ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ. ನಾಗರಾಜ್
ಬಂಡವಾಳಶಾಹಿ ವ್ಯವಸ್ಥೆಯನ್ನು “ಅಮಾನವೀಯ” ಎನ್ನುವುದು ಅದು ಜನರಿಗಿಂತ ಮೊದಲು ಲಾಭಕ್ಕೇ ಆದ್ಯತೆ ನೀಡುವ ಕಾರಣಕ್ಕಾಗಿಯಷ್ಟೇ ಅಲ್ಲ. ಅದು ಎಲ್ಲ ಮನುಷ್ಯರ ಜೀವನವೂ ಸಮಾನ ಬೆಲೆಯುಳ್ಳದ್ದು ಎಂದು ನೋಡುವುದಿಲ್ಲ ಮತ್ತು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ “ಇಬ್ಬಗೆಯ ಮಾನದಂಡಗಳನ್ನು” ಅದು ಅನುಸರಿಸುತ್ತದೆ ಎಂಬ ಅರ್ಥದಲ್ಲಿ. ಈ ಮೂಲಭೂತ ತಾರತಮ್ಯ ಅಥವಾ “ಇಬ್ಬಗೆಯ ಮಾನದಂಡಗಳನ್ನು” ಆಧರಿಸಿದ ಸಾಮಾಜಿಕ ವ್ಯವಸ್ಥೆಯು ಹುಟ್ಟಿಸಿದ ಅಸಮಾಧಾನವನ್ನು ಕೊರೊನಾ ಪಿಡುಗಿನ ಸಂದರ್ಭದಲ್ಲಿ ಸ್ಪಷ್ಟವಾಗಿ ಕಾಣಬಹುದು.
ಕಳೆದ ಎರಡು ವರ್ಷಗಳಿಂದಲೂ ನಮ್ಮ ಈ ಜಗತ್ತು ಎದುರಿಸುತ್ತಿರುವ ಕೊರೊನಾ ಸಾಂಕ್ರಾಮಿಕ ಪಿಡುಗು ಇನ್ನೂ ಕೊನೆಯಾಗಿಲ್ಲ. ಶತಮಾನದಲ್ಲಿ ಕಂಡರಿಯದ ಈ ಪಿಡುಗಿನಿಂದ ಈಗಾಗಲೇ ಒಂದೂವರೆ ಕೋಟಿ ಮಂದಿ ಜೀವ ಕಳೆದುಕೊಂಡಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ. ಈ ಪಿಡುಗು ಇಡೀ ಮನುಕುಲವನ್ನೇ ಒಂದು ಅಭೂತಪೂರ್ವ ಬಿಕ್ಕಟ್ಟಿಗೆ ತಳ್ಳಿದೆ. ಈ ಬಿಕ್ಕಟ್ಟನ್ನು ಪರಿಹರಿಸಲು ಪ್ರತಿಯೊಂದು ದೇಶದ ಸರ್ಕಾರವೂ ಅತಿ ಹೆಚ್ಚು ಶ್ರಮ ವಹಿಸಬೇಕಾದ ಅಗತ್ಯವಿದೆ. ಅದರಲ್ಲೂ ವಿಶೇಷವಾಗಿ, ಮೂರನೆಯ ಜಗತ್ತಿನ ದೇಶಗಳ ಸರ್ಕಾರಗಳು ಮಿತಿ ಮೀರಿ ಶ್ರಮಿಸಬೇಕಾಗಿದೆ. ಈ ದೇಶಗಳಲ್ಲಿ ಜನರು ಈ ಸಾಂಕ್ರಾಮಿಕ ಪಿಡುಗಿನಿಂದ ನರಳುವುದರ ಜೊತೆಗೆ ಅದಕ್ಕೆ ಸಂಬಂಧಿಸಿದ ಔಷದೋಪಚಾರ ಮತ್ತಿತರ ಕಾರಣಗಳಿಂದಾಗಿ ನಿರ್ಗತಿಕತನಕ್ಕೂ ಗುರಿಯಾಗುತ್ತಾರೆ.
ಈ ಪಿಡುಗಿನ ನಿವಾರಣೆಗಾಗಿ ಎಲ್ಲ ದೇಶಗಳ ಸರ್ಕಾರಗಳೂ ಆಸ್ಪತ್ರೆ ಸೌಲಭ್ಯಗಳನ್ನು ವಿಸ್ತರಿಸಬೇಕಾಗುತ್ತದೆ. ಆಸ್ಪತ್ರೆಗಳಲ್ಲಿ ಸಾಕಷ್ಟು ಸಂಖ್ಯೆಯ ಹಾಸಿಗೆಗಳನ್ನು ಸಿದ್ಧವಾಗಿಡಬೇಕಾಗುತ್ತದೆ. ರೋಗ-ಪರೀಕ್ಷಾ ಸೌಲಭ್ಯಗಳನ್ನು ನಿರ್ಮಿಸಬೇಕಾಗುತ್ತದೆ. ಲಸಿಕೀಕರಣ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಬೇಕಾಗುತ್ತದೆ ಮತ್ತು ಲಸಿಕೆಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕಾಗುತ್ತದೆ, ಇತ್ಯಾದಿ. ಜೊತೆಯಲ್ಲಿ, ನೇರ ಹಣ ವರ್ಗಾವಣೆಯ ಮೂಲಕ ಜನರಿಗೆ ಪರಿಹಾರವನ್ನು ಸರ್ಕಾರಗಳು ಒದಗಿಸಬೇಕಾಗುತ್ತದೆ. ಕಿರು ಉತ್ಪಾದಕರಿಗೆ ಅಗತ್ಯ ಸಹಾಯ ಒದಗಿಸಬೇಕಾಗುತ್ತದೆ. ಈ ಎಲ್ಲ ಕಾರ್ಯಗಳಿಗೂ ಸರ್ಕಾರಗಳು ಅಪಾರ ಹಣ ಖರ್ಚು ಮಾಡಬೇಕಾಗುತ್ತದೆ. ಆದರೆ, ಸಾಂಕ್ರಾಮಿಕದಿಂದಾಗಿ ಉತ್ಪಾದನಾ ಚಟುವಟಿಕೆಗಳು ಕುಂಠಿತಗೊಳ್ಳುತ್ತವೆ ಮತ್ತು ಅದರೊಂದಿಗೆ ತೆರಿಗೆಗಳ ಹಾಲಿ ದರಗಳ ಮಟ್ಟದಲ್ಲಿ ಸರ್ಕಾರದ ಆದಾಯವೂ ಕಡಿಮೆಯಾಗುತ್ತದೆ. ಸಂಪತ್ತಿನ ತೆರಿಗೆ ದರಗಳನ್ನು ಹೆಚ್ಚಿ¸ದಿದ್ದರೆ, ಸರ್ಕಾರಗಳು ತಮ್ಮ ವಿತ್ತೀಯ ಕೊರತೆಯನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ನವ-ಉದಾರವಾದದ ಕಟ್ಟುಪಾಡುಗಳಾದ “ವಿತ್ತೀಯ ಹೊಣೆಗಾರಿಕೆ” ಕಾಯ್ದೆಯ ಮೂಲಕ ಹೇರಿದ ನಿರ್ಬಂಧಗಳನ್ನು ಉಲ್ಲಂಘಿಸುವ ಮತ್ತು “ಮಿತವ್ಯಯ” ಹಣಕಾಸು ನೀತಿಯನ್ನು ತ್ಯಜಿಸುವ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಸರ್ಕಾರಗಳಿಗೆ ಅನಿವಾರ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಿಜಕ್ಕೂ ಆಗಿರುವುದೇನು ಎಂಬುದನ್ನು ನೋಡೋಣ.
ಜಾಗತಿಕ ಅರ್ಥವ್ಯವಸ್ಥೆಯ ನಿಧಾನಗತಿಯಿಂದಾಗಿ, ಮೂರನೇ ಜಗತ್ತಿನ ದೇಶಗಳ ರಫ್ತುಗಳು ತೊಂದರೆಗೀಡಾದವು. ಖಚಿತವಾಗಿ ಹೇಳುವುದಾದರೆ, ಜಿಡಿಪಿ ಬೆಳವಣಿಗೆಯ ನಿಧಾನಗತಿಯಿಂದಾಗಿ ಈ ದೇಶಗಳ ಆಮದುಗಳೂ ಕುಗ್ಗಿದವು. ಜಿಡಿಪಿಯ ಇಳಿಕೆಯ ಪ್ರಮಾಣಕ್ಕೆ ತಕ್ಕಂತೆ ರಫ್ತು ಮತ್ತು ಆಮದುಗಳೂ ಸಹ ಅದೇ ಪ್ರಮಾಣದಲ್ಲಿ ಇಳಿಕೆಯಾಗಿವೆ ಮತ್ತು ವ್ಯಾಪಾರ ಕೊರತೆ ಅಥವಾ ವ್ಯಾಪಾರ ಹೆಚ್ಚುವರಿ ಇವೂ ಸಹ ಜಿಡಿಪಿಗೆ ತಕ್ಕ ಪ್ರಮಾಣದಲ್ಲಿವೆ ಎಂದು ಭಾವಿಸಿಕೊಂಡರೂ ಸಹ, ಜಿಡಿಪಿಯ ಅನುಪಾತಕ್ಕೆ ಹೋಲಿಸಿದರೆ, ಬಾಕಿ ಇರುವ ಬಾಹ್ಯ ಸಾಲಗಳ ಪ್ರಮಾಣವು ಸಾಪೇಕ್ಷವಾಗಿ ಹೆಚ್ಚಿನ ಮಟ್ಟದಲ್ಲಿರುತ್ತದೆ. ಹೊರಗಿನ ಈ ಸಾಲಗಳ ಮರುಪಾವತಿಯನ್ನು ಸೂಕ್ತವಾಗಿ ಮುಂದೂಡಬೇಕಾಗುತ್ತದೆ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಜಿಡಿಪಿಯ ಅನುಪಾತದಲ್ಲಿ ಎಲ್ಲ ದೇಶಗಳ ವ್ಯಾಪಾರದ ಹರಿವುಗಳು ಸರ್ವ ವ್ಯಾಪಿ ಕೊರೊನಾ ಪಿಡುಗು ಹರಡುವ ಮೊದಲು ಇದ್ದ ಪ್ರಮಾಣದಲ್ಲೇ ಇದ್ದರೂ ಸಹ, ಜಿಡಿಪಿಯ ಬೆಳವಣಿಗೆಯೇ ಸ್ಥಗಿತವಾಗಿದ್ದ ಕಾರಣದಿಂದಾಗಿ, ಇಳಿಕೆಯಾದ ಜಿಡಿಪಿಯ ಗಾತ್ರಕ್ಕೆ ಹೋಲಿಸಿದರೆ, ಅನುಪಾತದ ಲೆಕ್ಕಾಚಾರದಲ್ಲಿ, ಬಾಹ್ಯ ಸಾಲಗಳ ಗಾತ್ರವು ದೊಡ್ಡದಾಗಿ ಕಾಣುತ್ತದೆ. ಹಾಗಾಗಿ, ಸಾಲದ ಹೊರೆ ದೊಡ್ಡದಾಗುತ್ತದೆ. ಆದ್ದರಿಂದ, ಮೂರನೇ ಜಗತ್ತಿನ ದೇಶಗಳು ತಮ್ಮ ಸಾಲವನ್ನು ಮರುಪಾವತಿ ಮಾಡಲು ಹೆಚ್ಚಿನ ಕಾಲಾವಕಾಶ ಕೊಡಬೇಕಾಗುತ್ತದೆ.
“ಮಿತವ್ಯಯ” ಸಲಹೆ
ಇದನ್ನು ಕಾರ್ಯಗತ ಮಾಡಬಹುದಾದ ಸರಳ ಮಾರ್ಗವೆಂದರೆ, ಒಂದು ನಿಗದಿತ ಕಾಲಾವಧಿಯವರೆಗೆ ಸಾಲ ವಸೂಲಾತಿಯನ್ನು ಮುಂದೂಡಬೇಕಾಗುತ್ತದೆ (ಮೊರಟೋರಿಯಂ). ಸಮಕಾಲೀನ ಜಾಗತಿಕ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಈ ಕಾರ್ಯಭಾರವನ್ನು ನಿರ್ವಹಿಸಬಹುದಾದ ಸಂಸ್ಥೆ ಎಂದರೆ, ಐಎಂಎಫ್. ಬಿಕ್ಕಟ್ಟಿನ ಸಮಯದಲ್ಲಿ “ಮಿತವ್ಯಯ” ನೀತಿಯನ್ನು ಕೈಬಿಡುವಂತೆ ಮತ್ತು ಜನರ ಆರೋಗ್ಯ ಸುಧಾರಣೆಗಾಗಿ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗಾಗಿ ಹೆಚ್ಚು ಹಣ ಖರ್ಚು ಮಾಡುವಂತೆ ಎಲ್ಲ ದೇಶಗಳನ್ನೂ ಐಎಂಎಫ್ ಪ್ರೋತ್ಸಾಹಿಸಬೇಕಾಗುತ್ತದೆ. ಹಾಗೆ ನೋಡಿದರೆ, ಐಎಂಎಫ್‌ನ ಪ್ರಸ್ತುತ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಅವರು ಈ ಬಿಕ್ಕಟ್ಟಿನ ಸಂದರ್ಭದಲ್ಲಿ “ಮಿತವ್ಯಯ” ನೀತಿಯನ್ನು ತ್ಯಜಿಸುವಂತೆ ಐಎಂಎಫ್‌ನ ಕೆಲವು ಸದಸ್ಯ ದೇಶಗಳಿಗೆ ಆಗಾಗ ಹೇಳುತ್ತಾ ಬಂದಿದ್ದಾರೆ. ಅವರ ಈ ಹೇಳಿಕೆಯ ಮೂಲಕ ಐಎಂಎಫ್ ಕೊನೆಗಾದರೂ ಕೊರೊನಾ ಪಿಡುಗು ಇಡೀ ಮಾನವಕುಲಕ್ಕೆ ಒಡ್ಡಿದ ಬೆದರಿಕೆಯ ಅಗಾಧತೆಯನ್ನು ಗಮನಿಸಿದೆಯಲ್ಲಾ ಎಂಬ ಸಮಾಧಾನದ ಭಾವನೆ ಮೂಡುತ್ತದೆ. ಉದಾಹರಣೆಗೆ, “ಆರ್ಥಿಕ ಚೇತರಿಕೆಯನ್ನು ಉಸಿರುಗಟ್ಟಿಸುವ ಬಲವುಳ್ಳ ಮಿತವ್ಯಯ ನೀತಿಗಳಿಂದ ಅಪಾಯವಾಗದಂತೆ” ನೋಡಿಕೊಳ್ಳುವಂತೆ ಕ್ರಿಸ್ಟಲಿನಾ ಜಾರ್ಜಿವಾ ಅವರು ಇತ್ತೀಚೆಗೆ ಯುರೋಪಿನ ದೇಶಗಳನ್ನು ಆಗ್ರಹಿಸಿದ್ದರು.
ಆದರೆ, ವಾಸ್ತವ ಪರಿಸ್ಥಿತಿ ಬೇರೆಯೇ ಇದೆ ಎಂದು ತೋರುತ್ತದೆ. ಕೊರೊನಾ ಪಿಡುಗಿನ ಎರಡನೇ ವರ್ಷದಲ್ಲಿ ಮೂರನೇ ಜಗತ್ತಿನ ದೇಶಗಳೊಂದಿಗೆ ಐಎಂಎಫ್ ಸಹಿ ಹಾಕಿದ 15 ಸಾಲ ಒಪ್ಪಂದಗಳನ್ನು ಆಕ್ಸ್‌ಫಾಮ್ ಎಂಬ ಸಂಸ್ಥೆಯು ವಿಷ್ಲೇಷಣೆಗೊಳಪಡಿಸಿದೆ. ಇತ್ತೀಚೆಗೆ ಪ್ರಟಿಸಿರುವ ಈ ವಿಶ್ಲೇಷಣೆಯ ಪ್ರಕಾರ, 15 ಸಾಲ ಒಪ್ಪಂದಗಳ ಪೈಕಿ 13 ಪ್ರಕರಣಗಳಲ್ಲಿ “ಮಿತವ್ಯಯ” ನೀತಿಯನ್ನು ಪಾಲಿಸುವಂತೆ ಒತ್ತಿಹೇಳಲಾಗಿದೆ. ಇಂತಹ “ಮಿತವ್ಯಯ” ಕ್ರಮಗಳಲ್ಲಿ, ಆಹಾರ ಮತ್ತು ಇಂಧನದ ಮೇಲೆ ತೆರಿಗೆ ವಿಧಿಸುವ ಮತ್ತು ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಂತಹ ಮೂಲಭೂತ ಸೇವೆಗಳಿಗಾಗಿ ಸರ್ಕಾರದ ಖರ್ಚು ವೆಚ್ಚಗಳ ಕಡಿತಗಳು ಸೇರಿವೆ. ಸಾಲ ಸಂಬಂಧವಾಗಿ ಮಾತುಕತೆಗಳು ನಡೆಯುತ್ತಿರುವ ಇನ್ನೂ ಆರು ದೇಶಗಳ ವಿಷಯದಲ್ಲೂ ಸಹ, ಇದೇ “ಮಿತವ್ಯಯ” ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಐಎಂಎಫ್ ಒತ್ತಾಯಿಸುತ್ತಿದೆ.
ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ
“ಮಿತವ್ಯಯ” ನೀತಿಯನ್ನು ಪಾಲಿಸುವಂತೆ ಐಎಂಎಫ್‌ನ ಈ ಒತ್ತಾಯವನ್ನು ಒಂದು ಅಪವಾದವೆಂದು ತಳ್ಳಿಹಾಕಲಾಗದು. ಇದಕ್ಕೂ ಮೊದಲು ಅಕ್ಟೋಬರ್ 12, 2020 ರಂದು ಆಕ್ಸ್‌ಫಾಮ್ ಸಂಸ್ಥೆಯು, ಕೊರೊನಾ ಪಿಡುಗನ್ನು ಒಂದು ಸರ್ವವ್ಯಾಪಿ ಸಾಂಕ್ರಾಮಿಕವೆಂದು ಘೋಷಣೆ ಮಾಡಿದ ಮಾರ್ಚ್ 2020 ರಿಂದ 91 ಸಾಲಗಳನ್ನು ಮಂಜೂರು ಮಾಡುವ ಬಗ್ಗೆ ಐಎಂಎಫ್ 81 ದೇಶಗಳೊಂದಿಗೆ ಮಾತುಕತೆ ನಡೆಸಿದೆ ಎಂದು ವರದಿ ಮಾಡಿತ್ತು. ಈ 91 ಸಾಲಗಳ ಪೈಕಿ 76 ರಲ್ಲಿ(ಅಂದರೆ, 84% ಸಾಲ ಒಪ್ಪಂದಗಳಲ್ಲಿ), “ಮಿತವ್ಯಯ” ಪಾಲನೆಯ ಬಗ್ಗೆ ಒತ್ತಾಯವಿತ್ತು. ಈ ಒತ್ತಾಯವು ಕೊರೊನಾದಿಂದ ನರಳುವ ಬಡ ಜನರ ಜೀವನವನ್ನು ಕಷ್ಟಮಯವಾಗಿಸುವುದು ಮಾತ್ರವಲ್ಲದೆ ಆರೋಗ್ಯ ರಕ್ಷಣೆಯ ವೆಚ್ಚಗಳ ಕಡಿತಕ್ಕೂ ಕಾರಣವಾಗುತ್ತದೆ ಎಂಬುದಂತೂ ಸ್ಪಷ್ಟವೇ. ಆದರೂ, ಐಎಂಎಫ್‌ನ ಈ ಒತ್ತಾಯವು ವಿಶ್ವದ ಜನರು ಅದರ ಕನಿಷ್ಠ ಭಾರವನ್ನೂ ಹೊರಲಾರದ ಕೊರೊನಾ ಪಿಡುಗಿನ ಸಮಯದಲ್ಲಿಯೂ ಸಹ ಎಂದಿನಷ್ಟೇ ಬಲವಾಗಿ ಮುಂದುವರಿದಿತ್ತು. ಈ ಸನ್ನಿವೇಶದಲ್ಲಿ “ಮಿತವ್ಯಯ”ದಿಂದ ನಿರ್ಬಂಧಿಸಲ್ಪಡಬಾರದು ಎಂದು ಯೂರೋಪಿನ ದೇಶಗಳಿಗೆ ಕ್ರಿಸ್ಟಲಿನಾ ಜಾರ್ಜಿವಾ ನೀಡಿದ ಸಲಹೆ ಮತ್ತು “ಮಿತವ್ಯಯ” ನೀತಿಯನ್ನು ಅಳವಡಿಸಿಕೊಳ್ಳವಂತೆ ಮೂರನೇ ಜಗತ್ತಿನ ದೇಶಗಳನ್ನು ಒತ್ತಾಯಿಸುವ ಕ್ರಮಗಳು, ಇವುಗಳ ನಡುವಿನ ತಾರತಮ್ಯವನ್ನು ಆಕ್ಸ್‌ಫಾಮ್ ಎತ್ತಿ ತೋರಿಸಿದೆ ಮತ್ತು ಈ ನಡತೆಯ ಆಧಾರದ ಮೇಲೆ, ಐಎಂಎಫ್ “ಇಬ್ಬಂದಿ ನೀತಿ”ಯನ್ನು ಅನುಸರಿಸುತ್ತಿದೆ ಎಂದು ಆಕ್ಸ್‌ಫಾಮ್ ಆರೋಪಿಸಿದೆ. ಮುಂದುವರಿದ ದೇಶಗಳಿಗೆ ಬೆಣ್ಣೆ ಮತ್ತು ಮೂರನೇ ಜಗತ್ತಿನ ದೇಶಗಳಿಗೆ ಸುಣ್ಣದ ರೀತಿಯ ತಾರತಮ್ಯವು ಯಾವತ್ತೂ ಅಸಹ್ಯಕರವೇ. ಆದರೆ, ಇಡೀ ಮನುಕುಲವನ್ನೇ ಬಿಕ್ಕಟ್ಟಿಗೆ ತಳ್ಳಿದ ಕೊರೊನಾ ಪಿಡುಗಿನ ಸಂದರ್ಭದಲ್ಲಿ ತೋರಿಸಿದ ಈ ತಾರತಮ್ಯವು ಇನ್ನೂ ಹೆಚ್ಚು ಅಸಹ್ಯಕರವಾಗುತ್ತದೆ.
ಆಕ್ಸ್‌ಫಾಮ್‌ನ ಈ ವಿಶ್ಲೇಷಣೆಯಲ್ಲಿ ಕಾಣೆಯಾದ ಅಂಶವೆಂದರೆ, ಐಎಂಎಫ್‌ನ ನಡವಳಿಕೆಯಲ್ಲಿ ವ್ಯಕ್ತವಾಗುವ ಇಬ್ಬಗೆಯ ಮಾನದಂಡಗಳು ಬಂಡವಾಳಶಾಹಿಯ ಸ್ವಭಾವದಲ್ಲಿಯೇ ಅಂತರ್ಗತವಾಗಿವೆ ಎಂಬುದು. ವಾಸ್ತವವಾಗಿ, ಒಂದು ವರ್ಗ ಸಮಾಜವು ಇಬ್ಬಗೆಯ ಮಾನದಂಡಗಳನ್ನು ಅನಿವಾರ್ಯವಾಗಿ ಒಳಗೊಂಡಿರುತ್ತದೆ: ಒಬ್ಬ ಕಾರ್ಮಿಕನು ಒಂದು ಬ್ಯಾಂಕಿಗೆ ಹೋಗಿ ಅರ್ಜಿ ಸಲ್ಲಿಸಿ ಸಾಲ ಪಡೆಯುವುದು ಸಾಧ್ಯವಿಲ್ಲ. ಆದರೆ, ಒಬ್ಬ ಶ್ರೀಮಂತನು ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ ಆತ ಸಾಲ ಪಡೆಯುವುದು ಖಚಿತವೇ. ಈ ಅಂಶವನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಒಬ್ಬ ವ್ಯಕ್ತಿಯು “ಹೊರಗಿನ” ಮೂಲಗಳಿಂದ ಪಡೆಯಬಹುದಾದ ಬಂಡವಾಳದ ಪ್ರಮಾಣವು ಅವನು ಹೊಂದಿರುವ “ಸ್ವಂತ” ಬಂಡವಾಳದ ಪ್ರಮಾಣವನ್ನು ಅವಲಂಬಿಸಿರುತ್ತದೆ. ಹಾಗಾಗಿಯೇ, ಒಬ್ಬನು ಬಂಡವಾಳಶಾಹಿಯಾಗಲು ಅವನು ಬಂಡವಾಳವನ್ನು ಹೊಂದಿರುವುದು ಒಂದು ಅಗತ್ಯ ಷರತ್ತಾಗುತ್ತದೆ. ಅದಲ್ಲದಿದ್ದರೆ, ಯಾರು ಬೇಕಾದರೂ ಬಂಡವಾಳಶಾಹಿಯಾಗಬಹುದು, ವರ್ಗ ವಿಭಜನೆ ಇಲ್ಲದ ಪರಿಪೂರ್ಣವಾದ ಸಾಮಾಜಿಕ ಚಲನಶೀಲತೆ ಇರುವಲ್ಲಿ.
ಜೋಸೆಫ್ ಶಂಪೀಟರ್ ಅವರಂಥಹ ಬಂಡವಾಳಶಾಹಿಯ ಬೌದ್ಧಿಕ ಸಮರ್ಥಕರು, ಲಾಭದ ಮೂಲವನ್ನು ಉತ್ಪಾದನಾ ಸಾಧನಗಳ ಮಾಲೀಕತ್ವದಲ್ಲಿ ಅಲ್ಲ, ಬದಲಿಗೆ, ಬಂಡವಾಳಗಾರರು ಹೊಂದಿರುವ ಒಂದು ವಿಶೇಷ ಪ್ರತಿಭೆಯಲ್ಲಿ ಕಾಣಬಹುದು ಎಂದು ಪ್ರತಿಪಾದಿಸಿದ್ದರು. ಮತ್ತು, ಈ ವಿಶೇಷ ಪ್ರತಿಭೆಯನ್ನು ಅವರು ನಾವೀನ್ಯತೆ ಎಂದು ಕರೆದರು. ಅಂತಹ ನವೀನತೆಯನ್ನು ಹೊಂದಿರುವ ಯಾರಾದರೂ, ಅಂದರೆ – ಒಂದು ಹೊಸ ಉತ್ಪಾದನಾ ಪ್ರಕ್ರಿಯೆ ಅಥವಾ ಒಂದು ಹೊಸ ಉತ್ಪನ್ನವನ್ನು ತಯಾರಿಸಲು ಬಳಸಬಹುದಾದ ಕಲ್ಪನೆಯನ್ನು ಹೊಂದಿರುವ ಯಾರಾದರೂ, ಬ್ಯಾಂಕುಗಳಿಂದ ಸಾಲವನ್ನು ಪಡೆಯಬಹುದು ಮತ್ತು ತಮ್ಮ ವ್ಯವಹಾರವನ್ನು ಸ್ಥಾಪಿಸಬಹುದು ಎಂಬುದನ್ನು ಪ್ರತಿಪಾದಿಸಿದ್ದರು. ಆದರೆ, ಸಮಾಜದಲ್ಲಿರುವ ವರ್ಗ ವಿಭಜನೆಗಳನ್ನು ಮರೆಮಾಚುವ ಇಂತಹ ಪ್ರಯತ್ನಗಳು ಸ್ಪಷ್ಟವಾಗಿ ತಪ್ಪೇ ತಪ್ಪು. ಒಬ್ಬ ಕೃಷಿ ಕಾರ್ಮಿಕನು, ಅವನು ಎಷ್ಟೇ ನಾವೀನ್ಯತೆಯನ್ನು ಹೊಂದಿರಲಿ, ಒಂದು ವ್ಯವಹಾರವನ್ನು ಅವನು ಸ್ಥಾಪಿಸುವುದು ಸಾಧ್ಯವಿಲ್ಲ. ಅವನ ಈ ಆಲೋಚನೆಯನ್ನು ಒಬ್ಬ ಶ್ರೀಮಂತನು ಕದಿಯಬಹುದು, ಅಷ್ಟೇ!
ಇಬ್ಬಗೆಯ ಮಾನದಂಡಗಳು
ಅದೇ ರೀತಿಯಲ್ಲಿ, ದೇಶಗಳನ್ನು ಎರಡು ವಿಭಿನ್ನ ವರ್ಗಗಳಾಗಿ ವಿಂಗಡಿಸಿರುವ ಸಾಮ್ರಾಜ್ಯಶಾಹಿ ಜಗತ್ತಿನಲ್ಲಿ – ಮುಂದುವರೆದ(ಮೆಟ್ರೋಪಾಲಿಟನ್) ಮತ್ತು ಅಂಚಿನಲ್ಲಿರುವ ದೇಶಗಳು – ಮೆಟ್ರೋಪಾಲಿಟನ್ ಬ್ಯಾಂಕುಗಳು ಇಂತಹ ದೇಶಗಳಿಗೆ ಸಾಲ ಕೊಡಲು ಹಿಂಜರಿಯುತ್ತವೆ. ಸಾಲ ಕೊಡುವ ವಿಷಯದಲ್ಲಿ “ಇಬ್ಬಗೆಯ ಮಾನದಂಡಗಳು” ಇರುತ್ತವೆ. ಮೆಟ್ರೋಪಾಲಿಟನ್ ದೇಶಗಳ ಹಣಕಾಸು ಸಂಸ್ಥೆಗಳು ಪ್ರಾಬಲ್ಯ ಹೊಂದಿರುವ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಒಬ್ಬ ಪಾಲಕನಾಗಿ ಐಎಂಎಫ್, ಸಾಲಗಳನ್ನು ಮಂಜೂರು ಮಾಡುವಲ್ಲಿ ಮತ್ತು ಸಾಲಗಳನ್ನು ಮರಳಿ ಪಡೆಯುವ ಷರತ್ತುಗಳನ್ನು ವಿಧಿಸುವಲ್ಲಿ ಈ “ಇಬ್ಬಗೆಯ ಮಾನದಂಡ”ಗಳನ್ನೇ ಪಾಲಿಸಿಕೊಂಡೇ ಬರಬೇಕಾಗುತ್ತದೆ. ಆದ್ದರಿಂದ, ಐಎಂಎಫ್ ಅನುಸರಿಸುವ “ಇಬ್ಬಗೆಯ ಮಾನದಂಡ”ಗಳ ಬಗ್ಗೆ ಆಕ್ಸ್‌ಫಾಮ್‌ನ ಟೀಕೆಯು, ಐಎಂಎಫ್ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಹಿತಾಸಕ್ತಿಗಳನ್ನು ನೋಡಿಕೊಳ್ಳುವ ಒಂದು ಬಂಡವಾಳಶಾಹಿ ಸಂಸ್ಥೆಯಾಗಿರದೆ, ಒಂದು ಅರ್ಥಪೂರ್ಣ ಮಾನವೀಯ ಸಂಸ್ಥೆಯಾಗಿದ್ದು, ಮಾನವಕುಲದ ಹಿತಾಸಕ್ತಿಗಳನ್ನು ನೋಡಿಕೊಳ್ಳುತ್ತದೆ ಎಂಬ ತಪ್ಪು ಕಲ್ಪನೆಯನ್ನು ಆಧರಿಸಿದೆ.
ಹೀಗೆ, ಐಎಂಎಫ್‌ನ ನಡವಳಿಕೆಯು ಬಂಡವಾಳಶಾಹಿಯ ಸ್ವಭಾವವನ್ನೇ, ಅದರ ಮೂಲಭೂತ ಅಮಾನವೀಯತೆಯನ್ನೇ ಪ್ರತಿಬಿಂಬಿಸುತ್ತದೆ. ಬಂಡವಾಳಶಾಹಿ ವ್ಯವಸ್ಥೆಯನ್ನು “ಅಮಾನವೀಯ” ಎಂದು ನಾನು ಕರೆಯುವಾಗ, ಅದು ಜನರಿಗಿಂತ ಮೊದಲು ಲಾಭಕ್ಕೇ ಆದ್ಯತೆ ನೀಡುವ ಕಾರಣದಿಂದ ಅಲ್ಲ. ಎಲ್ಲ ಮನುಷ್ಯರ ಜೀವನವೂ ಸಮಾನ ಬೆಲೆಯುಳ್ಳದ್ದು ಎಂದು ನೋಡುವುದಿಲ್ಲ ಮತ್ತು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ “ಇಬ್ಬಗೆಯ ಮಾನದಂಡಗಳನ್ನು” ಅದು ಅನುಸರಿಸುತ್ತದೆ ಎಂಬ ಅರ್ಥದಲ್ಲಿ. ಉದಾಹರಣೆಗೆ, ಮಾಲಿನ್ಯಕಾರಕ ಕೈಗಾರಿಕೆಗಳನ್ನು ಮೆಟ್ರೋಪಾಲಿಟನ್ ದೇಶಗಳಿಂದ ಅಂಚಿನ ದೇಶಗಳಿಗೆ ಸ್ಥಳಾಂತರಿಸಬೇಕು ಎಂಬ ಬೇಡಿಕೆಯನ್ನು ಎತ್ತಿದಾಗ, ಈ ಬೇಡಿಕೆಯ ಹಿಂದಿರುವ ಸ್ಪಷ್ಟ ಭಾವನೆಯೆಂದರೆ, ಅಂಚಿನ ದೇಶಗಳ ಮನುಷ್ಯರ ಜೀವನವು ಮುಂದುವರೆದ ದೇಶಗಳ ಮನುಷ್ಯರ ಜೀವನದಷ್ಟು ಮುಖ್ಯವಲ್ಲ ಎಂಬುದು.
ಈ ಮೂಲಭೂತ ತಾರತಮ್ಯ ಅಥವಾ “ಇಬ್ಬಗೆಯ ಮಾನದಂಡಗಳನ್ನು” ಆಧರಿಸಿದ ಸಾಮಾಜಿಕ ವ್ಯವಸ್ಥೆಯು ಹುಟ್ಟಿಸಿದ ಅಸಮಾಧಾನವನ್ನು ಕೊರೊನಾ ಪಿಡುಗಿನ ಸಂದರ್ಭದಲ್ಲಿ ಸ್ಪಷ್ಟವಾಗಿ ಕಾಣಬಹುದು. ನಾವು ಎಲ್ಲ ಮನುಷ್ಯರ ಜೀವನದ ಬಗ್ಗೆಯೂ ಕಾಳಜಿ ವಹಿಸಬೇಕು ಎಂಬುದನ್ನು ಮಾನವೀಯತೆ ಮತ್ತು ಜಾಣತನಗಳೆರಡೂ ಬಯಸುತ್ತವೆ. ಆದರೆ, ಮನುಷ್ಯ-ಮನುಷ್ಯರ ನಡುವೆ ತಾರತಮ್ಯ ಮಾಡುವ ಅಥವಾ ಕೆಲವರ ಜೀವಗಳಿಗೆ ಮಾತ್ರ ಬೆಲೆ ಕೊಡುವ (ಮತ್ತು ಇತರರಿಗಲ್ಲ ಎಂದು ಪರಿಗಣಿಸುವ) ಸಾಮಾಜಿಕ ವ್ಯವಸ್ಥೆಯ ಅಮಾನವೀಯತೆ ಮತ್ತು ಅತಾರ್ಕಿಕತೆ ಎದ್ದು ಕಾಣುತ್ತದೆ.