ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ. ನಾಗರಾಜ್
ಅರ್ಥವ್ಯವಸ್ಥೆಯು ಸಂಪೂರ್ಣವಾಗಿ ಒಂದು ನಿಶ್ಚಲ ಸ್ಥಿತಿಯಲ್ಲಿದ್ದಾಗ, ಅಲ್ಲಿಂದ ಹೊರಬರುವುದು ಬಹಳ ಕಷ್ಟ. ಅದಕ್ಕೆ ಕಾರಣವೂ ಸಹ ಸರಳವಾಗಿದೆ… ಅರ್ಥವ್ಯವಸ್ಥೆಯು ಒಂದು ಸ್ಥಗಿತತೆಗೆ ಒಳಗಾದರೆ, ಬಳಕೆಯು ಹೆಚ್ಚಲು ಕಾರಣವೇ ಇರುವುದಿಲ್ಲ. ಬಳಕೆಯು ಮೂಲತಃ ಆದಾಯಗಳ ಮಟ್ಟವನ್ನು ಅವಲಂಬಿಸಿರುವುದರಿಂದ, ಅರ್ಥವ್ಯವಸ್ಥೆಯು ಸ್ಥಗಿತದ ಸ್ಥಿತಿಯಲ್ಲೇ ಉಳಿಯುತ್ತದೆ. ಹೂಡಿಕೆಯೂ ಸಹ ಹೆಚ್ಚಾಗುವುದಿಲ್ಲ. ಏಕೆಂದರೆ, ಉತ್ಪಾದಕರು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸುವ ಗೋಜಿಗೆ ಹೋಗುವುದಿಲ್ಲ. ನವ-ಉದಾರವಾದದ ಆಳ್ವಿಕೆಯಲ್ಲಿ ಭಾರತದ ಅರ್ಥವ್ಯವಸ್ಥೆಯ ನಿಶ್ಚಲತೆಯ ಪ್ರವೃತ್ತಿಯು, ನವ-ಉದಾರವಾದವು ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲಿ ದಾರಿ ಕಾಣದ ಹಂತವನ್ನು ತಲುಪಿದೆ ಎಂಬ ಅಂಶವನ್ನು ಸೂಚಿಸುತ್ತದೆ.
ಬಂಡವಾಳಶಾಹಿ ಅರ್ಥವ್ಯವಸ್ಥೆಯು ಒಂದು “ನಿಶ್ಚಲ ಸ್ಥಿತಿ”ಯಲ್ಲಿ (ಅಂದರೆ, ದೀರ್ಘಾವಧಿಯ ಶೂನ್ಯ ಬೆಳವಣಿಗೆಯ ಸ್ಥಿತಿಯಲ್ಲಿ ಎಂಬ ಅರ್ಥದಲ್ಲಿ) ಪರ್ಯವಸಾನವಾಗುತ್ತದೆ ಎಂಬ ಒಂದು ಆಲೋಚನೆಯು ಅರ್ಥಶಾಸ್ತ್ರಜ್ಞರಾದ ಆಡಮ್ ಸ್ಮಿತ್ ಮತ್ತು ಡೇವಿಡ್ ರಿಕಾರ್ಡೊ ಅವರನ್ನು ಕಾಡಿತ್ತು. ಇಂಥಹ ಒಂದು ಪರಿಸ್ಥಿತಿಯನ್ನು, ಅಂದರೆ, ಉತ್ಪಾದನಾ ಸಾಮರ್ಥ್ಯಕ್ಕೆ ಎಳ್ಳಷ್ಟೂ ಹೊಂದಿರದ ರೀತಿಯಲ್ಲಿ ಅರ್ಥವ್ಯವಸ್ಥೆಯ ಗಾತ್ರವು ಒಂದು ನಿರ್ದಿಷ್ಟ ವರ್ಷದಲ್ಲಿ ಎಷ್ಟಿತ್ತೋ ಅದರ ಮುಂದಿನ ವರ್ಷವೂ ಅಷ್ಟೇ ಮಟ್ಟದಲ್ಲಿ ಬಹಳ ವರ್ಷಗಳ ಕಾಲ ಮುಂದುವರಿಯುವ ಪರಿಸ್ಥಿತಿಯನ್ನು ವಿವರಿಸಲು ಮಾರ್ಕ್ಸ್ “ಸರಳ ಪುನರುತ್ಪತ್ತಿ” ಎಂಬ ಪದವನ್ನು ಬಳಸಿದ್ದರು. ಭಾರತದ ಅರ್ಥವ್ಯವಸ್ಥೆಯು ಈಗ ಅಂತಹ ಒಂದು ಪರಿಸ್ಥಿತಿಯತ್ತ ಸಾಗುತ್ತಿದೆ ಎಂದು ತೋರುತ್ತದೆ.
ಮೋದಿ ಸರ್ಕಾರದ ಪ್ರಚಾರ ಯಂತ್ರವು, ಎಂದಿನಂತೆ, ಅರ್ಥವ್ಯವಸ್ಥೆಯ ಪರಿಸ್ಥಿತಿ ಆಶಾದಾಯಕವಾಗಿದೆ ಎಂದು ಬಿಂಬಿಸಲು ಶತಪ್ರಯತ್ನ ಮಾಡುತ್ತಿದ್ದರೂ ಸಹ, ವಾಸ್ತವ ಪರಿಸ್ಥಿತಿ ಅದಕ್ಕೆ ತದ್ವಿರುದ್ಧವಾಗಿಯೇ ಇದೆ. ಮೋದಿ ಸರ್ಕಾರದ ಈ ಪ್ರಚಾರವು ಅಂಕಗಣಿತದ ಒಂದು ಸರಳವಾದ ಚಮತ್ಕಾರವನ್ನು ಬಳಸಿಕೊಳ್ಳುತ್ತದೆ: ಉತ್ಪಾದನೆಯು 100 ರಿಂದ 90 ಕ್ಕೆ ಕುಸಿದಿದೆ ಎಂದುಕೊಳ್ಳೋಣ. ಆಗ, ಕುಸಿತದ ಪ್ರಮಾಣವನ್ನು ಲೆಕ್ಕ ಹಾಕಿದಾಗ ಅದು ಶೇ.10 ಆಗುತ್ತದೆ. ಮುಂದಿನ ವರ್ಷ ಉತ್ಪಾದನೆಯು ಚೇತರಿಸಿಕೊಂಡು 100ನ್ನು ತಲುಪಿದರೆ, ಆಗ, ಹೆಚ್ಚಳವನ್ನು ಲೆಕ್ಕ ಹಾಕಿದಾಗ ಅದು ಶೇ. 11.1 ಆಗುತ್ತದೆ (ಮೂಲದ ಮೊತ್ತವು ಕಡಿಮೆ ಇದ್ದುದರಿಂದಾಗಿ). ಇಲ್ಲಿರುವ ಏರಿಕೆಯ ದರವು (11.1%) ಕುಸಿತದ ದರಕ್ಕಿಂತ (10%) ಹೆಚ್ಚಾಗಿರುವುದರಿಂದ, ಅರ್ಥವ್ಯವಸ್ಥೆಯು ಬೆಳವಣಿಗೆಯ ಹಾದಿಯಲ್ಲಿದೆ ಎಂಬ ಸುಳ್ಳು ಹೇಳಿಕೆಗೆ ಅವಕಾಶ ಕಲ್ಪಿಸುತ್ತದೆ. ವಾಸ್ತವವಾಗಿ ನೋಡಿದರೆ, ಎರಡು ವರ್ಷಗಳ ಅವಧಿಯಲ್ಲಿ ಯಾವುದೇ ಬೆಳವಣಿಗೆಯಾಗಿಲ್ಲ. ಮೋದಿ ಸರ್ಕಾರವು ಮಾಡುತ್ತಿರುವುದು ಇಂತಹ ಚಮತ್ಕಾರವನ್ನೇ, ನೀಡುತ್ತಿರುವುದು ಇಂತಹ ಸುಳ್ಳು ಸುಳ್ಳು ಹೇಳಿಕೆಗಳನ್ನೇ.
ಹೋಲಿಕೆಯ ಉದ್ದೇಶಕ್ಕಾಗಿ, ಕೊರೊನಾ ತೀವ್ರವಾಗಿದ್ದ 2020-21 ವರ್ಷವನ್ನು ನಾವು ಬಿಟ್ಟುಬಿಡೋಣ. ಕೊರೊನಾದ ಹಿಂದಿನ ಮತ್ತು ಅದರ ಮುಂದಿನ ವರ್ಷಗಳನ್ನು ಗಣನೆಗೆ ತೆಗೆದುಕೊಳ್ಳೋಣ. 2019-20 ಮತ್ತು 2021-22ರ ನಡುವೆ, ಜಿಡಿಪಿಯು ಕೇವಲ 1.5%ನಷ್ಟು ಹೆಚ್ಚಾಗಿದೆ. ಈ ಹೆಚ್ಚಳವು ಈ ಎರಡು ವರ್ಷಗಳ ನಡುವೆ ಆಗಿರುವ ಜನಸಂಖ್ಯೆಯ 2% ಹೆಚ್ಚಳಕ್ಕಿಂತಲೂ ಕೆಳಗಿದೆ. 2019-20ಕ್ಕೆ ಹೋಲಿಸಿದರೆ, ತಲಾವಾರು ನೈಜ ಜಿಡಿಪಿಯು 2021-22ರಲ್ಲಿ ಇಳಿಕೆಯಾಗಿದೆ.
ಸ್ಥಗಿತತೆಯ ಹಿಂದಿರುವ ಅಂಶಗಳು
ಅರ್ಥವ್ಯವಸ್ಥೆಯ ಈ ಸ್ಥಗಿತತೆಯ ಹಿಂದಿರುವ ಅಂಶಗಳು ಪರೀಕ್ಷಾರ್ಹವಾಗಿವೆ. 2019-20ಕ್ಕೆ ಹೋಲಿಸಿದರೆ, 2021-22ರಲ್ಲಿ ಬಳಕೆಯು (ಅಂದರೆ, ಖಾಸಗಿ ಬಳಕೆಯ ಅಂತಿಮ ವೆಚ್ಚಗಳು) ಸುಮಾರು 1.5% ಹೆಚ್ಚಾಗಿದೆ, ನಿಜ. ಒಟ್ಟು ಸ್ಥಿರ ಬಂಡವಾಳ ಹೂಡಿಕೆಯೂ 3.75%ರಷ್ಟು ಹೆಚ್ಚಾಗಿದೆ, ನಿಜ. ಆದರೆ, ಬಳಕೆಯ ಹೆಚ್ಚಳದ ದರಕ್ಕೆ ಹೋಲಿಸಿದರೆ, ಹೂಡಿಕೆಯ ಬೆಳವಣಿಗೆಯ ದರವು ತುಸು ಹೆಚ್ಚಿನ ಮಟ್ಟದಲ್ಲಿರುವುದು ಕಂಡುಬರುತ್ತದೆ. ಅದಕ್ಕೆ ಕಾರಣವೆಂದರೆ, ಲಾಕ್‌ಡೌನ್ ದಿನಗಳಿಂದಲೂ ಹೂಡಿಕೆಯ ಅನೇಕ ಯೋಜನೆಗಳು ಮುಂದೂಡಲ್ಪಟ್ಟಿದ್ದವು. ಹೂಡಿಕೆಯ ಈ ಹೆಚ್ಚಳವು ಬಹುಶಃ ಕೆಲವು ವಲಯಗಳಲ್ಲಿ ಆಧುನೀಕರಣದ ವೆಚ್ಚಗಳಿಂದಲೂ ಆಗಿರಬಹುದು. ಈ ಎರಡೂ ಸಂದರ್ಭಗಳಲ್ಲೂ ಹೂಡಿಕೆಯ ಈ ಹೆಚ್ಚಿನ ದರವನ್ನು ದೀರ್ಘಾವಧಿಯಲ್ಲಿ ಉಳಿಸಿಕೊಳ್ಳಲಾಗದು. ಹೂಡಿಕೆಯ ಬೆಳವಣಿಗೆ ದರ ಕಡಿಮೆಯಾದಂತೆಯೇ, ಬಳಕೆಯ ಬೆಳವಣಿಗೆ ದರವೂ ಕಡಿಮೆಯಾಗುತ್ತದೆ. ಇದನ್ನು ಅರ್ಥಶಾಸ್ತ್ರಜ್ಞರು “ಗುಣಕ” ಪರಿಣಾಮ ಎಂದು ಕರೆಯುತ್ತಾರೆ. ಅಂದರೆ, ತಗ್ಗಿದ ಹೂಡಿಕೆಯು ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ ಮತ್ತು ಅದರ ಪರಿಣಾಮವಾಗಿ ಉದ್ಯೋಗಗಳು ಇಳಿಯುತ್ತವೆ ಮತ್ತು ಬಳಕೆಗಾಗಿ ಬೇಡಿಕೆಯೂ ಇಳಿಯುತ್ತದೆ. ಈ ವಿದ್ಯಮಾನವು ಒಟ್ಟಿನಲ್ಲಿ ಅರ್ಥವ್ಯವಸ್ಥೆಯನ್ನು ಒಂದು ನಿಶ್ಚಲ ಸ್ಥಿತಿಯತ್ತ ಅಥವಾ ಸರಳ ಪುನರುತ್ಪತ್ತಿಯತ್ತ ಇನ್ನಷ್ಟು ಬಲವಾಗಿ ತಳ್ಳುತ್ತದೆ. ವಾಸ್ತವಿಕವಾಗಿ ಅರ್ಥವ್ಯವಸ್ಥೆಯು ಈಗಾಗಲೇ ನಿಶ್ಚಲವಾಗಿದೆ. ತಲಾವಾರು ಲೆಕ್ಕಾಚಾರದಲ್ಲಿ ನೋಡಿದರೆ, ಹಿಮ್ಮುಖ ಚಲನೆ ಕಂಡುಬರುತ್ತದೆ. ಹೀಗೆ, ಅರ್ಥವ್ಯವಸ್ಥೆಯು ಒಂದು ನಿಶ್ಚಲ ಸ್ಥಿತಿಯತ್ತ ಚಲಿಸುತ್ತಿದೆ. ಮತ್ತು, ತಲಾವಾರು ಲೆಕ್ಕಾಚಾರದಲ್ಲಿ ನೋಡಿದಾಗ, ಅರ್ಥವ್ಯವಸ್ಥೆಯ ಹಿಮ್ಮುಖ ಚಲನೆಯನ್ನು ಸ್ಪಷ್ಟವಾಗಿ ಗಮನಿಸಬಹುದಾಗಿದೆ.
ಅರ್ಥವ್ಯವಸ್ಥೆಯು ಸಂಪೂರ್ಣವಾಗಿ ಒಂದು ನಿಶ್ಚಲ ಸ್ಥಿತಿಯಲ್ಲಿದ್ದಾಗ, ಅಲ್ಲಿಂದ ಹೊರಬರುವುದು ಬಹಳ ಕಷ್ಟ. ಅದಕ್ಕೆ ಕಾರಣವೂ ಸಹ ಸರಳವಾಗಿದೆ. ಜಿಡಿಪಿ = ಖಾಸಗಿ ಬಳಕೆಯ ವೆಚ್ಚಗಳು+ಒಟ್ಟು ಹೂಡಿಕೆಗಳು+ ನಿವ್ವಳ ರಫ್ತುಗಳು (ಅಂದರೆ, ಒಟ್ಟು ರಫ್ತುಗಳಿಂದ ಆಮದು ಮಾಡಿಕೊಂಡ ಸರಕುಗಳು ಮತ್ತು ಸೇವೆಗಳನ್ನು ಕಳೆದ ನಂತರ ದೊರಕುವ ಮೊತ್ತ) + ಸರ್ಕಾರದ ಬಳಕೆಯ ವೆಚ್ಚಗಳು. ಕೊನೆಯ ಎರಡು ಅಂಶಗಳನ್ನು ಸಧ್ಯದ ಮಟ್ಟಿಗೆ ನಾವು ನಿರ್ಲಕ್ಷಿಸೋಣ. ರಫ್ತು ಉದ್ದೇಶಕ್ಕಾಗಿಯೇ ಉತ್ಪಾದಿಸಿದ ಸರಕು/ಸೇವೆಗಳಿಗಾಗಿ ಮಾಡಿದ ಹೂಡಿಕೆಯನ್ನೂ ಸಹ ನಾವು ಸಧ್ಯದ ಮಟ್ಟಿಗೆ ನಿರ್ಲಕ್ಷಿಸೋಣ. ಆನಂತರವೂ, ಅರ್ಥವ್ಯವಸ್ಥೆಯು ಒಂದು ಸ್ಥಗಿತತೆಗೆ ಒಳಗಾದರೆ, ಬಳಕೆಯು ಹೆಚ್ಚಲು ಕಾರಣವೇ ಇರುವುದಿಲ್ಲ. ಬಳಕೆಯು ಮೂಲತಃ ಆದಾಯಗಳ ಮಟ್ಟವನ್ನು ಅವಲಂಬಿಸಿರುವುದರಿಂದ, ಅರ್ಥವ್ಯವಸ್ಥೆಯು ಸ್ಥಗಿತದ ಸ್ಥಿತಿಯಲ್ಲೇ ಉಳಿಯುತ್ತದೆ. ಹೂಡಿಕೆಯೂ ಸಹ ಹೆಚ್ಚಾಗುವುದಿಲ್ಲ. ಏಕೆಂದರೆ, ಉತ್ಪಾದಕರು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸುವ ಗೋಜಿಗೆ ಹೋಗುವುದಿಲ್ಲ. ಏಕೆಂದರೆ, ಅರ್ಥವ್ಯವಸ್ಥೆಯು ಅಥವಾ ಆಂತರಿಕ ಮಾರುಕಟ್ಟೆಯು ಜಡವಾಗಿರುತ್ತದೆ. ಆದ್ದರಿಂದ, ನಾವು ನಿರ್ಲಕ್ಷಿಸಿದ ಮೂರು ನಿರ್ದಿಷ್ಟ ರೀತಿಯ ವೆಚ್ಚಗಳಲ್ಲಿ ಕನಿಷ್ಠ ಒಂದು ರೀತಿಯ ವೆಚ್ಚದಲ್ಲಾದರೂ ಸ್ವಾಯತ್ತವಾಗಿ ಏರಿಕೆಯಾಗದಿದ್ದರೆ, ಅಂದರೆ, ಆಂತರಿಕ ಮಾರುಕಟ್ಟೆಯಲ್ಲಿ ಸ್ವಾಯತ್ತವಾಗಿ ಒಂದು ಹಠಾತ್ ಏರಿಕೆಯಾಗದ ಹೊರತು, ಅರ್ಥವ್ಯವಸ್ಥೆಯು ಒಂದು ನಿಶ್ಚಲ ಸ್ಥಿತಿಯಲ್ಲೇ (ಅಥವಾ ನಿಶ್ಚಲತೆಯ ಸ್ಥಿತಿಯನ್ನು ತಲುಪುವವರೆಗೂ ಬೆಳವಣಿಗೆಯು ನಕಾರಾತ್ಮಕವಾಗಿರುತ್ತದೆ) ಉಳಿಯುತ್ತದೆ.
ಇಡೀ ವಿಶ್ವ ಅರ್ಥವ್ಯವಸ್ಥೆಯು ಸ್ಥಗಿತತೆಗೆ ಒಳಗಾಗಿರುವುದರಿಂದಾಗಿ ನಮ್ಮ ನಿವ್ವಳ ರಫ್ತುಗಳೂ ಇದ್ದಕ್ಕಿದ್ದಂತೆ ಏರಿಕೆಯ ಲಕ್ಷಣವನ್ನು ತೋರಿಸುವುದಿಲ್ಲ. ಹಾಗಾಗಿ, ಭಾರತದ ಸರಕುಗಳಿಗೆ ಹೊರ ದೇಶಗಳಿಂದ ಬೇಡಿಕೆ ಇದ್ದಕ್ಕಿದ್ದಂತೆ ಏರಿಕೆಯಾಗಲು ಅವಕಾಶವಿಲ್ಲ. ಮತ್ತು, ನವ-ಉದಾರವಾದಿ ಆಳ್ವಿಕೆಯಲ್ಲಿ ಭಾರತದ ಸರ್ಕಾರವು ತನ್ನ ಆಮದುಗಳನ್ನು ತಗ್ಗಿಸಿಕೊಳ್ಳುವ ಸಲುವಾಗಿ ಹೆಚ್ಚಿನ ಸುಂಕಗಳನ್ನು ವಿಧಿಸುವ ಅಥವಾ ಇತರ ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳುವ ಅವಕಾಶವೂ ಇಲ್ಲ. ಕರಾರುವಾಕ್ಕಾಗಿ ಇದೇ ಕಾರಣದಿಂದಾಗಿ, ರಫ್ತುಗಳನ್ನು ಹೆಚ್ಚಿಸುವುದಕ್ಕಾಗಲಿ ಅಥವಾ ಆಮದು ವಸ್ತುಗಳನ್ನು ದೇಶೀಯವಾಗಿ ಉತ್ಪಾದಿಸುವುದಕ್ಕಾಗಲಿ ಹೂಡಿಕೆಯನ್ನು ಹೆಚ್ಚಿಸುವುದು ಸಾಧ್ಯವಾಗುವುದಿಲ್ಲ. ಮತ್ತು, ಸರ್ಕಾರದ ಖರ್ಚು-ವೆಚ್ಚಗಳ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ವಿತ್ತೀಯ ಕೊರತೆಯನ್ನು ಜಿಡಿಪಿಯ ಅನುಪಾತಕ್ಕನುಗುಣವಾಗಿ ನಿಯಂತ್ರಣದಲ್ಲಿಡಲು ಸರ್ಕಾರ ಬದ್ಧವಾಗಿರುವುದರಿಂದ, ಜಿಡಿಪಿಯ ಅನುಪಾತವಾಗಿ ತೆರಿಗೆ ಆದಾಯವು ಇದ್ದಕ್ಕಿದ್ದಂತೆ ಹೆಚ್ಚಾಗದ ಹೊರತು, ಸರ್ಕಾರದ ಖರ್ಚು-ವೆಚ್ಚಗಳ ಹೆಚ್ಚಳದ ಸಾಧ್ಯತೆಯು ಜಿಡಿಪಿಗಿಂತ ಭಿನ್ನವಾದ ಪ್ರವೃತ್ತಿಯನ್ನು ತೋರಿಸುವುದು ಸಾಧ್ಯವಿಲ್ಲ. ಇಲ್ಲಿಯೂ ಸಹ ಖಾಸಗಿ ಬಳಕೆಯ ಮೇಲೆ ಹೆಚ್ಚು ಪರಿಣಾಮ ಬೀರುವ ಪರೋಕ್ಷ ತೆರಿಗೆಗಳ ಮೂಲಕ ಜಿಡಿಪಿಯ ಅನುಪಾತಕ್ಕನುಗುಣವಾಗಿ ತೆರಿಗೆ ಆದಾಯವು ಹೆಚ್ಚಾದರೂ ಸಹ, ಒಟ್ಟು ಬೇಡಿಕೆಗೆ ನಿವ್ವಳ ಸೇರ್ಪಡೆ ಇರುವುದಿಲ್ಲ: ಸರ್ಕಾರದ ಬಳಕೆಯ ಖರ್ಚುಗಳ ಹೆಚ್ಚಳವು ಜಿಡಿಪಿಯ ಒಂದು ಅನುಪಾತವಾಗಿ ಖಾಸಗಿ ಬಳಕೆಯಲ್ಲಿನ ಕುಸಿತದೊಂದಿಗೆ ಬಹುತೇಕ ಸರಿದೂಗಿಸಲ್ಪಡುತ್ತದೆ. ತನ್ನ ಆದಾಯದ ಬಹುಪಾಲನ್ನು ಬಳಸಿಕೊಳ್ಳುವ ಜನ ವಿಭಾಗದ ಮೇಲೆ ಹೇರಿದ ದೊಡ್ಡ ಪ್ರಮಾಣದ ನೇರ ತೆರಿಗೆಗಳ ಮೂಲಕ ಹಣ ಹೊಂದಿಸಿಕೊಂಡು ಸರ್ಕಾರವು ಕೈಗೊಳ್ಳುವ ವೆಚ್ಚಗಳಿಗೂ ಇದು ಅನ್ವಯಿಸುತ್ತದೆ.
ಸ್ಥಗಿತತೆಯಿಂದ ಹೊರಬರಲಾರದು ಏಕೆ?
ಆದ್ದರಿಂದ, ದೊಡ್ಡ ಪ್ರಮಾಣದ ವಿತ್ತೀಯ ಕೊರತೆಯ ಮೂಲಕ ಅಥವಾ ಶ್ರೀಮಂತರ ಮೇಲೆ ಹೆಚ್ಚಿನ ದರದ ನೇರ ತೆರಿಗೆಗಳನ್ನು ಹೇರುವ ಮೂಲಕ ಒದಗಿಸಿಕೊಂಡ ಆದಾಯದ ಹೆಚ್ಚಳ ಮಾತ್ರ ಸ್ಥಗಿತ ಸ್ಥಿತಿಯಿಂದ ಹೊರಬರುವ ಪರಿಣಾಮವನ್ನು ಬೀರುತ್ತದೆ. ಶ್ರೀಮಂತರ ಮೇಲೆ ವಿಧಿಸಬಹುದಾದ ನೇರ ತೆರಿಗೆಗಳು ಎಂದಾಗ ಅವು ಕಾರ್ಪೊರೇಟ್‌ಗಳ ಆದಾಯದ ಮೇಲೆ ಮತ್ತು ಖಾಸಗಿ ಸಂಪತ್ತಿನ ಮೇಲೆ ವಿಧಿಸುವ ತೆರಿಗೆಗಳನ್ನು ಒಳಗೊಂಡಿರುತ್ತವೆ. ಆದರೆ, ಇಂಥಹ ತೆರಿಗೆಗಳನ್ನು ಹೇರಲು ಸರ್ಕಾರವು ದೃಢವಾಗಿ ನಿರಾಕರಿಸುತ್ತದೆ. ವಿತ್ತೀಯ ಕೊರತೆಯ ಮಿತಿಗೆ ಅದು ಬದ್ಧವಾಗಿದೆ. ಮತ್ತು, ಶ್ರೀಮಂತರ ಮೇಲೆ ಹೆಚ್ಚು ತೆರಿಗೆಗಳನ್ನು ವಿಧಿಸುವುದರ ಬದಲು, ತೆರಿಗೆ ರಿಯಾಯಿತಿಗಳು ಹೂಡಿಕೆಯನ್ನು ಹೆಚ್ಚಿಸುವ ಮೂಲಕ ಅರ್ಥವ್ಯವಸ್ಥೆಯನ್ನು ಚೇತನಗೊಳಿಸುತ್ತವೆ ಎಂಬ ಒಂದು ಸಂಪೂರ್ಣ ತಪ್ಪು ನಂಬಿಕೆಯಲ್ಲಿ ಸರ್ಕಾರವು ಕಾರ್ಪೊರೇಟ್ ವಲಯಕ್ಕೆ ತೆರಿಗೆ-ರಿಯಾಯಿತಿಗಳನ್ನು ನೀಡುತ್ತಿದೆ.
ಈ ನಂಬಿಕೆಯು ಎರಡು ಕಾರಣಗಳಿಂದಾಗಿ ತಪ್ಪಾಗಿದೆ. ಮೊದಲನೆಯದು, ತೆರಿಗೆ ರಿಯಾಯಿತಿಗಳ ಕಾರಣದಿಂದಾಗಿ ಕಾರ್ಪೊರೇಟ್‌ಗಳು ಹೂಡಿಕೆಯನ್ನು ಹೆಚ್ಚಿಸುತ್ತವೆ ಎಂದು ವಾದಕ್ಕಾಗಿ ಊಹಿಸಿಕೊಂಡರೂ ಸಹ, ತೆರಿಗೆ ರಿಯಾಯ್ತಿ ಕೊಟ್ಟದ್ದರಿಂದಾಗಿ ಸರ್ಕಾರದ ಆದಾಯವು ಕಡಿಮೆಯಾಗುತ್ತದೆ. ಅದನ್ನು ಸರ್ಕಾರದ ಖರ್ಚು-ವೆಚ್ಚಗಳ ಕಡಿತದ ಮೂಲಕ ಸರಿದೂಗಿಸಲಾಗುತ್ತದೆ ಮತ್ತು ಈ ಕ್ರಮವು ಒಟ್ಟು ಬೇಡಿಕೆಯಲ್ಲಿ ನಿವ್ವಳ ಹೆಚ್ಚಳವನ್ನು ತಡೆಯುತ್ತದೆ ಮತ್ತು ಆ ಮೂಲಕ ಅರ್ಥವ್ಯವಸ್ಥೆಯ ಪುನಶ್ಚೇತನವನ್ನೂ ತಡೆಯುತ್ತದೆ. ಎರಡನೆಯದಾಗಿ, ಕಾರ್ಪೊರೇಟ್‌ಗಳು ಮಾಡಬಹುದಾದ ಹೂಡಿಕೆಗಳು ಅರ್ಥವ್ಯವಸ್ಥೆಯಲ್ಲಿ ಉಂಟಾಗುವ ಬೇಡಿಕೆಯ ಬೆಳವಣಿಗೆಯನ್ನು ಅವಲಂಬಿಸುತ್ತವೆಯೇ ವಿನಹ, ತೆರಿಗೆ ರಿಯಾಯಿತಿಗಳನ್ನಲ್ಲ. ಅರ್ಥವ್ಯವಸ್ಥೆಯಲ್ಲಿ ಒಂದು ವೇಳೆ ಬೇಡಿಕೆ ಹೆಚ್ಚದಿದ್ದರೆ, ಆಗ, ಬಂಡವಾಳಗಾರರು ತಮಗೆ ನೀಡಲಾದ ತೆರಿಗೆ ರಿಯಾಯಿತಿಗಳನ್ನು ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಾರೆ; ಹೂಡಿಕೆಯನ್ನು ಕೈಗೊಳ್ಳುವುದಿಲ್ಲ.
ಈ ಎಲ್ಲವುಗಳಿಂದಾಗಿ ಅರ್ಥವ್ಯವಸ್ಥೆಯು ಒಂದು ಸರಳ ಪುನರುತ್ಪತ್ತಿಯ ಸುಳಿಯಲ್ಲಿ ಸಿಕ್ಕಿಹಾಕಿಕೊಂಡರೆ, ನವ-ಉದಾರವಾದಿ ಆಳ್ವಿಕೆಯ ಸಂದರ್ಭದಲ್ಲಿ, ಅದರಿಂದ ಹೊರಬರುವುದು ಬಹಳ ಕಷ್ಟವಾಗುತ್ತದೆ. ನಿರ್ದಿಷ್ಟವಾಗಿ ಇದು ಎಡಪಂಥೀಯ ವಾದವಲ್ಲ. ಸೈದ್ಧಾಂತಿಕ ಸ್ಪಷ್ಟತೆಯುಳ್ಳವರು ಒಪ್ಪಿಕೊಳ್ಳಬಹುದಾದ ವಾದವಿದು. ಕೆಲವು ಪ್ರಾಮಾಣಿಕ ಉದಾರವಾದಿ ಅರ್ಥಶಾಸ್ತ್ರಜ್ಞರೂ ಸಹ ಇದೇ ಅಂಶವನ್ನು ಹೇಳುತ್ತಾರೆ ಮತ್ತು ಅದು ಆಶ್ಚರ್ಯದ ಸಂಗತಿಯೂ ಅಲ್ಲ.
ಒಂದು ಪರಿಶೀಲನಾರ್ಹ ವಿಚಾರವನ್ನು ಪ್ರಸ್ತಾಪಿಸಬಹುದಾದರೆ, ಕೃಷಿ ವಲಯದ ಉತ್ಪಾದನೆಯು ಬೇಡಿಕೆ-ಬದಿಯ ಪರಿಗಣನೆಗಳಿಂದ ನಿರ್ಧರಿಸಲ್ಪಡುವುದಿಲ್ಲ, ಅದು ಸ್ವಾಯತ್ತವಾಗಿ ನಿರ್ಧರಿಸಲ್ಪಡುತ್ತದೆ. ಮೇಲಾಗಿ, ಬೇಡಿಕೆಗಿಂತ ಅಧಿಕವಾದ ಉತ್ಪಾದನೆಯನ್ನು ಸರ್ಕಾರವು ತನ್ನ ಸಂಗ್ರಹಕ್ಕೆ ತೆಗೆದುಕೊಳ್ಳುವುದರಿಂದ, ಕೃಷಿ ಉತ್ಪಾದನೆಯಲ್ಲಿನ ಹೆಚ್ಚಳವು ಒಟ್ಟಾರೆಯಾಗಿ ಅರ್ಥವ್ಯವಸ್ಥೆಯು ಒಂದು ಸ್ವಾಯತ್ತ ಬೆಳವಣಿಗೆಯ ಮೂಲವನ್ನು ಕಂಡುಕೊಳ್ಳುವಲ್ಲಿ ನೆರವಾಗುತ್ತದೆ ಮತ್ತು ಈ ಕ್ರಮವು ಸರಳ ಪುನರುತ್ಪತ್ತಿಯು ನೆಲೆಗೊಳ್ಳುವುದನ್ನೂ ತಡೆಯುತ್ತದೆ. ಖಂಡಿತವಾಗಿಯೂ ಇದು ಒಂದು ತಾರ್ಕಿಕ ಸಾಧ್ಯತೆ. ಆದರೆ, ಈಗಾಗಲೇ ತಿಳಿಸಿರುವ ಹಾಗೆ 2019-20 ಮತ್ತು 2021-22ರ ನಡುವಿನ ಜಿಡಿಪಿ ಬೆಳವಣಿಗೆಯ ಅಂಕಿಅಂಶಗಳು ಕೃಷಿ ವಲಯದ ಬೆಳವಣಿಗೆ ದರವನ್ನು ಒಳಗೊಂಡಿವೆ. ಆದ್ದರಿಂದ, ಕೃಷಿ ವಲಯದ ಬೆಳವಣಿಗೆ ದರದಲ್ಲಿ ಹಠಾತ್ ವೇಗೋತ್ಕರ್ಷವಾಗದ ಹೊರತು, ಅರ್ಥವ್ಯವಸ್ಥೆಯು ಸ್ಥಗಿತತೆಯಿಂದ ಹೊರಬರುವುದು ಸಾಧ್ಯವಿಲ್ಲ. ಆದರೆ, ನವ-ಉದಾರವಾದಿ ಆಳ್ವಿಕೆಯಲ್ಲಿ, ರೈತ ಕೃಷಿಯ ಹಿಂಡುವಿಕೆಯೇ ಅದರ ಒಂದು ಮುಖ್ಯ ಗುಣಲಕ್ಷಣವಾಗಿರುವಾಗ, ಕೃಷಿ ವಲಯದ ಬೆಳವಣಿಗೆ ದರದಲ್ಲಿ ಸ್ವಾಯತ್ತ ವೇಗೋತ್ಕರ್ಷವನ್ನು ನಿರೀಕ್ಷಿಸಲಾಗದು. ಆದ್ದರಿಂದ, ಅರ್ಥವ್ಯವಸ್ಥೆಯು ಒಂದು ಸರಳ ಪುನರುತ್ಪತ್ತಿಯ ಸ್ಥಿತಿಯಲ್ಲಿ ನೆಲೆಗೊಳ್ಳುವ ಪ್ರವೃತ್ತಿಯು ಅಡೆತಡೆಯಿಲ್ಲದೆ ಮುಂದುವರೆಯುತ್ತದೆ.
ದಾರಿ ಕಾಣದ ಹಂತದಲ್ಲಿ
ಕೆಲವು ಕಾರಣಗಳಿಂದಾಗಿ, ಅರ್ಥವ್ಯವಸ್ಥೆಯು ಸರಳ ಪುನರುತ್ಪತ್ತಿಯ ಸ್ಥಿತಿಯಲ್ಲಿರುವಾಗ, ಆದಾಯ ವಿತರಣೆಯಲ್ಲಿ ಒಂದು ವೇಳೆ ಪ್ರತಿಕೂಲ ಬದಲಾವಣೆ ಉಂಟಾದರೆ, ಆಗ, ಅದು ಅರ್ಥವ್ಯವಸ್ಥೆಯನ್ನು ಸರಳ ಪುನರುತ್ಪತ್ತಿಯ ಸ್ಥಿತಿಯಿಂದ ಮೇಲೆತ್ತುವ ಬದಲು, ಆರ್ಥಿಕ ಹಿಂಜರಿತ ಉಂಟಾಗಲು ಕಾರಣವಾಗುತ್ತದೆ. ಅಂದರೆ. ಬೆಳವಣಿಗೆಯ ದರವು ನಕಾರಾತ್ಮಕವಾಗಿರುತ್ತದೆ. ಅಂತಿಮವಾಗಿ ಇದು ಅರ್ಥವ್ಯವಸ್ಥೆಯನ್ನು ಮತ್ತೊಂದು, ಹೊಸ, ಸರಳ ಪುನರುತ್ಪತ್ತಿಯ ಸ್ಥಿತಿಗೆ ಕೊಂಡೊಯ್ಯುತ್ತದೆ, ನಿರುದ್ಯೋಗ ದರದ ಏರಿದ ಮಟ್ಟದೊಂದಿಗೆ. ಹೀಗಾಗುತ್ತದೆ ಏಕೆಂದರೆ, ಆದಾಯ ಹಂಚಿಕೆಯ ಪ್ರತಿಕೂಲ ಬದಲಾವಣೆಯು ಬಳಕೆಯನ್ನು ಕಡಿಮೆ ಮಾಡುವ ಮೂಲಕ ಒಟ್ಟು ಬೇಡಿಕೆಯ ಮಟ್ಟವನ್ನು ಇಳಿಕೆ ಮಾಡುತ್ತದೆ. ಏಕೆಂದರೆ, ಪ್ರತಿ ಯೂನಿಟ್ ಆದಾಯದ ಲೆಕ್ಕಾಚಾರದಲ್ಲಿ ಬಡವರು ಶ್ರೀಮಂತರಿಗಿಂತ ಹೆಚ್ಚಿನ ಪಾಲನ್ನು ಬಳಸಿಕೊಳ್ಳುತ್ತಾರೆ.
ನವ-ಉದಾರವಾದದ ಆಳ್ವಿಕೆಯಲ್ಲಿ ಭಾರತದ ಅರ್ಥವ್ಯವಸ್ಥೆಯ ಸರಳ ಪುನರುತ್ಪತ್ತಿಯ ಪ್ರವೃತ್ತಿಯು, ನವ-ಉದಾರವಾದವು ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲಿ ದಾರಿ ಕಾಣದ ಹಂತವನ್ನು ತಲುಪಿದೆ ಎಂಬ ಅಂಶವನ್ನು ಸೂಚಿಸುತ್ತದೆ.