ಮೇ ದಿನ: ಚಿಕಾಗೋ ನಗರದ ‘ಹೇಮಾರ್ಕೆಟ್ ಹುತಾತ್ಮರನ್ನು’ ಸ್ಮರಿಸೋಣ

 

ಮೇ ದಿನವು ಅಂತರರಾಷ್ಟ್ರೀಯ ಕಾರ್ಮಿಕ ವರ್ಗದ ಐಕ್ಯತೆಯ ಸಂಕೇತವಾಗಿದೆ. ಇದು ಕಾರ್ಮಿಕ ವರ್ಗದ ಪ್ರಜ್ಞೆಯ ಸಂಕೇತ. ಶ್ರಮದ ಶೋಷಣೆಯ ವಿರುದ್ಧ ಸಾವಿರಾರು ಧ್ವನಿಗಳು ಒಗ್ಗಟ್ಟಾಗಿ ವ್ಯಕ್ತವಾದುದಕ್ಕೆ ಇತಿಹಾಸವೇ ಸಾಕ್ಷಿ. ಮೇ 1, 1890 ರಂದು, ಹೇಮಾರ್ಕೆಟ್ ಹುತಾತ್ಮರ ಸ್ಮರಣೆಯನ್ನು ಸ್ಮರಿಸಿಕೊಂಡು, ಹಲವಾರು ದೇಶಗಳಲ್ಲಿನ ಕಾರ್ಮಿಕರು ಎಂಟು ಗಂಟೆಗಳ ಕೆಲಸದ ದಿನವನ್ನು ಒತ್ತಾಯಿಸಿ ಮುಷ್ಕರಗಳು ಮತ್ತು ಪ್ರದರ್ಶನಗಳನ್ನು ನಡೆಸಿದರು. ಅಂದಿನಿಂದ, ಮೇ 1, ಅಥವಾ ಮೇ ದಿನವು ಅಂತರರಾಷ್ಟ್ರೀಯ ಕಾರ್ಮಿಕರ ದಿನವಾಗಿದೆ. ಕಾರ್ಮಿಕರು ನಡೆಸಿದ ವೀರೋಚಿತ ಹೋರಾಟಗಳ ಪರಿಣಾಮವಾಗಿ ಜಾಗತಿಕ ಕಾರ್ಮಿಕ ವರ್ಗವು ಕೆಲವು ಹಕ್ಕುಗಳನ್ನು ಪಡೆದುಕೊಂಡಿತು. ಆಳುವ ವರ್ಗ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಸಮಯದಲ್ಲಿ ಮೇ ದಿನದ ಕುರಿತು ಒಂದು ವಿಶೇಷ ಲೇಖನ…

 

ಗಣಿಗಳಲ್ಲಿ ಬಾಲಕಾರ್ಮಿಕರ ಬಳಕೆ

18ನೇ ಶತಮಾನವನ್ನು ಮಾನವ ಜನಾಂಗದ ಇತಿಹಾಸದಲ್ಲಿ ಅಭಿವೃದ್ಧಿಯ ಶತಮಾನ ಎಂದು ಕರೆಯಲಾಗುತ್ತದೆ. ಈ ಶತಮಾನದಲ್ಲಿ ಇಂಗ್ಲೆಂಡ್ ಮತ್ತು ಇತರ ಕೆಲವು ಯುರೋಪಿಯನ್ ದೇಶಗಳಲ್ಲಿ ಉಗಿ ಯಂತ್ರಗಳನ್ನು ಉತ್ಪಾದನಾ ವಲಯಕ್ಕೆ ಪರಿಚಯಿಸುವುದರೊಂದಿಗೆ ಕೈಗಾರಿಕೀಕರಣ ಪ್ರಕ್ರಿಯೆಯು ಪ್ರಾರಂಭವಾಯಿತು. ಮಾರ್ಚ್ 1776ರಲ್ಲಿ, ವ್ಯಾಟ್ಸನ್ ಅವರ ಉಗಿ ಯಂತ್ರವನ್ನು ಮೊದಲು ಇಂಗ್ಲೆಂಡ್‌ನ ಕಲ್ಲಿದ್ದಲು ಗಣಿಯಲ್ಲಿ ಬಳಸಲಾಯಿತು. ಕೈಗಾರಿಕಾ ಕ್ರಾಂತಿಯ ಆರಂಭಿಕ ದಿನಗಳಲ್ಲಿ, ಕಾರ್ಮಿಕರು ಗುಲಾಮರಂತೆ ದುಡಿಯುತ್ತಿದ್ದರು. ಹೆಚ್ಚಿನ ಲಾಭ ಗಳಿಸುವ ಆಶಯದೊಂದಿಗೆ ಕೈಗಾರಿಕೋದ್ಯಮಿಗಳು 6 ಮತ್ತು 7 ವರ್ಷ ವಯಸ್ಸಿನ ಮಕ್ಕಳನ್ನು ಮತ್ತು ಮಹಿಳೆಯರನ್ನು ಕಾರ್ಖಾನೆಗಳು ಮತ್ತು ಗಣಿಗಳಲ್ಲಿ ಕೆಲಸ ಮಾಡಲು ಬಳಸಿಕೊಂಡರು. ಗಣಿಗಳಲ್ಲಿ ಮತ್ತು ಕತ್ತಲೆಯ ಸುರಂಗಗಳಲ್ಲಿ ಬಾಲಕಾರ್ಮಿಕರು ತಮ್ಮ ಮೊಣಕೈಗಳು ಮತ್ತು ಮೊಣಕಾಲುಗಳ ಮೇಲೆ ತೆವಳುತ್ತಾ ಕಲ್ಲಿದ್ದಲನ್ನು ಸಾಗಿಸುತ್ತಿದ್ದರು. ಅವರು ಚಿಮಣಿಗಳನ್ನು ಹತ್ತಿ ಸ್ವಚ್ಛಗೊಳಿಸುತ್ತಿದ್ದರು. ಇಂಗ್ಲೆಂಡ್‌ ನ ಅನಾಥಾಶ್ರಮಗಳಲ್ಲಿರುವ ಮಕ್ಕಳನ್ನು ಅನಾಥಾಶ್ರಮ ಅಧಿಕಾರಿಗಳು ಕೈಗಾರಿಕೋದ್ಯಮಿಗಳಿಗೆ ದನಗಳಂತೆ ಮಾರುತ್ತಿದ್ದರು.

ಇದನ್ನೂ ಓದಿವಿಮೋಚನೆಗೆ 50 ವರ್ಷ : ಹಮಾರಾ ನಾಮ್, ತುಮಾರಾ ನಾಮ್, ವಿಯೇಟ್ನಾಂ ವಿಯೇಟ್ನಾಂ !

16 ಗಂಟೆಗಳ ಕಾಲ ಕೆಲಸ

ಆ ಬಾಲ ಕಾರ್ಮಿಕರು ಬೆಳಿಗ್ಗೆಯಿಂದ ಸಂಜೆಯವರೆಗೆ ಯಂತ್ರಗಳ ಬಳಿ ನಿಂತು ಕೆಲಸ ಮಾಡುತ್ತಿದ್ದರು. ಅವರು ಒಂದು ಕ್ಷಣ ಕಣ್ಣು ಮುಚ್ಚಿದರೂ ಅವರಿಗೆ ಛಡಿಯೇಟು ಶಿಕ್ಷೆ ವಿಧಿಸಲಾಗುತ್ತಿತ್ತು. ಆಗ ಕಾರ್ಮಿಕರ ಮೇಲೆ ಕೆಲಸದ ಹೊರೆ ಹೆಚ್ಚಾಗಿತ್ತು ಮಾತ್ರವಲ್ಲದೆ, ಕೆಲಸದ ಸಮಯವು ಅಧಿಕವಾಗಿತ್ತು. ಅವರು ದಿನಕ್ಕೆ 16 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರು. ಕೆಲವು ಹೂಡಿಕೆದಾರರು ಅವರಿಂದ ದಿನಕ್ಕೆ 20 ಗಂಟೆಗಳ ಕಾಲ ಕೆಲಸ ಮಾಡಿಸುತ್ತಿದ್ದರು.

1806 ರಲ್ಲಿ, ಫಿಲಡೆಲ್ಫಿಯಾ ನಗರದ ಕಾರ್ಮಿಕರ ಮುಷ್ಕರ

ಅದು ಕಾರ್ಮಿಕರನ್ನು ಹೆಚ್ಚು ಶೋಷಣೆಗೆ ಒಳಪಡಿಸುತ್ತಿದ್ದ ಕಾಲ. ಆಗ ಕೆಲಸದ ದಿನ ‘ಬೆಳಗ್ಗೆಯಿಂದ ಮುಸ್ಸಂಜೆಯವರೆಗೆ’ ಇತ್ತು. ಇದನ್ನು ಮೀರಿ 16, 17, 18 ಗಂಟೆಗಳ ಕೆಲಸದ ದಿನಗಳು ಸಾಮಾನ್ಯ ಎಂಬಂತ್ತಾಗಿದ್ದವು. ದೀರ್ಘ ಕೆಲಸದ ಸಮಯವು ಕಾರ್ಮಿಕರನ್ನು ಇನ್ನಷ್ಟು ಬಳಲುವಂತೆ ಮಾಡಿತು. 19ನೇ ಶತಮಾನದ ಆರಂಭದಲ್ಲೇ ಅಮೇರಿಕದ ಕಾರ್ಮಿಕರು ಇದರಿಂದ ತಮ್ಮ ಬದುಕು ಮತ್ತು ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ಮಾತನಾಡತೊಗಿದರು. 1806 ರಲ್ಲಿ, ಅಮೆರಿಕದ ಫಿಲಡೆಲ್ಫಿಯಾದಲ್ಲಿ ಶೂ ತಯಾರಕರು ಮುಷ್ಕರ ನಡೆಸಿದರು. ಅವರ ನಾಯಕರ ವಿರುದ್ಧ ಪಿತೂರಿ ಪ್ರಕರಣ ದಾಖಲಿಸಲಾಯಿತು. ಕಾರ್ಮಿಕ ನಾಯಕರ ತನಿಖೆಯ ಸಮಯದಲ್ಲಿ, ಉದ್ಯೋಗದಾತರು ಕಾರ್ಮಿಕರನ್ನು ದಿನಕ್ಕೆ 19 ರಿಂದ 20 ಗಂಟೆಗಳ ಕಾಲ ಕೆಲಸ ಮಾಡುವಂತೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿತು.1820 ಮತ್ತು 1830 ರ ದಶಕಗಳಲ್ಲಿ ಕಡಿಮೆ ಕೆಲಸದ ಸಮಯವನ್ನು ಒತ್ತಾಯಿಸಿ ಅನೇಕ ಮುಷ್ಕರಗಳು ನಡೆದವು. ಹತ್ತು ಗಂಟೆಗಳ ಕೆಲಸದ ದಿನ, ವೇತನ ಹೆಚ್ಚಳ ಮತ್ತು ಸಂಘಕ್ಕೆ ಸೇರುವ ಹಕ್ಕಿನಂತಹ ವಿಷಯಗಳನ್ನು ಕಾರ್ಮಿಕರು ಎತ್ತಿದರು.

1827 ರಲ್ಲಿ ಫಿಲಡೆಲ್ಫಿಯಾದಲ್ಲಿ ನಿರ್ಮಾಣ ಕಾರ್ಮಿಕರು ನಡೆಸಿದ ಮುಷ್ಕರದಲ್ಲಿ ಈ ಬೇಡಿಕೆಯನ್ನು ಪ್ರಮುಖವಾಗಿ ಎತ್ತಲಾಯಿತು. 1834 ರಲ್ಲಿ, ನ್ಯೂಯಾರ್ಕ್ ನಲ್ಲಿ ಬ್ರೆಡ್ ಕೆಲಸಗಾರರು ಈಜಿಪ್ಟಿನ ಗುಲಾಮರಿಗಿಂತ ಹೆಚ್ಚು ಬಳಲುತ್ತಿದ್ದರು. ಆ ಸಮಯದಲ್ಲಿ ಪ್ರಕಟವಾದ ದಿ ವರ್ಕಿಂಗ್ಮೆನ್ಸ್ ಅಡ್ವೊಕೇಟ್ ಎಂಬ ಪತ್ರಿಕೆಯು, ಅವರನ್ನು ದಿನಕ್ಕೆ 18ರಿಂದ 20 ಗಂಟೆಗಳ ಕಾಲ ಕೆಲಸ ಮಾಡಲು ಒತ್ತಾಯಿಸಲಾಯಿತು ಎಂದು ವರದಿ ಮಾಡಿತು. 10 ಗಂಟೆಗಳ ಕೆಲಸದ ದಿನಕ್ಕಾಗಿ ನಡೆದ ಈ ಹೋರಾಟಗಳು ಬೇಗನೆ ಒಂದು ಚಳುವಳಿಯಾಗಿ ಬೆಳೆದವು. 1837 ರ ಬಿಕ್ಕಟ್ಟು ಒಂದು ಅಡಚಣೆಯಾಗಿತ್ತಾದರೂ, ವ್ಯಾನ್ ಬುರೆನ್ ನೇತೃತ್ವದ ಸರ್ಕಾರವು ಎಲ್ಲಾ ನಾಗರಿಕ ಸೇವಕರಿಗೆ ಹತ್ತು ಗಂಟೆಗಳ ಕೆಲಸದ ದಿನವನ್ನು ಘೋಷಿಸಿತು. ಎಲ್ಲರಿಗೂ ಹತ್ತು ಗಂಟೆಗಳ ಕೆಲಸದ ದಿನಕ್ಕಾಗಿ ಹೋರಾಟ ಮುಂದುವರೆಯಿತು. ಅನೇಕ ಕಾರ್ಖಾನೆಗಳಲ್ಲಿ, ಈ ಬೇಡಿಕೆಯು ಯಶಸ್ವಿಯಾಗಿ ಈಡೇರಿತು, ಮತ್ತು ಕಾರ್ಮಿಕರು ತಕ್ಷಣವೇ 8 ಗಂಟೆಗಳ ಕೆಲಸದ ದಿನದ ಘೋಷಣೆಯನ್ನು ಎತ್ತಿದರು.

ಅಮೇರಿಕದ ಕಾರ್ಮಿಕರ ಮೇ 1, 1886 ರ ಮುಷ್ಕರ

ಮೇ 1, 1886 ರಂದು, ಅಮೇರಿಕದ ಲಕ್ಷಾಂತರ ಕಾರ್ಮಿಕರು ಮುಷ್ಕರ ನಡೆಸಿ ಎಂಟು ಗಂಟೆಗಳ ಕೆಲಸದ ದಿನವನ್ನು ಒತ್ತಾಯಿಸಿ ಮೆರವಣಿಗೆ ನಡೆಸಿದರು. ಇದು ಅಮೇರಿಕನ್ ಫೆಡರೇಶನ್ ಆಫ್ ಲೇಬರ್‌ ಪೂರ್ವಗಾಮಿಯಾದ ಫೆಡರೇಶನ್ ಆಫ್ ಆರ್ಗನೈಸ್ಡ್ ಟ್ರೇಡ್ಸ್ ಅಂಡ್ ಲೇಬರ್ ಯೂನಿಯನ್ಸ್, (Federation of Organized Trades and Labor Unions, the precursor to the American Federation of Labor) ಕರೆ ನೀಡಿದ ಮುಷ್ಕರವಾಗಿತ್ತು. ಚಿಕಾಗೋ ನಗರದಲ್ಲಿ ಆಲ್ಬರ್ಟ್ ಪಾರ್ಸನ್ಸ್ ಮತ್ತು ಆಗಸ್ಟ್ ಸ್ಪೈಸ್ ನಂತಹ ಕ್ರಾಂತಿಕಾರಿ ಕಾರ್ಮಿಕ ಸಂಘಟಕರ ನೇತೃತ್ವದಲ್ಲಿ ನಡೆದ ಅತಿದೊಡ್ಡ ಪ್ರದರ್ಶನ ಅದಾಗಿತ್ತು ಮತ್ತು ಅದು ಶಾಂತಿಯುತವಾಗಿತ್ತು.

ಆದರೆ ಎರಡು ದಿನಗಳ ನಂತರ, ನಗರದ ದೊಡ್ಡ ಮೆಕ್ಕಾರ್ಮಿಕ್ ರೀಪರ್ ವರ್ಕ್ಸ್ ನಲ್ಲಿ ಪೊಲೀಸರು ಹಲವಾರು ಮುಷ್ಕರನಿರತ ಕಾರ್ಮಿಕರ ಮೇಲೆ ಗುಂಡು ಹಾರಿಸಿದರು. ಇದನ್ನು ನೇರವಾಗಿ ನೋಡಿದ ಸ್ಪೈಸ್ ಪೊಲೀಸರ ಈ ದೌರ್ಜನ್ಯ ಕೃತ್ಯವನ್ನು ಖಂಡಿಸಲು ರ್ಯಾಲಿಗೆ ಕರೆ ನೀಡಿದರು.

ಹೇಮಾರ್ಕೆಟ್: ಜನಸಮೂಹದ ಮೇಲೆ ಗುಂಡು ಹಾರಿಸಿದ ಪೊಲೀಸರು

ಮರುದಿನ, ಮೇ 4 ರಂದು, ಸ್ಥಳೀಯ ಹೋರಾಟಗಾರರು ವ್ಯಾಗನ್ನಿನ ಮೇಲೆ ನಿಂತು ಮಾಡುವ ಭಾಷಣಗಳನ್ನು ಕೇಳಲು ಸುಮಾರು 2,500 ಕಾರ್ಮಿಕರು (ಅವರಲ್ಲಿ ಹೆಚ್ಚಿನವರು ವಲಸಿಗರು) ಪ್ಯಾಕಿಂಗ್ ಹೌಸ್ ಜಿಲ್ಲೆಯ ಹೇಮಾರ್ಕೆಟ್ ಚೌಕದಲ್ಲಿ ಒಟ್ಟುಗೂಡಿದರು. ಅಲ್ಲಿ ಮೇಯರ್ ಕಾರ್ಟರ್ ಹ್ಯಾರಿಸನ್ ಹಾಜರಿದ್ದರು ಮತ್ತು ಸಭೆಗೆ ಒಂದು “ಅಂತ್ಯ ಕಾಣಿಸಲು” ನಿರ್ಣಯಿಸಿದರು. ರಾತ್ರಿ ಹತ್ತು ಗಂಟೆಯ ಕೆಲವು ನಿಮಿಷಗಳ ನಂತರ, ಚಿಕಾಗೋದಲ್ಲಿ ಜೋರು ಗಾಳಿ ಬೀಸಲಾರಂಭಿಸಿತು. ಮೊದಲ ಹನಿ ಮಳೆ ಬೀಳುತ್ತಿದ್ದಂತೆ, ಹೇಮಾರ್ಕೆಟ್ ಚೌಕದಲ್ಲಿ ಜನಸಮೂಹವು ಅಲ್ಲಿಂದ ಹೊರಡಲು ಪ್ರಾರಂಭಿಸಿತು. ಕಾರ್ಮಿಕ ನಾಯಕರು ಪೊಲೀಸರ ಕ್ರೌರ್ಯವನ್ನು ಖಂಡಿಸಿ, ಎಂಟು ಗಂಟೆಗಳ ದಿನದ ಬೇಡಿಕೆ ಬಗ್ಗೆ ಮಾತನಾಡುತ್ತಿದ್ದರು. ಮಳೆ ಹನಿ ಹಾಕುತ್ತಿದ್ದಂತೆ ರಾತ್ರಿ ಹತ್ತು ಗಂಟೆಯ ಹೊತ್ತಿಗೆ ಅಲ್ಲಿ ಕೆಲವೇ ನೂರು ಜನರಿದ್ದರು. ಜನರು ಕಡಿಮೆಯಾಗುವುದನ್ನು ಕಂಡ ಮೇಯರ್ ಪೊಲೀಸರನ್ನು ಅಲ್ಲಿಯೇ ನಿಲ್ಲಲು ಹೇಳಿ, ತಾನು ಮನೆಗೆ ಹೋದರು.

ಮೇಯರ್ ಹೊರಡುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರ ಕಡೆಗೆ ನಡೆದರು. ಕೊನೆಯ ಭಾಷಣಕಾರರು ತಮ್ಮ ಭಾಷಣ ಮುಗಿಸುತ್ತಿದ್ದಂತೆ ಅಲ್ಲಿಂದ ಚದುರುವಂತೆ ಅಲ್ಲಿದ್ದವರಿಗೆ ಪೊಲೀಸರು ಆದೇಶಿಸಿದರು. ಆಗ ಅಪರಿಚಿತ ಪ್ರತಿಭಟನಾಕಾರನೊಬ್ಬ ಪೊಲೀಸರ ಫ್ಯಾಲ್ಯಾಂಕ್ಸ್‌ ಗೆ ಮನೆಯಲ್ಲಿ ತಯಾರಿಸಿದ ಬಾಂಬ್ ಅನ್ನು ಎಸೆದನು. ಅದು ತಕ್ಷಣವೇ ಸ್ಫೋಟಗೊಂಡಿತು. ಉದ್ರಿಕ್ತರಾದ ಅಧಿಕಾರಿಗಳು ಕಾರ್ಮಿಕರ ಮೇಲೆ ಹುಚ್ಚುಚ್ಚಾಗಿ ಗುಂಡು ಹಾರಿಸಲು ಪ್ರಾರಂಭಿಸಿದರು, ರ್ಯಾಲಿಗೆ ಹೋದವರಲ್ಲಿ ಕೆಲವರು ಪ್ರತಿದಾಳಿ ನಡೆಸಿದರು ಎಂದು ಹೇಳಲಾಗುತ್ತದೆ. ಕೊನೆಯಲ್ಲಿ, ಏಳು ಪೊಲೀಸ್ ಅಧಿಕಾರಿಗಳು ಮತ್ತು ಕನಿಷ್ಠ ಮೂವರು ಕಾರ್ಮಿಕರು ಸಾವನ್ನಪ್ಪಿದರು. ಅಧಿಕಾರಿ ಮಥಿಯಾಸ್ ಡೆಗನ್ ಸ್ಫೋಟದಿಂದ ಕೊಲ್ಲಲ್ಪಟ್ಟರು, ಆದರೆ ಇತಿಹಾಸಕಾರರು ಸಾಮಾನ್ಯವಾಗಿ ಇತರ ಪೊಲೀಸರು ಸಹ ಅಧಿಕಾರಿಗಳ ಉದ್ದೇಶಪೂರ್ವಕ ಗುಂಡಿನ ದಾಳಿಯಿಂದ ಸಾವನ್ನಪ್ಪಿದ್ದಾರೆ ಎಂದು ನಂಬುತ್ತಾರೆ.

ವಾಣಿಜ್ಯ ಪತ್ರಿಕೆಗಳು ಈ ಘಟನೆಯನ್ನು ‘ಹೇಮಾರ್ಕೆಟ್ ಗಲಭೆ’ ಎಂದು ಹಣೆಪಟ್ಟಿ ಕಟ್ಟಿದವು.

ವಾಣಿಜ್ಯ ಪತ್ರಿಕೆಗಳು ತಕ್ಷಣ ಘಟನೆಯನ್ನು “ಹೇಮಾರ್ಕೆಟ್ ಗಲಭೆ” ಎಂದು ಹೆಸರಿಸಿ ರಕ್ತವನ್ನು ಬಯಸಿದವು. ನಗರದಲ್ಲಿ ಸಮರ ಕಾನೂನು ಘೋಷಿಸಲಾಯಿತು. ಚಿಕಾಗೋ ಪೊಲೀಸರು ಸಂಘಟನೆಗಳ ಕಛೇರಿಗಳು,  ಕ್ರಾಂತಿಕಾರಿ ಪತ್ರಿಕೆಗಳು ಮತ್ತು ಕಾರ್ಮಿಕ ನಾಯಕರ ಖಾಸಗಿ ಮನೆಗಳಿಗೆ ನುಗ್ಗಿ ಅಲ್ಲಿದ್ದ ವಸ್ತುಗಳನ್ನು ದೋಚಿದರು. ಸರಿಯಾದ ಕಾನೂನು ಪ್ರಕ್ರಿಯೆಯಿಲ್ಲದೆ ಪೊಲೀಸರು ನೂರಾರು ಹೋರಾಟಗಾರರು, ಸಮಾಜವಾದಿಗಳು ಮತ್ತು ಕಾರ್ಮಿಕ ಕಾರ್ಯಕರ್ತರನ್ನು ಬಂಧಿಸಿದರು.

ಯಾವುದೇ ಭೌತಿಕ ಪುರಾವೆಗಳಿಲ್ಲದೆ ನಾಯಕರ ಬಂಧನ

ಆ ಬಹಿರಂಗ ಸಭೆಯಲ್ಲಿ ಮಾತನಾಡಿದ ಎಂಟು ಹೋರಾಟಗಾರರಾದ ಪಾರ್ಸನ್ಸ್, ಸ್ಪೈಸ್, ಅಡಾಲ್ಫ್ ಫಿಷರ್, ಜಾರ್ಜ್ ಎಂಗೆಲ್, ಲೂಯಿಸ್ ಲಿಂಗ್, ಸ್ಯಾಮ್ಯುಯೆಲ್ ಫೀಲ್ಡೆನ್, ಮೈಕೆಲ್ ಶ್ವಾಬ್ ಮತ್ತು ಆಸ್ಕರ್ ನೀಬೆ ಅವರನ್ನು ಏಳು ಪೊಲೀಸ್ ಅಧಿಕಾರಿಗಳ ಹತ್ಯೆಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಬಂಧಿಸಲಾಯಿತು. ಇವರನ್ನು ಬಂಧಿಸಲು ಬಾಂಬ್ ದಾಳಿ ನಡೆಸಿದ ಬಗ್ಗೆ ಯಾವುದೇ ಭೌತಿಕ ಪುರಾವೆಗಳಿರಲಿಲ್ಲ. ಆದರೂ ಅವರನ್ನು ಅವರ ಕ್ರಾಂತಿಕಾರಿ ನಂಬಿಕೆಗಳಿಗಾಗಿ ವಿಚಾರಣೆಗೆ ಒಳಪಡಿಸಲಾಯಿತು ಮತ್ತು ಅವರನ್ನು ತಪ್ಪಿತಸ್ಥರೆಂದು ಹೇಳಿತು.

ಇದನ್ನೂ ಓದಿ : ತಾತ್ಕಾಲಿಕ ಹಿನ್ನೆಲೆಯ “ದೈಹಿಕ” ಹಾಗೂ ಶಾಶ್ವತ ಹಿನ್ನಲೆಯ “ಮಾನಸಿಕ ಅಸ್ಪೃಶ್ಯತೆ” ಉಂಟುಮಾಡುವ “ಭಯೋತ್ಪಾದನೆ” ಗಳ ನಡುವಿನ ಸ್ವರೂಪ ಹಾಗೂ ಭಿನ್ನತೆ

ಏಳು ಜನರಿಗೆ ಮರಣದಂಡನೆ ಶಿಕ್ಷೆ ವಿಧಿಸಿದರು

ನ್ಯಾಯಾಧೀಶರು ಆಸ್ಕರ್ ನೀಬೆಗೆ ಹದಿನೈದು ವರ್ಷಗಳ ಜೈಲು ಶಿಕ್ಷೆ ವಿಧಿಸಿದರು. ಆದರೆ ಉಳಿದ ಏಳು ಜನರಿಗೆ ಮರಣದಂಡನೆ ವಿಧಿಸಲಾಯಿತು. ಮುಂದಿನ ವರ್ಷದಲ್ಲಿ, ಆಲ್ಬರ್ಟ್‌ನ ಪತ್ನಿ ಮತ್ತು ಸಹ ಹೋರಾಟಗಾರ ಲೂಸಿ ಪಾರ್ಸನ್ಸ್ ಅವರು, ಆ ಕಾರ್ಮಿಕರಿಗೆ ಕ್ಷಮೆ ನೀಡುವಂತೆ ಒತ್ತಾಯಿಸಿ ಅಂತರರಾಷ್ಟ್ರೀಯ ಅಭಿಯಾನ ನಡೆಸಿದರು. ಅವರನ್ನು ಹೇಮಾರ್ಕೆಟ್ ಹುತಾತ್ಮರು ಎಂದು ಕರೆಯಲು ಪ್ರಾರಂಭಿಸಿದರು. ವಿಶ್ವಾದ್ಯಂತ ಕ್ರಾಂತಿಕಾರಿಗಳು, ಉದಾರವಾದಿಗಳು ಮತ್ತು ಟ್ರೇಡ್ ಯೂನಿಯನಿಸ್ಟ್‌ಗಳು ಈ ಹೋರಾಟವನ್ನು ಬೆಂಬಲಿಸಲು ಮುಂದೆ ಬಂದರು. ಈ ವಿಚಾರಣೆಯು ಒಂದು ನೆಪವಾಗಿದೆ ಮತ್ತು ಕಾರ್ಮಿಕ ಚಳವಳಿಯನ್ನು ಹತ್ತಿಕ್ಕುವ ಪ್ರಯತ್ನವೆಂದು ಅವರು ಪರಿಗಣಿಸಿದರು.

ಶಿಕ್ಷೆಗೊಳಗಾದ ಇಬ್ಬರು ವ್ಯಕ್ತಿಗಳಾದ ಫೀಲ್ಡೆನ್ ಮತ್ತು ಶ್ವಾಬ್ ಅವರ ಶಿಕ್ಷೆಯನ್ನು ಇಲಿನಾಯ್ಸ್ ಗವರ್ನರ್ ಜೀವಾವಧಿ ಶಿಕ್ಷೆಗೆ ಇಳಿಸಿದರು. ಆದರೆ ಇತರರ ಜೀವಗಳನ್ನು ಉಳಿಸಲು ಏನನ್ನೂ ಮಾಡಲಿಲ್ಲ. ನಿಗದಿತ ಮರಣದಂಡನೆಯ ಹಿಂದಿನ ದಿನದಂದು, ಲಿಂಗ್ ತನ್ನ ಜೈಲಿನ ಸೆಲ್‌ನಲ್ಲಿ ಆತ್ಮಹತ್ಯೆಯಿಂದ ಸಾವನ್ನಪ್ಪಿದನು. ಪಾರ್ಸನ್ಸ್, ಸ್ಪೈಸ್, ಫಿಶರ್ ಮತ್ತು ಎಂಗೆಲ್ ಅವರನ್ನು ನವೆಂಬರ್ 11, 1887 ರಂದು ಒಟ್ಟಿಗೆ ಗಲ್ಲಿಗೇರಿಸಲಾಯಿತು. ಅವರ ಶವಗಳನ್ನು ಹೂಳಲು ನಗರದ ಯಾವುದೇ ಸ್ಮಶಾನವು ಒಪ್ಪಿಕೊಳ್ಳಲಿಲ್ಲ. ಕಡೆಗೆ, ಅವರನ್ನು ಫಾರೆಸ್ಟ್ ಪಾರ್ಕ್‌ನ ಪಶ್ಚಿಮ ಉಪನಗರದಲ್ಲಿರುವ ವಾಲ್ಡ್‌ಹೈಮ್ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು.

ಮೇ 1, 1890 ರಂದು, ಹೇಮಾರ್ಕೆಟ್ ಹುತಾತ್ಮರ ಸ್ಮರಣೆಯನ್ನು ಸ್ಮರಿಸಿಕೊಂಡು, ಹಲವಾರು ದೇಶಗಳಲ್ಲಿನ ಕಾರ್ಮಿಕರು ಎಂಟು ಗಂಟೆಗಳ ಕೆಲಸದ ದಿನವನ್ನು ಒತ್ತಾಯಿಸಿ ಮುಷ್ಕರಗಳು ಮತ್ತು ಪ್ರದರ್ಶನಗಳನ್ನು ನಡೆಸಿದರು. ಅಂದಿನಿಂದ, ಮೇ 1, ಅಥವಾ ಮೇ ದಿನವು ಅಂತರರಾಷ್ಟ್ರೀಯ ಕಾರ್ಮಿಕರ ದಿನವಾಗಿದೆ.

ಎರಡು ಸ್ಮಾರಕಗಳು

ಶಿಕ್ಷೆಗೊಳಗಾದ ಕ್ರಾಂತಿಕಾರಿಗಳ ಮರಣದಂಡನೆಗೆ ಆರು ವಾರಗಳ ಮೊದಲು, ಅಂದರೆ, ಸೆಪ್ಟೆಂಬರ್ 1887 ರಲ್ಲಿ, ಚಿಕಾಗೋ ಪ್ರದೇಶದ ಪ್ರಮುಖ ಉದ್ಯಮಿಗಳ ಗುಂಪು ಹೇಮಾರ್ಕೆಟ್ ಪ್ರಕರಣದಲ್ಲಿ ಸಾವನ್ನಪ್ಪಿದ ಮತ್ತು ಗಾಯಗೊಂಡ ಪೊಲೀಸ್ ಅಧಿಕಾರಿಗಳಿಗೆ ಗೌರವ ಸಲ್ಲಿಸುವ ಸ್ಮಾರಕವನ್ನು ನಿರ್ಮಿಸಲು ನಿಧಿಸಂಗ್ರಹಣೆ ಅಭಿಯಾನವನ್ನು ಪ್ರಾರಂಭಿಸಿತು. ಚಿಕಾಗೋ ಟ್ರಿಬ್ಯೂನ್ ಈ ಅಭಿಯಾನವನ್ನು ಪ್ರಚಾರ ಮಾಡುತ್ತಿದ್ದಂತೆ, ಆ ಗುಂಪು ತ್ವರಿತವಾಗಿ 10,000 ಡಾಲರ್ ಸಂಗ್ರಹಿಸಿ, ತೋಳನ್ನು ಚಾಚಿ ಅಂಗೈ ಮುಂದಕ್ಕೆ ಮುಖ ಮಾಡಿರುವ ಪೊಲೀಸ್ ಅಧಿಕಾರಿಯ ಒಂಬತ್ತು ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ನಿರ್ಮಿಸಿತು. ಪೀಠದ ಮೇಲಿನ ಶಾಸನವು ಹೀಗಿದೆ: “ಇಲಿನಾಯ್ಸ್ ಜನರ ಹೆಸರಿನಲ್ಲಿ, ನಾನು ಶಾಂತಿಗೆ ಆಜ್ಞಾಪಿಸುತ್ತೇನೆ.” (“In the name of the People of Illinois, I command peace.”)

ನಮ್ಮ ಕಾಮ್ರೆಡ್ ಗಳ ಸಾಕಷ್ಟು ಸಮರ್ಥನೆಗೆ ಸಮಯ ಬರುತ್ತದೆ…

ಹೇಮಾರ್ಕೆಟ್ ಚೌಕದಲ್ಲಿ ಸ್ಥಾಪಿಸಲಾದ ಪೊಲೀಸ್ ಸ್ಮಾರಕವು ಮೇ 1889 ರಲ್ಲಿ ಅಧಿಕೃತವಾಗಿ ಅನಾವರಣಗೊಳ್ಳುವ ಮೊದಲೇ ಅದು ಪ್ರತಿಭಟನೆಗೆ ನಾಂದಿ ಹಾಡಿತು. ಮೇ 3, 1889 ರಂದು, ಹೊಸ ಸ್ಮಾರಕದ ಪೀಠದ ಮೇಲೆ ಅನಾಮಧೇಯವಾಗಿ ಬರೆದ ಒಂದು ಕರಪತ್ರವನ್ನು ಇರಿಸಲಾಯಿತು, “ಹೇಮಾರ್ಕೆಟ್ ದುರಂತದ ಐವರು ನೈಜ ಬಲಿಪಶುಗಳ ಹತ್ಯೆಯ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ …? ನಮ್ಮ ಕಾಮ್ರೆಡ್ ಗಳ ಸಾಕಷ್ಟು ಸಮರ್ಥನೆಗೆ ಸಮಯ ಬರುತ್ತದೆ, ಆದರೆ ಅದು ಇನ್ನೂ ಬಂದಿಲ್ಲ. ಹೇಮಾರ್ಕೆಟ್ ಲ್ಲಿನ ಸ್ಮಾರಕದ ಮೇಲೆ ಬೆಂಕಿಯ ಅಕ್ಷರಗಳಲ್ಲಿ ಈ ಪದಗಳನ್ನು ಕೆತ್ತಬೇಕು: ವಾಕ್ ಸ್ವಾತಂತ್ರ್ಯದ ಕತ್ತು ಹಿಸುಕಿದ ಮತ್ತು ಗುಲಾಮಗಿರಿಗೆ ಒಳಗಾದ ಜನರ ಅವಮಾನವನ್ನು ಸ್ಮರಿಸಲು ಇದನ್ನು ನಿರ್ಮಿಸಲಾಗಿದೆ!” (Have you ever given a thought to . . .the base murder of five of the real victims of the haymarket tragedy…? The time will come for an ample justification of our comrades, but it is not quite yet. On the monument at the haymarket should be inscribed in letters of fire these words: ‘Erected to commemorate the strangling of free speech and the shame of an enslaved people!’)

ಕಾರ್ಮಿಕ ವರ್ಗದ ಏಕತೆ ಮುಖ್ಯ

ಮೇ ದಿನದಂದು ಕಾರ್ಮಿಕರ ಹೋರಾಟದ ಇತಿಹಾಸವನ್ನು ಮೆಲುಕು ಹಾಕುವುದು ಮಾತ್ರವಲ್ಲದೆ, ಹಲವು ಹೋರಾಟಗಳ ಮೂಲಕ ಗಳಿಸಿದ ಹಕ್ಕುಗಳನ್ನು ಉಳಿಸಿಕೊಳ್ಳಲು, ಮತ್ತಷ್ಟು ಪಡೆದುಕೊಳ್ಳಲು ಮುಂದಿನ ಹೋರಾಟಕ್ಕೆ ಅಣಿಯಾಗಬೇಕಿದೆ. ಬಡತನ, ಏರುತ್ತಿರುವ ಹಣದುಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ, ಉದ್ಯೋಗ ಕಡಿತ, ಪಿಂಚಣಿ, ಆರೋಗ್ಯ ರಕ್ಷಣೆ, ಉದ್ಯೋಗಸ್ಥ ಮಹಿಳೆಯರ ಹಕ್ಕುಗಳು ಮತ್ತು ಶ್ರೀಮಂತರು ಹಾಗೂ ಬಡವರ ನಡುವಿನ ಅಂತರದ ಹೆಚ್ಚಳ ಇಂದಿನ ಪ್ರಮುಖ ಸಮಸ್ಯೆಗಳಾಗಿವೆ. ಇವುಗಳನ್ನು ಪರಿಹರಿಸದೆ, ಕಾರ್ಮಿಕ ವರ್ಗ ಮತ್ತು ಬಡ ಜನರ ಜೀವನವು ಉತ್ತಮವಾಗುವುದಿಲ್ಲ. ಗುರಿ ಸಾಧಿಸಲು ಕಾರ್ಮಿಕ ವರ್ಗದ ಐಕ್ಯತೆ ಮುಖ್ಯವಾಗಿದೆ. ಹುತಾತ್ಮರ ಆದರ್ಶಗಳ ಹೆಜ್ಜೆಗಳನ್ನು ಅನುಸರಿಸಲು ದುಡಿಯುವ ವರ್ಗವು ಪಣತೊಡಬೇಕಿದೆ.

ಇದನ್ನೂ ನೋಡಿ : ಪಹಲ್‍ಗಾಂಮ್ ಹತ್ಯಾಕಾಂಡ| ಕುಟುಂಬದವರನ್ನು ಕಳೆದುಕೊಂಡವರ ಪ್ರಶ್ನೆಗಳಿಗೆ ಉತ್ತರಿಸುವಿರಾ? Janashakthi Media

Donate Janashakthi Media

Leave a Reply

Your email address will not be published. Required fields are marked *