ಹಣಕಾಸು ಬಂಡವಾಳದ ಅಗತ್ಯಗಳಿಗಾಗಿ ಹೊಸ ಶಿಕ್ಷಣ ನೀತಿ

ಪ್ರೊ. ಪ್ರಭಾತ್ ಪಟ್ನಾಯಕ್

ನವ-ಉದಾರವಾದವನ್ನು ಅನುಸರಿಸುವ ದೇಶಗಳಲ್ಲಿ ಕಲಿಸುವ ವಿಷಯಗಳಿಗೆ ಅನುಗುಣವಾಗಿ ಭಾರತದಲ್ಲಿ ಬೋಧಿಸುವ ಪಠ್ಯಕ್ರಮವನ್ನು ಮತ್ತು ಕೋರ್ಸ್‌ಗಳ ಹುರುಳನ್ನು ಪರಿವರ್ತಿಸುವುದು, ಮತ್ತು ಅದರ ಜೊತೆಗೆ ಭಾರತಕ್ಕೆ ನಿರ್ದಿಷ್ಟವಾದ ಹಿಂದುತ್ವ ಸಿದ್ಧಾಂತದ ತುಸು ಬೆರಕೆಯೊಂದಿಗೆ ಅದನ್ನು ಭಾರತದಲ್ಲಿ ಅಳವಡಿಸಿಕೊಳ್ಳುವುದು, ಮೋದಿ ಸರ್ಕಾರದ ಕಾರ್ಯಸೂಚಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಇದು, ಶಿಕ್ಷಣ ಕ್ಷೇತ್ರದಲ್ಲಿ, ಪ್ರಸ್ತುತ ಭಾರತದ ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿರುವ ಕಾರ್ಪೊರೇಟ್-ಹಿಂದುತ್ವ ಮೈತ್ರಿಕೂಟದ ಪ್ರತಿರೂಪವೇ.

ದೇಶವು ಸ್ವತಂತ್ರವಾದ ನಂತರ ಶಿಕ್ಷಣವು ವಿದ್ಯಾರ್ಥಿಗಳಿಗೆ ಜ್ಞಾನ ಮತ್ತು ಕೌಶಲ್ಯಗಳನ್ನು ಕಲಿಸುವುದನ್ನಷ್ಟೇ ಅಲ್ಲ, “ರಾಷ್ಟ್ರ ನಿರ್ಮಾಣ”ಕ್ಕಾಗಿ ಕೊಡುಗೆ ನೀಡುವವರನ್ನು ತರಬೇತುಗೊಳಿಸುವ ಉದ್ದೇಶವನ್ನೂ ಹೊಂದಿತ್ತು. ಭಾರತ “ರಾಷ್ಟ್ರ”ದ ಪರಿಕಲ್ಪನೆಯು ವಸಾಹತುಶಾಹಿ ವಿರೋಧಿ ಹೋರಾಟದಲ್ಲಿ ಬಳಕೆಗೆ ಬಂತಾದರೂ ಅದಕ್ಕೂ ಬಲು ಹಿಂದೆಯೇ ಅದರ ಬೀಜಾಂಕುರವಾಗಿತ್ತು ಎಂಬ ಅಂಶವನ್ನು ಅಮೀರ್ ಖುಸ್ರೌ (1253-1325) ಅವರ ಬರಹಗಳಲ್ಲಿ ಗಮನಿಸಬಹುದು. “ರಾಷ್ಟ್ರ ನಿರ್ಮಾಣ” ದಲ್ಲಿ ಶಿಕ್ಷಣವು ಒಂದು ಮಹತ್ವಪೂರ್ಣ ಪಾತ್ರ ವಹಿಸುವುದರಿಂದ, ವಿದ್ಯಾರ್ಥಿಗಳಿಗೆ ಸ್ವಾತಂತ್ರ‍್ಯದ ಹೋರಾಟದ ಬಗ್ಗೆ ಅದರಲ್ಲೂ ಮುಖ್ಯವಾಗಿ ಅದರ ವಸಾಹತುಶಾಹಿ ವಿರೋಧಿ ಆಯಾಮದ ಬಗ್ಗೆ ಅರಿವು ಮೂಡಿಸುವುದು ಅವಶ್ಯವಾಗುತ್ತದೆ. ಆದ್ದರಿಂದ, ವಸಾಹತುಶಾಹಿ ಆಳ್ವಿಕೆಯ ಭಾರತದ ಸ್ಥಿತಿ-ಗತಿಗಳ ಬಗ್ಗೆ ಮತ್ತು ವಸಾಹತುಶಾಹಿಯು ಜನರನ್ನು ಶೋಷಣೆಗೆ ಒಳಪಡಿಸಿದ ಸಂಗತಿಗಳನ್ನು ಮಾನವಿಕ ಮತ್ತು ಸಮಾಜ ವಿಜ್ಞಾನಗಳ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ನಿಸರ್ಗ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸೇರಿದಂತೆ ಎಲ್ಲಾ ಶಾಖೆಯ ವಿದ್ಯಾರ್ಥಿಗಳಿಗೂ-ಅವರು ಆಂಟೋನಿಯೊ ಗ್ರಾಮ್ಸಿ ಬಣ್ಣಿಸಿದ “ಸಾವಯವ ಚಿಂತಕರು”(Organic Intellectual)ಗಳಾಗಿ  ಹೊರಹೊಮ್ಮಬೇಕು ಎಂದಾದರೆ- ಹೇಳಿಕೊಡಬೇಕಾಗುತ್ತದೆ.

ಮುಂದುವರೆದ ದೇಶಗಳ ಅನುಕರಣೆ

ಆದ್ದರಿಂದ, “ಸಾವಯವ ಚಿಂತಕರು”ಗಳನ್ನು ತರಬೇತುಗೊಳಿಸುವಾಗ, ಪಠ್ಯಕ್ರಮ ಮತ್ತು ಬೋಧನಾ ವಿಷಯಗಳು, ಪ್ರಾಥಮಿಕ ಹಂತದಿಂದ ಹಿಡಿದು ಉನ್ನತ ಶಿಕ್ಷಣದವರೆಗೂ, ಮುಂದುವರಿದ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ವಿಭಿನ್ನವಾಗಿರಬೇಕಾಗುತ್ತದೆ. ಉದಾಹರಣೆಗೆ, ವಸಾಹತುಶಾಹಿಯು ವಸಾಹತುಗಳ ಜನತೆಯ ಬದುಕನ್ನು ಕಸಿಯಿತು ಎಂಬುದನ್ನು ಮುಂದುವರೆದ ದೇಶಗಳ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಗೊತ್ತಾಗದಂತೆ ಅವರು ತಮ್ಮ ಪಠ್ಯಕ್ರಮ ಮತ್ತು ಬೋಧನಾ ವಿಷಯಗಳನ್ನು ರೂಪಿಸುತ್ತಾರೆ. ನಿಸರ್ಗ ವಿಜ್ಞಾನ ಕೋರ್ಸ್‌ಗಳಲ್ಲಿಯೂ ಸಹ, ಭಾರತದಂತಹ ದೇಶಗಳು ತಮ್ಮದೇ ಪಠ್ಯಕ್ರಮ ಮತ್ತು ಕೋರ್ಸ್-ವಿಷಯಗಳನ್ನು ತಾವೇ ರೂಪಿಸಿಕೊಳ್ಳಬೇಕು ಮತ್ತು ಭಾರತವು ಮುಂದುವರೆದ ದೇಶಗಳನ್ನು ಅನುಕರಿಸಬಾರದು ಎಂದು ಹೆಸರಾಂತ ಬ್ರಿಟಿಷ್ ವಿಜ್ಞಾನಿ ಜೆ.ಡಿ. ಬರ್ನಾಲ್ ಅಭಿಪ್ರಾಯಪಟ್ಟಿದ್ದರು. ಉದಾಹರಣೆಗೆ, ಭಾರತದ ಜನರು ಬಳಲುವ ರೋಗ-ಖಾಯಿಲೆಗಳ ಸ್ವರೂಪವನ್ನು ಗಮದಲ್ಲಿಟ್ಟುಕೊಂಡು, ಭಾರತದ ವೈದ್ಯಕೀಯ ಶಿಕ್ಷಣವು ಬ್ರಿಟನ್ನಲ್ಲಿ ಇರುವುದಕ್ಕಿಂತ ಭಿನ್ನವಾದ ಒತ್ತು ಕೊಡಬೇಕಾಗುತ್ತದೆ. ಜೊತೆಗೆ, ಭಾರತದ ವೈದ್ಯ ವಿದ್ಯಾರ್ಥಿಗಳಿಗೆ ವಸಾಹತುಶಾಹಿಯ ಬಗ್ಗೆ ಮತ್ತು ವಸಾಹತುಶಾಹಿ-ವಿರೋಧಿ ಹೋರಾಟದ ಬಗ್ಗೆಯೂ ಹೇಳಿಕೊಡಬೇಕಾಗುತ್ತದೆ.

ಭಾರತದಂತಹ ದೇಶಗಳಲ್ಲಿ ಶಿಕ್ಷಣವು ತನ್ನ ನಿಜ ಉದ್ದೇಶವನ್ನು ಸಾಧಿಸಬೇಕು ಎಂದಾದರೆ, ಅದು ಮುಂದುವರೆದ ದೇಶಗಳಿಗಿಂತ ಭಿನ್ನವಾದ ಪಠ್ಯಕ್ರಮ ಮತ್ತು ಕೋರ್ಸ್‌ಗಳನ್ನು ರೂಪಿಸಿಕೊಳ್ಳಬೇಕು. ಅಂದರೆ, ಭೌತಶಾಸ್ತ್ರ ಅಥವಾ ರಸಾಯನಶಾಸ್ತ್ರ ಅಥವಾ ಗಣಿತದ ಮೂಲ ತತ್ವ-ಪ್ರತಿಪಾದನೆಗಳನ್ನು ಭಾರತದ ವಿದ್ಯಾರ್ಥಿಗಳಿಗೆ ಕಲಿಸಬಾರದು ಎಂದಲ್ಲ. ಆದರೆ, ಈ ವಿಷಯಗಳನ್ನು ನಮ್ಮ ಪಠ್ಯಕ್ರಮದೊಳಗೆ ಅಳವಡಿಸಿಕೊಳ್ಳುವಾಗ ಅದು ಮುಂದುವರಿದ ದೇಶಗಳ ನಕಲು ಆಗಬಾರದು. ಈ ದೃಷ್ಟಿಕೋನವನ್ನು ಭಾರತದ ಶೈಕ್ಷಣಿಕ ವಲಯಗಳು ಬಹಳ ಕಾಲದಿಂದಲೂ ಅಂಗೀಕರಿಸಿವೆ.

ಜಾಗತೀಕರಣಗೊಂಡ ಹಣಕಾಸು ಬಂಡವಾಳವು ತಾನು ದುಡಿಸಿಕೊಳ್ಳಬೇಕೆಂದಿರುವ ಸಿಬ್ಬಂದಿಯನ್ನು ತರಬೇತುಗೊಳಿಸುವ ಶಿಕ್ಷಣ ವ್ಯವಸ್ಥೆಯು ಪ್ರಪಂಚದಾದ್ಯಂತ ಏಕರೂಪದಲ್ಲಿರಬೇಕೆಂದು ಬಯಸುತ್ತದೆ. ಅದಕ್ಕಾಗಿ ತನ್ನನ್ನು ಬೆಂಬಲಿಸುವ ಒಂದು ಸಾಮಾಜಿಕ ನೆಲೆಯನ್ನು ರೂಪಿಸಿಕೊಳ್ಳುವ ಆಸಕ್ತಿ ಅದರದ್ದು. ಭಾರತದಂತಹ ದೇಶಗಳಲ್ಲಿ ಹಣಕಾಸು ಬಂಡವಾಳವು ಕಾಣಲು ಬಯಸುವುದು ಇದನ್ನೇ. ಮೋದಿ ಸರ್ಕಾರದ ಹೊಸ ಶಿಕ್ಷಣ ನೀತಿಯು ಮಾಡಲು ಪ್ರಯತ್ನಿಸುತ್ತಿರುವುದು ಕೂಡ ಇದನ್ನೇ.

ಏಕರೂಪೀಕರಣ

ನವ-ಉದಾರವಾದಿ ಜಾಗತೀಕರಣದ ಇಂದಿನ ದಿನಮಾನಗಳಲ್ಲಿ ಶಿಕ್ಷಣ ವಲಯದಲ್ಲಿ ಜರುಗುತ್ತಿರುವ ಘಟನೆಗಳು ಈ ದೃಷ್ಟಿಕೋನಕ್ಕೆ ತದ್ವಿರುದ್ಧವಾಗಿವೆ. ಇಡೀ ವಿಶ್ವವನ್ನೇ ಸವಾರಿಮಾಡುತ್ತಿರುವ ಬಹುರಾಷ್ಟ್ರೀಯ ಸಂಸ್ಥೆಗಳು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸ್ಥಳಾಂತರಿಸಬಹುದಾದ ಸಿಬ್ಬಂದಿಯನ್ನು ಹೊಂದಲು ಬಯಸುತ್ತವೆ. ಸಿಬ್ಬಂದಿಯ ಈ ಚಲನಶೀಲತೆಯಲ್ಲದೆ, ಬಂಡವಾಳವು ಕೂಡ ವಿಶ್ವಾದ್ಯಂತ ಚಲಿಸುವುದರಿಂದಾಗಿ ಎಲ್ಲಾ ಆತಿಥೇಯ ದೇಶಗಳಲ್ಲೂ ಏಕರೂಪದ ಪರಿಸ್ಥಿತಿ ಇರಬೇಕೆಂದು ಜಾಗತೀಕರಣಗೊಂಡ ಹಣಕಾಸು ಬಂಡವಾಳವು ಬಯಸುತ್ತದೆ. ಅಂದರೆ, ಅದು ನೇಮಕ ಮಾಡಿಕೊಳ್ಳುವ ಸಿಬ್ಬಂದಿಯ ಮನೋಭಾವ-ವರ್ತನೆಗಳು ಮತ್ತು ಬೌದ್ಧಿಕ ಸಾಮರ್ಥ್ಯಗಳು ಏಕರೂಪದಲ್ಲಿರಬೇಕೆಂದು ಬಯಸುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಮಧ್ಯಮ ವರ್ಗದಿಂದ ತನ್ನ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಜಾಗತೀಕರಣಗೊಂಡ ಬಂಡವಾಳವು ಎಲ್ಲ ದೇಶಗಳ ಈ ವಿದ್ಯಾವಂತ ಮಧ್ಯಮ ವರ್ಗವು  ಒಂದೇ ರೀತಿಯಲ್ಲಿರಬೇಕೆಂದು ಮತ್ತು ಅವರ ನೋಟಗಳೂ ಮುಂದುವರೆದ ದೇಶಗಳಲ್ಲಿ ಕಾಣಬರುವ ನೋಟಗಳಿಗೆ ಸಾಧ್ಯವಾದಷ್ಟು ಮಟ್ಟಿಗೆ ನಿಕಟವಾಗಿ ಇರಬೇಕೆಂದು ಬಯಸುತ್ತದೆ.

ಆದ್ದರಿಂದ, ತಾನು ನೇಮಕ ಮಾಡಿಕೊಳ್ಳುವ ಭಾವೀ ಸಿಬ್ಬಂದಿಯನ್ನು ತರಬೇತುಗೊಳಿಸುವ ಶಿಕ್ಷಣ ವ್ಯವಸ್ಥೆಯು ಪ್ರಪಂಚದಾದ್ಯಂತ ಏಕರೂಪದಲ್ಲಿರಬೇಕೆಂದು ನೋಡಿಕೊಳ್ಳುವ ಮೂಲಕ ತನ್ನನ್ನು ಬೆಂಬಲಿಸುವ ಒಂದು ಸಾಮಾಜಿಕ ನೆಲೆಯನ್ನು ರೂಪಿಸಿಕೊಳ್ಳುವ ಆಸಕ್ತಿಯನ್ನು ಜಾಗತೀಕರಣಗೊಂಡ ಹಣಕಾಸು ಬಂಡವಾಳವು ಅಪಾರವಾಗಿ ಹೊಂದಿದೆ. ಭಾರತದಂತಹ ದೇಶಗಳಲ್ಲಿ ಹಣಕಾಸು ಬಂಡವಾಳವು ಕಾಣಲು ಬಯಸುವುದು ಇದನ್ನೇ. ಮೋದಿ ಸರ್ಕಾರದ ಹೊಸ ಶಿಕ್ಷಣ ನೀತಿಯು ಮಾಡಲು ಪ್ರಯತ್ನಿಸುತ್ತಿರುವುದು ಇದನ್ನೇ.

ಶಿಕ್ಷಣದ ಈ ರೀತಿಯ ಏಕರೂಪೀಕರಣವು, ಹಿಂದುತ್ವವು ಒತ್ತಿ ಒತ್ತಿ ಹೇಳುವ ಪ್ರಾಚೀನ ಭಾರತದ “ಶ್ರೇಷ್ಠ”ತೆಗೆ, ಪುರಾತನ ಭಾರತೀಯ ವಿಜ್ಞಾನ ಮತ್ತು ಗಣಿತದ ಇದೋ ಅಥವಾ ಅದೋ ನಿರ್ದಿಷ್ಟ ಕೌತುಕಗಳ (ಇಸ್ಲಾಮಿನ ಎಲ್ಲಾ ಕೊಡುಗೆಗಳನ್ನು ಹೊರತುಪಡಿಸಿ) ಮತ್ತು ಮಧ್ಯಕಾಲೀನ ಭಾರತದಲ್ಲಿ ಹಿಂದೂಗಳ ಮೇಲೆ ನಡೆಯಿತೆಂದು ಹೇಳಲಾದ ದಬ್ಬಾಳಿಕೆಯ ಕಥನಕ್ಕೆ ಪೂರ್ಣವಾಗಿ ಹೊಂದಿಕೆಯಾಗುತ್ತದೆ. ಏಕೆಂದರೆ, ಅದು ವಸಾಹತುಶಾಹಿ ಕಾಲವನ್ನು ತಾಕುವುದಿಲ್ಲ ಅಥವಾ ವಸಾಹತುಶಾಹಿಯು ಹಿಂದೂ ಮತ್ತು ಮುಸ್ಲಿಮ್ ಇಬ್ಬರನ್ನೂ ಶೋಷಣೆಗೆ ಒಳಪಡಿಸಿದ ಬಗ್ಗೆ ಅದು ಬಾಯಿ ಬಿಡುವುದಿಲ್ಲ. ಆದರೆ, ವಸಾಹತುಶಾಹಿ ಶೋಷಣೆಯು ದೇಶದ ಹಿಂದಿನ ಎಲ್ಲಾ ಶೋಷಣೆಯ ಚಾರಿತ್ರಿಕ ಅನುಭವಗಳಿಗಿಂತ ಸಂಪೂರ್ಣ ಭಿನ್ನವಾಗಿತ್ತು, ಏಕೆಂದರೆ, ಇದು ಸಂಪತ್ತನ್ನು ಭಾರತದಿಂದ ಬರಿದು ಮಾಡಿತು ಮತ್ತು ಭಾರತದ ಕುಶಲಕರ್ಮಿಗಳ ಕೈಕಸುಬನ್ನು ನಾಶಪಡಿಸಿತು. ಇವೆರಡೂ ಒಟ್ಟಾಗಿ ಭಾರತದಲ್ಲಿ ಸಾಮೂಹಿಕ ಬಡತನವನ್ನು ಸೃಷ್ಟಿಸಿದವು.

ನವ-ಉದಾರವಾದವನ್ನು ಅನುಸರಿಸುವ ಕೆಲವು ದೇಶಗಳಲ್ಲಿ ಕಲಿಸುವ ವಿಷಯಗಳಿಗೆ ಅನುಗುಣವಾಗಿ ಭಾರತದಲ್ಲಿ ಬೋಧಿಸುವ ಪಠ್ಯಕ್ರಮವನ್ನು ಮತ್ತು ಕೋರ್ಸ್‌ಗಳ ಹುರುಳನ್ನು ಪರಿವರ್ತಿಸುವುದು, ಮತ್ತು ಅದರ ಜೊತೆಗೆ ಭಾರತಕ್ಕೆ ನಿರ್ದಿಷ್ಟವಾದ ಹಿಂದುತ್ವ ಸಿದ್ಧಾಂತದ ತುಸು ಬೆರಕೆಯೊಂದಿಗೆ ಅದನ್ನು ಭಾರತದಲ್ಲಿ ಅಳವಡಿಸಿಕೊಳ್ಳುವುದು, ಮೋದಿ ಸರ್ಕಾರದ ಕಾರ್ಯಸೂಚಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಇದು, ಶಿಕ್ಷಣ ಕ್ಷೇತ್ರದಲ್ಲಿ, ಪ್ರಸ್ತುತ ಭಾರತದ ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿರುವ ಕಾರ್ಪೊರೇಟ್-ಹಿಂದುತ್ವ ಮೈತ್ರಿಕೂಟದ ಪ್ರತಿರೂಪವೇ. ಜಾಗತೀಕರಣಗೊಂಡ ಬಂಡವಾಳದೊಂದಿಗೆ ಸಂಯೋಜನೆಗೊಂಡ ಕಾರ್ಪೊರೇಟ್ ಘಟಕವು ವಸಾಹತುಶಾಹಿಯ ಬಗ್ಗೆ ಮತ್ತು ವಸಾಹತುಶಾಹಿ ಶೋಷಣೆಯ ಬಗ್ಗೆ ಎಲ್ಲಾ ಉಲ್ಲೇಖಗಳನ್ನು ಅಳಿಸಿಹಾಕುವ ಶಿಕ್ಷಣದ ಏಕರೂಪೀಕರಣದಿಂದ ಸಂತುಷ್ಟಗೊಳ್ಳುತ್ತದೆ ಮತ್ತು ಬಂಡವಾಳಶಾಹಿ ವ್ಯವಸ್ಥೆಯನ್ನು ಸ್ವಲ್ಪ ಹೆಚ್ಚು ಕಡಿಮೆ ಒಂದು ಸ್ವಾವಲಂಬಿ ವ್ಯವಸ್ಥೆಯಾಗಿ ನೋಡುತ್ತದೆ, ಇನ್ನು ಹಿಂದುತ್ವ ಘಟಕವು ಪ್ರಾಚೀನ ಭಾರತದ “ಶ್ರೇಷ್ಠತೆ”ಯ ಬಗ್ಗೆ ಕೊಡುವ ತುಣುಕು ಸಾಂತ್ವನದ ಮನ್ನಣೆಯೊಂದಿಗೆ ಸಂತುಷ್ಟಗೊಳ್ಳುತ್ತದೆ.

“ವಿಶ್ವ ದರ್ಜೆ”ಯ  ಬೆನ್ನಟ್ಟಬೇಕಿಲ್ಲ

ಪಠ್ಯಕ್ರಮ ಮತ್ತು ಕೋರ್ಸ್‌ಗಳ ಏಕರೂಪೀಕರಣವು ಹೆಸರಾಂತ ವಿದೇಶಿ ವಿಶ್ವವಿದ್ಯಾಲಯಗಳು ತಮ್ಮ ಶಾಖೆಗಳನ್ನು ಭಾರತದಲ್ಲಿ ತೆರೆಯಲು ಪ್ರೇರೇಪಿಸುವ ಧಾವಂತದಲ್ಲಿಯೂ ಕಾಣಿಸುತ್ತದೆ. (ಮೋದಿ ಸರ್ಕಾರವೇ ಈ ಧಾವಂತದ ರೂವಾರಿ ಎನ್ನುವಂತಿಲ್ಲ. ಅದರ ಪೂರ್ವ-ತಯಾರಿಯನ್ನು ಯುಪಿಎ-2ರ ಅವಧಿಯಲ್ಲೇ ಮಾಡಲಾಗಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ, ಈ ಎರಡೂ ಪಕ್ಷಗಳು ನವ-ಉದಾರವಾದಿ ನೀತಿಗಳನ್ನು ಅನುಸರಿಸುತ್ತವೆ ಎಂಬುದಕ್ಕೆ ಇದೊಂದು ನಿದರ್ಶನ). ಭಾರತದ ವಿಶ್ವವಿದ್ಯಾಲಯಗಳು “ವಿಶ್ವ-ದರ್ಜೆ”ಗೆ ಏರಲು ಪ್ರೇರೇಪಣೆಯಾಗುತ್ತದೆ ಎಂಬ ವಾದದ ಮೂಲಕ ಇದನ್ನು ಸಮರ್ಥಿಸಲಾಗುತ್ತಿದೆ. ಆದರೆ ಈ ವಾದವೂ ತಪ್ಪೇ. ಮೊದಲನೆಯದಾಗಿ, ಈ “ವಿಶ್ವ-ದರ್ಜೆಯ” ಪರಿಕಲ್ಪನೆಯನ್ನು ಒಪ್ಪಿಕೊಂಡು ಅದನ್ನು ಸಾಕಾರಗೊಳಿಸಲು ನಮ್ಮ ಪಠ್ಯಕ್ರಮ ಮತ್ತು ಕೋರ್ಸ್‌ಗಳನ್ನು ರೂಪಿಸಿಕೊಳ್ಳುವ ಕ್ರಮವು ಮುಂದುವರೆದ ಬಂಡವಾಳಶಾಹಿ (ಮೆಟ್ರೋಪಾಲಿಟನ್) ದೇಶಗಳ ವಿಶ್ವವಿದ್ಯಾಲಯಗಳ ಆಧಿಪತ್ಯವನ್ನು ಒಪ್ಪಿಕೊಂಡಂತಾಗುತ್ತದೆ. ಏಕೆಂದರೆ, “ವಿಶ್ವದರ್ಜೆ”ಯನ್ನು ನಿರ್ಧರಿಸುವ ಮಾನದಂಡಗಳನ್ನು ಈ ದೇಶಗಳೇ ರೂಪಿಸುತ್ತವೆ. ವಿಶ್ವ-ದರ್ಜೆಯ ಸ್ಥಾನಮಾನಗಳನ್ನು ಉಲ್ಲೇಖಿಸುವ ಮತ್ತು ಅದರ ಬಗ್ಗೆ ಟಿಪ್ಪಣಿ ಮಾಡುವ ಪತ್ರಿಕೆಗಳೂ ಸಹ ಅಲ್ಲಿಯವೇ. ಅವು ವಸಾಹತುಶಾಹಿ ಶೋಷಣೆಯ ಯಾವುದೇ ಉಲ್ಲೇಖಗಳನ್ನು ದೂರವಿಡುತ್ತವೆ. ಹಾಗಾಗಿ, ಅವರು ಹೊಲಿದ ಚಪ್ಪಲಿಯ ಅಳತೆಗೆ ನಮ್ಮ ಕಾಲನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ, ನಮ್ಮ ವಿಶ್ವವಿದ್ಯಾಲಯಗಳು “ವಿಶ್ವ-ದರ್ಜೆ”ಯ ಪಟ್ಟವನ್ನು ಬೆನ್ನಟ್ಟುವ ಬದಲು “ರಾಷ್ಟ್ರ ನಿರ್ಮಾಣ”ದ ಅಗತ್ಯಕ್ಕೆ ಅನುಗುಣವಾಗಿ ನಮ್ಮ ವಿದ್ಯಾರ್ಥಿಗಳನ್ನು ತರಬೇತುಗೊಳಿಸುವ ಉದ್ದೇಶವನ್ನು ಹೊಂದಿರಬೇಕು.

ಅನುಕರಣೆ ಮತ್ತು ಗುಣಮಟ್ಟ

ನಮ್ಮ ವಿಶ್ವವಿದ್ಯಾಲಯಗಳು “ವಿಶ್ವ-ದರ್ಜೆ”ಯ ಪಟ್ಟವನ್ನು ಬೆನ್ನಟ್ಟುವ ಅವಶ್ಯಕತೆ ಇಲ್ಲ ಎಂದಾಗ, ನಮ್ಮ ಉನ್ನತ ಕಲಿಕೆಯ ಬಹುತೇಕ ಸಂಸ್ಥೆಗಳ ಗುಣಮಟ್ಟವು ಕುಸಿದಿರುವುದರ ಬಗ್ಗೆ ಕಣ್ಣು ಮುಚ್ಚಿಕೊಳ್ಳಬೇಕು ಎಂದಲ್ಲ. ನಮ್ಮ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ನಮ್ಮದೇ ಮಾನದಂಡಗಳ ಮೂಲಕ ಅಳೆಯಬೇಕು. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗಳು ಆಗಬೇಕು, ನಿಜ. ಆದರೆ, ಈ ಸುಧಾರಣೆಗಳು “ರಾಷ್ಟ್ರ ನಿರ್ಮಾಣ”ದ ಉದ್ದೇಶವನ್ನು ಈಡೇರಿಸಲು ಅನುವಾಗುವ ದಿಕ್ಕಿನಲ್ಲಿರಬೇಕು.

ಎರಡನೆಯದಾಗಿ, ಹೆಸರಾಂತ ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯಗಳನ್ನು ಅನುಕರಿಸುವ ಕ್ರಮವು ಗುಣಮಟ್ಟವನ್ನು ಸಂಪಾದಿಸುವ ಮಾರ್ಗವೇ ಅಲ್ಲ. ಹಾರ್ವರ್ಡ್, ಆಕ್ಸ್‌ಫರ್ಡ್ ಮತ್ತು ಕೇಂಬ್ರಿಜ್ ಮುಂತಾದ ಹೆಸರಾಂತ ವಿಶ್ವವಿದ್ಯಾಲಯಗಳನ್ನು ಅನುಕರಿಸಿದಾಗ ನಮ್ಮ ಸಂಸ್ಥೆಗಳು ಶಾಶ್ವತವಾಗಿ ಸಾಧಾರಣ ಮಟ್ಟದಲ್ಲೇ-ಆರಕ್ಕೆ ಏರದ ಮೂರಕ್ಕೆ ಇಳಿಯದ ಮಟ್ಟದಲ್ಲೇ-ಉಳಿಯುತ್ತವೆ. ಅದೂ ಅಲ್ಲದೆ, ಈ ಪ್ರಕ್ರಿಯೆಯು ನಮ್ಮ ಇಡೀ ಶಿಕ್ಷಣ ವ್ಯವಸ್ಥೆಯನ್ನು ದುರವಸ್ಥೆಗೆ ತಳ್ಳುತ್ತದೆ. ಬೋಧಕ ವರ್ಗ ಮತ್ತು ಇತರ ಮೂಲಸೌಕರ್ಯಗಳನ್ನು ಹೊಂದಿಸಿಕೊಳ್ಳಲಾಗದ ಶಿಕ್ಷಣ ಸಂಸ್ಥೆಗಳು, ಸಾಮಾನ್ಯವಾಗಿ ಸಾರ್ವಜನಿಕ ಸಂಸ್ಥೆಗಳೇ ಆಗಿರುತ್ತವೆ. ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯಗಳೇ ಒಂದು ಮಾದರಿ ಎನ್ನುವ ವಾತಾವರಣದಲ್ಲಿ, ಅನ್ನ-ಬಟ್ಟೆ ಸಂಪಾದಿಸುವ ಚಾಕರಿಯ ಶಿಕ್ಷಣವನ್ನು ಒದಗಿಸುವ ಶಿಕ್ಷಣ-ಶಿಕ್ಷಣಸಂಸ್ಥೆಗಳು ಅದನ್ನೂ ಒದಗಿಸಲಾಗದ ಕೀಳರಿಮೆಯನ್ನು ಬೆಳಸಿಕೊಳ್ಳುತ್ತವೆ. ಮತ್ತೊಂದೆಡೆ, ಉತ್ತಮ ಬೋಧಕರನ್ನು ಸೆಳೆದುಕೊಳ್ಳುವ ಸಾಮರ್ಥ್ಯವುಳ್ಳ ಮತ್ತು ವಿದೇಶಿ ವಿಶ್ವವಿದ್ಯಾಲಯಗಳಿಗೆ ಸರಿಸಮನಾದ ಮೂಲಸೌಕರ್ಯಗಳನ್ನು ಒದಗಿಸಿಕೊಳ್ಳುವ ಸಾಮರ್ಥ್ಯವುಳ್ಳ ವಿದ್ಯಾ ಸಂಸ್ಥೆಗಳು, ವಿದೇಶಿ ವಿಶ್ವವಿದ್ಯಾಲಯಗಳಿಗೆ ತಮ್ಮ ಅತ್ಯುತ್ತಮ ಬೋಧಕರನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತವೆ. ಕಾರಣ ಸರಳವಾಗಿದೆ. ಯೇಲ್ ಯೂನಿವರ್ಸಿಟಿಯನ್ನು ಅನುಕರಿಸುವ ಮೂರನೆಯ ಜಗತ್ತಿನ ಒಂದು ವಿದ್ಯಾ ಸಂಸ್ಥೆಯಲ್ಲಿ ಬೋಧಿಸುವ ಒಬ್ಬ ಬೋಧಕನು, ತನಗೆ ಯೇಲ್ ಯೂನಿವರ್ಸಿಟಿಯಲ್ಲೇ ಉದ್ಯೋಗ ದೊರೆತರೆ ಅಥವಾ ಆತನಿಗೆ ಯಾವುದೋ ಒಂದು ದೇಶದ ಯಾವುದೋ ಒಂದು ವಿಶ್ವವಿದ್ಯಾಲಯದ ಬೋಧಕ ವೃತ್ತಿಯು, ಯೇಲ್ ಯೂನಿವರ್ಸಿಟಿಯಲ್ಲಿ ಬೋಧಕ ಉದ್ಯೋಗವನ್ನು ಗಳಿಸುವ ಮೆಟ್ಟಿಲಾದರೆ, ಆ ಬೋಧಕನು ಮೂರನೆಯ ಜಗತ್ತಿನ ವಿದ್ಯಾ ಸಂಸ್ಥೆಯಲ್ಲಿ ಉಳಿಯುವುದಾದರೂ ಹೇಗೆ?

ಇದೆಲ್ಲವನ್ನೂ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಪಠ್ಯಕ್ರಮದ ಮತ್ತು ಕೋರ್ಸ್‌ಗಳ ಅರ್ಥದಲ್ಲಿ ಶಿಕ್ಷಣದ ಏಕರೂಪೀಕರಣವು ಅಗತ್ಯವಾಗಿ ವಿದ್ಯಾರ್ಥಿಗಳ ಸೇರ್ಪಡೆಯನ್ನು (ಮುಖ್ಯವಾಗಿ ಮಧ್ಯಮ ವರ್ಗದ ವಿದ್ಯಾರ್ಥಿಗಳು ಕೋರ್ಸ್‌ಗಳಿಗೆ ಸೇರುವುದನ್ನು) ಏಕರೂಪಗೊಳಿಸುತ್ತದೆ. ಅಂದರೆ, ಈ ಏಕರೂಪೀಕರಣವು, ಪ್ರಧಾನವಾಗಿ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಒಂದೇ ರೀತಿಯ ಉದ್ಯೋಗದ ಪ್ರೇರಣೆಯನ್ನೂ ಒದಗಿಸುತ್ತದೆ. ಜನಸೇವೆ ಮಾಡುವ ಬಯಕೆ ಹೊಂದಿದ ಜನಸಾಮಾನ್ಯರ ಮಕ್ಕಳಿಗೆ ತರಬೇತಿ ನೀಡುತ್ತಿದ್ದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ದೇಶದ ಶಿಕ್ಷಣ ಸಂಸ್ಥೆಗಳು ಯಾವ ಮೆಟ್ರೋಪಾಲಿಟನ್ ವಿಶ್ವವಿದ್ಯಾಲಯಗಳನ್ನು ಅನುಕರಿಸಲು ಬಯಸುತ್ತವೆಯೋ ಅದೇ ಸ್ಥಳಗಳಿಗೆ ವಲಸೆ ಹೋಗುವ ಬಯಕೆಯ ತಾಣಗಳಾಗಿ ಬದಲಾಯಿಸಲಾಗುತ್ತದೆ.

ಭಾರತದಂತಹ ಮೂರನೇ ಜಗತ್ತಿನ ದೇಶಗಳು “ರಾಷ್ಟ್ರ ನಿರ್ಮಾಣ”ಕ್ಕಾಗಿ ಮಾತ್ರವಲ್ಲದೆ, ಒಂದು ಅರ್ಹ ಶೈಕ್ಷಣಿಕ ವಾತಾವರಣವನ್ನು ಸೃಷ್ಟಿಸುವ ಯೋಗ್ಯ ಶಿಕ್ಷಣ ಸಂಸ್ಥೆಗಳನ್ನು ಹೊಂದಬೇಕಾದರೆ, ಪಠ್ಯಕ್ರಮಗಳನ್ನು ಮತ್ತು ಉದ್ಯೋಗ-ಪ್ರೋತ್ಸಾಹಕಗಳನ್ನು ಮತ್ತು ವಿದೇಶಿ ವಿದ್ಯಾ ಸಂಸ್ಥೆಗಳ, ಅವು ಎಷ್ಟೇ ಖ್ಯಾತಿವೆತ್ತ ಸಂಸ್ಥೆಗಳಾಗಿದ್ದರೂ ಸಹ, ದೃಷ್ಟಿಕೋನವನ್ನು ಅನುಕರಿಸುವ ಒತ್ತಡವನ್ನು ತ್ಯಜಿಸಬೇಕು. ಶಿಕ್ಷಣವು, ಒಂದು ದೇಶದ ವಾಸ್ತವದಲ್ಲಿ ಬೇರೂರಬೇಕು, ಇಲ್ಲದಿದ್ದರೆ ಅದು ಎರಡನೇ ದರ್ಜೆಯ ದೇಶವಾಗುತ್ತದೆ.

ಉದಾಹರಣೆಗೆ, ಜಾತಿ ದಬ್ಬಾಳಿಕೆಯಂತಹ ಭಾರತೀಯ ಸಮಾಜಕ್ಕೆ ನಿರ್ದಿಷ್ಟವಾದಂತಹ ಸಮಸ್ಯೆಗಳು ಅಧ್ಯಯನದ ವಿಷಯಗಳಾಗದೆ ಉಳಿದು ಬಿಡುತ್ತವೆ. ಏಕೆಂದರೆ, ಜಾಗತೀಕರಣಗೊಂಡ ಬಂಡವಾಳಕ್ಕೆ, ಜಾತಿ ದಬ್ಬಾಳಿಕೆಯು ಒಂದು ವಿಷಯವೇ ಅಲ್ಲ, ಇನ್ನು ಹಿಂದುತ್ವ ಪಡೆಗೆ, ಜಾತಿ ದಬ್ಬಾಳಿಕೆಯು ಭಾರತದ ನಾಗರಿಕತೆಯ “ಶ್ರೇಷ್ಠತೆ”ಯನ್ನು ತಗ್ಗಿಸುವ ವಿಷಯವಾಗುವುದರಿಂದ ಅದನ್ನು ಗುಡಿಸಿ ಚಾಪೆಯ ಕೆಳಗೆ ತಳ್ಳುತ್ತದೆ. ಆದ್ದರಿಂದ ಇಡೀ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಜಾತಿಯನ್ನು ಭಾರತೀಯ ಸಮಾಜದ ಒಂದು ಅಸಹ್ಯಕರ ಲಕ್ಷಣವೆಂದಾಗಲೀ ಅಥವಾ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ, ನೇಮಕಾತಿ ಮತ್ತು ಬಡ್ತಿ ಪ್ರಕ್ರಿಯೆಗಳಲ್ಲಿ ಮೀಸಲಾತಿಯಂತಹ ಕ್ರಮಗಳ ಅಗತ್ಯವಿರುವ ಸಂಗತಿಯೆಂದಾಗಲೀ ಉಲ್ಲೇಖ ಮಾಡದೇ ಇರುವುದು ಆಕಸ್ಮಿಕವಲ್ಲ. ಈ ಮೌನವೂ ಸಹ ಏಕರೂಪೀಕರಣದ ಪರಿಣಾಮವೇ.

ಅನು: ಕೆ.ಎಂ. ನಾಗರಾಜ್

Donate Janashakthi Media

Leave a Reply

Your email address will not be published. Required fields are marked *