ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ಸ್ವಾತಂತ್ರ್ಯಾನಂತರ 1980ರ ದಶಕದ ವರೆಗೆ ಭಾರತದ ಜಿಡಿಪಿ ಅಭಿವೃದ್ಧಿ ದರ ಕೆಳಮಟ್ಟದಲ್ಲೇ ಇತ್ತು. ನವ-ಉದಾರವಾದೀ ಧೋರಣೆಗಳ ನಂತರ ಅದರಲ್ಲಿ ತೀವ್ರ ಏರಿಕೆಯಾಗಿತ್ತು. ಈಗ ಮತ್ತೆ ಅದು ನಿಧಾನಗೊಂಡಿದೆ. ಇದರಿಂದಾಗಿ ಅರ್ಥವ್ಯವಸ್ಥೆಯ ಬೆಳವಣಿಗೆಯ ದರವು ನಿಯಂತ್ರಣ ನೀತಿಗಳ ಅವಧಿಯಲ್ಲಿ ಕಂಡ ದರಕ್ಕೆ ಮರಳುತ್ತಿದೆ ಎಂಬ ಆತಂಕ ಹಿಂದಿನ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ ರಾಜನ್ ರವರಿಗೆ. ಆದರೆ ನಿಜವಾದ ಆತಂಕವೆಂದರೆ ಹಾಗೆ ಮರಳಿದರೆ, ದುಡಿಯುವ ಜನರ ಪರಿಸ್ಥಿತಿಗಳು ಆಗ ಇದ್ದದ್ದಕ್ಕಿಂತಲೂ ಹೆಚ್ಚು ಕೆಟ್ಟದಾಗಿರುತ್ತವೆ ಎಂಬುದು. ಏಕೆಂದರೆ ಎಂಬತ್ತರ ದಶಕದ ಹಿಂದಿನ ಅವಧಿಯ ಕೆಳ ಮಟ್ಟದ ಬೆಳವಣಿಗೆಯ ದರ ಮತ್ತು ಇಂದಿನ ಬೆಳವಣಿಗೆಯ ದರ ಇವುಗಳ ನಡುವೆ ಒಂದು ಮೂಲಭೂತ ವ್ಯತ್ಯಾಸವಿದೆ. ಅಸಮಾನತೆಯ ಹೆಚ್ಚಳ ಈಗಿನ ಅವಧಿಯ ಒಂದು ಮುಖ್ಯ ಲಕ್ಷಣವಾಗಿದೆ.
ಆರ್ಥಿಕ ನಿಯಂತ್ರಣ (ಡಿರಿಜಿಸ್ಟೆ) ನೀತಿಗಳ ಅವಧಿಯ ಬಹುಪಾಲು ವರ್ಷಗಳಲ್ಲಿ, ಭಾರತದ ಜಿಡಿಪಿಯು ವಾರ್ಷಿಕ ಸುಮಾರು ಶೇ. 4ರಷ್ಟು ಅಥವಾ ಅದಕ್ಕಿಂತಲೂ ಕೆಳಗಿನ ದರದಲ್ಲಿ ಬೆಳೆಯಿತು. ಬೆಳವಣಿಗೆಯು ಹೆಚ್ಚು ಕಡಿಮೆ ನಿಶ್ಚಲವಾಗಿದ್ದ ವಸಾಹತುಶಾಹಿ ಯುಗಕ್ಕೆ ಹೋಲಿಸಿದರೆ, ಇದು ಉತ್ತಮಗೊಂಡ ದರವಾಗಿದ್ದರೂ, ಅದು ಹೆಚ್ಚು ಗಮನಾರ್ಹವೆನಿಸಿರಲಿಲ್ಲ. ಈ ಕೆಳಮಟ್ಟದ ಸ್ಥಿರವಾದ ಬೆಳವಣಿಗೆಯು ಬಹಳ ವರ್ಷಗಳ ಕಾಲ ಮುಂದುವರೆದ ಕಾರಣ ಅನೇಕ ಅರ್ಥಶಾಸ್ತ್ರಜ್ಞರು ಈ ರೀತಿಯ ಬೆಳವಣಿಗೆಯನ್ನು ʻʻಬೆಳವಣಿಗೆಯ ಹಿಂದೂ ದರʼʼ ಎಂದು (ಬಹುಶಃ ಈ ದರದ ಬೆಳವಣಿಗೆಯ ಮೂಲಕ ಗಮನಾರ್ಹ ಸಾಮಾಜಿಕ ಪರಿವರ್ತನೆಗೆ ಬಹಳ ವರ್ಷಗಳೇ ಹಿಡಿಯಬಹುದೆಂದು) ತಮಾಷೆ ಮಾಡಿದ್ದರು. 1980ರ ದಶಕದಿಂದ ಹಿಡಿದು, ಮತ್ತು ನಂತರದಲ್ಲಿ ಈ ರೀತಿಯ ಆಳ್ವಿಕೆಗೆ ಬದಲಿಯಾಗಿ ಬಂದ ನವ ಉದಾರೀ ಆಳ್ವಿಕೆಯ ಮುಂದುವರೆಕೆಯ ನಂತರ, ವೇಗವರ್ಧನೆ ಪಡೆದಿದ್ದ ಜಿಡಿಪಿಯ ಬೆಳವಣಿಗೆಯ ವೇಗ ಹೆಚ್ಚುತ್ತ ಹೋಗಿದ್ದು, ಅದೀಗ ಮತ್ತೆ ನಿಧಾನಗೊಳ್ಳಲು ಪ್ರಾರಂಭಿಸಿದೆ. ಈ ವಿದ್ಯಮಾನವು ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಡಾ.ರಘುರಾಮ್ ರಾಜನ್ ಅವರಿಗೆ, ಬಹುಶಃ ನಾವು ʻʻಬೆಳವಣಿಗೆಯ ಹಿಂದೂ ದರʼʼದ ಯುಗಕ್ಕೆ ಮರಳುತ್ತಿದ್ದೇವೆ ಎಂದು ಇತ್ತೀಚೆಗೆ ಸೂಚ್ಯವಾಗಿ ಹೇಳುವಲ್ಲಿ ಒಂದು ಪ್ರೇರಣೆಯಾಗಿರಬಹುದು.
ಕೋವಿಡ್ ಸಾಂಕ್ರಾಮಿಕ ಹರಡುವ ಮುನ್ನವೇ ಜಿಡಿಪಿ ಬೆಳವಣಿಗೆಯ ದರವು ತಗ್ಗಿತ್ತು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಕೋವಿಡ್ ಹಾವಳಿಯ ನಂತರ ಕಂಡ ಚೇತರಿಕೆಯೂ ಸಹ ಬಲಹೀನವಾಗಿಯೇ ಇತ್ತು. ಅಂದರೆ, ಉತ್ಪಾದನೆಯಲ್ಲಿ ತೀವ್ರ ಕುಸಿತವಾಗಿತ್ತು. ಈ ಎಲ್ಲ ಅಂಶಗಳೂ ಹೋಲಿಕೆಯ ದೃಷ್ಟಿಯಲ್ಲಿ ಅರ್ಥವ್ಯವಸ್ಥೆಯು ಅಲ್ಪ ಬೆಳವಣಿಗೆಯ ಸ್ಥಿತಿಗೆ ಮರಳುತ್ತಿದೆ ಎಂಬ ಅಭಿಪ್ರಾಯವನ್ನು ಬೆಂಬಲಿಸುತ್ತವೆ. ಆದರೆ, ಇಂದಿನ ಬೆಳವಣಿಗೆಯ ದರವು ನಿಯಂತ್ರಣ ನೀತಿಗಳ ಯುಗದೊಂದಿಗೆ ಹೇಗೆ ಹೋಲಿಕೆಯಾಗುತ್ತದೆ ಎಂಬುದನ್ನು ಅಂಕಿ-ಅಂಶಗಳ ಮೂಲಕ ನೋಡುವುದು ಇಲ್ಲಿ ನಮ್ಮ ಉದ್ದೇಶವಲ್ಲ. ʻʻಬೆಳವಣಿಗೆಯ ಹಿಂದೂ ದರʼʼ ಎಂದು ಕರೆಯುವುದು ಸರಿಯೇ ಎಂಬುದೂ ಇಲ್ಲಿ ವಿಷಯವಲ್ಲ. ಏಕೆಂದರೆ, ಈ ಪದವನ್ನು ಸಂಖ್ಯಾಶಾಸ್ತ್ರೀಯ ವಿದ್ಯಮಾನವನ್ನು ಸೂಚಿಸಲು ಮಾತ್ರ ಬಳಸಲಾಗಿದೆ. ಇಲ್ಲಿ ನಮ್ಮ ಉದ್ದೇಶವೆಂದರೆ, ತುಲನಾತ್ಮಕ ದೃಷ್ಟಿಯಲ್ಲಿ ಕಾಣುವ ಹಿಂದಿನ ಅವಧಿಯ ಕೆಳ ಮಟ್ಟದ ಬೆಳವಣಿಗೆಯ ದರ ಮತ್ತು ಇಂದಿನ ಬೆಳವಣಿಗೆಯ ದರ ಇವುಗಳ ನಡುವೆ ಒಂದು ಮೂಲಭೂತ ವ್ಯತ್ಯಾಸವಿದೆ ಎಂಬುದನ್ನು ಒತ್ತಿಹೇಳುವುದಷ್ಟೇ.
ಇದನ್ನು ಓದಿ: ಮೂಲಸೌಕರ್ಯದ ಬೇಡಿಕೆಯೂ ಒಂದು ವರ್ಗಪ್ರಶ್ನೆಯೇ ಆಗಿದೆ
ಮೂಲಭೂತ ವ್ಯತ್ಯಾಸ
ಈ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ʻʻಪೂರೈಕೆ-ನಿರ್ಬಂಧಿತ ವ್ಯವಸ್ಥೆʼʼ ಮತ್ತು ʻʻಬೇಡಿಕೆ-ನಿರ್ಬಂಧಿತ ವ್ಯವಸ್ಥೆʼʼ ಇವುಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿಕೊಳ್ಳಬೇಕಾಗುತ್ತದೆ. ಒಂದು ಬೇಡಿಕೆ-ನಿರ್ಬಂಧಿತ ವ್ಯವಸ್ಥೆಯ ಸಂದರ್ಭದಲ್ಲಿ, ಯಾವುದೇ ಅವಧಿಯ ಉತ್ಪಾದನೆಯು ಒಟ್ಟು ಬೇಡಿಕೆಯ ಮಟ್ಟದಿಂದ ನಿರ್ಧರಿಸಲ್ಪತ್ತದೆ. ಅದೇ ರೀತಿಯಲ್ಲಿ, ಬೆಳವಣಿಗೆಯ ದರವು ಒಟ್ಟು ಬೇಡಿಕೆ ಮಟ್ಟದ ಬೆಳವಣಿಗೆಯ ದರದಿಂದ ನಿರ್ಧರಿಸಲ್ಪತ್ತದೆ. ಯಾವುದೇ ಅವಧಿಯಲ್ಲಿ ಉತ್ಪತ್ತಿಯು ಸಂಪೂರ್ಣ ಸಾಮರ್ಥ್ಯದ ಬಳಕೆ ಅಥವಾ ಲಭ್ಯವಿರುವ ಕೆಲಸಗಾರರ ಪೂರ್ಣ ಉದ್ಯೋಗ ಅಥವಾ ವಿದೇಶಿ ವಿನಿಮಯ ಅಥವಾ ಆಹಾರ ಧಾನ್ಯಗಳಂತಹ ನಿರ್ಣಾಯಕ ಅಂಶಗಳ ಕೊರತೆ ಇವುಗಳಿಂದ ನಿರ್ಬಂಧಿಸಲ್ಪಡುವುದಿಲ್ಲ. ಬೇರೆ ರೀತಿಯಲ್ಲಿ ಹೇಳುವುದಾದರೆ, ಒಂದು ಬೇಡಿಕೆ-ನಿರ್ಬಂಧಿತ ವ್ಯವಸ್ಥೆಯಲ್ಲಿ ಉತ್ಪತ್ತಿಯು ಪೂರೈಕೆ ಬದಿಯಿಂದ ನಿರ್ಧರಿಸಲ್ಪಡುವ ಅದರ ಸಂಭಾವ್ಯತೆಗಿಂತಲೂ ಕಡಿಮೆ ಇರುತ್ತದೆ ಮತ್ತು ಎಲ್ಲ ಅವಧಿಯಲ್ಲೂ ಹಾಗೆಯೇ ಇರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಒಂದು ಪೂರೈಕೆ-ನಿರ್ಬಂಧಿತ ವ್ಯವಸ್ಥೆಯಲ್ಲಿ ಯಾವುದೇ ಅವಧಿಯಲ್ಲಿ ಉತ್ಪತ್ತಿಯು ಪೂರೈಕೆ-ಬದಿಯ ಇತಿ-ಮಿತಿಗಳು ನಿರ್ದಿಷ್ಟಪಡಿಸುವ ಗರಿಷ್ಠ ಕಾರ್ಯಸಾಧ್ಯ ಮಟ್ಟದಿಂದ ನಿರ್ಧರಿಸಲ್ಪಡುತ್ತದೆ. ಮತ್ತು, ಇತಿ-ಮಿತಿಗಳಿಂದ ಕಟ್ಟಿಹಾಕಲ್ಪಟ್ಟ ಬೆಳವಣಿಗೆಯ ದರವು ಕಾಲಾನಂತರದಲ್ಲಿ ಕಾರ್ಯಸಾಧ್ಯ ಗರಿಷ್ಠ ಮಟ್ಟದ್ದಾಗಿರುತ್ತದೆ.
ಸಾಂಪ್ರದಾಯಿಕ ಬಂಡವಾಳಶಾಹಿಯು ಒಂದು ಬೇಡಿಕೆ-ನಿರ್ಬಂಧಿತ ವ್ಯವಸ್ಥೆಯಾಗಿದೆ ಮತ್ತು ಸಾಂಪ್ರದಾಯಿಕ ಸಮಾಜವಾದವು ಒಂದು ಪೂರೈಕೆ-ನಿರ್ಬಂಧಿತ ವ್ಯವಸ್ಥೆಯಾಗಿದೆ ಎಂಬ ಅಂಶದ ಬಗ್ಗೆ ಪೋಲೆಂಡಿನ ಮಾರ್ಕ್ಸ್‌ವಾದಿ ಅರ್ಥಶಾಸ್ತ್ರಜ್ಞ ಮೈಕಲ್ ಕಲೆಕಿ ಬಹಳ ಹಿಂದೆಯೇ ಗಮನ ಸೆಳೆದಿದ್ದರು. ಸಾಂಪ್ರದಾಯಿಕ ಬಂಡವಾಳಶಾಹಿ ಅರ್ಥವ್ಯವಸ್ಥೆಯು, ನಿಷ್ಕ್ರಿಯ ಸಾಮರ್ಥ್ಯ, ನಿರುದ್ಯೋಗ ಮತ್ತು ಆಹಾರ ಧಾನ್ಯಗಳ ಲಭ್ಯತೆ ಮತ್ತು ವಿದೇಶಿ ವಿನಿಮಯದ ಸುಲಭ ಲಭ್ಯತೆ ಇವೆಲ್ಲವೂ ಏಕ ಕಾಲದಲ್ಲೇ ಇರುತ್ತವೆ ಎನ್ನುವ ಅರ್ಥದಲ್ಲಿ, ʻʻಮಂದʼʼ (slack) ಎಂಬುದಾಗಿ ಚಿತ್ರಿಸಲ್ಪಟ್ಟಿದೆ. ಆದರೆ, ಒಂದು ಪೂರೈಕೆ-ನಿರ್ಬಂಧಿತ ವ್ಯವಸ್ಥೆಯು ಅಂತಹ ʻʻಮಂದʼʼ ಪರಿಸ್ಥಿತಿಗೆ ಹೋಗುವುದಿಲ್ಲ, ಮತ್ತು, ಅಲ್ಲಿ ʻʻಮಂದʼʼದ ರೀತಿಯಲ್ಲಿ ಸಂಪನ್ಮೂಲಗಳು ಪೋಲಾಗುವುದೂ ಇಲ್ಲ.
ಇದನ್ನು ಓದಿ: ವಿಶ್ವದೆಲ್ಲೆಡೆ ನಿರ್ದಯ ಲೂಟಿಗೆ ವಿಧ-ವಿಧ ಪರಿಕಲ್ಪನೆ
ಭಾರತದಲ್ಲಿ ಡಿರಿಜಿಸ್ಟೆ ಅವಧಿಯ ಒಂದು ಮುಖ್ಯ ಲಕ್ಷಣವೆಂದರೆ, ಬಂಡವಾಳಶಾಹಿಯ ಅಭಿವೃದ್ಧಿ ಯೋಜನಾಬದ್ಧವೆಂದು ಕರೆಯಲಾದ ಅರ್ಥವ್ಯವಸ್ಥೆಯೊಳಗಿನಿಂದಲೇ ನಡೆದಿತ್ತು, ಮತ್ತು ಯೋಜನಾಬದ್ಧವೆಂದರೆ, ಅರ್ಥವ್ಯವಸ್ಥೆ ಬೇಡಿಕೆ-ನಿರ್ಬಂಧಿತವಾಗಿರಲಿಲ್ಲವೆಂದಾಗುತ್ತದೆ. ಈ ಅವಧಿಯ ಭಾರತದ ಅರ್ಥವ್ಯವಸ್ಥೆಯು ಸಾಂಪ್ರದಾಯಿಕ ಬಂಡವಾಳಶಾಹಿಗೆ ಸಮನಲ್ಲ. ನವ ಉದಾರವಾದಿ ʻʻಸುಧಾರಣೆಗಳುʼʼ ಜಾರಿಯಾದ ನಂತರವೇ ಸಾಂಪ್ರದಾಯಿಕ ಬಂಡವಾಳಶಾಹಿಯು ಪೂರ್ಣ ಪ್ರಮಾಣದಲ್ಲಿ ಹೊರಹೊಮ್ಮಿತು. ನಿಯಂತ್ರಣ ನೀತಿಗಳ ಅವಧಿಯು ʻʻಮಂದʼʼ ಪರಿಸ್ಥಿತಿಯಿಂದ ಮುಕ್ತವಾಗಿತ್ತು. ಏಕೆಂದರೆ, ʻʻಮಂದʼʼ ಪರಿಸ್ಥಿತಿ ಕಾಣಿಸಿಕೊಂಡ ಕೂಡಲೇ ಸರ್ಕಾರದ ವೆಚ್ಚಗಳನ್ನು ಹೆಚ್ಚಿಸುವ ಮೂಲಕ, ವಿಶೇಷವಾಗಿ ಸಾರ್ವಜನಿಕ ಹೂಡಿಕೆಯ ಮೂಲಕ ಮತ್ತು ಅಗತ್ಯವಿದ್ದರೆ ಬೃಹತ್ ವಿತ್ತೀಯ ಕೊರತೆಯ ಮೂಲಕವೂ ಬೇಡಿಕೆಯು ಉತ್ತೇಜಿಸಲ್ಪಡುತ್ತಿತ್ತು. ವಿತ್ತೀಯ ಕೊರತೆಯ ಮೇಲೆ ಯಾವುದೇ ನಿರ್ಬಂಧಗಳನ್ನು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳವು ವಿಧಿಸುತ್ತಿರಲಿಲ್ಲ. ಏಕೆಂದರೆ, ಹೊರಗಿನಿಂದ ಹೂಡಿಕೆಯಾಗುವ ಬಂಡವಾಳದ ಮೇಲೆ ಕಟ್ಟುನಿಟ್ಟಾದ ನಿಯಂತ್ರಣಗಳಿದ್ದವು. ಹಾಗಾಗಿ, ಅರ್ಥವ್ಯವಸ್ಥೆಯು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಹಿಡಿತದಿಂದ ಮುಕ್ತವಾಗಿತ್ತು. ಸಾರ್ವಜನಿಕ ಹೂಡಿಕೆಗೆ ಮತ್ತು ಅರ್ಥವ್ಯವಸ್ಥೆಯ ಒಟ್ಟಾರೆ ಬೆಳವಣಿಗೆಯ ದರ ಏರಿಕೆಗೆ ಸಂಬಂಧಿಸಿದ ತೊಡಕುಗಳು ಪೂರೈಕೆ ಬದಿಯಿಂದ ಉದ್ಭವಿಸಿದವು. ನಿರ್ದಿಷ್ಟವಾಗಿ ಹೇಳುವುದಾದರೆ, ಆಹಾರ ಧಾನ್ಯಗಳ ಲಭ್ಯತೆಯಲ್ಲಿ ಮಿತಿಗಳಿದ್ದವು. ವಿದೇಶಿ ವಿನಿಮಯದ ಕೊರತೆಯಿಂದಾಗಿ ಸಾಕಷ್ಟು ಆಹಾರ ಧಾನ್ಯಗಳನ್ನು ಆಮದು ಮಾಡಿಕೊಳ್ಳುವುದು ಸಾಧ್ಯವಾಗಲಿಲ್ಲ. ಮಾರುಕಟ್ಟೆಯಲ್ಲಿ ಆಹಾರ ಧಾನ್ಯಗಳ ಮೇಲೆ ಆರಂಭದಿಂದಲೇ ಬೇಡಿಕೆ ಹೆಚ್ಚುತ್ತಾ ಹೋದ ಕಾರಣದಿಂದ ಉದ್ಭವಿಸಿದ ಒಂದು ನಿರ್ದಿಷ್ಟ ದರದ ಹಣದುಬ್ಬರವು ಅರ್ಥವ್ಯವಸ್ಥೆಯ ಲಕ್ಷಣವೇ ಆಗಿತ್ತು. ಆದರೆ, ಅರ್ಥವ್ಯವಸ್ಥೆಯಲ್ಲಿ ʻʻಮಂದʼʼ ಪರಿಸ್ಥಿತಿ ಇರಲಿಲ್ಲ ಮತ್ತು ಆದ್ದರಿಂದ ವ್ಯರ್ಥವಾಗುವಂಥದ್ದೂ (waste) ಏನೂ ಇರಲಿಲ್ಲ.
ಇದನ್ನು ಓದಿ: ಕಲ್ಯಾಣ-ಪ್ರಭುತ್ವದ ಕ್ರಮಗಳು ʻʻಜನರಂಜನೆʼʼಗಾಗಿ ಎಂದು ಹೀನಾಯಗೊಳಿಸುವ ನವ-ಉದಾರವಾದ
ʻʻಮಂದʼʼ ಪರಿಸ್ಥಿತಿಗಳ ಅವಧಿ
ಇದಕ್ಕೆ ವ್ಯತಿರಿಕ್ತವಾಗಿ, ನವ ಉದಾರವಾದಿ ಅವಧಿಯ ಗುರುತೆಂದರೆ, ದೀರ್ಘಕಾಲದ ʻʻಮಂದʼʼ ಪರಿಸ್ಥಿತಿ. ಅದನ್ನು ತೊಲಗಿಸಲಾಗದು. ಏಕೆಂದರೆ, ಈ ಉದ್ದೇಶಕ್ಕಾಗಿ ಸರ್ಕಾರವು ಹೆಚ್ಚು ಹೆಚ್ಚು ಖರ್ಚು-ವೆಚ್ಚಗಳನ್ನು ಕೈಗೊಳ್ಳಬೇಕಾಗುತ್ತದೆ. ಅದಕ್ಕಾಗಿ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳಲು ಶ್ರೀಮಂತರ ಮೇಲೆ ಹೆಚ್ಚು ಹೆಚ್ಚು ತೆರಿಗೆ ವಿಧಿಸಬೇಕಾಗುತ್ತದೆ ಮತ್ತು ವಿತ್ತೀಯ ಕೊರತೆಯ ಮೊರೆ ಹೊಗಬೇಕಾಗುತ್ತದೆ. ಆದರೆ, ಶ್ರೀಮಂತರ ಮೇಲೆ ತೆರಿಗೆ ವಿಧಿಸುವ ಬಗ್ಗೆ ಮತ್ತು ವಿತ್ತೀಯ ಕೊರತೆಯ ವಿಷಯದಲ್ಲಿ ಸರ್ಕಾರವು ನಿರ್ಬಂಧಿತವಾಗಿದೆ. ಈ ಎರಡೂ ಮಿತಿಗಳನ್ನು ಜಾಗತೀಕರಣಗೊಂಡ ಹಣಕಾಸು ಬಂಡವಾಳವು ವಿಧಿಸಿದೆ. ನವ ಉದಾರವಾದಿ ಅವಧಿಯುದ್ದಕ್ಕೂ, ಅರ್ಥವ್ಯವಸ್ಥೆಯು ಬಳಕೆಯಾಗದ ಉತ್ಪಾದನಾ-ಸಾಮರ್ಥ್ಯ, ಬೃಹತ್ ನಿರುದ್ಯೋಗ, ಮಾರಾಟವಾಗದೆ ಉಳಿದ ಆಹಾರ ಧಾನ್ಯಗಳ ಬೃಹತ್ ದಾಸ್ತಾನುಗಳು ಮತ್ತು ಬೃಹತ್ ವಿದೇಶಿ ವಿನಿಮಯ ಸಂಗ್ರಹ (ವಿದೇಶಿ ಬಂಡವಾಳ ಹೂಡಿಕೆಯ ಒಳಹರಿವಿನ ಮೂಲಕ) ವನ್ನು ಕಂಡಿತು. ಹೀಗೆ ನಿಯಂತ್ರಣ ನೀತಿಗಳ ಅವಧಿಯಲ್ಲಿ ಅರ್ಥವ್ಯವಸ್ಥೆಯು ಪೂರೈಕೆ-ನಿರ್ಬಂಧಿತವಾಗಿದ್ದರೆ, ನವ ಉದಾರವಾದಿ ಅವಧಿಯಲ್ಲಿ ಅದು ಬೇಡಿಕೆ-ನಿರ್ಬಂಧಿತವಾಗಿತ್ತು. ಆದ್ದರಿಂದ, ನವ ಉದಾರವಾದಿ ಅವಧಿಯಲ್ಲಿ ʻವ್ಯರ್ಥʼ ಎಂಬುದು ಸದಾ ಕಂಡು ಬರುತ್ತಿತ್ತು, ಇದು ಅವಿವೇಕತನ.
ಅದಷ್ಟೇ ಅಲ್ಲ. ಆಹಾರ ಧಾನ್ಯಗಳ ತಲಾ ಬೇಡಿಕೆಯ ಬೆಳವಣಿಗೆ ದರವು ಎರಡು ಅಂಶಗಳ ಮೇಲೆ ಅವಲಂಬಿತವಾಗಿದೆ: ಜಿಡಿಪಿಯ ತಲಾ ಬೆಳವಣಿಗೆಯ ದರ, ಮತ್ತು ಆಹಾರ ಧಾನ್ಯಗಳ ಬೇಡಿಕೆಯ ಸರಾಸರಿ ಆದಾಯ ಸ್ಥಿತಿಸ್ಥಾಪಕತ್ವ. ಆದಾಯಗಳ ಈ ಸ್ಥಿತಿಸ್ಥಾಪಕತ್ವವು ವರ್ಗಗಳಾದ್ಯಂತ ಆದಾಯದ ವಿತರಣೆಯನ್ನು ಅವಲಂಬಿಸಿರುತ್ತದೆ. ಆದಾಯಗಳ ಅಸಮಾನತೆಯ ಹೆಚ್ಚಳದ ಪರಿಣಾಮವೆಂದರೆ ಆಹಾರ ಧಾನ್ಯಗಳ ಬೇಡಿಕೆ ತಗ್ಗುವುದು. ನಿಯಂತ್ರಣ ನೀತಿಗಳು ಮತ್ತು ನವ ಉದಾರವಾದಿ ಅವಧಿಗಳ ನಡುವೆ, ಆಹಾರ ಧಾನ್ಯಗಳ ಪೂರೈಕೆಯ ಬೆಳವಣಿಗೆ ದರ ಏರಿಕೆಯಾಗಿಲ್ಲ. ಪೂರೈಕೆಯ ಬೆಳವಣಿಗೆ ದರದ ಏರು-ಪೇರುಗಳನ್ನು ಗಮನಿಸಿದರೆ, ಅದು ತುಸು ಇಳಿಕೆಯಾಗಿರುವುದು ಕಂಡುಬರುತ್ತದೆ. ಹಿಂದೆ ಆಹಾರ ಧಾನ್ಯಗಳ ಕೊರತೆಯ ಪರಿಸ್ಥಿತಿ ಸದಾ ಕಾಲವೂ ಇತ್ತು. ಈಗ ಧಾನ್ಯಗಳ ಸಂಗ್ರಹವು ಬೃಹತ್ ಪ್ರಮಾಣದಲ್ಲಿದೆ. ಆದ್ದರಿಂದ, ಅಂದಿನಿಂದ ಇಂದಿನವರೆಗಿನ ಅವಧಿಯಲ್ಲಿ ಆಹಾರ ಧಾನ್ಯಗಳ ಮೇಲಿನ ಬೇಡಿಕೆಯ ಬೆಳವಣಿಗೆ ದರ ಇಳಿಕೆಯಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಆದರೆ, ಅಂದಿನಿಂದ ಇಂದಿನವರೆಗಿನ ಅವಧಿಯಲ್ಲಿ ತಲಾ ಜಿಡಿಪಿಯ ಬೆಳವಣಿಗೆ ದರ ಏರಿಕೆಯಾಗಿದೆ ಎಂದು ಅಂದಾಜುಗಳು ಹೇಳುತ್ತವೆ. ಹಾಗಾಗಿ, ಆಹಾರ ಧಾನ್ಯಗಳ ಮೇಲಿನ ಬೇಡಿಕೆಯ ಬೆಳವಣಿಗೆ ದರ ಇಳಿಕೆಯಾದ ಏಕೈಕ ಕಾರಣವೆಂದರೆ, ನವ ಉದಾರವಾದಿ ಅವಧಿಯಲ್ಲಿ ಆದಾಯದ ಅಸಮಾನತೆಗಳು ಹಿಂದಿನ ನಿಯಂತ್ರಣ ನೀತಿಗಳ ಅವಧಿಗೆ ಹೋಲಿಸಿದರೆ ಗಮನಾರ್ಹವಾಗಿ ಏರಿಕೆಯಾಗಿವೆ ಎಂಬುದು.
ಇದನ್ನು ಓದಿ: ವರಮಾನಗಳ ಅಸಮತೆ ಹೆಚ್ಚುವುದರಿಂದಾಗಿಯೇ ಸಂಪತ್ತಿನ ಅಸಮತೆಯೂ ಹೆಚ್ಚುತ್ತದೆ
ಅಸಮಾನತೆಯ ಗಮನಾರ್ಹ ಹೆಚ್ಚಳದ ಅವಧಿ
ಡಿರಿಜಿಸ್ಟೆ ಅಂದರೆ ನಿಯಂತ್ರಣ ನೀತಿಗಳ ಅವಧಿಯು ಪೂರೈಕೆ-ನಿರ್ಬಂಧಿತವಾಗಿತ್ತು (ಮುಖ್ಯವಾಗಿ ಆಹಾರ ಧಾನ್ಯಗಳ ಕೊರತೆಯ ಮೂಲಕ). ನವ ಉದಾರವಾದಿ ಅವಧಿಯು ಬೇಡಿಕೆ-ನಿರ್ಬಂಧಿತವಾಗಿದೆ. ನಿಯಂತ್ರಣ ನೀತಿಗಳ ಅವಧಿಗೆ ಹೋಲಿಸಿದರೆ ನವ ಉದಾರವಾದಿ ಅವಧಿಯಲ್ಲಿ ವರಮಾನಗಳ ಅಸಮಾನತೆಯು ಗಮನಾರ್ಹ ಹೆಚ್ಚಳವಾಗಿದೆ ಎಂಬುದನ್ನು ಅಂಕಿಅಂಶಗಳು ನಿಖರವಾಗಿ ತೋರಿಸುತ್ತವೆ. ಒಂದು ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ, ಪಿಕೆಟಿ ಮತ್ತು ಚಾನ್ಸೆಲ್ ಇವರುಗಳ ಅಂದಾಜಿನ ಪ್ರಕಾರ, ಸ್ವಾತಂತ್ರ‍್ಯಾನಂತರದ ಅವಧಿಯಲ್ಲಿ ರಾಷ್ಟ್ರೀಯ ಆದಾಯದಲ್ಲಿ ಮೇಲ್ತುದಿಯ ಶೇ. 1ರಷ್ಟು ಮಂದಿಯ ಪಾಲು ಇಳಿಯುತ್ತಾ ಹೋಗಿ 1982ರಲ್ಲಿ ಶೇ. 6ರ ಕೆಳ ಮಟ್ಟಕ್ಕೆ ಇಳಿದಿತ್ತು. ಆದರೆ, ನಂತರದಲ್ಲಿ ಈ ಪಾಲು 2014-15ರ ವೇಳೆಗೆ ಶೇ. 22ಕ್ಕೆ ಏರಿಕೆಯಾಗಿತ್ತು (ಅಂದಾಜುಗಳು ಲಭ್ಯವಿರುವ ಇತ್ತೀಚಿನ ವರ್ಷ). ಈ ಸಂಖ್ಯೆಯು (ಶೇ. 22), 1922ರಲ್ಲಿ ಮೊದಲ ಬಾರಿಗೆ ಆದಾಯ ತೆರಿಗೆಯನ್ನು ಪರಿಚಯಿಸಿದಾಗಿನಿಂದ ಹಿಡಿದು 2014-15ರ ವರೆಗಿನ ಇಡೀ ಅವಧಿಯಲ್ಲಿ ತಲುಪಿದ ಅತ್ಯಧಿಕ ಮಟ್ಟವನ್ನು ಪ್ರತಿನಿಧಿಸುತ್ತದೆ (ಈ ಎಲ್ಲಾ ಅಂದಾಜುಗಳು ಆದಾಯ ತೆರಿಗೆ ದತ್ತಾಂಶವನ್ನು ಆಧರಿಸಿವೆ ಮತ್ತು ದತ್ತಾಂಶಗಳು 1922ರ ನಂತರದ ವರ್ಷಗಳಿಗೆ ಮಾತ್ರ ಲಭ್ಯ). ಈ ಫಲಿತಾಂಶವು ಎಷ್ಟು ಆಘಾತಕಾರಿಯಾಗಿದೆ ಎಂದರೆ, ಪಿಕೆಟಿ ಮತ್ತು ಚಾನ್ಸೆಲ್ ಅವರು ಅನುಸರಿಸಿದ ಅಂದಾಜು-ವಿಧಾನಗಳ ಬಗ್ಗೆ ಎಷ್ಟೇ ಆಕ್ಷೇಪಣೆಗಳಿದ್ದರೂ, ಅದರ ನಿಖರತೆಯನ್ನು ಅನುಮಾನಿಸಲಾಗದು.
ಈ ರೀತಿಯಲ್ಲಿ ಅರ್ಥವ್ಯವಸ್ಥೆಯು ಈ ಹಿಂದೆ ಇದ್ದ ಹಾಗೆ ಈಗ ಮತ್ತೊಮ್ಮೆ ʻʻಬೆಳವಣಿಗೆಯ ಹಿಂದೂ ದರʼʼ ಎಂದು ಕರೆಯಲಾದ ಪರಿಸ್ಥಿತಿಗೆ ಒಳಗಾಗಿದ್ದರೂ, ಆ ಅವಧಿಯಲ್ಲಿದ್ದಂತೆ ಪೂರೈಕೆ-ನಿರ್ಬಂಧಿತವಾಗಿರದೆ, ಈಗ ಬೇಡಿಕೆ-ನಿರ್ಬಂಧಿತವಾಗಿದೆ ಮತ್ತು ಗಮನಾರ್ಹ ಪ್ರಮಾಣದ ಅಸಮಾನತೆಗಳ ಹೆಚ್ಚಳ ಈ ಅವಧಿಯ ಲಕ್ಷಣವಾಗಿದೆ.
ಇಲ್ಲಿ ಇನ್ನೊಂದು ಅಧಿಕ ಅಂಶವೂ ಇದೆ. ಒಂದು ಬೇಡಿಕೆ-ನಿರ್ಬಂಧಿತ ಅರ್ಥವ್ಯವಸ್ಥೆಯಲ್ಲಿ ಬೆಳವಣಿಗೆಯು ನಿಧಾನಗೊಂಡರೆ, ಜಾಗತಿಕ ಬೆಳವಣಿಗೆಯ ದರದ ವೇಗವರ್ಧನೆಯಂತಹ ಒಂದು ಬಾಹ್ಯ ಉತ್ತೇಜನೆ ದೊರಕದೆ ಇದ್ದಾಗ, ಬೆಳವಣಿಗೆಯು ನಿಧಾನಗೊಳ್ಳುತ್ತಲೇ ಹೋಗುತ್ತದೆ. ಅದು ನಿಧಾನಗೊಳ್ಳುವ ಆರಂಭಿಕ ಹಂತದಲ್ಲಿ ಬಳಕೆಯಾಗದೆ ಉಳಿದ ಉತ್ಪಾದನಾ-ಸಾಮರ್ಥ್ಯದ ಪ್ರಮಾಣವು ಹೆಚ್ಚುತ್ತದೆ ಮತ್ತು ಈ ಪರಿಸ್ಥಿತಿಯ ಪರಿಣಾಮವಾಗಿ ಹೂಡಿಕೆಯ ದರ ಮತ್ತಷ್ಟು ತಗ್ಗುತ್ತದೆ ಮತ್ತು ಬೆಳವಣಿಗೆಯ ದರವನ್ನು ಕೆಳಗಿಳಿಸುತ್ತದೆ. ʻʻಬೆಳವಣಿಗೆಯ ಹಿಂದೂ ದರʼʼ ಎಂದು ಹಿಂದೆ ಕರೆಯಲಾದ ವಿದ್ಯಮಾನವು ಬಹಳ ಕಾಲ ಹಾಗೆಯೇ ಮುಂದುವರೆಯಿತು. ಆದರೆ, ಈಗ ಕರೆಯಲಾಗುವ ʻʻಬೆಳವಣಿಗೆಯ ಹಿಂದೂ ದರʼʼ ಅಷ್ಟೊಂದು ಕಾಲ ಮುಂದುವರೆಯದು ಏಕೆಂದರೆ, ಇದು ಮತ್ತಷ್ಟು ನಿಧಾನ-ಗತಿಗೆ ಕಾರಣವಾಗುತ್ತದೆ. ಅಂತಹ ಸಂದರ್ಭದಲ್ಲಿ ಈಗಾಗಲೇ ಸಂಭವಿಸಿರುವ ಅಸಮಾನತೆಯ ಹೆಚ್ಚಳವು ಮತ್ತಷ್ಟು ಹೆಚ್ಚಳದೊಂದಿಗೆ ಮುಂದುವರಿಯಬಹುದು, ಮತ್ತು ಅದು ದುಡಿಯುವ ಜನರ ಪರಿಸ್ಥಿತಿಗಳನ್ನು ಮತ್ತಷ್ಟು ಹದಗೆಡಿಸುತ್ತದೆ.
ರಘುರಾಮ ರಾಜನ್‌ರವರ ಆತಂಕವೆಂದರೆ, ಅರ್ಥವ್ಯವಸ್ಥೆಯ ಬೆಳವಣಿಗೆಯ ದರವು ನಿಯಂತ್ರಣ ನೀತಿಗಳ ಅವಧಿಯಲ್ಲಿ ಕಂಡ ದರಕ್ಕೆ ಮರಳುತ್ತಿದೆ ಎಂಬುದು; ಆದರೆ ಆ ಪರಿಸ್ಥಿತಿಗೆ ಮರಳಿದರೆ, ದುಡಿಯುವ ಜನರ ಪರಿಸ್ಥಿತಿಗಳು ಆಗ ಇದ್ದದ್ದಕ್ಕಿಂತಲೂ ಹೆಚ್ಚು ಕೆಟ್ಟದಾಗಿರುತ್ತವೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ