ಸಾಹಿತ್ಯದ ಹೂರಣವೂ ಆಹಾರ ಸಂಸ್ಕೃತಿಯೂ ಸಮಾಜವನ್ನು ಒಟ್ಟುಗೂಡಿಸಬೇಕಾದ ʼಅನ್ನʼ ವಿಭಜಿಸುವುದು ಸಾಂಸ್ಕೃತಿಕ ವೈಕಲ್ಯದ ಸಂಕೇತ

-ನಾ ದಿವಾಕರ

ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆಯುವ ಅಕ್ಷರ ಜಾತ್ರೆ ʼಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ʼ ಶತಮಾನದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಆಹಾರ ಸಂಸ್ಕೃತಿಯ ಚರ್ಚೆಗಳ ಅಂಗಳವಾಗಿದೆ. ಇಷ್ಟು ವರ್ಷಗಳೂ ಪಾರಂಪರಿಕವಾಗಿ ನಡೆದುಕೊಂಡು ಬಂದಿದ್ದ ರೀತಿ ರಿವಾಜುಗಳಿಗೆ ಮಂಡ್ಯ ಸಾಹಿತ್ಯ ಸಮ್ಮೇಳನ ಹೊಸ ಆಯಾಮವನ್ನು ನೀಡಿರುವುದನ್ನು, ಬದಲಾದ ಸಾಂಸ್ಕೃತಿಕ ಸನ್ನಿವೇಶಗಳಲ್ಲಿ, ಸ್ವಾಗತಿಸಲೇಬೇಕಿದೆ. ಸಂಸ್ಕೃತಿ

ನಿಜ, ಸಾಹಿತ್ಯ ಕೇಂದ್ರಿತ ಸಮ್ಮೇಳನದಲ್ಲಿ ಆಹಾರ ಮುಖ್ಯ ವಿಷಯವಾಗುವುದಿಲ್ಲ. ಆದರೆ ಪ್ರತಿಯೊಂದು ಸಮ್ಮೇಳನ ನಡೆದಾಗಲೂ ಗಮನಿಸಬಹುದಾದ ಒಂದು ವೈಶಿಷ್ಟ್ಯ ಎಂದರೆ, ಆಯೋಜಕರು ಆಯಾ ಸ್ಥಳದ ಪ್ರಾದೇಶಿಕ ಆಹಾರ ಪದ್ಧತಿಯನ್ನು ಗೌರವಿಸುವುದು. ಉತ್ತರ ಕರ್ನಾಟಕದಲ್ಲಿ ಜೋಳದ ರೊಟ್ಟಿ, ಮಲೆನಾಡಿನ ವಿಶಿಷ್ಟ ಖಾದ್ಯಗಳು, ದಕ್ಷಿಣದಲ್ಲಿ ರಾಗಿ ಮುದ್ದೆ ಹೀಗೆ ಭಿನ್ನ ಆಹಾರ ಪದ್ಧತಿಗಳನ್ನು ಗೌರವಿಸುತ್ತಲೇ ಸಮ್ಮೇಳನಗಳಲ್ಲಿ ಆಹಾರ ವ್ಯವಸ್ಥೆಯನ್ನು ಮಾಡಲಾಗುತ್ತದೆ.

ಆದರೆ ಯಾವುದೇ ಸಂದರ್ಭದಲ್ಲೂ ಈ ಪರಿಕಲ್ಪನೆಯು ಸಸ್ಯಾಹಾರವನ್ನು ದಾಟಿ ಹೋಗದಿರುವುದು ನಮ್ಮ ಸಾಂಸ್ಕೃತಿಕ ಅಸೂಕ್ಷ್ಮತೆ ಮತ್ತು ಸಂಕುಚಿತತೆಯನ್ನು ತೋರಿಸುತ್ತದೆ. ಭಾರತೀಯ ಜನಸಂಸ್ಕೃತಿಯ ಒಂದು ವೈಶಿಷ್ಟ್ಯ ಮತ್ತು ವೈರುಧ್ಯ ಇರುವುದೇ ಆಹಾರ ಪದ್ಧತಿಗಳಲ್ಲಿ. ಪ್ರತಿ ನೂರು ಕಿಲೋಮೀಟರ್‌ಗೆ ವಿಭಿನ್ನ ಆಹಾರ ಪದ್ಧತಿಗಳಿರುವುದನ್ನು ಕೋಲಾರದಿಂದ ಬೀದರ್‌ವರೆಗೂ ಗುರುತಿಸಬಹುದು.

ಆಧುನಿಕತೆ ಮತ್ತು ಮಾರುಕಟ್ಟೆಯ ವಿಸ್ತರಣೆಯ ಪ್ರಭಾವದಿಂದ ದಕ್ಷಿಣ-ಉತ್ತರ-ಮಲೆನಾಡಿನ ಆಹಾರ ಪದ್ಧತಿಗಳು ಪರಸ್ಪರ ವಿನಿಮಯವಾಗುವುದು ಸಾಧ್ಯವಾಗಿದ್ದರೂ, ಇಂದಿಗೂ ಸಹ ತಳಸಮಾಜದ ನಿತ್ಯ ಬದುಕಿನಲ್ಲಿ ಪಾರಂಪರಿಕ ಆಹಾರ ಪದ್ಧತಿಯೇ ಜೀವಂತವಾಗಿರುತ್ತದೆ. ಈ ವೈವಿಧ್ಯತೆಗಳನ್ನು ಗೌರವಿಸುವುದೇ ಆದರೆ ನಾವು ತಳಸಮಾಜವನ್ನು ಸಮಾನವಾಗಿ ಆವರಿಸಿರುವ ಆಹಾರ ಪದ್ಧತಿಗಳನ್ನು ಸಮ್ಮಾನಿಸಲೇಬೇಕಾಗುತ್ತದೆ.

ಇದನ್ನೂ ಓದಿ: ಕುಣಿಗಲ್: ಡಿಸೆಂಬರ್ 14ರಂದು ಜಿಲ್ಲಾ ಮಟ್ಟದ ಸಂಘಟನಾ ಕಾರ್ಯಗಾರ

ಸಾಮಾಜಿಕ ಆಯಾಮದಲ್ಲಿ ಆಹಾರ

ಭಾರತದ ಬಹುಸಂಖ್ಯಾತ ಸಮಾಜದಲ್ಲಿ ಮಾಂಸಾಹಾರ ಎನ್ನುವುದು ನಿತ್ಯ ಬದುಕಿನ ಒಂದು ಭಾಗವಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ವ್ಯಷ್ಟಿ ನೆಲೆಯಲ್ಲಿ ಕೆಲವು ಸಮುದಾಯಗಳಲ್ಲಿ, ಜಾತಿ ಸಮೂಹಗಳಲ್ಲಿ ಮಾಂಸಾಹಾರ ಸೇವನೆಗೆ ಸ್ವಯಂ ನಿಬಂಧನೆಗಳನ್ನು ರೂಢಿಸಿಕೊಂಡು ಬಂದಿದ್ದರೂ, ಸಮಷ್ಟಿ ನೆಲೆಯಲ್ಲಿ ನೋಡಿದಾಗ ಮಾಂಸಾಹಾರ ಬಹುಸಂಖ್ಯಾತ ಜನರ ನಿತ್ಯ ಬದುಕಿನ ಭಾಗವಾಗಿದೆ.

ಧಾರ್ಮಿಕ ಅಥವಾ ಸಾಂಪ್ರದಾಯಿಕ ಶ್ರದ್ಧಾನಂಬಿಕೆಗಳ ಪರಿಣಾಮವಾಗಿ ನಿರ್ದಿಷ್ಟ ವಾರದ ದಿನಗಳಲ್ಲಿ ಅಥವಾ ಹಬ್ಬದ ದಿನಗಳಲ್ಲಿ ಮಾಂಸಾಹಾರಕ್ಕೆ ನಿರ್ಬಂಧ ಇರುವುದಾದರೂ, ಇದನ್ನು ಸಾರ್ವತ್ರೀಕರಿಸಲಾಗುವುದಿಲ್ಲ. ಹಾಗೆ ನೋಡಿದರೆ ಭಾರತದ ಸಾಂಸ್ಕೃತಿಕ-ಧಾರ್ಮಿಕ ಪರಿಸರದಲ್ಲಿ ಆಹಾರ ಪದ್ಧತಿಗಳಿಗೆ ಇರುವ ನಿರ್ಬಂಧಗಳನ್ನು ಸಹಿಸಿಕೊಂಡು, ಸಹಕಾರ ನೀಡುವ ಅನ್ಯ ಜಾತಿ ಸಮುದಾಯಗಳ ಸಹನಶೀಲತೆಯನ್ನು ಮೆಚ್ಚಲೇಬೇಕಲ್ಲವೇ ?

ಇದೇ ವೇಳೆ ನಿರ್ದಿಷ್ಟ ಸಂದರ್ಭಗಳಲ್ಲಿ ಈ ಸಮುದಾಯಗಳು ತಮ್ಮ ನಿತ್ಯಾಹಾರಕ್ಕಾಗಿ ಆಗ್ರಹಿಸಿದಾಗ ಪ್ರತಿರೋಧ ಏಕೆ ಬರಬೇಕು. ದಕ್ಷಿಣ ಕರ್ನಾಟಕದ ಭಾಷೆಯಲ್ಲಿ ಹೇಳುವುದಾದರೆ, ʼಬಾಡೂಟʼ ಏಕೆ ಮಾನಸಿಕವಾಗಿ ಅಪಥ್ಯವಾಗಬೇಕು ? ಭೌತಿಕವಾಗಿ ಯಾವುದೇ ರೀತಿಯ ಆಹಾರ ಸೇವಿಸುವುದು, ಆಸ್ವಾದಿಸುವುದು ವೈಯುಕ್ತಿಕ ಅಪೇಕ್ಷೆ ಮತ್ತು ವ್ಯಕ್ತಿಗತ ಹಕ್ಕು. ಆದರೆ ಬೌದ್ಧಿಕವಾಗಿ, ನಮ್ಮ ಚಿಂತನಾ ಕ್ರಮಗಳಲ್ಲಿ, ಸಮಾಜವನ್ನು ನೋಡುವ ದೃಷ್ಟಿಯಲ್ಲಿ, ಆಹಾರ ವೈವಿಧ್ಯತೆಯ ಬಗ್ಗೆ ಮಡಿವಂತಿಕೆ ತೋರುವುದು , ಸಾಂಸ್ಕೃತಿಕ  ಸೂಕ್ಷ್ಮತೆ ಮತ್ತು ಸಂವೇದನೆಯ ಕೊರತೆಯನ್ನಷ್ಟೇ ತೋರುತ್ತದೆ. ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ನಿರ್ದೇಶಿಸುವ ಸಾಂಪ್ರದಾಯಿಕ ಚಿಂತನೆಗಳು ಮತ್ತು ನಿಯಂತ್ರಿಸುವ ವೈದಿಕಶಾಹಿಯ ಆಲೋಚನಾ ಕ್ರಮಗಳು ಈ ಕೊರತೆಯನ್ನು ಮತ್ತಷ್ಟು ಸ್ಪಷ್ಟವಾಗಿ ಬಿಂಬಿಸುತ್ತವೆ.

ಭಾರತೀಯ ಜಾತಿ ವ್ಯವಸ್ಥೆಯಲ್ಲಿ ಈ ಸೂಕ್ಷ್ಮವನ್ನು ಗಮನಿಸಿಯೇ ಡಾ.ಬಿ.ಆರ್.‌ ಅಂಬೇಡ್ಕರ್‌ ಜಾತಿ ವಿನಾಶದ ಹಾದಿಯಲ್ಲಿ ಸಹಭೋಜನವನ್ನೂ ಒಂದು ಮುಖ್ಯ ಸಾಧನವಾಗಿ ಪರಿಗಣಿಸುತ್ತಾರೆ. ಇಂದಿಗೂ ಧಾರ್ಮಿಕ ಕೇಂದ್ರಗಳಲ್ಲಿ ಪಂಕ್ತಿ ಭೇದವನ್ನು ಆಚರಿಸುತ್ತಿರುವ ಹೊತ್ತಿನಲ್ಲಿ ಸಹಭೋಜನ ಸಮಾಜವನ್ನು ಒಂದುಗೂಡಿಸುವ ಮಾರ್ಗವಾಗಿ ಕಾಣುವುದು ಸಹಜ. ಈ ಸಹಭೋಜನವನ್ನೂ ಕೇವಲ ಒಟ್ಟಿಗೆ ಕುಳಿತು ತಿನ್ನುವ ಪ್ರಕ್ರಿಯೆಯಾಗಿ ಕಾಣಲಾಗುತ್ತಿದೆಯೇ ಹೊರತು, ಪರಸ್ಪರ ಆಹಾರ ವಿನಿಮಯದ ರೂಪದಲ್ಲಿ ಕಾಣಲಾಗುತ್ತಿಲ್ಲ. ಪಂಕ್ತಿಭೇದವನ್ನೂ ದಾಟಿ ನೋಡಿದಾಗ ಅಲ್ಲಿ ಮತ್ತೊಂದು ಸ್ತರದ ಭೋಜನ ಪದ್ಧತಿಯನ್ನು ಗಮನಿಸಬಹುದು.

ಧಾರ್ಮಿಕ ಆಚರಣೆಗಳಲ್ಲಿ ಮೇಲ್ಪಂಕ್ತಿಯಲ್ಲಿರುವ ಪುರೋಹಿತಶಾಹಿ ವರ್ಗವು ಈ ಮೇಲ್‌ಸ್ತರದ ಭಾಗವಾಗಿ ಕಾಣುತ್ತದೆ. ಒಂದೇ ಜಾತಿಯಲ್ಲಿ ಈ ಅಂತರವನ್ನು ಬಹುತೇಕ ಧಾರ್ಮಿಕ ಮಠಗಳಲ್ಲಿ, ದೇವಾಲಯಗಳಲ್ಲಿ, ಮೇಲ್ಜಾತಿಯ ವಿವಾಹಗಳಲ್ಲೂ ಗುರುತಿಸಬಹುದು. ಧಾರ್ಮಿಕ ವಿಧಿವಿಧಾನಗಳನ್ನು ನಿರ್ವಹಿಸುವ ಪೌರೋಹಿತ್ಯ ನಡೆಸುವವರ ಭೋಜನ ಆಗುವವರೆಗೂ ಉಳಿದವರಿಗೆ ಊಟ ಬಡಿಸದೆ ಇರುವ ಪದ್ಧತಿಯನ್ನೂ ಕರ್ಮಠ ಸಂಪ್ರದಾಯಗಳಲ್ಲಿ ಗುರುತಿಸಬಹುದು.

ಸಂಪ್ರದಾಯದ ಗೋಡೆಗಳನ್ನು ದಾಟಿ

ಈ ಸಾಂಪ್ರದಾಯಿಕ ಮನಸ್ಥಿತಿಯೇ ಭಾರತದಲ್ಲಿ ಶತಮಾನಗಳಿಂದಲೂ ಬೇರೂರಿರುವ ಹಾಗೂ  ನಡೆದುಕೊಂಡು ಬಂದಿರುವ ಆಹಾರ ವೈವಿಧ್ಯತೆಯ ಸಾಂಸ್ಕೃತಿಕ ನೆಲೆಗಳನ್ನು ನಿರಾಕರಿಸುವಂತೆ ಮಾಡುತ್ತದೆ. ಈ ನಿರಾಕರಣೆಯ ಬೌದ್ಧಿಕ ಚಿಂತನೆಯು ಸಾಮಾಜೀಕರಣಕ್ಕೊಳಗಾದಾಗ ವ್ಯಕ್ತಿಗತ ನೆಲೆಯಲ್ಲಿ ವರ್ಜ್ಯ ಎನಿಸುವ ಆಹಾರಗಳು ಸಾಮುದಾಯಿಕ ನೆಲೆಯಲ್ಲೂ ವರ್ಜ್ಯವಾಗುತ್ತವೆ. ಭಾರತದ ಸಾಂಪ್ರದಾಯಿಕ ಸಾಂಸ್ಕೃತಿಕ ಆಚರಣೆಗಳಲ್ಲಿ ಈ ಸಾಮಾಜೀಕರಣಗೊಂಡ ಚಿಂತನೆಯನ್ನೇ ಸಾಂಸ್ಥೀಕರಣಗೊಳಿಸಲಾಗಿದೆ. ಭಾರತದಲ್ಲಿ ಬಲವಾಗುತ್ತಿರುವ ಬಲಪಂಥೀಯ ರಾಜಕೀಯ ಮತ್ತು ಸಾಂಸ್ಕೃತಿಕ ರಾಜಕಾರಣದ ನೆಲೆಯಲ್ಲಿ ಈ ಸಾಂಸ್ಥೀಕರಣ ಪ್ರಕ್ರಿಯೆ ಸಮಾಜದ ಎಲ್ಲ ಸ್ತರಗಳನ್ನೂ, ಎಲ್ಲ ವಲಯಗಳನ್ನೂ ತಲುಪಿರುವುದು ವಾಸ್ತವ. ಹಾಗಾಗಿಯೇ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಅಥವಾ ಮಾಂಸಾಹಾರವನ್ನು ಒದಗಿಸುವುದಕ್ಕೆ ಸಾಂಪ್ರದಾಯಿಕ ಸಮಾಜದಿಂದ ತೀವ್ರ ವಿರೋಧವೂ ವ್ಯಕ್ತವಾಗುತ್ತಿದೆ.

ಮಂಡ್ಯದ ಜನತೆಯ ಒಂದು ವರ್ಗ ತನ್ನ ನೆಲದಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಸ್ಥಳೀಯ ಪ್ರಧಾನ ಆಹಾರ ಸಂಸ್ಕೃತಿಗೆ ಅವಕಾಶವನ್ನು ಅಪೇಕ್ಷಿಸುವುದು ತಪ್ಪೇನಲ್ಲ. ಸಾಹಿತ್ಯ ಪರಿಷತ್ತು ಮತ್ತು ಸಾಹಿತ್ಯ ಸಮ್ಮೇಳನದ ಆಯೋಜಕರು ಇದಕ್ಕೆ ಕೂಡಲೇ ಸಮ್ಮತಿಸಬಹುದಿತ್ತು. ಆದರೆ ಮಾಂಸಾಹಾರವನ್ನೇ ನಿಷೇಧಿಸುವಂತೆ ವರ್ತಿಸಿರುವುದು ಅಕ್ಷಮ್ಯ. ಇದು ಭಾರತದ ಬಹುಸಂಸ್ಕೃತಿಗೆ ವ್ಯತಿರಿಕ್ತವಾದ ಒಂದು ಧೋರಣೆ. ಸಾಹಿತ್ಯ ಸಮ್ಮೇಳನ ಈ ಬಹುಸಂಸ್ಕೃತಿಯನ್ನು ಬೌದ್ಧಿಕವಾಗಿ, ಸಾಹಿತ್ಯಕವಾಗಿ ಹಾಗೂ ಸಾಂಸ್ಕೃತಿಕವಾಗಿ ಬಿಂಬಿಸುವ ಒಂದು ಅಕ್ಷರ ಜಾತ್ರೆ. ಕನ್ನಡ ಭಾಷಿಕರಿಗೆ ನಾನಾ ವಿಧವಾದ ಆಹಾರ ಪದ್ಧತಿಗಳಿವೆ ಆದರೆ ಒಂದು ಭಾಷೆಯಾಗಿ ಕನ್ನಡಕ್ಕೆ ಆಹಾರ ಸಂಸ್ಕೃತಿಯನ್ನು ಆರೋಪಿಸಲಾಗುವುದಿಲ್ಲ. ಸಮಾಜದಲ್ಲಿ ಪ್ರಚಲಿತವಾಗಿರುವ ಎಲ್ಲ ಆಹಾರ ಪದ್ಧತಿಗಳಿಗೂ ಮಾನ್ಯತೆ ನೀಡುವುದು ಸಾಹಿತ್ಯ ಸಮ್ಮೇಳನದ ಆಯೋಜಕರ ನೈತಿಕ ಕರ್ತವ್ಯ.

ಎಲ್ಲ ಸಾಹಿತ್ಯ ಸಮ್ಮೇಳನಗಳಲ್ಲಿ ಸಾಮಾನ್ಯವಾಗಿ ಆಹಾರ ವೈವಿಧ್ಯತೆಯನ್ನು ಮೇಳೈಸಲಾಗುತ್ತದೆ. ಇದು ಸಹಜವೂ ಹೌದು ಅಗತ್ಯವೂ ಹೌದು. ಹಾಗೆಯೇ ಮಾಂಸಾಹಾರವೂ ಸಹ ಇದೇ ವೈವಿಧ್ಯತೆಯ ಒಂದು ಭಾಗ ಎನ್ನುವುದನ್ನು ಆಯೋಜಕರು ಮತ್ತು ಸಮಾಜ ಮನಗಾಣಬೇಕಲ್ಲವೇ ? ಎಲ್ಲ ಜಾತಿ, ಮತ, ಧರ್ಮ, ಪಂಥಗಳಿಗೆ ಸೇರಿದ ಸಾವಿರಾರು ಜನರು, ತಮ್ಮೊಳಗಿನ ಭೇದಭಾವಗಳನ್ನು ಮರೆತು, ಸಾಂಸ್ಕೃತಿಕ ಅಸ್ಮಿತೆಗಳ ಗೋಡೆಗಳನ್ನು ದಾಟಿ, ಕನ್ನಡ ಅಸ್ಮಿತೆಯ ನೆಲೆಯಲ್ಲಿ ಒಂದೆಡೆ ಸೇರುವ ʼ ಸಾಹಿತ್ಯ ಸಮ್ಮೇಳನ ʼದಲ್ಲಿ, ಇಲ್ಲಿ ಅಂತರ್ಗತವಾಗಿರುವ ಎಲ್ಲ ರೀತಿಯ ಸಾಮಾಜಿಕ-ಸಾಂಸ್ಕೃತಿಕ ವೈವಿಧ್ಯತೆಗಳಿಗೂ ಸಮಾನ ಅವಕಾಶ ಮತ್ತು ಪ್ರಾಶಸ್ತ್ಯ ಇರಬೇಕಾಗುತ್ತದೆ. ಇದು ಪ್ರಜಾಪ್ರಭುತ್ವದ ಮೂಲ ತತ್ವ ಎನ್ನುವುದನ್ನು ಕನ್ನಡ ಸಾಹಿತ್ಯ ಪರಿಷತ್ತು ಅರ್ಥಮಾಡಿಕೊಳ್ಳಬೇಕಿದೆ.

ಸಮ್ಮೇಳನಗಳ ಸಾರ್ವತ್ರಿಕ ರೂಪ

ಸಾಹಿತ್ಯ ಸಮ್ಮೇಳನದ ಪೂರ್ವಭಾವಿಯಾಗಿ ಹೊರಡಿಸಿರುವ ನಿಬಂಧನೆಗಳಲ್ಲಿ “ಸಮ್ಮೇಳನದಲ್ಲಿ ವಾಣಿಜ್ಯ ಮತ್ತು ಪುಸ್ತಕ ಮಳಿಗೆಗಳನ್ನು ಕಾಯ್ದಿರಿಸಲಾಗಿದೆ ಮಾಂಸಾಹಾರವನ್ನು ನಿಷೇಧಿಸಲಾಗಿದೆ ” ಎಂದು ನಮೂದಿಸಿರುವುದು ಇಷ್ಟೆಲ್ಲಾ ಹಗರಣಗಳಿಗೆ ಕಾರಣವಾಗಿದೆ. ಮಂಡ್ಯದ ಪ್ರಗತಿಪರ ಮನಸ್ಸುಗಳ ಪ್ರತಿಭಟನೆಗೆ ಮಣಿದು ಕಸಾಪ ಈ ನಿಬಂಧನೆಯನ್ನು ಅಳಿಸಿಹಾಕಿದ್ದರೂ, ಈ ರೀತಿಯ ಆಲೋಚನೆಯೇ ಒಂದು ಆಹಾರ ಪದ್ಧತಿಯನ್ನು ಹಾಗೂ ಅದನ್ನು ಅನುಸರಿಸುವವರನ್ನು ಅವಮಾನಿಸಿದಂತೆ. ಯಾವುದೇ ಸಾರ್ವಜನಿಕ ಸಮಾರಂಭಗಳಲ್ಲಾದರೂ ಆಹಾರ ಪದ್ಧತಿಯನ್ನು ನಿಷೇಧಿಸುವುದು ನಮ್ಮೊಳಗಿನ ಸಾಂಪ್ರದಾಯಿಕತೆಯನ್ನು ಎತ್ತಿ ತೋರುತ್ತದೆ. ಇತ್ತೀಚೆಗೆ ಮೈಸೂರಿನ ಕಲಾಮಂದಿರ ಆವರಣದಲ್ಲಿ ಮಾಂಸಾಹಾರಕ್ಕೆ ಅವಕಾಶ ನೀಡಕೂಡದು ಎಂಬ ದನಿಯೂ ಕೇಳಿಬಂದಿತ್ತು. ಖಾಸಗಿ ಕಾರ್ಯಕ್ರಮಗಳಲ್ಲಿ ಆಹಾರದ ವ್ಯವಸ್ಥೆ ಮಾಡುವುದು ಆಯೋಜಕರ ಜವಾಬ್ದಾರಿಯಾಗಿರುವುದರಿಂದ ಅವರ ಹಕ್ಕನ್ನು ಕಸಿದುಕೊಳ್ಳಲಾಗುವುದಿಲ್ಲ.

ಇದನ್ನೂ ಓದಿ: ಅತ್ಯಾಚಾರ ಪ್ರಕರಣದಲ್ಲಿ ಜಾಮೀನು: ಸಂತ್ರಸ್ತೆಯನ್ನು ತುಂಡು ತುಂಡಆಗಿ ಕತ್ತರಿಸಿದ ಆರೋಪಿ

ಆದರೆ ನಾಡಿನ ಸಮಸ್ತ ಜನತೆಯನ್ನೂ ಒಳಗೊಂಡು ನಡೆಸುವ ಸಾರ್ವಜನಿಕ ಸಮಾರಂಭಗಳಲ್ಲಿ, ಸಮ್ಮೇಳನಗಳಲ್ಲಿ ಈ ರೀತಿಯ ನಿಬಂಧನೆಗಳನ್ನು ವಿಧಿಸುವುದು ಬಹುಸಂಸ್ಕೃತಿಗೆ ಧಕ್ಕೆ ಉಂಟುಮಾಡುತ್ತದೆ. ಮಾಂಸಾಹಾರವಾಗಲೀ ಸಸ್ಯಾಹಾರವಾಗಲೀ ಅದು ವೈಯುಕ್ತಿಕ ಅಭಿರುಚಿ ಮತ್ತು ವ್ಯಕ್ತಿಗತ ಆಯ್ಕೆಗೆ ಬಿಟ್ಟ ವಿಚಾರ. ಈ ಅಭಿರುಚಿ ಸ್ವಾತಂತ್ರ್ಯಕ್ಕೆ ಸಾರ್ವಜನಿಕವಾಗಿ ಮಿತಿಗಳನ್ನು ವಿಧಿಸುವುದು ಪ್ರಜಾತಂತ್ರದ ಲಕ್ಷಣವಲ್ಲ. ಈಗಾಗಲೇ ಸಾರ್ವಜನಿಕ ಜೀವನದಲ್ಲಿ ಇಂತಹ ನಿಬಂಧನೆಗಳನ್ನು ಕಾನೂನಾತ್ಮಕವಾಗಿ ಹೇರುತ್ತಲೇ ಬರಲಾಗಿದೆ. ಹಬ್ಬ ಹರಿದಿನಗಳಲ್ಲಿ, ಕೆಲವು ರಾಷ್ಟ್ರೀಯ ಹಬ್ಬಗಳಂದು ಮಾಂಸಾಹಾರ ಮಾರಾಟವನ್ನು ನಿಷೇಧಿಸಲಾಗುತ್ತದೆ. ಇದರ ಔಚಿತ್ಯವನ್ನು ಹೇಗೆ ನಿರ್ವಚಿಸುವುದು ? ಜನಸಾಮಾನ್ಯರು ನಿತ್ಯ ಸೇವಿಸುವ ಆಹಾರದ ಮಾರಾಟವನ್ನು ತಾತ್ಕಾಲಿಕವಾಗಿಯಾದರೂ ನಿಷೇಧಿಸುವುದು ನಿರ್ದಿಷ್ಟ ಅಥವಾ ಉದ್ದೇಶಿತ ಜನಸಮೂಹದ ಆಹಾರದ ಹಕ್ಕನ್ನು ಕಸಿದುಕೊಂಡಂತಾಗುತ್ತದೆ.

ಇಂತಹ ಸಾಂಪ್ರದಾಯಿಕತೆಯನ್ನು ಪ್ರಶ್ನಿಸುವುದು ಸಾಹಿತ್ಯ ವಲಯದ ಪ್ರಥಮ ಆದ್ಯತೆಯೂ, ನೈತಿಕ ಕರ್ತವ್ಯವೂ ಆಗಗಬೇಕಿದೆ. ಏಕೆಂದರೆ ಸಾಹಿತ್ಯ ಕೇವಲ ಅಕ್ಷರಗಳ ಭಂಡಾರ ಮಾತ್ರವೇ ಅಲ್ಲ. ಭಾರತದಂತಹ ಬಹುಸಾಂಸ್ಕೃತಿಕ ನಾಡಿನಲ್ಲಿ ಭಾಷೆ ಜನಸಮುದಾಯಗಳನ್ನು ಅಸ್ಮಿತೆಗಳ ಗಡಿಗಳನ್ನು ದಾಟಿ ಒಂದಾಗಿಸುವ ಒಂದು ಅಭಿವ್ಯಕ್ತಿ ಮಾಧ್ಯಮ. ಭಾಷಾವಾರು ರಾಜ್ಯಗಳು ಎಷ್ಟೇ ಆಂತರಿಕ ವೈರುಧ್ಯಗಳನ್ನು ಎದುರಿಸಿದ್ದರೂ ಅದು ಭೌಗೋಳಿಕ ಸ್ವರೂಪದ್ದಾಗಿವೆಯೇ ಹೊರತು, ಭಾಷಿಕ ನೆಲೆಯಲ್ಲಿ ಜನರ ನಡುವೆ ಸಾಮರಸ್ಯವನ್ನು ಕೆಡಿಸಿರುವುದು ಅಪರೂಪ. ಹೀಗೆ ಜನರನ್ನು ಒಂದುಗೂಡಿಸುವ ಭಾಷೆ ಜನರ ವೈವಿಧ್ಯಮಯ ಸಂಸ್ಕೃತಿಗಳನ್ನೂ ಒಂದುಗೂಡಿಸುತ್ತಲೇ ಒಂದು ಸಾಮಾಜಿಕ ಹಂದರವನ್ನು ಕಟ್ಟಿಕೊಡುತ್ತದೆ. ʼನಾವು ಕನ್ನಡಿಗರುʼ ಎಂದು ಹೆಮ್ಮೆಯಿಂದ ಎದೆತಟ್ಟಿಕೊಳ್ಳುವಾಗ ಉಳಿದೆಲ್ಲ ಅಸ್ಮಿತೆಗಳೂ ಹಿಂದೆ ಸರಿಯುತ್ತವೆ. ಸಾಹಿತ್ಯ ಎನ್ನುವುದು ಈ ಒಂದು ಪ್ರಕ್ರಿಯೆಯನ್ನು ಸಾಂಸ್ಥೀಕರಿಸುವ ಬೌದ್ಧಿಕ ನೆಲೆ ಎನ್ನುವುದನ್ನು ಕನ್ನಡ ಸಾಹಿತ್ಯ ಪರಿಷತ್ತು ಅರ್ಥಮಾಡಿಕೊಳ್ಳಬೇಕು.

ಸಾಹಿತ್ಯ ಲೋಕದ ಜವಾಬ್ದಾರಿ

ಈ ದೃಷ್ಟಿಯಿಂದ ನೋಡಿದಾಗ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸಾಹಿತ್ಯ ಸಮ್ಮೇಳನಗಳ ಆಯೋಜಕರು ಆಹಾರ ವೈವಿಧ್ಯತೆಯನ್ನು ಗೌರವಿಸುವ ನಿಟ್ಟಿನಲ್ಲಿ ಎಂದೋ ಯೋಚಿಸಬೇಕಿತ್ತು. ಆದರೆ ಭಾರತೀಯ ಸಮಾಜದ ಮೇಲೆ ಎಲ್ಲ ಸ್ತರಗಳಲ್ಲೂ ಸಾಂಪ್ರದಾಯಿಕತೆಯ ಛಾಯೆ ದಟ್ಟವಾಗಿರುವುದರಿಂದ ಅಲ್ಲಿಂದ ಉಗಮಿಸುವ ಮಡಿವಂತಿಕೆ ಮತ್ತು ಹೊರಗಿರಿಸುವ ಪ್ರವೃತ್ತಿಗಳೂ ಸಾಂಸ್ಥೀಕರಣಕ್ಕೊಳಗಾಗುತ್ತವೆ. ನಿಷೇಧ ಹೇರುವುದು ಈ ಪ್ರಕ್ರಿಯೆಯ ಪರಾಕಾಷ್ಠೆ ಎನ್ನಬಹುದು. ಈ ಸಾಂಪ್ರದಾಯಿಕತೆಯ ಪ್ರಭಾವದಿಂದಲೇ ಕನ್ನಡ ಸಾಹಿತ್ಯ ಪರಿಷತ್ತು ತನ್ನೊಳಗೆ ಅಂತರ್ಗತವಾಗಿರುವ ಪಿತೃಪ್ರಧಾನತೆ ಮತ್ತು ಒಂದು ಹಂತದ ಊಳಿಗಮಾನ್ಯ ಧೋರಣೆಯಿಂದ ಮುಕ್ತವಾಗಿಲ್ಲ. ದೇಶದಲ್ಲಿ ಸಾಂಸ್ಕೃತಿಕ ರಾಜಕಾರಣ ಬಲವಾಗುತ್ತಿರುವ ಈ ಹೊತ್ತಿನಲ್ಲಿ ಈ ಧೋರಣೆಗಳಿಗೆ ಸಾರ್ವತ್ರಿಕ ಮಾನ್ಯತೆ ದೊರೆಯುವ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗುವುದಿಲ್ಲ.

ಸಾಹಿತ್ಯ ಸಮ್ಮೇಳನ ಈ ಸಾಧ್ಯತೆಗಳನ್ನು ಮೀರಿ ನಡೆಯಬೇಕಿದೆ. ಅಕ್ಷರ ರೂಪದಲ್ಲಿ ಸಾಹಿತ್ಯವು ಪಡೆಯುವ ಸಾರ್ವತ್ರಿಕತೆಯನ್ನೇ ಸಾಹಿತ್ಯ ಸಮ್ಮೇಳನವೂ ಬಿಂಬಿಸುವುದು ಅತ್ಯವಶ್ಯ. ಆಗಲೇ ಸಮಾಜದ ಎಲ್ಲ ಸ್ತರಗಳ ಜನಸಮುದಾಯಗಳನ್ನೂ ಒಳಗೊಂಡಂತಹ (Inclusive) ಒಂದು ಸೌಹಾರ್ದಯುತ ವಾತಾವರಣವನ್ನು, ಸಮನ್ವಯದ ಪರಿಸರವನ್ನು ನಿರ್ಮಿಸಲು ಸಾಧ್ಯ. ಈ ನಿಟ್ಟಿನಲ್ಲಿ ಬಹುದೊಡ್ಡ ತೊಡಕಾಗಿ ಎದುರಾಗಬಹುದಾದ ಆಹಾರ ಸಂಸ್ಕೃತಿಯ ಸುತ್ತಲಿನ ಸಾಂಪ್ರದಾಯಿಕತೆಯನ್ನು ಸಾಹಿತ್ಯ ಸಮ್ಮೇಳನವು ಭೇದಿಸಬೇಕಿದೆ. ಸ್ವಯಂ ಪ್ರೇರಣೆಯಿಂದ ಸಾಹಿತ್ಯ ಸಮ್ಮೇಳನವೊಂದು ಎಲ್ಲ ಬಗೆಯ ಆಹಾರ ಪದ್ಧತಿಗಳಿಗೂ ಸಮಾನ ಆದ್ಯತೆ ನೀಡುವಂತಾಗಿದ್ದರೆ, ಸಾಂಸ್ಕೃತಿಕವಾಗಿ ಅದು ಸಮಾಜಕ್ಕೆ ಒಂದು ಆರೋಗ್ಯಕರ ಸಂದೇಶವನ್ನು ರವಾನಿಸಬಹುದಲ್ಲವೇ ?

ಬದಲಾಗುತ್ತಿರುವ ಭಾರತಕ್ಕೆ ಇದು ಅತ್ಯವಶ್ಯವಾಗಿದೆ. ಜಾತಿ, ಮತ, ಧರ್ಮದ ಅಸ್ಮಿತೆಗಳು ಸಮಾಜವನ್ನು ಲಂಬಗತಿಯಲ್ಲಿ (Vertically) ಮತ್ತು  ಸಮತಲವಾಗಿ (Horizontally)  ವಿಘಟನೆಗೊಳಪಡಿಸುತ್ತಲೇ ಇರುವ ವರ್ತಮಾನದ ಸನ್ನಿವೇಶದಲ್ಲಿ ಈ ವೈಕಲ್ಯವನ್ನು ತಪ್ಪಿಸಿ ಸಮಾಜವನ್ನು ಒಂದುಗೂಡಿಸುವ ಗುರುತರ ಜವಾಬ್ದಾರಿ ಸಾಹಿತ್ಯ ವಲಯದ ಮೇಲಿರುವುದನ್ನು ಯಾರಿಂದಲೂ ಅಲ್ಲಗಳೆಯಲಾಗುವುದಿಲ್ಲ. ಬಹುಸಂಖ್ಯಾವಾದ ಪ್ರಬಲವಾಗುತ್ತಿರುವ ಕಾಲಘಟ್ಟದಲ್ಲಿ ಇದು ಹಿನ್ನಲೆಗೆ ಸರಿಯುತ್ತಿರುವುದನ್ನೂ ನಿರ್ಲಕ್ಷಿಸಲಾಗುವುದಿಲ್ಲ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಮಂಡ್ಯದ ಕನ್ನಡ ಸಾಹಿತ್ಯ ಸಮ್ಮೇಳನ ಆಹಾರ ಸಂಸ್ಕೃತಿಯನ್ನು, ಆಹಾರದ ಹಕ್ಕಿನ ಪ್ರಶ್ನೆಯನ್ನು ಮುನ್ನಲೆಗೆ ತಂದಿರುವುದು ಸ್ವಾಗತಾರ್ಹ. ಸಮಾಜದ ಬಹುಸಂಖ್ಯಾತ ವರ್ಗದ ಈ ಆಗ್ರಹಗಳಿಗೆ ಮಾನ್ಯತೆ ನೀಡುವುದು ಸಮ್ಮೇಳನದ ಆಯೋಜಕರ ಹಾಗೂ ಇಡೀ ಸಮಾಜದ ನೈತಿಕ ಹಾಗೂ ಸಾಂವಿಧಾನಿಕ ಕರ್ತವ್ಯ.

ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡದ ಸಾಹಿತ್ಯ ಲೋಕ ಈ ಬಹುಸಾಂಸ್ಕೃತಿಕ ಬೇಡಿಕೆಗೆ ಮನ್ನಣೆ ನೀಡಿ ತನ್ನ ಸಾಹಿತ್ಯಕ ನೈತಿಕತೆಯನ್ನು, ಸಾಂವಿಧಾನಿಕ ಬದ್ದತೆಯನ್ನು, ಸಾಮಾಜಿಕ ಕರ್ತವ್ಯವನ್ನೂ ನಿಭಾಯಿಸುತ್ತದೆ ಎಂದು ಆಶಿಸೋಣ.

ಇದನ್ನೂ ನೋಡಿ: Karnataka legislative assembly Day 02 Live. 16ನೇ ವಿಧಾನಸಭೆಯ ಚಳಿಗಾಲದ ಅಧಿವೇಶನದ ನೇರ ಪ್ರಸಾರ

Donate Janashakthi Media

Leave a Reply

Your email address will not be published. Required fields are marked *