ಜಮ್ಮು ಮತ್ತು ಕಾಶ್ಮೀರದ ಸ್ವರೂಪ ನಾಶ: ಮೋದಿ-ಷಾ ಜೋಡಿಯ ಆಟದ ಹುನ್ನಾರ

ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಪಕ್ಷಗಳೊಂದಿಗಿನ ಸಭೆ ಮೋದಿ ಸರ್ಕಾರ ಮತ್ತು ಬಿಜೆಪಿಯ ಇದಕ್ಕಿಂತ ಬಹಳ ಸಂಕುಚಿತವಾದ ಅಜೆಂಡಾದಿಂದಾಗಿ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ಅಸ್ಮಿತೆಯನ್ನು ಮರುರೂಪಿಸುವುದು ಹಾಗೂ ಅದರ ಸ್ವಾಯತ್ತತೆಯ ಯಾವುದೇ ಕುರುಹನ್ನು ಅಳಿಸಿ ಹಾಕುವ ಅವರ ಸೈದ್ಧಾಂತಿಕ ಮತ್ತು ರಾಜಕೀಯ ಪರಿಯೋಜನೆಯನ್ನು ಕ್ರೋಡೀಕರಿಸುವ ಯೋಚನೆ ಇದರ ಹಿಂದಿದೆ. ಇದು ದೆಹಲಿ ಮತ್ತು ಕಾಶ್ಮೀರಿ ಜನರ ನಡುವಿನ ಕಂದಕವನ್ನು ಇನ್ನಷ್ಟು ಹೆಚ್ಚಿಸಿದೆ. ಕಾಶ್ಮೀರಿ ಜನರು ನಿರಾಶೆಗೊಂಡಿದ್ದಾರೆ ಹಾಗೂ ಹತಾಶರಾಗಿದ್ದಾರೆ. ಅಂತಿಮವಾಗಿ, ಕೇಂದ್ರ ಸರ್ಕಾರ ಕಾಶ್ಮೀರದ ಮೇಲೆ ಬಲವಂತದಿಂದ ಹಾಗೂ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಬಗ್ಗುಬಡಿದು ಅಧಿಕಾರ ನಡೆಸಬಹುದಷ್ಟೇ – ಪ್ರಕಾಶ ಕಾರಟ್

ನರೇಂದ್ರ ಮೋದಿ-ಅಮಿತ್ ಷಾ ಜೋಡಿ ಜಮ್ಮು ಮತ್ತು ಕಾಶ್ಮೀರದ ಮೂಲ ಸ್ವರೂಪವನ್ನು ತನ್ನ ಹಿಂದುತ್ವ ಸಿದ್ಧಾಂತದ ಆಧಾರದಲ್ಲಿ ಬದಲಾಯಿಸುವ ತಮ್ಮ ಧ್ಯೇಯಕ್ಕೆ ಕಟಿ ಬದ್ಧವಾಗಿದೆ.

ಪ್ರಧಾನಿ ನರೇಂದ್ರ ಮೋದಿ, ಜಮ್ಮು ಮತ್ತು ಕಾಶ್ಮೀರದ 14 ರಾಜಕೀಯ ಪಕ್ಷಗಳ ಸಭೆಯನ್ನು ಕರೆದಿದ್ದು ಒಂದು ಅಸಮಾನ್ಯ ನಡೆ ಎಂದು ಕಾಣಲಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು 2019 ಆಗಸ್ಟ್ 5ರಂದು ಏಕಾಏಕಿಯಾಗಿ ರದ್ದುಪಡಿಸಿ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿ ನಂತರ ಅಲ್ಲಿನ ಮುಖ್ಯ ರಾಜಕೀಯ ಪಕ್ಷಗಳ ನಾಯಕರನ್ನು ಬಂಧಿಸಿ ಹಾಗೂ ಅವರನ್ನು ಭ್ರಷ್ಟರು ಹಾಗೂ ರಾಷ್ಟ್ರ-ವಿರೋಧಿಗಳು ಎಂದು ಬಿಂಬಿಸುವ ಮೂಲಕ  ಕೆಟ್ಟ ಹೆಸರು ತರಲು ಸತತ ಪ್ರಯತ್ನಗಳನ್ನು ಮಾಡಲಾಗಿತ್ತು. ನಾಯಕರ ರಾಜಕೀಯ ಚಟುವಟಿಕೆಗಳಿಗೆ ಅಡ್ಡಿಪಡಿಸಲು ಎಲ್ಲ ಪ್ರಯತ್ನಗಳನ್ನು ನಡೆಸಲಾಯಿತು. ಇವೆಲ್ಲವುಗಳ ಹೊರತಾಗಿಯೂ ಗುಪ್ಕರ್ ಘೋಷಣೆಯ ಜನತಾ ಮೈತ್ರಿಕೂಟ (ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್), ಸಂಕ್ಷಿಪ್ತವಾಗಿ, ಗುಪ್ಕರ್ ಮೈತ್ರಿಕೂಟ ಈ ಸಭೆಯಲ್ಲಿ ಭಾಗವಹಿಸಲು ಒಪ್ಪಿತು. ಗುಪ್ಕರ್ ಮೈತ್ರಿಕೂಟದಲ್ಲಿ ಎರಡು ಪ್ರಮುಖ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ) ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಪಕ್ಷ (ಪಿಡಿಪಿ) ಕೂಡ ಸೇರಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ಪ್ರಕ್ರಿಯೆ ಆರಂಭಿಸುವ ಉಪಕ್ರಮಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದವು ಎಂದು ಪ್ರಧಾನಿ ಮತ್ತು ಗೃಹ ಸಚಿವರು ಆರೋಪಿಸಲು ಅವಕಾಶ ನೀಡದಿರಲಿಕ್ಕಾಗಿ ಅವು ಸಭೆಯಲ್ಲಿ ಪಾಳ್ಗೊಳ್ಳಲು ಸಮ್ಮತಿಸಿದವು.

ಇದನ್ನು ಓದಿ: ಸರ್ವಪಕ್ಷ ಸಭೆ : “ಹಲವು ಪ್ರಶ್ನೆಗಳನ್ನೆತ್ತಿದೆವು- ಯಾವುದೇ ಉತ್ತರ ಸಿಗಲಿಲ್ಲ” -ತರಿಗಾಮಿ

ಜೂನ್ 24ರಂದು ನಡೆದ ಸಭೆಯಲ್ಲಿ ಯಾವುದೇ ಫಲಿತಾಂಶ ಹೊರಹೊಮ್ಮಲಿಲ್ಲ. ಆದರೆ, ಈ ರೀತಿಯ ಸಭೆಯ ಅವಶ್ಯಕತೆ ಹಾಗೂ ಉದ್ದೇಶದ ಬಗ್ಗೆ ಹಲವು ಅನುಮಾನಗಳು ಮಾತ್ರ ಹುಟ್ಟಿಕೊಂಡಿದ್ದು ಸುಳ್ಳಲ್ಲ.

ಜಮ್ಮು ಮತ್ತು ಕಾಶ್ಮೀರದಲ್ಲಿನ ಕೇಂದ್ರ ಸರ್ಕಾರದ ಕ್ರಮ ಅಂತಿಮ ಘಟ್ಟ ತಲುಪಿರುವುದರಿಂದ ಅದನ್ನು ಹಿಂದಕ್ಕೆ ತಿರುಗಿಸುವ ಒತ್ತಡಕ್ಕೆ ಪ್ರಧಾನಿ ಮೋದಿ ಒಳಗಾಗಿದ್ದಾರೆ ಎಂದು ಕೆಲವು ರಾಜಕೀಯ ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ. ಮೋದಿ ತಮ್ಮ ಹಿಂದಿನ ನಿಲುವಿನಿಂದ ಹಿಂದೆ ಸರಿದು ಯಾವ ರಾಜಕೀಯ ನಾಯಕರನ್ನು ಬಿಜೆಪಿ ಖಂಡಿಸಿತ್ತೋ ಹಾಗೂ ದಬ್ಬಾಳಿಕೆ ನಡೆಸಿತ್ತೋ ಅವರೊಂದಿಗೆಯೇ ರಾಜಕೀಯ ಪ್ರಕ್ರಿಯೆ ಪುನರಾರಂಭಿಸುವ ಒತ್ತಡಕ್ಕೆ ಒಳಗಾಗಿದ್ದಾರೆ ಎಂಬುದು ಅವರ ಅಭಿಮತ. ಆದರೆ ಇಂಥ ವಾದವನ್ನು ಯಾವುದೇ ಮುಲಾಜಿಲ್ಲದೆ ತಳ್ಳಿ ಹಾಕಬಹುದಾಗಿದೆ. ಯಾಕೆಂದರೆ, ಹಿಂದುತ್ವ ಸಿದ್ಧಾಂತಕ್ಕೆ ಅನುಗುಣವಾಗಿ ಜಮ್ಮು ಮತ್ತು ಕಾಶ್ಮೀರದ ಮೂಲ ಸ್ವರೂಪವನ್ನೇ ಬದಲಾಯಿಸಲು ಮೋದಿ-ಷಾ ಜೋಡಿ ಸಂಕಲ್ಪ ತೊಟ್ಟಿದೆ.

“ನಮ್ಮ ನಡುವೆ ಏಕೆ ಈ ದೂರ?”  ದಿಲ್ಲಿ ಮತ್ತು ದಿಲ್(ಹೃದಯ)ಗಳ ದೂರವನ್ನು ಇಳಿಸಬೇಕು ಎಂದು ಪ್ರಧಾನಿಗಳು ಹೇಳಿದರಂತೆ. ಆದರೆ ಈ ಸಭೆಯ ಮೂಲಕ ಅದನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ವ್ಯಂಗ್ಯಚಿತ್ರ: ಪೆನ್‌ಪೆನ್ಸಿಲ್‌ಡ್ರಾ

ಭೌಗೋಳಿಕ-ರಾಜಕೀಯ ಪರಿಗಣನೆಗಳ ಹಿನ್ನೆಲೆಯಲ್ಲಿ ಅವರು ಈ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನುವುದು ಕೆಲವರ ವಾದವಾಗಿದೆ. ತಾಲಿಬಾನ್ ಪ್ರಾಬಲ್ಯ ಹೆಚ್ಚುತ್ತಿರುವ ಆಫ್ಘಾನಿಸ್ತಾನದ ವಿದ್ಯಮಾನಗಳು ಹಾಗೂ ಅಲ್ಲಿನ ಘಟನಾವಳಿಗಳಲ್ಲಿ ಪಾಕಿಸ್ತಾನದ ಪ್ರಮುಖ ಪಾತ್ರವಿರುವುದು ಮೋದಿಯ ಈ ನಡೆಗೆ ಮುಖ್ಯ ಕಾರಣವಾಗಿರಬಹುದು. ಆಫ್ಘಾನಿಸ್ತಾನದಿಂದ ಇದೇ ಸೆಪ್ಟೆಂಬರ್‌ನಲ್ಲಿ ತನ್ನ ಪಡೆಗಳನ್ನು ವಾಪಸ್ ಪಡೆಯಲಿರುವ ಅಮೇರಿಕಾ, ಕಾಶ್ಮೀರದಲ್ಲಿನ ಈಗಾಗಲೇ ಹದಗೆಟ್ಟಿರುವ ಪರಿಸ್ಥಿತಿ ಇನ್ನಷ್ಟು ಹದಗೆಡದಂತೆ ನೋಡಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಕೆಲವರು ಭಾವಿಸಿದ್ದಾರೆ.

ಪಾಕಿಸ್ತಾನ-ಆಫ್ಘಾನಿಸ್ತಾನದಲ್ಲಿನ ವಿದ್ಯಮಾನಗಳು ನಿಜವಾಗಿಯೂ ಭಾರತಕ್ಕೆ ಕಳವಳಕಾರಿಯೇ. ಆದರೆ, ಇಂಥ ಬಾಹ್ಯ ವಿಚಾರಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಮೋದಿಯವರ ಪ್ರಸಕ್ತ ನಡೆಗೆ ಕಾರಣವಾಗಲಾರದು.

ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಪಕ್ಷಗಳೊಂದಿಗಿನ ಈ ಸಭೆ ಮೋದಿ ಸರ್ಕಾರ ಮತ್ತು ಬಿಜೆಪಿಯ ಇದಕ್ಕಿಂತ ಬಹಳ ಸಂಕುಚಿತವಾದ ಅಜೆಂಡಾದಿಂದಾಗಿ ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ಅಸ್ಮಿತೆಯನ್ನು ಮರುರೂಪಿಸುವುದು ಹಾಗೂ ಅದರ ಸ್ವಾಯತ್ತತೆಯ ಯಾವುದೇ ಕುರುಹನ್ನು ಅಳಿಸಿ ಹಾಕುವ ಅವರ ಸೈದ್ಧಾಂತಿಕ ಮತ್ತು ರಾಜಕೀಯ ಪರಿಯೋಜನೆಯನ್ನು ಕ್ರೋಡೀಕರಿಸುವ ಯೋಚನೆ ಇದರ ಹಿಂದಿದೆ.

ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶ ರಚಿಸಿದ ಬರ್ಬರ ಕೃತ್ಯ ಒಂದು ವ್ಯವಸ್ಥಿತ ಹಾಗೂ ಉದ್ದೇಶಪೂರ್ವಕ ಕ್ರಮವಾಗಿತ್ತು.

ಇದನ್ನು ಓದಿ: ಜಮ್ಮು ಕಾಶ್ಮೀರ : ಕ್ಷೇತ್ರ ಮರುವಿಂಗಡನೆ ಬಳಿಕ ಚುನಾವಣೆ – ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಭರವಸೆ

ಸಂವಿಧಾನದ 370ನೇ ವಿಧಿಯು ನ್ಯಾಯಾಂಗದ ಪರಿಶೀಲನೆಗೆ ಒಳಪಡದಂತೆ ಇದುವರೆಗೆ ವ್ಯವಸ್ಥಿತವಾಗಿ ಖಾತರಿಪಡಿಸಿಕೊಂಡಿರುವ ಮೋದಿ ಸರಕಾರ, ಇಲ್ಲಿನ ಜನಸಂಖ್ಯಾ ಸಂರಚನೆಯನ್ನು ಬದಲಾಯಿಸಲು ಬುಡಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಇದಕ್ಕಾಗಿ ಹೊರ ರಾಜ್ಯದವರು ಕೂಡ ಅಲ್ಲಿ ಜಮೀನು ಖರೀದಿಸಲು ಹಾಗೂ ಇತರ ಸಂಪನ್ಮೂಲ ಪಡೆದುಕೊಳ್ಳಲು ಅವಕಾಶ ನೀಡುವ ಈಗ ವಾಸಕ್ಕೆ ಸಂಬಂಧಿಸಿದ (ಡೊಮಿಸೈಲ್) ಹೊಸ ಕಾನೂನು ತಂದಿದೆ.

ರಾಜಕೀಯ ರಂಗದಲ್ಲಿ, ಕೇಂದ್ರಾಡಳಿತ ಪ್ರದೇಶದ ಚುನಾವಣಾ ಕ್ಷೇತ್ರಗಳ ಹೊಸ ಪುನರ್‌ವಿಂಗಡಣೆಗಾಗಿ ಪುನರ್‌ವಿಂಗಡಣಾ ಆಯೋಗವನ್ನು ರಚಿಸಲಾಗಿದೆ. ಹಳೆಯ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಒಟ್ಟು 87 ಸ್ಥಾನಗಳಿದ್ದು, ಆ ಪೈಕಿ ಕಣಿವೆಯಲ್ಲಿ 46, ಜಮ್ಮುನಲ್ಲಿ 37 ಮತ್ತು ಲಡಾಖ್‌ನಲ್ಲಿ 4 ಸ್ಥಾನಗಳಿದ್ದವು. 20 ಸ್ಥಾನಗಳನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಪ್ರದೇಶಕ್ಕೆ ಮೀಸಲಿಡಲಾಗಿದೆ. ಈಗ ಹೊಸ ಅಸೆಂಬ್ಲಿ ಹಿಂದಿನದ್ದಕ್ಕಿಂತ 7 ಹೆಚ್ಚು, ಅಂದರೆ ಒಟ್ಟು 94 ಸ್ಥಾನಗಳನ್ನು ಹೊಂದಲಿದೆ. ಮರುವಿಂಗಡಣೆ ಪ್ರಕ್ರಿಯೆ ಜಮ್ಮು ವಲಯದಲ್ಲಿ ಸ್ಥಾನ ಹೆಚ್ಚಿಸುವ ನಿರೀಕ್ಷೆಯಿದೆ. ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿಯನ್ನೂ ಕಲ್ಪಿಸುವ ಸಂಭವವಿದೆ. ವಿಧಾನಸಭೆಯಲ್ಲಿ  ಕಣಿವೆಯ ತೂಕವನ್ನು ಇಳಿಸುವುದು ಇದರ ಹಿಂದಿನ ಹುನ್ನಾರವಾಗಿದೆ. ಜಮ್ಮುನಲ್ಲಿ ಬಿಜೆಪಿ ಪ್ರಾಬಲ್ಯ ಖಾತರಿಪಡಿಸಿ ಭವಿಷ್ಯದಲ್ಲಿ ಯಾವುದೇ ಸರ್ಕಾರ ಬಿಜೆಪಿಯ ಬೆಂಬಲವಿಲ್ಲದೆ ಅಸ್ತಿತ್ವದಲ್ಲಿ ಉಳಿಯಲಾಗದಂತೆ ಮಾಡುವುದಕ್ಕಾಗಿಯೇ ಇಷ್ಟೆಲ್ಲಾ ಕೈವಾಡಗಳು.

ಮರುವಿಂಗಡಣೆ ಮೂಲಕ ಜಮ್ಮು ಮತ್ತು ಕಣಿವೆ ನಡುವೆ ಕೋಮು ವಿಭಜನೆಯನ್ನು ಹೆಚ್ಚಿಸುವುದು ಬಿಜೆಪಿ ಉದ್ದೇಶವಾಗಿದೆ. ಅದೇ ಹೊತ್ತಿಗೆ, ಕಣಿವೆಯ ಪ್ರಮುಖ ಪ್ರಾದೇಶಿಕ ಪಕ್ಷಗಳನ್ನು ಅಸ್ತವ್ಯಸ್ತಗೊಳಿಸುವಲ್ಲಿ  ಮತ್ತು ಬಿಜೆಪಿಯೊಂದಿಗೆ ಶಾಮೀಲಾಗುವ ಹೊಸ ಶಕ್ತಿಗಳನ್ನು ಸೃಷ್ಟಿಸುವಲ್ಲಿ ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಿರತವಾಗಿವೆ.

ಇದನ್ನು ಓದಿ: ಜಮ್ಮು- ಕಾಶ್ಮೀರ ಡಿ.ಡಿ.ಸಿ. ಚುನಾವಣೆಗಳು ಬಿಜೆಪಿಯ ಕನಸು ಮತ್ತು ಮಿಥ್ಯೆಗಳಿಗೆ ಸೋಲು

ಜೂನ್ 24ರ ಸಭೆಯಲ್ಲಿ ದಿಕ್ಕು ಏನೆಂಬುದು ಸ್ಪಷ್ಟವಾಗಿದೆ: ಕ್ಷೇತ್ರಗಳ ಪುನರ್‌ವಿಂಗಡಣೆ ಮೊದಲು; ಅದಕ್ಕೆ ಎಲ್ಲ ಪಕ್ಷಗಳು ಸಹಕರಿಸಬೇಕು ಹಾಗೂ ಅದನ್ನು ಕಾನೂನು ಬದ್ಧಗೊಳಿಸಬೇಕು ಎನ್ನುವುದೇ ಅದರ ಸಂದೇಶ. ಅದಾದ ನಂತರ, ಚುನಾವಣೆ ನಡೆಸುವುದು. ಅದರ ನಂತರವಷ್ಟೆ ‘ಸೂಕ್ತ ಸಮಯದಲ್ಲಿ’ ರಾಜ್ಯ ಸ್ಥಾನಮಾನದ ವಿಚಾರ. ‘ಚುನಾವಣೆ ನಡೆಯಲು ಅನುಕೂಲವಾಗುವಂತೆ ಕ್ಷೇತ್ರ ಮರುವಿಂಗಡಣೆ ತ್ವರಿತವಾಗಿ ಆಗಬೇಕು. ಅದರಿಂದ  ಜಮ್ಮು-ಕಾಶ್ಮೀರದ ಅಭಿವೃದ್ಧಿ ಪಥಕ್ಕೆ ಬಲ ನೀಡುವ ಒಂದು ಚುನಾಯಿತ ಸರಕಾರ ಸಿಗುವಂತಾಗಬೇಕು” ಎಂದು ಸಭೆಯ ನಂತರ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಇದು ದೆಹಲಿ ಅಥವಾ ಪುದುಚೇರಿಯಲ್ಲಿ ಇರುವಂಥ ರೀತಿಯ ಚುನಾಯಿತ ಸರ್ಕಾರ ಆಗಲಿದೆಯೇ?

ಅಮಿತ್ ಷಾ ಟ್ವೀಟ್‌ನಲ್ಲಿ ಈ ‘ಕಾಲಾನುಕ್ರಮಣಿಕೆ’ಯನ್ನು ಪುನರುಚ್ಛರಿಸಲಾಗಿದೆ. ‘ಸಂಸತ್ತಿನಲ್ಲಿ ಭರವಸೆ ನೀಡಿರುವಂತೆ ರಾಜ್ಯದ ಸ್ಥಾನಮಾನ ನೀಡುವತ್ತ ಪುನರ್‌ವಿಂಗಡಣೆ ಪ್ರಕ್ರಿಯೆ ಹಾಗೂ ಶಾಂತಿಯುತ ಚುನಾವಣೆ ಪ್ರಮುಖ ಮೈಲಿಗಲ್ಲುಗಳು’ ಎಂದು ಷಾ ಟ್ವೀಟ್‌ನಲ್ಲಿ ಹೇಳಿದ್ದಾರೆ. ಯಾವ ರೀತಿಯ ರಾಜ್ಯ ಸ್ಥಾನಮಾನ ನೀಡಲಾಗುತ್ತದೆಂದು ಸಭೆಯಲ್ಲೂ ಸ್ಪಷ್ಟಪಡಿಸಿಲ್ಲ ಹೊರಗೂ ಹೇಳಿಲ್ಲ. ಇದು ಲಡಾಖ್ ಸೇರಿದ ಏಕೀಕೃತ ಜಮ್ಮು ಮತ್ತು ಕಾಶ್ಮೀರದ ಪೂರ್ಣ ರಾಜ್ಯದ ಸ್ಥಾನಮಾನವೇ? ಅಥವಾ ಅಧಿಕಾರ ಮೊಟಕುಗೊಂಡು ಉಪ ರಾಜ್ಯಪಾಲರ ಮಾತೇ ನಡೆಯುವ ದೆಹಲಿಯಂಥ ಸರಕಾರವೇ?

ದೆಹಲಿಯಲ್ಲಿ ನಡೆದ ಸಭೆ ಹಾಗೂ ಅದರ ಫಲಿತಾಂಶದ ಬೆಲೆ ಎಷ್ಟು ಎಂಬುದನ್ನು ಕಾಶ್ಮೀರ ಕಣಿವೆಯ ಜನರು ತಿಳಿದುಕೊಂಡಿದ್ದಾರೆ. ಈ ಸಭೆಯು ದೆಹಲಿ ಮತ್ತು ಕಾಶ್ಮೀರಿ ಜನರ ನಡುವಿನ ಕಂದಕವನ್ನು ಇನ್ನಷ್ಟು ಹೆಚ್ಚಿಸಿದೆ. ಕಾಶ್ಮೀರಿ ಜನರು ನಿರಾಶೆಗೊಂಡಿದ್ದಾರೆ ಹಾಗೂ ಹತಾಶರಾಗಿದ್ದಾರೆ. ಅಂತಿಮವಾಗಿ, ಕೇಂದ್ರ ಸರ್ಕಾರ ಕಾಶ್ಮೀರದ ಮೇಲೆ ಬಲವಂತದಿಂದ ಹಾಗೂ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಬಗ್ಗುಬಡಿದು ಅಧಿಕಾರ ನಡೆಸಬಹುದಷ್ಟೇ.

ಅನು: ವಿಶ್ವ

Donate Janashakthi Media

Leave a Reply

Your email address will not be published. Required fields are marked *