ಪ್ರೊ.ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ಸ್ವಾತಂತ್ರ್ಯಪೂರ್ವ ಸಮಯದಲ್ಲಿ ಸಾಮ್ರಾಜ್ಯಶಾಹಿಯ ವಿರುದ್ಧವಾಗಿ ಹಲವಾರು ವರ್ಗಗಳನ್ನು ಒಂದುಗೂಡಿಸಿದ ಸಾಮ್ರಾಜ್ಯಶಾಹಿ ಮತ್ತು ಭಾರತೀಯ ಸಮಾಜದ ನಡುವಿನ ವೈರುಧ್ಯದ ಮುಂದುವರಿಕೆಯ ಭಾಗವಾಗಿಯೇ ವಿದೇಶಿ ಬಂಡವಾಳದ ಪ್ರಾಬಲ್ಯವನ್ನು ಹಿಮ್ಮೆಟ್ಟಿಸಲಿಕ್ಕಾಗಿ ಸ್ವಾತಂತ್ರ್ಯಾನಂತರದಲ್ಲಿ ಅರ್ಥವ್ಯವಸ್ಥೆಯಲ್ಲಿ ನಿಯಂತ್ರಣ(ಡಿರಿಜಿಸ್ಟ್) ಕಾರ್ಯತಂತ್ರವು ರೂಪುಗೊಂಡಿತ್ತು. ಆದರೆ ಈಗ ಸಾಮ್ರಾಜ್ಯಶಾಹಿ ಮತ್ತು ರಾಷ್ಟ್ರದ ನಡುವಿನ ವಿಭಜನಾ ರೇಖೆಯು ತನ್ನ ಸ್ಥಾನದಿಂದ ಪಲ್ಲಟಗೊಂಡು ರಾಷ್ಟ್ರದೊಳಗೆ ಒಂದು ಕಡೆಯಲ್ಲಿ ಅಂತರರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ಅದರೊಂದಿಗೆ ಸಮಗ್ರವಾಗಿ ಕೂಡಿಕೊಂಡ ಆಳುವ ಮಂದಿ ಮತ್ತು ಇನ್ನೊಂದು ಕಡೆಯಲ್ಲಿ ದುಡಿಯುವ ಜನರ ನಡುವಿನ ವಿಭಜನಾ ರೇಖೆಯಾಗಿ ಸ್ಥಳಾಂತರಗೊಂಡಿದೆ.ವಿದೇಶಿ ಬಂಡವಾಳದ ಆಧಿಪತ್ಯ ಮರಳಿ ಬಂದಿದೆ. ಅದು ಆರ್ಥಿಕ ಅಸಮಾನತೆಯನ್ನು ಅಗಾಧವಾಗಿ ಹೆಚ್ಚಿಸಿದೆ.
ವಸಾಹತುಶಾಹಿ ಆಳ್ವಿಕೆಯು ಕೊನೆಗೊಂಡ ನಂತರದಲ್ಲಿ ಭಾರತದ ಪ್ರಭುತ್ವವು ಕೈಗೊಳ್ಳಬೇಕಾದ ಎರಡು ಆದ್ಯತೆಯ ಕಾರ್ಯಗಳಿದ್ದವು: ಮೊದಲನೆಯದು, ಸಾಮ್ರಾಜ್ಯಶಾಹಿಯ ಹಿಡಿತದಿಂದ ಬಿಡಿಸಿಕೊಂಡು ನಮ್ಮದೇ ಸ್ವಾಯತ್ತ ಅಭಿವೃದ್ಧಿ ಕಾರ್ಯತಂತ್ರವನ್ನು ಅನುಸರಿಸುವ ಸಲುವಾಗಿ ಮುಂದುವರೆದ ದೇಶಗಳ (ಮೆಟ್ರೋಪಾಲಿಟನ್) ಬಂಡವಾಳವು ನಮ್ಮ ಅರ್ಥವ್ಯವಸ್ಥೆಯ ಮೇಲೆ ಹೊಂದಿದ್ದ ಪ್ರಾಬಲ್ಯವನ್ನು ಹಿಮ್ಮೆಟ್ಟಿಸುವುದು. ಎರಡನೆಯದು, ದೇಶದಲ್ಲಿ ವೃದ್ಧಿಸುವ ಆಂತರಿಕ ಮಾರುಕಟ್ಟೆಯ ಆಧಾರದ ಮೇಲೆ ಕೈಗಾರಿಕೆಗಳನ್ನು ತ್ವರಿತವಾಗಿ ಸ್ಥಾಪಿಸುವ ಸಲುವಾಗಿ ಮತ್ತು ಕೃಷಿಕರನ್ನು ಭೂ ಮಾಲಿಕರ ಹಿಡಿತದಿಂದ ಮುಕ್ತಗೊಳಿಸುವ ಸಲುವಾಗಿ ಜಮೀನ್ದಾರಿ ಪದ್ಧತಿಯ ನಾಶ. ಈ ಎರಡೂ ಕಾರ್ಯಗಳು ಪರಸ್ಪರ ಸಂಬಂಧ ಹೊಂದಿದ್ದವು: ಜಮೀನ್ದಾರಿ ಪದ್ಧತಿಯನ್ನು ನಾಶ ಪಡಿಸಿ ಭೂಸುಧಾರಣೆಗಳ ಮೂಲಕ ಕೃಷಿ ಉತ್ಪಾದನೆಯನ್ನು ಹೆಚ್ಚಿಸದಿದ್ದರೆ, ಹಣದುಬ್ಬರ ಉಂಟಾಗುವ ಅಪಾಯ ಮತ್ತು ವಿದೇಶ ವ್ಯಾಪಾರ ಬಾಕಿ ಚುಕ್ತಾ (ಪಾವತಿ ಶೇಷ)ಮಾಡಲಾಗದ ಸಂಭಾವ್ಯತೆ ಇತ್ತು. ಸ್ವಾಯತ್ತ ಅಭಿವೃದ್ಧಿ ಕಾರ್ಯತಂತ್ರದೊಂದಿಗೆ ಸಂಬಂಧ ಹೊಂದಿರುವ ಈ ಸಮಸ್ಯೆಗಳು ಒಟ್ಟಾರೆ ಬೆಳವಣಿಗೆಯನ್ನು ನಿರ್ಬಂಧಿಸುವ ಮತ್ತು ಸಾಮಾಜಿಕ ವೈರುಧ್ಯಗಳನ್ನು ಸೃಷ್ಟಿಸುವ ಪರಿಸ್ಥಿತಿಯು ದೇಶವನ್ನು ಸಾಮ್ರಾಜ್ಯಶಾಹಿಯ ಮುಂದೆ ಅಂತಿಮವಾಗಿ ಶರಣಾಗತಿಗೆ ಒಳಪಡಿಸುತ್ತಿದ್ದವು.
ಜಮೀನ್ದಾರಿ ಪದ್ಧತಿಯ ಮೇಲೆ ನಡೆಸಿದ ಧಾಳಿಯು ತಮ್ಮ ಜಮೀನಿನಿಂದ ದೂರದಲ್ಲಿ ವಾಸವಿದ್ದು ಅನ್ಯ ವ್ಯವಹಾರಗಳಲ್ಲಿ ತೊಡಗಿದ್ದ ಭೂಮಾಲೀಕರಿಂದ (absentee landlords) ಜಮೀನನ್ನು ಗೇಣಿದಾರರು ವಶಪಡಿಸಿಕೊಳ್ಳುವಷ್ಟು ಮಟ್ಟಿಗೆ ಸೀಮಿತವಾಗಿತ್ತು. ಸ್ವಯಂ ಕೃಷಿ ಅಥವಾ ಕೂಲಿಕಾರರ ಸಹಾಯದಿಂದ ತಮ್ಮ ಜಮೀನನ್ನು ತಾವೇ ಸಾಗುವಳಿ ಮಾಡುವುದಾಗಿ (ಖುದ್ಕಷ್ಟ್) ಘೋಷಿಸಿಕೊಂಡ ಉಳಿದ ಭೂಮಾಲೀಕರು ಕೃಷಿ ಬಂಡವಾಳಗಾರರಾಗಿ ಪರಿವರ್ತನೆಗೊಂಡರು. ಭೂಮಾಲೀಕರಿಂದ ವಶಪಡಿಸಿಕೊಂಡ ಭೂಮಿಯ ಮಾಲೀಕತ್ವದ ಹಕ್ಕುಗಳನ್ನು ಮೇಲ್ಪದರದ (ಮೇಲ್ಜಾತಿಯ) ಗೇಣಿದಾರರಿಗೆ ನೀಡಲಾಯಿತು. ಮೇಲ್ತುದಿಯ 15%ಭೂಮಾಲೀಕರು ಹೊಂದಿದ್ದ ಭೂಮಿಯ ವಿಸ್ತಾರದ ಅನುಪಾತದ ಅರ್ಥದಲ್ಲಿ ಭೂಸಾಂದ್ರತೆ ಬದಲಾಗಲಿಲ್ಲ. ಆದರೆ ಈ ಮೇಲ್ತುದಿಯ 15%ಭೂಮಾಲೀಕರ ಗುಂಪಿನ ಸಂರಚನೆ ಬದಲಾವಣೆಗೊಂಡಿತು ಮತ್ತು ಬಂಡವಾಳಶಾಹಿ ಕೃಷಿಗಾಗಿ ಗ್ರಾಮೀಣ ಪ್ರದೇಶವನ್ನು ಹದಗೊಳಿಸಲಾಯಿತು. ಅದೇ ಸಮಯದಲ್ಲಿ,ನೀರಾವರಿಯಲ್ಲಿ, ಉತ್ತಮ ಕೃಷಿ ಪದ್ಧತಿಗಳ ಅಭಿವೃದ್ಧಿಯಲ್ಲಿ ಮತ್ತು ಕೃಷಿ-ವಿಸ್ತರಣಾ ಚಟುವಟಿಕೆಗಳಲ್ಲಿ ಸರ್ಕಾರದ ಹೂಡಿಕೆಯನ್ನು ಹೆಚ್ಚಿಸಲಾಯಿತು.
ನಿಯಂತ್ರಣ ನೀತಿಗಳ (dirigiste) ಆಳ್ವಿಕೆಯ ಅವಧಿ
ಮೆಟ್ರೋಪಾಲಿಟನ್ ಬಂಡವಾಳವು ನಮ್ಮ ಅರ್ಥವ್ಯವಸ್ಥೆಯ ಮೇಲೆ ಹೊಂದಿದ್ದ ಪ್ರಾಬಲ್ಯವನ್ನು ಹಿಮ್ಮೆಟ್ಟಿಸುವ ಸಲುವಾಗಿ ಬಳಸಿದ ಪ್ರಮುಖ ಸಾಧನಗಳೆಂದರೆ:ದೇಶದ ಅರ್ಥವ್ಯವಸ್ಥೆಗೆ ಒದಗಿಸಿದ ಸರ್ವಾಂಗೀಣ ರಕ್ಷಣೆ; ವಿಶೇಷವಾಗಿ ಕೃಷಿ ಉತ್ಪನ್ನಗಳ ವ್ಯಾಪಾರದ ಮೇಲೆ ನಿಯಂತ್ರಣ; ಕೃಷಿಕರೊಂದಿಗೆ ವ್ಯವಹರಿಸದಂತೆ ವಾಣಿಜ್ಯೋದ್ಯಮ ಸಂಸ್ಥೆಗಳ ಮೇಲೆ ನಿರ್ಬಂಧ; ರೈತರೊಂದಿಗೆ ನೇರ ವ್ಯವಹಾರ ಸಂಬಂಧ ಇಟ್ಟುಕೊಳ್ಳದಂತೆ ತಡೆಯುವುದೂ ಸೇರಿದಂತೆ ಕೃಷಿ ವ್ಯವಹಾರಗಳಲ್ಲಿ ತೊಡಗದಂತೆ ಭಾರತದ ವಾಣಿಜ್ಯೋದ್ಯಮ ಸಂಸ್ಥೆಗಳ ಮೇಲೆ ನಿರ್ಬಂಧ; ಗಡಿಯಾಚೆಗಿನ ಬಂಡವಾಳದ ಒಳಹರಿವಿನ ಮೇಲೆ ಬಿಗಿ ನಿಯಂತ್ರಣ; ವಿಶೇಷವಾಗಿ ಹಣಕಾಸು ವಲಯವೂ ಸೇರಿದಂತೆ ಕೆಲವು ಪ್ರಮುಖ ವಲಯಗಳ ರಾಷ್ಟ್ರೀಕರಣ (ಬಹುತೇಕ ಬ್ಯಾಂಕುಗಳನ್ನು ಆಮೇಲೆ ರಾಷ್ಟ್ರೀಕರಣಗೊಳಿಸಲಾಯಿತು); ಮತ್ತು, ಅರ್ಥವ್ಯವಸ್ಥೆಯ ಮೇಲೆ ಮೆಟ್ರೋಪಾಲಿಟನ್ ಬಂಡವಾಳವು ಹೊಂದಿದ್ದ ಪ್ರಾಬಲ್ಯದ ವಿರುದ್ಧ ಒಂದು ಭದ್ರಕೋಟೆಯಾಗಿ ನಿಲ್ಲುವಂತಹ ಒಂದು ಸಾರ್ವಜನಿಕ ವಲಯದ ಅಭಿವೃದ್ಧಿ.ಈ ತೆರನಾದ ಅಭಿವೃದ್ಧಿ ಕಾರ್ಯತಂತ್ರದ ಭಾಗವಾಗಿ, ತುಲನಾತ್ಮಕವಾಗಿ ಒಂದು ಸ್ವಾಯತ್ತವಾದ ಬಂಡವಾಳಶಾಹಿಯನ್ನು ಅಭಿವೃದ್ಧಿಪಡಿಸುವುದು ಅತ್ಯವಶ್ಯವಾಗಿತ್ತು. ಆದಾಗ್ಯೂ, ವಿದೇಶಿ ಬಂಡವಾಳದೊಂದಿಗೆ ಸಹಯೋಗದ ಒಪ್ಪಂದಗಳನ್ನು ಒಳಗೊಂಡ ಬಂಡವಾಳ ಹೂಡಿಕೆಯ ನೀತಿ, ವಿದೇಶಿ ವಿನಿಮಯದ ನಿಯಂತ್ರಣ ಮತ್ತು ಕೈಗಾರಿಕಾ ಪರವಾನಗಿ ನೀತಿ ಇವುಗಳನ್ನು ಅಳವಡಿಸಿಕೊಳ್ಳುವ ಮೂಲಕ ಬಂಡವಾಳಶಾಹಿಯನ್ನು ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸಲಾಯಿತು.
ವಸಾಹತುಶಾಹಿ ಯುಗದಲ್ಲಿದ್ದ ನಿರಾಶಾದಾಯಕ ಪರಿಸ್ಥಿತಿಗೆ ಹೋಲಿಸಿದರೆ ಈ ನಿಯಂತ್ರಣ ನೀತಿಗಳ (dirigiste) ಆಳ್ವಿಕೆಯ ಅವಧಿಯಲ್ಲಿ ಬಹಳಷ್ಟು ಬದಲಾವಣೆಗಳಾದವು. ದೇಶದ ಆಂತರಿಕ ಉತ್ಪನ್ನ (ಜಿಡಿಪಿ) ಮತ್ತು ಕೃಷಿ ವಲಯ ಇವೆರಡರ ಬೆಳವಣಿಗೆಯ ದರ ವೇಗ ಪಡೆದವು. ಆಹಾರ ಧಾನ್ಯಗಳ ತಲಾವಾರು ಲಭ್ಯತೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿತು:ಇಪ್ಪತ್ತನೇ ಶತಮಾನದ ಆರಂಭದಲ್ಲಿ ವಾರ್ಷಿಕ ಸುಮಾರು 200ಕಿಲೋ ಗ್ರಾಂ ಗಳಷ್ಟಿದ್ದ ಆಹಾರ ಧಾನ್ಯಗಳ ತಲಾ ಲಭ್ಯತೆಯು ಬ್ರಿಟಿಷ್ ಭಾರತದಲ್ಲಿ 1946-47ರ ವೇಳೆಗೆ 136.8ಕೆ.ಜಿ.ಗೆ ಇಳಿದಿತ್ತು. ತೀವ್ರವಾದ ಈ ಅವನತಿಯನ್ನು ಹಿಮ್ಮೆಟ್ಟಿಸಲಾಯಿತು ಮತ್ತು ತಲಾ ಲಭ್ಯತೆಯು 1980ರ ದಶಕದ ಅಂತ್ಯದ ವೇಳೆಗೆ 180ಕೆ.ಜಿ.ಯ ಸಮೀಪಕ್ಕೆ ತಲುಪಿತು.
ಆದರೆ, ವಸಾಹತುಶಾಹಿ ಕಾಲಕ್ಕೆ ಹೋಲಿಸಿದರೆ ಈ ಬದಲಾವಣೆಯ ಗತಿ ವೇಗವಾಗಿದ್ದರೂ ಸಹ ಅದು ಜನರ ಆಕಾಂಕ್ಷೆಗಳನ್ನು ಪೂರೈಸಲಾಗಲಿಲ್ಲ. 1973-74ರಲ್ಲಿಯೂ ಸಹ, ಆಹಾರ ಧಾನ್ಯಗಳ ತಲಾ ಲಭ್ಯತೆಹೆಚ್ಚಿದ್ದರೂ ಮತ್ತು ಪೌಷ್ಠಿಕಾಂಶ ಮಾನದಂಡದ ಪ್ರಕಾರ ಬಡತನದ ಪ್ರಮಾಣ ಕುಸಿದಿದ್ದರೂ, ಗ್ರಾಮಾಂತರದ 56% ಜನರಿಗೆ ದಿನಾ 2200ಕ್ಯಾಲೋರಿ ಆಹಾರ ಸೇವಿಸುವುದು ಸಾಧ್ಯವಾಗಲಿಲ್ಲ ಮತ್ತು ನಗರಗಳಲ್ಲಿ 60%ಜನರಿಗೆ 2100ಕ್ಯಾಲೋರಿ ಆಹಾರ ಸೇವಿಸುವುದು ಸಾಧ್ಯವಾಗಲಿಲ್ಲ. ಅದೇ ರೀತಿಯಲ್ಲಿ, ವಾರ್ಷಿಕ 2%ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದ ಉದ್ಯೋಗಗಳು ಜನಸಂಖ್ಯೆಯ ಬೆಳವಣಿಗೆಯ ದರದೊಂದಿಗೆ ಸ್ಥೂಲವಾಗಿ ಹೊಂದುತ್ತಿದ್ದವಾದರೂ, ಕೆಲಸ ಸಿಗದೆ ಉಳಿದವರ ಸಂಖ್ಯೆಯ ಬಾಹುಳ್ಯವು ನಿರಾಶೆಗೊಳಗಾದ ಯುವಕರಲ್ಲಿ ಪರಕೀಯ ಭಾವ ಬೆಳೆಯುವಂತೆ ಮಾಡಿತು. ಸ್ವಾಯತ್ತ ಬಂಡವಾಳಶಾಹಿಯನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಬೆಂಬಲಿಸಿದ್ದ ಹಿರೇ ಬಂಡವಾಳಗಾರ ವರ್ಗ (big bourgeoisie), ಅದು ಗಣನೀಯವಾಗಿ ಬೆಳೆದ ನಂತರ, ಮಹತ್ವಾಕಾಂಕ್ಷೆಯ ಬೆನ್ನು ಹತ್ತಿದರು. ಆಗ ಅವರಿಗೆ ಅರ್ಥವ್ಯವಸ್ಥೆಯ ಬೆಳವಣಿಗೆ ದರ ಉಸಿರುಗಟ್ಟುತ್ತಿರುವುದಾಗಿ ಕಂಡಿತು. ಆದರೆ, ಪ್ರಭುತ್ವದ ಹಣಕಾಸು ಪರಿಸ್ಥಿತಿ ಬಿಗಡಾಯಿಸುತ್ತಿದ್ದರಿಂದಾಗಿ ಈ ಮಟ್ಟದ ಬೆಳವಣಿಗೆ ದರ ಕಾಪಾಡಿಕೊಳ್ಳುವುದೂ ಸಹ ಕಷ್ಟವಾಯಿತು.
ನವ-ಉದಾರವಾದಿ ಆರ್ಥಿಕ ವ್ಯವಸ್ಥೆಯತ್ತ
ನಿಯಂತ್ರಣ ನೀತಿಗಳ (dirigisme) ಆಳ್ವಿಕೆಯಿಂದ ದೂರವಾಗಿ ನವ-ಉದಾರವಾದಿ ಆರ್ಥಿಕ ಆಳ್ವಿಕೆಯತ್ತ ಹೊರಳಬೇಕೆಂಬ ಒತ್ತಾಯವು ಹಿರೇ ಬಂಡವಾಳಶಾಹಿಯಿಂದ ಬಂದಿತು. ಎಪ್ಪತ್ತರ ದಶಕದ ತೈಲ ಬೆಲೆ ಆಘಾತಗಳ ನಂತರ ಆರ್ಥಿಕ ಅಧಿನಾಯಕನಾಗಿ ಹೊರಹೊಮ್ಮಿದ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದೊಂದಿಗೆ ಸಂಯೋಜಿಸಿಕೊಳ್ಳುವ ಮೂಲಕ ಈ ಬಂಡವಾಳಗಾರ ವರ್ಗವು ಹೊಸ ಪರಿಸ್ಥಿತಿಯಲ್ಲಿ ತನಗೆ ಅವಕಾಶಗಳು ವಿಪುಲವಾಗಿ ದೊರೆಯಲಿವೆ ಎಂಬುದನ್ನು ಕಂಡುಕೊಂಡಿತು. ಮಧ್ಯಮ ವರ್ಗವು ಅದನ್ನು ಬೆಂಬಲಿಸಿತು: ಮೆಟ್ರೋಪಾಲಿಟನ್ ದೇಶಗಳು ತಮ್ಮ ಕೆಲಸ-ಕಾರ್ಯಗಳನ್ನು ಭಾರತಕ್ಕೆ ಹೊರಗುತ್ತಿಗೆ ನೀಡಿದರೆ ಉದ್ಯೋಗಾವಕಾಶಗಳು ಹೆಚ್ಚುತ್ತವೆ ಎಂಬುದಾಗಿ ನವ-ಉದಾರವಾದವು ತೋರಿಸಿದ ಪ್ರಲೋಭನೆಗೆ ಈ ಮಧ್ಯಮ ವರ್ಗವು ಒಳಗಾಯಿತು.ನಿಯಂತ್ರಣ ನೀತಿಗಳ ಪರವಾಗಿ ನಿಲ್ಲಬಹುದೆಂದು ನಿರೀಕ್ಷಿಸಲಾಗಿದ್ದ ದುಡಿಯುವ ಜನರು ಈ ನಿರೀಕ್ಷೆಯನ್ನು ಹುಸಿಗೊಳಿಸಿದರು, ಈ ಆಳ್ವಿಕೆಯು ಅವರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದರಿಂದ. ಹಾಗಾಗಿ 1985ರಿಂದ ಆರಂಭಿಸಿ, ವಿಶೇಷವಾಗಿ 1991ರ ನಂತರ, ಭಾರತವು ನವ-ಉದಾರವಾದಿ ಆರ್ಥಿಕ ಆಳ್ವಿಕೆಯತ್ತ ಹೊರಳಿತು. ಅಂದರೆ, ಸರಕುಗಳು ಮತ್ತು ಸೇವೆಗಳು ಗಡಿಯ ಹೊರಗೆ-ಒಳಗೆ ಮುಕ್ತವಾಗಿ ಹರಿದಾಡುವ ಅವಕಾಶವನ್ನು ಕಲ್ಪಿಸಲಾಯಿತು.ಎಲ್ಲಕ್ಕಿಂತ ಮಿಗಿಲಾಗಿ, ಹಣಕಾಸು ಸೇರಿದಂತೆ ಬಂಡವಾಳವು ಮುಕ್ತವಾಗಿ ಹರಿದಾಡುವ ಅವಕಾಶವನ್ನು ಕಲ್ಪಿಸಲಾಯಿತು. ಈ ಬದಲಾವಣೆಯು, ಕೈಗಾರಿಕಾ ಪರವಾನಗಿ ಪದ್ಧತಿಯನ್ನೂ ಕೊನೆಗೊಳಿಸಿತು.
ಇದು ಕೇವಲ ಆರ್ಥಿಕ ಆಳ್ವಿಕೆಯ ಬದಲಾವಣೆಯಷ್ಟೇ ಅಲ್ಲ. ಹಿರೇ ಬಂಡವಾಳಗಾರ ವರ್ಗವು ಮೆಟ್ರೋಪಾಲಿಟನ್ ಬಂಡವಾಳದೊಂದಿಗೆ ಮಾಡಿಕೊಂಡ ಕೂಡಿಕೆಯೊಂದಿಗೆಮೆಟ್ರೋಪಾಲಿಟನ್ ಬಂಡವಾಳವು ಬಹಳಷ್ಟು ಬದಲಾದ ಸನ್ನಿವೇಶದಲ್ಲಿ ಭಾರತೀಯ ಅರ್ಥ ವ್ಯವಸ್ಥೆಯ ಮೇಲೆ ಮತ್ತೆ ಅಧಿಪತ್ಯವನ್ನು ಹೊಂದುವಂತಾಯಿತು. ಇದಕ್ಕೆ ಮೇಲ್ಮಧ್ಯಮ ವರ್ಗದ ಕೆಲವು ವಿಭಾಗಗಳ ಮೌನ ಸಮ್ಮತಿಯೂ ಇತ್ತು.ಸ್ವಾತಂತ್ರ್ಯಪೂರ್ವ ಸಮಯದಲ್ಲಿ ಸಾಮ್ರಾಜ್ಯಶಾಹಿಯ ವಿರುದ್ಧವಾಗಿ ಹಲವಾರು ವರ್ಗಗಳನ್ನು ಒಂದುಗೂಡಿಸಿದ ಸಾಮ್ರಾಜ್ಯಶಾಹಿ ಮತ್ತು ಭಾರತೀಯ ಸಮಾಜದ ನಡುವಿನ ವೈರುಧ್ಯದಮುಂದುವರಿಕೆಯ ಭಾಗವಾಗಿಯೇ ಸ್ವಾತಂತ್ರ್ಯಾನಂತರದಲ್ಲಿ ನಿಯಂತ್ರಣ(ಡಿರಿಜಿಸ್ಟ್) ಕಾರ್ಯತಂತ್ರವು ರೂಪುಗೊಂಡಿತ್ತು. ಆದರೆ ಈಗ – ಅದು ರಾಷ್ಟ್ರವನ್ನೇ ವಿಭಜಿಸಿತು. ಸಂಕ್ಷಿಪ್ತವಾಗಿ ಹೇಳುವುದಾದರೆ, ಸಾಮ್ರಾಜ್ಯಶಾಹಿ ಮತ್ತು ರಾಷ್ಟ್ರದ ನಡುವಿನ ವಿಭಜನಾ ರೇಖೆಯು ತನ್ನ ಸ್ಥಾನದಿಂದ ಪಲ್ಲಟಗೊಂಡು ರಾಷ್ಟ್ರದೊಳಗೆ ಒಂದು ಕಡೆಯಲ್ಲಿ ಅಂತರರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ಅದರೊಂದಿಗೆ ಸಮಗ್ರವಾಗಿ ಕೂಡಿಕೊಂಡಹಿರೇ ಬಂಡವಾಳಗಾರ ವರ್ಗ ಮತ್ತು ಇನ್ನೊಂದು ಕಡೆಯಲ್ಲಿ ದುಡಿಯುವ ಜನರ ನಡುವಿನ ವಿಭಜನಾ ರೇಖೆಯಾಗಿ ಸ್ಥಳಾಂತರಗೊಂಡಿತು.
ಇದರ ತಕ್ಷಣದ ಪರಿಣಾಮವು ಪ್ರಭುತ್ವಕ್ಕೆ ಸಂಬಂಧಪಟ್ಟದ್ದಾಗಿತ್ತು. ಪ್ರಭುತ್ವವು ವರ್ಗಗಳನ್ನು ಸ್ಪಷ್ಟವಾಗಿ ಮೀರಿ ನಿಂತ ಒಂದು ಘಟಕವಾಗಿರುವುದರ ಬದಲಾಗಿ, ಅದು ದೊಡ್ಡ ವ್ಯವಹಾರೋದ್ಯಮಗಳು ಮತ್ತು ಭೂಮಾಲೀಕರ ಹಿತಾಸಕ್ತಿಗಳು ಮತ್ತು ಅವರೊಂದಿಗೆ ಸಂಯೋಜನೆ ಹೊಂದಿದ ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಬಗ್ಗೆ ಮಾತ್ರ ಕಾಳಜಿ ವಹಿಸಿತು.ಪ್ರಭುತ್ವದ ಕಾಳಜಿಯಲ್ಲಾದ ಈ ಪಲ್ಲಟದ ಪರಿಣಾಂವಾಗಿ ರೈತ ಕೃಷಿಯೂ ಸೇರಿದಂತೆ ಕಿರು ಉತ್ಪಾದನೆಗಳಿಗೆ ಸರ್ಕಾರದ ಬೆಂಬಲವನ್ನು ಹಿಂತೆಗೆದುಕೊಳ್ಳುವಂತಾಯಿತು ಮತ್ತು ಈ ವಲಯವನ್ನು ಅಂತಾರಾಷ್ಟ್ರೀಯ ಕೃಷಿ ವ್ಯವಹಾರೋದ್ಯಮಗಳಿಗೆ ಮತ್ತು ದೇಶೀಯ ದೊಡ್ಡ ದೊಡ್ಡ ಬಂಡವಾಳಗಾರರ ಅತಿಕ್ರಮಣಕ್ಕೆ ಮುಕ್ತಗೊಳಿಸಲಾಯಿತು. ಉದಾಹರಣೆಯಾಗಿ ಹೇಳುವುದಾದರೆ, ವಾಣಿಜ್ಯ ಬೆಳೆಗಳಿಗೆ ನೀಡುತ್ತಿದ್ದ ಬೆಲೆ-ಬೆಂಬಲವನ್ನು ನಿಲ್ಲಿಸಲಾಯಿತು. ಆಹಾರ ಧಾನ್ಯಗಳಿಗೆ ನೀಡುತ್ತಿದ್ದ ಬೆಲೆ-ಬೆಂಬಲವನ್ನು ನಿಲ್ಲಿಸುವ ಪ್ರಯತ್ನವನ್ನು ವರ್ಷವಿಡೀ ನಡೆದ ಕಿಸಾನ್ ಆಂದೋಲನವು ಸೋಲಿಸಿತು. ಕೃಷಿ ಸಾಲಗಳೂ ಸೇರಿದಂತೆ ಲಾಗುವಾಡುಗಳ ಮೇಲಿನ ಸಬ್ಸಿಡಿಗಳ ಕಡಿತದಿಂದಾಗಿ ರೈತ ಕೃಷಿಯ ಲಾಭದಾಯಕತೆ ತೀವ್ರವಾಗಿ ಕುಸಿಯುವಂತಾಯಿತು. ಈ ರೀತಿಯಲ್ಲಿ ರೈತ ಕೃಷಿಯಲ್ಲಿ ತರುವಾಯ ಉಂಟಾದ ಬಿಕ್ಕಟ್ಟಿನಿಂದಾಗಿ ಲಕ್ಷಗಟ್ಟಲೆ ರೈತರು ಆತ್ಮಹತ್ಯೆ ಮಾಡಿಕೊಂಡರು ಮತ್ತು ಇಲ್ಲದ ಉದ್ಯೋಗಗಳನ್ನು ಅರಸುತ್ತಾ ನಗರಗಳಿಗೆ ವಲಸೆ ಹೋದರು. ಈ ವಲಸೆಗೆ ಅನುಗುಣವಾಗಿ ಕಾರ್ಮಿಕರ ಮೀಸಲು ಪಡೆಯ ಗಾತ್ರ ಮಾತ್ರ ಹೆಚ್ಚಿತು.
ಸುಳ್ಳು ಆಶ್ವಾಸನೆಗಳ ವ್ಯವಸ್ಥೆ
ಸಂಕ್ಷಿಪ್ತವಾಗಿ ಹೇಳುವುದಾದರೆ, ನವ-ಉದಾರವಾದವು ಸುಳ್ಳು ಆಶ್ವಾಸನೆಗಳಿಂದ ಕೂಡಿತ್ತು.ಅರ್ಥವ್ಯವಸ್ಥೆಯಲ್ಲಿ ಜಿಡಿಪಿಯ ಬೆಳವಣಿಗೆ ಉನ್ನತವಾಗಿತ್ತು, ನಿಜ. ಆದರೆ, ಉದ್ಯೋಗಗಳ ಬೆಳವಣಿಗೆಯ ದರವು ಹಿಂದಿನ ಅವಧಿಗೆ ಹೋಲಿಸಿದರೆ ಅರ್ಧದಷ್ಟು ಕಡಿಮೆಯಾಗಿ ವಾರ್ಷಿಕ ಸುಮಾರು 1%ಗೆ ಇಳಿಯಿತು. ಏಕೆಂದರೆ, ಉತ್ಪಾದಕತೆಯು ಉನ್ನತವಾಗಿ ಏರುತ್ತಿತ್ತು ಮತ್ತು ಅದು ಅದೇ ಸಮಯದಲ್ಲಿ ಕೆಲಸಗಾರರನ್ನು ಉಚ್ಛಾಟಿಸುತ್ತಿತ್ತು.ಆ ವರೆಗೂ ಉತ್ಪಾದಕರಿಗೆ ಒದಗಿಸುತ್ತಿದ್ದ ರಕ್ಷಣೆಯನ್ನು ನವ-ಉದಾರವಾದದ ಅಡಿಯಲ್ಲಿ ಹಿಂಪಡೆದುದರಿಂದಾಗಿ ರಫ್ತು ಮಾಡುವವರು ಮಾತ್ರವಲ್ಲದೆ ದೇಶೀಯ ಮಾರುಕಟ್ಟೆಗೆ ಉತ್ಪಾದಿಸುವವರೂ ಸಹ ವಿದೇಶಿ ಸ್ಪರ್ಧೆಗೆ ಒಡ್ಡಿಕೊಂಡಿದ್ದರಿಂದ ಕಾರ್ಮಿಕ ಉತ್ಪಾದಕತೆಯು ವೇಗವಾಗಿ ಬೆಳೆಯಿತು.ಆದ್ದರಿಂದ, ಕಾರ್ಮಿಕ ಮೀಸಲು ಪಡೆಯ ಗಾತ್ರದ ತುಲನಾತ್ಮಕ ಹೆಚ್ಚಳವು ನಿರುದ್ಯೋಗದ ಹೆಚ್ಚಳವನ್ನು ಸೂಚಿಸುವುದರ ಬದಲಾಗಿ ನಿರ್ದಿಷ್ಟ ಸಂಖ್ಯೆಯ ಉದ್ಯೋಗಗಳನ್ನು ಹೆಚ್ಚು ಹೆಚ್ಚು ಜನರು ಹಂಚಿಕೊಳ್ಳುತ್ತಿದ್ದರು (ಪ್ರತಿಯೊಬ್ಬರಿಗೂ ಒಂದು ನಿರ್ದಿಷ್ಟ ವೇತನದ ಆಧಾರದ ಮೇಲೆ) ಎಂಬುದನ್ನು ತೋರಿತ್ತದೆ.ಕೆಲಸಗಾರರ ಸಂಖ್ಯೆಯ ಈ ರೀತಿಯ ಏರಿಕೆಯು ಸಂಘಟಿತ ಕಾರ್ಮಿಕರ ವೇತನವನ್ನೂ ಸಹ ಅವರ ಚೌಕಾಶಿ ಸಾಮರ್ಥ್ಯವನ್ನು ಕಡಿಮೆ ಮಾಡುವ ಮೂಲಕ ಕಡಿಮೆ ಮಾಡಿತು,.
ರೈತರು ಮತ್ತು ಸಣ್ಣ ಉತ್ಪಾದಕರನ್ನು ಹಿಂಡುವ ಮೂಲಕ ಮತ್ತು ಸಂಘಟಿತ ಕಾರ್ಮಿಕರ ಚೌಕಾಶಿ ಸಾಮರ್ಥ್ಯವನ್ನು ಕಡಿಮೆ ಮಾಡುವ ಮೂಲಕ, ಜಿಡಿಪಿ ಬೆಳವಣಿಗೆ ಎಷ್ಟೇ ಉನ್ನತವಾಗಿದ್ದರೂ, ನವ-ಉದಾರವಾದಿ ಆಳ್ವಿಕೆಯು ದೇಶದ ದುಡಿಯುವ ಜನರ ಸರಾಸರಿ ನಿಜ ಆದಾಯವನ್ನು ಕಡಿಮೆ ಮಾಡಿದ್ದು ಬಡತನದ ಅನುಪಾತವನ್ನುಹೆಚ್ಚಿಸಿತು.1980ರ ದಶಕದ ಅಂತ್ಯದವರೆಗೂ ಏರಿಕೆ ಕಂಡಿದ್ದ ಆಹಾರ ಧಾನ್ಯಗಳ ತಲಾವಾರು ಲಭ್ಯತೆಯು ಆ ನಂತರ ಸ್ಥಗಿತಗೊಂಡಿತು. ರಾಷ್ಟ್ರೀಯ ಮಾದರಿ ಸಮೀಕ್ಷೆಯ ಪ್ರಕಾರ, 1993-94ರಲ್ಲಿ ದಿನವೊಂದಕ್ಕೆ 2200ಕ್ಯಾಲೋರಿಗಳಿಗಿಂತ ಕಡಿಮೆ ಪ್ರಮಾಣದ ಆಹಾರ ಸೇವಿಸುತ್ತಿದ್ದ ಗ್ರಾಮೀಣ ಜನರ ಪ್ರಮಾಣವು ಜನಸಂಖ್ಯೆಯ 58%ಇತ್ತು; ಈ ಪ್ರಮಾಣವು 2011-12ರ ವೇಳೆಗೆ ಶೇ.68ಕ್ಕೆ ಏರಿತು. ಆದರೆ, 2017-18ರ ಸರ್ವೆಯ ಅಂಕಿ ಅಂಶಗಳು ಎಷ್ಟು ನಿರಾಶಾದಾಯಕವಾಗಿದ್ದವು ಎಂದರೆ, (ಪತ್ರಿಕೆಗಳಲ್ಲಿ ಸೋರಿಕೆಯಾದ ವರದಿಯ ಪ್ರಕಾರ, 2011-12ಮತ್ತು 2017-18ರ ನಡುವೆ ಗ್ರಾಮೀಣ ಭಾರತದಲ್ಲಿ ತಲಾ ನೈಜ ವೆಚ್ಚವು ಶೇ.9ರಷ್ಟು ಕುಸಿದಿದೆ), ಮೋದಿ ಸರ್ಕಾರವು ಈ ವರದಿಯನ್ನೇ ಬಚ್ಚಿಟ್ಟಿತು ಮತ್ತು ಈ ಸರ್ವೆಯನ್ನು ಹಳೆಯ ರೂಪದಲ್ಲಿ ಮುಂದುವರೆಸದಿರಲೂ ಸಹ ನಿರ್ಧರಿಸಿತು! ನಗರ ಭಾರತದಲ್ಲಿ 1993-೯4ಮತ್ತು 2011-12ರ ನಡುವೆ 2100ಕ್ಯಾಲೋರಿಗಳಿಗಿಂತ ಕಡಿಮೆ ಪ್ರಮಾಣದ ಆಹಾರ ಸೇವಿಸುತ್ತಿದ್ದವರ ಪ್ರಮಾಣವು ಜನಸಂಖ್ಯೆಯ ಶೇ.57ರಿಂದ ಶೇ.65ಕ್ಕೆ ಏರಿದೆ.
ನವ-ಉದಾರವಾದದ ಉಚ್ಛ್ರಾಯ ಕಾಲದಲ್ಲೂ ದುಡಿಯುವ ಜನರ ಸಂಕಷ್ಟಗಳು ಎದ್ದು ಕಾಣುವಷ್ಟು ತೀಕ್ಷ್ಣವಾಗಿದ್ದವು. (ಅದರ “ಜಿನುಗು ಸಿದ್ಧಾಂತ” ಒಂದು ಬೊಗಳೆ ಎಂಬುದನ್ನು ಇದು ತೋರಿಸುತ್ತದೆ). ನವ-ಉದಾರವಾದವು ಈಗ ಒಂದು ಬಿಕ್ಕಟ್ಟಿನಲ್ಲಿ ಸಿಲುಕಿದೆ. ಅದರಿಂದ ಹೊರಬರಲು ಸ್ಪಷ್ಟ ಮಾರ್ಗವೇ ಇಲ್ಲ.ಈ ಬಿಕ್ಕಟ್ಟು ಉಂಟಾಗಿರುವುದು ಒಂದು ಆಶ್ಚರ್ಯವೇನಲ್ಲ. ಶ್ರಮದ ಉತ್ಪಾದಕತೆ ಹೆಚ್ಚುತ್ತಿದ್ದರೂ ಸಹ, ಉತ್ಪತ್ತಿಯಲ್ಲಿ ಆರ್ಥಿಕ ಮಿಗುತಾಯದ ಪಾಲು ಹೆಚ್ಚುತ್ತಿದ್ದುನವ-ಉದಾರವಾದದ ಅಡಿಯಲ್ಲಿ ದುಡಿಯುವ ಜನರ ತಲಾವಾರು ನೈಜ ಆದಾಯಗಳು ಸರಾಸರಿಯಾಗಿ ಕುಸಿಯುವ ಪ್ರವೃತ್ತಿಯನ್ನು ನಾವು ಈ ಮೊದಲು ನೋಡಿದ್ದೇವೆ ಮತ್ತು ಇದು ವಿಶ್ವವ್ಯಾಪಿ ವಿದ್ಯಮಾನವೂ ಹೌದು. ಈ ಕಾರಣದಿಂದಾಗಿಯೇ ನವ-ಉದಾರವಾದದ ಅವಧಿಯಲ್ಲಿ ಭಾರತ ಮತ್ತು ಇತರೆಡೆಗಳಲ್ಲಿ ಆದಾಯಗಳ ಅಸಮಾನತೆಗಳು ತೀವ್ರವಾಗಿ ಏರುತ್ತಿವೆ.
ಮಿಗುತಾಯ ಸಂಪಾದಿಸುವವರ ಕೈಯಲ್ಲಿರುವ ಒಂದು ರೂಪಾಯಿಯು ದುಡಿಯುವ ಜನರ ಕೈಯಲ್ಲಿರುವ ಅದೇ ಒಂದು ರೂಪಾಯಿ ಎಷ್ಟು ಮಟ್ಟದ ಬಳಕೆಯನ್ನು ಸೃಷ್ಟಿಸುತ್ತದೆಯೋ ಅದಕ್ಕಿಂತ ಕೆಳ ಮಟ್ಟದ ಬಳಕೆಯನ್ನು ಸೃಷ್ಟಿಸುವುದರಿಂದ, ಆದಾಯಗಳಲ್ಲಿ ಈ ರೀತಿಯ ಚಲನೆಯು ಅತಿಯಾದ ಉತ್ಪಾದನೆಯ ಪ್ರವೃತ್ತಿಯನ್ನು ಸೃಷ್ಟಿಸುತ್ತದೆ. ಕೃತಕವಾಗಿ ಬೇಡಿಕೆಯನ್ನು ಹೆಚ್ಚಿಸುವ ಮೂಲಕ ಆಸ್ತಿ-ಒಡೆಯರನ್ನು ಹುಸಿ ಶ್ರೀಮಂತರೆಂದು ಭಾವಿಸಿಕೊಳ್ಳುವಂತೆ ಮಾಡುವ ಈ ಪ್ರವೃತ್ತಿಯನ್ನು ಅಮೆರಿಕದ ಆಸ್ತಿ-ಬೆಲೆ ಗುಳ್ಳೆಗಳ ಮಾರ್ಗವಾಗಿ ವಿಶ್ವ ಅರ್ಥವ್ಯವಸ್ಥೆಯಲ್ಲಿ ನಿಯಂತ್ರಣದಲ್ಲಿಡಲಾಗಿತ್ತು. ಅಮೆರಿಕದ ವಸತಿ ಗುಳ್ಳೆಗಳ ಕುಸಿತದ ನಂತರ ಅದು ಮತ್ತೆ ತಲೆ ಎತ್ತಿತು. ಅಂದಿನಿಂದಲೂ ವಿಶ್ವ ಅರ್ಥವ್ಯವಸ್ಥೆಯು ಹೆಚ್ಚು-ಕಡಿಮೆ ನಿಶ್ಚಲ ಸ್ಥಿತಿಯಲ್ಲೇ ಉಳಿದಿದೆ. ಭಾರತದಲ್ಲಿ ನಿರುದ್ಯೋಗವನ್ನು ಹೆಚ್ಚಿಸಿರುವ ಮತ್ತು ಜನರ ಸಂಕಷ್ಟಗಳನ್ನು ಹೆಚ್ಚಿಸಿರುವ ಈ ಪ್ರವೃತ್ತಿಯು ಅರ್ಥವ್ಯವಸ್ಥೆಯನ್ನೂ ನಿಶ್ಚಲಗೊಳಿಸಿದೆ. ಮೋದಿ ಸರ್ಕಾರವು ಕೈಗೊಂಡ ನೋಟು ರದ್ದತಿ, ಜಿಎಸ್‌ಟಿ (ಇದರ ಪ್ರಕಿಯೆಯನ್ನು ಹಿಂದಿನ ಕಾಂಗ್ರೆಸ್ ಸರ್ಕಾರವೇ ಆರಂಭಿಸಿತ್ತು) ಮುಂತಾದ ವಿವೇಚನಾರಹಿತ ಕ್ರಮಗಳು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿವೆ.
ನವ-ಉದಾರವಾದಿ ವ್ಯವಸ್ಥೆಯನ್ನೇ ಮೀರಬೇಕು
ನವ-ಉದಾರವಾದಿ ಆಳ್ವಿಕೆಯಲ್ಲಿ ಈ ಬಿಕ್ಕಟ್ಟನ್ನು ನಿವಾರಿಸುವುದು ಸಾಧ್ಯವಿಲ್ಲ.ಬಿಕ್ಕಟ್ಟನ್ನು ನಿವಾರಿಸಲು ಸಾಧ್ಯವಿರುವ ಏಕೈಕ ಕಾರ್ಯವಿಧಾನವೆಂದರೆ, ಪ್ರಭುತ್ವವು ಕೈಗೊಳ್ಳುವ ಬೃಹತ್ ಪ್ರಮಾಣದ ವೆಚ್ಚಗಳು ಮಾತ್ರ. ಈ ವೆಚ್ಚಗಳಿಗೆ ಬೇಕಾಗುವ ಹಣವನ್ನು ವಿತ್ತೀಯ ಕೊರತೆಯ ಮೂಲಕ ಅಥವಾ ಮಿಗುತಾಯ ಸಂಪಾದಿಸುವ ಶ್ರೀಮಂತರ ಮೇಲೆ ತೆರಿಗೆ ವಿಧಿಸುವ ಮೂಲಕ ಒದಗಿಸಿಕೊಂಡರೆ, ಕಾರ್ಯ ಸಿದ್ಧಿಸುತ್ತದೆ. ಒಂದು ವೇಳೆ ಈ ವೆಚ್ಚಗಳಿಗೆ ಬೇಕಾಗುವ ಹಣವನ್ನು ತಮ್ಮ ಆದಾಯವನ್ನು ಹೇಗಾದರೂ ಪೂರ್ಣವಾಗಿ ಖರ್ಚು ಮಾಡುವ ದುಡಿಯುವ ಜನರ ಮೇಲೆ ತೆರಿಗೆ ವಿಧಿಸುವ ಮೂಲಕ ಒದಗಿಸಿಕೊಂಡರೆ, ಆಗ, ಒಂದು ತೆರನಾದ ಬೇಡಿಕೆಯನ್ನು ಮತ್ತೊಂದು ತೆರನಾದ ಬೇಡಿಕೆಯೊಂದಿಗೆ ಬದಲಾಯಿಸಿದಂತಾಗುತ್ತದೆ. ಅಂದರೆ, ಬೇಡಿಕೆಯಲ್ಲಿ ನಿವ್ವಳ ವಿಸ್ತರಣೆಯಾಗುವುದಿಲ್ಲ. ಆದರೆ, ವಿತ್ತೀಯ ಕೊರತೆಯ ಹೆಚ್ಚಳ ಮತ್ತು ಶ್ರೀಮಂತರ ಮೇಲಿನ ತೆರಿಗೆಗಳ ಹೆಚ್ಚಳ ಈ ಎರಡೂ ಕ್ರಮಗಳು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳಕ್ಕೆ ಒಪ್ಪಿತವಲ್ಲ. ಈ ಎರಡರಲ್ಲಿ ಯಾವ ಕ್ರಮ ಕೈಗೊಂಡರೂ ಹಣಕಾಸು ಬಂಡವಾಳವು ಗುಂಪುಗುಂಪಾಗಿ ದೇಶ ಬಿಟ್ಟು ಹೋಗುತ್ತದೆ. ಆಗ ಒಂದು ತೀವ್ರ ಸ್ವರೂಪದ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗುತ್ತದೆ.
ಇನ್ನೊಂದು ಕಡೆಯಲ್ಲಿ, ನವ-ಉದಾರವಾದವೇ ಬಿಕ್ಕಟ್ಟನ್ನು ನಿಭಾಯಿಸುವ ವಿಧಾನವೆಂದರೆ, ಬಂಡವಾಳಗಾರರು ಹೂಡಿಕೆಯನ್ನು ಹೆಚ್ಚಿಸುತ್ತಾರೆ ಎಂಬ ಸಂಭಾವನೆಯ ಮೇಲೆ ಅವರಿಗೆ ತೆರಿಗೆ ರಿಯಾಯಿತಿಗಳನ್ನು ನೀಡುವ ಕ್ರಮ. ವಾಸ್ತವವಾಗಿ, ಈ ಕ್ರಮವು ಬಿಕ್ಕಟ್ಟನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡುತ್ತದೆ.ಬಂಡವಾಳಗಾರರು ಒಂದು ರೂಪಾಯಿಯನ್ನೂ ಹೂಡಿಕೆ ಮಾಡದೆ ತೆರಿಗೆ ರಿಯಾಯ್ತಿಯಾಗಿ ಪಡೆದ ಹಣವನ್ನು ಸದ್ದಿಲ್ಲದೆ ಜೇಬಿಗಿಳಿಸುತ್ತಾರೆ. ಕರೆಯುವ ಹಸುವಿಗೆ ಮಾತ್ರ ಹುಲ್ಲು ಹಾಕುವ ಬಂಡವಾಳಗಾರರು ಬೇಡಿಕೆ ವೃದ್ಧಿಯಾಗುವ ಪರಿಸ್ಥಿತಿಯಲ್ಲಿ ಮಾತ್ರ ಹೂಡಿಕೆ ಮಾಡುತ್ತಾರೆ. ಹಾಗಾಗಿ, ಬೇರೆ ಬೇರೆ ಖರ್ಚು-ವೆಚ್ಚಗಳನ್ನು ಕಡಿತ ಮಾಡಿ ಹೊಂದಿಸಿಕೊಂಡ ಹಣವನ್ನು ಬಂಡವಾಳಶಾಹಿಗಳಿಗೆ ಕೈ-ಭಿಕ್ಷೆ ನೀಡುವ ಕ್ರಮವು, ವಾಸ್ತವವಾಗಿ, ಬೇಡಿಕೆಯನ್ನು ಇಳಿಕೆ ಮಾಡುತ್ತದೆ.
ಈ ಬಿಕ್ಕಟ್ಟಿಗೂ ಮತ್ತು ಕೋವಿಡ್-೧೯ಕ್ಕೂ ಯಾವ ಸಂಬಂಧವೂ ಇಲ್ಲ. ಬಿಕ್ಕಟ್ಟು ಸಾಂಕ್ರಾಮಿಕ ಹರಡುವ ಮುನ್ನವೇ ಉಂಟಾಗಿತ್ತು (ಬಿಕ್ಕಟ್ಟು ವೃದ್ಧಿಸುವಲ್ಲಿ ಸಾಂಕ್ರಾಮಿಕದ ಪಾಲೂ ಸ್ವಲ್ಪ ಇದೆ). ಆದ್ದರಿಂದ, ಈ ಬಿಕ್ಕಟ್ಟಿನಿಂದ ಹೊರಬರಲು ನವ-ಉದಾರವಾದವನ್ನು ಮೀರುವ ಅಗತ್ಯವಿದೆ. ಅಂತಹ ಒಂದು ಸಾಧ್ಯತೆಯನ್ನು ಊಹಿಸಿರುವ ನವ-ಉದಾರವಾದವು ಅದನ್ನು ತಡೆಗಟ್ಟಲು ಬಿಕ್ಕಟ್ಟಿನ ಸಂಕಥನವನ್ನು ಬದಲಾಯಿಸಿ ಹಿಂದೂ ಕೋಮುವಾದದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಈ ಕಾರ್ಪೊರೇಟ್-ಹಿಂದುತ್ವ ಮೈತ್ರಿಯ ಉದ್ದೇಶವೇನೆಂದರೆ, ವರ್ತಮಾನದಲ್ಲಾಗಲಿ ಅಥವಾ ಗತ ಕಾಲದಲ್ಲಾಗಲಿ, “ದೌರ್ಜನ್ಯ” ಗಳನ್ನು ಎಸಗಿದ್ದಾರೆ ಎಂಬ ಆರೋಪವನ್ನು ಒಂದು ನತದೃಷ್ಟ ಅಲ್ಪಸಂಖ್ಯಾತ ಗುಂಪಿಗೆ ಸೇರಿದವರ ಮೇಲೆ ಹೊರಿಸಿ, ಲೌಕಿಕ ಜೀವನದ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸುವುದೇ ಆಗಿದೆ. ಸಂಕಥನವನ್ನು ಈ ರೀತಿಯಲ್ಲಿ ಬದಲಾಯಿಸುವ ಉದ್ದೇಶವೆಂದರೆ, ಸಾರ್ವಜನಿಕ ವಲಯ ಮತ್ತು ಕಿರು ಉತ್ಪಾದನಾ ವಲಯದ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ, ಕಚ್ಚಾವಸ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವ ಹಕ್ಕನ್ನು ಪಡೆಯುವ ಮೂಲಕ, ಮತ್ತು ಹೂಡಿಕೆಯ ಅವಕಾಶಗಳನ್ನು ಪಡೆಯುವ ಮೂಲಕ, ಅಂತಾರಾಷ್ಟ್ರೀಯ ಬಂಡವಾಳ ಮತ್ತು ದೇಶದ ದೊಡ್ಡ ದೊಡ್ಡ ಉದ್ಯಮಿಗಳು, ಬಿಕ್ಕಟ್ಟಿನ ಹೊರತಾಗಿಯೂ, ತಮ್ಮ ಸಂಪತ್ತನ್ನು ಹೆಚ್ಚಿಸಿಕೊಂಡರೂ, ಇವೆಲ್ಲವನ್ನೂ ಮರೆಮಾಚಲು ಜನರನ್ನು- ಬಿಕ್ಕಟ್ಟು ಸೃಷ್ಟಿಸಿದ ಕಡು ಕಷ್ಟಗಳಿಗೆ ಅವರೂ ಒಳಗಾಗಿರುವಾಗಲೂ- ಅಲ್ಪಸಂಖ್ಯಾತ ಗುಂಪಿನ ವಿರುದ್ಧ ದ್ವೇಷದಲ್ಲಿ ತೊಡಗುವಂತೆ ಮಾಡುವುದೇ ಆಗಿದೆ.
ಹಿಂದುತ್ವ ಪಕ್ಷವು ಅಧಿಕಾರಕ್ಕೆ ಬರಲು ದೊಡ್ಡ ದೊಡ್ಡ ಉದ್ಯಮಿಗಳು ಹಣ ಒದಗಿಸುತ್ತಾರೆ ಮತ್ತು ಅವರ ಒಡೆತನದ ಮತ್ತು ನಿಯಂತ್ರಣದ ಮಾಧ್ಯಮಗಳ ಮೂಲಕ ಅದನ್ನು ಬೆಂಬಲಿಸುತ್ತಾರೆ. ಈ ಉಪಕಾರಕ್ಕೆ ಪ್ರತಿಯಾಗಿ ಅವರು ಬಂಡವಾಳದ ಆದಿಮ ಸಂಚಯದ ಕ್ರಮಗಳ ಮೂಲಕ ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಾರೆ ಮತ್ತು ಈ ಪ್ರಕ್ರಿಯೆಗೆ ಎದುರಾಗುವ ವಿರೋಧವನ್ನು ಜನರ ನಡುವೆ ಅನೈಕ್ಯತೆಯ ಸೃಷ್ಟಿ, ಪುಂಡು ಪೋಕರಿಗಳ ಬಳಕೆ ಮತ್ತು ನಿರ್ಲಜ್ಜ ದಬ್ಬಾಳಿಕೆಯ ಕ್ರಮಗಳ ಮೂಲಕ ಹತ್ತಿಕ್ಕಲಾಗುತ್ತದೆ.
ನವ-ಉದಾರವಾದವು ತನ್ನ ಉಚ್ಛ್ರಾಯ ಕಾಲದಲ್ಲೂ ಸಹ ಆರ್ಥಿಕ ಅಸಮಾನತೆಯನ್ನು ಅಗಾಧವಾಗಿ ಹೆಚ್ಚಿಸುತ್ತದೆ. ಪ್ರಭುತ್ವದ ಕಾರ್ಯನಿರ್ವಹಣೆಯಲ್ಲಿದ್ದ ಪ್ರಜಾಸತ್ತಾತ್ಮಕ ತಿರುಳನ್ನು ನಾಶಪಡಿಸುತ್ತದೆ.ಪ್ರಭುತ್ವದ ಸ್ವಾಯತ್ತತೆಯನ್ನು ಬುಡಮೇಲು ಮಾಡುತ್ತದೆ. ಕಡು ಬಡತನವನ್ನು ಹೆಚ್ಚಿಸುತ್ತದೆ ಮತ್ತು ಅದು ಅರ್ಥವ್ಯವಸ್ಥೆಯನ್ನು ನಿಶ್ಚಲತೆಯತ್ತ ಕೊಂಡೊಯ್ಯುವಲ್ಲಿ ಮತ್ತು ಬೃಹತ್ ನಿರುದ್ಯೋಗ ಸೃಷ್ಟಿಸುವಲ್ಲಿ ಪರ್ಯವಸಾನಗೊಳ್ಳುತ್ತದೆ. ಅದರಿಂದ ಹೊರಬರುವ ಹಾದಿಯೇ ಇಲ್ಲ. ದಾರಿ ಕಾಣದಂತಾಗಿರುವ ಕಾರಣದಿಂದಾಗಿ ಅದು ದೇಶದ ಮೇಲೆ ನವ-ಫ್ಯಾಸಿಸ್ಟ್ ರಾಜಕೀಯ ಆಳ್ವಿಕೆಯನ್ನು ಹೇರುತ್ತದೆ. ಈ ಆಳ್ವಿಕೆಯನ್ನು ಕೇವಲ ಪ್ರಜಾಸತ್ತಾತ್ಮಕ ಶಕ್ತಿಗಳು ಒಗ್ಗೂಡುವ ಮೂಲಕ ಕಿತ್ತೊಗೆಯುವುದು ಸಾಧ್ಯವಿಲ್ಲ. ಕಿತ್ತೊಗೆಯುವುದಂತೂ ಖಂಡಿತವಾಗಿಯೂ ಅವಶ್ಯವೇ. ಆದರೆ, ನವ-ಫ್ಯಾಸಿಸಂಅನ್ನು ಮೀರುವುದೆಂದರೆ ಅದನ್ನು ಸೃಷಿಸಿದ ಸನ್ನಿವೇಶವನ್ನು ಮೀರಬೇಕಾಗುತ್ತದೆ. ಅಂದರೆ ನವ-ಉದಾರವಾದಿ ವ್ಯವಸ್ಥೆಯು ಸೃಷ್ಟಿಸಿದ ಬಿಕ್ಕಟ್ಟನ್ನು ಮೀರಬೇಕೆಂದಾದರೆ, ವ್ಯವಸ್ಥೆಯನ್ನೇ ಮೀರಬೇಕಾಗುತ್ತದೆ.ಅದು ಕಷ್ಟದ ಕೆಲಸವೇ ಸರಿ. ಸಮಸ್ತ ದುಡಿಯುವ ಜನರನ್ನು ವಿಶಾಲ ನೆಲೆಯಲ್ಲಿ ಅಣಿನೆರೆಸುವ ಮೂಲಕ ಮಾತ್ರ ಅದನ್ನು ಸಾಧಿಸಬಹುದು.