ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ಪೆಟ್ರೋ ಉತ್ಪನ್ನಗಳ ಚಿಲ್ಲರೆ ಬೆಲೆಗಳ ಏರಿಕೆಯು ಕಚ್ಚಾ ತೈಲದ ಬೆಲೆ ಏರಿಕೆಯ ಅನಿವಾರ್ಯ ಪರಿಣಾಮವಲ್ಲ. ಪೆಟ್ರೋ ಉತ್ಪನ್ನಗಳ ಚಿಲ್ಲರೆ ಬೆಲೆಗಳನ್ನು ಏರಿಸುವ ಕ್ರಮವೇ ಒಂದು ವಿತ್ತೀಯ ಕಾರ್ಯತಂತ್ರ. ಈ ಕಾರ್ಯತಂತ್ರದಿಂದಾಗಿಯೇ ಕಚ್ಚಾ ತೈಲದ ಅಂತಾರಾಷ್ಟ್ರೀಯ ಬೆಲೆಗಳು ಏರಿದ ಕೂಡಲೇ ಅವುಗಳ ಚಿಲ್ಲರೆ ಬೆಲೆಗಳೂ ಏರುತ್ತವೆ. ಆದರೆ ಈ ವಿತ್ತೀಯ ಕಾರ್ಯತಂತ್ರ ಅನಿವಾರ್ಯವೇನಲ್ಲ ಮತ್ತು, ಈ ಕಾರ್ಯತಂತ್ರವು ಉದ್ದೇಶಪೂರ್ವಕವಾಗಿಯೇ ಆಯ್ಕೆ ಮಾಡಿಕೊಂಡದ್ದು ಎಂಬ ಅಂಶವನ್ನು ಜನರಿಂದ ಮರೆಮಾಚಲಾಗಿದೆ. ದುಡಿಯುವ ಜನರನ್ನು ನೋಯಿಸುವುದೇ ಈ ಇಡೀ ಕಾರ್ಯತಂತ್ರದ ಮೂಲೋಧ್ದೇಶ. ಇದಕ್ಕೇ ಕಟ್ಟುಬಿದ್ದರೆ, ದೇಶವು ತುಂಬಾ ಪರಿತಪಿಸುವ ಸಮಯ ಬರಲಿದೆ.
ಹದಿನಾರು ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹದಿನಾಲ್ಕು ಬಾರಿ ಹೆಚ್ಚಿಸಲಾಗಿದೆ. ಲೀಟರ್‌ಗೆ 80 ಪೈಸೆಗಿಂತ ಕಡಿಮೆ ಇಲ್ಲದಂತೆ ಏರಿಕೆ ಮಾಡಲಾಗಿದೆ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಪ್ರತಿ ಲೀಟರ್‌ಗೆ ಕನಿಷ್ಟ ಹತ್ತು ರೂಪಾಯಿ ಒಟ್ಟು ಹೆಚ್ಚಳವಾಗಿದೆ.
ಈ ಏರಿಕೆಗಳಿಗೆ ಸರ್ಕಾರವು ಕೊಡುವ ವಿವರಣೆಯೆಂದರೆ, ಅಂತಾರಾಷ್ಟ್ರೀಯ ತೈಲ ಬೆಲೆಗಳು ಒಂದೇ ಸಮನೇ ಏರುತ್ತಿದ್ದರೂ ಸಹ, ತೈಲ ಕಂಪೆನಿಗಳು ಈ ಏರಿಕೆಯ ಆಘಾತವನ್ನು ಸುಮಾರು ದಿನಗಳ ಕಾಲ ತಡೆದುಕೊಂಡವು (ಐದು ರಾಜ್ಯಗಳಲ್ಲಿ ಚುನಾವಣೆಗಳು ನಡೆಯುತ್ತಿದ್ದ ಕಾರಣದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಸ್ಥಗಿತಗೊಳಿಸಲಾಗಿತ್ತು). ಈಗ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಸುವಂತೆ ಸರ್ಕಾರವು ತೈಲ ಕಂಪೆನಿಗಳಿಗೆ ಅನುಮತಿ ಕೊಟ್ಟಿರುವುದರಿಂದ, ಈ ತೈಲ ಕಂಪೆನಿಗಳು ತಾವು ಈ ವರೆಗೆ ತಡೆ ಹಿಡಿದಿದ್ದ ಏರಿಕೆಯನ್ನು ಈಗ ಒಂದೇ ಉಸಿರಿನಲ್ಲಿ ವಸೂಲಿ ಮಾಡುತ್ತಿವೆ. ಸಲೀಸಾಗಿ ಬರುವ ತೆರಿಗೆ ಆದಾಯದಲ್ಲಿ ಕೊಂಚವೂ ಕೊರೆಯಾಗಬಾರದು ಎಂಬ ಧೋರಣೆಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್‌ಗಳ ಮೇಲಿನ ತೆರಿಗೆಗಳನ್ನು ಇಳಿಕೆ ಮಾಡಲೊಪ್ಪದ ಕಾರಣದಿಂದಾಗಿ ತೈಲ ಕಂಪನಿಗಳು ಬೆಲೆ ಏರಿಕೆ ಮಾಡಿವೆ.
ತೈಲ ಕಂಪೆನಿಗಳು ಕಳೆದ ವರ್ಷ ನವೆಂಬರ್ 4ರಂದು ಕೊನೆಯ ಬಾರಿಗೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಏರಿಕೆ ಮಾಡಿದ್ದವು. ಅದರ ನಂತರ 137 ದಿನಗಳ ಕಾಲ ಬೆಲೆ-ಏರಿಕೆಯಾಗಿಲ್ಲ ಎಂದು ವಾದಿಸಲಾಗಿದೆ. ಆದರೆ, ಈ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ 82 ಡಾಲರ್‌ಗಳಿಂದ 117 ಡಾಲರ್‌ಗಳಿಗೆ ಏರಿಕೆಯಾಗಿದೆ. ಹಾಗಾಗಿ, ಸಾರ್ವಜನಿಕ ವಲಯದ ತೈಲ ಕಂಪನಿಗಳಿಗೆ 2.25 ಬಿಲಿಯನ್ ಡಾಲರ್ ಅಥವಾ 19,000 ಕೋಟಿ ರೂಪಾಯಿಗಳ ಆದಾಯ ನಷ್ಟವಾಗಿದೆ. ಈ ನಷ್ಟವನ್ನು ಸರಿದೂಗಿಸಿಕೊಳ್ಳಲು ತೈಲ ಕಂಪೆನಿಗಳು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಏರಿಸಿವೆ. ವಿಶ್ವ ತೈಲ ಬೆಲೆಗಳು ಒಂದು ವೇಳೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಮಟ್ಟದಲ್ಲಿ ಸ್ಥಿರಗೊಂಡರೆ, ಪೆಟ್ರೋಲಿಯಂ ಉತ್ಪನ್ನಗಳ ಚಿಲ್ಲರೆ ಬೆಲೆಯನ್ನು ಪ್ರತಿ ಲೀಟರ್‌ಗೆ 9 ರಿಂದ 12 ರೂ.ಗಳ ವರೆಗೆ ಏರಿಸಬೇಕಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ಆದಾಯದಲ್ಲಿ ಸ್ವಲ್ಪವನ್ನೂ ಕಳೆದುಕೊಳ್ಳಲು ತಯಾರಿಲ್ಲದಿದ್ದರೆ, ಪೆಟ್ರೋಲ್ ಮತ್ತು ಡೀಸೆಲ್‌ಗಳ ಬೆಲೆಗಳನ್ನು ಕನಿಷ್ಟ ಇನ್ನೂ ಏಳು ರೂ.ಗಳಷ್ಟು ಏರಿಕೆ ಮಾಡಬೇಕಾಗುತ್ತದೆ.
ಬೂಟಾಟಿಕೆಯ ಪರಾಕಾಷ್ಠೆ
ಈ ವಾದವನ್ನು ಮಾಡುವವರು ಒಂದು ಮುಖ್ಯವಾದ ಅಂಶವನ್ನೇ ಅರ್ಥಮಾಡಿಕೊಂಡಿಲ್ಲ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ತೈಲ ಕಂಪನಿಗಳು ಹೆಚ್ಚಿಸುತ್ತಿದ್ದಂತೆಯೇ, ಅವುಗಳ ಚಿಲ್ಲರೆ ಬೆಲೆಗಳು ಏರುವುದು (ಹಣದುಬ್ಬರ) ಮಾತ್ರವಲ್ಲದೆ, ಈ ಏರಿಕೆಯು ಉಂಟುಮಾಡುವ ವೆಚ್ಚ-ತಳ್ಳುವ ಪರಿಣಾಮಗಳಿಂದಾಗಿ ಇಡೀ ಅರ್ಥವ್ಯವಸ್ಥೆಯಲ್ಲಿ ಹಣದುಬ್ಬರ ಉಂಟಾಗುತ್ತದೆ. ಅಷ್ಟೇ ಅಲ್ಲ, ಹಣ ಲೆಕ್ಕದ ದೃಷ್ಟಿಯಲ್ಲಿ ತನ್ನ ನಿಜ ವೆಚ್ಚಗಳ ಗುರಿಗಳನ್ನು ಸಾಧಿಸುವುದಕ್ಕಾಗಿ ಸರ್ಕಾರವು ತನ್ನ ಆದಾಯವನ್ನೂ ಸಹ ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಅಂದರೆ, ತನ್ನ ಅದೇ ನಿಜ ವೆಚ್ಚಗಳ ಗುರಿಗಳನ್ನು ಸಾಧಿಸುವ ಉದ್ದೇಶಕ್ಕಾಗಿ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಸರ್ಕಾರವೂ ಸಹ ಪೆಟ್ರೋಲ್ ಮತ್ತು ಡೀಸೆಲ್‌ಗಳ ಮೇಲಿನ ತೆರಿಗೆಗಳನ್ನು ಹೆಚ್ಚಿಸಬೇಕಾಗುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಪೆಟ್ರೋ-ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸುವ ಪ್ರಕ್ರಿಯೆಯು ಕೇವಲ ತೈಲ ಕಂಪನಿಗಳಿಗೆ ಮಾತ್ರ ಸೀಮಿತವಾಗುವುದಿಲ್ಲ. ಈ ಏರಿಕೆಯು ಒಂದು ಗುಣಾಕಾರಾತ್ಮಕ ಪರಿಣಾಮವನ್ನು ಹೊಂದಿದೆ: ಪೆಟ್ರೋಲ್ ಮತ್ತು ಡೀಸೆಲ್‌ಗಳ ಚಿಲ್ಲರೆ ಬೆಲೆ ಏರಿಕೆಯ ಭಾರವನ್ನು ಹೊರುವ ಪ್ರತಿ ಘಟಕವೂ ಅದನ್ನು ಅನಿವಾರ್ಯವಾಗಿ ತಮ್ಮ ಉತ್ಪನ್ನ/ಸೇವೆಗಳನ್ನು ಬಳಸುವವರಿಗೆ ದಾಟಿಸಬೇಕಾಗುತ್ತದೆ. ಹಾಗಾಗಿ, ಹಣದುಬ್ಬರದ ಹೆಚ್ಚಳವು ಇನ್ನೂ ದೊಡ್ಡದಾಗುತ್ತದೆ.
ಇಂಥಹ ಒಂದು ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ ಅದನ್ನು ಸರಿದೂಗಿಸುವಷ್ಟು ಮಟ್ಟಿಗೆ ಜನರ ಹಣ ಆದಾಯವು ಏರದಿದ್ದರೆ ಮಾತ್ರ ಬೆಲೆಗಳು ಅದೇ ಮಟ್ಟದಲ್ಲಿ ಉಳಿಯುತ್ತವೆ. ಸರಕು-ಸೇವೆಗಳ ಬೆಲೆ ಏರಿಕೆಯನ್ನು ಸರಿದೂಗಿಸುವಷ್ಟು ಆದಾಯ ದೊರಕದ ಜನರು ಯಾರು ಎಂದರೆ, ಅವರು ದುಡಿಯುವ ಜನರಾಗಿರಲು ಮಾತ್ರ ಸಾಧ್ಯ. ಈ ಅಂಶವನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಪೆಟ್ರೋ-ಉತ್ಪನ್ನಗಳ ಮೇಲಿನ ತೆರಿಗೆಗಳ ಮೂಲಕ ಸಂಪನ್ಮೂಲಗಳನ್ನು ಸಂಗ್ರಹಿಸುವ ವಿತ್ತೀಯ ಕಾರ್ಯತಂತ್ರವು, ದುಡಿಯುವ ಜನರನ್ನು ತೊಂದರೆಗಳಿಗೆ ಈಡು ಮಾಡುತ್ತದೆ ಎಂಬುದನ್ನು ಸರ್ಕಾರವು ಗ್ರಹಿಸಿರುತ್ತದೆ. ದುಡಿಯುವ ಜನರಿಗೆ ನೋವುಂಟಾಗಬಾರದು ಮತ್ತು ಅವರ ಹಣ ಆದಾಯವೂ ಹಣದುಬ್ಬರ ಏರಿದ ಮಟ್ಟದಲ್ಲೇ ಏರಿದರೆ, ಆಗ ಹಣದುಬ್ಬರ ಎಂಬುದಕ್ಕೆ ಕೊನೆಯೇ ಇರುವುದಿಲ್ಲ. ಆದ್ದರಿಂದ, ದುಡಿಯುವ ಜನರನ್ನು ನೋಯಿಸುವುದೇ ಈ ಇಡೀ ಕಾರ್ಯತಂತ್ರದ ಮೂಲೋಧ್ದೇಶ. ಇಂತಹ ಒಂದು ವಿತ್ತೀಯ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳುವುದು ಮತ್ತು ಅದೇ ಸಮಯದಲ್ಲಿ ದುಡಿಯುವ ಜನರಿಗಾಗಿ ಕಣ್ಣೀರು ಸುರಿಸುವುದು ಬೂಟಾಟಿಕೆಯ ಪರಾಕಾಷ್ಠೆಯಾಗುತ್ತದೆ.
ಉದ್ದೇಶಪೂರ್ವಕವಾದ ವಿತ್ತೀಯ ಕಾರ್ಯತಂತ್ರ
ಇಲ್ಲಿ ನಾವು ಗಮನಿಸಬೇಕಾದ ಮುಖ್ಯ ಅಂಶ ಯಾವುದು ಎಂದರೆ, ಕಚ್ಚಾ ತೈಲದ ಬೆಲೆಗಳು ಏರಿದ ಕೂಡಲೇ ಅದರ ಉತ್ಪನ್ನಗಳ ಚಿಲ್ಲರೆ ಬೆಲೆಗಳು ಅಪ್ರಜ್ಞಾಪೂರ್ವಕವಾಗಿ ಅಥವಾ ಯಾಂತ್ರಿಕವಾಗಿ ಏರುತ್ತವೆ ಎಂಬುದಲ್ಲ. ಇದೊಂದು ಸ್ವಯಂಚಾಲಿತ ವಿದ್ಯಮಾನವೇನಲ್ಲ. ಒಂದು ಇನ್ನೊಂದರ ಅನಿವಾರ್ಯ ಪರಿಣಾಮವೂ ಅಲ್ಲ. ಅಂದರೆ, ಚಿಲ್ಲರೆ ಬೆಲೆಗಳ ಏರಿಕೆಯು ಕಚ್ಚಾ ತೈಲದ ಬೆಲೆ ಏರಿಕೆಯಿಂದಾದ ಅನಿವಾರ್ಯ ಪರಿಣಾಮವಲ್ಲ. ಪೆಟ್ರೋ ಉತ್ಪನ್ನಗಳ ಚಿಲ್ಲರೆ ಬೆಲೆಗಳನ್ನು ಏರಿಸುವ ಕ್ರಮವೇ ಒಂದು ವಿತ್ತೀಯ ಕಾರ್ಯತಂತ್ರ. ಈ ಕಾರ್ಯತಂತ್ರದಿಂದಾಗಿಯೇ ಕಚ್ಚಾ ತೈಲದ ಅಂತಾರಾಷ್ಟ್ರೀಯ ಬೆಲೆಗಳು ಏರಿದ ಕೂಡಲೇ ಅವುಗಳ ಚಿಲ್ಲರೆ ಬೆಲೆಗಳೂ ಏರುತ್ತವೆ. ಈ ವಿತ್ತೀಯ ಕಾರ್ಯತಂತ್ರವು ಬದಲಾಗದಿದ್ದರೆ ಮಾತ್ರ ಚಿಲ್ಲರೆ ಬೆಲೆಗಳು ಏರಬೇಕಾಗುತ್ತದೆ. ಆದ್ದರಿಂದ, ಪೆಟ್ರೋ-ಉತ್ಪನ್ನಗಳ ಚಿಲ್ಲರೆ ಬೆಲೆಗಳ ಏರಿಕೆಯ ಅನಿವಾರ್ಯತೆಯ ಬಗ್ಗೆ ಮಾತನಾಡುವುದು, ಈ ವಿತ್ತೀಯ ಕಾರ್ಯತಂತ್ರವೇ ಒಂದು ಅನಿವಾರ್ಯತೆ ಎಂದು ಭಾವಿಸಿದಂತಾಗುತ್ತದೆ. ಮತ್ತು, ಈ ಕಾರ್ಯತಂತ್ರವು ಒಂದು ಅಪ್ರಜ್ಞಾಪೂರ್ವಕ ಆಯ್ಕೆಯಲ್ಲ, ಉದ್ದೇಶಪೂರ್ವಕವಾಗಿಯೇ ಆಯ್ಕೆ ಮಾಡಿಕೊಂಡದ್ದು ಎಂಬ ಅಂಶವನ್ನು ಜನರಿಂದ ಮರೆಮಾಚಲಾಗಿದೆ. ವಾಸ್ತವಿಕವಾಗಿ ಹೇಳುವುದಾದರೆ, ಈಗ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆಗಳು ಪೆಟ್ರೋಲ್ ಮತ್ತು ಡೀಸೆಲ್‌ಗಳ ಚಿಲ್ಲರೆ ಬೆಲೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಪಾಲನ್ನು ಹೊಂದಿವೆ.
ತೆರಿಗೆಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ, ರಾಜ್ಯ ಸರ್ಕಾರಗಳಿಗೆ ಒದಗಿರುವ ಅಸಹಾಯಕ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬಹುದು: ತಮ್ಮ ವಿವೇಚನೆಗೆ ಒಳಪಟ್ಟ ಕೆಲವೇ ಕೆಲವು ಆದಾಯದ ಮೂಲಗಳನ್ನು ಅವರು ಹೊಂದಿದ್ದಾರೆ. ಜಿಎಸ್‌ಟಿಯನ್ನು ಜಾರಿಗೊಳಿಸಿದ ನಂತರ, ರಾಜ್ಯ ಸರ್ಕಾರಗಳ ವಿವೇಚನಾ ವ್ಯಾಪ್ತಿಯು ತೀವ್ರವಾಗಿ ಕುಗ್ಗಿದೆ. ತೆರಿಗೆ ದರಗಳನ್ನು ಜಿಎಸ್‌ಟಿ ಕೌನ್ಸಿಲ್ ನಿಗದಿಪಡಿಸದ ಮತ್ತು ರಾಜ್ಯ ಸರ್ಕಾರಗಳು ನಿಗದಿಪಡಿಸಬಹುದಾದ ಮೂರು ಸರಕುಗಳಲ್ಲಿ ಪೆಟ್ರೋ ಉತ್ಪನ್ನಗಳು ಒಂದಾಗಿದೆ. ಇಂತಹ ಒಂದು ಸಂವೃದ್ಧ ಮೂಲವನ್ನು ಬಿಟ್ಟರೆ ಅವರಿಗೆ ಬೇರೆ ಆಯ್ಕೆಗಳಿಲ್ಲ. ನೇರ ತೆರಿಗೆಗಳನ್ನು ವಿಧಿಸುವ ಅಧಿಕಾರವಿಲ್ಲದುದರಿಂದ, ರಾಜ್ಯ ಸರ್ಕಾರಗಳು ಪೆಟ್ರೋ-ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಅನಿವಾರ್ಯತೆಯನ್ನು ಅರ್ಥಮಾಡಿಕೊಳ್ಳಬಹುದು.
ಆದರೆ, ಇತರ ವಿಧಾನಗಳ ಮೂಲಕ ಸಂಪನ್ಮೂಲಗಳನ್ನು ಸಂಗ್ರಹಿಸುವ ವಿಪುಲ ಅವಕಾಶಗಳನ್ನು ಹೊಂದಿರುವ ಕೇಂದ್ರ ಸರ್ಕಾರವು ಅವುಗಳನ್ನು ಉದ್ದೇಶಪೂರ್ವಕವಾಗಿಯೇ ಬಳಸುತ್ತಿಲ್ಲ. ಶ್ರೀಮಂತರ ಮೇಲೆ ನೇರ ತೆರಿಗೆಗಳನ್ನು ವಿಧಿಸುವುದರ ಬದಲು ಪೆಟ್ರೋ-ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವುದೇ ಕೇಂದ್ರ ಸರ್ಕಾರ ಮಾಡಿಕೊಂಡಿರುವ ಆಯ್ಕೆ. ಈ ಆಯ್ಕೆಯು ವರ್ಗ ಪಕ್ಷಪಾತ. ಕೇಂದ್ರದ ಈ ಆಯ್ಕೆಯು ಅನಿವಾರ್ಯವಾದುದೇನೂ ಅಲ್ಲ.
ಪರ್ಯಾಯ ದಾರಿ
ಪೆಟ್ರೋ ಉತ್ಪನ್ನಗಳನ್ನು ಪ್ರಧಾನವಾಗಿ ಶ್ರೀಮಂತರೇ ಬಳಸುತ್ತಾರೆ. ಆದ್ದರಿಂದ, ಅವುಗಳ ಮೇಲೆ ತೆರಿಗೆ ವಿಧಿಸುವ ಕ್ರಮವು ಬಡವರ ಮೇಲೆ ಗಂಭೀರ ಪರಿಣಾಮ ಬೀರುವುದಿಲ್ಲ ಎಂದು ಭಾವಿಸುವುದು ಕನಿಷ್ಠ ಮೂರು ಕಾರಣಗಳಿಂದಾಗಿ ತಪ್ಪಾಗುತ್ತದೆ. ಮೊದಲನೆಯದು, ಪೆಟ್ರೋ-ಉತ್ಪನ್ನಗಳ ಪೈಕಿ ದುಡಿಯುವ ಜನರು ನೇರವಾಗಿ ಬಳಸುವ ಅನೇಕ ಉತ್ಪನ್ನಗಳಿವೆ. ಒಂದು ಸ್ಪಷ್ಟ ಉದಾಹರಣೆಯೆಂದರೆ ಅಡುಗೆ ಅನಿಲ. ಎರಡನೆಯದು, ಪೆಟ್ರೋ ಉತ್ಪನ್ನಗಳ ಬೆಲೆ ಏರಿಕೆಯು ಸಾಗಣೆ ವೆಚ್ಚಗಳನ್ನು ಹೆಚ್ಚಿಸುತ್ತದೆ. ಅದರಿಂದಾಗಿ, ಬಡವರ ಬಳಕೆಯ ಬುಟ್ಟಿಗೆ ಬಲವಾಗಿ ಪ್ರವೇಶಿಸುವ ಆಹಾರ ಧಾನ್ಯಗಳಂತಹ ಮೂಲಭೂತ ಸರಕುಗಳೂ ಸೇರಿದಂತೆ ಎಲ್ಲಾ ಸರಕು ಸಾಮಗ್ರಿಗಳ ಬೆಲೆಗಳೂ ಏರುತ್ತವೆ. ಮೂರನೆಯದು, ದುಡಿಯುವ ಜನರು ಬಳಸುವ ಸರಕುಗಳ ಉತ್ಪಾದನೆಯಲ್ಲಿ ಅಥವಾ ಸಾಗಾಣಿಕೆಯಲ್ಲಿ ಪೆಟ್ರೋ-ಉತ್ಪನ್ನಗಳು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರವೇಶಿಸುವುದಿಲ್ಲ ಎಂದುಕೊಂಡರೂ, ಮತ್ತು, ಬಂಡವಾಳಶಾಹಿಗಳಿಗೇ ಅಗತ್ಯವಾದ ಸರಕುಗಳ ಉತ್ಪಾದನೆಯಲ್ಲಿ ಮಾತ್ರ ಅವು ಪ್ರವೇಶಿಸಿದರೂ, ಈ ಸರಕುಗಳ ಮೇಲೆ ತಮ್ಮ ನಿಜ ಅಧಿಕಾರವನ್ನು ಉಳಿಸಿಕೊಳ್ಳಲು ಮತ್ತು ತಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಲು ದುಡಿಯುವ ಜನರು ಬಳಸುವ ಸರಕುಗಳ ಬೆಲೆಗಳನ್ನು ಅವರು ಹೆಚ್ಚಿಸುತ್ತಾರೆ. ಹಾಗಾಗಿ, ಪೆಟ್ರೋ-ಉತ್ಪನ್ನಗಳ ಬೆಲೆ ಹೆಚ್ಚಳವು ಬಡವರನ್ನು ನೋಯಿಸುತ್ತದೆ. ಹಣದುಬ್ಬರದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಶ್ರೀಮಂತರು ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಪೆಟ್ರೋ-ಉತ್ಪನ್ನಗಳ ಬೆಲೆ ಹೆಚ್ಚಳವು ಅವರನ್ನು ಅಷ್ಟಾಗಿ ನೋಯಿಸುವುದಿಲ್ಲ.
ಶ್ರೀಮಂತರ ಮೇಲೆ ವಿಧಿಸುವ ನೇರ ತೆರಿಗೆಗಳನ್ನೇ ಅವಲಂಬಿಸಿದ ಒಂದು ಪರ್ಯಾಯ ವಿತ್ತೀಯ ಕಾರ್ಯತಂತ್ರವನ್ನು ಅನುಸರಿಸುವ ಮೂಲಕ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಏರಿದರೂ ಸಹ, ಪೆಟ್ರೋ-ಉತ್ಪನ್ನಗಳ ಬೆಲೆಗಳನ್ನು ಬದಲಾಯಿಸದೆ ಉಳಿಸಿಕೊಳ್ಳುವುದು (ಅವುಗಳ ಬೆಲೆಯನ್ನು ಇಳಿಸುವುದೂ ಸಹ ಸಾಧ್ಯವಿದೆ) ಮತ್ತು ಸರ್ಕಾರದ ಆದಾಯವನ್ನು ಹೆಚ್ಚಿಸಿಕೊಳ್ಳವುದೂ ಸಾಧ್ಯವಿದೆ. ಅಂತಹ ನೇರ ತೆರಿಗೆಗಳಲ್ಲಿ ಪ್ರಮುಖವಾದುದು ಸಂಪತ್ತು ತೆರಿಗೆ ಮತ್ತು ಉತ್ತರಾಧಿಕಾರದ ತೆರಿಗೆ. ಅದೇನೋ ಸರಿಯೇ. ಆದರೆ, ಕಚ್ಚಾ ತೈಲದ ಬೆಲೆಗಳು ಡಾಲರ್ ಕರೆನ್ಸಿಯಲ್ಲಿ ಏರಿಕೆಯಾದಾಗ, ಅತಿ ಅಗತ್ಯದ ಪೆಟ್ರೋ-ಉತ್ಪನ್ನಗಳ ಆಂತರಿಕ/ ದೇಶೀಯ ಬಳಕೆಯನ್ನು ಕಡಿಮೆ ಮಾಡುವುದು ಹೇಗೆ ಮತ್ತು ಅವುಗಳ ಬೆಲೆಯನ್ನೂ ಏರಿಸದೇ ಅದನ್ನು ಸಾಧಿಸುವುದಾದರೂ ಹೇಗೆ? ಎಂದು ಕೇಳಬಹುದು.
ಯಾರು “ಬೆಲೆ ತೆರುವವರು” ಅಲ್ಲವೊ ಅವರು (ಇಲ್ಲಿ ಅವರು ಅಂದರೆ “ಬೆಲೆ-ನಿರ್ಧರಿಸುವವರು” ಎಂದರ್ಥ) ಪೆಟ್ರೋ-ಉತ್ಪನ್ನಗಳ ಬೆಲೆ ಏರಿಕೆಯಾದಾಗಲೂ ಅವುಗಳ ಬಳಕೆಯನ್ನು ತಮ್ಮ ಹಿಂದಿನ ಮಟ್ಟದಲ್ಲೇ ಉಳಿಸಿಕೊಳ್ಳಬಲ್ಲರು. ನಾವು ನೋಡಿರುವಂತೆ, ಅಂತಹ ಉತ್ಪನ್ನಗಳ ಬಳಕೆಯು ಯಾವ ಗುಂಪಿನಲ್ಲಿ ಕುಗ್ಗುವುದು ದುಡಿಯುವ ಜನರಲ್ಲಿ ಮಾತ್ರ. ಅವರೂ ಸಹ, ಪೆಟ್ರೋ ಉತ್ಪನ್ನಗಳ ತಮ್ಮ ಬಳಕೆಯನ್ನು ಹಿಂದಿನ ಮಟ್ಟದಲ್ಲೇ ಉಳಿಸಿಕೊಳ್ಳಲು ಇತರ ಸರಕುಗಳ ಬಳಕೆಯನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಹಾಗಾಗಿ, ಅರ್ಥವ್ಯವಸ್ಥೆಯಲ್ಲಿ ಒಂದು ಹಿಂಜರಿತ ಸೃಷ್ಟಿಯಾಗುತ್ತದೆ. ಈ ಹಿಂಜರಿತವು ಇನ್ನೂ ಹೆಚ್ಚಿನ ನಿರುದ್ಯೋಗಕ್ಕೆ ಕಾರಣವಾಗುತ್ತದೆ ಮತ್ತು ವಾಸ್ತವವಾಗಿ ಇದು ಬಳಕೆಯನ್ನು ಕಡಿತಗೊಳಿಸುವ ಸಾಧನವೇ ಆಗುತ್ತದೆ. ಆದರೆ, ಪೆಟ್ರೋ-ಉತ್ಪನ್ನಗಳ ಬಳಕೆಯಲ್ಲಿ ಕಡಿತವನ್ನು ಉಂಟುಮಾಡದ, ಹಣದುಬ್ಬರ-ರಹಿತವಾದ ಮತ್ತು ಆರ್ಥಿಕ ಹಿಂಜರಿತ ಉಂಟುಮಾಡದ ವಿಧಾನ ಯಾವುದು ಎಂದರೆ, ಅದು ಬೆಲೆ-ನಿಯಂತ್ರಣದ ಶಾಸನಬದ್ಧ ಪಡಿತರ ಪದ್ಧತಿಯೇ.
ಪೆಟ್ರೋ-ಉತ್ಪನ್ನಗಳ ವಿತರಣೆಯಲ್ಲಿ ಸರ್ವ ಜನರಿಗೂ ನ್ಯಾಯ ಸಿಗುವಂತೆ ನೋಡಿಕೊಳ್ಳುವ ಒಂದು ಸಾಧನವೆಂದರೆ, ಅದು ಪಡಿತರ ವ್ಯವಸ್ಥೆಯೇ. ಬೆಲೆ-ಏರಿಕೆಯ ಮೂಲಕ ಜಾರಿಯಾಗುವ ಇಂಗಿತ-ಪಡಿತರವು ಸಾರಭೂತವಾಗಿ ಅಸಮಾನತೆಯಿಂದ ಕೂಡಿರುತ್ತದೆ. ಆದರೆ, ಪೆಟ್ರೋ-ಉತ್ಪನ್ನಗಳ ಚಿಲ್ಲರೆ ಬೆಲೆಯನ್ನು ನಿಯಂತ್ರಿಸಿದ ಒಂದು ನೇರ ಪಡಿತರ ವಿತರಣೆಯು, ಸರ್ವ ಜನರಿಗೂ ಸಮಾನ ನ್ಯಾಯ ಒದಗಿಸುತ್ತದೆ.
ಕಚ್ಚಾ ತೈಲ ಬೆಲೆಗಳ ಜಾಗತಿಕ ಏರಿಕೆಯಿಂದ ಉಂಟಾದ ಪರಿಸ್ಥಿತಿಯನ್ನು ನಿಭಾಯಿಸಲು ಕೆಲವು ನೀತಿಗಳ ಸಂಯೋಜನೆ ಅಗತ್ಯವಾಗುತ್ತದೆ. ಶ್ರೀಮಂತರ ಮೇಲೆ ವಿಧಿಸುವ ನೇರ ತೆರಿಗೆಗಳನ್ನೇ ಅವಲಂಬಿಸಿದ ಒಂದು ವಿತ್ತೀಯ ನೀತಿ; ಪೆಟ್ರೋ ಉತ್ಪನ್ನಗಳ ಚಿಲ್ಲರೆ ಬೆಲೆಗಳ ಮೇಲೆ ನಿಯಂತ್ರಣ ಮತ್ತು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಇಳಿಕೆ; ಮತ್ತು, ಕಚ್ಚಾ ತೈಲದ ಒಟ್ಟು ಆಮದನ್ನು ಮಿತಿಗೊಳಿಸುವುದು ಮತ್ತು ಆ ಉದ್ದೇಶಕ್ಕಾಗಿ ಅವುಗಳ ಬೆಲೆ-ಏರಿಕೆಯನ್ನು ಅವಲಂಬಿಸುವ ಬದಲು, ಪೆಟ್ರೋಲ್ ಮತ್ತು ಡೀಸೆಲ್‌ಗಳ ವಿತರಣೆಯಲ್ಲಿ ಒಂದು ಪರಿಮಾಣಾತ್ಮಕ ಪಡಿತರದ ನೀತಿ, ಇವುಗಳನ್ನು ಅನುಸರಿಸಬೇಕಾಗುತ್ತದೆ. ಇಂತಹ ಸಂಯೋಜಿತ ನೀತಿಗಳನ್ನು ಅಳವಡಿಸಿಕೊಳ್ಳುವುದರ ಬದಲು, ಇಲ್ಲಿಯವರೆಗೆ ನಾವು ಅನುಸರಿಸಿದ ನೀತಿಗಳಿಗೇ ಕಟ್ಟುಬಿದ್ದರೆ, ದೇಶವು ತುಂಬಾ ಪರಿತಪಿಸಬೇಕಾದ ಸಮಯ ಬರಲಿದೆ.
ದಿನಕ್ಕೆ ಲೀಟರಿಗೆ 80 ಪೈಸೆ…. ಸುಮಾರು ಗುಜರಾತ್ ಚುನಾವಣೆಗಳ 3 ತಿಂಗಳ ಮೊದಲಿನ ವರೆಗೆ..
ಅದರಿಂದ ಲೀಟರಿಗೆ ರೂ.5-10 ಚುನಾವಣಾ ಬಕ್ಷೀಶು ಕಳೆಯಿರಿ.. ಎಷ್ಟಾಗುತ್ತದೆ ನಿರ್ಮಲಾಜೀ?
ವ್ಯಂಗ್ಯಚಿತ್ರ: ಅಲೋಕ್ ನಿರಂತರ್