ವಿಶ್ವವಿದ್ಯಾಲಯ ಮುಚ್ಚದಂತೆ ಅಧಿಕೃತ ಆದೇಶ ಹೊರಡಿಸಲು ರಾಜ್ಯ ಸರಕಾರಕ್ಕೆ ಅಧಿವೇಶನದವರೆಗೆ ಗಡುವು : ವಿ.ವಿ ಉಳಿಸಿ ಹೋರಾಟ ಸಮಿತಿ

ಹಾವೇರಿ: ಹಾವೇರಿ ವಿಶ್ವವಿದ್ಯಾಲಯ ಮುಚ್ಚದಂತೆ ಈಗಾಗಲೇ ಸರಕಾರಕ್ಕೆ, ಜಿಲ್ಲೆಯ ಎಲ್ಲ‌ ಶಾಸಕರುಗಳಿಗೆ ಹೋರಾಟ ಸಮಿತಿಯಿಂದ ಹಕ್ಕೊತ್ತಾಯದ ಮನವಿ ಪತ್ರ ಕೊಡಲಾಗಿದೆ. ರಾಜ್ಯ ಸರಕಾರದ ಬಜೆಟ್ ಅಧಿವೇಶನ ಆರಂಭಗೊಳ್ಳುತ್ತಿದ್ದು, ನಮ್ಮ ಮನವಿ ಪತ್ರಕ್ಕೆ ವಿಧಾನಸಭೆ ಅಧಿವೇಶನ ನಡೆಯುವ ಅವಧಿಯಲ್ಲಿ ಸರಕಾರ ಸಕರಾತ್ಮಕ ಪ್ರತಿಕ್ರಿಯೆ ನೀಡಬಹುದೆಂಬ ಆಶಾಭಾವನೆಯಿದ್ದು, ಅಧಿವೇಶನದವರೆಗೂ ಸರಕಾರಕ್ಕೆ ಸಮಾಯಾವಕಾಶ ನೀಡಲಾಗುವುದು. ಅಧಿಕೃತ 

ಅಧಿವೇಶನದ ಅವಧಿಯಲ್ಲಿ ರಾಜ್ಯ ಸರಕಾರ ವಿ.ವಿ ಮುಚ್ಚುವುದಿಲ್ಲ ಎಂದು ಅಧಿಕೃತಗೊಳಿಸಿ ಆದೇಶ ಹೊರಡಿಸಬೇಕು. ಒಂದು ವೇಳೆ ಅಧಿವೇಶನದಲ್ಲಿ ಈ ರೀತಿ ಆದೇಶ ಹೊರಡಿಸದಿದ್ದರೆ, ಮುಂದೆ ಉಗ್ರವಾದ ಹೋರಾಟ ಮಾಡಲು ಅಗತ್ಯಬಿದ್ದರೆ ಹಾವೇರಿ ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ಹಾವೇರಿ ವಿಶ್ವ ವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಸಂಚಾಲಕ ಬಸವರಾಜ ಪೂಜಾರ ಹೇಳಿದರು. ಅಧಿಕೃತ 

ಶುಕ್ರವಾರ ನಗರದ ಪತ್ರಿಕಾಭವನದಲ್ಲಿ ಹಾವೇರಿ ವಿ.ವಿ ಉಳಿಸಿ ಹೋರಾಟ ಸಮಿತಿ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಾವೇರಿ ವಿಶ್ವ ವಿದ್ಯಾಲಯ ಮುಚ್ಚುವುದಿಲ್ಲ ಎಂದು ರಾಜ್ಯ ಸರಕಾರ ಅಧಿಕೃತಗೊಳಿಸುವವರೆಗೆ ನಮ್ಮ ಐಕ್ಯ ಹೋರಾಟ ಮುಂದುವರೆಯುತ್ತದೆ ಎಂದರು. ಅಧಿಕೃತ 

ಇದನ್ನೂ ಓದಿ: ಮೈಸೂರು| ಪೆರೋಲ್‌ ಮೇಲೆ ಹೊರ ಬಂದಿದ್ದ ಖೈದಿ ಆತ್ಮಹತ್ಯೆ

ವಿ.ವಿ ಮುಚ್ಚುವ ಸರಕಾರದ ತೀರ್ಮಾನವನ್ನು ವಿರೋಧಿಸಿ ಹಾಗೂ ಹಾವೇರಿ ವಿಶ್ವವಿದ್ಯಾಲಯ ಉಳಿವಿಗೆ ಒತ್ತಾಯಿಸಿ ಈಗಾಗಲೇ ವಿದ್ಯಾರ್ಥಿ ಸಂಘಟನೆಗಳು, ಉಪನ್ಯಾಸಕರು, ಸಾಹಿತಿ ಕಲಾವಿದರ ಬಳಗ, ದಲಿತ, ದಮನಿತ, ಮಹಿಳಾ, ಕನ್ನಡಪರ ಸಂಘಟನೆಗಳು, ಕಸಾಪ, ರೈತ-ಕಾರ್ಮಿಕ ಸಂಘಟನೆಗಳು ಸೇರಿದಂತೆ ಜಿಲ್ಲೆಯ‌ ಜನ ಸಾಮಾನ್ಯರೂ ಕೂಡ ವಿ.ವಿ ಉಳಿಸುವಂತೆ ಒಕ್ಕೊರಲಿನಿಂದ ಬೀದಿಗಿಳಿದು ಪ್ರತಿಭಟಿಸಿದ್ದಾರೆ.

ಹಾವೇರಿ ವಿ.ವಿ ಉಳಿಸಿ ಹೋರಾಟ ಸಮಿತಿ ಸಭೆಯು ತೀರ್ಮಾನಿಸಿದಂತೆ ಮೊದಲ ಹಂತವಾಗಿ ಜಿಲ್ಲೆಯ ಎಲ್ಲ ಶಾಸಕರುಗಳಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಯು.ಬಿ ಬಣಕಾರ, ಯಾಸೀರ್ ಖಾನ್ ಪಠಾಣ, ಪ್ರಕಾಶ ಕೋಳಿವಾಡ, ರಾಜ್ಯ ಸರಕಾರದ ಮುಖ್ಯ ಸಚೇತಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ  ಸಲೀಂ ಅಹ್ಮದ್, ಸಭಾಪತಿಗಳಾದ ಯು.ಟಿ ಖಾದರ್, ಪ್ರಾಥಮಿಕ ಶಿಕ್ಷಣ ಸಚಿವರಾದ ಮಧು ಬಂಗಾರೆಪ್ಪ, ಮಾಜಿ ಸಂಸದರಾದ ಐ.ಜಿ ಸನದಿ ಹಾಗೂ  ಗಡಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್.ಆರ್ ಪಾಟೀಲ, ಹಾವೇರಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಶಶಿಕಲಾ ಆರ್ ಮಾಳಗಿ, ನಗರಸಭೆ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಸಾತೇನಹಳ್ಳಿ, ನಗರಸಭೆ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಸಂಜೀವಕುಮಾರ ನೀರಲಗಿ, ಹಾವೇರಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್ಎಫ್ಎನ್ ಗಾಜೀಗೌಡ್ರ ಇವರೆಲ್ಲರಿಗೂ ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ವತಿಯಿಂದ ಖುದ್ದಾಗಿ ಭೇಟಿ ಮಾಡಿ ಹಾವೇರಿ ವಿಶ್ವವಿದ್ಯಾಲಯ ಉಳಿಸಲು ಮನವಿ ಸಲ್ಲಿಸಲಾಗಿದೆ.

ಹೆಸ್ಕಾಂ ನಿಗಮ ಅಧ್ಯಕ್ಷರಾದ ಅಜ್ಜಂಫೀರ್ ಖಾದ್ರಿ ಅವರಿಗೂ ಮನವಿ ಕಳುಹಿಸಲಾಗಿದೆ. ವಿಶ್ವ ವಿದ್ಯಾಲಯ ಮುಚ್ಚದಂತೆ ಇವರೆಲ್ಲರೂ ಸರಕಾರದ ಮಟ್ಟದಲ್ಲಿ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ. ಹೋರಾಟ ಸಮಿತಿಯು ಕೂಡ ಸರಕಾರ ಬೇಡಿಕೆ ಈಡೇರಿಸುವ ಆಶಾಭಾವನೆ ಹೊಂದಿದೆ.

ಈ ಕುರಿತಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ, ರಾಜ್ಯಪಾಲರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ  ಸಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ವಿಶ್ವ ವಿದ್ಯಾಲಯ ಮುಚ್ಚದಂತೆ ಹಾಗೂ ಅಗತ್ಯ ಅನುದಾನ ನೀಡುವಂತೆ ಕೋರಿ ರಾಜ್ಯ ಸರಕಾರಕ್ಕೆ ಮನವಿ ಕೂಡ ಸಲ್ಲಿಸಿರುವುದು ಅಭಿನಂದನಾರ್ಹವಾದುದು.

ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿಯವರು ಹಾಗೂ ವಿದಾನಪರಿಷತ್ ಸದಸ್ಯರಾದ ಎಸ್.ವಿ ಸಂಕನೂರು ಅವರು ವಿ.ವಿ ಉಳಿಸುವಂತೆ ಸರಕಾರವನ್ನು ಒತ್ತಾಯಿಸಿದ್ದಾರೆ. ವಿಶ್ವ ವಿದ್ಯಾಲಯ ಉಳಿವಿಗಾಗಿ ಧ್ವನಿ ಎತ್ತುತ್ತಿರುವ ಎಲ್ಲ ಮಹನೀಯರುಗಳಿಗೆ ಹೋರಾಟ ಸಮಿತಿಯು ಅಭಿನಂದನೆಗಳನ್ನು ಸಲ್ಲಿಸುತ್ತದೆ ಎಂದರು.

ಹೋರಾಟ ಸಮಿತಿಯ ಮುಖಂಡರಾದ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಜಿಲ್ಲೆಯ ರೈತರ ಹಾಗೂ ಬಡವರ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಹಾವೇರಿ ವಶ್ವ ವಿದ್ಯಾಲಯವು ಅನುಕೂಲಕರವಾಗಿದೆ. ಸರಕಾರ ಯಾವುದೇ ಕಾರಣಕ್ಕೂ ಇದನ್ನು ಮುಚ್ಚಬಾರದು. ಮುಚ್ವಿದರೆ ತೀವ್ರ ಸ್ವರೂಪದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ, ಅದಕ್ಕೆ ಸರಕಾರ ಸೂಕ್ತ ನಿರ್ಧಾರ ತೆಗೆದುಕೊಂಡು ಜಿಲ್ಲೆಯ ಜನರ ಶೈಕ್ಷಣಿಕ ಹಿತಾಸಕ್ತಿಗಾಗಿ ವಿ.ವಿ ಉಳಿಸಬೇಕು ಎಂದರು.

ಪರಿಮಳ ಜೈನ ಮಾತನಾಡಿ, ಜಿಲ್ಲೆಯ ವಿದ್ಯಾರ್ಥಿನಿಯರು, ಮಹಿಳೆಯರಿಗೆ ಉನ್ನತ ಶಿಕ್ಷಣ ಪಡೆಯಲು ವಿಶ್ವ ವಿದ್ಯಾಲಯ ಅಗತ್ಯವಾಗಿದೆ. ಈಗ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಪ್ರತಿಶತ 65ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇದ್ದಾರೆ. ಮಹಿಳೆಯರ ಶಿಕ್ಷಣಕ್ಕೆ ಅನುಕೂಲವಾಗಿರುವ ಹಾವೇರಿ ವಿಶ್ವವಿದ್ಯಾಲಯವನ್ನು ಸರಕಾರ ಮುಚ್ಚಬಾರದು. ಅಲ್ಲದೇ ವಿ.ವಿ ಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ಮುಖಂಡರಾದ ಉಡಚಪ್ಪ ಮಾಳಗಿ, ಎಂ ಆಂಜನೇಯ, ಹೊನ್ನಪ್ಪ ಮರೆಮ್ಮನವರ, ಸತೀಶ ಎಂ.ಬಿ, ಬಸವರಾಜ ಎಸ್, ಎ.ಎಂ ಪಟವೇಗಾರ, ವಿಭೂತಿ ಶೆಟ್ಟಿ ನಾಯಕ, ಗೀತಾ ಎಸ್ ಲಮಾಣಿ, ಕೃಷ್ಣಾ ನಾಯಕ್, ಶಿವಯೋಗಿ ಹೊಸಗೌಡ್ರ, ಸಿದ್ದು ಮರೆಮ್ಮನವರ ಸೇರಿದಂತೆ ಇನ್ನಿತರರು ಇದ್ದರು.

ಇದನ್ನೂ ನೋಡಿ: ಭೂಗಳ್ಳರ ಪಾಲಾದ ಬೆಂಗಳೂರಿನ ಹುಳಿಮಾವು ಕೆರೆ Janashakthi Media

Donate Janashakthi Media

Leave a Reply

Your email address will not be published. Required fields are marked *