–ನಾ ದಿವಾಕರ
ಅಕ್ಟೋಬರ್ 2 2024ರ ಗಾಂಧಿ ಜಯಂತಿಯ ದಿನ ವಿಕಸಿತ ಭಾರತವು ಮತ್ತೊಂದು ಕ್ರಾಂತಿಕಾರಕ ಸುಧಾರಣೆಯ ಹೆಜ್ಜೆಗಳಿಗೆ ಸಾಕ್ಷಿಯಾಗಿತ್ತು. 2014ರಲ್ಲಿ ನರೇಂದ್ರ ಮೋದಿ ಸರ್ಕಾರವು ಘೋಷಿಸಿದ ʼಸ್ವಚ್ಛ ಭಾರತ ಅಭಿಯಾನʼ ಈ ದಿನದಂದು ಹತ್ತು ವರ್ಷಗಳನ್ನು ಪೂರೈಸಿತ್ತು. ಈ ಹತ್ತು ವರ್ಷಗಳಲ್ಲಿ ದೇಶಾದ್ಯಂತ ಸ್ವಚ್ಧತಾ ಅಭಿಯಾನವು ಸ್ಥಳೀಯ ಸಂಸ್ಥೆಗಳ ಉತ್ತೇಜನದೊಂದಿಗೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ನಗರ ಪಾಲಿಕೆಗಳು ʼಸ್ವಚ್ಛ ನಗರ ʼದ ಅಗ್ರ ಶ್ರೇಣಿ ಪಡೆಯಲು ಸಕಲ ಸಾಹಸಗಳನ್ನೂ ಮಾಡುತ್ತಿವೆ. ಆದರೆ ಮಳೆಗಾಲ ಬಂತೆಂದರೆ ಭಾರತದ ಬೃಹತ್ ನಗರಗಳ, ಸಣ್ಣ ಪುಟ್ಟ ಪಟ್ಟಣಗಳ ನೈರ್ಮಲ್ಯದ ನೈಜ ಚಿತ್ರಣ ತಂತಾನೇ ಅನಾವರಣಗೊಳ್ಳುತ್ತದೆ. ನಗರಗಳ ನೈರ್ಮಲ್ಯ, ಒಳಚರಂಡಿ ವ್ಯವಸ್ಥೆ ಮತ್ತು ರಾಜಕಾಲುವೆಗಳ ದುರವಸ್ಥೆಯನ್ನು ಗಮನಿಸಿದಾಗ, ಹತ್ತು ವರ್ಷಗಳಲ್ಲಿ ಭಾರತ ಸಾಧಿಸಿರುವುದೇನು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ನಗರ-ಪಟ್ಟಣಗಳಲ್ಲಿ ನೈರ್ಮಲ್ಯ, ಒಳಚರಂಡಿ ಮತ್ತು ರಾಜಕಾಲುವೆಗಳನ್ನು ನಿರ್ವಹಿಸುವ ಜವಾಬ್ದಾರಿ ಹೊತ್ತಿರುವ ಸ್ಥಳೀಯ ಪುರಸಭೆ-ನಗರಸಭೆಗಳು ಈ ಮೂಲ ಸೌಕರ್ಯಗಳನ್ನು ಕಾಪಾಡುವಲ್ಲಿ ತೋರುವ ನಿರ್ಲಕ್ಷ್ಯಗಳೆಲ್ಲವೂ ಮಳೆಗಾಲದಲ್ಲಿ ಹೊರಬರುತ್ತವೆ. ಘನ ತ್ಯಾಜ್ಯ ವಸ್ತುಗಳಿಂದ ತುಂಬಿ ಮುಚ್ಚಿಹೋಗುವ ದೊಡ್ಡ ಮೋರಿಗಳು, ಕಸಕಡ್ಡಿಗಳಿಂದ ತುಂಬಿಕೊಂಡು ನೀರು ಹರಿಯದಂತೆ ಬ್ಲಾಕ್ ಆಗಿರುವ ಒಳ ಚರಂಡಿಗಳು, ಸಮರ್ಪಕ ನಿರ್ವಹಣೆ ಇಲ್ಲದೆ ತುಂಬಿ ರಸ್ತೆಗೆ ಹರಿಯುವ ಮಲಗುಂಡಿಗಳು ಇವೆಲ್ಲವೂ ನಗರಗಳ ಸಾಮಾನ್ಯ ದೃಶ್ಯಗಳಾಗಿದ್ದು, ವಿಶೇಷವಾಗಿ ಕೆಳಮಧ್ಯಮ ವರ್ಗಗಳು, ವಲಸೆ ಕಾರ್ಮಿಕರು ಹಾಗೂ ಬಡಜನತೆ ವಾಸಿಸುವ ಪ್ರದೇಶಗಳು ಮಾಲಿನ್ಯ ಕೇಂದ್ರಗಳಾಗಿ ಪರಿಣಮಿಸುತ್ತವೆ. ನಗರ ಪ್ರದೇಶಗಳಲ್ಲಿ ಸಂಗ್ರಹಿಸಲಾಗುವ ತ್ಯಾಜ್ಯದ ಶೇಕಡಾ 28ರಷ್ಟನ್ನು ಮಾತ್ರ ಸಂಸ್ಕರಿಸಲಾಗುತ್ತಿದೆ. ಉಳಿದಂತೆ ಈ ತ್ಯಾಜ್ಯವು ಕೆರೆ, ತೊರೆ, ನದಿ ಮತ್ತು ಸಮುದ್ರದ ಪಾಲಾಗುತ್ತಿವೆ. ಈ ಅನೈರ್ಮಲ್ಯದ ಪರಿಣಾಮವಾಗಿಯೇ ಹಲವು ರೋಗಗಳೂ ಹರಡುತ್ತಿರುತ್ತವೆ.
ಸುಸ್ಥಿರ ಅಭಿವೃದ್ಧಿ ಮತ್ತು ಸ್ವಚ್ಛತೆ
ಜಾಗತಿಕ ಮಟ್ಟದಲ್ಲಿ ಇಂದು ಅತಿ ಹೆಚ್ಚು ಪ್ರಾಶಸ್ತ್ಯ ಪಡೆಯುತ್ತಿರುವ ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ಸಾರ್ವಜನಿಕ ವಲಯದ ಸುರಕ್ಷಿತ ನೈರ್ಮಲ್ಯವೂ ಪ್ರಧಾನ ಅಂಶವಾಗಿದೆ. ಆದರೆ ಜಾಗತಿಕ ಮಟ್ಟದಲ್ಲೂ ಸಹ ಶೇಕಡಾ 43ರಷ್ಟು ಜನಸಂಖ್ಯೆ ಮಾತ್ರವೇ ಸುರಕ್ಷಿತ ನೈರ್ಮಲ್ಯವನ್ನು ಕಾಣಲು ಸಾಧ್ಯವಾಗುತ್ತಿದೆ. ಜಗತ್ತಿನ ಇತರ ದೇಶಗಳಲ್ಲಿರುವಂತೆಯೇ ಭಾರತದಲ್ಲೂ ಸಹ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳು ಕೇಂದ್ರೀಕೃತವಾಗಿದ್ದು, ಬಂಡವಾಳ ಪ್ರೇರಿತವಾಗಿವೆ. ಹಾಗಾಗಿ ಮೆಟ್ರೋಪಾಲಿಟನ್ ನಗರಗಳು ಮತ್ತು ಇತರ ಬೃಹತ್ ನಗರಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿದೆ. ತತ್ಪರಿಣಾಮವಾಗಿ ಸಣ್ಣ ಪುಟ್ಟ ನಗರಗಳು ತ್ಯಾಜ್ಯ ಸಂಸ್ಕರಣೆಯ ಸೌಕರ್ಯಗಳಿಲ್ಲದೆ, ಉತ್ತಮ ಒಳಚರಂಡಿಗಳೂ ಇಲ್ಲದೆ ಮಾಲಿನ್ಯ ನಿಯಂತ್ರಿಸುವುದರಲ್ಲಿ ವಿಫಲವಾಗುತ್ತಿವೆ. ಈ ದೃಷ್ಟಿಯಿಂದ ನೋಡಿದಾಗ ಭಾರತದಲ್ಲಿ ನಗರ-ಪಟ್ಟಣ ಪ್ರದೇಶಗಳಲ್ಲಿ ತ್ಯಾಜ್ಯ ನಿರ್ವಹಣೆ ಮತ್ತು ಸಂಸ್ಕರಣದ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡುವುದು ಅತ್ಯವಶ್ಯವಾಗಿದೆ.
ಇದನ್ನೂ ಓದಿ: ಬೆಳಗಾವಿ : ಕಿರುಕುಳಕ್ಕೆ ಬೇಸತ್ತು ತಹಶೀಲ್ದಾರ್ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಿಬ್ಬಂದಿ
2024-25ರ ಕೇಂದ್ರ ಬಜೆಟ್ನಲ್ಲಿ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ನಿರ್ವಹಣೆಗಾಗಿ 77,390.68 ಕೋಟಿ ರೂಗಳನ್ನು ನಿಗದಿಪಡಿಸಲಾಗಿದೆ. ಇದು ಕಳೆದ ವರ್ಷದ ಬಜೆಟ್ಗೆ ಹೋಲಿಸಿದರೆ ಕೇವಲ ಶೇಕಡಾ 0.5ರಷ್ಟು ಮಾತ್ರ ಹೆಚ್ಚಾಗಿದೆ. ಇದರ ಪೈಕಿ ಶೇಕಡಾ 90ರಷ್ಟು ಹಣವನ್ನು ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮಕ್ಕೆ ವಿನಿಯೋಗಿಸಲಾಗುತ್ತದೆ. ಸ್ವಚ್ಛ ಭಾರತ ಅಭಿಯಾನದ ನಗರ ಹಾಗೂ ಗ್ರಾಮೀಣ ಕಾರ್ಯಕ್ರಮಗಳಿಗೆ ಕೇಂದ್ರ ಸರ್ಕಾರದ ಅನುದಾನದಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ. AMRUT ಯೋಜನೆ ( Atal Mission for Rejuvenation and Urban Transformation ) ಮತ್ತು ಸ್ಮಾರ್ಟ್ ಸಿಟಿ ಅಭಿಯಾನದ ಬಜೆಟ್ ಅನುದಾನವನ್ನು 13,200 ಕೋಟಿ ರೂಗಳಿಂದ 10,400 ಕೋಟಿ ರೂಗಳಿಗೆ ಇಳಿಸಲಾಗಿದೆ.
ಬಯಲು ಶೌಚ ಮುಕ್ತ ಸಮಾಜದತ್ತ
2014ರವರೆಗೂ ಭಾರತವು ಬಯಲು ಬಹಿರ್ದೆಶೆಯ ಪ್ರಮಾಣದಲ್ಲಿ ವಿಶ್ವದಲ್ಲೇ ಪ್ರಥಮ ಸ್ಥಾನ ಪಡೆದಿತ್ತು. 60 ಕೋಟಿಗೂ ಹೆಚ್ಚು ಜನರು ಬಯಲು ಶೌಚವನ್ನೇ ಅವಲಂಬಿಸುತ್ತಿದ್ದರು. 2019ರಲ್ಲಿ ಸ್ವಚ್ಛ ಭಾರತ ಅಭಿಯಾನ ಆರಂಭವಾದ ಐದು ವರ್ಷಗಳ ನಂತರ ಭಾರತವು ಬಯಲು ಬಹಿರ್ದೆಶೆ ಮುಕ್ತವಾಗಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿತ್ತು. ಆದರೆ ಇಂದಿಗೂ ಸಹ ಸಣ್ಣಪುಟ್ಟ ಪಟ್ಟಣಗಳಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಬಯಲು ಬಹಿರ್ದೆಶೆ ಕಾಣುತ್ತಿರುವುದನ್ನು ಹಲವು ವರದಿಗಳು ಖಚಿತಪಡಿಸಿವೆ. ಕೆಲವು ನಗರ ಪಟ್ಟಣಗಳು ಬಯಲು ಬಹಿರ್ದೆಶೆ ಮುಕ್ತ ಎಂದು ಘೋಷಿಸಿ ಅಧಿಕೃತ ಮಾನ್ಯತೆ ಪಡೆದಿದ್ದರೂ, ಈ ನಗರಗಳಲ್ಲಿ ಹಲವು ಪ್ರದೇಶಗಳಲ್ಲಿ ಮಲ ತ್ಯಾಜ್ಯದ ವಿಲೇವಾರಿ ಪ್ರಕ್ರಿಯೆ ಸೀಮಿತವಾಗಿದ್ದು, ಅಪಾಯಕಾರಿಯಾಗಿ ವಿಲೇವಾರಿಯಾಗುತ್ತಿದೆ. ಒಳಚರಂಡಿ ಮತ್ತು ತ್ಯಾಜ್ಯ ನೀರು ಸಂಗ್ರಹ ಮತ್ತು ಸಂಸ್ಕರಣೆಗೆ ಅಗತ್ಯವಾದ ಮೂಲ ಸೌಕರ್ಯಗಳು ಇಲ್ಲದಿರುವುದು ಮುಖ್ಯವಾಗಿ ಕಂಡುಬರುತ್ತದೆ.
ಸಮರ್ಪಕವಾದ ಯೋಜನೆಗಳಿಲ್ಲದೆ ಬೆಳೆಯುತ್ತಿರುವ ಪಟ್ಟಣ ಮತ್ತು ನಗರಗಳಲ್ಲಿ ನೆಲೆಸಿರುವ ವಲಸೆ ಕಾರ್ಮಿಕರು, ತಳಸಮುದಾಯದ ಜನರು, ಸಾಮಾಜಿಕವಾಗಿ ಅಂಚಿಗೆ ತಳ್ಳಲ್ಪಟ್ಟ ಗುಂಪುಗಳು ತಮ್ಮ ವಸತಿ ನೆಲೆಗಳಲ್ಲಿ ಸಮರ್ಪಕವಾದ ಒಳಚರಂಡಿ ವ್ಯವಸ್ಥೆ ಇಲ್ಲದೆ, ತೆರೆದ ಮೋರಿಗಳನ್ನೇ ಅವಲಂಬಿಸಬೇಕಾಗಿದ್ದು, ಈ ಪ್ರದೇಶಗಳ ಬಹುತೇಕ ಶೌಚಾಲಯಗಳೂ ಸಹ ಮುಚ್ಚಿಹೋಗಿರುವುದು ಕಳಪೆ ನಿರ್ವಹಣೆಯನ್ನು ಎತ್ತಿತೋರಿಸುತ್ತದೆ. ಭಾರತದ ನಗರ ಪ್ರದೇಶಗಳಲ್ಲಿ ಶೇಕಡಾ 65ರಷ್ಟು ಜನರು ಮಲಗುಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ಗಳನ್ನೇ ಅವಲಂಬಿಸಿದ್ದಾರೆ ಎಂದು ವರದಿಗಳು ಹೇಳುತ್ತವೆ. ಐಐಟಿ ಮುಂಬೈ ಸಂಸ್ಥೆಯು ದೇಶಾದ್ಯಂತ ಚಾಲ್ತಿಯಲ್ಲಿರುವ ಮಲಕೆಸರು ಸಂಸ್ಕರಣ ಘಟಕಗಳ (Faecal sludge treatment plants -FSTP) ಅಧ್ಯಯನವನ್ನು ಕೈಗೊಂಡಿದ್ದು ಒಡಿಷಾ ಮತ್ತು ಮಹಾರಾಷ್ಟ್ರ ಹೊರತಾಗಿ ಇತರ ರಾಜ್ಯಗಳಲ್ಲಿ ಹೆಚ್ಚಿನ ಸುಧಾರಣೆಯನ್ನು ಕಾಣಲಾಗುವುದಿಲ್ಲ ಎಂದು ವರದಿ ಮಾಡಿದೆ.
ಸ್ವಚ್ಛತಾ ಕಾರ್ಯದ ಜವಾಬ್ದಾರಿ
ಕೈಯ್ಯಿಂದಲೇ ಮಲಗುಂಡಿಯನ್ನು ಸ್ವಚ್ಛಗೊಳಿಸುವ Manual Scavenging ಭಾರತದಲ್ಲಿ ಅಧಿಕೃತವಾಗಿ ನಿಷಿದ್ಧವಾಗಿದ್ದರೂ ವ್ಯವಸ್ಥೆಯೊಳಗಿನ ಸಮಸ್ಯೆಗಳ ಪರಿಣಾಮವಾಗಿ ಈ ಕಾರ್ಮಿಕರನ್ನೇ ಅವಲಂಬಿಸಬೇಕಾಗಿದೆ. ಮಲಗುಂಡಿಯನ್ನು ಸ್ವಚ್ಛಗೊಳಿಸಲು ಯಂತ್ರಗಳನ್ನು ಕಡ್ಡಾಯವಾಗಿ ಬಳಸಬೇಕೆಂಬ ನಿಯಮ ಇರುವುದಾದರೂ, ಬಹುತೇಕ ಮಲಗುಂಡಿಗಳು ಯಂತ್ರಗಳ ಬಳಕೆಗೆ ಸೂಕ್ತವಾಗಿಲ್ಲ. ಹಾಗಾಗಿ ಸ್ವಚ್ಛತಾ ಕಾರ್ಯಕರ್ತರು ಮತ್ತು ಅನೌಪಚಾರಿಕ ನೈರ್ಮಲ್ಯ ಸೇವಾದಾರರು ಅಗ್ಗದ ಕೂಲಿ ಪಡೆದು ಈ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. 2018 ರಿಂದ 2023ರ ಅವಧಿಯಲ್ಲಿ 400ಕ್ಕೂ ಹೆಚ್ಚು ಸ್ವಚ್ಛತಾ ಕಾರ್ಮಿಕರು ಮಲಗುಂಡಿಯನ್ನು ಸ್ವಚ್ಛಗೊಳಿಸುವ ಸಮಯದಲ್ಲಿ ಮೃತಪಟ್ಟಿದ್ದಾರೆ. ಆದರೂ ಸ್ಥಳೀಯ ಹಾಗೂ ಮೇಲಧಿಕಾರಿಗಳು Manual Scavanging ಇಲ್ಲವೆಂದೇ ಹೇಳುತ್ತಿರುತ್ತಾರೆ.
ಪ್ರಸಕ್ತ ಬಜೆಟ್ನಲ್ಲಿ ಈ ಸ್ವಚ್ಛತಾ ಕಾರ್ಮಿಕರ ಪುನರ್ವಸತಿಗಾಗಿ ಯಾವುದೇ ಹಣವನ್ನು ನಿಗದಿಪಡಿಸಿಲ್ಲ. 2022ರಲ್ಲಿ ಕೇಂದ್ರ ಸರ್ಕಾರ ಘೋಷಿಸಿದ NAMASTE (The National Action for Mechanized Sanitation Ecosystem) ಯೋಜನೆಯಲ್ಲಿ ಈ ಕಾರ್ಮಿಕರ ಪುನರ್ವಸತಿಯೇ ಪ್ರಧಾನ ಗುರಿ ಆಗಿದ್ದರೂ, ಹೆಚ್ಚಿನದಾಗಿ ಈ ಕಾರ್ಮಿಕರಿಗೆ ಹೆಚ್ಚಿನ ಸುರಕ್ಷತೆ ನೀಡುವುದು ಮತ್ತು ಕೌಶಲ ತರಬೇತಿ ನೀಡುವುದಕ್ಕೆ ಪ್ರಾಶಸ್ತ್ಯ ನೀಡಲಾಗುತ್ತಿದೆ. ಈ ಸಮುದಾಯಗಳು ಚಾರಿತ್ರಿಕವಾಗಿ ಅನುಭವಿಸುತ್ತಿರುವ ಅನ್ಯಾಯಗಳನ್ನು ಸರಿಪಡಿಸಲು ಇದು ವಿಫಲವಾಗುತ್ತದೆ. ಜನಕೇಂದ್ರಿತವಾದ ಸಮರ್ಥನೀಯ, ಸುಸ್ಥಿರ, ಸಮಾನ ಆರ್ಥಿಕ ಬೆಳವಣಿಗೆಯ ದೃಷ್ಟಿಯಿಂದ ನಗರ ಪ್ರದೇಶಗಳನ್ನು ವಿಕೇಂದ್ರೀಕೃತ ನಾವೀನ್ಯತೆಗಳಿಗೊಳಪಡಿಸುವುದು ಸರ್ಕಾರದ ಮುಂದಿನ ಪ್ರಮುಖ ಸವಾಲಾಗಿದೆ.
ಮಲಕೆಸರು ಹೆಚ್ಚಿನ ಪ್ರಮಾಣದ ಸಾವಯವ ವಸ್ತುಗಳನ್ನು ಹೊಂದಿರುತ್ತವೆ. ಸಂಪನ್ಮೂಲ ಮರುಬಳಕೆ ಮತ್ತು ಪುನರ್ ವಿನಿಯೋಗದ ಮೂಲಕ ಇದನ್ನು ಜೈವಿಕ ಅನಿಲ (Bio Gas) ಅಥವಾ ಗೊಬ್ಬರವಾಗಿ ಪರಿವರ್ತಿಸುವ ಸಾಧ್ಯತೆಗಳಿವೆ. ಆದರೆ ಈ ಹಾದಿಯಲ್ಲಿ ಹಲವಾರು ಅಡೆತಡೆಗಳು ಎದುರಾಗುತ್ತವೆ. ಬಹುಮುಖ್ಯವಾಗಿ ಅಧಿಕಾರವಲಯದಲ್ಲಿರುವವರು ಮಲಕೆಸರನ್ನು ಸುರಕ್ಷತೆಯಿಂದ ಸಂಗ್ರಹಿಸಿ ವಿಲೇವಾರಿ ಮಾಡುವುದಕ್ಕೆ ಹೆಚ್ಚಿನ ಗಮನ ನೀಡುವುದಿಲ್ಲ. ಮತ್ತೊಂದೆಡೆ ಈ ಕಠಿಣ ಕೆಲಸಗಳನ್ನು ನಿರ್ವಹಿಸುವ ತಳಮಟ್ಟದ , ಅಂಚಿಗೆ ತಳ್ಳಲ್ಪಟ್ಟ, ಸಂಘಟಿತ ಮತ್ತು ಅಸಂಘಟಿತ ನೈರ್ಮಲ್ಯ ಕಾರ್ಮಿಕರ ಬಗ್ಗೆ ಸೂಕ್ತ ಕಾಳಜಿ ವಹಿಸುವುದಿಲ್ಲ. ಈ ವರ್ತನೆಗೆ ಭಾರತದ ಜಾತಿ ವ್ಯವಸ್ಥೆಯ ಮನಸ್ಥಿತಿಯೂ ಒಂದು ಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಈ ಮಾಲಿನ್ಯದಿಂದ ಹರಡಬಹುದಾದ ರೋಗ ರುಜಿನಗಳಿಂದ ಪಾರಾಗಲು, ಜಲಸಂಪನ್ಮೂಲಗಳು ಕಲುಷಿತಗೊಳ್ಳುವುದನ್ನು ತಪ್ಪಿಸಲು ಹಾಗೂ ನಗರ ಪ್ರದೇಶಗಳಲ್ಲಿರುವ ಕಡು ಬಡವರು, ವಿಶೇಷವಾಗಿ ದುರ್ಬಲ ವರ್ಗದ ಮಹಿಳೆಯರು, ತಳಮಟ್ಟದ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರು, ಮತ್ತಷ್ಟು ಅಂಚಿಗೆ ನೂಕಲ್ಪಡುವುದನ್ನು ತಪ್ಪಿಸಲು ಸ್ಥಳೀಯ ನಗರಾಡಳಿತಗಳು, ಪುರಸಭೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪರಿಹಾರೋಪಾಯ ಮಾರ್ಗಗಳನ್ನು ರೂಪಿಸಬೇಕಿದೆ. ಸಮಸ್ಯೆಗಳನ್ನು ವ್ಯವಸ್ಥಿತವಾಗಿ ಪರಿಹರಿಸುವ ನಿಟ್ಟಿನಲ್ಲಿ ದೀರ್ಘಾವಧಿಯ ಯೋಜನೆ ಮತ್ತು ಸೂಕ್ತ ಹಣಕಾಸು ಪೂರೈಕೆ ಮಾಡುವುದು ಅತಿ ಮುಖ್ಯ ಹೆಜ್ಜೆಯಾಗುತ್ತದೆ. ಕೈಗಳಿಂದಲೇ ಮಲಗುಂಡಿಗಳನ್ನು ಸ್ವಚ್ಛಗೊಳಿಸುವ ಅಗೋಚರ ಕಾರ್ಮಿಕರ ಬಗ್ಗೆ ಪಾರದರ್ಶಕತೆಯಿಂದ ಮಾಹಿತಿ ದತ್ತಾಂಶವನ್ನು ಸಂಗ್ರಹಿಸಿ ಸಾರ್ವಜನಿಕರ ನಡುವೆ ಮಂಡಿಸಬೇಕಿದೆ. ತನ್ಮೂಲಕ ಸಾಂಸ್ಥಿಕ ನೆಲೆಗಳಲ್ಲಿ, ಆಡಳಿತಾತ್ಮಕವಾಗಿ ಸಮುದಾಯಗಳನ್ನು ಒಳಗೊಳ್ಳುವ ರೀತಿಯಲ್ಲಿ ದೀರ್ಘಾವಧಿ ಕ್ರಿಯಾ ಯೋಜನೆಗಳನ್ನು ಹಮ್ಮಿಕೊಳ್ಳಬೇಕಿದೆ.
ಶೌಚಾಲಯ ನಿರ್ವಹಣೆ ಆಡಳಿತ ವೈಫಲ್ಯ
ಸ್ವಚ್ಛ ಭಾರತ ಅಭಿಯಾನದ ಫಲವಾಗಿ ದೇಶದ ಕುಗ್ರಾಮಗಳಲ್ಲೂ ಶೌಚಾಲಯವನ್ನು ಬಳಸುವ ಒಂದು ಜೀವನ ಪದ್ಧತಿಗೆ ಉತ್ತೇಜನ ದೊರೆತಿರುವುದು ವಾಸ್ತವ. ಆದರೆ ಸರ್ಕಾರದ ದೃಷ್ಟಿಯಲ್ಲಿ ಶೌಚಾಲಯ ನಿರ್ಮಾಣವಷ್ಟೇ ಪ್ರಧಾನವಾಗುತ್ತದೆ, ಅಧಿಕೃತ ದತ್ತಾಂಶಗಳಿಗೆ ಅದನ್ನೆ ಬಳಸಲಾಗುತ್ತದೆ, ಆದರೆ ವಾಸ್ತವವಾಗಿ ಶೌಚಾಲಯ ಬಳಕೆ ಯಾವ ಪ್ರಮಾಣದಲ್ಲಿದೆ ಎಂಬ ಮಾಹಿತಿಯನ್ನು ಎಲ್ಲಿಯೂ ಸಂಗ್ರಹಿಸಲಾಗುತ್ತಿಲ್ಲ. ಅನೇಕ ಗ್ರಾಮಗಳಲ್ಲಿ ಬಯಲು ಬಹಿರ್ದೆಶೆಗೆ ಒಂದು ಚಾರಿತ್ರಿಕ ಪರಂಪರೆ ಇದ್ದು ಶೌಚಾಲಯ ಇದ್ದರೂ ಬಳಸದಿರುವ ಸಾಧ್ಯತೆಗಳಿವೆ. ಇನ್ನು ಕೆಲವೆಡೆ ಶೌಚಾಲಯ ಬಳಸಲು ಅಗತ್ಯವಾದ ನೀರಿನ ಸಂಪರ್ಕ ಇಲ್ಲದಿರುವುದು, ಶೌಚಾಲಯಗಳನ್ನು ಸ್ವಚ್ಛಗೊಳಿಸು ಆಡಳಿತ ಕ್ರಮಗಳು ಇಲ್ಲದಿರುವುದು ಸಹ ಜನರನ್ನು ಬಯಲು ಬಹಿರ್ದೆಶೆಯೆಡೆಗೆ ಕರೆದೊಯ್ಯುತ್ತದೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) 2019-21ರ ಪ್ರಕಾರ ಭಾರತದ ಶೇಕಡಾ 19.4ರಷ್ಟು ಕುಟುಂಬಗಳು ಶೌಚಾಲಯದಿಂದ ವಂಚಿತವಾಗಿವೆ. ಇದರಲ್ಲಿ ನಗರ ಪ್ರದೇಶಗಳೂ ಸೇರಿವೆ. ಗ್ರಾಮೀಣ ಪ್ರದೇಶದ ಶೇಕಡಅ 63.6ರಷ್ಟು, ನಗರ ಪ್ರದೇಶಗಳ ಶೇಕಡಾ 80.7ರಷ್ಟು ಕುಟುಂಬಗಳು ಸುಧಾರಿತ ಶೌಚಾಲಯಗಳನ್ನು ಹೊಂದಿವೆ. ಬಯಲು ಬಹಿರ್ದೆಶೆಗೆ ಹೋಗುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು 2015-16ರಲ್ಲಿ ಶೇಕಡಾ 39 ರಷ್ಟಿದ್ದುದು 2019-21ರ ವೇಳೆಗೆ ಶೇಕಡಾ 19.4ರಷ್ಟಾಗಿದೆ. ಇದು ಉತ್ತಮ ಸಾಧನೆಯೇ ಎನ್ನಬಹುದಾದರೂ, ಸಾರ್ವಜನಿಕರ ಬಳಕೆಗಾಗಿ ಸುಧಾರಿತ ಶೌಚಾಲಯಗಳನ್ನು ಒದಗಿಸುವಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳು, ಸರ್ಕಾರಗಳು ವಿಫಲವಾಗಿರುವುದು ಢಾಳಾಗಿ ಕಾಣುತ್ತದೆ. ಇದರ ಒಂದು ಆಯಾಮವನ್ನು ನಗರೀಕರಣದ ಪ್ರಕ್ರಿಯೆಯ ನಡುವೆಯೇ ಗುರುತಿಸಬಹುದು.
ಇದನ್ನೂ ಓದಿ: ಮನುಷ್ಯನಿಗೆ ಸಮಾನತೆಯ ಬದುಕು ಅಗತ್ಯ: ಡಾ. ಪ್ರಕಾಶ್ ಕೆ
ಮೈಸೂರನ್ನೂ ಒಳಗೊಂಡಂತೆ ಬೆಳೆಯುತ್ತಿರುವ ನಗರಗಳಲ್ಲಿ, ಸಣ್ಣ ಪುಟ್ಟ ಪಟ್ಟಣಗಳಲ್ಲೂ ಸಹ ಕಟ್ಟಡ ನಿರ್ಮಾಣ ಕಾರ್ಯಗಳು ಹೆಚ್ಚಾಗುತ್ತಲೇ ಇರುವುದು ಮತ್ತು ಮನೆಗಳ ನಿರ್ಮಾಣವೂ ಹೆಚ್ಚಾಗುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ. ಈ ಕಟ್ಟಡ ನಿರ್ಮಾಣದ ಹಂತದಲ್ಲಿ ಅದರ ರಕ್ಷಣೆ ಮತ್ತು ಮೇಲ್ಚಿಚಾರಣೆಗಾಗಿ ಒಂದು ಕುಟುಂಬವನ್ನು ತಂದಿರಿಸಿಲಾಗುತ್ತದೆ. ಆ ಕುಟುಂಬಕ್ಕೆ ಒಂದು ಅಥವಾ ಒಂದೂವರೆ ಚದರದ (10X10 ಅಥವಾ 10 X15) ಗೂಡುಗಳನ್ನು ತಾತ್ಕಾಲಿಕವಾಗಿ ಕಟ್ಟಿಕೊಡಲಾಗುತ್ತದೆ. ಇಂತಹ ಸಾವಿರಾರು ಗೂಡುಗಳಲ್ಲಿ ವಾಸಿಸುವ ಸಂಸಾರಗಳಿಗೆ ಸಮೀಪದಲ್ಲೆಲ್ಲೂ ಸಾರ್ವಜನಿಕ ಶೌಚಾಲಯಗಳು ಲಭ್ಯವಿರುವುದಿಲ್ಲ. ಈ ಕುಟುಂಬಗಳ ಸದಸ್ಯರು ತಮ್ಮ ನಿತ್ಯಕರ್ಮಗಳಿಗಾಗಿ ಯಾರನ್ನು ಆಶ್ರಯಿಸಬೇಕು ? ಇಂತಹ ಸಾವಿರಾರು ಕುಟುಂಬಗಳ ನಗರಾಡಳಿತ ಸಂಸ್ಥೆಗಳು ಸೂಕ್ಷ್ಮವಾಗಿ ಗಮನಿಸಬೇಕಲ್ಲವೇ ?
ಇದರ ಬಗ್ಗೆ ಕಿಂಚಿತ್ತೂ ಆಲೋಚನೆ ಮಾಡದೆಯೇ ಸ್ವಚ್ಛ ನಗರಿಯ ಪ್ರಶಸ್ತಿ ಪಡೆಯಲು ಹವಣಿಸುವ ನಗರಾಭಿವೃದ್ಧಿ ಪ್ರಾಧಿಕಾರಗಳು, ಪುರಸಭೆ-ನಗರಸಭೆ-ನಗರಪಾಲಿಕೆಗಳು ಸ್ವಚ್ಛ ಭಾರತ ಅಭಿಯಾನದ ಅಥವಾ ಬಯಲು ಬಹಿರ್ದೆಶೆ ಮುಕ್ತ ಅಭಿಯಾನದ ರಾಯಭಾರಿಗಳಾಗಲು ಹೇಗೆ ಸಾಧ್ಯ ? ಸಾರ್ವಜನಿಕರ ಎಸ್ಎಮ್ಎಸ್ ಮೆಸೇಜ್ ಮೂಲಕ ಪಡೆಯುವ ಈ ಪ್ರಶಸ್ತಿಗಳ ಔಚಿತ್ಯವನ್ನು ಇಲ್ಲಿ ಪ್ರಶ್ನಿಸಲೇಬೇಕಾಗುತ್ತದೆ. ಭಾರತದ ಶ್ರೇಣೀಕೃತ ಜಾತಿ ಸಮಾಜದಲ್ಲಿ ಕಸ-ತ್ಯಾಜ್ಯ-ಮಲ ಇವೆಲ್ಲವೂ ಸಹ ಶ್ರೇಣೀಕರಣಕ್ಕೊಳಗಾಗಿದ್ದು, ಇದನ್ನು ಹೊರಗೆಸೆಯುವುದನ್ನು ಮಾತ್ರ ತಮ್ಮ ಕೆಲಸ ಎಂದು ಭಾವಿಸುವ ವರ್ಗಗಳು, ಇದನ್ನು ಎತ್ತಿಹಾಕುವ ಜವಾಬ್ದಾರಿಯನ್ನು ಮತ್ತೊಂದು ವರ್ಗದ ಮೇಲೆ ಹೊರಿಸುತ್ತವೆ. ಇದೇ ಚಾರಿತ್ರಿಕ ಲಕ್ಷಣ ಶೌಚಾಲಯ ವ್ಯವಸ್ಥೆಗೂ ವಿಸ್ತರಿಸುತ್ತದೆ.
ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ, ʼಸ್ವಚ್ಛ ಭಾರತ ʼ ಅಥವಾ ʼಬಯಲು ಬಹಿರ್ದೆಶೆ ಮುಕ್ತʼ ಭಾರತದ ಅಭಿಯಾನವನ್ನು ಒಂದು ಸಾಮಾಜಿಕ ಜವಾಬ್ದಾರಿಯ ಜನಾಂದೋಲನದಂತೆ ರೂಪಿಸಬೇಕಿದೆ. ಸಾಂಸ್ಕೃತಿಕ ಭಿನ್ನ ಭೇದಗಳನ್ನು ತೊಡೆದುಹಾಕುವ ಮೂಲಕ ತ್ಯಾಜ್ಯ ವಿಲೇವಾರಿ ಮಾಡುವುದನ್ನು ಸಾರ್ವಜನಿಕ ಆದ್ಯತೆಯಾಗಿ ಮಾಡಬೇಕಿದೆ. ಇದು ಸಾಧ್ಯವಾಗಬೇಕಾದರೆ, ಈ ತ್ಯಾಜ್ಯಗಳ ಮೂಲಕ ಸೃಷ್ಟಿಯಾಗುವ ಪರಿಸರ ಮಾಲಿನ್ಯ ಮತ್ತು ಅದರ ವಿನಾಶಕಾರಿ ಪರಿಣಾಮಗಳ ಬಗ್ಗೆ ಜನಜಾಗೃತಿ ಅತ್ಯವಶ್ಯವಾಗುತ್ತದೆ. ಸ್ಥಳೀಯ ಆಡಳಿತ ಸಂಸ್ಥೆಗಳು ಈ ನಿಟ್ಟಿನಲ್ಲಿ ನಾಗರಿಕ ಸಮಾಜದ ಸಂಘಟನೆಗಳನ್ನು ಒಳಗೊಳ್ಳುವ ಮೂಲಕ ಕಾರ್ಯೋನ್ಮುಖವಾಗಬೇಕಿದೆ. ಯಾವುದೇ ರೀತಿಯ ತ್ಯಾಜ್ಯಗಳ ವಿಲೇವಾರಿ, ಸಂಸ್ಕರಣ ಮತ್ತು ನಿರ್ವಹಣೆ ಒಂದು ಸಾಮಾಜಿಕ ಜವಾಬ್ದಾರಿಯಾದಾಗ ಮಾತ್ರವೇ ನಾಗರಿಕ ಜವಾಬ್ದಾರಿಯೂ ಅರಿವಾಗಲು ಸಾಧ್ಯ. ಈ ನಿಟ್ಟಿನಲ್ಲಿ ಸ್ವಚ್ಛಭಾರತ ಅಭಿಯಾನ ಸಾಗಬೇಕಿದೆ.
( ಈ ಲೇಖನದ ಕೆಲವು ಮಾಹಿತಿ-ದತ್ತಾಂಶ-ಅಂಕಿಅಂಶಗಳಿಗೆ ಆಧಾರ : ಇಂಡಿಯನ್ ಎಕ್ಸ್ಪ್ರೆಸ್ ವರದಿ : Swachh Bharat must focus on the invisible sanitation worker- ಲೈಲಾ ಮೆಹ್ತಾ ಮತ್ತು ಹರಿಪ್ರಸಾದ್ ವಿ.ಎಮ್. Lyla Mehta and Hariprasad V M – 2 ನವಂಬರ್ 2024 )
ಇದನ್ನೂ ನೋಡಿ: ಮೋದಿಯವರ ನೀತಿ : ಹಣಕಾಸು ಕಾಯ್ದೆಗಳ ದುರ್ಬಳಕೆ, ಸ್ವತಂತ್ರ ಮಾಧ್ಯಮಗಳ ಮೇಲೆ ದಬ್ಬಾಳಿಕೆ- WAN -IFRA, IAPA ವರದಿ