ಸ್ಮಾರ್ಟ್ ಮೀಟರ್ ಹಗರಣದ ಚರ್ಚೆಯೂ, ಮುಚ್ಚಿಟ್ಟ ಗ್ರಾಹಕರ ಸುಲಿಗೆಯ ನೀತಿಯೂ

ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ಗುತ್ತಿಗೆ ಹಗರಣ ದೊಡ್ಡ ಸುದ್ದಿಯಾಗಿದೆ. ರಾಜಕೀಯ ಪಕ್ಷಗಳು ಈ ಹಗರಣಗದ ಬಗ್ಗೆಯಷ್ಟೇ ಮಾತನಾಡುತ್ತಿವೆ. ರಾಜ್ಯ ಬಜೆಟ್ ಅಧಿವೇಶನದಲ್ಲಿ ಬಿಜೆಪಿ ನಾಯಕರೊಬ್ಬರು ಸ್ಮಾರ್ಟ್ ಮೀಟರ್ ಕುರಿತೇ 45 ನಿಮಷಗಳ ಕಾಲ ಮಾತನಾಡಿದರೂ, ಸ್ಮಾರ್ಟ್ ಮೀಟರ್ ಅಳವಡಿಕೆಯ ಉದ್ದೇಶವೇನು? ಆ ನಂತರ, ಗ್ರಾಹಕರು ಅನುಭವಿಸುವ ನೋವೇನು? ಕೃಷಿ ಪಂಪ್ ಸೆಟ್ ಹೊಂದಿರುವ ರೈತರ ಮತ್ತು ಕೃಷಿಯ ಮೇಲಾಗುವ ಪರಿಣಾಮಗಳೇನು? ಈ ಅಂಶಗಳ ಬಗ್ಗೆ ಏನೂ ಮಾತನಾಡಲಿಲ್ಲ. ಸಮವರ್ತಿ ಪಟ್ಟಿಯಲ್ಲಿರುವ ವಿದ್ಯುತ್ ಕ್ಷೇತ್ರದ ರಾಜ್ಯಗಳ ಹಕ್ಕನ್ನು ಒಕ್ಕೂಟ ಸರ್ಕಾರ ಕಸಿದುಕೊಳ್ಳುವ ಬಗ್ಗೆ ಇವರಿಗೆ ಚಿಂತೆಯಿಲ್ಲ. ವಿದ್ಯುತ್ ಕ್ಷೇತ್ರವನ್ನು ಖಾಸಗಿಯವರಿಗೆ ಒಪ್ಪಿಸುವ ಎಲ್ ಪಿ ಜಿ ನೀತಿಗಳನ್ನು ಜನರಿಂದ ಮುಚ್ಚಿಡಲು ರಾಜ್ಯವನ್ನು ಆಳುವ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಪ್ರಯತ್ನಿಸುತ್ತಿವೆ.

-ಸಿ.ಸಿದ್ದಯ್ಯ

ಕರ್ನಾಟಕದಲ್ಲಿ ಸ್ಮಾರ್ಟ್ ಮೀಟರ್ ಗುತ್ತಿಗೆ ಹಗರಣ ದೊಡ್ಡ ಸುದ್ದಿಯಾಗಿದೆ.  ಸ್ಮಾರ್ಟ್ ಮೀಟರ್ ಖರೀದಿ ಪ್ರಕ್ರಿಯೆಯಲ್ಲಿ 15,568 ಕೋಟಿ ರೂಪಾಯಿಗಳ ಬೃಹತ್ ಹಗರಣ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಟೆಂಡರ್ ಪ್ರಕ್ರಿಯೆಯಲ್ಲಿ ಪಕ್ಷಪಾತ ಮತ್ತು ಅಕ್ರಮಗಳನ್ನು ಮಾಡಿದೆ ಎಂದು ಅದು ಆರೋಪಿಸಿದೆ. ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳ ನಾಯಕರು ಈಗ ಮರು ಟೆಂಡರ್‌ ಗೆ ಒತ್ತಾಯಿಸುತ್ತಿದ್ದಾರೆ.

ವಿಧಾನಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಬಿಜೆಪಿ ನಾಯಕರೊಬ್ಬರು ಸ್ಮಾರ್ಟ್ ಮೀಟರ್ ಕುರಿತೇ 45 ನಿಮಷಗಳ ಕಾಲ ಮಾತನಾಡಿದ್ದಾರೆ. ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವವರು ಸ್ಮಾರ್ಟ್ ಮೀಟರ್ ಗಳನ್ನು ಖಡ್ಡಾಯವಾಗಿ ಅಳವಡಿಸಬೇಕು ಎಂಬುದರ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಾರಾದರೂ, ಕೇಂದ್ರ ಸರ್ಕಾರ ಸೂಚಿಸಿರುವಂತೆ, ಎಲ್ಲಾ ಮೀಟರ್ ಗಳೂ ಸ್ಮಾರ್ಟ್ ಮೀಟರ್ ಗೆ ಬದಲಾಯಿಸಿಕೊಂಡ ನಂತರ ಕಡ್ಡಾಯ ಮಾಡಬೇಕು ಎಂಬುದು ಅವರ ವಾದ! ಅಂದರೆ, ಎಲ್ಲರೂ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಬೇಕು ಎಂಬುದನ್ನು ಬಿಜೆಪಿಯ ಆ ನಾಯಕರು ಒಪ್ಪುತ್ತಾರೆ ಎಂದಾಯಿತು.

ಇದನ್ನೂ ಓದಿ: ಒಳಮೀಸಲಾತಿ| ಸಿಎಂ ಸಿದ್ದರಾಮಯ್ಯಗೆ ಮಧ್ಯಂತರ ವರದಿ ಸಲ್ಲಿಕೆ

ಸ್ಮಾರ್ಟ್ ಮೀಟರ್ ಅಳವಡಿಕೆಯ ಉದ್ದೇಶ, ಸ್ಮಾರ್ಟ್ ಮೀಟರ್/ ಪ್ರಿಪೇಯ್ಡ್ ಮೀಟರ್ ಅಳವಡಿಕೆಯ ನಂತರ ಗ್ರಾಹಕರು ಅನುಭವಿಸುವ ನಷ್ಟ, ಅವರ ಮೇಲಾಗುವ ಅಧಿಕ ದರದ ಹೊರೆ, ಇದರಿಂದ ಕೃಷಿ ಪಂಪ್ ಸೆಟ್ ಹೊಂದಿರುವ ರೈತರ ಮತ್ತು ಕೃಷಿಯ ಮೇಲಾಗುವ ಪರಿಣಾಮ… ಇವುಗಳ ಬಗ್ಗೆಯೂ ವಿರೋಧ ಪಕ್ಷಗಳು ಬೆಳಕು ಚೆಲ್ಲಿದ್ದರೆ, ಈ ಹೋರಾಟದಲ್ಲಿ ಅವುಗಳ ಪ್ರಾಮಾಣಿಕತೆಯನ್ನು ಮೆಚ್ಚಬಹುದಿತ್ತು.

ವಿದ್ಯುತ್ ಕ್ಷೇತ್ರವು ಸಮವರ್ತಿ ಪಟ್ಟಿಯಲ್ಲಿ ಸೇರುತ್ತದೆ. ಈ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಕೇಂದ್ರ ಸರ್ಕಾರವು, ರಾಜ್ಯ ಸರ್ಕಾರಗಳ ಜೊತೆ ಚರ್ಚಿಸಿ ಸಮ್ಮತಿ ಪಡೆಯಬೇಕು. ಇನ್ನು ಮುಂದೆ ಇದಕ್ಕೆ ಅವಕಾಶಗಳಿರುವುದಿಲ್ಲ. ವಿದ್ಯುತ್ ದರ ನಿಗದಿ ಮಾಡುವ ರಾಜ್ಯ ಸರ್ಕಾರ ತನ್ನ ಈ ಹಕ್ಕನ್ನು ಕಳೆದುಕೊಳ್ಳಲಿದೆ. ರಾಜ್ಯದ ಹಕ್ಕುಗಳನ್ನು ಉಳಿಸಿಕೊಳ್ಳಬೇಕೆಂಬ ಕಿಂಚಿತ್ತಾದಾರೂ ಕಾಳಜಿ ರಾಜ್ಯದ ಜನಪ್ರತಿನಿಧಿಗಳಿಗಿಲ್ಲ. ಸ್ಮಾರ್ಟ್ ಮೀಟರ್ ಕುರಿತು ಚರ್ಚೆ ನಡೆಯುವ ಸಮಯದಲ್ಲಿಯೂ ವಿಧಾನಸಭೆಯ ಬಹುತೇಕ ಆಸನಗಳು ಖಾಲಿ ಇದ್ದವು.

ವಿದ್ಯುತ್ ಕ್ಷೇತ್ರದ ಬಗ್ಗೆಯಾಗಲೀ, ರಾಜ್ಯದ ಜನತೆಯ ಮೇಲಿನ ವಿದ್ಯುತ್ ದರದ ಹೊರೆ ತಪ್ಪಿಸುವುದರ ಬಗ್ಗೆಯಾಗಲೀ, ರಾಜ್ಯದ ಸಾಂವಿಧಾನಿಕ ಹಕ್ಕುಗಳನ್ನು ಉಳಿಸಿಕೊಳ್ಳಬೇಕೆಂಬ ಬಗ್ಗೆಯಾಗಲೀ ನಮ್ಮ ಶಾಸಕರಿಗೆ ಛಲ ಇಲ್ಲದಿರುವುದು ದುರದೃಷ್ಟಕರವಾಗಿದೆ. ನಮ್ಮ ಜನಪ್ರತಿನಿಧಿಗಳಿಗೆ  ನವ ಉದಾರೀಕರಣದ ಭಾಗವಾಗಿ ವಿದ್ಯುತ್ ಕ್ಷೇತ್ರವನ್ನು ಖಾಸಗಿಯವರಿಗೆ ಒಪ್ಪಿಸುವ ಕೇಂದ್ರ ಮತ್ತು ಸರ್ಕಾರದ ನೀತಿಗಳನ್ನು ಜನರಿಂದ ಮುಚ್ಚಿಡಲು ರಾಜ್ಯವನ್ನು ಆಳುವ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಪ್ರಯತ್ನಿಸುತ್ತಿವೆ. ವಿದ್ಯುತ್ ಕ್ಷೇತ್ರದ ಖಾಸಗೀಕರಣದ ಲಾಭ ಪಡೆಯಲೆಂದೇ, ಈ ಪಕ್ಷಗಳ ಹಲವು ರಾಜಕಾರಣಿಗಳು ವಿದ್ಯುತ್ ಉತ್ಪಾಧನೆಯಲ್ಲಿ ತೊಡಗಿಕೊಂಡಿರುವುದನ್ನು ನೋಡಿದರೆ, ಇವರ ಇಂತಹ ನಡೆ ಆಶ್ಚರ್ಯ ತರುವುದಿಲ್ಲ. ಜನರನ್ನು ಸುಲಿಗೆ ಮಾಡಲು ಇವರೆಲ್ಲರೂ ಕಾದು ಕುಳಿತಿದ್ದಾರೆ.

ನವ-ಉದಾರೀಕರಣದ ಪರಿಣಾಮ:

1991ರಲ್ಲಿ ಪಿ.ವಿ. ನರಸಿಂಹರಾವ್ ಸರ್ಕಾರವು ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣ (ಎಲ್ ಪಿ ಜಿ) ನೀತಿಗಳನ್ನು ಒಪ್ಪಿಕೊಂಡಿತು. ಅಂದು ಎಡ ಮತ್ತು ಪ್ರಗತಿಪರ ಸಂಘಟನೆಗಳು, ರೈತ ಮತ್ತು ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರದ ಈ ನೀತಿಗಳನ್ನು ವಿರೋಧಿಸಿ ದೇಶಾದ್ಯಂತ ದೊಡ್ಡ ಮಟ್ಟದ ಹೋರಾಟ ನಡೆಸಿದರು. ಜನತೆಯ ಇಂತಹ ಪ್ರತಿರೋಧದಿಂದಾಗಿ ಎಲ್ ಪಿ ಜಿ ನೀತಿಗಳ ಜಾರಿಯ ವೇಗಕ್ಕೆ ತಡೆವೊಡ್ಡಲು ಸಾಧ್ಯವಾಗಿದೆಯಾದರೂ, ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಾಗಲಿಲ್ಲ. ನಂತರ ಬಂದ ಸರ್ಕಾರಗಳು ಈ ನೀತಿಗಳನ್ನು ಅನುಸರಿಸುತ್ತಾ ಬಂದಿವೆ. ಹಲವು ಸಾರ್ವಜನಿಕ ಕ್ಷೇತ್ರಗಳನ್ನು ಖಾಸಗಿ ಬಂಡವಾಳಗಾರರ ತೆಕ್ಕೆಗೆ ಹಾಕುತ್ತಿವೆ.

ವಾಜಪೇಯಿ ಸರ್ಕಾರದಿಂದ ‘ವಿದ್ಯುತ್ ಕಾಯ್ದೆ 2003’

ವಾಜಪೇಯಿ ಪ್ರಧಾನಿಯಾಗಿದ್ದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು, ವಿದ್ಯುತ್ ವಲಯವನ್ನು ಖಾಸಗೀಕರಣದ ಮುಂದುವರಿದ ಭಾಗವಾಗಿ ‘ವಿದ್ಯುತ್ ಕಾಯ್ದೆ 2003’ ಅನ್ನು ಅಸ್ತಿತ್ವಕ್ಕೆ ತಂದಿತು. ಇದರ ಮೂಲಕ ವಿದ್ಯುತ್ ಉತ್ಪಾದನೆ ಮಾಡಲು ಖಾಸಗಿ ಬಂಡವಾಳಗಾರರಿಗೆ ಅವಕಾಶ ಕೊಟ್ಟಿತು. ಖಾಸಗಿ ಕಂಪನಿಗಳು ಉತ್ಪಾದನೆ ಮಾಡುವ ವಿದ್ಯುತ್ ಅನ್ನು ಸಾರ್ವಜನಿಕ ಕ್ಷೇತ್ರದ ವಿತರಣಾ ಕಂಪನಿಗಳು ಖರೀದಿ ಮಾಡಿ ವಿತರಣೆ ಮಾಡುತ್ತಿವೆ. ಈ ಖರೀದಿ ವ್ಯವಹಾರದಲ್ಲೂ ಖಾಸಗಿ ವಿದ್ಯುತ್ ಉತ್ಪಾದನಾ ಕಂಪನಿಗಳು ಸರ್ಕಾರದ ಮೇಲೆ ಪ್ರಭಾವ ಬೀರುವ ಮೂಲಕ  ದುಬಾರಿ ದರಕ್ಕೆ ವಿದ್ಯತ್ ಖರೀದಿ ಮಾಡುವಂತೆ ನೋಡಿಕೊಂಡಿವೆ. ಇಂದು ಎಲ್ಲಾ ರೀತಿಯ ಗ್ರಾಹಕರಿಗೆ ವಿದ್ಯುಚ್ಛಕ್ತಿ ದುಬಾರಿಯಾಗಲು ಖಾಸಗಿ ಕಂಪನಿಗಳ ಒಲವುಳ್ಳ ಸರ್ಕಾರದ ನೀತಿಗಳೇ ಕಾರಣ.

ಮೋದಿ ಸರ್ಕಾರದಿಂದ ವಿದ್ಯುತ್ (ತಿದ್ದುಪಡಿ) ಮಸೂದೆ-2022

ದೇಶದಲ್ಲಿ ವಿದ್ಯುತ್ ವಲಯವನ್ನು ಸಂಪೂರ್ಣ ಖಾಸಗೀಕರಣ ಮಾಡುವ ಗುರಿಯೊಂದಿಗೆ, ವಿದ್ಯುತ್ (ತಿದ್ದುಪಡಿ) ಮಸೂದೆ-2022 ನ್ನು ಸಂಸತ್ತಿನಲ್ಲಿ ಮಂಡಿಸಿತು. ವಿದ್ಯುತ್ ಉತ್ಪಾದನೆ, ಸಾಗಣೆ ಮತ್ತು ವಿತರಣೆ ಈ ಮೂರು ವಿಭಾಗಗಳನ್ನು ಖಾಸಗಿ ಬಂಡವಾಳಗಾರರಿಗೆ ಒಪ್ಪಿಸಲು ಈ ಮಸೂದೆ ಅವಕಾಶ ನೀಡುತ್ತದೆ.

ವಿದ್ಯುತ್ (ಗ್ರಾಹಕರ ಹಕ್ಕುಗಳು) ನಿಯಮಗಳು, 2020 ಅನ್ನು ವಿದ್ಯುತ್ (ಗ್ರಾಹಕರ ನಿಯಮಗಳು) ತಿದ್ದುಪಡಿ ನಿಯಮಗಳು, 2023 ಗೆ ಬದಲಾಯಿಸಲಾಗಿದೆ. ಕೇಂದ್ರ ವಿದ್ಯುತ್ ಸಚಿವಾಲಯವು ಜೂನ್ 14 ರಂದು ಸರ್ಕಾರಿ ಗೆಜೆಟ್‌ನಲ್ಲಿ ಇದನ್ನು ಸದ್ದಿಲ್ಲದೆ ಪ್ರಕಟಿಸಿದೆ. ಇದರ ಪ್ರಕಾರ ಗೃಹ ಬಳಕೆ ಸೇರಿದಂತೆ ಎಲ್ಲ ವಿದ್ಯುತ್ ಸಂಪರ್ಕಗಳಿಗೂ ಸ್ಮಾರ್ಟ್ ಮೀಟರ್ ಅಳವಡಿಸಬೇಕು. ಅಲ್ಲದೆ, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳಲ್ಲಿ 19 ಕಿಲೋವ್ಯಾಟ್‌ಗಿಂತ ಹೆಚ್ಚು ವಿದ್ಯುತ್ ಬಳಸುವ ಗ್ರಾಹಕರಿಗೆ (ಕೃಷಿ ಗ್ರಾಹಕರನ್ನು ಹೊರತುಪಡಿಸಿ) ಏಪ್ರಿಲ್ 1, 2024 ರ ಮೊದಲು TOD (Time of Day-ದಿನದ ಸಮಯ) ಮೀಟರ್‌ಗಳನ್ನು ಅಳವಡಿಸಬೇಕು.

ಪ್ರಿಪೇಯ್ಡ್ ವಿದ್ಯುತ್ ಮೀಟರ್

ಪ್ರಿಪೇಯ್ಡ್ ವಿದ್ಯುತ್ ಮೀಟರ್ ಅಳವಡಿಕೆಗೆ ಸಂಬಂಧಿಸಿದಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ ಸಿ) ಆಗಸ್ಟ್ 16, 2023 ರಂದು ಕರಡು ಪ್ರಕಟಣೆ ಹೊರಡಿಸಿತು. ಪ್ರಿಪೇಯ್ಡ್ ವಿದ್ಯುತ್ ಮೀಟರ್ ಅಳವಡಿಕೆ ಕಡ್ಡಾಯವಲ್ಲ, ಇಷ್ಟ ಪಡುವವರು ಅಳವಡಿಕೊಳ್ಳಬಹುದು ಎಂದು ಆಯೋಗ ಹೇಳಿತ್ತು. “ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಪೂರ್ವ-ಪಾವತಿಸಿದ ಸ್ಮಾರ್ಟ್ ಮೀಟರಿಂಗ್) ನಿಯಮಗಳು, 2023” ಎಂಬ ಈ ಕರಡು ನಿಯಮಗಳಿಗೆ ಸಂಬಂಧಿಸಿದಂತೆ ಯಾವುದಾದರೂ ಆಕ್ಷೇಪಣೆಗಳಿದ್ದರೆ ಸಾರ್ವಜನಿಕರು ಗೆಜೆಟ್ ಪ್ರಕಟಣೆಯ 30 ದಿನಗಳ ಒಳಗಾಗಿ  ಸಲ್ಲಿಸಬಹುದು ಎಂದು ಅದು ಹೇಳಿತ್ತು. ಈಗ ತಾತ್ಕಾಲಿಕ ಸಂಪರ್ಕ ಮತ್ತು ಹೊಸ ಸಂಪರ್ಕ ಪಡೆಯುವವರು ಕಡ್ಡಾಯವಾಗಿ ಪೂರ್ವ-ಪಾವತಿಸಿದ ಸ್ಮಾರ್ಟ್ ಮೀಟರ್ ಅಳವಡಿಸಿಕೊಳ್ಳಬೇಕು ಎಂದು ಆದೇಶ ಹೊರಡಿಸಿದೆ. ದಿನಗಳು ಕಳೆದಂತೆ ಇದು ಎಲ್ಲರೂ ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಮಾಡುತ್ತಾರೆ.

ಸ್ಮಾರ್ಟ್ ಮೀಟರ್ ಅಳವಡಿಕೆಯ ಪರಿಣಾಮ

ಸ್ಮಾರ್ಟ್ ಮೀಟರ್‌ ಗಳನ್ನು ಅಳವಡಿಸುವುದು ಖಾಸಗೀಕರಣದ ಭಾಗವಾಗಿದೆ. ಖಾಸಗಿ ಯುಟಿಲಿಟಿ ಕಂಪನಿಗಳು ಒಪ್ಪಂದದ ಮೂಲಕ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸುತ್ತವೆ. ಖಾಸಗಿ ಹೂಡಿಕೆದಾರರು ಕೆಲವು ವರ್ಷಗಳವರೆಗೆ ನಿರ್ವಹಣೆ ಕೆಲಸವನ್ನು ಮಾಡುತ್ತಾರೆ. ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯು ಪ್ರತಿ ಮೀಟರ್‌ ಗೆ ಮಾಸಿಕ ಬಾಡಿಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಮೊತ್ತವನ್ನು ನಿಗದಿತ ಸಮಯದಲ್ಲಿ ಗ್ರಾಹಕರಿಗೆ ವಿಧಿಸಬಹುದು. ಭವಿಷ್ಯದಲ್ಲಿ ಈ ಎಲ್ಲಾ ಸ್ಮಾರ್ಟ್ ಮೀಟರ್ ಅನ್ನು ಪ್ರಿಪೇಯ್ಡ್ ಮೀಟರ್ ಆಗಿ ಪರಿವರ್ತಿಸಲಾಗುತ್ತದೆ. ಆ ಸಂದರ್ಭದಲ್ಲಿ, ಗ್ರಾಹಕರು ಮೊದಲೇ ಹಣ ಪಾವತಿ ಮಾಡಿ ವಿದ್ಯುತ್ ಖರೀದಿಸಬೇಕು (ಮೊಬೈಲ್ ಫೋನ್ ಅನ್ನು ರೀಚಾರ್ಜ್ ಮಾಡುವಂತೆ).

ಸಮಯಕ್ಕೆ ಅನುಗುಣವಾಗಿ ಶುಲ್ಕಗಳು

ಸ್ಮಾರ್ಟ್ ಮೀಟರ್ ಗಳು ಪೀಕ್ ಅವರ್‌ನಲ್ಲಿ (ಹೆಚ್ಚಿನ ಬೇಡಿಕೆ ಇರುವ ಸಮಯದಲ್ಲಿ) ವಿದ್ಯುಚ್ಛಕ್ತಿ ಬಳಕೆದಾರರಿಗೆ ಶೇ. 10 ರಿಂದ 20 ರವರೆಗೆ ಹೆಚ್ಚುವರಿ ವಿದ್ಯುತ್ ಶುಲ್ಕವನ್ನು ಲೆಕ್ಕ ಹಾಕುತ್ತವೆ. ಅಂದರೆ, ಸಮಯ ಆಧಾರಿತ ವಿದ್ಯುತ್ ಶುಲ್ಕಗಳು. ವಿದ್ಯುತ್ ಬಳಕೆಯ ಸಮಯವನ್ನು ಮೂರು ವಿತರಣಾ ಸಮಯಗಳಾಗಿ ವಿಂಗಡಿಸಲಾಗಿದೆ.

ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ಬೆಳಿಗ್ಗೆ 6 ರಿಂದ  ಬೆಳಿಗ್ಗೆ 10 ರವರೆಗೆ ಮತ್ತು ಸಂಜೆ 5 ರಿಂದ ರಾತ್ರಿ 10 ರವರೆಗೆ ವಿದ್ಯುತ್ ಬಳಕೆಗಾಗಿ ಗರಿಷ್ಠ ಬೇಡಿಕೆ ಸಮಯ ಎಂದು ಕರೆಯುವ ಮೂಲಕ ಹೆಚ್ಚುವರಿ ವಿದ್ಯುತ್ ಶುಲ್ಕವನ್ನು ವಿಧಿಸುವುದು; ಎಲ್ಲಾ ವಿದ್ಯುತ್ ಗ್ರಾಹಕರಿಗೆ ಗರಿಷ್ಠ ಬೇಡಿಕೆ ಸಮಯದಲ್ಲಿ ಹೆಚ್ಚುವರಿ ವಿದ್ಯುತ್ ಶುಲ್ಕವನ್ನು ನಿರ್ಧರಿಸುತ್ತದೆ. ಏಕೆಂದರೆ ಮಕ್ಕಳು ಓದುವುದು, ಅಡುಗೆ ಮಾಡುವುದು, ದೂರದರ್ಶನ ವೀಕ್ಷಣೆ ಮಾಡುವಂತಹ ಈ ಸಮಯದಲ್ಲಿ ಜನರು ಹೆಚ್ಚು ವಿದ್ಯುತ್ ಬಳಸುತ್ತಾರೆ. ಅದೇ ರೀತಿ ರಾತ್ರಿ 10ರಿಂದ ಬೆಳಗಿನ ಜಾವ 5ರವರೆಗೆ ಹೆಚ್ಚು ಬಳಕೆ ಇಲ್ಲ. ಈ ಸಮಯದಲ್ಲಿ ಸಾಮಾನ್ಯ ದರವನ್ನು ವಿಧಿಸಲಾಗುತ್ತದೆ ಮತ್ತು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ 3 ನೇ ಅವಧಿಯನ್ನು ಅರ್ಧ ಪೀಕ್ ಅವರ್ ಎಂದು ಲೆಕ್ಕಹಾಕಲಾಗುತ್ತದೆ.

ಕಣ್ಮರೆಯಾಗುತ್ತಿರುವ ಉದ್ಯೋಗಾವಕಾಶಗಳು

ಸ್ಮಾರ್ಟ್ ಮೀಟರ್ ಬಂದ ನಂತರ ನೌಕರರು ಎಷ್ಟು ಪ್ರಮಾಣದ ವಿದ್ಯುತ್ ಬಳಕೆ ಮಾಡಲಾಗಿದೆ ಎಂದು ನೋಡಲು, ಮತ್ತು ಬಿಲ್ ಕೊಡಲು ಮನೆ ಮನೆಗೆ ಬರುವುದಿಲ್ಲ. ಈಗಾಗಲೇ ಆ ಕೆಲಸ ಮಾಡುತ್ತಿರುವ ಅಂತಹ  ಸಿಬ್ಬಂದಿಯನ್ನು ಬೇರೆ ಕೆಲಸಕ್ಕೆ ವರ್ಗಾಯಿಸಲಾಗುವುದು. ಕ್ಷೇತ್ರ ಸಿಬ್ಬಂದಿ ಸಂಖ್ಯೆ ಕಡಿಮೆಯಾಗಲಿದೆ. ರೀಚಾರ್ಜ್ ಮಾಡದಿದ್ದರೆ, ಕಂಪ್ಯೂಟರ್ ಮೂಲಕ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಉದ್ಯೋಗಾವಕಾಶಗಳು ಕೈತಪ್ಪಿ, ವಿದ್ಯಾವಂತ ಯುವಕರ ಸರ್ಕಾರಿ ಉದ್ಯೋಗದ ಕನಸು ಕಮರಿ ಹೋಗಲಿದೆ. ಖಾಸಗೀಕರಣವು ಸಾಮಾಜಿಕ ಭದ್ರತೆ ಮತ್ತು ಮೀಸಲಾತಿಯೊಂದಿಗೆ ಸರ್ಕಾರಿ ಉದ್ಯೋಗವನ್ನು, ಸಾಮಾಜಿಕ ನ್ಯಾಯವನ್ನು ಹಳಸುವಂತೆ ಮಾಡಿದೆ ಮತ್ತು ವಿದ್ಯಾವಂತ ಯುವಕರ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ.

ಗ್ರಾಹಕರನ್ನು ಆಯ್ಕೆ ಮಾಡುವ ಹಕ್ಕು;

ವಿದ್ಯುಚ್ಛಕ್ತಿ ಕಾಯ್ದೆಯ ತಿದ್ದುಪಡಿಯ ಆಧಾರದ ಮೇಲೆ ವಿದ್ಯುತ್ ವಿತರಣೆಯಲ್ಲಿ ಬಹು ಪರವಾನಗಿದಾರರನ್ನು ತೊಡಗಿಸಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಗ್ರಿಡ್ ರಚನೆಯಲ್ಲಿ ಅಸ್ತಿತ್ವದಲ್ಲಿರುವ ಪ್ರಸರಣ ಮಾರ್ಗಗಳ ಮೇಲೆ ಖಾಸಗಿ ಉದ್ಯಮಿಗಳು ವಿದ್ಯುತ್ ವಿತರಣೆ ಮಾಡುತ್ತಾರೆ. ಗ್ರಾಹಕರನ್ನು ಆಯ್ಕೆ ಮಾಡುವ ಹಕ್ಕನ್ನು ಸಹ ಅವರಿಗೆ ನೀಡಲಾಗಿದೆ. ಹಾಗಿದ್ದಲ್ಲಿ, ಖಾಸಗಿ ವಿದ್ಯುತ್ ವಿತರಕರು ಹೆಚ್ಚು ವಿದ್ಯುತ್ ಬಳಸುವವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗಾಗಿ ವಿದ್ಯುತ್ ಸಹ, ಮುಕ್ತ ಮಾರುಕಟ್ಟೆಯ ಸರಕಾಗುತ್ತದೆ. ಅನುಕೂಲಸ್ಥರಿಗೆ ಮಾತ್ರ ವಿದ್ಯುತ್ ಇರುತ್ತದೆ. ಖಾಸಗಿ ವ್ಯಕ್ತಿಗಳು ವಿದ್ಯುತ್ ದರ ನಿಗದಿಯ ಹಕ್ಕುಗಳನ್ನು ಪಡೆಯುವುದರಿಂದ ವಿದ್ಯುತ್ ಬಿಲ್ ಗಗನಕ್ಕೇರುತ್ತದೆ.

ಹಲವು ವರ್ಷಗಳಿಂದ ಬಡ ಕುಟುಂಬಗಳು ಉಚಿತವಾಗಿ ಬಳಕೆ ಮಾಡುತ್ತಿದ್ದ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಎಂಬ ವ್ಯವಸ್ಥೆಯನ್ನು ‘ಉಚಿತ ಗೃಹ ಬಳಕೆಯ ವಿದ್ಯುತ್ ಯೋಜನೆ’ಯಾದ ‘ಗೃಹ ಜ್ಯೋತಿ’ಯು ತನ್ನೊಳಗೆ ಸೇರಿಸಿಕೊಂಡಿದೆ. ವಿದ್ಯುತ್ ಕ್ಷೇತ್ರ ಸಂಪೂರ್ಣವಾಗಿ ಖಾಸಗಿಯವರ ತೆಕ್ಕೆಗೆ ಹೋದರೆ, ಬಡ ಗ್ರಾಹಕರನ್ನು ಅವರು ಆಯ್ಕೆಮಾಡಿಕೊಳ್ಳುತ್ತಾರೆಯೇ? ಅಥವಾ, ಖಾಸಗಿ ಕಂಪನಿಗಳು ವಿಧಿಸುವ ದುಬಾರಿ ದರ ಕೊಟ್ಟು ಬಡವರು ವಿದ್ಯುತ್ ಬಳಕೆ ಮಾಡಲಾದೀತೆ? ಇದರೊಂದಿಗೆ ರಾಜ್ಯ ಸರ್ಕಾರದ ‘ಗೃಹಬಳಕೆಗೆ 200 ಯೂನಿಟ್ ವರೆಗಿನ ವಿದ್ಯುತ್ ಉಚಿತ’ ಎಂಬ ಯೋಜನೆ ಉಳಿಯಲಿದೆಯೇ?

ಪಂಪ್ ಸೆಟ್ ಗಳಿಗೂ ಮೀಟರ್:

ಕೃಷಿಗಾಗಿ ಜಮೀನಿನಲ್ಲಿ ಅಳವಡಿಸಿರುವ ಪಂಪ್ ಸೆಟ್ ಗಳಿಗೆ ಉಚಿತವಾಗಿ ವಿದ್ಯುತ್ ಬಳಕೆ ಸೌಲಭ್ಯವಿದೆ. ಒಬ್ಬ ರೈತ ತಿಂಗಳಿಗೆ 10 ಸಾವಿರ ರೂ ವಿದ್ಯುತ್ ಬಳಕೆ ಮಾಡುತ್ತಿದ್ದಾರೆ ಎಂದಿಟ್ಟುಕೊಳ್ಳಿ. ಈಗ ಅದನ್ನು ಅವರು ಕಟ್ಟಬೇಕಿಲ್ಲ. ಬಿಲ್ ಕಟ್ಟಲಿಲ್ಲ ಎಂದು ವಿದ್ಯುತ್ ಕಂಪನಿಯ ನೌಕರ ಬಂದು ವಿದ್ಯುತ್ ಸಂಪರ್ಕ ಕಡಿತ ಮಾಡುವುದಿಲ್ಲ. ಏಕೆಂದರೆ ಸರ್ಕಾರ ಈ ಹಣವನ್ನು ವಿದ್ಯುತ್ ವಿತರಣಾ ಕಂಪನಿಗಳಿಗೆ ಭರ್ತಿ ಮಾಡಿಕೊಡುತ್ತದೆ.

ಆದರೆ, ವಿದ್ಯುತ್ (ತಿದ್ದುಪಡಿ) ಮಸೂದೆ-2022 ಖಾಯ್ದೆಯಾದರೆ ಪಂಪ್ ಸೇಟ್ ಗಳಿಗೂ ಮೀಟರ್ ಅಳವಡಿಸಬೇಕು. ವಿದ್ಯುತ್ ಬಳಕೆ ಮಾಡುವ ಪ್ರತಿಯೊಬ್ಬರಿಗೂ ಮೀಟರ್ ಅಳವಡಿಸಲು ವಿದ್ಯುತ್ ವಿತರಣಾ ಕಂಪನಿಗಳಿಗೆ ಈ ತಿದ್ದುಪಡಿ ಖಾಯ್ದೆ ಅಧಿಕಾರ ಕೊಡುತ್ತದೆ. ರೈತರೂ ಸಹಾ ಪ್ರಿಪೇಯ್ಡ್ ಮೀಟರ್ ಗಳನ್ನೇ ಅಳವಡಿಸಿಕೊಳ್ಳಬೇಕು. ರೈತರಿಗೆ ವಿದ್ಯುತ್ ಸಂಪರ್ಕ ಬೇಕು ಎನಿಸಿದರೆ ಮೊದಲೇ ಹತ್ತು ಸಾವಿರ ರೂ ಹಣ ಕೊಟ್ಟು ರೀಚಾರ್ಜ್ ಮಾಡಿಸಬೇಕು.

ತುಂಬಿರುವ ಹಣ ಖಾಲಿಯಾಗುತ್ತಿದ್ದಂತೆ ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ. ಇಂದು ಬಹಳಷ್ಟು ಬಡ ರೈತರು ಬಿತ್ತನೆ ಮಾಡುವುದರಿಂದ ಹಿಡಿದು ಬೆಳೆ ಕಟಾವು ಮಾಡುವವರೆಗೂ ಸಾಲ ಮಾಡಿಯೇ ವ್ಯವಸಾಯ ಮಾಡುವ ಸ್ಥಿತಿಯಲ್ಲಿದ್ದಾರೆ. ಇನ್ನು ವಿದ್ಯುತ್ ಮೀಟರ್ ರೀಚಾರ್ಜ್ ಮಾಡಿಸಲೂ ಹತ್ತಾರು ಸಾವಿರ ಸಾಲ ಮಾಡಬೇಕಾಗುತ್ತದೆ.

ನೇರ ನಗದು ಯೋಜನೆ ಎಂಬ ವಂಚನೆ:

ರೈತರು ಮತ್ತು ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಯೋಜನೆಯ ಫಲಾನುಭವಿಗಳು ಮೊದಲೇ ಹಣ ಕೊಟ್ಟು ವಿದ್ಯುತ್ ಮೀಟರ್ ಗೆ ರೀಚಾರ್ಜ್ ಮಾಡಿಸಿಕೊಳ್ಳಬೇಕು. ಆ ಹಣವನ್ನು ನೇರನಗದು ಯೋಜನೆ ಮೂಲಕ ಫಲಾನುಭವಿಗಳ ಖಾತೆಗೆ ಹಾಕಲಾಗುವುದು ಎಂಬ ಅಂಶವನ್ನು ಈ ಮಸೂದೆಯಲ್ಲಿ ಸೇರಿಸಲಾಗಿದೆ. ವಿದ್ಯುತ್ (ತಿದ್ದುಪಡಿ) ಮಸೂದೆಗೆ ಬಡ ಜನತೆಯ, ರೈತರ ವಿರೋಧ ಬಾರದಿರುವಂತೆ ನೋಡಿಕೊಳ್ಳಲು ಸರ್ಕಾರ ಪ್ರಾರಂಭದಲ್ಲಿ ಇಂತಹ ಹಲವು ‘ಅಮಿ಼ಷ’ಗಳನ್ನೊಳಗೊಂಡ ಯೋಜನೆಗಳನ್ನು ಘೋಷಣೆ ಮಾಡಬಹುದು. ಅವುಗಳಲ್ಲಿ ‘ನೇರ ನಗದು ಯೋಜನೆ’ ಒಂದು ತಂತ್ರವಷ್ಟೆ.

‘ರೈತರು ಮತ್ತು ಬಡವರ ಹೆಸರಿನಲ್ಲಿ ಉಳ್ಳವರು ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ಜನರ ತೆರಿಗೆಯ ಹಣ ಹೀಗೆ ವ್ಯರ್ಥವಾಗುತ್ತಿದೆ. ಇದನ್ನು ತಪ್ಪಿಸಬೇಕಾಗಿದೆ. ಎಲ್ಲರೂ ಮೀಟರ್ ಅಳವಡಿಕೊಳ್ಳಿ. ಮೊದಲೇ ವಿದ್ಯುತ್ ಬಿಲ್ ಕಟ್ಟಿ. ನಿಮ್ಮ ಹಣವನ್ನು ನೇರ ನಗದು ಯೋಜನೆ ಮೂಲಕ ನಿಮ್ಮ ಖಾತೆಗೆ ತುಂಬಿಕೊಡುತ್ತೇವೆ. ನಮ್ಮ ಸರ್ಕಾರ ರೈತರು ಮತ್ತು ಕಡು ಬಡವರ ಪರವಾಗಿದೆ’ ಎಂದು ನಮ್ಮನ್ನು ನಂಬಿಸಲು ಸರ್ಕಾರ ಮುಂದಾಗುತ್ತದೆ. ಇದೇ ರೀತಿಯ ತಂತ್ರ ಅನುಸರಿಸುವ ಮೂಲಕ ಅಡುಗೆ ಅನಿಲದ ಮೇಲಿನ ಸಬ್ಸಿಡಿಯನ್ನು ಸಂಪೂರ್ಣವಾಗಿ ಹಿಂಪಡೆದದ್ದನ್ನು ಮರೆಯಲಾದೀದೆ? ಇದನ್ನೇ ಉಚಿತ ವಿದ್ಯುತ್ ಬಳಕೆದಾರರಿಗೂ ಅನ್ವಹಿಸಲು ಕೇಂದ್ರ ಸರ್ಕಾರ ಹೊರಟಿದೆ. ವಿವಿಧ ಬಗೆಯಲ್ಲಿ ವಿದ್ಯುತ್ ಗೆ ನೀಡುತ್ತಿರುವ ಸಬ್ಸಿಡಿ ಹಿಂಪಡೆಯುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.  ಇದರಲ್ಲಿ ಇಂತಹ ಅಪಾಯಗಳೂ ಅಡಗಿವೆ ಎಂಬುದನ್ನು ವಿದ್ಯುತ್ ಗ್ರಾಹಕರು ಅರ್ಥಮಾಡಿಕೊಳ್ಳಬೇಕು.

ಇದನ್ನೂ ನೋಡಿ: ದುಡಿಯುವ ಜನರಿಗೆ ದುಡ್ಡಿಲ್ಲ! ಆದರೆ ಶಾಸಕರ ವೇತನ ದುಪ್ಪಟ್ಟಾಯ್ತು!! ಅಂಥಾ ಕಷ್ಟ ಅವರಿಗೇನಿತ್ತು? Janashakthi Media

Donate Janashakthi Media

Leave a Reply

Your email address will not be published. Required fields are marked *