ಭಾರತದ ಹೈನುಗಾರಿಕೆಯ ಆರ್ಥಿಕತೆ ಮತ್ತು ಪ್ರೊ ಕುಮಾರಸ್ವಾಮಿಯವರ ತಪ್ಪು ಅಭಿಪ್ರಾಯಗಳು

ಇದೊಂದು ಬಹುಚರ್ಚಿತ ವಿಷಯ. ಗೋವು ಎನ್ನುವುದು ಅನೇಕರಿಗೆ ಭಾವನಾತ್ಮಕ ವಿಷಯವಾಗಿದ್ದು ಅದರ ಬಗ್ಗೆ ಏನು ಉತ್ಪ್ರೇಕ್ಷೆ ಮತ್ತು ಅವಾಸ್ತವಿಕವಾಗಿ ಹೇಳಿದರೂ ಸಹ ಅದನ್ನು ಒಪ್ಪಿಕೊಳ್ಳುವ ಮನಸ್ಥಿತಿಗೆ ಬಂದು ಬಹಳ ಕಾಲವೇ ಆಗಿದೆ. ಗೋ ಆಧಾರಿತ ಆರ್ಥಿಕತೆಯ ಬಗ್ಗೆ ಮಾತನಾಡುವಾಗ ಕ್ಷೀರ ಕ್ರಾಂತಿಯನ್ನು ಟೀಕಿಸುವುದು, ದೇಸಿ ಹಸುಗಳ ಬಗ್ಗೆ ಅವಾಸ್ತವಿಕ, ಅವೈಜ್ಞಾನಿಕ ಮಾಹಿತಿ ನೀಡಿ ಜನರ ದಿಕ್ಕು ತಪ್ಪಿಸುವುದು, ನಮ್ಮ ದೇಶದ ತಳಿಗಳಿಗೆ ಕ್ರುತಕ ಗರ್ಭಧಾರಣೆಯಿಂದ ಜನಿಸಿದ ಜರ್ಸಿ ಮತ್ತು ಹೆಚ್ ಎಫ್ ಮಿಶ್ರತಳಿಗಳನ್ನು “ವಿದೇಶಿ” ಎಂದು ಜರಿಯುವುದು, ಎಮ್ಮೆ ಹೈನುಗಾರಿಕೆಗೆ ಅತ್ಯಂತ ಶ್ರೇಷ್ಟ ಕೊಡುಗೆ ನೀಡಿದರೂ ಅದರ ಕೊಡುಗೆಯನ್ನು ಎಲ್ಲಿಯೂ ಉಲ್ಲೇಖಿಸದಿರುವುದು ಮತ್ತು ತನ್ಮೂಲಕ ಮಾತರಿಯದ ಮೂಕ ಪಶುಗಳಲ್ಲಿಯೇ ಜಾತೀಯತೆ ಮೆರೆಯುವುದು, ನಮ್ಮ ದೇಶದ ಕೋಟ್ಯಾಂತರ ಹೈನುಗಾರಿಕೆ ಮಾಡುವ ಮತ್ತು ಅದರ ಮೂಲಕ ಬದುಕು ಕಟ್ಟಿಕೊಂಡ ಬಡ ಮಹಿಳೆಯರು, ಕೃಷಿಕಾರ್ಮಿಕರನ್ನು ಅಪಮಾನಿಸುವುದು ನಿರಂತರವಾಗಿ ನಡೆದೇ ಇದೆ. ಭಾರತ

-ಡಾ ಎನ್.ಬಿ.ಶ್ರೀಧರ

ಇದಕ್ಕೆ ಧರ್ಮದ ಲೇಪವಿರುವುದರಿಂದ ಈ ಕುರಿತು ಮುಕ್ತ ಮನಸ್ಸಿನಿಂದ ಚರ್ಚಿಸಲು ಸಹ ಅಂಜುವ ಸ್ಥಿತಿ ಬಂದೊದಗಿರುವುದು ದುರಂತ. ಈ ಹಿಂದಿನ ನನ್ನ ಲೇಖನದಲ್ಲಿ ಶ್ರೀ ಅದೃಶ್ಯ ಶ್ರೀ ಕಾಡಸಿದ್ದೇಶ್ವರ ಸ್ವಾಮಿಗಳು ಗೋವುಗಳ ಬಗ್ಗೆ ಹೇಗೆ ವಾಹಿನಿಯೊಂದರಲ್ಲಿ ಹೈನುರಾಸುಗಳ ಬಗ್ಗೆ ಸುಳ್ಳುಗಳ ಮತ್ತು ಅವೈಜ್ಞಾನಿಕ ವಿಷಯಗಳನ್ನು ಹೇಗೆ ಹೇಳುತ್ತಾರೆ ಎಂಬ ಬಗ್ಗೆ ಸವಿಸ್ತಾರವಾಗಿ ದಾಖಲೆಗಳ ಸಮೇತ ಬರೆದಿದ್ದೆ.

ಪುನ: ಇದಕ್ಕೆ ಮತ್ತೊಬ್ಬರ ಸೇರ್ಪಡೆಯಾಗಿದೆ. ಅವರೇ ಪ್ರೊ: ಬಿ.ಎಂ.ಕುಮಾರಸ್ವಾಮಿಯವರು. ಇವರೂ ಸಹ ಬಹುತೇಕ ಸುಭಾಶ್ ಪಾಳೇಕರ್, ರಾಜೀವ್ ದೀಕ್ಷಿತ್, ಕಾಡಸಿದ್ದೇಶ್ವರರ ವಿಷಯಗಳನ್ನೇ ಪ್ರತಿಪಾದಿಸಿದರೂ ಸಹ ಇವರು ಆರ್ಥಿಕ ತಜ್ಞರೆನಿಸಿಕೊಂಡಿರುವುದರಿಂದ ಇವರು ಒಂದಿಷ್ಟು ಅಂಕಿ ಅಂಶಗಳ ಸಮೇತ ವಿವರಿಸುವುದರಿಂದ ಕೇಳುಗರಿಗೆ ಅವರು ಹೇಳುವುದು ನಿಜ ಅನ್ನಿಸಬಹುದು.

ಅವರು ಗೋವುಗಳ ಬಗ್ಗೆ ಹೈನುಗಾರಿಕೆಯ ಬಗ್ಗೆ, ಹೈನುರಾಸು ಸಾಕಣೆಯ ಬಗ್ಗೆ ತಪ್ಪು ಮಾಹಿತಿ ನೀಡಿದಾಗ ವಾಸ್ತವಿಕ ವೈಜ್ಞಾನಿಕ ವಿಚಾರಗಳನ್ನು ಜನರ ಮುಂದಿಡುವುದು ಅವಶ್ಯಕವಾಗುತ್ತದೆ. ಅವರು ಅನೇಕ ಸಂದರ್ಭದಲ್ಲಿ ಮಾಡಿರುವ ಭಾಷಣಗಳು ಇತ್ಯಾದಿಗಳು ಯುಟ್ಯೂಬ್ ಮತ್ತು ಫೇಸ್ಬುಕ್ ಇತ್ಯಾದಿ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ಈ ಲೇಖನ ಸಿದ್ಧ ಪಡಿಸಲಾಗಿದೆ. ಅವರ ಅಭಿಪ್ರಾಯಗಳು ಹೀಗಿವೆ.

ಇದನ್ನೂ ಓದಿ: ಪಿಯುಸಿ ಫಲಿತಾಂಶ ಪ್ರಕಟ | ಬಾಲಕಿಯರೇ ಮೇಲುಗೈ -ಶೇ.73. 45 ವಿದ್ಯಾರ್ಥಿಗಳು ಉತ್ತೀರ್ಣ

1. ಹಾಲಿನಿಂದ ಹಣ ಮಾಡುವುದಕ್ಕಾಗಿ ವಿದೇಶಿ ತಳಿಗಳಿಂದ ವಿಷ ಹಿಂಡುತ್ತಿದ್ದೇವೆ

ಇದು ಪ್ರೊ:ಕುಮಾರಸ್ವಾಮಿಯವರು ಹೇಳುವ ವಿಷಯ. ಇದೊಂದು ಶುದ್ಧ ಸುಳ್ಳಿನ ಕಂತೆ. ಹಾಲು ವಿಷವಲ್ಲ ಎನ್ನುವುದು ಅತ್ಯಂತ ಸರಳ ವಿಷಯ. ಹಾಲಿನಿಂದ ಈ ವರೆಗೂ ಸಹ ಯಾರಿಗೂ ಸಹ ಏನೂ ತೊಂದರೆಯಾಗಿಲ್ಲ. ಅದು ಇವರಿಗೇಕೆ ಅರ್ಥವಾಗುವುದಿಲ್ಲವೋ ಗೊತ್ತಾಗುವುದಿಲ್ಲ. ಮೊದಲಿಗೆ ನಮ್ಮಲ್ಲಿ ಯಾವುದೂ ” ವಿದೇಶಿ” ಎನ್ನುವ ಅಥವಾ ವಿದೇಶದಿಂದ ತಂದು ನಮ್ಮಲ್ಲಿ ತಂದಿಳಿಸಿದ ಆಕಳುಗಳಿಲ್ಲ. ಬದಲಾಗಿ ನಮ್ಮ ದೇಶದ ಆಕಳುಗಳಿಗೆ ಕೃತಕ ಗರ್ಭಧಾರಣೆಯ ಮೂಲಕ ಹುಟ್ಟಿದ ಜರ್ಸಿ ಅಥವಾ ಹೆಚ್ ಎಫ್ ತಳಿಯ “ಮಿಶ್ರತಳಿ”ಗಳಿವೆ. ಇದು ಒಂದು ತರ “ಮೇಕ್ ಇನ್ ಇಂಡಿಯಾ” ಇದ್ದ ಹಾಗೆ. ಚೈನಾ ಮೂಲದ ರೆಡ್ಮಿ ಫೋನು ಭಾರತದಲ್ಲಿ ಉತ್ಪಾದನೆಯಾದರೆ ಅದು “ಮೇಕ್ ಇನ್ ಇಂಡಿಯಾ” ಆಗುವ ಹಾಗೆ ಇವೂ ಸಹ “ಮೇಕ್ ಇನ್ ಇಂಡಿಯಾ”

2. ಜಾಸ್ತಿ ಹಾಲು ಬರಲು ಹಸುಗಳಿಗೆ ಹಾರ್ಮೋನು ಚುಚ್ಚು ಮದ್ದು ಕೊಡುತ್ತಾರೆ.

ಪಕ್ಕಾ ಸುಳ್ಳು. ಯಾವುದೇ ಚುಚ್ಚು ಮದ್ದು ಹಾಲನ್ನು ಜಾಸ್ತಿ ಮಾಡಲು ಭಾರತದಲ್ಲಿ ಇಲ್ಲ. ರಿ ಕಾಂಬಿನೆಂಟ್ ಬೊವೈನ್ ಸೊಮಾಟೊಟ್ರೋಫಿನ್ ಎಂಬ ಚುಚ್ಚುಮದ್ದು ಹಸುಗಳ ಹಾಲು ಹಿಂಡುವ ಸಾಮಾರ್ಥ್ಯ ಜಾಸ್ತಿ ಮಾಡುತ್ತದೆ ಎಂದು ಹೇಳಲಾಗುತ್ತಿದ್ದರೂ ಸಹ ಅದು ಭಾರತದಲ್ಲಿ ಲಭ್ಯವಿಲ್ಲ. ಅದು ದುಬಾರಿ ಸಹಾ. ಉತ್ತಮ ಪಾಲನೆ ಮತ್ತು ಪೋಷಣೆಯಿಂದ ಮಾತ್ರ ಹೆಚ್ಚಿನ ಹಾಲು ಪಡೆಯಲು ಸಾಧ್ಯ. ಭಾರತದಲ್ಲಿ ಹಾಲು ಹೆಚ್ಚಿಸಲು ನೀಡುವ ಯಾವ ಹಾರ್ಮೋನೂ ಲಭ್ಯವಿಲ್ಲ ಎನ್ನುವ ವಿಷಯ ಕುಮಾರಸ್ವಾಮಿಯವರ ಯಾರಾದರೂ ಸಹ ಗಮನಕ್ಕೆ ತನ್ನಿ. ಮತ್ತೊಂದು ವಿಷಯ. ಆಕ್ಸಿಟೋಸಿನ್ ಎಂಬ ಹಾರ್ಮೋನು ಹಾಲನ್ನು ಎಂದೂ ಹೆಚ್ಚಿಸುವುದಿಲ್ಲ. ಅದು ಉತ್ಪಾದನೆಯಾದ ಹಾಲನ್ನು ತೊರೆಬಿಡುವಂತೆ ಮಾತ್ರ ಮಾದುತ್ತದೆ. ಇದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ.

3. ಡೇರಿ ಹಾಲು ಹಾಲಲ್ಲ. ಹಾಲಾಹಲ.

ಇದೂ ಸಹ ಪ್ರೊ:ಕುಮಾರಸ್ವಾಮಿಯವರು ಹೇಳುವ ಮತ್ತೊಂದು ಶುದ್ಧ ಸುಳ್ಳು. ಇದನ್ನು ಈವರೆಗೂ ಸಹ ಕೆ ಎಂ ಎಫ್ ಅಗಲಿ ಅಥವಾ ಜಿಲ್ಲಾ ಮಟ್ಟದ ಯಾವುದೇ ಹಾಲು ಉತ್ಪಾದಕರ ಒಕ್ಕೂಟಗಳಾಗಲಿ, ರೈತಪರ ಸಂಘಟನೆಗಳಾಗಲಿ ವಿರೋಧ ವ್ಯಕ್ತಪಡಿಸದಿರುವುದು ಅಶ್ಚರ್ಯಕರ ಅಥವಾ ದಿನ ಬೆಳಗಾದರೆ ಇಂತಹ ಅನೇಕರು ಇದೇ ರೀತಿಯ ಅಸಂಬದ್ಧ ಹೇಳಿಕೆ ಕೊಡುವುದರಿಂದ ನಿರ್ಲಕ್ಷಿಸಿರಬಹುದು. ಆದರೆ ಇದೊಂದು ಗಂಭೀರವಾದ ಅಪಾದನೆ. ಡೇರಿ ಹಸುಗಳಿಗೆ ಎಂಟಿಬಯೋಟಿಕ್ ಚುಚ್ಚುತ್ತಾರೆ. ಅದು ಹಾಲಲ್ಲ. ಅದು ಹಾಲಾಹಲ. ಇದು ಪ್ರೊ: ಕುಮಾರಸ್ವಾಮಿಯವರ ತಪ್ಪು ಕಲ್ಪನೆ. ಈ ರೀತಿಯ ಉಡಾಪೆ ಮತ್ತು ಅವೈಜ್ಞಾನಿಕ ಮಾತನ್ನು ನಮ್ಮ ದೇಶದಲ್ಲಿ ಮಾತ್ರ ಹೇಳಲು ಸಾಧ್ಯ. ಇಂತಹವರನ್ನು ವಿರೋಧಿಸದಿದ್ದರೆ ಈ ಕುರಿತು ಸತ್ಯ ತಿಳಿಯದ ಜನ ನಂಬುವ ಸಾಧ್ಯತೆಯೂ ಸಹ ಇದೆ. ಭಾರತೀಯ ನ್ಯಾಯ ಸಂಹಿತೆಯ ಪ್ರಕಾರ ಅವೈಜ್ಞಾನಿಕ ತಪ್ಪು ಕಲ್ಪನೆಗಳನ್ನು ಹರಡುವುದು ದಂಡನೀಯ ಅಪರಾಧ. ಇದು ಆರ್ಥಿಕ ತಜ್ಞರಿಗೆ ಬೇಗ ಮನವರಿಕೆ ಮಾಡಿಸುವ ಅವಶ್ಯಕತೆ ಇದೆ ಅನಿಸುತ್ತದೆ.

ಜೀವನಿರೋಧಕಗಳ ಬಗ್ಗೆ ಪ್ರೊ:ಕುಮಾರಸ್ವಾಮಿಯವರಿಗೆ ಮತ್ತು ಇತರ ಅನೇಕರಿಗೂ ಸಹ ಇರುವ ಇದೊಂದು ದೊಡ್ಡ ತಪ್ಪು ಕಲ್ಪನೆ. ಜೀವನಿರೋಧಕಗಳ ದುರ್ಭಳಕೆ ಜಾಸ್ತಿ ಇರುವುದು ಮನುಷ್ಯ ಚಿಕಿತ್ಸೆಯಲ್ಲಿ. ಮನುಷ್ಯರ ಚಿಕಿತ್ಸೆಗೆ ಶೇ ೮೦ ರಷ್ಟು ಜೀವನಿರೋಧಕಗಳು ಬಳಕೆಯಾದರೆ ಶೇ:20 ಮಾತ್ರ ಪಶುಚಿಕಿತ್ಸೆಯಲ್ಲಿ ಬಳಕೆಯಾಗುತ್ತವೆ. ಮನುಷ್ಯರಲ್ಲಿನ ಸ್ವಯಂ ಜೀವನಿರೋಧಕ ಚಿಕಿತ್ಸೆ, ಇದ್ದಕ್ಕಿದ್ದ ಹಾಗೆ ನಿಲ್ಲಿಸುವುದು, ಆಸ್ಪತ್ರೆಯಲ್ಲಿ ಮನುಷ್ಯ ಚಿಕಿತ್ಸೆಯಿಂದ ಆಗುವ ನಿರೋಧಕತೆ ಪಶುಚಿಕಿತ್ಸೆಗೆ ಬಳಸುವ ಜೀವನಿರೋಧಕ್ಕಿಂತ ಬಹಳ ಜಾಸ್ತಿ.

ಇದು 80:20 ಅನುಪಾತದಲ್ಲಿದೆ. ಪಶುಗಳಲ್ಲಿ ಜೀವನಿರೋಧಕಗಳ ಉಪಯೋಗ ಮನುಷ್ಯರ ದುರುಪಯೋಗಕ್ಕೆ ಹೋಲಿಸಿದರೆ ಕಡಿಮೆ. ಅಷ್ಟಕ್ಕೂ ರೈತರು ಕೇವಲ ಒಂದು ದಿನ ಮಾತ್ರ ಚಿಕಿತ್ಸೆ ಕೊಡಿಸಿ ನಂತರ ಬಿಟ್ಟು ಬಿಡುವುದರಿಂದ ಮತ್ತು ಕ್ಷೇತ್ರಮಟ್ಟದಲ್ಲಿರುವ ಅನೇಕ ದಿನ ಪಶುಚಿಕಿತ್ಸಕರು ಅರ್ಧ ಡೋಸ್ ಮಾತ್ರ ಔಷಧಿಗಳನ್ನು ನೀಡುವುದರಿಂದ ಅದು ಅಂದಾಜು ೧೦ ಲೀಟರ್ ಹಾಲು ಸಂಘದಲ್ಲಿನ 2000 ಲೀಟರ್ ಹಾಲಿನಲ್ಲಿ ನಂತರ ಶೀತಲೀಕರಣ ಕೇಂದ್ರದ 100000 ಲೀಟರ್ ಹಾಲು ಮತ್ತು ಒಕ್ಕೂಟ ಮಟ್ಟದ ೨೫ ಲಕ್ಷ ಲೀಟರ್ ಹಾಲಿನಲ್ಲಿ ಮಿಶ್ರಣಗೊಂಡಾಗ ಅದರ ಪ್ರಮಾಣ ಅತ್ಯಲ್ಪವಾಗುತ್ತದೆ. ಇದನ್ನು ದೊಡ್ಡ ಗಾತ್ರದ ಸಂಗ್ರಹಣಾ ಕೇಂದ್ರದಲ್ಲಿ ಪರೀಕ್ಷೆ ಮಾಡಿದಾಗ ಅತ್ಯಲ್ಪ ಪ್ರಮಾಣದಲ್ಲಿದ್ದು ಇದರಿಂದ ಗ್ರಾಹಕರ ಆರೋಗ್ಯಕ್ಕೆ ಏನೂ ಹಾನಿಯಿಲ್ಲ ಎನ್ನುವುದು ಸಿದ್ಧವಾಗಿದೆ. ಹಾಲಿಗಿಂತ ತರಕಾರಿ, ಧಾನ್ಯ ಇವುಗಳಲ್ಲಿಯೇ ಕೀಟನಾಶಕ ಮತ್ತು ಜೀವನಿರೋಧಕಗಳ ಪ್ರಮಾಣ ಜಾಸ್ತಿ ಇರುತ್ತದೆ. ಆರ್ಥಿಕ ತಜ್ಞರು ಇಷ್ಟೆಲ್ಲಾ ಖಂಡಿತಾ ಯೋಚಿಸಿರುವುದಿಲ್ಲ.

ಆರ್ಥಿಕ ತಜ್ಞರಾದ ಒಬ್ಬರು ಒಂದಿಷ್ಟೂ ಅಧ್ಯಯನ ಮಾಡದೇ ಈ ರೀತಿ ಹೇಳಿದಾಗ ದಿನವೂ ನಂದಿನಿ ಹಾಲನ್ನು ಬಳಸುವ ಲಕ್ಷಾಂತರ ಗ್ರಾಹಕರು ಮತ್ತು ಇದನ್ನು ಉತ್ಪಾದಿಸುವ ಲಕ್ಷಾಂತರ ಬಡ ರೈತರು ಮೇಲೆ ಯಾವ ಸಂದೇಶ ಹೋಗುತ್ತದೆ? ಇದರಿಂದ ಗೋ ಆಧಾರಿತ ಆರ್ಥಿಕತೆಯ ಪರಿಸ್ಥಿತಿ ಏನಾಗುತ್ತದೆ? ಆದರೆ ಇಂತಹವರ ಭಾಷಣವನ್ನು ಕೇಳುವವರ ಸಂಖ್ಯೆ ಕಡಿಮೆಯಾಗಿ ಬಹಳ ದಿನಗಳೇ ಆಗಿವೆ. ಬಹುಶ ಕ್ರಮೇಣ ಇವರು ಜನಮಾನಸದಿಂದ ದೂರವಾಗುವ ದಿನಗಳು ದೂರವಿಲ್ಲ.

4. ಭಾರತೀಯ ತಳಿಗಳು ಭುಜ (ಹಂಪ್) ಹೊಂದಿದ್ದು ಇವು ಸೂರ್ಯಕೇತು ನಾಡಿಗಳಿವೆ ಮತ್ತು ಅದರಿಂದ ಅವು ಸೂರ್ಯನಿಂದ ಸೋಲಾರ್ ಪ್ಯಾನಲ್ ತರಾ ಶಕ್ತಿಯನ್ನು ಎಳೆದುಕೊಳ್ಳುತ್ತವೆ.

ಈ ವಿಷಯವನ್ನು ಆರ್ಥಿಕ ತಜ್ಞರ ಕಿವಿಗೆ ಯಾರು ಹಾಕಿದ್ದಾರೆಯೋ ಗೊತ್ತಿಲ್ಲ. ನಮ್ಮ ಬಾಸ್ ಇಂಡಿಕಸ್ ವರ್ಗಕ್ಕೆ ಸೇರಿದ ಗಂಡುಗಳಲ್ಲಿ ಇದು ಒಂದು ಸಾಮಾನ್ಯ ಆಕೃತಿ. ಸ್ನಾಯು, ಇದರೊಳಗೆ ನಿರ್ದಿಷ್ಟವಾಗಿ ರೋಂಬಾಯ್ಡ್ ಸ್ನಾಯು, ಜೊತೆಗೆ ಸಂಯೋಜಕ ಅಂಗಾಂಶ. ಕೆಲವೊಂದು ರಕ್ತನಾಳಗಳು, ನರಗಳು ಇತ್ಯಾದಿಗಳು ಎಲ್ಲಾ ಅಂಗಗಳಂತೆ ಇರುತ್ತವೆ. ಒಂಟೆಯ ಡುಬ್ಬದಲ್ಲಿ ಕೊಬ್ಬು ಶೇಖರಣೆ ಸಾಕಷ್ಟು ಇರುತ್ತಿದ್ದು ಇದು ಮಾಂಸದ ಆಗರ. ಇದರ ಮಾಂಸ ಕೆಲವರಿಗೆ ಬಲು ಇಷ್ಟ ಮತ್ತು ಇದನ್ನು “ಕುಪಿಮ್” ಅಥವಾ “ಹಂಪ್ ರೋಸ್ಟ್” ಎಂದು ಕರೆಯಲಾಗುತ್ತದೆ.

ಇದರಲ್ಲಿ ಸೂರ್ಯಕೇತು ನಾಡಿಗಳಿವೆ ಎಂಬುದು ಪಕ್ಕಾ ತಪ್ಪು ಕಲ್ಪನೆ ಮತ್ತು ಅದರಿಂದ ಅವು ಸೂರ್ಯನಿಂದ ಶಕ್ತಿಯನ್ನು ಎಳೆದುಕೊಳ್ಳುವುದು ಶುದ್ಧ ಸುಳ್ಳು ಮತ್ತು ಕಾಲ್ಪನಿಕ. ಇದರಿಂದ ಉತ್ಪನ್ನವಾಗುವ ಸುವರ್ಣಕ್ಷಾರ, ಸೂರ್ಯಕೇತು ನಾಡಿ, ಕಾಸ್ಮಿಕ್ ಶಕ್ತಿ ಇತ್ಯಾದಿಗಳೆಲ್ಲಾ ಕಾಲ್ಪನಿಕವಾದ ಮತ್ತು ಯಾವುದೇ ಆಧಾರವಿಲ್ಲದ ಹಳಸಲು ಶಬ್ಧಗಳು. ಇಷ್ಟು ಸರಳ ವಿಷಯವನ್ನು ಆರ್ಥಿಕ ತಜ್ಞರೆನಿಸಿಕೊಂಡ ಶ್ರೀ ಕುಮಾರ ಸ್ವಾಮಿಯವರು ತಿಳಿದುಕೊಂಡಿದ್ದು ತಪ್ಪು ಹೇಳಿಕೆ ನೀಡಿ ನಗೆಪಾಟಲಿಗೆ ಈಡಾಗುವ ಪರಿಪಾಟಲು ತಪ್ಪುತ್ತಿತ್ತು. ಅದರಲ್ಲೂ ಸೋಲಾರ್ ಪ್ಯಾನಲ್ ತರ ಅವು ಶಕ್ತಿಯನ್ನು ಸೂರ್ಯನಿಂದ ಎಳೆದುಕೊಳ್ಳುತ್ತವೆ ಎಂಬೆಲ್ಲಾ ವಿಷಯವನ್ನು ನಾಲ್ಕನೆಯ ತರಗತಿಗೆ ಹೋಗುವ ಮಗು ಸಹ ಅಲ್ಲಗಳೆಯುತ್ತದೆ. ಪ್ರೊ: ಕುಮಾರಸ್ವಾಮಿಯವರು ಇದನ್ನೆಲ್ಲಾ ಸಾರ್ವಜನಿಕವಾಗಿ ಹೇಳಿದರೂ ಹೀಗಲ್ಲ ಎಂದು ಯಾರು ಖಂಡಿಸುವುದೇ ಇಲ್ಲ ಅಥವಾ ಹೇಳಿಕೊಳ್ಳಲಿ ಎಂಬ ನಿರ್ಲಕ್ಷ್ಯವಿರಬಹುದು.

5. ಭಾರತೀಯ ತಳಿಗಳ ಬಾಲಕ್ಕೆ ತುದಿಗೆ ಕುಚ್ಚು ಇರುತ್ತದೆ. ವಿದೇಶಿ ತಳಿಗಳಿಗೆ ಇದು ಇರುವುದಿಲ್ಲ. ಕಾರಣ ಅವು ಸೊಳ್ಳೆ, ನೊಣ ಓಡಿಸಿಕೊಳ್ಳಲಾರವು.

ಇದೂ ಸಹ ಮಾನ್ಯ ಕಾಡಸಿದ್ದೇಶ್ವರರ ತರಹ ಮತ್ತೊಂದು ಸುಳ್ಳು. ಜರ್ಸಿ ಮತ್ತು ಹೆಚ್ಎಫ್ ಮಿಶ್ರ ತಳಿಗಳ ಬಾಲದ ತುದಿಗೂ ಸಹ ಕುಚ್ಚು ಇದ್ದೇ ಇರುತ್ತದೆ. ಪ್ರೊ: ಕುಮಾರ ಸ್ವಾಮಿಗಳು ಸರಿಯಾಗಿ ಫೋಟೊದಲ್ಲಾದರೂ ಇದನ್ನು ಗಮನಿಸಿ. ಇನ್ನು ಬಾಲವನ್ನು ಎಲ್ಲಾ ಪಶುಗಳು ಉಪಯೋಗಿಸುವಂತೆ ದೇಶಿ ಹಸುಗಳು, ಎಮ್ಮೆ, ಜರ್ಸಿ, ಹೆಚ್ಎಫ್ ಎಲ್ಲವೂ ಬಳಸುವುದು ನೊಣ ಮತ್ತು ಸೊಳ್ಳೆ ಓಡಿಸಲು ಮತ್ತು ಶರೀರದ ನಿಯಂತ್ರಣ ಕಾದುಕೊಳ್ಳಲು ಬಳಸುತ್ತವೆ. ಬಾಲದ ಉದ್ದದಲ್ಲಿ ಅಂತಹ ಗುರುತರ ವ್ಯತ್ಯಾಸ ಇಲ್ಲ ಮತ್ತು ಇದೊಂದು ಪರಿಗಣಿಸಬಹುದಾದ ಮಹತ್ವದ ವಿಷಯವೇ ಅಲ್ಲ. ಇದಲ್ಲದೇ ಸ್ಥಳೀಯ ತಳಿಗಳು ಇಡೀ ಮೈಯನ್ನು ಬಗ್ಗಿಸುತ್ತವಂತೆ ಆದರೆ ಮಿಶ್ರತಳಿಗಳಿಗೆ ಈ ರೀತಿ ಬಗ್ಗಿಸುವುದು ಸಾಧ್ಯವಿಲ್ಲವಂತೆ. ಅಂಗರಚನಾ ಶಾಸ್ತ್ರದ ಪ್ರಕಾರ ಅಂತಹ ವಿಶೇಷ ವ್ಯತ್ಯಾಸವಿಲ್ಲ ಎಂದು ಹೇಳಬೇಕಾಗುತ್ತದೆ.

6. ವಿದೇಶಿ ಮಿಶ್ರತಳಿಗಳಿಗಳು ಹಾಲು ಹಿಂಡುವ ಯಂತ್ರಗಳು. ಅವುಗಳಿಗೆ ಜಾಸ್ತಿ ಹಿಂಡಿ ಹುಲ್ಲು ಹಾಕಬೇಕು.

ನಿಜ. ಹೆಚ್ಚು ಹಾಲು ನೀಡಲು ಹೆಚ್ಚಿನ ಹಿಂಡಿ, ಹುಲ್ಲು ಹಾಕಲೇಬೇಕು. ಅವುಗಳಿಗೆ ಕೆಚ್ಚಲು ಬಾವು ಮತ್ತು ಇತರ ಕಾಯಿಲೆ ಬರುತ್ತದೆ. ವಾಹನಗಳ ವೇಗ ಜಾಸ್ತಿಯಾದಂತೆ ಹೇಗೆ ಅಪಘಾತದ ಪ್ರಮಾಣ ಜಾಸ್ತಿಯಾಗುತ್ತದೆಯೋ ಹಾಗೆಯೆ ಉತ್ಪಾದನೆ ಜಾಸ್ತಿಯಾದಂತೆ ಅದಕ್ಕೆ ತಕ್ಕಂತೆ ಸರಿಯಾದ ಆಹಾರ ಮತ್ತು ಕಾಳಜಿ ಮಾಡದಿದ್ದರೆ ಕೆಚ್ಚಲು ಬಾವು. ಕಿಟೋಸಿಸ್ ಇತ್ಯಾದಿ ಕಾಯಿಲೆಗಳು ಬರುವುದು ಸಹಜ. ಇದೇ ರೀತಿ ಗುಣಪಡಿಸಲಾರದ ಕೆಚ್ಚಲು ಬಾವು, ನೆಣೆ ಎಲ್ಲವೂ ಸಹ ದೇಶಿ ತಳಿಗೂ ಬರುತ್ತದೆ. ಚರ್ಮಗಂಟು ಕಾಯಿಲೆ ಜಾಸ್ತಿ ಬಾಧಿಸಿದ್ದು ದೇಸಿ ಆಕಳುಗಳನ್ನೆ. ಜ್ಜೀವವಿರುವ ಪ್ರತಿಯೊಂದು ಜೀವಿಗೂ ಸಹ ಕಾಯಿಲೆ ಸಹಜ. ಅದನ್ನು ಸರಿಯಾಗಿ ನಿರ್ವಹ್ಸಬೇಕ್ ಅಷ್ಟೇ. ಹಾಲಿನ ಉತ್ಪಾದನೆ ಜಾಸ್ತಿಯಾದಂತೆ ಪಶು ಆಹಾರ ನೀಡಲೇಬೇಕು.

ನಮ್ಮ ಮಲೆನಾಡು ಗಿಡ್ಡದಂತ ಸ್ಥಳೀಯ ತಳಿಗಳು ಕೊಡುವುದೇ ಗರೀಷ್ಟ 1 ಲೀಟರ್ ಹಾಲು. ಅವುಗಳಿಗೆ ಅವು ಮೇಯುವ ಹಸಿರು/ಒಣ ಹುಲ್ಲು ಸಾಕು. ಆದರೆ 10 ಲೀಟರಿಗಿಂತ ಜಾಸ್ತಿ ಹಾಲು ನೀಡುವ ಹೆಚ್ ಎಫ್ ಮತ್ತು ಜರ್ಸಿ ಮಿಶ್ರತಳಿಗಳಿಗೆ ಅವುಗಳ ಹಾಲಿನ ಉತ್ಪಾದನೆಗೆ ತಕ್ಕಂತೆ ಪೌಷ್ಟಿಕಾಂಶ ಭರಿತ ಆಹಾರ ನೀಡಲೇಬೇಕು. ಇದಲ್ಲದೇ ಎ1 ಮತ್ತು ಎ2 ಎಂಬ ಹಾಲಿನ ಕಲ್ಪನೆ ಮತ್ತು ಇದರ ದುಷ್ಪರಿಣಾಮಗಳಂತೂ ಸತ್ಯಕ್ಕೆ ಅತ್ಯಂತ ದೂರ. ಎ1 ವಿಷಕಾರಿಯಲ್ಲ, ಎ2 ಪೌಷ್ಟಿಕವೂ ಅಲ್ಲ. ನಮ್ಮ ದೇಶದ ಎಲ್ಲಾ ಹೈನುರಾಸುಗಳು ನೀಡುವುದು ಎ೨ ಹಾಲು ಮಾತ್ರ. ಕಾರಣ ಕುಮಾರಸ್ವಾಮಿಗಳು ಹೇಳುವ ಈ ವಿಷಯ ಸಂಪೂರ್ಣ ಅವಾಸ್ತವಿಕ ಮತ್ತು ಸತ್ಯಕ್ಕೆ ದೂರ.

ಅವರು ಉಲ್ಲೇಖಿಸಿದ ಕುವೆಂಪುರವರ “ಹಾದಿಬೀದಿಯಲಿರುವ ಕಸದ ಹುಲ್ಲನು ಮೇಯ್ದು ಮನೆಗೈದು ನೀನಮೃತವೀವೆ” ಎಂಬ ವಾಕ್ಯ ಮೆಲುಕಾಡಿಸಿ ಹಾಲು ಉತ್ಪಾದಿಸುವ ಎಲ್ಲಾ ಪ್ರಾಣಿಗಳಿಗೂ ಸಹ ಅದರಲ್ಲಿಯೂ ಎಮ್ಮೆಗಳಿಗೆ ಇದು ಬಹಳ ಅನ್ವಯವಾಗುತ್ತದೆ. ಅವರು ವರನಟ ರಾಜ್‍ಕುಮಾರ್ ಅವರ ಸಂಪತ್ತಿಗೆ ಸವಾಲ್ ಚಿತ್ರದ “ಯಾರೇಕೂಗಾಡಲಿ..ಊರೇ ಹೋರಾಡಲಿ. ಎಮ್ಮೆ ನಿನಗೆ ಸಾಟಿಯಿಲ್ಲ… ಈ ಹಾಡನ್ನು ಮತ್ತೊಮ್ಮೆ ಕೇಳಿದರೆ ಎಮ್ಮೆಯ ಮಹತ್ವ ಅರಿವಾದೀತು.
ಪ್ರೊ:ಕುಮಾರಸ್ವಾಮಿಯವರು “ಗೋಆಧಾರಿತ ಆಧಾರಿತ ಆರ್ಥಿಕತೆಯ ಬಗ್ಗೆ ಹೇಗೆ ಮಾತನಾಡುತ್ತಾರೆಯೋ ಹಾಗೆಯೇ ಎಮ್ಮೆ ಆಧಾರಿತ ಆರ್ಥಿಕತೆಯ ಬಗ್ಗೆಯೂ ಸಹ ಮಾತನಾಡುವುದು ಮತ್ತು ಅಂಕಿ ಅಂಶಗಳನ್ನು ತಿಳಿದುಕೊಳ್ಳುವುದು ಸಹ ಒಳ್ಳೆಯದು. ಅವರಿಗೆ ಆರ್ಥಿಕ ಸಂಬಂಧಿ ಕೆಲವು ಮಾಹಿತಿಯನ್ನು ಇಲ್ಲಿ ಒದಗಿಸಲಾಗಿದೆ. ಇದರ ಆಕರ ಅವಶ್ಯವಿದ್ದರೆ ಒದಗಿಸಲಾಗುವುದು.

ಭಾರತದಲ್ಲಿ ಈವತ್ತಿಗೂ ಯಾವುದೇ ಒಂದರಲ್ಲಿ ಪ್ರಪಂಚದಲ್ಲಿ ನಾವು ಪ್ರಥಮ ಎನಿಸಿಕೊಳ್ಳುವಂತ ಒಂದೇ ವಿಷಯವೆಂದರೆ ಅದು ಹಾಲಿನ ಉತ್ಪಾದನೆ. ಫೆಬ್ರವರಿ 9, 2025 ರಂತೆ ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ ಮತ್ತು ಇಲ್ಲಿನ ಜನಸಂಖ್ಯೆ 142 ಕೋಟಿಯಾಗಿದ್ದು ನಮಗಿಂತ ಹಿಂದಿರುವ ಚೀನಾ 141 ಕೋಟಿ ಜನ ಸಂಖ್ಯೆ ಹೊಂದಿದೆ. ಆಶ್ಚರ್ಯವೆಂಬಂತೆ ಭಾರತವು ಜನಸಂಖ್ಯೆಯಲ್ಲಿ ತನ್ನ ಪ್ರಥಮ ಸ್ಥಾನವನ್ನು ಮುಂದಿನ 75 ವರ್ಷಗಳ ಕಾಲ ಖಚಿತವಾಗಿ ಉಳಿಸಿಕೊಳ್ಳಲಿದೆ ಮತ್ತು ಜನಸಂಖ್ಯೆಯನ್ನು ಅಷ್ಟು ಬೇಗ ತಗ್ಗಿಸಲೂ ಸಾಧ್ಯವಿಲ್ಲ.

ವಿಶ್ವದಲ್ಲಿ ಸುಮಾರು 140 ಮಿಲಿಯನ್ ಎಮ್ಮೆಗಳಿವೆ. ಅವುಗಳಲ್ಲಿ ಶೇಕಡಾ 97 ರಷ್ಟು ಏಷ್ಯಾ ಮತ್ತು ವಿಶ್ವದಲ್ಲಿರುವ ಒಟ್ಟು ಎಮ್ಮೆಗಳ ಪೈಕಿ ಶೇಕಡಾ 53 ರಷ್ಟು ಎಮ್ಮೆಗಳು ಭಾರತದಲ್ಲೇ ಇವೆ. ಸಿಂಧೂ ಮತ್ತು ಗಂಗಾ ನದಿಯ ಪ್ರದೇಶಗಳೇ ಈ ಎಮ್ಮೆಗಳ ಮೂಲಸ್ಥಾನ. ಅನಂತರ ಅವು ಏಷ್ಯಾದ ಎಲ್ಲಾ ಕಡೆ ವ್ಯಾಪಿಸಿದವು.ಸುಮಾರು ಐದು ಸಾವಿರ ವರ್ಷಗಳ ಹಿಂದೆಯೇ ಸಿಂಧೂ ಕಣಿವೆಯಲ್ಲಿ ಎಮ್ಮೆಗಳನ್ನು ಸಾಕಲಾಗುತ್ತಿತ್ತು.

ನಮ್ಮ ದೇಶ ಸಧ್ಯ ಹಾಲಿನ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಸಧ್ಯ ಭಾರತದ ಹಾಲಿನ ಉತ್ಪಾದನೆ 239.3 ಮಿಲಿಯನ್ ಮೆಟ್ರಿಕ್ ಟನ್ ಇರುತ್ತಿದ್ದು ಇಷ್ಟು ಹಾಲನ್ನು 172.8 ಮಿಲಿಯನ್ ಹೈನುರಾಸುಗಳು (ಆಕಳುಗಳು 61 ಮಿಲಿಯನ್+ಎಮ್ಮೆಗಳು 118 ಮಿಲಿಯನ್) ಉತ್ಪಾದಿಸುತ್ತವೆ ಮತ್ತು ತಲಾ ಹಾಲಿನ ಉತ್ಪನ್ನ 1385 ಕಿಲೊ/ಪ್ರತಿ ವರ್ಷ ಇದೆ. ಎರಡನೆಯ ಸ್ಥಾನದಲ್ಲಿನ ಅಮೇರಿಕಾದಲ್ಲಿ 102.7 ಮಿಲಿಯನ್ ಮೆಟ್ರಿಕ್ ಟನ್ ಹಾಲನ್ನು 9.4 ಮಿಲಿಯನ್ ಆಕಳುಗಳು ಉತ್ಪಾದಿಸುತ್ತಿದ್ದು ತಲಾ ಪಶುವಿನ ಹಾಲಿನ ಉತ್ಪನ್ನ ವರ್ಷಕ್ಕೆ 10,925 ಕಿಲೊ ಇದೆ. ಮೂರನೆಯ ಸ್ಥಾನದಲ್ಲಿರುವ ಪಾಕಿಸ್ಥಾನದಲ್ಲಿ 62.6 ಮಿಲಿಯನ್ ಮೆಟ್ರಿಕ್ ಟನ್ ಹಾಲನ್ನು ಒಟ್ಟು 50.8 ಪಶುಗಳು (ಆಕಳುಗಳು 8.5 ಮಿಲಿಯನ್+ಎಮ್ಮೆಗಳು 42.4 ಮಿಲಿಯನ್) ಉತ್ಪಾದಿಸುತ್ತಿದ್ದು ತಲಾ ಹಾಲಿನ ಉತ್ಪನ್ನ 1230 ಕಿಲೊ ಇದೆ.

ನಾಲ್ಕನೆಯ ಸ್ಥಾನದಲ್ಲಿರುವ ಚೀನಾದಲ್ಲಿ 39.9 ಮಿಲಿಯನ್ ಮೆಟ್ರಿಕ್ ಟನ್ ಹಾಲನ್ನು ಅಲ್ಲಿನ ಸುಮಾರು 32.8 ಮಿಲಿಯನ್ ಹೈನುರಾಸುಗಳು (5.8 ಮಿಲಿಯನ್ ಹಸುಗಳು+ 27 ಮಿಲಿಯನ್ ಎಮ್ಮೆಗಳು ) ಉತ್ಪಾದಿಸುತ್ತವೆ. ಇದೊಂದೇ ಕ್ಷೇತ್ರದಲ್ಲಿ ಭಾರತವನ್ನು ಹಿಮ್ಮೆಟ್ಟಲು ಮುಂದಿನ 20-30 ವರ್ಷಗಳಲ್ಲಿ ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ಹೆಮ್ಮೆಯ ಮಾತು. ಇದು ಸಾಧ್ಯವಾಗಿದ್ದು 1970 ರಲ್ಲಿ ಪ್ರಾರಂಭವಾದ ಶ್ವೇತ ಕ್ರಾಂತಿಯ ಮೂಲಕ ಮಿಶ್ರತಳಿಗಳ ಬಳಕೆಯಿಂದ. ನಮ್ಮ ಹಾಲಿನ ಉತ್ಪಾದನೆಯ ಶೇ: 49, ಮಿಶ್ರತಳಿಗಳು ಶೇ: 31.83, ದೇಶಿ ಹಸುಗಳು, ಮೇಕೆ, ಒಂಟೆ, ಕತ್ತೆ ಇತ್ಯಾದಿಗಳೆಲ್ಲಾ ಸೇರಿ ಶೇ: 19.17 ಹಾಲು ಉತ್ಪಾದಿಸುತ್ತವೆ. ಎಮ್ಮೆಗಳ ಹಾಲು ಉತ್ಪಾದನೆ ಶೇ 51 ರಷ್ಟೇ ಇದ್ದರೂ ಸಹ ಮಿಶ್ರತಳಿಗಳ ಯುಗ ಕ್ಷೀರಕ್ರಾಂತಿಯ ನಂತರ ಜಾಸ್ತಿಯಾಗಿದ್ದರಿಂದ ಭಾರತ ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನಕ್ಕೆ ತಲುಪಿದೆ.

ಎಮ್ಮೆಗಳು ಅತ್ಯಂತ ಉತ್ಪಾದಕ ಜೀವಿಗಳು. ಅವು ಅತ್ಯಂತ ಕನಿಷ್ಟ ದರ್ಜೆಯ ಹುಲ್ಲನ್ನು ತಿಂದು ಅತ್ಯಂತ ಗರಿಷ್ಟ ದರ್ಜೆಯ ಹಾಲನ್ನು, ಗೊಬ್ಬರವನ್ನು ಮತ್ತು ಮಾಂಸವನ್ನು ನೀಡುತ್ತವೆ. ಎಮ್ಮೆಗಳ ಮಾಂಸ ರಪ್ತಿನಲ್ಲಿ ಭಾರತದ ಕೊಡುಗೆ ಶೇ: 25 ರಷ್ಟಿದ್ದು 2023 ರಲ್ಲಿ ಮಾಂಸರಪ್ತಿನಿಂದ ದೇಶವು ಭಾರತಕ್ಕೆ ಪ್ರತಿ ಅಂದರೆ ಭಾರತದ ಆದಾಯಕ್ಕೆ ಶೇ: 75,000 ಕೋಟಿ ರೂಪಾಯಿಗಳ ಆದಾಯ ದೊರೆತಿದೆ. ಇದು ಸಣ್ಣ ಮೊತ್ತವಲ್ಲ. ಎಮ್ಮೆಗಳು ಉತ್ಪಾದಿಸುವ ಹಾಲಿನಿಂದ ಭಾರತಕ್ಕೆ ಪ್ರತಿ ವರ್ಷ ರೂ: 5,34,000 ಕೋಟಿಗಳ ಉತ್ಪನ್ನವಿದೆ.

ಇವುಗಳ ಗೊಬ್ಬರ, ಕರುಗಳು, ಮೂತ್ರ, ಚರ್ಮ ಮಾರಾಟದಿಂದ ಎಷ್ಟು ಲಾಭವಾಗಿದೆ ಎಂಬುದಕ್ಕೆ ಮತ್ತು ಸಾವಯವ ಗೊಬ್ಬರಕ್ಕೆ ಎಷ್ಟು ಮೊತ್ತ ಇದೆ ಎಂಬುದು ನಿಖರವಾಗಿ ಅಂಕಿ ಅಂಶ ದೊರೆಯದಿದ್ದರೂ ಸಹ ರೂ:44,798 ಇರಬಹುದು. ಅಲ್ಲದೇ ಇವುಗಳನ್ನು ಉಳುಮೆಗೂ ಸಹ ಬಳಸುವುದರಿಂದ ಇದರಿಂದ ರೂ: 10,000 ಕೋಟಿಗಳು ಮತ್ತು ಅವು ಉಳಿಸುವ 6 ಮಿಲಿಯನ್ ಟನ್ ಡಿಸೇಲ್ ಮತ್ತು ಪೆಟ್ರೋಲ್ ಆಮದು ಮೊತ್ತದ ವಿದೇಶಿ ವಿನಿಮಯ ರೂ: 4000 ಕೋಟಿಗಳು. ಒಟ್ಟು ಮೊತ್ತ ರೂ: 6,67,798-೦೦ ಕೋಟಿಗಳು. ಆದರೆ ಇವುಗಳ ಕಲ್ಯಾಣಕ್ಕಾಗಿ ಖರ್ಚು ಮಾಡುವ ಮೊತ್ತ ಮಾತ್ರ ಕೇವಲ 20-30 ಕೋಟಿ ಇರಬಹುದು.

ಇಷ್ಟೊಂದು ಉಪಕಾರಿಯಾದ ಎಮ್ಮೆಯ ಅಭಿವೃದ್ಧಿಗೆ ಇಷ್ಟು ಸಾಕೆ? ನಾವೆಷ್ಟು ಅನ್ಯಾಯ ಮಾಡುತ್ತಿದ್ದೆವೆ ತಿಳಿಯಿತೇ? ವನ್ಯಜೀವಿಗಳ ರಕ್ಷಣೆಗೆ ರೂ: 6,813.05 ಕೋಟಿಗಳು ಮತ್ತು ದೇಶದ ಆರ್ಥಿಕತೆಗೆ ರೂ: 6,67,798 ಕೋಟಿ ಆದಾಯ ನೀಡುವ ಎಮ್ಮೆಗಳ ಸಂವರ್ಧನೆಗೆ ಅವುಗಳಿಂದಲೇ ಬರುವ ಮೊತ್ತದಲ್ಲಿ ಕೇವಲ ರೂ: 20-30 ಕೋಟಿ ಸಾಕೇ? ಇದನ್ನು ಆರ್ಥಿಕ ತಜ್ಞರಾದ ಪ್ರೊ: ಕುಮಾರ ಸ್ವಾಮಿಯವರು ಚಿಂತನೆ ಮಾಡಲಿ.

ಪ್ರಪಂಚದ ಅತ್ಯಂತ ಶೋಷಿತ ಮತ್ತು ದುರದೃಷ್ಟಕರ ಜೀವಿ ಎಮ್ಮೆ. ನಮ್ಮ ನಾಟಿ ಎಮ್ಮೆಗಳು ಬಹುತೇಕ ವಿನಾಶದ ಅಂಚಿನಲ್ಲಿವೆ ಗೋಹತ್ಯಾ ಪ್ರತಿಬಂಧಕ ಕಾಯ್ದೆ ಗೋವುಗಳಿಗೆ ಮಾತ್ರ ಅನ್ವಯವಾಗುತ್ತದೆ. 12 ವರ್ಷ ಮೇಲಿನ ಎಮ್ಮೆಗಳನ್ನು ವಧಿಸಬಹುದು. ಎಮ್ಮೆಗಳ ಮೇಲೆ ಯಾರಿಗೂ ಯಾವುದೇ ಧಾರ್ಮಿಕ ಗೌರವ ಇಲ್ಲ. ಆಕಳುಗಳನ್ನು “ಗೋಮಾತೆ” ಎಂದು ಕರೆದ ಹಾಗೆ ಯಾರೂ “ಎಮ್ಮೆ ತಾಯಿ” ಅಥವಾ “ಎಮ್ಮೆ ಮಾತೆ” ಎಂದು ಕರೆಯುವುದಿಲ್ಲ.

ಇನ್ನು ಮುಂದೆಯಾದರೂ ಪ್ರೊ: ಕುಮಾರಸ್ವಾಮಿಯವರು ಎಮ್ಮೆ ಆಧಾರಿತ ಆರ್ಥಿಕತೆಯ ಬಗ್ಗೆ ಮಾತನಾಡುತ್ತಾ ಅವರಿಗೆ ಸಂಪರ್ಕವಿರುವ ಮಠ ಮಾನ್ಯಗಳ ಮೂಲಕ ಎಮ್ಮೆಯ ಮೇಲಿನ ಧಾರ್ಮಿಕ ನಿರ್ಬಂಧ ತೆಗೆದು ಹಾಕಿಸಿ ಅದಕ್ಕೊಂದು ಪೂಜ್ಯ ಸ್ಥಾನ ದೊರಕಿಸಿದರೆ ಅಥವಾ ಎಮ್ಮೆಗೂ ಸಹ “ಎಮ್ಮೆ ತಾಯಿ” ಅಥವಾ “ಎಮ್ಮೆ ಮಾತೆ” ಎಂದು ಕರೆಯುವ ಹಾಗೆ ಮಾಡಿದರೆ ಅವರ ಆರ್ಥಿಕ ತಜ್ಞತೆಗೆ ಸಾರ್ಥಕತೆ ಬಂದೀತು ಮತ್ತು ಹೈನುಗಾರಿಕೆಯನ್ನು ಜೀವನಾಧಾರ ಮಾಡಿಕೊಂಡಿರುವ ರಾಜ್ಯದ ಲಕ್ಷಾಂತರ ಗೋಪಾಲಕರ ವೃತ್ತಿಯನ್ನು ಗೌರವಿಸಿದ ಹಾಗಾಗಬಹುದು ಎಂಬುದು ಆಶಯ.

ಚಿತ್ರಗಳು: ಕಾಲ್ಪನಿಕ ಸಾಂಧರ್ಭಿಕ ಕೃತಕ ಬುದ್ಧಿಮತ್ತೆ ಜನ್ಯ

ಇದನ್ನೂ ನೋಡಿ: ಆರ್‌ಎಸ್‌ಎಸ್‌ ಕುರಿತ ಪ್ರಶ್ನೆಗಳನ್ನು ಸಿದ್ಧಪಡಿಸಿದ ಪ್ರಾಧ್ಯಾಪಕಿಗೆ ಜೀವನಪರ್ಯಂತ ನಿಷೇಧ! Janashakthi Media

Donate Janashakthi Media

Leave a Reply

Your email address will not be published. Required fields are marked *