ಪ್ರಾಯೋಗಿಕವಾಗಿ ಮಾರ್ಚ್ 10ರಿಂದ ಏಪ್ರಿಲ್ 24ರವರೆಗೆ ವಿಜಯಪುರ/ ಮೈಸೂರಿನಲ್ಲಿ ಸಮೀಕ್ಷೆ
ಬೆಂಗಳೂರು : ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರ ಜನಗಣತಿ ಮಾಡಲು ಸರ್ಕಾರವು ನಿರ್ಧರಿಸಿದೆ.
ಪ್ರಾಯೋಗಿಕವಾಗಿ ಈ ಸಮೀಕ್ಷಾ ಕಾರ್ಯವು ಮಾರ್ಚ್ 10 ರಿಂದ ಏಪ್ರಿಲ್ 24 ರವರೆಗೆ ವಿಜಯಪುರ ಮತ್ತು ಮೈಸೂರಿನಲ್ಲಿ ಸಮೀಕ್ಷೆ ಆರಂಭಗೊಳ್ಳಲಿದೆ. ಈ ಬಗ್ಗೆ ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್, 2011ರ ಜನಗಣತಿಯಲ್ಲಿ ರಾಜ್ಯದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಂಖ್ಯೆಯನ್ನು ಸರ್ಕಾರ ದಾಖಲಿಸಿದ್ದು, ಆಗ 34,283 ಲೈಂಗಿಕ ಅಲ್ಪಸಂಖ್ಯಾತರು ದಾಖಲಾಗಿದ್ದಾರೆ ಎಂದರು.
ಈ ಜನಗಣತಿ ವರದಿಯು ನಿಖರವಾಗಿಲ್ಲ. ಏಕೆಂದರೆ ಹಲವಾರು ವ್ಯಕ್ತಿಗಳು ತಮ್ಮ ಹೆಸರುಗಳು ಪಟ್ಟಿಯಿಂದ ಕಾಣೆಯಾಗಿದೆ ಎಂದು ಹೇಳಿಕೊಂಡಿರುವುದರಿಂದ ಅವರಿಗೆ ಸರ್ಕಾರಿ ಪ್ರಯೋಜನಗಳನ್ನು ನಿರಾಕರಿಸಲಾಗಿದೆ. ನಾಗರಿಕ ಸೇವೆಗಳ ಎಲೆಕ್ಟ್ರಾನಿಕ್ ಡೆಲಿವರಿ ನಿರ್ದೇಶನಾಲಯವು (ಇಡಿಸಿಎಸ್) ಸಮೀಕ್ಷೆ ನಡೆಸಲು ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದು, ಮಾಹಿತಿಯನ್ನು ನೋಂದಾಯಿಸಲು ವಿಶೇಷ ಅಪ್ಲಿಕೇಶನ್ – ಕರ್ಮಣಿ ವೆಬ್ ಅಪ್ಲಿಕೇಶನ್ – ಅನ್ನು ಪ್ರಾರಂಭಿಸಲಾಗಿದೆ. ದತ್ತಾಂಶ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಪುಷ್ಪಲತಾ ಎಚ್ ಮಾತನಾಡಿ, ಅಧಿಕೃತ ಮಾಹಿತಿಯ ಕೊರತೆಯಿಂದ ಸರ್ಕಾರವು ಯಾವುದೇ ನೀತಿಯನ್ನು ರೂಪಿಸಲು ಮತ್ತು ತುಳಿತಕ್ಕೊಳಗಾದ ಸಮುದಾಯಕ್ಕೆ ನೇರ ಪ್ರಯೋಜನಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಈ ಸಮೀಕ್ಷೆಯು ತೃತೀಯಲಿಂಗಿಗಳ ವೈಯೂಕ್ತಿಕ ವಿವರಗಳು, ಶಿಕ್ಷಣ, ವೃತ್ತಿ, ವಸತಿ, ಆರೋಗ್ಯ, ಸಾಮಾಜಿಕ ಭದ್ರತೆ ಮತ್ತು ಇತರ ಮಾಹಿತಿಯನ್ನು ದಾಖಲಿಸುತ್ತದೆ. ತೃತೀಯಲಿಂಗಿ ಸಮುದಾಯದ ಸದಸ್ಯರು ಸಮೀಕ್ಷೆಯನ್ನು ರೂಪಿಸಿದ್ದಾರೆ ಮತ್ತು ಪ್ರತಿ ಜಿಲ್ಲೆಯಲ್ಲೂ ಅವರು ಕಾರ್ಯಗತಗೊಳಿಸುತ್ತಾರೆ.
ಗಣತಿಗೆ ನಮ್ಮನ್ನು ಬಳಸಿಕೊಳ್ಳಲಿ :
ಲಿಂಗತ್ವ ಅಲ್ಪಸಂಖ್ಯಾತರ ಜನಗಣತಿ ಮಾಡಲು ಸರ್ಕಾರ ನಿರ್ಧರಿಸಿರುವುದು ಸರಿಯಾಗಿದೆ ಆದರೆ ಈ ಜನಗಣತಿಯನ್ನು ನಾಗರಿಕ ಸೇವೆಗಳ ಎಲೆಕ್ಟ್ರಾನಿಕ್ ಡೆಲಿವರಿ ನಿರ್ದೇಶನಾಲಯ ವಹಿಸಿರುವುದು ಸರಿಯಲ್ಲ. ಲಿಂಗತ್ವ ಅಲ್ಪಸಂಖ್ಯಾತರ ಕುರಿತು ಹೆಚ್ಚಾಗಿ ತಿಳಿದಿಲ್ಲ. ಜಿಲ್ಲೆಗೊಂದರಂತೆ ಕನಿಷ್ಠ ಇಬ್ಬರು ತೃತೀಯ ಲಿಂಗಿಗಳನ್ನು ಬಳಸಿಕೊಂಡು ಗಣತಿ ಮಾಡಬೇಕು ಆಗಿದ್ದಾಗ ನಮ್ಮ ಸಮುದಾಯದವರು ಎಲ್ಲೆಲ್ಲಿ ವಾಸವಿದ್ದಾರೆ ಎಂಬ ನಿಖರ ಮಾಹಿತಿಗಳು ಸಿಗುತ್ತವೆ. ಮಾತ್ರ ಗಣತಿ ಕಾರ್ಯ ಪೂರ್ಣವಾಗುತ್ತದೆ ಎಂಬುದು ನನ್ನ ಅಭಿಪ್ರಾಯ.
ಪ್ರಿಯಾಂಕ
ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ
ತೃತೀಯ ಲಿಂಗಿಗಳ ಜನಗಣತಿ ಸೂಕ್ಷ್ಮವಾಗಿ ನಡೆಯಲಿ :
ಸರ್ಕಾರದ ಈ ನಡೆಯನ್ನು ನಾನು ಸ್ವಾಗತ ಮಾಡುತ್ತೇನೆಯಾದರೂ ಈ ಗಣತಿ ಕಾರ್ಯನಡೆಸುವ ಪ್ರಕ್ರಿಯೆ ಬಹಳಷ್ಟು ಸವಾಲುಗಳನ್ನು ಹೊಂದಿದೆ. ಜೊತೆಗೆ ಎಲ್ಲೆಲ್ಲಿ ಗಣತಿ ಕಾರ್ಯಗಳು ನಡೆಯುತ್ತದೆಯೋ ಅಲ್ಲೆಲ್ಲವೂ ಕೂಡ ಸಮುದಾಯದ ಎನ್‌ಜಿಓಗಳಲ್ಲಿ ಕೆಲಸ ಮಾಡುವವವರನ್ನು ಜೊತೆಗೆ ಕರೆದೊಯ್ದು ಇವರ ಸಹಭಾಗಿತ್ವದಲ್ಲಿ ಗಣತಿ ಮಾಡುವುದರಿಂದ ಮುಕ್ತವಾದ ಒಂದಷ್ಟು ಸೂಕ್ಷ್ಮ ವಿಚಾರಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಗಣತಿ ಕಾರ್ಯವು ಸಮುದಾಯಕ್ಕೆ ಮಾರಕವಾಗದಂತೆ ನೋಡಿಕೊಳ್ಳಬೇಕು. ಲಿಂಗತ್ವ ಅಲ್ಪಸಂಖ್ಯಾತರ ಕೌಟುಂಬಿಕ ಜೀವನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಗಣತಿ ಕಾರ್ಯ ಮಾಡುವುದರಿಂದ ರಾಜಕೀಯ ಪ್ರಾತಿನಿಧ್ಯತೆ ಸಿಗುತ್ತದೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ.
ನಿಷಾ ಗೂಳೂರು
ಲಿಂಗತ್ವ ಅಲ್ಪಸಂಖ್ಯಾತರು
ಸಂಗಮ ಸಂಸ್ಥೆ
ಮಂಗಳಮುಖಿಯರ ಜನಗಣತಿ ಮಾಡುವುದರಿಂದ ನಮಗೆ ಸರ್ಕಾರದಿಂದ ಪಿಂಚಣಿ ಸೌಲಭ್ಯ, ಆಧಾರ್, ಮನೆ ಮುಂತಾದ ಸೌಲಭ್ಯಗಳನ್ನು ನಾವು ಪಡೆದುಕೊಳ್ಳಲು ಇನ್ನಷ್ಟು ಅನುಕೂಲವಾಗುತ್ತದೆ.
ಪೂಜಾ
ಲಿಂಗತ್ವ ಅಲ್ಪಸಂಖ್ಯಾತರು
ಶಿಕ್ಷಕಿ