ಹಜಾರಿಬಾಗ್: ಜಾರ್ಖಂಡ್ ರಾಜ್ಯದ ಹಜಾರಿಬಾಗ್ ಜಿಲ್ಲೆಯ ಪಚ್ಡಾ ಗ್ರಾಮದಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ದಲಿತ ಯುವಕನೊಬ್ಬನನ್ನು ಮನೆಯಿಂದ ಹೊರಗೆಳೆದು ಹತ್ಯೆ ಮಾಡಿ ಆತನ ಮೃತದೇಹವನ್ನು ವಿದ್ಯುತ್ ಕಂಬಕ್ಕೆ ನೇತು ಹಾಕಿ ವಿಕೃತಿ ಮೆರೆದಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಕೆರೆದರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಹ ಭೀಕರ ಘಟನೆ ನಡೆದಿದ್ದು, ಮೃತರನ್ನು ಸಿತಾನ್ ಭೂಯಾನ್ (35) ಎಂದು ಗುರುತಿಸಲಾಗಿದೆ. ಯುವಕ ಕೂಲಿ ಕೆಲಸ ಮಾಡುತ್ತಿದ್ದು, ಪತ್ನಿ ಮತ್ತು ನಾಲ್ಕು ಮಕ್ಕಳನ್ನು ಅಗಲಿದ್ದಾನೆ.
35 ವರ್ಷದ ದಲಿತ ಯುವಕ ಸಿತಾನ್ ಭೂಯಾನ್ ಕುಟುಂಬ ನಿರ್ವಹಣೆಗೆ ಕೂಲಿ ಕೆಲಸ ಮಾಡುತ್ತಿದ್ದವನು. ಮನೆಯಲ್ಲಿದ್ದ ಹೆಂಡತಿಯನ್ನು ಬಿಟ್ಟರೆ ನಾಲ್ಕು ಮಕ್ಕಳ ಜೀವನ ಇದೀಗ ಸಂಕಷ್ಟಕ್ಕೆ ಸಿಲುಕಿದೆ.
ಸಿತಾನ್ ಭೂಯಾನ್ ಅವರ ಪತ್ನಿ ಪಾರೋ ದೇವಿ ಪೊಲೀಸರಿಗೆ ಶಂಕರ್ ಸಾಹು, ಜನಾರ್ದನ್ ಸಾಹು, ಸುರೇಶ್ ಸಾಹು ಮತ್ತು ದೀಪಕ್ ಸಾಹು ಸೇರಿದಂತೆ ಗ್ರಾಮದ 8 ರಿಂದ 10 ಜನರ ವಿರುದ್ಧ ಪತಿಯ ಕೊಲೆ ಆರೋಪದ ಮೇಲೆ ದೂರನ್ನು ದಾಖಲಿಸಿದ್ದಾರೆ.
ಮೃತ ಸಿತಾನ್ ಭೂಯಾನ್ ಅವರ ಪತ್ನಿ ದೂರಿನ ಅನ್ವಯ, ʻʻಸೋಮವಾರ ರಾತ್ರಿ ಕೆಲವರು ದಂಪತಿಯ ಮನೆಗೆ ಬಂದು ತನ್ನ ಪತಿಯನ್ನು ಬಲವಂತವಾಗಿ ಕರೆದೊಯ್ದರು. ತನ್ನನ್ನು ಮತ್ತು ಮಕ್ಕಳನ್ನು ಕೋಣೆಯಲ್ಲಿ ಕೂಡಿ ಬೀಗ ಹಾಕಿದ್ದರು. ಸಹಾಯಕ್ಕಾಗಿ ಕಿರುಚಿದರೂ, ಗ್ರಾಮದಲ್ಲಿ ಡಿಜೆ ಬಾರಿಸುವ ದೊಡ್ಡ ಶಬ್ದದಿಂದಾಗಿ ಯಾರಿಗೂ ಕೇಳಿಸಲಿಲ್ಲ” ಎಂದು ಉಲ್ಲೇಖಿಸಲಾಗಿದೆ.
ಅಸಭ್ಯ ವರ್ತನೆ ಪ್ರಶ್ನಿಸಿದ್ದೇ ತಪ್ಪು
ಅಕ್ಟೋಬರ್ 5ರಂದು ದಲಿತ ಯುವತಿಯೊಂದಿಗೆ ದುಷ್ಕರ್ಮಿಯೊಬ್ಬ ಅಸಭ್ಯವಾಗಿ ವರ್ತಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಆಗ ಗ್ರಾಮದ ದಲಿತ ಕುಟುಂಬಗಳು ಈ ಕೃತ್ಯದ ಬಗ್ಗೆ ಆರೋಪಿಯ ಕುಟುಂಬಕ್ಕೆ ಮಾಹಿತಿ ನೀಡಿದ್ದರು. ಆದರೆ, ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ದಲಿತ ಕುಟುಂಬಗಳ ವಿರುದ್ಧ ಆರೋಪಿಯ ಕುಟುಂಬಸ್ಥರೇ ಪೊಲೀಸ್ ಠಾಣೆಯಲ್ಲಿ ನೀಡಿದ್ದಾರೆ.
ಈ ವಿಷಯ ತಿಳಿದ ದಲಿತ ಕುಟುಂಬದವರು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪೊಲೀಸ್ ಠಾಣೆಗೆ ಪ್ರತಿದೂರು ನೀಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆರೋಪಿಗಳು ಕುಟುಂಸ್ಥರು ಸಿತಾನ್ ಭೂಯಾನ್ ಅವರನ್ನು ಕೊಲೆ ಮಾಡಿದ ನಂತರ ವಿದ್ಯುತ್ ಕಂಬಕ್ಕೆ ನೇಣು ಹಾಕಿದ್ದಾರೆ ಎನ್ನಲಾಗಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪಿಗಳ ಪತ್ತೆಗೆ ತನಿಖೆ ನಡೆಯುತ್ತಿದೆ ಎಂದು ಕೆರೆದರಿ ಪೊಲೀಸ್ ಠಾಣೆಯ ಸಾಧನ್ ಚಂದ್ರ ಗೊರೈ ತಿಳಿಸಿದ್ದಾರೆ.
ವಿದ್ಯುತ್ ಕಂಬಕ್ಕೆ ದಲಿತ ಯುವಕ ಸಿತಾನ್ ಭೂಯಾನ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದನ್ನು ಗಮನಿಸಿದ ಪಚ್ಡಾ ಗ್ರಾಮದ ಜನರು ನೋಡಿ, ಕೂಡಲೇ ಕೆರೆದರಿ ಪೊಲೀಸರಿಗೆ ಸುದ್ದಿ ಮೊಟ್ಟಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಕೆಳಗಿಳಿಸಿದ್ದಾರೆ.
ಈ ವೇಳೆ, ಮರಣೋತ್ತರ ಪರೀಕ್ಷೆಗಾಗಿ ಹಜಾರಿಬಾಗ್‌ಗೆ ಕಳುಹಿಸುವಾಗ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಗ್ರಾಮಸ್ಥರು ಆರೋಪಿಗಳನ್ನು ಬಂಧಿಸುವವರೆಗೂ ಶವವನ್ನು ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿದ್ದಾರೆ. ಹೀಗೆ ಸುಮಾರು ಮೂರು ಗಂಟೆಗಳ ಕಾಲ ಈ ವಾದ ನಡೆಯಿತು.
ಅಂತಿಮವಾಗಿ ಪೊಲೀಸರು ನೆರವಿನ ಭರವಸೆ ನೀಡಿದ ನಂತರ ಶವವನ್ನು ತೆಗೆದುಕೊಂಡು ಹೋಗಲು ಅವಕಾಶ ಮಾಡಿಕೊಡಲಾಗಿದೆ.
ಕೊಲೆ ಆರೋಪಿಗಳನ್ನು ಬಂಧಿಸಿ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಕೆರೆದಾರಿ ಬ್ಲಾಕ್ ಪ್ರಮುಖ್ ಸುನೀತಾದೇವಿ, ಪಚ್ಡಾ ಪಂಚಾಯಿತಿ ಮುಖ್ಯಸ್ಥ ಮಹೇಶ್ ಪ್ರಸಾದ್ ಸಾವೋ, ಸ್ಥಳೀಯ ಸಮಾಜ ಸೇವಕ ಪ್ರೇಮ್ ರಂಜನ್ ಪಾಸ್ವಾನ್ ಆಗ್ರಹಿಸಿದ್ದಾರೆ.