ಎಚ್.ಆರ್. ನವೀನ್ಕುಮಾರ್, ಹಾಸನ
ಇತ್ತೀಚಿನ ದಿನಗಳಲ್ಲಿ ದಿನಾಚರಣೆಗಳೆಂದರೆ ಅವು ಫೇಸ್ಬುಕ್ ಮತ್ತು ವಾಟ್ಸ್ಆಪ್, ಇನ್ಸ್ಟಾಗ್ರಾಂ ನಲ್ಲಿ ಸ್ಟೇಟಸ್ ಹಾಕಲು ಸೀಮಿತವಾಗಿವೆ. ಮಾತ್ರವಲ್ಲ ಮಹಿಳಾ ದಿನಾಚರಣೆಯಂದು ಮಹಿಳೆಯರಿಗೆ ಬಟ್ಟೆ ಅಂಗಡಿಗಳಲ್ಲಿ, ಚಿನ್ನಬೆಳ್ಳಿ ಅಂಗಡಿಗಳಲ್ಲಿ ರಿಯಾಯ್ತಿಗಳನ್ನು ಘೋಷಿಸುವ ಮಟ್ಟಕ್ಕೆ ಬಂದು ನಿಂತಿವೆ. ಪ್ರತಿಯೊಂದು ದಿನಾಚರಣೆಯ ಹಿಂದೆ ಅದರದ್ದೇ ಆದ ಒಂದು ಐತಿಹಾಸಿಕ ಮಹತ್ವವಿರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳದೆ ಕೇವಲ ವ್ಯಕ್ತಿಗಳ ಹುಟ್ಟು ಹಬ್ಬಗಳಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸುವ ಮಟ್ಟಕ್ಕೆ ಕೇವಲ ಕಾಟಾಚಾರದ ಆಚರಣೆಗಳಾಗಿ ಬಂದು ನಿಂತಿವೆ.
ಮೇ 1 ಜಗತ್ತಿನಾದ್ಯಂತ ವಿಶ್ವ ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನಕ್ಕೂ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯಿದೆ. ಇದನ್ನು ಅರ್ಥಮಾಡಿಕೊಂಡು, ಅದರ ಬೆಳಕಿನಲ್ಲಿ ಇಂದಿನ ಕಾರ್ಮಿಕರ ಪರಿಸ್ಥಿತಿಗಳನ್ನು ಗ್ರಹಿಸಿ, ಅವುಗಳ ಕುರಿತು ಮಾತನಾಡುವಂತಾಗಬೇಕು.
ಮಾನವ ಸಮಾಜದ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಕೃಷಿಯ ನಂತರ ಮನುಷ್ಯ ಕೈಗಾರಿಕಾ ಉತ್ಪಾದನೆಯನ್ನು ಕಂಡುಕೊAಡ ಸುಮಾರು 19 ನೇ ಶತಮಾನದಲ್ಲಿ ಜಗತ್ತಿನಲ್ಲಿ ಮುಖ್ಯವಾಗಿ ಯುರೋಪಿನಲ್ಲಿ ಕೈಗಾರಿಕೆಗಳ ಸ್ಥಾಪನೆ ಮತ್ತು ಅವುಗಳ ಬೆಳವಣಿಗೆಯಾಯಿತು. ಒಂದು ಪ್ರದೇಶದಲ್ಲಿ ಬಂಡವಾಳವನ್ನು ತೊಡಗಿಸಿ ಅಲ್ಲಿ ಉತ್ಪಾದನಾ ಚಟುವಟಿಕೆಗಳನ್ನು ಮಾಡಲಾಯಿತೋ ಅಲ್ಲಿಂದ ಮಾಲೀಕ ಮತ್ತು ಕಾರ್ಮಿಕ (ದುಡಿಯುವವರು – ದುಡಿಸಿಕೊಳಳುವವರು) ಎಂಬ ವರ್ಗಗಳ ನಿರ್ಮಾಣವಾದವು. ಇಂದು ನಾವು ನೋಡುತ್ತಿರುವ ಸಕಲ ಸಂಪತ್ತಿನ ಸೃಷ್ಠಿಯ ಮೂಲ ಕಾರ್ಮಿಕ ವರ್ಗದ ಶ್ರಮ.
“ಕಾರ್ಮಿಕರು ತಮ್ಮ ಶ್ರಮ ಶಕ್ತಿಯನ್ನು ಮಾರಿಕೊಂಡು ಬದುಕುತ್ತಾರೆ” ಎಂದು ಕಾರ್ಮಿಕ ವರ್ಗದ ವಿಮೋಚನೆಗೆ ವೈಜ್ಞಾನಿಕ ಸಮಾಜವಾದಿ ಸಿದ್ದಾಂತವನ್ನು ಪ್ರತಿಪಾದಿಸಿದ ತತ್ವಶಾಸ್ತಜ್ಞ ಕಾರ್ಲ್ ಮಾರ್ಕ್ಸ್ ಹೇಳುತ್ತಾರೆ. ಹೀಗೆ ಕೈಗಾರಿಕಾ ಕ್ರಾಂತಿಯ ಆರಂಭದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದವರು ಅಕ್ಷರಶಹಶ ಗುಲಾಮರಂತೆ ಕೆಲಸ ಮಾಡುತ್ತಿದ್ದರು. ಇವರುಗಳಿಗೆ ಕೆಲಸಕ್ಕೆ ನಿಗದಿತ ಸಮಯವಿರಲಿಲ್ಲ, ವಿಶ್ರಾಂತಿ ಇರಲಿಲ್ಲ, ನಿಗದಿತ ವೇತನವಿರಲಿಲ್ಲ, (ಶ್ರಮಕ್ಕೆ ತಕ್ಕಂತ ವೇತನವನ್ನು ಕೇಳುವ ಪ್ರಶ್ನೆಯೇ ಇರಲಿಲ್ಲ) ಉಳಿದಂತೆ ಇಂದಿನ ಆಧುನಿಕ ಸಮಾಜದಲ್ಲಿ ಕಾರ್ಮಿಕ ವರ್ಗದ ಬೇಡಿಕೆಗಳಾಗಿರುವ ಯಾವ ಸೌಲಭ್ಯಗಳು ಅಂದಿನ ಕಾರ್ಮಿಕರಿಗೆ ಸಿಗುತ್ತಿರಲಿಲ್ಲ. ಇಂತಹ ಸ್ಥಿತಿಯಲ್ಲಿ ಗಣಿಗಳಲ್ಲಿ ಕೆಲಸ ಮಾಡುತ್ತಿದ್ದ ಲಕ್ಷಾಂತರ ಕಾರ್ಮಿಕರು ಅದರೊಳಗೆ ಸಮಾದಿಯಾಗಿರುವ ಸಾಕಷ್ಟು ಉದಾಹರಣೆಗಳಿವೆ. “ಯಾವುದೇ ಒಂದು ವಸ್ತುವಿನ ಮೌಲ್ಯ ಉತ್ಪತ್ತಿಯಾಗಲು ಅದಕ್ಕೆ ಮನುಷ್ಯನ ಶ್ರಮಶಕ್ತಿಯೇ ಕಾರಣ”ವಾಗಿರುವಾಗಲೂ, ಆ ಕಾರ್ಮಿಕನಿಗೆ ಮಾತ್ರ ಯಾವುದೇ ಮೌಲ್ಯವಿಲ್ಲದಂತಹ ಸ್ಥಿತಿ ಇತ್ತು.
ಇದನ್ನೂ ಓದಿ : ವಿಮೋಚನೆಗೆ 50 ವರ್ಷ : ಹಮಾರಾ ನಾಮ್, ತುಮಾರಾ ನಾಮ್, ವಿಯೇಟ್ನಾಂ ವಿಯೇಟ್ನಾಂ !
ಇಂತಹ ದಾರುಣ ಸ್ಥಿತಿಯಿಂದ ಹೊರಬರಲು ಕಾರ್ಮಿಕ ವರ್ಗ ಸಂಘಟಿತವಾಗಿ 8 ಗಂಟೆ ಕೆಲಸದ ಅವಧಿಯ ಬೇಡಿಕೆಯನ್ನು ಮುಂದಿಟ್ಟಿತು. ದಿನದ ಉಳಿದ 8 ಗಂಟೆ ವಿಶ್ರಾಂತಿ, 8 ಗಂಟೆ ಮನರಂಜನೆ ಮತ್ತಿತರೆ ಚಟುವಟಿಕೆಗಳಿಗೆ ಮೀಸಲಿಡಬೇಕು. ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡ್ರಿಕ್ ಎಂಗೆಲ್ಸ್ ಕಮ್ಯೂನಿಸ್ಟ್ ಇಂಟರ್ನ್ಯಾಷನಲ್ಗೆ ಕಾರ್ಮಿಕ ವರ್ಗದ ಶೋಷಣೆಗೆ ಕಾರಣವೇನೆಂದು ಗುರಿತಿಸಿ ಸಮಾಜ ಹೇಗೆ ಕಾರ್ಮಿಕ ವರ್ಗದ ನೇತೃತ್ವದಲ್ಲಿ ಸಮಾಜವಾದದ ಕಡೆ ಮುನ್ನಡೆಯುತ್ತದೆ ಎಂಬುದನ್ನು “ಕಮ್ಯೂನಿಸ್ಟ್ ಪ್ರಣಾಳಿಕೆ”ಯಲ್ಲಿ (1848) ಬರೆದು ಸಮಾಜಕ್ಕೆ ಅರ್ಪಿಸಿದ 38 ವರ್ಷಗಳಲ್ಲಿ ಜಗತ್ತಿನ ಹಲವು ಭಾಗಗಳಲ್ಲಿ ಈ ಚಳುವಳಿ ಕಾರ್ಮಿಕರ ನೇತೃತ್ವದಲ್ಲಿ ಆರಂಭವಾಗಿತು. 1886 ಮೇ 1 ರಂದು ಅಮೇರಿಕಾದ್ಯಂತ 8 ಗಂಟೆಯ ಕೆಲಸದ ಅವಧಿಯ ಘೋಷಣೆಗಾಗಿ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿದಿದ್ದರು. ಈ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪೊಲೀಸರು ಹಾರಿಸಿದ ಗುಂಡಿಗೆ ಕಾರ್ಮಿಕನೋರ್ವ ಬಲಿಯಾಗಿದ್ದ. ಇದನ್ನು ಖಂಡಿಸಿ ಮೇ 4 ಮಂಗಳವಾರ ರಾತ್ರಿ ಎಂಟುವರೆ ಗಂಟೆಯ ಸಮಯದಲ್ಲಿ ಅಮೇರಿಕಾ ಚಿಕಾಗೋ ನಗರದ ಹೇ ಮಾರ್ಕೇಟ್ ಚೌಕಿಯಲ್ಲಿ ಸುಮಾರು 2500 ರಷ್ಟು ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದರು. ಪೊಲೀಸರ ದೌರ್ಜನ್ಯವನ್ನು ಖಂಡಿಸಿ ಕಾರ್ಮಿಕ ಮುಖಂಡರು, ಪತ್ರಿಕೆಯ ಸಂಪಾದಕರುಗಳು ಗಂಟೆಗಟ್ಟಲೆ ಮಾತನಾಡಿದರು. ಸಮಯ ರಾತ್ರಿ ಹತ್ತು ದಾಟಿತ್ತು. ಇದೇ ಸಂದರ್ಭದಲ್ಲಿ ಪ್ರತಿಭಟನೆಯನ್ನು ನಿಯಂತ್ರಿಲು ಬಂದಿದ್ದ 176 ಜನ ಸಶಸ್ತç ಪೊಲೀಸರು ನಿಂತಿದ್ದ ಗುಂಪಿನ ನಡುವೆ ಡೈನಾಮೆಂಟ್ ಬಾಂಬ್ ಸ್ಪೋಟಿಸಿದ ಸದ್ದಾಯಿತು. ಇದು ಅಮೇರಿಕಾರ ಇತಿಹಾಸದಲ್ಲೇ ಮೊಟ್ಟಮೊದಲ ಬಾಂಬ್ ಸ್ಪೋಟವಾಗಿತ್ತು. ಇದರಿಂದ ದಿಗ್ಬ್ರಾಂತರಾದ ಪೊಲೀಸರು ಪ್ರತಿಭಟನಾಕಾರರ ಮೇಲೆ ಮನಸೋಯಿಚ್ಚೆ ಗುಂಡಿನ ಮಳೆಗರೆದರು. ಇದರಲ್ಲಿ 6 ಜನ ಪೊಲೀಸರು ಮತ್ತು 4 ಜನ ಕಾರ್ಮಿಕರು ಸಾವನಪ್ಪಿದರು.
ಈ ಘಟನೆಯ ಪರಿಣಾಮ ಇನ್ನೂ ಭೀಕರವಾಗಿತ್ತು. ಮುಂದಿನ ಅನೇಕ ವಾರಗಳವರೆಗೆ ಚಿಕಾಗೋ ನಗರದಲ್ಲಿ ಅಷ್ಟೇ ಅಲ್ಲ, ರಾಷ್ಟçದ ಎಲ್ಲಾ ನಗರಗಳಲ್ಲೂ ವಾಕ್ ಸ್ವಾತಂತ್ರ್ಯವನ್ನು ಮತ್ತು ಸಂಘಟನಾ ಸ್ವಾತಂತ್ಯ ಹೇಳ ಹೆಸರಿಲ್ಲದಂತೆ ಕಾಣೆಯಾದವು. ನೂರಾರು ಕಾರ್ಮಿಕ ನಾಯಕರು ಬಂಧನಕ್ಕೊಳಗಾದರು. ಪೊಲೀಸರ ವಿವೇಕಹೀನ ಉದ್ದಟತನದಿಂದ ಉದ್ಭವಿಸಿದ ಹಿಂಸೆಯ ಹೊಣೆಯನ್ನು ನೈಟ್ಸ್ ಆಫ್ ಲೇಬರ್ ಹೆಗಲಿಗೆ ಹೊರಿಸಿ ಎಲ್ಲರೂ ಅವರನ್ನೇ ದೂಷಿಸಲಾರಂಭಿಸಿದರು. ಪತ್ರಿಕೆಗಳು, ವ್ಯಾಪಾರಸ್ಥರು, ಜನಸಾಮಾನ್ಯರು ಕಾರ್ಮಿಕ ಸಂಘಟನೆಗಳ ಮೇಲೆ ಹರಿಹಾಯತೊಡಗಿದರು. ಅಂತಿಮವಾಗಿ ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ 8 ಜನರನ್ನು ತೀವ್ರವಾದ ವಿಚಾರಣೆಗೆ ಗುರಿಮಾಡಿ ಅವರಲ್ಲಿ 4 ಜನರನ್ನು 1887 ನವೆಂಬರ್ 11 ರಂದು ಗಲ್ಲಿಗೇರಿಸಲಾಯಿತು. ಅದಕ್ಕೂ ಹಿಂದಿನ ದಿನ ಒಬ್ಬ ಜೈಲಿನಲ್ಲೇ ಸತ್ತು ಬಿದ್ದಿದ್ದ. 1893 ರಲ್ಲಿ 3 ಕೈದಿಗಳಿಗೆ ಕ್ಷಮಾಧಾನ ನೀಡಲಾಯಿತು.
ಹೇ ಮಾರ್ಕೆಟ್ ಹುತಾತ್ಮರ ತ್ಯಾಗವನ್ನು ಸ್ಮರಿಸಲು ಮತ್ತು 8 ಗಂಟೆಗಳ ಕೆಲಸದ ಸಮಯದ ಬೇಡಿಕೆಗೆ ಜಾಗತಿಕ ಬೆಂಬಲವನ್ನು ಕ್ರೋಢೀಕರಿಸಲು, 1889 ರಲ್ಲಿ ಪ್ಯಾರಿಸ್ನಲ್ಲಿ ನಡೆದ ಎರಡನೇ ಅಂತರರಾಷ್ಟ್ರೀಯ (Second International) ಸಮಾಜವಾದಿ ಮತ್ತು ಕಾರ್ಮಿಕ ಸಂಘಟನೆಗಳ ಸಮ್ಮೇಳನದಲ್ಲಿ ಒಂದು ಐತಿಹಾಸಿಕ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. 1890ರ ಮೇ 1 ರಂದು ವಿಶ್ವಾದ್ಯಂತ ಕಾರ್ಮಿಕರು 8 ಗಂಟೆಗಳ ಕೆಲಸದ ಸಮಯಕ್ಕಾಗಿ ಮತ್ತು ಹೇ ಮಾರ್ಕೆಟ್ ಹುತಾತ್ಮರನ್ನು ಸ್ಮರಿಸಲು ಒಂದೇ ದಿನದ ಬೃಹತ್ ಪ್ರದರ್ಶನಗಳನ್ನು ಆಯೋಜಿಸಬೇಕೆಂದು ನಿರ್ಧರಿಸಲಾಯಿತು. ಈ ನಿರ್ಣಯವು ವಿಶ್ವದಾದ್ಯಂತ ಹರಡಿತು ಮತ್ತು 1890ರ ಮೇ 1 ರಂದು ಅನೇಕ ದೇಶಗಳಲ್ಲಿ ಕಾರ್ಮಿಕರು ಬೃಹತ್ ಪ್ರಮಾಣದಲ್ಲಿ ಮುಷ್ಕರಗಳನ್ನು ನಡೆಸಿದರು. ಅಂದಿನಿAದ ಮೇ 1 ಅಧಿಕೃತವಾಗಿ ಅಂತರರಾಷ್ಟ್ರೀಯ ಕಾರ್ಮಿಕ ದಿನವಾಯಿತು.
ಮೇ 1 ರಂದು ಕಾರ್ಮಿಕ ದಿನವನ್ನು ಆಚರಿಸುವ ಸಂಪ್ರದಾಯವು ಯುರೋಪಿನಿಂದ ಪ್ರಾರಂಭವಾಗಿ ಏಷ್ಯಾ ಆಫ್ರಿಕಾ, ಲ್ಯಾಟಿನ್ ಅಮೇರಿಕಾ ಸೇರಿದಂತೆ ವಿಶ್ವದ ಬಹುತೇಕ ಎಲ್ಲಾ ಭಾಗಗಳಿಗೆ ವೇಗವಾಗಿ ಹರಡಿತು. ಅನೇಕ ದೇಶಗಳು ಮೇ 1 ಅನ್ನು ಸಾರ್ವಜನಿಕ ರಜಾದಿನವನ್ನಾಗಿ ಘೋಷಿಸಿದವು. ಪ್ರತಿ ವರ್ಷ ಈ ದಿನದಂದು ಕಾರ್ಮಿಕ ಸಂಘಟನೆಗಳು, ರಾಜಕೀಯ ಪಕ್ಷಗಳು ಮತ್ತು ನಾಗರೀಕ ಸಮಾಜ ಸಂಸ್ಥೆಗಳು ಮೆರವಣಿಗೆಗಳು, ಸಭೆಗಳು ಮತ್ತು ಪ್ರದರ್ಶನಗಳನ್ನು ಆಯೋಜಿಸುತ್ತವೆ. ಇದು ಕಾರ್ಮಿಕರು ತಮ್ಮ ಹಕ್ಕುಗಳನ್ನು ಗೆದ್ದ ಸಂಕೇತವಾಗಿದೆ. ಇದು ಕೇವಲ 8 ಗಂಟೆಗಳ ಕೆಲಸಕ್ಕೆ ಸೀಮಿತವಾಗಿಲ್ಲ. ಬದಲಿಗೆ ಉತ್ತಮ ವೇತನ, ಕೆಲಸದ ಭದ್ರತೆ, ಆರೋಗ್ಯ ಸೌಲಭ್ಯಗಳು, ಪಿಂಚಣಿ ಮತ್ತು ಕೆಲಸದ ಸ್ಥಳದಲ್ಲಿ ಸಮಾನತೆಯಂತಹ ಕಾರ್ಮಿಕ ಹಕ್ಕುಗಳಿಗಾಗಿ ನಡೆದ ಮತ್ತು ನಡೆಯುತ್ತಿರುವ ಹೋರಾಟಗಳನ್ನು ಪ್ರತಿನಿಧಿಸುತ್ತದೆ.
ಇಂತಹ ತ್ಯಾಗ ಬಲಿದಾನಗಳಿಂದ ಗಳಿಸಿಕೊಂಡಿರುವ ಕಾರ್ಮಿಕರ ಹಕ್ಕುಗಳು ಆಳುವ ವರ್ಗದ ನೀತಿಗಳಿಂದಾಗಿ ಸಂಪೂರ್ಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ದಿನಕ್ಕೆ 12 ಗಂಟೆ ಕೆಲಸ ಮಾಡುವ ನೀತಿಗಳ ಪರವಾಗಿ ಸಹಿಯಾಕಿವೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕಾರ್ಮಿಕರು ಹಕ್ಕುಗಳನ್ನು ಪಡೆಯಲು ಇದ್ದ 29 ಕಾರ್ಮಿಕ ಕಾನೂನುಗಳನ್ನು ಕೇವಲ ನಾಲ್ಕು ಕಾರ್ಮಿಕ ಸಂಹಿತೆಗಳನ್ನಾಗಿ ಬದಲಾಯಿಸಿ, ಕಾರ್ಮಿಕರ ಹಕ್ಕುಗಳನ್ನು ಮಾಲೀಕರಿಗೆ ದಾರೆಯೆರೆದು ಕೊಡಲಾಗುತ್ತಿದೆ. ಐಟಿ ಕ್ಷೇತ್ರದ ದಿಗ್ಗಜ ಇನ್ಫೋಸಿಸಿ ಅಧ್ಯಕ್ಷ ನಾರಾಯಣ ಮೂರ್ತಿ “ಯುವಕರು ವಾರದಲ್ಲಿ 70 ಗಂಟೆಗಳ ಕಾಲ ದುಡಿಯಬೇಕು” ಎಂದಿದ್ದಾರೆ. ಅಂದರೆ ಕಾರ್ಮಿಕ ವರ್ಗದ ತ್ಯಾಗ ಬಲಿದಾನಗಳಿಂದ ಪಡೆದಿರುವ 8 ಗಂಟೆಗಳ ಕೆಲಸದ ಅವಧಿ ಕಾನೂನನ್ನು ಸಂಪೂರ್ಣವಾಗಿ ಬದಲಾಯಿಸುವ ಯೋಜನೆಗಳು ಜಾರಿಯಾಗುತ್ತಿವೆ. ಇದರಿಂದ ಮತ್ತೊಮ್ಮೆ ಕಾರ್ಮಿಕರು ತ್ಮಮ ಸ್ವಾತಂತ್ರ್ಯವನ್ನು ಕಳೆದುಕೊಂಡು ಆಧುನಿಕ ಗುಲಾಮಗಿರಿಗೆ ಒಳಗಾಗಲಿದ್ದಾರೆ.
ಕಾರ್ಮಿಕರು ಸೃಷ್ಟಿಸುವ ಸಂಪತ್ತಿನ ಶೇಕಡ 70 ರಷ್ಟು ಲಾಭವನ್ನು ಬಂಡವಾಳಶಾಹಿ ವರ್ಗ ಲಾಭದ ರೂಪದಲ್ಲಿ ಶೇಖರಿಸಿಕೊಳ್ಳುತ್ತಿದೆ. ಈ ಲಾಭವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದಲೇ ಅದು ಕಾರ್ಮಿಕ ವರ್ಗವನ್ನು ಮತ್ತಷ್ಟು ಶೋಷಣೆಗೆ ಒಳಪಡಿಸಲು ಕಾತುರವಾಗಿರುತ್ತದೆ. ತೊಂಬತ್ತರ ದಶಕದ ನಂತರ ನಮ್ಮ ದೇಶ ಅಳವಡಿಸಿಕೊಂಡ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ ನೀತಿಗಳಿಂದಾಗಿ ಕಾರ್ಮಿಕರು ಕಷ್ಟಪಟ್ಟು ಬೆವರು ಸುರಿಸಿ ದುಡಿದರೂ ಅದರಿಂದ ಹೊಟ್ಟೆ ಬಟ್ಟೆಯನ್ನು ನಿಭಾಯಿಸಲು ಸಾದ್ಯವಾಗುತ್ತಿಲ್ಲ. ಇನ್ನು ಮಕ್ಕಳ ಶಿಕ್ಷಣ, ಆರೋಗ್ಯದಂತಹ ಸಮಸ್ಯೆಗಳನ್ನು ನೆನೆದರೆ ಬದುಕು ದುಸ್ತರವೆನಿಸುತ್ತದೆ. ಆದರೆ ಅದೇ ಸಂದರ್ಭದಲ್ಲಿ ಅಪಾರ ಸಂಪತ್ತನ್ನು ಕ್ರೋಢೀಕರಿಸುತ್ತಿರುವ ಶ್ರೀಮಂತರ ಸಂಖ್ಯೆ ದೇಶದಲ್ಲಿ ಹೆಚ್ಚುತ್ತಾ ಜಗತ್ತಿನ ಅತೀ ಶ್ರೀಮಂತರ ಪಟ್ಟಿಗೆ ಸೇರ್ಪಡೆಯಾಗುತ್ತಿದ್ದಾರೆ. ಈ ಅಂಶವನ್ನು ಸೂಕ್ಷö್ಮವಾಗಿ ಗಮನಿಸಿದರೆ ಇಂದು ದುಡಿಯುವ ಜನ ಯಾಕೆ ಬಡವರಾಗಿಯೇ ಇದ್ದಾರೆ ಮತ್ತು ದುಡಿಸಿಕೊಳ್ಳುವವರು ಯಾಕೆ ಶ್ರೀಮಂತರಾಗುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಈ ಗುಟ್ಟು ಯಾರಿಗೂ ಅರ್ಥವಾಗದು ಎಂದು ಭಾವಿಸಿದ್ದ ಕಾರ್ಮಿಕರ ಶೋಷಣೆಯ ಮೂಲವನ್ನು ಭೇಧಿಸಿ ಕಾರ್ಲ್ ಮಾಕ್ಸ್ “ಬಂಡವಾಳ” ಕೃತಿಯನ್ನು ರಚಿಸಿದರು.
“ವಿಶ್ವ ಕಾರ್ಮಿಕರೇ ಒಂದಾಗಿ ನಿಮಗೆ ಕಳೆದುಕೊಳ್ಳಲು ಸಂಕೋಲೆಗಳನ್ನೊರತು ಬೇರೇನಿಲ್ಲ, ಗೆಲ್ಲಲೊಂದು ಜಗತ್ತೇ ಇದೆ” ಎಂಬ ಘೋಷಣೆ ಇಂದು ಕಾರ್ಮಿಕ ವರ್ಗದ ಘೋಷವಾಕ್ಯವಾಗಬೇಕಿದೆ. ವಿಶ್ವದ ಎಲ್ಲಾ ದುಡಿಯುವ ಕಾರ್ಮಿಕರು ಒಂದಾದರೆ ಮಾತ್ರ ವಿಶ್ವವನ್ನು ಶೋಷಣೆಮಾಡುತ್ತಿರುವ ಬಂಡವಾಳಶಾಹಿ ಸಮಾಜವನ್ನು ಸೋಲಿಸಿ, ದುಡಿಯುವ ಜನರ ಸಮಾಜವಾದಿ ಸಮಸಮಾಜವನ್ನು ಜಾರಿಗೆ ತರಲು ಸಾಧ್ಯ. ಇಂತಹ ಮಹತ್ತರವಾದ ವಿಚಾರಗಳನ್ನು ಜಾತಿ, ಧರ್ಮ, ಸಂಪ್ರದಾಯಗಳ ಹೆಸರಿನಲ್ಲಿ ಒಡೆದು ಹಂಚಿಹೋಗಿರುವ ಕಾರ್ಮಿಕ ವರ್ಗಕ್ಕೆ ಅರ್ಥ ಮಾಡಿಸಿ ಅವರನ್ನು ಬೀದಿಗಿಳಿಸಿ ಕಾರ್ಮಿಕ ವರ್ಗದ ವಿಶ್ವ ಪ್ರಜ್ಞೆಯನ್ನು ಮೂಡಿಸುವ ಸವಾಲು ಭಾರತದ ಕಾರ್ಮಿಕ ಚಳುವಳಿಯ ಮುಂದಿದೆ. ಈ ಸವಾಲನ್ನು ಎದುರಿಸಲು ಭಾರತದ ಕಾರ್ಮಿಕ ಚಳುವಳಿಗಳು ಇಂದಿನ ಮೇ ದಿನವನ್ನು ಸವಾಲಾಗಿ ಸ್ವೀಕರಿಸಲಿ ಎಂದು ಹರಸುತ್ತಾ. ಮತ್ತೊಮ್ಮೆ ಸಂಪತ್ತಿನ ಸೃಷ್ಟಿಕರ್ತರಾದ ಕಾರ್ಮಿಕರಿಗೆ ಅಂತರಾಷ್ಟ್ರೀಯ ಕಾರ್ಮಿಕ ದಿನದ ಶುಭಾಷಯಗಳು.
ಇದನ್ನೂ ನೋಡಿ : ಧಾರ್ಮಿಕತೆ ಮೀರಿದ ನಾಯಕತ್ವ ಈ ದೇಶಕ್ಕೆ ಬೇಕು – ಬರಗೂರು ರಾಮಚಂದ್ರಪ್ಪ Janashakthi Media