ಶ್ರೀಸಾಮಾನ್ಯರನ್ನು ನಿರ್ವಸಿತಕರನ್ನಾಗಿಸುವ ಆಡಳಿತ ಕ್ರೌರ್ಯಕ್ಕೆ ನ್ಯಾಯಾಂಗ ತಡೆಹಾಕಿದೆ
-ನಾ ದಿವಾಕರ
ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಧ್ಯೇಯ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಸುಸ್ಥಿರ ಬದುಕಿನೆಡೆಗೆ ಕೊಂಡೊಯ್ಯುವುದು. ಸುಸ್ಥಿರ ಅಭಿವೃದ್ಧಿ (Sustained Development) ಎಂಬ ಮಾರುಕಟ್ಟೆ ಮಂತ್ರವನ್ನು ಕ್ಷಣಕ್ಕೊಮ್ಮೆ ಜಪಿಸುತ್ತಲೇ ರೂಪಿಸಲಾಗುತ್ತಿರುವ ಜಾಗತಿಕ ಆರ್ಥಿಕತೆಯಲ್ಲಿ, ಅಭಿವೃದ್ಧಿಯ ಹಾದಿಯಲ್ಲಿ ವಂಚಿತರಾಗಿ ಅಂಚಿಗೆ ತಳ್ಳಲ್ಪಡುತ್ತಿರುವ ಅಪಾರ ಜನಸಂಖ್ಯೆಯ ನಡುವೆ ನಿಂತು ನೋಡಿದಾಗ, ʼಸುಸ್ಥಿರʼ ಎಂಬ ಪದ ಕೇವಲ ಅಲಂಕಾರಿಕವಾಗಿ ಕಾಣುತ್ತದೆ. ಏಕೆಂದರೆ ವ್ಯಕ್ತಿ ಜೀವನದಲ್ಲಿ ಸುಸ್ಥಿರತೆಯನ್ನು ಕಾಣಲು ಪ್ರತಿಯೊಬ್ಬರಿಗೂ ಅಗತ್ಯವಾದ ಪೌಷ್ಟಿಕ ಆಹಾರ, ಗುಣಮಟ್ಟದ ಶಿಕ್ಷಣ, ಉತ್ತಮ ಆರೋಗ್ಯ, ಸೂಕ್ತ ವಸತಿ ಇವುಗಳನ್ನು ಒದಗಿಸಲು ನವ ಉದಾರವಾದಿ ಬಂಡವಾಳಶಾಹಿ ಆರ್ಥಿಕತೆ ನಿರಾಕರಿಸುತ್ತಲೇ ಬಂದಿದೆ. ಸಮಾಜದ ಆರ್ಥಿಕ ತಳಪಾಯವನ್ನು ಹಂತಹಂತವಾಗಿ ಕಟ್ಟುವ ಮೂಲಕ ಸುಭದ್ರ ಜಗತ್ತನ್ನು ನಿರ್ಮಿಸುವ ತಳಸಮಾಜದ ಶ್ರಮಿಕ ಜನತೆ ಅಂತಿಮವಾಗಿ ಅಸ್ಥಿರ ಬದುಕನ್ನೇ ಅವಲಂಬಿಸಬೇಕಾದ ಪರಿಸ್ಥಿತಿಯನ್ನು ಜಗತ್ತು ಎದುರಿಸುತ್ತಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ.
ಈ ಅಸಮಾನತೆಗಳ ನಡುವೆಯೇ ಶ್ರೀಸಾಮಾನ್ಯರ ಬದುಕಿನ ಕನಿಷ್ಠ ಅವಶ್ಯಕತೆಗಳಾದ ಅನ್ನ ಮತ್ತು ಸೂರು ಒದಗಿಸುವ ಜವಾಬ್ದಾರಿಯನ್ನು ಯಾವುದೇ ಆಳ್ವಿಕೆಯಾದರೂ ಹೊರಬೇಕಾಗುತ್ತದೆ. ತಮ್ಮ ಶ್ರಮದ ಮೂಲಕ ಸಮಾಜವನ್ನು ಕಟ್ಟುತ್ತಲೇ ಇರುವ ತಳಸಮಾಜದ ಬಹುಸಂಖ್ಯಾತ ಜನತೆ ಈ ಎರಡೂ ಸವಲತ್ತುಗಳಿಂದ ವಂಚಿತರಾಗುವುದು ನಾಗರಿಕತೆಗೆ ಅಪಮಾನ ಎನಿಸಬೇಕಲ್ಲವೇ ? ಆದರೆ ಬಂಡವಾಳಶಾಹಿಗೆ ಹಾಗೆನಿಸುವುದಿಲ್ಲ. ಹಸಿವೆ ಮತ್ತು ಬಡತನವನ್ನು ಜನತೆ ಜನ್ಮತಃ ಪಡೆದುಕೊಂಡ ಸಮಸ್ಯೆಗಳು ಎಂದು ಭಾವಿಸುವ ಕರ್ಮಠ ಸಾಂಪ್ರದಾಯಿಕ ಆಲೋಚನೆಯ ಹಾಗೆಯೇ ಬಂಡವಾಳ ವ್ಯವಸ್ಥೆಯೂ ಸಹ ತಳಸಮಾಜದ ಶ್ರಮಿಕರ ಬದುಕನ್ನು ಪರಿಭಾವಿಸುತ್ತವೆ. ಹಾಗಾಗಿಯೇ ಬಂಡವಾಳಶಾಹಿ ಮತ್ತು ಸಾಂಪ್ರದಾಯಿಕ ಬಲಪಂಥೀಯ ರಾಜಕಾರಣದ ಜಂಟಿ ಆಳ್ವಿಕೆಯಲ್ಲಿ ತಳಸಮಾಜವನ್ನು ಮತ್ತಷ್ಟು ಅಂಚಿಗೆ ತಳ್ಳುವ ಅಥವಾ ವಂಚಿತರನ್ನಾಗಿಸುವ ಆಡಳಿತ ಕ್ರೌರ್ಯ ಸ್ವೀಕೃತವಾಗಿಬಿಡುತ್ತದೆ.
ಬುಲ್ಡೋಜರ್ ನ್ಯಾಯದ ಪರಿಕಲ್ಪನೆ
ಭಾರತದಲ್ಲಿ ಕಳೆದ ಐದು-ಹತ್ತು ವರ್ಷಗಳಲ್ಲಿ ಮೇಲ್ಪದರ ಸಮಾಜಕ್ಕೆ ಅಪ್ಯಾಯಮಾನವಾಗಿ ಕಂಡಿದ್ದ ʼಬುಲ್ಡೋಜರ್ ನ್ಯಾಯʼ ಎಂಬ ಆಡಳಿತ ಕ್ರೌರ್ಯವನ್ನು ಈ ದೃಷ್ಟಿಯಿಂದಲೇ ನೋಡಬೇಕಿದೆ. ವಿಶೇಷವಾಗಿ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಸಾಮಾಜಿಕ-ಮತೀಯ-ಆರ್ಥಿಕ ಅಪರಾಧಿಗಳನ್ನು ಶಿಕ್ಷಿಸುವ ಒಂದು ಮಾರ್ಗವಾಗಿ ಅಂಥವರ ವಸತಿಗಳನ್ನು ಧ್ವಂಸ ಮಾಡುವ ನೀತಿಗಳು ಜಾರಿಯಲ್ಲಿದ್ದವು. ಈ ಕಾರ್ಯಾಚರಣೆಗೆ ಆರೋಪಿತ ವ್ಯಕ್ತಿಯಿಂದ ಆಗಿರಬಹುದಾದ ಕಾನೂನು ನಿಯಮ ಉಲ್ಲಂಘನೆಗಳು ಯಥೋಚಿತವಾಗಿ ನೆರವಾಗುವುದು ಕಾಕತಾಳೀಯ. ಆದರೆ ಒಬ್ಬ ವ್ಯಕ್ತಿಯ ಅಪರಾಧಕ್ಕೆ ಆತನ/ಆಕೆಯ ಇಡೀ ಕುಟುಂಬವನ್ನೇ ಬೀದಿಪಾಲು ಮಾಡುವುದರ ಔಚಿತ್ಯವಾದರೂ ಏನು ? ಈ ಪ್ರಶ್ನೆಗೆ ಇನ್ನೂ ಉತ್ತರ ಶೋಧಿಸಬೇಕಿದೆ. ಭಯೋತ್ಪಾದನೆ ಅಥವಾ ಸಮಾಜಘಾತುಕ ಚಟುವಟಿಕೆಗಳನ್ನು ವ್ಯಾಖ್ಯಾನಿಸುವಾಗ, ವ್ಯಕ್ತಿಯ ಅಪರಾಧವನ್ನು ಇಡೀ ಸಮಾಜ ಅಥವಾ ಸಮಾಜಕ್ಕೆ ಆರೋಪಿಸುವ ಬಲಪಂಥೀಯ ಆಲೋಚನಾ ಕ್ರಮದ ಮತ್ತೊಂದು ಆಯಾಮವನ್ನು ಬುಲ್ಡೋಜರ್ ನ್ಯಾಯಪರಿಕಲ್ಪನೆಯಲ್ಲೂ ಗುರುತಿಸಬಹುದು.
ಇದನ್ನೂ ಓದಿ: ಟ್ರಂಪ್ ಮತ್ತೆ ಅಧ್ಯಕ್ಷ : ಅಮೆರಿಕನ್ನರು ‘ಮಗ’ನಿಗೆ ಮಣೆ ಹಾಕಿ, ಮಗಳನ್ನು ಮನೆಗೆ ಕಳಿಸಿದ್ದು ಯಾಕೆ? | ಭಾಗ 2
ಏನೇ ಇರಲಿ, ಕೊನೆಗೂ ಭಾರತದ ನ್ಯಾಯಾಂಗ ಮತ್ತೊಮ್ಮೆ ಶ್ರೀಸಾಮಾನ್ಯನ ಬದುಕಿನ ರಕ್ಷಣೆಗೆ ಧಾವಿಸಿರುವುದು ಸ್ವಾಗತಾರ್ಹ ಬೆಳವಣಿಗೆ. ಬುಲ್ಡೋಜರ್ ನ್ಯಾಯ ಸರಳವಾಗಿ ಸ್ವೀಕಾರಾರ್ಹವಲ್ಲ ಎಂದು ಹೇಳಿರುವ ನ್ಯಾ. ಡಿ. ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್ ಪೀಠವು ಈ ಉಪಕ್ರಮ ಯಾವುದೇ ಸುಸಂಸ್ಕೃತ ನ್ಯಾಯಶಾಸ್ತ್ರದಲ್ಲಿ ಒಪ್ಪಿತವಾಗುವುದಿಲ್ಲ ಎಂದು ಹೇಳಿದೆ. ಕಾನೂನು ಉಲ್ಲಂಘಿಸಿ ಕಟ್ಟಡಗಳನು ನಿರ್ಮಿಸಿರುವ ಪ್ರಕರಣಗಳಲ್ಲಿ, ಅಕ್ರಮ ಅತಿಕ್ರಮಣವನ್ನು ತೆರವುಗೊಳಿಸುವ ಅಧಿಕಾರ ಸರ್ಕಾರಗಳಿಗೆ ಇರುವುದಾದರೂ ಕೇವಲ ಆಸ್ತಿಪಾಸ್ತಿಗಳನ್ನು ನಾಶಪಡಿಸುವ ಬೆದರಿಕೆ ಒಡ್ಡಿ ನಾಗರಿಕರ ಧ್ವನಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ. ಈ ಪ್ರಕ್ರಿಯೆಗೆ ಚಾಲನೆ ನೀಡುವ ಮುನ್ನ ಸೂಕ್ತ ಕಾನೂನು ಪ್ರಕ್ರಿಯೆಯನ್ನು ಅನುಸರಿಸುವಂತೆ ಹೊಸ ಮಾರ್ಗಸೂಚಿಗಳನ್ನು ವಿಧಿಸಿದೆ. ಬುಲ್ಡೋಜರ್ ನ್ಯಾಯವನ್ನು ಅನುಸರಿಸುವುದು ಕಾನೂನಾತ್ಮಕ ಅಧಿಕಾರದಿಂದಲ್ಲದೆ ಯಾವುದೇ ವ್ಯಕ್ತಿಯು ಖಾಸಗಿ ಆಸ್ತಿಯಿಂದ ವಂಚಿತನಾಗುವಂತಿಲ್ಲ ಎಂದು ಹೇಳುವ ಸಂವಿಧಾನದ ಅನುಚ್ಚೇದ 300ಎ ಅಡಿಯಲ್ಲಿ ನಾಗರಿಕರಿಗೆ ಒದಗುವ ಸಾಂವಿಧಾನಿಕ ಹಕ್ಕು ಉಲ್ಲಂಘಿಸಿದಂತಾಗುತ್ತದೆ ಎಂದು ನ್ಯಾ ಜೆ. ಬಿ. ಪರ್ದಿವಾಲಾ ಮತ್ತು ನ್ಯಾ. ಮನೋಜ್ ಅವರನ್ನೊಳಗೊಂಡ ಸಂವಿಧಾನ ಪೀಠ ಸ್ಪಷ್ಟವಾಗಿ ಹೇಳಿದೆ.
ಹಾಗೆಂದ ಮಾತ್ರಕ್ಕೆ ಸಾರ್ವಜನಿಕ ಆಸ್ತಿಗಳನ್ನು ಅಕ್ರಮವಾಗಿ ಹೊಂದಿರುವುದಾಗಲೀ, ಅತಿಕ್ರಮಿಸುವುದಾಗಲೀ ಕಾನೂನಾತ್ಮಕವಾಗಿ ಕ್ಷಮಿಸಲಾಗುವುದಿಲ್ಲ ಎಂದೂ ಸುಪ್ರೀಂ ನ್ಯಾಯಪೀಠ ಹೇಳಿದೆ. ಆದರೆ ಪ್ರತಿಯೊಂದು ಪುರಸಭೆ, ನಗರಸಭೆ ಮತ್ತು ನಗರಾಡಳಿತಗಳಲ್ಲಿ ಇಂತಹ ಅತಿಕ್ರಮಣಗಳನ್ನು ನಿವಾರಿಸಲು ಶಾಸನಬದ್ಧ ನಿಬಂಧನೆಗಳು ಇದ್ದೇ ಇರುತ್ತವೆ. ಈ ನಿಬಂಧನೆಗಳನ್ನು ಅನುಸರಿಸುವ ಮೂಲಕ ನಾಗರಿಕರ ವಿರುದ್ಧ ಕ್ರಮ ಜರುಗಿಸುವ ಮೊದಲು ಕೆಲವು ಸುರಕ್ಷತಾ ಕಾರ್ಯವಿಧಾನಗಳನ್ನು ಪಾಲಿಸುವುದು ಅತ್ಯವಶ್ಯ ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಮೂಲತಃ ಅತಿಕ್ರಮಣಗಳನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸುವುದೇ ಆದರೆ ಇಂತಹ ಅತಿಕ್ರಮಣ ಮತ್ತು ಉಲ್ಲಂಘನೆಗಳಿಗೆ ಅವಕಾಶ ಕೊಡುವ ಆಡಳಿತಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಪ್ರಥಮ ಆದ್ಯತೆಯಾಗಬೇಕಿದೆ.
ಸಹಜ ನ್ಯಾಯದ ಚೌಕಟ್ಟಿನೊಳಗೆ
ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿ ಆಳ್ವಿಕೆಯಲ್ಲಿ ಬುಲ್ಡೋಜರ್ ನ್ಯಾಯವನ್ನು ಕಾನೂನು ಪರಿಧಿಯೊಳಗೆ ಮತ್ತು ಅದರಿಂದಾಚೆಗೂ ವ್ಯಾಪಕವಾಗಿ ಜಾರಿಗೊಳಿಸಲಾಗಿದ್ದು, ಬಹುತೇಕ ಪ್ರಕರಣಗಳಲ್ಲಿ ಅಲ್ಪಸಂಖ್ಯಾತರೇ ಇದಕ್ಕೆ ಗುರಿಯಾಗಿರುವುದು ಈ ಪರಿಕಲ್ಪನೆಯ ಸಂಕುಚಿತ ವ್ಯಾಪ್ತಿಯನ್ನು ಸೂಚಿಸುತ್ತದೆ. ಕೋಮು ಗಲಭೆಗಳಲ್ಲಿ, ಸಮಾಜಘಾತುಕ ಚಟುವಟಿಕೆಗಳಲ್ಲಿ ಮತ್ತಿತರ ಯಾವುದೇ ಸಾಮಾಜಿಕ ಕ್ಷೋಭೆಗಳಲ್ಲಿ ಗುರುತಿಸಲ್ಪಟ್ಟ ಆರೋಪಿಗಳ ಮನೆಗಳನ್ನು ಧ್ವಂಸ ಮಾಡುವ ಬುಲ್ಡೋಜರ್ ನ್ಯಾಯ ಕರ್ನಾಟಕದಲ್ಲೂ ಸಹ ಧ್ವನಿಸಿತ್ತು. ʼ ಅಪರಾಧಿಗೆ ತಕ್ಕ ಶಿಕ್ಷೆ ʼ ನೀಡುವ ಈ ಪರಿಕಲ್ಪನೆಯ ಹಿಂದೆ ಸಾಂವಿಧಾನಿಕ ಕಾನೂನು ನಿಯಮಗಳನ್ನು ಉಲ್ಲಂಘಿಸುವ ಸಾಧ್ಯತೆಗಳನ್ನು ಮನಗಂಡೇ ಸುಪ್ರೀಂಕೋರ್ಟ್ ನ್ಯಾಯಪೀಠವು ಹೊಸ ಮಾರ್ಗಸೂಚಿಯನ್ನು ಒದಗಿಸಿದೆ. ರಸ್ತೆ ವಿಸ್ತರಣೆಯ ಯೋಜನೆಯಡಿಯೂ ಮನೆಗಳನ್ನು ಕೆಡವುವ ಮೊದಲು ಅಧಿಕೃತ ದಾಖಲೆ ಅಥವಾ ಭೂನಕ್ಷೆಯ ಪ್ರಕಾರ ರಸ್ತೆಯ ಅಗಲವನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಯಾವುದೇ ಅತಿಕ್ರಮಣ ಆಗಿದೆಯೇ ಎಂದು ಖಚಿತಪಡಿಸಿಕೊಂಡು, ಅತಿಕ್ರಮಣದಾರರಿಗೆ ಲಿಖಿತ ನೋಟಿಸ್ ಜಾರಿಗೊಳಿಸಿ, ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಅದನ್ನು ತಿರಸ್ಕರಿಸುವ ಮುನ್ನ ಅಂತಹ ವ್ಯಕ್ತಿಗೆ ಸೂಕ್ತ ಸಮಜಾಯಿಷಿ ನೀಡಿ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಹೇಳಿದೆ.
ಹಾಗೊಮ್ಮೆ ಅತಿಕ್ರಮಣ ಸಾಬೀತಾದರೂ ಸಹ ನಿವಾಸಿಗಳಿಗೆ ಸೂಕ್ತ ಸಮಯಾವಕಾಶ ನೀಡಬೇಕೇ ಹೊರತು ರಾತ್ರೋರಾತ್ರಿ ಕಟ್ಟಡಗಳನ್ನು ಕೆಡವಿ ಮನೆಯ ಸದಸ್ಯರೆಲ್ಲರನ್ನೂ ಬೀದಿಪಾಲು ಮಾಡಲಾಗುವುದಿಲ್ಲ, ಮನೆಯೊಳಗಿನ ಗೃಹೋಪಯೋಗಿ ವಸ್ತುಗಳನ್ನು ಕಾಪಾಡುವುದೂ ಸಹ ಕಾನೂನಾತ್ಮಕ ಬಾಧ್ಯತೆಯಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಡ್ಡಾಯವಾದ ರಕ್ಷಣೋಪಾಯಗಳನ್ನು ನಿಗದಿಪಡಿಸಿರುವ ನ್ಯಾಯಾಲಯವು ಯಾವುದೇ ಧ್ವಂಸ ಕಾರ್ಯಾಚರಣೆ ಕೈಗೊಳ್ಳುವ ಮೊದಲು ಸರಿಯಾದ ಸಮೀಕ್ಷೆಗಳು, ಲಿಖಿತ ಸೂಚನೆಗಳು ಮತ್ತು ಆಕ್ಷೇಪಣೆಗಳನ್ನು ಪರಿಗಣಿಸಬೇಕು ಎಂದು ತೀರ್ಪು ನೀಡಿದೆ. ಈ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಅಧಿಕಾರಿಗಳು ಶಿಸ್ತು ಕ್ರಮ ಮತ್ತು ಕ್ರಿಮಿನಲ್ ಆರೋಪಗಳನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಆದೇಶಿಸಿದೆ.
ಉತ್ತರ ಪ್ರದೇಶದ ಮಹಾರಾಜ್ಗಂಜ್ ಜಿಲ್ಲೆಯಲ್ಲಿ ಪತ್ರಕರ್ತ ಮನೋಜ್ ತಿಬ್ರೆವಾಲ್ ಆಕಾಶ್ ಅವರ ಪೂರ್ವಜರ ಮನೆಯನ್ನು ಸೆಪ್ಟೆಂಬರ್ 2019 ರಲ್ಲಿ ಧ್ವಂಸಗೊಳಿಸಿದ ಪ್ರಕರಣದಿಂದ ಈ ಮಾರ್ಗಸೂಚಿಗಳು ಹೊರಹೊಮ್ಮಿವೆ. ರಾಷ್ಟ್ರೀಯ ಹೆದ್ದಾರಿಯನ್ನು ವಿಸ್ತರಿಸಲು ಕೆಡವುವುದು ಅಗತ್ಯವೆಂದು ಅಧಿಕಾರಿಗಳು ಪ್ರತಿಪಾದಿಸಿದರೂ, ನಂತರದ ತನಿಖೆಗಳಲ್ಲಿ ಉಲ್ಲಂಘನೆಗಳು ಕಂಡುಬಂದಿದ್ದು, ಅದು ಸರ್ಕಾರದ ಅಧಿಕಾರ ದುರುಪಯೋಗಕ್ಕೆ ಉದಾಹರಣೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್ಎಚ್ಆರ್ಸಿ) ಕೇವಲ 3.70 ಮೀಟರ್ ಆಸ್ತಿಯನ್ನು ಸರ್ಕಾರಿ ಭೂಮಿಯನ್ನು ಅತಿಕ್ರಮಿಸಿಕೊಂಡಿದೆ ಎಂದು ಕಂಡುಹಿಡಿದಿದೆ, ಅಧಿಕಾರಿಗಳು ಯಾವುದೇ ಲಿಖಿತ ಸೂಚನೆ ನೀಡದೆ 5-8 ಮೀಟರ್ಗಳ ನಡುವೆ ಕೆಡವಿದ್ದಾರೆ. ಇದು ಸಂವಿಧಾನಬಾಹಿರ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮನುಷ್ಯನು ಹೊಂದಿರುವ ಅಂತಿಮ ಭದ್ರತೆಯು ತಾನು ವಾಸಿಸುವ ಮನೆ ಆಗಿರುತ್ತದೆ. ಹಾಗಾಗಿ ಕಾನೂನು ಸಾರ್ವಜನಿಕ ಆಸ್ತಿ ಮತ್ತು ಅತಿಕ್ರಮಣಗಳನ್ನು ಕಾನೂನುಬಾಹಿರವಾಗಿ ವಶಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಹಾಗೊಮ್ಮೆ ಅಂತಹ ಶಾಸನಗಳು, ಬುಲ್ಡೋಜರ್ ನ್ಯಾಯದಂತಹ ಕಾಯ್ದೆಗಳು ಅಸ್ತಿತ್ವದಲ್ಲಿದ್ದರೆ ಅದರಲ್ಲಿ ನಾಗರಿಕರಿಗೆ ಒದಗಿಸಲಾದ ಸುರಕ್ಷತೆಗಳನ್ನು ಗಮನಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರಿಗೆ 25 ಲಕ್ಷ ರೂಗಳ ಮಧ್ಯಂತರ ಪರಿಹಾರವನ್ನು ನೀಡುವಂತೆ ನ್ಯಾಯಾಲಯವು ರಾಜ್ಯಕ್ಕೆ ನಿರ್ದೇಶಿಸಿದ್ದು ಮತ್ತು ನೋಟಿಸ್ ನೀಡದೆ ಅಥವಾ ಯಾವುದೇ ದಾಖಲೆಗಳನ್ನು ನೀಡದೆ ಮನೆ ಕೆಡವಲು ಕಾರಣವಾದ ತಪ್ಪಿತಸ್ಥ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮಗಳನ್ನು ಪ್ರಾರಂಭಿಸಲು ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿಗೆ ಆದೇಶಿಸಿದೆ.
ಜಾಗತೀಕರಣದ ಪ್ರಭಾವಳಿಯಲ್ಲಿ
ಸುಪ್ರೀಂಕೋರ್ಟ್ ನ್ಯಾಯಪೀಠದ ಈ ತೀರ್ಪು ದ್ವೇಷ ರಾಜಕಾರಣ ಮತ್ತು ಭಿನ್ನ ದನಿಗಳನ್ನು ದಮನಿಸುವ ಸರ್ಕಾರಗಳ ಆಡಳಿತಾತ್ಮಕ ಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ತರ ಹೆಜ್ಜೆಯಾಗಿ ಕಾಣುತ್ತದೆ. ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಅವ್ಯಾಹತವಾಗಿ ಬಳಸಲಾಗುತ್ತಿದ್ದ ಬುಲ್ಡೋಜರ್ ನ್ಯಾಯ ಮತ್ತು ಬಿಜೆಪಿಯ ಉನ್ನತ ನಾಯಕರಿಂದಲೂ ಪದೇಪದೇ ಉಲ್ಲೇಖಿಸಲಾಗುತ್ತಿದ್ದ ಈ ಆಡಳಿತ ಕ್ರೌರ್ಯಕ್ಕೆ ನ್ಯಾಯಾಂಗ ತಡೆಹಾಕಿದೆ. ಆದರೆ ಈ ತೀರ್ಪಿನಿಂದಾಚೆಗೂ ನಾಗರಿಕರನ್ನು ಕಾಡುವ ಪ್ರಶ್ನೆ ಎಂದರೆ ಆರೋಗ್ಯಕರ ಸಮ ಸಮಾಜದ ನಿರ್ಮಾಣದಲ್ಲಿ ವ್ಯಕ್ತಿಗತ ನೆಲೆಯಲ್ಲಿ ಸರ್ಕಾರಗಳು ಜನತೆಗೆ ಒದಗಿಸಬೇಕಾದ ಮೂಲ ಸೌಕರ್ಯಗಳ ರಕ್ಷಣೆ. ಇದರಲ್ಲಿ ವಸತಿ ಬಹುಮುಖ್ಯವಾದುದು. ಪ್ರತಿಯೊಬ್ಬರಿಗೂ ಸೂರು ಒದಗಿಸುವ ಉದಾತ್ತ ಧ್ಯೇಯವನ್ನು ಸಾಧಿಸುವ ಹಾದಿಯಲ್ಲಿ ಭಾರತ ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಿದೆ.
ಇದನ್ನೂ ನೋಡಿ: ಟ್ರಂಪ್ ಮತ್ತೆ ಅಧ್ಯಕ್ಷ : ಅಮೆರಿಕನ್ನರು ‘ಮಗ’ನಿಗೆ ಮಣೆ ಹಾಕಿ, ಮಗಳನ್ನು ಮನೆಗೆ ಕಳಿಸಿದ್ದು ಯಾಕೆ?Janashakthi Media
2011ರ ಜನಗಣತಿಯ ಪ್ರಕಾರ ದೇಶದಲ್ಲಿ 17 ಲಕ್ಷ ಜನರು ವಸತಿಹೀನರಾಗಿದ್ದಾರೆ. ಕಳೆದ 10-15 ವರ್ಷಗಳಲ್ಲಿ ಸರ್ಕಾರದ ವಸತಿ ಯೋಜನೆಗಳ ಮೂಲಕ ಅನೇಕರು ಈ ನಿರ್ಗತಿಕತೆಯಿಂದ ಹೊರಬಂದಿರಬಹುದಾದರೂ, ಇಂದಿಗೂ ಸಹ ಪಕ್ಕಾ ಮನೆಗಳಿಲ್ಲದ ಕುಟುಂಬಗಳು ಹೇರಳವಾಗಿರುವುದು ಢಾಳಾಗಿ ಕಾಣುತ್ತದೆ. ಮನೆ ಅಥವಾ ಸೂರು ಎಂದರೆ ಕೇವಲ ನಾಲ್ಕು ಗೋಡೆ-ಬಾಗಿಲು ಒಂದು ಸೂರು ಮಾತ್ರವೇ ಅಲ್ಲ, ಅದು ಸುರಕ್ಷಿತ ವಾಸ ಯೋಗ್ಯವಾಗಿರಬೇಕು, ಮನುಷ್ಯನಿಗೆ ಅತ್ಯವಶ್ಯವಾದ ಮೂಲ ಸೌಕರ್ಯಗಳನ್ನು ಹೊಂದಿರಬೇಕು . ಇದು ಚಾರಿತ್ರಿಕವಾಗಿ ಒಪ್ಪಿಕೊಂಡು ಬಂದಿರುವ ಒಂದು ಅಲಿಖಿತ ಮಾನವೀಯ ನಿಯಮ. ಒಂದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದು ಅತ್ಯುನ್ನತ ಮಟ್ಟದಲ್ಲಿ ಪಾಲಿಸಬೇಕಾದ ನಿಯಮವೂ ಹೌದು. ಈ ದೃಷ್ಟಿಯಿಂದ ನೋಡಿದಾಗ ಭಾರತದ ಸಾಮಾಜಿಕ ಪಿರಮಿಡ್ಡಿನ ತಳಮಟ್ಟದಲ್ಲಿರುವ ಅಸಂಖ್ಯಾತ ಜನತೆ ಇಂತಹ ಒಂದು ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ.
ನವ ಉದಾರವಾದ ಮತ್ತು ಬಂಡವಾಳಶಾಹಿ ಆರ್ಥಿಕ ಅಭಿವೃದ್ಧಿ ಮಾರ್ಗದಲ್ಲಿ ಈ ಜನತೆ ಇರುವುದನ್ನೂ ಕಳೆದುಕೊಂಡು ಮತ್ತಷ್ಟು ಅಂಚಿಗೆ ನೂಕಲ್ಪಡುತ್ತಿದ್ದಾರೆ. ಸಣ್ಣಪುಟ್ಟ ನಗರಗಳಲ್ಲೂ ರಸ್ತೆ ಅಗಲೀಕರಣ ಅಥವಾ ಮೇಲ್ಸೇತುವೆ, ಹೆದ್ದಾರಿ ನಿರ್ಮಾಣಗಳಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸುವುದು ಈ ಕೆಳವರ್ಗದವರೇ ಆಗಿರುತ್ತಾರೆ. ಸರ್ಕಾರಗಳು ಅಧಿಕೃತವಾಗಿ ನಿಗದಿಪಡಿಸುವ ಪರಿಹಾರಧನದಲ್ಲಿ ಮತ್ತೊಂದು ಸೂರು ನಿರ್ಮಿಸಿಕೊಳ್ಳುವ ಸಾಮರ್ಥ್ಯವನ್ನು ಮಧ್ಯಮ ವರ್ಗದ ಜನತೆ ಹೊಂದಿರುತ್ತಾರೆ ಆದರೆ ತಳಸ್ತರದಲ್ಲಿರುವ ಜನತೆಯಲ್ಲಿ ಈ ಶಕ್ತಿ ಇರುವುದಿಲ್ಲ. ಸಣ್ಣಪುಟ್ಟ ವ್ಯಾಪಾರಗಳ ಮೂಲಕ ಬದುಕು ಸವೆಸುವ ಇಂತಹ ಸಾವಿರಾರು ಕುಟುಂಬಗಳು ರಸ್ತೆ ಅಗಲೀಕರಣದ ಪರಿಣಾಮವಾಗಿ ವಲಸೆ ಹೋಗಬೇಕಾಗುತ್ತದೆ ಅಥವಾ ಸ್ಥಳಾಂತರದಿಂದಾಗುವ ಸಾಂಸ್ಕೃತಿಕ ಪಲ್ಲಟಗಳಿಗೆ ಬಲಿಯಾಗಿ ತಮ್ಮ ಜೀವನೋಪಾಯದ ಮಾರ್ಗವನ್ನೂ ಮರುರೂಪಿಸಿಕೊಳ್ಳಬೇಕಾಗುತ್ತದೆ. ಜಾಗತೀಕರಣ ಪ್ರವೇಶಿಸಿದ ನಂತರ ಭಾರತದ ಪ್ರತಿಯೊಂದು ಊರಿನಲ್ಲೂ ಈ ಸಮಸ್ಯೆ ಉದ್ಭವಿಸಿರುವುದನ್ನು ಗುರುತಿಸಲು ಪ್ರತ್ಯೇಕ ಸಂಶೋಧನೆಯ ಅಗತ್ಯವಿಲ್ಲ. ನಮ್ಮ ಕಣ್ಣೆದುರಿನ ವಾಸ್ತವ ಚರಿತ್ರೆಯನ್ನು ಹೇಳುತ್ತದೆ.
ಸಂವಿಧಾನದ ಚೌಕಟ್ಟಿನೊಳಗೆ
ಚಮೇಲಿ ಸಿಂಗ್ Vs ಉತ್ತರ ಪ್ರದೇಶ ರಾಜ್ಯ (1996) ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತನ್ನ ಅಂತಿಮ ತೀರ್ಪಿನಲ್ಲಿ ಸಂವಿಧಾನದ 21 ನೇ ಅನುಚ್ಛೇದವನ್ನು ಪುನರುಚ್ಛರಿಸಿ, ಇದರಡಿಯಲ್ಲಿ ನಾಗರಿಕರ ಸೂರಿನ ಹಕ್ಕನ್ನು ಮೂಲಭೂತ ಹಕ್ಕು ಎಂದು ಘೋಷಿಸಿತ್ತು. ಸೂರು ಎಂದರೆ ಸಾಕಷ್ಟು ವಾಸಸ್ಥಳ, ಸುರಕ್ಷಿತ ಮತ್ತು ಯೋಗ್ಯವಾದ ಮೂಲ ರಚನೆಗಳು, ಸ್ವಚ್ಛ ಪರಿಸರ, ಬೆಳಕು, ಗಾಳಿ, ನೀರು, ವಿದ್ಯುತ್ ಮತ್ತು ನೈರ್ಮಲ್ಯವನ್ನು ಒಳಗೊಂಡಿರುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಈ ಸಾಂವಿಧಾನಿಕ ನಿಬಂಧನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ವಿಕಸಿತ ಭಾರತ ಬಹುದೂರ ಸಾಗಬೇಕಿದೆ. ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಯ ಅಭಿವೃದ್ಧಿ ಮಾರ್ಗದಲ್ಲಿ ಗ್ರಾಮಗಳಿಂದ, ನಗರಗಳಿಂದ, ಅರಣ್ಯಗಳಿಂದ, ಸ್ಥಳಾಂತರಗೊಳ್ಳುತ್ತಿರುವ ಅಸಂಖ್ಯಾತ ಜನತೆ ಈ ಸಾಂವಿಧಾನಿಕ ಹಕ್ಕಿಗಾಗಿ ಹೋರಾಡಬೇಕಿದೆ.
ರಾಜಕೀಯ ಅಸ್ತ್ರವಾಗಿ ಬಳಕೆಯಾಗುತ್ತಿದ್ದ ʼಬುಲ್ಡೋಜರ್ ನ್ಯಾಯʼವನ್ನು ಸಾಂವಿಧಾನಿಕವಾಗಿ ಕ್ರಮಬದ್ಧಗೊಳಿಸಿರುವ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಾರ್ಹ. ಸ್ಥಳೀಯ ನೆಲದ ಕಾನೂನು ಉಲ್ಲಂಘಿಸಿ, ಅತಿಕ್ರಮವಾಗಿ ಕಟ್ಟಡಗಳನ್ನು ವಿಸ್ತರಿಸಿರುವ, ನಿರ್ಮಿಸಿರುವ ಶ್ರೀಮಂತರ ವಿರುದ್ಧವೂ ಇಂತಹ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಿದೆ. ಖಾಸಗಿ ನಿವೇ಼ಶನಗಳಲ್ಲಿ ನಿರ್ಮಿಸಲಾಗುವ ಕಟ್ಟಡಗಳು ಸರ್ಕಾರಕ್ಕೆ ಸಲ್ಲಿಸಲಾದ ನಕ್ಷೆಯನ್ನು ಉಲ್ಲಂಘಿಸುವ ಪ್ರಕರಣಗಳು ಇಂದಿಗೂ ಸಹ ಅಡೆತಡೆಯಿಲ್ಲದೆ ನಡೆಯುತ್ತಿರುವುದನ್ನು ಕಾಣಬಹುದಾಗಿದೆ. ಇದಕ್ಕೆ ಮೂಲ ಕಾರಣ ನಗರಾಭಿವೃದ್ಧಿ ಆಡಳಿತದಲ್ಲಿರುವ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ. ಇದನ್ನು ಚಿವುಟಿಹಾಕುವ ನಿಟ್ಟಿನಲ್ಲಿ ಯಾವ ಸರ್ಕಾರವೂ ಮುಂದಾಗದಿರುವುದು ವರ್ತಮಾನದ ದುರಂತ.
ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನ್ಯಾಯಪೀಠದ ಬುಲ್ಡೋಜರ್ ನ್ಯಾಯ ಕುರಿತ ತೀರ್ಪನ್ನು ಸ್ವಾಗತಿಸಬೇಕಿದೆ. ವ್ಯಕ್ತಿಯ ಅಪರಾಧಗಳಿಗೆ ಕುಟುಂಬವನ್ನು ಅಥವಾ ಇಡೀ ಸಮುದಾಯವನ್ನು ಆರೋಪಿಗಳನ್ನಾಗಿ ಮಾಡುವ ದುಷ್ಟ ರಾಜಕೀಯ ಪರಂಪರೆಯನ್ನು ಕೊನೆಗಾಣಿಸುವ ಹಾದಿಯಲ್ಲಿ ಇದು ಕಾನೂನಾತ್ಮಕ ಹೆಜ್ಜೆಯಾಗಿ ಕಾಣುತ್ತದೆ. ಎಲ್ಲರಿಗೂ ಸೂರು ಒದಗಿಸುವ ಸಂವಿಧಾನದ ಆಶಯ ಮತ್ತು ಸರ್ಕಾರಗಳ ಭರವಸೆಯನ್ನು ಸಾಕಾರಗೊಳಿಸುವ ಹಾದಿಯಲ್ಲಿ ಅಡ್ಡಬರುವ ಬಂಡವಾಳಶಾಹಿ ಆರ್ಥಿಕ ಮಾದರಿಯ ಬಗ್ಗೆ ಪುನರಾವಲೋಕನ ನಡೆಸುವ ಜವಾಬ್ದಾರಿ ನಾಗರಿಕರ ಮತ್ತು ನಾಗರಿಕ ಸಂಘಟನೆಗಳ ಮೇಲಿದೆ. ರಾಜಕೀಯ ಸಮಾನತೆಯೊಂದಿಗೆ ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಯನ್ನೂ ಸಾಧಿಸುವ ಸಮಸಮಾಜದ ಸಾಂವಿಧಾನಿಕ ಕನಸುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಇದು ಪ್ರಜಾಪ್ರಭುತ್ವವನ್ನು ಆರಾಧಿಸುವ ಪ್ರತಿಯೊಬ್ಬರ ಆದ್ಯತೆಯೂ ಆಗಬೇಕಿದೆ.
ಇದನ್ನೂ ಓದಿ: ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ : ಮತಗಟ್ಟೆಗಳಿಗೆ ತೆರಳಿದ ಸಿಬ್ಬಂದಿ