ಪ್ರೊ.ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ಉನ್ನತ ಜಿಡಿಪಿ ಬೆಳವಣಿಗೆಯಿಂದ ಮಾತ್ರವೇ ಸುಖೀ ರಾಜ್ಯದತ್ತ, ಕಲ್ಯಾಣ ಪ್ರಭುತ್ವದತ್ತ ಸಾಗಲು ಸಾಧ್ಯ ಎಂಬ ನವ-ಉದಾರವಾದಿ ಬಂಡವಾಳಶಾಹಿಯ ಪ್ರಸ್ತುತ ಯುಗದಲ್ಲಿ ಪ್ರಚುರಪಡಿಸಲಾಗುತ್ತಿರುವ ಜಿಡಿಪಿ-ಬೆಳವಣಿಗೆಯ ಗೀಳಿನ ಎರಡು ಎದ್ದು ಕಾಣುವ ಸಮಸ್ಯೆಗಳೆಂದರೆ: ಸರಕಾರದಿಂದ ಬಂಡವಾಳಿಗರಿಗೆ ಹೆಚ್ಚಿಸುವ ಹಣ ವರ್ಗಾವಣೆಗಳು ಹೂಡಿಕೆಯನ್ನು ಹೆಚ್ಚಿಸುತ್ತವೆ ಮತ್ತು ಆ ಮೂಲಕ ಜಿಡಿಪಿಯ ಬೆಳವಣಿಗೆಗೆ ಕಾರಣವಾಗುತ್ತವೆ ಎಂಬ ದೋಷಭರಿತ ವಿಶ್ಲೇಷಣೆ ಮತ್ತು ತೆರಿಗೆ-ಜಿಡಿಪಿ ಅನುಪಾತವು ಕೆಳ ಮಟ್ಟದಲ್ಲಿದ್ದರೂ ಸಹ ಜಿಡಿಪಿಯ ಉನ್ನತ ಬೆಳವಣಿಗೆ ಕೆಳಕ್ಕೆ ಜಿನುಗಿ ಜನರ ಹೆಚ್ಚಿನ ಕ್ಷೇಮಾಭಿವೃದ್ಧಿಗೆ ಕಾರಣವಾಗುತ್ತದೆ ಎಂಬ ದಾವೆ. ಭಾರತದ್ದು ಉನ್ನತ ಜಿಡಿಪಿ ಬೆಳವಣಿಗೆಯ ಅರ್ಥವ್ಯವಸ್ಥೆಯೆಂದು ನಮ್ಮ ಆಳರಸರು ಬೆನ್ನು ತಟ್ಟಿಕೊಳ್ಳುತ್ತಲೇ ಇದ್ದಾರಾದರೂ, ಅದರ ಜನ-ಹಿತ ಕ್ರಮಗಳ ಮಟ್ಟ ಕಳಪೆಯೇ. ಭಾರತದ ತೆರಿಗೆ-ಜಿಡಿಪಿ ಅನುಪಾತವೂ ಸಹ (18.08%) ಕೆಳಮಟ್ಟದಲ್ಲಿರುವುದು ಆಶ್ಚರ್ಯದ ಸಂಗತಿಯೇನಲ್ಲ. ಸುಖೀ ರಾಜ್ಯವನ್ನು ಸ್ಥಾಪಿಸುವ ಸಲುವಾಗಿ ಹಣ ಹೊಂದಿಸುವ ಸರಕಾರದ ಪ್ರಯತ್ನಗಳನ್ನು ಅಪಾರವಾಗಿ ಹೆಚ್ಚಿಸುವ, ಅದಕ್ಕಾಗಿ ತೆರಿಗೆ-ಜಿಡಿಪಿ ಅನುಪಾತವನ್ನು ಹೆಚ್ಚಿಸುವ ಅಗತ್ಯವಿದೆ ಎಂಬುದನ್ನು ವಿಶ್ವದ ಎಲ್ಲೆಡೆಯ ಅನುಭವ ಹೇಳುತ್ತದೆ.
ಸೋವಿಯತ್ ಒಕ್ಕೂಟವು ಆಚರಣೆಗೆ ತಂದಿದ್ದ ಕಲ್ಯಾಣ ಪ್ರಭುತ್ವದ ಹಲವಾರು ಜನ-ಹಿತ ಕ್ರಮಗಳನ್ನು ಮುಂದುವರೆದ ಬಂಡವಾಳಶಾಹಿ ದೇಶಗಳು – ವಿಶೇಷವಾಗಿ ಯೂರೋಪಿನ ದೇಶಗಳು – ಎರಡನೆಯ ಮಹಾಯುದ್ಧದ ನಂತರದ ವರ್ಷಗಳಲ್ಲಿ ಅನುಕರಿಸಿದವು. ಈ ಕಲ್ಯಾಣ ಕ್ರಮಗಳ ಬಗ್ಗೆ ವಿರೋಧವಿದ್ದರೂ ಸಹ, ಅವುಗಳನ್ನು ಬಂಡವಾಳಶಾಹಿಯು ಒಪ್ಪಿಕೊಳ್ಳಲೇ ಬೇಕಾಯಿತು. ಏಕೆಂದರೆ, ಆ ಸಂದರ್ಭದಲ್ಲಿ, ಬಂಡವಾಳಶಾಹಿ ಯುದ್ಧದಿಂದ ದುರ್ಬಲಗೊಂಡಿತ್ತು, ಕಾರ್ಮಿಕ ವರ್ಗದ ಆಕ್ರೋಶದಿಂದ ತಲ್ಲಣಗೊಂಡಿತ್ತು. ಪೂರ್ವ ಯೂರೋಪಿನ ದೇಶಗಳಲ್ಲಿ ಸಮಾಜವಾದದ ಹರಡಿಕೆಯಿಂದ ಭಯಭೀತವಾಗಿತ್ತು. ಹಾಗಾಗಿ, ಬಂಡವಾಳಶಾಹಿಯ ಅಸ್ತಿತ್ವವೇ ಅಪಾಯದಲ್ಲಿತ್ತು. ಬಂಡವಾಳಶಾಹಿಯ ಪರಿಸ್ಥಿತಿ ಸುಧಾರಿಸಿದ ನಂತರ, ಕಲ್ಯಾಣ ಪ್ರಭುತ್ವದ ಕ್ರಮಗಳ ಬಗ್ಗೆ ಅದರ ಹಗೆತನವು ಬಹಿರಂಗವಾಗಿ ಪ್ರಕಟಗೊಂಡಿತು. ಜನ-ಕಲ್ಯಾಣ ಕ್ರಮಗಳನ್ನು ಬಂಡವಾಳಶಾಹಿಯು ರದ್ದುಗೊಳಿಸಲು ಪ್ರಯತ್ನಿಸಿತಾದರೂ, ಕಾರ್ಮಿಕರ ಪ್ರತಿರೋಧದಿಂದಾಗಿ ಆ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ಬ್ರಿಟನ್‌ನಲ್ಲಿ ರಾಷ್ಟ್ರೀಯ ಆರೋಗ್ಯ ಸೇವೆಯನ್ನು ಮಾರ್ಗರೆಟ್ ಥ್ಯಾಚರ್‌ರಂತಹ ನಾಯಕಿಯೂ ಸಹ ರದ್ದುಪಡಿಸಲಾಗಲಿಲ್ಲ. ವಿಪರ್ಯಾಸವೆಂದರೆ, ಲೂಟಿಕೋರತನಕ್ಕೆ ಹೆಸರಾಗಿದ್ದ ಬಂಡವಾಳಶಾಹಿಯು, ಅದೇ ಸಮಯದಲ್ಲಿ, ಜನ-ಹಿತ ಕ್ರಮಗಳನ್ನು ಜಾರಿಗೊಳಿಸಿದ್ದರಿಂದಾಗಿ ಖಂಡಿತಾ ತಾನೊಂದು ಲೂಟಿಕೋರ ವ್ಯವಸ್ಥೆಯಲ್ಲ, ನಿಜವಾಗಿಯೂ ಜನತೆಯ ಕಲ್ಯಾಣವನ್ನು ಖಾತ್ರಿಪಡಿಸುವ ವ್ಯವಸ್ಥೆ ಎಂದು ರೀತಿಯ ಸಮರ್ಥನೆಯನ್ನೇ ಪಡೆಯಿತು.
ಕಲ್ಯಾಣ ಪ್ರಭುತ್ವದ ಜನ-ಹಿತ ಕ್ರಮಗಳನ್ನು ಮುಂದುವರೆಸಿಕೊಂಡು ಹೋಗಲು ತೆರಿಗೆ-ಜಿಡಿಪಿ ಅನುಪಾತವು ಯುರೋಪಿಯನ್ ದೇಶಗಳ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಮತ್ತು ಜನ-ಹಿತ ಕ್ರಮಗಳಿಗೆ ಹೆಚ್ಚು ಒತ್ತು ಕೊಡದಿರುವ ದೇಶಗಳ ಪ್ರಸ್ತುತ ಪರಿಸ್ಥಿತಿಗೆ ಹೋಲಿಸಿದರೆ, ಗಣನೀಯವಾಗಿ ಹೆಚ್ಚಿರಬೇಕಾಗುತ್ತದೆ. ತೆರಿಗೆ-ಜಿಡಿಪಿ ಅನುಪಾತವನ್ನು ಅವರೋಹಣ ಕ್ರಮದಲ್ಲಿ ಸಿದ್ಧಪಡಿಸಿದ 2020ರ ವರ್ಷದ ಪಟ್ಟಿಯಲ್ಲಿ, ಅಗ್ರ 30 ದೇಶಗಳ ಪೈಕಿ 29 ದೇಶಗಳು, ಕಮ್ಯುನಿಸ್ಟ್ ಪಕ್ಷದ ಆಳ್ವಿಕೆಯ ಪರಂಪರೆಯನ್ನು ಅಥವಾ ಸೋಷಿಯಲ್ ಡೆಮಾಕ್ರಟಿಕ್ ಆಳ್ವಿಕೆಯ ಪರಂಪರೆಯನ್ನು ಹೊಂದಿರುವ ಯುರೋಪಿಯನ್ ದೇಶಗಳೇ. ಯೂರೋಪಿಗೆ ಸೇರದ ಏಕೈಕ ದೇಶವೆಂದರೆ ಕ್ಯೂಬಾ. ಅದರ ಕಮ್ಯುನಿಸ್ಟ್ ಆಡಳಿತವನ್ನು ಮಾತ್ರವಲ್ಲ, ಅದರ ಕಲ್ಯಾಣ ಪ್ರಭುತ್ವದ ಜನ-ಹಿತ ಕ್ರಮಗಳನ್ನೂ ಸಹ ಪ್ರಪಂಚದಾದ್ಯಂತ ಪ್ರಶಂಸಿಸಲಾಗಿದೆ.
ಕಮ್ಯುನಿಸ್ಟ್ ಸರ್ಕಾರಗಳು ಜನ-ಕಲ್ಯಾಣ ಕ್ರಮಗಳನ್ನು ಆಚರಣೆಗೆ ತಂದಿರುವುದು ಮತ್ತು ಅದಕ್ಕಾಗಿ ಅಗತ್ಯ ಸಂಪನ್ಮೂಲಗಳನ್ನು ಹೆಚ್ಚಿನ ಮಟ್ಟದ ತೆರಿಗೆಗಳ ಮೂಲಕ ಒದಗಿಸಿಕೊಳ್ಳುವುದು ಆಶ್ಚರ್ಯದ ಸಂಗತಿಯಲ್ಲ. ಕಮ್ಯುನಿಸಂನ ಪತನದ ನಂತರವೂ ಜನ-ಕಲ್ಯಾಣ ವ್ಯವಸ್ಥೆಯು ಅಲ್ಲಿ ಮುಂದುವರೆಯುತ್ತಿರುವುದೂ ಸಹ ಆಶ್ಚರ್ಯದ ಸಂಗತಿಯಲ್ಲ. ಆದರೆ, ಗಮನಾರ್ಹವಾದ ಸಂಗತಿಯೆಂದರೆ, ಪಶ್ಚಿಮ ಯುರೋಪಿನ ಸೋಷಿಯಲ್ ಡೆಮಾಕ್ರಸಿಯೂ ಸಹ ತನ್ನ ಜನ-ಹಿತ ಕ್ರಮಗಳ ನಿರ್ವಹಣೆ ನಿಮಿತ್ತ ಹಣ ಒದಗಿಸಿಕೊಳ್ಳಲು ಹೆಚ್ಚಿನ ತೆರಿಗೆ-ಜಿಡಿಪಿ ಅನುಪಾತವನ್ನು ಉಳಿಸಿಕೊಂಡಿದೆ ಎಂಬುದು. ಶೇ.46.2ರಷ್ಟು ತೆರಿಗೆ-ಜಿಡಿಪಿ ಅನುಪಾತದೊಂದಿಗೆ ಫ್ರಾನ್ಸ್ ಅಗ್ರ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ, ಡೆನ್ಮಾರ್ಕ್ (46.0), ಬೆಲ್ಜಿಯಂ (44.6), ಸ್ವೀಡನ್ (44.0), ಫಿನ್ಲ್ಯಾಂಡ್ (43.3), ಇಟಲಿ (42.4) ಮತ್ತು ಆಸ್ಟ್ರಿಯಾ (41.8) ದೇಶಗಳಿವೆ. ಅಂದರೆ, ಕಲ್ಯಾಣ ಪ್ರಭುತ್ವದ ಕ್ರಮಗಳ ನಿರ್ವಹಣೆಗೆ ಹೆಚ್ಚಿನ ಮಟ್ಟದ ತೆರಿಗೆಗಳನ್ನು ವಿಧಿಸುವುದು ಅಗತ್ಯವಾಗುತ್ತದೆ ಎಂಬ ತೀರ್ಮಾನಕ್ಕೆ ಬರಲೇ ಬೇಕಾಗುತ್ತದೆ. ಅಂದರೆ, ಮಾರುಕಟ್ಟೆಯಲ್ಲಿ ಸಹಜವಾಗಿ ಉತ್ಪತ್ತಿಯಾಗುವ ಆದಾಯ ಹಂಚಿಕೆಯ ಮಾದರಿಯಲ್ಲಿ ಪ್ರಭುತ್ವದ ಹಸ್ತಕ್ಷೇಪವು ಅನಿವಾರ್ಯವಾಗಿ ದೊಡ್ಡ ಮಟ್ಟದಲ್ಲಿರಬೇಕಾಗುತ್ತದೆ.
ಬಂಡವಾಳಶಾಹಿಯ ಸುವರ್ಣಯುಗ ಎಂದು ಕರೆಯಲಾದ ಮಹಾಯುದ್ಧಾನಂತರದ ಅವಧಿಯಲ್ಲೂ ಸಹ, ಯೂರೋಪಿನ ಈ ಯಾವುದೇ ದೇಶದ ಜಿಡಿಪಿ ಬೆಳವಣಿಗೆಯ ದರ, ಇಂದಿನ ಉನ್ನತ-ಬೆಳವಣಿಗೆಯ ಅರ್ಥವ್ಯವಸ್ಥೆಗಳ ಜಿಡಿಪಿ ಬೆಳವಣಿಗೆಯ ದರಗಳ ಮಟ್ಟಕ್ಕೆ ಬಂದಿರಲಿಲ್ಲ. 2008ರ ವಸತಿ ಗುಳ್ಳೆ ಕುಸಿತದ ನಂತರವಂತೂ ಯೂರೋಪಿನ ಈ ದೇಶಗಳ ಜಿಡಿಪಿ ಬೆಳವಣಿಗೆಯ ದರಗಳು ಇನ್ನೂ ಕೆಳಗೆ ಇಳಿದಿವೆ. ಇದಕ್ಕೆ ತದ್ವಿರುದ್ಧವಾಗಿ, ಭಾರತದ್ದು ಉನ್ನತ ಬೆಳವಣಿಗೆಯ ಅರ್ಥವ್ಯವಸ್ಥೆಯೆಂದು ಅದರ ಅಧಿಕಾರಿಗಳು ಬೆನ್ನು ತಟ್ಟುತ್ತಲೇ ಇದ್ದಾರಾದರೂ, ಅದರ ಜನ-ಹಿತ ಕ್ರಮಗಳ ಮಟ್ಟ ಕಳಪೆಯೇ. ಭಾರತದ ತೆರಿಗೆ-ಜಿಡಿಪಿ ಅನುಪಾತವೂ ಸಹ (18.08%) ಸಹ ಮಾಪನದಲ್ಲಿ ಕೆಳಭಾಗದಲ್ಲಿರುವುದು ಆಶ್ಚರ್ಯದ ಸಂಗತಿಯೇನಲ್ಲ.
ಟ್ರಿಕ್ಲ್ ಡೌನ್ ಪರಿಕಲ್ಪನೆ ಅರ್ಥಶೂನ್ಯ
ಈ ವಾಸ್ತವಾಂಶಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಮೂರು ಪ್ರತಿಪಾದನೆಗಳು ಸಿದ್ಧಿಸುತ್ತವೆ. ಮೊದಲನೆಯದಾಗಿ, “ಜಿನುಗು” (‘ಟ್ರಿಕ್ಲ್ ಡೌನ್) ಪರಿಣಾಮ ಎಂದು ಕರೆಯಲಾಗುವ ಜಿಡಿಪಿ ಬೆಳವಣಿಗೆಯ ಪರಿಕಲ್ಪನೆಯು ಸಂಪೂರ್ಣವಾಗಿ ಒಂದು ಅರ್ಥಶೂನ್ಯ ಪರಿಕಲ್ಪನೆಯೇ ಸರಿ. ಬಂಡವಾಳಶಾಹಿಯ ಅನಿರ್ಬಂಧಿತ ಕಾರ್ಯಚರಣೆಯ ಫಲಿತಾಂಶವಾಗಿ ದುಡಿಯುವ ಜನ ಸಮೂಹದ ಕ್ಷೇಮಾಭಿವೃದ್ಧಿಯು ಎಂದಿಗೂ ಸಹಜವಾಗಿ ಹೆಚ್ಚುವುದಿಲ್ಲ. ಏಕೆಂದರೆ, ಒಂದು ಮೀಸಲು ಶ್ರಮಪಡೆಯ ಅಸ್ತಿತ್ವವಿಲ್ಲದೆ ಬಂಡವಾಳಶಾಹಿಯು ಕಾರ್ಯನಿರ್ವಹಿಸುವುದು ಸಾಧ್ಯವೇ ಇಲ್ಲ. ಕಾರ್ಮಿಕರ ಉತ್ಪಾದಕತೆಯು ಹೆಚ್ಚುತ್ತಲೇ ಇದ್ದರೂ ಸಹ, ಕೂಲಿಯ/ವೇತನದ ಮಟ್ಟವನ್ನು ಆದಷ್ಟು ಕೆಳ ಮಟ್ಟದಲ್ಲಿ ಇಡುವ ಉದ್ದೇಶದಿಂದಲೇ ಈ ಶ್ರಮ ಮೀಸಲು ಪಡೆಯನ್ನು ಸೃಷ್ಟಿಸಲಾಗುತ್ತದೆ. ಹಾಗಾಗಿ, ಸಾಮಾಜಿಕ ಉತ್ಪತ್ತಿಯಲ್ಲಿ ಮಿಗುತಾಯದ ಪಾಲು ಹೆಚ್ಚುತ್ತದೆ. ಮಿಗುತಾಯದ ಈ ಪಾಲನ್ನು ಬಂಡವಾಳಶಾಹಿಗಳು ಮತ್ತು ಅವರಿಗೆ “ಆತುಕೊಂಡವರು” ಬಳಸಿಕೊಳ್ಳುತ್ತಾರೆ, ಅವರ ಬಳಕೆ ಪ್ರಮಾಣ ಇನ್ನಷ್ಟು ಹೆಚ್ಚುತ್ತದೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕಾರ್ಮಿಕರು ತಂತಾನೇ ನಿರಾಯಾಸವಾಗಿ ಆರ್ಥಿಕ ಬೆಳವಣಿಗೆಯ ಪ್ರಯೋಜನಗಳನ್ನು ಪಡೆಯಲಾಗದು. ತಮ್ಮನ್ನು ತಾವು ಸಂಘಟಿಸಿಕೊಂಡರೆ, ತಮ್ಮ ಜೀವನ ಪರಿಸ್ಥಿತಿಗಳನ್ನು ಉತ್ತಮಪಡಿಸಿಕೊಳ್ಳಲು ಕಾರ್ಮಿಕರು ಹೋರಾಡಬಹುದು ಮತ್ತು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು, ನಿಜ. ಆದರೆ, ಅಂತಹ ಈಡೇರಿಕೆಯೊಂದಿಗೆ ತಮಗೆ ಹೆಚ್ಚಿನ ಸಾಮಾಜಿಕ ವೇತನವನ್ನು (ಜನ-ಹಿತ ಕ್ರಮಗಳನ್ನು) ಒದಗಿಸಿದ ನಿಮಿತ್ತ ಸರ್ಕಾರವು ತೆರಿಗೆ-ಜಿಡಿಪಿ ಅನುಪಾತವನ್ನು ಹೆಚ್ಚಿಸುವಂತೆ ಮಾಡುತ್ತಾರೆ. ಬೇರೆ ಮಾತುಗಳಲ್ಲಿ ವಿಷಯವನ್ನು ಹೇಳುವುದಾದರೆ, ಕಾರ್ಮಿಕರ ಜೀವನ ಪರಿಸ್ಥಿತಿಗಳು ಉತ್ತಮಗೊಳ್ಳುವುದು ಜಿಡಿಪಿ ಬೆಳವಣಿಗೆಯ ದರದ “ಜಿನುಗು” ಪರಿಣಾಮದಿಂದಲ್ಲ, ಅದು ನಿರ್ಣಾಯಕವೇನಲ್ಲ, ಬದಲಿಗೆ, ಪರಿಣಾಮಕಾರಿಯಾಗಿ ಹೋರಾಡುವ ಕಾರ್ಮಿಕರ ಸಾಮರ್ಥ್ಯವೇ ಇದರಲ್ಲಿ ನಿಜಕ್ಕೂ ನಿರ್ಣಾಯಕ ಅಂಶ.
ತೆರಿಗೆಗಳು ಕೆಳ ಮಟ್ಟದಲ್ಲಿದ್ದರೂ ಸಹ, ಜಿಡಿಪಿಯ ಬೆಳವಣಿಗೆಯ ದರವು ಉನ್ನತ ಮಟ್ಟದಲ್ಲಿದ್ದಾಗ ಅನೇಕ ಸಂಪನ್ಮೂಲಗಳು ಸರ್ಕಾರಕ್ಕೆ ನಿರಾಯಾಸವಾಗಿ ದೊರಕುವುದರಿಂದ ದುಡಿಯುವ ಜನರಿಗೆ ಕಲ್ಯಾಣ ಕ್ರಮಗಳನ್ನು ಒದಗಿಸುವುದು ಸಾಧ್ಯವಾಗುತ್ತದೆ ಎಂಬ ಒಂದು ನಂಬಿಕೆ ಇದೆ. ಈ ನಂಬಿಕೆ ಕೂಡ ಸಂಪೂರ್ಣವಾಗಿ ತಪ್ಪಾಗಿದೆ: ಕಲ್ಯಾಣ ಪ್ರಭುತ್ವದತ್ತ, ಅಂದರೆ ಸುಖೀರಾಜ್ಯದತ್ತ ಪರಿವರ್ತನೆಯು ಎಂದಿಗೂ ಗುಪ್ತ ವಿಧಾನಗಳಿಂದ ಅಥವಾ ದಯಾಪರವೆಂದು ಹೇಳಲಾಗುವ ಕ್ರಮಗಳ ಮೂಲಕ ಸಂಭವಿಸುವುದಿಲ್ಲ. ಆ ಪರಿವರ್ತನೆಯು ತನಗೆ ಎದುರಾಗುವ ಎಲ್ಲ ಅಡ್ಡಿ ಅಡಚಣೆಗಳನ್ನು ಭೇದಿಸಿ ಮುನ್ನುಗ್ಗುವ ಮೂಲಕ ಸಂಭವಿಸುತ್ತದೆ. ತೆರಿಗೆ-ಜಿಡಿಪಿ ಅನುಪಾತದಲ್ಲಿ ಗಮನಾರ್ಹ ಹೆಚ್ಚಳದ ಮೂಲಕ ಸಾಕಾರಗೊಳ್ಳುವ ಸಂಪನ್ಮೂಲಗಳ ಕ್ರೋಢೀಕರಣ ಈ ವಿದ್ಯಮಾನದ ಒಂದು ಪ್ರತಿಬಿಂಬ.
ಜಿಡಿಪಿ ಹೆಚ್ಚಳವಷ್ಟೇ ಸುಖೀ ರಾಜ್ಯದತ್ತ ಒಯ್ಯುವುದಿಲ್ಲ
ವಾಸ್ತವಾಂಶಗಳ ವಿಶ್ಲೇಷಣೆ ಮುಂದಿಡುವ ಎರಡನೆಯ ಪ್ರತಿಪಾದನೆಯು ಹೀಗಿದೆ: ಜಿಡಿಪಿ ಬೆಳವಣಿಗೆಯೇ ವಸ್ತುತಃ ದೇಶವನ್ನು ಸುಖೀ ರಾಜ್ಯದತ್ತ ಕೊಂಡೊಯ್ಯವುದಿಲ್ಲ. ಆದರೆ, ಅಂತಹ ಕಲ್ಯಾಣ ಪ್ರಭುತ್ವವನ್ನು ಸ್ಥಾಪಿಸಲು ಸಂಪನ್ಮೂಲಗಳನ್ನು ತಮಗೆ ವರ್ಗಾಯಿಸುವಂತೆ ದುಡಿಯುವ ಜನರು ಒತ್ತಾಯಿಸುವುದರ ಬದಲಾಗಿ, ಬಂಡವಾಳಗಾರರು ಹೆಚ್ಚಿನ ಹೂಡಿಕೆಯನ್ನು ಕೈಗೊಳ್ಳುವಂತಾಗಲು ಮತ್ತು ಆ ಮೂಲಕ ಉನ್ನತ ಮಟ್ಟದ ಜಿಡಿಪಿ ಬೆಳವಣಿಗೆಯನ್ನು ಸಾಧಿಸುವಂತಾಗಲು ಸರ್ಕಾರವು ಸಂಪನ್ಮೂಲಗಳನ್ನು ಬಂಡವಾಳಶಾಹಿಗಳಿಗೆ ವರ್ಗಾಯಿಸಲು ಅವಕಾಶ ನೀಡುವ ಮೂಲಕ ದುಡಿಯುವ ಜನರು ನಿಜವಾಗಿಯೂ ಉತ್ತಮ ಸ್ಥಿತಿಯಲ್ಲಿರುವವರಾಗುತ್ತಾರೆ ಎಂಬ ಒಂದು ತಪ್ಪು ನಿರೂಪಣೆಯನ್ನು ಸೃಷ್ಟಿಸಲು ಜಿಡಿಪಿಯನ್ನು ಒಂದು ಸಾಧನವಾಗಿ ಬಳಸಿಕೊಳ್ಳಲಾಗುತ್ತದೆ. ಮತ್ತು, ಜಿಡಿಪಿ ಬೆಳವಣಿಗೆಯ ಬಗ್ಗೆ ಹೊಂದಿರುವ ಈ ಗೀಳು ಸುಖೀ ರಾಜ್ಯದ ಕಡೆಗೆ ಹೊರಳುವ ಸ್ಥಿತ್ಯಂತರವನ್ನು ತಡೆಗಟ್ಟುವ ಒಂದು ಸಾಧನವಾಗುತ್ತದೆ. ದುಡಿಯುವ ಜನರಿಗೆ ಮಾಡುವ ವರ್ಗಾವಣೆಗಳು “ಜನಮರುಳು” ಕ್ರಮಗಳು ಎಂದು ತುಚ್ಛವಾಗಿ ಕರೆಯಲಾಗಿದೆ ಮತ್ತು ಅದನ್ನು ವ್ಯರ್ಥಪೂರ್ಣ ಹಾಗೂ ದೂರದೃಷ್ಟಿಯಿಲ್ಲದ್ದು ಎಂದು ಬಿಂಬಿಸಲಾಗಿದೆ. ಏಕೆಂದರೆ, ಇದು “ಪುಕ್ಕಟೆ ಕೊಡುಗೆಗಳು” ಎಂದು ಕರೆಯಲ್ಪಡುವ ಹಂಚಿಕೆಗಳನ್ನು ಒಳಗೊಂಡಿರುತ್ತದೆ. ಜಿಡಿಪಿ ಬೆಳವಣಿಗೆಯ ಬಗ್ಗೆ ಹೊಂದಿರುವ ಅಂಧಶ್ರದ್ಧೆಯನ್ನು ತೆರಿಗೆ-ಜಿಡಿಪಿ ಅನುಪಾತವನ್ನು ಕೆಳ ಮಟ್ಟದಲ್ಲೇ ಇಟ್ಟುಕೊಂಡಿರುವ ನೀತಿಯನ್ನು ಸಮರ್ಥಿಸಿಕೊಳ್ಳಲು ಬಳಸಿಕೊಳ್ಳಲಾಗುತ್ತಿದೆ. ತೆರಿಗೆ-ಜಿಡಿಪಿ ಅನುಪಾತವನ್ನು ಹೆಚ್ಚಿಸಬೇಕು ಎಂದಾದರೆ, ಬಂಡವಾಳಗಾರರ ಮೇಲೆ ಹೆಚ್ಚು ತೆರಿಗೆಗಳನ್ನು ವಿಧಿಸಬೇಕಾಗುತ್ತದೆ. ಆದರೆ, ಈ ಕ್ರಮವು ಬಂಡವಾಳಗಾರರ “ಉದ್ಯಮಶೀಲತೆ”ಯನ್ನು ನಾಶಪಡಿಸುತ್ತದೆ ಮತ್ತು ಅದರಿಂದಾಗಿ ಹೂಡಿಕೆ ಮಾಡುವ ಅವರ ಉತ್ಸಾಹ ತಗ್ಗುತ್ತದೆ ಮತ್ತು ಅದರಿಂದಾಗಿ ಜಿಡಿಪಿ ಬೆಳವಣಿಗೆಗೆ ಹಾನಿಯಾಗುತ್ತದೆ ಎಂದು ಭಾವಿಸಲಾಗಿದೆ.
ನವ ಉದಾರವಾದ ಈ ತರ್ಕವು ವಿಶ್ಲೇಷಣಾತ್ಮಕವಾಗಿ ತಪ್ಪಾಗಿದೆ: ಬಂಡವಾಳಗಾರರು ತಾವು ಹೆಚ್ಚು ಸಂಪನ್ಮೂಲಗಳನ್ನು ಹೊಂದಿರುವ ಕಾರಣದಿಂದ ತಮ್ಮ ಹೂಡಿಕೆಯನ್ನು ಹೆಚ್ಚಿಸುವುದಿಲ್ಲ. ಅವರ ಹೂಡಿಕೆಯ ನಿರ್ಧಾರಗಳು ಮಾರುಕಟ್ಟೆಯ ನಿರೀಕ್ಷಿತ ಬೆಳವಣಿಗೆಯನ್ನು ಅವಲಂಬಿಸುತ್ತವೆ. ಆದ್ದರಿಂದ, ಹೆಚ್ಚು ಸಂಪನ್ಮೂಲಗಳನ್ನು ಕೊಡುಗೆಯಾಗಿ ಪಡೆದ ಕಾರಣದ ಮೇಲೆ ಬಂಡವಾಳಗಾರರು ತಮ್ಮ ಹೂಡಿಕೆಯನ್ನು ಹೆಚ್ಚಿಸುವುದಿಲ್ಲ. ವಿಶ್ಲೇಷಣಾತ್ಮಕವಾಗಿ ತಪ್ಪಾಗಿರುವ ಈ ವಾದವನ್ನೂ ಸುಖೀ ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ಒತ್ತಾಯಕ್ಕೆ ಅಪಖ್ಯಾತಿ ಹಚ್ಚಲು ಮತ್ತು ಅದರೆಡೆಗೆ ಇಡಬಹುದಾದ ಯಾವುದೇ ಹೆಜ್ಜೆಯನ್ನು ಬುಡಮೇಲು ಮಾಡಲು ಬಳಸಲಾಗುತ್ತದೆ. ಆದಾಗ್ಯೂ, ಸುಖೀ ರಾಜ್ಯದ ಗುರಿ ಸಾಧಿಸಲು ತೆರಿಗೆ-ಜಿಡಿಪಿ ಅನುಪಾತವನ್ನು ಬಹಳಷ್ಟು ಹೆಚ್ಚಿಸಬೇಕಾಗುತ್ತದೆ ಎಂಬುದನ್ನೇ ವಿಶ್ವಾದ್ಯಂತದ ಕಲ್ಯಾಣ ಪ್ರಭುತ್ವಗಳ ಅನುಭವವು ತೋರಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಬಂಡವಾಳಗಾರರ ಮೇಲೆ ಗಣನೀಯ ಪ್ರಮಾಣದ ತೆರಿಗೆಗಳನ್ನು ಹಾಕುವ ಅಂಶವಿರುತ್ತದೆ. ಮತ್ತು ಬಂಡವಾಳಗಾರರ ಮೇಲಿನ ತೆರಿಗೆಗಳ ಹೆಚ್ಚಳವು ಜಿಡಿಪಿ ಬೆಳವಣಿಗೆಯ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರಬಹುದು ಎಂಬ ವಾದವನ್ನು ಇದು ಸಂಪೂರ್ಣವಾಗಿ ತಿರಸ್ಕರಿಸುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸುಖೀ ರಾಜ್ಯದ ಆಗ್ರಹವು, ಜಿಡಿಪಿ ಬೆಳವಣಿಗೆಯ ಗೀಳನ್ನು ತೊಲಗಿಸಬೇಕಾಗುತ್ತದೆ. ಇಂತಹ ಗೀಳು ಬೂರ್ಜ್ವಾಗಳು ಕೊಡುವ ನೆವಗಳ ಭಾಗವಾಗಿದೆ.
ಜಿಡಿಪಿ ಬೆಳವಣಿಗೆ ಮತ್ತು ಬೇಡಿಕೆ ಇಳಿಕೆಯ ದ್ವಂದ್ವ
ಮೂರನೆಯ ಪ್ರತಿಪಾದನೆಯು ಬಹಿಷ್ಕರಣದ ಅಂದರೆ ಹೊರತುಪಡಿಸುವುದರ ತತ್ವಜಿಜ್ಞಾಸೆಗೆ ಸಂಬಂಧಿಸಿದೆ. ಜಿಡಿಪಿ ಬೆಳವಣಿಗೆಯನ್ನು ಉತ್ತೇಜಿಸುವ ಸಲುವಾಗಿ ಸರ್ಕಾರದ ಬಜೆಟ್‌ನಿಂದ ಬಂಡವಾಳಗಾರರೆಡೆಗೆ ಸಂಪನ್ಮೂಲಗಳ ವರ್ಗಾವಣೆಗಳು ನಡೆಯುತ್ತವೆ. ಇತ್ತ ನವ-ಉದಾರವಾದಿ ಬಂಡವಾಳಶಾಹಿಗೆ ವಿಶಿಷ್ಟವೂ ಮತ್ತು ಅದರ ಅಂತ್ಯಪರಿಣಾಮವೂ ಆಗಿರುವ ಆರ್ಥಿಕ ಹಿಂಜರಿತ ಮತ್ತು ಸ್ಥಗಿತತೆ ಆರಂಭವಾಗುತ್ತಿದ್ದಂತೆ ಈ ವರ್ಗಾವಣೆಗಳ ಪ್ರಮಾಣವು ಕೂಡ ತುಲನಾತ್ಮಕವಾಗಿ ಹೆಚ್ಚಾಗುತ್ತದೆ. ಇದರಿಂದಾಗಿ, ಈ ಹಿಂದೆ ಕಲ್ಯಾಣ ಕ್ರಮಗಳಿಗಾಗಿ ಬಜೆಟ್‌ನಲ್ಲಿ ಬಿಡುಗಡೆ ಮಾಡುತ್ತಿದ್ದ ಅಲ್ಪ-ಸ್ವಲ್ಪ ವೆಚ್ಚಗಳಿಗಾಗಿ ಉಳಿಯುವ ಸಂಪನ್ಮೂಲಗಳೂ ಕಡಿಮೆಯಾಗುತ್ತವೆ. ಇದರ ಫಲಿತಾಂಶವೆಂದರೆ, ಶಿಕ್ಷಣ, ಆರೋಗ್ಯ ಮತ್ತು ಇತರ ಅಗತ್ಯ ಸೇವೆಗಳ ಖಾಸಗೀಕರಣ-ಇದು ದುಡಿಯುವ ಜನರನ್ನು ಈ ಎಲ್ಲಾ ಸೇವೆಗಳಿಂದ ಮತ್ತಷ್ಟು ಹೊರತುಪಡಿಸುತ್ತದೆ. ಬಂಡವಾಳಗಾರರಿಗೆ ಮಾಡುವ ವರ್ಗಾವಣೆಗಳು ಹೂಡಿಕೆಯನ್ನೂ ಹೆಚ್ಚಿಸುವುದಿಲ್ಲ ಅಥವಾ ಅವರ ಬಳಕೆಯ ವೆಚ್ಚಗಳಲ್ಲಿ ಕೂಡ ತಕ್ಷಣದ ಹೆಚ್ಚಳವನ್ನೂ ತರುವುದಿಲ್ಲ. ಅತ್ತ, ಈ ವರ್ಗಾವಣೆಗಳಿಗೆ ಕೊಡುವ ಮೊತ್ತವನ್ನು ಸರಿದೂಗಿಸಲು ಸರ್ಕಾರದ ಕಲ್ಯಾಣ ವೆಚ್ಚಗಳಲ್ಲಿ ಕಡಿತ ಮಾಡುವ ಕ್ರಮದ ಪರಿಣಾಮವಾಗಿ ಅರ್ಥವ್ಯವಸ್ಥೆಯಲ್ಲಿ ಒಟ್ಟಾರೆ ಬೇಡಿಕೆ ಇಳಿಯುತ್ತದೆ. ಇದರ ಪರಿಣಾಮವೆಂದರೆ ಜಿಡಿಪಿ ಬೆಳವಣಿಗೆ ದರದಲ್ಲಿ ಇಳಿಕೆ. ಆದ್ದರಿಂದ, ಬೆಳವಣಿಗೆ ದರವನ್ನು ಈ ರೀತಿಯಲ್ಲಿ ಹೆಚ್ಚಿಸುವ ಪ್ರಯತ್ನವು, ವಿರೋಧಾಭಾಸವೆನಿಸುವಂತೆ, ಒಂದು ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಆದರೆ, ಈ ವ್ಯತಿರಿಕ್ತ ಪರಿಣಾಮವೇ ಬಂಡವಾಳಶಾಹಿಗಳಿಗೆ ಮಾಡುವ ವರ್ಗಾವಣೆಗಳ ಮತ್ತಷ್ಟು ಹೆಚ್ಚಳಗಳಿಗೆ ಒಂದು ನೆಪವಾಗುತ್ತದೆ ಮತ್ತು ಈ ಪರಿಯ ವರ್ಗಾವಣೆಗಳ ಪರಿಣಾಮವಾಗಿ ಬೆಳವಣಿಗೆಯ ದರ ಮತ್ತಷ್ಟು ಇಳಿಯುತ್ತದೆ. ಇಂತಹ ವರ್ಗಾವಣೆಗಳ ಇನ್ನೊಂದು ಮುಖವು ಕಲ್ಯಾಣ ವೆಚ್ಚಗಳ ಕಡಿತವಾಗಿರುವುದರಿಂದ, ಕಲ್ಯಾಣ ವೆಚ್ಚಗಳ ಪ್ರಮಾಣವು ಹಂತಹಂತವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸುಖೀ ರಾಜ್ಯದ ಅನ್ವೇಷಣೆಯಲ್ಲಿ ನಾವು ಸುಖೀ ರಾಜ್ಯದಿಂದ, ಕಲ್ಯಾಣ ಪ್ರಭುತ್ವದಿಂದ ಮತ್ತಷ್ಟು ದೂರ ಸಾಗುತ್ತೇವೆಯೇ ಹೊರತು ಅದರೆಡೆಗೆ ಚಲಿಸುವುದಿಲ್ಲ.
ಭಾರತದಲ್ಲಿ ನಾವು ಪ್ರಸ್ತುತ ಅಂತಹ ಒಂದು ದ್ವಂದ್ವದ ಮಧ್ಯದಲ್ಲಿದ್ದೇವೆ. ಕಡಿಮೆ ತೆರಿಗೆ-ಜಿಡಿಪಿ ಅನುಪಾತ ಮತ್ತು, ಹೂಡಿಕೆಯನ್ನು ಹಾಗೂ ಜಿಡಿಪಿ ಬೆಳವಣಿಗೆಯನ್ನು ಉತ್ತೇಜಿಸುವ ದಾರಿತಪ್ಪಿದ ಕಲ್ಪನೆಯ ಅಡಿಯಲ್ಲಿ ಬಂಡವಾಳಶಾಹಿಗಳಿಗೆ ಹೆಚ್ಚೆಚ್ಚು ವರ್ಗಾವಣೆಗಳಿಂದಾಗಿ ವಿತ್ತೀಯ ಸಂಪನ್ಮೂಲಗಳ ಮೇಲಿನ ಒತ್ತಡ ಎಷ್ಟಿದೆಯೆಂದರೆ, ಈ ಹಿಂದೆ ಗ್ರಾಮೀಣ ಬಡವರಿಗೆ ಜೀವನಾಡಿಯಾಗಿ ಪರಿಣಮಿಸಿದ್ದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನೂ ಸಹ ಕೇಂದ್ರ ಸರ್ಕಾರವು ಮುಚ್ಚಲು ಹೊರಟಿದೆ.
ಒಟ್ಟಿನಲ್ಲಿ, ನವ-ಉದಾರವಾದಿ ಬಂಡವಾಳಶಾಹಿಯ ಪ್ರಸ್ತುತ ಯುಗದಲ್ಲಿ ಪ್ರಚುರಪಡಿಸಲಾಗುತ್ತಿರುವ ಜಿಡಿಪಿ-ಬೆಳವಣಿಗೆಯ ಗೀಳಿನ ಎರಡು ವಿಭಿನ್ನ ಸಮಸ್ಯೆಗಳೆಂದರೆ: ಮೊದಲನೆಯದು, ಬಂಡವಾಳಶಾಹಿಗಳಿಗೆ ನೀಡುವ ಹೆಚ್ಚಿನ ವರ್ಗಾವಣೆಗಳು ಹೂಡಿಕೆಯನ್ನು ಹೆಚ್ಚಿಸುತ್ತವೆ ಮತ್ತು ಆ ಮೂಲಕ ಜಿಡಿಪಿಯ ಬೆಳವಣಿಗೆಗೆ ಕಾರಣವಾಗುತ್ತವೆ ಎಂಬ ವಾದದ ತಳದಲ್ಲಿರುವ ವಿಶ್ಲೇಷಣಾತ್ಮಕ ದೋಷ; ಮತ್ತು ಎರಡನೆಯದು, ತೆರಿಗೆ-ಜಿಡಿಪಿ ಅನುಪಾತವು ಕೆಳ ಮಟ್ಟದಲ್ಲಿದ್ದರೂ ಸಹ ಜಿಡಿಪಿಯ ಉನ್ನತ ಬೆಳವಣಿಗೆಯೇ ಜನರ ಹೆಚ್ಚಿನ ಕ್ಷೇಮಾಭಿವೃದ್ಧಿಗೆ ಕಾರಣವಾಗುತ್ತದೆ ಎಂಬ ವಾದ.
ಕಲ್ಯಾಣ ಪ್ರಭುತ್ವವನ್ನು, ಅಂದರೆ ಸುಖೀ ರಾಜ್ಯವನ್ನು ಸ್ಥಾಪಿಸುವ ಸಲುವಾಗಿ ಹಣ ಹೊಂದಿಸುವ ಪ್ರಯತ್ನಗಳನ್ನು ಅಪಾರವಾಗಿ ಹೆಚ್ಚಿಸುವ ಅಗತ್ಯವಿದೆ ಎಂಬುದನ್ನು ವಿಶ್ವದ ಎಲ್ಲೆಡೆಯ ಅನುಭವ ಹೇಳುತ್ತದೆ.