ಗಿರಿಜಾ ಶಾಸ್ತ್ರಿ
ದಿ ಗ್ರೇಟ್ ಇಂಡಿಯನ್ ಸಿನಿಮಾ ನೋಡಿದ ತಕ್ಷಣ ಕಣ್ಣಿಗೆ ರಾಚಿದ್ದು ನಮ್ಮ ಸಮಾಜದ ಪುರುಷ ಪ್ರಾಧಾನ್ಯತೆಯ ತಣ್ಣಗಿನ ಕ್ರೌರ್ಯ.
ಅಡುಗೆಮನೆಯೆಂದರೆ ಕಣ್ಣಮುಂದೆ ಬರುವುದು ಅಮ್ಮ. ಅವಳ ವಲಯವೆಂದರೆ ಅಡುಗೆ ಮನೆ, ಹಿತ್ತಿಲು ಹೆಚ್ಚೆಂದರೆ ನಡುಮನೆ. ಹಜಾರ, ಜಗುಲಿಗಳು ಅವಳ ಜಾಗವಲ್ಲ. ಅಮ್ಮನ ವಲಯವೆಂದರೆ ರುಬ್ಬುವ, ಬೀಸುವ,ಜಜ್ಜುವ, ಹೆಚ್ಚುವ, ಕೊಚ್ಚುವ, ಕುಟ್ಟಿ ಪುಡಿಮಾಡುವ ನಾನಾ ಕೆಲಸಗಳ ಒಂದು ಕಾರ್ಯಾಗಾರ. ಅದಕ್ಕೆ ಲಗತ್ತಿಸಿಕೊಂಡಂತೇ ಇರುವ ಹೊರಗಿನ ಅಂಗಳದಲ್ಲೂ ತಿಕ್ಕುವ, ತೊಳೆಯುವ, ಗುಡಿಸುವ ಬೀಸಿ ಒಗೆಯುವ, ಬಡಿಯುವ, ಕುಕ್ಕುವ, ಸೀಳುವ ಸಿಗಿಯುವ ಬಳಿಯುವ ಬಾಚುವ ನಾನಾ ಕೆಲಸಗಳೇ ! ಯಾಂತ್ರಿಕವಾದವುಗಳು. ಈ ಯಾಂತ್ರಿಕತೆಯನ್ನು ಸಿನಿಮಾದಲ್ಲಿ ಬಹಳ ಚೆನ್ನಾಗಿ ತೋರಿಸಿದ್ದಾರೆ.
ಮಲಗುವ ಮನೆಯಲ್ಲಿ ಯಾಂತ್ರಿಕತೆಯನ್ನು ಮೀರುವ ಸಲುವಾಗಿ ಗಂಡನೊಡನೆ ಸರಸವಾಡಲು ಬಯಸುತ್ತಾಳೆ. ಆದರೆ ಗಂಡನ ಶಂಕೆಗೆ ಗುರಿಯಾಗುತ್ತಾಳೆ. ಗಂಡಹೆಂಡತಿಯ ನಡುವೆ ಸಣ್ಣದಾಗಿ ಬಿರುಕುಬಿಡಲು ಪ್ರಾರಂಭವಾಗುತ್ತದೆ. ಹೀಗೆ ಅಡುಗೆ ಮನೆಯ ಬಚ್ಚಲಿನ ಸೋರುವ ಪೈಪ್ ಕುಟುಂಬ ವ್ಯವಸ್ಥೆ ಶಿಥಿಲಗೊಳ್ಳುತ್ತಿರುವ ಪ್ರತೀಕವಾಗಿದೆ.
ಕಾಲಕಾಲಕ್ಕೆ ಇವಳ ವಲಯ ಸ್ವಲ್ಪಮಟ್ಟಿಗೆ ವಿಸ್ತಾರವಾಗಿರಬಹುದು, ಬದಲಾಗಿರಬಹುದು. ಕಾರ್ಯಾಗಾರದಲ್ಲಿನ ಸಾಧನಗಳು ಉಪಕರಣಗಳು ಬದಲಾಗಿರಬಹುದು ಆದರೆ ಕೆಲಸಗಳ ಸ್ವರೂಪ ಮಾತ್ರ ಬದಲಾಗಿಲ್ಲ. ಕುಟುಂಬದಲ್ಲಿ ಅದನ್ನು ನಿರ್ವಹಿಸಬೇಕಾದವಳು ಇಂದಿಗೂ ಹೆಣ್ಣೇ ಆಗಿದ್ದಾಳೆ. ವಿಪರ್ಯಾಸವೆಂದರೆ, ಮನೆಯೊಳಗೆ ಕಾಲಕಸವಾಗುವ ಈ ಕೈಂಕರ್ಯಗಳೇ ಹಣಗಳಿಸುವ ಉದ್ದಿಮೆಯಾದರೆ ಇವಕ್ಕೊಂದು ತಾರಾಮೌಲ್ಯ ಒದಗಿಬಿಡುತ್ತದೆ. ಅಜ್ಜಿಯ ಕಿಚನ್ ಗಳ ‘ರಸವಾಂಗಿ’ಗಳು, ಶಿಸ್ತು, ಅತಿಥ್ಯಗಳು ವಿಶ್ವವಿದ್ಯಾಲಯದ ಪಠ್ಯಗಳಾಗಿಬಿಡುತ್ತವೆ!!!!
ಮನೆಯೊಳಗಿನ ಅವಳ ಈ ದುಡಿಮೆಯನ್ನು , ಕಾರ್ಯಕ್ಷಮತೆಯನ್ನು ನಿಸ್ವಾರ್ಥ ಸೇವೆಯೆಂದು ವೈಭವೀಕರಿಸಲಾಗಿದೆ. ಅದಕ್ಕೇ ಅವಳ ಈ ದುಡಿಮೆ ಅನುತ್ಪಾದಕವಾದುದು. ಇದಕ್ಕೆ ಬೆಲೆಯಿಲ್ಲ. ಈ ದುಡಿಮೆಗೆ ಬಿಡುವಿಲ್ಲ, ಸಂಬಳವಿಲ್ಲ, ನಿವೃತ್ತಿಯಂತೂ ಇಲ್ಲವೇ ಇಲ್ಲ. ಇದರ ನಿರ್ವಹಣೆಯಲ್ಲಿ ಸೋರಿಹೋಗುವ ಅವಳ ಶಕ್ತಿಯ ಪರಿವೆಯಂತೂ ಪುರುಷ ಸಮಾಜಕ್ಕೆ ಇಲ್ಲ. ಇದನ್ನು ನಿರಾಕರಿಸುವ ಹೆಣ್ಣಿಗಂತೂ ಸಮಾಜದಲ್ಲು ವಿಶೇಷ ‘ಸನ್ಮಾನಗಳು’ ಕಾದಿರುತ್ತವೆ. ಮರಾಠಿಯ “ಆಯಿ ರಿಟೈರ್ ಹೋತೇ” ಎನ್ನುವ ವಿಡಂಬನಾ ಪ್ರಧಾನ ನಾಟಕ ನೆನಪಾಗುತ್ತದೆ. ಪ್ರತಿಭಾ ಅವರ ಅಡುಗೆಯ ಬಗೆಗಿನ ಕವಿತೆ ನೆನಪಾಗುತ್ತದೆ. ಅಡುಗೆ ಮನೆ ಅವಳ ಅವಕಾಶ (space) ಆಗಿರುವಂತೆ ಅದರ ಕೈಂಕರ್ಯಗಳು ಅವಳ ಒತ್ತಡಗಳನ್ನು ಹೊರಚೆಲ್ಲುವ ಸಾಧನಗಳೂ ಆಗಿವೆ.
ಈ ದುಡಿಮೆಯ ಒತ್ತಡ ತಾಳಲಾರದೇ ಈ ಸಿನಿಮಾದ ನಾಯಕಿ ಮನೆ, ಗಂಡನನ್ನು ಬಿಟ್ಟು ಹೊರಡುತ್ತಾಳೆ. ಡಾನ್ಸ್ ಶಿಕ್ಷಕಿಯಾಗುವುದರ ಮೂಲಕ ತನ್ನ ಆಯ್ಕೆಯನ್ನು ಅಪ್ಪಿಕೊಳ್ಳುತ್ತಾಳೆ. ಇದು ನಾಯಕಿಯ ಗೆಲುವು ಎನಿಸಿಬಿಡುವುದು ಸಹಜ. ಸಿನಿಮಾ ಇಲ್ಲಿಗೆ ಮುಗಿಯುತ್ತದೆ. ಆದರೆ ಜೀವನ ಪ್ರಾರಂಭವಾಗುವುದೇ ಮುಗಿದಲ್ಲಿಂದ. ಮನೆಯನ್ನೇನೋ ಬಿಟ್ಟಳು ಆದರೆ ಮುಂದೇನು ಎನ್ನುವ ಪ್ರಶ್ನೆಯನ್ನು ಸಿನಿಮಾ ಸಂಬೋಧಿಸುವುದಿಲ್ಲ. ಹೆಣ್ಣಿಗೆ ತಾನು ಇದುವರೆಗೂ ಮಾಡುತ್ತಿದ್ದುದು ಕೃತಘ್ನ ಕೆಲಸ ( thankless job) ಎಂಬ ಅರಿವಿನ ಆಸ್ಫೋಟವಾಗುವುದೂ ಕಡಿಮೆಯೇನಲ್ಲ.
ಕುಟುಂಬ ಶಿಥಿಲಗೊಳ್ಳುತ್ತಿದೆ ನಿಜ ಆದರೆ ಅದಕ್ಕೆ ಪರ್ಯಾಯಗಳೇನು? ಅದನ್ನು ಇಂತಹ ಅನೇಕ ಸಿನಿಮಾಗಳು ಸೂಚಿಸುವುದಿಲ್ಲ. ಯಾಕೆಂದರೆ ಪಿತೃಪ್ರಾಧಾನ್ಯ ಎನ್ನುವುದು ಕೇವಲ ಕುಟುಂಬದೊಳಗೆ ಮಾತ್ರವಿಲ್ಲ. ಅದು ಕುಟುಂಬದ ಹೊರಗೂ, ಎಲ್ಲೆಡೆಯೂ ಇದೆ. ಧರೆಯೇ ಹೊತ್ತಿ ಉರಿಯುವಾಗ ಓಡುವುದೆಲ್ಲಿಗೆ? ಪುರುಷ ಪ್ರಾಧಾನ್ಯದ ಸ್ವರೂಪಗಳು ಬದಲಾದಂತೆ ಶೋಷಣೆಯ ರೂಪಗಳು ಬದಲಾಗುತ್ತವೆಯೇ ಹೊರತು ಪುರುಷ ಪ್ರಾಧಾನ್ಯವಾಗಲೀ, ಶೋಷಣೆಯಗಾಲೀ ಕೊನೆಯಾಗುವುದಿಲ್ಲ. ಶೋಷಣೆಯ ಶಬ್ದ ಕ್ಲೀಷೆಯಾಗಿದೆ, ಸವಕಲಾಗಿದೆ. ಬಳಸಲು ಅಸಹ್ಯವೆನಿಸುತ್ತದೆ ನಿಜ. ಆದರೆ ಅದರ ಮೂಲಭೂತ ಆಶಯಗಳು ಮಾತ್ರ ಬದಲಾಗಿಲ್ಲ, ಸವಕಲಾಗಿಲ್ಲವಲ್ಲ? ಅದಕ್ಕೇನು ಮಾಡೋಣ?
ಹೀಗೆ ಒಂದರಿಂದ ಪಲಾಯನ ಮಾಡಿ ಇನ್ನೊಂದರ ಹಿಂದೆ ಓಡಿದರೆ ವ್ಯವಸ್ಥೆ ಬದಲಾಗುತ್ತದೆಯೇ ಎನ್ನುವ ಪ್ರಶ್ನೆ. ಇವಳು ಬಿಟ್ಟುಹೋದ ಕೂಡಲೇ ಇನ್ನೊಬ್ಬಳು ಬರುತ್ತಾಳೆ. ಹೀಗೆ ದಬಾವಣೆ ಮುಂದುವರೆಯುತ್ತದೆ. ಇಂತಹ ಸವಾಲುಗಳನ್ನು ಸಾಮುದಾಯಕ ನೆಲೆಯಲ್ಲಿ ಯೋಚಿಸಬೇಕೇ ಹೊರತು ವೈಯಕ್ತಿಕವಾಗಿಯಲ್ಲ.
(ನಾಯಕಿ ನೃತ್ಯ ಶಿಕ್ಷಕಿಯಾಗಿ ತನ್ನಂತಹ ಅನೇಕ ನೃತ್ಯಗಾರ್ತಿಯರನ್ನು ತಯಾರು ಮಾಡುವುದು ಕೂಡ ಒಂದು ಸಾಮುದಾಯಕ ಕ್ರಿಯೆಯೇ ಆಗಿದೆ. )
ವ್ಯವಸ್ಥೆಯ ಒಳಗಿದ್ದುಕೊಂಡೇ ಅದನ್ನು ಹಣಿಯುವ, ಮಣಿಸುವ ಉಪಾಯಗಳನ್ನು ಸ್ತ್ರೀಸಮುದಾಯ ಕಂಡುಕೊಳ್ಳಬೇಕಾಗಿದೆ. ಇವು ಕೇವಲ ಹೆಣ್ಣಿನ ಪ್ರಶ್ನೆಗಳಲ್ಲ. ಗಂಡಿನ ಸವಾಲುಗಳೂ ಹೌದು. ಗಂಡು ಹೆಣ್ಣು ಇಬ್ಬರೂ ಕೂಡಿಯೇ ವ್ಯವಸ್ಥೆಯನ್ನು ಬದಲಾಯಿಸಬೇಕಾಗಿದೆ. ಕಾಲಕ್ಕನುಗುಣವಾಗಿ ಪರಿಷ್ಕರಿಸಬೇಕಾಗಿದೆ. ಆಧುನೀಕರಿಸಬೇಕಾಗಿದೆ. ಹೆಣ್ಣನ್ನು ಬಿಟ್ಟು ಗಂಡು, ಗಂಡನ್ನು ಬಿಟ್ಟು ಹೆಣ್ಣು ಇರಲು ಸಾಧ್ಯವಿಲ್ಲ. ಮನುಷ್ಯ ಸಂಬಂಧಗಳಾಚೆ ಬದುಕಲು ಸಾಧ್ಯವಿಲ್ಲ. ಆಗ ಇಬ್ಬರೂ ಅವರಬಿಟ್ಟ್ ಇವರ್ಯಾರು ಇವರ ಬಿಟ್ಟ್ ಅವರ್ಯಾರು ಎಂದು ಕಣ್ಣಿಗೆ ಪಟ್ಟಿಕೊಂಡು ಮರೀಚಿಕೆಯ ಹಿಂದೆ ಅಲೆಯುವುದರಿಂದ ಏನೂ ದೊರಕುವುದಿಲ್ಲ ಕಡೆಗೆ.
ಎರಡು ಎತ್ತುಗಳೂ ವಿರುದ್ಧ ದಿಕ್ಕಿನಲ್ಲಿ ಅಲ್ಲ , ಸ್ಪಷ್ಟವಾದ ಗ್ರಹಿಕೆಯ ದಾರಿಯಲ್ಲಿ ಒಂದೇ ದಿಕ್ಕಿನಲ್ಲಿ, ಸಮಾನಾಂತರವಾಗಿ ಬಂಡಿಯನ್ನು ಚಲಾಯಿಸಬೇಕಾಗಿದೆ. ಒಂದು ಏರಿಗೆ ಇನ್ನೊಂದು ನೀರಿಗೆ ಎಳೆದರೆ ಇಬ್ಬರಿಗೂ ನೋವು ತಪ್ಪಿದ್ದಲ್ಲ. ಹೆಣ್ಣಾಗಲೀ ಗಂಡಾಗಲೀ ದುಡಿಮೆಯಿಂದ ತಪ್ಪಿಸಿಕೊಳ್ಳಲಂತೂ ಸಾಧ್ಯವಿಲ್ಲ. ಯಾರಾದರೂ ಅಡುಗೆ ಮಾಡಲೇಬೇಕಲ್ಲ- ಹಸಿವು ನೀಗಲು? “ನಾನು ಮಾಡುವುದಿಲ್ಲ ನೀನೇ ಮಾಡು” ಎಂದರೆ ಅದೂ ಸವಾರಿಯೇ ಆಗುತ್ತದೆ. ಇಬ್ಬರ ದುಡಿಮೆಗೂ ಸಮಾನವಾದ ಬೆಲೆ ದೊರೆಯಬೇಕಾಗಿದೆ. ಹಾಗೆಯೇ ದುಡಿಮೆಯನ್ನು ಇಬ್ಬರೂ ಸಮಾನವಾಗಿ ಹಂಚಿಕೊಳ್ಳಬೇಕಾಗಿದೆ. ಏರಿಗೆ, ನೀರಿಗೆ ಎಳೆಯುವ ಕಷ್ಟದ ಅರಿವು ಇಬ್ಬರಿಗೂ ಆಗಬೇಕಾಗಿದೆ
ಹೆಂಡತಿ ಮನೆಯಲ್ಲಿ ಸಮಾಧಾನದಿಂದ ಸಂತೋಷದಿಂದ ಅಟ್ಟು ಉಣಿಸಿ ಕಳುಹಿಸಿದರೆ ಮಾತ್ರ ಗಂಡು ಹೊರಗೆ ಸ್ವಾಸ್ಥ್ಯದಿಂದ ದುಡಿಯಲು ಸಾಧ್ಯ . ಆದ್ದರಿಂದ ಗಂಡನ ಸಂಬಳದ ಅರ್ಧಪಾಲು ಹೆಂಡತಿಗೆ ದೊರೆಯಬೇಕು. ಎಂದು “ಸ್ತ್ರೀ ಪುರುಷ್” ಎನ್ನುವ ಮರಾಠಿ ಕೃತಿಯಲ್ಲಿ ಛಾಯಾದಾತಾರ್ ಅಭಿಪ್ರಾಯ ಪಡುತ್ತಾರೆ.
ಹೀಗೆ ಹೆಣ್ಣಿನ ದುಡಿಮೆಗೆ ಆರ್ಥಿಕ ಒತ್ತಾಸೆ ದೊರೆತರೆ ಅದರ ಮೌಲ್ಯವೂ ತನ್ನಿಂದ ತಾನೇ ಹೆಚ್ಚಾದೀತು. ಸಿನಿಮಾದಲ್ಲಿ ವ್ಯಂಗ್ಯವಾದ ಇಂಡಿಯನ್ ಕಿಚನ್ ಆಗ ನಿಜವಾಗಿ “ದಿ ಗ್ರೇಟ್ ಇಂಡಿಯನ್ ಕಿಚನ್ ” ಆಗಬಹುದು.