ರಷ್ಯಾದ ಮೇಲಿನ ದಿಗ್ಬಂಧನಗಳ ವಿಪರ್ಯಾಸ

ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ. ನಾಗರಾಜ್

ಉಕ್ರೇನ್ ನ್ಯಾಟೋ ಸೇರುವ ಸಂಬಂಧವಾಗಿ ಉಂಟಾಗಿದ್ದ ರಷ್ಯಾ ಮತ್ತು ಉಕ್ರೇನ್ ನಡುವಿನ ತಿಕ್ಕಾಟವನ್ನು ತಿಳಿಗೊಳಿಸುವ ಸಲುವಾಗಿ, ಫ್ರಾನ್ಸ್ ಮತ್ತು ಜರ್ಮನಿಯ ಮಧ್ಯಸ್ತಿಕೆಯಲ್ಲಿ ಒಂದು ಸಮಾಧಾನಕರ ಒಪ್ಪಂದಕ್ಕೆ ಬಂದಿದ್ದರೂ ಸಹ, ಇವೆರಡರ ನಡುವಿನ ಹಗೆತನ ಮುಂದುವರೆಯುವಂತೆ ನೋಡಿಕೊಳ್ಳುವ ಉದ್ದೇಶದಿಂದ ಅಮೆರಿಕಾ ಈ ಒಪ್ಪಂದವನ್ನು ಬುಡಮೇಲು ಮಾಡಿತು ಎಂದು ವರದಿಯಾಗಿದೆ. ಆದರೂ ಈಗ ಪರಿಸ್ಥಿತಿಯ ವಿಪರ್ಯಾಸ ಹೇಗಿದೆ ಎಂದರೆ, ಅದು ತನ್ನ ತಕ್ಷಣದ ದೊಡ್ಡ ಶತ್ರು ರಷ್ಯಾದ ಗರ್ವಭಂಗಕ್ಕಾಗಿ ತಾನು ನಿರ್ಬಂಧ ಹೇರಿದ್ದ ಇರಾನ್ ಮತ್ತು ವೆನೆಜುವೆಲಾ ದೇಶಗಳೊಂದಿಗೇ ಶಾಂತಿ ಸಂಧಾನಕ್ಕೆ ಮುಂದಾಗುವ ಪರಿಸ್ಥಿತಿಗೆ ಒಳಗಾಗಿದೆ. ಸಾಮ್ರಾಜ್ಯಶಾಹಿ ಅಮೆರಿಕಾ ಹೊಂದಿದ್ದ ವಿಶ್ವ ಪ್ರಾಬಲ್ಯವು ಅವನತಿಯತ್ತ ಸಾಗುತ್ತಿರುವುದನ್ನು ನಾವು ಇಂದು ಕಾಣುತ್ತಿದ್ದೇವೆ.

ತನ್ನ ಅಧಿನಾಯಕತ್ವವನ್ನು ಉಳಿಸಿಕೊಳ್ಳಲು ಸಾಮ್ರಾಜ್ಯಶಾಹಿ ಅಮೆರಿಕಾ ದಿನ ಬೆಳಗಾದರೆ ಒಂದೊಂದು ಹೊಸ ಜಾದೂ ಮಾಡುತ್ತಿದೆ. ಮೊದಲನೆಯದು, ಉಕ್ರೇನ್‌ಅನ್ನು ನ್ಯಾಟೋ ಮಿಲಿಟರಿ ಕೂಟಕ್ಕೆ ಸೇರಿಸಿಕೊಳ್ಳುವುದನ್ನು ರಷ್ಯಾ ಸುತರಾಂ ಒಪ್ಪುವುದಿಲ್ಲ ಎಂಬುದು ಚೆನ್ನಾಗಿ ಗೊತ್ತಿದ್ದರೂ ಸಹ, ಅಮೆರಿಕಾ ತನ್ನ “ಪಾಶ್ಚಾತ್ಯ ಮೈತ್ರಿಕೂಟದ ಪರವಾಗಿ” ರಷ್ಯಾದ ಗಡಿಯವರೆಗೂ ನ್ಯಾಟೋವನ್ನು ವಿಸ್ತರಿಸುವ ಮೂಲಕ ರಷ್ಯಾವನ್ನು ರೇಗಿಸುತ್ತಲೇ ಬಂತು (“ಕರಡಿಯನ್ನು ಪ್ರಚೋದಿಸಿತು”). ತಮ್ಮ ಇಂಧನದ ಅಗತ್ಯಗಳನ್ನು ಪಶ್ಚಿಮ ಯುರೋಪ್ ದೇಶಗಳು ರಷ್ಯಾದಿಂದ ಪೂರೈಸಿಕೊಳ್ಳುತ್ತಿರುವ ಕಾರಣದಿಂದ ರಷ್ಯಾದೊಂದಿಗಿನ ತಮ್ಮ ಸಂಬಂಧಗಳನ್ನು ಅವು ಬಲಪಡಿಸಿಕೊಳ್ಳುತ್ತಿದ್ದವು. ಇದನ್ನು ತಡೆಯುವುದೇ ಅಮೆರಿಕಾದ ಉದ್ದೇಶವಾಗಿತ್ತು. ಉಕ್ರೇನ್ ನ್ಯಾಟೋ ಸೇರುವ ಸಂಬಂಧವಾಗಿ ಉಂಟಾಗಿದ್ದ ರಷ್ಯಾ ಮತ್ತು ಉಕ್ರೇನ್ ನಡುವಿನ ತಿಕ್ಕಾಟವನ್ನು ತಿಳಿಗೊಳಿಸುವ ಸಲುವಾಗಿ, ಫ್ರಾನ್ಸ್ ಮತ್ತು ಜರ್ಮನಿಯ ಮಧ್ಯಸ್ತಿಕೆಯಲ್ಲಿ ರಷ್ಯಾ ಮತ್ತು ಉಕ್ರೇನ್ ಒಂದು ಸಮಾಧಾನಕರ ಒಪ್ಪಂದಕ್ಕೆ ಬಂದಿದ್ದರೂ ಸಹ, ರಷ್ಯಾ ಮತ್ತು ಉಕ್ರೇನ್ ನಡುವಿನ ಹಗೆತನ ಮುಂದುವರೆಯುವಂತೆ ನೋಡಿಕೊಳ್ಳುವ ಉದ್ದೇಶದಿಂದ ಅಮೆರಿಕಾ ಈ ಒಪ್ಪಂದವನ್ನು ಬುಡಮೇಲು ಮಾಡಿತು ಎಂಬುದೂ ಸಹ ವರದಿಯಾಗಿದೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ಈ ತಿಕ್ಕಾಟವು ಅಂತಿಮವಾಗಿ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡುವಲ್ಲಿ ಪರಿಣಮಿಸಿತು ಮತ್ತು ರಷ್ಯಾದ ಮೇಲೆ ಆರ್ಥಿಕ ದಿಗ್ಬಂಧನಗಳನ್ನು ಅಮೆರಿಕಾ ವಿಧಿಸಿತು. ಈ ನಿರ್ಬಂಧಗಳಿಂದಾಗಿ ರಷ್ಯಾವು ತನ್ನದೇ ರಫ್ತು ಗಳಿಕೆಯನ್ನು ಡಾಲರ್ ಕರೆನ್ಸಿಯ ಮೂಲಕ ಪಡೆಯುವುದು ಅಸಾಧ್ಯವಾಯಿತು. ತನ್ನ ಒಟ್ಟು ಅಗತ್ಯದಲ್ಲಿ ಸುಮಾರು 8% ಇಂಧನವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುವ ಅಮೆರಿಕ ತನ್ನ ಆಮದುಗಳನ್ನು ನಿರ್ಬಂಧಿಸಿತೇ ವಿನಃ, ಪಶ್ಚಿಮ ಯುರೋಪ್ ದೇಶಗಳು ಮಾಡಿಕೊಳ್ಳುವ ರಷ್ಯಾದ ತೈಲ ಮತ್ತು ಅನಿಲದ ಆಮದಿನ ಮೇಲೆ ನಿರ್ಬಂಧಗಳನ್ನು ಹೇರಲಿಲ್ಲ. ಇದಕ್ಕೆ ಕಾರಣವೇನೆಂದರೆ, ಈ ದೇಶಗಳು ತಮ್ಮ ಅಗತ್ಯದ 40% ಇಂಧನವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತವೆ. ಹಾಗಾಗಿ, ಪಶ್ಚಿಮ ಯುರೋಪ್ ದೇಶಗಳು ಆಮದು ಮಾಡಿಕೊಳ್ಳುತ್ತಿರುವ ರಷ್ಯಾದ ತೈಲ ಮತ್ತು ಅನಿಲದ ಮೇಲೆ ಒಂದು ವೇಳೆ ನಿರ್ಬಂಧಗಳನ್ನು ಹೇರಿದರೆ, ಈ ಕ್ರಮವು ಯುರೋಪಿಯನ್ ಜನತೆಯ ಮೇಲೆ ಬೀರುವ ತೀವ್ರ ಪರಿಣಾಮದಿಂದಾಗಿ, ಅದು “ಪಾಶ್ಚಾತ್ಯ ಮೈತ್ರಿ”ಯ ವಿಭಜನೆಗೂ ಕಾರಣವಾಗಬಹುದು.

ದಿನಕ್ಕೆ ಸುಮಾರು 5 ಮಿಲಿಯನ್ ಬ್ಯಾರೆಲ್ ತೈಲವನ್ನು ರಫ್ತು ಮಾಡುವ ಪ್ರಮುಖ ತೈಲ ಉತ್ಪಾದಕ ಮತ್ತು ರಫ್ತುದಾರ ರಷ್ಯಾದ ತೈಲ ಆಮದಿನ ಮೇಲೆ ನಿರ್ಬಂಧಗಳು ಇಲ್ಲದುದರಿಂದ ಈ ನಿರ್ಬಂಧಗಳು ಹಲ್ಲಿಲ್ಲದ ಹಾವಿನಂತಾಗಿವೆ. ಅಷ್ಟಕ್ಕೂ, ಒಂದು ದೇಶವನ್ನು ಮಂಡಿಯೂರುವಂತೆ ಮಾಡುವ ಉದ್ದೇಶಕ್ಕಾಗಿಯೇ ನಿರ್ಬಂಧಗಳನ್ನು ಹೇರುತ್ತಿರುವಾಗ, ಒಂದು ದೇಶದ ಅತ್ಯಂತ ಪ್ರಮುಖ ರಫ್ತು ವಸ್ತುವನ್ನೇ ನಿರ್ಬಂಧಗಳಿಗೆ ಒಳಪಡಿಸದಿದ್ದರೆ, ಈ ನಿರ್ಬಂಧಗಳ ಅರ್ಥವಾದರೂ ಏನು? ರಷ್ಯಾದ ಮೇಲೆ ನಿರ್ಬಂಧ ಹೇರಿದ ಅಮೆರಿಕಾ, ರಷ್ಯಾದ ತೈಲವಿಲ್ಲದೆ ಜಗತ್ತು ನಡೆಯಬಲ್ಲದು ಎಂದು ತೋರಿಸುವ ಸಲುವಾಗಿ, ಇತರ ತೈಲ ಉತ್ಪಾದಕ ದೇಶಗಳು ತಮ್ಮ ತೈಲ ಉತ್ಪಾದನೆ ಮತ್ತು ರಫ್ತುಗಳನ್ನು ಹೆಚ್ಚಿಸುವಂತೆ ಅವುಗಳ ಮನ ಒಲಿಸುವ ಪ್ರಯತ್ನದಲ್ಲಿ ಈಗ ನಿರತವಾಗಿದೆ. ತನ್ನ ತೈಲ ಉತ್ಪಾದನೆಯನ್ನು ಹೆಚ್ಚಿಸುವಂತೆ ಸೌದಿ ಅರೇಬಿಯಾದ ಮೇಲೆ ಒತ್ತಡ ಹೇರುತ್ತಿದೆ. ಜೊತೆಗೆ ಇರಾನ್ ಮತ್ತು ವೆನಿಜುವೆಲಾ ದೇಶಗಳೊಂದಿಗೂ ಮಾತನಾಡುತ್ತಿದೆ.

ಇರಾನ್ ಮತ್ತು ವೆನಿಜುವೆಲಾ ದೇಶಗಳ ಅರ್ಥವ್ಯವಸ್ಥೆಯನ್ನು ದುರ್ಬಲಗೊಳಿಸಿದ ಮತ್ತು ಅಗತ್ಯ ಔಷಧಿಗಳನ್ನೂ ಸಹ ಅವು ಆಮದು ಮಾಡಿಕೊಳ್ಳಲಾಗದೆ ಮಕ್ಕಳೂ ಸೇರಿದಂತೆ ಅಲ್ಲಿನ ಸಾವಿರಾರು ಜನರ ಸಾವಿಗೆ ಕಾರಣವಾದ ಅಮೆರಿಕಾದ ಕಠಿಣ ನಿರ್ಬಂಧಗಳು ಇಂದಿಗೂ ಜಾರಿಯಲ್ಲಿವೆ. ವಾಸ್ತವವಾಗಿ, ತನ್ನ “ದಿಗ್ಬಂಧನ ಆಳ್ವಿಕೆಯನ್ನು” ರಷ್ಯಾದ ವಿರುದ್ಧ ಬಳಸುವ ಮೊದಲು ಇಂತಹ ನಿರ್ಬಂಧಗಳನ್ನು ಈ ಎರಡು ದೇಶಗಳ ಮೇಲೆ ವಿಧಿಸಿ ಅವುಗಳ ಪರಿಣಾಮವನ್ನು ಅಮೆರಿಕಾ ಪರೀಕ್ಷಿಸಿತು. ಆದರೆ, ಪರಿಸ್ಥಿತಿಯ ವಿಪರ್ಯಾಸ ಹೇಗಿದೆ ಎಂದರೆ, ತನ್ನ ತಕ್ಷಣದ ದೊಡ್ಡ ಶತ್ರು ರಷ್ಯಾದ ಗರ್ವಭಂಗಕ್ಕಾಗಿ ತಾನು ನಿರ್ಬಂಧ ಹೇರಿದ್ದ ದೇಶಗಳೊಂದಿಗೇ ಶಾಂತಿ ಸಂಧಾನಕ್ಕೆ ಮುಂದಾಗಿರುವ ಅಮೆರಿಕವು ಆ ದೇಶಗಳನ್ನು ಸಂಪರ್ಕಿಸಿ ಅವು ಹೆಚ್ಚು ತೈಲವನ್ನು ರಫ್ತು ಮಾಡುವಂತೆ ಕೋರಿದೆ.

ವೆನಿಜುವೆಲಾದ “ಬೊಲಿವೇರಿಯನ್” ಆಡಳಿತದ ಬಗ್ಗೆ ಅಮೆರಿಕದ ಹಗೆತನ ಎಷ್ಟು ಅಗಾಧವಾಗಿತ್ತು ಎಂದರೆ, ಚುನಾಯಿತ ಅಧ್ಯಕ್ಷ ನಿಕೋಲಸ್ ಮದುರೊ ಅವರ ಸ್ಥಾನದಲ್ಲಿ ಜುಆನ್ ಗುಯಿಡೋ ಎಂಬ ಒಬ್ಬ ಸೋಗುಕಾರನನ್ನು ಉತ್ತೇಜಿಸುವ ಮೂಲಕ ಅಧ್ಯಕ್ಷ ನಿಕೋಲಸ್ ಮದುರೊ ಅವರ ಆಡಳಿತವನ್ನು ಉರುಳಿಸುವ ಪ್ರಯತ್ನವನ್ನು ಅಮೆರಿಕಾ ಇಂದಿಗೂ ಕೈಬಿಟ್ಟಿಲ್ಲ. ಅಮೆರಿಕ ಮತ್ತು ಅದರ ಮೈತ್ರಿ ಪಾಲುದಾರರು ವೆನಿಜುವೆಲಾದ ಅಧ್ಯಕ್ಷರಾಗಿ ಗುಯಿಡೋ ಅವರನ್ನು ಮಾನ್ಯ ಮಾಡಿರುವುದೇ ಅಲ್ಲದೆ, ಇತರರೂ ಇದೇ ಕ್ರಮವನ್ನೇ ಅನುಸರಿಸುವಂತೆ ಪ್ರತಿಯೊಂದು ದೇಶದ ಮೇಲೂ ಒತ್ತಡ ಹೇರುತ್ತಿದ್ದಾರೆ. ಅಷ್ಟಾಗಿಯೂ, ತೈಲ ಉತ್ಪಾದನೆಯನ್ನು ಹೆಚ್ಚಿಸುವ ಬಗ್ಗೆ ಅಮೆರಿಕ ತನ್ನ ಕೃಪಾಪೋಷಿತ ಗುಯಿಡೋ ಬಳಿ ಹೋಗಲಿಲ್ಲ. ಆತನ ಆಜ್ಞೆಗಳನ್ನು ಪಾಲಿಸುವವರಾರೂ ವೆನಿಜುವೆಲಾದಲ್ಲಿಲ್ಲ. ಬದಲಿಗೆ, ವೆನಿಜುವೆಲಾದ ನಿಜ ಅಧಿಕಾರ ನೆಲೆಸಿರುವ ಸ್ಥಳಕ್ಕೆ, ಅಂದರೆ, ಮದುರೊ ಸರ್ಕಾರದ ಬಳಿಗೆ ಹೋಯಿತು. ಈ ಬಗ್ಗೆ ಮದುರೊ ಸರ್ಕಾರವು ಅಮೆರಿಕಾ ಆಡಳಿತದ ಮುಂದೆ ಇರಿಸಿರುವ ಒಂದು ಷರತ್ತು ಸರಿಯಾಗಿಯೇ ಇದೆ: ವೆನಿಜುವೆಲಾದಿಂದ ತೈಲವನ್ನು ಪಡೆಯ ಬಯಸಿದರೆ, ಮದುರೊ ಸರ್ಕಾರವನ್ನು ಅಧಿಕೃತವಾಗಿ ಮಾನ್ಯ ಮಾಡಬೇಕು. ಹೀಗೆ ಸಾಮ್ರಾಜ್ಯಶಾಹಿಯು ಪರರ ನಾಶಕ್ಕಾಗಿ ಸಿಡಿಸಿದ ಸಿಡಿಗುಂಡು ಸಾಮ್ರಾಜ್ಯಶಾಹಿಯನ್ನೇ ಸುಡುತ್ತಿದೆ. ಈ ಪರಿಸ್ಥಿತಿಯಿಂದ ಪಾರಾಗುವುದು ಸುಲಭದ ಮಾತಲ್ಲ.

ಇರಾನ್ ವಿರುದ್ಧ ಬಹಳ ಹಿಂದಿನಿಂದಲೂ ವಿವಿಧ ತೀವ್ರತೆಯ ದಿಗ್ಬಂಧನಗಳನ್ನು ಹೇರಲಾಗಿದೆ. ಒತ್ತೆಯಾಳು ಪ್ರಕರಣದ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ನಿರ್ಬಂಧಗಳನ್ನು ಮೊದಲ ಬಾರಿಗೆ 1979 ರಲ್ಲಿ ಹೇರಲಾಯಿತು. ಇರಾನಿ ವಿದ್ಯಾರ್ಥಿಗಳು ಟೆಹರಾನ್‌ನಲ್ಲಿ ಅಮೆರಿಕಾದ 52 ಮಂದಿ ಸಿಬ್ಬಂದಿಯನ್ನು 4-11-1979 ರಿಂದ 444 ದಿನಗಳ ಕಾಲ ಅಲ್ಲಿನ ದೂತಾವಾಸದಲ್ಲಿ ಹಿಡಿದಿಟ್ಟಿದ್ದ ಒತ್ತೆಯಾಳುಗಳನ್ನು 1981 ರಲ್ಲಿ ಬಿಡುಗಡೆ ಮಾಡಿದ ನಂತರ ಈ ನಿರ್ಬಂಧಗಳನ್ನು ತೆಗೆದುಹಾಕಲಾಯಿತು. 1984 ರಲ್ಲಿ ಮತ್ತೆ ಹೇರಿದ ನಿರ್ಬಂಧಗಳನ್ನು 1987 ಮತ್ತು 1995 ರಲ್ಲಿ ಬಲಪಡಿಸಲಾಯಿತು. ಆ ದೇಶದ ಪರಮಾಣು ಕಾರ್ಯಕ್ರಮದಿಂದಾಗಿ ವಿಶ್ವಸಂಸ್ಥೆಯು ಇರಾನ್ ವಿರುದ್ಧ 2006 ರಲ್ಲಿ ವಿಧಿಸಿದ್ದ ನಿರ್ಬಂಧಗಳನ್ನು ಇರಾನ್ ಪರಮಾಣು ಒಪ್ಪಂದದ ನಂತರ 2016 ರಲ್ಲಿ ತೆಗೆದುಹಾಕಲಾಯಿತು. ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕಾ ಏಕಪಕ್ಷೀಯವಾಗಿ ಪರಮಾಣು ಒಪ್ಪಂದದಿಂದ ಹಿಂದೆ ಸರಿದಿತು ಮತ್ತು ಇರಾನ್ ವಿರುದ್ಧ 2019 ರಲ್ಲಿ ಮತ್ತೆ ನಿರ್ಬಂಧಗಳನ್ನು ವಿಧಿಸಿತು. ಜೋ ಬೈಡನ್ ಅಮೆರಿಕಾದ ಅಧ್ಯಕ್ಷರಾದ ನಂತರ, 2021ರ ಫೆಬ್ರವರಿಯಲ್ಲಿ ಇರಾನ್ ವಿರುದ್ಧದ ನಿರ್ಬಂಧಗಳು ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಮುಂದುವರಿಯುತ್ತವೆ ಎಂದು ಘೋಷಿಸಿದ್ದರು. ಇದೇ ಬೈಡನ್ ಆಡಳಿತವು ಈಗ ರಷ್ಯಾವನ್ನು ಒಬ್ಬಂಟಿಯಾಗಿ ಮಾಡುವ ಒಂದು ಸಾಧನವಾಗಿ ಇರಾನಿನೊಂದಿಗೆ ಮಾತನಾಡುತ್ತಿರುವುದು ಒಂದು ವಿಶೇಷ ವಿಪರ್ಯಾಸವೇ.

ನಿರ್ಬಂಧಗಳಿಂದಾಗಿ ಅತಿ ಕಡಿಮೆ ಪ್ರಮಾಣದ ತೈಲ ರಫ್ತು ಮಾಡಿದ ವೆನಿಜುವೆಲಾ ಮತ್ತು ಇರಾನ್ ದೇಶಗಳು ಹೇಳ ತೀರದ ಆರ್ಥಿಕ ಸಂಕಷ್ಟಗಳನ್ನು ಅನುಭವಿಸಿವೆ ಮತ್ತು ಇಂದಿಗೂ ಬಳಲುತ್ತಿವೆ. ಸ್ವಲ್ಪ ಸಮಯದವರೆಗೆ ತನ್ನ ಮಾಮೂಲು ಮಟ್ಟದ ತೈಲ ಉತ್ಪಾದನೆಯನ್ನು ಮುಂದುವರಿಸಿದ ಇರಾನ್, ರಫ್ತು ಮಾಡಲು ಸಾಧ್ಯವಾಗದೇ ಉಳಿದ ತೈಲವನ್ನು ದೇಶದೊಳಗೇ ಇಟ್ಟುಕೊಂಡಿತ್ತು. ಏಕೆಂದರೆ, ಉತ್ಪಾದನೆಯನ್ನು ಕಡಿತ ಮಾಡುವ ಉದ್ದೇಶದಿಂದ ಒಮ್ಮೆ ತೈಲ-ಬಾವಿಗಳನ್ನು ಮುಚ್ಚಿದರೆ ಅವುಗಳನ್ನು ಪುನಃ ತೆರೆಯುವುದು ಕಷ್ಟವೂ ಹೌದು ಮತ್ತು ದುಬಾರಿಯೂ ಹೌದು. ಜೊತೆಗೆ, ಇತ್ತೀಚೆಗೆ ವೆನಿಜುವೆಲಾದಲ್ಲಿ ಆಗಿರುವಂತೆ, ಇರಾನಿನಲ್ಲೂ ತೈಲ ಮೂಲಗಳೂ ಒಣಗುತ್ತಿವೆ ಎಂದು ತೋರುತ್ತದೆ.

ಅಮೆರಿಕದ ಕೋರಿಕೆಗೆ ಸ್ಪಂದಿಸಿ ಇರಾನ್ ಮತ್ತು ವೆನಿಜುವೆಲಾ ದೇಶಗಳು ತಮ್ಮ ತೈಲ ರಫ್ತನ್ನು ಹೆಚ್ಚಿಸಲು ಒಪ್ಪಿದರೂ ಸಹ, ತೈಲ ಪೂರೈಕೆದಾರ ರಷ್ಯಾವನ್ನು ಬದಲಾಯಿಸುವ ವಿಷಯಕ್ಕೆ ಬಂದಾಗ ಇನ್ನೂ ಎರಡು ಸಮಸ್ಯೆಗಳು ಉಳಿಯುತ್ತವೆ. ಮೊದಲನೆಯದಾಗಿ, ಈ ದೇಶಗಳು ರಫ್ತು ಮಾಡಬಹುದಾದ ತೈಲದ ಪ್ರಮಾಣವು ರಷ್ಯಾದ ರಫ್ತುಗಳನ್ನು ಬದಲಿಸುವಷ್ಟು ದೊಡ್ಡದಾಗಿಲ್ಲ. ನಿರ್ಬಂಧಗಳಿಗೆ ಒಳಗಾಗುವ ಮೊದಲು ಪ್ರತಿ ದಿನ ಉತ್ಪಾದಿಸುತ್ತಿದ್ದ ಸುಮಾರು 4 ಮಿಲಿಯನ್ ಬ್ಯಾರೆಲ್ ಮಟ್ಟದಿಂದ ಇರಾನಿನ ತೈಲ ಉತ್ಪಾದನೆಯು ಈಗ ಅರ್ಧದಷ್ಟು ಕೆಳಗಿದೆ. ವೆನೆಜುವೆಲಾದ ಉತ್ಪಾದನೆಯು ನಿರ್ಬಂಧಗಳಿಗೆ ಮೊದಲಿನ 4 ಮಿಲಿಯನ್ ಬ್ಯಾರೆಲ್‌ಗಳಿಂದ ಈಗ ದಿನಕ್ಕೆ ಕೇವಲ 1 ಮಿಲಿಯನ್ ಬ್ಯಾರೆಲ್‌ಗಳಿಗೆ ಇಳಿದಿದೆ. ಈ ಎರಡೂ ದೇಶಗಳಲ್ಲಿ ಇಷ್ಟು ಕೆಳ ಮಟ್ಟದ ಉತ್ಪಾದನೆಯನ್ನು ನಿರ್ಬಂಧ-ಪೂರ್ವ ಮಟ್ಟಕ್ಕೆ ತರುವುದು ಸುಲಭವಲ್ಲ ಮತ್ತು ರಷ್ಯಾದ ದೈನಿಕ ಸುಮಾರು 5 ಮಿಲಿಯನ್ ಬ್ಯಾರೆಲ್‌ಗಳ ತೈಲ ರಫ್ತುಗಳನ್ನು ಬದಲಿಸಲು ಸಾಕಾಗುವುದಿಲ್ಲ. ಎರಡನೆಯದಾಗಿ, ಮತ್ತು ಹೆಚ್ಚು ಮುಖ್ಯವಾಗಿ, ವಿಶ್ವ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ದೇಶದ ತೈಲಕ್ಕಿಂತ ರಷ್ಯಾದ ತೈಲ ಬೆಲೆಗಳು ಪ್ರತಿ ಬ್ಯಾರೆಲ್‌ಗೆ 25-30 ಡಾಲರ್ ಗಳಷ್ಟು ಕಡಿಮೆ ಇವೆ. ಆದ್ದರಿಂದ, ರಷ್ಯಾದ ತೈಲ ರಫ್ತುಗಳನ್ನು ಬದಲಿಸುವಷ್ಟು ಹೆಚ್ಚುವರಿ ತೈಲವು ಭೌತಿಕವಾಗಿ ಲಭ್ಯವಿದ್ದರೂ, ಅದು ಹೆಚ್ಚು ದುಬಾರಿಯಾಗುತ್ತದೆ. ಈ ಕಾರಣದಿಂದಾಗಿ ದೇಶ ದೇಶಗಳು, ವಿಶೇಷವಾಗಿ ಯುರೋಪಿಯನ್ ಒಕ್ಕೂಟದ ದೇಶಗಳು, ರಷ್ಯಾದ ತೈಲವನ್ನು ತ್ಯಜಿಸಲು ಹಿಂಜರಿಯುತ್ತವೆ.

ರಷ್ಯಾದ ತೈಲದ ಬೆಲೆಯು ಬಹಳ ಕಡಿಮೆ ಇರುವ ಕಾರಣದಿಂದಾಗಿ ಭಾರತವೂ ಸಹ ರಷ್ಯಾದಿಂದ ತನ್ನ ತೈಲ ಆಮದಿನ ಪ್ರಮಾಣವನ್ನು ಹೆಚ್ಚಿಸಿಕೊಂಡಿದೆ. ರಷ್ಯಾದಿಂದ ಭಾರತವು ಮಾಡಿಕೊಳ್ಳುತ್ತಿರುವ ತೈಲದ ಆಮದುಗಳು ಕಳೆದ ಕೆಲವು ದಿನಗಳಲ್ಲಿ ನಾಲ್ಕು ಪಟ್ಟು ಹೆಚ್ಚಿ, ಈಗ ಆಮದಿನ ಪ್ರಮಾಣ ದಿನಕ್ಕೆ ಸುಮಾರು 360,000 ಬ್ಯಾರೆಲ್‌ಗಳವರೆಗೆ ಏರಿದೆ ಎಂದು ತೋರುತ್ತದೆ. ಇಷ್ಟು ಪ್ರಮಾಣದಲ್ಲಿ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುವುದು ಎಂದರೆ, ತೈಲ ಆಮದು ವೆಚ್ಚವು ತಿಂಗಳಿಗೆ ಕನಿಷ್ಠ 200 ಮಿಲಿಯನ್ ಡಾಲರ್‌ನಷ್ಟು ಕಡಿಮೆಯಾಗುತ್ತದೆ ಎಂದರ್ಥ. ಆಮದು ವೆಚ್ಚಗಳನ್ನು ಕಡಿತಗೊಳಿಸುವ ಇಂತಹ ಅವಕಾಶವನ್ನು ಯಾವುದೇ ದೇಶವು ಬಳಸಿಕೊಳ್ಳದಿರುವುದು ಶುದ್ಧ ಮೂರ್ಖತನವಾಗುತ್ತದೆ. ರಷ್ಯಾದ ತೈಲ ರಫ್ತುಗಳನ್ನು ಬದಲಿಸಲು ಕೆಲವು ದೇಶಗಳು ತಮ್ಮ ತೈಲ ಉತ್ಪಾದನೆಯನ್ನು ಮತ್ತು ರಫ್ತುಗಳನ್ನು ಹೆಚ್ಚಿಸುವಂತೆ ಮಾಡುವಲ್ಲಿ ಅಮೆರಿಕಾ ಒಂದು ವೇಳೆ ಯಶಸ್ವಿಯಾದರೂ ಸಹ, ರಷ್ಯಾದ ಬೆಲೆಗಳೊಂದಿಗೆ ಸ್ಪರ್ಧಾತ್ಮಕವಾಗಿರುವಂತೆ ನೋಡಿಕೊಳ್ಳಲು ತೈಲ ಬೆಲೆಗಳಿಗೆ ವಿಶ್ವ ಮಟ್ಟದ ಸಬ್ಸಿಡಿ ಒದಗಿಸುವುದಂತೂ ಸಾಧ್ಯವಿಲ್ಲ. ರಷ್ಯಾದ ತೈಲ ರಫ್ತುಗಳನ್ನು ಬದಲಿಸುವ ಪ್ರಯತ್ನವನ್ನು ಅಮೆರಿಕಾ ಒಂದು ವೇಳೆ ಮುಂದುವರಿಸಿದರೆ, ಆಗ, ತಮ್ಮ ತಮ್ಮ ತೈಲ ಆಮದುಗಳಿಗೆ ಹೆಚ್ಚು ಬೆಲೆ ತೆರುವಂತೆ ದೇಶ ದೇಶಗಳನ್ನು ಒತ್ತಾಯಿಸಬೇಕಾಗುತ್ತದೆ. ಜರ್ಮನಿ ಮತ್ತು ಫ್ರಾನ್ಸ್‌ ನಂತಹ ದೊಡ್ಡ ಶಕ್ತಿಶಾಲಿ ದೇಶಗಳ ವಿಷಯದಲ್ಲಿ ಇದು ಅಸಾಧ್ಯವಾಗುತ್ತದೆ. ಇತರ ದೇಶಗಳೂ ಇಂತಹ ದಬ್ಬಾಳಿಕೆಯನ್ನು ವಿರೋಧಿಸುತ್ತವೆ.

ಶತ್ರುಗಳು, ಶತ್ರುಗಳು….  ವ್ಯಾಪಾರ ಒತ್ತಟ್ಟಿಗೆ!  “ನನಗೆ ನಿನ್ನ ತೈಲ ಸಿಗಬಹುದಾ?”  ವ್ಯಂಗ್ಯಚಿತ್ರ: ಕಾರ್ಲೊಸ್ ಲತುಫ್, ಮಿಂಟ್‌ಪ್ರೆಸ್‌ನ್ಯೂಸ್

ಉಕ್ರೇನ್‌ಅನ್ನು ಶಸ್ತ್ರಸಜ್ಜಿತಗೊಳಿಸುವ ಮೂಲಕ ಯುದ್ಧವನ್ನು ಮುಂದುವರಿಸ ಬಯಸುವ ಅಮೆರಿಕಾದ ಆಶಯಗಳಿಗೆ ಬದಲಾಗಿ ಮಾತುಕತೆಯ ಮೂಲಕ ಯುದ್ಧವನ್ನು ಕೊನೆಗಾಣಿಸ ಬಯಸುವ ಮಾತುಗಳು ಈಗಾಗಲೇ ಐರೋಪ್ಯ ಒಕ್ಕೂಟ ದೇಶಗಳಲ್ಲಿ ಕೇಳಿಬರುತ್ತಿವೆ. ಇತ್ತೀಚೆಗೆ, ಒಂದು ಮಹತ್ವದ ಪ್ರಸಂಗದಲ್ಲಿ, “ಮಾನವೀಯ ನೆರವು” ನೀಡುವ ನೆಪದಲ್ಲಿ ವಿವಿಧ ರೀತಿಯ ಶಸ್ತ್ರಾಸ್ತ್ರಗಳನ್ನು “ಸಹಾಯ” ಎಂದು ಉಕ್ರೇನ್‌ಗೆ ರಹಸ್ಯವಾಗಿ ಪೂರೈಸಲಾಗುತ್ತಿದೆ ಎಂಬುದನ್ನು ಅರಿತ ಇಟಲಿಯ ಕಾರ್ಮಿಕರು ಪೀಸಾ ವಿಮಾನ ನಿಲ್ದಾಣದಲ್ಲಿ ಉಕ್ರೇನ್‌ಗೆ “ಮಾನವೀಯ ನೆರವು” ಎಂದು ಹೆಸರಿಸಿದ ಸರಕುಗಳನ್ನು ಸಾಗಾಣಿಕೆ-ವಿಮಾನದಲ್ಲಿ ತುಂಬಲು ನಿರಾಕರಿಸಿದರು. ಒಂದು ಪ್ರಮುಖ ಯೂರೋಪಿಯನ್ ದೇಶದಲ್ಲಿ ಸಂಭವಿಸಿದ ಕಾರ್ಮಿಕರ ಹಸ್ತಕ್ಷೇಪದ ಈ ಉದಾಹರಣೆಯು, ಯುದ್ಧವು ಒಂದು ವೇಳೆ ಲಂಬಿಸಿದರೆ, ಇತರ ದೇಶಗಳಲ್ಲೂ ಪ್ರತಿಧ್ವನಿಸುವ ಸಾಧ್ಯತೆಯಿದೆ.

ವಸಾಹತು ಆಡಳಿತಗಾರರು ತಾವು ಕೈಗೊಂಡ ನಿರ್ಧಾರಗಳಿಗೆ ಯಾವ ವಿವರಣೆಯನ್ನೂ ಕೊಡದೆ ಬಚಾವಾದ ವಸಾಹತುಶಾಹಿ ದಿನಗಳಿಂದ, ತಮ್ಮ ಆಳ್ವಿಕೆಯ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲಾಗದ ಮುಗ್ಧ ಜನರಿಂದ ಮಾಡುತ್ತಿದ್ದ ಸುಲಿಗೆಯ ದಿನಗಳಿಂದ ಮತ್ತು ತಕ್ಷಣವೇ ಪ್ರಶ್ನಿಸದ ಜನರ ಮೇಲೆ ತಮ್ಮ ಆಜ್ಞೆಗಳನ್ನು ಸಲೀಸಾಗಿ ಹೇರುತ್ತಿದ್ದ ವಸಾಹತುಶಾಹಿ ಆಡಳಿತದಿಂದ ನಾವೀಗ ಬಹಳ ದೂರ ಸಾಗಿದ್ದೇವೆ. ವಸಾಹತುಶಾಹಿ ಶಕ್ತಿಗಳು ಒಂದು ಕಾಲದಲ್ಲಿ ಹೊಂದಿದ್ದ ಪ್ರಾಬಲ್ಯವನ್ನು ಇಂದು ಅಮೆರಿಕಾ ಹೊಂದಿಲ್ಲ. ತಾನು ಈಗ ಹೊಂದಿರುವ ಅಷ್ಟೊ ಇಷ್ಟೊ ಅಧಿನಾಯಕತ್ವವನ್ನು ಉಳಿಸಿಕೊಳ್ಳುವ ಹತಾಶ ಪ್ರಯತ್ನದಲ್ಲಿ ಅಮೆರಿಕಾ ಖಂಡಿತವಾಗಿಯೂ ವಿಫಲವಾಗುತ್ತದೆ. ಏಕೆಂದರೆ, ಈ ಅಧಿನಾಯಕತ್ವವು ಅಬಾಧಿತವೂ ಅಲ್ಲ ಅಥವಾ ಪ್ರಶ್ನಾತೀತವೂ ಅಲ್ಲ. ಸಾಮ್ರಾಜ್ಯಶಾಹಿ ಅಮೆರಿಕಾ ಹೊಂದಿದ್ದ ವಿಶ್ವ ಪ್ರಾಬಲ್ಯವು ಅವನತಿಯತ್ತ ಸಾಗುತ್ತಿರುವುದನ್ನು ನಾವು ಇಂದು ಕಾಣುತ್ತಿದ್ದೇವೆ.

Donate Janashakthi Media

Leave a Reply

Your email address will not be published. Required fields are marked *