-ಜಿ.ಎನ್. ನಾಗರಾಜ
1854ರಲ್ಲಿಯೇ ನಾನಾಭಾಯ್ ಕವಾಸ್ಜಿ ಎಂಬ ಟಾಟಾರಂತೆಯೇ ಚೀನಾಕ್ಕೆ ಅಫೀಮು ವ್ಯಾಪಾರ, ಹತ್ತಿ ಬೂಮ್ ಇತ್ಯಾದಿಗಳಿಂದ ಬಂಡವಾಳ ಶೇಖರಿಸಿದ್ದ ಪಾರ್ಸಿಯಿಂದ ಸ್ಥಾಪಿತವಾಗಿತ್ತು. ಟಾಟಾರವರು ತಮ್ಮ ಮೊದಲ ಹತ್ತಿ ಗಿರಣಿ ಸ್ಥಾಪಿಸುವ ಸಮಯ 1979-80ರ ವೇಳೆಗೆ ಬಾಂಬೆಯಲ್ಲಿ 58 ಹತ್ತಿ ಗಿರಣಿಗಳು ಸ್ಥಾಪಿತವಾಗಿದ್ದವು. ಹೀಗೆ ಭಾರತದಲ್ಲಿ ಕೈಗಾರಿಕಾ ಬಂಡವಾಳ ಉದ್ಭವವಾಯಿತು. ಬೆಳೆಯುತ್ತಾ ಹೋಯಿತು. ಟಾಟಾರವರಂತೆ ಮತ್ತೂ ಕೆಲವರು ಕೈಗಾರಿಕಾ ಬಂಡವಾಳಗಾರರಾದರು ಎಂಬುದೇನೋ ನಿಜ. ಆದರೆ? ಆದರೆ??
ಜಮ್ಶೇಟ್ಜಿ ಟಾಟಾರವರು ತಮ್ಮ ಕುಟುಂಬದ ವ್ಯಾಪಾರದಿಂದ ಬೇರೆಯಾಗಿ ಕಂಪನಿಯೊದನ್ನು 1858ರಲ್ಲಿ ಸ್ಥಾಪಿಸಿದ ನಂತರ ಅವರು 1877ರಲ್ಲಿ ನಾಗಪುರದಲ್ಲಿ ಎಂಪ್ರೆಸ್ ಮಿಲ್ (ಚಕ್ರವರ್ತಿನಿ ಗಿರಣಿ, ಆಗ್ಗೆ ಭಾರತದ ಸಾಮ್ರಾಜ್ಞಿಯಾಗಿ ಘೋಷಿಸಿಕೊಂಡು ಈಸ್ಟ್ ಇಂಡಿಯಾ ಕಂಪನಿಯ ಆಡಳಿತಾಧಿಕಾರವನ್ನೆಲ್ಲ 1858ರಲ್ಲಿ ನೇರವಾಗಿ ತನ್ನ ಕೈಗೆ ತೆಗೆದುಕೊಂಡಿದ್ದ ಬ್ರಿಟನ್ನಿನ ರಾಣಿ ವಿಕ್ಟೋರಿಯಾರವರ ಹೆಸರಲ್ಲಿ) ಎಂಬ ಹತ್ತಿ ಗಿರಣಿಯನ್ನು ಮಹಾರಾಷ್ಟ್ರದ ನಾಗಪುರದಲ್ಲಿ ಸ್ಥಾಪಿಸಿದರು.
ಆ ವೇಳೆಗಾಗಲೇ ಮುಚ್ಚಿ ಹೋಗಿದ್ದ ಎಣ್ಣೆ ಗಿರಣಿಯೊಂದನ್ನು ಕೊಂಡು, ಅದನ್ನು ಹತ್ತಿ ಗಿರಣಿಯನ್ನಾಗಿ ಮಾಡಿ ಕೂಡಲೇ ಮಾರಿ ಗಣನೀಯ ಲಾಭ ಮಾಡಿಕೊಂಡಿದ್ದರು. ಎಂಪ್ರಸ್ ಮಿಲ್ ಅನ್ನು ನಾಗಪುರದಲ್ಲಿ ಸ್ಥಾಪಿಸಿದಾಗ ಅದನ್ನು ಇತರ ಬಂಡವಾಳಶಾಹಿಗಳು ಅಪಹಾಸ್ಯ ಮಾಡಿದ್ದರಂತೆ. ಹತ್ತಿ ಕೈಗಾರಿಕೆಗಳನ್ನು ಸ್ಥಾಪಿಸಲು ಬಾಂಬೆಯೇ (ಈಗ ಮುಂಬೈ) ಅತ್ಯಂತ ಪ್ರಶಸ್ತವಾದ ಸ್ಥಳ. ಅದಕ್ಕೆ ಯಥೇಚ್ಛ ಹತ್ತಿ, ಸೂಕ್ತ ಕಾರ್ಮಿಕರು ಮತ್ತು ಇತರ ಸೌಲಭ್ಯಗಳಿಗೆ ಬಾಂಬೆ ಮಾತ್ರ ಪ್ರಶಸ್ತ ಜಾಗವಾಗಿರುವಾಗ ನಾಗಪುರದಲ್ಲಿ ಮಾಡಿ ನಷ್ಟ ಅನುಭವಿಸುತ್ತಾರೆ ಎಂದವರ ಅಭಿಪ್ರಾಯ. ಇದಕ್ಕೆ ಕಾರಣವನ್ನು ಮುಂದೆ ಅವರ ಮಾತಿನಲ್ಲಿಯೇ ನೋಡೋಣ. ಟಾಟಾ
ಇದನ್ನೂ ಓದಿ: ಮಹಾರಾಷ್ಟ್ರ: ಇಂಡಿಯಾ ಕೂಟ ಮತ್ತೆ ಜಯಭೇರಿ ಬಾರಿಸುವುದೆ? ಭಾಗ -2
ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯಂತಹ ಅತಿ ಹೆಚ್ಚು ತಂತ್ರಜ್ಞಾನ ನೈಪುಣ್ಯ ಅವಶ್ಯವಾದ ಕೈಗಾರಿಕೆಯನ್ನು, ದೇಶದಲ್ಲಿಯೇ ಅತ್ಯಂತ ಹಿಂದುಳಿದ ಪ್ರದೇಶ ಇಂದು ಝಾರ್ಖಂಡಕ್ಕೆ ಸೇರಿದ ಆದಿವಾಸಿ ನೆಲೆಯಲ್ಲಿ ಸ್ಥಾಪಿಸಿದ್ದರು ಎಂಬಂತಹ ಅವರ ಕೃತಿಗಳಂತೂ ಅವರ ಇಂತಹ ಜಾಗಗಳನ್ನೇ ಹುಡುಕಿ ಹೋಗುತ್ತಿದ್ದುದನ್ನು ಎತ್ತಿ ತೋರಿಸುತ್ತದೆ.
ಟಾಟಾರವರು ಒಂದಾದ ಮೇಲೊಂದರಂತೆ ಮುಂದೆ ಇನ್ನೂ ನಾಲ್ಕು ಹತ್ತಿ ಗಿರಣಿಗಳನ್ನು ಸ್ಥಾಪಿಸಿದರು. ಅದರಲ್ಲಿ ಬಾಂಬೆಯಲ್ಲೂ ಒಂದನ್ನು 1886ರಲ್ಲಿ ಸ್ಥಾಪಿಸಿ ಅದಕ್ಕೆ ಸ್ವದೇಶಿ ಮಿಲ್ ಎಂದು ಹೆಸರಿಟ್ಟರು ಎಂಬುದು ಗಮನಾರ್ಹ. ಟಾಟಾ
1854ರಲ್ಲಿಯೇ ನಾನಾಭಾಯ್ ಕವಾಸ್ಜಿ ಎಂಬ ಟಾಟಾರಂತೆಯೇ ಚೀನಾಕ್ಕೆ ಅಫೀಮು ವ್ಯಾಪಾರ, ಹತ್ತಿ ಬೂಮ್ ಇತ್ಯಾದಿಗಳಿಂದ ಬಂಡವಾಳ ಶೇಖರಿಸಿದ್ದ ಪಾರ್ಸಿಯಿಂದ ಸ್ಥಾಪಿತವಾಗಿತ್ತು. ಟಾಟಾರವರು ತಮ್ಮ ಮೊದಲ ಹತ್ತಿ ಗಿರಣಿ ಸ್ಥಾಪಿಸುವ ಸಮಯ 1879- 80ರ ವೇಳೆಗೆ ಬಾಂಬೆಯಲ್ಲಿ 58 ಹತ್ತಿ ಗಿರಣಿಗಳು ಸ್ಥಾಪಿತವಾಗಿದ್ದವು.
ಹೀಗೆ ಭಾರತದಲ್ಲಿ ಕೈಗಾರಿಕಾ ಬಂಡವಾಳ ಉದ್ಭವವಾಯಿತು. ಬೆಳೆಯುತ್ತಾ ಹೋಯಿತು. ಟಾಟಾರವರಂತೆ ಮತ್ತೂ ಕೆಲವರು ಕೈಗಾರಿಕಾ ಬಂಡವಾಳಗಾರರಾದರು ಎಂಬುದೇನೋ ನಿಜ. ಆದರೆ? ಆದರೆ??
ಒಂದು ಬೃಹತ್ ಕೈಗಾರಿಕಾ ದೇಶವೊಂದರ ಅಧೀನವಾಗಿದ್ದ ಈ ದೇಶದಲ್ಲಿ ಉದ್ಭವವಾದ ಬಂಡವಾಳ ಎಂತಹುದು, ಯಾವ ಪ್ರಮಾಣದ್ದು? ಅದನ್ನು ಆಕ್ರಮಿಸಿದ ದೇಶ ಬ್ರಿಟನ್ ವಿಶ್ವದಲ್ಲಿ ಬಂಡವಾಳಶಾಹಿಯ ಉಗಮ, ಬಂಡವಾಳದ ಉದ್ಭವ ಮತ್ತು ಬೆಳವಣಿಗೆಯ ಟಿಪಿಕಲ್ ಮಾದರಿ. ವಸಹಾತುಶಾಹಿ ದೇಶಗಳಲ್ಲೆಲ್ಲ ಬ್ರಿಟನ್ ಬಂಡವಾಳಶಾಹಿ ಬೆಳವಣಿಗೆಯಲ್ಲಿ ಅತಿ ದೊಡ್ಡ ಪ್ರಮಾಣ ಮತ್ತು ವ್ಯಾಪ್ತಿಯನ್ನು ಮುಟ್ಟಿದ್ದರೆ, ಈ ದೇಶಗಳ ವಹಾಹತುಗಳಾಗಿದ್ದ ಇತರೆಲ್ಲ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸ್ವಾತಂತ್ರ್ಯಾ ಪೂರ್ವದಲ್ಲಿಯೇ ಬಂಡವಾಳಶಾಹಿ ಅತಿ ಹೆಚ್ಚು ಬೆಳವಣಿಗೆಯನ್ನು ಹೊಂದಿತ್ತು. ಈ ಎರಡು ಬಂಡವಾಳಶಾಹಿಗಳ ಉಗಮದ ಬಗೆಗಿನ ಪರಸ್ಪರ ತುಲನೆ ಮಾಡಿದರೆ ನಮ್ಮ ದೇಶದಲ್ಲಿ ಉದ್ಭವವಾದ ಬಂಡವಾಳದ ಸ್ವರೂಪ ಹಾಗೂ ಬಂಡವಾಳಿಗರ ಸ್ವರೂಪ ಅಥವಾ ವಿರೂಪದ ಬಗ್ಗೆ ಮಾತ್ರವಲ್ಲ, ದೇಶದ ಮೇಲೆ ಅದರ ಪರಿಣಾಮದ ಬಗೆಗೂ ತಿಳಿಯುತ್ತದೆ.
ಇದನ್ನೂ ಓದಿ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿತ; 30 ಜನರಿಗೆ ಗಾಯ
ಬ್ರಿಟನ್ನಲ್ಲಿ ಕೈಗಾರಿಕಾ ಬಂಡವಾಳದ ಉದ್ಭವ ಮತ್ತು ಶೇಖರಣೆಯನ್ನೇ ಕಾರ್ಲ್ ಮಾರ್ಕ್ಸ್ರವರು ತಮ್ಮ ಬಂಡವಾಳ ಕೃತಿಯಲ್ಲ ವಿಶದವಾದ ಅಧ್ಯಯನ, ವಿಶ್ಲೇಷಣೆಗೆ ಒಳಪಡಿಸಿದ್ದು. ಅದರಲ್ಲಿ ಬ್ರಿಟನ್ನಿನ ಆದಿಮ ಬಂಡವಾಳದ ಉದ್ಭವದ ಬಗ್ಗೆ ಹೀಗೆ ಹೇಳಿದ್ದಾರೆ: “ಅಂದು ಬ್ರಿಟನ್ ಮತ್ತು ಯುರೋಪಿನಲ್ಲಿ ಕೈಗಾರಿಕಾ ಬಂಡವಾಳಗಾರರು ಕುಶಲ ಕೆಲಸಗಾರರ ಕೂಟಗಳಾಗಿದ್ದ ಗಿಲ್ಡ್ ಗಳ ಯಜಮಾನ ಕುಶಲಕರ್ಮಿಗಳ, ಅಥವಾ ಸ್ವತಂತ್ರ ಸಣ್ಣ ಕುಶಲ ಕೆಲಸಗಾರರ, ಕೇವಲ ಕೂಲಿಕಾರರ ನಡುವಿನಿಂದ ಸಣ್ಣ ಬಂಡವಾಳಗಾರರಾಗಿ ಮೂಡಿ ಬಂದರು. ಮುಂದೆ ಪೂರ್ಣ ಬಂಡವಾಳಗಾರರಾದರು.” ಇದು ಎರಡು ಮೂರು ಶತಮಾನಗಳ ಕಾಲದಲ್ಲಿ ಹಲವು ಹಂತಗಳ ಮೂಲಕ ಬಹು ದೀರ್ಘ ಕಾಲಾವಧಿಯಲ್ಲಿ ಸಾವಧಾನವಾಗಿ ನಡೆದ ಪ್ರಕ್ರಿಯೆ.
ಈ ಪ್ರಕ್ರಿಯೆ ಬಗ್ಗೆ ಅಧ್ಯಯನ ಮಾಡುವುದು ಭಾರತದಲ್ಲಿ ಬಂಡವಾಳಶಾಹಿಗಳ ಮೂಲ ಮತ್ತು ಕಾರ್ಮಿಕರ ಉಗಮದ ಬಗೆಗೂ, ಇಲ್ಲಿಯ ಕೈಗಾರಿಕೀಕರಣದ ವಿರೂಪದ ಬಗೆಗೂ ಅರ್ಥ ಮಾಡಿಕೊಳ್ಳುವುದಕ್ಕೆ ಅವಶ್ಯ. ಆದರೆ ಈ ಲೇಖನದ ಉದ್ದೇಶಕ್ಕೆ ಸೀಮಿತವಾಗಿ ಇಷ್ಟನ್ನು ತಿಳಿದುಕೊಳ್ಳಬೇಕು. ಈ ಪ್ರಕ್ರಿಯೆಯಲ್ಲಿ ಬಂಡವಾಳಗಾರರು ವಸ್ತುಗಳ ಉತ್ಪಾದನೆಗೆ ಅಗತ್ಯವಾದ ಕೌಶಲ್ಯ ಉಳ್ಳವರಾಗಿದ್ದರು. ವಸ್ತುಗಳ ಉತ್ಪಾದನಾ ಪ್ರಕ್ರಿಯೆಯ ಅರಿವುಳ್ಳವರಾಗಿದ್ದರು. ಕಾರ್ಮಿಕರಂತೂ ಬಹು ದೊಡ್ಡ ಪ್ರಮಾಣದಲ್ಲಿ ಕುಶಲ ಕೆಲಸಗಾರರೇ ಆಗಿದ್ದರು. ನಂತರ ಬೇರೆ ಮೂಲದಿಂದ ಬಂಡವಾಳಗಾರರು ಕೈಗಾರಿಕೆಗಳನ್ನು ಸ್ಥಾಪಿಸಿದಾಗಲೂ ಅವುಗಳ ಫೋರ್ಮೆನ್ (ಮೇಲ್ವಿಚಾರಕರು), ಮ್ಯಾನೇಜರ್ಗಳು ಕೂಡ ಗಣನೀಯ ಪ್ರಮಾಣದಲ್ಲಿ ಕುಶಲ ಕೆಲಸಗಾರ ಮೂಲದವರಾಗಿದ್ದರು.
ಬ್ರಿಟಿಷ್ ಬಟ್ಟೆಗಳ ಅಗ್ಗದ ಆಮದುಗಳಿಂದಾಗಿ ಕೆಲಸ ಕಳೆದುಕೊಂಡರು
ಆದರೆ ಭಾರತದಲ್ಲಿ ಏನಾಯಿತೆಂಬುದು ಸಾಮಾನ್ಯವಾಗಿ ಗೊತ್ತಿರುವ ಸಂಗತಿ. ಬ್ರಿಟಿಷ್ ವಸಾಹತಾಗುವ ಮೊದಲು ವಿಶ್ವದಲ್ಲೇ ಅತ್ಯುತ್ತಮ ಗುಣಮಟ್ಟದ ಬಟ್ಟೆಗಳನ್ನು ತಯಾರಿಸುತ್ತಿದ್ದ ಕುಶಲ ಕೆಲಸಗಾರರು ಬ್ರಿಟಿಷ್ ಬಟ್ಟೆಗಳ ಅಗ್ಗದ ಆಮದುಗಳಿಂದ ಕೆಲಸ ಕಳೆದುಕೊಂಡು ಹಳ್ಳಿಗಳಲ್ಲಿ ಕೂಲಿಕಾರರಾದರು, ಗೇಣಿದಾರರಾದರು. ಮುಂದಿನ ಎರಡು ಮೂರು ತಲೆಮಾರುಗಳಲ್ಲಿ ಅವರ ಎಲ್ಲ ಕೌಶಲ್ಯವೂ ನಾಶವಾಗಿ ಹೋಯಿತು. ಈ ಕೃಷಿ ಕೂಲಿಕಾರರ ಮೂಲದಿಂದ ಭಾರತದ ಕಾರ್ಮಿಕ ವರ್ಗ ಉದಯಿಸಿತು. ನೂರು ನೂರೈವತ್ತು ವರ್ಷಗಳ ನಂತರ ಬಟ್ಟೆ ಗಿರಣಿ ಸ್ಥಾಪನೆ ಮಾಡಿದ ಬಂಡವಾಳಗಾರರೂ ಕುಶಲ ಕೆಲಸಗಾರ ಮೂಲದವರಲ್ಲ. ಅವರು ಬ್ರಿಟನ್ನಿನಂತೆ ಹಲವು ಸಾವಿರ ಸಣ್ಣ ಸಣ್ಣ ಬಂಡವಾಳಶಾಹಿಗಳಲ್ಲ.
1640ರಿಂದ ಆರಂಭಿಸಿ, ಬ್ರಿಟನ್ನಲ್ಲಿ ಪಾಳೆಯಗಾರಿ ವ್ಯವಸ್ಥೆಯನ್ನು ಕಿತ್ತೊಗೆಯುವ ಪ್ರಯತ್ನಗಳು ಆರಂಭವಾದಾಗಲಿಂದ, ಮುಂದೆ ಪ್ರಜಾಪ್ರಭುತ್ವ ಕ್ರಾಂತಿ ಯಶಸ್ವಿಯಾದ ನಂತರ ಈ ಕುಶಲ ಕೆಲಸಗಾರರ ಮೇಲೆ ರಾಜರು, ಸಾಮಂತರುಗಳ ಹಿಡಿತ ಇಲ್ಲವಾಗಿದ್ದು ಈ ಬೆಳವಣಿಗೆಗಳಿಗೆ ಅಡಿಪಾಯವಾಗಿತ್ತು. ಈ ಕೈಗಾರಿಕೆಗಳ ಉಪಕರಣಗಳೂ ಕೂಡಾ ಸಾವಿರಾರು ವರ್ಷಗಳಿಂದ ಕುಶಲಕರ್ಮಿಗಳ ವೈಯುಕ್ತಿಕ ಉಪಕರಣಗಳಾಗಿದ್ದು ನಿಧಾನವಾಗಿ ಉತ್ತಮಗೊಳ್ಳುತ್ತಾ ಹೋದುವಲ್ಲ. ಇಂತಹ ಕುಶಲಕರ್ಮಿಗಳು 17ನೇ ಶತಮಾನದಿಂದಲೇ ತಂತ್ರಜ್ಞರು ಆಧುನಿಕ ನೂಲು, ನೇಯ್ಗೆ ಯಂತ್ರಗಳನ್ನು, ಉಗಿ ಯಂತ್ರಗಳನ್ನು ರೂಪಿಸಿದರು. ಈ ಶತಮಾನಗಳ ಕಾಲದಲ್ಲಿ ವಿಜ್ಞಾನದ ಸಂಶೋಧನೆಗಳ ಪಸರಿಸುವಿಕೆ ಒಂದು ಕಡೆ ಕಬ್ಬಿಣ, ಉಕ್ಕು ತಯಾರಿಕೆ, ಕಲ್ಲಿದ್ದಲುಗಳ ಉಪಯೋಗ, ಆಧುನಿಕ ಯಂತ್ರಗಳ ದೊಡ್ಡ ಪ್ರಮಾಣದ ತಯಾರಿಕೆ, ವಿದ್ಯುತ್ ತಯಾರಿಕೆಯನ್ನು ಬೆಳೆಸಿ ವಿಜ್ಞಾನದ ಅರಿವಿನ ಪಸರಿಸುವಿಕೆಯ ಫಲವಾಗಿ ರೂಪಿಸಿದವಲ್ಲ.
ಇವೆಲ್ಲವೂ ಬಂಡವಾಳಗಾರರ ಹಾಗೂ ಕಾರ್ಮಿಕರ ಕೆಲ ವಿಭಾಗಗಳ ಮೇಲೆ ಪರಿಣಾಮ ಬೀರಿದವು. ಸಾವಿರಾರು ವರ್ಷಗಳ ಕಾಲದ ಮೂಢನಂಬಿಕೆ, ಕಂದಾಚಾರಗಳು ಮರೆಯಾಗತೊಡಗಿದವು. ಪ್ರಜಾಸತ್ತಾತ್ಮಕ ವಿಚಾರಗಳು ಕಾರ್ಮಿಕರಲ್ಲೂ ಮೂಡಿದವು. ಭಾರತದಲ್ಲಿ ಈ ಗಿರಣಿಗಳು ಸ್ಥಾಪಿನೆಗೊಳ್ಳುವ ಎರಡು ದಶಕಗಳ ಮೊದಲೇ ಕಾರ್ಮಿಕರು ತಮಗೆ ಮತದಾನದ ಹಕ್ಕು, ಉತ್ತಮ ಬದುಕಿಗಾಗಿ ಚಾರ್ಟಿಸ್ಟ್ ಎಂಬ ಮಹಾ ಚಳುವಳಿ ಆರಂಭಿಸಿದ್ದರು.
ಫ್ಯಾಕ್ಟರಿಗಳ ಹಂತದ ಹತ್ತಿ ಗಿರಣಿಗಳ ಸ್ಥಾಪನೆ
ಆದರೆ ಭಾರತದಲ್ಲಿ ಈ ಎಲ್ಲ ಹಂತಗಳನ್ನೂ ಬದಿಗೆ ತಳ್ಳಿ ಕುಶಲಕರ್ಮಿಗಳ ಗಿಲ್ಡ್ ಅಥವಾ ಗೊತ್ತಳಿಗಳ (ನೇಕಾರ ಜೇಡರ ದಾಸಿಮಯ್ಯನ ಕಾಲದ ಪದ) ನಾಶವಾದ ನಂತರ ಹಠಾತ್ತನೆ ನೇರವಾಗಿ ಆಧುನಿಕ ಯಂತ್ರಗಳನ್ನು ಆಮದು ಮಾಡಿ, ಫ್ಯಾಕ್ಟರಿಗಳ ಹಂತದ ಹತ್ತಿ ಗಿರಣಿಗಳನ್ನು ಸ್ಥಾಪಿಸಲಾಯಿತು. ಸಣ್ಣ ಸಣ್ಣ ಉದ್ಯಮಗಳ ನಡುವಿನಿಂದ ಮಧ್ಯಮ, ದೊಡ್ಡ ಬಂಡವಾಳಶಾಹಿಗಳ ಬೆಳವಣಿಗೆಗೆ ಬದಲಾಗಿ ನೇರವಾಗಿ ದೊಡ್ಡ ಬಂಡವಾಳಶಾಹಿಗಳ ಬೆಳವಣಿಗೆಯಾಯಿತು.
ಅದರ ಪರಿಣಾಮವಾಗಿ ಹಲವು ಭಾರತೀಯ ಮಾಲೀಕತ್ವದ ಗಿರಣಿಗಳಲ್ಲಿ ಕೂಡಾ ಬ್ರಿಟನ್ನಿನಿಂದ ಆಮದು ಮಾಡಿದ ತಂತ್ರಜ್ಞರಿಗೆ ಉತ್ಪಾದನೆಯ ಹೊಣೆ ನೀಡಲಾಗಿತ್ತು. ಇದು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಬ್ರಿಟಿಷ್ ಏಜೆನ್ಸಿಗಳಿಗೆ ಇಡೀ ಗಿರಣಿಯ ಉಸ್ತುವಾರಿ ನೀಡಲಾಗುತ್ತಿತ್ತು. ಇಂತಹ ಬ್ರಿಟಿಷ್ ಏಜೆನ್ಸಿಗಳ ಹೆಸರು ಕಂಡರೆ ಮಾತ್ರ ಭಾರತೀಯರು ಆ ಗಿರಣಿಗಳಲ್ಲಿ ಹಣ ಹೂಡುತ್ತಿದ್ದರು. ಈ ಬ್ರಿಟನ್ ಅಧಿಕಾರಿಗಳು, ಏಜೆನ್ಸಿಗಳಿಗೆ ಗಿರಣಿಗಳ ಬಹಳಷ್ಟು ಆದಾಯ
ಸೋರಿ ಹೋಗುತ್ತಿತ್ತು.
ಕೆಜಿಎಫ್ ಕಾರ್ಮಿಕರ ಕಬ್ಬಿಣದ ಬಳೆ
ಇನ್ನು ಕಾರ್ಮಿಕರ ವಿಷಯದಲ್ಲಿ ಹೇಳುವುದಾದರೆ ಅವರು ನೇರವಾಗಿ ಹಳ್ಳಿಗಳಿಂದ ಬಂದವರು. ತಕ್ಷಣದ ಸಾಲ ತೀರಿಸುವುದಕ್ಕೆ ಒಂದಿಷ್ಟು ಹಣ ಸಂಪಾದಿಸಿ ಮತ್ತೆ ಹಳ್ಳಿಗೆ ಹೋಗಿ ಒತ್ತೆಯಿಟ್ಟ ಭೂಮಿ ವಾಪಸ್ ಪಡೆದು ಅಥವಾ ಭೂಮಿ ಕೊಂಡು ರೈತರಾಗಿ ಬದುಕುವ ಕನಸು ಹೊತ್ತವರು. ಇದನ್ನು ಕೆಜಿಎಫ್ ಚಿನ್ನದ ಗಣಿ, ಬೆಂಗಳೂರಿನ ಹತ್ತಿ ಗಿರಣಿಗಳು, ಕಾಫಿ, ಟೀ ಪ್ಲಾಂಟೇಷನ್ ಗಳು ಮುಂತಾದ ಕರ್ನಾಟಕದ ಮೊದಲ ಉದ್ಯಮಗಳಲ್ಲೆಲ್ಲ ಕಾಣಬಹುದು. ಕೆಜಿಎಫ್, ಪ್ಲಾಂಟೇಷನ್ಗಳಲ್ಲಂತೂ ಕಾರ್ಮಿಕರು ಪದೇ ಪದೇ ಓಡಿ ಹೋಗುತ್ತಿದ್ದರು. ಅವರನ್ನು ಉಳಿಸಿಕೊಳ್ಳುವುದೇ ಒಂದು ಸಮಸ್ಯೆಯಾಗಿತ್ತು. ಆದ್ದರಿಂದ ಗಣಿ ಮತ್ತು ಪ್ಲಾಂಟೇಷನ್ ನ ಐರೋಪ್ಯ ಮಾಲೀಕರುಗಳು ಮೈಸೂರು ರಾಜರ ಮೇಲೆ ಒತ್ತಾಯ ಮಾಡಿ ಒಂದು ಹೊಸ ಕಾಯಿದೆಯನ್ನೇ ಜಾರಿಗೆ ತರುವಂತೆ ಮಾಡಿದರು. ಕೆಜಿಎಫ್ ಅಥವಾ ಪ್ಲಾಂಟೇಷನ್ ಗಳ ಕಾರ್ಮಿಕರು ಎಲ್ಲಿಯಾದರೂ ದಾರಿಯಲ್ಲಿ ಸಿಕ್ಕರೆ ಆಯಾ ಹಳ್ಳಿಗಳ ಪಟೇಲರು ಅವರನ್ನು ಹಿಡಿದುಕೊಂಡು ಬಂದು
ಗಣಿ, ಪ್ಲಾಂಟೇಷನ್ ಗಳ ಮಾಲೀಕರಿಗೆ ಒಪ್ಪಿಸಬೇಕೆಂಬುದು ಆ ಕಾನೂನು.
ಅಷ್ಟೇ ಅಲ್ಲ ತಮ್ಮ ಕಾರ್ಮಿಕರನ್ನು ಗುರುತಿಸಲು ಕೆಜಿಎಫ್ ಗಣಿ ಮಾಲೀಕರು ಅವರ ಕೈಗಳಿಗೆ ತೆಗೆದು ಹಾಕಲಾಗದ ಬಿಗಿಯಾದ ಒಂದು ಕಬ್ಬಿಣದ ಬಳೆಯನ್ನೂ ಹಾಕಿದ್ದರು. ಆ ಬಳೆಯ ಮೇಲೆ ಇವರು ಕೆಜಿಎಫ್ ಕಾರ್ಮಿಕರು ಎಂದು ಬರೆಯಲಾಗಿತ್ತು. ಅಷ್ಟೇ ಅಲ್ಲ ಅವರುಗಳನ್ನು ಖಾಯಂ ಮಾಡಲು ಪ್ರಯತ್ನಿಸಿ ಹೆಸರುಗಳನ್ನು ದಾಖಲು ಮಾಡಿಕೊಳ್ಳ ಹೋದರೆ ಅವರಲ್ಲಿ ಬಹಳಷ್ಟು ಜನರ ಹೆಸರು ಒಂದೇ ರೀತಿ ಇರುವುದು ತಿಳಿಯಿತು. ಆದ್ದರಿಂದ ಅವರ ಕೈ ಬೆರಳ
ಗುರುತನ್ನು ತೆಗೆದುಕೊಂಡು ಖಾಯಂ ದಾಖಲೆಗೆ ಸೇರಿಸಲು ಪ್ರಯತ್ನಿಸಿದರು. ಆದರೆ ಕಾರ್ಮಿಕರು ಇದನ್ನು ಒಪ್ಪದೆ ದೀರ್ಘ ಕಾಲ
ಮುಷ್ಕರವನ್ನೇ ಮಾಡಿದರು.
ಈ ಕಾರ್ಮಿಕರು ವಿಜ್ಞಾನ ತಂತ್ರಜ್ಞಾನದ, ಪಾಳೆಯಗಾರಿ ವ್ಯವಸ್ಥೆಯ ನಾಶ, ಪ್ರಜಾಪ್ರಭುತ್ವದ ವಿಚಾರಗಳ ಅರಿವಿನ ಲೇಶವೂ ಇಲ್ಲದವರು. ಪಾಳೆಯಗಾರಿ ಹಿಡಿತದ ಹಳ್ಳಿಗಳ ಎಲ್ಲ ಮೂಢ ನಂಬಿಕೆ, ಕಂದಾಚಾರಗಳನ್ನು ತಲೆಯ ತುಂಬಾ ತುಂಬಿಕೊಂಡವರು. ಇನ್ನು ಜಾತಿ ಜಾತಿಗಳಾಗಿ ವಿಭಜಿತರಾದವರು. ಭಾರತವೆಂಬ ಬೃಹತ್ ದೇಶದಲ್ಲಿ ಅಸ್ತಿತ್ವದಲ್ಲಿರುವ ಆದಿವಾಸಿ ಹಂತದಿಂದ ಆರಂಭಿಸಿ, ಹಲವು ಹಂತಗಳ ಸಮಾಜದ ರಚನೆಗಳಿಂದ ಬಂದವರು. ಹಲವು ಭಾಷೆ, ಧರ್ಮಗಳ ಮೂಲದವರು. ಅವರು ತಮ್ಮ ಮೂಲದ ಹಳ್ಳಿಗಳಲ್ಲಿಯೂ ಗುಡಿಸಲು, ಜೋಪಡಿಗಳ ಮಟ್ಟದ ಬದುಕನ್ನೇ ಕಂಡವರು. ಕೈಗಾರಿಕೆಗಳ ಕಾರ್ಮಿಕರಾಗಿ ಜೀವನ ನಡೆಸುವಾಗಲೂ ಇದಕ್ಕಿಂತ ಬಹಳ ಹೆಚ್ಚಿನ ಜೀವನಕ್ಕೇನೂ ಆಸೆ ಪಡದೆ ಅತಿ ಕಡಿಮೆ ಕೂಲಿಗೆ ದುಡಿಯಲು ಸಿದ್ಧರಾಗಿದ್ದರು. ಈ ರೀತಿ ಉಗಮವಾದ ಜಾತಿ, ಭಾಷೆ, ಧರ್ಮ ವಿಭಜಿತ ಕಾರ್ಮಿಕರಲ್ಲಿ ಒಗ್ಗಟ್ಟು ಮೂಡುವುದು ದುಸ್ತರವೇ ಆಗಿತ್ತು. ಬದುಕಿನ ದುಸ್ಥಿತಿ ಸಹಿಸಲಾರದೆ ಬಂಡೆದ್ದರೆ ಅದನ್ನು ಒಡೆಯಲು ಟಾಟಾಗಳು, ಅವರ ಜೊತೆಗಾರರು ಇವುಗಳನ್ನೆಲ್ಲ ಬಳಸುತ್ತಿದ್ದರು.
ಕರ್ನಾಟಕದಲ್ಲಿ ಮೇಲೆ ಹೇಳಿದ ಮೊದಲ ಕಾರ್ಮಿಕ ವರ್ಗದವರು ದೊಡ್ಡ ಪ್ರಮಾಣದಲ್ಲಿ ಭೂಹೀನ ದಲಿತ ಕೂಲಿಕಾರರ ಮೂಲದವರು. ಬ್ರಿಟನ್ನಂತೆ ಬಹುತೇಕ ಒಂದೇ ಭಾಷೆ, ಒಂದೇ ಧರ್ಮದವರಲ್ಲ. ಸಮಾಜದಲ್ಲಿದ್ದ ಪಾಳೆಯಗಾರಿ ಶ್ರೇಷ್ಟತೆ ಮತ್ತು ಕನಿಷ್ಟತೆಯ ಸ್ತರಗಳು ನಾಶವಾಗುತ್ತಿದ್ದ ಕಾಲದವರಲ್ಲ. ಹೀಗೆ ಬ್ರಿಟನ್ನ ಬಂಡವಾಳಶಾಹಿ ಮತ್ತು ಭಾರತದ ಬಂಡವಾಳಶಾಹಿಗಳ, ಬ್ರಿಟನ್ ಮತ್ತು ಭಾರತದ ಕಾರ್ಮಿಕ ವರ್ಗದ ಉಗಮದ ಸ್ವರೂಪದ ಮುಖ್ಯ ವ್ಯತ್ಯಾಸಗಳು ಭಾರತದ ಸ್ವಾತಂತ್ರ್ಯ ಚಳುವಳಿ ಮತ್ತು ನಂತರ ಇಲ್ಲಿಯವರೆಗೂ ಆರ್ಥಿಕ, ಸಾಮಾಜಿಕ, ರಾಜಕೀಯ, ಕಾರ್ಮಿಕ, ರೈತ ರಂಗಗಳ ಮೇಲೆ ಪರಿಣಾಮ ಬೀರುತ್ತಲೇ ಇವೆ.
(ಮುಂದಿನ ಭಾಗದಲ್ಲಿ “ಭಾರತದಲ್ಲಿ ಬಂಡವಾಳದ ಉಗಮ ಮತ್ತು ಜಾತಿ ವ್ಯವಸ್ಥೆ”)
ಇದನ್ನೂ ನೋಡಿ: ಪುಸ್ತಕ ಬಿಡುಗಡೆ | ಆರ್.ಬಿ.ಮೋರೆ – ಮೊದಲ ದಲಿತ ಕಮ್ಯುನಿಸ್ಟ್