟವಾಗಿ ವಿರೋಧಿಸಿರುವ ಕಾಸರವಳ್ಳಿ,ತಾವು ಅಳವಡಿಸಿಕೊಂಡಿರುವ ನಿರೂಪಣಾ ಕ್ರಮದ ಬಗ್ಗೆ  ಮರುಯೋಚಿಸಬೇಕಾಗಿದೆ. ಇನ್ನುಳಿದ ನಾಗಾಭರಣ ಅಂತಹ ಅಳಿದುಳಿದವರಿಗೆ,ಪ್ರಭುತ್ವವನ್ನು ತೀಕ್ಷ್ಣವಾಗಿ ಪ್ರಶ್ನಿಸುವುದರಿಂದ ತಮಗೆ  ಸಿಗಬಹುದಾದ ಅಧಿಕಾರ, ಪ್ರಶಸ್ತಿ, ಪುರಸ್ಕಾರಗಳು ತಪ್ಪಿಹೋಗಬಹುದು ಎಂಬ ಆತಂಕ ಕಾಡುತ್ತಿರುವಂತಿದೆ. ಮಾತ್ರವಲ್ಲ, ವೈಯಕ್ತಿಕವಾಗಿಯೂ ತಾವು ತೊಂದರೆಗೆ ಸಿಕ್ಕಿಹಾಕಿಕೊಳ್ಳಬಹುದು ಎಂಬ ಭಯವೂ ಅನೇಕರಲ್ಲಿದೆ. ಹಾಗೆ ಹೆದರುವವರು ಮತ್ತು ಪ್ರಭುತ್ವವನ್ನು ಓಲೈಸುತ್ತಲೇ ಇರುವವರು ಏನನ್ನೂ ಸೃಷ್ಟಿಸಲಾರರು. ಅವರ ಸಮಯಸಾಧಕತನ ಅವರ  ಕೃತಿಗಳಲ್ಲೂ ವ್ಯಕ್ತವಾಗದೇ ಇರದು.ಅವರ ಕಥೆ ಕಾದಂಬರಿ ಸಿನಿಮಾ ಎಲ್ಲದರಲ್ಲೂ.

ಕಲಾವಿದನೊಬ್ಬ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ನಿಖರ ಪ್ರತಿಕ್ರಿಯೆ ದಾಖಲಿಸಬೇಕಾದ್ದು ಎಲ್ಲಕ್ಕಿಂತ ಮುಖ್ಯ. ಅಂತಹ ಪ್ರತಿರೋಧ ಒಬ್ಬನಿಂದ ಆರಂಭಗೊಂಡರೂ ಸರಿ. ಆ ದಿಟ್ಟತನದ ಎದುರು ಎಲ್ಲವೂ ಕ್ಷುಲ್ಲಕ.

ದಿಟ್ಟತನ ತೋರಲು ಹಿಂಜರಿಯುವ ಕನ್ನಡ ಲೇಖಕರು:

ಒಬ್ಬ ಹುಡುಗ ತನ್ನ ಅಧ್ಯಾಪಕನ ಎದುರು ಆಡಿದ ಮಾತುಗಳಲ್ಲಿ ಏನು ವಿಶೇಷವಿದೆ ಎಂದು ಯಾರಾದರೂ ಕೇಳಬಹುದು. ಬೇರೇನಿಲ್ಲ. ಅಲ್ಲಿ ಸ್ಪಷ್ಟತೆ ಇತ್ತು. ಸ್ಪಷ್ಟತೆ ಇದ್ದುದರಿಂದಲೇ ವಿಚಾರವೂ ಇತ್ತು. ಅದು ಅಧ್ಯಾಪಕನನ್ನು ತಳಮಟ್ಟ ನಡುಗಿಸುವಂತಿತ್ತು. ಇಂತಹ ಮಾತುಗಳನ್ನು ಕಥೆ, ಕವಿತೆ, ಕಾದಂಬರಿ ಬರೆಯುವ ಇಂದಿನ ಕನ್ನಡ ಲೇಖಕರಿಂದ ನಿರೀಕ್ಷಿಸಬಹುದೇ? ಖಂಡಿತವಾಗಿ ಇಲ್ಲ.

ಪ್ರತಿರೋಧ ಒಡ್ಡುವ ಗಟ್ಟಿತನವನ್ನು ಈಗ ಬರೆಯುತ್ತಿರುವ ಕನ್ನಡ ಬರಹಗಾರರನೇಕರು ಎಂದೋ ಕಳೆದುಕೊಂಡಿದ್ದಾರೆ; ಮಾತ್ರವಲ್ಲ ಮೌನವೃತಧಾರಿಗಳಾಗಿ ನಾಜೂಕಯ್ಯರಂತೆ ವರ್ತಿಸುತ್ತಿದ್ದಾರೆ.’ಹಿಂದುತ್ವವಾದಿಗಳು ಇರುವ ಅಥವಾ ಅಂತವರಿಗೆ ಅವಕಾಶ ನೀಡುವ ವೇದಿಕೆಯಲ್ಲಿ ತಾವು ಭಾಗವಹಿಸುವುದಿಲ್ಲ’ ಎಂಬ ಸಣ್ಣ ಹೇಳಿಕೆ ನೀಡಲೂ ಹಿಂಜರಿಯುವ,ಧೈರ್ಯದ ಲವಲೇಶವೂ ಇಲ್ಲದ, ಆಲೋಚನೆಯಲ್ಲಿ ಸ್ಪಷ್ಟತೆಯೇ ಇಲ್ಲದ ಲೇಖಕರೇ ಇಂದು ಎಲ್ಲೆಲ್ಲೂ ಇಡಿಕಿರಿದಿದ್ದಾರೆ. ಸಣ್ಣ ಸಣ್ಣ ಗುಂಪುಗಳಲ್ಲಿ ಹರಿಹಂಚಿ ಹೋಗಿದ್ದಾರೆ.ಇವರು ನಡೆಸುವ  ಕವಿಗೋಷ್ಠಿಯನ್ನೋ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನೋ ನೋಡಿದರೆ ಸಾಕು; ತಮ್ಮ ಹೆಗ್ಗಳಿಕೆಯ ಬಲೂನನ್ನು ಹಾರಿ ಬಿಡುವುದನ್ನು ಹೊರತುಪಡಿಸಿ, ಬೇರೇನನ್ನೂ ಅವರು ಮಾತನಾಡಲಾರರು.

ಒಂಟಿ ದನಿಯೇ ಆಗಿರಲಿ, ದನಿ ಎತ್ತಬೇಕಾದುದು ಮುಖ್ಯ:

ಆದುದರಿಂದಲೇ ಎಂಐಟಿಯ ಮುಸ್ಲಿಂ ಹುಡುಗ ಮತ್ತು ಇಸ್ರೇಲ್ ನಿರ್ದೇಶಕ ಲಾಪಿಡ್ ತೋರಿದ ದಿಟ್ಟತನ ಸಣ್ಣದೇನಲ್ಲ. ಇವರಿಬ್ಬರ ನಡವಳಿಕೆ ಒಂದು ಮಾದರಿಯಂತಿದೆ. ಒಂಟಿಯಾಗಿದ್ದರೂ ಸರಿ, ಧ್ವನಿಯೆತ್ತಬೇಕಾದ ರೀತಿ ಹೇಗಿರಬೇಕು ಎಂಬುದನ್ನು ತೋರಿಸಿಕೊಡುವಂತಿದೆ. ಅದು ಸಹಜವಾಗಿ ಹೊರಹೊಮ್ಮಿದೆ. ಹಿಂಜರಿಕೆ ಮತ್ತು ಸಮಯಸಾಧಕತನ ಸರ್ವತ್ರ ವ್ಯಾಪಿಸಿರುವ ಇಂದಿನ ಸನ್ನಿವೇಶದಲ್ಲಿ ಪ್ರತಿರೋಧದ ಈ ನಡೆ ನನಗೆ ನಿಜಕ್ಕೂ ತುಂಬಾ ಸಂತೋಷ ಕೊಟ್ಟಿದೆ.

Donate Janashakthi Media

Leave a Reply

Your email address will not be published. Required fields are marked *