ಯಾದಗಿರಿ: ನಗರದ ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ನಿರ್ಮಾಣಕ್ಕೆಂದು ಸಾವಿರಾರು ಎಕರೆ ಕೃಷಿಭೂಮಿ ನೀಡಿದ ಈ ಭಾಗದ ಮುಗ್ಧ ರೈತರಿಗೆ ಭರವಸೆಗಳ ಬಲೂನ್‌ಗಳನ್ನು ತೋರಿಸಿದ್ದ ಸರ್ಕಾರಗಳು, ನಂತರ ಎಲ್ಲವನ್ನೂ ಮರೆತವರಂತೆ, ಈಗ ವಿಷಗಾಳಿ, ರೋಗ- ರುಜಿನಳಿಗೆ ಜನರು ಬದಲಿಯಾಗುವಂತಹ ವಾತಾವರಣ ಸೃಷ್ಟಿಸಿದಂತಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಯಾದಗಿರಿ
“ಕೈಗಾರಿಕೆಗಳ ಸ್ಥಾಪನೆಗೆ ಜಮೀನು ನೀಡಿದರೆ ನಮಗೆಲ್ಲ ಉದ್ಯೋಗದ ಭರವಸೆ ನೀಡಲಾಗಿತ್ತು. ನೀವು ಅಥವಾ ನಿಮ್ಮ ಮಕ್ಕಳಿಗೆ ಗಾರ್ಮೆಂಟ್ಸ್ ಕಂಪನಿಗಳಲ್ಲಿ ಕೆಲಸ, ಒಳ್ಳೆ ಪಗಾರ ಕೊಡಲಾಗುತ್ತದೆ ಎಂದು ನಮ್ಮನ್ನು ನಂಬಿಸಿ, ನಮ್ಮ ಫಲವತ್ತಾದ ಜಮೀನುಗಳನ್ನು ಕೊಟ್ಟು ಮೋಸ ಹೋದ್ವಿ. ಸದ್ಯಕ್ಕೆ, ಇಲ್ಲಿನ ವಾತಾವರಣ ನೋಡಿದರೆ, ಇಲ್ಲಿರೋ ಕಂಪನಿಗಳಲ್ಲಿ ನೌಕ್ರಿ ಮಾಡೋದು ಹ್ಯಾಂಗರ ಇರಲಿ, ನಮ್ಮೂರಾಗ ನಾವು ಬದುಕಿದರೆ ಸಾಕು ಅನ್ನೋ ಹಂಗಾಗೇದ…” ಎಂದು ಭೂ ಸಂತ್ರಸ್ತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಯಾದಗಿರಿ
ಉದ್ಯೋಗ, ಮಕ್ಕಳ ಭವಿಷ್ಯ, ಆರೋಗ್ಯ-ಶಿಕ್ಷಣದ ಭದ್ರತೆ ಮುಂತಾದವುಗಳು ಕೈಗೆಟುಕಿ, ಜೀವನ ಸರಿಯಾಗಬಹುದು ಎಂದು ನಂಬಿದ್ದ ಇಲ್ಲಿನ ಜನರು, ಭರವಸೆಗಳ ಈಡೇರದಿರಲಿ, ಬದುಕು ಸಾಗಿಸಲೂ ಈಗಿಲ್ಲಿ ಬೆಚ್ಚಿ ಬೀಳುವಂತಾಗಿದೆ. ಮೊದಲಿಗೆ ಆರಂಭಗೊಂಡ ರೈಲು ಗಾಲಿಗಳ ಅಚ್ಚು (ರೈಲ್ವೆ ಕೋಚ್) ತಯಾರಿಕಾ ಬೋಗಿ ಕಾರ್ಖಾನೆಯಂತೂ ಇವರ ನೆರಳೂ ಬೀಳದಂತೆ ನಿಗಾವಹಿಸುತ್ತಿದೆ. ಭೂ ಸಂತ್ರಸ್ತರ ಕುಟುಂಬಸ್ಥರಿಗೆ ನೀಡಬೇಕಾದ ಶೈಕ್ಷಣಿಕ ಆಧಾರದ ಮೇಲೆ ಇಲ್ಲಿ ನೀಡಬೇಕಿದ್ದ ಉದ್ಯೋಗ ಬೇರೆಯವರ ಪಾಲಾಗುತ್ತಿದೆ.
ಇದನ್ನೂ ಓದಿ: ವಿಧಾನಸೌಧದಲ್ಲಿ ಮಾರ್ಗದರ್ಶಿತ ಪ್ರವಾಸ ಆರಂಭ – ಪ್ರತಿ ವ್ಯಕ್ತಿಗೆ 150 ರೂ. ಪ್ರವೇಶ ಶುಲ್ಕ!
ಈ ಭಾಗದವರೇ ಅಲ್ಲದ ಹತ್ತಿಪ್ಪತ್ತು ಜನರಿಗೆ ಇಲ್ಲಿ ಗುತ್ತಿಗೆ ಆಧಾರದ ಮೇಲೆ ತರಬೇತಿ-ಉದ್ಯೋಗ ನೀಡುವ ಕಣ್ಣಾಮುಚ್ಚಾಲೆಯಾಟ ನಡೆದಿದೆ. ಆದರೆ, ವಾಸ್ತವದಲ್ಲಿ ಭೂಮಿ ಕಳೆದುಕೊಂಡು, ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದವರಿಂದ ಅರ್ಜಿಯೇನೋ ಪಡೆಯುತ್ತಾರೆ. ಆದರೆ, ನೌಕರಿ ಈವರೆಗೆ ನೀಡಿಲ್ಲ ಎಂದು ಶೆಟ್ಟಿಹಳ್ಳಿ ಗ್ರಾಮದ ಕಾಶೀನಾಥ್ ರೈಲ್ವೆ ಕೋಚ್ ಫ್ಯಾಕ್ಟರಿಯ ವರ್ತನೆ ಬಗ್ಗೆ ಕೆಂಡ ಕಾರುತ್ತಾರೆ. ನಮ್ಮ ಜಮೀನುಗಳಲ್ಲಿ ಕಾರ್ಖಾನೆ ಸ್ಥಾಪಿಸಿದ ಕಂಪನಿಗಳು, ಅಲ್ಲಿನ ಗೇಟನ್ನೂ ನಮ್ಮಿಂದ ಮುಟ್ಟಲು ಬಿಡುವುದಿಲ್ಲ. ಒಳಗೆ ಬಿಡುವ ಮಾತೆಲ್ಲಿಂದ ಬಂತ ಅಂತಾರೆ ಅವರು.
ಇನ್ನು, ಭೂಸ್ವಾಧೀನ ವೇಳೆ ಗಾರ್ಮೆಂಟ್ ಫ್ಯಾಕ್ಟರಿಯ ಬಗ್ಗೆ ಕಲ್ಪನೆ, ಭರವಸೆ, ಕನಸುಗಳನ್ನು ಸರ್ಕಾರ ತೋರಿಸಿತ್ತು. ವಿಷಗಾಳಿ ಕಾರುವ ಕೆಮಿಕಲ್- ತ್ಯಾಜ್ಯ ಕಂಪನಿಗಳನ್ನು ಇಲ್ಲಿ ಸ್ಥಾಪಿಸಲಾಗುತ್ತದೆ ಎಂಬುದು ಮೊದಲೇ ಗೊತ್ತಿದ್ದರೆ ನಾವ್ಯಾರೂ ಇಲ್ಲಿನ ಭೂಮಿ ನೀಡುತ್ತಿರಲಿಲ್ಲ ಎನ್ನುವ ಕಡೇಚೂರಿನ ಶರಣಪ್ಪ, ಕೆಮಿಕಲ್ ಕಂಪನಿಗಳಲ್ಲೂ ನಮಗೆ ವಾಚ್ಮೆನ್ ಕೆಲಸ ಸಿಗೋಲ್ಲ.
ಅಲ್ಲಿನ ಒಳಗುಟ್ಟು ರಟ್ಟಾದೀತೆಂಬ ಕಾರಣಕ್ಕೆ ಸ್ಥಳೀಯರನ್ನು ಅಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುವುದಿಲ್ಲ. ಕೊಟ್ಟರೂ, ಭಾರಿ ದುರ್ನಾತ ಹಾಗೂ ಕೆಮಿಕಲ್ ಘಾಟಿನ ವಿಭಾಗಕ್ಕೆ ಕಳುಹಿಸುತ್ತಾರೆ. ಸಹಜವಾಗಿ ಇದು ಸರಿಹೊಂದದ ಕಾರಣ, ಬದುಕಿದರೆ ಸಾಕು ಎಂಬ ಕಾರಣಕ್ಕೆ ನಮ್ಮವರು ನೌಕರಿ ಬಿಟ್ಟು ಹೊರಬರುತ್ತಾರೆ ಎಂದು ಕಂಪನಿಗಳ ಮರ್ಮ ಹೊರಹಾಕಿದರು.
ಇದನ್ನೂ ನೋಡಿ: “ಜಾತಿ ಜನಗಣತಿ” ಜನತೆಯ ಹಿತಾಸಕ್ತಿ ಸೋಲದಿರಲಿ – ಡಾ. ಕೆ.ಪ್ರಕಾಶ್Janashakthi Media